Sunday, November 25, 2012

ಮಳವಳ್ಳಿ ಯ ಕುನ್ನೀರ್ ಕಟ್ಟೆ ಋಷಿ ಜುಟ್ಟಿನ ಪುರಾಣ !!!!
ನಮಸ್ಕಾರ ಬನ್ನಿ ನಿಮಗೆ ನನ್ನ ಬಾಲ್ಯದಲ್ಲಿ ಕಂಡ ಒಂದು ಸತ್ಯ ಘಟನೆಯನ್ನು ಹೇಳುತ್ತೇನೆ. ಬಹುಷಃ ಇಂತಹ ಘಟನೆಗಳು ನಿಮ್ಮ ಊರಿನ ಆಸುಪಾಸಿನಲ್ಲೂ  ನಡೆದಿರ ಬಹುದು. ಓದೋಕೆ ಮಜಾ ಇದೆ ಬನ್ನಿ .ನಾನೂ ಬಾಲ್ಯ ಕಳೆದದ್ದು ಮಳವಳ್ಳಿ ತಾಲೂಕಿನ ಹತ್ತಿರವಿದ್ದ ಒಂದು ಹಳ್ಳಿ ,ಆಗಿನ್ನೂ ಹಳ್ಳಿ ಶಾಲೆಯಲ್ಲಿ ಮೂರು ಅಥವಾ ನಾಲ್ಕನೆ  ತರಗತಿಯಲ್ಲಿದ್ದೆ  ಅನ್ನಿಸುತ್ತೆ. ನಮ್ಮ ಹಳ್ಳಿ ಆ ಕಡೆ ಪೂರ್ತಿ ಹಳ್ಳಿಯೂ ಅಲ್ಲದ ಅಥವಾ ಪೂರ್ತಿ ಪಟ್ಟಣವೂ ಅಲ್ಲದ ಎಡಬಿಡಂಗಿ ಸ್ಥಿತಿಯಲ್ಲಿತ್ತು.ಮಳವಳ್ಳಿಯಲ್ಲಿ ಏನೇ ಘಟನೆ ಆದರೂ ಬಹುಷಃ ಮೊದಲು ತಲುಪುತ್ತಿದುದೆ  ನಮ್ಮ ಹಳ್ಳಿಗೆ. ಹೀಗಿರಲು ಒಂದು ದಿನ ಒಂದು ವಿಚಾರ ಈ ಹಳ್ಳಿಗೆ ತೇಲಿಬಂತು.  ಅರಳಿ ಕಟ್ಟೆಯಲ್ಲಿ ಎಲೆ ಅಡಿಕೆ ಹಾಕುತ್ತಾ ಕುಳಿತ ಮುದುಕರು, ಹಳ್ಳಿಯ ಹೋಟೆಲ್ ಗಳಲ್ಲಿ  ಬೀಡಿ ಸೇದುತ್ತಾ  ಟೀ , ಕಾಫಿ, ಹೀರುತ್ತಾ  ದಿನ ಕಳೆಯುತ್ತಿದ್ದ  ಮಹನೀಯರು, ಶಾಲೆಯಲ್ಲಿ ಪಾಠ ಮಾಡಲು ಬರುವ ಮೇಷ್ಟ್ರು, ಒಂದು ಕೈಯಲ್ಲಿ ಜಾರುತ್ತಿದ್ದ ಚಡ್ಡಿ ಹಿಡಿದು,ಮತ್ತೊಂದು ಕೈಲಿ ಕಲ್ಲಿನ  ಸ್ಲೇಟು ಮತ್ತು ಸೀಮೆ ಸುಣ್ಣಾ ಹಿಡಿದು, ನಗುತ್ತಾ  ಗೊಣ್ಣೆ ಸುರಿಸುತ್ತಾ  ಬರುತ್ತಿದ್ದ ಮಕ್ಕಳಿಗೂ  , ಹಾಗೆ ಹಳ್ಳಿಯಲ್ಲಿದ್ದ ಪುಟ್ಲಾಯರಿಗಳಿಗೂ ಎಲ್ಲರಿಗೂ  ಮಳವಳ್ಳಿ ಗೆ  ಹೋಗಿ  ದರ್ಶನ ಮಾಡುವ ಕಾತರ. ಹೀಗಿರುವಾಗ  "ಊರಿಗೆ ಬಂದವಳು  ನೀರಿಗೆ ಬರಲಾರಳೆ"  ಎನ್ನುವ ಹಾಗೆ ನಮ್ಮ ಮನೆಗೂ ಈ ವಿಚಾರ ತೇಲಿಬಂತು. ಒಂದು ದಿನ ಮನೆಗೆ ಬಂದ ನನ್ನ ತಂದೆ '' ಮಳವಳ್ಳಿ ಯಲ್ಲಿ ಜನವೋ ಜನ  ಕಣೆ ," " ಅಲ್ಲಿ "ಕುನ್ನೀರ ಕಟ್ಟೆ " ದಡದಲ್ಲಿ  ಯಾರೋ ಋಷಿಗಳ  ಜಟೆ  ಮೂಡಿದೆಯಂತೆ "   " ಅದನ್ನು ದರ್ಶನ ಮಾಡಲೂ  ಬಹಳ ದೂರದಿಂದ ಜನಗಳ ದಂಡೆ ಬರುತ್ತಿದ್ದಾರೆ ,"   " ನಾವೂ ಒಮ್ಮೆ ಹೋಗಿ ನೋಡೋಣ "   , "ಆ ಮರಯ್ಯನಿಗೆ ಎತ್ತಿನ ಗಾಡಿ ತರಲು ಹೇಳಬೇಕೂ"  ಅಂತಾ ಹೇಳಿ  ಮುಂದಿನ ವಾರ ಹೋಗೋಣ ಅಂತಾ ತೀರ್ಮಾನ ಮಾಡಿದರು. ನನಗೂ  ಮಳವಳ್ಳಿ ಗೆ  ಹೋಗುವ ಅವಕಾಶ  ಸಿಕ್ಕಿತಲ್ಲಾ ಅನ್ನೋ ಖುಷಿ ಜೊತೆಗೆ  ಅಲ್ಲಿ  ಹೋಟೆಲಿನಲ್ಲಿ ಅಪ್ಪಾ ಕೊಡಿಸುವ  ಜಾಮೂನು , ಮಸಾಲೆ ದೋಸೆ  ತಿನ್ನುವ ಕನಸು ಮೂಡಿತ್ತು .........!

ಬನ್ನಿ ನಿಮಗೆ "ಕುನ್ನೀರ್ ಕಟ್ಟೆ"  ಬಗ್ಗೆ ತಿಳಿಸುವೆ. ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿ  ಈಗಿನ ಸರ್ಕಾರಿ ಬಸ್ ನಿಲ್ದಾಣದ ಬಳಿ  "ಕುನ್ನೀರ್ ಕಟ್ಟೆ"  ಎಂಬ ಕೊಳ ಇತ್ತು , ಇದನ್ನು ಐತಿಹಾಸಿಕವಾಗಿ ಅಲ್ಲಿನ ಜನ ಬಹಳ ಗೌರವಿಸುತ್ತಿದ್ದರು.ಮತ್ತೊಂದು ವಿಚಾರ ವೆಂದರೆ  ಶ್ರೀ ರಂಗ ಪಟ್ಟಣ ದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ  ಟಿಪ್ಪೂ ಸುಲ್ತಾನ ತಾನು ಕುಡಿಯುವ ನೀರನ್ನು ಪ್ರತಿ ನಿತ್ಯವೂ  ಈ "ಕುನ್ನೀರ್ ಕಟ್ಟೆ  " ಯಿಂದ   ಶ್ರೀ ರಂಗ ಪಟ್ಟಣಕ್ಕೆ  ತರಿಸುತ್ತಿದ್ದ  ಎಂಬ  ಮಾತೂ ಸಹ  ಇಲ್ಲಿ ಪ್ರಚಲಿತವಾಗಿತ್ತು, ಅದು ಇಂದಿಗೂ ಇದೆ. ಈ "ಕುನ್ನೀರ್ ಕಟ್ಟೆ" ಬಳಿ ಒಂದು ಅರಳಿ ಕಟ್ಟೆ  ಇತ್ತು  ಅಲ್ಲಿ ಅರಳಿಮರದ ಕೆಳಗೆ  ಯಾರೋ ಮಹಾ ಮಹಿಮಾ ಮುನಿಗಳ  ಜಟೆ ಮೂಡಿದೆ  ಎಂಬ ವಿಚಾರ ಎಲ್ಲೆಡೆ ಹಬ್ಬಿತ್ತು, ಪುಣ್ಯ  ಆಗ ಈಗಿನಂತೆ  ಮೀಡಿಯಾ ಹಾವಳಿ ಇರಲಿಲ್ಲ. ಒಂದು ವೇಳೆ  ಇದ್ದಿದ್ದರೆ ........?????ನೀವೇ ತೀರ್ಮಾನಿಸಿ.  ಆದರೆ ಆ "ಕುನ್ನೀರ್ ಕಟ್ಟೆ"  ಇಂದು ಹೇಳ ಹೆಸರಿಲ್ಲದಂತೆ  ಮಾಯವಾಗಿ ಹೋಗಿದೆ ಬಿಡಿ .


ಹಾಗೂ ಹೀಗೂ ನಾವು ಅಲ್ಲಿಗೆ ಹೊರಡುವ ದಿನಗಳು  ಹತ್ತಿರ ಬರುತ್ತಿತ್ತು.  ಅಲ್ಲಿ "ದರ್ಶನ ಮಾಡಿದ  ಯಾರೋ ಭಿಕ್ಷುಕನಿಗೆ  ಲಾಟರಿ  ಹೊಡೆದು ಲಕ್ಷಾಧೀಶ್ವರ  ಆದನಂತೆ"  "ಇಪ್ಪತ್ತು ವರ್ಷಗಳಿಂದ  ಮಕ್ಕಳಾಗದ ಕೊಳ್ಳೆಗಾಲದ  ಶೆಟ್ಟರ ಸಂಸಾರದವರು ಇಲ್ಲಿಗೆ ಬಂದು ಹೋದ ಮೇಲೆ   ಮಕ್ಕಳಾಗುವ    ಸೂಚನೆ  ಕಂಡು ಬಂತಂತೆ" ,  ಇಂತಹ ಹಲವು  ವಿಚಾರಗಳು ಊರಿಗೆ ದಿನಕ್ಕೆ ಒಂದರಂತೆ  ಬರುತ್ತಿದ್ದವು. ಹೊರಡುವ ದಿನ ಬಂದೆ ಬಿಟ್ಟಿತು,  ನಾವುಗಳೂ  ಸಹ ಎತ್ತಿನ ಗಾಡಿಯಲ್ಲಿ  ಈ ವಿಸ್ಮಯ ನೋಡಲು ಹೊರಟೆವು.


 ಅಲ್ಲಿಗೆ ಹೋದ ನನಗೆ ಕಂಡಿದ್ದು  ಋಷಿಗಳ ಜಟೆಯ ದರ್ಶನ ಮಾಡಲು  ಮೈಲುದ್ದದ  ಕ್ಯೂ ಇತ್ತು. ಆದರೆ ನಮ್ಮ ಅಪ್ಪನಿಗೆ ಪರಿಚಯದ   ಜನರಿದ್ದ ಕಾರಣ   ಸ್ಪೆಷಲ್ ದರ್ಶನ  ಪ್ರಾಪ್ತಿಯಾಯಿತು. ಹತ್ತಿರ ಹೋದ ನಮಗೆ ಕಂಡಿದ್ದು    ಬಹಳ ದೊಡ್ಡ  ಗೋಲಕ,  ಅರಳಿಕಟ್ಟೆಯ ಸನಿಹ  ಅರಿಸಿನ, ಕುಂಕುಮ , ದೂಪ, ಗಂಧದ ಕಡ್ಡಿ,  ಹೂ, ಇವುಗಳ ಮಾರಾಟ ಜೋರಿತ್ತು. ಅಲ್ಲಿ ಉದ್ಭವಿಸಿದ್ದ  ಋಷಿಯ ಜಟೆ  ಜೊತೆಯಲ್ಲೇ  ಉದ್ಭವಿಸಿದ್ದ ಪೂಜಾರಿ  ಭರ್ಜರಿ ಪೂಜೆ  ಮಾಡಿದ್ದರು, ದರ್ಶನ ಪಡೆದ  ನಾವೂ ಹೊರಗೆ ಬಂದ್ವಿ  ಆದರೆ ನಮ್ಮ ಅಪ್ಪ ಅಮ್ಮನಿಗೆ  ಯಾಕೋ ಈ ಬಗ್ಗೆ ಅನುಮಾನ .................!!!! ನನಗೋ ಏನೂ ಗೊತ್ತಾಗದೆ  ಹೋಟೆಲ್ ನಲ್ಲಿ ತಿಂಡಿ ತಿನ್ನುವ   ಕಾತರ.  ಹೋಟೆಲ್ ನಲ್ಲಿ ಜಾಮೂನು , ಮಸಾಲೆ ದೋಸೆ ತಿಂದು   ಊರಿಗೆ ಅಪ್ಪ ಅಮ್ಮನ ಜೊತೆ  ಹಳ್ಳಿಗೆ ವಾಪಸ್ಸು ಬಂದೆ . ದಾರಿಯಲ್ಲಿ ಅಪ್ಪಾ  ಹೇಳುತ್ತಿದ್ದರು ...." ಲೇ ಯಾಕೋ ಅನುಮಾನ  ಕಣೆ  ಅಲ್ಲಿನ  ವಾತಾವರಣ ನೋಡಿದರೆ  ಅಲ್ಲಿರುವ  ಋಷಿ ಜಟೆ  ಬಗ್ಗೆ  ಅನುಮಾನ ಕಾಡ್ತಾ ಇದೆ " ಅಂದರು ಆದರೆ ಗಾಡಿ ಹೊಡೆಯುತ್ತಿದ್ದ   ಮರಯ್ಯ  ತನ್ನ ಅಸಮಧಾನ ವ್ಯಕ್ತ ಪಡಿಸುತ್ತಾ " ಸ್ವಾಮೀ  ದಯವಿಟ್ಟು ತಪ್ಪಾಯ್ತು ಅನ್ನಿ ಎಲ್ಲಾರ  ಉಂಟಾ  ಅದು "ರುಸಿಗಳ ಜುಟ್ಟೆ" ಬುದ್ದಿ ," ಅಂದಾ.

ಹಾಗೂ ಹೀಗೂ  ಸ್ವಲ್ಪ ದಿನ ನಡೆದಿತ್ತು.  ಒಂದು ದಿನ  ಒಂದು ಸುದ್ದಿ ಬಂತೂ,  "ಕುನ್ನೀರ್ ಕಟ್ಟೆ"  ಹತ್ತಿರ ಮೂಡಿದ್ದ   "ಋಷಿಗಳ ಜಟೆ  "   ಸುಳ್ಳಂತೆ  ಯಾರೋ ಕೆಲವು ಪುಂಡರು  ಜನರನ್ನು  ವಂಚಿಸಿ ದುಡ್ಡು  ಮಾಡಲು  "ಕುದುರೆ ಬಾಲದ  ಜುಟ್ಟನ್ನು"  ಅರಳಿ ಮರದ ಕೆಳಗೆ  ನೆಟ್ಟು  ಅದಕ್ಕೆ  ಋಷಿಗಳ  ಜಟೆ  ಅಂತಾ ಹೆಸರು ಕರೆದು , ಅದಕ್ಕೆ ಕಥೆ ಕಟ್ಟಿ  ಜನಗಳ ಧಾರ್ಮಿಕ ಭಾವನೆಯ ಜೊತೆ ಆಟಾ  ಆಡಿದ್ದರೆಂದೂ .  ಮಾತುಗಳು ಕೇಳಿಬಂದವು. ಹೌದು ಅಂದು ಯಾರೋ ಕೆಲವು ಮಂದಿ ಬುದ್ದಿವಂತರು  ಸತ್ತ ಕುದುರೆಯ ಬಾಲದ ಜುಟ್ಟನ್ನು  ಅರಳಿ ಮರದ ಕೆಳಗೆ ನೆಟ್ಟು , ದೊಡ್ಡದಾದ ಗೋಲಕ ಇಟ್ಟು ,  ಅದಕ್ಕೊಂದು ಸಾರವಜನಿಕರನ್ನು  ಎಮಾರಿಸಿದ್ದರು.ಕಥೆ ಕಟ್ಟಿ ಅದಕ್ಕೆ ಪೂರಕವಾಗಿ  ಅಂದು ನಮ್ಮ ಸಮಾಜವೂ ಸಹ ಅಂದು ನಿಜ ತಿಳಿಯದೆ  ಮೋಸ ಹೋಗಿತ್ತು, ಆದರೆ ದುಡ್ಡು ಮಾಡಿ ಕೊಂಡ  ಹಲವರು ನಕ್ಕರೆ,  ಮಾರಾಟಗಾರರು  ಇದು ಇನ್ನೂ ಸ್ವಲ್ಪ ದಿನ ಹೀಗೆ ಇದ್ದಿದ್ದರೆ  ಚಂದಾ ಇತ್ತು ಅನ್ನುತ್ತಿದ್ದರು.  .................... ಇವತ್ತಿಗೂ  ಕುದುರೆ  ಬಾಲದ ಜುಟ್ಟು ನೋಡಿದರೆ  ಮಳವಳ್ಳಿಯಲ್ಲಿ ನಡೆದ ಈ   ಘಟನೆ ನೆನಪಿಗೆ ಬರುತ್ತದೆ.  ...........ಹೀಗೆ ನಿಮ್ಮ ಊರಿನಲ್ಲೂ ಯಾವುದಾದರು ಇಂತಹ  ಘಟನೆ ಆಗಿರ ಬಹುದಲ್ವಾ...??9 comments:

Srikanth Manjunath said...

ಏನ್ ಸರ್?..ನೀವು ಯಾವ ವಿಷಯಕ್ಕೆ ಲಗ್ಗೆ ಇಟ್ಟರೂ ಅಲ್ಲಿ ನಗೆ ಬುಗ್ಗೆ ಖಚಿತ....ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಅಣ್ಣಾವ್ರು ಹೇಳ್ತಾರೆ.."ನೋಡ್ರೋ..ನಮ್ಮ ಅಣ್ಣ ತನ್ನ ಬೆವರು ಬಸಿದಿರುವ ಭೂಮಿ ಕಣ್ರೋ..ಅದಕ್ಕೆ ಇಲ್ಲಿ ಏನೇ ಬೆಳೆದರು ಸಿಹಿಯಾಗಿರುತ್ತೆ.." ಹಾಗೆಯೇ ಕಟ್ಟೆ ಪುರಾಣ, ಜುಟ್ಟು ಪುರಾಣ, ಹಾಲಿನ ಪುರಾಣ..ಏನೇ ಆದರು ನಗೆ ಮಾಲೆ ಇದ್ದೆ ಇರುತ್ತದೆ...ಮನುಜ ಇರುವಾಗ ಮೋಸ, ವಂಚನೆ ಇವೆಲ್ಲ ಇದ್ದದ್ದೇ.ಇದು ಸಾರ್ವತ್ರಿಕ ಸತ್ಯ...ಜನ ಮರುಳೋ ಜಾತ್ರೆ ಮರುಳೋ ಅನ್ನುವ ಹಾಗೆ...ಸುಂದರ ಕಥಾನಕ.ಆ ಬಾಲ್ಯದ ಅನುಭವ ಎಷ್ಟೇ ಕಾಸು ಕೊಟ್ಟರು ಮತ್ತೆ ಬರದು...ಸುಂದರವಾಗಿದೆ

Badarinath Palavalli said...

ಅದುಬುತ ಸಾರ್, ಜಡೆ ಕಥನ ಪೊಗದಸ್ತಾಗಿತ್ತು.

ಜನ ಮರುಳೋ ಜಾತ್ರೆ ಮರುಳೋ ಅಲ್ವರಾ?

ಅಂದಿನ ಹಳ್ಳಿ ಮತ್ತು ಮಳವಳ್ಳಿ ಚಿತ್ರಣ ಕಣ್ಣಿಗೆ ಕಟ್ಟಿದಂತೆ ಮೂಡಿ ಬಂದಿದೆ. ಸರಳ ನಿರೂಪಣೆ ನಿಮ್ಮ ಶಕ್ತಿ.

ನಮ್ಮ ಹಳ್ಳಿಯಲ್ಲೂ ನಾನು ಹುಟ್ಟೋಕ್ಕಿಂತ ಮುಂಚೆ, ಅವನ್ಯಾರೋ ಬುದ್ಧಿವಂತ ಹುತ್ತದೊಳಗೆ ಚನ್ನ ಕೇಶವ ಸ್ವಾಮಿ ವಿಗ್ರಹ ಸಿಕ್ತು ಅಂತ ಕಾಸು ಮಾಡಿಕೊಂಡನಂತೆ!

ಜಲನಯನ said...

ಬದರಿ...ಜಾತ್ರೆ ಮರುಳೋ..ಅಲ್ಲ... ಜಡೆ ಮರುಳೋ..ಹಹಹ, ನಮ್ಮಲ್ಲಿ ಒಮ್ಮೆ ದಿಗಂಬರ ಸ್ವಾಮಿಜಿ ಬಂದಿದ್ರು..ಆದರೆ ಜನ ಮರುಳಾಗಲಿಲ್ಲ... ಸತ್ತೆನೋ ಕೆಟ್ಟೆನೋ ಅಂತ ಓಡಿದ್ದ...ಬಾಲು ಚನ್ನಾಗಿದೆ ಪ್ರಕರಣ.

umesh desai said...

ಇಟ್ ಹ್ಯಾಪನ್ಸ್ ಓನ್ಲೀ ಇನ್ ಇಂಡಿಯಾ....

ಮನಸು said...

ಮೋಸ ಹೋಗುವ ಜನರು ಇರುವವರೆಗೂ ಯಾಮಾರಿಸುವವರು ಇದ್ದೇ ಇರುತ್ತಾರೆ ಅಲ್ಲವೇ ಸರ್.. ಚೆನ್ನಾಗಿದೆ. ಸಕ್ಕತ್ ಬಿಸ್ ನೆಸ್ ಮಾಡಿಕೊಂಡಿದಾರೆ ಹಹಹಹ ಹೆಂಗೋ ಆ ನೆಪದಲ್ಲಿ ಮಳವಳ್ಳಿ ಹೋಗಿ ಮಸಾಲೆದೋಸೆ ಜಾಮೂನು ಸಿಕ್ಕಿತು. ಹಹಹ... ಇಂತಹ ಹಲವು ಘಟನೆಗಳು ಎಲ್ಲಾ ಕಡೆ ನಡೆಯುತ್ತಲೇ ಇರುತ್ತವೆ.

ಚಿನ್ಮಯ ಭಟ್ said...

ಹಾ ಹಾ...ಬಾಲು ಸರ್..
ಚೆನಾಗಿದೆ...
ನಿಜಕ್ಕೂ ಈಗಿನ ಮಾಧ್ಯಮಗಳೆನಾದರೂ ಇದ್ದಿದ್ದರೆ ದೊಡ್ಡ ಕಥೆಯೇ ಆಗುತ್ತಿತ್ತು..
ಚೆನಾಗಿತ್ತು..ಬರೆಯುತ್ತಿರಿ...ನಗಿಸುತ್ತಿರಿ ....

bilimugilu said...

ha ha.... good one Balu Sir...
eegalu inthavanna nambtaare janaru.
nambovrirovargu mosa maadovru idde irtaare.
roopa

Nagalakshmi Shashikumar said...

ಮುಗ್ಧತೆಯನ್ನೇ ಮಾನದಂಡವಾಗಿಸಿ ಜೀವನ ನಡೆಸುವವರು ಇಂದಿಗೂ ಕಡಿಮೆಯೇನಿಲ್ಲ. ಸೊಗಸಾದ ಬರಹ

Harini Narayan said...

ನಂಬುವವರು ಇರುವವರೆಗೆ ನಂಬಿಸುವವರೂ ಇರುತ್ತಾರೆ :) ಒಳ್ಳೇ ಜುಟ್ಟಿನ ಕಥೆ . ತಿಥಿ ಮನೆಯಲ್ಲಿ ಬೆಕ್ಕು ಕಟ್ಬೇಕು ಅನ್ನೋ ಹಾಗೆ :)