Monday, October 29, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.12 ಶ್ರೀ ಮಾರಿಕಾಂಬಾ ಪ್ರಸೀದತು ....!!!


ಶ್ರೀ ಮಾರಿಕಾಂಬೆ ದೇವಾಲಯದ ದೃಶ್ಯ.


 "ಸಾರ್  ಬನ್ನಿ ನಮ್ಮೂರಿನ ಪ್ರಸಿದ್ದ ಮಾರಿಕಂಬಾ ದೇವಾಲಯ ಇದು, ನಿಮಗೆ ಖಂಡಿತಾ ಇಷ್ಟಾ ಆಗುತ್ತೆ" ಅಂತಾ ಹರ್ಷ ನನ್ನ ಕೈ ಹಿಡಿದು ಕರೆದುಕೊಂಡು ಹೊರಟ . ಜಾತ್ರೆಯ ಪ್ರಯುಕ್ತಾ ಜನ ಜಂಗುಳಿ ಜಾಸ್ತಿ ಇತ್ತು. ವಿಶಾಲವಾದ ಮಾರಿಕಾಂಬೆ ಯ ದೇವಾಲಯದ ಭವ್ಯ ನೋಟ ಕಣ್ಣನ್ನು ತುಂಬಿತ್ತು. ಹಾಗೆ ಮುಂದೆ  ಸಾಗಿದ ನಮ್ಮನ್ನು  ಪ್ರವೇಶ ದ್ವಾರದಲ್ಲಿ ಸುಂದರವಾಗಿ ಅಲಂಕರಿಸಿ  ನಿರ್ಮಾಣ ಮಾಡಲಾಗಿದ್ದ ಎರಡು ಆನೆಗಳ ಮೂರ್ತಿಗಳು ಸ್ವಾಗತ ಕೋರಿದವು.




ದೇವಾಲಯದ ಹೆಬ್ಬಾಗಿಲ ಕಮಾನು.




ದೇವಾಲಯದ ಹೆಬ್ಬಾಗಿಲ ಸನಿಹ ಬಂದ ನಮಗೆ ಮುಖ್ಯ ದ್ವಾರದ ಮೇಲಿನ ಕಮಾನಿನಲ್ಲಿ  ಸುಂದರವಾಗಿ  ವಿನಾಯಕನ ಚಿತ್ರ ಬಿಡಿಸಲಾಗಿತ್ತು.ವಿನಾಯಕನ ಎರಡೂ ಬದಿಯಲ್ಲಿ ಸೇವೆ ಸಲ್ಲಿಸುವ ಇಬ್ಬರು ಸಖಿಯರು, ಹಾಗು ವಿನಾಯಕನ ಕಾಲಬಳಿ ಹಾದು ಹೋಗಿರುವ ಹಾವಿನ   ಚಿತ್ರ ಬಿಡಿಸಲಾಗಿತ್ತು .  ಅದೇ ಕಮಾನಿನಲ್ಲಿ ಶ್ರೀ ಮಾರಿಕಾಂಬಾ ಪ್ರಸೀದತು ಎಂಬ ಬರಹ ಬಹಳ ಖುಷಿ ನೀಡಿತು. ಕ್ಯಾಮರಾ ಲೆನ್ಸ್  ಜೂಮ್  ಮಾಡಿದೆ , ಅಚ್ಚರಿಯಾಯಿತು. ಅಲ್ಲಿ ಅನಾವರಣ ಆಗಿತ್ತು  ವಿಶಿಷ್ಟವಾದ  "ಕಾವಿ ಕಲೆ "!!!   .  ಕಡಲತೀರದ ಕೊಂಕಣಿ ಜನಾಂಗದವರು ಬಹಳ ಪುರಾತನಕಾಲದಿಂದ ಈ ಕಲೆಯಲ್ಲಿ ಸಿದ್ದಹಸ್ತರೆಂದು,  ಈ  "ಕಾವಿ ಕಲೆ" ಯು 1500-1775 ರ ಅವಧಿಯಲ್ಲಿ ಗೋವಾ ಹಾಗು ಕಡಲ ತಡಿಯ ಕರಾವಳಿ  ಕರ್ನಾಟಕಕ್ಕೇ ಬಂತೆಂದು ಇತಿಹಾಸಕಾರರು ಹೇಳುತ್ತಾರೆ .ಈ ಕಲೆಯಲ್ಲಿ ಮೂಡುವ ಕೆಂಪು ಬಣ್ಣವನ್ನು "ಉರ ಮಂಜು" ಎಂಬ ಪದಾರ್ಥದಿಂದ ತಯಾರಿಸುವುದಾಗಿ ತಿಳಿದುಬರುತ್ತದೆ. ಇದಕ್ಕೆ ಕ್ಯಾನ್ವಾಸ್ ಆಗಿ ಬಳಸುವ ಗೋಡೆಯನ್ನು  ನದಿ ತೀರದ ಮರಳು,ಕಪ್ಪೆಚಿಪ್ಪು, ಸುಣ್ಣ, ಬೆಲ್ಲ ಇವುಗಳನ್ನು  ಸಂಸ್ಕರಿಸಿ ಅರೆದು ಬಂದ ಮಿಶ್ರಣ ದಿಂದ ನಿರ್ಮಿಸಲಾಗುತ್ತಿತ್ತು.  ಇಂತಹ ಕಲೆಗಳನ್ನು  ಕಡಲ ತಡಿಯ ಊರುಗಳಲ್ಲಿರುವ  ಹಲವು ದೇವಾಲಯಗಳಲ್ಲಿ ಕಾಣಬಹುದು .



ದೇವಾಲಯದ ಒಳ ಗೋಡೆಗಳಲ್ಲಿನ ಚಿತ್ತಾರ.
ಗೋಡೆಗಳಲ್ಲಿ ಕಾವಿ ಕಲೆಯ  ಅನಾವರಣ 



ಇಡೀ ಮಾರಿಕಾಂಬ ದೇವಾಲಯದ  ಹೊರ ಮತ್ತು ಒಳಗೋಡೆಗಳಲ್ಲಿ  "ಕಾವಿ ಕಲೆ" ಯನ್ನು ಕಾಣಬಹುದು. ಇಡೀ ದೇವಾಲಯವೇ "ಕಾವಿ ಕಲೆ" ಯ ಕಲಾಮಂದಿರದಂತೆ ಗೋಚರಿಸುತ್ತದೆ. ಸುಂದರ ದೃಶ್ಯಗಳನ್ನು  ನೋಡುತ್ತಾ  ದೇವಾಲಯದ ಪ್ರದಕ್ಷಿಣ ಪಥದಲ್ಲಿ ಸಾಗಿದೆವು  ಜಾತ್ರೆ ಸಮಯ ಆಗಿದ್ದ ಕಾರಣ ಭಕ್ತರ ಸಂಖ್ಯೆ ಹೆಚ್ಚಿತ್ತು. ದೇವಾಲದ ಒಳ ಗೋಡೆಗಳಲ್ಲಿನ  ಚಿತ್ರಗಳನ್ನು ಗಮನಿಸುತ್ತಾ  ಕ್ಯಾಮರಾದಲ್ಲಿ ಚಿತ್ರ ತೆಗೆಯುತ್ತಾ ಹೊರಟೆ.



ಚಿತ್ರದ ಭಾವನೆಗಳನ್ನು ಗಮನಿಸಿ 

ಟಗರಿನ ಮೇಲೆ ಕುಳಿತ ದೇವತೆ.

ಗರುಡನ ಮೇಲೆ ಕುಳಿತ ವಿಷ್ಣು.

ಕನ್ಯಕಾ ಪರಮೇಶ್ವರಿ 

 ಗೋಡೆಯಲ್ಲಿ ಮಹಾಭಾರತದ , ರಾಮಾಯಣದ ಕೆಲವು ದೃಶ್ಯಗಳು ರಚಿಸಿದಂತೆ ಕಾಣುವುದೆಂದು ಕೆಲವು ಇತಿಹಾಸ ಕಾರರು ಹೇಳಿದ್ದರೂ ಅವರು ಹೇಳಿದ್ದ ಮಾತುಗಳಿಗೂ ಇಲ್ಲಿ ಕಂಡ ಚಿತ್ರಗಳಿಗೂ ಹೋಲಿಕೆಯಾಗಲಿಲ್ಲ , ಈ ಚಿತ್ರ ವೈಭವದ ಬಗ್ಗೆ ತಿಳಿಸಲು ನಮಗೆ ಯಾರೂ ಸಿಗಲಿಲ್ಲ ಹಾಗೆ ಮುಂದುವರೆದು ಮತ್ತಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದೆ.ಈ ವಿಚಾರದಲ್ಲಿ ನನಗೆ ಹೆಚ್ಚಿನ ಮಾಹಿತಿ ಸಿಕ್ಕಲಿಲ್ಲ.





ಶಿರಸಿ ಮಾರಿಕಾಂಬೆ  ಸನ್ನಿಧಿಯ ಕೋಣ 

ಚಿತ್ರ ತಾನೇ ಹೇಳಿದೆ.

ಹಾಗೆ ಮುಂದೆ ಬಂದಾಗ  ಕಾಣಿಸಿತು ಶ್ರೀ  ಮಾರಿಕಾಂಬೆ ಸನ್ನಿಧಿಯ  "ದೇವರ ಕೋಣ"   , ಈ ಕೋಣವನ್ನು  ನೋಡುತ್ತಿದ್ದಂತೆ ಜ್ಞಾಪಕಕ್ಕೆ ಬಂದಿದ್ದು  ಶಿರಸಿ ಮಾರಿಕಾಂಬೆ ದೇವಾಲಯದ ಇತಿಹಾಸ,  ,  ಈ ಇತಿಹಾಸವೋ ಹಿಂಸೆಯಿಂದ ಅಹಿಂಸೆ ಕಡೆಗೆ ಜನರನ್ನು ಪರಿವರ್ತಿಸಿದ  ಅದ್ಭುತ ನೈಜ  ಘಟನೆಗಳ ಹೂರಣವಾಗಿದೆ.  ಶಿರಸಿಯಿಂದ ಹಾನಗಲ್ ಕಡೆಗೆ ಹೋಗುವ ಹಾದಿಯಲ್ಲಿನ  ಒಂದು ಕೊಳದ ಬಳಿ  ಒಂದು ಎಂಟು ಅಡಿಯ ದೇವಿಯ ಕಟ್ಟಿಗೆಯ ಮೂರ್ತಿ ಸಿಕ್ಕುತ್ತದೆ. ಆ ಸಮಯದಲ್ಲಿ  ಶಿರಸಿಯು ಒಂದು ಕುಗ್ರಾಮವಾಗಿ ಸೋಂದೆ ರಾಜರ ಆಡಳಿತಕ್ಕೆ ಒಳಪಟ್ಟಿರುತ್ತದೆ.  ಆಗ  ಸೋಂದೆ ರಾಜರಾಗಿದ್ದ "ಇಮ್ಮಡಿ ಸದಾಶಿವರಾಯ " [1678-1718,] ರ  ಕಾಲದಲ್ಲಿ ಅವರ ಅನುಮತಿ ಪಡೆದು  1689 ರಲ್ಲಿ ಶಿರಸಿಯ "ಮಾರಿಕಾಂಬೆ"  ಯ  ದೇವಾಲಯ ನಿರ್ಮಾಣ ಮಾಡುತ್ತಾರೆ. "ಮಾರಿಕಾಂಬೆ"  ಯನ್ನು ಗ್ರಾಮ ದೇವತೆಯಾಗಿ ಸ್ವೀಕರಿಸಿದ ಶಿರಸಿ ಗ್ರಾಮದ  ಭಕ್ತರು  ತಮ್ಮ  ಯಜಮಾನರುಗಳ  ನೇತೃತ್ವದಲ್ಲಿ ದೇವಾಲಯದ ಆಡಳಿತ ನಡೆಸಿಕೊಂಡು ಬರುತ್ತಾರೆ. 1850 ರಿಂದ 1875 ರವರೆಗಿನ ಬ್ರಿಟೀಶ್  ಆಡಳಿತ  ಅವಧಿಯಲ್ಲಿ  ದೇವಾಲಯಕ್ಕೆ ದೇವಾಲಯಕ್ಕೆ ಗರ್ಭಗುಡಿ, ಚಂದ್ರ ಶಾಲೆ, ಗೋಪುರ , ಮಹಾದ್ವಾರ  ಮುಂತಾದವುಗಳನ್ನು ನಿರ್ಮಾಣ  ಮಾಡಿದ್ದಾರೆ.




ಬಿಲ್ಲು ಹಿಡಿದ ಶ್ರೀ ರಾಮನೇ ಇವನು??
ಹಿಂದ ಸಮರ ಕಳೆಯ ದರ್ಶನವೇ.
 ನಮಗೆಲ್ಲಾ ತಿಳಿದಂತೆ ನಮ್ಮ ನಾಡಿನ ಪ್ರತೀ ಹಳ್ಳಿಯಲ್ಲೂ   ಒಂದೊಂದು ಮಾರಿ, ಅಥವಾ ಇತರ ಶಕ್ತಿ ದೇವತೆ ಯ ದೇವಾಲಯ  ಕಂಡು ಬರುತ್ತದೆ.  ಆ ಕಾಲದಲ್ಲಿ ಹಳ್ಳಿಗಳಿಗೆ  ಎರಗುತ್ತಿದ್ದ ಮಾರಕ ರೋಗಗಳಾದ ಪ್ಲೇಗು, ಕಾಲರ, ಸಿಡುಬು ಮುಂತಾದವುಗಳಿಂದ ಅಪಾರ ಪ್ರಮಾಣದಲ್ಲಿ ಜನರು  ಸಾಯುತ್ತಿದ್ದರು . ಅಪಾಯಕಾರಿ ರೋಗಗಳಿಂದ  ಮುಕ್ತಿ ಪಡೆಯಲು ಜನರು ತಮ್ಮ ಹಳ್ಳಿಯ ಮಾರಿ ,ಅಥವಾ ಇತರ ಶಕ್ತಿ ದೇವತೆಗಳ ಪೂಜೆ ಮಾಡುತ್ತಿದ್ದರು. ಶಿರಸಿಯಲ್ಲಿ ನೆಲೆಸಿರುವ "ಶ್ರೀ ಮಾರಿಕಾಂಬೆ" ಯು ಕರ್ನಾಟಕದ ಶಕ್ತಿ ದೇವತೆಗಳಲ್ಲೆಲ್ಲಾ  ಹೆಚ್ಚಿನ ಶಕ್ತಿ ಉಳ್ಳವಳೆಂದು  ಭಾವಿಸಿ  ಭಕ್ತರು ಆರಾಧಿಸುತ್ತಾರೆ.ಇಂದಿಗೂ ಈ ದೇವಿಯ ಭಕ್ತರು ವಿಶ್ವದೆಲ್ಲಡೆ  ಹರಡಿದ್ದಾರೆ




ಇದು ಮಹಾಭಾರತದ  ಸನ್ನಿವೇಶವೇ??

ಮೊದಲು  ಈ ದೇವಾಲಯದಲ್ಲಿ ಮೂಲ ಆಚರಣೆ  ಪ್ರಾಣಿಬಲಿ ನೀಡುವ ಮೂಲಕ ನಡೆಯುತ್ತಿತ್ತು, ಅಂದಿನ ದಿನಗಳಲ್ಲಿ ವಿಶೇಷವಾಗಿ ಕೋಣ, ಹಂದಿ, ಕೋಳಿ,ಕುರಿ ಮುಂತಾದ  ಪ್ರಾಣಿಗಳನ್ನು ಹೇರಳವಾಗಿ ಬಲಿ ನೀಡಿ  ಮಾರಿಕಾಂಬೆ ಯನ್ನು ಆರಾಧಿಸಲಾಗುತ್ತಿತ್ತು. ಜಾತ್ರೆಯ ವೇಳೆ  ಶಿರಸಿಯಲ್ಲಿ ಮೂಕ ಪ್ರಾಣಿಗಳ  ನೆತ್ತರ ಹೊಳೆ ಹರಿಯುತ್ತಿದೆಂದು ಇತಿಹಾಸಕಾರರು ಹೇಳುತ್ತಾರೆ. ದೇವಾಲಯದಲ್ಲಿ ಪ್ರಾಣಿ ಬಲಿ  ನಿಂತ ಬಗ್ಗೆ ಒಂದು ಕಥೆಯಿದೆ ಬನ್ನಿ ಅದನ್ನು ತಿಳಿಯೋಣ.





ಪೌರಾಣಿಕ ಕಲ್ಪನೆಯ ಚಿತ್ರ.


ಆಗ ನಮ್ಮ ದೇಶದಲ್ಲಿ  "ಮಹಾತ್ಮಾ ಗಾಂಧೀ ಜಿ"  ಯವರ ಅಲೆ ಎದ್ದಿದ್ದ ಕಾಲ..ಗಾಂಧೀಜಿ ತತ್ವಗಳು ಹಳ್ಳಿ ಹಳ್ಳಿಗೂ ಮುಟ್ಟುತ್ತಿದ್ದವು,ಇವುಗಳಿಂದ  ಪ್ರಭಾವಿತರಾಗಿ  ಹಲವು ಜನ ಅಹಿಂಸಾ ವಾದದತ್ತ  ಸಮಾಜವನ್ನು ಕೊಂಡೊಯ್ಯಲು ಪ್ರಯತ್ನಿಸಿದರು . ಆಗ ಶಿರಸಿಯಲ್ಲಿ ಕಾಣಿಸಿದವರೆ  ಎಸ.ಏನ್.ಕೆಶ್ವಿನ್ [S.N Keshwain] ರವರು ಮೊದಲು ಶಿರಸಿಯ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ  ನಿಲ್ಲಿಸಲು  ನಿರ್ಧರಿಸಿದರು.ಜೊತೆಗೆ ಅಂದಿನ ದಿನಗಳಲ್ಲಿ  ಇವರೇ ದೇವಾಲಯದ ಮುಖ್ಯ ಟ್ರಸ್ಟಿ ಆಗಿದ್ದರು,  ಇವರ ಜೊತೆ ಸಾಥ್ ನೀಡಿದ್ದು ಮತ್ತೊಬ್ಬ   ಗಾಂಧೀವಾದಿಯಾಗಿದ್ದ  ಶ್ರೀ ವಿಟ್ಟಲ್ ರಾವ್  ಹೊದಿಕೆ   {vitthal rao hodike} .ವೃತ್ತಿಯಿಂದ ಉಪಾಧ್ಯಾಯರಾಗಿದ್ದ ಶ್ರೀ ವಿಟ್ಟಲ್ ರಾವ್  ಹೊದಿಕೆ   ರವರು ಪ್ರಾಣಿ ಬಲಿ   ವಿರುದ್ಧ ಜನ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಹೊತ್ತರು. S.N Keshwain   ರವರು ಪ್ರಾಣಿ  ಬಲಿಗೆ ತಂದಿದ್ದ  ಕೋಣವನ್ನು  ಬಲಿ ಕೊಡುವ ದಿನದ  ಹಿಂದಿನ  ರಾತ್ರಿ ಅಪಹರಿಸಿ  , ಬಲಿಯನ್ನು ತಪ್ಪಿಸುತ್ತಾರೆ. ಕೋಪಗೊಂಡು ಗಲಾಟೆ ಮಾಡಲು ಸಿದ್ದವಾಗಿದ್ದ  ಅಪಾರ ಸಂಖ್ಯೆಯ  ಭಕ್ತರನ್ನು ತನ್ನ ಅಸಾಧ್ಯ  ಧೈರ್ಯ  ಹಾಗು ಜಾಣ್ಮೆಯಿಂದ ಸಮಾಧಾನ ಪಡಿಸಿ ಮೊದಲ ಹೆಜ್ಜೆ ಇಡುತ್ತಾರೆ. 1933 ರಲ್ಲಿ  ಮಹಾತ್ಮಾ ಗಾಂಧೀಜಿ ಯವರು ಶಿರಸಿಗೆ ಆಗಮಿಸಿದಾಗ  ಶಿರಸಿಯ ಮಾರಿಕಾಂಬೆ ದೇಗುಲದಲ್ಲಿ ಪ್ರಾಣಿ ಬಲಿ ನೀಡುವ ವಿಚಾರ ತಿಳಿದು  ಆ ದೇವಾಲಯಕ್ಕೆ ಬರಲು ನಿರಾಕರಿಸುತ್ತಾರೆ. ಇದರಿಂದ ನೊಂದ ಶಿರಸಿಯ ನಾಗರೀಕ ಜನತೆ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ ಕೊಡುವುದನ್ನು  ನಿಲ್ಲಿಸಲು ಮನಸು ಮಾಡಿ  ಅದರಲ್ಲಿ ಯಶಸ್ವಿಯಾಗುತ್ತಾರೆ. ಭಕ್ತಾದಿಗಳು ನೀಡಿದ ದೇಣಿಗೆಯನ್ನು ಶೈಕ್ಷಣಿಕ ಕಾರ್ಯಗಳಿಗೆ ಬಳಸಿ ಸಮಾಜದ ಉದ್ದಾರಕ್ಕೆ ಅಡಿಗಲ್ಲು ಹಾಕುತ್ತಾರೆ.  ಮತ್ತೊಂದು ವಿಶೇಷ ಇಂದು  ಈ ದೇವಾಲಯದ ಟ್ರಸ್ಟ್  ಹಲವು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಅಂದಿನ ಬಾಂಬೆ ಪ್ರಾಂತದಲ್ಲಿ  ದೇವಾಲಯ ಪ್ರವೇಶಕ್ಕೆ  ಹರಿಜನರಿಗೆ ಅನುವುಮಾಡಿಕೊಟ್ಟ ಮೊದಲ ದೇವಾಲಯ  ಈ ಮಾರಿಕಾಂಬೆ ದೇಗುಲ. ಈ ವಿಚಾರದ ಬಗ್ಗೆ ಮಹಾತ್ಮಾ ಗಾಂಧೀಜಿ ತೃಪ್ತರಾಗಿ ತಮ್ಮ "ಹರಿಜನ " ಪತ್ರಿಕೆಯಲ್ಲಿ ಲೇಖನ ಬರೆದು ದೇಶಕ್ಕೆ  ಶಿರಸಿ ಕ್ರಾಂತಿಯನ್ನು ದೇಶಕ್ಕೆ ತಿಳಿಸುತ್ತಾರೆ.




ಜಾತ್ರೆ ಸಮಯದಲ್ಲಿ ಗರ್ಭಗುಡಿ ಹೀಗಿತ್ತು.




ಬನ್ನಿ ಗುಡಿಯ ಇತಿಹಾಸ ತಿಳಿಯಿರಿ.

 ಇತಿಹಾಸ ಮೆಲುಕುಹಾಕುತ್ತಾ  ದೇವಾಲಯದ ಗರ್ಭಗುಡಿ ಬಳಿ  ಬಂದೆವು, ದೇವಿಯು ಜಾತ್ರೆ ಮಾಳದಲ್ಲಿ  ವಿರಾಜಮಾನವಾಗಿದ್ದ  ಕಾರಣ ಗರ್ಭಗುಡಿ ಮುಚ್ಚಿತ್ತು . ಬೆಳ್ಳಿಯ ಬಾಗಿಲುಗಳ ದರ್ಶನ ಪಡೆದು  ದೇವಾಲಯದಿಂದ  ಹೊರಬಂದೆವು  ಹೊರಗೆ ಕಂಡ ಆನೆಯ ವಿಗ್ರಹ  ಬನ್ನಿ ಭಕ್ತರೆ ದೇವಾಲಯದ ಇತಿಹಾಸ ತಿಳಿಯಿರಿ ಎಂದು ಕರೆಯುತ್ತಿರುವಂತೆ ಬಾಸವಾಯಿತು.


ಭೂತ ರಾಜ 




ಮತ್ತೊಮ್ಮೆ ಬನ್ನಿ 


ಹೊರಗೆ ಬಂದ ನನಗೆ ಈ ದೇವಾಲಯದ ಅದ್ಭುತ ಹಿನ್ನೆಲೆ ಪರಿಚಯವಾಗಿ  ರೋಮಾಂಚನ ಆಗಿತ್ತು. ಮುಂದುವರೆದು  ಅಲ್ಲೇ ಮುಂಭಾಗದಲ್ಲಿ ಭೂತರಾಜನ ಪೂಜೆಯನ್ನು ಭಕ್ತಾದಿಗಳು ಮಾಡುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು  . ಭೂತರಾಜನ ಗುಡಿಯ  ಹಿಂಭಾಗದಲ್ಲಿ ಪಾರ್ಕಿನಲ್ಲಿದ್ದ  ಮೂರ್ತಿಗಳು ಮತ್ತೊಮ್ಮೆ ಬನ್ನಿ ಇಲ್ಲಿಗೆ ಎಂದು ಕರೆದಂತೆ ಅನ್ನಿಸಿ ಅಲ್ಲಿಂದ  ಹೊರಟೆ. "ರೀ ಹರ್ಷ ನಿಮಗೆ ಥ್ಯಾಂಕ್ಸ್ ಕಣ್ರೀ"   "ಒಳ್ಳೆಯ ದೇವಾಲಯ ಪರಿಚಯ ಮಾಡಿಸಿದಿರಿ",ಎಂದೇ..............!   "ಬಾಲೂ ಸಾರ್,  "ಬನ್ನಿ  ಸಾರ್",  "ಇದು ನಮ್ಮೂರು ಇದನ್ನು ತೋರಿಸೋದು ನಮಗೆ  ಹೆಮ್ಮೆಯ ವಿಷ್ಯಾ"   ಅಂದ ಪುಣ್ಯಾತ್ಮ.  ಸಾರ್ ಮದುವೇ  ಮನೆಗೆ ಹೋಗೋಣ ಬನ್ನಿ ಅಂತಾ ಬೈಕ್  ಸ್ಟಾರ್ಟ್ ಮಾಡಿದ  ಶಿರಸಿಯಿಂದ ಹೋರಾಟ ಬೈಕು  "ಕೊಳಗೀ ಬೀಸ್ " ಕಡೆಗೆ ಹೊರಟಿತು.........................!!!



Saturday, October 27, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.11, ಅಲೆದಾಡಿ ಬಂದ ನೆಂಟ ನಾನು !!!!




ಪಡುವಣ ಸೂರ್ಯ ಮನೆಗೆ ಹೊರಟ  ಸಮಯ 

ಬನವಾಸಿಯಿಂದ ಸಿರ್ಸಿ ಹಾದಿಯಲ್ಲಿ  ಹಸಿರ ಸಿರಿಯ ನಡುವೆ ಮಲಗಿದ್ದ ರಸ್ತೆಯಲ್ಲಿ ನಮ್ಮ ಹರ್ಷನ ಬೈಕ್ ಸಾಗಿತ್ತು,
  ಆ ಸಮಯದಲ್ಲಿ ಪಡುವಣದಲ್ಲಿ ಸೂರ್ಯಾಸ್ತ  ಆಗುವ ಸಮಯ ಹತ್ತಿರವಾಗುತ್ತಿತ್ತು................!!!!!! ಅಸ್ತಮಿಸುವ ಸೂರ್ಯ ಆಗಸದಲ್ಲಿ ಬಣ್ಣದ ಚಿತ್ತಾರ ಬರೆಯುತ್ತಿದ್ದ. ಹಕ್ಕಿಗಳು ಗೂಡು ಸೇರಲು ಹೊರಟಿದ್ದವು, ಅದೇ ರೀತಿ ನಾವೂ ಸಹ ನಮ್ಮ ಮನೆಗಳಿಗೆ  ಹೊರಟಿದ್ದೆವು. ಆದರೆ ನನ್ನ ಮನೆ ಸಿರ್ಸಿಯಲ್ಲಿ  ನನ್ನ ಸೋದರತ್ತೆ ಮನೆಯೇ ಆಗಿತ್ತು. ಬೆಳಿಗ್ಗೆ ನಾಗು ಹೇಳಿದ ಮಾತು  "ಲೋ ಬೇಗ ಬಾ, ಎಲ್ಲೆಲ್ಲೋ  ಅಲೆಯುತ್ತಾ  ರಾತ್ರಿ ಮಾಡಿ ಬರಬೇಡ ,ನಿನ್ನ ಜೊತೆ ಬಹಳ ಮಾತಾಡೋದು ಇದೆ" ಅಂತಾ ಹೇಳಿದ್ದು, ಕಿವಿಯಲ್ಲಿ ಗುಯ್  ಗುಡಲು ಆರಂಭಿಸಿತ್ತು . ಮನೆಗೆ ಹೋದರೆ ಅವಳ ಅರ್ಚನೆ ಆಗೋದು ಗ್ಯಾರಂಟೀ ಆಗಿತ್ತು. ಆ ಯೋಚನೆಯಲ್ಲೇ  ಸಿರ್ಸಿ ತಲುಪಿದ್ದೆ ನಾನು. "ಸಾರ್  ಜೂ ಸರ್ಕಲ್ ಬಂತು"  ಅಂತಾ ಹರ್ಷ ಹೇಳಿದಾಗಲೇ ವಾಸ್ತವಕ್ಕೆ ಬಂದೆ,  ಆಗಲೇ ಬೈಕ್  ಗಂಗಾವನ  ಎಸ್ಟೇಟ್  ಹೊಕ್ಕು ಮನೆಯ ಮುಂದೆ ನಿಂತಿತು. "ಬಾಲೂ ಸಾರ್ ಬೆಳಿಗ್ಗೆ ಎಂಟು ಘಂಟೆಗೆ ಬರ್ತೇನೆ ಗುಡ್ ನೈಟ್ " ಅಂತಾ ಹೇಳಿ  ಹರ್ಷ ಮಾಯವಾದ.



ದಿನಕ್ಕೆ ಶುಭ ವಿದಾಯ ಹೇಳಿದ ಸೂರ್ಯ 

ಸೂರ್ಯ ದೇವನು  ಆ ದಿನಕ್ಕೆ ಶುಭ ವಿದಾಯ ಹೇಳಿ ಮನೆಗೆ ಹೊರಟಿದ್ದ. ನಾನೂ ಮನೆಯ ಒಳಗೆ ಕಾಲಿಟ್ಟೆ  ,ನನ್ನ ಸೋದರತ್ತೆ ನಾಗು  ಹುಸಿಮುನಿಸು ತೋರಿ  "ಆಹಾ ಬಂದಾ ನೋಡು ಈಗ  ಬೆಳಿಗ್ಗೆ ಯಿಂದಾ ಎಲ್ಲೆಲ್ಲಿ ಅಲೆದೆ ", "ಹೋಗ್ಲಿ ಎಲ್ಲಾ ಜಾಗ ಖುಶಿ ಆಯ್ತಾ" ಅಂತಾ ಹೇಳಿ , "ನೀರು ಕುಡಿ ಮೊದಲು ಅಂತಾ  ಕುಡಿಯಲು ನೀರು ಕೊಟ್ಟು , ಕಾಫಿನೋ  ಕಷಾಯ ಕೊಡಲೋ"  ಅಂತಾ ಹೇಳಿದಳು, ನಾನೂ "ಅಮ್ಮಾ ತಾಯಿ, ನನಗೆ ನಿಮ್ಮ ಮನೆಯಲ್ಲಿ ಇರುವವರೆಗೆ ಕಷಾಯ ಕೊಡು"   ಅಂದೇ   ನನ್ನ ಕೋರಿಕೆಯಂತೆ  ಕಷಾಯ ಕೊಟ್ಟಳು  , ಬೆಳಗ್ಗಿನಿಂದ ಅಲೆದಿದ್ದ ನನಗೆ ಬಿಸಿ ಬಿಸಿ ಕಷಾಯ  ಮುದ ನೀಡಿ ಆಯಾಸ ಪರಿಹಾರವಾಯಿತು."ಲೇ  ಬಾರೋ ಇಲ್ಲಿಕೂತು ಮಾತಾಡೋಣ"   ಅಂತಾ ಮಾತಾಡಲು ಶುರುಮಾಡಿದಳು,  ಪರಸ್ಪರ ಮಾತಾಡುತ್ತಾ  ಸುಮಾರು ಮೂವತ್ತು ವರ್ಷಗಳ  ಜೀವನದ ಘಟನೆಗಳನ್ನು ಮೆಲುಕು ಹಾಕಿದೆವು. ನನ್ನ ಬಾಲ್ಯದ ಅನೇಕ ಘಟನೆಗಳನ್ನು  ನೆನಪಿಸಿ , ನನ್ನ ತಂದೆ ತಾಯಿಗಳ ಬಗ್ಗೆ, ನೆಂಟರ ಬಗ್ಗೆ ಮಾತಾಡಿ  ಹಾಗು ತನ್ನ ಸುಖಿ ಕುಟುಂಬದ ಬಗ್ಗೆ ಮಾತಾಡಿ  ನನ್ನ ಜೀವನದ ಅನೇಕ ಮಜಲುಗಳನ್ನು ಪುನಃ ಕಣ್ಣ ಮುಂದೆ ತಂದಳು. ನನ್ನನ್ನು ಬಾಲ್ಯದಿಂದ ಎತ್ತಿ ಆಡಿಸಿದ ನಾಗುವಿನ  ಹಾಗು ಅವಳ ಮಮತೆಗೆ ಕೈಗಳಿಗೆ ಮನದಲ್ಲೇ ನಮಸ್ಕಾರ ಮಾಡಿದೆ.  ಕಣ್ಣುಗಳು ತುಂಬಿ ಬಂದಿದ್ದವು. ನಂತರ  ಪಕ್ಕದ ಮನೆಯಲ್ಲೇ ಇದ್ದ ನೆಂಟರ ಮನೆಯ ದರ್ಶನ ಮಾಡಿದೆ. ಅವರ ಪ್ರೀತಿಗೆ ಶರಣಾದೆ. ಏನೋ ನೆನಪಾಗಿ ನಮ್ಮಬ್ಲಾಗ್ ಮಿತ್ರ  ಡಾಕ್ಟರ್ ಸಂತೋಷ್  ಅವರಿಗೆ ಫೋನ್ ಮಾಡಿದೇ  , ಅವರು ನಾನು ಇಲ್ಲಿಗೆ ಬರುವ ಮೊದಲು ಸಿರ್ಸಿಯಲ್ಲಿ ಸಿಗುವುದಾಗಿ ಹೇಳಿದರು , ಫೋನ್  ಮಾಡಿದಾಗ ಜಾತ್ರೆಯಲ್ಲಿರುವುದಾಗಿ ತಿಳಿಸಿದರು,  ಮತ್ತೊಮ್ಮೆ ಫೋನ್ ಮಾಡಿದಾಗ  ಕಾಣೆಯಾಗಿದ್ದರು. ಜಾತ್ರೆ ನೋಡುವ ಆಸೆ ಕೈಬಿಟ್ಟೆ. ಅಷ್ಟರಲ್ಲಿ ನಾಗು ಮಗ ಹಾಗು  ಸೊಸೆ  ಬಂದರು ಎಲ್ಲರೂ ಒಟ್ಟಿಗೆ ಕುಳಿತು  ರಾತ್ರಿ ಭೋಜನ ಮುಗಿಸಿದೆವು, ಇವರೆಲ್ಲರ ಜೊತೆ ಮಾಡಿದ ಊಟ ಹೆಚ್ಚಾಗಿರುಚಿ  ನೀಡಿತ್ತು.   ಎಲ್ಲರಿಗೂ  ಶುಭ ರಾತ್ರಿ ತಿಳಿಸಿ  ನಿದ್ರಾದೇವಿಯ ಮಡಿಲಿಗೆ ಜಾರಿದೆ.




ಮುಂಜಾವಿನ ಸೊಗಸು  ಹಸಿರ ನಡುವೆ.


ಎಚ್ಚರವಾದಾಗ  ಹಕ್ಕ್ಕಿಗಳ ಹಾಡು ಕೇಳಿತ್ತು. ಬೆಳಗಿನ ಕಾರ್ಯ ಮುಗಿಸಿ ಮನೆಯಿಂದ ಹೊರಗೆ ಬಂದೆ  ಕ್ಯಾಮರ ಜೊತೆಯಲ್ಲೇ ಬಂದಿತ್ತು.  ಮುಂಜಾವಿನ ಸೂರ್ಯ ಕಿರಣ ಧರೆಗೆ  ತಾಗುವ ಸಮಯ  ಮೋಹಕವಾಗಿತ್ತು. ಮನೆಯ ಸುತ್ತ ಫೋಟೋ ತೆಗೆಯುತ್ತಾ ಸಾಗಿದೆ.


ಮನೆಯ ಮುಂದಿನ ಅಡಿಕೆ ತೋಟದ ಅಡಿಕೆ ಮರ 


ಶುಭೋದಯ ಹೇಳಿದ  ಹೂ ಗೊಂಚಲು 








ಮನೆಯ ಮುಂಬಾಗದಲ್ಲೇ ಇದ್ದ  ತೋಟದ   ಅಡಿಕೆ ಮರಗಳ   ಹೊಯ್ದಾಟ , ಅವುಗಳ ನಡುವಿನಿಂದ  ಸುಳಿದು  ಬಂದ  ತಂಗಾಳಿ  ಉಸಿರಾಗಿ ದೇಹ ಸೇರಿ ಹೊಸ ಚೈತನ್ಯ ನೀಡಿತ್ತು. ಅಲ್ಲೇ ಬೇಲಿಯಲ್ಲಿದ್ದ  ಹೂ ಗೊಂಚಲು ನಗುತ್ತಾ ಶುಭೋದಯ ಹೇಳಿತ್ತು,  ಹತ್ತಿರದ ಮರದಲ್ಲಿ  ಮರೆಯಾಗಿ ಕುಳಿತ ಮಂಗಾಟೆ  ಹಕ್ಕಿ  ಕೂಗುತ್ತಾ  ಯಾರನ್ನೋ ಅಣಕಿಸುತ್ತಿತ್ತು.

ತೊನೆದಾಡಿತ್ತು   ಬಾಳೆಗೊನೆ.


ಅಲ್ಲೇ ಅಂಗಳದಲ್ಲಿ ನಿಂತಿದ್ದ ಬಾಳೆಯ ಮರದಲ್ಲಿ ತೊನೆದಾಡಿತ್ತು  ಬಾಳೆಗೊನೆ ,ಅಲ್ಲೇ ಹಕ್ಕಿಗಳ , ದುಂಬಿಗಳ ಚೆಲ್ಲಾಟ ಮುಂಜಾನೆಯ ಹೊಸ ಲೋಕ  ಸೃಷ್ಟಿ ಮಾಡಿತ್ತು. ಒಳ್ಳೆಯ ಆಲೋಚನೆಗಳ  ಚಿಲುಮೆ ಮನದಲ್ಲಿ  ಚಿಮ್ಮಿ ಮನಸು ಪ್ರಶಾಂತ ವಾಯಿತು. ದೇಹದಲ್ಲಿ ಉತ್ಸಾಹ ದ ಬುಗ್ಗೆ ಉಕ್ಕಿತು.. ಹಾಗೆ ನಡೆಯುತ್ತಾ ಮನೆಯ ಹಿಂಬಾಗ ಬಂದೆ

ಅಡಿಕೆ ಲೋಕದೊಳಗೆ ನಿಂತ ಮನೆ 
ಅಡಿಕೆ ಗೊಂಚಲಿನ  ಹಾರ  ನೇತಾಡುತ್ತಿತ್ತು.



ಇಲ್ಲಿ ನಾ ಕಂಡದ್ದೇ ಬೇರೆ ಲೋಕ !!!  ಅದೇ ಅಡಿಕೆ ಲೋಕ  ಅರೆ ಎಲ್ಲೆಲ್ಲಿ ನೋಡಿದರೂ ಅಡಿಕೆ ಸಾಮ್ರಾಜ್ಯ , ಮನೆಯ ಚಾವಣಿ ಮೇಲೆ, ಅಂಗಳದಲ್ಲಿ ,ಮರಗಳ ನಡುವೆ ಅಡಿಕೆ ಸಾಮ್ರಾಜ್ಯ ಕಂಡು ಬೆರಗಾದೆ , ಹೌದು ಶಿರಸಿಯಲ್ಲಿ ಅಡಿಕೆ ತೋಟ ಇದ್ದವರ  ಮನೆಗಳಲ್ಲಿ ಕಾಣುವ ಸಾಮಾನ್ಯ  ದ್ರುಶ್ಯವಾಗಿರುತ್ತದೆ ,ಹಾಗೆ ಮುಂದೆ ಬಂದೆ



ಗೋಟು  ಅಡಿಕೆ { ಹಣ್ಣು ಅಡಿಕೆ }

ಒಣಗಿದ  ಚಾಲಿ    ಅಡಿಕೆ 


ಅಡಿಕೆ ಹಣ್ಣನ್ನು ಕೈಯಲ್ಲಿ ಹಿಡಿದು ನೋಡುತ್ತಿದ್ದೆ  "ಅದಾ ಅದು ಅಡಿಕೆ ಗೋಟು " [ಅಡಿಕೆ ಹಣ್ಣು]ಹಿಂದಿನಿಂದ ನಾಗು ಮಗ ಶ್ರೀನಿವಾಸ್  ದ್ವನಿ ಬಂತು,   "ಅಡಿಕೆ ಗೊಟನ್ನು   ಬಿಸಿಲಿನಲ್ಲಿ ಒಣಗಿಸಿ  ಅದು ಪೂರ್ಣವಾಗಿ ಒಣಗಿ   ಚಾಲಿ ಅಡಿಕೆ  ಆಗುತ್ತೆ  ನಂತರ ಅದನ್ನು ಸುಲಿದು  ಸಿದ್ದಪಡಿಸಿದ ಅಡಿಕೆ ಯನ್ನು ಮಾರುಕಟ್ಟೆಗೆ ಒಯ್ಯುತ್ತೇವೆ"  ಅಂತಾ ಅಡಿಕೆ ಸಂಸ್ಕರಣೆ ಮಾಡುವ ವಿವಿಧ ವಿಧಾನಗಳನ್ನು  ತಿಳಿಸಿದನು. ಅಡಿಕೆಯ ಬಗ್ಗೆ ತಿಳಿದ ನಾನು ಸ್ವಲ್ಪ ಮುಂದೆ ಬಂದೆ

ಕಾಯಿ ಮೆಣಸಿನ ಗೊಂಚಲು 
ಕಾಯಿ ಮೆಣಸಿನ ಗೊಂಚಲು 



ಮೆಣಸಿನ ಹಣ್ಣು 





ಅಲ್ಲೇ ಕಣ್ಣಿಗೆ  ಬಿತ್ತು ಒಣಗಿ ಹಾಕಿದ ಮೆಣಸಿನ ಗೊಂಚಲು ಹಸಿರು ಬಣ್ಣದಿಂದ , ಹಳದಿ , ಕೆಂಪಾಗಿ  ನಂತರ ಒಣಗಿ ಕಪ್ಪಾಗಿ  ಕರಿ ಮೆಣಸಾಗಿ  ನಮ್ಮ ಸಂಬಾರ ಪದಾರ್ಥವಾಗುವ ಮೆಣಸಿನ ಜೀವನ  ಕ್ರಿಯೆ ಪರಿಚಯವಾಯಿತು.  "ಲೇ ಬನ್ರೋ ಒಳಗೆ  ಇವುಕ್ಕೆ ತಿಂಡಿ ತಿನ್ನೋ ಆಸಕ್ತೀನೇ ಇಲ್ಲಾ" ನನ್ನ ಸೋದರತ್ತೆ  ಕರೆದಳು, ಒಳಕ್ಕೆ ಹೋಗಿ ಬಿಸಿ ಬಿಸಿ ಪೂರಿ, ಸಾಗು ಗುಳುಂ ಮಾಡಿ , ಕಷಾಯ ಕುಡಿದು , ಮನೆಯಿಂದ  ಆಚೆ ಬಂದೆ ನಮ್ಮ ಹರ್ಷ ತನ್ನ ಬೈಕಿನಲ್ಲಿ ಹಾಜರ್ ಆಗಿದ್ದ,  ನಾಗು ಬರ್ತೀನೆ  "ಕೊಳಗಿ ಬೀಸ್" ನಲ್ಲಿ ನನ್ನ ಸ್ನೇಹಿತರ ಸಹೋದರನ ಮದುವೆ ಇದೆ ಅಂತಾ ಹೊರಟೆ "ಹುಷಾರು ಮಾರಾಯ"  ಅಂತಾ ನಗು ನಗುತ್ತ  ಹಾರೈಸುತ್ತಾ  ಕಳುಹಿಸಿಕೊಟ್ಟಳು .  ನಮ್ಮ ಹರ್ಷ ಬೈಕ್ ಸ್ಟಾರ್ಟ್  ಮಾಡಿ ರೊಯ್ಯನೆ ಹೋರಟ , ನಾನು ಯಥಾ ಸ್ಥಿತಿ  ಹಿಂದಿನ ಸೀಟಿನಲ್ಲಿ ಆಸಿನನಾದೆ , ಸಾರ್ ಬನ್ನಿ ಶಿರಸಿ   ಮಾರಿಕಾಂಬೆ ದೇಗುಲ  ದರ್ಶನ ಮಾಡೋಣ ಅಂತಾ  ಬೈಕ್ ಓಡಿಸಿದ.



ಮಾರಿಕಾಂಬ ದೇಗುಲದಲ್ಲಿ ಸ್ವಾಗತ ಕೋರುವ ಗಣಪತಿ 


ಮಾರಿಕಾಂಬ ದೇವಿಯ ದೇಗುಲದ ಮುಂದೆ ಬೈಕ್ ನಿಂತಿತು ಎದುರಿಗೆ ಕಂಡದ್ದು ಗಣಪತಿಯ ದರ್ಶನ  ............!!!!




Tuesday, October 23, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.10 ಬನವಾಸಿಯ ಮಧುಕೇಶ್ವರ ಹೇಳಲಿಲ್ಲ ಇತಿಹಾಸ!!!!


ಮಧುಕೇಶ್ವರ  ದೇವಾಲಯದ ಪ್ರವೇಶ ದ್ವಾರದ  ಸುಂದರ ಆನೆ ಗಳೆರಡು  ವೈಭವದ ಜಾಗಕ್ಕೆ ಸ್ವಾಗತ ಕೋರುತ್ತಾ ನಿಂತಿದ್ದವು.  ನಮ್ಮ ಕಾಲುಗಳು  ದೇವಾಲಯ ಪ್ರವೇಶ ದ್ವಾರದಲ್ಲಿ ಬಂದು ನಿಂತವು , ನನಗರಿವಿಲ್ಲದೆ ನನ್ನ ಕೈಗಳನ್ನು ಮುಗಿದು ನನ್ನ  ಕ್ಯಾಮರದಲ್ಲಿ  ಪ್ರವೇಶ ದ್ವಾರದಿಂದ ದೇವಾಲಯದ ಒಳಗಿನ  ಚಿತ್ರ ತೆಗೆದೇ. ಒಳಗಡೆ  .........ನಿಧಾನವಾಗಿ...........ಭಕ್ತಿ ಯಿಂದ ......... ನಮ್ಮ ಪಾದಗಳು  ಪ್ರವೇಶಿಸಿದ್ದವು ......!!!!!!



ಬನ್ನಿ ನಿಮಗೆ ಸ್ವಾಗತ


ಬನ್ನಿ ಪುರಾಣ ಪ್ರಸಿದ್ದ ಬನವಾಸಿಯ  ಐತಿಹಾಸಿಕ  ಮಧುಕೇಶ್ವರ ದೇವಾಲಯದೊಳಗೆ  ಪ್ರವೇಶಿಸಿದೆವು.ದೇವಾಲಯದ ಒಳ ಆವರಣದಲ್ಲಿ  ಕಣ್ಣಿಗೆ ಕಾಣಿಸಿದ್ದು ಎರಡು ಬೃಹತ್  ಕಂಬಗಳ ನೋಟ.  ಒಂದು ಕಂಬದಲ್ಲಿ  ಕಂಬದ ಮೇಲಿನ ತುದಿಯಲ್ಲಿ ಮಂಟಪ ಇದ್ದು ಅದರೊಳಗೆ  ಒಂದು ನಂದಿ ವಿಗ್ರಹ  ಸ್ಥಾಪಿಸಲಾಗಿದೆ . ಮತ್ತೊಂದು ಕಂಬದ ಮೇಲಿನ ತುದಿಯಲ್ಲಿ  ಮಡಕೆ  ಆಕಾರದ  ಆಕ್ರುತಿ   ಕಾಣಸಿಗುತ್ತದೆ , ಮತ್ತು ಅದೇ  ಕಂಬದ ಪೀಠದಲ್ಲಿ ಆನೆ , ನಂದಿ,ಹಾಗು ಲಿಂಗದ  ಸುಂದರ ಚಿತ್ರಗಳನ್ನು ಬಿಡಿಸಲಾಗಿದೆ.




ಶ್ರೀ ಮಧುಕೇಶ್ವರ ದೇವಾಲಯ 



ಹಾಗೆ ಮುಂದುವರೆದ  ನಾವು ದೇವಾಲಯದ ಸಮೀಪ ಬಂದೆವು, 8 ನೆ ಶತಮಾನದ ದೇವಾಲಯವೆಂದು ಹೇಳಲಾಗುವ ಈ ದೇವಾಲಯದಲ್ಲಿ  ಪುರಾತನ  ಶಿಲ್ಪಿಗಳ  ಕೆತ್ತನೆಗಳನ್ನು ಕಾಣಬಹುದು,ಈ ದೇವಾಲದ  ಪ್ರದಕ್ಷಣ ಪಥ ,ಒಳಮಂಟಪಗಳು  ತಮ್ಮದೇ ಆದ ವಾಸ್ತು ವಿನ್ಯಾಸದಿಂದ ಕಂಗೊಳಿಸುತ್ತಿವೆ .ಕದಂಬರ ಕಾಲದಲ್ಲಿ ಈ ದೇವಾಲಯ ಇಟ್ಟಿಗೆಯಿಂದ ನಿರ್ಮಿತವಾಗಿ , ನಂತರ  ಕಲ್ಲಿನಿಂದ  ನಿರ್ಮಾಣ ಮಾಡಲಾಗಿದೆಯೆಂದು ಕೆಲವು ಇತಿಹಾಸ ತಜ್ಞರು ಹೇಳುತ್ತಾರೆ.ಬನ್ನಿ ಈ ದೇವಾಲಯದ ಬಗ್ಗೆ  ಪ್ರಾಚ್ಯವಸ್ತು ತಜ್ಞರ ಅಭಿಪ್ರಾಯ ಹೀಗಿದೆ, ಮೂಲತಹ ಈ ದೇವಾಲಯ ವಿಷ್ಣು ದೇವಾಲಯ ಆಗಿತ್ತೆಂದೂ ಕಾಲಾನಂತರ ಇದನ್ನು  ಶಿವ ದೇವಾಲಯವಾಗಿಸಲಾಗಿದೆ ಎಂದು ತಮ್ಮ ವೆಬ್ ಸೈಟ್ನಲ್ಲಿ ಮಾಹಿತಿ ನೀಡಿದ್ದಾರೆ. ಮಾಹಿತಿ ಲಿಂಕ್ ಕೆಳಕಂಡಂತೆ ಇದೆ.

The temple is naturally a synthesis of several schools of architecture. Though presently a Shivalinga of ancient times is there, it is believed that the original shrine was that of Vishnu. The statues of Kesava (Vishnu) and Kartikeya are also there, which are attributed to Kadamba times. There are many smaller idols of different deities, added from time to time in the renovated temple.[ ಮಾಹಿತಿ ಕೃಪೆ http://www.kamat.com/kalranga/archaeology/banavasi.htm]


ಮಾಹಿತಿ ಏನಾದರೂ ಇರಲಿ ಕೆಲವು ಶತಮಾನಗಳಿಂದ ಇಲ್ಲಿ ಮಧುಕೇಶ್ವರ ನೆಲೆಸಿರುವುದು ನಿಜ.ಮೊದಲು ಯಾವುದೇ ರಾಜ ಯಾವುದೇ ಧರ್ಮ ಬದಲಾವಣೆ ಮಾಡಿದರೆ ಸಹಜವಾಗಿ  ದೇವಾಲಯಗಳ  ರೂಪದಲ್ಲಿಯೂ ಸಹ  ಸಹಜವಾಗಿ ಇದೆ ಬದಲಾವಣೆ ಆಗುತ್ತಿತ್ತು, ಅದನ್ನು ಪ್ರಜೆಗಳೂ ಸಹ ಒಪ್ಪಿಕೊಳ್ಳುತ್ತಿದ್ದರು.



ಶ್ರೀ ಮಧುಕೇಶ್ವರ ಸ್ವಾಮೀ

ದೇವಾಲಯದ ಆವರಣ  ಪ್ರವೇಶಿಸಿದ ನಾವು  ಒಳ ಪ್ರವೇಶ ಮಾಡಿದೆವು  , ಹೆಚ್ಚಿನ ಪ್ರವಾಸಿಗಳು ಇಲ್ಲದ ಕಾರಣ ಗರ್ಭಗುಡಿಯಲ್ಲಿ  ಶ್ರೀ ಮಧುಕೇಶ್ವರ ಸ್ವಾಮೀ ದರ್ಶನ ಪಡೆದೆವು. ಅಲ್ಲೇ ಇದ್ದ  ಅರ್ಚಕರು  ನಗುಮುಖದಿಂದ ಸ್ವಾಗತಿಸಿ ದೇವಾಲಯದ ಇತಿಹಾಸವನ್ನು ತಮಗೆ ತಿಳಿದಿರುವಂತೆ  ವಿವರಿಸಿದರು.ಮಂಗಳಾರತಿ ,ಪ್ರಸಾದ ಸ್ವೀಕರಿಸಿದ ನಾವು  ಅರ್ಚಕರೊಡನೆ ಹೊರ ಬಂದು ದೇವಾಲಯ ಪರಿಚಯ ಮಾಡಿಕೊಟ್ಟರು.


ಮಧುಕೇಶ್ವರ ಸನ್ನಿಧಿ ಯಲ್ಲಿನ  ನಂಧಿ 


ಗರ್ಭಗುಡಿಯಿಂದ ಹೊರಗೆ ಬಂದ ನಮಗೆ  ಶ್ರೀ ಮಧುಕೇಶ್ವರ ಸ್ವಾಮೀ ಎದುರು ತನ್ನದೇ ಗಾಂಭೀರ್ಯದಿಂದ  ನಂದಿ ಕುಳಿತಿತ್ತು.ಅರ್ಚಕರು ಇದರ ಬಗ್ಗೆ ಹೇಳುತ್ತಾ , " ನೋಡಿಸಾರ್  ನಂದಿಯಲ್ಲಿನ  ಒಂದು ಕಣ್ಣು [ ಎಡ ಕಣ್ಣು] ಮಧುಕೆಶ್ವರನನ್ನೂ , ಮತ್ತೊಂದು ಕಣ್ಣು [ ಬಲ ಕಣ್ಣು]  ಅಮ್ಮನವರ ದರ್ಶನ ಮಾಡುತ್ತಿದೆ  ಎಂಬ ವಿಚಾರ ತಿಳಿಸಿದರು.


ದೇವಾಲಯದ ಗರ್ಭಗುಡಿಯ ದ್ವಾರದಲ್ಲಿನ ಕಲ್ಲು ಮಂಟಪ 

ಕಲ್ಲಿನ ಮಂಟಪದ ಒಳಗೆ  ಶಿವ ಪಾರ್ವತಿ 


ಗರ್ಭ ಗುಡಿಯ ಪ್ರವೇಶ ದ್ವಾರದ ಬಲಭಾಗದಲ್ಲಿ  ಸುಂದರವಾದ ಒಂದು ಕಲ್ಲಿನ ಮಂಟಪವಿದ್ದು  ಅದರ ಒಳಗೆ  ಶಿವ ಹಾಗು ಪಾರ್ವತಿ  ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಇದು ವಿಜಯನಗರ ಕಾಲದ ನಿರ್ಮಾಣವೆಂದೂ   ಹೇಳುತ್ತಾರೆ.  ಸುತ್ತಲಿನ ಕಂಬಗಳು ಚಾಲುಕ್ಯರ ಕಾಲದ ಶೈಲಿಯನ್ನು ಹೋಲುತ್ತವೆ. ಇದರ ಎದುರು ಸನಿಹದಲ್ಲೇ  ಒಂದು ಶಾಸನ  ಕಾಣಿಸಿತು.ಹತ್ತಿರ ಹೋಗಿ ನೋಡಿ  ಫೋಟೋ ತೆಗೆಯಲು  ಆರಂಭಿಸಿದೆ .

ಸೋಂದೆ ಅರಸರ ಕಾಲದ ಶಾಸನ 

ಕಲ್ಲಿನ ಜಾಲರಿ 
ದೇವಾಲಯದ ಕಂಬಗಳು 
ಅಮ್ಮನವರ ಸನ್ನಿಧಿ 



ಶಾಸನದಲ್ಲಿ  ಸೋಂದೆ ಅರಸರಾದ "ಸದಾಶಿವ ರಾಜೇಂದ್ರ" ರ ಕಾಲದ ಸೇವೆಯನ್ನು  ಉಲ್ಲೇಖಿಸಲಾಗಿದೆ. ಶಾಸನದ ಸನಿಹದಲ್ಲೇ ಕಣ್ಣಿಗೆ ಕಾಣುತ್ತದೆ ಸುಂದರವಾದ ಕಲ್ಲಿನ ಜಾಲರಿ  ದೇವಾಲಯಕ್ಕೆ  ಬೆಳಕಿನ ವ್ಯವಸ್ಥೆ  ಬಗ್ಗೆ ನಿರ್ಮಿಸಿರುವ  ಈ ಕಲ್ಲಿನ ಜಾಲರಿ ಸುಂದರ ಕೆತ್ತನೆಗಳಿಂದ ಸಿಂಗಾರಗೊಂಡಿದೆ. ದೇಗುಲದ  ಸುಂದರ ಕಲ್ಲು ಕಂಬಗಳು ಹಲವು ಶತಮಾನಗಳಿಂದ ದೇವಾಲಯದಲ್ಲಿ  ನಿಂತು ಹಿರಿಮೆ ಸಾರುತ್ತಿವೆ.ಒಳ ಆವರಣದಲ್ಲೇ ನಿಮಗೆ ಅಮ್ಮನವರ ದರ್ಶನ ಆಗುತ್ತದೆ.





 ಈ ದೇವಾಲಯದ  ಹೊರಗೆ ಬಂದರೆ ಅರ್ಚಕರು ದೇವಾಲಯದ ಪುರಾಣ ಹೇಳುತ್ತಾ  ಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣು  ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು ಎಂಬ ಮಾಹಿತಿ ನೀಡಿದರು.




ಮಧುಕೇಶ್ವರ  ದೇವಾಲಯದ ಬಲ ಭಾಗದಲ್ಲಿ ನರಸಿಂಹ ದೇವಾಲಯ.



ಮಧುಕೇಶ್ವರ ದೇವಾಲಯದ  ಹೊರ ಆವರಣಕ್ಕೆ ಬಂದರೆ ಬಲಭಾಗದಲ್ಲಿ ನಿಮಗೆ ಕಾಣ ಸಿಗುವುದು ನರಸಿಂಹ ದೇವಾಲಯ  ಹೌದು ಈ ಸ್ಥಳದಲ್ಲಿ  ಹರಿ ಹಾಗು ಹರ ಇಬ್ಬರೂ ಸಹ ಅಕ್ಕಪಕ್ಕದಲ್ಲಿ  ಈ   ದೇವಾಲಯದಲ್ಲಿ  ಜೊತೆಯಾಗಿಯೇ  ಸೌಹಾರ್ದದಿಂದ ಇದ್ದಾರೆ. ದೇವಾಲಯದ ಗೋಡೆಗಳಲ್ಲಿಯೂ  ಸಹ ನೀವು ವಿಷ್ಣು ಹಾಗು ಶಿವನ ಬಗ್ಗೆ ಮೂರ್ತಿಗಳ ಕೆತ್ತನೆ ಕಾಣಬಹುದು.




ಮಂಟಪದಲ್ಲಿ  ಬಂದಿಯಾದ  ಬಳಪ ಕಲ್ಲಿನ ಮಂದಹಾಸನ 

ಕಲ್ಲಿನ ಮಂದಹಾಸನದ  ಒಂದು ಕಾಲು 

ಶೀರ್ಷಿಕೆ ಸೇರಿಸಿ

ಇಲ್ಲೇ ಸನಿಹದಲ್ಲಿ ದೇವಾಲಯದ ದಕ್ಷಿಣ ಭಾಗದಲ್ಲಿ ಒಂದು ಮನೆಯಲ್ಲಿ  ಕಲ್ಲಿನ ಮಂಚವನ್ನು  ಕಬ್ಬಿಣ ಗೆಟ್ ನಲ್ಲಿ ಮುಚ್ಚಲಾಗಿದೆ, ಆದರೆ ಮನೆಯ ಒಳಗೆ ಇರುವುದು ನಿಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಬಳಪದ ಕಲ್ಲು ಬಳಸಿ ನಿರ್ಮಿಸಿರುವ ಈ ಮಂಟಪದಲ್ಲಿ ಶಿಲ್ಪಿಯ  ಕಲಾ ವೈಭವ  ಅಚ್ಚರಿಗೊಳಿಸುತ್ತದೆ. ಪ್ರತೀ  ಕಂಬದಲ್ಲಿಯೂ ಕುದುರೆ,ಆನೆ, ಸಿಂಹ, ಗಿಳಿ, ಹೂ, ಮುಂತಾದ ಚಿತ್ರಗಳನ್ನು ಮೂಡಿಸಿ ಶಿಲ್ಪಿ ತನ್ನ ಕಲಾವಂತಿಕೆಯನ್ನು ಸುಂದರವಾಗಿ ಅನಾವರಣಗೊಳಿಸಿದ್ದಾನೆ  ಈ  ಕಲ್ಲಿನ ಮಂಚವನ್ನು .ಸೊಂದೆಯ "ರಘುನಾಥ ನಾಯಕರು"  ದೇವಾಲಯಕ್ಕೆ ವಸಂತ ಋತುವಿನ ಪೂಜೆಗಾಗಿ  ಸಮರ್ಪಣೆ ಮಾಡಿದುದಾಗಿ ತಿಳಿಸುತ್ತಾರೆ.ಅದರ ಮೇಲಿನ ಶಾಸನ 1628 ಎಂದು ತಿಳಿಸುತ್ತದೆ.


ದೇವಾಲಯದ ಗೋಡೆಯ ಮೇಲಿನ ಸುಂದರ ಚಿತ್ತಾರ.

ಪ್ರತೀ ಶಿಲ್ಪವೂ ಒಂದು ಪುರಾಣ ಕಥೆಯನ್ನು ಹೇಳುತ್ತದೆ 





ದರ್ಶನ ನೀಡಿದ  ಅರ್ಧ ಗಣಪತಿ  

 ಕ್ಯಾಮಾರಾ ಹಿಡಿದು ದೇವಾಲಯದ ಹೊರ ಆವರಣದ ಪ್ರದಕ್ಷಿಣಾ  ಪಥದಲ್ಲಿ ಹೋರಟ  ನನಗೆ ದೇವಾಲಯದ ಗೋಡೆಯ ಮೇಲೆ ಆಕರ್ಷಕ  ಚಿತ್ತಾರಗಳ ದರ್ಶನವಾಯಿತು , ಪುರಾಣ ಕಥೆಗಳ ಸನ್ನಿವೇಶಗಳಿಗೆ ಅನುಗುಣವಾಗಿ ಈ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಮೇಲಿನ ಚಿತ್ರಗಳಲ್ಲಿ ವಿವಿಧ ಕೋನಗಳಿಂದ ನೋಡಿದರೆ ಒಂದೊಂದು ರೀತಿ ಕಾಣುವ ಕೆಲವು ವಿಶೇಷ ಮೂರ್ತಿಗಳು ಗೋಚರಿಸಿದವು. ಹಾಗೆ ಗಮನಕ್ಕೆ ಬಂದ ಮತ್ತೊಂದು ಸಂಗತಿ ಎಂದರೆ  ದೇವಾಲಯದ  ಸುತ್ತಾ ಒಳ ಆವರಣದಲ್ಲಿ  ಸಣ್ಣ ಸಣ್ಣ ಗುಡಿಗಳನ್ನು ನಿರ್ಮಿಸಿ ನಮ್ಮ ದೇಶದ ಪ್ರಸಿದ್ಧ  ದೇವರುಗಳನ್ನು ಪ್ರತಿಷ್ಠಾಪಿಸಿದ್ದಾರೆ , ಇಂದ್ರ, ಸೂರ್ಯ, ಮುಂತಾದ ಆಲಯಗಳು ಇಲ್ಲಿವೆ,  ನನಗೆ ಅಚ್ಚರಿ ತಂದಿದ್ದು ಅರ್ಧ ಭಾಗ ಮಾತ್ರ ಇರುವ ಗಣಪತಿ. ಇದರ ಬಗೆ ಹೆಚ್ಚಿನ ವಿವರ ದೊರೆಯಲಿಲ್ಲ.
ದೇವಾಲಯದ ಒಳಗಿಂದ ಕಾಣುವ ಹೊರಗಿನ ನೋಟ.


  ತೃಪ್ತಿಯಾಗಿ ದೇವಾಲಯ ದರ್ಶನ ಮಾಡಿದ ನಾವುಗಳು  ಹೊರಡಲು ಸಿದ್ಧನಾದೆವು.  ಹರ್ಷನನ್ನು ಕುರಿತು, " ಏನ್ರೀ ಇದು ಬನವಾಸಿಯಲ್ಲಿ ಪಂಪನ ಬಗ್ಗೆ  ಯಾವುದೇ  ಸ್ಮಾರಕ, ಸ್ಥಳ , ಮನೆ, ಮುಂತಾದ ಯಾವುದೂ ಇಲ್ಲವೆನ್ರೀ" ಅಂತಾ ಕೇಳಿದೆ. ಹರ್ಷ "ನನಗೆ ಗೊತ್ತಿಲ್ಲಾ ಸಾರ್  ಯಾರನ್ನಾದರೂ ಕೇಳಬೇಕು" ಎಂಬ ಉತ್ತರ ಹೇಳಿ ಸುಮ್ಮನಾದ.  ಕೋಟೆ ಕೊತ್ತಲಗಳ ಅವಶೇಷ ಏನಾದರೂ ಇದೆಯೇ  ಎಂಬ ಬಗ್ಗೆ  ಮಾಹಿತಿ ಕೆದುಕಲು ಸಾಧ್ಯವಾ ಅಂತಾ ಯೋಚಿಸಿ ಸಿಕ್ಕ ಕೆಲವು ಸ್ಥಳಿಯರನ್ನು  ಪಂಪ, ಮಯೂರ, ಕೋಟೆ,  ಇವುಗಳ ಬಗ್ಗೆ ವಿಚಾರಿಸಿದಾಗ  ಸಿಕ್ಕ ಉತ್ತರ ಅವುಗಳು ಬನವಾಸಿಯಲ್ಲಿ ಇದ್ದವೇ  ?? ಯಾವಾಗ ???ಅಂತಾ ಕೆಲವರು ಅಂದರೆ ,   ಮತ್ತೆ ಕೆಲವರು "ಇಲ್ಲಾ ಸಾರ್ ನಮಗೆ ಗೊತ್ತಿಲ್ಲಾ ' ಎಂದರು . ಈ ಬಗ್ಗೆ  ಸಂಶೋಧಕರ ಉತ್ತರವೂ ಸಹ ಇದೆ ಆಗಿದೆ.  ಹೌದು ಬನವಾಸಿಯಲ್ಲಿ  ಮಯೂರವರ್ಮ , ಪಂಪ  ರ ಬಗ್ಗೆ ಯಾವುದೇ ಕುರುಹು ನಿಮಗೆ ಸಿಗದು, ಹಾಗೂ ಕೋಟೆ ಕೊತ್ತಲ ಇದ್ದ ಬಗ್ಗೆ ಯಾವುದೇ ಕುರುಹು ಇಲ್ಲಾ. ಅದನ್ನು ಹುಡುಕಲು  ಕನ್ನಡಿಗರು ಮುಂದಾಗಬೇಕಿದೆ.ಅಲ್ಲಿಯವರೆಗೂ   ಬನವಾಸಿಯ ಆದಿಕವಿ ಪಂಪ   ಮಕ್ಕಳ ಶಾಲಾ  ಪುಸ್ತಕಗಳಲ್ಲಿ,, ಮಯೂರ  ಚಲನ ಚಿತ್ರಗಳಲ್ಲಿ , ಮಾತ್ರ ಕಾಣಸಿಗುತ್ತಾರೆ. ಇನ್ನು ಕೋಟೆ ಕೊತ್ತಲ ಕನಸಿಗೆ ಮಾತ್ರ ಸೀಮಿತ . ಹೌದು ಇದು ನಿಜಕ್ಕೂ ನೋವಿನ ಸಂಗತಿ. ದೇವಾಲಯದಿಂದ ಹೊರ ಬಂದ ನಾವು ಸ್ವಲ್ಪ ಸಮಯ ಬನವಾಸಿಯ ಊರೊಳಗೆ  ಅಲೆದಾಡಿ  ಸಿರ್ಸಿ ಹಾದಿ ಹಿಡಿದೆವು.ಕನ್ನಡ ಕನ್ನಡ ಎಂದು ಕೊಗಾಡುವ ನಾವು ಇದರಬಗ್ಗೆ ಯೋಚಿಸಬೇಕಾಗಿದೆ.


ಬನವಾಸಿಯಿಂದ  ಸಿರ್ಸಿ ಕಡೆಗೆ ಸಾಗುವ ಹಾದಿ 

ಹಾದಿಯಲ್ಲಿ ಕಂಡ ದೃಶ್ಯ 

 
ಕೋಗಿಲೆ ಯಾಗಿ ಅಲ್ಲದಿದ್ದರೂ ಕಾಗೆಯಾಗಿಯಾದರೂ  ಹುಟ್ಟಿ ಬನವಾಸಿಯನ್ನು ನೆನೆಯೋಣ.


ಸಿರ್ಸಿ ಹಾದಿಯಲ್ಲಿ  ಹಸಿರ ಸಿರಿಯ ನಡುವೆ ಮಲಗಿದ್ದ ರಸ್ತೆಯಲ್ಲಿ ನಮ್ಮ ಹರ್ಷನ ಬೈಕ್ ಸಾಗಿತ್ತು, ನಾನು ಕ್ಯಾಮರಾ ಹಿಡಿದು  ದಾರಿಯಲ್ಲಿ ಏನಾದರೂ ಸಿಗುವುದೇ ಎಂಬ ಆಸೆಯಿಂದ ಫೋಟೋ ಕ್ಲಿಕ್ಕಿಸುತ್ತಾ ಸಾಗಿದೆ  ಅಲ್ಲೇ ರಸ್ತೆಯ ಪಕ್ಕದ ಗದ್ದೆಯಲ್ಲಿ ಹುಡುಗನೊಬ್ಬ ಮೇಯುತ್ತಿದ್ದ  ಹಸುವಿಗೆ ಕಲ್ಲು ಹೊಡೆಯುತ್ತಿದ್ದ. ಹಸುವಿನಂತಾ ಇತಿಹಾಸಕ್ಕೆ  ಕಲ್ಲು ಹೊಡೆಯುವ[ಅ ] ನಾಗರೀಕ ಸಮಾಜ ನಮ್ಮದು ಅಂತಾ ಅನ್ನಿಸಿತು. ಅಲ್ಲೇ ಸನಿಹದಲ್ಲಿ ಮರದ ಮೇಲೆ ಕುಳಿತಿದ್ದ ಕಾಗೆ  ಕಾ ಕಾ ಅಂತಾ ಕೂಗುತ್ತಾ  ಕುಳಿತಿತ್ತು.  ನಮ್ಮ ಬೈಕ್  ಶಿರಸಿಯತ್ತ  ಸಾಗಿತ್ತು  ಆ ಸಮಯದಲ್ಲಿ ಪಡುವಣದಲ್ಲಿ ಸೂರ್ಯಾಸ್ತ  ಆಗುವ ಸಮಯ ಹತ್ತಿರವಾಗುತ್ತಿತ್ತು................!!!!!!