Monday, November 14, 2011

ಮೂರು ನದಿಗಳು ಸಂಗಮವಾಗುವ ಸ್ಥಳ !!!! ಜಗದ ಜನರ ಕಣ್ಣಿಗೆ ಬೀಳದೆ ನಿರ್ಮಲವಾಗಿದೆ!!!!

ಮೂರು ನದಿಗಳು ಸೇರುವ ಪಾತ್ರ ಗೂಗಲ್ ಮ್ಯಾಪ್ನಲ್ಲಿ


ಹೌದು ಈ ಜಾಗದ ಬಗ್ಗೆ ಪರಿಚಯ ಮಾಡಿಕೊಡಲಾ ಬೇಡವ ಎಂಬ ಜಿಜ್ಞಾಸೆ ಕಾಡಿದೆ. ಪರಿಚಯ ಮಾಡಿಕೊಟ್ಟರೆ ಹೆಚ್ಚಿನ ಜನ ಬಂದು ಈ ಜಾಗದ ನಿರ್ಮಲತೆ ಹಾಳಾಗುವ ಭಯ.ಏಕೆಂದರೆ ನಮ್ಮಲ್ಲಿ ಇಂತಹ ಸ್ಥಳಗಳಿಗೆ ಹೋಗುವ ಕೆಲವು ಜನ ಗೊತ್ತಲ್ಲ!!! ಚೆನ್ನಾಗಿ ತಿಂದು ಕುಡಿದು ಮಜಾ ಮಾಡಿ ಕುಡಿದ ಬಾಟಲ್ ಗಳನ್ನೂ , ಕಸವನ್ನು ಚೆಲ್ಲಾಡಿ ಬರುತ್ತಾರೆ.[ ಉದಾಹರಣೆ ಕೆ.ಆರ್.ಎಸ ಸಮೀಪವಿರುವ ಬಲಮುರಿ ] ಎಂಬ ಭಯ, ಪರಿಚಯ ಮಾಡಿಕೊಡದಿದ್ದರೆ ಇಂತಹ ಸುಂದರ ಪರಿಸರವನ್ನು ನೋಡುವ ಅವಕಾಶವನ್ನು ಹಲವಾರು ಒಳ್ಳೆಯ ಜನರಿಗೆ ತಪ್ಪಿಸಬೇಕಲ್ಲಾ ಎನ್ನುವ ಸಂಕಟ , ಇವುಗಳ ಮೇಲಾಟದಲ್ಲಿ ಪರಿಚಯ ಮಾಡಿಕೊಡುವ ಬಗ್ಗೆ ನಿರ್ಧರಿಸಿ ಈ ಲೇಖನ ಪ್ರಕಟಿಸಿದ್ದೇನೆ. ಏನ್ ಮಹಾ ಬುದ್ದಿವಂತಾ ಇವನು ಎಲ್ಲಾ ಗೊತ್ತೂ ಅನ್ನೋಹಂಗೆ ಆಡ್ತಾನೆ ಬಹಳ ಜಂಬಾ ಇವನಿಗೆ ಅಂತೀರಾ ??? ಇಲ್ಲಾ ರೀ ನೀವು ಇಲ್ಲಿ ಪರಿಚಯ ಮಾಡಿಕೊಳ್ಳುವ ಪರಿಸರದ ಜಾಗದ ಬಗ್ಗೆ ಅಂತರ್ಜಾಲ ಜಾಲಾಡಿದರೂ ಮಾಹಿತಿ ದೊರೆಯಲ್ಲಾ , ವಿಕಿಪಿಡಿಯಾ ದಲ್ಲೂ ಮಾಹಿತಿ ಇಲ್ಲ, ಗೂಗಲ್ ಸರ್ಚ್ ಈ ಜಾಗದ ಬಗ್ಗೆ ತಲೆ ಒಗೆಯುತ್ತದೆ. ಅಚ್ಚರಿ ಆಯ್ತಾ ಬನ್ನಿ ಆ ಜಾಗಕ್ಕೆ ಹೋಗೋಣ. ಕೆ.ಆರ್.ಎಸ. ಹಿನ್ನೀರಿನ ತಡಿಯಲ್ಲಿ ಹಲವಾರು ವಿಸ್ಮಯ ಕಾರಿ ಜಾಗಗಳು ಅಡಗಿಕೊಂಡಿವೆ, ಹಿನ್ನೀರಿನ ಚಾಚು ಮಂಡ್ಯ ಜಿಲ್ಲೆ ಹಾಗು ಮೈಸೂರು ಜಿಲ್ಲೆಗೆ ಸೇರಿದ ಪಾಂಡವಪುರ , ಕೆ ಆರ್.ಪೇಟೆ ,[ಮಂಡ್ಯ ಜಿಲ್ಲೆ ] ಕೆ.ಆರ್.ನಗರ , ಹುಣಸೂರು [ ಮೈಸೂರು ಜಿಲ್ಲೆ ] ಈ ಭಾಗದಲ್ಲಿ ಹರಡಿ ಕೊಂಡಿದೆ. ಈ ಭಾಗಗಳಲ್ಲಿನ ಹಲವಾರು ವಿಸ್ಮಯಗಳು ಹೊರ ಜಗತ್ತಿಗೆ ತಿಳಿದಿಲ್ಲ. ಅದಕ್ಕೆ ಹೆಚ್ಚಿನ ಪ್ರಚಾರವೂ ಇಲ್ಲ ಹಾಗಾಗಿ ಜನರ ಕಣ್ಣಿಗೆ ಮರೆಯಾಗಿ ಉಳಿದಿವೆ.ಅಂತಹ ಒಂದು ಜಾಗ ಈ ಸಂಗಮೇಶ್ವರ ಪುರ ಅಥವಾ ಸಂಗಾ ಪುರ ಎನ್ನುವ ಸ್ಥಳ.

ಸಂಗಮೇಶ್ವರ ಹಾಗು ಪಾರ್ವತಿ ದೇವಾಲಯಗಳು.

ಈ ಪ್ರದೇಶದಲ್ಲಿ ಮೂರು ನದಿಗಳು ಸಂಗಮವಾಗಿ ಸುಂದರ ಪರಿಸರ ನಿರ್ಮಿಸಿವೆ.ಕೊಡಗು ಜಿಲ್ಲೆ ತಲಕಾವೇರಿ ಯಿಂದ ಹರಿದು ಬರುವ ಕಾವೇರಿ, ಕೊಡಗಿನ ಬ್ರಹ್ಮ ಗಿರಿ ಬೆಟ್ಟದ ಲ್ಲಿ ಹುಟ್ಟಿ ಇರುಪ್ಪು ಮೂಲಕ ಹರಿದು ಬರುವ ಲಕ್ಷ್ಮಣ ತೀರ್ಥ ಹಾಗು ಚಿಕ್ಕ ಮಗಳೂರು ಜಿಲ್ಲೆ ಮೂಡಿಗೆರೆಯ ಸಮೀಪದ "ಜಾವಳಿ" ಯಿಂದ ಹರಿದು ಬರುವ ಹೇಮಾವತಿ ನದಿಗಳು ಇಲ್ಲಿ ಪ್ರೀತಿಯಿಂದ ಸಂಗಮಿಸಿ ಸಂಭ್ರಮಿಸುತ್ತವೆ .ಮೂರು ನದಿಗಳು ಇಲ್ಲಿ ಹಲವಾರು ಸಣ್ಣ ಸಣ್ಣ ಭೂಶಿರ,ಹಾಗು ದ್ವೀಪಗಳನ್ನು ನಿರ್ಮಿಸಿವೆ.
ಭೂಶಿರದ ಕಡೆಗೆ ಸಾಗುವ ಹಾದಿ

ಜನರ ಕಣ್ಣಿಗೆ ಕಾಣದೆ ನಿರ್ಮಲವಾಗಿರುವ ಸಂಗಮೇಶ್ವರ
ಭೂಶಿರದ ತುದಿಯ ಭಾಗ. [ ಎಡಭಾಗದಲ್ಲಿ ಹೇಮಾವತಿ , ಬಲಭಾಗದಲ್ಲಿ ಕಾವೇರಿ , ಎದುರು ಭಾಗದಲ್ಲಿ ಲಕ್ಷ್ಮಣ ತೀರ್ಥ ನದಿಗಳ ಸಂಗಮ]

ಪ್ರದೇಶಕ್ಕೆ ಐತಿಹಾಸಿಕ ಪೌರಾಣಿಕ ಮಹತ್ವ ಸಾರುವ ವಿಚಾರಗಳು ಇಲ್ಲದಿದ್ದರೂ ಕುಟುಂಬ ಸಮೇತ ಎಲ್ಲರೂ ಹಾಯಾಗಿ ಯಾವುದೇ ಅಡೆತಡೆ ಇಲ್ಲದೆ ವಿಹರಿಸಿ ಬರಬಹುದು. ಪ್ರದೇಶಕ್ಕೆ ಬರುವವರು ಯಾವುದೇ ಕಾರಣಕ್ಕೂ ಮರೆಯದೆ ತಿಂಡಿ ಊಟಗಳನ್ನು ಜೊತೆಯಲ್ಲಿ ತನ್ನಿರಿ . ದಯಮಾಡಿ ಸುಮಾರುಎರಡು ಹೊತ್ತಿನ ಆಹಾರ ತರುವುದು ಒಳ್ಳೆಯದು .ಈ ಪ್ರದೇಶದಲ್ಲಿ ಚೆಲುವನ್ನು ನೋಡುತ್ತಾ ದಿನ ಕಳೆಯುವುದು ತಿಳಿಯುವುದಿಲ್ಲ. ಭೂಶಿರದ ತಟದಲ್ಲಿ ಕುಳಿತು ಗುಂಪಾಗಿ ಊಟ ಮಾಡುತ್ತಿದರೆ ಅನುಭವವೇ ಬೇರೆ. ಇಲ್ಲಿಯೂ ಸಹ ಹಲವಾರು ಬಗೆಯ ಪಕ್ಷಿಗಳನ್ನು ಪಕ್ಷಿವೀಕ್ಷಕರು ಗಮನಿಸಬಹುದು, ನೀರಿನಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸುರಕ್ಷಿತ ಜಾಗದಲ್ಲಿ ಈಜಬಹುದು,[ ಆದರೆ ಗಮನಿಸಿ ಹೆಚ್ಚು ದೂರ ಹೋದಲ್ಲಿ ಸುಳಿಗೆ ಸಿಲುಕುವ ಅಪಾಯವಿದೆ ] ಸನಿಹದಲ್ಲೇ ಇರುವ ಸಂಗಮೇಶ್ವರ ,ಪಾರ್ವತಿ ದೇವಾಲಯದಲ್ಲಿ ದೇವರ ಆಶೀರ್ವಾದ ಪಡೆಯಬಹುದು.ಎಲ್ಲಕಿಂತ ಹೆಚ್ಹಾಗಿ ಯಾವುದೇ ಗಲೀಜಿಲ್ಲದ , ನಿರ್ಮಲವಾದ ಪ್ರದೇಶದಲ್ಲಿ ಕುಟುಂಬದವರು ಮನರಂಜನೆಯ ಆಟ ಆಡಿ ಸಂತೋಷ ಹೊಂದ ಬಹುದು. ಪ್ರದೇಶಕ್ಕೆ ಬಂದೊಡನೆ ನಿಮಗೆ ಎದುರಾಗುವುದು ಮೀನುಗಾರರ ಹರಿಗೋಲು, ಸಣ್ಣ ಶೆಡ್ಡುಗಳು ಇತ್ಯಾದಿ
ನದಿಯಲ್ಲಿ ಸಿಗುವ ಮೀನುಗಳು
ಹೌದು ಇಲ್ಲಿ ಹೇರಳವಾಗಿ ಸಿಗುವ ಹಲವಾರು ಜಾತಿಯ ಮೀನುಗಳು ಮೈಸೂರು, ಬೆಂಗಳೂರು, ಪೂನ, ಮುಂತಾದೆಡೆಗೆ ಸಾಗಿಸಲ್ಪಡುತ್ತವೆ. ಛಾಯ ಚಿತ್ರ ತೆಗೆಯುವ ಹವ್ಯಾಸ ಇದ್ದಲ್ಲಿ ಕ್ಯಾಮರಾಗಳಿಗೆ ಹಬ್ಬ ಅಂತೂ ಗ್ಯಾರಂಟಿ .ಒಮ್ಮೆ ನೀವೂ ಸಹ ನಿಮ್ಮ ಕುಟುಂಬ ದೊಡನೆ ಇಲ್ಲಿಗೆ ಮರೆಯದೆ ಹೋಗಿಬನ್ನಿ [ ಆದರೆ ಅಲ್ಲಿನ ನಿರ್ಮಲತೆ ಕಾಪಾಡಲು ಸಹಕರಿಸಿ ]
ನಿರ್ಮಲ ವಾತಾವರಣದ ಸುಂದರ ನೋಟ

Wednesday, November 9, 2011

ವರಾಹನಾಥ ಕಲ್ಲಹಳ್ಳಿಯ ನೀವು ನೋಡಿದ್ದೀರಾ ????? ಹೇಮಾವತಿ ನದಿಯ ತಟದಲ್ಲಿ ಭೂದೇವಿಯ ಜೊತೆ ಕುಳಿತ ವರಾಹಾವತಾರಿ !!!!!


ಭೂ  ವರಾಹ ನಾಥ ಸ್ವಾಮೀ ಮೂಲ ವಿಗ್ರಹ.

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ !ಕೆ.ಅರ. ಪೇಟೆ ಯಿಂದ ೧೮.ಕಿ.ಮಿ.,ಮೈಸೂರಿನಿಂದ ೪೩ ಕಿ.ಮಿ. ದೂರದಲ್ಲಿದೆ.ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ!ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ,ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ದರ್ಶನ ನೀಡುತ್ತಾನೆ!ಮೂರ್ತಿಯು  ಭವ್ಯ ವಾಗಿದ್ದು ೧೫ ಅಡಿ ಎತ್ತರವಿದೆ!ಹೊರಗಿನಿಂದ ದೇವಾಲಯ ನೋಡಿದವರಿಗೆ ಇಷ್ಟು ದೊಡ್ಡ ದೇವರ ಮೂರ್ತಿ ಒಳಗಡೆ ಇದೆ ಎಂದರೆ ನಂಬಲಾರರು!ಇದನ್ನು ಭೂವರಾಹನಾಥ  ಸನ್ನಿದಿ ಎಂದು ನಂಬಿರುವ  ಜನರು ಭೂಮಿಗೆ ಸಂಬಂದಿಸಿದ ಕಷ್ಟಗಳು ಪರಿಹಾರ ವಾಗುತ್ತವೆ ಎಂದು ಹೇಳುತ್ತಾರೆ!ದೇವಾಲಯದ ಮುಂಭಾಗದಲ್ಲಿ  ಒಂದು ಶಿಲಾಶಾಸನದ ಕಲ್ಲಿದ್ದು ದೇವಾಲಯದ ಮಾಹಿತಿ ನೀಡುತ್ತಿದೆ
ಶಾಸನ ಕಲ್ಲು 
ಹಿಂದೆ ಇದ್ದ ದೇವಾಲಯ.[ ಈಗ ಹೊಸ ದೇವಾಲಯ ನಿರ್ಮಾಣ ಆಗುತ್ತಿದೆ ]

.೧೩೩೪ರ ಈ ಶಾಸನದ ರೀತ್ಯಾ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ ,ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ ,ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ  ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ              .ಬಂದವರು ಜೊತೆಯಲ್ಲಿ  ಊಟ ತಿಂಡಿ ಯನ್ನು ತರುವುದು ಒಳ್ಳೆಯದು ! ಇಲ್ಲಿ ತಿನ್ನಲು ಯಾವ ಸೌಲಬ್ಯ ಇರುವುದಿಲ್ಲ .ಮೈಸೂರಿನಿಂದ ಒಂದು ಸರ್ಕಾರಿ ಬಸ್ಸು ಬೆಳಿಗ್ಗೆ ೭ ಗಂಟೆಗೆ ಹೊರಡುತ್ತದೆ .ಸ್ವಂತ ವಾಹನ ಇದ್ದಲ್ಲಿ ಇನ್ನು ಸುತ್ತ ಮುತ್ತ  ಕೆಲವು ಪ್ರದೇಶ ನೋಡಬಹುದು!ಒಮ್ಮೆ ಪ್ರಯತ್ನಿಸಿ ಸಂತೋಷ ಹೊಂದಿರಿ.