Wednesday, April 27, 2016

ಅನಾಥವಾಗಿ ಸಾವಿನ ಕದ ತಟ್ಟಿದ ಸಮಯ.........!!! ನನ್ ಕಥೆ ಭಾಗ ....02

 ಅದೃಷ್ಟ  ಇದ್ದರೆ  ಯಾರೋ ದಿಕ್ಕು ನಮಗೆ , ಇಲ್ಲದಿದ್ರೆ ....?ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "  ಅನ್ನುತ್ತಾ    ಹಾಗೆ    ಕಣ್ಣು ಮುಚ್ಚಿದೆ .   ಹಾಗಿದ್ರೆ    ವಾಸ್ತವವಾಗಿ  ಅಪಘಾತ ಹೇಗಾಯ್ತು, ನನಗೆ ಜೀವ  ಉಳಿಸಲು  ಹೆಣಗಾಡಿದವರು ಯಾರು ಯಾರು ಅನ್ನೋದು   ತಿಳಿದಿರಲಿಲ್ಲ,   ದೇಹಕ್ಕೆ ಚೈತನ್ಯ  ಬಂದ ಮೇಲೆ ಚನ್ನರಾಯ ಪಟ್ಟಣಕ್ಕೆ   ಹೋಗಿ    ಜಗಧೀಶ್ ಭೇಟಿ ಮಾಡಿ  ಮಾಹಿತಿ ಕಲೆಹಾಕಿ  ನನ್ನ ಅಪಘಾತದ  ಕಥೆ  ಹೇಗಿತ್ತು ಅನ್ನೋದನ್ನು ಅರಿತೆ,  ಬನ್ನಿ   ಅಪಘಾತ ಹೇಗಾಯ್ತು   ತಿಳಿಯೋಣ.


ಆಪತ್ತಿಗಾದ  ಪುಷ್ಪಕ ವಿಮಾನ 


ಚನ್ನರಾಯ ಪಟ್ಟಣದ  ಬಸ್ ನಿಲ್ಧಾಣದ   ಮುಂದೆ   ಹಾದುಹೋಗುವ   ಹಾಸನ  ಬೆಂಗಳೂರು   ರಾಷ್ಟ್ರೀಯ   ಹೆದ್ದಾರಿಯಲ್ಲಿ    ಮಧ್ಯಾಹ್ನ  ಸುಮಾರು ನಾಲ್ಕು ವರೆ  ಸಮಯದಲ್ಲಿ , ಒಬ್ಬ ವ್ಯಕ್ತಿ  ಬಸ್ ನಿಲ್ಧಾಣಕ್ಕೆ ಬರಲು  ರಸ್ತೆ  ದಾಟುತ್ತಿದ್ದಾನೆ,   ರಸ್ತೆಯಲ್ಲಿ   ಹೆಚ್ಚಿನ   ವಾಹನ ಸಂಚಾರ ಇರಲಿಲ್ಲ ,   ರಸ್ತೆ ಮಧ್ಯದಲ್ಲಿ   ಡಿವೈಡರ್   ಸಮೀಪ ಬರುತ್ತಿದ್ದಂತೆ    ಮೂರುಜನ  ಕುಳಿತಿದ್ದ ಯಾವುದೋ ಬೈಕ್ ಅಡ್ಡಾದಿಡ್ಡಿಯಾಗಿ   ರಾಂಗ್ ಸೈಡ್  ನಲ್ಲಿ ಚಲಿಸುತ್ತಾ ಬಂತು  ಹಿಂದಿನಿಂದ  ಗುದ್ದಿ ಸ್ವಲ್ಪ ದೂರ  ಎಳೆದು ಕೊಂಡು ಹೋಗಿದೆ.  ಅಷ್ಟರಲ್ಲಿ  ಜನರ ಗುಂಪು ಸೇರಿದೆ . ಅಲ್ಲೇ ಸ್ವಲ್ಪ ದೂರದಲ್ಲಿದ್ದ  ಮೊಬೈಲ್  ಶಾಪ್ ನಿಂದ   ಬಂದ   ಜಗಧೀಶ್  ಜನರ ಗುಂಪಿನೆಡೆಗೆ ಹೋಗಿ ನೋಡಿದಾಗ     ಯಾರೋ ಒಬ್ಬ  ರಕ್ತ   ಕಾರಿಕೊಂಡು ರಸ್ತೆಯಲ್ಲಿ   ಬಿದ್ದಿರುವುದು ಕಂಡು ಬಂದಿದೆ,   ತಕ್ಷಣವೇ   ಅಂಗಡಿಗೆ ಬಂದು      "ಗುರು ಯಾರೋ ಕುಡಿದು ಬಿದ್ದು    ಅಪಘಾತಕ್ಕೆ  ಒಳಗಾಗಿದ್ದಾನೆ  ವಿಪರೀತ   ರಕ್ತ  ಹೋಗ್ತಾ ಇದೆ   ಬದುಕೋದು ಕಷ್ಟಾ   ಅನ್ಸುತ್ತೆ"  ಅಂತಾ ಹೇಳಿ    ಅವರ ಗೆಳೆಯನಿಂದ  ಐದು ಸಾವಿರ ರುಪಾಯಿ  ಪಡೆದು   ಮತ್ತೆ  ಅಪಘಾತ ನಡೆದ ಸ್ಥಳಕ್ಕೆ  ಬಂದು  ಅಲ್ಲೇ ಸಿಕ್ಕ  ಒಂದು ಸರಕು ಸಾಗಣೆ ಆಪೆ ಆಟೋ  ನಿಲ್ಲಿಸಿ,   ಅಪಘಾತಕ್ಕೆ ಒಳಗಾದ  ವ್ಯಕ್ತಿಯನ್ನು   ಕೆಲವರ ಸಹಾಯದಿಂದ   ವಿಳಂಭ ಮಾಡದೆ   ಆಟೋ ದಲ್ಲಿ ಹಾಕಿ ಕೊಂಡು  ಚನ್ನರಾಯ ಪಟ್ಟಣದ   ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ . ತಕ್ಷಣವೇ ಸ್ಪಂದಿಸಿದ   ವೈಧ್ಯರು   ಪರೀಕ್ಷೆ ಮಾಡಿ   ಸಿ. ಟಿ. ಸ್ಕ್ಯಾನ್   ಮಾಡಿಸಲು   ಹೇಳಿದ್ದಾರೆ,  ಅಲ್ಲೇ ಇದ್ದ  ಸ್ಕಾನಿಂಗ್  ಸೆಂಟರ್ ನಲ್ಲಿ   ಅಪಘಾತದ ವ್ಯಕ್ತಿಯ   ದೇಹವನ್ನು ಸಂಪೂರ್ಣವಾಗಿ   ಸ್ಕ್ಯಾನ್ ಮಾಡಿಸಿ   ಅದರ  ವರಧಿಯ   ಆಧಾರದ ಮೇಲೆ  ಪ್ರಾಥಮಿಕ  ಚಿಕಿತ್ಸೆ ನೀಡಿ ,  ಮುಖದಲ್ಲಿ   ರಕ್ತ   ಸೋರುತ್ತಿದ್ದ  ಜಾಗಗಳಿಗೆ   ಹೊಲಿಗೆ ಹಾಕಿದ್ದಾರೆ .ಚನ್ನರಾಯ ಪಟ್ಟಣದಿಂದ ಮೈಸೂರಿಗೆ   ನನ್ನನ್ನು ಸಾಗಿಸಿದ ಆಂಬುಲೆನ್ಸ್ ಹೊಲಿಗೆ ಹಾಕಿದ ನಂತರ    ಜಗಧೀಶ್    ಹಾಗು ಅವರ ಮತ್ತೊಬ್ಬ ಗೆಳೆಯ   ಅಪಘಾತಕ್ಕೆ ಒಳಗಾದ  ವ್ಯಕ್ತಿ ಅರೆ ಪ್ರಜ್ಞಾವಸ್ಥೆ ಯಲ್ಲಿ ನೀಡಿದ ಮಾಹಿತಿಯಂತೆ   ದೂರವಾಣಿಯಲ್ಲಿ  ಅಪಘಾತಕ್ಕೆ ಒಳಗಾದ   ವ್ಯಕ್ತಿಯ  ಮನೆಯವರು , ಹಾಗು ಗೆಳೆಯರನ್ನು ಸಂಪರ್ಕಿಸಿ  ಮೈಸೂರಿನ   ಕಾಮಾಕ್ಷಿ   ಆಸ್ಪತ್ರೆಗೆ   ಚನ್ನರಾಯ ಪಟ್ಟಣ ದಿಂದ  ಆಂಬುಲೆನ್ಸ್  ನಲ್ಲಿ   ಸಾಗಿಸುತ್ತಾರೆ. ವಾಹನ ಚಲಿಸುವಾಗ  ಅರೆ ಪ್ರಜ್ಞಾವಸ್ತೆಯಲ್ಲಿದ್ದ   ವ್ಯಕ್ತಿ   ಕತ್ತು  ನೋವು ಅಂದ ಕಾರಣ  ಚನ್ನರಾಯ ಪಟ್ಟಣ ದಿಂದ ಮೈಸೂರಿನ ವರೆಗೂ   iodex  ನಿಂದ ಮಸಾಜ್  ಮಾಡುತ್ತಾ  ಮೈಸೂರಿನವರೆಗೆ   ಸಾಗಿಸಿದ್ದಾರೆ,  ಮೈಸೂರಿಗೆ ತಲುಪಿದ ಕೂಡಲೇ  ಕಾಮಾಕ್ಷಿ ಆಸ್ಪತ್ರೆಯಲ್ಲಿ   ಮೊದಲೇ ಕಾಯುತ್ತಿದ್ದ   ಕೆಲವರು ತುರ್ತು  ಚಿಕಿತ್ಸಾ ಘಟಕಕ್ಕೆ  ಆ ವ್ಯಕ್ತಿಯನ್ನು ಸಾಗಿಸುತ್ತಾರೆ.    ರಾತ್ರಿಯೆಲ್ಲಾ ಅಲ್ಲೇ ಕಾದಿದ್ದ  ಜಗಧೀಶ್  ಹಾಗು ಅವರ ಗೆಳೆಯರು    ಬೆಳಿಗ್ಗೆ  ವಾಪಸ್ಸು   ಚನ್ನರಾಯ ಪಟ್ಟಣ   ತಲುಪುತ್ತಾರೆ.


ಪ್ರಾಣ ಉಳಿಸಿದ   ಜಗಧೀಶ್ ಇವರೇ ಇದು ಜಗಧೀಶ್   ಹೇಳಿದ  ಅಪಘಾತದ ಕಥೆ , ನಂತರ  ಮೈಸೂರಿಗೆ ಬಂದಾಗ   ಆದ ಕಥೆ ಕೇಳಿ,  ನನಗೆ ಅಪಘಾತ ಆದಾಗ  ಚನ್ನರಾಯ ಪಟ್ಟಣದಿಂದ  ಮೈಸೂರಿಗೆ ಕರೆತರುವ ಮೊದಲು ಅಲ್ಲಿನ ವೈಧ್ಯರು   ನಾನು ಅರೆ ಪ್ರಜ್ಞಾವಸ್ಥೆಯಲ್ಲಿ ನೀಡಿದ ಮೊಬೈಲ್  ನಂಬರ್  ಗೆ ಫೋನ್ ಮಾಡಿ  ನನ್ನ ಗೆಳೆಯ  ಅನಿಲ್ ಹಾಗು ಅವನ ಅಲ್ಲಲ್ಲ   ನನ್ನ  ತಂಗಿ  ಡಾಕ್ಟರ್  ಸ್ನೇಹ ಶ್ರೀ  ಜೊತೆ ಸಮಾಲೋಚಿಸಿ  ಆಂಬುಲೆನ್ಸ್ ನಲ್ಲಿ  ಕಳುಹಿಸಿದ್ದಾರೆ.   ಆಂಬುಲೆನ್ಸ್ ಮೈಸೂರಿಗೆ   ಬರುವಷ್ಟರಲ್ಲಿ   ನನ್ನ ಪ್ರೀತಿಯ  ಈ ತಂಗಿ    ಕಾಮಾಕ್ಷಿ ಆಸ್ಪತ್ರೆಗೆ   ಬಂದು    ನ್ಯೂರೋ ಸರ್ಜನ್ , ಇ. ಎನ್. ಟಿ. ಸ್ಪೆಷಲಿಸ್ಟ್ , ಹಾರ್ಟ್  ಸರ್ಜನ್ , ಮುಂತಾದವರನ್ನು  ದೂರವಾಣಿ ಮೂಲಕ   ಸಂಪರ್ಕಿಸಿ, ರಾತ್ರೋ ರಾತ್ರಿಯೇ ಕರೆಸಿ  ಒಂದು ಕ್ಷಣವೂ   ವ್ಯರ್ಥವಾಗದಂತೆ    ನನಗೆ  ಚಿಕಿತ್ಸೆ  ದೊರಕಲು  ಸಹಕರಿಸಿ,  ರಾತ್ರಿಯೆಲ್ಲಾ   ನನಗೆ ಚಿಕಿತ್ಸೆ ಕೊಡಿಸಲು  ಓಡಾಡಿದ್ದಾಳೆ .

ಡಾಕ್ಟರ್   ಸ್ನೇಹಶ್ರೀ ತನ್ನ ಆನಾರೋಗ್ಯವನ್ನೂ   ಲೆಕ್ಕಿಸದೆ   ತಂಗಿಯ ಜೊತೆ ಬಂದಿದ್ದ ಅನಿಲ್ ಯಾವ ಜನ್ಮದ  ಋಣಾನುಬಂಧವೋ   ಕಾಣೆ  ಬಹಳಷ್ಟು ಸಹಾಯ ಮಾಡಿ     ಮರಳಿ ಜೀವದಾನ  ಮಾಡಿದರು ಎಲ್ಲರೂ ಸೇರಿ .  ಒಂದೆರಡು ದಿನ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು   ಡಿಸ್ಚಾರ್ಜ್  ನಂತರ ವೈಧ್ಯರ  ಸಲಹೆಯಂತೆ    ವಿಶ್ರಾಂತಿಗಾಗಿ ಮನೆಗೆ ಬಂದೆ ,  ಏಳಲು ಓಡಾಡಲು  ದೇಹದಲ್ಲಿ  ತ್ರಾಣ ವಿಲ್ಲ ,  ಎದ್ದು ನಿಂತರೆ ತಲೆಯೆಲ್ಲಾ   ಚಕ್ಕರ್  ಹೊಡೆಯೋದು ,  ಹಾಸಿಗೆಯೆ ನನ್ನ ಸಾಮ್ರಾಜ್ಯ ಆಯ್ತು.  ಓದಲು  ಆಗುತ್ತಿಲ್ಲ,  ಬರೆಯಲು ಆಗುತ್ತಿಲ್ಲ,   ಕಂಪ್ಯೂಟರ್  ಮುಂದೆ ಕೂರಲು   ಆಗುತ್ತಿಲ್ಲ, ಟಿ.ವಿ. ನೋದುವನ್ತಿಲ್ಲಾ ,   ಇಲ್ಲಾ  ಇಲ್ಲಾ   ಏನೂ     ಮಾಡುವಂತಿಲ್ಲ, ಅಂದ್ರೆ ಒಂತರಾ  ಬದುಕಿದ್ದೂ  ಪ್ರಯೋಜನ ಇಲ್ಲ ವೇನೋ ಅನ್ನಿಸಿತ್ತು,   ಆದರೆ ಮನದಲ್ಲಿ  ನನ್ನನ್ನು  ಉಳಿಸಿದ  ಜಗಧೀಶ್ ಗೆ  ಕೃತಜ್ಞತೆ ತಿಳಿಸಲು   ಆಗುತ್ತಿಲ್ಲಾ   ಎಂಬ ಕೊರಗು ಇತ್ತು,  ಅದೊಂದು ದಿನ    ಕಷ್ಟ ಪಟ್ಟು  ಕುಳಿತು,  ತಲೆ ನೋವಿದ್ದರೂ    ಲೆಕ್ಕಿಸದೆ  ನನ್ನ ಫೇಸ್ಬುಕ್  ಪುಟದಲ್ಲಿ  ಜಗಧೀಶ್ ಮಾಡಿದ  ಉಪಕಾರದ ಬಗ್ಗೆ ಬರೆದು ಕೃತಜ್ಞತೆ ಅರ್ಪಿಸಿದೆ . ಮೊಬೈಲ್ ನಲ್ಲಿ ಕರೆ ಮಾಡಿ  ಮಾತನಾಡಿ   ದೇಹಕ್ಕೆ ಚೈತನ್ಯ ಬಂದಮೇಲೆ ಬಂದು ಭೇಟಿ ಮಾಡುವುದಾಗಿ   ಹೇಳಿದೆ. ಆದರೂ  ಈ ಜಗಧೀಶ್ ಗೆ ನನ್ನನ್ನು  ಉಳಿಸಬೇಕೂ  ಅಂತಾ   ಯಾಕೆ ಅನ್ನಿಸಿತು ..?  ಎಂಬ ಪ್ರಶ್ನೆ    ಕಾಡುತ್ತಿತ್ತು.


ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?

Sunday, April 24, 2016

ಸರ್ ಜಿ ನಾಳೆ ಚನ್ನರಾಯಪಟ್ಟಣಕ್ಕೆ ನೀವ್ ಬರ್ತೀರಾ ಅಷ್ಟೇ ..........!!! ನನ್ ಕಥೆ ಭಾಗ ....01

ಎಲ್ಲರಿಗೂ ನಮಸ್ಕಾರ , ಸುಮಾರು ಆರು ತಿಂಗಳ ನಂತರ  ಬ್ಲಾಗ್ ಬರಹ  ಶುರುಮಾಡಿದ್ದೇನೆ , ನನ್ನದೇ ಆದ ವೈಯಕ್ತಿಕ  ಕಾರಣಗಳು,  ಬ್ಲಾಗ್ ಬರೆಯಲು  ಆಸೆ ಇದ್ದರೂ ಬರೆಯಲಾಗದ   ಅನಿವಾರ್ಯತೆ , ಇತ್ಯಾದಿಗಳ   ಕಾರಣದ ಜೊತೆಗೆ ಸೋಮಾರಿತನ ,  ಹಾಗಾಗಿ ಫೆಸ್ ಬುಕ್ ಲೋಕದಲ್ಲೇ  ಮುಳುಗಿ ಹೋಗಿದ್ದೆ , ಅಂತೂ ಇಂತೂ ಬರೆಯಲು  ಮನಸು  ಬಂದು ಬರೆಯಲು ಶುರು ಮಾಡಿದ್ದೇನೆ . ಮನಸ್ಸು  ವ್ಯಸನ ಮುಕ್ತವಾಗಿ   ಪಕ್ಷಿ ಯಂತೆ   ಗರಿಬಿಚ್ಚಿ   ಹಾರಾಡಿ   ಬರೆಯಲು ಪ್ರೇರಣೆ ನೀಡಿದೆ.


ಮನಸೆಂಬ  ಪಕ್ಷಿ  ಗರಿಬಿಚ್ಚಿದೆ 


ಈ ಬ್ಲಾಗ್ ಲೋಕವೇ ಹಾಗೆ  ಬರೆಯುವ ಕಿಚ್ಚನ್ನು  ಸದಾ ಹೊತ್ತಿಸಿಯೇ  ಇರುತ್ತದೆ, ಅದಕ್ಕೆ ತಕ್ಕಂತೆ  ತಿದ್ದಿ ತೀಡುವ   ಬ್ಲಾಗ್ ಗೆಳೆಯರ   ದಂಡು,  ಇನ್ನು ಇವರೋ   ನಮ್ಮ  ಒಡಹುಟ್ಟಿದವರಲ್ಲಾ, ಜೊತೆಯಲ್ಲಿ ಓದಿದವರಂತೂ  ಅಲ್ಲವೇ ಅಲ್ಲಾ , ಕೆಲಸದಲ್ಲಿನ   ಗೆಳೆಯರೇ  ಉ  ಹೂ  ಅದೂ ಅಲ್ಲಾ  , ಆದರೆ   ಅಕ್ಷರದ ಮೂಲಕ   ಬ್ಲಾಗ್ ಲೋಕದಲ್ಲಿ ಪರಿಚಿತರಾಗಿ    ನನ್ನ ಹೃದಯದಲ್ಲಿ   ನೆಲೆಸಿ   ನಮ್ಮವರೇ   ಆಗಿಬಿಟ್ಟಿದ್ದಾರೆ,  ಒಬ್ಬರೇ ಇಬ್ಬರೇ   ಹೇಳುತ್ತಾ ಹೋದರೆ  ಹನುಮನ   ಬಾಲವಾದೀತು ,   ಆದರೂ ಎಲ್ಲರೂ   ಒಂದಲ್ಲಾ  ಒಂದು ರೀತಿ ನನ್ನ ಜೀವನಕ್ಕೆ ಸ್ಪೂರ್ತಿ  ತುಂಬಿರುವುದಂತೂ ನಿಜಾ .

ಇಂತಹ ಗೆಳೆಯರ ಲಿಸ್ಟ್  ನಲ್ಲಿ ಒಬ್ಬರಾದ   ನಮ್ಮ ಶ್ರೀ ಕಾಂತ್  ಮಂಜುನಾಥ್     ಅಂದು ರಾತ್ರಿ ದೂರವಾಣಿ ಮೂಲಕ  ಕರೆದಿದ್ದರು   "ಸರ್ ಜಿ   ನಾಳೆ ಚನ್ನರಾಯಪಟ್ಟಣಕ್ಕೆ  ನೀವ್ ಬರ್ತೀರಾ   ಅಷ್ಟೇ ..........!!!"   "ನಾಳೆ ಬೆಳಿಗ್ಗೆ  ೯ ಘಂಟೆಗೆ  ನಿಮ್ಮ ಮನೆಗೆ ಬರ್ತೇನೆ  ರೆಡಿ ಇರೀ, "  "ಅಲ್ಲಿಂದ  ನನ್ನ ಕಾರ್  ನಲ್ಲಿ ಚನ್ನರಾಯಪಟ್ಟಣಕ್ಕೆ  ಹೋಗೋಣ ", "ನೀವು ಸಪ್ಪಗೆ ಇರೋದನ್ನು ನೋಡೋಕೆ ಆಗ್ತಾ ಇಲ್ಲಾ  ," "ಕಳೆದ ವಾರ ನಿಮ್ಮನ್ನ ಭೇಟಿಯಾದಾಗ  ನೀವು  ಸಹಜವಾಗಿ ಇರಲಿಲ್ಲ ", "ಯಾಕೋ ನನಗೂ ನಿಮ್ಮ ನಗು  ಮಿಸ್ ಆಗ್ತಾ ಇತ್ತು, " "ಅದಕ್ಕೆ  ಅನ್ನಿಸಿತು ಫೋನ್ ಮಾಡಿದೆ , ನಾಳೆ ಹೇಗೂ ಸೆಕಂಡ್ ಸಾಟರ್ಡೆ , ರಜಾ ಇದೆ ನೀವು ಬನ್ನಿ ಒಂದು ಚೇಂಜ್  ಇರುತ್ತೆ   ನಿಮ್ಮ ಮನಸಿಗೂ ಹಿತವಾಗುತ್ತೆ"ಅಂತಾ  ಪ್ರೀತಿಯ ಆಹ್ವಾನ ನೀಡಿದರು,  ಯಾರಿಗೂ ಹೇಳದ  ನನ್ನ ನೋವನ್ನು  ಅವರು ಗಮನಿಸಿದ್ದು   ಅಚ್ಚರಿಯಾಯ್ತು,


ಚಿತ್ರ  ಕೃಪೆ  ಪ್ರದೀಪ್ ರಾವ್ 


 ಈ ನಮ್ಮ ಶ್ರೀಕಾಂತ್ ಮಂಜುನಾಥ್ ಹಾಗೆ  ಒಮ್ಮೆ ಗೆಳೆತನ  ಶುರು ಆದ್ರೆ ನಿಮ್ಮ ಮನಸನ್ನು ಸೀದಾ  ಹೊಕ್ಕಿಬಿಡುವ   ಸಹೃದಯಿ,   ಎಷ್ಟು ಹೊಗಳಿದರೂ   ಕಡಿಮೆ  ಇವರ ಬಗ್ಗೆ,  ಇನ್ನು ಈ ಯಪ್ಪನ  ಮಾತು ಕೇಳದೆ ಹೋದ್ರೆ   ನನ್ನ ಹುಟ್ಟಿದ ಹಬ್ಬಕ್ಕೆ ಯಾವ್ದಾದ್ರೂ  ದೇವರನ್ನು  ಕರೆದುಕೊಂಡು  ಬಂದು  ಲ್ಯಾಪ್ಟಾಪ್ , ಮೊಬೈಲ್ ಫೋನ್ , ಹೀಗೆ  ಏನಾದರೂ ಕೈಗೆ ಕೊಟ್ಟು, ಆ ದೇವರುಗಳ ಬಾಯಲ್ಲಿ  ನನ್ನ ಗುಣಗಾನ   ಮಾಡಿಸಿ    ಸೇಡು ತೀರಿಸಿಕೊಳ್ಳುವ   ಭೀತಿ ಕಾಡಿ ,  ಸರಿ ಶ್ರೀಕಾಂತ್ , ಬರ್ತೀನಿ ಆದ್ರೆ ಒಂದು ಕಂಡಿಶನ್   ನೀವು ಮೈಸೂರಿಗೆ ಬರೋದು ಬೇಡ , ನಾನೇ ಮೈಸೂರಿನಿಂದ   ಚನ್ನರಾಯ ಪಟ್ಟಣಕ್ಕೆ   ಬರುತ್ತೇನೆ  ಅಂತಾ   ಪೂಸಿ  ಹೊಡೆದು  ಒಪ್ಪಿಸಿದೆ. ಕಟ್ ಮಾಡಿದ್ರೆ  ಮಾರನೆಯದಿನ   ಮೈಸೂರಿನಿಂದ   ಚನ್ನರಾಯ ಪಟ್ಟಣದ  ಬಸ್ ಹತ್ತಲು   ಬಸ್ ನಿಲ್ದಾಣಕ್ಕೆ  ಬಂದಿದ್ದೆ.

ನನ್ನನ್ನು  ಚನ್ನರಾಯ ಪಟ್ಟಣಕ್ಕೆ  ಕರೆದುಕೊಂಡು  ಹೋದ  ಕೆಂಪು ಬಸ್ಸು 


ಯಾರ್ರೀ   ಚನ್ನರಾಯಪಟ್ಟಣ   ಅಂತಾ  ಕಂಡಕ್ಟರ್  ಕೂಗ್ತಾ ಇದ್ದರು,  ಆದರೂ ಈ ಬಸ್ಸು ಹತ್ತಲು ಮನ ಹಿಂಜರಿಯುತ್ತಿತ್ತು,  ಬೇರೆ ಯಾವ್ದಾದ್ರೂ   ಬಸ್ಸು ಇದ್ಯಾ ಅಂತಾ   ವಿಚಾರಿಸಿದೆ, ಸಧ್ಯಕ್ಕೆ   ಯಾವ್ದೂ  ಇಲ್ಲಾ  ಅಂದರು  ಅಲ್ಲಿದ್ದ ಟೀ.ಸಿ. , ಇನ್ನೇನು  ಬಸ್ಸು ಹತ್ತಿ ಮಲಗಿ ಬಿಡೋಣ ಅಂತಾ ಲೆಕ್ಕ ಹಾಕಿ    ಟಿಕೆಟ್  ಪಡೆದು ಬಸ್ಸು  ಹತ್ತಿ ಕಿಟಕಿ ಪಕ್ಕ ಕುಳಿತೆ,  ಮೈಸೂರು   ಬಸ್ ನಿಲ್ದಾಣ ಬಿಟ್ಟ ಬಸ್ಸು   ಸ್ವಲ್ಪ ದೂರ  ಬಂದಿತ್ತು, ಸಂತ  ಫಿಲೋಮಿನ  ಚರ್ಚ್  ಸಮೀಪದ ಸರ್ಕಲ್   ತಿರುವಿ ಬಲಕ್ಕೆ  ಹೊರಟಿತ್ತು ಅಷ್ಟೇ   ಧಡ್ ಅಂದ ಶಬ್ದ   , ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ   ಡ್ರೈವರ್ , ನಾವೆಲ್ಲರೂ ಇಳಿದು ನೋಡಿದ್ರೆ  ರಸ್ತೆ  ಪಕ್ಕದಲ್ಲಿ ನಿಲ್ಲಿಸಿದ್ದ    ಒಂದು ಸಿಟಿ ಬಸ್ಸು  ಈ ಬಸ್ಸು ಬರುವುದನ್ನು ಗಮನಿಸದೆ    ಚಲಿಸಿ,  ನಮ್ಮ ಬಸ್ಸಿನ  ಹಿಂಭಾಗದ  ಎಡ ಪಾರ್ಶ್ವಕ್ಕೆ  ಗುದ್ದಿತ್ತು, ಒಂದೆರಡು ಕ್ಷಣ ಮುಂಜೆ  ಈ ಬಸ್ಸು ಚಲಿಸಿದ್ದರೆ   ನಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ   ತೊಂದ್ರೆ   ಆಗ್ತಾ ಇತ್ತು,   ಬಸ್ಸಿನಿಂದ ಇಳಿದು   ವಾಪಸ್ಸು ಹೊರತು ಹೋಗೋಣಾ  ಅಂತಾ  ಮನಸಾಯಿತು, ಆದ್ರೆ  ಇನ್ನೊಂದು ಮನಸು   ಅಯ್ಯೋ  ವಿಚಿತ್ರ ಕಣಯ್ಯ  ನೀನು  ಇಂತಹ ಸಣ್ಣ ಪುಟ್ಟ ಘಟನೆ ಆಗ್ತಾ ಇರುತ್ತೆ  ಇದನ್ನೆಲ್ಲಾ ಅಪಶಕುನಾ  ಅಂತಾ  ಭಾವಿಸಿದರೆ  ಜೀವನ ನಡೆಸೋದೆ ಕಷ್ಟಾ  ,  ನಡೀ. ನಡೀ, ಬಸ್ಸು ಹತ್ತು ಅಂತಾ ಪ್ರೇರೇಪಿಸಿಯ್ತು, ಅಷ್ಟರಲ್ಲಿ   ಎರಡೂ ಬಸ್ಸಿನವರು ರಾಜಿಯಾಗಿ  ನಮ್ಮ ಪಯಣ ಸಾಗಿತು.  ಬಸ್ಸಿನಲ್ಲಿ  ನಿದ್ದೆ ಹೊಡೆಯೋಣ  ಅಂದ್ರೆ ಕಿಟಕಿ ಗಾಜಿನ  ಗಡ   ಗಡ  ಸದ್ದಿಗೆ    ಸಾಧ್ಯವೇ ಆಗಲಿಲ್ಲ,  ಒಂದು ಕಡೆ ಬಿಸಿಲಿನ  ತಾಪ ಸಹ  ಕಾಡಿತ್ತು,  ಪ್ರಯಾಣ ಪ್ರಯಾಸವಾಗಿ ಚನ್ನರಾಯ ಪಟ್ಟಣ  ತಲುಪಿದೆ,

ಚನ್ನರಾಯ ಪಟ್ಟಣ  ಮುಖ್ಯ ರಸ್ತೆ 

 ಚನ್ನರಾಯ ಪಟ್ಟಣ  ಬಸ್ ನಿಲ್ದಾಣದಿಂದ  ಶ್ರೀ ಕಾಂತ್ ಗೆ  ಫೋನ್ ಮಾಡಿದ್ರೆ  , "ಸರ್ ಜಿ  ಇಲ್ಲೇ ಇದ್ದೇನೆ   ಬಸ್ ನಿಲ್ದಾಣದ ಮುಂದಿನ ಆಟೋ ಸ್ಟಾಂಡ್ ಬಳಿ ಬನ್ನಿ" ಅಂದ್ರು .   ಹೊರಗೆ ಬಂದ್ರೆ   ಮಾಲಿಕನ ಜೊತೆ ritz ಕಾರು ನಗುತ್ತಾ ನಿಂತಿತ್ತು.   ನಮ್ಮಿಬ್ಬರ ಪಯಣ  ಶುರು  ಆಯ್ತು, ಕಾರು  ಚನ್ನರಾಯ ಪಟ್ಟಣದ  ಕಡೆಯಿಂದ    ಹಾಸನ   ರಸ್ತೆಯಲ್ಲ್ಲಿ  ಸಾಗಿತ್ತು,  ಹೊಟ್ಟೆ   ಹಸಿವಾದ ಕಾರಣ   ದಾರಿಯಲ್ಲಿ  ಸಿಕ್ಕ   ಕಾಮತ್ ಹೋಟೆಲ್ ನಲ್ಲಿ ಭರ್ಜರಿ  ಊಟದ  ಬ್ಯಾಟಿಂಗ್  ನಡೆಸಿ ,  ಶ್ರೀಕಾಂತ್  ಕಸಿನ್   ಅವರ   ಆಶ್ರಮದ    ತೋಟಕ್ಕೆ   ಹೋದೆವು

.
ಭೂಮಿತಾಯಿಯ   ಹಸಿರ ಮಡಿಲಲ್ಲಿ  ಜ್ಞಾನಿಯ ಜೊತೆ ದಾರಿಯುದ್ದಕ್ಕೂ  ಈ ಕೀಟಲೆ ಶ್ರೀಕಾಂತ್  ಅವರ ಕಸಿನ್ ಗೆ  ಫೋನ್ ಮಾಡಿ ನಾನು ಒಬ್ಬನೇ ಬರ್ತಾ ಇರೋದಾಗಿ ಹೇಳ್ತಾ ಇದ್ದರು,     , ಕೊನೆಗೆ    ಶ್ರೀಕಾಂತ್   ನನ್ನ ಜೊತೆ  ಇಳಿದದ್ದನ್ನು ಕಂಡು  ಅವರ ಕಸಿನ್ ಅವರಿಗೆ ಬಹಳ ಖುಷಿಯಾಯಿತು,  ಪ್ರೀತಿಯ ಸ್ವಾಗತ , ಪರಸ್ಪರ ಪರಿಚಯ  ಆಯಿತು.  ಸಾಕಷ್ಟು ಮಾತು ಕಥೆ, ಅಲ್ಲಿ ನಡೆದಿದ್ದ   ದಾರ್ಮಿಕ ಚಟುವಟಿಕೆಗಳು ಹಾಗು ಕೃಷಿ ಚಟುವಟಿಕೆಗಳ  ಪರಿಚಯ ಮಾಡಿಕೊಟ್ಟರು . ನಾವೂ ಸಹ ಖುಷಿಯಿಂದ  ಇಡೀ ಜಮೀನಿನಲ್ಲಿ ಓಡಾಡಿದೆವು , ತೆಂಗಿನ  ಗಿಡಗಳಿಗೆ  ನೀರು ಹಾಯಿಸಲು  ಖುಷಿಯಿಂದ  ಹೊರಟೆವು. ಹಾಗೂ ಹೀಗೂ   ಸುಮಾರು ಹೊತ್ತು ಕಳೆದೆವು,  ಶ್ರೀಕಾಂತ್  ಕಸಿನ್ ಅವರಿಂದ  ಪ್ರೀತಿಯಿಂದ  ಬೀಳ್ಕೊಟ್ಟು   ಮತ್ತೆ ಚನ್ನರಾಯ ಪಟ್ಟಣಕ್ಕೆ ಬಂದೆವು,.   "ಸರ್ಜಿ    ಮೈಸೂರಿಗೆ  ಬಂದು ನಿಮ್ಮನ್ನು ಬಿಟ್ಟು ಬೆಂಗಳೂರಿಗೆ ಹೋಗ್ತೇನೆ"  ಅಂತಾ  ಶ್ರೀಕಾಂತ್   ಒತ್ತಾಯ ಶುರು ಮಾಡಿದ್ರು    ಆದರೆ ಮತ್ತೆ  ನನ್ನಿಂದ  ನಯವಾದ ನಿರಾಕರಣೆ,   ಹಾಗು ಹೀಗೂ ಹಗ್ಗ ಜಗ್ಗಾಡಿ ಒಲ್ಲದ ಮನಸಿನಿಂದ   ನನ್ನನ್ನು ಚೆನ್ನರಾಯ ಪಟ್ಟಣದ  ಬಸ್ ನಿಲ್ದಾಣದ  ಮುಂಭಾಗ  ರಸ್ತೆಯಲ್ಲಿ  ಇಳಿಸಿದರು, ಮತ್ತೊಮ್ಮೆ ಶ್ರೀಕಾಂತ್ ಗೆ  ಪ್ರೀತಿಯ  ಹಾರೈಕೆ  ಹೇಳಿದೇ , ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ, .............!!!  ಅಷ್ಟರಲ್ಲಿ        ...........!!!


 
 ಜೀವನದ  ದೋಣಿ  ಹೊಡೆತಕ್ಕೆ ಸಿಕ್ಕಿ   ಅಲುಗಾಡುತ್ತಿತ್ತು, ...........!