Saturday, November 8, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......10 ದೇವಿಸರದಲ್ಲಿ ನಾಗೇಶಣ್ಣ ನ ಪ್ರಯೋಗ ಶಾಲೆ, ಇಲ್ಲಿ ಗನ್ನು ತಯಾರಿಸುತ್ತಾರೆ ಗೊತ್ತಾ .......!

ದೇವಿಸರ  ಗ್ರಾಮದ ಒಂದು ನೋಟ


ಕಳೆದ ಸಂಚಿಕೆಯಲ್ಲಿ  ಯಕ್ಷಗಾನದ  ಯಕ್ಷಲೋಕದಲ್ಲಿ ನೀವೆಲ್ಲಾ  ವಿಹಾರ ಮಾಡಿದ್ದು  ನನಗೆ ಖುಷಿಕೊಟ್ಟಿತು,  ಬನ್ನಿ ನಂತರ ನಮ್ಮ ಪಯಣ ಮುಂದುವರೆಸೋಣ , ಯಕ್ಷಗಾನ  ನೋಟ ನೋಡಿ, ದೇವಿಸರಕ್ಕೆ  ಬಂದು ನಿದ್ರಾದೇವಿಗೆ ಶರಣಾದೆ, ಎಚ್ಚರವಾದಾಗ  ಹೊರಗಡೆ  ಹಕ್ಕಿಗಳು  ಸುಪ್ರಭಾತ  ಹಾಡುತ್ತಿದ್ದವು, ಹಾಗೆ ಮನೆಯ ಹೊರಗೆ ಬಂದು  ಶುದ್ಧ ಗಾಳಿಯನ್ನು ಒಮ್ಮೆ   ಉಸಿರ ಒಳಗೆ ಎಳೆದುಕೊಂಡೆ , ಮನಸು  ಉತ್ಸಾಹ ಗೊಂಡಿತು, ಕಣ್ಣುಗಳು ಸುತ್ತಲ ಪರಿಸರವನ್ನು ಕಂಡು ಬೆರಗಾದವು. ಮನೆಯ ಹೊರಗೆ ಬಂದ  ತಕ್ಷಣ  ಮನೆಯ ಮುಂದೆ ನಗುತ್ತಿದ್ದ   ಹೂ ಗಿಡಗಳು, ಎತ್ತರಕ್ಕೆ ಬೆಳೆದು ತಂಗಾಳಿಗೆ   ಓಲಾಡುತ್ತಿದ್ದ  ಅಡಿಕೆ ಹಾಗು ತೆಂಗಿನ ಮರಗಳು . ಎದುರುಗಡೆ  ಕೊಟ್ಟಿಗೆ ಮನೆಯಲ್ಲಿ ಹಾಲು ಕರೆಯುತ್ತಿರುವ ಶಬ್ದ ಬಂದು  ಅಲ್ಲಿಗೆ ನಡೆದೇ ,ಹಾಲು ಕರೆಯೋಣ  ಬನ್ನಿ

ಚುರ್ ಚುರ್  ಎಂದು ಹಾಲು ಕರೆಯುವ  ಶಬ್ದ ಕೇಳಿ  ಎಷ್ಟೋ ವರ್ಷ ಆಗಿದ್ದವು , ಕುತೂಹಲದಿಂದ  ಒಳಹೊಕ್ಕೆ , ಪ್ರೀತಿಯ  ನಾಗೇಶಣ್ಣ ಒಂದು ಕೆಂದ  ಹಸುವಿನಿಂದ  ಹಾಲು ಕರೆಯುತ್ತಾ ಇದ್ದರು,  ಬಾಲ್ಯದ  ನೆನಪು ಮೂಡಿಬಂತು , ಚಿಕ್ಕವಯಸ್ಸಿನಲ್ಲಿ  ನಮ್ಮ ಹಳ್ಳಿಯ ಮನೆಯ ಕೊಟ್ಟಿಗೆಯಲ್ಲಿ   ಹಸುವಿನ ಹಾಲನ್ನು  ನಾನೇ ಕರೆದು  ಎರಡು ಲೋಟ  ನೊರೆ ಹಾಲನ್ನು ಹಾಗೆ ಕುಡಿಯುತ್ತಿದ್ದ  ದಿನಗಳು ನೆನಪಿಗೆ ಬಂದು  ಖುಶಿಯಾಯಿತು.  ಈ ಅಣ್ಣ ನಮ್ಮೊಡನೆ ಮಾತನಾಡುತ್ತಾ ತುಂಟತನ ಮಾಡುತ್ತಾ  ಹಾಲು ಕರೆಯುತ್ತಿದ್ದಾರೆ  , ಆ ಮಾತಿಗೆ ಹಸುವೂ ಸಹ ಉಲ್ಲಾಸ ಗೊಂಡು  ಆಸಕ್ತಿಯಿಂದ  ಕೇಳುತ್ತಾ  ಹಾಲು  ಕೊಡುತ್ತಿತ್ತು . ಸಾಮಾನ್ಯವಾಗಿ ಹಸು ಹಾಲನ್ನು ಕರೆಯುವಾಗ  ಅಪರಿಚಿತರು ಬಂದರೆ  ಹಾಲು ಕೊಡಲು ತಂಟೆ ಮಾಡುತ್ತವೆ , ಆದರೆ ಈ ಹಸು  ಮಾತ್ರ  ಅಂತಹ ತಂಟೆ ಮಾಡದೆ  ನೆಮ್ಮದಿಯಿಂದ ಕ್ಯಾಮಾರಾಗೆ ಪೋಸ್ ಕೊಟ್ಟಿತು .ಕೊಟ್ಟಿಗೆಯಲ್ಲಿ ಅಣ್ಣಾ ತಮ್ಮಂದಿರ ಜುಗಲ್ ಬಂದಿ 


ಮುಂದೆ ನಮ್ಮ ಜೊತೆ  ಪ್ರಕಾಶಣ್ಣನ  ಮಾತಿನ ಜುಗಲ್ ಬಂದಿ  ಸಹ ಇತ್ತು,  ಅಣ್ಣಾ ತಮ್ಮಂದಿರು  ಗೆಳೆಯರಂತೆ  ಮಾತು ಕಥೆ ನಡೆಸುತ್ತಾ  , ನಗುತ್ತಾ,  ತುಂಟಾಟ ಮಾಡುತ್ತಾ , ಇರಲು  ಕೊಟ್ಟಿಗೆಯಲ್ಲಿ  ಮಾತಿನ ಜುಗಲ್ಬಂದಿ  ನಡೆದಿತ್ತು,  ,  ಬಾಲಣ್ಣ  ಅಣ್ಣನ  ಹೊಸ ಅನ್ವೇಷಣೆ   ನೋಡೋಣ ಬನ್ನಿ ಅಂತಾ  ಪ್ರಕಾಶ್ ಹೆಗ್ಡೆ  ಹೇಳಿದರು , ನನಗೂ ನೋಡುವ ಆಸೆ  ಸರಿ ನಾಗೇಶಣ್ಣ  ಬನ್ನಿ ತೋರಿಸಿ ಅಂತಾ  ಕೋರಿದೆ . ಹಾಲು ಕರೆದು ಮುಗಿಸಿ  ತಮ್ಮ ಹೊಸ ಅನ್ವೇಷಣೆ  ತೋರಿಸಲು  ನಮ್ಮ ಜೊತೆ ಬಂದರು .
ನಾಗೇಶಣ್ಣ  ನ  ಅನ್ವೇಷಣೆ 


ಸಾಮಾನ್ಯವಾಗಿ  ಅಡಿಕೆತೋಟಕ್ಕೆ  ಕೋತಿಗಳ ಹಾವಳಿ ಬಹಳ ಇರುತ್ತೆ, ಹಿಂಡು  ಹಿಂಡಾಗಿ ಬರುವ ಈ ಗುಂಪು   ಅಡಿಕೆ  ಮರಕ್ಕೆ ದಾಳಿ  ಮಾಡಿ  ಅಡಿಕೆ  ಫಸಲನ್ನು  ನಾಶ ಮಾಡುತ್ತವೆ . ಅವನ್ನು  ದೂರ ಇಡಲು   ಕವಣೆಯಲ್ಲಿ ಕಲ್ಲು  ಹೊಡೆಯುವುದು  ವಾಡಿಕೆ . ಆದರೆ ಅಡಿಕೆ ಮರ ಬಹಳ ಎತ್ತರ  ಬೆಳೆಯುವ  ಕಾರಣ , ಕವಣೆಯ ಕಲ್ಲು  ಕೋತಿಗಳಿಗೆ ತಾಗದೆ  ಅವುಗಳ ಹಾವಳಿ   ನಿಯಂತ್ರಣ  ಮಾಡಲು  ಅವಕಾಶ  ಆಗುವುದಿಲ್ಲ , ಈ  ಎಲ್ಲಾ ಅಂಶಗಳನ್ನು ನೆನಪಿಟ್ಟು  ಕೊಂಡು , ರೂಪಿಸಿದ ಒಂದು ಹೊಸ ಅನ್ವೇಷಣೆ   ಈ ಹೊಸ ಗನ್ನು . ಮೊದಲು ಇದನ್ನು ನೋಡಿದಾಗ  ನನ್ನ ಮನಸಿನಲ್ಲಿ  ಇದರ ಬಗ್ಗೆ ಅಂತಹ  ಅಚ್ಚರಿ ಮೂಡಲಿಲ್ಲ,  ಎರಡು ರಿಪೀಸ್ ಪಟ್ಟಿ , ಕವಣೆ ತರಹ  ಕಲ್ಲು ಹೊಡೆಯಲು ಒಂದು ರಬ್ಬರ್  ಟ್ಯೂಬು  , ಜೊತೆಗೆ ಒಂದು ಮರದ ಟ್ರಿಗ್ಗರ್ರು  ಇವನ್ನು ನೋಡಿ  ಇದೇನು ಮಾಡಬಲ್ಲದು  ಸುಮ್ನೆ ಬೊಗಳೆ ಅಂದು ಕೊಂಡೆ . ನಾಗೇಶಣ್ಣ ನ ಗನ್ನಿನ  ಪರೀಕ್ಷೆ 


 ಬನ್ನಿ  ಬಾಲಣ್ಣ  ಒಮ್ಮೆ ಇದರಲ್ಲಿ ಹೊಡೆಯೋರಂತೆ ಅಂದ್ರೂ  ಆದರೆ ಅಣ್ಣಾ  ಇದರ ಬಗೆ ನನಗೆ ಗೊತ್ತಿಲ್ಲಾ, ಒಮ್ಮೆ ನೀವು ತೋರಿಸಿ ಅಂದೇ  , ಒಮ್ಮೆ ಗುರಿ ಇಟ್ಟು ತಮ್ಮ ಗನ್ನಿನಲ್ಲಿ  ಒಂದು ಕಲ್ಲನ್ನು ಒಗೆದರು , ರೊಯ್  ಅಂತಾ ಬಿರುಸಾಗಿ ಹೋರಟ  ಆ ಕಲ್ಲು ಅಡಿಕೆ ಮರದ ತುದಿಯನ್ನು  ತಲುಪಿ  ಪಟಾರ್  ಅಂತ  ಶಬ್ಧ  ಮಾಡಿತು , ನನಗೂ ಇದರಲ್ಲಿ ಏನೋ ವಿಶೇಷ ಇದೆ  ಅಂತಾ ಅನ್ನಿಸಿ  , ಅಣ್ಣಾ  ಕೊಡಿ ನಾನೂ ಒಮ್ಮೆ ಪ್ರಯತ್ನಿಸುವೆ  ಅಂದೇ ,  ನಾಗೇಶಣ್ಣ  ನನಗೆ ಹೆಮ್ಮಯಿಂದ  ತಮ್ಮ ಗನ್ನನ್ನು  ನೀಡಿ  ಉಪಯೋಗಿಸುವ ವಿಧಾನ ಹೇಳಿಕೊಟ್ರು . ಟ್ರಿಗ್ಗರ್  ಎಳೆದೆ  ಅಬ್ಬಬ್ಬ  ಅಚ್ಚರಿ  ಬಹಳ ಎತ್ತರ  ಚಿಮ್ಮಿತು  ಸುಮಾರು ೫೦ ಗ್ರಾಂ  ತೂಕದ  ಕಲ್ಲು,  ಇವರ ಅನ್ವೇಷಣೆ ಬಗ್ಗೆ  ಹೆಮ್ಮೆ ಮೂಡಿತು .ನಾಗೇಶಣ್ಣ ನ ಗನ್ನು  ಭಾರಿ ಫೇಮಸ್ಸು  ಸಾರ್ 


ಅಣ್ಣಾ  ಇದರ ತಯಾರಿಕೆ ಹೇಗೆ ಅಂದೇ , ಅಯ್ಯೋ  ಬಾಲಣ್ಣ , ಅದೊಂದು ಕಥೆ,  ನಮ್ಮ ಅಡಿಕೆ ತೋಟಕ್ಕೆ  ಕೋತಿಗಳ ಹಾವಳಿ ಜಾಸ್ತಿ , ಅವುಗಳನ್ನು ಮೊದಲು ಕೈಯಲ್ಲಿ  ಕಲ್ಲು ಹೊಡೆದು  ಓಡಿಸುತ್ತಿದ್ದೆವು , ನಂತರ   ಕ್ಯಾಟರ್ ಬಿಲ್ಲು   ನಿಂದ  ಕಲ್ಲು ಹೊಡೆಯುತ್ತಿದ್ದೆವು  , ಊ ಹೂ  ಕೆಲವೊಮ್ಮೆ ಕ್ಯಾಟರ್ ಬಿಲ್ಲಿನ  ರಬ್ಬರ್ ಕಿತ್ತು ಹೋಗಿ  ಅದು ಅಷ್ಟಾಗಿ ಬಾಳಿಕೆ ಬರುತ್ತಿರಲಿಲ್ಲ , ನಂತರ ಕವಣೆ   ಬೀಸುತ್ತಿದ್ದೆವು  , ಅದರಲ್ಲೂ  ಮಂಗಗಳ  ಹಾವಳಿ ನಿಯಂತ್ರಣ  ಕಷ್ಟಾ ಆಯ್ತು,    ಹಾಗಾಗಿ  ಮನೆಯಲ್ಲಿ ಸುಮ್ನೆ  ಕೂರೋ ಬದಲಾಗಿ  ಏನಾದರೂ ಮಾಡುವ ಯೋಚನೆ ಬಂತು, ಮರದ ಪಟ್ಟಿ ಏನೋ  ನಮ್ಮಲ್ಲೇ ಸಿದ್ದ ಆಗುತ್ತೆ, ಆದರೆ  ಕಲ್ಲು ಬೀಸಲು ಹಾಗು ಅದಕ್ಕೆ ವೇಗ ನೀಡಲು ಬಳಸುವ  ರಬ್ಬರ್  ಬಗ್ಗೆ  ಸ್ವಲ್ಪ ತಲೆ ಕೆಡಿಸಿಕೊಂಡೆ , ಮೊದಲು   ಸೈಕಲ್ ರಬ್ಬರ್  ಟ್ಯೂಬ್  ಬಳಸಿದೆ , ಬಾಳಿಕೆ  ಬರಲಿಲ್ಲ,  ಸ್ಕೂಟರ್  ಮುಂತಾದ  ಟ್ಯೂಬ್ ರಬ್ಬರ್ ಬಳಸಿದೆ  ಉಪಯೋಗ ಆಗಲಿಲ್ಲ, ಒಮ್ಮೆ ಯಾವುದೋ ಶಿರಸಿಯಲ್ಲಿ  ಕೆ .ಎಸ್ . ಹೆಗ್ಡೆ  ಅವರ  ದವಾಖಾನೆಗೆ  ಹೋಗಿದ್ದಾಗ  ಡಾಕ್ಟರ  ಕುತ್ತಿಗೆಯಲ್ಲಿದ್ದ  ಸ್ಟೆಥಾಸ್ಕೊಪ್  ಕಣ್ಣಿಗೆ ಬಿತ್ತು , ಅದರಲ್ಲಿ ಬಳಸಿರುವ   ರಬ್ಬರ್ ಟ್ಯೂಬ್  ಬಳಸಿದರೆ  ಹೇಗೆ ಎಂಬ  ಆಲೋಚನೆ ಬಂತು, ಅದು ಎಲ್ಲಿ ಸಿಗುತ್ತೆ ಅಂತಾ  ಗೊತ್ತಿರಲಿಲ್ಲ,  ಡಾಕ್ಟರ್  ಅವರಲ್ಲಿ ವಿಚಾರಿಸಿದೇ ,   ಅವರು ನನ್ನನ್ನು  ವಿಚಿತ್ರವಾಗಿ ನೋಡಿದರು , ಬಹುಷಃ  ತಮ್ಮ  ಘನತೆಯ  ಈ ಸ್ಟೆತಾಸ್ಕೊಪಿನ  ರಬ್ಬರ್ ಟ್ಯೂಬನ್ನು  ಯಾವುದಕ್ಕೆ ಉಪಯೋಗಿಸಿ  ಮಾನ ಕಳೆಯುವರೋ  ಅಂದುಕೊಂಡಿರಬೇಕು
,ಆದರೆ ನಾನು  ಆದರೆ    ಅದು ಸಿಗುವ  ಜಾಗಕ್ಕೆ  ಹೋಗಿ    ಹಲವು ಕಡೆ ವಿಚಾರಿಸಿ  ತಂದಿದ್ದಾಯ್ತು,  ಹಾಗೂ ಹೀಗೂ ನನ್ನ ತಯಾರಿಕೆ  ಮೊದಲ ಪ್ರಯತ್ನ  ಸಿದ್ದವಾಯ್ತು ,  ನಂತರ  ಇದರ  ಪ್ರಯೋಗ , ಮೊದಲ ಅಡೆತಡೆ ನಿವಾರಣೆ ಹೀಗೆ  ನಡೆದು  ಅಂತಿಮವಾಗಿ  ಈ ರೂಪ ಪಡೆದ  ಗನ್ನು ಸಿದ್ದ ಆಗಿದೆ ಬಾಲಣ್ಣ  ಅಂದ್ರೂ .


ಡಾಕ್ಟರ  ಸ್ಟೆತಾಸ್ಕೊಪಿಗೂ  ನಮ್  ನಾಗೇಶಣ್ಣ ನ ಗನ್ನಿಗೂ  ಕನೆಕ್ಸನ್  ಐತೇ ಅಲ್ಲಾ  ನಾಗೇಶಣ್ಣ , ಡಾಕ್ಟರ  ಸ್ಟೆತಾಸ್ಕೊಪಿಗೂ  ನಿಮ್ಮ  ಗನ್ನಿನ ತಯಾರಿಕೆಗೂ  ಒಂಥರಾ  ವಿಚಿತ್ರ  ಕನೆಕ್ಸನ್  ಆಲ್ವಾ , ಅಂತಾ  ಚುಡಾಯಿಸಿದೆ , ನಗು ನಗುತ್ತಾ  ,  ಬಾಲಣ್ಣ   ಈ ರಬ್ಬರ್  ಟ್ಯೂಬ್ ನೋಡಿ  ಎಷ್ಟು ಎಳೆದರೂ  ಇದರ  ಶಕ್ತಿ  ಕುಂದೊದಿಲ್ಲಾ , ಆದರೆ  ಬೇರೆಯವದರಲ್ಲಿ  ಇಂತಹ ಶಕ್ತಿ ಇರೋದಿಲ್ಲಾ, ಮೊದ  ಮೊದಲು ನಾನು ಇಂತಹ ಟ್ಯೂಬ್  ಗಳನ್ನೂ ಹುಡುಕುತ್ತಾ   ಶಿರಸಿಯ ಪೇಟೆಯಲ್ಲಿ ಅಲೆದಿದ್ದೇನೆ , ಯಾವುದೋ  ಅಂಗಡಿಯಲ್ಲಿ  ಇಂತಹ ರಬ್ಬರ್ ಟ್ಯೂಬನ್ನು  ಖರೀದಿ ಮಾಡಿ ತಂದು ನಡೆಸಿದ ಪ್ರಯೋಗ ಇದು  ಎಂದು ನನ್ನ ನೋಡಿ ನಕ್ಕರು.  ಈ ಮನುಷ್ಯಾ   ಸಾಮಾನ್ಯಾ ಅಲ್ಲಾ ಅಂತಾ  ಹೆಮ್ಮೆ ಮೂಡಿತು,    ಮೊದಲು   ಸ್ವಂತಕ್ಕೆ  ಉಪಯೋಗಿಸುತ್ತಿದ್ದ   ಈ ಗನ್ನಿನ ಮಹಿಮೆ ಹರಡಲು ಹೆಚ್ಚು ಕಾಲ  ಬೇಕಾಗಲಿಲ್ಲ ,  ನಮ್ಮ  ತೋಟದಲ್ಲಿ   ಮಂಗಗಳ ಹಾವಳಿ ಕಡಿಮೆ ಆಯ್ತು , ಸುಮಾರು  ೫೦ ರಿಂದ ೧೦೦ ಗ್ರಾಂ  ಕಲ್ಲುಗಳು ಮಂಗ ಗಳಿಗೆ ತಗುಲಿ  ಪೆಟ್ಟು ಬಿದ್ದು   ಅವು ಈ ಕಡೆ ತಲೆ ಹಾಕೋದೆ ಬಿಟ್ಟವು , ನಂತರ  ಇದನ್ನು  ತಿಳಿದ ಕೆಲವರು  ಕುತೂಹಲಕ್ಕೆ ಬಂದು ನೋಡಿ ಇದರ ಮಹತ್ವ ಅರಿತು,  ತಮಗೂ ಮಾಡಿಕೊಡಲು  ಇವರಿಗೆ ದಂಬಾಲು  ಬಿದ್ದರು , ಹೀಗೆ ನಾಗೇಶಣ್ಣ ನ  ಗನ್ನಿಗೆ  ಬೇಡಿಕೆ  ಹೆಚ್ಚಾಯ್ತು . ಬಾಯಿಂದ ಬಾಯಿಗೆ ಹರಡಿ, ಕೆಲವು ಮಾಧ್ಯಮದವರು  ಇದನ್ನು ಗುರುತಿಸಿ  ವರದಿ ಮಾಡಿದರು ,  ಈ ಗನ್ನಿನ  ಮಹಿಮೆ  ತಿಳಿದ  ಜನ  ಕರ್ನಾಟಕದ  ಮೂಲೆ ಮೂಲೆಯಿಂದ  ನಾಗೇಶಣ್ಣನ  ಗನ್ನಿಗೆ  ಬೇಡಿಕೆ ಇಡಲು ಶುರು ಮಾಡಿದ್ದಾರೆ . ಇದನ್ನು ಉಪಯೋಗಿಸಿದವರೆಲ್ಲರೂ  ಇದರಿಂದ ಮಂಗನ ಹಾವಳಿ ಕಡಿಮೆ ಆದ ಬಗ್ಗೆ ಹೇಳುತ್ತಾರೆ, ಮಂಗನನ್ನು ಸಾಯಿಸದೇ  ಹೆದರಿಸಿ ಓಡಿಸುವುದು ಒಳ್ಳೆಯದಲ್ವೆ....,    ಹಾಗಾಗಿ   ಈಗ ನಮ್ಮ ನಾಗೇಶಣ್ಣ  ತಿಂಗಳಿಗೆ ಕನಿಷ್ಠ  ಐವತ್ತು ಗನ್ನು ತಯಾರಿಸುವ  ಹಂತ ತಲುಪಿದ್ದಾರೆ .    ನಾಗೇಶಣ್ಣ  ಮೊದಲು ನಿಮ್ಮ ಗನ್ನಿಗೆ ಪೇಟೆಂಟ್  ಮಾಡಿಸಿಬಿಡಿ  , ಇಲ್ಲದಿದ್ರೆ  ಮುಂದೆ ಯಾರಾದ್ರೂ  ಈ ಗನ್ನು ನಮ್ಮದೂ ಅಂತಾ ಪೇಟೆಂಟ್ ಮಾಡಿಸಿ  ನಿಮ್ಮ ಶ್ರಮಕ್ಕೆ  ಕುತ್ತು ತಂದಾರೂ ಅಂದೇ . ಆದ್ರೆ  ಕಪಟ  ಅರಿಯದ ನಾಗೇಶಣ್ಣ  ಸುಮ್ನೇ  ನಕ್ಕೂ   , ಬನ್ನಿ  ಬಾಲಣ್ಣ  ತಿಂಡಿ ತಿನ್ನುವ  ಅಂತಾ ಕರೆದೊಯ್ದರು .ಆಹಾ  ಅತ್ತಿಗೆ ಮಾಡಿದ  ಇಡ್ಲೀ   ಬಹಳ ರುಚೀರಿ 

 ಅಡಿಗೆ ಕೋಣೆಯಲ್ಲಿ  ವನಿತಾ ಅತ್ತಿಗೆ ಮಾಡಿದ  ಬಿಸಿ ಬಿಸಿ ಇಡ್ಲೀ  ಕೈ ಬೀಸಿ ಕರೆಯುತ್ತಿತ್ತು. ನಾಗೇಶಣ್ಣ  ಹಾಸ್ಯ , ವನಿತಾ  ಅತ್ತಿಗೆಯ  ಪ್ರೀತಿ , ಪ್ರಕಾಶಣ್ಣನ   ತುಂಟತನ   ಎಲ್ಲಾ ಸೇರಿ   ರುಚಿಯಾದ  ಇಡ್ಲಿಗಳು  ಸಲೀಸಾಗಿ   ಹೊಟ್ಟೆ ಸೇರಿ  ಸದ್ಗತಿ  ಪದೆಯುತ್ತಿದ್ದವು. ....!

Tuesday, October 7, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......09 ಯಕ್ಷಲೋಕದೊಳಗೆ ಹೊಕ್ಕಿಬಂದೆ ನಾನು....!!

ಬನ್ನಿ ಟಿಕೆಟ್ ಕೊಳ್ಳೋಣ 

   ಹಿಂಡುಮನೆಯಿಂದ  ನಮ್ಮ ಪಯಣ  ಹೊರಟಿದ್ದು   ಸಿದ್ದಾಪುರ ತಾಲೂಕಿನ  ದೇವಿಸರ ಗ್ರಾಮದತ್ತ ...... !  ದೇಹವು ಬೆಳಗ್ಗಿನಿಂದ   ಧಣಿದು  ಇನ್ನು  ಸಾಧ್ಯವಿಲ್ಲಾ  ಎನ್ನುವ ಹಂತಕ್ಕೆ ಬಂದಿತ್ತು,  ನಮ್ಮ ಪಯಣ  ಪ್ರಕಾಶಣ್ಣ  ಹುಟ್ಟೂರ   ಕಡೆಗೆ ಸಾಗಿತ್ತು,  ಮನೆ ತಲುಪಿದ ತಕ್ಷಣ  ಬಹಳ ಬೇಗ ಹಾಸಿಗೆ ಸೇರಿ ನಿದ್ದೆ ಹೊಡೆಯುವ  ಪ್ಲಾನ್ ಹಾಕುತ್ತಿದ್ದೆ ಮನದಲ್ಲಿ ..... ! ಅರೆ ಊರು ಬಂದೆ ಬಿಟ್ಟಿತು . ........... !  
ಮನೆಯಲ್ಲಿ ಎಲ್ಲರ ಪ್ರೀತಿಯ ಸ್ವಾಗತ ಸಿಕ್ಕಿತು , ಊಟ ಆಯಿತು  , ಮಲಗುವ ಸಿದ್ದತೆ  ನಡೆದಿತ್ತು, ಪ್ರಕಾಶಣ್ಣ ನ ಅಣ್ಣ  ನಾಗೇಶಣ್ಣ  ಮಾತಿನ ನಡುವೆ ಶಿರಸಿಯಲ್ಲಿ ಯಕ್ಷಗಾನ ಇರುವುದಾಗಿ ತಿಳಿಸಿದರು , ನನ್ನ ಕಡೆ ನೋಡಿದ  ಪ್ರಕಾಶಣ್ಣ  ..... ಬಾಲಣ್ಣ  ಅಂದ್ರೂ  ಅರ್ಥ ಆಯಿತು,  ಸರಿ ಎಸ ಅಂದೇ , ಯಕ್ಷಗಾನದ  ಗಂಧ ಗಾಳಿ ಇಲ್ಲದ  ನಾನು  ,ಈ ಪ್ರಕಾಶ್ ಹೆಗ್ಡೆ  ನಿದ್ದೆ ಮಾಡಲು ಬಿಡದೆ  ಯಕ್ಷಗಾನ  ನೋಡಲು  ಕರೆದೊಯ್ಯುತ್ತಿರುವ ಬಗ್ಗೆ  ಮನದಲ್ಲಿ  ಬೈದುಕೊಂಡೆ , ಆದ್ರೆ  ನನ್ನ ಕಳ್ಳ  ಮನಸು  ಸರಿ ನಡಿಯಪ್ಪ  ಇದು ಒಂದು ಅನುಭವ ಇರಲಿ ಅಂತಾ  ಆಸೆ ಹುಟ್ಟಿಸಿತ್ತು, ಅದಕ್ಕೆ ನಮ್ಮ ಕಾರಿನ ಸಾರಥಿ  ಸಾಥ್ ನೀಡಿದ . ನಾನು, ಪ್ರಕಾಶ್ ಹೆಗ್ಡೆ, ನಾಗೇಶಣ್ಣ  , ಹಾಗು ನಮ್ಮ ಕಾರಿನ ಸಾರಥಿ  ಯಕ್ಷಗಾನ ನೋಡಲು ಹೊರಟೆವು, 

                                             ಯಕ್ಷಲೋಕಯಕ್ಷಗಾನದ  ನೋಟ 


ಅರೆ  ಯಕ್ಷಗಾನ  ಅಂದ್ರೆ ಏನೂ ಅಂತಾ  ನನಗೆ ಖಂಡಿತಾ  ಗೊತ್ತಿರ್ಲಿಲ್ಲ , ಬಹುಷಃ  ನಾನು ಯಕ್ಷಗಾನ  ಅಂತಾ ಮೊದಲು ಕಂಡಿದ್ದು,  ನಾ ನಿನ್ನ ಮರೆಯಲಾರೆ  ಚಿತ್ರದಲ್ಲಿ ಬರುವ ಒಂದು ಸನ್ನಿವೇಶದಲ್ಲಿ  , ಸರಿಯಾಗಿ ಅರಿವಿಲ್ಲದ ನಾನು  ಅದನ್ನು ಒಂದು  ಹಾಸ್ಯ ದ್ರುಶ್ಯವೆಂದು ಪರಿಗಣಿಸಿದ್ದೆ , ಆದರೆ  ಅರಿವು ಮೂಡುವ ಸಮಯ  ಬಂದಿತ್ತು . ಬನ್ನಿ ಯಕ್ಷಗಾನದ ಬಗ್ಗೆ ತಿಳಿಯೋಣ . ಹೌದು ಯಕ್ಷಗಾನದ  ಬಗ್ಗೆ ಅರಿಯುವ ಮನಸಾಗಿ ಮಾಹಿತಿ ಹುಡುಕಲು ತೊಡಗಿದೆ ಹಲವು ಗೆಜೆಟ್ ಗಳನ್ನೂ ಹೊಕ್ಕಾಗ ಯಕ್ಷಗಾನದ ಬಗ್ಗೆ ವಿಶೇಷ ಮಾಹಿತಿ ಸಿಕ್ಕಿತು , ಜೊತೆಗೆ ಯಕ್ಷಗಾನದ ಇತಿಹಾಸ ತೆರೆದುಕೊಂಡಿತು "ಯಕ್ಷಗಾನ " ಕಲೆಯು ಬಹು ಶತಮಾನಗಳಿಂದ ಬೆಳೆದುಬಂದ ಕಲೆಯಾಗಿದೆ , ಹಿಂದೆ ಇದನ್ನು ಬಯಲಾಟ , ಭಾಗವತರ  ಆಟ  ಎಂಬುದಾಗಿ ಕರೆಯಲಾಗುತ್ತಿತ್ತು . ಈ ಆಟಗಳು ಸಂಗೀತ ಪ್ರಧಾನ ಆಗಿದ್ದ ಕಾರಣ , ಹಾಗು ಸಂಗೀತ  ಉಪಕರಣಗಳು  ಬಹು ಮುಖ್ಯವಾಗಿ ಬಳಕೆಯಾಗಿ  ಹಾಡುಗಳಲ್ಲಿ  ಕಥೆಯನ್ನು  ಮುಂದುವರೆಸಲಾಗುತ್ತಿದ್ದ  ಈ ಕಲೆಯು  ಯಕ್ಷರ ಗಾನ ವೆಂದು ಜನರಲ್ಲಿ ಭಾವನೆ ಮೂಡಿ , ಈ ಕಲೆಗೆ ಯಕ್ಷಗಾನ  ಎಂಬ ಹೆಸರು  ಬಂದಿದೆ . ಭಾರತೀಯ  ಶಾಸ್ತ್ರೀಯ ಸಂಗೀತದ  ಜೊತೆಯಲ್ಲಿ  ತೆಲಗು ಸೀಮೆಯಲ್ಲಿ  "ಯಕ್ಕಲಗಾನ " ಎಂಬ  ಸಂಗೀತವೂ ಮಿಳಿತಗೊಂಡು  ಯಕ್ಷಗಾನ  ಕ್ಕೆ ಹೊಸ ರೂಪ ಕೊಟ್ಟಿತು .  ಯಕ್ಷಗಾನದ  ಮೊದಲ ಪ್ರಸ್ತಾಪ ಕನ್ನಡ ಕಾವ್ಯಗಳಾದ  "ಮಲ್ಲಿನಾಥ ಪುರಾಣ" ಹಾಗು "ಚಂದ್ರಪ್ರಭ ಪುರಾಣ" ಇವುಗಳಲ್ಲಿ ಬಂದಿದೆ . ೧೬ ನೆ ಶತಮಾನದಿಂದ ೧೮ ನೆ ಶತಮಾನದ ವರೆಗೆ ಯಕ್ಷಗಾನ  ಸಮೃದ್ಧವಾಗಿ ಬೆಳೆದು ಬಂತು . ಕೂಚಿಪುಡಿ ನೃತ್ಯದ ಸ್ಥಾಪಕನಾದ  ಸಿದ್ದೇಂದ್ರ ಯತಿಗಳ  ಶಿಷ್ಯ  ತೀರ್ಥನಾರಾಯಣ ಯತಿಗಳು  ಈ ಯಕ್ಷಗಾನದ ಆಟಗಳನ್ನು ತಮಿಳು ಸೀಮೆಯ ತಂಜಾವೂರಿಗೆ  ತೆಗೆದುಕೊಂಡು  ಹೋಗುತ್ತಾರೆ . ಇಂದಿಗೂ  ಈ ಕಲೆಯು  ತಮಿಳು ನಾಡಿನ ಕೆಲವು ಭಾಗಗಳಲ್ಲಿ  ಉಳಿದುಕೊಂಡಿದೆ .  ಆದರೆ ಕನ್ನಡ ನಾಡಿನ ಕರಾವಳಿಯ ಭಾಗದ ಜನರ ನೆಚ್ಚಿನ ಕಲೆಯಾಗಿ ಯಕ್ಷಗಾನ  ಅರಳಿದೆ  ಬೆಳೆದಿದೆ . ೩೦೦ ಕ್ಕೂ ಹೆಚ್ಚಿನ ಪ್ರಹಸನಗಳು  ಈ ಭಾಗದಲ್ಲಿ ರಚನೆಗೊಂಡು  ಯಕ್ಷಗಾನದ ಸೊಗಡನ್ನು ಎಲ್ಲೆಡೆ ಪಸರಿಸಿವೆ . ತಾಳ ಮೇಳಗಳ  ಸಂಭ್ರಮ ಯಕ್ಷಗಾನದಲ್ಲಿ ಭಾಗವತರೇ ನಿರ್ದೇಶಕರು , ಅವರು ವಾಧ್ಯಗಳೊಂದಿಗೆ ಇದ್ದು ಕಥೆಗೆ ತಕ್ಕಂತೆ ಪೂರಕವಾಗಿ  ಸಂಗೀತ ಒದಗಿಸಿ , ಕಥೆಯನ್ನು ಬೆಳಸುತ್ತಾ ಹೋಗುತ್ತಾರೆ  , ಜೊತೆಗೆ ಕಲಾವಿದರ ಜೊತೆ ಮಾತಿನಲ್ಲಿ ಸಾಥ್  ನೀಡುತ್ತಾ  ಸನ್ನಿವೇಶ ಕಳೆ  ಕಟ್ಟಲು  ಅನುವು ಮಾಡಿಕೊಡುತ್ತಾರೆ . ತಾಳ ಮದ್ದಲೆ ಗಳ  ನಾಧ ಯಕ್ಷಗಾನದ   ಕಲಶ ಇದ್ದಂತೆ  ಪ್ರಹಸನದ  ಕಥೆಗೆ ಪೂರಕವಾಗಿ  ಈ ವಾಧ್ಯಗಳನ್ನು  ಬಳಸಿಕೊಳ್ಳಲಾಗುತ್ತದೆ . ಇತಿಹಾಸಕಾರರ  ರೀತ್ಯ  ೧೫೫೦ ರಲ್ಲಿಯೇ ಯಕ್ಷಗಾನ  ಕಲೆ ದೇವಾಲಯಗಳ  ಸಂಪ್ರದಾಯದ  ಒಂದು ಅಂಗವಾಗಿತ್ತೆಂದು ತಿಳಿದು ಬರುತ್ತದೆ . ಹಾಗಾಗಿ  ಕನ್ನಡ ನಾಡಿನ ಕರಾವಳಿ ತೀರದ   ಅನೇಕ ಪ್ರಸಿದ್ದ ದೇವಾಲಯಗಳು ತಮ್ಮದೇ ಆದ ಮೇಳಗಳನ್ನು ಪೋಷಿಸಿವೆ , ಸೌಕೂರು, ಮಾರನಕಟ್ಟೆ , ಮಂದರ್ತಿ , ಮುಲ್ಕಿ, ದರ್ಮಸ್ಥಳ , ಕೂಡ್ಲು  ಮುಂತಾದ ಕಡೆ ಮೇಳಗಳು  ಜನ್ಮ ತಾಳಿ ಪ್ರಸಿದ್ಧಿ ಹೊಂದಿವೆ  . ನಂತರ  ದೇವಾಲಯಗಳು  ಆಟ ನಡೆಸುವ ಹಕ್ಕನ್ನು  ಹಾರಾಜು ಹಾಕುವ ಮೂಲಕ  ಹೊಸ ಸಂಪ್ರದಾಯ ಶುರುವಾಯಿತು.  ಜೊತೆಗೆ ಹೊಸದಾಗಿ  ಹಲವಾರು ಕಂಪನಿ ಗಳು  ಜನ್ಮ ತಾಳಿ ಸಹ ಯಕ್ಷಗಾನ  ನಡೆಸುವತ್ತ  ಹೆಜ್ಜೆ ಇಟ್ಟವು . ಯಕ್ಷಗಾನಕ್ಕೆ  ಆಧುನಿಕ ಆಯಾಮ  ನೀಡಲಾಯಿತು . 


ವಿಕಿ ಪೀಡಿಯಾದಲ್ಲಿ  ಕಂಡು ಬಂಡ ಮಾಹಿತಿ ಯಂತೆ ಯಕ್ಷಗಾನದ ಬೆಳವಣಿಗೆಯಲ್ಲಿ  ಕಾಸರಗೋಡು ಸಮೀಪದ ಕುಂಬ್ಳೆ ಯ  ಶ್ರೀಯುತ ಪಾರ್ಥಿ ಸುಬ್ಬ  ರವರು ಯಕ್ಷಗಾನದಲ್ಲಿ  ರಾಮಾಯಣ ಪ್ರಸಂಗ ವನ್ನು ಬರೆದರೆಂಬ  ಮಾಹಿತಿ ಇದೆ.  ಶ್ರೀ ಪಾರ್ಥಿ ಸುಬ್ಬ ರವರು ೧೯ ನೆ ಶತಮಾನದಲ್ಲಿ  ರಾಮಾಯಣ ಪ್ರಸಂಗ ಗಳನ್ನೂ ಯಕ್ಷಗಾನಕ್ಕೆ ಅಳವಡಿಸಿದರೆಂದು  ಶ್ರೀಯುತರಾದ ಮುಳ್ಳಿಯ  ತಿಮ್ಮಪ್ಪ, ಹಾಗು ಗೋವಿಂದ ಪೈ ಅವರು ತಿಳಿಸುತ್ತಾರಾದರೂ , ಈ ವಾದವನ್ನು ಕಡಲ ತೀರದ ಭಾರ್ಗವ ಶಿವರಾಮ ಕಾರಂತರು ತಳ್ಳಿ ಹಾಕುತ್ತಾರೆ . ಈ ವಿಚಾರದಲ್ಲಿ ಹೆಚ್ಚಿನ ಸಂಶೋದನೆ ಅಗತ್ಯವಿದೆ . ಈ ವಿಚಾರದಲ್ಲಿ ಹೆಚ್ಚು ತಿಳುವಳಿಕೆ ಇದ್ದವರು  ಇಲ್ಲಿ ತಮ್ಮ ಮಾಹಿತಿಯನ್ನು ಹಂಚಿಕೊಂಡರೆ  ನಿಜದ ಸಂಗತಿ ತಿಳಿಯುತ್ತದೆ. 


ಆ ಹಾ  ಯಾರೀ  ಬೆಡಗಿ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಹಾಗು ಯುವ ಪೀಳಿಗೆಗೆ ಆಸಕ್ತಿ ಮೂಡಿಸಲು ಉಡುಪಿಯಲ್ಲಿ ಎಮ್. ಜಿ. ಎಮ್. ಕಾಲೇಜು, ಕೋಟ ಹಾಗು ದರ್ಮಸ್ಥಳ ದಲ್ಲಿ   ,  ಯಕ್ಷಗಾನ ತರಬೇತಿ ಶಾಲೆಗಳನ್ನು ತೆರೆಯಲಾಗಿದೆ . ಯಕ್ಷಗಾನ ಕಲೆಯನ್ನು  ಹಲವಾರು ಕಲಾವಿದರು  ಪೋಷಿಸಿ   ಪ್ರಸಿದ್ಧಿ  ಹೊಂದಿದ್ದಾರೆ   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರಭದ್ರ ನಾಯಕ್ , ಉಪ್ಪೂರು ನಾರಾಯಣ ಭಾಗವತ , ಐರೊಡಿ ಸದಾನಂದ ಹೆಬ್ಬಾರ್ , ಪೊಳಲಿ ಶಂಕರ ನಾರಾಯಣ ಶಾಸ್ತ್ರಿ , ಮಲ್ಪೆ ಶಂಕರ ನಾರಾಯಣ ಸಾಮಗ , ಮೊವ್ವಾರು ಕಿಟ್ಟಣ್ಣ ಭಾಗವತ ,   ಅಳಿಕೆ ರಾಮಯ್ಯ ರೈ , ಹಾರಾಡಿ ಕೃಷ್ಣಯ್ಯ ಗಾಣಿಗ, ಹಾರಾಡಿ ರಾಮ ಗಾಣಿಗ , ದಾಮೋದರ  ಮಂಡೆಚ್ಹ ,ಬಸವನಾಯ್ಕ್ , ಬಲಿಪ ನಾರಾಯಣ ಭಾಗವತ , ಶೇಣಿ ಗೋಪಾಲಕೃಷ್ಣ ಭಟ್ , ಕುಂಬಳೆ ಸುಬ್ಬರಾಯ , ಹಿರಿಯಡ್ಕ ಗೋಪಾಲರಾವ್ , ಅಳಿಕೆ ಮೋನಪ್ಪ ರೈ , ಅಗರಿ ಶ್ರೀನಿವಾಸ ಭಾಗವತ , ಕುರಿಯ ವಿಟ್ಟಲ ಶಾಸ್ತ್ರಿ,  ಉತ್ತರ ಕನ್ನಡ ಜಿಲ್ಲೆಯಲ್ಲಿ  ಕೆರೆಮನೆ ಶಿವರಾಮ ಹೆಗ್ಗಡೆ, ಮಹಾಬಲ ಹೆಗ್ಡೆ , ಶಂಭು ಹೆಗ್ಡೆ , ಕೆ. ಸದಾನಂದ ಹೆಗ್ಗಡೆ  , ಮೂಡಕಣಿ  ನಾರಾಯಣ ಹೆಗ್ಗಡೆ  , ಚಿಟ್ಟಾಣಿ ರಾಮಚಂದ್ರ  ಹೆಗ್ಡೆ , ಹೊಸ ತೋಟ ಮಂಜುನಾಥ  ಭಾಗವತ, ಕರ್ಕಿಯ ಹಾಸ್ಯಗಾರ  ಮನೆತನದ ಕಲಾವಿದರು ಇವರೆಲ್ಲರೂ ಯಕ್ಷಗಾನದ  ನಕ್ಷತ್ರಗಳಾಗಿ  ಮಿಂಚಿದ್ದಾರೆ . 


ಯಕ್ಷಗಾನದ  ತವರಾಗಿ ಕನ್ನಡ ನಾಡು ವಿಶ್ವಕ್ಕೆ ತನ್ನದೇ ಆದ  ಕೊಡುಗೆ ನೀಡಿದೆ .  

ಯಕ್ಷಗಾನದ  ಕಲಾವಿದರ ಗತ್ತು ಶಿರಸಿಯಲ್ಲಿ ನಮಗೆ ನೋಡಲು ಸಿಕ್ಕಿದ್ದು ಪೆರ್ಡೂರು ಮೇಳ,          ಅಂದಿನ  ಪ್ರಹಸನದ ಆಟಾ  ನೋಡುತ್ತಾ ನನ್ನ ನಿದ್ದೆ ಹಾರಿಹೋಗಿ, ಹೊಸ ಉತ್ಸಾಹ ಮೂಡಿತು,  ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರ ಮುಖದ ಭಾವನೆ   ನೋಡುತ್ತಾ, ಅವರ ನೃತ್ಯ, ಅಭಿನಯ, ಭಾವ ನೋಡುತ್ತಾ , ಭಾಗವತರ  ಹಾಡು ಕೇಳುತ್ತಾ  ಚಂಡೆ ಮದ್ದಲೆ ವಾಧ್ಯಗಳ  ಜೊತೆ ಸೇರಿಹೋಗಿ  ಯಕ್ಷಲೋಕದಲ್ಲಿ ವಿಹರಿಸಿದೆ.  ಬಹಳ ಹೊತ್ತು ಕಲಾವಿಧರ ಅದ್ಭುತ  ಅಭಿನಯ ನೋಡುತ್ತಾ  ಮೈಮರೆತೆ  , ನನ್ನ ಜೀವನಕ್ಕೆ ಹೊಸ ಚಟ  ಅಂಟಿಕೊಂಡಿತು  , ಅದು ಯಕ್ಷಗಾನ ಮೇಳಗಳ  ಆಟಾ ನೋಡುವ ಹುಚ್ಚಿಗೆ  ನಾನೂ ಸೇರಿಹೋದೆ  . 

ಯಕ್ಷಗಾನ ನೋಡಲು  ಬಿಸಿ ಬಿಸಿ  ಕಡಲೇಕಾಯಿ ಇದ್ದರೆ ಮಜಾ ಇರುತ್ತೆ ಬಹಳ ಹೊತ್ತು ಯಕ್ಷಗಾನದಲ್ಲಿನ  ಆಟಾ   ನೋಡುತ್ತಾ  ಮೈಮರೆತು , ಅಲ್ಲಿನ ಸನ್ನಿವೇಶಗಳನ್ನು  ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾ ಸಾಗಿದೆ.  ಅಲ್ಲಿನ ಪ್ರೇಕ್ಷಕರಂತೂ  ಯಕ್ಷಗಾನದ ಪ್ರತೀ ಸನ್ನಿವೇಶವನ್ನೂ  ಅನುಭವಿಸುತ್ತಿದ್ದರು , ಆದರೆ  ಮಾರನೆಯದಿನದ  ಕಾರ್ಯಕ್ರಮಕ್ಕೆ ಸಿದ್ದವಾಗಬೇಕಾಗಿತ್ತು, ಪೆರ್ಡೂರು ಮೇಳದ  ಆಟದ  ಬಿಡಾರದಿಂದ ಹೊರಬಂದೆವು , ನಡು ರಾತ್ರಿಯಲ್ಲೂ  ಚಹಾ ಅಂಗಡಿ, ಹಾಗು ಕಳ್ಳೆ ಕಾಯಿ  ಮಾರಾಟ  ಸಾಗಿತ್ತು,  ಅಯ್ಯೋ  ಮೊದಲೇ ಕಂಡಿದ್ದರೆ  ಕಡಲೆ ಕಾಯಿ ತಿನ್ನುತ್ತಾ  ಯಕ್ಷಗಾನ  ನೋಡಬಹುದಾಗಿತ್ತು  ಅನ್ನಿಸಿತು. ಚುಮು ಚುಮು ಚಳಿಗೆ ಬಿಸಿ ಬಿಸಿ  ಕಡಲೇಕಾಯಿ ಒಳ್ಳೆಯ   ಮಜಾ ಕೊಡುತಿತ್ತು. ಆದರೆ  ನಿದ್ದೆ ಬಯಸ್ತಿದ್ದ  ದೇಹ ಕಡಲೇಕಾಯಿ ಬಯಸಲಿಲ್ಲ.  ಯಕ್ಷಗಾನದ ಪ್ರಹಸನ ಪೂರ್ತಿ ನೋಡಲಾಗದೆ  ಪ್ರಕಾಶಣ್ಣನ  ಊರಿಗೆ  ವಾಪಸ್ಸು ಬಂದೆವು . ಮನೆಗೆ ಬಂದು ಹಾಸಿಗೆಯಲ್ಲಿ  ಪವಡಿಸಿದಷ್ಟೇ ಗೊತ್ತು  , ನಿದ್ರಾದೇವಿ  ಆವರಿಸಿಕೊಂಡಳು . ಎಚ್ಚರವಾದಾಗ  ಹಕ್ಕಿಗಳ ಚಿಲಿಪಿಲಿ  ಗಾನ ಕೇಳುತ್ತಿತ್ತು . ಕೊಟ್ಟಿಗೆಯಲ್ಲಿದ್ದ  ಹಸು ಹಾಗು ಕರು  ಅಂಬಾ ಎಂದು ಕರೆಯುತ್ತಿತ್ತು .  ಶುಭದ ಮುಂಜಾನೆಗೆ ಮುನ್ನುಡಿ ಶುರುವಾಗಿತ್ತು . ..... !!


Sunday, September 7, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......08 ವರದ ನದಿಯ ಮೂಲದಲ್ಲಿ ಕುತೂಹಲಕ್ಕೆ ಮಿತಿ ಎಲ್ಲಿ ..?

ವರದ ಮೂಲ  ಕ್ಷೇತ್ರ 


ಇಕ್ಕೆರಿಯ  ಇತಿಹಾಸದ ಮಡಿಲಿಂದ  ನಮ್ಮ ಪಯಣ ಮುಂದುವರೆಯಿತು,  ಇನ್ನೇನು  ಮುಖ್ಯ ರಸ್ತೆಯಲ್ಲಿ ಸಾಗರಕ್ಕೆ ತೆರಳಲು   ಎಡಕ್ಕೆ ತಿರುಗಬೇಕು ಅಷ್ಟರಲ್ಲಿ "ವರದಾಮೂಲ" ಆರು ಕಿ. ಮಿ . ಅಂತಾ ಬೋರ್ಡ್  ಕಾಣಿಸಿತು, ಪ್ರಕಾಶಣ್ಣ  ಅಂದೇ , ಅವರು ಬಾಲಣ್ಣ   ಆಗ್ಲಿ ಅಣ್ಣಾ  ಅಲ್ಲಿಗೆ ಹೋಗೋಣ   ಅಂದ್ರೂ  ಪಯಣಕ್ಕೆ ಅನಿರೀಕ್ಷಿತ ತಿರುವು, ನಮ್ಮ  ಕಾರು ವರದಾ ಮೂಲಕ್ಕೆ ಹೋಗುತ್ತಿತ್ತು,

ಕೆಲವೊಮ್ಮೆ ಹಾಗೆ ಅದೃಷ್ಟ ಇದ್ದರೆ  ಅನಿರೀಕ್ಷಿತ  ಸ್ಥಳಗಳು ಪರಿಚಯವಾಗುತ್ತವೆ , ಈ ಪ್ರದೇಶದ ಬಗ್ಗೆ ಕೇಳಿದ್ದೆನಾದರೂ ಒಮ್ಮೆಯೂ ನೋಡಿರಲಿಲ್ಲ, ಕಾವೇರಿ ಉಗಮ ಸ್ಥಾನ  ಕೊಡಗಿನ ತಲಕಾವೇರಿ , ಹೇಮಾವತಿ ಉಗಮ ಸ್ಥಳ  ಚಿಕ್ಕಮಗಳೂರಿನ  ಜಾವಳಿ  ಇವಿಗಳನ್ನು ನೋಡಿದ್ದ ನನಗೆ ಮತ್ತೊಂದು ನದಿಯ  ಉಗಮ ಸ್ಥಾನ ನೋಡುವ  ಅವಕಾಶ   ಸಿಕ್ಕಿತು.  ಪ್ರಕಾಶಣ್ಣ  ಈ ಪ್ರದೇಶದ ಬಗ್ಗೆ  ಸಂಕ್ಷಿಪ್ತ  ಮಾಹಿತಿ ನೀಡಿದರು,

ವರದಾ ನದಿ ಇಲ್ಲಿನ ಭಾಗದ ಜನರ ಜೀವನಧಿ , ಹಲವು ಪವಿತ್ರ ಕಾರ್ಯಗಳನ್ನು ಇಲ್ಲಿನ ಜನ ವರದ ಮೂಲದಲ್ಲಿ ಮಾಡುತ್ತಾರೆ,  ವರದಾಮೂಲ  ಸಾಗರ ಪಟ್ಟಣದಿಂದ   ಆರು ಕಿಲೋಮೀಟರ್ ಇದೆ , ವರದ ನದಿಯ ಹರಿವಿನ ಬಗ್ಗೆ  ಆಸಕ್ತಿ ಬಂದು ಹುಡುಕುತ್ತಾ  ಹೋದರೆ ನಿಮಗೆ ಹಲವು ಆಸಕ್ತಿದಾಯಕ ವಿಚಾರಗಳು ತಿಳಿಯುತ್ತವೆ ,


ವರದಾಮೂಲದ ಸೊಬಗು 

ವರದಾಮೂಲದ ಒಂದು ನೋಟ 


ಬನ್ನಿ  ವರದೆಯ ಜೊತೆ ತೆರಳೋಣ ಅವಳು ಸಾಗುವ ಹಾದಿಯಲ್ಲಿ , ವರದ ನದಿಯು  ವರದ ಮೂಲದಲ್ಲಿ ಜನಿಸಿ , ಸಾಗರ ಪಟ್ಟಣ , ದಾಟಿ  ಬಸವನ ಹೊಳೆ ಆಣೆಕಟ್ಟು ತಲುಪುತ್ತದೆ,  ನೆನಪಿರಲಿ ಸಾಗರ ಪಟ್ಟಣದ ಜನ ಕುಡಿಯುವುದು ವರದಾ ನದಿಯ ನೀರನ್ನು , ಮುಂದೆ ಪಯಣ ಬೆಳಸುವ ವರದ ನದಿ ಕೆಳದಿಯ  ಸಮೀಪ ಸಾಗುತ್ತದೆ ಅಲ್ಲಿ  ವರದಾ ನದಿಗೆ ಮತ್ತೊಂದು ಉಪನದಿ  ಸೇರಿಕೊಳ್ಳುತ್ತದೆ  [ ಹೆಸರು ತಿಳಿದಿಲ್ಲ ]  ನಂತರ ಸಾಗರ ತಾಲೂಕಿನ ಬಾಳೆಕೊಪ್ಪ ಸಮೀಪ ಮತ್ತೊಂದು ಉಪನದಿ  [ ಹೆಸರು ಗೊತ್ತಿಲ್ಲ ]  ವರದಾನದಿಯ  ಒಡಲನ್ನು ಸೇರುತ್ತದೆ . ನಂತರ ಸಿದ್ದಾಪುರ  ಸೊರಬ ರಸ್ತೆಯಲ್ಲಿ  ದರುಶನ   ನೀಡುವ ವರದಾ ನದಿ  ಚಿಕ್ಕಮಕೊಪ್ಪ ಬಳಿ ಸೊರಬ ಚಂದ್ರಗುತ್ತಿ ರಸ್ತೆಯಲ್ಲಿ ಕಾಣಸಿಗುತ್ತದೆ . ಮುಂದೆ ನಮಗೆ ಕಾಣ ಸಿಗುವುದು ಚಿಕ್ಕದುಗಲಿ ಎಂಬ ಹಳ್ಳಿಯ ಬಳಿ  ಚಂದ್ರಗುತ್ತಿ ಬನವಾಸಿ ರಸ್ತೆಯಲ್ಲಿ . ನಂತರ ಹಿರೆಕಲಗೋಡು  ಎಂಬ  ಹಳ್ಳಿಯ ಸಮೀಪ    ಕಬ್ಬೆ ಎಂಬಲ್ಲಿ ಹುಟ್ಟಿಬಂದ  ಮತ್ತೊಂದು  ಉಪನದಿ  ವರದಾ ನದಿಯನ್ನು ಸೇರುತ್ತದೆ ,  ಇಲ್ಲಿಂದ ಉತ್ತರ ಕರ್ನಾಟಕ ಜಿಲ್ಲೆ ಪ್ರವೇಶ  ಪಡೆದ ವರದಾ ನದಿ,  ಬನವಾಸಿಯ ಇತಿಹಾಸದಲ್ಲಿ ಸ್ಥಾನ ಪಡೆದಿದೆ . ಬನವಾಸಿಯನ್ನು ಜಲದುರ್ಗ  ಎಂದು ಕರೆಯುತ್ತಿದ್ದ  ಕೀರ್ತಿಯಲ್ಲಿ ವರದಾ ನದಿಯ ಪಾತ್ರವಿದೆ . ಬನವಾಸಿಯನ್ನು  ಪ್ರೀತಿಯಿಂದ ಮೂರು ದಿಕ್ಕಿನಲ್ಲಿ  ಅಪ್ಪಿಕೊಂಡು  ಮುದ್ದುಮಾಡಿ ಮಧುಕೆಶ್ವರನ   ದರುಶನ ಪಡೆದು  ಪಾವನ ಹೊಂದಿ     ಜಡೆಮಾದಾಪುರ ,  ಉತ್ತರ ಕನ್ನಡ ಜಿಲ್ಲೆಯ ಚಾಗತ್ತೂರು  ಗ್ರಾಮದ  ಹತ್ತಿರ  ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಪ್ರವೇಶ ಪಡೆಯುತ್ತಾಳೆ ,  ನಂತರ ವರದಿಕೊಪ್ಪ  , ದಾಟಿ  ಲಕ್ಕವಳ್ಳಿ ಸಮೀಪ  ದಂಡಾವತಿ ನದಿಯನ್ನು ತನ್ನ ಒಡಲೊಳಗೆ  ಸೆಳೆದುಕೊಳ್ಳುತ್ತಾಳೆ.  ಇಲ್ಲಿಂದ ಹಾವೇರಿ ಜಿಲ್ಲೆ ಪ್ರವೇಶ ಮಾಡಿ   ಹಾನಗಲ್  ತಾಲೂಕಿನ ಮಾಕರವಳ್ಳಿ  ಗ್ರಾಮ , ಇಲ್ಲಿ  ವರದನನದಿ ಶಿವಮೊಗ್ಗ ಹಾಗು ಹಾವೇರಿ ಜಿಲ್ಲೆಯ ಗಡಿಯಂತೆ  ಸಾಗುತ್ತದೆ , ಈ ನದಿಯ ಪಥವನ್ನೇ ಎರಡೂ ಜಿಲ್ಲೆಗಳಿಗೆ   ಗಡಿಯನ್ನಾಗಿ ಗುರುತಿಸಲಾಗುತ್ತದೆ  . ಶಿವಮೊಗ್ಗ ಜಿಲ್ಲೆಯ ಮುಡಿದೋಕೊಪ್ಪ  ಗಡಿಯಲ್ಲಿ ಸಾಗಿ,  ನಂತರ  ಮತ್ತೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ   ಲಕ್ಮಾಪುರ  .  ಬೈತನಾಳ್ ,   ಬಲಂಬೀಡು , ಶಿಂಗಾಪುರ ,  ದಲ್ಲಿ ಹರಿದು ಹಾವೇರಿ ಸಮೀಪದ   ಸಂಗೂರು  ಗ್ರಾಮದಲ್ಲಿ ನಿಮಗೆ ಸಿರಸಿ  ಹಾವೇರಿ ರಸ್ತೆಯಲ್ಲಿ ದರ್ಶನ ನೀಡುತ್ತಾಳೆ ,ವಾರ್ದಿ , ನಾಗನೂರು ,  ಹಾವೇರಿ ಪಟ್ಟಣದ ಬಳಿ  ಇರುವ ಕುಣಿಮೆಲ್ಲಿ ಹಳ್ಳಿ   ಮೂಲಕ  ಸಾಗುತ್ತಾಳೆ .ನಂತರ ಸಿಗುತ್ತದೆ  ಹಾವೇರಿ ಜಿಲ್ಲೆಯ ವರದ ಹಳ್ಳಿ ,  ದಾಟಿ, ನಂತರ  ಹಾವೇರಿ ಜಿಲ್ಲೆಯ ಸವಣೂರು  ತಾಲೂಕಿನ  ಮೆಲ್ಲಿಗಟ್ಟಿ , ಕಲಸೂರು , ಕೊಲೂರು , ಮಂಟಗಣಿ , ಹಿರೇ ಮುಗದೂರು , ಕಾರ್ಜಗಿ , ಗ್ರಾಮಗಳಲ್ಲಿ ನಡೆದು, ಮತ್ತೆ ಹಾವೇರಿ ತಾಲೂಕಿನ  ಕೋಣನ ತಂಬಿಗಿ  ಪಟ್ಟಣದಲ್ಲಿ ಕಾಣ ಸಿಗುತ್ತಾಳೆ, ನಂತರ ಸವಣೂರು ತಾಲೂಕಿನ ದೊಂಬರಮತ್ತೂರು ಗ್ರಾಮ, ಹಿರೇಮರಳಿ ಹಳ್ಳಿ, ಮಣ್ಣೂರು , ಹಂದಿಗನೂರು, ಹೊಸರಿಟ್ಟಿ , ಮರದೂರ್ , ಮರೋಲ್ ಹಾಗು  ಹಲಗಿ  ಹಳ್ಳಿಗಳ  ನಡುವೆ ಸಾಗುತ್ತಾಳೆ , ನಂತರ ಹಾವೇರಿ ಜಿಲ್ಲೆಯ ಗುಡೂರ್ , ನೆರಳಗಿ -ಎಂ- ಗುತ್ತಲ್ , ಬೆಳವಿಗಿ , ಗುಲ್ಲಗುಂಡಿ , ಹಳ್ಳಿಯಲ್ಲಿ ಹರಿದು  ಗುಳಗನಾಥ  ಎಂಬ ಸುಂದರ ಪ್ರದೇಶದಲ್ಲಿ  ತುಂಗಭದ್ರ ನದಿಯನ್ನು  ಸೇರುತ್ತಾಳೆ .


ವರದಾಮೂಲ   ಪರಿಸರ

 ವರದಾ ನದಿಯು  ಶಿವಮೊಗ್ಗ, ಉತ್ತರ ಕನ್ನಡ , ಹಾಗು ಹಾವೇರಿ ಜಿಲ್ಲೆಯಲ್ಲಿ  ಹರಿಯುತ್ತದೆ , ಆದರೆ ಈ ನದಿಯು ಹರಿಯುವ ಒಟ್ಟು  ದೂರವನ್ನು ಯಾರು ಇನ್ನೂ ಕಂಡು  ಹಿಡಿದಿಲ್ಲಾ , ಹಾಗಾಗಿ ವರದಾ ನಧಿ ಎಷ್ಟುದೂರ ಕ್ರಮಿಸುತ್ತದೆ ಎಂಬ ಮಾಹಿತಿ ಲಭ್ಯವಿಲ್ಲ,  ಆದರೆ  ಸುಮಾರು ಇನ್ನೂರು ಕಿಲೋಮೀಟರ್ ಗೂ  ಹೆಚ್ಚು ದೂರ ಹರಿಯ ಬಹುದು ಎಂದು ಅನ್ನಿಸುತ್ತದೆ .

ವರದಾ ನದಿಯ ಬಗ್ಗೆ ಪೌರಾಣಿಕವಾಗಿ ಒಂದು ಕಥೆಯನ್ನು ಹೇಳುತ್ತಾರೆ ,  ವಿಷ್ಣುವು   ಶಿವನ ರೌದ್ರ ತಾಪವನ್ನು ಕಡಿಮೆಮಾಡಲು ಭಾಗೀರತಿ  ಜಲವನ್ನು ತನ್ನ ಶಂಖದಿಂದ  ಶಿವನ ತಲೆಯಮೇಲೆ  ಅಭಿಶೇಖ ಮಾಡಿದಾಗ  ವರದಾ ನದಿಯ ಜನನವಾಯಿತೆಂದು ಹೇಳಲಾಗುತ್ತದೆ . ವರದಾ ಮೂಲ ಬಹಳ ಸುಂದರ ಸ್ಥಳವಾಗಿದ್ದು, ಅಲ್ಲಿನ ಪರಿಸರ, ನಿಶ್ಯಬ್ಧ  ಮನಸಿಗೆ ಬಹಳ ಖುಷಿಕೊಡುತ್ತದೆ . ವರದಾ ನದಿಯ ಕುಂಡದ ದಡದಲ್ಲಿ ಕುಳಿತು,  ಕಾಲನ್ನು ನೀರಲ್ಲಿ ಬಿಟ್ಟು,ಕುಳಿತರೆ  ಮನಸು ಪ್ರಶಾಂತ ಗೊಳ್ಳುತ್ತದೆ .  ಈ ಸ್ಥಳದಲ್ಲಿ ಎರಡು ಪ್ರಮುಖ  ದೇವಾಲಯಗಳಿದ್ದು,  ವರದಾಂಬ ಎಂಬ ಶಕ್ತಿ ದೇವತೆ ಹಾಗು  ಸೂರ್ಯ ನಾರಾಯಣ ರಿಗೆ ಸಮರ್ಪಣೆ  ಮಾಡಲಾಗಿದೆ .ಸೂರ್ಯ ನಾರಾಯಣ ದೇಗುಲ 

ವರದಾಂಬ ದೇಗುಲ 


ವರದಾಮೂಲ  ನೋಡಿ ಮನಸಿಗೆ ಬಹಳ ಉತ್ಸಾಹ ಮೂಡಿತು, ನಂತರ ಅಲ್ಲಿನ  ದೇವಾಲಯಗಳಲ್ಲಿ ದರ್ಶನ ಮಾಡಿ, ಹೊರಗೆ ಬಂದು  ಕೊಳದ ಸಮೀಪ ಮತ್ತೊಮ್ಮೆ  ನೋಡಿದರೆ ಅಲ್ಲಿ ಒಬ್ಬ ವೃದ್ದರು ಸಾಯಂ ಸಂಧ್ಯಾವಂದನೆಯನ್ನು  ಕೊಳದಲ್ಲಿ ಮಾಡುತ್ತಿದ್ದ  ಸೃಷ್ಯ ಕಂಡಿತು, ಅವರ ಧ್ಯಾನಕ್ಕೆ ತೊಂದರೆ ಮಾಡದೆ ಕೆಲವು ಚಿತ್ರಗಳನ್ನು ತೆಗೆದೇ , ಅಷ್ಟರಲ್ಲಿ  ಸಾಗರದಿಂದ  ನಮ್ಮ ಬ್ಲಾಗ್ ಮಿತ್ರರಾದ  ಜಿತೇಂದ್ರ ಹಿಂಡುಮನಿ  ಯವರ  ಕರೆ ಬಂತು,  ಹರುಷ ಚಿತ್ತದಿಂದ  ವರದಾಮೂಲ ದಿಂದ  ಜಿತೇಂದ್ರ ಅವರ  ಭೇಟಿಗೆ  ಸಾಗರಕ್ಕೆ  ದೌಡಾಯಿಸಿದೆವು . 
ಜಿತೇಂದ್ರ ಹಿಂಡುಮನಿ ಅವರ ಚಂದದ ಕುಟುಂಬ 


ಹಿಂಡುಮನಿ ಕುಟುಂಬದ ಹಿರಿಯರು 


ಜಿತೇಂದ್ರ ಹಿಂಡು ಮಣಿ ಪ್ರಕಾಶ್ ಹಾಗು ನನಗೆ ಬ್ಲಾಗ್ ಮಿತ್ರರು, ಸಾಗರದಲ್ಲಿ ಅವರ ವ್ಯವಹಾರ ಇದೆ, ಬಹಳ ಆತ್ಮೀಯ ಎನ್ನಿಸುವ ನಡವಳಿಕೆ, ಅವರನ್ನು ಭೇಟಿ ಮಾಡಿದ ತಕ್ಷಣ ಬಹಳ ಖುಷಿಯಿಂದ ನಮ್ಮನ್ನು ಬಲವಂತಾ ಮಾಡಿ  ಅವರ ಊರು ಹಿಂಡುಮನಿ ಗೆ ಕರೆದುಕೊಂಡು ಹೋದರು, ಅವರ ಮನೆಯ ಎಲ್ಲರೂ  ನಮ್ಮನ್ನು ಪ್ರೀತಿಯಿಂದ ಕ್ವಾಗತಿಸಿ, ಉಪಚಾರ ಮಾಡಿದರು, ಹೆಚ್ಚು ಹೊತ್ತು ಇರಲಾರದೆ , ಇದ್ದ ಸಮಯದಲ್ಲೇ  ಮನೆಯ ಎಲ್ಲರ ಪರಿಚಯ ಮಾಡಿಕೊಂಡು ಸಂತಸ  ಪಟ್ಟೆವು ,  ಮನೆಯ ವಿಶೇಷತೆ ಎಂದರೆ  ಎಲ್ಲರೂ ಉತ್ಸಾಹದಿಂದ ಇದ್ದದ್ದು, ಮನೆಯ ಹಿರಿಯರೂ ಸಹ ಓದಿನಲ್ಲಿ ಆಸಕ್ತಿ ಹೊಂದಿದ್ದುದು  ಖುಷಿಕೊಟ್ಟಿತು,  ಮನೆಯ ಎಲ್ಲರಿಗೂ  ವಂದನೆ ತಿಳಿಸಿ ,    ಅಲ್ಲಿಂದ ಹೊರಟೆವು, ದೇಹವು ಬೆಳಗ್ಗಿನಿಂತ  ಧಣಿದು  ಇನ್ನು  ಸಾಧ್ಯವಿಲ್ಲಾ  ಎನ್ನುವ ಹಂತಕ್ಕೆ ಬಂದಿತ್ತು,  ನಮ್ಮ ಪಯಣ  ಪ್ರಕಾಶಣ್ಣ  ಹುಟ್ಟೂರು  ಕಾನಸೂರು  ಕಡೆಗೆ ಸಾಗಿತ್ತು,  ಮನೆ ಸೇರಿ ಬಹಳ ಬೇಗ ಹಾಸಿಗೆ ಸೇರಿ ನಿದ್ದೆ ಹೊಡೆಯುವ  ಪ್ಲಾನ್ ಹಾಕುತ್ತಿದ್ದೆ ಮನದಲ್ಲಿ ..... ! ಅರೆ ಊರು ಬಂದೆ ಬಿಟ್ಟಿತು . ........... !  ಮುಂದೆ ... !  

Friday, August 29, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......07 ಇಕ್ಕೆರಿಯ ಮಡಿಲಲ್ಲಿ ಇತಿಹಾಸದ ಸಿಂಚನ

ಇಕ್ಕೆರಿಯ  ಸುಂದರ ಬಸವ 


ಕಳೆದ ಸಂಚಿಕೆಯಲ್ಲಿ  ಇಕ್ಕೆರಿಯ  ಬಸವನ ಮೂಗಿಗೆ ಕೈ ಬೆರಳನ್ನು  ಇಟ್ಟು , ಮಕ್ಕಳಂತೆ  ತುಂಟಾಟ ಮಾಡಿದ್ದ  ನಾವು , ದೇವಾಲಯದ ಆವರಣದಿಂದ  ಸ್ವಲ್ಪ ಮುಂದೆ ನಡೆದೆವು, ದೇವಾಲಯದ ಒಳಗೆ ಪ್ರವೇಶ ಮಾಡಿದೆವು . ನಮ್ಮನ್ನು ನೋಡುತ್ತಲೇ ನಗು ಮುಖದಿಂದ    ಸ್ವಾಗತಿಸಿದ  ಅರ್ಚಕರನ್ನು ಮಾತನಾಡಿಸಿ  ಅವರು   ದೇವಾಲಯ ಪ್ರವೇಶ ಮಾಡುವ  ಸನ್ನಿವೇಶದ  ಚಿತ್ರ ತೆಗೆಯುವ  ಆಸೆಯಿಂದ  ಅವರಿಗೆ ನಮ್ಮ ಕೋರಿಕೆಯನ್ನು ತಿಳಿಸಿದಾಗ  , ಬಹಳ ಸಂತೋಷದಿಂದ  ನಮ್ಮ  ಕೋರಿಕೆಯಂತೆ   ದೇವಾಲಯವನ್ನು  ಪ್ರವೇಶ ಮಾಡಿ  ನಾವು ಫೋಟೋ ತೆಗೆಯಲು ಅನುವು ಮಾಡಿಕೊಟ್ಟರು .ಸ್ವಾಮಿಯ ಸೇವೆ ಮಾಡಲು  ನಗು ಮುಖದಿ ಬಂದವರು 


ನಗು ಮುಖದಿಂದ  ಉತ್ಸಾಹದಿಂದ  ತಮ್ಮ ಕಾರ್ಯ ಮಾಡುವ  ಅರ್ಚಕರ ಬಗ್ಗೆ ಗೌರವ ಮೂಡಿತು . ಪರಸ್ಪರ ಪರಿಚಯ,  ಮಾತುಕತೆ ನಂತರ   ದೇವಾಲಯದ  ಬಗ್ಗೆ ತಮಗೆ ತಿಳಿದ ವಿವರಗಳನ್ನು  ನಮ್ಮೊಡನೆ ಹಂಚಿಕೊಂಡರು . ದೇವಾಲಯದ  ವಿವರಗಳನ್ನು ಅವರು ಹೇಳುತ್ತಿದ್ದರೆ   ಕೇಳಲು ಬಹಳ ಸಂತೋಷ ಆಗುತ್ತಿತ್ತು . ಬನ್ನಿ ಸ್ವಾಮಿಯ ದರ್ಶನ ಮಾಡೋಣ ಅಂತಾ ಕರೆದು ಕೊಂದು ಹೋಗಿ  ನಮ್ಮಗಳ ಹೆಸರನ್ನು ಹೇಳಿ ಸಂಕಲ್ಪಮಾಡಿ  ಅರ್ಚನೆ ಮಾಡಿ   ಮಂಗಳಾರತಿ  ಬೆಳಗಿ ಶಿವ ಲಿಂಗದ  ದರ್ಶನ ಮಾಡಿಸಿದರು .ಅಘೋರೆಶ್ವರ ಸನ್ನಿಧಿಯಲ್ಲಿ  ಮಂಗಳಾರತಿ 

ಅರೆ ಇದೇನು....?  ಈ ಭವ್ಯ ದೇಗುಲಕ್ಕೆ ಇತಿಹಾಸ ಇರಬೇಕಲ್ಲಾ  ಎಂಬ ಪ್ರಶ್ನೆ  ಮನದಲ್ಲಿ  ಮೂಡಿತು . ಬನ್ನಿ ಇಕ್ಕೆರಿಯ ಇತಿಹಾಸ ತಿಳಿಯೋಣ

ಐತಿಹಾಸಿಕ ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ  ಸೇರಿದೆ . ಸಾಗರದಿಂದ ಕೇವಲ  ಮೂರು  ಕಿಲೋ ಮೀಟರ್  ದೂರದಲ್ಲಿದೆ ಇಕ್ಕೆರಿ. ಅರಳಿ ಕೊಪ್ಪ ಗ್ರಾಮದ ಉಪಗ್ರಾಮ  ಈ ಇಕ್ಕೇರಿ .


"ಇಕ್ಕೇರಿ"   ಅಂದರೆ  ಎರಡು ಕೇರಿ  ಅಥವಾ ಎರಡು ಬೀದಿ  ಎಂದು ಅರ್ಥ , ಬಹುಷಃ ಆಕಾಲದಲ್ಲಿ  ಈ ಊರಿನಲ್ಲಿ  ಎರಡು ಬೀದಿಗಳಲ್ಲಿ   ಮಾತ್ರ   ಜನವಸತಿ ಇತ್ತೆಂದು ಕಾಣುತ್ತದೆ  ಅದಕ್ಕಾಗಿ ಈ ಊರನ್ನು ಇಕ್ಕೇರಿ ಎಂದು ಕರೆಯಲಾಗಿದೆ. ಕ್ರಿ.ಶ . ೧೫೧೨ ರಲ್ಲಿ ಕೆಳದಿ ಅರಸರು ಇಕ್ಕೇರಿಯನ್ನು ರಾಜಧಾನಿಯನ್ನಾಗಿ  ಘೋಷಿಸಿಕೊಂಡು  ತಮ್ಮ ಆಡಳಿತ ವನ್ನು  ಕೆಳದಿ ಯಿಂದ  ಇಲ್ಲಿಗೆ ವರ್ಗಾಯಿಸಿಕೊಳ್ಳುತ್ತಾರೆ . ಹಾಗಾಗಿ ಈ ಊರು ಮತ್ತಷ್ಟು ಪ್ರಖ್ಯಾತಿ  ಪಡೆಯುತ್ತದೆ . ಜೊತೆಗೆ ಕೆಳದಿ ಅರಸರು ಇಲ್ಲಿ ಒಂದು ಟಂಕ ಸಾಲೆಯನ್ನು  ಸ್ಥಾಪಿಸಿ  ಇಲ್ಲಿ  ಇಕ್ಕ್ರಿ ಹೆಸರಿನ "ಪಗೋಡ ಹಾಗು  ಫಣಮ್ಸ್"[ ಅಂದಿನಕಾಲದ  ಹಣದ ಹೆಸರು ] ನಾಣ್ಯಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ . ಇಂದು ಈ  ಟಂಕ ಸಾಲೆ ಇಲ್ಲವಾದರೂ  ಅದರ ಅವಶೇಷಗಳನ್ನು  ಇಂದೂ ಕಾಣ ಬಹುದೆಂದು ಹೇಳಲಾಗುತ್ತದೆ , ನಮಗೆ ಅದನ್ನು ನೋಡಲು ಆಗಲಿಲ್ಲ. ನಂತರ ೧೬೩೯ ರಲ್ಲಿ ಕೆಳದಿ ಅರಸರು ತಮ್ಮ ರಾಜಧಾನಿಯನ್ನು ಇಲ್ಲಿಂದ  ಬಿದನೂರಿಗೆ  ಮತ್ತೊಮ್ಮೆ  ಬದಲಾವಣೆ ಮಾಡುತ್ತಾರೆ . ಆದರೆ ಇಕ್ಕೇರಿ ತನ್ನ ಗತ ವೈಭವದ  ಗತ್ತನ್ನು ಬಿಟ್ಟುಕೊಡದೆ  ಅಘೋರೆಶ್ವರ  ದೇವಾಲಯದ  ಮಹತ್ವ ಸಾರುತ್ತಾ ನಿಂತಿದೆ .ಅಘೋರೆಶ್ವರ  ದೇಗುಲ ದರ್ಶನ ಅಘೋರೆಶ್ವರ ದೇವಾಲಯ  ಬಹಳ ವಿಸ್ತಾರವಾದ ದೇವಾಲಯವಾಗಿದ್ದು, ೧೬ ನೆ ಶತಮಾನದಲ್ಲಿ ವಿಜಯನಗರ, ಹೊಯ್ಸಳ  ವಾಸ್ತು ಶೈಲಿಗಳ  ದರ್ಶನ ನಿಮಗೆ ಆಗುತ್ತದೆ . ದೇವಾಲಯದ ಮುಂಬಾಗದಲ್ಲಿ  ಕೆಳದಿ ಅರಸರುಗಳ ಪ್ರತಿಮೆಗಳು ಇದ್ದು  ಕೆಳದಿ ಇಕ್ಕೆರಿಯ ಇತಿಹಾಸ ನೆನಪು ಮಾಡಿಕೊಡುತ್ತವೆ . ದೇವಾಲಯ ಉತ್ತರ ಮುಖಿಯಾಗಿದೆ . ಸುಂದವಾದ ಚಾವಣಿ,  ಗರ್ಭ ಗೃಹ , ಸುಖನಾಸಿ ಹಾಗು ದೇವಾಲಯದ ಹೊರ ಆವರಣದಲ್ಲಿ  ಸುಂದವಾಗಿ  ಕಲೆ ಅರಳಿದೆ . ಕಲ್ಲಿನಲ್ಲಿ ಅರಳಿದ ಸುಂದರ ಕೆತ್ತನೆಗಳು ಕಣ್ಮನ   ತಣಿಸುತ್ತವೆ .ದೇವಾಲಯ ಚಾವಣಿಯಲ್ಲಿ ಅರಳಿದ  ಕಲೆ 


ಈ ದೇವಾಲಯಕ್ಕೆ ನವರಂಗ ಇರುವುದಿಲ್ಲ. ದೇವಾಲಯದ ಮುಂದೆ ಸುಂದರ  ನಂದಿ ವಿಗ್ರಹವನ್ನು  ಮಂಟಪದಲ್ಲಿ  ಸ್ಥಾಪಿಸಲಾಗಿದೆ . ಇನ್ನು ಪಾರ್ವತಿ ದೇಗುಲಕ್ಕೆ  ಗರ್ಭ ಗೃಹ , ಸುಖನಾಸಿ,  ಕಂಬಗಳು ಇಲ್ಲದ  ಪುಟ್ಟದಾದ ನವರಂಗ  ಕಾಣ ಸಿಗುತ್ತದೆ . ಇಲ್ಲಿನ ಪ್ರಕೃತಿ ಹಾಗು ಹವಾಮಾನಕ್ಕೆ ತಕ್ಕಂತೆ  ದೇವಾಲಯ ರಚನೆ ಆಗಿದೆ , ಈ ಭಾಗದಲ್ಲಿ ಹೆಚ್ಚಿನ ಮಳೆ ಆಗುವ ಕಾರಣ   ಎಂತಹ ಭಾರಿ ಮಳೆ ಬಂದರೂ  ಅದನ್ನು ಎದುರಿಸಿ ಹಲವು ಶತಮಾನಗಳಿಂದ  ಹೆಮ್ಮೆಯಿಂದ ನಿಂತಿದೆ  ಈ ದೇವಾಲಯ, ಅಂದಿನ ತಾಂತ್ರಿಕತೆಯ  ವಿಶೇಷವನ್ನು  ನಾವಿಲ್ಲಿ ಕಾಣಬಹುದು .ಇಕ್ಕೆರಿಯಲ್ಲಿ ದರ್ಶನ ವಿತ್ತ  ಷಣ್ಮುಖ 

ಇಕ್ಕೆರಿಯಲ್ಲಿ ಕಂಡ ಸುಂದರ ಗಣಪ 


ದೇವಾಲಯದಲ್ಲಿ  ವಿಶೇಷವಾಗಿ ನಿಮಗೆ ಕಾಣಸಿಗುವುದು  ಅಘೋರೆಶ್ವರ  ಲಿಂಗ [ ಹಿಂದೊಮ್ಮೆ ಇಲ್ಲಿ ಅಘೋರೆಶ್ವರನ  ಬೃಹತ್  ಮೂರ್ತಿಯನ್ನು  ಪೂಜಿಸಲಾಗುತ್ತಿತ್ತೆಂದು  ಹಾಲಿ ಈ ಮೂರ್ತಿ ಇಲ್ಲವೆಂದು ಹೇಳಲಾಗುತ್ತಿದೆ , ಬಿಜಾಪುರ ಸುಲ್ತಾನ್  ಇಲ್ಲಿ ಆಕ್ರಮಣ ಮಾಡಿದಾಗ  ಅಘೋರೆಶ್ವರ ಮೂರ್ತಿ ಭಗ್ನವಾಯಿತೆಂದು ಹೇಳುತ್ತಾರೆ  ] , ಭೈರವ, ಮಹಿಷಮರ್ಧಿನಿ ,  ಷಣ್ಮುಖ , ಹಾಗು ಗಣಪತಿಯ  ಮೂರ್ತಿಗಳನ್ನು  ಕಾಣಬಹುದು.ಶಿಲ್ಪಿಯ ಕಲ್ಪನೆ ಗರಿ ಬಿಚ್ಚಿದೆ ಇಲ್ಲಿ 
ಕಲೆಯ  ಬಲೆ  ಸುಂದರವಾಗಿ ಅರಳಿದೆ ಇಲ್ಲಿ ಶಿಲೆಯಲ್ಲಿ ಅರಳಿದ ಪುಷ್ಪ  ಕ್ಯಾಮರ ನೋಡಿ ನಕ್ಕಾಗ 


ಅದ್ಭತ  ಕಲಾ ಲೋಕ ಇಲ್ಲಿದೆ 


ದೇವಾಲಯವನ್ನು  ನೋಡುತ್ತಾ  ಸಾಗಿದೆ ನನ್ನ ಕ್ಯಾಮರ ದೇಗುಲದ ಸುಂದರ ಕೆತ್ತನೆಗಳನ್ನು ತನ್ನ ಒಡಲೊಳಗೆ ತುಂಬಿ ಕೊಳ್ಳುತ್ತಿತ್ತು , ದೇವಾಲಯದ ಸುಂದರ ಕೆತ್ತನೆಗಳು  ಮನ ಸೂರೆಗೊಂಡವು ಕತ್ತಲ ಇತಿಹಾಸದಲ್ಲಿ ಅಡಗಿ ಕುಳಿತ  ಈ ಸುಂದರ  ಕಲೆಯನ್ನು ಆಸ್ವಾದಿಸಲು  ಯಾವ ಜನ್ಮದ ಪುಣ್ಯ ಇತ್ತೋ  ಕಾಣೆ ಅದು ಇಲ್ಲಿ ನನಸಾಗಿತ್ತು,   ಬಾಲಣ್ಣ  ಹೊರಡೋಣ ಎಂದ ಪ್ರಕಾಶ್ ಹೆಗ್ಡೆ ದ್ವನಿ ಕೇಳಿ ವಾಸ್ತವಕ್ಕೆ ಬಂದೆ  .  ಹೊರಡುವ ಮೊದಲು  ಅಲ್ಲಿ ಕಣ್ಣಿಗೆ ಬಿದ್ದ  ಕಿಟಕಿಯ ಚಿತ್ರ ತೆಗೆದೇ  ಕತ್ತಲಿನಲ್ಲಿ ಕಿಟಕಿಯ ಮೂಲಕ  ಬರುವ ಬೆಳಕು ಚಿತ್ತಾರ ಮೂಡಿಸಿತ್ತು, ದೇವಾಲಯಕ್ಕೆ  ಬೆಳಕಿನ ರಂಗೋಲಿ ಹಾಕಲು  ಇಂತಹ  ಕಿಟಕಿಗಳನ್ನು ನಿರ್ಮಿಸಲಾಗಿದೆ ಇಲ್ಲಿ,  ಸಂತೃಪ್ತ ಮನಸಿನಿಂದ ಹೊರಬಂದೆಬೆಳಕಿನ ರಂಗೋಲಿ  ಹಾಕಲು ಇಂತಹ  ಕಿಟಕಿಗಳು  ಬೇಕು 


ಇಕ್ಕೆರಿಯ  ಪುಟ್ಟ ಮಕ್ಕಳು 

ದೇವಾಲಯದ ಹೊರಗೆ ಬಂದು ಹೊರಡಲು ಅನುವಾದೆವು , ತಮ್ಮ ಊರಿನ  ದೇಗುಲದ  ಮಹತ್ವ ತಿಳಿಯದ  ಪುಟ್ಟ ಮಕ್ಕಳು ಅಲ್ಲಿ   ಸಂತಸದಿಂದ ಕ್ರಿಕೆಟ್   ಆಟಾ  ಆಡುತ್ತಿದ್ದರು ,  ದೇವ್ರೇ ಈ ಮಕ್ಕಳು ಈ ಊರಿನ  ಈ ಐತಿಹಾಸಿಕ ದೇಗುಲ ಉಳಿಸಿಕೊಂಡು  ಮೆರೆಸುವಂತೆ  ಮಾಡಪ್ಪಾ  ಅಂತಾ ಮನಸಿನಲ್ಲಿ ಅಂದುಕೊಂಡೆ . ನಮ್ಮ ಪಯಣ ಮುಂದೆ ಸಾಗಿ  ಸಾಗರ ತಲುಪುವ   ರಸ್ತೆಗೆ ಬಂದು ನಿಂತೆವು  ಅಲ್ಲಿ ಕಂಡಿತ್ತು ಒಂದು ಬೋರ್ಡು  ........ !!!  ಅದು ವರದಾ ಮೂಲ....!!    ಪ್ರಕಾಶಣ್ಣಾ  ಅಂದೇ   ಗೊತ್ತಾಯ್ತು ಬಾಲಣ್ಣ  ....! ಅಲ್ಲಿಗೆ ಹೋಗೋಣ  ಅಂದ್ರು .... ...!!!

Friday, August 22, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......06 ಇಕ್ಕೆರಿಯ ಬಸವನ ಮೂಗಿನ ಒಳಗೆ ಕೈ ಬೆರಳು ಇಡೋಣ ಬನ್ನಿ .ಇಕ್ಕೆರಿಗೆ ಸ್ವಾಗತ 

ನಮಸ್ತೆ ಗೆಳೆಯರೇ  ಬಹಳ ದಿನಗಳ ನಂತರ  ಮತ್ತೆ ಮುಂದುವರೆದಿದೆ ನಮ್ಮ ಈ ಪಯಣ, ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ  ಮಹಾಪುರುಷ  ಶ್ರೀಯುತ ಗುಂಡಾ ಜೋಯಿಸರ  ಆಶೀರ್ವಾದ ಪಡೆದು  ಇಕ್ಕೆರಿಯ ಕಡೆ ಹೊರಟೆವು , ನಮ್ಮ ತುಂಟ ಪ್ರಕಾಶಣ್ಣ ನ ಜೊತೆ ಪ್ರವಾಸ ಮಾಡುವುದು ಒಂದು ಒಳ್ಳೆಯ ಸುಯೋಗವೇ ಸರಿ ,  ಮೊದಲು ಮತ್ತೆ ನಮ್ಮ ತುಂಟಾಟ  ಶುರು ಆಯ್ತು , ಅವರ ಜೀವನದ ಎಡವಟ್ಟು ಪ್ರಸಂಗಗಳ ಬಗ್ಗೆ  ನೆನಪಿನ ಹರಟೆ ಕೀಟಲೆ ನಗು ಇವೆಲ್ಲಾ ಇದ್ದವು. 


ಇಕ್ಕೆರಿಗೆ  ಸ್ವಾಗತ

  ಬಾಲಣ್ಣ  ಇಕ್ಕೇರಿ ಬಹಳ ಚೆನ್ನಾಗಿದೆ  ಇಲ್ಲಿನ  ಬಸವನ ಕೀರ್ತಿ ಈ ಊರಿನ  ಸುತ್ತ ಮುತ್ತಾ  ಬಹಳ ಪ್ರಸಿದ್ಧಿ , ಆದರೆ  ಬಾಲಣ್ಣ ..... ! ಅಂತಾ  ಮಾತು ನಿಲ್ಲಿಸಿ  ನಸು ನಕ್ಕರು , ನನಗೆ ಇಲ್ಲಿ ಏನೋ ತುಂಟಾಟ ಇದೆ ಎನ್ನುವ  ವಾಸನೆ  ಸಿಗುತ್ತಿತ್ತು ,  ಉರಿ ಬಿಸಿಲಿನ  ತಾಪದ  ಪ್ರವಾಸದಲ್ಲಿ  ಇಂತಹ ತುಂಟಾಟ ಚಿಮ್ಮಿ  ಜೋರಾಗಿ ನಕ್ಕಾಗ   ಮನಸಿಗೆ  ಖುಷಿಯಾಗಿ ಮುಂದಿನ   ಪ್ರವಾಸದ  ಅನುಭವದ  ಸವಿಯನ್ನು ಅನುಭವಿಸಬಹುದು , ಸರಿ  ನಾನು ಪ್ರಕಾಶಣ್ಣ  ಅದೇನದು ಇಕ್ಕೆರಿಯ ಬಸವನ  ಬಗ್ಗೆ ನಿಮ್ಮ  ಅನಿಸಿಕೆ ಬರಲಿ ಆಚೆಗೆ  ಅಂದೇ .....! ಅಯ್ಯೋ   ಬಾಲಣ್ಣಾ  ಒಳ್ಳೆ ಮಜವಾದ ಕಥೆ ಇದೆ ಬನ್ನಿ ಹೇಳ್ತೀನಿ, ಅಂತಾ  ಒಂದು ಕಥೆ ಹೇಳಿದರು , ಕಥೆ ಇಲ್ಲಿದೆ ನೋಡಿ  , 

ಒಮ್ಮೆ ಒಂದು ಶಾಲೆಯ ಮಕ್ಕಳು  ಇಕ್ಕೇರಿ ಪ್ರವಾಸಕ್ಕೆ ಬಂದರು , ಹಾಗೆ  ಇಕ್ಕೆರಿಯ ದರ್ಶನ ಮಾಡುತ್ತಾ ,   ಬಂದ  ಶಾಲಾ ಮಕ್ಕಳು  ಈ ಬಸವನ ಬಳಿ  ಬರುತ್ತಾರೆ , ಶಾಲಾ ಮಕ್ಕಳ ತಂಡದಲ್ಲಿದ್ದ  ಒಬ್ಬ ತುಂಟ ಹುಡುಗ  ಈ ಬಸವನ  ಮೂಗಿನ  ಒಳಗೆ ತನ್ನ  ಕೈ ಬೆರಳನ್ನು  ತೋರಿಸುತ್ತಾನೆ , ಬಸವ ಮೂಗಿನೊಳಗೆ  ಅಡಗಿದ್ದ  ಒಂದು ಸಣ್ಣ ಚೇಳು  ಆತನ ಕೈ ಬೆಳನ್ನು ಕುಟುಕುತ್ತದೆ , ಮೊದಲೇ ತುಂಟ ಹುಡುಗ ,  ಆದರೆ   ತನ್ನ ನೋವನ್ನು ತೋರ್ಪಡಿಸದೆ   , ಕೈ ಬೆರಳು ಹೊರಗೆ ತೆಗೆದು  ಜೋರಾಗಿ ನಗಲು ಶುರು ಮಾಡ್ತಾನೆ   , ಪಕ್ಕದಲ್ಲಿದ್ದ ಅವನ ಗೆಳೆಯರು  , ಯಾಕೋ ಏನಾಯ್ತು  ಅಂತಾ ಕೇಳಿದಾಗ , ಅಯ್ಯಪ್ಪಾ ,  ಹೋಗ್ರೋ  ನಾನು ಹೇಳೋಲ್ಲಾ   ಅನ್ನುತ್ತಾನೆ  , ಆದರೆ  ಇವನ ಮಾತಿಂದ ಕುತೂಹಲ ಹೆಚ್ಚಾಗಿ  ಮಕ್ಕಳು  ಇವನನ್ನು ಪೀಡಿಸಲು  ಶುರು ಮಾಡುತ್ತವೆ , ಆಗ ಆ ತುಂಟ ಹುಡುಗ ,  ನೋಡ್ರೋ  ಬಸವನ ಮೂಗಿಗೆ  ಕೈ ಬೆರಳು ಹಾಕಿದೆ  ಆ ಹಾ  ತಣ್ಣಗೆ  ಐಸ್  ಇದ್ದಂಗೆ  ಆಯ್ತು , ಬಹಳ ಖುಷಿಯಾಯಿತು  ಅನ್ನುತ್ತಾನೆ  , ಇದನ್ನು ಕೇಳಿದ ಮಕ್ಕಳು ನಾ ಮುಂದು   ತಾ ಮುಂದು  ಅಂತಾ  ಬಸವನ  ಮೂಗಿನೊಳಗೆ  ಕೈ ಬೆರಳು ತೋರಿಸಿ  ಚೇಳಿನ ಕೈಲಿ    ಕುಟುಕಿಸಿ ಕೊಂಡರೂ  ಬೇರೆಯವರಿಗೆ ಹೇಳದೆ , ಎಲ್ಲಾ  ಮಕ್ಕಳೂ  ಬಸವನ ಮೂಗಿನೊಳಗೆ  ಕೈ ಬೆರಳು ಹಾಕಲು  ಪ್ರೇರಣೆ ನೀಡುತ್ತಾರೆ ,  ಅವತ್ತಿಂದ ಬಾಲಣ್ಣ , ಇಲ್ಲಿಗೆ  ಯಾರೇ ಬಂದರೂ  ಇಕ್ಕೇರಿ ಬಸವನ  ಮೂಗಿನೊಳಗೆ  ಕೈ ಬೆರಳು ಇಡಬೇಕು , ಅದು ಇಲ್ಲಿನ ಸಂಪ್ರದಾಯ  ಅಂತಾ ನಕ್ಕರು, ಇಕ್ಕೆರಿಯ  ಬಸವನ  ಮೂಗಿನ  ಹೊಳ್ಳೆಗಳು 

ನನಗೋ ನಗು ತಡೆಯಲು ಆಗಲಿಲ್ಲ , ಕಾರಿನೊಳಗೆ ಗೊಳ್ಳನೆ  ನಗೆಯ  ಬುಗ್ಗೆ ಚಿಮ್ಮಿತು,  ಅರೆ ಬಂದೆ ಬಿಟ್ಟೆವು  ಇಕ್ಕೆರಿಗೆ , ಇಲ್ಲಿಗೆ ಬಂದು ಮೊದಲು ಬಂದು ನಿಂತಿದ್ದೆ  ಬಸವನ  ಹತ್ತಿರ  , ಸುಂದರ ಬಸವನ   ಬೃಹತ್  ಮೂರ್ತಿ , ನಮ್ಮ ಮೈಸೂರಿನ  ಚಾಮುಂಡಿ ಬೆಟ್ಟದ  ನಂದಿ ಯನ್ನು  ನೆನಪಿಗೆ ತಂದಿತು,  ಆದರೆ  ಈ ಪ್ರಕಾಶಣ್ಣ ಇಟ್ಟಿದ್ದ  ನಗೆಯ ಬಾಂಬ್  ಆ ಮೂರ್ತಿಯ  ಮೂಗಿನ  ಹೊಳ್ಳೆಗಳನ್ನು  ಫೋಟೋ ತೆಗೆಯಲು  ಪ್ರೇರೇಪಿಸಿತ್ತು,  ಆದರೆ  ಕ್ಯಾಮರಾ ಕಣ್ಣಿನಲ್ಲಿ ಅದನ್ನು ನೋಡುತ್ತಿದ್ದರೆ  ನಗು ಬರುತ್ತಿತ್ತೆ  ಹೊರತು, ನನ್ನ ಕೈ ಬೆರಳು  ಫೋಟೋ ಕ್ಲಿಕ್ಕಿಸಲು  ತಡವರಿಸುತ್ತಿತ್ತು . ಬಹುಷಃ  ಅದೂ ಸಹ ಇಕ್ಕೇರಿ ಬಸವನ ಪ್ರಸಾದ ಪಡೆಯಲು ಆಸೆ ಪಡ್ತಾ ಇತ್ತು ಅನ್ನಿಸುತ್ತೆ. ಅಂಕಲ್  ಬಸವನ  ಮೂಗಿನೊಳಗೆ ಬೆರಳು ಹೀಗೆ  ಇಡಬೇಕಾ ?
ಈ ಹುಡುಗನ  ಕೈ ಬೆರಳನ್ನು  ಬಸವನ ಮೂಗಿಗೆ  ಹಾಕಿಸ್ಲಾ  

ಬಸವನ ವಿವಿಧ ಬಂಗಿಗಳ ಫೋಟೋ ತೆಗೆಯುತ್ತಾ  ಇರುವಾಗ ಅಲ್ಲಿಗೆ  ಬಂದಾ ಮತ್ತೊಂದು ಹುಡುಗನನ್ನು   ಬಸವನ  ಮೂಗಿನೊಳಗೆ ಕೈ ಬೆರಳು ಇಡುವಂತೆ , ತಿಳಿಸಲು  ಆ ಮಗು ನಗು ನಗುತ್ತಾ  ತನ್ನ ಕೈ ಬೆರಳನ್ನು  ಬಸವನ ಮೂಗಿನೊಳಗೆ  ಹಾಕಿ ಫೋಟೋಗೆ  ಪೋಸ್  ಕೊಟ್ಟಳು . ಅಲ್ಲಿಗೆ ಬಂದ ಮತ್ತೊಬ್ಬ ಹುಡುಗ  ಅಂಕಲ್  ಏನಿದೂ ಅಂದಾ , ಮತ್ತೆ ಅವನಿಗೆ  ಬಸವನ ಮೂಗಿಗೆ ಕೈ ಬೆರಳು ತೋರಿಸಲು  ಹೇಳಿದೆವು ,  ಅವನೂ ಸಹ ಬೆರಳು ತೋರಿಸಿದ , ಈ ಪ್ರಕಾಶ್ ಹೆಗ್ಡೆ ಮಾತನ್ನು ನಂಬಿ  ಪಾಪ   ಇಕ್ಕೇರಿ ಬಸವನ  ಮೂಗಿಗೆ ಕೈ ಬೆರಳು  ತೂರಿಸಿದ  ಮಕ್ಕಳಿಗೆ  ಯಾವುದೇ ಪ್ರಸಾದ ಸಿಕ್ಕಲಿಲ್ಲ , ನಮ್ಮ ಪುಣ್ಯಾ . 


ಇಕ್ಕೇರಿ  ಬಸವನ ಮೂಗಿಗೆ  ಕೈ ಬೆರಳನ್ನು  ತೋರಿಸಿ  ಪ್ರಸಾದ ಪಡೆಯುವ ಬನ್ನಿ ಹೀಗೆ ಬಸವನ ಮೂಗಿಗೆ ಕೈ ಬೆರಳು ತೋರಿಸುವ ಆಟಾ ಆಡುತ್ತಾ  ಕಾಲ ಕಳೆದ  ನಾವು  ಇನ್ನು ಸ್ವಲ್ಪ ಹೊತ್ತು ಹಾಗೆ ಮಾಡಿದ್ದರೆ  ಖಂಡಿತಾ  ನಮ್ಮನ್ನು ನೋಡಿದ  ಜನ  ಅದು ಇಲ್ಲಿನ ಸಂಪ್ರದಾಯ  ಎಂದು ತಿಳಿದು  ತಾವು ಸಹ ಬಸವನ ಮೂಗಿಗೆ  ಕೈ ಬೆರಳು ಇಡಲು ಬರ್ತಾ ಇದ್ರೂ  ಅಂತಾ ಕಾಣುತ್ತೆ,  ಊರುಗಳ ಪ್ರವಾಸ ಮಾಡುತ್ತಾ ಇತಿಹಾಸ ಕಲಿಯುತ್ತಾ  ಸಾಗಿದ್ದ ನಾವು  ಇಕ್ಕೆರಿಯ ಬಸವನ ಸನ್ನಿಧಿಯಲ್ಲಿ   ನಮ್ಮ ವಯಸ್ಸನ್ನು ಮರೆತು ತುಂಟ  ಹುಡುಗರಂತೆ  ತುಂಟಾಟ ಮಾಡುತ್ತಾ  ಹೊಟ್ಟೆ ತುಂಬಾ  ನಕ್ಕು  , ಕಾಲ ಕಳೆದೆವು, ಬೆಳಗಿನ  ಆಯಾಸ ನಮ್ಮ ಈ ತುಂಟಾಟದ ನಗುವಿನಲ್ಲಿ ಮಾಯವಾಗಿ  ಹೊಸ ಉತ್ಸಾಹ ಮೂಡಿತ್ತು. 


ಬನ್ನಿ ದೇವನ ಸನ್ನಿಧಿಗೆ 
ಮತ್ತೆ ವಾಸ್ತವಕ್ಕೆ ಬಂದು ದೇವಾಲಯದ ಪ್ರದಕ್ಷಿಣೆ ಹಾಕುತ್ತಾ  ಫೋಟೋ ತೆಗೆಯುತ್ತಾ ಬಂದೆವು , ಅಘೋರೆಶ್ವರ ದೇವಾಲಯದ  ಅರ್ಚಕರು  ಮೆಟ್ಟಿಲು ಹತ್ತುತ್ತಾ  ದೇವಾಲಯಕ್ಕೆ  ಬರುತ್ತಿದ್ದರು . ನಾವು ದೇಗುಲದ ಒಳಗೆ  ಅಘೋರೆಶ್ವರ ದೇವರ ದರ್ಶನ ಪಡೆದು ಇತಿಹಾಸ ತಿಳಿಯಲು  ಸಿದ್ಧರಾದೆವು. ......... ಮುಂದೆ ....!!!

Sunday, July 13, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......05 ಕೆಳದಿಯಲ್ಲಿದೆ ಗುಂಡಾ ಜೋಯಿಸರ ಜ್ಞಾನ ಭಂಡಾರ .


ಕೆಳದಿಯ  ಐತಿಹಾಸಿಕ ದೇವಾಲಯದ ಒಂದು ನೋಟ

ನಮಸ್ತೆ  ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ ಒಳಗೆ  ಒಂದು ಇಣುಕು ನೋಟ  ಹರಿಸಿದೆವು,  ಅದರಲ್ಲಿ ನಾ ಹೆಕ್ಕಿ ತೆಗೆದ ಹಲವು  ಐತಿಹಾಸಿಕ ವಿಚಾರಗಳ ಜೊತೆಯಲ್ಲಿ  ತಮ್ಮ  ಬಳಿ  ಇದ್ದ ಮಾಹಿತಿಯನ್ನು  ತಿಳಿಸಿ  ಹಲವು ಓದುಗರು ಸಹಕರಿಸಿದರು  ಎಲ್ಲರಿಗೂ ನನ್ನ ನಮನಗಳು, ಇತಿಹಾಸವೇ  ಹಾಗೆ , ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಇಟ್ಟಾಗ  ಹಲವು ಜ್ಞಾನ ಭಂಡಾರ ಗಳಿಂದ  ಮಾಹಿತಿ  ಸಹಜವಾಗಿ ಹರಿದು ಬರುತ್ತದೆ   ಅಮೃತದ ಹಾಗೆ. ತಮ್ಮ ಬಳಿ ಇದ್ದ ಇತಿಹಾಸದ  ಅಮೃತವನ್ನು ನನ್ನ ಮೇಲೆ ಸಿಂಚನ ಮಾಡಿದ  ಹಲವರಿಗೆ ನನ್ನ  ಕೃತಜ್ಞತೆಗಳು . 


ದೇಗುಲದಲ್ಲಿನ   ಮರದ ಕೆತ್ತನೆ


ಅದ್ಯಾಕೋ ಗೊತ್ತಿಲ್ಲ  ಕೆಳದಿಗೆ ಕಾಲಿಟ್ಟ ಗಳಿಗೆ ಚೆನ್ನಾಗಿತ್ತು ಅನ್ಸುತ್ತೆ , ಬಂದೊಡನೆ  ಒಂದು ಖುಷಿಯ ವಾತಾವರಣ  ನಿರ್ಮಾಣವಾಗಿತ್ತು, ಜೊತೆಗೆ ಪ್ರಕಾಶಣ್ಣನ  ಹಾಸ್ಯ ಚಟಾಕಿ  ಸಾಥ್ ನೀಡಿತ್ತು . ಮೊದಲು  ಕೆಳದಿಯ ಇತಿಹಾಸ  ಹೇಳಲು ಬಂದ   "ಗುಲಾಬಿ " , ನಂತರ  ದೇವಾಲಯದ ಆವರಣ ಹೊಕ್ಕಾಗ ಕಂಡ  ವಿವಿಧ ಅದ್ಭುತ  ಕಲಾ ಲೋಕ  ಜೊತೆಗೆ ಗಲಾಟೆ ಇಲ್ಲದ  ನಿಶ್ಯಬ್ಧ  ಇವುಗಳು ನಮ್ಮನ್ನು ಹೆಚ್ಚು ವಿಚಾರ ತಿಳಿಯಲು ಪ್ರೇರಣೆ ನೀಡಿದ್ದವು . ಗುಲಾಬಿಯಿಂದ  ಇತಿಹಾಸ ತಿಳಿದು ದೇವಾಲಯದ  ದರ್ಶನ ಮಾಡಿದೆವು,   ಕೆಳದಿಯ ಈ ಸುಂದರ ದೇಗುಲ  ಸುಮಾರು ಹದಿನಾರನೇ ಶತಮಾನದ  ದೇಗುಲವೆಂದು ತಿಳಿಯುತ್ತದೆ .  ಈ ದೇಗುಲದಲ್ಲಿ ಮೂರು  ಸನ್ನಿಧಿ ಇದ್ದು, ಅವುಗಳು ಕ್ರಮವಾಗಿ,  ವೀರಭದ್ರ, ರಾಮೇಶ್ವರ , ಹಾಗು  ಪಾರ್ವತಿ    ಸನ್ನಿಧಿಗಳಾಗಿವೆ .
ಕೆಳದಿ ದೇಗುಲದ  ಒಂದು ನೋಟ


ಈ ದೇಗುಲವು ಹೊಯ್ಸಳ ಹಾಗು ದ್ರಾವಿಡ  ಶೈಲಿಯನ್ನು  ಹೋಲುತ್ತದೆ .  ಬೂದುಬಣ್ಣದ  ಪದರದ ಶಿಲೆಗಳಿಂದ  ನಿರ್ಮಾಣಗೊಂಡಿರುವುದು ಕಂಡು ಬರುತ್ತದೆ.  ಈ ದೇವಾಲಯಕ್ಕೆ  ಸುಂದರವಾಗಿ  ಮುಖ ಮಂಟಪ,  ಪ್ರದಕ್ಷಿಣ ಪಥ , ಅಂತರಾಳ, ಗರ್ಭಗೃಹ , ಗಳು ನಿರ್ಮಾಣ ಗೊಂಡು  ಸೌಂದರ್ಯ ಹೆಚ್ಚಿಸಿವೆ . ಈ ದೇಗುಲಕ್ಕೆ ಮೂರು  ಪ್ರವೇಶ ದ್ವಾರಗಳಿದ್ದು, ಅವು ಉತ್ತರ, ಪೂರ್ವ ಹಾಗು ದಕ್ಷಿಣ  ದಿಕ್ಕಿಗೆ ಮುಖ ಮಾಡಿ  ನಿಂತಿವೆ .  ಹೊರ ಆವರಣದಲ್ಲಿ  ಗರುಡ,  ವಿವಿಧ ಸಂಗೀತ  ಸಾಧನಗಳನ್ನು ನುಡಿಸುವ ಸಂಗೀತಗಾರರು , ವಾಸ್ತು ಪುರುಷ , ಹರಿಹರ  ಮುಂತಾದ   ಸುಂದರ ಕೆತ್ತನೆಯನ್ನು   ಕಾಣಬಹುದು,ನವರಂಗದಲ್ಲಿ   ನಿಮಗೆ ಐದು  ಕಂಬಗಳು ಕಾಣಸಿಗುತ್ತವೆ  ಅವುಗಳಲ್ಲಿ   ಚಾಲುಕ್ಯರ ಶೈಲಿ ಹೋಲುವ  ಕೆತ್ತನೆ ಹೋಲುವ  ಮೂರ್ತಿಗಳನ್ನು ಗಮನಿಸ ಬಹುದು .  ದೇಗುಲದ  ಸ್ವಲ್ಪ  ಭಾಗ   ಮೇಲ್ಚಾವಣಿಯು  ಮರದ ಕೆತ್ತನೆ ಇಂದ ಅಲಂಕಾರ ಗೊಂಡಿದ್ದು  ಮೋಹಕವಾಗಿವೆ,  ಮತ್ತೆ ಕೆಲವು ಕಡೆ  ಕಲ್ಲಿನ ಮೇಲ್ಚಾವಣಿ  ಯಲ್ಲಿ ಅದ್ಭುತ ಕಲಾಕೃತಿಗಳು ಕಂಗೊಳಿ ಸಿವೆ. 


ಗಂಡ ಬೇರುಂಡ


ದೇವಾಲಯದ  ಅಂದ ಸವಿಯುತ್ತಾ ಬರುತ್ತಿದ್ದ ನನ್ನನ್ನು  ಚಾವಣಿಯಲ್ಲಿನ ಈ ಗಂಡ ಬೇರುಂಡ  ಪಕ್ಷಿ  ಕೆತ್ತನೆ  ತನ್ನತ್ತ ಸೆಳೆ ಯಿತು.   ಗಂಡ ಬೇರುಂಡ ಪಕ್ಷಿಯ  ಸುಂದರ ಕಲ್ಪನೆ  ಇಲ್ಲಿ ಅನಾವರಣ ಆಗಿತ್ತು,  ಎರಡು ತಲೆಯ  ದೈತ್ಯ ಪಕ್ಷಿ,  ಎರಡೂ ತಲೆಯ ಕೊಕ್ಕಿನಲ್ಲಿ  ಎರಡು ಸಿಂಹಗಳನ್ನೂ,  ಕಾಲಿನ  ಪಂಜಗಳಲ್ಲಿ  ಎರಡು ಆನೆಗಳನ್ನು  ಹಿಡಿದಿರುವ ನೋಟ  ಇಲ್ಲಿ ಕಾಣ ಸಿಗುತ್ತದೆ . ನಿಮಗೆ ತಿಳಿದಿರಲಿ ಮೈಸೂರು  ಯದುವಂಶದ  ಅರಸರ   ಲಾಂಛನ ವೂ ಸಹ ಈ ಗಂಡಬೇರುಂಡ   ಪಕ್ಷಿಯೇ ಆಗಿತ್ತು,  ಜೊತೆಗೆ  ವಿಜಯನಗರ  ಅರಸರ ಕಾಲದ ನಾಣ್ಯದ  ಮೇಲೆ ಈ  ಗಂಡ ಬೇರುಂಡ  ಪಕ್ಷಿಯ ಲಾಂಛನ   ಇರುತ್ತಿತ್ತು,  ಹಾಲಿ ನಮ್ಮ ಕರ್ನಾಟಕ  ರಾಜ್ಯದ  ರಾಜ್ಯ ಲಾಂಛನ  ಈ ಗಂಡ ಬೇರುಂಡ  ಪಕ್ಷಿಯೇ  ಆಗಿದೆ.  ಹಾಗಾಗಿ ಈ  ಲಾಂಛನ ಕ್ಕೆ   ೫೦೦ ವರ್ಷಗಳ ಇತಿಹಾಸ ವಿದೆ .  ಬಹುಷಃ  ಮೈಸೂರು ಅರಸರು  ಈ ದೇಗುಲದ   ಲಾಂಛನ ನೋಡಿ   ತಾವು ಗಂಡ ಬೇರುಂಡ  ಲಾಂಛನ  ಆರಿಸಿಕೊಂಡರೆ ಎನ್ನುವುದು   ಸಂಶೋದನಾ  ಯೋಗ್ಯ  ವಿಚಾರವಾಗಿದೆ. 


ನಾಗ  ಮಂಡಲ
ದಕ್ಷ ಪ್ರಜಾಪತಿ
ಹಾಗೆ ಮುಂದು ವರೆದು  ಅಲ್ಲಿಯೇ ಪಕ್ಕದಲ್ಲಿ  ನಾಗ ಮಂಡಲ ಕೆತ್ತನೆಯನ್ನು  ಕಣ್ತುಂಬಿ ಕೊಂಡೆ , ಅದರ ಪಕ್ಕದಲ್ಲಿ ನವಗ್ರಹಗಳ ಸುಂದರ ಕೆತ್ತನೆ  ಇನ್ನು ಮುಂತಾದವುಗಳು   ಮನಸನ್ನು ಉಲ್ಲಾಸ ಗೊಳಿಸಿದವು.  ಅಲ್ಲೇ ಸನಿಹದಲ್ಲಿ ದಕ್ಷ  ಪ್ರಜಾಪತಿಯ ಶಿಲ್ಪ ಮನಸೆಳೆಯಿತು . ಟಗರಿನ  ಮುಖ ಹೊತ್ತು ಭಕ್ತಿಯಿಂದ   ನಿಂತಿರುವ   ಆ ಅಪರೂಪದ  ವಿಗ್ರಹ   ಇತರ ದೇಗುಲದಲ್ಲಿ ಕಂಡುಬರುವುದು ಅಪರೂಪವೇ ಸರಿ. 
ಕೆಳದಿ ವೀರಭದ್ರೆಶ್ವರ  ಸನ್ನಿಧಿ


 ಕೆಳದಿ  ವೀರಭದ್ರೇಶ್ವರ   ಸನ್ನಿಧಿಯಲ್ಲಿ   ಬಾಗಿಲ ಕಂಡಿಯಿಂದ ದರ್ಶನ ಮಾಡಿ   ಅಲ್ಲಿಯೇ ಸುಮಾರು ಹೊತ್ತು ಕುಳಿತು   , ಪ್ರಕಾಶಣ್ಣ ಹಾಗು ನಾನು ಹರಟಿದೆವು,   ಅಚ್ಚರಿ ಎಂದರೆ  ಪ್ರಕಾಶಣ್ಣನ  ಮನೆ ದೇವರು ಕೆಳದಿ  ವೀರಭದ್ರ.   ತಮ್ಮ ಮನೆತನಕ್ಕೂ  ಈ ದೇವರಿಗೂ ಹೇಗೆ  ಸಂಬಂಧ   ಎಂಬ ಬಗ್ಗೆ  ಗೆಳೆಯ ಪ್ರಕಾಶ್ ಹೆಗ್ಡೆ  ತಿಳಿದು ಕೊಳ್ಳುವ  ಆಸಕ್ತಿ  ಮೂಡಿತ್ತು, ಇದಕ್ಕಾಗಿ   ಅವರ ಮನಸು ಚಡಪಡಿಸುತ್ತಿತ್ತು, ಅಲ್ಲಿಂದ ಹೊರಗೆ ಬಂದೆವು,  ಆದರೆ ನನ್ನ ಕಣ್ಣುಗಳು ಅಲ್ಲಿ ದೊರೆಯಬಹುದಾದ  ಶಾಸನಗಳ ಬಗ್ಗೆ  ಹುಡುಕಾಟ  ನಡೆಸಿತ್ತು, ದೇವಾಲಯದ  ಆವರಣದ ಸುತ್ತಾ , ಹೊರಗಡೆ  ಆವರಣದಲ್ಲಿ  ಎಲ್ಲಾ ಕಡೆ ಸುತ್ತಿದರೂ  ಯಾವುದೇ ಶಿಲಾ ಶಾಸನ  ಕಣ್ಣಿಗೆ ಬೀಳಲಿಲ್ಲ,  ಅಷ್ಟರಲ್ಲಿ  ಪ್ರಕಾಶಣ್ಣ   ಬಾಲಣ್ಣ  ಇಲ್ಲಿ ಕೆಳದಿ ಇತಿಹಾಸ ಗೊತ್ತಿರುವ ಒಬ್ಬರು ಇದ್ದಾರೆ ಬನ್ನಿ ಅಂತಾ  ಕರೆದು ಕೊಂಡು  ಹೋದರು . 
ನಮ್ಮ ನಾಡಿನ ಕೆಳದಿ ಇತಿಹಾಸ ಭಂಡಾರ


ಕಟ್ ಮಾಡಿದ್ರೆ  ನಾವು ಆ  ಮಹಾನ್ ವ್ಯಕ್ತಿಯ  ಮನೆಯಲ್ಲಿದೆವು,  ಅವರನ್ನು ಕಂಡ ನಮ್ಮ ಕಣ್ಣುಗಳು  ಧನ್ಯವಾದವು , ನಮ್ಮನ್ನು ಕಂಡೊಡನೆ ಪರಿಚಯಕ್ಕೆ ಮೊದಲೇ ನೀವು ಯಾರೇ ಆಗಿರಿ ಮೊದಲು  ಪಾನಕ ಕುಡಿಯಿರಿ ಅಂತಾ  ಹೇಳುತ್ತಾ  ಪ್ರೀತಿಯಿಂದ ಸ್ವಾಗತ   ನೀಡಿತು  ಈ ಹಿರಿಯ  ಚೇತನ .  ನನಗೋ ಈ ವ್ಯಕ್ತಿ ಯಾರೂ ಎಂಬ ಕುತೂಹಲ  , ಪ್ರಕಾಶಣ್ಣ ನನ್ನನ್ನು ಉದ್ದೇಶಿಸಿ   ಬಾಲಣ್ಣ ಇವರೇ  ಕೆಳದಿಯ ಗುಂಡಾ  ಜೋಯಿಸ್  ಎಂದರೂ  ಈ ಪೆದ್ದು ತಲೆಗೆ  ಸರಿಯಾಗಿ  ಅರ್ಥ ಆಗಲಿಲ್ಲ.   


ಬಿಸಿಲಿನಲ್ಲಿ  ಬಳಲಿ ಬಂದ  ನಮ್ಮನ್ನು ಪ್ರೀತಿಯಿಂದ  ಪಾನಕ ನೀಡಿ  ಆದರಿಸಿ , ನಮ್ಮ ಪರಿಚಯ , ಬಂದ ಉದ್ದೇಶ  ಇವುಗಳನ್ನು   ತಿಳಿದುಕೊಂಡರು , ಪ್ರಕಾಶಣ್ಣ ನ  ಪ್ರಶ್ನೆಗೆ  ಇಲ್ಲಿ ಉತ್ತರ ಸಿಕ್ಕಿತು. ಜೊತೆಗೆ ಕೆಳದಿ ಇತಿಹಾಸದ ಹಲವು  ವಿಚಾರಗಳನ್ನು  ತಿಳಿಸಿಕೊಟ್ಟರು . ಹಾಗೆ ಕೇಳುತ್ತಾ ಇವರ ಪುಸ್ತಕ ಏಲ್ಲೊ ಓದಿದ ನೆನಪಾಗಿ  ಜ್ಞಾಪಿಸಿಕೊಂಡೆ  ಅರೆ ಹೌದು   ತಮಿಳು ನಾಡಿನ  ಕನ್ನಡ ಮಂತ್ರಿ  ಗೋವಿಂದ  ದೀಕ್ಷಿತರ  ಬಗ್ಗೆ   ಪುಸ್ತಕ ಬರೆದ ಮಹನೀಯರು  ಇವರೇ ಅಂತಾ ತಿಳಿದು ಬಂದು ಮನಸಾ  ವಂದಿಸಿದೆ . 

ಗುಂಡಾ ಜೋಯಿಸರ ಬಗ್ಗೆ ಒಂದು ಇಣುಕು ನೋಟ  ಇಲ್ಲಿದೆ  ನೋಡಿ ,  ೨೭-೦೯ -೧೯೩೧ ರಲ್ಲಿ ಕೆಳದಿಯಲ್ಲಿ ಜನಿಸಿದ ಇವರು  ಅನೇಕ ಸಾಧನೆ ಮಾಡಿದ್ದಾರೆ , ಬಾಲ್ಯದ ಬಗ್ಗೆ ಹೆಚ್ಚಿನ ವಿವರ ತಿಳಿದು ಬರುವುದಿಲ್ಲ,  ಆದ್ರೆ ಅವರ ಸಾಧನೆ ಕಂಡು ಬೆರಗಾದೆ . ಗುಂಡಾ ಜೋಯಿಸರು ಬಹಳ ಜ್ಞಾನಿಗಳು   ಮೈಸೂರು ವಿಶ್ವವಿಧ್ಯಾಲಯದಲ್ಲಿನ   ಎಮ್. ಎ ., ಸಂಸ್ಕೃತದಲ್ಲಿ ಆಗಮ ಪರ್ವ ಪರೀಕ್ಷಾ , ಕನ್ನಡ ಸಾಹಿತ್ಯ ಪರಿಷತ್  ನಡೆಸುವ ಕನ್ನಡ ರತ್ನ , ಪದವಿಗಳು  ಇವರ ಜ್ಞಾನ ಬತ್ತಳಿಕೆಗೆ  ಸೇರಿವೆ , ಈಗ ಸುಮಾರು ಎಂಭತ್ತಮೂರು  ವರ್ಷ ಇರಬಹುದು, ಕೆಳದಿಯ  ಐತಿಹಾಸಿಕ  ವಸ್ತು  ಸಂಗ್ರಹಾಲಯದ  ಸ್ಥಾಪಕ  ಹಾಗು ಗೌರವ ಕಾರ್ಯದರ್ಶಿ,  ೧೯೬೨ ರಿಂದ ೧೯೭೫ ರವರೆಗೆ  ಮೈಸೂರು ಹಾಗು ಧಾರವಾಡ ದ ವಿಶ್ವವಿಧ್ಯಾಲಯ ಗಳಲ್ಲಿ  ಇತಿಹಾಸದ ಪ್ರಾಧ್ಯಾಪಕರು ,  ೧೯೮೦ ರಿಂದ ೧೯೮೫ ರವರೆಗೆ  ಕರ್ನಾಟಕ ಇತಿಹಾಸ  ದಾಖಲೆ  ಸಂಶೋದನಾ  ಸಮಿತಿಯ ಸದಸ್ಯರು,  ಹಾಗು  ಅಮೇರಿಕಾ  ಸೇರಿದಂತೆ ಹಲವಾರು ದೇಶ  ವಿದೇಶಗಳಲ್ಲಿ  ತಮ್ಮ ಸಂಶೋದನಾ ಪ್ರಬಂಧಗಳನ್ನು  ಮಂಡಿಸಿ  ಕನ್ನಡ  ತಾಯಿಯ ಕೀರ್ತಿ  ಕಿರೀಟಕ್ಕೆ  ಮೆರುಗುತಂದಿದ್ದಾರೆ . ೧೯೯೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿದೆ,  ಹಲವಾರು ಧಾರ್ಮಿಕ  ಸಂಸ್ಥಾನಗಳು ಇವರನ್ನು  ಗೌರವಿಸಿವೆ . 

ಗುಂಡಾ ಜೋಯಿಸರ  ಜೊತೆ ಪ್ರಕಾಶ್ ಹೆಗ್ಡೆ


 ಇಂತಹ  ಮಹನೀಯರ  ಸಾಧನೆಯ ಹಿಮಾಲಯ ದ ಮುಂದೆ ನಾವೆಲ್ಲಾ ಸಣ್ಣ ಮಣ್ಣಿನ ಕಣಗಳು ಎಂದರೆ ತಪ್ಪಾಗಲಾರದು, ಇನತಹವರ ಭೇಟಿ ನನ್ನ ಜನ್ಮದ ಪುಣ್ಯವೆಂದು ಅನ್ನಿಸಿತು, ಇಂತಹ ಮಹನೀಯರು  ನಮ್ಮ ಕನ್ನಡ ತಾಯಿಯ ಅನರ್ಘ್ಯ  ರತ್ನಗಳು . ಇಂತಹ ಜ್ಞಾನ ಭಂಡಾರ  ದರ್ಶನ ಪಡೆದು  , ಅವರ ಆಶೀರ್ವಾದ ಪಡೆದು ಪ್ರಕಾಶ್ ಹೆಗ್ಡೆ ಹಾಗು ನಾನು  ಕೆಳದಿಯ ಮ್ಯೂಸಿಯಂ ಸಂದರ್ಶಿಸಿ,  ಹೊಸ  ಉತ್ಸಾಹದೊಡನೆ  ನಮ್ಮ ಪಯಣ ಮುಂದು ವರೆಸಿದೆವು. ........  ಇಕ್ಕೆರಿಯ ಕಡೆಗೆ .