Tuesday, December 31, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...7 ಬನ್ನಿ ಹಿರೆಮಗಳೂರಿಗೆ ಜ್ಞಾನ ತಾಣದ ಸನ್ನಿಧಿಗೆ

ಬೆಳವಾಡಿಯ ಶ್ರೀ  ವೀರ ನಾರಾಯಣ ಸ್ವಾಮಿ

ಕಳೆದ ಸಂಚಿಕೆಯಲ್ಲಿ ಬೆಳವಾಡಿ ದರ್ಶನ ಮಾಡಿದ  ನಂತರ ಈ ಸಂಚಿಕೆಯಲ್ಲಿ   ಮುಂದೆ ತೆರಳೋಣ  ಬನ್ನಿ,   ಬೆಳವಾಡಿ ದೇಗುಲದ ಸುಂದರ ನೆನಪನ್ನು ಹೊತ್ತು  ಮುಂದೆ ಹೊರಟಿತು , ನಮ್ಮ ತಂಡ . ಬೆಳವಾಡಿಯ  ಸುಂದರ  ಶ್ರೀ  ವೀರ ನಾರಾಯಣ ಸ್ವಾಮಿ  ಮೂರ್ತಿ ಮನದಲ್ಲಿ  ತುಂಬಿಹೋಗಿತ್ತು ..... ! ನಮ್ಮ ತಂಡ  ಹಿರೇಮಗಳೂರಿನ  ಕಡೆಗೆ  ಹೊರಟಿತು .....  ಅಲ್ಲಿ ಕನ್ನಡ ಪೂಜಾರಿ  ಶ್ರೀ ಹಿರೇಮಗಳೂರು  ಕಣ್ಣನ್  ಅವರ  ದರ್ಶನಕ್ಕಾಗಿ  ಮನ  ಹಾತೊರೆಯುತ್ತಿತ್ತು. ....... !!!


ಯಾರ ಕಲ್ಪನೆಯ  ಚಿತ್ರ ಇದು

ನಿಸರ್ಗ ಚಿತ್ತಾರ


ಬೆಳವಾಡಿ ಇಂದ   ಹಿರೇಮಗಳೂರಿಗೆ   ತೆರಳುವ ಹಾದಿಯಲ್ಲಿ    ಬೆಳವಾಡಿಯ ಕೆರೆಯ ದಂಡೆಯ ಮೇಲೆ ಕಾರು ತೆರಳುತ್ತಿತ್ತು, ಬೆಳವಾಡಿಯ  ಕೆರೆಯಲ್ಲಿ ಕಾಣ ಸಿಕ್ಕ ದೃಶ್ಯಗಳು  ಮನಸೆಳೆದವು , ಅಲ್ಲಿನ ಕೆರೆಯಲ್ಲಿ ಆಹಾರಕ್ಕಾಗಿ ನೆಲೆಸಿದ್ದ  ಪಕ್ಷಿಗಳು  , ಅಲ್ಲಿದ್ದ  ಗಿಡಗಳು ಸೃಷ್ಟಿಸಿದ್ದ  ಚಿತ್ತಾರ , ರೇಖಾಗಣಿತದ  ಹಲವು  ಕೋನಗಳ  ದರ್ಶನ  ಮಾಡಿಸಿತ್ತು . ಶಿಲ್ಪ ಲೋಕದಿಂದ  ನಿಸರ್ಗ ಲೋಕದೊಳಗೆ  ವಿಹರಿಸಿದ ಮನ ಹಸಿರಾಯಿತು .  ದಾರಿಯಲ್ಲಿ   "ಕಳಸಾಪುರ " ಗ್ರಾಮ ಸಿಕ್ಕಿತು,  ಅ ಊರಿನ  ಸಣ್ಣ ಪರಿಚಯ ಗಿರೀಶ್ ಮಾಡಿ ಕೊಟ್ಟರು,  ಈ ಊರಿನಲ್ಲಿ  "ಬಂಗಾರದ ಮನುಷ್ಯ" "ಭೂತಯ್ಯನ ಮಗ ಅಯ್ಯು "  ಚಲನ  ಚಿತ್ರಗಳ  ಚಿತ್ರೀಕರಣ ಆಗಿತ್ತೆಂದು ತಿಳಿದು ಬಂತು ,ಹಾಗು  ಕಳಸಾ ಪುರದ  ಹುಡುಗರು ಚಿತ್ರದ  ಚಿತ್ರ ಕಥೆ  ಬರೆದವರು ಈ ಊರಿನ್ವ್ರೆಂದು ತಿಳಿದು ಬಂತು [ ಮಾಹಿತಿ ನೀಡಿದ  ಶ್ರೀಕಾಂತ್ ಮಂಜುನಾಥ್ ರವರಿಗೆ ಧನ್ಯವಾದಗಳು ] ಹೌದು ಈ ಊರಿನ ಪರಿಸರ  ಚಿತ್ರೀಕರಣಕ್ಕೆ ಒಳ್ಳೆಯ ತಾಣವಾಗಿದೆ .  ಅದೂ ಇದು ಮಾತನಾಡುತ್ತಾ  ಹಿರೆಮಗಳೂರಿಗೆ ಬಂದೆ ಬಿಟ್ವಿ .

ಇಲ್ಲಿ ಶ್ರೀ ರಾಮನಿಗೆ ಪರಶುರಾಮ ಶರಣಾಗಿದ್ದಾನೆಸಾರ್ ಹಿರೇಮಗಳೂರು ಬಂತು ಅಂದರು  ಗಿರೀಶ್ , ಹಿರೆಮಗಳೂರಿಗೆ ಬರಬೇಕೆಂಬ ಬಹಳ ವರ್ಷಗಳ ಆಸೆ ಇಂದು ಕೈಗೂಡಿತ್ತು,  ಹಿರೇಮಗಳೂರು ಚಿಕ್ಕಮಗಳೂರು ಪಟ್ಟಣದ   ಒಂದು ಭಾಗವಾಗಿದೆ, ಈ ಊರಿಗೆ ಚಿಕ್ಕಮಗಳೂರಿನ ಇತಿಹಾಸವೇ ಅನ್ವಯವಾಗುತ್ತದೆ , ಮೊದಲು ಈ ಊರು ಕಡೂರು ಜಿಲ್ಲೆಗೆ ಸೇರಿತ್ತು, ೧೮೬೫ ರಲ್ಲಿ   ಕಡೂರು ಜಿಲ್ಲಾ ಕೇಂದ್ರವನ್ನು ಚಿಕ್ಕಮಗಳೂರಿಗೆ ಸ್ಥಳಾಂತರಿಸಲಾಯಿತು ."ಪರಶುರಾಮ" ಇಲ್ಲಿ ವಾಸವಿದ್ದ ಕಾರಣ "ಭಾರ್ಗವ ಪುರಿ"ಎಂದು ಕರೆಯಲಾಗುತ್ತಿತ್ತೆಂದು ಹೇಳುತ್ತಾರೆ, ದಂತ ಕಥೆ ಗಳು ಹೇಳುವ ರೀತಿ ಚಿಕ್ಕಮಗಳೂರು ಹಾಗು ಹಿರೇಮಗಳೂರು  ಪರಿಸರದಲ್ಲಿ  ಒಂಭತ್ತು ಸಿದ್ದರು ನೆಲೆಸಿ ತಪಸ್ಸು  ಮಾಡಿದ್ದರೆಂದೂ  ಸಹ ಹೇಳುತ್ತಾರೆ .

ಕಾಳಿಂಗ ಮರ್ಧನ , ನಾರಸಿಂಹ , ಮಹಾಲಕ್ಷ್ಮಿ  ದೇವಾಲಯ


ಹಿರೇಮಗಳೂರು  ಹಾಗು ಚಿಕ್ಕ ಮಗಳೂರು  ಎಂಬ ಹೆಸರು ಬರಲು ಇರುವ ಕಾರಣ ಹುಡುಕಿದರೆ ನಿಮಗೆ ಒಂದು ಕಥೆ ಇಲ್ಲಿ ತಿಳಿದುಬರುತ್ತದೆ .ಚಿಕ್ಕಮಗಳೂರು ಮೊದಲು ಹೊಯ್ಸಳ  ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು.ಮೊದಲು ಈ ಊರು ಕಿರಿಯ ಮುಗಳಿ ಎಂಬ ಅಗ್ರಹಾರ ಹಾಗು ಇದರ ಪಕ್ಕದಲ್ಲಿ ಮತ್ತೊಂದು ಪಿರಿಯ ಮುಗಳಿ ಎಂಬ ಅಗ್ರಹಾರ ವಿತ್ತು  ಎರಡೂ ಅಗ್ರಹಾರವನ್ನು ಮದುವೆಯ  ಉಡುಗೊರೆಯಾಗಿ ಮಕ್ಕಳಿಗೆ ನೀಡಲಾಯಿತೆಂದು ಹೇಳುತ್ತಾರೆ.ಹೆಚ್ಚಿಗೆ ವಿಚಾರ ತಿಳಿದುಬರುವುದಿಲ್ಲ .ನಂತರ ಕಿರಿಯ ಮುಗಳಿ  ಚಿಕ್ಕ ಮುಗಳಿ ಯಾಗಿ,ಪೆರಿಯ  ಮುಗಳಿ ಹಿರೆ ಮುಗಳಿ ಯಾಗಿ ಕರೆಯಲಾಗಿದೆ.ಕಾಲಾನಂತರ ಇಂದು ಚಿಕ್ಕ ಮುಗಳಿ ಚಿಕ್ಕಮಗಳೂರು, ಹಿರೆ ಮುಗಳಿ ಹಿರೇಮಗಳೂರು ಎಂದೂ ಚಾಲ್ತಿಗೆ ಬಂದು ಇಂದು ಎರಡೂ ಊರುಗಳು ಸೇರಿ ಜಿಲ್ಲಾ ಕೇಂದ್ರವಾಗಿದೆ.

ಹಿರೇಮಗಳೂರಿನ ಶ್ರೀ  ಕೋದಂಡ ರಾಮ[ ಚಿತ್ರ ಕೃಪೆ ವಿಕಿ ಪಿಡಿಯ ]ಹಿರೇಮಗಳೂರಿನ  ಶ್ರೀ  ಕೋದಂಡ ರಾಮನ ದರುಶನ ಮಾಡೋಣ ಬನ್ನಿ  ಈ ದೇವಾಲಯ ಮೂರು ಹಂತಗಳಲ್ಲಿ ರಚಿತವಾಗಿದ್ದು, ಹೊಯ್ಸಳ ಹಾಗು ದ್ರಾವಿಡ  ಶೈಲಿಯ  ರಚನೆಗಳನ್ನು ಗಮನಿಸ ಬಹುದು , ಮೂಲ ದೇವಾಲಯದಲ್ಲಿ ಶ್ರೀ ರಾಮನ ಬಲಭಾಗದಲ್ಲಿ ಸೀತೆ, ಎಡಭಾಗದಲ್ಲಿ ಲಕ್ಷ್ಮಣ ವಿಗ್ರಹ ಗಳ ರಚನೆ ಇದೆ , ಪರಶುರಾಮರ  ಕೋರಿಕೆಯಂತೆ ಶ್ರೀ ರಾಮನು ಬಲಭಾಗದಲ್ಲಿ, ಸೀತೆ  ಹಾಗು ಎಡಭಾಗದಲ್ಲಿ ಲಕ್ಷ್ಮಣ  ಇರುವಂತೆ ದರ್ಶನ ನೀಡಿದ್ದಾಗಿ , ತಿಳಿದು ಬರುತ್ತದೆ,  ಸ್ಥಳ  ಮಹಿಮೆ ತಿಳಿದು ಬಂದಿದ್ದು ಹೀಗೆ, .

ಸನ್ಮಾನ್ಯ ಹಿರೇಮಗಳೂರು ಕಣ್ಣನ್ ಅವರು ನಡೆಸಿದ್ದ ಪೂಜಾ ನೋಟ


ಶ್ರೀ ಸತ್ಯನಾರಾಯಣ  ಸ್ವಾಮಿಗೆ  ಬೆಳಗಿದ  ಮಂಗಳಾರತಿ  ಸಾಲು

ನಾವುಗಳು ದೇವಾಲಯ ಆವರಣ ಪ್ರವೇಶ ಮಾಡಿದಾಗ  ಸನ್ಮಾನ್ಯ ಹಿರೇಮಗಳೂರು ಕಣ್ಣನ್ ರವರು  ಭಕ್ತರ ಜೊತೆಯಲ್ಲಿ ಶ್ರೀ ಸತ್ಯನಾರಾಯಣ  ವ್ರತವನ್ನು  ಆಚರಿಸುತ್ತಿದ್ದರು, ಕನ್ನಡ ಪದಗಳ   ಅರ್ಚನೆ  ನೋಡಲು  ಸುಂದರ ಹಾಗೂ  ಕೇಳಲು  ಸುಶ್ರಾವ್ಯ ವಾಗಿತ್ತು. ಕನ್ನಡದಲ್ಲಿ ಪೂಜೆ ಮಾಡುವ ವಿಧಾನ ನೋಡುವ ಸೌಭಾಗ್ಯ ನಮ್ಮದಾಗಿತ್ತು,  ಅವರು ಹೇಳುವ  ಪ್ರತಿ ಪದಗಳೂ ನಾವೇ ದೇವರಿಗೆ ಹೇಳುತ್ತಾ ಪ್ರಾರ್ಥನೆ ಸಲ್ಲಿಸಿದಂತೆ ಭಾಸವಾಗುತ್ತಿತ್ತು . ಬೇರೆಲ್ಲೂ ಸಿಗದ ಅಪೂರ್ವ ಅನುಭವ ನಮ್ಮದಾಗಿತ್ತು,  ಕನ್ನಡ ಜಯ ಘೋಶದೊಡನೆ  ಮಂಗಳಾರತಿ ಬೆಳಗಿದ್ದು   ವಿಶೇಷವಾಗಿತ್ತು ಅರ್ಥವಾಗುವ ಭಾಷೆಯಲ್ಲಿ  ಪೂಜಿಸಿದರೆ ಸಿಗುವ ಅನುಭವ ವರ್ಣಿಸಲು ಅಸಾಧ್ಯ ಅಂತೂ ಹೌದು, ಅಪರೂಪದ  ಘಟನೆ ನಮ್ಮೆದುರು ಅನಾವರಣವಾಗಿ ಮನಸು  ಪ್ರಸನ್ನವಾಯಿತು.ಮಂಗಳಾರತಿ ಹಾಗು ಪ್ರಾರ್ಥನೆ  ಹೀಗಿದ್ದರೆ ಚೆನ್ನಕನ್ನಡದಲ್ಲಿ ಪೂಜೆ ಮಾಡೋಣ ಬನ್ನಿನಮಸ್ಕಾರ ಮಾಡುವಾಗ  ಹೀಗೆ ಹೇಳಿಕನ್ನಡದಲ್ಲಿ   ನೈವೇಧ್ಯ  ಹಾಗು ತಾಂಬೂಲ ಸಮರ್ಪಿಸಿ

ನಮ್ಮ ಮನದಲ್ಲಿ  ಇದು ಇರುವುದು ಸುಳ್ಳಲ್ಲ

ಪ್ರವಾಸಿಗರಿಗೆ ಮಾಹಿತಿ ಇಲ್ಲಿದೆ

ದೇವಾಲಯದಲ್ಲಿ  ವಿಶೇಷ ನೋಡುವ ಆಸೆಯಿಂದ ಆವರಣದಲ್ಲಿ  ಪ್ರದಕ್ಷಿಣೆ ಹಾಕುತ್ತ ಬರಲು ಕಣ್ಣಿಗೆ ಕಂಡ ಫಲಕಗಳು  ಅಚ್ಚರಿ ಮೂಡಿಸಿದವು, ಇತರೆ ದೇವಾಲಯಗಳಲ್ಲಿ ಕಾಣುವ  ಫಲಕಗಳಿಗಿಂತ  ಬಿನ್ನವಾಗಿ ಮನಸೆಳೆದವು, ದೇವರಿಗೆ ಕನ್ನಡದಲ್ಲಿ ಪೂಜೆ ಮಾಡಲು ಪ್ರೇರಣೆ ನೀಡುವ ಸಂದೇಶ ಅವುಗಳು ಸಾರುತ್ತಿದ್ದವು, ಪ್ರತಿಯೊಂದು ಫಲಕವನ್ನು ಓದುತ್ತ ಮುನ್ನಡೆದೆ , ಇದೊಂದು ಜನಪರ ದೇಗುಲ ಎಂಬ ಭಾವನೆ ಮೂಡಿತು, ಸ್ವಲ್ಪ ಮುಂದೆ ಬಂದು ಇವುಗಳ ಚಿತ್ರ ತೆಗೆಯುತ್ತ ಸಾಗಿದೆ. ಅಲ್ಲೇ ಇದ್ದ  ಒಂದು ಸಂದೇಶ ಮನ ಸೆಳೆಯಿತು  " ದೇಗುಲಕೆ ಬರುವುದು ತಪ್ಪು ಹುಡುಕುವುದಕ್ಕಲ್ಲ ದೇವರಿಗೆ ತಪ್ಪು ಒಪ್ಪಿಸುವುದಕ್ಕೆ" ಎಂಬ ವಾಕ್ಯ ಮನಸೆಳೆಯಿತು ಇಂತಹ ತಪ್ಪನ್ನು ನಾವು ಮಾಡುವುದು ನಿಜ ಎಂಬ ಸತ್ಯದ ದರ್ಶನ ವಾಯಿತು.  ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಹೇಗೆ  ತಮ್ಮ  ಪ್ರವಾಸದ    ಕಾರ್ಯಕ್ರಮ  ಹಮ್ಮಿಕೊಳ್ಳಬಹುದು  ಎಂಬ ಬಗ್ಗೆ  ಒಳ್ಳೆಯ  ಮಾರ್ಗ ಸೂಚಿ  ಹಾಕಿ ಪ್ರವಾಸಿಗರ ಪಯಣದ  ದಾರಿ ದೀಪವಾಗಿದ್ದಾರೆ  ಇಲ್ಲಿನ  ದೇಗುಲದ  ಆಡಳಿತಗಾರರು


ಚಿನ್ಮೈ ಭಟ್ ಪ್ರಥಮ ಭೇಟಿ


ಹಾಗೆ ಕನ್ನಡ ದೇಗುಲದ  ವಿವರಗಳನ್ನು ನೋಡುತ್ತಾ ಬರುತ್ತಿದ್ದೆ,  ನಮ್ಮ ಗಿರೀಶ್  ಬಾಲೂ ಸರ್  ಇವ್ರು  "ಚಿನ್ಮೈ ಭಟ್ " ಅಂತಾ  ಎಂದು ಒಬ್ಬರನ್ನು ಪರಿಚಯ  ಮಾಡಿಸಿದರು ,  ಅಚ್ಚರಿಯಾಯಿತು  ನನ್ನ ಬ್ಲಾಗ್ ಓದುತ್ತ  ತಮ್ಮ ಅನಿಸಿಕೆ ತಿಳಿಸುತ್ತ ಇದ್ದ " ಚಿನ್ಮೈ ಭಟ್ "  ಇಲ್ಲಿ ಪ್ರತ್ಯಕ್ಷ ಆಗಿದ್ದರು, ಸಂತಸದಿಂದ  ಪರಸ್ಪರ ಖುಷಿಯಿಂದ  ಪರಿಚಯ ಮಾಡಿಕೊಂಡು  ಮುಂದಿನ ಪಯಣಕ್ಕೆ  ನಮ್ಮ ಜೊತೆ ಬರುವಂತೆ  ಕೇಳಿದ್ದಕ್ಕೆ , ಖುಷಿ ಯಾಗಿ  ಜೊತೆಗೂಡಿ ಬಂದರು , ಇಲ್ಲಿಂದ ಮುಂದೆ ನಮ್ಮ ನೆಚ್ಚಿನ ತಮ್ಮ  ಚಿನ್ಮೈ ಭಟ್   ಜೊತೆಯಲ್ಲಿ ಪ್ರವಾಸ ಮತ್ತಷ್ಟು  ಮೆರುಗು ಪಡೆಯಿತು, ಮುಂದುವರೆದ ನಮ್ಮ ತಂಡ   ಚಿಕ್ಕ ಮಗಳೂರಿನ  ಟೌನ್ ಕ್ಯಾಂಟೀನ್   ತಲುಪಿತು.ಟೌನ್ ಕ್ಯಾಂಟೀನ್


 ಚಿಕ್ಕಮಗಳೂರಿನಲ್ಲಿ   ಈ ಟೌನ್ ಕ್ಯಾಂಟೀನ್  ತನ್ನದೇ ಆದ   ಹೆಗ್ಗಳಿಕೆ ಹೊಂದಿದೆ , ಇಲ್ಲಿನ  ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ  ಬರೆದಿದ್ದಾರೆ , ಇಲ್ಲಿನ  ವಿವಿಧ ಬಗೆಯ ದೊಸೆಗಳಿಗೆ  ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್ ಕ್ಯಾಂಟೀನ್ ತನ್ನದೇ  ರೀತಿಯಲ್ಲಿ ಸದ್ದಿಲ್ಲದೇ  ಇಲ್ಲಿಗೆ ಬರುವ ಪ್ರವಾಸಿಗಳಿಗೆ  ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ  ಇಲ್ಲಿಗೆ ಬರದೆ ಹೋಗೋದಿಲ್ಲ, ಇಲ್ಲಿ ಗೆ  ಬಂದ ನಾವು ಹೊಟ್ಟೆ ತುಂಬಾ  ಉಪಹಾರ ಮೈಯ್ದು , ಪಾರ್ಸೆಲ್  ಮಾಡಿಸಿಕೊಂಡು   ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ  ಪಯಣ ಸಾಗಿತು 'ಮುಳ್ಳಯ್ಯನ ಗಿರಿ''  ಕಡೆಗೆ . ....!!!


ಗಿರಿ ಶಿಖರಗಳ ಒಡಲಿಗೆ  ತೆರಳಿದ ಹಾದಿ

ಗೆಳೆಯರೇ ಈ  ಬ್ಲಾಗ್ 30 -12 - 2007 ರಂದು ಜನಿಸಿ  ಐದು ವರ್ಷ  ಪೂರೈಸಿದೆ  ಆರನೇ ವರ್ಷಕ್ಕೆ ಕಾಲಿಟ್ಟ  ಈ ಕಂದಮ್ಮನಿಗೆ  ನಿಮ್ಮ ಶುಭ ಹಾರೈಕೆ ಇರಲಿ , ನಿಮ್ಮ ಪ್ರೀತಿಯ ಅನಿಸಿಕೆ ಹರಿಯುತ್ತಾ  ಏನೇ ತಪ್ಪು ಒಪ್ಪು ಇದ್ದರೂ ಅದನ್ನು  ಸರಿಪಡಿಸಿ ಈ ಅಜ್ಞಾನಿಯ   ಜ್ಞಾನವನ್ನು  ಹೆಚ್ಚಿಸಲು  ಪ್ರೇರಣೆ ನೀಡುತ್ತಾ  ಸದಾ ನನ್ನೊಂದಿಗೆ ನಿಮ್ಮ  ಗೆಳೆತನ ಇರಲಿ ಎಂಬ  ಆಸೆ ನನ್ನದು, ನನ್ನ ಆಸೆಯ ಗಿಡಕ್ಕೆ ನೀರೆರೆದು ಪೋಷಿಸುವ ಹೊಣೆ ನಿಮ್ಮದು . ಧನ್ಯವಾದಗಳು

Sunday, December 22, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....6 ಬೆಳವಾಡಿಯ ಮಡಿಲಲ್ಲಿ

ಬನ್ನಿ ಹೀಗೆ ಹೋಗೋಣ


ಗೆಳೆಯರೇ   ಈ ಸರಣಿಯ ಬ್ಲಾಗ್  ಬರಹದ ಸಂಚಿಕೆ ಕಳೆದ ವಾರ ಬರೆಯಲು ಆಗಿರಲಿಲ್ಲ,  ಕಳೆದ ಸಂಚಿಕೆಯಲ್ಲಿ  ಪುಷ್ಪಗಿರಿ  ಹಾಗು ಹುಲಿಕೆರೆ ಕೊಳ ದರ್ಶನ  ಮಾಡಿದೆವು , ನಮ್ಮ ಪಯಣ ಮುಂದುವರೆಯಿತು,  ಐತಿಹಾಸಿಕ  ಬೆಳವಾಡಿ ನೋಡುವ ಕನಸು  ನನಸಾಗುವ  ಸಮಯ ಹತ್ತಿರ ಬಂದಿತ್ತು . ಹಾಸನ  ಜಿಲ್ಲೆಯ  ಪ್ರವಾಸ ಮುಗಿಸಿ ಚಿಕ್ಕ ಮಗಳೂರು  ಜಿಲ್ಲೆಗೆ ಪ್ರವೇಶ  ಮಾಡಿದೆವು . ಬೆಳವಾಡಿ  ನಮ್ಮನ್ನು ಕೈಬೀಸಿ  ಕರೆಯುತ್ತಿತ್ತು .


ಹಳ್ಳಿಯ  ಜೀವನದ ಒಂದು ನೋಟ

ನಮ್ಮ ಹಳ್ಳಿಯ  ಕೆರೆಯನ್ನು  ನೆನಪಿಸಿದ ಕೆರೆ
 ಹಳೆಬೀಡು  ಕಡೆಯಿಂದ  ಬೆಳವಾಡಿಗೆ   ತೆರಳುವಾಗ ದಾರಿಯಲ್ಲಿ ಸಿಕ್ಕ  ಒಂದು ಕೆರೆ ನನ್ನ  ಹಳ್ಳಿಯ  ಬಾಲ್ಯದ ನೆನಪನ್ನು ಮೂಡಿಸಿತು,  ಕೆರೆಯಲ್ಲಿ ಒಂದು ಕಡೆ  ದನಗಳನ್ನು  ತೊಳೆಯುತ್ತಿದ್ದರೆ , ಮತ್ತೊಂದೆಡೆ   ಕೆಲವು ಹೆಂಗಸರು  ಅಲ್ಲೇ ಬಟ್ಟೆ   ತೊಳೆಯುತ್ತಿದ್ದರು  ,  ಅವರು ಹಾಕುವ  ಬಟ್ಟೆ  ಸೋಪಿನ   ಡಿಟರ್ಜೆಂಟ್  ಕೊಳೆ ಯ ಜೊತೆಗೆ ನೀರನ್ನು ಸೇರುತ್ತಿತ್ತು,  ಅದನ್ನು ಕುಡಿಯುವ  ಜೀವಿಗಳ  ಗತಿಯೇನು?  ಎಂಬ  ಪ್ರಶ್ನೆ ಬಂದಿತು,  ಅಷ್ಟರಲ್ಲೇ  ನಾನೂ ಬಾಲ್ಯದಲ್ಲಿ  ಇಂತಹ  ಕೆರೆಗಳಲ್ಲಿ  ಈಜು ಹೊಡೆಯಲು ಹೋಗುತ್ತಿದ್ದ  ನೆನಪು ಮೂಡಿ ,  ಅಂದು ಇಂತಹಾ  ನೀರನ್ನೇ  ಬಳಸಿದ್ದ  ಹಾಗು ಅಂದು ಏನೂ ಆಗದೆ  ಇಂದಿಗೂ ಬದುಕಿರುವ ನನ್ನ ಬಗ್ಗೆ ನನಗೆ ನಗು ಬಂತು . ಅಷ್ಟರಲ್ಲಿ ಬೆಳವಾಡಿ  ಬಂದೆ ಬಿಟ್ಟಿತ್ತು. 


ದೇವಾಲಯದ ಪ್ರವೇಶ  ದ್ವಾರ


 ಬೆಳವಾಡಿ  ಚಿಕ್ಕ ಮಗಳೂರು ಜಿಲ್ಲೆಗೆ ಸೇರಿದ ಐತಿಹಾಸಿಕ  ಸ್ಥಳ , ಇದು ಹಳೆಬೀಡುವಿನಿಂದ ಹನ್ನೊಂದು ಕಿ. ಮಿ .  ದೂರದಲ್ಲಿದೆ .ಇದೇ  ಬೆಳವಾಡಿ ಊರು ಮಹಾಭಾರತದ  "ಏಕ ಚಕ್ರ ನಗರ" ಆಗಿತ್ತೆಂಬ  ನಂಬಿಕೆ ಇದೆ, "ಭೀಮಸೇನ " ಏಕಚಕ್ರ  ನಗರದಲ್ಲಿ "ಬಕಾಸುರ" ನನ್ನು  ಸಂಹಾರ ಮಾಡಿದ ಕುರುಹಾಗಿ  ಇಲ್ಲಿನ್ ಜನ  ಇಂದಿಗೂ " ಬಂಡಿ ಬನ " ಎಂಬ ಹಬ್ಬ ಆಚರಣೆ ಮಾಡುತ್ತಾರೆ . ಬೆಳವಾಡಿಯ  ಪಕ್ಕದಲ್ಲಿ  ಒಂದು ದೊಡ್ಡ ಕೆರೆ ಯಿದ್ದು ಅದನ್ನು  "ಥಣಕ ರಾಯ''ನ  ಕೆರೆ ಅಂತ ಕರೆಯುತ್ತಾರೆ, "ಥಣಕ ರಾಯ'' ಹಿಂದೆ ಈ ಊರಿನ ಒಬ್ಬ ಪಾಳೆಯಗಾರ ಆಗಿದ್ದ  ಕಾರಣ  ಆತನ  ಗೌರವಾರ್ಥ  ಇಲ್ಲಿ ಒಂದು ಗುಹೆ ನಿರ್ಮಿಸಿರುವುದಾಗಿ  ಹೇಳುತ್ತಾರೆ . ಆದರೆ ಗುಹೆ ಎಲ್ಲಿದೆ ಎಂದು ತಿಳಿದು ಬರಲಿಲ್ಲ. ಮೊದಲು  ಈ ಊರು ಜೈನ ಕೇಂದ್ರ  ಅಗಿತ್ತೆಂದೂ , ಕಾಲಾನಂತರ  ವೈಷ್ಣವ ಕೇಂದ್ರವಾಗಿ  ಬದಲಾವಣೆ  ಕಂಡಿದೆ ಎಂಬ ಮಾಹಿತಿ ತಿಳಿದು ಬರುತ್ತದೆ . ಮೈಸೂರಿನ ಯದುವಂಶದ ಅರಸ ಮುಮ್ಮಡಿ ಕೃಷ್ಣರಾಜ ವಡೆಯರ್  ಅವರು ಈ ಊರನ್ನು "ಶೃಂಗೇರಿ ಮಠ" ಕ್ಕೆ ದತ್ತಿ  ನೀಡಲಾಯಿತೆಂದು  ಇತಿಹಾಸ ಹೇಳುತ್ತದೆ .


ದೇವಾಲಯದ  ಹೊರ  ಆವರಣ

ಬೆಳವಾಡಿಯ ದೇವಾಲಯ  ವಿಷ್ಣು ದೇವಾಲಯ  ತ್ರಿಕೂಟಾಚಲ ದೇವಾಲಯ  ವೆಂದೂ ಕರೆಯುತ್ತಾರೆ , ಸಾಮಾನ್ಯವಾಗಿ , ಹೊಯ್ಸಳ  ದೇವಾಲಯಗಳಲ್ಲಿ , ತ್ರಿಕೂಟಾಚಲ , ಪಂಚ ಕೂಟಾಚಲ ದೇವಾಲಯ  ಎಂದು ಕರೆಯುವುದು  , ಎಲ್ಲರಿಗೂ ತಿಳಿದಿದೆ ಆದರೆ  ಅದರ ಅರ್ಥ ನಮ್ಮಲ್ಲಿ ಬಹಳ ಜನರಿಗೆ ತಿಳಿದಿಲ್ಲ . ತ್ರಿಕೂಟಾಚಲ  ಅಂದರೆ  ಮೂರು ಪ್ರಧಾನ  ದೇವರನ್ನು ಹೊಂದಿರುವ, ಹಾಗು ಮೂರು ಗರ್ಭಗುಡಿ  ಹಾಗು ಶಿಖರ ಹೊಂದಿರುವ   ದೇವಾಲಯಗಳ  ಸಮುಚ್ಚಯ , ಪಂಚ ಕೂಟ ಎಂದರೆ ಐದು ಪ್ರಧಾನ ದೇವರನ್ನು ಹೊಂದಿರುವ  ಹಾಗು ಐದು ಗರ್ಭಗುಡಿ  ಹಾಗು ಶಿಖರ ಹೊಂದಿರುವ   ದೇವಾಲಯಗಳ ಸಮುಚ್ಚಯ  ಎಂದು ಕರೆಯಬಹುದು . ಬೆಳವಾಡಿ ಯಲ್ಲಿರುವುದು  ತ್ರಿಕೂಟಾಚಲ ದೇವಾಲಯ . 


ಶ್ರೀ ವೀರನಾರಯಣ ಸ್ವಾಮಿ


ಶ್ರೀ ವೀರನಾರನಯಣ  ಮೂರ್ತಿಯ  ಹೊಟ್ಟೆಯ ಭಾಗ  ಹಸುವಿನ ಮುಖ ಹೊಂದಿದೆ

ಈ ದೇವಾಲಯ ಸಮುಚ್ಚಯದಲ್ಲಿ  ಮೂರು ಗರ್ಭಗುಡಿ  ಹಾಗು ಶಿಖರ ಹೊಂದಿರುವುದನ್ನು ಕಾಣ ಬಹುದು , ಈ ದೇವಾಲಯದಲ್ಲಿ  ಪ್ರಧಾನವಾಗಿ  ವೀರನಾರಾಯಣ  ಮೂರ್ತಿ ಇದ್ದು   ಇದರ ಎಡ ಭಾಗದ  ಗುಡಿಯಲ್ಲಿ ಯೋಗಾನರಸಿಂಹ , ಬಲಭಾಗದ ಗುಡಿಯಲ್ಲಿ ವೇಣುಗೋಪಾಲ ಮೂರ್ತಿಗಳಿವೆ .ಬಳಪದ ಕಲ್ಲಿನ  ದೇಗುಲವನ್ನು  ಕ್ರಿಸ್ತ ಶಕ 1200 ರಲ್ಲಿ   ಹೊಯ್ಸಳ  ಅರಸ ವೀರ ಬಲ್ಲಾಳರ ಕಾಲದಲ್ಲಿ   ನಿರ್ಮಿಸಿದರೆಂದು  ತಿಳಿದುಬರುತ್ತದೆ ,  ಸುಂದರ ವೇಣುಗೋಪಾಲ ಮೂರ್ತಿ ಮನ ಮೋಹಕವಾಗಿದೆ , ಹೃದಯ ಭಾಗದಿಂದ ಹೊಟ್ಟೆಯ ಭಾಗದ ವರೆಗೆ ಸೂಕ್ಷ್ಮವಾಗಿ ಗಮನಿಸಿದರೆ  ಹಸುವಿನ ಮುಖದ ಹೋಲಿಕೆ ಕಂಡು ಬರುತ್ತದೆ . ಇದೆ ರೀತಿಯ ಮೂರ್ತಿಗಳು  ಹೊಯ್ಸಳ ಶಿಲ್ಪಿಗಳ ನೈಪುಣ್ಯತೆಯ ದರ್ಶನ  ಮಾಡಿಸಿ ಅಚ್ಚರಿಗೊಳಿಸುತ್ತವೆ. 


ಸುಂದರ  ದೇಗುಲದ  ಕಲಾ  ವೈಭವ

ಹೊಳೆಯುವ   ಕಂಬಗಳ  ಸಾಲು

ಯಾವುದೇ ಯಂತ್ರದ ಹಂಗಿಲ್ಲದೆ  ಹೀಗೆ ಕಡೆದದ್ದು ಹೇಗೆ

ಬೆಳವಾಡಿ  ಯ ಈ ದೇಗುಲವನ್ನು   ಬೆರಗಾಗಿ  ನೋಡುತ್ತಾ ಸಾಗಿದೆ , ದೇವಾಲಯದ  ಕಲಾ  ವೈಭವ ನನ್ನ ಕ್ಯಾಮರ ದಲ್ಲಿ ಸೆರೆಯಾಗುತ್ತಿತ್ತು ,  ದೇವಾಲಯದ ಸುತ್ತ  ಪ್ರದಕ್ಷಿಣೆ ಹಾಕಿ ಅಲ್ಲಿನ  ಚಿತ್ರಗಳನ್ನು  ಕಣ್ ತುಂಬಿಸಿಕೊಂಡು  ಧನ್ಯನಾದೆ , ದೇವಾಲಯದ  ಒಳ ಅವರಣ  ದೊಳಗೆ ಫಳ  ಫಳನೆ  ಹೊಳೆಯುತ್ತಿದ್ದ ನುಣುಪಾದ  ಕಲ್ಲಿನ  ಕಂಬಗಳು  ಸಾಲು ಸಾಲಾಗಿ  ನಿಂತಿದ್ದವು,   ದೂರದಿಂದ  ನೋಡಿದರೆ  ಯಾವುದೊ ಲೋಹದ ಕಂಬಗಳೋ  ಎಂಬಂತೆ  ಕಾಣುತ್ತಿದ್ದವು . ಯಾವುದೇ ಯಂತ್ರದ  ಸಹಾಯ ವಿಲ್ಲದೆ , ಇಷ್ಟು ನುಣುಪಾಗಿ  ಇಂತಹ ಕಂಬಗಳನ್ನು  ಸೃಷ್ಟಿಸಿದ  ಶಿಲ್ಪಿಗೆ  ಮನಸಾರೆ ವಂದಿಸಿದೆ . ದೇವಾಲಯದ  ಚಾವಣಿ

 ದೇಗುಲದ  ಹೊರಗಡೆ ಅಡ್ಡಾಡುವಾಗ  ಅಲ್ಲೇ ಪಕ್ಕದಲ್ಲಿದ್ದ  ಮೆಟ್ಟಿಲುಗಳನ್ನು  ಹತ್ತಿ  ಮೇಲೆ ಬಂದೆವು,  ದೇವಾಲಯದ  ಚಾವಣಿಯ   ದರ್ಶನ ಆಯಿತು,  ಶತ ಶತಮಾನಗಳಿಂದ  ಹವಾಮಾನ  ವೈಪರೀತ್ಯ  ಎದುರಿಸುತ್ತಾ  ಸುಂದರ  ದೇಗುಲದ ರಕ್ಷಣೆ  ಮಾಡುತ್ತಿರುವ  ಚಾವಣಿಯ  ಕಂಡು ಅಚ್ಚರಿ ಗೊಂಡೆ , ಸುಣ್ಣದ ಕಲ್ಲು, ಗಾರೆ  ಗಚ್ಚು  ಇವುಗಳ  ಮಿಶ್ರಣದ ನಿರ್ಮಾಣ ಇದಾಗಿತ್ತು . ಬೆಳವಾಡಿಯ  ಈ ದೇಗುಲ  ತನ್ನೊಳಗೆ ಇನ್ನೆಷ್ಟು  ರಹಸ್ಯ  ಬಚ್ಚಿಟ್ಟು  ಕೊಂಡಿದೆಯೋ  ತಿಳಿಯದಾಯಿತು,  ಸಮಯದ ಅಭಾವ ಇದ್ದ ಕಾರಣ ಅಲ್ಲಿಂದ  ಹೊರಡ ಬೇಕಾಯಿತು . 


ವಿನಾಯಕ  ದೇವಾಲಯ

ಮುಂದೆ ತೆರಳುವಾಗ ಸಿಕ್ಕ ವಿನಾಯಕನ  ದರ್ಶನ ಮಾಡಿ ಪುನೀತರಾದೆವು , ಬೆಳವಾಡಿ ದೇಗುಲದ ಸುಂದರ ನೆನಪನ್ನು ಹೊತ್ತು  ನಮ್ಮ ತಂಡ  ಹಿರೇಮಗಳೂರಿನ  ಕಡೆಗೆ  ಹೊರಟಿತು .....  ಅಲ್ಲಿ ಕನ್ನಡ ಪೂಜಾರಿ  ಶ್ರೀ ಹಿರೇಮಗಳೂರು  ಕಣ್ಣನ್  ಅವರ  ದರ್ಶನಕ್ಕಾಗಿ  ಮನ  ಹಾತೊರೆಯುತ್ತಿತ್ತು. ....... !!! 


Wednesday, December 11, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....5 ಬನ್ನಿ ಪುಷ್ಪಗಿರಿ ಹಾಗೂ ಹುಲಿಕೆರೆ ಕೊಳ ನೋಡೋಣ


ಪುಷ್ಪಗಿರಿ  ಬೆಟ್ಟದ ಪಕ್ಷಿನೋಟ

ಕಳೆದ ಸಂಚಿಕೆಯಲ್ಲಿ ಗಿರೀಶ್ ಮನೆಯ ಅತಿಥ್ಯದ ಬಗ್ಗೆ ಬರೆದೆ , ಹಿಂದಿನ ದಿನ  ಹಳೇಬೀಡು ದರ್ಶನ ಮಾಡಿ ಗಿರೀಶ್ ಮನೆಯಲ್ಲಿ ಉಳಿದು  ಮುಂಜಾನೆಯೇ ಸ್ನಾನ ಮಾಡಿ ಪುಷ್ಪಗಿರಿಗೆ ತೆರಳಿದೆವು, ಮುಂಜಾನೆಯ ತಂಗಾಳಿ  ಹಿತವಾದ ಅನುಭವ ನೀಡಿತ್ತು,  ಪುಷ್ಪಗಿರಿ ಸನ್ನಿಧಿಯಲ್ಲಿ  ಕಾಲಿಟ್ಟ  ನಮಗೆ  ಮೊದಲು  ಕಂಡಿದ್ದೆ  ಸುಂದರ ದೇವಾಲಯಪುಷ್ಪಗಿರಿಗೆ ಸ್ವಾಗತ

ಸುಂದರ ಮಂಟಪ
ಬನ್ನಿ ದೇಗುಲ ನೋಡೋಣ

ಮೊದಲು ಕಂಡಿದ್ದು ಹೊಸದಾಗಿ ನಿರ್ಮಾಣ ಆಗುತ್ತಿರುವ ಸ್ವಾಗತ  ಕಮಾನು , ಕಮಾನು ಹಿಂಬಾಗದಲ್ಲಿ ಒಂದು ಮಂಟಪ , ಮಂಟಪದ ನಂತರ  ದೇವಾಲಯ , ಇದಕ್ಕೆ ಹಿನ್ನೆಲೆಯಾಗಿ ಪುಷ್ಪಗಿರಿಯಲ್ಲಿನ  ಕೋಡುಗಲ್ಲಿನ  ಬೆಟ್ಟಶ್ರೇಣಿ . ಮೊದಲು ಸಿಗುವ ಕಮಾನನ್ನು ಇತ್ತೀಚಿಗೆ ನಿರ್ಮಾಣ ಮಾಡಲಾಗುತ್ತಿದ್ದು, ನಂತರ ಸಿಗುವ  ಮಂಟಪ ಕಲಾತ್ಮಕವಾಗಿ ಮೆರೆದಿದೆ , ನಾವಿಲ್ಲಿ ಹೊಯ್ಸಳ ಶೈಲಿಯ ಕೆತ್ತನೆಗಳನ್ನು ಗಮನಿಸ ಬಹುದು, ಮಂಟಪದಲ್ಲಿನ ಕಂಬಗಳು, ಆನೆಗಳ ಮೂರ್ತಿಗಳು, ಮಂಟಪದ ವಿನ್ಯಾಸ  ಬೇಲೂರು , ಹಳೆಬೀಡಿನ ಶಿಲ್ಪಕಲೆಗಳ ನೆನಪನ್ನು  ಮೂಡಿಸುತ್ತವೆ .


ಸುಂದರ ಮಂಟಪ


ಪುಷ್ಪಗಿರಿ ಯಲ್ಲಿನ  ಶ್ರೀ ಭೈರವ / ಮಲ್ಲಿಕಾರ್ಜುನ   ದೇವಾಲಯ ದ  ಇತಿಹಾಸದ ಬಗ್ಗೆ ಅಷ್ಟೇನೂ  ಮಾಹಿತಿ ನಮಗೆ ದೊರಕಲಾರದು, ಇರುವ ಅಸ್ಪಷ್ಟ ಮಾಹಿತಿ ಸರಿಯಾಗಿ ತಾಳೆಯಾಗುತ್ತಿಲ್ಲ , ಹಾಗಾಗಿ ಇಲ್ಲಿ ನ ಇತಿಹಾಸ  ಸ್ಪಷ್ಟತೆ ಕಾಣದು . ೧]  ಮಲ್ಲಿಕಾರ್ಜುನ ದೇವಾಲಯ ಮೊದಲು  ಜೈನ  ಬಸದಿ ಆಗಿತ್ತೆಂದೂ ನಂತರ ಅದು ಮಾರ್ಪಾಡಾಗಿ ಮಲ್ಲಿಕಾರ್ಜುನ ದೇವಾಲಯ ಆಯಿತೆಂದು, ಹಳೇಬೀಡು ಊರಿನ ಸ್ಥಾಪನೆ ಗೆ  ಮೊದಲೇ ಇಲ್ಲಿ ಊರು ಹಾಗು ದೇವಾಲಯವಿತ್ತೆಂದು   ಒಂದು ವಾದವಿದೆ, ೨]   ಎರಡನೆಯ ವಾದ  ಈ ಮಲ್ಲಿಕಾರ್ಜುನ ದೇಗುಲವನ್ನು ರಾಣಿ ಶಾಂತಲೆ   ಕಟ್ಟಿಸಿದಳೆಂದು ಹೇಳಲಾಗುತ್ತದೆ . ಈ ದೇಗುಲದ ಕಾಲದ ಬಗ್ಗೆ  ಗೊಂದಲದ  ಮಾಹಿತಿ ಇದ್ದು  ಸರಿಯಾದ ಸಂಶೋದನೆ ಅಗತ್ಯವಿದೆ .


ಶ್ರೀ ಮಲ್ಲಿಕಾರ್ಜುನ ಸ್ವಾಮಿ

ದೇವಾಲಯ ಒಳಹೊಕ್ಕ ನಾವುಶ್ರೀ ಮಲ್ಲಿಕಾರ್ಜುನ ಸ್ವಾಮೀ  ದರ್ಶನ ಪಡೆದೆವು, ನಿಶ್ಯಬ್ದ ವಾದ ವಾತಾವರಣ  ಒಂದೇ ಮನಸಿನಿಂದ   ಸ್ವಲ್ಪ  ಹೊತ್ತು  ಕಣ್ಣು ಮುಚ್ಚಿ ಕುಳಿತೆ , ಮನಸು ಹಗುರವಾಯಿತು, ನಿರ್ಮಲವಾದ  ಮನಸಿನಿಂದ  ದೇಹಕ್ಕೆ ಮತ್ತಷ್ಟು ಉತ್ಸಾಹ  ಸಿಕ್ಕಿತು, ದೇವಾಲಯದ ಒಳ ಆವರಣ  ನೋಡುತ್ತ  ಸಾಗಿದೆ , ಈ ದೇವಾಲಯದ ವಿಶೇಷ ಅಂದ್ರೆ ಹೊರ ಭಾಗದಲ್ಲಿ  ಅಷ್ಟೊಂದು  ಕೆತ್ತನೆ ಕಾಣದಿದ್ದರೂ  ಒಳ ಭಾಗ, ಹಾಗು ಚಾವಣಿಯಲ್ಲಿ  ಅದ್ಭುತ ಚಿತ್ತಾರಗಳನ್ನು ಕಾಣ ಬಹುದು  ,


ಶ್ರೀ ಮಹಾಲಕ್ಷ್ಮಿ


ಭಗವಾನ್ ಮಹಾವೀರದೇವಾಲಯದ  ಚಂದ ಸವಿಯುತ್ತಾ ಚಾವಣಿಯಲ್ಲಿನ ಅದ್ಭುತ ಚಿತ್ರಗಳನ್ನು ಕ್ಯಾಮರಾದಲ್ಲಿ  ಸೆರೆ ಹಿಡಿಯುತ್ತಾ ಸಾಗಿದೆ , ವಿಷ್ಣು, ಶಿವ, ಮಹಾಲಕ್ಷ್ಮಿ  ಮುಂತಾದ ಚಿತ್ರಗಳನ್ನು  ನೋಡಿ ಕಣ್ತುಂಬಿ ಕೊಂಡೆ , ಹಾಗೆ ಚಿತ್ರ ತೆಗೆದು ಮನೆಗೆ ಬಂದು ಕಂಪ್ಯೂಟರ್ ಗೆ ಇಳಿಸಿದಾಗ ಕಂಡ ಒಂದು ಚಿತ್ರ  ವಿಸ್ಮಯವಾಗಿತ್ತು,  ಹೌದು ಅಂದು ದೇವಾಲಯದ ಚಾವಣಿಯಲ್ಲಿ ತೆಗೆದ ಚಿತ್ರಗಳಲ್ಲಿ  ಜೈನ  ಪಂಥದ  ಮಹಾವೀರರದ್ದೂ  ಒಂದು ಚಿತ್ರವಿತ್ತು , ಮಲ್ಲಿಕಾರ್ಜುನ ದೇವಾಲಯ ಮೊದಲು  ಜೈನ  ಬಸದಿ ಆಗಿತ್ತೆಂದೂ ನಂತರ ಅದು ಮಾರ್ಪಾಡಾಗಿ ಮಲ್ಲಿಕಾರ್ಜುನ ದೇವಾಲಯ ಆಯಿತೆಂದು, ಹೇಳುವ ಮಾತಿಗೆ  ಹತ್ತಿರವಾಗಿತ್ತು ಇಲ್ಲಿನ ನಿದರ್ಶನ , ಆದಾಗ್ಯೂ  ಸರಿಯಾದ ಸಂಶೋಧನೆ ಇಲ್ಲದೆ  ತೀರ್ಮಾನ  ಮಾಡುವುದು ಸರಿಯಲ್ಲಾ  ಎನ್ನಿಸುತ್ತದೆ, ದೇವಾಲಯದ ಹೊರಬಂದ ನಾವು  ಅಲ್ಲೇ  ಸನಿಹದಲ್ಲಿ ಇದ್ದ  ವೀರಶೈವ ಮಠಕ್ಕೆ  ಭೇಟಿ ಕೊಟ್ಟೆವು,

ಪುಷ್ಪಗಿರಿ ಮಠದ ದರ್ಶನ

ಪುಷ್ಪಗಿರಿ ಮಠದ ಬಗ್ಗೆ ತಿಳಿದ ಸ್ವಲ್ಪ ಮಾಹಿತಿ ಇಲ್ಲಿದೆ , ಕ್ರಿ .ಶ ಹನ್ನೊಂದನೇ ಶತಮಾನದಲ್ಲಿ ಈ ಮಠದ ಸ್ಥಾಪನೆ ಆಯಿತೆಂದು ವೀರಶೈವ  ಧರ್ಮದ ಅನುಯಾಯಿಗಳಿಗಾಗಿ ಈ ಧಾರ್ಮಿಕ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ದೇಶ ವಿದೇಶಗಳಲ್ಲಿ ಇಲ್ಲಿನ ಭಕ್ತರು ಇರುವುದಾಗಿ ತಿಳಿದು ಬಂತು . ಈ ಸಂಸ್ಥೆಯನ್ನು  "ಪುಷ್ಪಗಿರಿ  ಮಹಾ ಸಂಸ್ಥಾನ" ವೆಂದು  ಕರೆದಿದ್ದು, ಹಾಲಿ ಇಲ್ಲಿನ  ಅದಿಪತಿ "ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ" ಗಳು .  ಇಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ, ಕೃಷಿ ಚಟುವಟಿಕೆ, ಸಾವಯವ ಕೃಷಿ ಬಗ್ಗೆ , ಪ್ರಾಚ್ಯ ವಸ್ತುಗಳ ಸಂಗ್ರಹದ ಬಗ್ಗೆ ಆಸಕ್ತಿ ತೋರಿರುವುದನ್ನು  ಕಾಣಬಹುದಾಗಿದೆ .  ಗಿರೀಶ್ ಜೊತೆಯಲ್ಲಿ ಸ್ವಾಮೀಜಿಯವರ ಪರಿಚಯ ಮಾಡಿಕೊಂಡು  ದರ್ಶನ ಪಡೆದೆವು


ಅಡಿಗೆ ಶಾಲೆ

ಬಸವಣ್ಣ ನವರ ಸುಂದರ ಪ್ರತಿಮೆ

ಐತಿಹಾಸಿಕ ಶಿಲ್ಪಗಳ ಸಂರಕ್ಷಣೆ
 ಮಠದ  ಅಡಿಗೆ ಶಾಲೆ ನೋಡಿ ಮೆಚ್ಚುಗೆ ಯಾಯಿತು ಅನ್ನ  ದಾಸೋಹ ದ ಬಗ್ಗೆ ತಿಳಿದು ಹೊರನಡೆದ ನಾವು, ಬಯಲು ಸಂಗ್ರಹಾಲಯಕ್ಕೆ ಬಂದೆವು, ಬಹಳ ಹಿತವಾದ ಜಾಗ ಇದು, ಎತ್ತರದ ಸಮತಟ್ಟಾದ ಪ್ರದೇಶದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿ , ಸುತ್ತಲೂ ಅತ್ಯಮೂಲ್ಯವಾದ ಪ್ರಾಚ್ಯ   ಶಿಲ್ಪಗಳನ್ನು ವ್ಯವಸ್ತಿತವಾಗಿ ಸಂರಕ್ಷಣೆ ಮಾಡಲಾಗಿದೆ, ವೈಷ್ಣವ, ಜೈನ, ಶೈವ ಶಿಲ್ಪಗಳನ್ನು ಇಲ್ಲಿ  ಕಾಣಬಹುದು . ಸರ್ವಧರ್ಮಗಳ  ಸಂಗಮ ಇಲ್ಲಿದೆ
ಪುಷ್ಪಗಿರಿ ಯಿಂದ ಕಾಣುವ  ಸುಂದರ ನೋಟ

ಪುಷ್ಪ ಗಿರಿಯಿಂದ ಕಾಣುವ ದ್ವಾರ ಸಮುದ್ರ ಕೆರೆ

ಪುಷ್ಪಗಿರಿಯಲ್ಲಿ    ಉಲ್ಲಾಸದಿಂದ  ಕಾಲ ಕಳೆದ ನಾವು  ಮುಂದಿನ ಸ್ಥಳಕ್ಕೆ ತೆರಳಲು ಸಿದ್ದರಾದೆವು, ಪುಷ್ಪಗಿರಿ ಸುತ್ತ ಮುತ್ತ ಕಾಣುವ ನೋಟದ  ಚಿತ್ರಗಳ ಸೆರೆ ಹಿಡಿದು, ಖುಷಿಪಟ್ಟೆ, ದೂರದಲ್ಲಿ ಕಾಣುತ್ತಿದ್ದ ಹಸಿರು ಗದ್ದೆ, ದ್ವಾರ ಸಮುದ್ರ ಕೆರೆ ಇವುಗಳು ರಮ್ಯವಾದ  ದರ್ಶನ ನೀಡಿದ್ದವು, ಪ್ರಸನ್ನ ಮನಸಿನಿಂದ  ಹುಲಿಕೆರೆ ಕೊಳಕ್ಕೆ ಹೊರಟೆವು .


ಗೂಗಲ್ ನಲ್ಲಿ ಕಂಡಂತೆ ಹುಲಿಕೆರೆ ಕೊಳ


ಹುಲಿಕೆರೆ ಕೊಳದ ದರ್ಶನ  {ಚಿತ್ರ ಕೃಪೆ ಅಂತರ್ಜಾಲ }


ಬನ್ನಿ ಬನ್ನಿ ಇಲ್ಲಿದೆ "ಹುಲಿಕೆರೆ ಕೊಳ"   ಮೇಲ್ನೋಟಕ್ಕೆ  ಪ್ರವಾಸಿಗರ ಕಣ್ಣಿಗೆ ಬೀಳದು, ಹಳೇಬೀಡಿಗೆ  ಬರುವ ಪ್ರವಾಸಿಗಳು ಇಲ್ಲಿಗೆ ಹೆಚ್ಚಾಗಿ ಬರುವುದಿಲ್ಲ , ಆದರೆ "ಹುಲಿಕೆರೆ ಕೊಳ"  ಅದ್ಭುತವಾದ ಇತಿಹಾಸವನ್ನು ತನ್ನೊಳಗೆ ಬಚ್ಚಿಟ್ಟು ಕೊಂಡಿದೆ , ಹೊಯ್ಸಳ  ಅರಸರ ಕಾಲದಲ್ಲಿ ಕಟ್ಟಿಸಿದ ಒಂದೇ ಕಲ್ಯಾಣಿ  ಇದು ಎಂಬ ಅಧಿಕೃತ ದಾಖಲೆ ಇದೆ.  ಈ ಕಲ್ಯಾಣಿ  ಅರವತ್ತು ಅಡಿ ಆಳವಿದ್ದು,  ಚೌಕಾಕೃತಿ ಯಲ್ಲಿದೆ  ಕೊಳದ  ಮೂರುಬದಿಯಲ್ಲಿ  ಹದಿಮೂರು ಮೆಟ್ಟಿಲುಗಳ  ಅಲಂಕಾರವಿದ್ದು  ಹನ್ನೆರಡು ಗೋಪುರಗಳ ಸಣ್ಣ ದೇವಾಲಯಗಳನ್ನು  ಕೊಳದ ಸುತ್ತಲೂ ಸ್ಥಾಪಿಸಲಾಗಿದೆ  , ಈ ಹನ್ನೆರಡು ದೇವಾಲಯಗಳು "ಹನ್ನೆರಡು ರಾಶಿ" ಗಳನ್ನು ಪ್ರತಿನಿಧಿಸುವುದಾಗಿ  ತಿಳಿದು ಬರುತ್ತದೆ. ಇಲ್ಲಿ "ಶಿಲ್ಪ ಶಾಸ್ತ್ರ"ದ ಜೊತೆ "ಖಗೋಳ ಶಾಸ್ತ್ರ"ವೂ ಕೂಡ  ಮಿಳಿತವಾಗಿ  ಅಂದಿನವರ ಜ್ಞಾನ ಮಟ್ಟವನ್ನು  ತೋರಿಸುತ್ತದೆ .


ಹುಲಿಕೆರೆ ಕೊಳದ ನೋಟ

ಕೊಳದ ಸುತ್ತಾ ನಿರ್ಮಿಸಿರುವ ಪುಟ್ಟ ಗುಡಿಗಳು


ಈ ಕೆರೆಯನ್ನು ಎಷ್ಟು ನೋಡಿದರೂ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕಾಡುತ್ತದೆ, ಬಹುಷಃ  ನಾನು ನೋಡಿದ ಯಾವ ಕಲ್ಯಾಣಿಯೂ ನನ್ನನ್ನು ಇಷ್ಟು ಅಚ್ಚರಿಗೊಳಿಸಿರಲಿಲ್ಲ ಹಾಗೆ ನೋಡುತ್ತಾ ನಿಂತೇ ಇದ್ದೆ, ಇತಿಹಾಸದ ಪ್ರಕಾರ ಇಲ್ಲಿನ ಕೊಳದ ನಿರ್ಮಾಣವನ್ನು ವಿಷ್ಣುವರ್ಧನ /ಬಿಟ್ಟಿದೇವನ ಆಳ್ವಿಕೆ ಕಾಲದಲ್ಲಿ ನಿರ್ಮಿಸಿದುದಾಗಿ ತಿಳಿದುಬರುತ್ತದೆ,  ಈ ಕೊಳದಲ್ಲಿ ರಾಣಿ ಶಾಂತಲೆ  ಮೀಯುತ್ತಿದ್ದಳೆಂದು  ಹೇಳಲಾಗಿದೆ , ಈ ಕೊಳದ ನಿರ್ಮಾಣದ  ಶಿಲ್ಪಿಯ ಹೆಸರು  "ಚಟ್ಟಾಯ " ಎಂದು ತಿಳಿಸುತ್ತಾರೆ .


ಸ್ಪಟಿಕ ದಂತ ನೀರನ್ನು ಹೊಂದಿದ ಕೊಳ

ಮತ್ತೊಂದು ವಿಶೇಷ ಈ ಊರಿನ ಬಗ್ಗೆ  , ಅಚ್ಚರಿ ಮೂಡಿಸುತ್ತದೆ, ಈ ಊರಿನಲ್ಲಿ ಹೊಯ್ಸಳ ಸಾಮ್ರಾಜ್ಯ ಸ್ಥಾಪಕ  "ಸಳ " ಬಹಳ ವರ್ಷಗಳ ಕಾಲ ವಾಸವಿದ್ದುದಾಗಿ ಹೇಳುತ್ತಾರೆ , ಬಗೆದಷ್ಟು ಮುಗಿಯದ  ಇತಿಹಾಸ ಹೊಂದಿದ ಈ ಕೊಳ  ತನ್ನ ಸುತ್ತ ಬೇಲಿ ಹಾಕಿಕೊಂಡು ಎಲೆಮರೆಯಲ್ಲಿನ ಕಾಯಿಯಂತೆ ಕುಳಿತಿದೆ, ಇನ್ನು ಪ್ರವಾಸಿಗರು  ಹಳೇಬೀಡು ನೋಡಿ ಇದರಬಗ್ಗೆ ತಿರುಗಿಯೂ ನೋಡದೆ  ಹೋಗುತ್ತಾರೆ, ಐತಿಹಾಸಿಕ ಕೊಳದ ದರ್ಶನ ಮಾಡಿ ಪುನೀತನಾದೆ ,  ಹೊಟ್ಟೆ ತಾಳ  ಹಾಕುತ್ತಿತ್ತು, ಗಿರೀಶ್ ಮನೆಯ ಬಿಸಿ ಬಿಸಿ ದೋಸೆ ಕೈಬೀಸಿ  ಕರೆಯುತ್ತಿತ್ತು .  {ಗಿರೀಶ್ ಮನೆಯ ಅತಿಥ್ಯದ ಬಗ್ಗೆ ಹಾಗು  ಅಲ್ಲಿನ ಕಾರ್ಯಕ್ರಮ ದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರೆದಿದ್ದೇನೆ } ಕಟ್ ಮಾಡಿದ್ರೆ ಬೆಳವಾಡಿಗೆ  ನಮ್ಮ ಪಯಣ ಸಾಗಿತ್ತು. ......!!

Sunday, December 1, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....4 ಇವರ ಪ್ರೀತಿಗೆ ಬೆಲೆ ಕಟ್ಟಲಾರೆ ... !!


ತೆರೆದಿದೆ ಮನೆ ಓ ಬಾ ಅತಿಥಿ


ಕಳೆದ ಮೂರು ಸಂಚಿಕೆಗಳಲ್ಲಿ  ಮಂಜರಬಾದ್ ಕೋಟೆ , ಬೇಲೂರು , ಹಳೇಬೀಡು , ದರ್ಶನ ಮಾಡಿ  ನನ್ನ  ಮೊದಲನೇ ದಿನ ಪೂರ್ಣಗೊಂಡಿತು , ಹಳೆಬೀಡಿನ  ಸುತ್ತು  ಹಾಕಿ ಬರುವಷ್ಟರಲ್ಲಿ  ಕತ್ತಲಾಗಿತ್ತು,  ಅಷ್ಟರಲ್ಲಿ ಗಿರೀಶ್   ಬನ್ನಿ ನಮ್ಮ ಮನೆಗೆ ಹೋಗೋಣ, ಅಮ್ಮಾ ಕಾಯ್ತಿರ್ತಾರೆ ಅಂದ್ರು .......  ನಮ್ಮ ಕಾರು    ಗಿರೀಶ್ ಮನೆಕಡೆಗೆ  ತಿರುಗಿತು. ...............!! ಹಳೆಬೀಡಿನ ಸಮೀಪದಲ್ಲಿ  ಎರಡು ಕಿ.ಮಿ . ದೂರದಲ್ಲಿರುವ ಸಿದ್ದಾಪುರ    ಎಂಬ ಗ್ರಾಮದಲ್ಲಿ  ಮುಖ್ಯ ರಸ್ತೆಯಲ್ಲಿದೆ ನಮ್ಮ ಗಿರೀಶ್ ಮನೆ , ಅವರ ಮಗನ ಜೊತೆ ಮನೆಗೆ ಆಗಮಿಸಿದ ನನ್ನನ್ನು  ನಗು ಮುಖದಿಂದ  ಸ್ವಾಗತಿಸಿದರು, ಗಿರೀಶ್ ತಾಯಿ.ಅಂದು ರಾತ್ರಿ ಗಿರೀಶ್ ಮನೆಯಲ್ಲಿ  ವಾಸ್ತವ್ಯ .ಆತ್ಮೀಯವಾದ  ವಾತಾವರಣದಲ್ಲಿ  ರಸಕವಳ  ತಯಾರಿಸಿ ಸತ್ಕರಿಸಿದರು  ಗಿರೀಶ್ ತಾಯಿ.ಶ್ರೀಮತಿ : ಮೀನಾಕ್ಷಿ  ಯವರು.   ಬಹಳಷ್ಟು ವಿಚಾರಗಳ  ಮಾತು ಕಥೆ ನಡೆಯಿತು,  ಗಿರೀಶ್ ತೋರಿದ ಕೋಣೆಯಲ್ಲಿ   ಧಣಿದ ದೇಹ  ನಿದ್ರಾದೇವಿಯ  ಲೋಕಕ್ಕೆ ತೆರಳಿತುಸೌದೆ ಒಲೆಯ ಬಿಸಿನೀರು ದೇಹಕ್ಕೆ ಮುದನೀಡಿತ್ತು
ಮುಂಜಾನೆ ಹಕ್ಕಿಗಳ ಹಾಡಿಗೆ ಎಚ್ಚರವಾಯಿತು, ನಿಗದಿತ ಕಾರ್ಯಕ್ರಮದಂತೆ ಮುಂಜಾನೆಯೇ ಎದ್ದು  ಪುಷ್ಪಗಿರಿ , ಹಾಗು ಹುಲಿಕೆರೆ ಕೊಳಕ್ಕೆ ತೆರಳಬೇಕಾಗಿದ್ದ ಕಾರಣ  , ಗಿರೀಶ್ ಮುಂಜಾನೆಯೇ ಎದ್ದು  ಸೌದೆಯ ಒಲೆಯಲ್ಲಿ  ಬಿಸಿನೀರು  ಕಾಸಿದರು,  ಚುಮು, ಚುಮು ಚಳಿಯಲ್ಲಿ   ಸೌದೆ ಒಲೆಯ ಬಿಸಿನೀರ ಸ್ನಾನ ದೇಹಕ್ಕೆ ನವ ಚೈತನ್ಯ ನೀಡಿತ್ತು,  "ಪುಷ್ಪಗಿರಿ ಹಾಗು ಹುಲಿಕೆರೆ ಕಲ್ಯಾಣಿ " ಭೇಟಿಗೆ  ಹೊರಟೆವು . [ ಈ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ ]  ವಾಪಸ್ಸು  ಬಂದ ನಮಗೆ  ಅಡಿಗೆ ಮನೆಯಿಂದ   ಚರ್  ಚುರ್ ಅಂತಾ ಶಬ್ದ ಕೇಳಿತ್ತು,  ಬೇಗ ಬನ್ನಿ ತಿಂಡಿ ತಿನ್ನೋಕೆ ಅಂತಾ ಗಿರೀಶ್ ತಾಯಿಯವರ ಕರೆ.


ಬಿಸಿ ಬಿಸಿ ದೋಸೆಗೆ  ಪ್ರೀತಿಯ ಸ್ಪರ್ಶಬಿಸಿ ಬಿಸಿ ದೊಸೆ ಗಳಿಗೆ  ಪ್ರೀತಿಯ ಸ್ಪರ್ಶ ನೀಡಿ  ನಮ್ಮ ಪ್ಲೇಟ್ ಗಳಿಗೆ ಹೊಗೆಯಾಡುತ್ತಿದ್ದ  ಬಿಸಿ  ಬಿಸಿ ದೋಸೆಗಳನ್ನು ರವಾನೆ ಮಾಡುತ್ತಿದ್ದರು ಗಿರೀಶ್ ತಾಯಿಯವರು,  ನಮಗರಿವಿಲ್ಲದೆ   ಐದಾರು  ಬಿಸಿ ಬಿಸಿ ದೋಸೆಗಳನ್ನು  ಚಟ್ನಿ ಹಾಗು ಪಲ್ಯದೊಡನೆ  ಖತಂ  ಗೊಳಿಸಿದೆವು . ನಂತರ ಕಾಫಿ ಕುಡಿದು, ಹೊರಗೆ ಬಂದ  ನನಗೆ  ಅಚ್ಚರಿ ನನ್ನ ಬಾಲ್ಯದ  ಹಳ್ಳಿಯ ಮನೆಯ ವಾತಾವರಣ  ನೆನಪಿಸುವ ಹಿತ್ತಲು  ಕಾಣಿಸಿತು .


ಚಪ್ಪರದ ಅವರೆಕಾಯಿಮೊದಲು ನನ್ನ ಗಮನ ಸೆಳೆದದ್ದು  ಚಪ್ಪರದ ಅವರೆಕಾಯಿ ಅಂಬು  ಸನಿಹದ ಮರವನ್ನು ತಬ್ಬಿ  ಹಸಿರು ಚಪ್ಪರವಾಗಿತ್ತು, ಚಪ್ಪರದ  ಅವರೆಕಾಯಿ ಗಿದದಲ್ಲಿನ ಹೂ ಹಾಗು ಕಾಯಿ ನೋಡಿ ನನ್ನ ಬಾಲ್ಯಕ್ಕೆ ಜಾರಿ ಹೋದೆ, ಚಿಕ್ಕ ವಯಸ್ಸ್ನಲ್ಲಿ  ನಾನು ಬೆಳೆದದ್ದು ಹಳ್ಳಿಯಲ್ಲಿ,  ನಮ್ಮ ಮನೆಯ ಹಿಂದೆ ದೊಡ್ಡ ಹಿತ್ತಲು ಇತ್ತು, ಅದರಲ್ಲಿ ನಮ್ಮದೇ ಕೈತೋಟ ಮಾಡಿ ಕೊಂಡಿದ್ದೆವು , ಚಪ್ಪರದ ಅವರೆಕಾಯಿ ಅಂಬು  ಮರವನ್ನು ತಬ್ಬಿ ಬೆಳೆದು  ಹಸಿರ ಚಪ್ಪರ ಆಗುತ್ತಿತ್ತು,  ಅವರೆಕಾಯಿ ಕೀಳಲು  ಮರ ಹತ್ತಿ  ಅವರೆಕಾಯಿ ಕೀಳುವಾಗ  ಅದರಲ್ಲಿನ ಸೋನೆ ವಾಸನೆ ಘಂ ಅಂತಾ ಮಜಾ ಕೊಡುತ್ತಿತ್ತು,  ಕೆಲವೊಮ್ಮೆ ದಪ್ಪ ದಪ್ಪ ಹಸಿರು ಹುಳುಗಳನ್ನು, ಕಂಡು, ದೊಪ್ ಅಂತಾ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡದ್ದೂ ಉಂಟು . ಈ  ಅಂಬಿನ   ಹೂಗಳನ್ನು ಕಂಡರೆ  ಚಿಟ್ಟೆಗಳಿಗೆ  ಬಹಳ ಪ್ರೀತಿ . ಇಲ್ಲಿನ ಈ ಚಪ್ಪರದ ಅವರೆಕಾಯಿ  ಅಂಬು  ನನ್ನನ್ನು ಬಾಲ್ಯದ ದಿನಕ್ಕೆ ಕರೆದುಕೊಂಡು ಹೊಗಿತ್ತು.


ವ್ಯವಸಾಯ ಗಾರರ ಮನೆಯ ಆಭರಣ

ಮನೆಯ ಹಿತ್ತಲಿನಲ್ಲಿ ನನ್ನ  ಅಲೆದಾಟ  ನಡೆದಿತ್ತು,ಬದನೆ ಗಿಡ, ಬೆಂಡೆ ಕಾಯಿ ಗಿಡ, ಮಲ್ಲಿಗೆ ಅಂಬು  ಮುಂತಾದ ತರಕಾರಿ, ಹಾಗು ಹೂವಿನ ಗಿಡಗಳ  ನಡುವೆ ಮಗುವಂತೆ  ಅಲೆದಾಡಿದೆ , ಅಷ್ಟರಲ್ಲಿ ಗಿರೀಶ್ ಹಾಗು ಅವರ ತಾಯಿ ಬಂದು, ಮನೆಯ ಸುತ್ತಾ ಬೆಳದಿದ್ದ  ಗಿಡಗಳ  ಬಗ್ಗೆ  ಅಕ್ಕರೆಯಿಂದ ಮಾಹಿತಿ ಕೊಟ್ಟರು, ಸನಿಹದಲ್ಲೇ  ಎರಡು ಎತ್ತುಗಳು ಹಾಗು ಟೈರ್ ಗಾಡಿ ಕಾಣಿಸಿತು,  ನಾನು ಮೂರು, ನಾಲ್ಕನೇ ತರಗತಿಯಲ್ಲಿರುವಾಗ , ನಮ್ಮ ಮನೆಯ ತಿಪ್ಪೆಯಿಂದ  ಗದ್ದೆಗೆ ಗೊಬ್ಬರ ಸಾಗಿಸಲು ಇಂತಹ ಎತ್ತಿನ ಗಾಡಿ  ಹೊಡೆಯುತ್ತಿದ್ದ ಬಗ್ಗೆ  , ಗಾಡಿ ಹೊಡೆಯುವಾಗ  ರಾಜನಂತೆ ಜಂಭ ದಿಂದ ಪೋಸ್ ಕೊಡುತಿದ್ದ  ದಿನಗಳ ನೆನಪಾಯಿತು, ಹೌದು ಪ್ರತೀ ವ್ಯವಸಾಯ ಮಾಡುವ ಮನೆಗಳ ಆಭರಣಗಳು ಎತ್ತು, ಗಾಡಿ, ನೇಗಿಲು, ಮುಂತಾದವು . ಆದರೆ ಇಂದಿನವರಿಗೆ ಇದರ ಬಗ್ಗೆ  ಇದರ ಮಹತ್ವ ತಿಳಿಯದ ಬಗ್ಗೆ  ನೋವಾಯಿತು .


ನಮ್ ಮನೆ ಅಡಿಗೆ ಮನೆ ಹೀಗಿದೆ ನೋಡಿ

 ಗಿರೀಶ್ ತಾಯಿಯವರ ಜೊತೆ ಮಾತನಾಡುತ್ತ ಇರಲು ಬಹಳಷ್ಟು ವಿಚಾರಗಳು ವ್ಯವಸಾಯದ ಬಗ್ಗೆ ಬಂತು, ಅದರಲ್ಲೂ ಅವರಿಗಿರುವ ಸಾವಯವ ಕೃಷಿಯ ಕಲ್ಪನೆ ಅದ್ಭುತ , ಇವರು ಮನೆಯಲ್ಲಿ ಗೋಬರ್ ಗ್ಯಾಸ್ ಬಳಸಿ  ಇಂದನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ , ಆದರೆ ಗೋಬರ್ ಗ್ಯಾಸ್  ತಯಾರಿಸಲು  ಅಗತ್ಯವಾದ  ಸಲಕರಣೆಗಳನ್ನು  ಸ್ಥಳೀಯ ಸಾಮಗ್ರಿ ಬಳಸಿ  ಅನಗತ್ಯ ವೆಚ್ಚವನ್ನು ಕಡಿಮೆ ಮಾಡಿದ್ದಾರೆ , ಇವರ  ಸಾಧನೆ ಕಂಡು ಇವರನ್ನು ಹಲವು  ಕೃಷಿ ಮೇಳಕ್ಕೆ  ಇವರನ್ನು ಆಹ್ವಾನಿಸಿ  ಇವರಿಂದ ಮಾಹಿತಿಯನ್ನು  ಪಡೆದಿರುವುದು ತಿಳಿದು ಬಂತು , ಇವರ ಕೃಷಿ  ತಾಂತ್ರಿಕತೆಯ  ಜ್ಞಾನ ನೋಡಿ ಬೆರಗಾದೆ .  ನನಗೂ ಬಹಳಷ್ಟು ಮಾಹಿತಿ ತಿಳಿದು  ಬಂತು .


ಪುಟ್ಟ ಗಿರೀಶ


 ಅಷ್ಟರಲ್ಲಿ ಗಿರೀಶ್ ತಂದೆಯವರು ಶ್ರೀ  ಸೋಮಶೇಖರ್  ಅವರು ನಮ್ಮನ್ನು ಸೇರಿ ಕೊಂಡರು ಮತ್ತಷ್ಟು ಮಾತು ಕಥೆ ನಮ್ಮೆಲ್ಲರ ಪರಿಚಯ ಅಯಿತು. ಮನೆಯಲ್ಲಿ ಹಾಗೆ ಕಣ್ಣು ಹಾಯಿಸಿದೆ  ಅಲ್ಲೊಂದು ಮಗುವಿನ ಚಿತ್ರ ಕಂಡು ಹತ್ತಿರ ಹೋದೆ, ಅಷ್ಟರಲ್ಲಿ ಗಿರೀಶ್ ಅಪ್ಪ "ಸಾರ್ ಅದು ನಮ್ಮ ಗಿರೀಶ್ ದು" ಅಂದ್ರು,  ಮುದಾಗಿದ್ದ  ಆ ಮಗುವಿನ ಫೋಟೋ ನಮ್ಮ ಗಿರೀಶ್  ಸೋಮಶೇಖರ್  ರ ಬಾಲ್ಯದ ಚಿತ್ರ ನೀಡಿತ್ತು . ಹಾಗೆ ಮುಂದಿನ ಕಾರ್ಯಕ್ರಮದ ಬಗ್ಗೆ ನಮ್ಮ ಲಗ್ಗೇಜ್  ಪ್ಯಾಕ್  ಮಾದತೊದಗಿದೆ. ಅಷ್ಟರಲ್ಲಿ "ಬಾಲೂ ಸಾರ್ ಬನ್ನಿ ನಮ್ಮ ತೋಟಕ್ಕೆ ಹೋಗೋಣ" ಅಂತಾ ಆತ್ಮೀಯ ಕರೆ ಗಿರೀಶ್  ಸೋಮಶೇಖರ್  ಕಡೆಯಿಂದ ,

ತೆಂಗಿನ ತೋಟದ  ನೋಟ

  ಸೀನ್ ಕಟ್ ಮಾಡಿದ್ರೆ ಗಿರೀಶ್ ತೋಟದೊಳಗೆ ಹೆಜ್ಜೆ ಹಾಕುತ್ತಿದ್ದೆ, ಗಿರೀಶ್, ಹಾಗು ಅವ್ರ ತಂದೆ ತಾಯಿ  ತಮ್ಮ ತೋಟದ ಪರಿಚಯ ಮಾಡಿ ಕೊಡುತ್ತಿದ್ದರು , ಮಣ್ಣಿನ ಫಲವತ್ತತೆ, ಬೆಳೆಗಳ  ಬದಲಾವಣೆ, ಮಾರುಕಟ್ಟೆ , ಮುಂತಾದ ವಿಚಾರಗಳ ಬಗ್ಗೆ ಒಳ್ಳೆಯ ಮಾಹಿತಿ ಸಿಕ್ಕಿತು, ತೋಟದ ಸುತ್ತಾಟ  ಮನಕೆ ಮುದ ನೀಡಿತ್ತು,


ಮನೆಗೆ ಬಂದ  ಅತಿಥಿ  ಗಿಡ ನೆಡಲು ಪ್ರೇರಣೆ

ಪ್ರೀತಿಯ ಸಪೋಟ  ಗಿಡವೇ  ಚೆನ್ನಾಗಿ ಬಾಳು


 ಅಷ್ಟರಲ್ಲಿ  "ಬನ್ನಿ ಸರ್ ನಮ್ಮ ತೋಟದಲ್ಲಿ  ಒಂದು  ಗಿಡ  ನೆಡೋರಂತೆ ", ಅಂತಾ ಗಿರೀಶ್ ಮನೆಯವರ  ಪ್ರೀತಿಯ ಆಗ್ರಹ , ಮನಕೆ ಒಂದು ತರಹ ಸಂತಸ , ಇವರಿಗ್ಯಾಕೆ ನನ್ನ ಬಗ್ಗೆ ಇಷ್ಟು ಪ್ರೀತಿ ಎಂದು ಒಂದು ಕ್ಷಣ  ಅಚ್ಚರಿಗೊಂಡೆ , ಅಷ್ಟರಲ್ಲಿ ಸಪೋಟ ಗಿಡ ಬಂತು, ಗಿರೀಶ್ ತಂದೆಯವರ  ಸಹಾಯದಿಂದ  ನನ್ನ ಭೇಟಿಯ ನೆನಪಿಗಾಗಿ  ಸಪೋಟ ಗಿಡ ನೆಟ್ಟೆ , ಹಾಗು ಪ್ರೀತಿಯಿಂದ  ಗಿಡವನ್ನು  ಪ್ರಾರ್ಥಿಸುತ್ತಾ  ಕೊಡದಲ್ಲಿ ತಂದಿದ್ದ  ನೀರನ್ನು ಹನಿಸಿದೆ .  ಮನದಲ್ಲಿ ಒಹ್ ದೇವರೇ  ದಯವಿಟ್ಟು ಈ ಗಿಡ ಚೆನ್ನಾಗಿ ಬೆಳೆದು ಫಲ ಕೊಡುವಂತೆ ಮಾಡಪ್ಪಾ ಅಂತಾ ಮನದಲ್ಲಿ ಪ್ರಾರ್ಥಿಸಿದೆ . ಬಹಳ ಖುಷಿಯಿಂದ ಮನ ನಲಿದಾಡಿತು .[ ಇತ್ತೀಚಿಗೆ ಗಿರೀಶ್ ಭೇಟಿಯಾದಾಗ  ಸಾರ್ ನೀವು ನೆಟ್ಟ ಸಪೋಟ ಗಿಡ  ಕಾಯಿ ಬಿಟ್ಟಿದೆ ಎಂಬ ಸಿಹಿ ಸುದ್ದಿ ನೀಡಿದ್ದರು ]


ಶೀರ್ಷಿಕೆ ಸೇರಿಸಿ

ಗಿರೀಶ್ ಊರಿನ ಅನುಭವ ಬಹಳ ಕಾಲ ಅಚ್ಚಳಿಯದೆ ಮನದಲ್ಲಿ ಉಳಿಯುವ ಎಲ್ಲ ಘಟನೆಗಳು ನಡೆದಿದ್ದವು , ಗಿರೀಶ್ ತಂದೆ ತಾಯಿಯವರ ಜೊತೆ ಒಂದು ಫೋಟೋ ತೆಗೆಸಿಕೊಂಡ ನಾನು ಧನ್ಯನಾದೆ, ಅವರ ಪ್ರೀತಿಯ ಶರಧಿಯಲ್ಲಿ ಮಿಂದು ಪಾವನನಾದೆ , ಇವರ ಪ್ರೀತಿಗೆ  ಎಷ್ಟು ಬೆಲೆ ...?? ಊ  ಹು  ಬೆಲೆಕಟ್ಟಲಾರೆ . ಬ್ಲಾಗ್ ಮೂಲಕ   ಇಂತಹ ಹಲವು ಗೆಳೆಯರನ್ನು  ಪಡೆದ  ನಾನು ಧನ್ಯ ಧನ್ಯ ಅಂತ ಮನ ಉಲ್ಲಾಸದಿಂದ  ಕುಣಿದಾಡಿತ್ತು , ದೂರದಲ್ಲಿ   ಅಡಿಕೆ ತೆಂಗಿನ  ಮರಗಳು  ಜೋಲಾಡುತ್ತಾ  ನಿಂತಿದ್ದವು . ಗಿರೀಶ್ ಮನೆಯವರ ಅನುಮತಿ ಪಡೆದು ಮುಂದೆ ಸಾಗಿದೆವು .... !! ಅಪರೂಪದ ಕ್ಷಣಗಳನ್ನು ಸೆರೆ ಹಿಡಿದ ನನ್ನ ಕ್ಯಾಮರ ನನ್ನತ್ತ ಕಣ್ ಹೊಡೆದು  ನಕ್ಕಿತ್ತು.