Wednesday, November 7, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.14 ಬನ್ನಿ ಭೀಮನ ಏರಿ ಗುಡ್ಡ ದಲ್ಲಿ ಅಘನಾಶಿನಿ ನೋಡೋಣ.!!!


ಅಂಕು ಡೊಂಕಿನ ಹಾದಿ 
ಕಳೆದ  ಸಂಚಿಕೆಯಲ್ಲಿ ನಾನು  ಹೇಳಿದ್ದೆ ಮದುವೆಯ  ಮನೆಯಿಂದ  ಹೊರಗೆ ಹೋಗಿದ್ದೆವೂ ಅಂತಾ , ಹೌದು  ಕೊಳಗಿ ಬೀಸ  ತಲುಪಿದ ನಾವು  ದೇವಾಲಯ ತಲುಪಿದಾಗ ಮದುವೆ  ಕಾರ್ಯಕ್ರಮಕ್ಕೆ ಇನ್ನೂ ಕನಿಷ್ಠ ಎರಡು ಘಂಟೆಗಳ ಅವಧಿ ಇದೆ ಎಂದು ಗೊತ್ತಾಯ್ತು , ನಾನು ಹರ್ಷನನ್ನು ಕುರಿತು, " ಹರ್ಷ  ಹತ್ತಿದಲ್ಲಿರುವ  ಯಾವುದಾದರೂ ಜಾಗ ನೋಡ ಬಹುದಾ ?? " ಎಂದೇ ಅದಕ್ಕೆ ಹರ್ಷ  "ಹೂ ಸಾರ್ ಎಲ್ಲಾದ್ರೂ ಹೋಗ ಬಹುದು   ಆದ್ರೆ ಎಲ್ಲಿ ಹೋಗಬೇಕೂ ನೀವು ?" ಎಂದು ಕೇಳಿದನು, ನಾನು "ಹರ್ಷ  ದೇವಿಮನೆ ಘಾಟ್ ಹೋಗಬಹುದಾ ?" ಎಂದು ಕೇಳಿದ್ದಕ್ಕೆ ಸಾರ್ ಅಲ್ಲಿ ಬೇಡ ಬನ್ನಿ ಇಲ್ಲೇ ಒಂದು ಜಾಗ ಇದೆ  ಹೋಗಿ ಬರೋಣ ಅಂತಾ  ಬೈಕ್  ಸ್ಟಾರ್ಟ್  ಮಾಡಿದ.

ನುರುಜುಕಲ್ಲಿನ  ಹಾದಿ 


ಮೇಲೆ ಸಾಗಿದ ಸವಾಲಿನ ಹಾದಿ.
 ಕೊಳಗಿ ಬೀಸ್  ನಿಂದ ಹೊರಟು   ಕುಮಟ ರಸ್ತೆಯಲ್ಲಿ ಸಾಗಿ  ನೀಲಕುಂದ ಗ್ರಾಮದ ಜಂಕ್ಷನ್  ನಲ್ಲಿ  ಎಡಕ್ಕೆ ತಿರುಗಿ ಹೆಗ್ಗರಣಿ  ಗ್ರಾಮದ ಬಳಿ ಮತ್ತೆ ಎಡಕ್ಕೆ ಕಚ್ಚಾ ಮಣ್ಣಿನ ಹಾದಿಯಲ್ಲಿ  ಹೊರಟೆವು, ಗುಡ್ಡ ಗಾಡಿನ ನಡುವೆ ಸಾಗಿದ ಮಣ್ಣಿನ ಹಾದಿ , ನುರುಜುಗಲ್ಲಿನಿಂದ  ಕೂಡಿತ್ತು, ದಿಣ್ಣೆ ಹತ್ತಲು ಹೋರಟ  ಬೈಕ್ ಅಲ್ಲಲ್ಲಿ  ಸ್ಕಿಡ್  ಆಗುತ್ತಿತ್ತು. ಆದರೂ ಹರ್ಷ  ತನ್ನ ಛಲ  ಬಿಡದೆ ನನ್ನನ್ನು ಬೈಕಿನಿಂದ ಇಳಿಯಲು ಬಿಡದೆ  ಕೂರಿಸಿಕೊಂಡು  ಆ ಮಾರ್ಗದಲ್ಲಿ ಗುಡ್ಡ ಹತ್ತಿಸಿಯೇ ಬಿಟ್ಟ. ಆದರೂ ಈ ಹಾದಿಯ ಫೋಟೋ ತೆಗೆಯಲು ನಾನು ಬೈಕಿನಿಂದ ಇಳಿದು ಫೋಟೋ ಕ್ಲಿಕ್ಕಿಸುತ್ತಾ ಸ್ವಲ್ಪ ದೂರ ಕ್ರಮಿಸಿದೆ.

ಹಸಿರ ಸಿರಿಯಾ ಕಮಾನು  ನಡುವೆ ಸಾಗಿದ ಹಾದಿ.

ಭೀಮನ ಏರಿ ಗುಡ್ಡ ದಿಂದ ಕಾಣುವ ದೃಶ್ಯ 

ಮೇಲೆ ಮೇಲೆ ಸಾಗಿದಂತೆ ಹಸಿರ ಪ್ರಕ್ರತಿಯ ಸಿರಿ ಕಾಣ ತೊಡಗಿತು ಹಸಿರ ಕಮಾನು ನಡುವೆ ಸಾಗಿದ ಅಂಕು ಡೊಂಕಿನ ಹಾದಿಯಲ್ಲಿ ಸಾಗಿ ಬೆಟ್ಟದ ಮೇಲೇರಿ ನಿಂತೆವು ಅಲ್ಲೇ ಕಂಡಿತ್ತು ಮೋಹಕ ಸುಂದರ ಪ್ರಕೃತಿಯ ದರ್ಶನ. "ಬಾಲೂ  ಸಾರ್ ಈ ಗುಡ್ಡವನ್ನು  ಭೀಮನ ಏರಿ ಗುಡ್ಡ  ಎಂದು ಕರೆಯುತ್ತಾರೆ, ಇಲ್ಲಿಂದ ಒಳ್ಳೆಯ  ಸೀನ್ ಕಾಣುತ್ತೆ ಸಾರ್" ಎಂದ  ಹರ್ಷ ಹೆಗ್ಡೆ.
ಭೀಮನ ಏರಿ ಗುಡ್ಡದಲ್ಲಿರುವ  ವೀಕ್ಷಣಾ ಸ್ಥಳ.


ಹಸಿರ  ಗುಡ್ಡಗಳ ನೋಟ 


ಹಸಿರ  ಹೊದ್ದ ಗಿರಿ ಶಿಖರಗಳು 
"ಭೀಮನ ಏರಿ" ಗುಡ್ಡದ ಮೇಲೆ ಕಂಡ ಅಮೋಘ ದೃಶ್ಯಗಳನ್ನು ಕ್ಲಿಕ್ಕಿಸುತ್ತಾ  ಮೈಮರೆತೆ.  ಬೆಟ್ಟದ ಮೇಲೆ ಬೀಸುತ್ತಿದ್ದ ತಂಗಾಳಿ, ಮುದ ನೀಡುತ್ತಿತ್ತು, ಕಣ್ಣಿಗೆ ಹಸಿರ ಸಿರಿಯ ದರ್ಶನ  ತಂಪು ನೀಡಿತ್ತು,   ಕ್ಯಾಮರ ಯಾಕೋ ಕಾಣೆ ಸ್ವಲ್ಪ ಕೈಕೊಡುವ ಸೂಚನೆ ನೀಡುತ್ತಿತ್ತು. ಆದರೂ ದುರಾಸೆಯಿಂದ  ಫೋಟೋ ಕ್ಲಿಕ್ಕಿಸುತ್ತಾ ಸಾಗಿದೆ. ಲೆನ್ಸ್ ನಲ್ಲಿ ಕಪ್ಪು ಚುಕ್ಕೆಗಳು ಕಂಡವು , ಅದೇರೀತಿ  ನಾನು ತೆಗೆದ  ಚಿತ್ರಗಳಿಗೂ ಕಪ್ಪು ಚುಕ್ಕಿಯ  ಸಿಂಚನ ಮೂಡುವುದು ಗ್ಯಾರಂಟೀ ಆಗಿತ್ತು, ಆದಾಗ್ಯೂ ಹೇಗೆ ಇರಲಿ ಫೋಟೋ ತೆಗೆಯಲೇ ಬೇಕೂ ಎಂಬ ಹಟದಿಂದ ಹಲವು ಫೋಟೋ ಕ್ಲಿಕ್ಕಿಸಿದೆ  ಕೆಲವು ಫೋಟೋ ಗಳಿಗೆ ಕಪ್ಪು ಚುಕ್ಕೆಗಳ  ಚಿತ್ತಾರ ಸಿಂಚನ ಮೂಡಿತ್ತು ಈ ಬ್ಲಾಗ್ ನಲ್ಲಿರುವ ಕೆಲವು ಚಿತ್ರಗಳಲ್ಲಿ ನೀವು ಗಮನಿಸ ಬಹುದು.

ಹಸಿರ ಮಡಿಲಲ್ಲಿ ಹರಿದ ಅಘನಾಶಿನಿ 

 ಹಸಿರ ಪ್ರಕೃತಿಯ ಮಡಿಲಲ್ಲಿ  ಅಘನಾಶಿನಿಯ ಪಯಣ ದರ್ಶನ.

"ಬಾಲೂ ಜಿ  ಅಲ್ಲಿ ನೋಡಿ ಅಘನಾಶಿನಿ"  ಎಂದ ನಮ್ಮ ಹರ್ಷ   ಒಂದು ಕಡೆ ಬೆರಳು ಬೊಟ್ಟು ಮಾಡಿ ತೋರಿದ. ವಾಹ್   ವಾಹ್ ಎಂದು ನನ್ನ ಬಾಯಿಂದ ಹೊರಟಿತು ಉದ್ಗಾರ , ದೂರದಲ್ಲಿ  ಕಣ್ಣಿಗೆ ಕಾಣುತ್ತಿತ್ತು  ಪ್ರಕೃತಿಯ ಮಡಿಲಲ್ಲಿ ಸಾಗಿದ ಅಘನಾಶಿನಿ ನದಿಯ  ದರ್ಶನ. ಲೆನ್ಸ್ ಜೂಮ್  ಮಾಡಿ ಚಿತ್ರ ತೆಗೆದೆ . "ಅಘನಾಶಿನಿ" ನದಿಯ ಸೌಂದರ್ಯ  ಸ್ಪಷ್ಟವಾಗಿ ಕಾಣಿಸಿತು. "ಅಘನಾಶಿನಿ" ನದಿ  ಶಿರಸಿ ತಾಲೂಕಿನ "ದೋಣಿ ಹಳ್ಳ" ಎಂಬಲ್ಲಿ ಉಗಮವಾಗಿ  ಶಿರಸಿ, ಕುಮಟ ,ಕುಂದಾಪುರ ತಾಲೂಕಿನಲ್ಲಿ ಸಾಗಿ ಅರಬ್ಬೀ ಸಮುದ್ರ ಸೇರುತ್ತದೆ. ಕುಂದಾಪುರ ತಾಲೂಕಿನಲ್ಲಿ  "ಅಘನಾಶಿನಿ" ಹೆಸರಿನ  ಹಳ್ಳಿ ಇದೆಯೆಂದು ವಿಕಿಪೀಡಿಯ ತಿಳಿಸುತ್ತಿದೆ. ಪ್ರಕೃತಿಯ ಮಡಿಲಲ್ಲಿ ವಿಹರಿದ ನಾವೂ  ಮದುವೆಯ ಮನೆಗೆ ವಾಪಸ್ಸು ಹೋಗಬೇಕೆಂಬ  ವಿಚಾರ ನೆನಸಿಕೊಂಡು  ವಾಪಸ್ಸು ತೆರಳಲು ಸಿದ್ದವಾಗಿ ಹೊರಟೆವು.

ನಿರ್ಜನ ರಸ್ತೆ 
ದಾರಿಯಲ್ಲಿ ಸಿಕ್ಕ ಮರದ ಕಮಾನು 

ಓದಲು ಹೊರಟೆವು ನಾವು 

"ಕೊಳಗಿ ಬೀಸ್ " ಕಡೆ ಸಾಗುವ ಹಾದಿಯಲ್ಲಿ ಚಿತ್ರ ಕ್ಲಿಕ್ಕಿಸುತ್ತಾ  ಸಾಗಿದೆ ನಾನು. ದಾರಿಯಲ್ಲಿ  ನನ್ನ ಕ್ಯಾಮಾರಾ ಕಣ್ಣಿಗೆ ಒಳ್ಳೆಯ ದೃಶ್ಯಗಳು ಕಂಡವು. "ಭೀಮನ ಏರಿ"ಬೆಟ್ಟ ಇಳಿದು ಬಂದ ನಾವು ಮುಖ್ಯ ರಸ್ತೆ ಸೇರಿ ಬೈಕಿನಲ್ಲಿ ಹೊರಟೆವು. ಮೊದಲು ನಿರ್ಜನ ವಾಗಿದ್ದ ರಸ್ತೆ   ಮುಂದೆ ಸಾಗಿದ ನಮಗೆ ಹಾದಿಯಲ್ಲಿ  ಸಿಕ್ಕ ಒಂದು ಹಳ್ಳಿಗೆ  ಪ್ರವೇಶ ಮಾಡುತ್ತಿದ್ದ ಹಾಗೆ ಒಂದು ಮರದ ಕಮಾನು ಕಂಡಿತು. ಆ ಕಮಾನು ತುಂಬಾ  ಚೆನ್ನಾಗಿ ನಿರ್ಮಿತವಾಗಿತ್ತು. ಪ್ರತೀ ಹಳ್ಳಿಗೂ ಹೀಗೆ ಒಂದು ಕಮಾನು ಇದ್ದರೆ ಚೆನ್ನಾಗಿರುತ್ತೆ ಅನ್ನಿಸಿತು. ಹಳ್ಳಿಯ ದಾಟಿದ ನಮಗೆ  ರಸ್ತೆಯಲ್ಲಿ ಸಾಗಿದ ನಮಗೆ ನಡೆಯುತ್ತಾ ಸಾಗಿದ ವಿದ್ಯಾರ್ಥಿನಿಯರ   ಗುಂಪು ಕಾಣಿಸಿತು. ಹಳ್ಳಿಯ ಮಕ್ಕಳು ಶಾಲೆ  ಕಾಲೇಜು ಕಲಿಯಲು ಹೀಗೆ   ನಮ್ಮ ಹಳ್ಳಿಯಲ್ಲೂ ಸಾಗುತ್ತಿದ್ದ ನೆನಪು ಮೂಡಿತು.


ಹಳ್ಳಿಗೆ ತೆರಳಿ ಮಾರಾಟ ಮಾಡುವ ಅಲೆಮಾರಿ ವ್ಯಾಪಾರಿಗಳು.
ಕುಮಟ ಶಿರಸಿ ರಸ್ತೆಯ  ಟ್ರಾಫಿಕ್ಕು.
 ನೀಲಕುಂದ ಗ್ರಾಮದ ಜಂಕ್ಷನ್  ಬಳಿ  ಕುಮಟ ಶಿರಸಿ ಮುಖ್ಯ  ರಸ್ತೆ  ತಲುಪಿದೆವು, ಅಲ್ಲೇ  "ನೀಲ ಕುಂದ " ಜಂಕ್ಷನ್ ನಲ್ಲಿ  ಹಳ್ಳಿ ಹಳ್ಳಿ ಗೆ ಬೈಕ್ ನಲ್ಲಿ  ತೆರಳಿ ವ್ಯಾಪಾರ ಮಾಡುವ ವ್ಯಾಪಾರಿಗಳು  ರಸ್ತೆ ಬದಿಯಲ್ಲಿ  ಉಚಿತ ಪಾನಕ ಕುಡಿಯುತ್ತಿದ್ದರು,  ಅದನ್ನು ನೋಡಿ  ಅರೆ  ಗ್ರಾಮೀಣ ಗ್ರಾಹಕರಿರುವಲ್ಲಿಗೆ  ಇಂತಹ  ವಸ್ತುಗಳನ್ನು  ತಲುಪಿಸುವ ಇಂತಹ ವ್ಯಾಪಾರಿಗಳು  ಹಳ್ಳಿಯ ಜನರ  ಕನಸುಗಳಿಗೆ ಬಣ್ಣ ಕೊಡುತ್ತಾರೆ ಅನ್ನಿಸಿತು.  ಆಲೋಚನೆ ಮಾಡುತ್ತಾ ಕೊಳಗಿ ಬೀಸ ಮದುವೆ  ಮನೆ ತಲುಪಿದೆವು.  ಅಲ್ಲಿ ಮದುವೆ  ಮುಗಿಸಿ ನಮ್ಮ  ಪಯಣ ಶಿರಸಿ ಕಡೆಗೆ  ಸಾಗಿತು.


ಶಿರಸಿಯ  ಹಾದಿಯಲ್ಲಿ ಕಂಡ ಗ್ರಾಮೀಣ ಸಾರಿಗೆ ಬಸ್ಸು.

 ಶಿರಸಿಯ ಹಾದಿಯಲ್ಲಿ  ಕಾಣಿಸಿದ  ಗ್ರಾಮೀಣ ಸಾರಿಗೆ  ಬಸ್ಸು "ಇಟ್ಟಿಗೆ ಸಿಮೆಂಟು" ಬ್ಲಾಗಿನಲ್ಲಿ "ಪ್ರಕಾಶ್ ಹೆಗ್ಡೆ"  ಬರೆದ "ಹೂಕ್ಲಕ್ಕೆ ತೆರಳುವ  ಸರ್ಕಾರಿ ಬಸ್ಸು ಕಾಣೆಯಾದ ಪ್ರಸಂಗ" ಜ್ಞಾಪಕಕ್ಕೆ ಬಂದು ನಗೆ ಬರಿಸ್ತ್ತು.  ಬಸ್ಸನ್ನು  ದಾಟಿ ನಾವು  ಬೈಕಿನಲ್ಲಿ ತೆರಳಿ
ಶಿರಸಿ ತಲುಪಿದೆವು ಅಲ್ಲಿನ ಜಾತ್ರೆ ಯ ಸೊಬಗು  ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ..............!! ಶಿರಸಿಯಲ್ಲಿ  ಟ್ರಾಫಿಕ್ ಜಾಮ್  ಆಗಿತ್ತು ........................!!!!!

4 comments:

ದಿನಕರ ಮೊಗೇರ said...

Bhimana guddakke naanU hogidde...

aadare ee drashya NODiralilla...

thank you very much...

mundenu.....?

Srikanth Manjunath said...

ಮದುವೆ ಮನೆಯ ಪವಿತ್ರ ಅನುಬಂಧದ ಬೆಸುಗೆಯನ್ನು ತುಸು ಅನುಭವಿಸಿ ಮತ್ತೆ ಪ್ರಕೃತಿಯ ಮಾತೆಯ ಬಳಿ ಓದಿದ ಸಾಹಸದ ದಾರಿಯ ಚಿತ್ರಗಳು, ನಿರೂಪಣೆ ಸೊಗಸಾಗಿದೆ. ಎತ್ತರದ ಪ್ರದೇಶದಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ಕಾಣುವ ದೃಶ್ಯ ವೈಭೋಗ ಅನುಭವಿಸಿದರೆ ಮಾತ್ರ ಸಿಗುವ ರಸಗವಳ. ನಿಮ್ಮ ಲೇಖನದಲ್ಲಿ ಚಿಕ್ಕ ಚಿಕ್ಕ ವಸ್ತುಗಳು ನಾಯಕನ ಪಟ್ಟ ಅಲಂಕರಿಸುವ ಸೋಗ್ಜಿಗ ಬಲು ಅಪರೂಪ. ಬಸ್ ಇರಬಹುದು, ಹಾದಿ ಇರಬಹುದು, ಶಾಲೆ ಎಂಬ ಕಾಲೇಜಿಗೆ ಹೋಗುವ ಮಕ್ಕಳಿರಬಹುದು, ಟ್ರಾಫಿಕ್ ಜಾಮ್, ಎಲ್ಲವು ನಾವು ದಿನ ನಿತ್ಯ ಕಾಣುವ ದೃಶ್ಯಗಳೇ..ಆದ್ರೆ ಅದನ್ನು ಲೆಕಹನದಲ್ಲಿ ಪ್ರಸ್ತುತ ಅನ್ನಿಸುವಂತೆ ಪೋಣಿಸುವ ಚಾತುರ್ಯಕ್ಕೆ ನನ್ನ ಸಲಾಂ...

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ರಸಗವಳ ಹೊಡೆದ ಮೇಲೆ ನಡೆಯಿರಿ ಸರ್ ಮಾರಿಕಾಂಬೆ ಜಾತ್ರೆಯಲ್ಲಿ ತಿನ್ನುವ ಚುರುಮುರಿ....

ಗಿರೀಶ್.ಎಸ್ said...

so next sirsi jaatrege karkand hogtiddira nammanna antaaythu...

Badarinath Palavalli said...

ಮೊದಲು ಮನ ಸೆಳೆಯುವುದು ಅಘನಾಶಿಸಿ ಎಂಬ ಸುಂದರ ಹೆಸರು.

ಇಂತಹ ಹರ್ಷ ನಮಗೂ ಸಿಗಲಿ ಎಂದುಆಶೀರ್ವಾದ ಮಾಡಿ ಸಾರ್.

ಸವಾಲಿನ ಹಾದಿಯು ನನ್ನ ಹಳ್ಳಿಯ ದಿನ್ನೆ ನೆನಪಿಸಿತು.

ಹಸಿರು ಹೊದ್ದ ಗಿರಿ ಶಿಖರಗಳನ್ನು ನೋಡಿ ತುಸು ಹೊಟ್ಟೆ ಉರಿಯಿತು, ಯಾಕೆಂದರೆ ನಮ್ಮ ಬೆಂಗಳೂರಿನ ಹಸಿರೆಲ್ಲ ಈಗ ಕಾಂಕ್ರಿಟ್ ಮಯ!

"ಹಸಿರ ಪ್ರಕೃತಿಯ ಮಡಿಲಲ್ಲಿ ಅಘನಾಶಿನಿಯ ಪಯಣ ದರ್ಶನ" ಕ್ಯಾಪ್ಷನ್ ಇಷ್ಟವಾಯಿತು.

ರಸ್ತೆಯಲ್ಲಿ ತೆಗೆದ ಚಿತ್ರಗಳೂ ಚೆನ್ನಾಗಿವೆ.

ಮುಂದುವರೆಯಲಿ ಪಯಣ...