Friday, February 28, 2014

ಹೆಣ್ಣುಮಕ್ಕಳೇ ಇವಳನ್ನು ಕ್ಷಮಿಸಿಬಿಡಿ ...... !! ಅನ್ನುತ್ತಿತ್ತು ಆ ಮನಸು .


ಇದೇನಪ್ಪಾ ಇವನು ಏನು ಹೇಳೋಕೆ ಹೊರಟಿದ್ದಾನೆ ಅಂತಾ ನಿಮಗೆ ಅನ್ನಿಸಿದ್ದರೆ ಅದು ನಿಜವೇ ಅನ್ನಿ. ನಮ್ಮ ಬ್ಲಾಗ್ ಪ್ರಪಂಚದಲ್ಲಿ , ನಮ್ಮ  ಪ್ರತಿನಿತ್ಯದ ಜೀವನದ ಸುತ್ತಾ ಎಷ್ಟೋ ಹೆಣ್ಣುಮಕ್ಕಳನ್ನು ಕಾಣುತ್ತೇವೆ, ಕೆಲವು ಹೆಣ್ಣುಮಕ್ಕಳ ಸಾಧನೆ ಕಂಡು ಬೆರಗಾಗುತ್ತೇವೆ , ಅವರಲ್ಲಿನ ಒಳ್ಳೆಯ ಹವ್ಯಾಸ , ಒಳ್ಳೆಯ ವಿಚಾರ , ವ್ಯವಸ್ತಿತವಾಗಿ ಅವರು ಒಳ್ಳೆಯ  ಕಾರ್ಯನಿರ್ವಹಣೆ ಮಾಡುವ  ರೀತಿಗೆ ಮನಸು  ಶಹಬ್ಬಾಸ್   ಎನ್ನುತ್ತದೆ. ಯಾವುದೇ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ಮನಸು ಕುದಿಯುತ್ತದೆ , ಅದನ್ನು ಖಂಡಿಸಿ  ಬಹಳಷ್ಟು ಜನ  ಮಾತಾಡುವುದನ್ನು  ಕಂಡಿದ್ದೇವೆ , ಬಹಳಷ್ಟು  ಪ್ರಕರಣಗಳಲ್ಲಿ  ಹೆಣ್ಣುಮಕ್ಕಳಿಗೆ ಅನುಕಂಪದ ಅವಕಾಶ ದೊರಕುತ್ತದೆ , ಅದಕ್ಕೆ ಅವರು ಅರ್ಹರೂ ಕೂಡ ಆಗಿರುತ್ತಾರೆ. ಆದರೆ ಅಪವಾದವೆಂಬಂತೆ ಇಲ್ಲೊಂದು ಪ್ರಕರಣವಿದೆ ಈ ನೈಜ ಘಟನೆಯನ್ನು  ಬಹಳ ಹತ್ತಿರದಿಂದ ನೋಡಿದ ನಾನು ಇಲ್ಲಿ ಅದಕ್ಕೆ ಕಥೆಯರೂಪ ನೀಡಿ ನಿಮ್ಮ ಮುಂದಿಟ್ಟಿದ್ದೇನೆ . ಆಧುನಿಕ ಪ್ರಪಂಚದ ಯುವ ಪೀಳಿಗೆಯ ಹೆಣ್ಣುಮಗಳು ಮಾಡಿದ ಎಡವಟ್ಟಿಗೆ  ಒಂದು ಗೌರವಾನ್ವಿತ ಕುಟುಂಬ ನರಳುವ ಹಂತ ತಲುಪಿದ್ದು  ಸುಳ್ಳಲ್ಲ . ಬನ್ನಿ ಕಥೆ ಒಮ್ಮೆ ಒದಿ.


ಸೂರ್ಯ  ಅಂದು ಮಂಕಾಗಿದ್ದ  , ಜೀವನದಲ್ಲಿ ಅವನು ನಿರೀಕ್ಷಿಸದೆ ಇದ್ದ ಘಟನೆ ನಡೆದುಹೋಗಿತ್ತು,  ಯೋಚಿಸಿದಷ್ಟೂ  ನಿಘೂಡ ವಾಗುತ್ತಿದೆ  ವಿಚಾರಗಳು ...... ಯಾಕೆ ಹೀಗಾಯ್ತು ಎನ್ನುವ  ಪ್ರಶ್ನೆಗೆ  ಮನದಲ್ಲಿ ಉತ್ತರ ದೊರಕುತ್ತಿಲ್ಲಾ,   ಕಳೆದ  ಮೂರುವಾರಗಳ ಹಿಂದೆ  ಇದ್ದ ಸಂಭ್ರಮ , ಖುಷಿ,  ಹೊಸದಾಗಿ ಕಟ್ಟುತ್ತಿದ್ದ  ಸುಂದರ ಕನಸುಗಳು ಛಿದ್ರ  ಛಿದ್ರ ವಾಗಿದ್ದವು , ಆಯೋ ದೇವ್ರೇ , ನಾನು ಯಾರಿಗೆ ಮೋಸ  ಮಾಡಿದ್ನಪ್ಪ? ಯಾರ ಭವಿಷ್ಯ ಹಾಳುಮಾಡಿದ್ದೆ ? ದೇವರಂತಹ  ನನ್ನ ತಂದೆ ತಾಯಿ ಯಾರಮನಸನ್ನು ನೋಯಿಸಿದವರಲ್ಲಾ, ಅವರಿಗೆ ಯಾಕೆ ಈ ಶಿಕ್ಷೆ ?  ಅವಳು ಯಾಕೆ  ಈ ಬಗ್ಗೆ ಯೋಚಿಸಲಿಲ್ಲ  ..? ಅಲ್ಲಾ  ವಿಧ್ಯೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ , ಇವಳು ಯಾಕೆ  ಹೀಗೆ  ಅಜ್ಞಾನಿ ಯಂತೆ  ತೀರ್ಮಾನ ತೆಗೆದುಕೊಂಡು  ನನ್ನ ಸಂತೋಷಕ್ಕೆ  ಕಲ್ಲು ಹಾಕಿದಳು ? ಅವಳ ತಂದೆ ತಾಯಿ ಸಹ  ಮಗಳ  ಬಗ್ಗೆ ಮರುಗಿದರೂ  ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲುವಂತೆ ಯಾಕೆ ಮಾಡಿದಳು ? ಹೀಗೆ ಪ್ರಶ್ನೆಗಳ  ಸುನಾಮಿ  ಮನದಲ್ಲಿ ಅಪ್ಪಳಿಸುತ್ತಿತ್ತು , ಆದರೆ  ಆ ಸುನಾಮಿಗೆ ಮನದಲ್ಲಿನ ಸಂತಸ  ನಲುಗಿಹೋಗಿತ್ತು .  ಎದುರುಗಡೆ  ಅವಳ  ನಗುವಿನ ಆ ಫೋಟೋ  ಗಹ ಗಹಿಸುತ್ತಾ ನನ್ನ ಈ ಸ್ಥಿತಿ  ನೋಡಿ ಅಣಕಿಸುತ್ತಿತ್ತು .  .........   ಆ ಘಟನೆ ಸೂರ್ಯನ   ಕಣ್ಮುಂದೆ ಮತ್ತೊಮ್ಮೆ  ಬಿಚ್ಚಿಕೊಳ್ಳತೊಡಗಿತು .

ಅಂದು ಅಪ್ಪಾ  ಬೆಂಗಳೂರಿನ ನನ್ನ ರೂಂ ಗೆ   ಬಂದು  "ಸೂರ್ಯ  ಇಂದು ನಿನ್ನ ಕೆಲಸಕ್ಕೆ ರಜೆ ಹಾಕಪ್ಪಾ , ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಅಂದ್ರು" , ನನ್ನ ಅಪ್ಪನ ಸ್ವಭಾವವೇ ಹಾಗೆ  ತಮ್ಮ ಮನಸಿಗೆ ಯಾವುದಾದರು ವಿಚಾರ ಬಂದ್ರೆ  ಮೊದಲು ಅಮ್ಮನಿಗೆ ತಿಳಿಸಿ ನಂತರ ತಡಮಾಡದೆ  ನನ್ನ ಹತ್ತಿರ  ಹೇಳಿಕೊಳ್ಳುತ್ತಾರೆ . ಅಂದೂ ಸಹ ಹಾಗೆ ಆಯಿತು, ಹೆಚ್ಚಿಗೆ ಕೆಲಸವಿಲ್ಲದ ಕಾರಣ ಕಂಪನಿಗೆ  ಗೆ ರಜೆ ಹಾಕಿ ಅಪ್ಪನ  ಜೊತೆಯಲ್ಲಿ ಇದ್ದೆ, ಮೊದಲು ರೂಂ ಹತ್ತಿರವಿದ್ದ  ದೇವಾಲಯದಲ್ಲಿ ದೇವರ ದರ್ಶನ ಮಾಡಿ , ಅಲ್ಲೇ ಇದ್ದ ಹೋಟೆಲ್ ನಲ್ಲಿ ಬೆಳಗಿನ ಉಪಹಾರ  ಸೇವಿಸುತ್ತಾ  ಬಹಳ ಖುಷಿಯಿಂದಾ  ಮಾತನಾಡಿದರು . ಮಾತಿನ ನಡುವೆ ಸೂರ್ಯ  ನಿನ್ನ ವಯಸ್ಸು ಎಷ್ಟು  ಎಂದರು ?
"ಇದೇನಪ್ಪಾ ನಿಮಗೆ ಗೊತ್ತಲ್ಲಾ  ನನಗೆ ಈಗ ಇಪ್ಪತಾರು ವರ್ಷ ಆಲ್ವಾ ಅಪ್ಪಾ, ಮೊನ್ನೆತಾನೆ ನೀವು ಆಶೀರ್ವಾದ ಮಾಡಿ ಗಿಫ್ಟ್  ಕೊಟ್ರಲ್ಲಾ ...."  ಅಂದೇ ನಾನು
.
"ಹೌದು ಕಣಯ್ಯ  ಹಾಳು  ಮರೆವು  ವಯಸ್ಸು  ಆಯ್ತು ನೋಡು "ಇನ್ನೇನಿಲ್ಲಾ  ನಿನ್ನ ಮದುವೆ ಬಗ್ಗೆ ಯೋಚನೆ ಬಂತು , ಅದಕ್ಕೆ ಕೇಳ್ದೆ , ಏನಪ್ಪಾ  ನೀನು ಯಾರನ್ನಾದರೂ ಇಷ್ಟಾ ಪಟ್ಟಿದ್ದೀಯ ?  ಯಾವುದೇ ಸಂಕೋಚ ಬೇಡ  ಧೈರ್ಯವಾಗಿ ಹೇಳು ...? ಹಾಗೇನಾದ್ರೂ ಇದ್ರೆ ನಾನು ನಿನ್ನಮ್ಮ  ಇಬ್ಬರು ಮುಂದೆ ನಿಂತು  ಸೊಸೆಯನ್ನು ಮನೆ  ತುಂಬಿಸಿ ಕೊಳ್ಳುತ್ತೇವೆ ". ಎಂಬ ಪ್ರಶ್ನೆ ಎಸೆದು ನನ್ನ ಕಡೆ ನೋಡಿದರು ಅಪ್ಪಯ್ಯ .


ನಾನು ಒಮ್ಮೆಲೇ  ಬೆಚ್ಚಿಬಿದ್ದೆ ,   ಹೌದು ನನ್ನ ಅಪ್ಪ ಯಾವಾಗಲೂ ಹಾಗೆ , ಚಿಕ್ಕವಯಸ್ಸಿನಿಂದಲೂ  ಪ್ರತೀಯೊಂದು ವಿಚಾರವನ್ನು  ಯಾವುದೇ ಮುಚ್ಚುಮರೆ ಇಲ್ಲದೆ  ಮಾತನಾಡುತ್ತಿದ್ದರು, ಅಮ್ಮನೂ ಸಹ ಹಾಗೆ ಅಪ್ಪನ  ಜೊತೆಗೆ ಸಾಥ್ ನೀಡುತ್ತಿದ್ದಳು  . ಹಾಗಾಗಿ ನಮ್ಮ ಮನೆಯಲ್ಲಿ ಒಬ್ಬರನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು  ಬದುಕುತ್ತಿದ್ದೆವು, ಅಪ್ಪನ ಪ್ರಶ್ನೆಗೆ ನಗು ಬಂದರೂ  , ಸಾವರಿಸ್ಕೊಂಡು  ಇಲ್ಲಾಪ್ಪಾ  ನನಗೆ ಆ ಬಗ್ಗೆ ಯೋಚನೆ ಮಾಡೋ ಅಷ್ಟು ಪುರುಸೊತ್ತೇ ಇಲ್ಲಾ , ನನ್ನ ಕೆಲಸದ  ಒತ್ತಡ ಹಾಗಿದೆ , ಇನ್ನು ಹುಡುಗಿಯನ್ನು  ಇಷ್ಟಾ ಪಡೋದು ದೂರದ ವಿಚಾರ ಅಷ್ಟೇ , ಅಂದು ನನ್ನೊಂದಿಗೆ ಊರಿಗೆ ಬಂದಿದ್ರಲ್ಲಾ  ಆ ಹೆಣ್ಣುಮಕ್ಕಳು  ನನ್ನ   ತಂಗಿಯರಂತೆ  ಅವರ ಬಗ್ಗೆ ಆ ಭಾವನೆ ಇಲ್ಲಾ , ನನ್ನ ಒಡ ಹುಟ್ಟಿದ ತಂಗಿಯರಂತೆ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ ಅವರೆಲ್ಲಾ , ಅವರಲ್ಲಿ ಎಲ್ಲರಿಗೂ ಮದುವೆ  ನಿಶ್ಚಯವಾಗಿದೆ  , ಇನ್ನೇನು ಹೊಸ ಬಾಳಿಗೆ  ಕಾಲಿಡುತ್ತಾರೆ . ಅಪ್ಪ ನ ಪ್ರಶ್ನೆಗೆ  ಯಾವುದೇ ಹುಡುಗಿ ನನ್ನ ಮನಸಿನಲ್ಲಿ ಇಲ್ಲಾ ಎನ್ನುವ ಉತ್ತರ ನೀಡಿದೆ .


"ಅರೆ ಪರವಾಗಿಲ್ಲಾ ಕಣಯ್ಯ  ಇನ್ನು ಹನುಮಂತನ ಭಕ್ತನಾಗೆ ಉಳಿದಿದ್ದಿ ", "ಇನ್ನು ಮುಂದೆ   ರಾಮನಂತೆ  ಗೃಹಸ್ತಾಶ್ರಮ ಕಡೆ ಪಯಣ ಹೊರಡಲು ಸಿದ್ದನಾಗು"  ,   "ನಿನ್ನ ಮದುವೇ  ವಿಚಾರದಲ್ಲಿ ಹಲವಾರು ಕುಟುಂಬಗಳು  ಆಸಕ್ತಿ ತೋರಿವೆ ನೀನು  ಒಪ್ಪಿದರೆ  ಮುಂದುವರೆಯೋಣ " , ಏನಂತೀಯ ?   ಎಂದರು , ನಾನು ಸಹ ಒಪ್ಪಿಗೆ ರೂಪದಲ್ಲಿ ತಲೆ  ಆಡಿಸಿದೆ . ತಕ್ಷಣವೇ ಅವರ ಸ್ನೇಹಿತನಿಗೆ  ಫೋನ್ ಮಾಡಿ "ನೋಡಯ್ಯ  ಮುಂದಿನ ವಾರ ಎರಡುದಿನ ರಜೆ ಇದೆ ನಿಮ್ಮ ಊರಿಗೆ ಬರುತ್ತೇವೆ ಅಲ್ಲಿಗೆ ಅವರನ್ನೂ ಕರೆಸಿಬಿದು, ಅವರು ನಮ್ಮ ಮನೆಗೆ ಬರೋದೂ ಬೇಡ  , ನಾವು ಅವರಮನೆಗೆ ಹೋಗೋದು ಬೇಡ"  ಅಂದರು .

ಕಟ್ ಮಾಡಿದ್ರೆ  ಅಪ್ಪನ ಗೆಳೆಯರ ಊರು "ಚಂದನಪುರ " ದಲ್ಲಿ   ಹುಡುಗಿಯ  ಕುಟುಂಬದ  ಭೇಟಿಯಾಯಿತು, "ನಿಮ್ಮ ಹುಡುಗನ ಬಗ್ಗೆ ನಿಮ್ಮ ಮನೆತನದ ಬಗ್ಗೆ  ನಿಮ್ಮ ಗೆಳೆಯ ಶೇಖರ್ ಎಲ್ಲಾ ಹೇಳಿದ್ದಾರೆ , ನಿಮ್ಮನ್ನು ಭೇಟಿಮಾಡಿದ್ದು ಖುಷಿ ತಂದಿದೆ ಅಂದ್ರು "  ಹುಡುಗಿಯ  ತಂದೆ   . 

"ಬಹಳ ಸಂತೋಷ ಅಯ್ಯೋ ನಮ್ಮದೇನಿದೆ  ಹುಡುಗ ಹುಡುಗಿ ಒಪ್ಪಿದರೆ  ಮುಂದುವರೆಯಲು  ಅನುಕೂಲ , ಈ ವಿಚಾರದಲ್ಲಿ ನಿಮ್ಮ ಮಗಳನ್ನು ಕೇಳಿದ್ದೀರಾ?" ಅಂದ್ರು ನಮ್ಮಪ್ಪ  

"ಅಯ್ಯೋ ನಮ್ಮ ಹುಡುಗಿ  ಚಿನ್ನದಂತಾ ಹುಡುಗಿ ಸ್ವಾಮೀ ", "ಮನೆಕೆಲಸದಲ್ಲಿ ಜಾಣೇ  ಒಳ್ಳೆ ಅಡಿಗೆ ಎಕ್ಸ್ಪರ್ಟ್"  "ಓದಿನಲ್ಲಿ ಬಹಳ ಜಾಣೆ ,'  'ಓದುವಾಗ ಹಲವಾರು ಚಿನ್ನದ ಮೆಡಲ್ ಗಳಿಸಿದ್ದಾಳೆ ',  'ಇನ್ನು ಕೆಲಸದಲ್ಲೂ ಅಷ್ಟೇ  ಅವಳ ಕೆಲಸ ಮೆಚ್ಚಿ ಹೊರದೇಶಕ್ಕೆ  ಕಳುಹಿಸುತ್ತಲೇ ಇರುತ್ತಾರೆ,'' ಅವಳ ಕಂಪನಿಯವರು . ನಿಮ್ಮ ಮಗನ ಬಗ್ಗೆ ತಿಳಿದು ಕೊಂಡಿದ್ದಾಳೆ , ಫೇಸ್ ಬುಕ್ ನಲ್ಲಿ ನಿಮ್ಮ   ಮಗನ ಬಗ್ಗೆ ಇರುವ ವಿಚಾರಗಳನ್ನು ನಮಗೂ ತೋರಿಸಿದ್ದಾಳೆ , ನಿಮ್ಮ ಮಗನೂ ಸಹ ಕಮ್ಮಿಯಿಲ್ಲಾ  ಬಿಡಿ , ಬಹಳ  ಸಾಧನೆ ಮಾಡಿದ್ದಾರೆ , ಅವಳೂ  ಸಾಫ್ಟ್ ವೇರ್ ಫೀಲ್ಡ್ , ನಿಮ್ಮ ಮಗನೂ ಸಾಫ್ಟ್ ವೇರ್ ಫೀಲ್ದು  ಇಬ್ಬರೂ ಒಳ್ಳೆಯ ಜೋಡಿ ಆಗ್ತಾರೆ  ಬಿಡಿ . ನಮ್ಮ ಮನೆಯವರಿಗೆಲ್ಲಾ  ನಿಮ್ಮ ಮನೆತನ ಹಿಡಿಸಿದೆ , ನಿಮ್ಮ ಮಗನ  ಬಗ್ಗೆ ಬಹಳಒಳ್ಳೆಯ  ಅಭಿಪ್ರಾಯ  ಬಂದಿದೆ  ಈ ಮದುವೆ ಗೆ ನಮ್ಮೆಲ್ಲರ ಒಪ್ಪಿಗೆ ಇದೆ  ಅಂದರು ಹುಡುಗಿಯ ತಂದೆ .

ಹೀಗೆ ಪರಸ್ಪರ ಪರಿಚಯದ  ನಡುವೆ ಕಾಣಿಸಿದಳು ಅವಳು  , ಮೊದಲ ನೋಟದಲ್ಲೇ  ಇಷ್ಟವಾದಳು , ಅಯ್ಯೋ ಇದೇನು ನಾನು ನಾವೇ ಮಾತಾಡಿಕೊಳ್ಳುತ್ತಾ  ಇವರಿಬ್ಬರನ್ನು  ಮರೆತೇ ಬಿಟ್ವಿ ಅಂತಾ  ಹಿರಿಯರು  , ನಾವೇನು ಮಾತನಾಡಿದರೂ  ಮುಂದೆ ಸಂಸಾರ ಮಾಡೋರು  ನೀವು, ಮೊದಲು ನೀವಿಬ್ಬರು  ಮಾತನಾಡಿ  ನಂತರನಿಮ್ಮ ನಿರ್ಧಾರ ತಿಳಿಸಿ ಅಂತಾ  ಮನೆಯಮೇಲಿನ ಮಹಡಿಯ  ಒಂದು  ಕೋಣೆಗೆ   ಕಳುಹಿಸಿದರು .

ನಾನು ಸೂರ್ಯ ಅಂತಾ  ...ಜಿ ಜಿ . ಏಂ. ಎನ್ . ಸಿ . ಕಂಪನಿಯಲ್ಲಿ    ಕೆಲ್ಸಾ ಮಾಡ್ತಿದ್ದೀನಿ,  
ಹ ನಾನು  ರಶ್ಮಿ  ಅಂತಾ   ಬಿ ..ಬಿ . ಏಂ. ಎನ್ . ಸಿ . ಕಂಪನಿಯಲ್ಲಿ    ಕೆಲ್ಸಾ ಮಾಡ್ತಿದ್ದೀನಿ,  ನಿಮ್ಮ ಬಗ್ಗೆ ಎಫ್ . ಬಿ . ನಲ್ಲಿ ನೋಡಿದ್ದೇನೆ , ಬಹಳ ಒಳ್ಳೆ  ಹವ್ಯಾಸ ಇದೆ ನಿಮಗೆ , ನೀವು ತೆಗೆಯುವ ಫೋಟೋಗಳನ್ನು  ಇಷ್ಟಾ ಪಟ್ಟಿದ್ದೇನೆ , ಅಂದ ಹಾಗೆ  ನೀವು ಸ್ಮೋಕ್  ಮಾಡ್ತೀರ ? ಡ್ರಿಂಕ್ಸ್   ತಗೋತೀರ ? ನಾನ್ ವೆಜ್  ತಿನ್ತೀರಾ ?  ಅಂದಳು

"ಅಯ್ಯೋ  ಇಲ್ಲಾ ರಶ್ಮಿ  ಆ ಹವ್ಯಾಸಗಳು ಇಲ್ಲಾ ,"   "ಇದೆಲ್ಲಾ  ಮಾಡದ ನಾನೊಬ್ಬ  ಯೂಸ್ಲೆಸ್ " ಅಂತಾರೆ ನನ್ನ ಕೆಲವು ಗೆಳೆಯರು ಅಂದೇ , ಇಬ್ಬರೂ ನಕ್ಕೆವು. ಬಹಳಷ್ಟು ಮಾತನಾಡಿ  ಪರಸ್ಪರ  ವಿಚಾರ ವಿನಿಮಯ ಮಾಡಿಕೊಂಡೆವು , ಕೊನೆಗೆ ಅವಳೇ  ನಿಮ್ಮನ್ನು ಇಷ್ಟ ಪಟ್ಟಿದ್ದೇನೆ  ಅಂದಳು ಮನಸಿಗೆ ಬಹಳ ಖುಷಿಯಾಯಿತು,  ಇಬ್ಬರೂ  ಮೇಲ್ ಐ.ಡಿ . , ಮೊಬೈಲ್  ನಂಬರ್  ವಿನಿಮಯ  ಮಾಡಿಕೊಂಡೆವು  ಇಬ್ಬರೂ ಕೆಳಗೆ ಬಂದು ಹಿರಿಯರಿಗೆ  ನಮ್ಮಿಬ್ಬರ  ಅಭಿಪ್ರಾಯ ತಿಳಿಸಿದೆವು ,

 ಹಿರಿಯರೆಲ್ಲಾ ಹರುಷ ಪಟ್ಟರು , ಮನೆಯಲ್ಲಿ ಸಂತಸದ ಹೊನಲು ಹರಿಯಿತು, ಮುಂದಿನ ತಿಂಗಳು  ನಿಶ್ಚಿತಾರ್ಥ  ಕಾರ್ಯಕ್ರಮ ಅಂತಾ  ತೀರ್ಮಾನವಾಯಿತು, ಹಾಗಿದ್ರೆ  ಸುವರ್ಣ ಪುರದಲ್ಲಿ  ನಿಶ್ಚಿತಾರ್ಥ  ಕಾರ್ಯಕ್ರಮ ಮಾಡಿ ಬಿಡೋಣ  ಅಂತಾ ಎರಡೂ ಕಡೆಯವರು  ತೀರ್ಮಾನ ಮಾಡಿದರು . ಜೀವನಕ್ಕೆ ಒಂದು ತಿರುವು ಸಿಕ್ಕಿತು ಎಂದು ಖುಶಿಪಟ್ಟೆ , ಅವಳ ಆ ನಗು  ನನ್ನ ಮನಸನ್ನು ಸೂರೆಗೊಂಡಿತ್ತು,  ಕನಸುಗಳಿಗೆ ಬಣ್ಣ  ಹಚ್ಚಿತ್ತು . 


ಹೀಗೆ ಬಹಳ ದಿನಗಳು ಕಳೆದೆವು , ಮೆಸೇಜ್ , ಚಾಟ್, ಹೋಟೆಲ್ ನಲ್ಲಿ ಪರಸ್ಪರ ಭೇಟಿ, ದೇವಾಲಯದಲ್ಲಿ ಪೂಜೆ , ಹೀಗೆ ಸಾಗಿದವು ದಿನಗಳು , ನಾವಿದ್ದ ಊರು "ಕಲ್ಯಾಣ ನಗರ"  ಸ್ವರ್ಗ ವಾಗಿತ್ತು. ನಿಶ್ಚಿತಾರ್ಥದ  ಬಟ್ಟೆ , ಒಡವೆ ತೆಗೆಯುವಾಗ  ಅವಳೂ ಬಂದು ತನಗೆ ಇಷ್ಟವಾದ  ಸೀರೆ , ಒಡವೆ  ಆಯ್ಕೆ ಮಾಡಿಕೊಂಡಳು , [ ಆ ಹುಡುಗಿ  ಎಷ್ಟು ಬೆಲೆಯ ಸೀರೆ , ಒಡವೆಗಳನ್ನು ಬೇಕಾದರೂ  ಆಯ್ಕೆ ಮಾಡಿ ಕೊಳ್ಳಲಿ  ಯಾರೂ ಅಡ್ಡಿ ಪಡಿಸ ಬಾರದೆಂದು ಅಪ್ಪನ ಕಟ್ಟಪ್ಪಣೆ ಆಗಿತ್ತು ] ನನಗೆ ಅವು ಬಹಳ ದುಬಾರಿ ಅನ್ನಿಸಿದರೂ  ಅಪ್ಪನ ಅಪ್ಪಣೆಯಂತೆ ಸುಮ್ಮನಿದ್ದೆ. 

ಸುವರ್ಣ ಪುರ  ದಲ್ಲಿ "ನಿಶ್ಚಿತಾರ್ಥ" ದ ದಿನ ಬಂದೆ ಬಿಟ್ಟಿತು, ಎರಡೂ ಕುಟುಂಬದವರ  ಸಂತೋಷಕ್ಕೆ ಪಾರವೇ ಇರಲಿಲ್ಲ, ಬಹಳಷ್ಟು ಬಂಧು ಮಿತ್ರರು  ಆಗಮಿಸಿ ಶುಭ ಕೋರಿದರು ,  ಫೋಟೋ ಗ್ರಾಫಾರ್  ಗಳಂತೂ  ನಮ್ಮಿಬ್ಬರ  ವಿವಿಧ ಬಂಗಿಯ  ನೂರಾರು ಫೋಟೋ ತೆಗೆದು  ನಮ್ಮಿಬ್ಬರನ್ನು ಹೀರೋ ಹೀರೋಯಿನ್  ಎಂಬಂತೆ  ಆಡಿಸಿದ್ದರು, ಅವಳೂ ಸಹ ಬಹಳ ಖುಷಿಯಿಂದ ನನ್ನೊಡನೆ ಫೋಟೋ ತೆಗೆಸಿಕೊಂಡು  ಸಂಭ್ರಮಿಸಿದ್ದಳು . ಅಂದು ಸಂಜೆಯೇ  ಇಬ್ಬರು   ಅಲ್ಲೇ ಇದ್ದ  ಮಲ್ಟಿ ಪ್ಲೆಕ್ಸ್  ನಲ್ಲಿ  ಸಿನೆಮ ನೋಡಿ ಸಂಭ್ರಮ ಪಟ್ಟೆವು . ಮಾರನೆಯ ದಿನ ಅವಳ ಎಫ಼್. ಬಿ . ನಲ್ಲಿ   ಯಂಗೆಜೆಡ್  ಅಂತಾ  ಸ್ಟೇಟಸ್  ಅಪ್ಡೇಟ್ ಆಗಿತ್ತು,  ಆದರೆ ನನ್ನ  ಎಫ಼್. ಬಿ. . ನಲ್ಲಿ ಸ್ಟೇಟಸ್ ಹಾಕಲು  ಹಿಂಜರಿದೆ .


ಮುಂದಿನ ಒಂದು ವಾರ  ನಮ್ಮಿಬ್ಬರ ನಡುವೆ  ನಿಶ್ಚಿತಾರ್ಥದ  ದಿಂದ ತುಂಟಾಟದ  ಕ್ಷಣಗಳ  ಮೆಲುಕು ಹಾಕುವ  ಕಾರ್ಯ ನಡೆಯಿತು .  ಒಬ್ಬರನ್ನು ಒಬ್ಬರು  ಬಿಟ್ಟಿರಲಾರೆವು  ಎಂಬಂತೆ ಆದೆವು. 


ಅದೊಂದು ದಿನ  ನನಗೆ ಅವಳಿಂದ  ಮೊಬೈಲ್ಗೆ  ಕಾಲ್ ಬಂತು, ಬಹಳ ಅರ್ಜೆಂಟ್ ಆಗಿ  ಅಂದು ಸಂಜೆ  ಕಾಫಿ ಡೆ  ನಲ್ಲಿ ಸಿಗುವಂತೆ  ತಿಳಿಸಿದಳು,  ನಾನೂ ಸಹ  ಅಂದು ಸಂಜೆ ಅಲ್ಲಿಗೆ ಮುಂಚೆ ಹೋಗಿ ಅವಳ ಬರುವಿಗೆ  ಕಾಯುತ್ತಿದ್ದೆ , ದೂರದಲ್ಲಿ ನಡೆದು ಬರುತ್ತಿದ್ದ ಅವಳನ್ನು ನೋಡಿ  ಕನಸುಗಳು  ಅರಳಿದವು .  ಸಾರಿ ಸೂರ್ಯ ನಿಮ್ಮನ್ನು ಕಾಯಿಸಿದ್ದಕ್ಕೆ  ಅಂತಾ  ಬಂದವಳೇ   ಎದರು ಗಡೆ  ಇದ್ದ   ಕುರ್ಚಿಯಲ್ಲಿ  ಕುಳಿತಳು . ಮೌನ , ಮೌನ, ಮೌನ  ಬಹಳ ಹೊತ್ತು  ಮೌನ ,  


ಸೂರ್ಯ ನಿಮ್ಮ  ಹತ್ತಿರ ಒಂದು ಮುಖ್ಯವಾದ  ವಿಚಾರ ತಿಳಿಸಬೇಕಾಗಿತ್ತು,  ಮುಂದಿನ ತಿಂಗಳು  ನಾನು ಯೂ. ಎಸ್. ಗೆ ಹೋಗ್ತಾ ಇದ್ದೀನಿ,  ಈ ಮದುವೆ  ಇನ್ನೆರಡು ವರ್ಷ  ಆಗೋಲ್ಲಾ ,  ನನಗೆ ಕೆರಿಯರ್  ಮುಖ್ಯ  ಅದಕ್ಕೆ ನಮ್ಮ  ಮದುವೆ  ಬೇಡಾ  ಅನ್ನಿಸುತ್ತಿದೆ  , ಸಾರಿ  ಬೇಜಾರು ಮಾಡಿಕೊಳ್ಳಬೇಡಿ ಅಂದಳು, 


ನಾನು ಒಮ್ಮೆಲೇ ಬೆಚ್ಚಿ ಬಿದ್ದೆ,  ತಮಾಷೆ  ಬೇಡ ರಶ್ಮಿ  , ನಾನೂ ಸಹ ಯೂ . ಎಸ್.  ಗೆ ಹೋಗೋ ಪ್ರಾಜೆಕ್ಟ್ ನ ನನ್ನ ಮದುವೇ ಕಾರಣ  ಮುಂದೆ ಹಾಕಿದ್ದೇನೆ , ನೀನೂ ಹಾಗೆ ಮಾಡು ಅಷ್ಟೇ , ಅದಕ್ಯಾಕೆ  ವರಿ   ಮಾಡ್ತೀಯ    ಅಂದೇ,  ಅರೆ ನನ್ನ ಕೆರಿಯರ್ ಪ್ರಶ್ನೆ ಸೂರ್ಯ  ಹಾಗೆಲ್ಲಾ ಮಾಡೋಕೆ ಆಗಲ್ಲ ನಾನು , ಸಧ್ಯಕ್ಕೆ ಎರಡು ವರ್ಷ ಮದುವೇ  ಬೇಡ ಅಷ್ಟೇ  ಎಂದು ನನ್ನ ಪ್ರತಿಕ್ರಿಯೆಗೂ ಕಾಯದೆ  ಹೊರಟೇ  ಹೋದಳು ..... !! ನಾನು  ರಶ್ಮಿ....  ರಶ್ಮಿ ಸ್ವಲ್ಪ ತಾಳು  ಎಂದರೂ  ಮಾತು  ಕೇಳದೆ  ಹೊರಟು ಹೋದಳು,  ಸಂಜೆಯ ಸೂರ್ಯ  ರಶ್ಮಿಯ  ಕಳೆದುಕೊಂಡಿದ್ದ .  ನನಗೋ  ಅವಳ ಬಗ್ಗೆ  ಅಚ್ಚರಿ ನನ್ನದೇನು ತಪ್ಪಿದೆ ಎಂದು ಯೋಚಿಸಿದರೂ ಯಾವ ತಪ್ಪೂ  ಕಾಣಲಿಲ್ಲ, ಅವಳೂ ಹೇಳಲಿಲ್ಲ,  ಮೊಬೈಲ್ ಬೇರೆ ಸ್ವಿಚ್  ಆಫ್ ಆಗಿತ್ತು ಅವಳದು, ನನ್ನ  ಮೇಲ್  ಬಾರದಂತೆ ಬ್ಲಾಕ್ ಮಾಡಿದ್ದಳು,  ಬೇಸರದ ಮುಖ ಹೊತ್ತು, ನನ್ನ ರೂಂ ಗೆ ಬಂದೆ, 

ಅಂದು  ರಾತ್ರಿ  ನಮ್ಮ ಅಪ್ಪ ಅಮ್ಮ,   ಹಾಗು ಅವಳ ಅಪ್ಪಾ , ಅಮ್ಮ ಅವಸರದಲ್ಲಿ  ನನ್ನ ರೂಮಿಗೆ  ಬಂದು  ನಡೆದ ಘಟನೆ ಬಗ್ಗೆ  ಮಾಹಿತಿ ಕೇಳಿದರು , ನಡೆದ ವಿಚಾರ ತಿಳಿಸಿದೆ, ಅವರಿಗೂ ರಶ್ಮಿಯ ಈ ನಿರ್ಧಾರ  ಬೇಸರ ತಂದಿತ್ತು,  ಅವಳ ತಂದೆ ತಾಯಿಯರಿಗೆ ಅವಳ ನಿರ್ಧಾರ  ಆಘಾತ ನೀಡಿತ್ತು, ವಯಸ್ಸಾದ ನಮ್ಮ ಅಪ್ಪನಿಗೆ ಅವರ ಕುಟುಂಬದ ಘನತೆಗೆ  ಬಿದ್ದ ಪೆಟ್ಟು  ನೋವು ತಂದಿತ್ತು, ನಮ್ಮ ಅಮ್ಮನಂತೂ ಹುಚ್ಚಿಯಂತೆ ಅಳುತ್ತಿದ್ದಳು , ಆದರೆ ರಶ್ಮಿ ಯಾರಿಗೂ  ಅರ್ಥವಾಗದಂತಹ  ಒಂದು ನಿರ್ಧಾರ ತೆಗೆದುಕೊಂಡು  ಸೂರ್ಯನಿಂದ  ದೂರವಾಗುತ್ತಿದ್ದಳು, .......  ಅತ್ತಾ ಅಪ್ಪ ಹುಡುಗಿಯ ಮನೆಯವರಿಗೆ  ಬಹಳ ಪ್ರೀತಿಯಿಂದ  ಮಾಡಿಸಿದ್ದೆ ಇವುಗಳನ್ನು  ನನ್ನ ಸೊಸೆ  ಖುಷಿಯಾಗಿರಲಿ ಅಂತಾ , ಆದರೆ ನಮ್ಮ ಸಂತೋಷಕ್ಕೆ ಬೆಂಕಿ ಇಟ್ಟಳು  ಇದನ್ನು ಅವಳಿಗೆ ಕೊಟ್ಟುಬಿಡಿ  , ಈ ಘಟನೆಯ ನೆನಪಿಗೆ  ಅವಳಲ್ಲೇ ಉಳಿಯಲಿ ಇದು   ಎನ್ನುತ್ತಿದ್ದ ಮಾತುಗಳು  ಕೇಳಿ  ಬರುತ್ತಿದ್ದವು.  ನಾನು  ಈ ಜಂಜಾಟ ಗಳಿಂದ ನೊಂದು   ಪಶ್ಚಿಮದ  ಕಡೆ    ರಶ್ಮಿ  ಇಲ್ಲದ  ಸೂರ್ಯನಂತೆ  ನದೆಯುತ್ತಿದ್ದೆ. .......... !!!  ನೊಂದ ಮನಸು  ಓ   ಹೆಣ್ಣುಮಕ್ಕಳೇ  ಇವಳನ್ನು ಕ್ಷಮಿಸಿಬಿಡಿ ...... !!  ಅನ್ನುತ್ತಿತ್ತು ರಶ್ಮಿ ಯಿಲ್ಲದ ಸೂರ್ಯನನ್ನು  ಕಾರ್ಮೋಡಗಳು  ಮುಚ್ಚುತ್ತಿದ್ದವು .
 
ಈ ಕಥೆಯನ್ನು  ಯಾವ ಹೆಣ್ಣುಮಕ್ಕಳನ್ನು ನೋಯಿಸುವ ಉದ್ದೇಶದಿಂದ ಬರೆದಿಲ್ಲ , ಆದರೆ ಒಮ್ಮೊಮ್ಮೆ ಹೀಗೆ ಆದಾಗ  ಗಂಡು ಮಕ್ಕಳಿಗೆ ಆಗುವ ಆಘಾತ ದ ಒಂದು ಚಿತ್ರಣ ನೀಡಿದ್ದೇನೆ . ಇಷ್ಟ ಆದ್ರೆ ನಿಮ್ಮ ಅನಿಸಿಕೆ ಬರಲಿ .

Sunday, February 9, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...10 ಜ್ಞಾನ ದೀಪದ ದರ್ಶನಮಾಡಿ ಬೆಳಕಿನಲ್ಲಿ ಮಿಂದ ಅನುಭವ ಆಯಿತು


ಜ್ಞಾನ ಹಂಚಲು ವಯಸ್ಸಿನ   ಹಂಗು ಇಲ್ಲ

ಚಿಕ್ಕಮಗಳೂರಿನ  ಗಿರಿಗಳ  ದರ್ಶನ ಮಾಡಿ ಮೈಸೂರಿಗೆ ಬರುವ ಹಾದಿಯಲ್ಲಿ   ಹಿರೆಮಗಳೂರಿನಲ್ಲಿ  "ಚಿನ್ಮೈ ಭಟ್" ಅವರನ್ನು ಮನೆ ತಲುಪಿಸುವ ಕಾರ್ಯಕ್ರಮ  ಇತ್ತು ,  ಹಿರೇಮಗಳೂರಿನ ಅವರ ಮನೆಯ ಬಳಿ ತೆರಳುತ್ತಿದ್ದಂತೆ  ಬನ್ನಿ ಸಾರ್ ' "ಕಣ್ಣನ್ ಮಾಮ"  ಅವರನ್ನು ಭೇಟಿ  ಮಾಡೋರಂತೆ , ಅಂದ ತಕ್ಷಣ  ಮನಸು  ಕುಣಿದಾಡಲು ಶುರುಮಾಡಿತು ,    ನನ್ನ ಜೀವನದ ಕನಸು ನನಸಾಗುವ  ಒಂದು  ಸನ್ನಿವೇಶ ಹತ್ತಿರವಾಗಿತ್ತು. 


ಜ್ಞಾನದ  ಅಮೃತ  ಹಂಚುವ ಕಾಯಕ ನನಗೆ ಇಷ್ಟ


ಬಹಳದಿನಗಳ ಅಲ್ಲಲ್ಲಾ ಬಹಳ ವರ್ಷಗಳ ಕನಸು ನನಸಾಗುವ ಕ್ಷಣ ಅದಾಗಿತ್ತು, ಹೌದು ಜ್ಞಾನ ಶಿಖರದ ಸನ್ನಿಧಿಯಲ್ಲಿ ನಾನು, ಗಿರೀಶ್, ಹಾಗು "ಚಿನ್ಮೈ ಭಟ್" ನಿಂತಿದ್ದೆವು, ನಮ್ಮನ್ನು ಪರಿಚಯ ಮಾಡಿಸಿದರು  "ಚಿನ್ಮೈ  ಭಟ್ " . ನಮ್ಮನ್ನು ಕಂಡಕೂಡಲೇ  ನಗು ಮುಖದಿಂದ  ಬರಮಾಡಿಕೊಂಡ  "ಹಿರೇಮಗಳೂರಿನ ಕಣ್ಣನ್ " ಬಹಳ ವರ್ಷಗಳ ಪರಿಚಿತರಂತೆ ನಮ್ಮನ್ನು ಆತ್ಮೀಯವಾಗಿ ಕಂಡರು . ಜ್ಞಾನ ಅಮೃತ ಸಾಗರದಿಂದ  ಅಮೃತ ಹೀರುವ ಸುಯೋಗ ನಮ್ಮದಾಗಿತ್ತು. 


ಅಜ್ಞಾನ ದಿಂದ  ಸುಜ್ಞಾನದ ಹಾದಿಯಲ್ಲಿ  ನಮ್ಮನ್ನು ಕರೆದೊಯ್ದ ನಡೆಸಿದ ಆ ಕ್ಷಣ

ಕಲೆ, ಸಾಹಿತ್ಯ , ಕ್ಯಾಮರ , ಇತಿಹಾಸ , ಪುರಾಣ , ಹಲವಾರು ಮಹನೀಯರ ವಿಚಾರದಲ್ಲಿ ಅವರ ಮಾತುಗಳು ವಸ್ತು ನಿಷ್ಠ ವಾಗಿದ್ದವು , ಎಷ್ಟು ಕೇಳಿದರೂ ಕೇಳಬೇಕೆಂಬ  ಮಾತುಗಳು ಅವು. ಶ್ರೀರಂಗಪಟ್ಟಣದ ಅನುಭವವನ್ನು ಮುಕ್ತವಾಗಿ ಹಂಚಿ ಕೊಂಡರು .  ಸಾಹಿತ್ಯದ ಬಗ್ಗೆ, ಇತಿಹಾಸದ ಬಗ್ಗೆ, ವಿಜ್ಞಾನದ ಬಗ್ಗೆ , ಸಂಸ್ಕೃತಿಯ ಬಗ್ಗೆ, ನೀವು ಯಾವುದೇ ವಿಷಯ ಕೊಡಿ ಅದರಬಗ್ಗೆ  ಅಧಿಕೃತವಾಗಿ ಮಾತನಾಡಬಲ್ಲ ಜ್ಞಾನ ಭಂಡಾರ ನನ್ನೆದುರು ತೆರೆದುಕೊಂಡಿತ್ತು,  ಆ ಜ್ಞಾನ ಭಂಡಾರ ಕಂಡು ವಿಸ್ಮಿತನಾಗಿ ನನ್ನನ್ನೇ ನಾನು ಮರೆತು, ಅವರ ಜ್ಞಾನಕ್ಕೆ ಶರಣಾಗಿದ್ದೆ,. ನಗುವಿನಲ್ಲಿ  ಅಮೃತ ಬೆರತಿತ್ತು

ವಯಸ್ಸಿನ ಬೇದವಿಲ್ಲದೆ , ಅಪರಿಚಿತರೆಂಬ ಭಾವನೆಯಿಲ್ಲದೆ ನಿಷ್ಕಲ್ಮಶವಾಗಿ  ಪ್ರೀತಿಯಿಂದ ಮಾತನಾಡುತ್ತಾ  "ಕಣ್ಣನ್ ಮಾಮ "  ನಮ್ಮ ಹೃದಯದಲ್ಲಿ ನೆಲೆಸಿಬಿಟ್ಟರೂ ,  ಅವರ ನಾಲಿಗೆಯ ಮೇಲೆ ಸರಸ್ವತಿ ನಲಿದಾಡುತ್ತಿದ್ದಳು , ಮಾತುಗಳಲ್ಲಿ ಜೇನಿನ ಸಿಹಿಯಿತ್ತು, ಕಣ್ಣಿನಲ್ಲಿ ವಾತ್ಸಲ್ಯ ವಿತ್ತು, ನಗುವಿನಲ್ಲಿ  ಅಮೃತಬೆರೆತಿತ್ತು , ಅದನ್ನು ಕೇಳುತ್ತಾ  ನಮ್ಮ ಆ ಕ್ಷಣಗಳು ಜೀವನದ ಅಮೂಲ್ಯ ಕ್ಷಣಗಳಾಗಿ   ರೂಪಗೊಂಡು ಅಮರತ್ವ ಹೊಂದಿದವು ..


ಜೀವನ  ಇಷ್ಟೇನೆ

ಸುಮಾರು ಎರಡು ತಾಸು ಅವರ ಸನ್ನಿಧಿಯಲ್ಲಿ ಕಳೆಯುವ ಭಾಗ್ಯ ನಮ್ಮದಾಗಿತ್ತು, ಊರಿಗೆ ಹೋಗುವ ಯೋಚನೆ ಮರತೆಹೊಗಿತ್ತು, ಕನ್ನಡ ನಾಡಿನಲ್ಲಿ ಒಂದು ಜೀವ ಕನ್ನಡ ಭಾಷೆಯ ರಾಯಭಾರಿಯಾಗಿ ಇಷ್ಟೊಂದು ಸಮರ್ಥವಾಗಿ ಹೆಮ್ಮೆಯಿಂದ  ನಮ್ಮೊಡನೆ ಇರುವುದು ನಮ್ಮ ಕನ್ನಡ ತಾಯಿಯ ಪುಣ್ಯ ಎನ್ನುವ ಭಾವನೆ ಮೂಡಿತ್ತು . ಇವರ ಕಾಲದಲ್ಲಿ ನಾವು ಜೇವಿಸಿದ್ದೆವಲ್ಲಾ  ಎನ್ನುವ ಹೆಮ್ಮೆ  ನಮ್ಮದಾಗಿತ್ತು.


ಕನ್ನಡ ಪೂಜಾರಪ್ಪನ ಖಡಕ್ ಮಾತುಗಳು

ತಮ್ಮನ್ನು ಕನ್ನಡ ಪೂಜಾರಯ್ಯ  ಎಂದು ಕರೆದುಕೊಳ್ಳುವ , ಮಾತುಗಳನ್ನು ನೇರವಾಗಿ  ಹೇಳುತ್ತಾ  ಹಿರೇಮಗಳೂರಿನಲ್ಲಿ ನೆಲೆಗೊಂಡು  ಕೋದಂಡ ರಾಮನ ಸೇವೆ ಮಾಡುತ್ತಾ , ಕನ್ನಡ ಡಿಂಡಿಮವ ಅನವರತ ಭಾರಿಸುತ್ತಾ  ಹೆಮ್ಮೆಯ ಕನ್ನಡ ಮಗನಾಗಿ , ಕನ್ನಡ ತಾಯಿಯ ಕಿರೀಟದ ಅನರ್ಘ್ಯ ರತ್ನವಾಗಿ ಪ್ರಕಾಶಿಸುತ್ತಾ  ಇರುವ ಈ ಚೇತನದ ದರ್ಶನ ನಮ್ಮ ಬಾಳಿನ ಪುಣ್ಯ ಎಂದು  ಬೀಗುತ್ತಾ , ಹೊರಡಲು ಅಪ್ಪಣೆ ಬೇಡಿದೆವು,


ಜ್ಞಾನ  ಭಂಡಾರ  

ಓ ಹೌದಲ್ವಾ , ನೀವು ಮೈಸೂರಿಗೆ ಹೋಗಬೇಕು ಎನ್ನುತ್ತಾ  ಪ್ರೀತಿಯಿಂದ  ಒಂದು  ಕನ್ನಡ ಪುಸ್ತಕದ ಕಾಣಿಕೆ ನೀಡಿದರು , ಆ ಪುಸ್ತಕದಲ್ಲಿ  ಹಸ್ತಾಕ್ಷರ ನೀಡಿ ನಮ್ಮನ್ನು ಹರಸಿದರು,  ಆಸೆಯಿಂದ  ಅವರು ಬರೆದಿದ್ದು ಏನು  ಅಂತಾ ನೋಡಿದರೆ  ''ಇತಿಹಾಸ ಪ್ರಿಯನಿಗೆ  ಕನ್ನಡ ಪೂಜಾರಿಯ  ಕಾಣಿಕೆ " ಎಂಬ ವಾಕ್ಯ . ಒಂದು ಕ್ಷಣ  ತಬ್ಬಿಬ್ಬಾದೆ ,  ಇತಿಹಾಸದ ಮಹಾ ಸಾಗರದಲ್ಲಿ ಒಂದು ಚಮಚ ಇತಿಹಾಸ  ಕುಡಿದ ನನ್ನನ್ನು  ಇತಿಹಾಸಕಾರ  ಎಂದು ಕರೆದ ಮಹನೀಯರಿಗೆ  ಹೇಗೆ ಕೃತಜ್ಞತೆ ಅರ್ಪಿಸಬೇಕೆಂದು  ತಿಳಿಯದಾಯಿತು. ಅಷ್ಟರಲ್ಲಿ  ಸವಿನೆನಪಿಗಾಗಿ  "ಕಣ್ಣನ್ ಮಾಮ" ಅವರ ಒಂದಷ್ಟು ಚಿತ್ರಗಳನ್ನು ಕ್ಲಿಕ್ಕಿಸುವ ಸೌಭಾಗ್ಯ ನನ್ನದಾಯಿತು.ಕನ್ನಡ ಹೃದಯದ ಭಾಷೆ  

ಕಾಣುವ ಕನಸು ಕನ್ನಡದ್ದೆ

ಬನ್ನಿ ಕನ್ನಡಿಗರಾಗಿ

ಕಳೆದ ೦೯ ಸಂಚಿಕೆಯಿಂದ  ಈ ಪ್ರವಾಸದ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡ ನಾನು  ಈ ಸಂಚಿಕೆಯಲ್ಲಿ ನಾ ಕಂಡ ಮಹನೀಯರೊಬ್ಬರ ಬಗ್ಗೆ ಈ ಸಂಚಿಕೆಯಲ್ಲಿ ಬರೆಯುವ ಸಂತಸ  ಹೇಳಲು ಅಸಾಧ್ಯವಾಗಿದೆ, ಹಾಸನ ,ಚಿಕ್ಕಮಗಳೂರು ಜಿಲ್ಲೆಯ  ಪ್ರವಾಸದಲ್ಲಿ  ಈ ಅನುಭವ ನನ್ನ ಜೀವಮಾನದ  ಅತ್ಯಂತ ಅಮೂಲ್ಯವಾದದ್ದು , ಹಿರೇಮಗಳೂರು ಕಣ್ಣನ್   ಅವರ ಜ್ಞಾನ ಎಲ್ಲರಿಗೂ ಅನವರತ ಸಿಗಲಿ ಎಂಬ ಹಾರೈಕೆ ಯೊಂದಿಗೆ ನನ್ನ  ಪ್ರವಾಸ ಸರಣಿಯ  ಕೊನೆಯ ಸಂಚಿಕೆ  ಮುಕ್ತಾಯ ಮಾಡುತ್ತೇನೆ , ಈ ಪಯಣದ  ಹಾದಿಯಲ್ಲಿ ಜೊತೆಯಾಗಿ ಬಂದ ನಿಮ್ಮೆಲ್ಲರಿಗೂ  ಪ್ರೀತಿಯ ಶುಭ ಕಾಮನೆಗಳು