Thursday, June 19, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......03 ಕೆಳದಿಯ ಇತಿಹಾಸವನ್ನು ಗುಲಾಬಿ ಹೇಳಲು ಬಂದಿತ್ತು !!

ಚಿತ್ರ ಕೃಪೆ ಅಂತರ್ಜಾಲ




 ಸಂಚಿಕೆಯಲ್ಲಿ ವರದ ಹಳ್ಳಿಯ   ಬರೆದಿದ್ದೆ,ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ  ಹಾದಿಯಲ್ಲಿ ಕಣ್ಣಿಗೆ  ಬಿತ್ತು , ಆ ಬನವಾಸಿ  ಸೂಪರ್  ಬಸ್ಸು  ,  ಕೀಟಲೆಯ  ಮನಸು ಜಾಗೃತವಾಯಿತು,  ಪ್ರಕಾಶಣ್ಣ  ಇಲ್ಲಿ ನೋಡಿ ಅಂದೇ  '' ರಾತ್ರಿ ಡಿಮ್ ಡಿಪ್  ಕೊಡು ಮಗಾ''  ಎಂಭ ಘೋಷ ವಾಕ್ಯ ,  ನಮ್ಮ  ಪಟ್ಟಣ ಗಳಲ್ಲಿ ಇರಬೇಕಾದ  "ಡಕೋಟಾ   ಎಕ್ಸ್ಪ್ರೆಸ್ "   ಸ್ವಚ್ಚಂದ  ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ  ಅಂತಾ   ಜೋರಾಗಿ ನಕ್ಕೆವು.  ಇಂತಹ ಸಮಯದಲ್ಲಿಯೂ   ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ  ವಾಪಸ್ಸು  ಹೊರಟೆವು . ಸಾಗರ ತಾಲೂಕು  ಕೇಂದ್ರ ,

 ವರದಹಳ್ಳಿ ಇಂದ ವಾಪಸ್ಸು ಬರುವಾಗ  ಸಾಗರ ಪಟ್ಟಣದಲ್ಲಿ  ಇರುವ ಬ್ಲಾಗ್ ಮಿತ್ರ  ಜಿತೇಂದ್ರ ಹಿಂಡುಮನೆ  ಯವರನ್ನು ಭೇಟಿ ಮಾಡಿ ಖುಷಿ ಪಟ್ಟೆವು,  ಅವರಿಂದ ಪ್ರಕಾಶಣ್ಣ ಹಾಗು ನನಗೆ ಮನೆಗೆ ಬರಲು ಆತ್ಮೀಯ  ಆಮಂತ್ರಣ ಸಿಕ್ಕಿತು.  ಅವಕಾಶ ಸಿಕ್ಕಲ್ಲಿ ಖಂಡಿತಾ ಬರುವುದಾಗಿ ಅವರಿಗೆ  ತಿಳಿಸಿದೆವು .


ಸಾಗರ ಪಟ್ಟಣದಲ್ಲಿನ  ಮಾರಿಕಾಂಬ ದೇಗುಲ

ಅವರಿಂದ ಬೀಳ್ಕೊಂಡು  ಸಾಗರ ಪಟ್ಟಣದ ಒಳಗೆ  ನಮ್ಮ ಪಯಣ ಸಾಗಿತು.  ಅರೆ  ಊರಿನ ಒಳಗೆ  ಕಂಡ ಒಂದು ಸುಂದರ ದೇಗುಲ  ಮನ ಸೆಳೆಯಿತು,  ಅಲ್ಲೇ ನಿಂತು ನೋಡಿದರೆ  ಶಿರಸಿಯ  ಮಾರಿಕಾಂಬಾ  ದೇವಾಲಯದಂತೆ  ಸಾಗರದಲ್ಲಿಯೂ  ಒಂದು ಮಾರಿಕಾಂಬೆ  ದೇವಾಲಯ ಇರುವುದು  ತಿಳಿಯಿತು . ದೇವಾಲಯದ  ಬಾಗಿಲು  ಮುಚ್ಚಿದ್ದ ಕಾರಣ, ತಡಮಾಡದೆ  ಕೆಳದಿಯ ಕಡೆ  ಹೊರಟೆವು . ಕೆಳದಿಯ ಬಗ್ಗೆ ಹೆಚ್ಚು  ಗೊತ್ತಿಲ್ಲದ ನನಗೆ  ಅಲ್ಲಿ ಏನು ನೋಡಬೇಕೆಂಬ  ಕಲ್ಪನೆ ಇರಲಿಲ್ಲ, ಜೊತೆಗೆ  ಅಲ್ಲಿ ಇರುವುದೇನು  ಎಂಬುದೂ  ತಿಳಿದಿರಲಿಲ್ಲ . ಸಾಗರದಿಂದ  ಆರು ಕಿ. ಮೀ . ದೂರದಲ್ಲಿ  ಕೈಬೀಸಿ ಕರೆಯುತ್ತಿತ್ತು  ಐತಿಹಾಸಿಕ ಕೆಳದಿ


ಕೆಳದಿಯ  ಐತಿಹಾಸಿಕ  ರಾಮೇಶ್ವರ  ದೇವಾಲಯ



 ಕೆಳದಿಯ  ನೆಲ  ಸ್ಪರ್ಶ ಮಾಡುತ್ತಿದಂತೆ  ಇಲ್ಲಿ ಏನೋ ಮಹತ್ವವಾದ ವಿಚಾರ ಇದೆ ಎಂದು ನನ್ನ ಮನಸು ಹೇಳುತ್ತಿತ್ತು, ಆದರೆ ಕೇಳುವುದು ಯಾರನ್ನು,  ನಮಗೆ ಇಲ್ಲಿನ ವಿಚಾರ ತಿಳಿಸಲು  ಯಾರೂ ಇರಲಿಲ್ಲ,  ನಮ್ಮ  ಎದುರಿಗೆ  ಕೆಳದಿ ರಾಮೇಶ್ವರ  ದೇವಾಲಯ ಎಂಬ ಬೋರ್ಡ್  ಇತ್ತು,  ಆದರೆ ದೇವಾಲಯದ  ರೂಪದ ಯಾವ  ಕಟ್ಟಡ ಸಹ ನನಗೆ ಮೊದಲ ನೋಟಕ್ಕೆ ಕಾಣಲಿಲ್ಲ,  ಸುತ್ತಲೂ ಇಟ್ಟಿಗೆಯ ಕಾಂಪೌಂಡ್  ಹಾಕಿದ್ದು ನಡುವೆ  ಬಹುಶ ಹಳೆಯಕಾಲದ ಜಮೀನು ದಾರರ  ಮನೆ ಅಥವಾ ಅರಮನೆ ಯಂತಹ ಒಂದು ಕಟ್ಟಡ  ಕಾಣಲು ಸಿಕ್ಕಿತು, ಇದು ಕೆಳದಿ ಚೆನ್ನಮ್ಮನ  ಅರಮನೆ ಇರಬಹುದೇ ಎಂಬ  ಅನುಮಾನ ಬಂದಿತ್ತು,




ಇದು ದೇಗುಲವೋ  ಅಥವಾ ಅರಮನೆಯೂ



ನಂದಿ ವಾಹನ ಸಹಿತ ಹರ ದಂಪತಿಗಳು


ಹತ್ತಿರ ಹೋಗಿ ನೋಡಿದರೆ  ಒಂದು ಹಳೆಯಕಾಲದ ದೊಡ್ಡ ಮನೆಯನ್ನು ನವೀಕರಿಸಿದಂತೆ ಕಂಡಿತು, ಮನೆಯ ಮುಂದೆ ವಿಶಾಲವಾದ  ಹಸಿರಿನ ಪಾರ್ಕ್, ಹತ್ತಿರ ಹೋಗುತ್ತಿದಂತೆ ಕಾಣುವ ಸುಂದರವಾದ  ಮರದ ಕಂಬಗಳು, , ಒಳಗೆ ಬರುವಂತೆ  ಪ್ರೇರೇಪಿಸುವ ಮೆಟ್ಟಿಲುಗಳನ್ನು  ದಾಟಿ ಒಳಗೆ  ಬಂದರೆ ನಿಮಗೆ ದರ್ಶನ ನೀಡಲು  ನಂದಿ ವಾಹನ ಸಹಿತ ಹರ ದಂಪತಿಗಳು ಕಾಯುತ್ತಿರುವಂತೆ ಅನ್ನಿಸುತ್ತದೆ . ಸುಂದರ ಕಲಾಕೃತಿಯನ್ನು  ನೋಡದೆ ನೀವು ದೇಗುಲದ ಒಳಗೆ ಪ್ರವೇಶಿಸುವುದು ಸಾಧ್ಯವೇ ಇಲ್ಲ.

ಕೆಳದಿಯ ಇತಿಹಾಸ ಹೇಳಲು  ಬಂದ  ದಿಟ್ಟೆ ಗುಲಾಬಿ


ಒಳಗೆ ಪ್ರವೇಶಿಸಿದ ನಮಗೆ ಅಲ್ಲೊಂದು ಪುರಾತನ ದೇವಾಲಯ ಇರುವುದು ಕಾಣ ಸಿಕ್ಕಿತು,  ಸುತ್ತಲೂ  ನಿರ್ಮಾಣ ಗೊಂಡ  ಒಳಜಗುಲಿ ಹೊಂದಿದ ಪ್ರದೇಶದ ನಡುವೆ  ರಾಮೇಶ್ವರ ದೇಗುಲ ನಿರ್ಮಾಣ  ಗೊಂಡಿದೆ . . ಪ್ರವೇಶಿಸಿದ ನಾವು, ಸುತ್ತಲೂ ನೋಡಿದೆವು, ಅಲ್ಲಿನ ವಿವರ ನೀಡಲು ಯಾರೂ ಇರಲಿಲ್ಲ, ನಮ್ಮ ಪಾಡಿಗೆ ಅಲ್ಲಿನ  ದೇಗುಲದ ವಿವರಗಳನ್ನು  ಫೋಟೋ ತೆಗೆಯುತ್ತಿದ್ದೆವು, ಅಲ್ಲೇ ಕಾಣ ಸಿಕ್ಕರು  ಒಬ್ಬ ಹೆಂಗಸು , ಅಲ್ಲಿನ ಆವರಣವನ್ನು ಶುಚಿ  ಮಾಡುತ್ತಿದ್ದರು, ಆ  ಬಿಸಿಲಿನಲ್ಲಿ  ಬಂದು ಫೋಟೋ ತೆಗೆಯುತ್ತಿದ್ದ ನಮ್ಮನ್ನು  ಕಂಡು ಹತ್ತಿರ ಬಂದರು,  ಏನಮ್ಮಾ  ಇಲ್ಲಿನ  ವಿವರ ನೀಡಲು ಯಾರೂ ಇಲ್ವಾ?   ಅಂತಾ ವಿಚಾರಿಸಿದೆವು , ಇಲ್ಲಾ ಸಾರ್ ಇಷ್ಟು ಹೊತ್ತಿನಲ್ಲಿ ಯಾರೂ ಇರಲ್ಲಾ, ಅನ್ನುತ್ತಾ  ಬನ್ನಿ ಸಾರ್ ನಾನೇ ಹೇಳ್ತೀನಿ ಅಂತಾ ತನಗೆ ತಿಳಿದಿದ್ದ ವಿಚಾರವನ್ನು  ನಮಗೆ  ಹೇಳಿದರು, ನಗು ನಗುತ್ತಾ  ತನ್ನದೇ ರೀತಿಯಲ್ಲಿ  ಅಲ್ಲಿನ ದೇಗುಲದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಹೋದರು, ಪಾಪ  ತಾನು ಕೆಲಸ ಮಾಡುವ  ಪ್ರದೇಶವನ್ನು  ನೋಡಲು ಬಂದ  ಪ್ರವಾಸಿಗಳನ್ನು ನಿರಾಸೆ ಗೊಳಿಸಬಾರದು ಎಂಬ   ಆ ಹೆಂಗಸಿನ  ಆ ತುಡಿತಕ್ಕೆ  ನಿಜಕ್ಕೂ ಅಭಿಮಾನ  ಬಂತು . ಪ್ರಕಾಶಣ್ಣ ಹಾಗು ನಾನು ನಗುತ್ತಾ  ಅಮ್ಮ ನಿಮ್ಮ ಹೆಸರೇನು ಅಂತಾ ಕೇಳಿದೆವು  ಸಾರ್ ನಾನ್ ಇಲ್ಲೇ ಕೆಲ್ಸಾ ಮಾಡೋದು ,  ನನ್ ಹೆಸರು "ಗುಲಾಬಿ" ಅಂತಾ  ಅಂದರು .

ಕೆಳದಿಯ  ಇತಿಹಾಸ ಹೇಳಲು ಬಂದ  "ಗುಲಾಬಿ "


ಒಮ್ಮೆಲೇ ಬೆಚ್ಚಿ ಬಿದ್ದೆ , ಆ ನಿಮ್ಮ ಹೆಸರು ಏನೂ? ಅಂದೇ ಸಾರ್ "ಗುಲಾಬಿ " ಅಂತಾ ಅಂದ್ರೂ, ಜನುಮದಲ್ಲಿ ಮೊದಲ ಸಾರಿ ಒಬ್ಬ ಮಹಿಳೆ  "ಗುಲಾಬಿ"  ಎಂಬ ಹೆಸರನ್ನು  ಇಟ್ಟುಕೊಂಡ  ಬಗ್ಗೆ  ಕಂಡಿದ್ದು . ಯಾವ ಯಾವ್ದೋ  ಹೆಸರನ್ನು ಇಟ್ಟುಕೊಳ್ಳುವ  ನಮ್ಮ ಜನ  ಗುಲಾಬಿ, ತಾವರೆ, ಸಂಪಿಗೆ, ಮಲ್ಲಿಗೆ , ಜಾಜಿ, ಸೇವಂತಿಗೆ, ಮುಂತಾದ ಹೆಸರನ್ನು  ಯಾಕೆ ಮರೆತಿದ್ದಾರೆ ಅನ್ನಿಸಿತು, ಈ ಮಹಿಳೆ ತನ್ನ ಹೆಸರನ್ನು "ಗುಲಾಬಿ " ಎಂದು ಇಟ್ಟುಕೊಂಡು   ತನ್ನ ಮುಖದಲ್ಲಿನ ನಗುವಿನಲ್ಲಿ ನಿಜಕ್ಕೂ  ಆ ಹೂವಿನ  ಹೆಸರನ್ನು ಸಾರ್ಥಕ ಗೊಳಿಸಿದ್ದರು .



ಚಿತ್ರ ಕೃಪೆ ಅಂತರ್ಜಾಲ



ಮತ್ತೊಂದು ವಿಚಾರ  ಅಷ್ಟಾಗಿ ವಿಧ್ಯೆ ಇಲ್ಲದ  ಈ  ಹೆಂಗಸು  ತಾನು ಕೆಲಸ ಮಾಡುವ  ದೇವಾಲಯದ  ಬಗ್ಗೆ  ಅಲ್ಲಿ ಇಲ್ಲಿ ಕೇಳಿದ, ಹಾಗು ಹಿರಿಯರಿಂದ  ತಿಳಿದ ವಿಚಾರಗಳನ್ನು ಸಂಕೋಚವಿಲ್ಲದೆ  ಹೆಮ್ಮೆಯಿಂದ  ಹೇಳುವ ವಿಧಾನ ಇಷ್ಟಾ ಆಯಿತು. ಇತಿಹಾಸ ವೆಂದರೆ  ಮೂಗುಮುರಿಯುವ  ಇಂದಿನ ಪೀಳಿಗೆ  ಯಾವುದೇ  ಪ್ರತಿಫಲದ  ಆಸೆ ಇಲ್ಲದೆ  ಕಾರ್ಯ ನಿರ್ವಹಿಸುವ  ಇಂತಹವರನ್ನು ನೋಡಿ  ಕಲಿಯಬೇಕಾಗಿದೆ . ಪ್ರೀತಿಯಿಂದ  ಇತಿಹಾಸ ಹೇಳಲು ಬಂದ  ನಗು ಮುಖದ "ಗುಲಾಬಿ" ಗೆ ಮನದಲ್ಲಿ  ಸಲಾಂ ಹೇಳಿದೆವು .


ನಂತರ ಅವರಿಂದ  ಬೀಳ್ಕೊಂಡು  ದೇವಾಲಯದ ಒಳಗಡೆ ಪ್ರವೇಶಿಸಿದೆವು .  ಅರೆ ಕೆಳದಿಯ  ವಿಚಾರ ನಿಮಗೆ  ತಿಲಿಸಲಿಲ್ಲಾ ಅಲ್ವೇ ಕ್ಷಮಿಸಿ,  ಕೆಳದಿಯ ಬಗ್ಗೆ  ಹೇಳದಿದ್ದರೆ  ನಮಗೆ  ಈ ಊರಿನ ಇತಿಹಾಸದ ಬಗ್ಗೆ ಅರಿವಾಗದು, ಮುಂದಿನ ಸಂಚಿಕೆಯಲ್ಲಿ  ಕೆಳದಿಯ ಬಗ್ಗೆ ತಿಳಿಯೋಣ
























Tuesday, June 10, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......02 ವರದಹಳ್ಳಿಯ ಅವದೂತನ ಸನ್ನಿಧಿಯಲ್ಲಿ .

ಅವದೂತ  ಶ್ರೀಧರ ಸ್ವಾಮಿಗಳು


ಕಳೆದ  ಸಂಚಿಕೆಯಲ್ಲಿ   ಬೆಂಗಳೂರಿನಿಂದ  ಸಾಗರದ ವರೆಗಿನ ಪಯಣದ  ಅನುಭವ ದಾಖಲಾಗಿತ್ತು, ಮುಂದಿನ ಪಯಣ  ವರದ ಹಳ್ಳಿಯ  ಅವದೂತನ ಸನ್ನಿಧಿಗೆ  ಸಾಗುತ್ತಿತ್ತು. ಬನ್ನಿ ವರದಹಳ್ಳಿಯ ಬಗ್ಗೆ  ತಿಳಿಯೋಣ . ವರದಹಳ್ಳಿ  ಒಂದು ಸಣ್ಣ ಹಳ್ಳಿ  ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿಗೆ  ಸೇರಿದೆ . ಸಾಗರ ಪಟ್ಟಣದಿಂದ  ಆರು ಕಿ.ಮಿ  ದೂರದಲ್ಲಿದೆ .  ಅವದೂತ ಶ್ರೀಧರ ಸ್ವಾಮಿಗಳು  ನೆಲೆಗೊಂಡು  ತಮ್ಮದೇ ಆದ  ವಿಶಿಷ್ಟತೆ ಮೆರೆದ ಪುಣ್ಯ  ಕ್ಷೇತ್ರ ಇದು .



ಸರ್ವರಿಗೂ ಶುಭವಾಗಲಿ


ಬನ್ನಿ ಶ್ರೀಧರ ಸ್ವಾಮಿಗಳ  ಜೀವನದ  ಇತಿಹಾಸ ನೋಡೋಣ . ಕನ್ನಡ ನಾಡಿನ  ಮಣ್ಣಿನಲ್ಲಿ  ಹಲವು  ಐತಿಹಾಸಿಕ  ಪುಣ್ಯ ಪುರುಷರು ಜನಿಸಿದ್ದಾರೆ.  ಹಾಗೆಯೇ ಶ್ರೀಧರ ಸ್ವಾಮಿಗಳ ಜನನ  ಕರ್ನಾಟಕದ  ಗುಲಬರ್ಗ  ಜಿಲ್ಲೆಯ  ಆಳಂದ್ ತಾಲೂಕಿನ  ಲಾಡ್  ಚಿಂಚೋಳಿ  ಎಂಬ  ಹಳ್ಳಿಯಲ್ಲಿ  ಆಯಿತು.  ೧೯೦೮ ರ  ಡಿಸೆಂಬರ್  ೦೭ ರಂದು  ನಾರಾಯಣ್ ರಾವ್  ಹಾಗೂ ಕಮಲಾಬಾಯಿ ದೇಗುಲ್ಕರ್  ದಂಪತಿಗಳ  ಮಗನಾಗಿ ಜನಿಸಿದರು . ಈ ಬಾಲಕ  ಮೂರು ವರ್ಷದವನಿದ್ದಾಗ   ತನ್ನ  ತಂದೆ ತಾಯಿಯವರನ್ನು ಕಳೆದು  ಕೊಳ್ಳುತ್ತಾನೆ . ಮನೆಯ ಹಿರಿಮಗ   ತ್ರಿಂಬಕ್ ಮನೆಯ ಜವಾಬ್ಧಾರಿ ಹೊರುತ್ತಾರೆ . ಬಾಲಕ ಶ್ರೀಧರರನ್ನು   ಪ್ರಾಥಮಿಕ ಶಾಲೆಗೇ  ಹೈದರಾಬಾದಿನಲ್ಲಿ  ಸೇರಿಸುತ್ತಾರೆ. , ನಂತರ ಅನಾರೋಗ್ಯದ ಕಾರಣ,  ಅವರ ವಿಧ್ಯಾಭ್ಯಾಸ  ಗುಲಬರ್ಗ  ನಂತರ ಪುಣೆಯಲ್ಲಿ  ಸಾಗುತ್ತದೆ.   ಪುಣೆಯಲ್ಲಿರುವಾಗ  ಅಲ್ಲಿನ  ಪಲ್ನಿಟ್ಕರ್   ಎಂಬುವರು  ಈ ಬಾಲಕನ  ಆಧ್ಯಾತ್ಮಿಕ  ಲಕ್ಷಣಗಳನ್ನು ಗುರುತಿಸಿ "ಸಜ್ಜನಘಡ್ " ಎಂಬಲ್ಲಿಗೆ ಕಳುಹಿಸುತ್ತಾರೆ . ಸಂತ  ಶ್ರೀ ರಾಮದಾಸ್  ಅವರು  ನೆಲಸಿ  ಸಾಧನೆಯ ಶಿಖರ ಏರಿದ    ಜಾಗ  ಆ "ಸಜ್ಜನ್ ಘಡ್ " [ ಮಹಾರಾಷ್ಟ್ರ  ರಾಜ್ಯ] . ಆ ಜಾಗದಲ್ಲಿ  ಸಂತ ರಾಮದಾಸರ  ವಿಚಾರಗಳಿಗೆ  ಮನಸೋತು , ಅಲ್ಲಿಯೇ ಬಹುಕಾಲ ನೆಲಸಿ ಅವರ ಅನುಯಾಯಿಯಾಗಿ  ಸಾಧನೆಗೆ ತೊಡಗುತ್ತಾರೆ  ಶ್ರೀಧರ ಸ್ವಾಮಿಗಳು .  ಈ ಅವಧಿಯಲ್ಲಿ ಸಂತ ರಾಮದಾಸರ  ಪ್ರೇರಣೆಯಂತೆ  ದಕ್ಷಿಣ  ಭಾರತದ ಹಲವು ಪುಣ್ಯ ಕ್ಷೇತ್ರಗಳ  ದರ್ಶನ ಮಾಡಿ , ೧೯೪೨ ರಲ್ಲಿ  ಉತ್ತರ ಕನ್ನಡ  ಜಿಲ್ಲೆಯ  ಶೀಗೆ ಹಳ್ಳಿಯಲ್ಲಿ  ಸ್ವಾಮಿ ಶಿವಾನಂದರ  ಸಮ್ಮುಖದಲ್ಲಿ  ಸನ್ಯಾಸ ಧೀಕ್ಷೆ ಪಡೆಯುತ್ತಾರೆ .  ೧೯೪೨ ರಿಂದ ೧೯೬೭  ಸುಮಾರು ಇಪ್ಪತೈದು ವರ್ಷಗಳ  ಕಾಲ  ಭಾರತ ದೇಶದ ಹಲವು  ಪ್ರದೇಶಗಳಲ್ಲಿ  ತಮ್ಮದೇ ಹಾದಿಯಲ್ಲಿ  ಸಾಧನೆ ಮಾಡುತ್ತಾ , ೧೯೬೭ ರಲ್ಲಿ ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿನ  "ವರದ ಹಳ್ಳಿ" ಗೆ ಬಂದು  ನೆಲೆ ನಿಲ್ಲುತ್ತಾರೆ.   ೧೯೬೭ ರಿಂದ  ೧೯೭೩ ರ ವರೆಗೆ   ವರದ  ಹಳ್ಳಿಯಲ್ಲಿ ನೆಲೆಸಿ   ಇಲ್ಲಿನ ಸುತ್ತಮುತ್ತಲಿನ ಜನರಿಗೆ   ಆರಾಧ್ಯ ದೈವವಾಗಿ   ಪ್ರಕಾಶಿಸಿ  ೧೯ ಏಪ್ರಿಲ್ ೧೯೭೩ ರಲ್ಲಿ ದೇಹ ತ್ಯಾಗ ಮಾಡುತ್ತಾರೆ .


ವರದಹಳ್ಳಿಯ  ಒಂದು ನೋಟ


ಇಂತಹ  ಇತಿಹಾಸ ಉಳ್ಳ ಮಹನೀಯರ ಬಗ್ಗೆ ಹಲವರು ಹೇಳುವುದನ್ನು ಕೇಳಿದ್ದೆ  ಇಂದು ಆ ಜಾಗವನ್ನು  ನೋಡುವ ಅವಕಾಶ ಸಿಕ್ಕಿತ್ತು. ವರದ ಹಳ್ಳಿಯನ್ನು  ಪ್ರವೇಶಿಸುವಾಗ  ಅಸಾಧ್ಯ ಬಿಸಿಲು  ನಮಗೆ ಸ್ವಾಗತ ಕೊರಿತು. ಸುತ್ತಲೂ ಹಸಿರಿನಿಂದ ಕೂಡಿದ ಬೆಟ್ಟಗಳ ಶ್ರೇಣಿ  ಅವುಗಳ ನಡುವೆ ನೆಲೆಗೊಂಡಿದೆ ಈ ಪ್ರದೇಶ, ಪ್ರಕಾಶಣ್ಣ  ಇಲ್ಲಿನ ಆಚಾರಗಳ ಬಗ್ಗೆ ಮೊದಲು ಸಂಕ್ಷಿಪ್ತ  ವಿವರ ನೀಡಿದ್ದ ಕಾರಣ , ನಮ್ಮ ಪ್ಯಾಂಟು  ಷರಟು  ತೆಗೆದು ಪಂಚೆ ಉಟ್ಟು  ದೇವಾಲಯಕ್ಕೆ ಹೋಗುವ ತಯಾರಿ ನಡೆಸಿದೆವು . ಮೊದಲು ದೇವಾಲಯದ ಕಛೇರಿಗೆ  ಹೋಗಿ ಸೇವೆಯ  ಚೀಟಿ ಪಡೆದೆವು .
 

ಭಕ್ತಿಗೆ ಒಲಿಯದ  ದೇವರಿಲ್ಲ

ಅಲ್ಲಿಂದ  ನಮ್ಮ ನಡಿಗೆ  ಶ್ರೀಧರ  ತೀರ್ಥ  ಎಂದು ಕರೆವ  ಜಾಗಕ್ಕೆ ಸಾಗಿತು.  ಅಲ್ಲಿನ ನೋಟ ಬಹಳ ಹಿತಕರವಾಗಿತ್ತು,  ಹಲವಾರು ಭಕ್ತರು  ಭಕ್ತಿಯಿಂದ  ಅಲ್ಲಿನ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದರು,  ನಾವು  ಸಹ ಹಾಕಿದ ಬಟ್ಟೆಯನ್ನು ಬಿಚ್ಚದೆ  ಹಾಗೆಯೇ  ತೀರ್ಥದಲ್ಲಿ  ಮಿಂದೆವು,  ಬಹಳ ಹಿತಕರವಾದ ಅನುಭವ ಅದು.

 ಅರೆ ವರದ ಹಳ್ಳಿಯಲ್ಲಿ ನೋಡಬೇಕಾದ ಜಾಗಗಳ ಬಗ್ಗೆ  ಹೇಳಿಲ್ಲಾ ಆಲ್ವಾ  , ಬನ್ನಿ ಸನ್ನಿಧಿಗೆ ಹೋಗುವ ಮೊದಲು  ನೋಡ ಬೇಕಾದ ಜಾಗಗಳ  ಬಗ್ಗೆ ತಿಳಿಯೋಣ , ವರದ ಹಳ್ಳಿಯಲ್ಲಿ  ನೀವು ನೋಡಬೇಕಾದದ್ದು , ಮೊದಲು  ಅಲ್ಲಿನ ವರದ ತೀರ್ಥ , ಆ ನಂತರ  ಸುಂದರ ಬೆಟ್ಟ ಗುಡ್ಡಗಳ ನೋಟವನ್ನು  ಸವಿಯಿರಿ,  ಅಲ್ಲಿಂದ ಮೆಟ್ಟಿಲುಗಳನ್ನು ಹತ್ತಿದರೆ ನಿಮಗೆ ಸಿಗುವುದು ಶ್ರೀಧರ ಸ್ವಾಮಿಗಳ   ಸಮಾಧಿ ಇರುವ ದೇವಾಲಯ, ಅಲ್ಲೇ ಇದೆ  ಒಂದು ಗುಹೆ ,  ಮೂವತ್ತು ಅಡಿ  ಎತ್ತರದ ಧರ್ಮ ಸ್ಥಂಭ , ಯಜ್ಞ ಮಂಟಪ, ಗೋ ಶಾಲೆ, ಸಂಸ್ಕೃತ ಪಾಠ ಶಾಲೆ. ಅಣ್ಣ ದಾಸೋಹ ಮಂದಿರ  ಇತ್ಯಾದಿ .


ಶ್ರೀಧರ  ಸನ್ನಿಧಿಗೆ  ಸಾಗುವ ಮೆಟ್ಟಿಲುಗಳು


ಭಕ್ತಿಯಿಂದ ಸ್ನಾನ ಮಾಡಿದ ನಾವು ಶ್ರೀಧರ  ಗುಡ್ಡದ ಮೆಟ್ಟಿಲುಗಳನ್ನು  ಹತ್ತುತ್ತಾ ಸಾಗಿದೆವು . ಹಲವು ಭಕ್ತರು ದರುಶನ ಭಾಗ್ಯ ಪಡೆದು  ಪುನೀತರಾಗಿ ಎದರುಗಡೆಯಿಂದ ಬರುತ್ತಿದ್ದರು .  ಶ್ರೀಧರ ತೀರ್ಥದಲ್ಲಿ ಸ್ನಾನಮಾಡಿದ  ನಮಗೆ ಬಿಸಿಲು ಅಷ್ಟಾಗಿ ಕಾಡಲಿಲ್ಲ,  ಮೆಟ್ಟಿಲುಗಳನ್ನು ಹತ್ತಿ ಅವದೂತನ ಸನ್ನಿಧಿಗೆ ಬಂದೆವು. ಅಲ್ಲಿನ ನೋಟ ಬಹಳ ಹರ್ಷ ದಾಯಕ ವಾಗಿತ್ತು.


ಶ್ರೀಧರ  ದೇಗುಲದ  ಹೊರ ನೋಟ



ದೇವಾಲಯದ  ಸನ್ನಿಧಿಯ ನೋಟ ಸವಿದು  , ಒಳಗಡೆ ಬಂದೆವು ಧಿವ್ಯ ಸನ್ನಿಧಿಯ ದರ್ಶನ ಲಭಿಸಿತು. ಮಂಗಳಾರತಿ , ನಂತರ ಅಲ್ಲಿನ  ನಿಶ್ಯಬ್ಧ  ವಾತಾವರಣದಲ್ಲಿ  ಸುಮಾರು ಇಪ್ಪತ್ತು ನಿಮಿಷಗಳ ಕಾಲ  ಏಕ ಚಿತ್ತತೆ ಇಂದ   ನಿಶ್ಯಬ್ಧವಾಗಿ ಕುಳಿತೆ . ಮನಸಿನಲ್ಲಿದ್ದ ಕಲ್ಮಶ  ಕರಗಿ ಹೋಯಿತು,  ಮನದಲ್ಲಿ  ಹೊಸ ಉತ್ಸಾಹದ ಚಿಲುಮೆ ಚಿಮ್ಮಿತ್ತು,  ಅಲ್ಲಿನ  ಪ್ರಶಾಂತತೆ  ಮನ ಸೂರೆಗೊಂಡಿತ್ತು, 
ಬೆಳಗಿನಿಂದ ಧಣಿದಿದ್ದ ದೇಹದ ಆಯಾಸ  ದೂರವಾಗಿ, ಹೊಸ  ಚೈತನ್ಯ  ಲಭಿಸಿತ್ತು.  ದರ್ಶನ ನಂತರ  ದೇವಾಲಯದ ಸುತ್ತ  ಹಲವು ನೋಟ ನೋಡುತ್ತಾ  ಕ್ಯಾಮರಾದಲ್ಲಿ   ನೆನಪಿನ  ನೋಟಗಳನ್ನು ಸೆರೆ  ಹಿಡಿಯುತ್ತಾ ಸಾಗಿದೆ.




 ಶ್ರೀಧರ  ಸ್ವಾಮಿಗಳ  ಜೀವನದ  ಹಲವು ನೋಟಗಳು ಇಲ್ಲಿವೆ




ವಿವಿಧ ಸೇವೆ, ನಡೆಯುವ   ಪುಣ್ಯ ಮಂಟಪ ಇದು

ಸರ್ವ ಜನರ ಹಿತ ಕಾಯುವ  ಧ್ಯೇಯ  ಇಲ್ಲಿದೆ

ಶ್ರೀಧರ ಸ್ವಾಮಿಗಳು  ಬಳಸುತ್ತಿದ್ದ  ರುದ್ರಾಕ್ಷಿ  ಮಾಲೆ , ಗುಹೆಯಲ್ಲಿ ಕಂಡಿದ್ದು

ಯಾಗ ಶಾಲಾ

ಶ್ರೀಧರ ಸ್ವಾಮಿಗಳ ಪಾದುಕೆ

ಸುಂದರ ವೃಂದಾವನ

ಶ್ರೀಧರ ಸ್ವಾಮಿಗಳ ದೇವಾಲಯದ  ಸುತ್ತ   ಹೆಜ್ಜೆ ಹಾಕುತ್ತಾ ನಿಧಾನವಾಗಿ ಸಾಗುತ್ತಿದ್ದೆವು, ನಾನೂ ಹಾಗು ಪ್ರಕಾಶಣ್ಣ , ಅಲ್ಲಿಯೇ ಗೋಡೆಯ ಮೇಲೆ ಕಂಡಿತು ಹಲವು ವಿಶೇಷತೆ , ಶ್ರೀಧರ  ಸ್ವಾಮಿಗಳ  ಜೀವನದ ಹಲವು  ಚಿತ್ರಗಳು ಅಲ್ಲಿ  ಕಂಡವು .
ನಮ್ಮ  ಹಿಂಭಾಗದಲ್ಲಿ  ಇತ್ತು , ಸೇವಾ ಮಂಟಪ,  ಸುಂದರ ಮಂಟಪ  ದರ್ಶನ ಪಡೆದು,  ಮುಂದುವರೆದೆವು,


ದೇವಾ  ದರುಶನವ  ನೀಡೆಯ



ಅಲ್ಲೇ ಸಮೀಪದಲ್ಲಿ ಒಬ್ಬ  ವೃದ್ಧರು  ಗಾಲಿ  ಕುರ್ಚಿಯಲ್ಲಿ ಕುಳಿತ್ತಿದ್ದರು, ಅವರನ್ನು ದರ್ಶನಕ್ಕೆ ಕರೆದೊಯ್ಯಲು, ಅವರ ಕುಟುಂಬ  ಸಾಹಸ ಪಡುತ್ತಿತ್ತು,  ಆ ನೋಟ ನನ್ನ ಮನ ಕರಗಿಸಿತು,  ದೇವರೇ ಇವರಿಗೆ ಒಳ್ಳೆಯದು ಮಾಡಪ್ಪಾ ಅನ್ನುತ್ತಾ  ಮುಂದೆ ಸಾಗಿದೆ,  ಶ್ರೀಧರ ಸ್ವಾಮಿಗಳ  ಹಲವು ಅರ್ಥ ಪೂರ್ಣ ವಾಕ್ಯಗಳನ್ನು ಅಲ್ಲಿ  ಪ್ರಕಟ ಮಾಡಿದ್ದಾರೆ, ಅವುಗಳನ್ನು ನೋಡುತ್ತಾ ಸಾಗಿದೆ,  ಪ್ರಕಾಶಣ್ಣ ನನ್ನನ್ನು  ಶ್ರೀಧರ ಸ್ವಾಮಿಗಳು ಧ್ಯಾನ ಮಾಡಿದ  ಗುಹೆಯ  ಬಳಿ ಕರೆದೊಯ್ದರು, ಅಲ್ಲಿನ ಫೋಟೋ ತೆಗೆಯಲು ಬೆಳಕಿನ  ಅಡಚಣೆ ಇದ್ದರೂ  ಕಷ್ಟಪಟ್ಟು, ಸುಮಾರಾದ ಒಂದು ಫ್ತೋ ತೆಗೆದೇ ಅದು ಶ್ರೀಧರ ಸ್ವಾಮಿಗಳು ಉಪಯೋಗಿಸುತ್ತಿದ್ದ  ರುದ್ರಾಕ್ಷಿಮಾಲೆಯಾಗಿತ್ತು. ನಂತರ, ಯಾಗ ಶಾಲೆ, ಪಾದುಕೆ, ದರ್ಶನ ಮಾಡಿ  ಪುನೀತ ನಾದೆ.



 ಪ್ರಸಾದ ಸ್ವೀಕರಿಸಲು ನಿಂತ ಭಕ್ತರು 



ಅಲ್ಲಿನ ನೋಟ ನೋಡುತ್ತಾ , ಆ ಪ್ರದೇಶವನ್ನು  ಬಿಟ್ಟು ಹೋಗಲು ಮನಸು ತಕರಾರು ಮಾಡುತ್ತಿತ್ತು, ಆದರೂ ಒಲ್ಲದ ಮಸಿನಿಂದ ಮೆಟ್ಟಿಲುಗಳನ್ನು ಇಳಿಯುತ್ತಾ  ಸಾಗಿದೆವು, ದ್ವಜ ಸ್ಥಂಭ ನೋಡಲು  ಆಗಲಿಲ್ಲ, ಮತ್ತೊಮ್ಮೆ ನೋಡುವ  ಅವಕಾಶ  ಸಿಗಲೆಂದು  ಆಶಿಸಿ  ಮುಂದುವರೆದೆವು, ಪ್ರಸಾದ ಸ್ವೀಕಾರ ಮಾಡಲು ಭೋಜನ ಶಾಲೆಗೇ  ಬಂದೆವು . ವ್ಯವಸ್ಥಿತವಾದ  ಭೋಜನ ಶಾಲೆಯಲ್ಲಿ  ಪ್ರಸಾದ ಸ್ವೀಕರಿಸಿದೆವು. ಜೊತೆಗೆ ಅಲ್ಲಿನ  ಕೆಲವು ನಿಯಮಗಳು  ಇಷ್ಟವಾದವು, ಅವುಗಳಲ್ಲಿ,  ಊಟ ಮಾಡಿದ ತಟ್ಟೆಗಳನ್ನು  ಶುಚಿಗೊಳಿಸುವುದು,  ಊಟದ ಸಮಯದಲ್ಲಿ ಮೊಬೈಲ್  ಬಳಸದಂತೆ ತಾಕೀತು ಮಾಡಿರುವುದು  ನಿಜಕ್ಕೂ ಶ್ಲಾಘನೀಯ .



ಬೆಂಗಳೂರಿನಿಂದ  ಬರುವ ಬಸ್ಸು

ಪ್ರವಾಸ ಸ್ವೀಕರಿಸಿದ  ನಾವು ಹೊರಗೆ ಬಂದಾಗ  ಅಲ್ಲೊಂದು ಬಸ್ಸಿನಲ್ಲಿ  ವರದಹಳ್ಳಿ, ಸಾಗರ, ಪುಣೆ ಎನ್ನುವ ಬೋರ್ಡು ಇತ್ತು,   ಹೌದು ವರದ ಹಳ್ಳಿಗೆ  ಮಹಾರಾಷ್ಟ್ರದಿಂದಲೂ  ಹೆಚ್ಚಿನ ಭಕ್ತರು ಆಗಮಿಸುತ್ತಾರೆ, ಜೊತೆಗೆ ಬೆಂಗಳೂರಿನಿಂದ  ಇಲ್ಲಿಗೆ ಹಲವು ಖಾಸಗಿ  ಬಸ್ಸುಗಳು ಇಲ್ಲಿಗೆ ಭಕ್ತರನ್ನು ಕರೆತರುತ್ತವೆ.

ಇಲ್ಲಿನ ತೀರ್ಥದ  ವಿಸ್ಮಯ ನಿಜಕ್ಕೂ ಅಚ್ಚರಿ

ಮತ್ತೊಂದು ವಿಚಾರ ಇಲ್ಲಿನ  ಶ್ರೀಧರ  ತೀರ್ಥದ್ದು , ಈ  ಜಲ ಇಲ್ಲಿನ ಸುತ್ತ ಮುತ್ತಲಿನ  ಗುಡ್ಡಗಳಿಂದ  ಹಲವು ಕಾಡನ್ನು  ಬಳಸಿ ಬರುತ್ತದೆ. ಹಲವು ಔಷಧಿ ಸ್ವರೂಪದ  ಗಿಡ ಮರಗಳು, ಬೇರುಗಳನ್ನು  ಈ ಜಲ ಸ್ಪರ್ಶಿಸುವ ಕಾರಣ  ಇದು ಬಹಳ ಪವಿತ್ರ ಅನ್ನಿಸುತ್ತದೆ.   ನಿಮಗೆ ಅಲ್ಲಿ  ಹಲವು ಜನರು ದೊಡ್ಡ ದೊಡ್ಡ ಕ್ಯಾನುಗಳಲ್ಲಿ  ಅಲ್ಲಿನ ಪುಣ್ಯ ಜಲವನ್ನು ತುಂಬಿಕೊಳ್ಳುವ  ನೋಟ ಕಾಣಿಸುತ್ತದೆ,  ಮೊದಲು ನಿಮಗೆ  ಇದು ವಿಚಿತ್ರವಾಗಿ ಕಂಡರೂ  ನಿಮಗೆ ಅನುಭವ ಆದಾಗ  ಅಚ್ಚರಿ ಆಗುತ್ತದೆ . ಇಲ್ಲಿನ ತೀರ್ಥವನ್ನು ನಿಮ್ಮ ಮನೆಯಲ್ಲಿ ಎಷ್ಟು ದಿನ ಇಟ್ಟರೂ ವಾಸನೆಯಾಗಲಿ, ಅಥವಾ ಅದರ ಮೂಲ ರುಚಿಯಾಗಲಿ ಕೆಡುವುದಿಲ್ಲ, ಇದು ನಿಜಕ್ಕೂ ಅಚ್ಚರಿಯ ವಿಚಾರ . ಇದು ನನ್ನ ಅನುಭವದ ವಿಚಾರ ಕೂಡ,  ಹಲವು ಕ್ಷೇತ್ರಗಳ  ತೀರ್ಥ ತಂದು  ಮನೆಯಲ್ಲಿ ಇಟ್ಟುಕೊಂಡ ಕೆಲ  ದಿನಗಳಲ್ಲಿ  ಆ ಜಲ  ವಾಸನೆ ಬರುವುದನ್ನು ಕಂಡಿದ್ದೇನೆ, ನೀರನ್ನು  ಹಾಗೆಯೇ ಒಂದು ಬಾಟಲಿನಲ್ಲಿ  ತುಂಬಿ ಇಟ್ಟರೆ  ಕೆಲದಿನಗಳಲ್ಲಿ  ಆ ನೀರಿನಲ್ಲಿ  ಹುಳುಗಳು ಕಾಣ ಸಿಗುತ್ತವೆ, ಇದು ವೈಜ್ಞಾನಿಕ  ಸತ್ಯ, ಆದರೆ  ಶ್ರೀಧರ  ತೀರ್ಥ ಜಲ ಮನೆಗೆ ತಂದು  ಸುಮಾರು ಒಂದು ತಿಂಗಳಾದರೂ  ಮೊದಲ ದಿನ ಆ ಜಲ ಕುಡಿದಾಗ ಯಾವ  ರುಚಿ ಯಿತ್ತೋ , ಹಾಗೆ ಇಂದಿಗೂ ಇರುವುದು ನನಗೆ ವಿಸ್ಮಯ ಅನ್ನಿಸಿದೆ.


ರಾತ್ರಿ ಡಿಮ್ ಅಂಡ್ ಡಿಪ್ ಕೊಡು ಮಗಾ


ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ  ಹಾದಿಯಲ್ಲಿ ಕಣ್ಣಿಗೆ  ಬಿತ್ತು , ಆ ಬನವಾಸಿ  ಸೂಪರ್  ಬಸ್ಸು  ,  ಕೀಟಲೆಯ  ಮನಸು ಜಾಗೃತವಾಯಿತು,  ಪ್ರಕಾಶಣ್ಣ  ಇಲ್ಲಿ ನೋಡಿ ಅಂದೇ  '' ರಾತ್ರಿ ಡಿಮ್ ಡಿಪ್  ಕೊಡು ಮಗಾ''  ಎಂಭ ಘೋಷ ವಾಕ್ಯ ,  ನಮ್ಮ  ಪಟ್ಟಣ ಗಳಲ್ಲಿ ಇರಬೇಕಾದ  "ಡಕೋಟಾ   ಎಕ್ಸ್ಪ್ರೆಸ್ "   ಸ್ವಚ್ಚಂದ  ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ  ಅಂತಾ   ಜೋರಾಗಿ ನಕ್ಕೆವು.  ಇಂತಹ ಸಮಯದಲ್ಲಿಯೂ   ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ  ವಾಪಸ್ಸು  ಹೊರಟೆವು .  ಕೆಳದಿಯ ಇತಿಹಾಸದ  ಕೂಗು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ... !