Sunday, July 23, 2017

ಅರಿಯದ ಇತಿಹಾಸ ಒಡಲಲ್ಲಿ ಬಚ್ಚಿಕೊಂಡ ಶಿರಸಿಯ ಬನವಾಸಿಪಕ್ಕದ ಗುಡ್ನಾಪುರ ....!

ಗುಡ್ನಾಪುರ ಬಂಗಾರೇಶ್ವರ ದೇಗುಲ





ನಮ್ಮ ಕನ್ನಡ ನಾಡಿನ  ಇತಿಹಾಸದ  ಸೆಳೆತವೆ ಹಾಗೆ ಒಮ್ಮೆ ಬಲೆಯಲ್ಲಿ ಬಿದ್ದರೆ  ನಿಮ್ಮನ್ನು ಸುಮ್ಮನೆ ಇರಲು ಬಿಡೋದಿಲ್ಲ , ನೀವು ಸುಮ್ಮನಿದ್ದರು  ಸಹ ನಮ್ಮ ನಾಡಿನ ಇತಿಹಾಸ  ನಿಮ್ಮನ್ನು  ಬಡಿದೆಬ್ಬಿಸಿ ತನ್ನ ಒಡಲೊಳಗೆ ಸೆಳೆದುಕೊಂಡು  ಅಪ್ಪಿಕೊಂಡು ಬಿಡುತ್ತದೆ.  ನಮ್ಮ ಹೆಮ್ಮೆಯ ಕನ್ನಡ ನಾಡಿನಲ್ಲಿ   ನಮ್ಮನ್ನು  ಕೆಣಕುವ  ಐತಿಹಾಸಿಕ ತಾಣಗಳು  ಬಹಳಷ್ಟಿವೆ , ನಮ್ಮ ಪ್ರೀತಿಯ ಮನಸನ್ನು ಅವುಗಳೆಡೆಗೆ ಸ್ವಲ್ಪ ತಿರುಗಿಸಿದರೆ ಸಾಕು  ನಮ್ಮ ಹೃದಯ ಸಿಂಹಾಸನದಲ್ಲಿ  ಶಾಶ್ವತವಾಗಿ ನೆಲೆಸಿಬಿಡುತ್ತವೆ  ಈ ಐತಿಹಾಸಿಕ  ತಾಣಗಳು. ನಿಜಾ  ನನ್ನನ್ನು  ಎಡಬಿಡದೆ  ಕಾಡುವ ಐತಿಹಾಸಿಕ  ತಾಣಗಳು   ಬಹಳಷ್ಟಿವೆ, ಅಂತಹ ತಾಣಗಳಲ್ಲಿ  ಇತ್ತೀಚಿನದು  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ  ಬನವಾಸಿ  ಸಮೀಪದ  "ಗುಡ್ನಾಪುರ ".



ಗುಡ್ನಾಪುರ ದ ಸುಂದರವಾದ ಕೆರೆ 




ಎರಡುವರ್ಷಗಳ ಹಿಂದೆ  ಶಿರಸಿಯ ಇತಿಹಾಸ  ಸಮ್ಮೇಳನಕ್ಕೆ  ಬಂದಿದ್ದಾಗ  ಕೆಲವು ಗೆಳೆಯರೊಡನೆ ಚರ್ಚಿಸುವಾಗ  ನಮ್ಮ  "ಶಿರಸಿ ಸಿರಿ"  ಪತ್ರಿಕೆಯ  "ಸಚಿನ್"      ಸಾರ್  ಹೇಗೂ ಬನವಾಸಿಗೆ ಹೋಗ್ತೀರಲ್ಲಾ  ಅಲ್ಲೇ ಹತ್ತಿರದಲ್ಲೇ ಗುಡ್ನಾಪುರ   ಅಂತಾ  ಒಂದು ತಾಣ ಇದೆ , ಬಹುಷಃ  ನಿಮಗೆ  ಇಷ್ಟಾ ಆಗುವ ತಾಣ ಅದು ಅಂತಾ   ಆಸೆ ಹುಟ್ಟಿಹಾಕಿದರು . ಇನ್ನೇನು  ಬನವಾಸಿಗೆ ಹೋಗ್ತೀವಲ್ಲಾ  ಗುಡ್ನಾಪುರಕ್ಕೂ  ಹೋಗೋಣಾ ಅಂದ್ರು ಜೊತೆಯಲ್ಲಿದ್ದವರು , ಹೊರಟಿತು ಸವಾರಿ   ಗುಡ್ನಾಪುರಕ್ಕೆ, ಶಿರಸಿಯಿಂದ  ಬನವಾಸಿ ರಸ್ತೆಯಲ್ಲಿ ಕ್ರಮಿಸಿದರೆ   ನಡುವೆ ಸುಮಾರು 18 ಕಿಲೋಮೀಟರು ದೂರದಲ್ಲಿ  ಎಡಕ್ಕೆ ತಿರುಗಿ  ಸ್ವಲ್ಪ ದೂರ ಮಣ್ಣಿನ  ಹಾದಿಯಲ್ಲಿ ಸಾಗಿದರೆ ನಿಮಗೆ ಗುಡ್ನಪುರದ  ಐತಿಹಾಸಿಕ  ತಾಣ ತಲುಪಬಹುದು . ತನ್ನ ಒಡಲಲ್ಲಿ  ಸುಂದರವಾದ ಹಾಗು ವಿಶಾಲವಾದ ಕೆರೆಯನ್ನು  ಅಡಗಿಸಿಕೊಂಡು , ಆ ಕೆರೆಯ ಸುತ್ತಾ  ರಚಿತವಾಗಿರುವ  ಒಂದು ಐತಿಹಾಸಿಕ  ಮಹತ್ವ ಪಡೆದಿರುವ  ಈ ಗುಡ್ನಾಪುರ. ಗುಡ್ನಾಪುರದ  ನಿಸರ್ಗದ  ವಿಶೇಷ ಅಂದ್ರೆ   ಒಂದು ಸುಂದರವಾದ  ವಿಶಾಲವಾದ  ಕೆರೆಯನ್ನು ಹೊಂದಿರುವುದು  , ಅದರ ಸುತ್ತ ಮುತ್ತ  ಹಸಿರಿನ ಗದ್ದೆಗಳು,   ಕೆರೆ ಮತ್ತು ಹಸಿರನ್ನು  ನಂಬಿ ಬದುಕುವ  ಹಲವು ಬಗೆಯ ಪಕ್ಷಿಗಳು . ಕೆರೆಯ ದಂಡೆಯ ಮೇಲೆ   ಆಧುನಿಕ ಶೈಲಿಯ    ಬಂಗಾರೇಶ್ವರ  ದೇವಾಲಯ ಕಂಡು ಬರುತ್ತದೆ.








ಬಂಗಾರೇಶ್ವರ ಸ್ವಾಮಿ ಮೂರ್ತಿ 



ಗುಡ್ನಾಪುರದ ಕೆರೆಯ ದಡದಲ್ಲಿ  ಬಂಗಾರೇಶ್ವರ, ಕರಿಯಮ್ಮ, ಮರಿಯಮ್ಮ  ಎಂಬ ಮೂರು   ದೇಗುಲಗಳು ಕಂಡುಬರುತ್ತವೆ ಸುತ್ತಮುತ್ತಲಿನ   ಗ್ರಾಮದ    ಗ್ರಾಮಸ್ಥರು / ಅದರಲ್ಲೂ  ಹೆಣ್ಣುಮಕ್ಕಳು  ತಮ್ಮ ಮನೆಯಲ್ಲಿ  ಸಂತಾನ ಪ್ರಾಪ್ತಿಯಾಗದಿದ್ದರೆ  ಈ ದೇಗುಲಗಳಿಗೆ  ತಮ್ಮ ಕುಟುಂಬದಲ್ಲಿ  ಸಂತಾನ ಪ್ರಾಪ್ತಿಯಾದರೆ   ತೊಟ್ಟಿಲನ್ನು ಅರ್ಪಿಸುವ  ಬಗ್ಗೆ  ಹರಕೆ  ಹೊತ್ತುಕೊಳ್ಳುತ್ತಾರೆ  ,    ಹಾಗು ಅದರಂತೆ ಭಕ್ತಿಯಿಂದ  ನಡೆದುಕೊಳ್ಳುವುದಾಗಿ ತಿಳಿದು ಬಂತು. ಈ ಮೂರೂ ದೇವಾಲಯಗಳು  ಗ್ರಾಮದ  ಜನಜೀವನದ ಅಂಗವಾಗಿವೆ. ಇಂತಹ  ಗ್ರಾಮಕ್ಕೆ ಬಂದ ನಮ್ಮನ್ನು  ಕೆಲವು ಗ್ರಾಮಸ್ಥರು  ಪ್ರೀತಿಯಿಂದ  ಬರಮಾಡಿಕೊಂಡರು . ಮೈಸೂರಿ ನವರು ಎಂಬುದನ್ನು ತಿಳಿದು  ಮತ್ತಷ್ಟು  ಆದರದಿಂದ  ನಮ್ಮನ್ನು  ಐತಿಹಾಸಿಕ ಜಾಗಕ್ಕೆ ಕರೆದುಕೊಂಡು ಹೋದರು.



ಗುಡ್ನಾಪುರದ  ಪರಿಸರ 


ಇವನ್ಯಾವ್ನ್ರೀ  ಅದ್ಯಾವ್ದೋ  ಇತಿಹಾಸ ಅಂತಾ  ಯಾವ್ದೋ "ಗುಡ್ನಾಪುರ"   ಅನ್ನೋ  ಹಳ್ಳಿಗೆ ಹೋಗಿ   ಬೊಗಳೆ ಹೊಡೀತಾನೆ  ಅನ್ನಬಹುದು ಕೆಲವರು,  ನಿಜಾ ಸಾರ್  ಮೊದಲು ನಾನೂ ಹಾಗೆ ಅನ್ಕೊಂಡಿದ್ದೆ , ಆದ್ರೆ ಈ ಊರಿನ ಬಗ್ಗೆ ಕೆದಕುತ್ತಾ  ಹೋದಾಗ  ಅಚ್ಚರಿ ಎಂಬ  ಇತಿಹಾಸ ಎದ್ದುಬಂತು.   ಬನ್ನಿ ಈ ಊರಿನ ಬಗ್ಗೆ ಸ್ವಲ್ಪ ತಿಳಿಯೋಣ

ಶಿರಸಿ ತಾಲೂಕಿನಲ್ಲಿ  ಇತಿಹಾಸ ಅಂದ್ರೆ  ಬನವಾಸಿ ಅನ್ನೋದು ವಾಡಿಕೆಯಾಗಿತ್ತು, ಸೋಂದಾ , ಶಿರಸಿ, ಸಹಸ್ರಲಿಂಗ , ಮುತ್ತಿನಕೆರೆ,   ಮಂಜುಗುಣಿ, ಯಾಣ, ಕೊಳಗಿ ಬೀಸ್  ಮುಂತಾದ    ತಾಣಗಳು ಐತಿಹಾಸಿಕ ಪುರಾವೆಯನ್ನು ಬಹುಬೇಗ ಪ್ರಕಟಮಾಡಿಕೊಂಡು ಜನರ ಗಮನ ಸೆಳೆದಿದ್ದವು, ಆದರೆ  ಬನವಾಸಿ ಯಿಂದ ಕೇವಲ ಮೂರು ನಾಲ್ಕು ಕಿಲೋಮೀಟರು  ದೂರವಿದ್ದ ಗುಡ್ನಾಪುರ   1988 ರವರೆಗೆ  ತನ್ನ ಇತಿಹಾಸದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.  ಬೆಳಗಾವಿ ಜಿಲ್ಲೆಯ  ಖಾನಾಪುರ  ತಾಲೂಕಿನ  ಹಲಸಿಯಲ್ಲಿ   ಗುಡ್ನಾಪುರದ  ಇತಿಹಾಸದ ಬಗ್ಗೆ ಸಿಕ್ಕ  ಕೆಲವು ಆಧಾರಗಳ ಮೇಲೆ  1988  ರಲ್ಲಿ   ಕೇಂದ್ರ ಪ್ರಾಚ್ಯ ವಸ್ತು ಸಂರಕ್ಷಣಾ  ಇಲಾಖೆಯವರು  ಹಾಗು ಕೆಲವು ವಿಧ್ವಾಂಸರು ಇತ್ತ ಗಮನಹರಿಸಿ  1988 ರಿಂದ 1992 ರ ವರೆಗೆ  ಉತ್ಕನನ  ನಡೆಸಿ ,  ಈ ಊರಿನ ಇತಿಹಾಸಕ್ಕೆ ಒಂದು ರೂಪ ಕೊಡುತ್ತಾರೆ,  ಸಂಶೋಧನೆ ಸಮಯದಲ್ಲಿ  ಕಂಡುಬಂದ  ಒಂದು ಶಾಸನ ಸ್ಥಂಬ ಹಾಗು  ಕೆಲವು  ಕಟ್ಟಡಗಳ ಅವಶೇಷಗಳು  ಬನವಾಸಿ ಕದಂಬರ  ಇತಿಹಾಸದ  ಬಗ್ಗೆ ಹೆಚ್ಚಿನ  ಬೆಳಕು ಚೆಲ್ಲಿವೆ.




ಗುಡ್ನಾಪುರ ಇತಿಹಾಸದ ಒಂದು ಅವಶೇಷ 


ನಮಗೆಲ್ಲಾ  ತಿಳಿದಂತೆ  ಮಯೂರ ಶರ್ಮ / ಮಯೂರ ವರ್ಮ  ನಿಂದ ಸ್ಥಾಪಿತವಾದ   ಬನವಾಸಿಯ  ಕದಂಬ  ರಾಜವಂಶ  ಕ್ರಿಸ್ತ  ಶಕ  345–565  ರವರೆಗೆ  ಮೆರೆದದ್ದು    ಇತಿಹಾಸ , ಇದೆ ಅವಧಿಯಲ್ಲಿ  ರಾಜಧಾನಿ  ಬನವಾಸಿಯಾಗಿದ್ದರೂ ಸಹ   ಹಲಸಿ, ಹಾಗು ಗುಡ್ನಾಪುರಗಳೂ ಸಹ   ಆಡಳಿತದಲ್ಲಿ  ಪ್ರಾಮುಖ್ಯತೆ ಪಡೆದ ತಾಣಗಳಾಗಿದ್ದವು, ಜೊತೆಗೆ  ಬನವಾಸಿ ಕದಂಬರ ಕಾಲದಲ್ಲಿ  ಸ್ಥಳೀಯವಾಗಿ  ಬಳಕೆಯಲ್ಲಿದ್ದ  ಕನ್ನಡವನ್ನು  ಆಡಳಿತ ಭಾಷೆ ಯನ್ನಾಗಿ  ಅಳವಡಿಸಿಕೊಳ್ಳಲಾಯಿತು,  ಹಾಗಾಗಿ  ಪ್ರಪ್ರಥಮವಾಗಿ  ಆಡಳಿತ ಭಾಷೆಯನ್ನಾಗಿ ಕನ್ನಡವನ್ನು  ಜಾರಿಗೆ ತಂದವರು ಬನವಾಸಿ ಕದಂಬರು  ಮಾತ್ರ. ಜೊತೆಗೆ ಸಂಸೃತ  ಇದ್ದಿತಾದರೂ  ಹೆಚ್ಚಾಗಿ ಬಳಕೆಯಲ್ಲಿದ್ದುದು  ಕನ್ನಡ ಭಾಷೆ.     ಕದಂಬರ ಕಾಲದಲ್ಲಿ ಅತೀ ಪ್ರಾಮುಖ್ಯತೆ  ಪಡೆದ ಎರಡು ಧರ್ಮಗಳು  ಹಿಂದೂ ಹಾಗು ಜೈನ  ಧರ್ಮಗಳು . ಹಾಗಾಗಿ ಕದಂಬರ ಕಾಲದಲ್ಲಿ ನಮಗೆ ಕಂಡು ಬರುವುದು ದೇವಾಲಯಗಳು ಹಾಗು ಜೈನ ದೇಗುಲಗಳು, ಬಸದಿಗಳು ಇತ್ಯಾದಿ. ಅಂತೆಯೇ ಗುಡ್ನಾಪುರದ ಇತಿಹಾಸ   ಬನವಾಸಿ ಕದಂಬರ  ಕಾಲಕ್ಕೆ  ಸರಿಯಾಗಿ  ಹೊಂದಾಣಿಕೆ ಆಗಿದೆ. ಕದಂಬರ ಇತಿಹಾಸ ತಿಳಿಯಲು ನಮಗೆ  ಶಿವಮೊಗ್ಗ ಜಿಲ್ಲೆಯ ತಾಳಗುಂಡ, ಗುಂಡನೂರು, ಚಿತ್ರದುರ್ಗ ಸಮೀಪದ  ಚಂದ್ರವಳ್ಳಿ,  ಬೆಳಗಾವಿ ಜಿಲ್ಲೆಯ  ಹಲಸಿ,  ಹಾಗು ಹಾಸನ ಜಿಲ್ಲೆಯ ಹಲ್ಮಿಡಿ  ಶಾಸನಗಳು  ಮಾತ್ರ ಸಹಾಯ ಮಾಡುತ್ತವೆ, ಈ ಸ್ಥಳಗಳು ಕದಂಬರ ಆಡಳಿತ ಕಾಲದಲ್ಲಿ  ಹೆಚ್ಚಿನ ಮಹತ್ವ ಪಡೆದ   ಆಡಳಿತಾತ್ಮಕ  ಸ್ಥಳಗಳೆಂದು  ತಿಳಿಯಬಹುದಾಗಿದೆ. 



ಗುಡ್ನಪುರ ಜೈನ ಮಂದಿರ ಹಾಗು ಅರಮನೆ  ಇದ್ದ ಪ್ರದೇಶಗಳ ಅವಶೇಷ 

  
ದೇಗುಲದ ಒಳಗೆ ಕಂಡುಬರುವ  ಜೈನ ಮೂರ್ತಿ 
ದೇಗುಲದ ಒಳಗೆ ನೆಲಕ್ಕೆ ಒರಗಿರುವ ಮೂರ್ತಿ 

ಶಿಥಿಲಗೊಂಡ   ರತಿ ಮನ್ಮಥ  ಮೂರ್ತಿ

.
ಶಿಥಿಲ ಗೊಂಡ ಗಣಪತಿ .





ದೇಗುಲದ ಒಳಗೆ ಕಲಾತ್ಮಕ  ಕಂಬ 





ಯಾವ  ಐತಿಹಾಸಿಕ ಘಟನೆಯ ಸಾಕ್ಷಿಯೋ   ಮೂಲೆ ಸೇರಿದೆ. 



ಕದಂಬ  ಅರಸರ  ಪೀಳಿಗೆಯ ಮೊದಲ ದೊರೆ ಮಯೂರ ಶರ್ಮ  ಹಾಗು ಕೊನೆಯ ದೊರೆ  ಕೃಷ್ಣ  ವರ್ಮ ಅಂದರೆ  ಕದಂಬರ ಆಳ್ವಿಕೆ ಕಾಲ ಕ್ರಿಸ್ತ  ಶಕ  345–565  ರವರೆಗೆ ನಡೆಯಿತು,  ಕ್ರಿಸ್ತ ಶಕ  345  ಕ್ರಮವಾಗಿ, ಮಯೂರಶರ್ಮ , ಬಗಿತರ್ಹ ,ರಘು, ಕಕುತ್ಸವರ್ಮ , ಶಾಂತಿವರ್ಮ , ಮ್ರಿಗೇಶವರ್ಮ , ಶಿವಮಂದತಿ ವರ್ಮ, ರವಿವರ್ಮ , ನಂತರ  ತ್ರಿಪರ್ವತ  ಶಾಖೆಯಿಂದ , ಕೃಷ್ಣ ವರ್ಮ 1, ವಿಷ್ಣುವರ್ಮ, ಸಿಂಹ ವರ್ಮ,  ನಂತರ   ಕದಂಬ ವಂಶದ ಕೊನೆಯ  ದೊರೆ ಕೃಷ್ಣ ವರ್ಮ2  ಮೊದಲು  ಹಿಂದೂ ಧರ್ಮ ಪಾಲಿಸಿದ ಕದಂಬರ ಅರಸರುಗಳು  ನಂತರ   ಜೈನ ಧರ್ಮಕ್ಕೆ ಕೂಡಾ ಪ್ರೋತ್ಸಾಹ ಕೊಟ್ಟಿರುವುದು  ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ .     ಈ ನಡುವೆ  ಕ್ರಿಸ್ತ ಶಕ 485  ರಿಂದ 519 ರವರೆಗೆ  ಬನವಾಸಿಯಲ್ಲಿ ಆಡಳಿತ ನಡೆಸಿದ  ಕದಂಬ ರವಿವರ್ಮ  ಗುಡ್ನಾಪುರದಲ್ಲಿ  ಜೈನ  ಧರ್ಮಕ್ಕೆ ಸೇರಿದಂತೆ ಮನ್ಮಥ ದೇವಾಲಯವನ್ನು ಕಟ್ಟಿಸಿರುವುದಾಗಿ ತಿಳಿದು ಬರುತ್ತದೆ, ಜೊತೆಗೆ ಅದೇ ಕಾಲದಲ್ಲಿ  ದೇವಾಲಯದ ಜೊತೆಗೆ  ರಾಜರ  ಅರಮನೆ  ಸಹ ಇದ್ದಿತೆಂದು ತಿಳಿದು ಬರುತ್ತದೆ , ಇದನ್ನು  ಪುಷ್ಟೀಕರಿಸುವ  ಸಾಕ್ಷಿಗಳನ್ನು ಇಂದಿಗೂ ಸಹ ನಾವು ಕಾಣಬಹುದು, ಶಿವಮಂದತಿ ವರ್ಮ ಹಾಗು ಆನಂತರ   ರವಿವರ್ಮ   ಜೈನ ಧರ್ಮವನ್ನು ಪಾಲಿಸಿರುವುದು   ಕಂಡುಬರುತ್ತದೆ.  ಹಾಗಾಗಿ  ಗುಡ್ನಾಪುರದಲ್ಲಿ  ಜೈನ ಧರ್ಮಕ್ಕೆ   ಅನುಗುಣವಾಗಿ   ಬೆಳವಣಿಗೆಗಳು ಕಂಡುಬಂದಿವೆ.  ಈ ದೇಗುಲವನ್ನು   ಗುರುತಿಸುವ ಬಗ್ಗೆ   ಎರಡುಬಗೆಯ ದ್ವಂದ್ವ  ಕಂಡುಬರುತ್ತದೆ.  ಈ ದೇಗುಲವನ್ನು ರತಿ   ಮನ್ಮತ ದೇಗುಲವೆಂದು ಕರೆಯುತ್ತಿದ್ದರೆಂದೂ  ಹೇಳಲಾಗುತ್ತದೆ, ಅದಕ್ಕೆ ಪೂರಕವಾಗಿ ಇಲ್ಲಿ ವಸಂತೋತ್ಸವ  ಹಬ್ಬದ ಆಚರಣೆ ಇತ್ತೆಂದು  ಹೇಳುವ ಒಂದು ವಾದವಿದೆ, ಇನ್ನೊಂದು ವಾದ  ಮನ್ಮಥ ಅಂದರೆ ಜೈನ ಧರ್ಮದಲ್ಲಿ  ಬಾಹುಬಲಿ ಎಂಬ ಅರ್ಥ ವಿದೆ  ಹಾಗಾಗಿ ಇದು  ಮನ್ಮಥ  ಮಂದಿರ ಅಂದರೆ ಬಾಹುಬಲಿ ಗೆ ಅರ್ಪಿತವಾದ ಮಂದಿರ ಎನ್ನಲಾಗುತ್ತಿದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು  ಎಂಬ ಬಗ್ಗೆ ಸ್ಪಷ್ಟ  ಚಿತ್ರಣ ಸಿಗಬೇಕಿದೆ. ನಂತರ  ಇದೆ ಪ್ರದೇಶದಲ್ಲಿ  ರವಿವರ್ಮನ  ಕಾಲದ ಬ್ರಾಹ್ಮೀ ಲಿಪಿಯ ಐತಿಹಾಸಿಕ ಶಾಸನ ಕಂಡು ಬರುತ್ತದೆ. 





ರವಿವರ್ಮನ ಶಾಸನ ಸ್ಥಂಬ


  ಬ್ರಾಹ್ಮಿ  ಲಿಪಿಯ ಶಾಸನ 



ಗ್ರಾಮಸ್ಥರ  ನೆರವಿನೊಂದಿಗೆ ಗುಡ್ನಾಪುರದ ಐತಿಹಾಸಿಕ  ಸ್ಥಳಕ್ಕೆ ಬಂದ ನಮಗೆ  ಮೊದಲು ದರ್ಶನ ಕೊಟ್ಟಿದ್ದು  ಒಂದು ಶಾಸನ ಸ್ತಂಭ , ಶಿಥಿಲವಾಗಿದ್ದ ಅದಕ್ಕೆ  ರಕ್ಷಣೆಗಾಗಿ  ನಿಲ್ಲಿಸಿದ  ಕಬ್ಬಿಣದ  ಸರಳುಗಳು  ಹಾಗು ಸ್ಮಾರಕಕ್ಕೆ  ನೆರಳು ನೀಡಲು  ಒಂದು ಶೀಟಿನ  ಚಾವಣಿ .  ಹತ್ತಿರ  ನಡೆದು ನೋಡಿದಾಗ   ಗೋಚರಿಸಿದ್ದು ಸ್ಥಂಬದ  ನಾಲ್ಕೂ ಬದಿಯಲ್ಲಿ  ಚಪ್ಪಟೆ ಆಕಾರದ  ಜಾಗದಲ್ಲಿ  ಶಾಸನ ರಚನೆ , ಮತ್ತಷ್ಟು ಹತ್ತಿರ ಹೋಗಿ ನೋಡಿದಾಗ  ಆ ಶಾಸನದ ಕೆಲವು ಸಾಲುಗಳು, ಅಕ್ಷರಗಳು ವಿರೂಪವಾಗಿದ್ದವು.  ನಂತರ ನನ್ನ ಕ್ಯಾಮರದಲ್ಲಿ ಕೆಲವು ಚಿತ್ರಗಳನ್ನು ತೆಗೆದು  ಐತಿಹಾಸಿಕ  ದಾಖಲೆಗಳ  ಪರಿಶೀಲನೆ   ಮಾಡಿದಾಗ  ಕದಂಬ ದೊರೆ ರವಿವರ್ಮನು  ಚೈತ್ರಮಾಸದಲ್ಲಿ ಜರುಗಿದ   ಮನ್ಮತೋತ್ಸವದ  ಅಥವಾ ವಸಂತೋತ್ಸವದ  ಸಂದರ್ಭ ದಲ್ಲಿ  ಮನ್ಮತ ದೇಗುಲವನ್ನು ನಿರ್ಮಾಣ ಮಾಡಿದನೆಂದು ತಿಳಿಸಿ, ಹಲವು ಧಾರ್ಮಿಕ ಕಾರ್ಯಕ್ರಮಗಳಿಗಾಗಿ  ನೀಡಿದ ದತ್ತಿಯನ್ನು,  ಗುಡ್ನಾಪುರದ [ ಅಂದಿನ ಗುಡ್ಡ ತಟಾಕ ] ಕೆರೆಯನ್ನು ಕಟ್ಟಿಸಿದ ಬಗ್ಗೆ  ಹಾಗು  ಕದಂಬರ ವಶಾವಳಿಯ ಉಲ್ಲೇಖ ವಿರುವುದಾಗಿ ತಿಳಿದುಬರುತ್ತದೆ. ಈ ಶಾಸನದ ಅಚ್ಚರಿಯೆಂದರೆ  ಗುಡ್ನಾಪುರದ  ಕೆರೆಯನ್ನು   ಕದಂಬರ ಆಳ್ವಿಕೆಕಾಲದಲ್ಲಿ  ಗುಡ್ಡದ ತಟಾಕ  ಎನ್ನುತ್ತಿದ್ದುದು. ಜೊತೆಗೆ  ಆ ಕೆರೆ ಕದಂಬರ  ಬಳುವಳಿ ಎಂಬುದು  ಸಹ  ಹೆಮ್ಮೆಯ ವಿಚಾರ.   ಆದಿ ಕವಿ ಪಂಪನೂ  ಸಹ ತನ್ನ ಕಾವ್ಯಗಳಲ್ಲಿ   ವಸಂತೋತ್ಸವದ  ಬಗ್ಗೆ ಉಲ್ಲೇಖ ಮಾಡಿದ್ದು,   ಈ ತಾಣ  ಬನವಾಸಿಯ ಬಹಳ ಸಮೀಪವೇ ಇರುವ  ಕಾರಣ, ಗುಡ್ನಾಪುರಕ್ಕೂ  ಪಂಪನ   ಆಗಮನವಾಗಿತ್ತು ಎಂಬುದು ನಿರ್ವಿವಾದ.  







ಕದಂಬರ ಕೊಡುಗೆ ಈ ಸುಂದರವಾದ  ಗುಡ್ನಾಪುರದ ಕೆರೆ 


 ಶಾಸನ  ಸ್ತಂಭ ನೋಡಿಕೊಂಡು ಮುಂದೆ ಬಂದ ನಮಗೆ ಗೋಚರಿಸಿದ್ದು , ವಿಶಾಲವಾದ ಪ್ರದೇಶದಲ್ಲಿ  ಹರಡಿದ್ದ ಐತಿಹಾಸಿಕ  ಅರಮನೆ ಹಾಗು   ದೇಗುಲದ  ಅವಶೇಷಗಳು . ದಪ್ಪನಾದ  ಇಟ್ಟಿಗೆ , ಗಡುಸಾದ ಮಣ್ಣು,   ಅಂದಿನ ಕಾಲದಲ್ಲಿ  ತಯಾರಾಗುತ್ತಿದ್ದ  ಗಾರೆ ಗಚ್ಚು  ಗಳನ್ನೂ ಬಳಸಿ  ಕಟ್ಟಿದ್ದ  ಈ ಅರಮನೆ ಹಾಗು ದೇಗುಲ  ಗತಕಾಲದ  ತಾಂತ್ರಿಕತೆಯ  ಕೌಶಲದ  ಗುಟ್ಟನ್ನು ತನ್ನೊಳಗೆ  ಅಡಗಿಸಿಕೊಂಡಿವೆ. 





ದೇಗುಲದ ದರ್ಶನ 


ಅವಶೇಷಗಳನ್ನು ದಾಟಿಕೊಂಡು  ಒಂದು ಎತ್ತರದ  ಜಾಗದಲ್ಲಿದ್ದ  ದೇಗುಲವನ್ನು  ಪ್ರವೇಶ ಮಾಡಿದೆವು,  ದೇಗುಲದ ಒಳಗೆ ನಮಗೆ ಜೈನ ಧರ್ಮದ  ಹಾಗೂ  ಹಿಂದೂ ಧರ್ಮದ  ಶಿಥಿಲಗೊಂಡ   ಮೂರ್ತಿಗಳು ಕಂಡುಬರುತ್ತವೆ.  ಮೊದಲು ಈ ದೇಗುಲ ಜೈನ ದೇಗುಲವಾಗಿದ್ದು ಕಾಲಾನಂತರ ವೀರಭದ್ರ ದೇವಾಲಯವಾಗಿ  ಪರಿವರ್ತಿತಗೊಂಡಿರುವುದು  ಕಾಣಸಿಗುತ್ತದೆ. ಆ ದೇಗುಲದಲ್ಲಿ    ಗರ್ಭಗೃಹ, ಅರ್ಧಮಂಟಪ, ನವರಂಗ , ಕಾಣಸಿಕ್ಕರೂ  ಎಲ್ಲೆಡೆಯೂ  ಶಿಥಿಲವಾದ  ಮೂರ್ತಿಗಳಿಂದ   ತನ್ನ ಅಂದ ಕಳೆದುಕೊಂಡಿವೆ,  ದೇಗುಲದ ಒಳಗಡೆ ಸುಂದರ ಕಂಬಗಳೂ ಸಹ  ತಮ್ಮ ಅಂದ ಕಳೆದುಕೊಳ್ಳುತ್ತಾ ಇವೆ. ಎತ್ತರದ ತ್ರದೆಶದಲ್ಲಿರುವ ದೇವಾಲಯದಿಂದ  ಹೊರಬಂದರೆ ನಿಮಗೆ ದೇವಾಲಯದ ಸುತ್ತಾ  ಅರಮನೆ ಇದ್ದ ಬಗ್ಗೆ  ಅವಶೇಷಗಳು ಗೋಚರಿಸುತ್ತವೆ. ಅಂದಿನ ದಿನಗಳಲ್ಲಿ ಕದಂಬರ  ಆಡಳಿತದ  ಭಾಗವಾಗಿದ್ದ ಈ ಅರಮನೆ  ಎಷ್ಟು ಸುಸಜ್ಜಿತವಾಗಿತ್ತು ಎಂಬ ಬಗ್ಗೆ ಕಲ್ಪಿಸಿಕೊಂಡರೆ  ನಿಜಕ್ಕೂ ಅಚ್ಚರಿಯಾಗುತ್ತದೆ. 





ಅರಮನೆಯ ಅವಶೇಷ ..1



ಗುಡ್ನಾಪುರದ ಕೆರೆಯ ದಂಡೆಯ ಮೇಲಿತ್ತು ಅರಮನೆ 




ಹೌದು ಕದಂಬರ ಕಾಲದಲ್ಲಿ ಬನವಾಸಿಗೆ ಎಷ್ಟು ಪ್ರಾಮುಖ್ಯತೆ  ಇತ್ತೋ ಅಷ್ಟೇ ಪ್ರಾಮುಖ್ಯತೆ   ಗುಡ್ನಾಪುರಕ್ಕೂ ಇತ್ತೆಂದು ಕಾಣುತ್ತದೆ,  ಬನವಾಸಿಯಿಂದ  ಕೇವಲ ಮೂರು ಕಿಲೋಮೀಟರು  ಇರುವ ಈ ಪ್ರದೇಶ  ಕದಂಬರ  ಆಡಳಿತ ಕೇಂದ್ರ ಆಗಿರುವ ಎಲ್ಲ ಸಾಧ್ಯತೆಗಳನ್ನು  ಕಡೆಗಣಿಸುವಂತಿಲ್ಲ, ಹಾಗಾಗಿ ಇಲ್ಲಿ  ಗುಡ್ನಾಪುರ  ಕೆರೆಯ   ದಡದಲ್ಲಿ  ವಸಂತೋತ್ಸವ  ದ ಅಂಗವಾಗಿ  ರತಿ ಮನ್ಮಥ  ದೇವಾಲಯ ನಿರ್ಮಾಣ ಮಾಡಿದ್ದ ಕದಂಬರು  ಗುಡ್ನಾಪುರದಲ್ಲಿ   ಆಡಳಿತದ  ಅಂಗವಾಗಿ   ಅರಮನೆ ಕಟ್ಟಿದ್ದರೆಂಬುದು  ಇಲ್ಲಿನ ಅವಶೇಷಗಳ  ವಿವರಗಳನ್ನು  ಐತಿಹಾಸಿಕ ದಾಖಲೆಗಳೊಂದಿಗೆ  ತಾಳೆಮಾಡಿದಲ್ಲಿ  ಕಂಡುಬರುತ್ತದೆ.






 ಶತಮಾನಗಳ  ಇತಿಹಾಸದ  ಸಾಕ್ಷಿ ಈ ಹಳೆಯ ಮರ  ಹಾಗು ಅದರ ಪಕ್ಕದಲ್ಲಿ ಕಾಣುವ  ಕೆರೆ. 


ಆದರೆ ಕಾಲಾನಂತರ  "ಗುಡ್ನಾಪುರದ ಇತಿಹಾಸ"  ತನ್ನ ಗತ ವೈಭವಗಳನ್ನು ಕಳೆದುಕೊಂಡು , ಬನವಾಸಿಯ ಸನಿಹ ಇದ್ದರೂ  ಬನವಾಸಿಯಂತೆ  ಮೆರೆದಾಡದೆ  , ಸದ್ದಿಲ್ಲದೇ   ಮರೆಯಾಗಿಬಿಟ್ಟಿತು.  ಇಂದಿಗೂ   ತನ್ನ ಗತ ವೈಭವಕ್ಕೆ ಆದ ಗಾಯವನ್ನು  ವಾಸಿಮಾಡಿಕೊಳ್ಳಲು ಆಗದೆ  ನಿಟ್ಟುಸಿರು ಬಿಡುತ್ತಾ   ಮಲಗಿಬಿಟ್ಟಿದೆ.  ನಿಜಾ  ಈ ಎಲ್ಲಾ  ಇತಿಹಾಸದ ಸಾಕ್ಷಿಯಾಗಿ  ಗುಡ್ನಾಪುರದ ಕೆರೆ ,   ಇದನ್ನೆಲ್ಲಾ  ಕಾಣುತ್ತಾ  ಒಮ್ಮೆಲೇ ಯಾವುದೋ ನೋವಿನ  ಲೋಕದೊಳಗೆ   ಮುಳುಗಿ ಹೋಗಿದ್ದ    ನಾನು  ಎಚ್ಚರ ಗೊಂಡಿದ್ದು,  ಆ ಹಳ್ಳಿಗರ  ಮಾತಿಗೆ . 




ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು 


ಸಾರ್ ಬಹಳ  ದೂರದಿಂದ ಬಂದಿದ್ದೀರಿ ನಮಗೆ  ತುಂಬಾ  ಸಂತೋಷ ಆಯ್ತು , ಎನ್ನುತ್ತಾ  ನಮ್ಮ  ತಂಡವನ್ನು   ಐತಿಹಾಸಿಕ ಪ್ರದೇಶದ  ಪ್ರವೇಶ ದ್ವಾರದ ವರೆಗೂ ಬಂದು   ಪ್ರೀತಿಯಿಂದ  ಬೀಳ್ಕೊಟ್ಟರು.  ನನಗೋ  ಒಂದೆಡೆ  ಐತಿಹಾಸಿಕ   ಪ್ರದೇಶ ನೋಡಿದ  ಸಂತಸ ಮತ್ತೊಂದೆಡೆ ನರಳುತ್ತಿರುವ ಇತಿಹಾಸಕ್ಕೆ  ಸಾಂತ್ವನ ಹೇಳಲಾಗದ  ಸಂಕಟ.  ಭಾರವಾದ  ಹೃದಯದೊಡನೆ ನಿಟ್ಟುಸಿರು ಬಿಡುತ್ತಾ    ಅಲ್ಲಿಂದ ಹೊರಡಲು  ಸಿದ್ಧನಾದೆ , ದೂರದಲ್ಲಿ ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು  ಇತಿಹಾಸದ ಕಣ್ಣೀರು ಒರೆಸಲಾರದೆ    ನಿಟ್ಟುಸಿರು ಬಿಡುತ್ತಾ   ನಿಂತರು.  ನಿಜವಾಗಿಯೂ  ಇತಿಹಾಸವನ್ನು  ನಿರ್ಲಕ್ಷಿಸದೆ  ಉಳಿಸಿಕೊಂಡಲ್ಲಿ   ನಮ್ಮ ನಾಡಿನ ಸಂಸ್ಕೃತಿ  ಮತ್ತಷ್ಟು ಹೆಚ್ಚುತ್ತದೆ  , ಅದರ ಅರಿವು ಮೂಡಿಸುವ ಕಾರ್ಯ   ಹೆಮ್ಮೆಯ ಕನ್ನಡಿಗರಾದ  ಎಲ್ಲರಿಂದಲೂ ಆಗಲಿ ಎಂಬ  ಆಸೆಯೊಡನೆ,  ಅಲ್ಲಿಂದ ತೆರಳಿ ಬನವಾಸಿಯಲ್ಲಿ  ಸ್ವಲ್ಪ ಸಮಯ ಕಳೆದು   ತರಾತುರಿಯಿಂದ    ಶಿರಸಿಯತ್ತ  ಮುಖ ಮಾಡಿದೆ.  ಕಟ್  ಮಾಡಿದ್ರೆ  ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ     ಮುಂದೆ ಕುಳಿತ ಮಸಾಲೆ ದೋಸೆ  ನನ್ನ ಇತಿಹಾಸ ಅಜ್ಞಾನವನ್ನು ಕಂಡು ಅಣಕಿಸಿ  ಕಿಸಿಕ್ ಅಂತೂ .........! 
   [ ಈ ಲೇಖನ ಬರೆಯುವಾಗ   ದಾಖಲೆ ಪರಿಶೀಲನೆ ವೇಳೆಯಲ್ಲಿ ಉಂಟಾದ ಹಲವಾರು  ಅನುಮಾನಗಳನ್ನು  ಶ್ರೀ ಲಕ್ಷ್ಮೀಶ್ ಹೆಗ್ಡೆ ಸೋಂದ  ಅವರ  ನೆರವಿನೊಂದಿಗೆ ಪರಿಹರಿಸಿಕೊಂಡಿದ್ದೇನೆ,  ಸಲಹೆ ಹಾಗು ಮಾರ್ಗ ದರ್ಶನ  ನೀಡಿದ ಲಕ್ಷ್ಮೀಶ್ ಹೆಗ್ಡೆ ಅವರನ್ನು ಕೃತಜ್ಞತೆಯಿಂದ   ಸ್ಮರಿಸಿಕೊಳ್ಳುತ್ತೇನೆ ] 





6 comments:

Ittigecement said...

ಬಾಲಣ್ಣಾ..

ನಮ್ಮೂರ ಇತಿಹಾಸ.. ನಮಗೇ ಗೊತ್ತಿಲ್ಲವಾಗಿತ್ತು..

ಸೊಗಸಾದ ಫೋಟೊಗಳು...!

ತುಂಬಾ ತುಂಬಾ ಧನ್ಯವಾದಗಳು....

Unknown said...

Adbhutha Sir

Unknown said...

Adbhutha Sir

ಮನಸು said...

ಹೀಗೆ ಅದೆಷ್ಟು ಇತಿಹಾಸಗಳು ನಮ್ಮಗಳ ಕಣ್ ತಪ್ಪಿ ಹೋಗಿದೆಯೋ... ಅಧ್ಬುತ ಮಾಹಿತಿ ನಿಮ್ಮೊಂದಿಗೆ ನಾವು ಸ್ಥಳವೀಕ್ಷಿಸಿ ಬಂದಂತಾಯಿತು.

Unknown said...

ಇದು ನಮ್ಮೂರು ಅಂಥಾ ಹೇಳಲು ನನಗೇ ಹೆಮ್ಮೆ
ನನಗೇ ತಿಳಿಯದ ಹಲವಾರು ವಿಷಯ ತಿಳಿಸಿಕೊಟ್ಟಿದೀರಿ
ನನ್ನ ವಂದನೆಗಳು

sanjay said...

ನಮ್ಮ ಇತಿಹಾಸ ನಮ್ಮ ಹೆಮ್ಮೆ.ಬಹಳ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ. ಉತ್ತಮ ಲೇಖನ ಸರ್. ಧನ್ಯವಾದಗಳು.