Sunday, November 11, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.15 ಬನ್ನಿ ಶಿರಸಿ ಜಾತ್ರೆ ನೋಡೋಣ !!!!

ಶಿರಸಿ ಮಾರಿಕಾಂಬೆ  ಜಾತ್ರೆ ಬಂಡಿ 


"ಕೊಳಗಿ ಬೀಸ್"  ನಲ್ಲಿ ಗುರುಮೂರ್ತಿ ಸಹೋದರನ ಮದುವೆ ನೆಪದಲ್ಲಿ ಶಿರಸಿ ಪ್ರವಾಸ ಮಾಡಿ ಒಳ್ಳೆಯ ಅನುಭವ ಸಿಕ್ಕಿತು. "ಭೀಮನೇರಿ ಗುಡ್ಡ"  ಏರಿ  "ಅಘನಾಶಿನಿ" ನದಿಯ  ದರ್ಶನ ಮಾಡಿದೆವು.  ಮತ್ತೆ ಮದುವೆಗೆ ಬಂದು ಅಲ್ಲಿನ ಹವ್ಯಕ ಊಟದ ಸವಿಯನುಂಡು   ಶಿರಸಿ ತಲುಪಿದೆವು ಅಲ್ಲಿನ ಜಾತ್ರೆ ಯ ಸೊಬಗು  ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ..............!! ಶಿರಸಿಯಲ್ಲಿ  ಟ್ರಾಫಿಕ್ ಜಾಮ್  ಆಗಿತ್ತು ........................!!!!!




ಶಿರಸಿ ಜಾತ್ರೆ ಗೆ ಬಂದ ಜನ 

ಸಾಲುಗಟ್ಟಿ ನಿಂತಿದ್ದ ವಾಹನಗಳು 


ಹೌದೂ  ಶಿರಸಿಗೆ ಕುಮಟ ರಸ್ತೆಯ ಮೂಲಕ   ಪ್ರವೇಶ ಮಾಡುತ್ತಿದ್ದಂತೆ  ಕಂಡ ಮೊದಲ ದೃಶ್ಯ  ಇಡೀ ಶಿರಸಿಯಲ್ಲಿ  ಎಲ್ಲೆಲ್ಲಿ ನೋಡಿದರೂ  ಜನಗಳ  ಪ್ರವಾಹವೇ ಕಂಡಿತ್ತು. ಜಾತ್ರೆ ನೋಡಿ ತಮ್ಮ ಊರಿಗೆ ತೆರಳಲು  ಸಿಕ್ಕ ಸಿಕ್ಕ ಬಸ್ಸುಗಳನ್ನು ಏರಿ ಜನ  ತಮ್ಮ ಊರುಗಳಿಗೆ ಹೊರಡುತ್ತಿದ್ದರು.  ರಸ್ತೆ ನದಿಯಲ್ಲಿ ಮೈಕ್ ಅಳವಡಿಸಿ ಸಾರಿಗೆ ಸಂಸ್ಥೆಯವರು  ಹೊರಗೆ ತೆರಳುವ ವಾಹನಗಳ ಬಗ್ಗೆ ಜೋರಾಗಿ ಕಿರುಚುತ್ತಾ   ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದರು. ಪಾಪ ಪ್ರಯಾಣಿಕರನ್ನು ನಿಯಂತ್ರಣ ಮಾಡೋದು ಬಹಳ ಕಷ್ಟವಾಗಿತ್ತು, ಬೆಳಗಿನಿಂದಾ ಮೈಕ್ ನಲ್ಲಿ ಕಿರುಚಾಡಿ ಮಾಹಿತಿ ನೀಡುವವರು ಧಣಿದಿದ್ದರು. ಇನ್ನು ಶಿರಸಿಯ ಬೀದಿಗಳಂತೂ  ವಾಹನಗಳಿಂದ ತುಂಬಿ ಹೋಗಿದ್ದವು ,  ಕಿರಿದಾದ ರಸ್ತೆಗಳಲ್ಲಿ  ವಾಹನ ಸಂಚಾರ ನಿಯಂತ್ರಿಸಲು ಅಲ್ಲಿನ ಪೋಲಿಸ್ ಸಿಬ್ಬಂದಿ ಪರದಾಡುತ್ತಿದ್ದರು.  ಹರ್ಷ  "ಬಾಲೂ ಬೈ ಇಲ್ಲಿ ನೋಡಿ ನಮ್ಮೂರಲ್ಲಿ  ಟ್ರಾಫಿಕ್ ಜಾಮ್ ಆಗಿದೆ " ಎಂದು ಮುಗುಳ್ನಕ್ಕ.



ಟ್ರಾಫಿಕ್ ಜಾಮ್ ಆದ್ರೆ ನನಗೇನು ??





ಒಂದರ ಹಿಂದೆ ಇನ್ನೊಂದು.

ಹೈರಾಣಾದ ಪೋಲಿಸ್ ಸಿಬ್ಬಂದಿ 


ನಾನೂ ಸಹ ನಗು ನಗುತ್ತಾ ಶಿರಸಿಯ  ಟ್ರಾಫಿಕ್ ಜಾಮ್  ಚಿತ್ರ ತೆಗೆಯಲು ಕ್ಲಿಕ್ಕಿಸತೊಡಗಿದೆ. ಅಲ್ಲಿ ಸಿಕ್ಕ ಚಿತ್ರಗಳು ಖುಷಿಕೊಟ್ಟಿತು. ಹೌದು ಅತ್ತ ವಾಹನಗಳು  ಚಲಿಸಲಾರದೆ  ನಿಂತಿದ್ದರೆ ಇತ್ತ   ಮಹಿಳೆಯೊಬ್ಬರು ಜಾಲಿಯಾಗಿ ಐಸ್  ಕ್ರೀಮ್  ತಿನ್ನುತ್ತ  ನಿಧಾನವಾಗಿ ರಸ್ತೆ ದಾಟುತ್ತಿದ್ದರು. ಅದರ ಹಿಂದೆಯೇ ಶಿರಸಿ ಪಟ್ಟಣದೊಳಗೆ  ಸೇರಿಕೊಂಡಿದ್ದ  ವಾಹನಗಳು  ಹೊರಗೆ ಬರಲು ಶುರುಮಾಡಿದವು.  ಸುಮಾರು ಅರ್ಧ ಘಂಟೆ  ಒಂದರ ಹಿಂದೆ ಇನ್ನೊಂದು  ಬರುತ್ತಲೇ ಇದ್ದವು  ಮತ್ತೊಂದು ಕಡೆ  ಶಿರಸಿ ಪ್ರವೇಶಿಸಲು ಬಹಳಷ್ಟು  ವಾಹನಗಳು ಕಾಯುತ್ತಾ  ನಿಂತಿದ್ದವು.  ಪಾಪ ಶಿರಸಿಯ ಪೊಲೀಸರು  ವಾಹನ  ಸಂಚಾರ ನಿಯಂತ್ರಣ ಮಾಡಲು ಹರ ಸಾಹಸ ಮಾಡುತ್ತಿದ್ದರು. ಇವರ ಸಾಹಸ ಕೊನೆಗೂ ಫಲ ನೀಡಿ ನಮ್ಮ ವಾಹನಗಳು ಶಿರಸಿ ಪ್ರವೇಶ ಮಾಡಲು ಅವಕಾಶವಾಯಿತು.


ಜಾತ್ರೆ ನೋಡಲು ಬಂದ ಮಂದಿ 






ಪುಟ್ಟ ಮಕ್ಕಳಿಗೆ ಇಷ್ಟು ಸಾಕಲ್ವಾ ?







ಜಾತ್ರೆ ಸಡಗರ



ಶಿರಸಿಯ ಬೀದಿಗಳಲ್ಲಿ, ಗಲ್ಲಿಗಳಲ್ಲಿ ನುಸುಳಿ  ನಮ್ಮ ಬೈಕ್ ಅನ್ನು ಒಂದು ಕಡೆ ನಿಲ್ಲಿಸಿ ಕಾಲ್ನಡಿಗೆಯಲ್ಲಿ  ಜಾತ್ರೆ ಬೀದಿ ಸುತ್ತಲು ಹೊರಟೆವು. ಶಿರಸಿಯ  "ಸಿಂಪಿ ಗಲ್ಲಿ ರೇಣುಕಾಂಬಾ  ಮಿನಿ ಚಿತ್ರ ಮಂದಿರದ" ಬೀದಿಯಲ್ಲಿ  ಹಾದುಹೊದೆವು.ಬೀದಿಯ ತುಂಬಾ ಜಾತ್ರೆ ಅಂಗಡಿಗಳ ಸಾಲು , ಜಾತ್ರೆ ನೋಡಲು ಬಂದ ಜನರ  ಸಡಗರ ಕಾಣಿಸಿತು. ಹಾಗೆ ಸಾಗಿದ ನಮಗೆ  ಜಾತ್ರೆಯ ವಿಶೇಷ  ದರ್ಶನ  ಆಗಲು ಪ್ರಾರಂಭವಾಯಿತು. ನನ್ನ ಕ್ಯಾಮಾರ ದಿಂದ ವಿಶೇಷವನ್ನು  ಕ್ಲಿಕ್ಕಿಸಲು  ಶುರುಮಾಡಿದೆ. ಅಲ್ಲೊಬ್ಬ ಒಂದು ಮರದ ಕಂಬಕ್ಕೆ ಗಿರಗಿಟ್ಟಲೆ , ಪ್ಲಾಸ್ಟಿಕ್ ಪೀಪಿ, ಮುಖವಾಡಗಳನ್ನು  ನೇತುಹಾಕಿಕೊಂಡು ಮಕ್ಕಳನ್ನು ಆಕರ್ಷಣೆ  ಮಾಡುತ್ತಿದ್ದ, ಮಗದೊಬ್ಬ ಕೊಳಲು ನುಡಿಸುತ್ತಾ  ಗಿರಾಕಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ. ಇನ್ನು ಜನರೊಡನೆ ಬಂದ ಮಕ್ಕಳು  ಕೈಯಲ್ಲಿ, ಪೀಪಿ, ಕೊಳಲು, ಬಲೂನು, ಇವುಗಳನ್ನು ಹಿಡಿದು ನಲಿಯುತ್ತಿದ್ದರೆ, ಮತ್ತೆ ಕೆಲವು ಮಕ್ಕಳು  ದೊಡ್ಡವರನ್ನು ಪೀಡಿಸುತ್ತಾ  ತಮಗೆ ಬೇಕಾದ ಬೊಂಬೆ , ಕೊಳಲು, ಮುಖವಾದ, ಪೀಪಿ , ತಿಂಡಿ ಕೊಳ್ಳಲು  ಕೇಳುತ್ತಿದ್ದವು. ಇವೆಲ್ಲಾ ನನ್ನ ಬಾಲ್ಯದ ನೆನಪುಗಳನ್ನು  ಮತ್ತೆ ನೆನಪಿಗೆ ಬರುವಂತೆ ಮಾಡಿದ ದೃಶ್ಯಗಳು.



ಶಿರಸಿ ಜಾತ್ರಗೆ ರಂಗು ತಂದವರು 


ಜಾತ್ರೆಯ ಜನರ ನಡುವೆ ಬಂಡಿ 
ಶ್ರೀ ಮಾರಿಕಾಂಬ ದೇವಿ ದರ್ಶನ ಜಾತ್ರೆ ಮಾಳದಲ್ಲಿ 


ಹಾಗೆ ಮುಂದೆ ಸಾಗಿದ ನನಗೆ  ಜಾತ್ರೆ ಮಾಳ ದ ಬೀದಿಯ ಸೊಬಗು ಕಾಣಿಸಿತು. ಸನಿಹದಲ್ಲಿ ಒಬ್ಬ ಮಹಿಳೆ ಅರಿಶಿನ, ಕುಂಕುಮ,  ಮಾರಾಟ  ಮಾಡುತ್ತಿದ್ದರು, ಬಗೆ ಬಗೆ ಬಣ್ಣದ  ಆ ನೋಟ ಜಾತ್ರೆಗೆ ರಂಗು ತಂದಿತ್ತು. ಅಲ್ಲೇ ಸನಿಹದಲ್ಲಿ  ಜಾತ್ರೆ ಬಂಡಿ ಅಲಂಕಾರದೊಡನೆ ನಿಂತಿತ್ತು. ಅದರ ಗೋಪುರದ ಸುತ್ತಾ ಹಳದಿ, ಬಿಳಿ, ಹಸಿರು, ಕೆಂಪು, ಬಣ್ಣದ ಪತಾಕೆಗಳ ಅಲಂಕಾರ ಮಾಡಲಾಗಿತ್ತು.  ಬಂಡಿಯನ್ನು ದಾಟಿ ಜಾತ್ರೆ ಮಾಳದಲ್ಲಿ  ನೆಲೆಗೊಂಡಿದ್ದ  ಶ್ರೀ ಮಾರಿಕಾಂಬೆ  ದೇವಿಯ ದರ್ಶನ ಮಾಡಿದೆವು.ಅಪಾರ ಜನ ಜಂಗುಳಿಯ ನಡುವೆ   ದೇವಿಯ ಚಿತ್ರ ತೆಗೆಯಲು ಹರ ಸಾಹಸ ಪಟ್ಟು  ಒಂದೆರಡು ಚಿತ್ರ ತೆಗೆದೇ. ದರ್ಶನ ಪಡೆದ ಧನ್ಯತಾ ಭಾವದೊಡನೆ ಹೊರಗೆ ಬಂದೆ.



ಶಿರಸಿ ಹಳೆ ಬಸ್ ನಿಲ್ದಾಣ.

ಮೋಟರ್ ಬೈಕಿನ ಸರ್ಕಸ್ 
ಬನ್ನಿ ಸಾರ್ ಬನ್ನಿ ಮೋಟರ್ ಬೈಕ್ ಸರ್ಕಸ್ ನೋಡು ಬನ್ನಿ.

ದೇವಿ ದರ್ಶನ ಪಡೆದ ನಾವು ಶಿರಸಿ ಹಳೆ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆವು.ಜಾತ್ರೆ ವಿಶೇಷದಿಂದ ಹಳೆ ಬಸ್ ನಿಲ್ದಾಣಕ್ಕೆ ಬರಬೇಕಾಗಿದ್ದ    ಬಸ್ ಗಳನ್ನು   ಹೊಸ ನಿಲ್ದಾಣಕ್ಕೆ  ಹೋಗುವಂತೆ ಮಾಡಲಾಗಿದ್ದ ಕಾರಣ ಜನಗಳಗಿಗೆ ವಿಶ್ರಾಂತಿ ಪಡೆಯುವ ಸ್ಥಳವಾಗಿ ಬಸ್ ನಿಲ್ದಾಣ ಮಾರ್ಪಟ್ಟಿತ್ತು.  ಮುಂದೆ ತೆರಳಿದ ನಮಗೆ ಸನಿಹದಲ್ಲಿ  ಬಗೆ ಬಗೆ ಬಣ್ಣಗಳ ಪತಾಕೆ ಹಾಕಿದ್ದ ವೃತ್ತಾಕಾರದ ದೊಡ್ಡ  ಡೇರೆ ಕಾಣಿಸಿತು , ಅದೇ ಸಾರ್  ಮರದ ಪಟ್ಟಿಗಳಿಂದ ಮಾಡಿದ ವೃತ್ತಾಕಾರದ  ಬಾವಿಯಲ್ಲಿ  ಬೈಕು, ಕಾರುಗಳನ್ನು ಓಡಿಸಿ  ಸರ್ಕಸ್  ಮಾಡುವ ಪ್ರದರ್ಶನ ಅಲ್ಲಿತ್ತು. ಅದಕ್ಕೆ ಬರುವಂತೆ  ಜನಗಳನ್ನು ಆಹ್ವಾನಿಸಲು ಜೋರಾಗಿ ಮೈಕಿನಿಂದ ಪ್ರಕಟಣೆ ಮಾಡಲಾಗಿತ್ತು, ಅರೆ ಬರೇ  ಕನ್ನಡ ದಲ್ಲಿನ ಆ ಪ್ರಕಟಣೆ ಕೇಳಲು ಕರ್ಕಶವಾಗಿತ್ತು.


ನೇಣಿಗೆ ಸಿಕ್ಕಿದ ಜಿಲೇಬಿ 
ಬಿಸಿ ಬಿಸಿ ಜಿಲೇಬಿ ಬೇಕಾ ಸಾರ್ 



ಮುಂದೆ ಸಾಗಿದ ನಮಗೆ ಅಲ್ಲೇ ಒಂದು ಸಣ್ಣ ಹೋಟೆಲಿನಲ್ಲಿ  ಜಿಲೇಬಿಯನ್ನು ಸಣ್ಣ ದಾರಕ್ಕೆ ಕಟ್ಟಿ ನೇತು ಹಾಕಲಾಗಿತ್ತು. ಅದು ನನ್ನ ಕಣ್ಣಿಗೆ ಜಿಲೇಬಿಯನ್ನು ನೇಣಿಗೆ ಹಾಕಿದಂತೆ  ಕಂಡಿತು. ಅದರ ಕೆಳಗೆ  ತುಕ್ಕು ಹಿಡಿದ ಬಾಣಲೆಯಲ್ಲಿ  ಬಿಸಿ ಬಿಸಿ ಜಿಲೇಬಿಯನ್ನು  ಒಬ್ಬ ಯಜಮಾನರು ತಯಾರಿಸುತ್ತಿರುವುದು ಕಂಡು ಬಂತು. ಫೋಟೋ ತೆಗೆಯುವ ನನ್ನನ್ನು ನೋಡಿ ಖುಷಿಯಿಂದ  ಪೋಸ್ ಕೊಟ್ಟರು.


ಕುರಿ ಗಳು ಸಾರ್ ಕುರಿಗಳು.

ರಾಜ್ ಕಮಲ್ ಸರ್ಕಸ್ ಬಂದಿತ್ತು 



 ಜಾತ್ರೆ ಬೀದಿಯಲ್ಲಿ  ನಮ್ಮ ನಡಿಗೆ ಮುಂದೆ ಮುಂದೆ  ಸಾಗಿತು. ಹಾದಿಯಲ್ಲಿ  ಅಲ್ಲೊಂದು ಕಡೆ ಕುರಿ ಹಿಂಡು  ಕಾಣಿಸಿತು, ಹತ್ತಿರ ಹೋಗಿ ನೋಡಲು ಕುರಿಗಳ ಮಾರಾಟ  ಜೋರಾಗಿ  ನಡೆದಿತ್ತು. ಅಚ್ಚರಿಯಾಗಿ ಅರೆ ಶಿರಸಿಯಲ್ಲೂ  ಕುರಿ ಮಾರಾಟ ನಡೆಯುತ್ತಾ ಅನ್ನಿಸಿತು.ಇದನ್ನು ನೋಡಿ  ನಾನು ಮಳವಳ್ಳಿಯ ಸಮೀಪ ಕಿರುಗಾವಲಿನಲ್ಲಿ ನೋಡಿದ್ದ ಕುರಿಗಳ ಮಾರಾಟ ದ ಸಂತೆ ಜ್ಞಾಪಕಕ್ಕೆ ಬಂತು. ಸ್ವಲ್ಪ ದೂರ ನಡೆದ ನಾವು ಶಿರಸಿ ಜಾತ್ರೆಗೆ  ರಾಜ್ ಕಮಲ್ ಸರ್ಕಸ್ ಬಂದಿರುವುದನ್ನು ಕಂಡೆವು . ನಮ್ಮ ದೇಶದ  ಮಹಾನ್  ಸರ್ಕಸ್ ಗಳಲ್ಲಿ ಒಂದಾದ  ರಾಜ್ ಕಮಲ್ ಸರ್ಕಸ್ ಇಲ್ಲಿಗೆ ಬಂದು  ಜಾತ್ರೆಗೆ ಮತ್ತಷ್ಟು ಕಳೆ ತಂದುಕೊಟ್ಟಿತ್ತು .


ಜಾತ್ರೆಯ ಐಸ್ ಕೋಲಾ 



ನಡೆದು, ನಡೆದು  ಬಹಳ ದೂರ ನಡಿದ್ದೆವು, ಸಮಯದ ಕರೆ  ನಮ್ಮನ್ನು ಎಚ್ಚರಿಸಿತ್ತು, ಸರಿ ವಾಪಸ್ಸು ಹೊರಡೋಣ ಅಂತಾ ಮತ್ತೊಂದು ಬೀದಿಯಲ್ಲಿ  ವಾಪಸ್ಸು ಹೊರಟೆವು . ಅಲ್ಲೊಬ್ಬ  ಹಿರಿಯರು ಜಾತ್ರೆಯಲ್ಲಿ ಓಡಾಡಿ  ಧಣಿವಾಗಿ  ಬಿಸಿಲಿನ ತಾಪ ತಾಳಲಾರದೆ  ಜಾತ್ರೆಯ ಐಸ್ ಕೋಲಾ ಕುಡಿಯಲು ನಿಂತಿದ್ದರು. ಯಾವುದೇ ಜಾತ್ರೆ ಇರಲಿ ಬಣ್ಣ ಬಣ್ಣದ ಈ ಕೋಲಾ ಗಳು  ಜಾತ್ರೆಗೆ ಬಂದವರ  ದಾಹವನ್ನು ನೀಗಲು  ಹಾಜರಾಗುತ್ತವೆ, ಚಿಕ್ಕವನಿದ್ದಾಗ ಈ ಬಣ್ಣ ಬಣ್ಣದ ಕೋಲಾ  ಕುಡಿಯುತ್ತಿದ್ದ ಮಜಾ ಕಣ್ಣ ಮುಂದೆ ಬಂದು  ಬಾಯಲ್ಲಿ ನೀರು ಬಂದಿತ್ತು.{ಇದನ್ನು ನಾವು ಇಂತಹ ಕೋಲಾ ಗಳನ್ನೂ ಕ್ರಶ್ ಅನ್ನುತ್ತಿದ್ದೆವು.}




ಜಾತ್ರೆಗೆ ಬಂದ ಯಾತ್ರಿಕರಿಗೆ ಕಡಿಮೆ ಬೆಲೆಯ ಊಟ.

ಹವ್ಯಕ ಊಟ ಸವಿಯಲು ಖಾನಾವಳಿ.




ಜಾತ್ರೆಯ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಮತ್ತಷ್ಟು ದೃಶ್ಯಗಳನ್ನು ನೋಡುವ ಬಾಗ್ಯ  ನಮ್ಮದಾಗಿತ್ತು. ಜಾತ್ರೆಯ ಮಜಾ ಸವಿಯುತ್ತಾ  ಕ್ಯಾಮರಾದಲ್ಲಿ ಸಿಕ್ಕ ನೋಟಗಳನ್ನು ಕ್ಲಿಕ್ಕಿಸುತ್ತಾ  ಸಾಗಿದ್ದೆ.  ವಾಪಸ್ಸು  ಬರುವಾಗ  ಜಾತ್ರೆ ಬೀದಿಯಲ್ಲಿ  ಕೆಲವು ಹೋಟೆಲುಗಳು ಗಮನ ಸೆಳೆದವು. ಕೇವಲ 15 ರೂಪಾಯಿಗೆ ಊಟ ಕೊಟ್ಟು  ಯಾತ್ರಿಕರ  ಸೇವೆ ಮಾಡುವ  "ಬೆಂಡೆ ಗದ್ದೆ  ವಿನಾಯಕ  ಭಟ್ಟರ"   ಶುಚಿ ರುಚಿಯಾದ ಊಟ ನೀಡುವ ಕೇಂದ್ರ, ನೋಡಿ ಮನ ತುಂಬಿ ಬಂತು. ಹಸಿದ ಹೊಟ್ಟೆಗೆ  ಕಡಿಮೆದರದಲ್ಲಿ  ಊಟ ನೀಡಿ ಯಾತ್ರಿಕರನ್ನು  ಸಂಬಾಳಿಸುವ  ಈ ಕಾರ್ಯ ನನಗೆ ಇಷ್ಟ ಆಯಿತು.  ಮತ್ತೊಂದು ಕಡೆ "ಹವ್ಯಕ  ಊಟದ" ರುಚಿಯನ್ನು ಯಾತ್ರಿಕರಿಗೆ ನೀಡಲು  ಸಿದ್ದವಾಗಿದ್ದ ಹವ್ಯಕ ಖಾನಾವಳಿ  ಗಮನ ಸೆಳೆದವು.


ಶಿರಸಿಯಲ್ಲಿ ಕಳೆದು ಹೋಗುತ್ತಿರುವ ದೇವಿಕೆರೆ.



ಶಿರಸಿ ಜಾತ್ರಯಲ್ಲಿ ಭರಪೂರ  ವಿಶೇಷತೆಗಳನ್ನು ಕಂಡ ನಾನು ಹರ್ಷ ಚಿತ್ತನಾದೆ,  ನಮ್ಮ ಬೈಕಿನ ಬಳಿ  ಬಂದೆವು. ಹರ್ಷ ಒಂದು ನಿಮಿಷ ಅಂತಾ ಹೇಳಿ ಅಲ್ಲಿಂದಲೇ   ಕಣ್ಣಿಗೆ ಕಂಡ  ಶಿರಸಿಯ  ದೇವಿಕೆರೆಯ  ಚಿತ್ರ ತೆಗೆದೇ. ಶಿರಸಿಯ ಮಾರಿಕಾಂಬೆ  ಯಷ್ಟೇ ಪ್ರಸಿದ್ದಿ ಹೊಂದಿದ ಕೆರೆ  ಒಣಗಿ ಕೆರೆಯಲ್ಲಿ  ಹೂಳು ತುಂಬಿ  ಕೆರೆ ಹೋಗಿ ಆಟದ ಮೈದಾನ ವಾಗಿತ್ತು. ಯಾಕೋ ಶಿರಸಿಯ ಒಂದು ಹೆಗ್ಗುರುತು ಈ ರೀತಿ ಕಣ್ಮರೆಯಾಗುತ್ತಿರುವ ಬಗ್ಗೆ ನೋವಾಗಿ ಜಾತ್ರೆಯ ಸೊಬಗು  ಕರಗ ತೊಡಗಿತು.  ಮುಂದಿನ ಸಾರಿ ಇಲ್ಲಿಗೆ ಮಾರಿ ಕಾಂಬೆ ಜಾತ್ರೆಗೆ ಬಂದಾಗ ದೇವಿಕೆರೆ  ತನ್ನ ಒಡಲಲ್ಲಿ ನೀರನ್ನು  ತುಂಬಿಕೊಂಡು  ನಳ ನಲಿಸುತ್ತಾ  ಜಾತ್ರೆಗೆ ಮತ್ತಷ್ಟು ರಂಗು ತರಲಿ ಎಂದು ಆಶಿಸುತ್ತಾ,  ಹರ್ಷ ನೊಡನೆ ಮನೆ ಕಡೆಗೆ ಹೊರಟೆ. ಆಗ ವೇಳೆ  ನಾಲ್ಕು ಘಂಟೆ ಆಗಿತ್ತು.  ಸಂಜೆ ಮೈಸೂರಿಗೆ ತೆರಳುವ ಬಸ್ಸು  7  ಘಂಟೆಗೆ  ಇದ್ದ ಕಾರಣ  ಹೊರಡುವ ಸಿದ್ದತೆ ಆಗಬೇಕಿತ್ತು......!!! ಶಿರಸಿಗೆ ವಿದಾಯ ಹೇಳುವ ಸಮಯ  ಬಂದಿತ್ತು. ................!!!!



ಅಂದಹಾಗೆ ನಿಮಗೆಲ್ಲಾ  ಬೆಳಕಿನ ಹಬ್ಬ  ದೀಪಾವಳಿಯ  ಶುಭಾಶಯಗಳು. ನಿಮ್ಮ ಕುಟುಂಬ ದ ಎಲ್ಲರಿಗೂ ಬೆಳಕಿನ ಹಾದಿಯಲ್ಲಿ ಒಳ್ಳೆಯ ಆರೋಗ್ಯ, ಸಂತೋಷ,  ಸುಖ  , ಒಳ್ಳೆಯ ಆಲೋಚನೆ, ಕೀರ್ತಿ  ಸಿಗಲಿ ಎಂದು ಹೃದಯ ತುಂಬಿ ಹಾರೈಸುವೆ .  ನಿಮಗೆಲ್ಲಾ ಶುಭವಾಗಲಿ.


4 comments:

Srikanth Manjunath said...

"ಕಾಡು ನೋಡ ಹೋದೆ..ಕವಿತೆಯೊಡನೆ ಬಂದೆ.." ಇದು ಸಿ.ಬಿ.ಐ ಶಂಕರ್ ಚಿತ್ರದ ಒಂದು ಗೀತೆ...ಹಾಗೆಯೇ ಸಿರ್ಸಿ ನೋಡ ಹೋದೆ...ಸಿಕ್ಕಾಪಟ್ಟೆ ಖುಷಿಯಾಗಿ ಬಂದೆ...ಇದು ನಿಮ್ಮ ಸಿರ್ಸಿ ಪ್ರವಾಸದ ಲೇಖನಗಳು ನನ್ನ ಮನಸಲ್ಲಿ ತಂದ ಭಾವನೆಗಳು..ಮಹಾಭಾರತದಲ್ಲಿ ಇಲ್ಲದೆ ಇರುವುದು ಪ್ರಪಂಚದಲ್ಲಿ ಇಲ್ಲ ಎನ್ನುವ ಮಾತಿದೆ.ಹಾಗೆ ಈ ಸುಂದರ ಸಿರ್ಸಿ ಪ್ರವಾಸದಲ್ಲಿ ಭಕ್ತಿಭಾವದ ಸಿಂಚನ, ಪ್ರಕೃತಿಯ ಮಡಿಲಲ್ಲಿ ನರ್ತನ, ಇತಿಹಾಸದ ನೋಟ, ದೇವಿಯ ಚರಿತ್ರೆ ಇದಕ್ಕೆಲ್ಲ ಕಳಶವಿಟ್ಟಂತೆ ಈ ಮಾಲಿಕೆಯಲ್ಲಿ ಮಾರಿಕಾಂಬೆ ಜಾತ್ರೆಯ ಪರಿಚಯ, ಜನವಿದ್ದರೆ ಜಾತ್ರೆ...ರೋಗವಿದ್ದಾಗ ಮಾತ್ರೆ..ಎನ್ನುವ ಹಾಗೆ ಎಂತಹ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿದಿದೆ ನಿಮ್ಮ ಮೂರನೇ ಕಣ್ಣು ಜಾತ್ರೆಯಲ್ಲಿ ನಾವು ಇದ್ದೇವೆ ಅನ್ನುವಷ್ಟು ನೈಜತೆಯಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ ನಿಮ್ಮ ಲೇಖನ...ಅಭಿನಂದನೆಗಳು.


ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ರಸಗವಳ ಹೊಡೆದ ಮೇಲೆ ನಡೆಯಿರಿ ಸರ್ ಮಾರಿಕಾಂಬೆ ಜಾತ್ರೆಯಲ್ಲಿ ತಿಂದ ಚುರುಮುರಿ ಬಲು ಸೊಗಸು...ಪಾಪ ನನ್ನ ಮಗಳು ಜಾತ್ರೆಯಲ್ಲಿ ಸಿಗುವ ಮುಖವಾಡ. ಗೊಂಬೆಗಳು..ಪೀ ಎಂದು ಕಿರುಚುವ ಪೀಪಿ ಬೇಕು ಅಂತ ಹೇಳಿದ್ದಳು ನೆಡೀರಿ ಸರ್ ಅದನ್ನು ಕೊಳ್ಳುವ...ಹಾಗೆಯೇ ನೇಣಿಗೆ ಹಾಕಿರುವ ಜಿಲೇಬಿಯನ್ನು ತಿಂದು, ಖಾನಾವಳಿಯ ಊಟ ಮಾಡಿ..ಸಿರ್ಸಿಗೆ ವಂದನೆ ಹೇಳುವ..

ಚಿನ್ಮಯ ಭಟ್ said...

ಬಾಲು ಸರ್...
ಶಿರಸಿಯ ಜಾತ್ರೆ...
ಹಮ್.ಮೊದಲಿಗೆ ನಿಮಗೆ ಧನ್ಯವಾದ ನನಗೊಂದಿಷ್ಟು ಶಿರಸಿಯ ಜಾತ್ರೆಯ ಚಿತ್ರಗಳನ್ನು ಕೊಟ್ಟಿದ್ದಕ್ಕೆ...ಇದನ್ನು ನನ್ನ ಗಣಕದಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತೇನೆ..
ಇನ್ನು ಜಾತ್ರೆಯ ಬಗ್ಗೆ..
ಏನು ಹೇಳ್ಳಿ??? ಎಲ್ಲರೂ ಜಾತ್ರೆಯ ಬಗ್ಗೆ ಬರ್ದಿರ್ತಾರೆ.ನನದೇನೂ ವಿಶೇಷವಿಲ್ಲ,ಆದರೆ ನನ್ನ ಪಾಲಿಗೆ ಜಾತ್ರೆ ವಿಶೇಷ ಅಷ್ಟೇ...
ನಮ್ಮೆಲ್ಲರ ಪಾಲಿಗೆ ಜಾತ್ರೆ ಎಂದರೆ ಅದೊಂದು ವರ್ಡಕಪ್ಪಿನಂತೆ...ಮತ್ತೆ ಯಾವಾಗ ಬರುತ್ತೇವೋ ಎಂದು ಕಾಯುತ್ತಿರುತ್ತೇವೆ..
ಮೊದಲ ಬಾರಿಗೆ ನಾನು ಜಾತ್ರೆ ನೋಡಿದ್ದು ಬಹುಷಃ ಒಂದನೇ ತರಗತಿಯಲ್ಲ್ಲೇನೋ...ಆಗ ತಗೋಂಡಿದ್ದ ಕೆಂಪು ಪಲ್ಟಿಹೊಡೆಯುವ ಜೀಪು ಇನ್ನೂ ನೆನಪಿದೆ ನನಗೆ..ಆಮೇಲೆ ಹಂಗೇ ನಂತರದಲ್ಲಿ ಏಳು ಸೌಡಿನ ಗನ್ನು ಮೂರನೇ ತರಗತಿಗೆ,ಐದಕ್ಕೆ ರಿಮೋಟ್ ಕಾರು, ಏಳಕ್ಕೆ ಅದೇನೋ ಒಂದು ರೀತಿಯ ಗನ್ನು,ಒಂಬತ್ತಕ್ಕೆ ಗುಳ್ಳೆ ಬಿಡುವ ಆ ಅಂಟು ,.ಹಾಂ ಅದೇ ಮೊದಲು ನಾನು ದೋಣಿ ಹತ್ತಿದ್ದು...
ಅಲ್ಲಿಯತನಕ ನಮ್ಮ ಜಾತ್ರೆ ಸಂಜೆಯ ತನಕವಷ್ಟೇ ಸೀಮಿತ,ಆಮೇಲೆ ಅಪ್ಪನ ಮೊಪೆಡ್ ಹತ್ತಿ ಮುಂದೆಕೂತು ಮನೆಗೆ ಬರುತ್ತಿದ್ದುದಷ್ಟೇ...
ರಾತ್ರಿ ಹೊತ್ತು ಜಾತ್ರೆಯ ಪರಿಚಯವಾಗಿದ್ದು ಮೊದಲ ಪೀಯುಸಿಯಲ್ಲಿ...ಶಿರಸಿಯ ಆದರ್ಶ ನಗರದಿಂದ ದಿನಾ ಸಂಜೆ ೬ಕ್ಕೆ ಒಂದು ಗ್ವಾಲೆ(ಗುಂಪು) ಹುಡುಗರೊಂದಿಗೆ ಅವರಿವರಿಗೆ ಕಿಚಾಯಿಸಿಕೊಳ್ಳುತ್ತಾ ಹೊರಟರೆ ೭ಕ್ಕೆ ದೇವಿಕೆರೆ ಸೇರಿದರೆ ಅಲ್ಲಿಂದ ಸುಮ್ಮನೆ ನಿಂತರೆ ಸಾಕು, ಜನರೇ ನಮ್ಮನ್ನು ದೂಕಿಕೊಂಡು ಜಾತ್ರೆ ಚಪ್ಪರ ಮುಟ್ಟಿಸುತ್ತಾರೆ!!!!!
ಆ ರಾತ್ರಿ ಓಡಾಟ ಮಾತ್ರ ಮರೆಯಲಿಕ್ಕಾಗದು...
ಮುಂದೆ ಮೊದಲ ವರುಷದ ಇಂಜಿನಿಯರಿಂಗಿನಲ್ಲಿ ಇನ್ನಷ್ಟು ಹೊಸ ಸ್ನೇಹಿತರೊಂದಿಗೆ ಸುತ್ತಾಟ,ಹಳೆಯ ಪಿ.ಯು.ಸಿ ಗೆಳೆಯರ ಜೊತೆ ಕಿತ್ತಾಟ..ಹಿಂಗೇ ನಡೆದಿತ್ತು...
ಮೂರನೇ ವರುಷ ಬೆಂಗಳೂರಿಗೆ ವಿ.ಟಿ.ಯು ಸಾಂಸ್ಕೃತಿಕ ಉತ್ಸವಕ್ಕೆ ಹೋಗಿದ್ದರಿಂದ ಜಾತ್ರೆ ತಪ್ಪಿಸಿಕೊಂಡೆ..

ಇನ್ನು ಜಾತ್ರೆಗೆ ಒಂದಷ್ಟು ದಿನವಿರುವಾಗಲೇ ಉಳಿದ ದಿನದಲ್ಲಿ ತರಕಾರಿ ಮಾರುಕಟ್ಟೆಯಾಗಿರುವ ಮಾರಿ ಚಪ್ಪರದ ಟೆಂಡರ್ ಪ್ರಕ್ರಿಯೆ ಶುರುವಾಗುತ್ತದೆ..ಆಮೇಲೆ ಸ್ವಲ್ಪ ದಿನ ಇದ್ದಾಗ ಹಳೆ ಬಸ್ಸು ನಿಲ್ದಾಣವೂ ವಿಕಾಸಾಶ್ರಮ ಬಯಲಿಗೆ ಸ್ಥಳಾಂತರವಾಗುತ್ತದೆ...ಟೆಂಪೋಸ್ಟಾಂಡು ಕೂಡ ಖಾಲಿಯಾಗುತ್ತದೆ...ಮಳಿಗೆಗಳು ಬಂದು ಕೂರುತ್ತವೆ..

ಹಾಂ ಪರೀಕ್ಷೆಗೂ ಜಾತ್ರೆಗೂ ಅವಿನಾಭಾವ ಸಂಭಂದ..ಸಾಧಾರಣವಾಗಿ ಮಾರ್ಚಿನಲ್ಲೇ ಇವೆರಡೂ ಬರುವುದಲ್ಲಾ!!!


ಏನೋ ಗೊತ್ತಿಲ್ಲ,ನನಗೆ
ಗೊತ್ತಿಲ್ಲದಂತೆ ಕೈಬೆರಳು ಇದನ್ನೆಲ್ಲಾ ಬರೆಳಚ್ಚಿಸಿದೆ...
ಬರೆಯುತ್ತಿರಿ ನಮಸ್ತೆ ಅಷ್ಟೇ...

ಮನಸು said...

ನಮ್ಮನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದೀರಲ್ಲಾ ಸರ್. ಧನ್ಯವಾದಗಳು, ಶಿರಸಿ ಜಾತ್ರೆ ಬಹಳಷ್ಟು ಹೆಸರು ಮಾಡಿದೆ

Unknown said...

ಬಾಲು ರವರೆ ನೀವು ಸಂಜೆ 4 ರ ವರೆಗಸ್ಟೇ ಇದ್ರಿ. ಆಮೇಲೆ ನೀವು ಇದ್ದು ಜಾತ್ರೆಯ ಮಜಾ ನೋಡಬೇಕಿತ್ತು. ರವಿ ಮನೆ ಸೇರಿದ ಮೇಲೆ ಜಾತ್ರೆಗೆ ರಂಗೆeರುವದು. ನಾಟಕ ಕಂಪನಿಗಳು, ಯಕ್ಷಗಾನ ಡೆeರೆಗಳು ಎಲ್ಲ ಸುತ್ತಬೇಕಿತ್ತು. ರಾತ್ರೆಯಾದೊಡನೆ , ಅದೂ ಹನ್ನೊಂದರ ಮೇಲೆ ಸಭ್ಯರೆಲ್ಲ, ಮನೆಸೇರಿದ ಮೇಲೆ , ಜಾತ್ರೆಯಲ್ಲಿ ವಿಶೇಷಗಳೂ ನಡೆಯುತ್ತವೆ. ಮಹಾರಾಷ್ಟ್ರದ ಲಾವಣಿಗಳಂತೆ ಲಂಗ ದಾವಣಿಗಳು ಕುಣಿಯುತ್ತವೆ.

ಏನೇ ಇರಲಿ , ಸಿರ್ಸಿ ಜಾತ್ರೆಗೆ ಅದರದೇ ಆದ ಮಹತ್ವವಿದೆ. ಆಸ್ತಿಕರ ಮನೋಭಾವನೆಗೆ ಚ್ಯುತಿ ಬಾರದಂತೆ ದಶಕಗಳ ಆಚರಣೆಯ ಇತಿಹಾಸ ಈ ದೇವಿ ಜಾತ್ರೆಗಿದೆ.

ಹರಿಹರ ಭಟ್, ಬೆಂಗಳೂರು.
November 12 , 2012.