Wednesday, April 27, 2016

ಅನಾಥವಾಗಿ ಸಾವಿನ ಕದ ತಟ್ಟಿದ ಸಮಯ.........!!! ನನ್ ಕಥೆ ಭಾಗ ....02

 ಅದೃಷ್ಟ  ಇದ್ದರೆ  ಯಾರೋ ದಿಕ್ಕು ನಮಗೆ , ಇಲ್ಲದಿದ್ರೆ ....?



ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "  ಅನ್ನುತ್ತಾ    ಹಾಗೆ    ಕಣ್ಣು ಮುಚ್ಚಿದೆ .   ಹಾಗಿದ್ರೆ    ವಾಸ್ತವವಾಗಿ  ಅಪಘಾತ ಹೇಗಾಯ್ತು, ನನಗೆ ಜೀವ  ಉಳಿಸಲು  ಹೆಣಗಾಡಿದವರು ಯಾರು ಯಾರು ಅನ್ನೋದು   ತಿಳಿದಿರಲಿಲ್ಲ,   ದೇಹಕ್ಕೆ ಚೈತನ್ಯ  ಬಂದ ಮೇಲೆ ಚನ್ನರಾಯ ಪಟ್ಟಣಕ್ಕೆ   ಹೋಗಿ    ಜಗಧೀಶ್ ಭೇಟಿ ಮಾಡಿ  ಮಾಹಿತಿ ಕಲೆಹಾಕಿ  ನನ್ನ ಅಪಘಾತದ  ಕಥೆ  ಹೇಗಿತ್ತು ಅನ್ನೋದನ್ನು ಅರಿತೆ,  ಬನ್ನಿ   ಅಪಘಾತ ಹೇಗಾಯ್ತು   ತಿಳಿಯೋಣ.


ಆಪತ್ತಿಗಾದ  ಪುಷ್ಪಕ ವಿಮಾನ 


ಚನ್ನರಾಯ ಪಟ್ಟಣದ  ಬಸ್ ನಿಲ್ಧಾಣದ   ಮುಂದೆ   ಹಾದುಹೋಗುವ   ಹಾಸನ  ಬೆಂಗಳೂರು   ರಾಷ್ಟ್ರೀಯ   ಹೆದ್ದಾರಿಯಲ್ಲಿ    ಮಧ್ಯಾಹ್ನ  ಸುಮಾರು ನಾಲ್ಕು ವರೆ  ಸಮಯದಲ್ಲಿ , ಒಬ್ಬ ವ್ಯಕ್ತಿ  ಬಸ್ ನಿಲ್ಧಾಣಕ್ಕೆ ಬರಲು  ರಸ್ತೆ  ದಾಟುತ್ತಿದ್ದಾನೆ,   ರಸ್ತೆಯಲ್ಲಿ   ಹೆಚ್ಚಿನ   ವಾಹನ ಸಂಚಾರ ಇರಲಿಲ್ಲ ,   ರಸ್ತೆ ಮಧ್ಯದಲ್ಲಿ   ಡಿವೈಡರ್   ಸಮೀಪ ಬರುತ್ತಿದ್ದಂತೆ    ಮೂರುಜನ  ಕುಳಿತಿದ್ದ ಯಾವುದೋ ಬೈಕ್ ಅಡ್ಡಾದಿಡ್ಡಿಯಾಗಿ   ರಾಂಗ್ ಸೈಡ್  ನಲ್ಲಿ ಚಲಿಸುತ್ತಾ ಬಂತು  ಹಿಂದಿನಿಂದ  ಗುದ್ದಿ ಸ್ವಲ್ಪ ದೂರ  ಎಳೆದು ಕೊಂಡು ಹೋಗಿದೆ.  ಅಷ್ಟರಲ್ಲಿ  ಜನರ ಗುಂಪು ಸೇರಿದೆ . ಅಲ್ಲೇ ಸ್ವಲ್ಪ ದೂರದಲ್ಲಿದ್ದ  ಮೊಬೈಲ್  ಶಾಪ್ ನಿಂದ   ಬಂದ   ಜಗಧೀಶ್  ಜನರ ಗುಂಪಿನೆಡೆಗೆ ಹೋಗಿ ನೋಡಿದಾಗ     ಯಾರೋ ಒಬ್ಬ  ರಕ್ತ   ಕಾರಿಕೊಂಡು ರಸ್ತೆಯಲ್ಲಿ   ಬಿದ್ದಿರುವುದು ಕಂಡು ಬಂದಿದೆ,   ತಕ್ಷಣವೇ   ಅಂಗಡಿಗೆ ಬಂದು      "ಗುರು ಯಾರೋ ಕುಡಿದು ಬಿದ್ದು    ಅಪಘಾತಕ್ಕೆ  ಒಳಗಾಗಿದ್ದಾನೆ  ವಿಪರೀತ   ರಕ್ತ  ಹೋಗ್ತಾ ಇದೆ   ಬದುಕೋದು ಕಷ್ಟಾ   ಅನ್ಸುತ್ತೆ"  ಅಂತಾ ಹೇಳಿ    ಅವರ ಗೆಳೆಯನಿಂದ  ಐದು ಸಾವಿರ ರುಪಾಯಿ  ಪಡೆದು   ಮತ್ತೆ  ಅಪಘಾತ ನಡೆದ ಸ್ಥಳಕ್ಕೆ  ಬಂದು  ಅಲ್ಲೇ ಸಿಕ್ಕ  ಒಂದು ಸರಕು ಸಾಗಣೆ ಆಪೆ ಆಟೋ  ನಿಲ್ಲಿಸಿ,   ಅಪಘಾತಕ್ಕೆ ಒಳಗಾದ  ವ್ಯಕ್ತಿಯನ್ನು   ಕೆಲವರ ಸಹಾಯದಿಂದ   ವಿಳಂಭ ಮಾಡದೆ   ಆಟೋ ದಲ್ಲಿ ಹಾಕಿ ಕೊಂಡು  ಚನ್ನರಾಯ ಪಟ್ಟಣದ   ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ . ತಕ್ಷಣವೇ ಸ್ಪಂದಿಸಿದ   ವೈಧ್ಯರು   ಪರೀಕ್ಷೆ ಮಾಡಿ   ಸಿ. ಟಿ. ಸ್ಕ್ಯಾನ್   ಮಾಡಿಸಲು   ಹೇಳಿದ್ದಾರೆ,  ಅಲ್ಲೇ ಇದ್ದ  ಸ್ಕಾನಿಂಗ್  ಸೆಂಟರ್ ನಲ್ಲಿ   ಅಪಘಾತದ ವ್ಯಕ್ತಿಯ   ದೇಹವನ್ನು ಸಂಪೂರ್ಣವಾಗಿ   ಸ್ಕ್ಯಾನ್ ಮಾಡಿಸಿ   ಅದರ  ವರಧಿಯ   ಆಧಾರದ ಮೇಲೆ  ಪ್ರಾಥಮಿಕ  ಚಿಕಿತ್ಸೆ ನೀಡಿ ,  ಮುಖದಲ್ಲಿ   ರಕ್ತ   ಸೋರುತ್ತಿದ್ದ  ಜಾಗಗಳಿಗೆ   ಹೊಲಿಗೆ ಹಾಕಿದ್ದಾರೆ .



ಚನ್ನರಾಯ ಪಟ್ಟಣದಿಂದ ಮೈಸೂರಿಗೆ   ನನ್ನನ್ನು ಸಾಗಿಸಿದ ಆಂಬುಲೆನ್ಸ್ 



ಹೊಲಿಗೆ ಹಾಕಿದ ನಂತರ    ಜಗಧೀಶ್    ಹಾಗು ಅವರ ಮತ್ತೊಬ್ಬ ಗೆಳೆಯ   ಅಪಘಾತಕ್ಕೆ ಒಳಗಾದ  ವ್ಯಕ್ತಿ ಅರೆ ಪ್ರಜ್ಞಾವಸ್ಥೆ ಯಲ್ಲಿ ನೀಡಿದ ಮಾಹಿತಿಯಂತೆ   ದೂರವಾಣಿಯಲ್ಲಿ  ಅಪಘಾತಕ್ಕೆ ಒಳಗಾದ   ವ್ಯಕ್ತಿಯ  ಮನೆಯವರು , ಹಾಗು ಗೆಳೆಯರನ್ನು ಸಂಪರ್ಕಿಸಿ  ಮೈಸೂರಿನ   ಕಾಮಾಕ್ಷಿ   ಆಸ್ಪತ್ರೆಗೆ   ಚನ್ನರಾಯ ಪಟ್ಟಣ ದಿಂದ  ಆಂಬುಲೆನ್ಸ್  ನಲ್ಲಿ   ಸಾಗಿಸುತ್ತಾರೆ. ವಾಹನ ಚಲಿಸುವಾಗ  ಅರೆ ಪ್ರಜ್ಞಾವಸ್ತೆಯಲ್ಲಿದ್ದ   ವ್ಯಕ್ತಿ   ಕತ್ತು  ನೋವು ಅಂದ ಕಾರಣ  ಚನ್ನರಾಯ ಪಟ್ಟಣ ದಿಂದ ಮೈಸೂರಿನ ವರೆಗೂ   iodex  ನಿಂದ ಮಸಾಜ್  ಮಾಡುತ್ತಾ  ಮೈಸೂರಿನವರೆಗೆ   ಸಾಗಿಸಿದ್ದಾರೆ,  ಮೈಸೂರಿಗೆ ತಲುಪಿದ ಕೂಡಲೇ  ಕಾಮಾಕ್ಷಿ ಆಸ್ಪತ್ರೆಯಲ್ಲಿ   ಮೊದಲೇ ಕಾಯುತ್ತಿದ್ದ   ಕೆಲವರು ತುರ್ತು  ಚಿಕಿತ್ಸಾ ಘಟಕಕ್ಕೆ  ಆ ವ್ಯಕ್ತಿಯನ್ನು ಸಾಗಿಸುತ್ತಾರೆ.    ರಾತ್ರಿಯೆಲ್ಲಾ ಅಲ್ಲೇ ಕಾದಿದ್ದ  ಜಗಧೀಶ್  ಹಾಗು ಅವರ ಗೆಳೆಯರು    ಬೆಳಿಗ್ಗೆ  ವಾಪಸ್ಸು   ಚನ್ನರಾಯ ಪಟ್ಟಣ   ತಲುಪುತ್ತಾರೆ.


ಪ್ರಾಣ ಉಳಿಸಿದ   ಜಗಧೀಶ್ ಇವರೇ 



ಇದು ಜಗಧೀಶ್   ಹೇಳಿದ  ಅಪಘಾತದ ಕಥೆ , ನಂತರ  ಮೈಸೂರಿಗೆ ಬಂದಾಗ   ಆದ ಕಥೆ ಕೇಳಿ,  ನನಗೆ ಅಪಘಾತ ಆದಾಗ  ಚನ್ನರಾಯ ಪಟ್ಟಣದಿಂದ  ಮೈಸೂರಿಗೆ ಕರೆತರುವ ಮೊದಲು ಅಲ್ಲಿನ ವೈಧ್ಯರು   ನಾನು ಅರೆ ಪ್ರಜ್ಞಾವಸ್ಥೆಯಲ್ಲಿ ನೀಡಿದ ಮೊಬೈಲ್  ನಂಬರ್  ಗೆ ಫೋನ್ ಮಾಡಿ  ನನ್ನ ಗೆಳೆಯ  ಅನಿಲ್ ಹಾಗು ಅವನ ಅಲ್ಲಲ್ಲ   ನನ್ನ  ತಂಗಿ  ಡಾಕ್ಟರ್  ಸ್ನೇಹ ಶ್ರೀ  ಜೊತೆ ಸಮಾಲೋಚಿಸಿ  ಆಂಬುಲೆನ್ಸ್ ನಲ್ಲಿ  ಕಳುಹಿಸಿದ್ದಾರೆ.   ಆಂಬುಲೆನ್ಸ್ ಮೈಸೂರಿಗೆ   ಬರುವಷ್ಟರಲ್ಲಿ   ನನ್ನ ಪ್ರೀತಿಯ  ಈ ತಂಗಿ    ಕಾಮಾಕ್ಷಿ ಆಸ್ಪತ್ರೆಗೆ   ಬಂದು    ನ್ಯೂರೋ ಸರ್ಜನ್ , ಇ. ಎನ್. ಟಿ. ಸ್ಪೆಷಲಿಸ್ಟ್ , ಹಾರ್ಟ್  ಸರ್ಜನ್ , ಮುಂತಾದವರನ್ನು  ದೂರವಾಣಿ ಮೂಲಕ   ಸಂಪರ್ಕಿಸಿ, ರಾತ್ರೋ ರಾತ್ರಿಯೇ ಕರೆಸಿ  ಒಂದು ಕ್ಷಣವೂ   ವ್ಯರ್ಥವಾಗದಂತೆ    ನನಗೆ  ಚಿಕಿತ್ಸೆ  ದೊರಕಲು  ಸಹಕರಿಸಿ,  ರಾತ್ರಿಯೆಲ್ಲಾ   ನನಗೆ ಚಿಕಿತ್ಸೆ ಕೊಡಿಸಲು  ಓಡಾಡಿದ್ದಾಳೆ .

ಡಾಕ್ಟರ್   ಸ್ನೇಹಶ್ರೀ 



ತನ್ನ ಆನಾರೋಗ್ಯವನ್ನೂ   ಲೆಕ್ಕಿಸದೆ   ತಂಗಿಯ ಜೊತೆ ಬಂದಿದ್ದ ಅನಿಲ್ 



ಯಾವ ಜನ್ಮದ  ಋಣಾನುಬಂಧವೋ   ಕಾಣೆ  ಬಹಳಷ್ಟು ಸಹಾಯ ಮಾಡಿ     ಮರಳಿ ಜೀವದಾನ  ಮಾಡಿದರು ಎಲ್ಲರೂ ಸೇರಿ .  ಒಂದೆರಡು ದಿನ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು   ಡಿಸ್ಚಾರ್ಜ್  ನಂತರ ವೈಧ್ಯರ  ಸಲಹೆಯಂತೆ    ವಿಶ್ರಾಂತಿಗಾಗಿ ಮನೆಗೆ ಬಂದೆ ,  ಏಳಲು ಓಡಾಡಲು  ದೇಹದಲ್ಲಿ  ತ್ರಾಣ ವಿಲ್ಲ ,  ಎದ್ದು ನಿಂತರೆ ತಲೆಯೆಲ್ಲಾ   ಚಕ್ಕರ್  ಹೊಡೆಯೋದು ,  ಹಾಸಿಗೆಯೆ ನನ್ನ ಸಾಮ್ರಾಜ್ಯ ಆಯ್ತು.  ಓದಲು  ಆಗುತ್ತಿಲ್ಲ,  ಬರೆಯಲು ಆಗುತ್ತಿಲ್ಲ,   ಕಂಪ್ಯೂಟರ್  ಮುಂದೆ ಕೂರಲು   ಆಗುತ್ತಿಲ್ಲ, ಟಿ.ವಿ. ನೋದುವನ್ತಿಲ್ಲಾ ,   ಇಲ್ಲಾ  ಇಲ್ಲಾ   ಏನೂ     ಮಾಡುವಂತಿಲ್ಲ, ಅಂದ್ರೆ ಒಂತರಾ  ಬದುಕಿದ್ದೂ  ಪ್ರಯೋಜನ ಇಲ್ಲ ವೇನೋ ಅನ್ನಿಸಿತ್ತು,   ಆದರೆ ಮನದಲ್ಲಿ  ನನ್ನನ್ನು  ಉಳಿಸಿದ  ಜಗಧೀಶ್ ಗೆ  ಕೃತಜ್ಞತೆ ತಿಳಿಸಲು   ಆಗುತ್ತಿಲ್ಲಾ   ಎಂಬ ಕೊರಗು ಇತ್ತು,  ಅದೊಂದು ದಿನ    ಕಷ್ಟ ಪಟ್ಟು  ಕುಳಿತು,  ತಲೆ ನೋವಿದ್ದರೂ    ಲೆಕ್ಕಿಸದೆ  ನನ್ನ ಫೇಸ್ಬುಕ್  ಪುಟದಲ್ಲಿ  ಜಗಧೀಶ್ ಮಾಡಿದ  ಉಪಕಾರದ ಬಗ್ಗೆ ಬರೆದು ಕೃತಜ್ಞತೆ ಅರ್ಪಿಸಿದೆ . ಮೊಬೈಲ್ ನಲ್ಲಿ ಕರೆ ಮಾಡಿ  ಮಾತನಾಡಿ   ದೇಹಕ್ಕೆ ಚೈತನ್ಯ ಬಂದಮೇಲೆ ಬಂದು ಭೇಟಿ ಮಾಡುವುದಾಗಿ   ಹೇಳಿದೆ. ಆದರೂ  ಈ ಜಗಧೀಶ್ ಗೆ ನನ್ನನ್ನು  ಉಳಿಸಬೇಕೂ  ಅಂತಾ   ಯಾಕೆ ಅನ್ನಿಸಿತು ..?  ಎಂಬ ಪ್ರಶ್ನೆ    ಕಾಡುತ್ತಿತ್ತು.


ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?









22 comments:

ಸುಬ್ರಮಣ್ಯ said...

ಹ್ರುದಯಸ್ಪರ್ಷಿ ಬರಹ. ನೂರ್ಕಾಲ ಬಾಳಿ

ಸುಬ್ರಮಣ್ಯ said...

"ತೇಲಿದ ಅನುಭವ" "ಯಾವುದೋ ಲೋಕದೆಡೆ ಹಾರುತ್ತಿರುವಂತೆ ಭಾಸವಾಗುತ್ತಿತ್ತು" = ಸಾವಿನ ಸಮೀಪದ ಅನುಭವ. ಕಾರಣ ತುಂಬಾ ನೋವಾದಾಗ ದೇಹದಲ್ಲಿ ಬಿಡುಗಡೆಯಾಗುವ ಅಂತರ್ಜನ್ಯ ಅಫೀಮುಗಳು. ಇವೇ ಆತ್ಮ, ಪುನರ್ಜನ್ಮ ನಂಬಿಕೆಗಳಿಗೆ ಕಾರಣವಲ್ಲವೆ?

bharathi said...

ಅಣ್ಣ ಓದಿ ಗಾಭರಿಯಾಯ್ತು ..

bharathi said...

ಅಣ್ಣ ಓದಿ ಗಾಭರಿಯಾಯ್ತು ..

UMESH VASHIST H K. said...

ಜಗದೀಶ್ ಅವರಿಗೆ ನೂರು ನಮಸ್ಕಾರಗಳು...ನನ್ನ ಗೆಳೆಯರಿಗೆ ದೇವರ ಹಾಗೆ ಬಂದು ತುರ್ತು ಚಿಕಿತ್ಸೆ ಕೊಡಿಸಿ ಕಾಪಾಡಿದ್ದಕ್ಕೆ... ದೇವರು ದೊಡ್ಡವನು..ನಿಮ್ಮನ್ನು ಕಾಪಾಡಿದ ಬಾಲುಜಿ...

balasubramanya said...

ಅನಿಸಿಕೆ ಹಂಚಿಕೊಂಡ , ಸುಬ್ರಮಣ್ಯ ಮಾಚಿಕೊಪ್ಪ, ಭಾರತಿ, ಉಮೇಶ್ ವಸಿಷ್ಟ ಅವರಿಗೆ ಕೃತಜ್ಞತೆಗಳು. ಸುಬ್ರಮಣ್ಯ ಮಾಚಿಕೊಪ್ಪ ನೀವು ಒಬ್ಬ ವೈಧ್ಯರು ದೇಹದಲ್ಲಿ ಬಿಡುಗಡೆಯಾಗುವ ಅಂತರ್ಜನ್ಯ ಅಫೀಮುಗಳು ಎಂಬ ವಿಚಾರ ತಿಳಿಸಿದ್ದೀರಿ , ದಯಮಾಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವೇ ..? ದೇಹಕ್ಕೆ ನೋವಾದಾಗ ಅಂತರ್ಜನ್ಯ ಅಫೀಮುಗಳು ಹೇಗೆ ಬಿಡುಗಡೆ ಆಗುತ್ತವೆ..? ಆಗ ಆಗುವ ಅನುಭವಗಳೇನು ಎಂಬ ಬಗ್ಗೆ ತಿಳಿಸಿಕೊಡಿ ದಯವಿಟ್ಟು.

Sneha said...

ಮನ ಮುಟ್ಟುವ ಬರಹ
ಜಗದೀಶ್ ಅಂತವರ ಸಂತತಿ ಹೆಚ್ಚಲಿ...

ಎಲ್ಲೋ ಹೋಗಿ ಅಪರಚಿತ ಸ್ಥಳದಲ್ಲಿ ನನಗೋ ನಮ್ಮವರಿಗೋ ಹೀಗೆ ಆದರೆ ಒಂದು ಕ್ಷಣ.ಮನ ವಿಚಲಿತವಾಯಿತು...
ಆದರೆ ಕೊಲ್ಲೋನಿಗಿಂತ ಕಾಯೋನು ಬಹಳ ದೊಡ್ಡೋನು..
ನೂರ್ ಕಾಲ ಬಾಳಿ

Sneha said...

ಮನ ಮುಟ್ಟುವ ಬರಹ
ಜಗದೀಶ್ ಅಂತವರ ಸಂತತಿ ಹೆಚ್ಚಲಿ...

ಎಲ್ಲೋ ಹೋಗಿ ಅಪರಚಿತ ಸ್ಥಳದಲ್ಲಿ ನನಗೋ ನಮ್ಮವರಿಗೋ ಹೀಗೆ ಆದರೆ ಒಂದು ಕ್ಷಣ.ಮನ ವಿಚಲಿತವಾಯಿತು...
ಆದರೆ ಕೊಲ್ಲೋನಿಗಿಂತ ಕಾಯೋನು ಬಹಳ ದೊಡ್ಡೋನು..
ನೂರ್ ಕಾಲ ಬಾಳಿ

Nandhini. N said...

ಹೃದಯ ಮಿಡಿಯಿತು ಬಾಲಣ್ಣ .. ಪೋಟೋ ಸಮೇತ ಕೃತಜ್ಞತೆ ಅರ್ಪಿಸಿದ್ದೀರಾ. ಸಂದರ್ಭ ಸಹಿತ ವಿವರಣೆ ನಡೆದು ಹೋದ ಘಟನೆ ಬೆನ್ನತ್ತಿ ಹೊರಟ ಡೆಡಿಕೇಷನ್, ನನಗೆ ನನ್ನ ಪೇವರೆಟ್ ರೈಟರ್ ಗಣೇಶಯ್ಯ ಅವರನ್ನು ನೆನಪಿಸಿತು...

Manjunatha Kollegala said...

ಇದು ಬೇರೆ ಯಾರದೋ ಕತೆಯಿರಬೇಕೆಂಬಷ್ಟು ನಿಸ್ಪೃಹತೆಯಿಂದ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ್ದೀರಿ. ಆದರೆ ಇದು ನಮ್ಮವರದೇ ಕತೆಯೆಂದು ಬಲ್ಲ ನಮಗೆ ಬೇರೆ ಯಾರದ್ದೋ ಕತೆಯೆಂಬಂತೆ ಓದಿ ’ಮೆಚ್ಚುವ’ ನಿಸ್ಪೃಹತೆ ಬರುವುದು ಕಷ್ಟ.

ಹುಟ್ಟು ಸಾವುಗಳು ಆಕಸ್ಮಿಕವೆನ್ನುತ್ತಾರೆ, ಬದುಕಿ ಉಳಿಯುವುದೂ ಎಷ್ಟು ಆಕಸ್ಮಿಕವೋ! ಆಪತ್ತಿಗೆ ಅದೆಷ್ಟು ಬಂಧುಗಳೋ! ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಸಧ್ಯ, ಬದುಕಿಬಂದಿರಲ್ಲ, ಚೇತರಿಸಿಕೊಂಡು ಮತ್ತೆ ಮೊದಲಿನಂತೆಯೇ ಆದಿರಲ್ಲ...

Sitaram Kemmannu said...

Very touching... God is there for good people. We must thank Jagadish. People think if accident happened then they feel the person was drunk or driver was drunk. This is irony of life . Jagadish helped even suspecting you are drunk that is his humanity concern in real.

Badarinath Palavalli said...

ಜಗದೀಶರ ರೂಪದಲ್ಲಿ ಬಿಳಿಗಿರಿ ರಂಗನಾಥನೇ ಸ್ವತಃ ಬಂದು ತಮ್ಮನ್ನು ಕಾಪಾಡಿದ್ದಾನೆ ಬಾಲಣ್ಣ.

ಅಪಘಾತವಾದಾಗ ಪರಿಸ್ಥಿತಿ ಲೆಕ್ಕಿಸದೆ, ಅಂಜದೆ ಹೀಗೆ ಉಪಕಾರ ಮಾಡುವ ಇಂತಹ ಸಹೃದಯಿಗಳಿಂದಲೇ ಈಗಲೂ ಮಾನವೀಯತೆಗೆ ನಿಜವಾದ ಅರ್ಥ ಉಳಿದುಕೊಂಡಿರುವುದು.

ನಾವೆಲ್ಲ ಒಮ್ಮೆ ಜಗದೀಶರನ್ನು ಭೇಟಿಯಾಗಲೇಬೇಕು ಸಾರ್.

kavinagaraj said...

ಅಬ್ಬಾ! ಅನಿಸಿತು. ಪುನರ್ಜನ್ಮ ಪಡೆದಿರುವಿರಿ. ಅಭಿನಂದನೆಗಳು! ನೀವು ಸಾಧಿಸುವುದು ಇನ್ನೂ ಇದೆ ಎಂಬುದು ಖಾತ್ರಿಯಾಗಿದೆ. ಶುಭವಾಗಲಿ.

Unknown said...

MARU JANMA SIKKIDE BALANNA NIMAGE. AA DEVARU OLLEDU MADLI. ACCIDENT AAGI ODDADTHA BIDDIDRU MANAVEEYATHENE ILLADA HAAGE NADKOLORU KELAVARU, AA ODDATAVANNA VIDEO MADKONDU GR8 ANNISIKOLLORU KELAVARU IRUVA EE PRAPANCHADALLI JAGADISH ANTHAVARU TUMBA APAROOPA. SADHYA NEEVU MATTE NORMAL AADRALLA ISHTU BEGA YAVUDO POORVA JANMADA PUNYANE ANNA. DEVARU NIMMANNA NOORUKALA CHENNAGITTIRLI, AA JAGADISH AVARIGE IRUVA MANAVEEYATHE BERE ELLARALLU JAGRUTHAVAGALI. GOD BLESS YOU ANNA. WISH YOU GUD LUCK.

Sitaram Kemmannu said...
This comment has been removed by the author.
Sitaram Kemmannu said...

Very touching... God is there for good people. We must thank Jagadish. People think if accident happened then they feel the person was drunk or driver was drunk. This is irony of life . Jagadish helped even suspecting you are drunk that is his humanity concern in real.

ದಿನಕರ ಮೊಗೇರ said...

Nivu maadida olleya kelasa nimmannu kaadide... God is great

balasubramanya said...

ಪ್ರೀತಿಯ ಮಾತನಾಡಿದ ಸಹೋದರಿಯರಾದ ಸ್ನೇಹ, ನಂದಿನಿ, ಸ್ವರ್ಣ ಸ್ಫೂರ್ತಿ , ಪ್ರೀತಿಯ ಗೆಳೆಯರಾದ ಮಂಜುನಾಥ ಕೊಳ್ಳೇಗಾಲ ಸರ್, ಸೀತಾರಾಂ ಕೆಮ್ಮಣ್ಣು, ಬದರಿನಾಥ್ ಪಲವಳ್ಳಿ, ದಿನಕರ್ ಮೊಗೆರ ಹಿರಿಯರಾದ ಕವಿ ನಾಗರಾಜ್ ರವರು , ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಪೂರ್ವಕ ಮಾತುಗಳಿಗೆ ನನ್ನ ಗೌರವ ಪೂರ್ವಕ ನಮನಗಳು .

Archana Upadhyaya said...

Anna avattu e kathe nimma baayalli kelidagalu kannali neeru bantu....ivattu Ee kathe odidagalu Ade reeti aytu.....jagadish avre nimagondu dodda thanks.....hatsoff....

balasubramanya said...

ನಿಜ ಅರ್ಚನ ನಮ್ಮ ಮನೆಗೆ ಬಂದಾಗ ನಿನ್ನ ಕಣ್ಣಲ್ಲಿ ನೀರು ಬಂದದ್ದು ಅಮ್ಮ ಗಮನಿಸಿದ್ದಾರೆ, ನೀನು ನಮ್ಮ ಮನೆಯವರ ಬಗ್ಗೆ ಇಟ್ಟಿರುವ ಈ ನಿಷ್ಕಲ್ಮಶ ಪ್ರೀತಿಗೆ ಮನಸು ಕರಗಿದೆ . ಈ ಅಣ್ಣನ ಬಗ್ಗೆ ನಿನ್ನ ಪ್ರೀತಿಗೆ ಶರಣು , ನಿನಗೆ ಶುಭವಾಗಲಿ ಅರ್ಚನ

Banavasi Somashekhar.ಬನವಾಸಿ ಮಾತು said...

Oh my God! ನಿಜಕ್ಕೂ ನೀವು ಅಪಘಾತಕ್ಕೆ ಈಡಾಗಿರುವುದನ್ನು ಕೇಳಿ ದುಃಖಿತನಾದೆ.ನಿಮ್ಮ ಪ್ರಾಣ ರಕ್ಷಿಸಿದ ಆ ಮಹನೀಯರಿಗೆ ಅನಂತ ನಮನಗಳು.

Unknown said...

ಎಲ್ಲಾ ದೈವಪ್ರೇರಣೆಯೇನೋ ಅನ್ಸುತ್ತೆ...ಎಲ್ಲರಿಗೂ ಸಕಾಲಿಕ ಚಿಕಿತ್ಸೆ ದೊರೆಯೋದು ಕಷ್ಟ.. ನೂರ್ಕಾಲ ಚೆನ್ನಾಗಿರಿ.. ಜಗದೀಶ್ ಅವ್ರೇ ನಿಮ್ಮಂಥ ಕಷ್ಟಕ್ಕೆ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವವರ ಸಂತತಿ ಸಾವಿರವಾಗಲಿ.. ನೀವೊಂದು ಬೆಳಕು ಎಲ್ಲಾ ಶುಭವಾಗಲಿ ನಿಮಗೆ ನಿಮ್ಮ ಕುಟುಂಬಕ್ಕೆ 🙏🙏🙏🍫🍧🍬☕