Sunday, May 31, 2015

ಕ್ಷಮಿಸಿ ಕಸ್ತೂರಿ ಅಕ್ಕ ನಿಮ್ಮ ಪ್ರೀತಿಯ ಆತಿಥ್ಯ ಪಡೆಯುವ ಅರ್ಹತೆ ನಮಗಿಲ್ಲ



ಆಗುಂಬೆಯ   ಅನ್ನಪೂರ್ಣೆ


ಕೆಲವು ದಿನಗಳ ಹಿಂದೆ ನಮ್ಮ ಬ್ಲಾಗ್  ಮಿತ್ರ  ಪ್ರವೀಣ್  ವಿವಾಹಕ್ಕೆ ಹೋಗಬೇಕಾಗಿತ್ತು,   ವಿವಾಹ ಕಾರ್ಯಕ್ರಮ ಆಗುಂಬೆ ಸನಿಹದ  ತಲ್ಲೂರಂಗಡಿ  ಎಂಬಲ್ಲಿ  ಇದ್ದ ಕಾರಣ, ಹಿಂದಿನ ದಿನವೇ  ಆಗುಂಬೆಯಲ್ಲಿ ಮೊಕ್ಕಾಂ  ಮಾಡಿದೆ, ಆಗುಂಬೆ ಬಗ್ಗೆ  ಹಲವು ವಿಚಾರಗಳು ತಿಳಿದಿತ್ತು,  ಆಗುಂಬೆಯ ಸೂರ್ಯಾಸ್ತ, ಸನಿಹದಲ್ಲೇ  ಸೂರ್ಯೋದಯ ನೋಡಲು   ಕೈ ಬೀಸಿ ಕರೆಯುವ  ಕುಂದಾದ್ರಿ,  ಗೋಪಾಲ ಕೃಷ್ಣ   ದೇಗುಲ,ಎಲ್ಲದರ ಜೊತೆಗೆ  ಆಗುಂಬೆಯ  ದೊಡ್ದಮನೆಯಲ್ಲಿ ಉಳಿಯುವ ಆಸೆ ಬಾಕಿ ಇತ್ತು.  ಈ  ಪ್ರವಾಸದಲ್ಲಿ ಅದಕ್ಕೆ ಅವಕಾಶ  ಸಿಕ್ಕಿದ್ದು  ಖುಶಿ ಕೊಟ್ಟಿತು .

 ನನ್ನ ಗೆಳೆಯರು  ಕುಟುಂಬದೊಡನೆ  ಅಲ್ಲಿಗೆ ಹೋಗಿ ಆತಿಥ್ಯ ಸವಿದು  ರಸವತ್ತಾದ ಕಥೆಗಳನ್ನು ಹೇಳಿ  ಹೊಟ್ಟೆ ಉರಿಸಿದ್ದರು , ಅವರುಗಳ ಪ್ರತೀ ಮಾತಿನಲ್ಲೂ  ಕಸ್ತೂರಿ ಅಕ್ಕನ  ನಗು ಮುಖದ  ಅತಿಥಿ ಸತ್ಕಾರದ ಬಗ್ಗೆ ಮಾಹಿತಿಗಳು   ಇರುತ್ತಿತ್ತು, ನಮ್ಮ ಪ್ರವೀಣ್ ಮದುವೆಗೆ  ಬಂದ  ನೆಪದಲ್ಲಿ  ಕಸ್ತೂರಿ ಅಕ್ಕನ  ಮನೆಗೆ ಪ್ರವೇಶ  ಪಡೆದೆ . ಇಲ್ಲಿಗೆ ಬರುವ ಮೊದಲು ಕಸ್ತೂರಿ ಅಕ್ಕನ  ಮನೆಯ ಫೋನ್ ನಂಬರ್  ಸಂಪಾದಿಸಿ  ಕರೆ ಮಾಡಿದರೆ  ಸಿಕ್ಕವರೇ  ಕಸ್ತೂರಿ ಅಕ್ಕಾ ,  ಆಗುಂಬೆಗೆ ಬರುವುದಾಗ ತಿಳಿಸಿ  ಉಳಿಯಲು ಅವಕಾಶ ಮಾಡಿಕೊಡಲು ಕೋರಿದೆ , ಬಹಳ ಸಂತೋಷದಿಂದ ಒಪ್ಪಿ  ನಾನು ಬರುವ ದಿನವನ್ನು  ಗುರುತು ಹಾಕಿಕೊಂಡರು .  ಅಕ್ಕಾ  ನಿಮ್ಮಲ್ಲಿ ಉಳಿಯಲು  ಎಷ್ಟು ದುಡ್ಡು  ಕೊಡಬೇಕು ..? ಊಟ ತಿಂಡಿಗೆ ಎಷ್ಟಾಗುತ್ತೆ   ದಯವಿಟ್ಟು ತಿಳಿಸಿ ನಿಮ್ಮ ಖಾತೆ ನಂಬರ್ ಕೊಡಿ ಅಲ್ಲಿಗೆ ಹಣ ಜಮಾ ಮಾಡುತ್ತೇನೆ ಅಂದೇ , ಅದಕ್ಕೆ ಕಸ್ತೂರಿ ಅಕ್ಕಾ  ಅಯ್ಯೋ ಅದೆಲ್ಲಾ ಬೇಡ ಇಲ್ಲಿಗೆ ಬನ್ನಿ ಉಳಿಯಿರಿ ನಂತರ ಅದರ ಬಗ್ಗೆ ಮಾತಾಡೋಣ  ಅಂದರು .


ಕಸ್ತೂರಿ ಅಕ್ಕನ  ಕುಟುಂಬದ  ಸದಸ್ಯರು




ಅವರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಲೇ ಏನೋ ಒಂದು ಬಗೆಯ  ಅನಿಸಿಕೆ  ಅವರನ್ನು ಕಾಣುವ ಆಸೆ ಜಾಸ್ತಿಯಾಯ್ತು . ಅವರ ಮನೆಗೆ ತೆರಳಿದ  ನಾನು ನನ್ನ ಹೆಸರು ಹೇಳಿದ ತಕ್ಷಣ  ಓ ಮೈಸೂರಿನವರು ಬನ್ನಿ , ಕೈಕಾಲು ತೊಳೆಯುವಿರ , ತೊಳೆದು ಬನ್ನಿ ವಿಶ್ರಾಂತಿ ಪಡೆದು  ನಂತರ  ಊಟ  ಮಾಡೊರಂತೆ , ನಿಮ್ಮ   ರೂಂ ಮೇಲಿದೆ  ಅಲ್ಲಿ ಉಳಿಯಬಹುದು ಅಂದರು, ಹಾಗೆ ಕೈ ಕಾಲು   ಮುಖಕ್ಕೆ ನೀರು ಹಾಕಿಕೊಂಡು  ದೇಹಕ್ಕೆ ವಿಶ್ರಾಂತಿ ನೀಡಿದೇ ಸ್ವಲ್ಪ ಕಷಾಯದ  ಸೇವನೆ ಆಯ್ತು . ಮನಸು  ಉಲ್ಲಾಸ  ಕಂಡಿತು . ಹಾಗೆ ಮನೆಯನ್ನೆಲ್ಲಾ ವೀಕ್ಷಣೆ ಮಾಡುತ್ತಾ  ಮನೆಯ ಮುಂದಿನ ಜಗಲಿಗೆ ಬಂದೆ  ಸುಮಾರು  ಇಪ್ಪತ್ತು ಮಂದಿ  ಅಲ್ಲಿದ್ದರು,  ಕೆಲವು ಹುಡುಗ ಹುಡುಗಿಯರು ಟ್ರೆಕಿಂಗ್  ಮಾಡಲು ಬಂದಿದ್ದರು, ಮತ್ತೊಂದು ಕುಟುಂಬ  ಆಗುಂಬೆ ಸುತ್ತಾ ಮುತ್ತಾ ನೋಡಲು ಬಂದಿತ್ತು, ಹೀಗೆ  ಗುರುತಿಲ್ಲದ ಜನರ  ನಡುವೆ  ನನ್ನ ಬಾವುಟವೂ ಹಾರಿತ್ತು.

ಅಷ್ಟರಲ್ಲಿ   ಕಸ್ತೂರಿ ಅಕ್ಕನ ಅಳಿಯ  ಶ್ರೀ  ರವಿ ಕುಮಾರ್   ಅವರು ಹೊರಗೆ ಬಂದು ಬನ್ನಿ ಬನ್ನಿ ಊಟಕ್ಕೆ ಎಲ್ಲರೂ  ಅಂತಾ ಮನೆಯ ನೆಂಟರನ್ನು  ಕರೆದಂತೆ ಕರೆದರೂ , ನನಗೂ ಅಚ್ಚರಿ  ಒಳಗೆ ಬಂದೆ  ಮನೆಯ   ಕೇಂದ್ರ ಭಾಗದಲ್ಲಿ  ಒಂದು ಸುಂದರ  ತೊಟ್ಟಿಯಂತಹ  ಜಾಗದಲ್ಲಿ  ಚೌಕಾಕ್ರುತಿಯಲ್ಲಿ    ಊಟದ  ಟೇಬಲ್ ಗಳನ್ನೂ ಜೋಡಿಸಿ  ಅದರ ಮೇಲೆ  ಬಾಳೆ  ಎಲೆಗಳನ್ನು ಹಾಕಿದ್ದರು , ಎಲ್ಲರಿಗೂ ಪ್ರೀತಿ ತುಂಬಿದ ಪ್ರೀತಿಯ  ಮಾತುಗಳೊಡನೆ   ಊಟ ಬಡಿಸಿದ್ದರು,   ರುಚಿ ರುಚಿಯಾದ ಆರೋಗ್ಯಕರ  ಊಟ ನಮ್ಮದಾಗಿತ್ತು,  ಇದೆ ರೀತಿ ರಾತ್ರಿ ಸಹ  ಪುನರಾವರ್ತನೆ,   ಉಳಿದಿದ್ದ   ಕೋಣೆ   ಶುಚಿಯಾಗಿತ್ತು,  ಹಾಸಿಗೆ ಹೊದ್ದಿಗೆ  ಬಹಳ ಶುಭ್ರವಾಗಿತ್ತು,   ಚಿಕ್ಕ ವಯಸಿನಲ್ಲಿ ಅಜ್ಜಿಯ  ಮನೆಯ  ನೆನಪುಗಳು  ಮರುಕಳಿಸಿದ ಅನುಭವ. ಜೊತೆಗೆ ಈ ಪ್ರಪಂಚದಲ್ಲಿ ಇಂತಹ  ವ್ಯಕ್ತಿಗಳು ಇದ್ದಾರ ಎನ್ನುವ  ಪ್ರಶ್ನೆ..? ಕಾಡಿತ್ತು,




 ಕಸ್ತೂರಿ ಅಕ್ಕನ  ದೊಡ್ಡ ಮನೆ


ಮುಂಜಾನೆಯ  ಹಕ್ಕಿಗಳ ಕಲರವ ನನ್ನನ್ನು ಎಚ್ಚರ ಗೊಳಿಸಿತ್ತು,   ಮಹಡಿಯ ಕೋಣೆ ಯಿಂದಾ  ಮೆಟ್ಟಿಲಿಳಿದು  ಬಂದೆ ... ಬನ್ನಿ ಬನ್ನಿ  ಬಿಸಿನೀರು ಕಾದಿದೆ , ಸ್ನಾನ ಮಾಡ್ತೀರಾ , ಅಲ್ಲೇ ಹಿಂದೆ ಸ್ನಾನದ ಮನೆ ಇದೆ ,    ಮುಖತೊಳೆದು ಬನ್ನಿ , ಟೀ , ಕಾಫಿ, ಏನಾದರೂ ಬೇಕಾ   , ಅಲ್ಲೇ ಇದೆ ನೋಡಿ ರೆಸ್ಟ್  ರೂಮು  ಅಂತಾ  ಅತಿಥಿಗಳಿಗೆ   ಪ್ರೀತಿಯಿಂದ  ತಿಳಿಸುತ್ತಾ ಇದ್ದರು .  ನನಗೆ ಈ ಮನೆ  ಹೊಸದು ಅನ್ನಿಸಲೇ ಇಲ್ಲಾ, ನಮ್ಮ  ಅಜ್ಜಿಯ  ಮನೆಗೆ ಬಂದಂತೆ ಅನ್ನಿಸಿತು, ಬೆಳಿಗ್ಗೆ ಉಪಹಾರ    ಸೇವನೆ ನಂತರ  ಕಸ್ತೂರಿ ಅಕ್ಕಾ ನಿಮ್ಮ ಜೊತೆ ಸ್ವಲ್ಪ  ಮಾತಾಡೋಕೆ  ಅವಕಾಶ ಮಾಡಿಕೊಡಿ  ಅಂದೇ,  ಅದಕ್ಕೇನಂತೆ  ಬನ್ನಿ  ನಾನು ಕೆಲ್ಸಾ ಮಾಡ್ತಾ ಮಾಡ್ತಾ ಮಾತಾಡುತ್ತೇನೆ ಅಂತಾ  ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು ,  ಅವರ ಉತ್ತರ ನನ್ನ ಜಂಘಾ ಬಲವನ್ನೇ ಉಡುಗಿಸಿಬಿಟ್ಟಿತು,  ಜೊತೆಗೆ ಪ್ರವಾಸಿಗರ ವೇಷದಲ್ಲಿ ಬರುವ  ನಾವುಗಳು  ಎಂತಹ ಕೆಟ್ಟ ಜನ  ಎನ್ನುವ ಪ್ರಶ್ನೆ ಮೂಡಿತು,





ಮನೆಯಲ್ಲಿನ ಹಿರಿಯ ಜೀವ ಕೂಡ  ಕೆಲಸ ಮಾಡಿ  ಊಟ ಮಾಡುವ ಸ್ವಾಭಿಮಾನಿ

ಕಸ್ತೂರಿ ಅಕ್ಕನ ಮನೆ   ಆಗುಂಬೆಯಲ್ಲಿ ದೊಡ್ಡ ಮನೆ ಅಂತಾನೆ ಪ್ರಸಿದ್ಧಿ, ಈ ಮನೆಯಲ್ಲಿ ಬಹಳ ಹಿಂದಿನಿಂದಲೂ   ಆತಿಥ್ಯಕ್ಕೆ  ಪ್ರಾದಾನ್ಯತೆ  ನೀಡಲಾಗಿದೆ,   ಬಹಳ ಹಿಂದೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ   ಅಧಿಕಾರಿಗಳು   ಆಗುಂಬೆ ಘಟ್ಟ  ಹತ್ತಿ ಬಂದು ಇಲ್ಲಿ ಉಳಿದು  ವಿಶ್ರಾಂತಿ ಪಡೆದು ನಂತರ  ಶಿವಮೊಗ್ಗಕ್ಕೆ ಸಾಗುತ್ತಿದ್ದರು,  ಕಸ್ತೂರಿ ಅಕ್ಕ  ಸುಮಾರು ನಲವತ್ತು ವರ್ಷಗಳಿಂದ  ಒಂದು ದಿನವೂ ತಪ್ಪಿಸದೇ   ಈ ಮನೆಗೆ ಆಗಮಿಸುವ ಅತಿಥಿಗಳಿಗೆ  ಊಟ ವಸತಿ ನೀಡಿ ಆಗುಂಬೆಯ
ಅನ್ನ ಪೂರ್ಣೆ  ಯಾಗಿದ್ದಾರೆ .  ನಲವತ್ತು ವರ್ಷಗಳಿಂದ  ಆಗುಂಬೆಯ ಈ ಮನೆ ಬಿಟ್ಟು ಆಚೆ ಹೋಗಿಲ್ಲ,  ಹಾಗೆಯೇ  ಈ ಮನೆಯಲ್ಲಿ ಒಂದು ದಿನವೂ  ಈ ಕಾರ್ಯಕ್ಕೆ ರಜೆ ನೀಡಲಾಗಿಲ್ಲ . ಇಂತಹ  ಜಾಗಕ್ಕೆ  ಬಂದ  ನಾವುಗಳು ಹೇಗೆ ಇರಬೇಕು ಅಲ್ವಾ..?  ಆದರೆ ನಾವುಗಳು ಮಾಡುವ ಅವಾಂತರ ನೋಡಿ

೧] ನೀವು ಯಾವುದೇ ಊರಿಗೆ ಹೋಗಿ, ಕನಿಷ್ಠ ಒಂದು ಊಟಕ್ಕೆ  ೬೦ ರಿಂದ ೮೦ ರೂ   ರವರೆಗೆ ಖರ್ಚಾಗುತ್ತದೆ , ಬೆಳಗಿನ ಉಪಹಾರಕ್ಕೆ  ಕನಿಷ್ಠ  ೮೦ ರೂ  ಖರ್ಚಾಗುತ್ತದೆ,   ಉಳಿಯಲು  ನೀಡುವ  ಕೋಣೆ  ಬಾಡಿಗೆ ಕನಿಷ್ಠ ೮೦೦ ರೂ  ಆಗುತ್ತದೆ,  ಇದೆ ಆಧಾರದ ಮೇಲೆ   ನೀವು ಯಾವುದೇ ಪುಟ್ಟ ಪಟ್ಟಣಕ್ಕೆ ಹೋದರು   ಅಲ್ಲಿಸಿಗುವ  ಕನಿಷ್ಠ ಸೌಲಭ್ಯಕ್ಕೆ    ರೂ ೮೦ ರಿಂದ  ೧೦೦ ರವರೆಗೆ, ತೆರಬೇಕು   , ಆದರೆ ಇಲ್ಲಿ ನೀಡುವ ಆರೋಗ್ಯಕರ ರುಚಿಯಾದ ಉಪಹಾರಕ್ಕೆ  ೮೦ ರೂ  ಮುಲಾಜಿಲ್ಲದೆ ನೀಡ ಬಹುದು,   ಸುಮಾರು ೧೫೦ ವರ್ಷಗಳ ಇತಿಹಾಸ ಉಳ್ಳ ಆ ಮನೆಯಲ್ಲಿ ಉಳಿಯಲು  ಕನಿಷ್ಠ    ರೂ ೬೦೦ ,  ನೀಡ ಬಹುದು  ಆದರೆ  ಬೆಲೆಕಟ್ಟಲಾಗದ ಈ ಆತಿಥ್ಯಕ್ಕೆ  ಕೆಲವರು  ದುಡ್ಡು ಕೊಡದೆ , ಬರುವುದುಂಟು, ಮತ್ತೆ ಕೆಲವರು ೧೦೦,  ೨೦೦ ರೂಪಾಯಿ ನೀಡಿ ಕಳ್ಳ ನಗೆಯನ್ನು  ನಕ್ಕು ಬರುವುದು ಉಂಟು .  ಯಾವುದೋ  ರೆಸಾರ್ಟ್ ಗಳಿಗೆ  ಒಂದು ದಿನಕ್ಕೆ  ರೂ ೨೦೦೦ ದಿಂದ ೩೦೦೦ ದ ವರೆಗೆ ತಲಾ ಒಬ್ಬೊಬ್ಬರು  ತೆತ್ತು ಬರುವ ಜನ ಇಲ್ಲಿ ಬಂದ ತಕ್ಷಣ  ಜಿಪುಣ ರಾಗುತ್ತಾರೆ, 

೨} ನಮ್ಮ ಮನೆಯ ಟಾಯ್ಲೆಟ್ ಗಳು ಕೊಳಕಾದರೆ  ನರಳಾಡುವ ನಾವು ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುತ್ತೇವೆ , ಆದರೆ ಹೆಚ್ಚು ವಿಧ್ಯೆ ಗಳಿಸಿದ  ಕೆಲವು   ಪಟ್ಟಣದ ಹೆಣ್ಣು ಮಕ್ಕಳು  ತಾವು ಬಳಸಿದ  ಪ್ಯಾಡ್ ಗಳನ್ನೂ  ಸಹ  ಟಾಯ್ಲೆಟ್ ಗಳಲ್ಲಿ ತುರುಕಿ ಬರುತ್ತಾರೆ , ಇನ್ನು ಕೆಲವರು ಬಳಸಿದ  ಶೌಚಾಯಗಳಲ್ಲಿ  ನೀರು ಹಾಕದೆ  ಬೇರೆಯವರು  ಉಪಯೋಗಿಸದ  ಹಾಗೆ  ಮಾಡಿ ಬರ್ತಾರೆ ಇದನ್ನೆಲ್ಲಾ  ತೊಳೆಯುವ ಕಾರ್ಯ  ಪಾಪ  ಕಸ್ತೂರಿ ಅಕ್ಕನ  ಮನೆಯ ಸದಸ್ಯರದು ,  ಕೆಲವೊಮ್ಮೆ ಪ್ಯಾಡ್ ಗಳು   ಸಿಕ್ಕಿಕೊಂಡು ಶೌಚಾಲಯ  ಕಟ್ಟಿಕೊಂಡಾಗ ಅದನ್ನು ತೆರವುಗೊಳಿಸಲು  ಒಮ್ಮೊಮ್ಮೆ ೫೦೦ ರೂಗಳ ವರೆಗೆ  ಖರ್ಚು ಮಾಡಿ  ಕಸ್ತೂರಿ ಅಕ್ಕ  ಮತ್ತೆ ಪ್ರವಾಸಿಗರಿಗೆ ತೊಂದರೆ ಆಗದಂತೆ  ನೋಡಿಕೊಳ್ಳುತ್ತಾರೆ . ಪ್ರತಿ ನಿತ್ಯ  ಮನೆಯ ಹೆಣ್ಣುಮಕ್ಕಳೂ ಒಳಗೊಂಡಂತೆ  ಮನೆಯ ಎಲ್ಲಾ ಸದಸ್ಯರು   ಶೌಚಾಲಯಗಳನ್ನು  ಶುಚಿಗೊಳಿಸುವ   ಕಷ್ಟ  ಯಾರಿಗೂ ಕಾಣೋಲ್ಲ .  ಕಸ್ತೂರಿ ಅಕ್ಕನ  ಜೊತೆ ಮಾತನಾಡುವಾಗ  ಈ ಅಂಶ ಬೆಳಕಿಗೆ ಬಂತು .  ಎಷ್ಟು ಓದಿದರೇನು   ಜ್ಞಾನವಿಲ್ಲದಿದ್ದರೆ  . 

೩] ಇನ್ನು ಉಳಿದುಕೊಂಡ  ಕೋಣೆಗಳನ್ನು   ನಾವು ಬಳಸಿಕೊಳ್ಳೋದು ನೋಡಿ ,  ಮಲಗಲು ನೀಡಿದ  ಹೊದಿಕೆಗಳನ್ನು  ವಿರೂಪ ಗೊಳಿಸುವಿಕೆ , ಮಲಗಿ ಎದ್ದ ನಂತರ   ಹಾಸಿಗೆ ಹೊದಿಕೆ ದಿಂಬುಗಳನ್ನು   ವ್ಯವಸ್ತಿತವಾಗಿ  ಇಡದೆ  ಇಷ್ಟ ಬಂದಂತೆ  ಬಿಸಾಡಿ ಬರುವುದು , ಇದನ್ನೂ ಸಹ ಕುಟುಂಬದ ಸದಸ್ಯರು  ಸರಿಪಡಿಸುವ ಕಾರ್ಯ ಮಾಡುತ್ತಾರೆ,  ಒಬ್ಬ ಅತಿಥಿ ಬಳಸಿದ  ಹೊದಿಕೆಗಳನ್ನು ತೆಗೆದು  ಶುಚಿಗೊಳಿಸಲು  ಎಷ್ಟು ಶ್ರಮ ಆಗುತ್ತೆ ಎಂಬುದನ್ನು  ಲೆಕ್ಕಿಸದೆ  ಪ್ರವಾಸಿಗಳು ಮನಸೋ ಇಚ್ಚೆ ನಡೆದುಕೊಳ್ಳುತ್ತಾರೆ , 

೪] ಕೆಲವೊಮ್ಮೆ  ಅತಿಥಿಗಳ ರೂಪದಲ್ಲಿ ಬಂದವರು  ಕೆಲವು ವಸ್ತುಗಳನ್ನು ತಮ್ಮದೆಂಬಂತೆ  ಕದ್ದು ಹೋಗುವುದೂ ಉಂಟು,  ಮಾಲ್ಗುಡಿಡೇಸ್  ಚಿತ್ರೀಕರಣ ಸಮಯದಲ್ಲಿ  ಬಂದ  ಕೆಲವು  ವ್ಯಕ್ತಿಗಳು  ಈ ಮನೆಯ  ಅಮೂಲ್ಯ ವಸ್ತುಗಳನ್ನು   ಕದ್ದು ಹೋಗಿದ್ದಾರೆ .ಅಂದಿನಿಂದ ಈ ಮನೆಯಲ್ಲಿ ಚಿತ್ರೀಕರಣ ಮಾಡುವವರಿಗೆ  ಅವಕಾಶ  ನೀಡಿಲ್ಲ . 

೫] ಈ ಮನೆಯಲ್ಲಿ  ಕಸ್ತೂರಿ ಅಕ್ಕನ  ನಿಯಮಗಳಿವೆ  ಇಲ್ಲಿ ಬರುವವರು  ಬೇರೆ ಅತಿಥಿಗಳಿಗೆ ತೊಂದರೆ ಆಗದಂತೆ ನಡೆದು ಕೊಳ್ಳಬೇಕು , ಮಾಂಸಾಹಾರ , ಮದ್ಯ ಕುಡಿದು ಬರುವುದು ,  ಬೀಡಿ  ಸಿಗರೆಟ್ , ಸೇವನೆ  ಮಾಡುವಂತಿಲ್ಲ , ಆದರೆ ಕೆಲವರು  ಈ ನಿಯಮ ಮುರಿಯಲು ಪ್ರಯತ್ನಿಸಿ ವಿಫಲ ರಾಗುತ್ತಾರೆ .

೬]  ಮಾಲ್ಗುಡಿಡೇಸ್  ಚಿತ್ರೀಕರಣ ಆದ ಕಾರಣ ಈ ಮನೆಗೆ ಮಾಲ್ಗುಡಿ ಮನೆ ಅಂತಾ  ಕೆಲವರು ನಾಮ ಕರಣ ಮಾಡಿದ್ದಾರೆ  ಆದರೆ  ಸುಮಾರು ನಲವತ್ತು   ವರ್ಷಗಳಿಂದ   ಆತಿಥಿ ದೇವೋಭವ  ಎಂದಿರುವ  ಕಸ್ತೂರಿ ಅಕ್ಕನ  ಮನೆ ಎಂಬುದಾಗಿ ಕರೆಯದೆ  ಅವರ ವ್ಯಕ್ತಿತ್ವಕ್ಕೆ ಅವಮಾನ ಮಾಡುವ  ಪ್ರವಾಸಿಗರಿದ್ದಾರೆ . 

೭] ಹಣಕ್ಕಾಗಿ  ವ್ಯವಹಾರ ಮಾಡದೆ  ಪ್ರವಾಸಿಗರನ್ನು ಸುಲಿಗೆ ಮಾಡದೆ  ಅತಿಥಿಗಳ ಸೇವೆ ಮಾಡಿ ಕೊಟ್ಟಷ್ಟನ್ನು ಪ್ರೀತಿಯಿಂದ  ಪಡೆಯುವ  ಇವರ  ಈ ಕಾಯಕವನ್ನು  ಹೆಚ್ಚಿನ  ನ್ಯಾಯಬದ್ದವಾದ  ಮೊಬಲಗು ನೀಡಿ ಪ್ರೋತ್ಸಾಹಿಸದೆ   ಹಾಲು ಕೊಡುವ  ಹಸುವಿನ ಕೆಚ್ಚಲನ್ನು ತಿನ್ನಲು  ಪ್ರವಾಸಿಗರಾದ ನಾವು ಮುಂದಾಗಿದ್ದೇವೆ ,

೮] ಕಸ್ತೂರಿ ಅಕ್ಕಾ, ಪ್ರತಿಯೊಂದನ್ನೂ   ಖರೀದಿಸಿ ತರಬೇಕು,  ಅತಿಥಿಗಳಿಗೆ  ಉಣ್ಣಲು ನೀಡುವ  ಊಟ ತಿಂಡಿಗೆ  ಸಾಮಗ್ರಿಗಳನ್ನು  ಹಣ ನೀಡಿಯೇ  ತರಬೇಕು,  ಬಿಟ್ಟಿ ಯಾಗಿ ಏನೂ ಸಿಗಲ್ಲಾ  ಆದ್ರೆ  ನಾವು ಇದನ್ನು ತಿಳಿಯದೆ  ಮಾಡುತ್ತಿರುವ ಕಾರ್ಯ ನಮ್ಮ ನಾಗರೀಕತೆಯ  ಮೌಲ್ಯದ  ಪರಿಚಯ ಮಾಡುತ್ತಿದೆ


ಕಾಯಕವೇ ಕೈಲಾಸ  ಈ ಕಸ್ತೂರಿ ಅಕ್ಕನಿಗೆ


ಹೀಗೆ ಕಸ್ತೂರಿ ಅಕ್ಕನ ಜೊತೆ ಮಾತನಾಡುತ್ತಾ  ಅವರ ಬವಣೆಗಳನ್ನು ಕೆದಕುತ್ತಾ  ಅಲ್ಲಿನ ಪ್ರವಾಸಿಗರ ವರ್ತನೆ ಗಮಸಿಸುತ್ತಾ  ಪ್ರವಾಸಿಗರಾದ ನಮ್ಮ  ನಡತೆಯಬಗ್ಗೆ ನಾಚಿಕೆ ಪಟ್ಟುಕೊಂಡೆ ,  ಕಸ್ತೂರಿ ಅಕ್ಕ  ಮಾತಿನ ನಡುವೆ  ಹೀಗೆ ಹೇಳಿದ್ರೂ  ದಯವಿಟ್ಟು ಯಾವ ಪ್ರವಾಸಿಗರಿಗೂ ನೋವಾಗುವುದು ಇಷ್ಟ ಇಲ್ಲಾ  ಅಂತಾ,  ಆದರೆ ಪ್ರವಾಸಿಗರಾದ ನಮಗೆ  ಅವರ  ಆತಿಥ್ಯಕ್ಕೆ ತಕ್ಕ ಮರ್ಯಾದೆ ಕೊಡೊ  ಬುದ್ದಿ ಇಲ್ವಲ್ಲಾ  ಅನ್ನೋ ಯೋಚನೆ ಬಂತು .   ಆ ಮನೆಯಲ್ಲಿ ನನ್ನ ವಾಸ್ತವ್ಯ  ಪೂರ್ಣಗೊಂಡು  ಪ್ರವೀಣ್  ವಿವಾಹ ಕಾರ್ಯಕ್ಕೆ ತೆರಳಬೇಕಾದ ಕಾರಣ   ಕಸ್ತೂರಿ ಅಕ್ಕನ  ಆಶೀರ್ವಾದ ಪಡೆದು ಅವರ ಮನೆಯ ಎಲ್ಲರಿಗೂ ವಂದನೆ  ತಿಳಿಸಿ  ನನಗೆ ಸರಿ ಎನ್ನಿಸಿದ ಮೌಲ್ಯ ನೀಡಿ ಬಂದೆ , ಅಕ್ಕಾ ನಿಮ್ಮ ಈ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲಾರೆ  ಅನ್ನುತ್ತಾ   ಮೌಲ್ಯ ನೀಡಿದೆ  ಅಯ್ಯೋ  ಅದ್ಯಾವ ಮಾತು ಅನ್ನುತ್ತಾ ಪ್ರೀತಿಯಿಂದ ಸ್ವೀಕರಿಸಿ ಹಾರೈಸಿದರು . ಮನೆಯಿಂದ ಹೊರಗೆ ಬರುತ್ತಾ   ಕ್ಷಮಿಸಿ ಕಸ್ತೂರಿ  ಅಕ್ಕಾ  ನಮಗೆ ನಿಮ್ಮ ಪ್ರೀತಿಯ  ಆತಿಥ್ಯ ಪಡೆಯುವ  ಅರ್ಹತೆ ಇಲ್ಲಾ ಎಂಬ ಮಾತುಗಳು ಮನದಲ್ಲಿ ಮೂಡಿತು .



 ಕಸ್ತೂರಿ ಅಕ್ಕನ  ಅಳಿಯ  ಶ್ರೀ  ರವಿ ಕುಮಾರ್  


ದಯವಿಟ್ಟು ಗೆಳೆಯರೇ ಆಗುಂಬೆಗೆ ಹೋದರೆ  ದೊಡ್ಡ ಮನೆ ಊಟ ಮಾಡಿ ಕಸ್ತೂರಿ ಅಕ್ಕನ  ಕೈ ರುಚಿಯನ್ನು ಸವಿಯಲು ಮರೆಯಬೇಡಿ , ಆದರೆ  ಅವರ ಪ್ರೀತಿಯ  ಆತಿಥ್ಯಕ್ಕೆ  ತಕ್ಕ ಮರ್ಯಾದೆ ನೀಡಿ  ಒಳ್ಳೆಯ ಮೌಲ್ಯ  ನೀಡಿ ಬನ್ನಿ . ಇಂತಹ ಜನರನ್ನು  ಕಳೆದುಕೊಂಡರೆ  ನಮ್ಮ ನಾಡಿನ  ಒಂದು ಒಳ್ಳೆಯ ಸಂಸ್ಕೃತಿ ಕಳೆದುಕೊಂಡಂತೆ  ಅಲ್ವಾ.?

22 comments:

ರವಿ ತಿರುಮಲೈ said...

ನಿಮ್ಮ ಈ ಕಥನ ಓದಿ ಈಗಿಂದೀಗಲೇ ಆಗುಂಬೆಗೆ ಹೋಗಬೇಕೆನ್ನುವ ಮನಸ್ಸಾಗುತ್ತಿದೆ ಬಾಲು. ಇರಲಿ ಮಳೆಗಾಲದ ನಂತರ ನನ್ನ ಶ್ರೀಮತಿಯೊಡನೆ ಹೋಗುವಾಗ ನಿಮ್ಮನ್ನೂ ಕರೆಯುತ್ತೇನೆ ಬನ್ನಿ ಒಂದಾಗಿ ಹೋಗಿ ಕಸ್ತೂರಿ ಅಕ್ಕನೊಡನೆ ಎರಡು ದಿನ ಇದ್ದು ಬರುವ. ನಮಸ್ಕಾರ

ಸೀತಾರಾಮ. ಕೆ. / SITARAM.K said...

Athithigala avantara narmikavaagi tilisiruvadara hinde kasturiakkananthavara niswartha aeve parichasiyiddakke dhanyavàada balanna

Harini Narayan said...

ಅತಿಥಿಯೇ ಮನೆಯದೇವರು ಎಂಬ ಮನಸ್ಸಿಟ್ಟು ದುಡಿಯುತ್ತಿರುವ, ಮುಗ್ಧವಾಗಿ ಮನ ಬಿಚ್ಚಿ ಕಷ್ಟ ಸುಖ ಹೇಳಿಕೊಂಡ ಕಸ್ತೂರಿ ಅಮ್ಮನಿಗೆ ಮೊದಲು ಶರಣು. ತಂಗುವ ಯಾತ್ರಿಕರು ತಾವೇ ತಿಳಿದುಕೊಂಡು ಅವರಿಗೊಂದು ಸಹಾಯ ಹಸ್ತ ನೀಡುವುದು ಅತ್ಯವಶ್ಯ. ಜಾತಿ ಹುಟ್ಟಿನಿಂದ ಬರುವುದಲ್ಲ ನಡತೆಯಿಂದ ಎಂಬಂತೆ, ಕಸ್ತೂರಿಯಮ್ಮನ ಘಮಲು ಎಲ್ಲೆಡೆಯೂ ಪಸರಿಸಲಿ ! 💐

Badarinath Palavalli said...

ಆತಿಥ್ಯ ಕೊಟ್ಟ ತಾಯ್ನೆಲವನ್ನೇ ಹಾಳುಗೆಡವುವ ಕೆಟ್ಟ ಹುಳುಗಳನ್ನು ಸಾಲಾಗಿ ನಿಲ್ಲಿಸಿ ಸರಿಯಾಗಿ ಝಾಡಿಸಿದ್ದೀರ ಬಾಲಣ್ಣ.
ಇಷ್ಟೇ ಅಲ್ಲ ತೀರ್ಥ ಕ್ಷೇತ್ರಗಳ ಕಲ್ಯಾಣಿ, ನದಿಗಳನ್ನು ಗಬ್ಬೆಬ್ಬಿಸಿ ಪ್ಲಾಸ್ಟಿಕ್ ಕಸ ಗುಡ್ಡೆ ಎಬ್ಬಿಸಿಯೇ ಬರುತ್ತಾರೆ!

ಆಗುಂಬೆಯ ಕಸ್ತೂರಿ ಅಕ್ಕನ ಮನೆ ನನ್ನಲ್ಲಿ ಪ್ರವಾಸದ ಆಸೆ ಹುಟ್ಟಿಸಿತು. ಅಗ್ಲಾ ಬಾರ್ ಆಗುಂಬೇ!

ಚಿತ್ರಗಳು ಇಷ್ಟವಾದವು.

Unknown said...

ನಾನು ಒಂದೆರಡು ಭಾರಿ ಮನೆಯವರೊಂದಿಗೆ ಆಗುಂಬೆಗ ಹೋಗಿದ್ದೆ,ಆದರೆ ದೊಡ್ಡಮನೆ ಕಸ್ತೂರಿಅಕ್ಕನ ಬಗ್ಗೆ ಗೊತ್ತಿರಲಿಲ್ಲ.ಅವರ ಬಗ್ಗೆ
ಎಷ್ಟು ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಬಾಲಣ್ಣ.ಎಷ್ಟು ಚೆಂದದ ನಿರೂಪಣೆ.ಓದುತ್ತಿದ್ದರೆ ಈಗಲೇ ಹೋಗಿ ಕಸ್ತೂರಿಅಕ್ಕ ಮತ್ತು ಅವರ
ಮನೆಯವರನ್ನೆಲ್ಲಾ ನೋಡಿ, ಅಲ್ಲಿ ಉಳಿದುಕೊಳ್ಳಬೇಕೆಂಬ ಆಸೆಯಾಗುತ್ತಿದೆ.ಅವರಂತವರ ಸಂತತಿ ಸಾವಿರವಾಗಲಿ.ಅಲ್ಲಿ ಪ್ರವಾಸಹೋಗಿ
ಎಲ್ಲವನ್ನೂ ಕುಲಗೆಡಿಸಿ ಬರುವ ಕೆಲ ವಿದ್ಯಾವಂತ ಪ್ರವಾಸಿಗಳಿಗೆ ಏನು ಹೇಳಬೇಕೋ ಗೊತ್ತಾಗ್ತಾ ಇಲ್ಲ.

manjunath said...

" ಕಸ್ತೂರಿ" ಆ ಹೆಸರೇ ಚೈತನ್ಯದಾಯಕವಾದದ್ದು ನಿಜಕ್ಕೂ ಬಹಳ ಸೊಗಸಾಗಿ ಅವರ ಆತಿಥಿ ಸತ್ಕಾರದ ವಿವರಣೆ ಒದಗಿಸಿದ್ದೀರಿ. ನಾವು ಎಷ್ಟು ಹೃದಯಹೀನರಾಗಿ/ಅನಾಗರೀಕರಾಗಿ ಬದಲಾಗಿದ್ದೀವೆ ಎನ್ನುವುದಕ್ಕೆ ಒಂದು ಉತ್ತಮ ನಿದರ್ಶನ ಒದಗಿಸಿದ್ದೀರಿ. ಮೋಸ ಮಾಡುವುದರಲ್ಲೂ ರಂಜನೆ ಪಡೆಯುವ ಗೀಳು ಹೆಚ್ಚಿದೆ (ಅದೂ ಹಣವಿದ್ದವರಿಗೂ) ಎಂಬುದು ವಿಷಾದನೀಯ

Unknown said...

ನಿಮ್ಮ ಲೇಖನ ಓದುತ್ತಿದ್ದರೆ ನಾವೂ ಭಾಗಿಗಳಾಗಿದ್ದೇವೇನೋ ಅನ್ನಿಸುತ್ತದೆ ಬಾಲಣ್ಣ... ಆ ಆತ್ಮೀಯತೆಯ ಪ್ರತೀಕ 'ಕಸ್ತೂರಿ 'ಅಕ್ಕನಿಗೆ ವಂದನೆಗಳು. ಇಲ್ಲಿ ತಂಗುವವರು ನಿಮ್ಮ ವಿಚಾರವನ್ನು ಗಮನದಲ್ಲಿರಿಸಿ ಎಚ್ಚರಿಕೆಯಿಂದ ನಡೆದುಕೊಳ್ಳುವುದನ್ನು ಕಲಿತು ಹೋಗಬೇಕು. ಎಲ್ಲವನ್ನೂ ಹಣದಿಂದಲೇ ಅಳೆಯುವ ಎಷ್ಟೋ ಜನರಿಗೆ ಗುಣದ ಮೌಲ್ಯ ಅರಿವಾಗದು. ವಿದ್ಯಾವಂತರ ಅನಾಗರಿಕ ನಡವಳಿಕೆ ಬಗ್ಗೆ ಛಾಟಿಯೇಟು ನೀಡಿದ್ದೀರ. ಇನ್ನಾದರೂ ಅರಿತು ಇತರರೂ ನಮ್ಮುಮಂತೇ ಎನ್ನುವ ಸತ್ಯ ಅರಿವಾಗಲಿ. ಡ

Joshi Vanishree said...

tumba chennagide lekhana. olle mahiti tilisikottiddakke hats off to you sir

ಸುಬ್ರಮಣ್ಯ said...

ಆಗುಂಬೆಗೆ ಸಮೀಪದಲ್ಲೇ ಇದ್ದರೂ ಈ ವಿಷಯ ನಮಗೆ ಗೊತ್ತಿರಲಿಲ್ಲ. ಅಂದಹಾಗೆ ಆಗುಂಬೆ ಕೆಲವು ದಶಕಗಳ ಹಿಂದೆ ತುಂಬಾ ಜನ ಓಡಾಟದ ಊರಾಗಿತ್ತು. ದಕ್ಷಿಣ ಕನ್ನಡಿಗರು ರಾಷ್ಟ್ರಾದ್ಯಂತ ಎಲ್ಲೇ ಇರಲಿ ಅವರು ಊರಿಗೆ ಬರಬೇಕಾದರೆ ಆಗುಂಬೆಗೆ ಬಂದೆ ಚಿಕ್ಕ ಬಸ್ ಗಳಲ್ಲಿ ಕಾದು ಘಾಟಿ ಇಳಿದು ಅನಂತರ ಬೇರೆ ಬಸ್ ಹಿಡಿದು ಊರಿಗೆ ಹೋಗಬೇಕಿತ್ತು. ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಿತ್ತು. ಅದನ್ನು ಇಂದು ಕಲ್ಪಿಸಿಕೊಳ್ಳಲು ಅಸಾದ್ಯ!!! ದಕ್ಷಿಣ ಕನ್ನಡ ಹಾಗೂ ಘಟ್ಟದ ಮೇಲಿನ ಭಾಗಗಳನ್ನ ಜೋಡಿಸುವ ಬೇರೆ ಘಾಟಿಗಳು ಇರಲಿಲ್ಲ.

prashasti said...

ಅವರ ಮನೆಗೆ ಹೋಗಿ ಊಟ ಮಾಡಿ, ಅವರನ್ನೆಲ್ಲಾ ಮಾತಾಡಿಸಿ, ಒಂದಿಷ್ಟು ಫೋಟೋಗಳನ್ನು ತೆಗೆದ ಖುಷಿಯ ನನಗೆ, ನಮ್ಮ ನಾಡಲ್ಲಿ ಇಂತಹ ಅನ್ನಪೂರ್ಣೆಯರು ಇನ್ನೂ ಇದ್ದಾರಲ್ಲಾ ಅಂತ ಖುಷಿಯಾಗಿತ್ತು. ಸಂಜೆ ಬರ್ತೀರಲ್ಲಾ, ಆಗ್ಲೇ ಕೊಡಿ, ಈಗ ಬೇಡ ಅಂತ ಒಂದು ರೂಪಾಯನ್ನೂ ಇಸ್ಕೊಳ್ಳದಷ್ಟು ವಿಶ್ವಾಸದವ್ರು ಈ ಕಾಲದಲ್ಲೂ ಇದ್ದಾರಾ ಅಂತ ಹೃದಯ ತುಂಬೂ ಬಂದಿತ್ತು. ಆದರೆ ಅಲ್ಲಿಗೆ ಬರೋ ಜನ ಈ ರಂಜಿಗೆ ಅದ್ವಾನಗಳನ್ನೆಬ್ಬಿಸುತ್ತಾರಾ ಅಂತ ಅಲ್ಲಿ ರಾತ್ರೆ ಉಳಿಯದ ಕಾರಣ ಗೊತ್ತಾಗಿರಲಿಲ್ಲ :-( :-( ಸಖತ್ ಬೇಜಾರಾಗುತ್ತಿದೆ. ಇನ್ನಾದರೂ ಅಲ್ಲಿಗೆ ಹೋಗೋ ಜನ ಇದನ್ನು ಓದಾದ್ರೂ ತಿದ್ದಿಕೊಳ್ಳಲೆಂಬ ವಿಶ್ವಾಸದಲ್ಲಿ..

shivu.k said...

ಬಾಲು ಸರ್: ಕಸ್ತೂರಿ ಅಕ್ಕನ ದೊಡ್ಡ ಮನೆಯ ಪ್ರೀತಿ ತುಂಬಿದ ಅತಿಥ್ಯ ಮತ್ತು ಅದಕ್ಕೆ ಪ್ರವಾಸಿಗರು ತದ್ವಿರುದ್ಧವಾಗಿ ನಡೆದುಕೊಳ್ಳುವ ರೀತಿಯನ್ನು ಓದಿದಾಗ ಮನಸ್ಸಿಗೆ ಬೇಸರವಾಯಿತು. ಯುವ ಜನರು ತಿದ್ದಿಕೊಳ್ಳುವುದು ತುಂಬಾ ಇದೆ ಅನ್ನಿಸಿತು. ಮೊದಲೇ ಹೋಗುವ ಪ್ಲಾನ್ ಮಾಡಿದ್ದರೂ ನಾನು ಅನಿವಾರ್ಯ ಕಾರಣಗಳಿಂದ ಪ್ರವೀಣ್ ಮದುವೆಯನ್ನು ತಪ್ಪಿಸಿಕೊಂಡೆ. ನಿಮ್ಮ ಲೇಖನವನ್ನು ಓದಿದ ಮೇಲೆ ಆಗುಂಬೆಗೆ ಮತ್ತು ಕಸ್ತೂರಿ ಅಕ್ಕನ ದೊಡ್ಡ ಮನೆಗೆ ಹೋಗಬೇಕೆನಿಸಿದೆ...

ಚಿನ್ಮಯ ಭಟ್ said...

Chandada baraha saar....namagoo allige hodantaytu ....dhanyavadagalu :-):-)

B.N. said...

Wish I go there for a brief stay.The sad & deplorable acts of irrisponsible visitors , misbehaviours, creating nuisance are even seen among educated but arrogant class of Indians. Time we imbibe something good from the Westerners when it comes to politeness, civic sense & humility.Indeed you have given an enchanting picture of the lady doing selfless service with out a murmur.Ofcourse she is an extinct/ endangered breed to say the least

gururaja said...

ಘಟ್ಟದಕಡೆ ಕಸ್ತೂರಿ ಅಮ್ಮ ಅತಿಥಿ ಸೇವೆಯಲ್ಲೇ ಪರಿಮಳ ಬೀರುತಿದ್ದಾರೆ.

Srikanth Manjunath said...

ಪ್ರೀತಿ ತುಂಬಿರುವ ತಾಣದಲ್ಲಿ ಸ್ವಾರ್ಥ ಎನ್ನುವ ಪದಕ್ಕೆ ಜಾಗವಿರೋಲ್ಲ
ತಲೆಮಾರುಗಳಿಂದ ಮೊದಲಗೊಂಡ ಅತಿಥಿ ಸತ್ಕಾರಕ್ಕೆ ಸುಂದರ ಭಾಷ್ಯ ಕೊಟ್ಟ ಕಸ್ತೂರಿ ಮೇಡಂ ಅವರಿಗೆ ಮತ್ತು ಅವರ ಮನೆತನಕ್ಕೆ ಸಲಾಮು.

ಒಂದು ಅಂಗಡಿಯಲ್ಲಿ ಹಳೆಯ ಫ್ರಿಡ್ಜ್ ಇತ್ತು.. ಅಂಗಡಿಯವರಿಗೆ ಬೇಸರವಾಗಿ ಅದನ್ನು ಹೊರಗೆ ಇಟ್ಟು.. ಇದನ್ನು ಉಚಿತ ಕೊಡಲಾಗುತ್ತದೆ ಯಾರೂ ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂದು ಫಲಕವನ್ನು ಹಾಕಿದ್ದರು.

ಒಂದು ತಿಂಗಳಾದರೂ ಯಾರೂ ತೆಗೆದುಕೊಳ್ಳಲ್ಲಿಲ್ಲ.. ಅಲ್ಲಿದ್ದ ಕಸ ಗುಡಿಸುವ ಹುಡುಗ.. ಒಂದು ಉಪಾಯ ಹೇಳಿದ...

ಮಾರನೆ ದಿನವೇ ಆ ಫ್ರಿಡ್ಜ್ ಅಲ್ಲಿ ಇರಲಿಲ್ಲ ರಾತ್ರೋ ರಾತ್ರಿ ಕಳುವಾಗಿತ್ತು..
.. ಅಲ್ಲಿದ್ದ ಫಲಕ "ಇದರ ಬೆಲೆ ೧೦೦೦..ಚೆನ್ನಾಗಿದೆ".. ಅನಾಥವಾಗಿ ನಗುತ್ತಿತ್ತು..

ಹಾಗೆಯೇ ಉಚಿತ ಎಂದಾಗ ಅದಕ್ಕೆ ಬೆಲೆ ಕೊಡುವುದಿಲ್ಲ ಹಾಗೆಯೇ ಅದರ ಮೌಲ್ಯ ಕೆಳಗಿಳಿಸಿಬಿಡುತ್ತಾರೆ ಅವರ ಮನದಲ್ಲಿ..

ದೊಡ್ಡ ಮನೆಯಲ್ಲಿಯೂ ಕೂಡ ಹಾಗೆ.. ಅವರ ಅತಿಥಿ ಸತ್ಕಾರಕ್ಕೆ ಮೌಲ್ಯ ಕಟ್ಟಲಾಗುವುದಿಲ್ಲ.. ಆದರೆ ಅದರ ಉಪಯೋಗ ಪಡೆದುಕೊಳ್ಳುವ ಮಂದಿ ಅದಕ್ಕೆ ಬೆಲೆಯನ್ನು ಕೊಡುವುದಿಲ್ಲ..

ಪ್ರಜಾವಾಣಿ ಪತ್ರಿಕೆಯಲ್ಲಿ ಓದಿದ್ದು "ಮಾಲ್ಗುಡಿ ಡೇಸ್" ಚಿತ್ರೀಕರಣ ಸಮಯದಲ್ಲಿ ಅನೇಕ ಹಳೆಯಕಾಲದ ವಸ್ತುಗಳು ಮಾಯವಾಗಿದ್ದೆ ಅಲ್ಲದೆ.. ಅನೇಕ ಪುರಾತನ ವಸ್ತುಗಳು ಮುರಿದು ಒಡೆದು ಹಾಳಾಗಿದ್ದವು.. ಪ್ರತಿಯೊಂದು ಯಶಸ್ಸಿನ ಹಿಂದೆ
ಈ ರೀತಿಯ ನೋವುಗಳು ಇದ್ದೆ ಇರುತ್ತವೆ..

ಮಂದಿಗಳು ಎಚ್ಚರಗೊಳ್ಳಬೇಕು.. ಬೆಲೆ ಕೊಡುವುದನ್ನು ಕಲಿಯಬೇಕು..

ಮನಸು said...

ಬಾಲಣ್ಣ ನೀವು ಹೇಳಿದ್ದು ಸರಿ ಹೊರಗಡೆ ರೆಸಾರ್ಟ್ ಗಳಲ್ಲಿ ಬೇಕಾದಷ್ಟು ದುಡ್ಡು ಕೊಟ್ಟು ಬರ್ತಾರೆ ಇಂತಹ ಕಡೆ ಜನ ಹಿಂದು-ಮುಂದು ನೋಡ್ತಾರೆ. ಈ ಲೇಖನ ನೋಡಿ ನಾವು ಕಸ್ತೂರಿ ಅಕ್ಕನನ್ನು ನೋಡಬೇಕೆನಿಸಿದೆ.

ದಿನಕರ ಮೊಗೇರ said...

Nimma barahakke tumbaa shaktiyide. Naanantoo KhanDita hoguttene.

ಮನಸಿನಮನೆಯವನು said...

ಅತಿಥಿ ಸರ್ಕಾರದಲ್ಲಿ ಅವರಿಗೆ ಇನ್ನೂ ಸಾವಿರಸಾವಿರಪಟ್ಟು ಸುಖಸಿಗಲಿ. ಇರುವ ದುಃಖಗಳೆಲ್ಲ ಮಾಯವಾಗಲಿ. ಅವರ ಮನದ ತೃಪ್ತಿಗೆ ನೋವುಂಟಾಗದಿರಲಿ. ಅಂತಹವರು ಆದರ್ಶವಾಗಲಿ.

Unknown said...

Naanu maneyavaralla kandita hogi akka avarannu nodi barutteve, nammage ada sahayavannu maadi barutteve, idara bagge tilisidakke tumba dhanyavadagalu

ಜಲನಯನ said...

ಬಾಲು ಬಹಳ ಚನ್ನಾದ ಲೇಖನ. ಸ್ಥಳಗಳ, ಪ್ರವಾಸಿ ತಾಣಗಳ ಬಗ್ಗೆ ಬರೆಯುವ ನಿಮ್ಮ ಈ ಹವ್ಯಾಸ ಮತ್ತು ಅದನ್ನು ಬ್ಲಾಗಿಗರೊಂದಿಗೆ ಹಮ್ಚಿಕೊಳ್ಳುವ ಕಾತರ ಮೆಚ್ಚುವಂತಹುದು, ಇದನ್ನು ಪುಸ್ತಕವಾಗಿಸಿ.
ಅಂದಹಾಗೆ ಕಸ್ತೂರಿ ಅಕ್ಕನ ಬಗ್ಗೆ ತಿಳಿದು ಗೌರವ ಮೂಡಿತು ಆ ಅನ್ನದಾತೆಯ ಬಗ್ಗೆ. ನಿಜಕ್ಕೂ ಬಹಳವೇ ಕಾಳಜಿಯ, ಮಾನವತೆ ಮೆರೆವ ಗುಣ ಆ ತಾಯಿಯದು, ದೇವರು ಅವರಿಗೆ ಆಯುರಾರೋಗ್ಯ ಸಮೃಧ್ದಿ ನೀಡಲಿ,

Dr.D.T.Krishna Murthy. said...

ಬಾಲೂ ಸರ್; ಕಸ್ತೂರಿ ಅಕ್ಕನಂಥಹ ಮಹಾತಾಯಿಯವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.ನಮ್ಮಜನಗಳ ನಡವಳಿಕೆ ಬಗ್ಗೆ ಬೇಸರವಾಯ್ತು.

vijay bharadwaj said...

ನಿಮ್ಮ ಅನುಭವದ ಮಾತಗಳನ್ನು ಓದಿ ಬಹಳ ಸಂತೋಷವು ಆಯಿತು, ಜನಗಳ ನಡವಳಿಕೆಯಿಂದ ಬಹಳ ಬೇಸರವು ಆಯಿತು... ಇದೆ ಮೊದಲ ಭಾರಿ ನಾನು ಆಗುಂಬೆಗೆ ಹೋದೆ ಆದರೆ ಕಸ್ತೂರಿ ಅಕ್ಕನ ಮನೆಗೆ ಹೋಗುವ ಅವಕಾಶ ಸಿಗಲಿಲ್ಲ ಗೆಳೆಯರ ಬಳಗದ ನಿರಾಸಕ್ತಿ ನಾನು ಒಬ್ಬನಾದರು ಹೋಗಿ ಮಾತನಾಡಿ ಬರುವ ಮನೆಯನ್ನು ನೋಡಿಬರುವ ಅವಕಾಶ ಸಿಗದೆ ಹೋಯಿತು, ಆದರೆ ಈ ಭಾರಿಯಾದರು ಹೋಗಿ ಬರುವ ವ್ಯವಸ್ಥೆ ಮಾಡಿಕ್ಕೊಳ್ಳುವೆ , ನಿಮಗೆ ಕಸ್ತೂರಿ ಅಕ್ಕನನ್ನು ಕಂಡು ಮಾತನಾಡಿಸಿ ಸಮಯ ಕಳೆಯುವ ಅವಕಾಶವಾದರು ಸಿಕ್ಕಿತ್ತು, ನಾನು ಅದರಿಂದಲು ಸಹ ವಂಚಿತನಾದೆ