Sunday, November 4, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.13 ಕೊಳಗಿ ಬೀಸ್ ನಲ್ಲಿ ಕಂಡ ಸಾಗರದಾಚೆಯ ಇಂಚರ !!!!ಕೊಳಗಿ ಬೀಸ್  ದೇವಾಲಯ ಶಿರಸಿ  ಮಾರಿಕಾಂಬೆ ದೇವಾಲಯ ದರ್ಶಿಸಿ " ಕೊಳಗಿ ಬೀಸ "  ಕಡೆಗೆ ಹೊರಟೆವು. "ಕೊಳಗಿ ಬೀಸ್ " ಮೊದಲ ಬಾರಿಗೆ ಈ ಹೆಸರನ್ನು ಕೇಳಿದ್ದು  "ಸಾಗರಸಾಚೆಯ ಇಂಚರ"  ಬ್ಲಾಗಿನ  ಗೆಳೆಯ "ಗುರು ಮೂರ್ತಿ ಹೆಗ್ಡೆ "  ಅವರಿಂದ. ಸಹೋದರನ  ವಿವಾಹ ಕ್ಕೆ   ಪ್ರೀತಿಯ ಆಹ್ವಾನ  ನೀಡಿ  ಮದುವೆ  ಜರುಗುವ ಸ್ಥಳದ ಹೆಸರು "ಕೊಳಗಿ ಬೀಸ್ " ಎಂದು ಹೇಳಿ ಅದು ಶಿರಸಿ ಯಿಂದ ಕುಂದಾಪುರ ಕ್ಕೆ ತೆರಳುವ  ಮಾರ್ಗದಲ್ಲಿ  ಬರುವುದಾಗಿ  ತಿಳಿಸಿದ್ದರು.  ಅದುವರೆಗೂ ಇಂತಹ ಹೆಸರಿನ ಸ್ಥಳ ಇರುವುದಾಗಿ  ಅರಿಯದಿದ್ದ ನನಗೆ ಅಚ್ಚರಿಯಾಗಿತ್ತು. ಶಿರಸಿಗೆ ಬಂದ ನನಗೆ ನನ್ನ ಅತ್ತೆ ನಾಗಲಕ್ಷ್ಮಿ " ಕೊಳಗಿ ಬೀಸ " ದಲ್ಲಿ ಹನುಮನ ದೇಗುಲವಿದೆ ಎಂದಷ್ಟೇ ಹೇಳಿದ್ದಳು. "ಕೊಳಗಿ ಬೀಸ್ " ನಲ್ಲಿ ಏನಿದೆ ಎಂದು ಅರಿಯಲು ಮನಸು ಹಾತೊರೆಯುತ್ತಿತ್ತು.ಮನದ ಮಾತುಗಳನ್ನು ಅರಿತಂತೆ ಸಹೋದರ  ಹರ್ಷ  ತನ್ನ ಬೈಕ್  ವೇಗವಾಗಿ ಚಾಲನೆ ಮಾಡುತ್ತಿದ್ದ, ಸುಮಾರು ಇಪ್ಪತ್ತು ನಿಮಿಷ ಗಳ ಹಾದಿಯನ್ನು ಕ್ರಮಿಸಿ "ಕೊಳಗಿ ಬೀಸ್ "  ತಲುಪಿದೆವು.
ಕೊಳಗಿ ಬೀಸ್  ದೇವಾಲಯ.

ದೇವಾಲಯದ ಒಳ ಆವರಣದಿಂದ  ಕಾಣುವ ಮರದ ಸುಂದರ ಕಂಬಗಳು."ಕೊಳಗಿ ಬೀಸ್ " ದೇವಾಲಯಕ್ಕೆ ಪ್ರವೇಶ ಮಾಡುತ್ತಿದ್ದಂತೆ ನಮಗೆ ಕಂಡಿದ್ದು  ಹಸಿರ ಸಿರಿಯ ನಡುವೆ ವಿಶಾಲ ಪ್ರದೇಶದಲ್ಲಿ   ಸುಂದರ ಆಕೃತಿ ಹೊಂದಿದ ದೇವಾಲಯ ಹಾಗು ಅದರ ಪಕ್ಕದಲ್ಲಿ  ಸಮಾರಂಭ ನಡೆಸಲು ಅನುವಾಗುವಂತೆ ನಿರ್ಮಿಸಿದ ಸಭಾ ಭವನ ಕಣ್ಣಿಗೆ  ಕಂಡಿತು. [ ಈ ಪ್ರದೇಶದ  ಬಗ್ಗೆ ಮಾಹಿತಿ ತಿಳಿಯಲು ಹಲವು ಜನ ಗೆಳೆಯರನ್ನು ಸಂಪರ್ಕಿಸಿದೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಯತ್ನ ನಡೆಸಿದೆ , ನನ್ನ ಹುಡುಕಾಟದಲ್ಲಿ ಕೊನೆಗೆ ಡಾಕ್ಟರ್ ಸಂತೋಷ್  ಅಜ್ಜಿಬಾಳ್ {ಕಂತೆ ಪುರಾಣ ಬ್ಲಾಗ್}  ರವರು  ತಮ್ಮ ಹಿರಿಯರಿಂದ ಮಾಹಿತಿ ತೆಗೆದು ಮೇಲ್ ಮಾಡಿ ಮಾಹಿತಿ ನೀಡಿದರು.
ದೇವಾಲಯದ ಗರ್ಭ ಗುಡಿ 
]ಮೂಲ ದೇವರು [ ಲೆನ್ಸ್ ಕೈ ಕೊಟ್ಟು ಚಿತ್ರ ಸರಿಯಾಗಿ ಬರಲಿಲ್ಲ ]

ಮೊದಲು ಕೇವಲ ಹನುಮಂತನ ಕಟ್ಟೆ ಅಗಿದ್ದ ದೇವಸ್ತಾನ ೧೯೪೦-೫೦ರ ಅವಧಿಯಲ್ಲಿ ಶ್ರಿ ಸಹಜಾನಂದ ಅವದೂತರಿಂದ ನಿರ್ಮಿಸಲ್ಪಟ್ಟಿತು  ಸಿರಸಿ ತಾಲೂಕಿನ  ಜಾಗನಳ್ಳಿ ಗ್ರಾಮದ ಅವದೂತರಿಗೆ ಮೈಲಿಬೇನೆ (ಸಿಡುಬು) ಪ್ರಾರಂಭವಾಗಿ   ವಾಸಿಯಾಗದಿದ್ದಾಗ   ಶ್ರೀ ಶ್ರೀಧರ  ಸ್ವಾಮಿಜಿಯವರಿಂದ  ಸನ್ಯಾಸ ಸ್ವೀಕರಿಸಿದ ಅವರು ದೇಶ  ಸಂಚಾರ  ಕೈಗೊಳ್ಳು ತ್ತಾರೆ  ಹೀಗೆ ಸಂಚಾರದ  ಸಮಯದಲ್ಲಿ ಕೊಳ್ಗೀಬೀಸ್ ಪ್ರದೇಶಕ್ಕೆ ಕಾಲಿಟ್ಟಾಗ  ಅವರಿಗೆ ಪ್ರೇರಣೆಯಾಗಿ ದೇವಸ್ಥಾನ  ನಿರ್ಮಿಸುತ್ತಾರೆ  ಆಗ ಅವರ ಕಾಯಿಲೆ ವಾಸಿಯಗುತ್ತದೆ ಅವರು ಅಲ್ಲೆ ನೆಲೆ ನಿಂತು ಅಲ್ಲೆ ಮುಕ್ತಿ ಹೊಂದಿರುತ್ತಾರೆ ಈಗಲೂ ಅವರ ಅರಾಧನೆಯನ್ನು ವೈಭದಿಂದ  ಭಕ್ತಿಪೂರ್ವಕವಾಗಿ  ಆಚರಿಸಲಾಗುತ್ತಿದೆ . ಹಾಗೆ ಸಂಪೆಶಷ್ದಿಯ ದಿನ ದೀಪೋತ್ಸವ ನೆರವೇರುತ್ತದೆ  ಇದರ ಹೊರತಾಗಿ ಹೆಚ್ಚಿನ ಮಾಹಿತಿ ಸಿಗಲಿಲ್ಲ  .{ದಯವಿಟ್ಟು ಯಾರಿಗಾದರೂ ಗೊತ್ತಿದ್ದಲ್ಲಿ ಇಲ್ಲಿನ ಇತಿಹಾಸವನ್ನು ಹಂಚಿಕೊಳ್ಳಲು  ಕೋರುತ್ತೇನೆ.} ಹಾಲಿ ಇಲ್ಲಿ ಒಂದು ಟ್ರಸ್ಟ್  ಇಲ್ಲಿನ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ತಿಳಿದುಬಂತು.


ಸಾಗರದಾಚೆಯ ಇಂಚರ  ಇಲ್ಲಿದ್ದಾರೆ ನೋಡಿ.


ಮದುವೆ  ನಡೆಯುವ ಮಂದಿರ ಪ್ರವೇಶಿಸಿದ ನಾವುಗಳು  ಗುರುಮೂರ್ತಿ ಹೆಗ್ಡೆ ಅವರನ್ನು ಭೇಟಿ ಮಾಡಿದೆವು. ಆತ್ಮೀಯವಾಗಿ ಬರಮಾಡಿಕೊಂಡ ಅವರು  ತಮ್ಮ ಪ್ರೀತಿಯ ಮಳೆಗೆರೆದರು , ಮದುವೆ  ಮಂದಿರದಲ್ಲಿ ಮದುವೆ  ಸಿದ್ದತೆ ನಡೆದಿತ್ತು.  ಮದುವೆ  ಕಾರ್ಯಕ್ರಮಕ್ಕೆ ಇನ್ನೂ ಕನಿಷ್ಠ ಎರಡು ಘಂಟೆಗಳ ಅವಧಿ ಇದೆ ಎಂದು ಗೊತ್ತಾಯ್ತು , ನಾನು ಹರ್ಷನನ್ನು ಕುರಿತು, " ಹರ್ಷ  ಹತ್ತಿದಲ್ಲಿರುವ  ಯಾವುದಾದರೂ ಜಾಗ ನೋಡ ಬಹುದಾ ?? " ಎಂದೇ ಅದಕ್ಕೆ ಹರ್ಷ  "ಹೂ ಸಾರ್ ಎಲ್ಲಾದ್ರೂ ಹೋಗ ಬಹುದು   ಆದ್ರೆ ಎಲ್ಲಿ ಹೋಗಬೇಕೂ ನೀವು ?" ಎಂದು ಕೇಳಿದನು, ನಾನು "ಹರ್ಷ  ದೇವಿಮನೆ ಘಾಟ್ ಹೋಗಬಹುದಾ ?" ಎಂದು ಕೇಳಿದ್ದಕ್ಕೆ ಸಾರ್ ಅಲ್ಲಿ ಬೇಡ ಬನ್ನಿ ಇಲ್ಲೇ ಒಂದು ಜಾಗ ಇದೆ  ಹೋಗಿ ಬರೋಣ ಎಂದು ಆ ಜಾಗಕ್ಕೆ ಕರೆದುಕೊಂಡು ಹೋದ [ ಹೋಗಿದ್ದ ಜಾಗದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುವೆ]
ಹವ್ಯಕರ  ಮದುವೆ  ಸಂಭ್ರಮ 


ಹರ್ಷ ಮತ್ತು ನಾನೂ ಆ ಪ್ರದೇಶ ನೋಡಿ  ಮದುವೆ ಮನೆಗೆ  ವಾಪಸ್ಸು ಬಂದೆವು , ಮದುವೆ  ಸಂಭ್ರಮ ಕಳೆ ಕಟ್ಟಿತ್ತು.  ಸುಂದರ  ವಾಗಿ ಅಲಂಕರಿಸಿದ ವೇದಿಕೆ ಆ ವೇದಿಕೆಯಲ್ಲಿ ವೈವಾಹಿಕ   ಶಾಸ್ತ್ರ ನಡೆಸುವ  ಸಲುವಾಗಿ ಒಂದು ಸುಂದರ ಪುಟ್ಟ ಮಂಟಪ ನಿರ್ಮಿಸಲಾಗಿತ್ತು.   ಮಂಟಪದ ನಡುವೆ ಶ್ರೀ ಧರಸ್ವಾಮಿಗಳ ಭಾವ ಚಿತ್ರ ಇದ್ದು ಅದು ಅಲ್ಲಿನವರಿಗೆ ಆಶೀರ್ವಾದ ನೀಡುವಂತೆ ಗೋಚರಿಸಿತ್ತು


ಮದುಮಗನ  ಸಿಂಗಾರ ಮನಸೆಳೆಯಿತು.


ಅಲ್ಲೇ ಸನಿಹದಲ್ಲೇ  ಮದುಮಗ ಆಸಿನರಾಗಿದ್ದರು. ನಮ್ಮ ಕಡೆ ಮೈಸೂರಿನಲ್ಲಿ  ಪೇಟ ಹಾಗು ಅದಕ್ಕೆ ಬಾಸಿಂಗ  ಕಟ್ಟಿಕೊಂಡಿರುವ  ಮದುಮಕ್ಕಳನ್ನು ನೋಡಿದ್ದ ನಾನೂ  ಇದು ವಿಶೇಷವಾಗಿ  ಅಲಂಕರಿಸಿದ ಹೊಸ ಶೈಲಿಯ ಮದುಮಗನನ್ನು  ನೋಡಿ ಖುಶಿಪಟ್ಟೆ .  ಕೆನೆಹಾಲಿನ  ಟೋಪಿಗೆ  ಬಣ್ಣ ಬಣ್ಣದ ಅಲಂಕಾರ ಮಾಡಿದ ಕಿರೀಟದಂತೆ ಮಾಡಿದ ಬಾಸಿಂಗ ಅ ಪ್ರದೇಶದ  ಕಲಾ ವೈಭವವನ್ನು ಮೆರೆಸಿತ್ತು.  ಮದುಮಗನೂ ಸಹ ಇದನ್ನು ಧರಿಸಿ ಸಂಭ್ರಮಿಸಿದ್ದರು .

ವಿವಾಹದ  ಸಾಂಪ್ರದಾಯಿಕ  ಆಚರಣೆಯ ಒಂದು  ಚಿತ್ರ  ವಧುವಿನ ಮನೆಯ ಉಡುಗೊರೆ ನವ ದಂಪತಿಗಳಿಗೆ 
ಹಿರಿಯ  ಜೀವಗಳು ತೆರೆದಿಟ್ಟ  ಉಡುಗೊರೆ 


ಮದುವೆಯ ಸಾಂಪ್ರದಾಯಿಕ  ಕಾರ್ಯಕ್ರಮಗಳು  ಆರಂಭವಾದವು. ಮದುಮಗನ ಸನಿಹ ಕೆಲವು ಹಿರಿಯರು ನಿಂತು ಸಂಪ್ರದಾಯ ಶುರುಮಾಡಿದರು. ನಂತರ  ವಧುವಿನ ಮನೆ ಕಡೆಯವರು  ನವ ದಂಪತಿಗಳಿಗೆ  ಪ್ರೀತಿಯಿಂದ ನೀಡುವ ಉಡುಗೊರೆ ಪೆಟ್ಟಿಗೆಯನ್ನು ಕೆಲವು ಹಿರಿಯರು ತಂದರು, ಹಲವು ಹಿರಿಯ ಜೀವಗಳ ಸಮ್ಮುಖದಲ್ಲಿ ಪೆಟ್ಟಿಗೆಯನ್ನು ತೆರೆದು ಅದರಲ್ಲಿನ  ಉಡುಗೊರೆ ದರ್ಶನ ಮಾಡಿಸಲಾಯಿತು.
ವಿವಾಹ ಮಂಟಪ 

ಮಂಗಳ ಸೂತ್ರದ ಸರದ ಧಾರಣೆ.
ನಾವೀಗ  ದಂಪತಿಗಳು 

ಬಾ ಪ್ರಿಯೆ ಜೊತೆಯಾಗಿ ತುಳಿಯುವ ಸಪ್ತಪದಿ 
ಅತ್ತ ವಿವಾಹ  ಮಂಟಪದಲ್ಲಿ  ಶಾಸ್ತ್ರಗಳನ್ನು ಪುರೋಹಿತರು  ವೇದ ಘೋಶದೊಡನೆ  ನಡೆಸಿದ್ದರು ವಧೂ ವರರು  ಪುರೋಹಿತರ   ಸೂಚನೆಯಂತೆ ವಿಧಿ ವಿಧಾನಗಳನ್ನು  ಪಾಲಿಸುತ್ತಿದ್ದರು. ಬಹಳಷ್ಟು ಸಾಂಪ್ರದಾಯಿಕ  ಕಾರ್ಯಕ್ರಮ ನಡೆದು  ಮಂಗಳ ಸೂತ್ರದಾರಣೆ  ಆಯಿತು,  ತಾಳಿ ಹಾಕಿ ಮಾಡಿದ ಚಿನ್ನದ ಸರವನ್ನು ವಧುವಿನ ಕೊರಳಿಗೆ ಹಾಕುವ ಮೂಲಕ  ಈ ಕಾರ್ಯ ನಡೆಯಿತು.ನಂತರ ನವ ಜೀವನದ ಕಡೆಗೆ ಸಾಗಲು ಸಿದ್ಧರಾದ  ನವ ದಂಪತಿಗಳು  ಸಪ್ತಪದಿ ತುಳಿದರು,  ಮದುವೆಯ ಸಂಪ್ರದಾಯದಲ್ಲಿ ಎಷ್ಟೊಂದು ಆಚರಣೆಗಳು ಅರ್ಥಪೂರ್ಣ ವಾಗಿರುತ್ತವೆ  ಎಂಬ ಸತ್ಯ ಗೋಚರಿಸಿತು.

ದೇವಾಲಯದಲ್ಲಿನ  ಹನುಮ ದೇವರು 
ವಧುವನ್ನು  ಒಪ್ಪಿಸಿಕೊಡುವ ಕಾರ್ಯ 


ಸಪ್ತಪದಿ ತುಳಿದ ನವ ದಂಪತಿಗಳು   ಹಿರಿಯರ  ಸಮಕ್ಷಮ  ದೇವಾಲಯದ  ದೇವರ ಅನುಗ್ರಹ ಪಡೆದರು. ನಂತರ ವಧುವಿನ ಮನೆಯವರಿಂದ  ವರನ ತಂದೆ ತಾಯಿ ಮಡಿಲಿಗೆ  ವಧುವನ್ನು ಒಪ್ಪಿಸಿಕೊಡುವ  ಕಾರ್ಯ ನಡೆಯಿತು.  ವಧುವನ್ನು ಹೆತ್ತವರ ಕಣ್ಣಲ್ಲಿ  ಹನಿ ನೀರು ಜಿನುಗಿದರೂ  ಒಂದು ಜವಾಬ್ದಾರಿಯನ್ನು  ನೆರವೇರಿಸಿದ  ಸಾರ್ಥಕತೆಯ ಭಾವನೆ ಮಿನುಗಿತ್ತು, ವಧುವನ್ನು ಒಪ್ಪಿಸಿಕೊಂಡ  ವರನ ತಂದೆ ತಾಯಿಗಳು  ಈ ವಧು ನಮ್ಮ ಮನೆಯನ್ನು ಬೆಳಗಲಿ  ಎಂದು ಸಂತಸದಿಂದ  ಹುಡುಗಿಯನ್ನು ಒಪ್ಪಿಸಿಕೊಂಡರು.

ಸಂತಸದ  ಆ ಕ್ಷಣ 


ಸಹೋದರನ ವಿವಾಹ ಕಾರ್ಯದ ಹಿಂದಿನ ರುವಾರೀ ಗುರುಮೂರ್ತಿ ಹೆಗ್ಡೆ  ತನ್ನ ಮಗುವಿನೊಡನೆ  ಸಂಭ್ರಮದ  ಓಡಾಟ ನಡೆಸಿದ್ದರು  .  ಅವರ ಕುಟುಂಬದ ಒಡನಾಟ ಚೆನ್ನಾಗಿತ್ತು.  ಒಳ್ಳೆಯ ಹಿತಕರ ಅನುಭವ ನೀಡಿದ ಮದುವೆ ಯಲ್ಲಿ ಪಾಲ್ಗೊಂಡ ಸಂತಸ ನನ್ನದಾಗಿತ್ತು. ಬಹುಷಃ ಈ ವಿವಾಹ ಮಹೋತ್ಸವ ಸಮಾರಂಭದ ಕರೆ ಇಲ್ಲದಿದ್ದರೆ ನಾನೂ ಶಿರಸಿಯ  ಅನುಭವ ಪಡೆಯಲು ಆಗುತ್ತಿರಲಿಲ್ಲ ಇದಕ್ಕಾಗಿ  ಸಾಗರದಾಚೆಯ ಇಂಚರ  ಬ್ಲಾಗಿನ ಗುರುಮೂರ್ತಿ ಹೆಗ್ಡೆ ಯವರಿಗೆ  ಥ್ಯಾಂಕ್ಸ್ ಹೇಳಬೇಕು.  ನಂತರ ವ್ಯವಸ್ತಿತವಾಗಿ ಆಯೋಜಿಸಿದ್ದ ಭೋಜನದಲ್ಲಿ ಹವ್ಯಕ ಮದುವೆಯ ಭೋಜನದ ಸವಿಯನ್ನು ಉಂಡು  ಅಲ್ಲಿಂದ  ಶಿರಸಿಗೆ ತೆರಳಿದೆವು , ಆದರೆ ಮನದಲ್ಲಿ  ವಿವಾಹದ ಸಂಭ್ರಮ ಮನೆಮಾಡಿತ್ತು. ಬನ್ನಿ  ಮದುವೆಯ ನಡುವೆ ನಾವು ಹೋಗಿದ್ದ  ಗಿರಿ ಶ್ರೇಣಿಯಲ್ಲಿ  ಅಘನಾಶಿನಿ ನದಿಯ ದರ್ಶಿಸಲು  ಹೊರಡೋಣ.
9 comments:

Banavasi Somashekhar. said...

ಕೊಳಗಿ ಬೀಸಿನಲ್ಲಿ ನನ್ನ ಅನೇಕ ಸ್ನೇಹಿತರಿದ್ದರು.ಅವರೆಲ್ಲ ಮರೆತು ಹೋಗಿದ್ದಾರೆ.ಎಲ್ಲೆಲ್ಲಿದ್ದಾರೋ.ಅವರೇ ನಮ್ಮನ್ನು ಗುರುತು ಹಿಡಿಯಬೇಕಷ್ಟೇ.ನಿಮ್ಮ ಕೊಳಗಿ ಬೀಸಿನ ಪ್ರಯಾಣದ ಸನ್ನೀವೇಷ ಸಚಿತ್ರವಾಗಿ ಮಾಹಿತಿಯುಕ್ತವಾಗಿ ಮೂಡಿ ಬಂದಿದೆ.

Srikanth Manjunath said...

ಮದುವೆ ಎನ್ನುವುದೇ ಒಂದು ದಿವ್ಯ ಅನುಭವ, ಅದರಲ್ಲೂ ಕರುನಾಡಿನ ಅನೇಕ ಕಡೆ ನಡೆಯುವ ಪದ್ಧತಿಗಳು ಒಂದಕ್ಕಿಂದು ಒಂದು ಭಿನ್ನ ವಿಭಿನ್ನ. ಈ ಮಾಡುವೆ ಸಡಗರ, ಅದರ ಸಿಂಗಾರ, ಸಿದ್ಧತೆಗಳು, ವಧು ಹಾಗೂ ವರನ ಭೇಟಿ, ಸಪ್ತಪದಿ, ಹೆಣ್ಣನ್ನು ಒಪ್ಪಿಸಿಕೊಳ್ಳುವ ಶಾಸ್ತ್ರ ಇವೆಲ್ಲ ಒಂದು ಚಂದೊಬದ್ದವಾಗಿ ಹೆಣೆದಿರುವ ಸಂಪ್ರಾದಾಯಗಳು . ಅದರ ಅರ್ಥ, ಸ್ವಾರಸ್ಯ ತಿಳಿದುಕೊಂಡರೆ ಎಷ್ಟು ಸಂಪ್ರದಾಯಬದ್ಧವಾಗಿದೆ ನಮ್ಮ ಪೂರ್ವಜರ ಸಂಸ್ಕೃತಿ ಎಂದು ಹೆಮ್ಮೆಯಾಗುತ್ತದೆ. ಅದನ್ನು ದೃಶ್ಯ ಕಾವ್ಯಮಯವಾಗಿ ನಿರೂಪಿಸಿರುವ ನಿಮ್ಮ ಲೇಖನದ ಶೈಲಿಗೆ ನನ್ನ ನಮನಗಳು. ಮುಂದಿನ ಪ್ರಕೃತಿಯ ಮಡಿಲಲ್ಲಿ ತೇಲಾಡುವ ಕಂತಿಗೆ ಕಾಯುತಿದ್ದೇನೆ.

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ಬನ್ನಿ ಸಾರ್ ನಾವು ಬರ್ತೇವೆ..

vandana shigehalli said...

ಕೊಳಗಿಬಿಸ್ ನೋಡಿ ಕುಶಿಯಾಯಿತು ....
೩ ವರ್ಷ ದ ಹಿಂದೆ ಇದೇ ಜಾಗದಲ್ಲಿ...
ನಾನು ಪ್ರವೀಣ್ ಮದುವೆ ಯಾದದ್ದು..
ಆಮೇಲೆ ಶಿರಸಿ ಗೆ ಹೋದಾಗೆಲ್ಲ ಹೋಗಿ ಬರೋಣ ಅಂದು ಕೊಂಡರು...
ಅಮ್ಮ ಅಪ್ಪ ಎಲ್ಲರ ಜೊತೆ ೨ ದಿನ ವಿದ್ದು ಹೊರಡು ವಾಗ ಸಮಯ ಹೋದದ್ದೇ ಗೊತ್ತಾಗದೆ ...
ಇನ್ನು ಹೋಗಲಾಗಲಿಲ್ಲ ............... thank u

ಗಿರೀಶ್.ಎಸ್ said...

ಆ ಭಾಗದ ಮದುವೆಯ ಸಂಪ್ರದಾಯದ ಬಗ್ಗೆ ಕೂಡ ತಿಳಿದ ಹಾಗಾಯಿತು ನಿಮ್ಮ ಈ ಲೇಖನದಿಂದ...

ಅಘನಾಶಿನಿ ಹೆಸರು ಕೇಳಿದರೆ ಎಷ್ಟು ಚೆನ್ನಾಗಿದೆ.....ಅದರ ಬಗ್ಗೆ ತಿಳಿಯಲು ಕುತೂಹಲ...

Badarinath Palavalli said...

ಕೊಳಗಿ ಬೀಸ್ ಹೆಸರೇ ವಿಶಿಷ್ಟವಾಗಿದೆ.

ಪ್ರವಾಸ ಕಥನದ ಜೊತೆಗೆ ಇನ್ನಿತರ ಬ್ಲಾಗಿಗರ ಪರಿಚಯ ಮಾಡಿಸಿದಿರಿ.

ಶ್ರೀ ಶ್ರೀಧರ ಸ್ವಾಮಿಜಿಯವವರು ನಮ್ಮ ಇಟ್ಟಿಗೆ ಸೀಮೆಂತು ಬ್ಲಾಗಿನ ಪ್ರಕಾಶ ಹೆಗಡೆಯವರ ಆರಾಧ್ಯ ದೈವ.

ಹವ್ಯಕ ಮದುವೆ ವೈಶಿಷ್ಟ್ಯಗಳು ಮನ ಸೆಳೆಯಿತು.

(ಬಾಯಲ್ಲಿ ಜೊಲ್ಲು ತುಂಬಿಕೊಂಡು) ಊಟದ ವಿವರ ಕೊಡ ಬಹುದಿತ್ತೇನೋಪ್ಪಾ...

ಚಿನ್ಮಯ ಭಟ್ said...

ಬಾಲು ಸರ್ ಕ್ಷಮಿಸಿ...ನಾನು ಕ್ಯಾಂಪಸ್ ಅದು ಇದರಲ್ಲಿ ಮುಳುಗಿ ಹೋಗಿದ್ದೆ....

ಕೊಳಗೀಬೀಸಿನ ದೇವರಿಗೆ ಮೊದಲು ಒಂದು ವಾರ ಅಹೋರಾತ್ರಿ ಭಜನೆ ನಡೆಯುತ್ತಿತ್ತಂತೆ..ಆ ಸಮಯದಲ್ಲಿ ದೇವರು ಅಲ್ಲಿಯೇ ಸಮೀಪದ ನೇರ್ಲಹದ್ದದ ಹತ್ತಿರದ ದೇವಸ್ಥಾನಕ್ಕೆ ಹೋಗುತ್ತಿತ್ತಂತೆ...ಇದೀಗ ಒಂದು ದಿನ ರಾತ್ರಿ ಪೂರ್ತಿ ಭಜನೆ ನಡೆಯುತ್ತದೆಯಂತೆ...ಆಷ್ಟೆ ಗೊತ್ತಾಗಿರದು...

ಲೇಖನ ಚೆನಾಗಿತ್ತು...ಬರೆಯುತ್ತಿರಿ..

ಚುಕ್ಕಿಚಿತ್ತಾರ said...

ಸಚಿತ್ರವಾಗಿ ಉತ್ತಮವಾಗಿ ವಿವರಿಸಿದ್ದೀರಿ..

Swarna said...

ಮದುವೆ ಊಟದ ಚಿತ್ರನೂ ಹಾಕಬಹುದಿತ್ತು ಸರ್ :)
ಕೊಳಗಿ ಬೀಸ್ ಹೆಸರೇ ಒಂಥರಾ peculiar ಆಗಿದೆ.
ಅಘನಾಶಿನಿ ನದಿಯನ್ನ ನೋಡಿಲ್ಲ ಆದ್ರೆ ಆ ಹೆಸರು ನಂಗೆ ತುಂಬಾ ಇಷ್ಟ.
ಕಾಯ್ತಿರ್ತೇವೆ
ಸ್ವರ್ಣಾ

Dr.Gurumurthy Hegde said...

ಬಾಲು ಸರ್
ಆ ದಿನ ನಿಮ್ಮ ನೋಡಿ ನನ್ನ ಇನ್ನೊಂದು ಅಣ್ಣನ ನೋಡಿದ ಹಾಗೆ ಆಯಿತು
ಪ್ರೀತಿಯ ಕರೆಗೆ ಓಗೊಟ್ಟು ನೀವು ಬಂದಿದ್ದು ನಮ್ಮ ಮನೆಯವರಿಗೆಲ್ಲ ಸಂತಸ ಆಯ್ತು ಆದರೆ
ಸಮಯದ ಅಭಾವದಿಂದ ನಿಮ್ಮ ಜೊತೆ ಹೆಚ್ಚು ಮಾತಾಡೋಕೆ ಆಗ್ಲಿಲ್ಲ, ಅದ್ಕೆ ಬೇಸರಾನು ಆಯ್ತು
ಸುಂದರವಾಗಿ ನಿಮ್ಮ ಅನುಭವಗಳ ಬುತ್ತಿ ಬಿಚ್ಚಿಡ್ತಾ ಇದಿರಾ
ಓದೋಕೆ ಲೇಟ್ ಆದ್ರೆ ಕ್ಷಮಿಸಿ
ಸುಂದರ ಬರಹ ಎಂದಿನಂತೆ