Sunday, July 16, 2017

ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ. .........! ಸೋಲು ಎಂದಿಗೂ ಸಾವಿಗೆ ದಾರಿಯಲ್ಲ

ಹಾರುವ ಹಕ್ಕಿಗೂ ಸಹ  ಬದುಕಿನ  ಸತ್ಯದ ಅರಿವಿದೆ 



ಮಸ್ಕಾರ  ಎಲ್ಲರಿಗೂ  , ಮತ್ತೊಮ್ಮೆ ಬ್ಲಾಗ್  ಕಡೆಗೆ  ಮುಖ ಮಾಡಿದ್ದೇನೆ,  ನಮ್ಮ ಮಾತುಗಳನ್ನು , ನಮ್ಮ ವಿಚಾರಗಳನ್ನು  ಎಲ್ಲರೊಡನೆ  ಹಂಚಿಕೊಂಡಾಗ  ಆಗುವ ತೃಪ್ತಿಯೇ ಬೇರೆ. ಜೀವನಪಯಣದಲ್ಲಿ  ಒಮ್ಮೊಮ್ಮೆ  ಏರು ಪೇರುಗಳು  ಇರುತ್ತವೆ  ಅದಕ್ಕೆ ಜೀವನ ಅನ್ನೋದು, ಜೀವನದಲ್ಲಿ  ಕಹಿಯ ರುಚಿ  ಗೊತ್ತಿಲ್ಲದಿದ್ದರೆ  ಸಿಹಿಯ ಬೆಲೆ ತಿಳಿಯೋದು  ಹ್ಯಾಗೆ ಆಲ್ವಾ...?  ಅದೇ ರೀತಿ  ಜೀವನದಲ್ಲಿ  ಸೋಲಿನ ರುಚಿಯ ಅನುಭವ ಪಡೆಯದೇ   ಗೆಲುವಿನ  ರುಚಿ  ಸಿಹಿಯಾಗಿರಲು ಸಾಧ್ಯವಿಲ್ಲಾ.....!   "ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ. .........! ಸೋಲು ಎಂದಿಗೂ ಸಾವಿಗೆ ದಾರಿಯಲ್ಲ"  ಇವೆಲ್ಲಾ  ಸತ್ಯಗಳೂ  ಗೊತ್ತಿದ್ದೂ ಸಹ ಒಮ್ಮೊಮ್ಮೆ  ಮನುಷ್ಯ  ತಾಳ್ಮೆಗೆಟ್ಟು  ದುಡುಕಿನ ನಿರ್ಧಾರ ಕೈಗೊಳ್ಳುತ್ತಾನೆ   ಅದಕ್ಕೆ ಬಹಳಷ್ಟು  ಕಾರಣಗಳು ಸಹ ಇರುತ್ತವೆ  ಬದುಕಿನ  ವೈಪಲ್ಯತೆ , ಆಕಸ್ಮಿಕ ಘಟನೆಗಳು,  ಅಸಹಾಯಕತೆ, ನೋವು, ಹತಾಶೆ ,  ಸುತ್ತ ಮುತ್ತಲಿನ  ಜನರಿಂದ ಅವಮಾನ , ತನಗೆ ಒದಗಿಬಂದಿರುವ  ಕಷ್ಟಗಳನ್ನು ಪರಿಹರಿಸಿಕೊಳ್ಳಲು  ಯಾವುದೇ ದಾರಿ ಕಾಣದಾಗ , ಬಂಧು ಬಳಗಗಳಿಂದ , ಗೆಳೆಯರಿಂದ ತಾತ್ಸಾರಕ್ಕೆ ಸಿಲುಕಿದಾಗ , ಎಲ್ಲರೂ ತನ್ನನ್ನು ನಿರ್ಲಕ್ಷ   ಮಾಡ್ತಾ  ಇದ್ದಾರೆ  ನನ್ನ ಗೋಳನ್ನು  ಕೇಳುವವರು ಯಾರೂ ಇಲ್ಲಾ  ಅನ್ನಿಸಿದಾಗ , ಅಸಹನೀಯವಾದ  ಅನಾರೋಗ್ಯ ಗಳಿಂದ  ನೋವಿನಿಂದ  ಬಳಲುವಾಗ , ಹಾಗು ಇಂತಹ ಇನ್ನೂ ಬಹಳಷ್ಟು  ವಿವಿಧ ಕಾರಣಗಳಿಂದ  ತನ್ನ  ಸಾವನ್ನು ತಾನೇ ಬಯಸಿಕೊಳ್ಳುತ್ತಾನೆ, 



    ಸಿನಿಮ ಜಗತ್ತಿನ  ಹೀರೋ  ಆಗಿದ್ದವನೂ ಸಹ  ಜೀವನದಲ್ಲಿ ಸೋತಿದ್ದ [ ಚಿತ್ರ ಕೃಪೆ  ಶ್ರೀ.ಬಿ.ಸಿ. ನಾಗೇಂದ್ರ ] 


ಹೌದಲ್ವಾ  ಎಲ್ಲರಿಗೂ ಒಮ್ಮೊಮ್ಮೆ ಹೀಗೆ ಅನ್ನಿಸಿರುತ್ತದೆ, ಕೆಲವರು  ತಮ್ಮ ಮನೋಬಲದಿಂದ ಇಂತಹ ಪರಿಸ್ಥಿತಿಗಳನ್ನು  ಗೆದ್ದುಬರುತ್ತಾರೆ, ಮತ್ತೆ  ಕೆಲವರು  ಹತಾಶರಾಗದೆ  ತಮ್ಮ ಆತ್ಮೀಯರ  ಸಲಹೆ ಸಹಾಯ ಪಡೆದು ಜೀವನದ  ಸೋಲನ್ನು  ಗೆದ್ದು ಬರುತ್ತಾರೆ , ಆದರೆ  ಇದ್ಯಾವುದು ಸಿಗದೇ ನಿರ್ಲಕ್ಷಕ್ಕೆ  ಒಳಗಾಗಿ  ಬದುಕನ್ನು  ಕಳೆದುಕೊಳ್ಳುವ  ಜನ  ನಮ್ಮ  ಆತ್ಮೀಯರಲ್ಲೇ ಇರುತ್ತಾರೆ , ಅಥವಾ  ನಮ್ಮ ಸುತ್ತ ಮುತ್ತಲೇ ಇರುತ್ತಾರೆ  , ಇಂತಹವರಿಗೆ  ಆತ್ಮೀಯರಾಗಿ  ತಮ್ಮನ್ನು ಸಂತೈಸುವ ಒಂದು  ಒಳ್ಳೆಯ ಹೃದಯವಂತ  ವ್ಯಕ್ತಿ,  ತಮ್ಮ  ಸಮಸ್ಯೆಗಳಿಗೆ/ ನೋವಿನ  ಮಾತುಗಳಿಗೆ  ಕಿವಿಯಾಗಿ  ಹಾಗು ಅದಕ್ಕೆ  ಉತ್ತರವಾಗಿ   ಸ್ಪಂದಿಸುವ  ವ್ಯಕ್ತಿಗಳ  ಅವಶ್ಯಕತೆ ಇರುತ್ತದೆ, ಆದರೆ  ಗೊತ್ತಿದ್ದೋ, ಗೊತ್ತಿಲ್ಲದೆಯೋ, ಅಥವಾ ದಿನಾ ಸಾಯೋವವರಿಗೆ  ಅಳುವವರು ಯಾರು  ಎಂಬ  ದೋರಣೆಯಿಂದ ಅವರನ್ನು ನಿರ್ಲಕ್ಷ  ಮಾಡುವ ಕಾರಣ, "ಅಯ್ಯೋ ಇಂದಿನ  ಬದುಕಿನ ಜಂಜಾಟದಲ್ಲಿ  ನಮ್ಮದೇ ನಮಗೆ ಇನ್ನೂ ಇದನ್ನೆಲ್ಲಾ  ಯಾರ್ ಮಾಡ್ತಾರೆ  ಹೋಗ್ರೀ...."  "ಅವರು ಮಾಡಿದ ಪಾಪ ಅವರು ಅನುಭವಿಸಲಿ ನಮಗ್ಯಾಕೆ  ಇದೆಲ್ಲಾ ಉಸಾಬರಿ "   ಅನ್ನುವ  ಮನಸ್ಥಿತಿಗಳಿಂದ  ಅ ಸುತ್ತ ಮುತ್ತ ಇರುವ  ಹತಾಶ ಜೀವಗಳಿಗೆ  ಬದುಕಿನ ದಾರಿಯನ್ನು  ಮತ್ತೆ ತೋರಿಸುವ   ಕೆಲಸಗಳನ್ನು  ನಾವು ಮಾಡುತ್ತಿಲ್ಲ  ಅನ್ಸುತ್ತೆ. ಹಾಗಾಗಿ ಕೆಲವೊಮ್ಮೆ  ಗೊತ್ತಿಲ್ಲದೆಯೋ / ಗೊತ್ತಿದ್ದೋ  ನಿರ್ಲಕ್ಷಕ್ಕೆ  ಒಳಗಾಗಿ   ಇಂತಹವರು  ಬದುಕನ್ನು  ಅಂತ್ಯ ಮಾಡಿಕೊಂಡಾಗ  ನಾವೇ   ವೇದಾಂತ  ಹೇಳುತ್ತಾ  ಸತ್ತವನನ್ನು  ಬಯ್ಯುತ್ತೇವೆ. 



ಜಗತ್ತನ್ನೇ ನಗಿಸಿದವನು ಸಹ  ಜೀವನದಲ್ಲಿ   ಬಹಳ  ನೋವು ತಿಂದು  ಅತ್ತಿದ್ದ [ ಚಿತ್ರ ಕೃಪೆ  ಅಂತರ್ಜಲ] 



ಬದುಕು ಅನ್ನೋದು  ದಿನದಿಂದ  ದಿನಕ್ಕೆ , ವರ್ಷದಿಂದ ವರ್ಷಕ್ಕೆ  ಬದಲಾಗುತ್ತಿರುತ್ತದೆ, ವೈಜ್ಞಾನಿಕ  ಆವಿಷ್ಕಾರಗಳು  ಹೆಚ್ಚಿದಂತೆ  ಜೀವನ  ಸುಖವನ್ನು ಬಯಸುತ್ತದೆ , ಅದಕ್ಕೆ ತಕ್ಕಂತೆ ಜೀವನ ಶೈಲಿಯೂ ಸಹ  ಬದಲಾಗಿ  ಬದುಕಿನ ಮೇಲೆ ಒತ್ತಡ  ಜಾಸ್ತಿಯಾಗುತ್ತಾ  ವಾಸ್ತವತೆಯನ್ನು ಅರ್ಥಮಾಡಿಕೊಳ್ಳದೆ  ಮನುಷ್ಯ  ಕೆಲವೊಮ್ಮೆ  ಬದುಕಿನಲ್ಲಿ   ಎಡವುತ್ತಾನೆ, ಇದಕ್ಕೆ ಇಂತಹದೆ ಕಾರಣಾ  ಅಂತಿಲ್ಲ , ಯಾವ ಕಾರಣ ಬೇಕಾದರೂ ಆಗಿರಬಹುದು. ಆದರೆ  ತನ್ನ  ಸುತ್ತ ಮುತ್ತಲಿನ ವಾಸ್ತವತೆಯನ್ನು  ಅರಿಯದೆ  ಭ್ರಮೆಯಲ್ಲಿ  ಬದುಕಿದಾಗ ಇಂತಹ  ಅಚಾತುರ್ಯ  ಆಗಿಬಿಡುತ್ತದೆ . ಬದುಕಿನ ನಿರ್ವಹಣೆ ಬಗ್ಗೆ ಯಾವ ಶಾಲೆ/ ಕಾಲೇಜುಗಳು/  ವಿಶ್ವ ವಿಧ್ಯಾಲಯಗಳೂ ಕೂಡ  ನಮಗೆ ಕಲಿಸಿಕೊಡಲಾರವು,  ಇದಕ್ಕೆ ಸಾಕ್ಷಿಯಾಗಿ ನಮ್ಮ ಸುತ್ತ ಮುತ್ತಲಿನ  ಹಲವಾರು  ದೊಡ್ಡ  ದೊಡ್ಡ ಪದವಿ ಪಡೆದ  ಜನ  ಜೀವನ ನಿರ್ವಹಣೆಯಲ್ಲಿ ಸೋತಿರೋದನ್ನು  ಗಮನಿಸಬಹುದು .ನಮ್ಮ ಜೀವನ ಹಸನಾಗಲು  ನಮ್ಮ ಜೀವನದಲ್ಲಿ  ಅನುಭವಿಸುವ ಸೋಲುಗಳೇ   ವಿಶ್ವ ವಿಧ್ಯಾನಿಲಯಗಳಾಗಿ   ಪಾಠ ಕಲಿಸುತ್ತವೆ,   ಆದರೆ  ಜೀವನದ ಸೋಲನ್ನು  ಒಪ್ಪಿಕೊಳ್ಳುವ , ವಿಮರ್ಶಿಸುವ , ಅದಕ್ಕೆ   ಉತ್ತರ ಕಂಡುಕೊಳ್ಳುವಲ್ಲಿ  ನಾವು ಬಹಳಷ್ಟು   ವಿಚಾರಗಳನ್ನು  ಬದುಕಿನಲ್ಲಿ ಕಲಿಯಬೇಕಿದೆ, ಹಾಗು ನಮ್ಮ ಆತ್ಮೀಯರಿಗೂ ಸಹ  ಕಲಿಸಬೇಕಿದೆ. 




ಚಾರ್ಲ್ಸ್  ದಾರ್ವಿನ್  ಸಿದ್ದಾಂತವನ್ನು  ಬಿಟ್ಟಿಲ್ಲ  ಬದುಕಿನ ಸತ್ಯ 


ನಮ್ಮ ಆತ್ಮೀಯರಲ್ಲಿ ಕಂಡುಬರುವ  ಹತಾಶ ವ್ಯಕ್ತಿಗಳು ಎದುರಿಸುತ್ತಿರುವ  ಸಮಸ್ಯೆ ಗಳಿಗೆ  ಒಂದು ಪ್ರೀತಿಯ  ಮಾತು, ಒಂದು  ಸಾಂತ್ವನದ ಮಾತು, "ನೀನು ಹೆದರಬೇಡ  ಮುನ್ನುಗ್ಗು" ಎಂಬ ಭರವಸೆ, "ಹೆದರ ಬೇಡ  ಧೈರ್ಯವಾಗಿ ನಿನ್ನ ಮನಸಿನ ನೋವನ್ನು ನನ್ನಲ್ಲಿ  ಹೇಳಿಕೋ  ಇಬ್ಬರೂ ಸೇರಿ ಉತ್ತರ ಹುಡುಕೋಣ ಸಮಸ್ಯೆಗೆ"   ಅನ್ನೋ  ಮಾತುಗಳು  ಹಲವಾರು ವ್ಯಕ್ತಿಗಳ ಬದುಕಿಗೆ  ಸಂಜೀವಿನಿಯಾಗಿ  ಅವರ ಬದುಕು ಹಸನಾಗಿಬಿಡುತ್ತದೆ . ... ಆದರೆ  ನಾವು ಮಾಡ್ತಿರೋದೆನು.....?    ಯಾರೋ  ಆತ್ಮೀಯರು  / ನೆಂಟರು/ ಗೆಳೆಯರು,  ಬದುಕಿನಲ್ಲಿ  ಅಸಹಾಯಕರಾಗಿ  ಹತಾಶರಾದಾಗ   ಅವರ ತಪ್ಪುಗಳನ್ನು ಟೀಕಿಸುತ್ತಾ , ಅವರ ಜೀವನ ಶೈಲಿಯನ್ನು ವಿಮರ್ಶೆ ಮಾಡುತ್ತಾ , ಅವರ  ಬಗ್ಗೆ  ಅಪಹಾಸ್ಯ  ಮಾಡುತ್ತಾ   ನಾವೇ ಗ್ರೇಟ್  ಅನ್ನೋಹಾಗೆ ವರ್ತಿಸೋದು , ಹತಾಶರಾಗಿ ನೋವು ಅನುಭವಿಸುವವರನ್ನು     ನಿರ್ಲಕ್ಷ  ಮಾಡೋದು  ಯಾವ ನ್ಯಾಯ ಆಲ್ವಾ...  ! ಇಂತಹ ಗುಣಗಳು  ನಮಗೆ ಸಹಜವಾಗಿ ಬದುಕಿನಲ್ಲಿ ಬಂದುಬಿಟ್ಟಿರುತ್ತವೆ  ಆದರೆ ಇದನ್ನು   ಸರಿಪಡಿಸ್ಕೊಂಡು  ನಿಂತಾಗ  ಇಂತಹ ವಿಚಾರಗಳಿಗೆ ಉತ್ತರ ಸಿಗುತ್ತವೆ.  ಬನ್ನಿ ನಾವೆಲ್ಲಾ  ಹೊಸ ದಿಕ್ಕಿನಲ್ಲಿ ಸಾಗೋಣ.   ''ಬದುಕಿನಲ್ಲಿ ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ'' . .........!   ''ಸೋಲು ಎಂದಿಗೂ ಸಾವಿಗೆ ದಾರಿಯಲ್ಲ'' ಎಂಬ ಸತ್ಯವನ್ನು ಸಾರೋಣ,  ಹತಾಶ ಮನಸುಗಳಿಗೆ  ಬದುಕಿನ ಅರ್ಥ ತಿಳಿಸೋಣ,  ಹತಾಶ ಮನಸುಗಳನ್ನು ಸಾಂತ್ವನ ಗೊಳಿಸೋಣ,  ಎಲ್ಲರ ಬದುಕು ಹಸನಾಗಲೆಂದು   ಹಾರೈಸೋಣ  ಏನಂತೀರಾ ... ?



  

3 comments:

venki said...

soooooooooper and well said, Balu sir !!! one of the best and most encouraging write-ups i have across !! too good and keep up the good job, sir !

Badarinath Palavalli said...

ಸರಳ ನಿರೂಪಣೆಯಲ್ಲಿ ಸೋತ ಬದುಕಿಗೆ ಗ್ಲೂಕೋಸ್ ಡೋಸೇಜಿನಂತಹ ಲೇಖನವಿದು.
ಕಡೆಗಣನೆಗೆ ಒಳಗಾಗುವ ಮಾನವನಿಗೆ ಆ ಹೊತ್ತಿಗೆ ಹೆಗಲು ನೀಡುವವರೇ ಅಸಲೀ ಪರಮಾತ್ಮರು.
ಎಲ್ಲ ಮುಗಿಯಿತೆನ್ನುವ ಗಳಗೆಯಲ್ಲೇ ಆಸರೆಯಾಗುವ ಅಂತಹ ಮಹಾನ್ ವ್ಯಕ್ತಿತ್ವಗಳಿಗಿಗೆ ಸಲಾಂ.
ಉತ್ತಮ ಮನಪರಿವರ್ತನೆಯ ಲೇಖನವಿದು.

Ittigecement said...

ಬಾಲಣ್ಣಾ... ಸ್ಪೂರ್ತಿ ಕೊಡುವಂಥಹ ಲೇಖನವಿದು....