Sunday, June 5, 2016

ಕಾವೇರಿ ನದಿಯ ಮಡಿಲ ಈ ಊರಿನಲ್ಲಿ ಸಪ್ತ ಸ್ವರ ದೇವತೆಗಳು ನೆಲಸಿದ್ದಾರೆ .....!

ಸಂಗೀತವಿಲ್ಲದ   ಸ್ಥಳ  ಯಾವುದೂ ಇಲ್ಲ



ಮೊನ್ನೆ  ಹಾಗೆ ನನ್ನ  ಹಳೆಯ ಚಿತ್ರಗಳ  ಸರಣಿಯನ್ನು ನೋಡುತ್ತಾ  ಇದ್ದೆ , ಕೆಲವು ಚಿತ್ರಗಳು  ನೆನಪಿನ ಲೋಕಕ್ಕೆ ಕರೆದೊಯ್ದವು , ಅಷ್ಟರಲ್ಲಿ   ಎಲ್ಲಿಂದಲೋ ತೇಲಿ ಬಂತು    '' ಏಳು ಸ್ವರವೂ ಸೇರಿ ಸಂಗೀತವಾಯಿತು,   ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು"    ಎಂಬ ಹಾಡು.  ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು,  ಅರೆ  ಹೌದಲ್ವಾ,  ಸಂಗೀತಕ್ಕೆ   ಏಳು ಸ್ವರ  ಬೇಕೇ ಬೇಕು,     ಇನ್ನು  ವೈಜ್ಞಾನಿಕ  ನಿಯಮಗಳ  ರೀತ್ಯ   ಬಿಳಿಯ ಬಣ್ಣ  ದೊಳಗೆ  ಏಳು  ಬಣ್ಣಗಳು  ಮಿಳಿತಗೊಂಡಿವೆ ,   ನಮ್ಮ ಸುತ್ತ ಮುತ್ತ  ನಡೆಯುವ ಸಾಮಾನ್ಯ  ಕ್ರಿಯೆಗಳು  ನಮ್ಮ  ಅರಿವಿಗೆ ಬರುವುದಿಲ್ಲ , ಆದರೆ ಒಬ್ಬ  ಗೀತ ರಚನೆ ಕಾರ  ಇವನ್ನೆಲ್ಲಾ   ಸೂಕ್ಷ್ಮವಾಗಿ  ಗಮನಿಸಿ  ಹಾಡನ್ನು ರಚನೆ ಮಾಡಿ  ಸಾಮಾನ್ಯ  ಜನರಿಗೆ  ತಲುಪಿಸುತ್ತಾನೆ . ಇಂತಹ ಗೀತೆಗಳಿಗೆ  ಸಂಗೀತದ  ಅಲಂಕಾರ ಮಾಡಿದಾಗ   ಜನರ ಮನಸಿನಲ್ಲಿ   ಅವು  ಅತೀ ಹೆಚ್ಚುಕಾಲ  ಚಿರಾಯುವಾಗಿ  ಉಳಿದು  ಬಿಡುತ್ತವೆ . ಈ ಹಾಡಿನಲ್ಲಿ ಹೇಳುವಂತೆ   ಸಪ್ಥ ಸ್ವರಗಳು   ಅಂದ್ರೆ   ಏನೂ ಅಂತಾ  ಕೇಳುತ್ತೇವೆ ಹೊರತು  ಅದರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ ,

 ಪುರಾತನ   ದೇಗುಲಕ್ಕೆ   ನಿತ್ಯ  ಸಂಗೀತದ  ಅಭಿಷೇಕ  


ಬನ್ನಿ ಸಪ್ತಸ್ವರ  ಗಳ ವಿಚಾರ ತಿಳಿಯೋಣ,  ಮೊದಲನೆಯದಾಗಿ   ಸ್ವರ ಅಂದ್ರೆ   ಮನುಷ್ಯನ  ಬಾಯಿಂದ  ಗಾಳಿಯ ರೂಪದಲ್ಲಿ   ಹೊರಡುವ  ಶಬ್ಧ ತರಂಗದ  ಏರಿಳಿತಗಳ   ಒಂದು ಸ್ವರೂಪ  ಅಷ್ಟೇ.  ಅವು ಕಣ್ಣಿಗೆ ಕಾಣಲಾರವು ಆದರೆ  ಕೇಳಿ ಅನುಭವಿಸಬೇಕಷ್ಟೇ .  ಬಹಳ ಹಿಂದೆಯೇ   ಹೀಗೆ ಹೊರಡಿಸುವ   ಶಬ್ಧಗಳ  ಸ್ವರೂಪ  ಏಳು  ಬಗೆಯದ್ದಾಗಿದೆ  ಎಂಬ  ವಿಚಾರವನ್ನು  ತಿಳಿದು, ಅವುಗಳಿಗೆ   ವಿವಿಧ ರೂಪದ  ಕಟ್ಟುಪಾಡುಗಳನ್ನು   ಹಾಕಿ ನಿಯಮ ಬದ್ದವಾಗಿ  ಸ್ವರಗಳಿಗೆ  ಮನುಷ್ಯನ ಉಸಿರಿನ  ಏರಿಳತಗಳ   ಸಂಯೋಜನೆ  ಮಾಡಲಾಗಿದೆ.  ಆ ನಿಯಮ ಬದ್ದ್ದ  ಸ್ವರಗಳು  ಏಳು   ಬಗೆಯದ್ದಾಗಿದ್ದು   ಅವುಗಳನ್ನು   ಸಂಕ್ಷಿಪ್ತವಾಗಿ ಸ.ರಿ.{ಅಥವಾ  ರೆ},    ಗ. ಮ.ಪ. ಧ. ನಿ. ಎನ್ನುತ್ತಾರೆ   ಈ ಏಳೂ ಸ್ವರಗಳ ವಿಸ್ತೃತ   ಹೆಸರು  ಕ್ರಮವಾಗಿ  1]  "ಸ. " ಎಂದರೆ  ಷಡ್ಜ, 2]   "ರಿ"   ಅಂದರೆ  ರಿಶಭ ,   3]  " ಗ "  ಎಂದರೆ  ಗಾಂಧಾರ  4]  " ಮ "  ಎಂದರೆ  ಮಧ್ಯಮ  5]  "ಪ " ಎಂದರೆ  ಪಂಚಮ  6]  "ಧ"  ಎಂದರೆ  ದೈವತ್     ಹಾಗು 7]  "ನಿ " ಎಂದರೆ  ನಿಶದ್   ಎಂದು  ಕರೆಯುತ್ತಾರೆ,  ಕರ್ನಾಟಕ ಸಂಗೀತದಲ್ಲಿ   "ರಿ"  ಎಂದು ಬಳಸುವ ಸ್ವರವನ್ನು   ಹಿಂದುಸ್ತಾನಿ ಸಂಗೀತದಲ್ಲಿ   "ರೆ "  ಎಂದು ಬಳಸುತ್ತಾರೆ , ಉಳಿದಂತೆ  ಎಲ್ಲಾ ಸ್ವರಗಳ ಉಚ್ಚಾರಣೆ   ಒಂದೇ ತೆರನಾಗಿರುತ್ತವೆ .  ಏಳು ಸ್ವರಗಳಿಗೂ  ಪ್ರಾಣಿ ಪಕ್ಷಿಗಳ  ಹಾಗು ದೇವತೆಗಳ   ನಾಮಕರಣ  ಮಾಡಲಾಗಿದ್ದು,    ಕ್ರಮವಾಗಿ  1]  " ಸ "   ಅಂದರೆ   "ನವಿಲು "  ಹಾಗು ಸ್ವರ   ದೇವತೆ   "ಗಣಪತಿ"    2]  "ರಿ" ಅಂದರೆ    "ಗೂಳಿ"  ಹಾಗು  ಸ್ವರ ದೇವತೆ  "ಅಗ್ನಿ" 3] " ಗ " ಎಂದರೆ   "ಮೇಕೆ " ಸ್ವರ ದೇವತೆ    "ರುದ್ರ"  4]  "ಮ"  ಎಂದರೆ  "ಪಾರಿವಾಳ " ಸ್ವರ ದೇವತೆ   "ವಿಷ್ಣು" 5]  "ಪ" ಎಂದರೆ  ಕೋಗಿಲೆ  ಸ್ವರ ದೇವತೆ  "ನಾರದ" 6]  "ಧ "  ಎಂದರೆ  "ಕುದುರೆ" ಸ್ವರ ದೇವತೆ   "ಸದಾ ಶಿವ"  7]  " ನಿ"  ಎಂದರೆ   "ಆನೆ"   ಸ್ವರ ದೇವತೆ    "ಸೂರ್ಯ"  ಈ ಸಪ್ತ ಸ್ವರಗಳಿಗೆ  ಎಷ್ಟೊಂದು ವಿಶೇಷ  ಇದೆ ಆಲ್ವಾ ...!             ಈ  ದೇಶದಲ್ಲಿ  ನಾವು  ಕೇಳುವ  ಎಲ್ಲಾ  ಬಗೆಯ ಸಂಗೀತಗಳು  ಈ   ಸಪ್ತ ಸ್ವರಗಳ ಅಡಿಪಾಯದ ಮೇಲೆ  ನಿರ್ಮಿತವಾದವು  ಎಂಬ ಮಾತು  ಸುಳ್ಳಲ್ಲ.





ಇನ್ನು  ನಮ್ಮ ದೇಶದ ಸಂಗೀತದಲ್ಲಂತೂ   ಬಹಳಷ್ಟು  ಸಂಶೋಧನೆಗಳಾಗಿ  ವಿಶ್ವಾದ್ಯಂತ  ಸಂಗೀತದ ಕೀರ್ತಿ ಪತಾಕೆ ಹಾರಿಸಲಾಗಿದೆ.  ಹಿಂದೂಸ್ತಾನಿ ಸಂಗೀತದಲ್ಲಿ  ಹಾಗೂ  ಕರ್ನಾಟಕ ಸಂಗೀತದಲ್ಲಿ   ಸಂಗೀತ ಕೃತಿ ರಚಿಸಿದ  ಹಾಡಿದ  ಹಲವಾರು ಮಹನೀಯರು  ಸಂಗೀತಪ್ರಿಯರ  ಮನೆಮಾತಾದರು . ಅಂತೆಯೇ ನಮ್ಮ ದಕ್ಷಿಣ ಭಾರತದಲ್ಲಿಯೂ ಕೂಡ  ಕರ್ನಾಟಕ  ಸಂಗೀತದಲ್ಲಿ  ಹೊಸ  ಹೊಸ ಆವಿಷ್ಕಾರ ಮಾಡಿ  ಕೃತಿ ರಚನೆ ಮಾಡಲಾಯಿತು,  ತ್ಯಾಗರಾಜರು,  ಪುರಂದರ ದಾಸರು,  ಕನಕ ದಾಸರು,  ವಾದಿರಾಜರು,     ಹೀಗೆ ಪಟ್ಟಿ ಬೆಳೆಯುತ್ತಾ    ಸಾಗುತ್ತದೆ . ಮನುಷ್ಯನ  ಜೀವನದ ಜೊತೆಯಲ್ಲೇ  ಸಂಗೀತ  ಸಹ ತನ್ನದೇ ಆದ  ಪಾತ್ರ ವಹಿಸುತ್ತಾ    ಬೆಳೆದು .  ಸಾಮಾಜಿಕ ಜೀವನದ  ಅವಿಬಾಜ್ಯ  ಅಂಗವಾಗಿದೆ .   ಇಷ್ಟೆಲ್ಲಾ   ಮಹತ್ವ ಪಡೆದ   ಸಂಗೀತ  ಸ್ವರಗಳು  ಕಾವೇರಿ ನದಿಯ   ದಡದ  ಒಂದು ಗ್ರಾಮದಲ್ಲಿ   ಬಹಳಷ್ಟು ಮೆರೆದು ಸಂಗೀತ ಸಾಧಕರನ್ನು   ಸೃಷ್ಟಿಸಿ   ಮೆರೆದಿದೆ.  ಇನ್ನೂ ವಿಶೇಷ ಅಂದ್ರೆ   ಸ್ವರ ಸಾಧಕರ   ಅನುದಿನವೂ  ನೆನೆಯಲು ಅನುವಾಗುವಂತೆ   ಸ್ವರ ಮಂದಿರವನ್ನು ಸೃಷ್ಟಿಸಿ     ಸಂಗೀತ ಗ್ರಾಮವೆಂಬ     ಹೆಗ್ಗಳಿಕೆ ಪಡೆದು     "ರುದ್ರ ಪಟ್ಟಣ"  ಅಥವಾ  "ರುದ್ರಪಟ್ಣಂ"  ಎಂಬ ಹೆಸರಿನಲ್ಲಿ  ನಕ್ಷತ್ರವಾಗಿ ಮಿನುಗುತ್ತಿದೆ.







ನಿಜ ನಮ್ಮ ಕನ್ನಡ ನಾಡಿನ ಹೆಮ್ಮೆಯ  ಸಂಗೀತ ಗ್ರಾಮ   "ರುದ್ರಪಟ್ಟಣ "  , ಹಾಸನ ಜಿಲ್ಲೆ   ಅರಕಲಗೂಡು ತಾಲೂಕಿನ  ರಾಮನಾಥಪುರದ   ಸಮೀಪ ಕೇವಲ ಆರು ಕಿಲೋಮೀಟರು  ದೂರದಲ್ಲಿ  ಕಾವೇರಿ ನದಿಯ ದಡದಲ್ಲಿದೆ  ಈ ಗ್ರಾಮ,   ಕೆಲವು ಶತಮಾನಗಳ  ಹಿಂದೆ   ತಮಿಳುನಾಡಿನ ತಿರುನೆಲ್ವೇಲಿ  ಜಿಲ್ಲೆಯ ಸೆನ್ಗೊತ್ತಯ್  [Sengottai]  ಎಂಬ  ಗ್ರಾಮದಿಂದ   ಒಂದಷ್ಟು  ಕುಟುಂಬಗಳು   ಎರಡು  ಗುಂಪುಗಳಾಗಿ  ಬಂದು ಕನ್ನಡ ನಾಡಿನಲ್ಲಿ ನೆಲೆಸುತ್ತಾರೆ, ಇವರುಗಳು ಸಂಕೇತಿ  ಬ್ರಾಹ್ಮಣರಾಗಿದ್ದು  ವೇದಗಳ ಅಧ್ಯಯನ, ಪರಾಯಣ,   ಮಾಡುತ್ತಿರುತ್ತಾರೆ .    ಅದರಲ್ಲಿ ಒಂದು ಗುಂಪು   ಮೈಸೂರು ಜಿಲ್ಲೆ ಪಿರಿಯಪಟ್ಟಣ ತಾಲೂಕಿನ  ಬೆಟ್ಟದ ಪುರ ದಲ್ಲಿ ಮತ್ತೊಂದು ಗುಂಪು  ಹಾಸನ ಜಿಲ್ಲೆಯ   ಕೌಶಿಕ   ಎಂಬ  ಗ್ರಾಮದಲ್ಲಿ ನೆಲೆಯಾಗುತ್ತದೆ.  ನಂತರ  ಬೆಟ್ಟದ ಪುರದ ಗುಂಪಿನ ಕೆಲವು ಕುಟುಂಬದವರು     ಅರಕಲಗೂಡಿನ "ರುದ್ರಪಟ್ಣಂ" ನಲ್ಲಿ   ಬಂದು ನೆಲೆಸುತ್ತಾರೆ . "ರುದ್ರಪಟ್ಣಂ"  ನಲ್ಲಿ ನೆಲೆಸಿದ  ಗುಂಪನ್ನು ರುದ್ರ ಪಟ್ಟಣಂ   ಸಂಕೇತಿ ಗಳೆಂದು ಕರೆಯಲಾಗಿದೆ.  ಇವರುಗಳು  "ವೇದ"ಹಾಗು  "ಸಂಗೀತ"  ದಲ್ಲಿ   ಒಳ್ಳೆಯ ಸಾಧನೆ ಮಾಡಿದವರಾಗಿದ್ದು    ಕಾವೇರಿ  ತೀರದಲ್ಲಿ  ನೆಲೆ ಕಂಡುಕೊಳ್ಳುತ್ತಾರೆ . ಹೀಗಾಗಿ "ರುದ್ರಪಟ್ಣಂ"  ಗ್ರಾಮವನ್ನು   ಅಂದಿನ  ಕಾಲದಲ್ಲಿ  "ವೇದ ಬ್ರಹ್ಮ"   ಹಾಗು "ನಾದ ಬ್ರಹ್ಮ "    ಇಬ್ಬರ    ಸಂಗಮವೆಂದು  ಕರೆಯಲಾಗಿದೆ.  ಅದೇ ಗ್ರಾಮದಲ್ಲಿದ್ದ ಚನ್ನಕೇಶವ  ದೇವಾಲಯ   "ವೇದ ಬ್ರಹ್ಮ"   ಹಾಗು "ನಾದ ಬ್ರಹ್ಮ "    ಎರಡರ   ಸಂಗಮಕ್ಕೆ ಸಾಕ್ಷಿಯಾಗಿ ನಿಂತಿದೆ.






ರುದ್ರ ಪಟ್ಟಣಂ  ಎಂದ ಕೂಡಲೇ ನೆನಪಾಗೋದು   ಸಂಗೀತ ದಿಗ್ಗಜರಾದ  "ರುದ್ರಪಟ್ಣಂ"  ಸಹೋದರರು ಎಂದು  ಕರೆಯುವ   ಶ್ರೀಯುತರಾದ ಆರ್. ಎನ್ ತ್ಯಾಗರಾಜನ್ ಹಾಗು ಆರ್. ಎನ್. ತಾರಾನಾಥನ್  ಸಹೋದರರು ನೆನಪಿಗೆ ಬರುತ್ತಾರೆ  ಇವರಲ್ಲದೆ  ಆರ್.ಕೆ . ಶ್ರೀಕಂಠನ್  ಹಾಗು ಆರ್. ಕೆ. ಪದ್ಮನಾಭನ್ ,    . ಆರ್. ಕೆ. ಕೃಷ್ಣ ಮೂರ್ತಿ ,  ಆರ್.ಕೆ. ಸೂರ್ಯನಾರಾಯಣ, ಆರ್. ಕೆ. ರಾಘವ, ಆರ್. ಕೆ. ಪ್ರಕಾಶ್, ಆರ್. ಏನ್. ತ್ಯಾಗರಾಜನ್ , ಆರ್. ಎಸ . ರಮಾಕಾಂತ್ , ಆರ್.ಎಸ. ಕೇಶವ  ಮೂರ್ತಿ,  ಆರ್. ಎನ್ . ಶ್ರೀಲತಾ  ಹಾಗು ರತ್ನಮಾಲ ಪ್ರಕಾಶ್[ ಸುಗಮ ಸಂಗೀತ ] , ಇಷ್ಟೇ ಅಲ್ಲದೆ  ವೀಣೆ  ತಿಮ್ಮಪ್ಪ ,  ವೀಣೆ ಶಾಮಣ್ಣ , ವೀಣೆ ಶ್ರೀಕಂಯ್ಯ,  ವೀಣೆ ರಂಗನಾಥ್ ,  ಆರ್. ಎಸ. ಕೇಶವ ಮೂರ್ತಿ  , ವೀಣೆ ರಂಗಾಶಾಸ್ತ್ರಿ   ಇವರೆಲ್ಲರೂ ಕರ್ನಾಟಕ ಸಂಗೀತ  ಕ್ಷೇತ್ರದಲ್ಲಿ  ಸಾಧನೆ ಮೆರೆದವರೇ  ಹಾಗು  "ರುದ್ರಪಟ್ಣಂ"  ಗ್ರಾಮದಲ್ಲಿ ಜನಿಸಿ  ಊರಿನ  ಕೀರ್ತಿ ಪತಾಕೆ ಹಾರಿಸಿಬಿಟ್ಟಿದ್ದಾರೆ.  ಬಹಳ ಹಿಂದೆಯೇ   "ರುದ್ರಪಟ್ಣಂ"  ಗ್ರಾಮದ  ಸಂಗೀತ  ವೈಭವ ಕಂಡಿದ್ದ  ಮೈಸೂರು ಅರಮನೆ  ಆಸ್ಥಾನದ   ಟೈಗರ್  ವರದಾಚಾರ್  ಅವರು   ರುದ್ರ ಪಟ್ಟಣಂ  ಗ್ರಾಮವನ್ನು  ಕನ್ನಡ ನಾಡಿನ   ತಂಜಾವೂರ್    ಎಂದು   ನಾಮಕರಣ  ಮಾಡಿದ್ದಾರೆ.  




 ತಂಬೂರಿಯ  ಆಕಾರದಲ್ಲಿನ  ಧ್ಯಾನ  ಮಂದಿರ 





ಇಂದು ರುದ್ರಪಟ್ಟಣ ಗ್ರಾಮಕ್ಕೆ  ತೆರಳಿದರೆ   ಮಹಾನ್ ಸಂಗೀತಗಾರರು ಜನಿಸಿದ  ಹಾಲಿ ಶಿಥಿಲ ಗೊಂಡ ಹಲವಾರು   ಮನೆಗಳ ದರ್ಶನ  ಆಗುತ್ತದೆ.  ಆ ಗ್ರಾಮದ  ಕೀರ್ತಿಯನ್ನು  ಮರು ಸ್ಥಾಪಿಸಲು  ಶ್ರೀಯುತರಾದ  ಆರ್.ಕೆ. ಪದ್ಮನಾಭನ್  ರವರು  ಶ್ರಮ ಪಡುತ್ತಿದ್ದು,   "ರುದ್ರಪಟ್ಣಂ"  ಗ್ರಾಮವನ್ನು ಸಂಗೀತ ಗ್ರಾಮವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಇದರ ಅಂಗವಾಗಿ  "ರುದ್ರಪಟ್ಣಂ"  ಸಂಗೀತೋತ್ಸವ  ಸಮಿತಿಯನ್ನು  ರಚಿಸಿಕೊಂಡು  ಪ್ರೆತೀವರ್ಷ ಸಂಗೀತ ಉತ್ಸವ  ನಡೆಸುತ್ತಾ ಇದ್ದಾರೆ, ಈ ಸಮಿತಿಯು    "ರುದ್ರಪಟ್ಣಂ"  ಗ್ರಾಮದಲ್ಲಿ   ಒಂದು  ಸಪ್ತ ಸ್ವರ  ದೇವತಾ ಧ್ಯಾನಮಂದಿರ  ನಿರ್ಮಾಣ  ಮಾಡಿದ್ದು  ಬಹಳ ವಿಶೇಷವಾಗಿ  ಸಂಗೀತಗಾರರ  ಗಮನಸೆಳೆಯುತ್ತಿದೆ .  ಇಡೀ  ಮಂದಿರ   ತಂಬೂರಿಯ  ಆಕಾರದಲ್ಲಿ  ನಿರ್ಮಿತಗೊಂಡಿದೆ ,  ತಂಬೂರಿಯ  ಶ್ರುತಿ ಇಲ್ಲದೆ  ಸಂಗೀತ  ಸಾಧ್ಯವಿಲ್ಲಾ   ಎನ್ನುವ  ಘೋಷಣೆ  ಮೊಳಗಿಸುತ್ತಿದೆ.   ಮಂದಿರದ  ಮುಂದಿನ ಆವರಣದಲ್ಲಿ   ಹಸಿರು ಹಾಸು,  ಒಂದು ಚಿಕ್ಕ ಮಂಟಪ,   ಆ ಮಂಟಪದಲ್ಲಿ  "ತಬಲಾ "  ವನ್ನು ಕೆತ್ತಿ ಇಡಲಾಗಿದೆ,  ಮಂದಿರದ ಆವರಣ ಹೊಕ್ಕ ಕೂಡಲೇ   ನಿಮಗೆ  ತಂಗಾಳಿಯ  ಸಂಗೀತದ  ಸ್ವಾಗತ  ಸಿಗುತ್ತದೆ.  ಒಳಗಡೆ ಪ್ರವೇಶ  ಮಾಡಿದರೆ  ನಿಮಗೆ  ಸಿಗುವುದು  ಸಂಗೀತ  ಸರಸ್ವತಿಯ ಎರಡೂ  ಬದಿಯಲ್ಲಿ ಕುಳಿತ   ಸಂಗೀತದ   ಮಹಾನ್  ಪುರುಷರ  ಮೂರ್ತಿಗಳ  ದರ್ಶನ .





ಸ್ವರ ದೇವತೆಗಳು  ದರ್ಶನ ನೀಡೋದು ಹೀಗೆ 



 ಮಂದಿರದ ಮೂರ್ತಿಗಳನ್ನು  ಸಮೀಪಿಸಿದರೆ  ನಿಮಗೆ ಅದ್ಭುತದ  ದರ್ಶನ  ಆಗುತ್ತದೆ,   ಸಂಗೀತದ   ಮೂಲ ದೇವತೆ ಸರಸ್ವತಿ  ಮೂರ್ತಿ ಇಲ್ಲಿ  ಕೇಂದ್ರವಾಗಿದ್ದು , ಮೂರ್ತಿಯ  ಬಲಗಡೆ  ಕ್ರಮವಾಗಿ ಕನಕ ದಾಸರು, ವಾದಿರಾಜರು, ಪುರಂದರ ದಾಸರು,   ಆಸಿನರಾಗಿದ್ದಾರೆ ,  ಮೂರ್ತಿಯ ಎಡ ಭಾಗದಲ್ಲಿ   ತ್ಯಾಗರಾಜರು, ಮುತ್ತು ಸ್ವಾಮಿ  ದೀಕ್ಷಿತರು,  ಶ್ಯಾಮಾ ಶಾಸ್ತ್ರಿಗಳು  ಆಸಿನರಾಗಿದ್ದಾರೆ.  ಈ ಸ್ವರ  ಲೋಕದ  ಮಂದಿರದಲ್ಲಿನ  ಪ್ರತೀ ಮೂರ್ತಿಯ ಮುಂದೆ  ಒಂದು  ಒತ್ತು ಗುಂಡಿ  ಇದೆ,  ಆ  ಮೂರ್ತಿಯ  ಬಳಿ ಹೋಗಿ   ಗುಂಡಿಯನ್ನು  ಒತ್ತಿದರೆ  ನಿಮಗೆ ಆ ಮೂರ್ತಿಯಲ್ಲಿ  ಬಿಂಬಿತರಾಗಿರುವ   ಮಹನೀಯರು ರಚಿಸಿದ  ಸಂಗೀತ  ಕೀರ್ತನೆ ಹೊರ ಹೊಮ್ಮುತ್ತದೆ.   ಉದಾಹರಣೆ ಗೆ ಕನಕ ದಾಸರ  ಮೂರ್ತಿಯ ಮುಂದಿರುವ  ಒತ್ತು ಗುಂಡಿ  ಒತ್ತಿದರೆ  ಕನಕದಾಸರ  ಪದಗಳು ಸಂಗೀತವಾಗಿ ಹೊರ ಹೊಮ್ಮುತ್ತವೆ.   ನಿಶ್ಯಬ್ಧ ವಾತಾವರಣದಲ್ಲಿ  ಈ ಮಂದಿರದಲ್ಲಿ ಧ್ಯಾನ ಮಾಡುತ್ತಾ   ಸಂಗೀತ  ಕೇಳುತ್ತಾ  ಇದ್ದರೆ  ನಮ್ಮ ಮನಸು ನಾಧ ಲೋಕವನ್ನೇ ಹೊಕ್ಕಿ ಬಿಡುತ್ತದೆ.  ಅದರಲ್ಲೂ  ಸಂಗೀತ ಜ್ಞಾನ ಹೊಂದಿರುವ  ಯಾರಾದರೂ ಈ ಮಂದಿರಕ್ಕೆ ಭೇಟಿ ಕೊಟ್ಟಲ್ಲಿ  ಖಂಡಿತಾ   ಅವರೂ ಸಹ ಇಲ್ಲಿ ಸಂಗೀತ ಸೇವೆ ಮಾಡಿಯೇ  ಮಾಡುತ್ತಾರೆ . ಬಹಳ ಅಪರೂಪದ  ಈ ತಾಣ ನಮ್ಮ ದೇಶದ  ಹೆಮ್ಮೆಯೇ ಸರಿ .    ಮಂದಿರದ ಸನಿಹದಲ್ಲೇ ಇದೆ  ಪುರಾತನವಾದ    ಲಕ್ಷ್ಮಿ ಚನ್ನಕೇಶವ  ದೇವಾಲಯ ,  ಈ ದೇಗುಲದ ಬಗ್ಗೆ ಹೆಚ್ಚಿನ   ಮಾಹಿತಿ ಇಲ್ಲದಿದ್ದರೂ  ಪುರಾತನ ದೇಗುಲ ವೆಂದು  ಊಹಿಸ ಬಹುದು.   ನಿತ್ಯ ಸಂಗೀತದ  ಮಜ್ಜನ   ಮಾಡಿಕೊಳ್ಳುವ   ಶ್ರೀ ಚೆನ್ನ ಕೇಶವ   ಸದ್ದಿಲ್ಲದೇ ತನ್ನ ಪತ್ನಿ ಲಕ್ಷ್ಮಿಯೊಡನೆ  ನೆಲೆಸಿದ್ದಾನೆ .  





ಹಸಿರ   ಮಡಿಲಲ್ಲಿ   ಸ್ವರ ಮಂದಿರದ   ದರ್ಶನ 





ಬೆಂಗಳೂರಿನಿಂದ   ಚನ್ನರಾಯ ಪಟ್ಟಣ, ಹೊಳೆನರಸಿಪುರ , ಅರಕಲ ಗೂಡು , ರಾಮನಾಥ ಪುರ  ಮಾರ್ಗವಾಗಿ  ರುದ್ರ ಪಟ್ಟಣಂ  ತಲುಪಲು  220 ಕಿಲೋಮೀಟರು  ದೂರವಿದ್ದು, ಪಯಣದ  ಅವಧಿ   ಸುಮಾರು ನಾಲ್ಕು ಘಂಟೆ ಬೇಕಾಗುತ್ತದೆ, ಮೈಸೂರಿನಿಂದ   ಕೆ. ಆರ್. ನಗರ.  ಚುಂಚನ ಕಟ್ಟೆ, ಹನಸೋಗೆ  ಮಾರ್ಗವಾಗಿ   85 ಕಿಲೋಮೀಟರು  ಇದ್ದು ಅಂದಾಜು   ಎರಡು ಘಂಟೆ ಅವಧಿ  ಬೇಕಾಗುತ್ತದೆ .  ಒಮ್ಮೆ ಹೋಗಿ ಬನ್ನಿ  ನಿಮ್ಮ ಮನಸು  ಸಂಗೀತ  ಸ್ವರಗಳ  ಮಡಿಲಲ್ಲಿ ಮಿಂದು ಬರಲಿ ಒಮ್ಮೆ.  


ನಿಮ್ಮ  ಸಂಗೀತ ಪ್ರತಿಭೆಯನ್ನು  ಈ ವೇದಿಕೆ ಯಲ್ಲಿ   ತೋರ ಬಹುದು 


ಬನ್ನಿ  ಇಲ್ಲಿನ  ಸಂಗೀತದ  ತಂಗಾಳಿಯಲ್ಲಿ ನಿಮ್ಮ  ಸ್ವರವೂ ಸೇರಲಿ , ರುದ್ರಪಟ್ಟಣದ  ಚನ್ನ ಕೇಶವನಿಗೆ  ಹಾಗು ಇಲ್ಲಿನ ಸಂಗೀತ ಸರಸ್ವತಿಗೆ  ಸಂಗೀತ ಸೇವೆ ಮಾಡುವ  ಅವಕಾಶ ನಿಮಗೆ ದೊರಕಲಿ , ಅಥವಾ  ಸಂಗೀತ  ಕಾರ್ಯಕ್ರಮ  ನೋಡುವ / ಕೇಳುವ ಅವಕಾಶ  ನಿಮಗೆ ಲಭಿಸಲಿ. 





10 comments:

Srikanth Manjunath said...

ಸುಂದರ ಲೇಖನ.. ಸಂಗೀತ ಎಂಥಹ ಸಮಸ್ಯೆಗೂ ಉತ್ತರ ನೀಡುತ್ತದೆ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂಥಹ ಹಾದಿಯನ್ನು ತೆರೆದಿಡುತ್ತದೆ ಎನ್ನುತ್ತಾರೆ..

ಈ ಸುಂದರ ಪ್ರದೇಶಕ್ಕೆ ನನ್ನನ್ನು ಕರೆದೊಯ್ದಿದ್ದು ನೀವು ಎಂದು ಹೇಳಿಕೊಳ್ಳಲು ನನಗೆ ಖುಷಿಯಾಗುತ್ತದೆ. ಒಂದು ಸುಂದರ ಸಂಜೆಯನ್ನು ಈ ಸಂಗೀತ ಲೋಕದಲ್ಲಿ ಕಳೆದ ಅದ್ಭುತ ಆ ಹೊತ್ತು ಅನುಪಮ..

ಸಂಗೀತದ ಬಗ್ಗೆ, ಅದರ ಪ್ರಕಾರದ ಬಗ್ಗೆ ಹಾಗೆಯೇ ಸ್ಥಳದ ಇತಿಹಾಸವನ್ನು ನೀಟಾಗಿ ವಿವರಿಸಿರುವ ನಿಮ್ಮ ಶ್ರಮಕ್ಕೆ ಅಭಿನಂದನೆಗಳು.

ಸುಂದರ ಲೇಖನ ಸರ್ಜಿ

UMESH VASHIST H K. said...

ರುದ್ರಪಟ್ಟಣದ ಬಗ್ಗೆ ಸವಿಸ್ತಾರವಾದ ವಿವರಣೆ ಹಾಗೆ ಸಂಗೀತ ಹಾಗೇ ರುದ್ರಪಟ್ಟಣದ ಸಂಗೀತ ದಿಗ್ಗಜರ ಪರಿಚಯ ಆದಹಾಗಾಯಿತು.. ಚಂದದ ಲೇಖನ..

UMESH VASHIST H K. said...

ರುದ್ರಪಟ್ಟಣದ ಬಗ್ಗೆ ಸವಿಸ್ತಾರವಾದ ವಿವರಣೆ ಹಾಗೆ ಸಂಗೀತ ಹಾಗೇ ರುದ್ರಪಟ್ಟಣದ ಸಂಗೀತ ದಿಗ್ಗಜರ ಪರಿಚಯ ಆದಹಾಗಾಯಿತು.. ಚಂದದ ಲೇಖನ..

ಮನಸು said...

Wow estondu informations ide. Thank you sir

Unknown said...

ಸಂಗೀತವೆಂಬ ದೈವೀ ಕಲೆಗೆ ಮಾರು ಹೋಗದವರೇ ಇಲ್ಲ. ಶಿಶುವೇ೯ತ್ತಿ ಪಶುವೇ೯ತ್ತಿ ಗಾನರಸಂ ಫಣಿಃ ಎಂಬ ನಾಣ್ಣುಡಿ ಇದೆ. ಅಂದರೆ ಸಂಗೀತ ಸುಧೆಗೆ ಮಾರು ಹೋಗದ ಜೀವಿಯೇ ಇಲ್ಲ. ಸರಸ್ವತಿಯ ಕಂಠದಿಂದ ಬಂದ ಸಂಗೀತವು ನಾರದ ತುಂಬುರರ ಕಂಠದಲ್ಲಿ ಮೆರೆದು, ಭದ್ರಾಚಲ ರಾಮದಾಸ- ಅನ್ನಮಯ್ಯರಂತಹ ಭಕ್ತಾಗ್ರಣಿಗಳ ಕೃತಿಗಳಲ್ಲಿ ಆವಿಭೂ೯ತಗೊಂಡು, ತ್ಯಾಗರಾಜ- ಕನಕ-ಪುರಂದರರಂತಹ ದಾಸಶ್ರೇಷ್ಡರಿಂದ ಜನಪ್ರಿಯತೆ ಹೊಂದಿ ಆಧುನಿಕ ಜಗತ್ತಿನಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ತನ್ನ ದೈವೀ ಯಾತ್ರೆಯನ್ನು ಮುಂದುವರೆಸಿದೆ. ಶತಮಾನಗಳ ಹಿಂದೆ ಕೇವಲ ಪ್ರತ್ಯಕ್ಷವಾಗಿ ಮನುಷ್ಯ ಕಂಠ/ವಾದ್ಯಮಾತ್ರದಿಂದಲೇ ಕೇಳಬೇಕಿದ್ದ ಸಂಗೀತವು ಇಂದು ಬಹಳಷ್ಟು ರೂಪಾಂತರಗೊಂಡ ಶ್ರವಣ ಮಾಧ್ಯಮದಲ್ಲಿ ಬೇಕೆಂದಲ್ಲಿ ಬೇಕಾದಾಗ ಕೇಳಲು ಲಭ್ಯವಿದೆ. ಮುಖ್ಯ ಕೇಳಲು ಮನಸ್ಸು ಬೇಕಷ್ಟೆ.

ಆದಾಗ್ಯೂ ತಮಿಳುನಾಡಿನ ತಿರುವಯ್ಯಾರಿನಲ್ಲಿ ಸಮಕಾಲೀನ ಶ್ರೇಷ್ಠ ಸಂಗೀತಜ್ಞರಿಂದ ಪಂಚರತ್ನಕೃತಿಗಳ ಸಮೂಹ ಗಾಯನ, ಬೆಂಗಳೂರಿನ ಗಾಯನ ಸಮಾಜದ ಕಾಯ೯ಕ್ರಮಗಳು ಹಾಗೂ ಇನ್ನಿತರೆ ಗಾಯನ ಶ್ರೇಷ್ಠರಿಂದ ಕೇವಲ ನಗರಗಳಲ್ಲಿ ಮಾತ್ರವೇ ನಡೆಯುತ್ತಿದ್ದ ಗಾನ ಸುಧೆಯನ್ನು ಗ್ರಾಮಾಂತರ ಪ್ರದೇಶಕ್ಕೆ- ತಮ್ಮೂರಿಗೇ ಸಂಗೀತ ಘನ ವಿದ್ವಾಂಸರೂ, ಸ್ವತಃ ವಾಗ್ಗೇಯಕಾರರೂ ಆದ ಶ್ರೀಯುತ ಆರ್.ಕೆ ಪದ್ಮನಾಭದಾಸರು ಕರೆತಂದು ಗಾನ ಸರಸ್ವತಿಗೆ ನಿತ್ಯಾರಾಧನೆಗೈಯ್ಯುತ್ತಿರುವುದು ಬಹಳ ಸಂತೋಷದ ಸಂಗತಿ. ಸಂಗೀತಾಭಿಮಾನಿಗಳು ಹಾಗೂ ಸಮಸ್ತ ಕನ್ನಡಿಗರು ರುದ್ರಪಟ್ಟಣಕ್ಕೆ ಒಮ್ಮೆ ಭೇಟಿ ನೀಡಿ ನಿತ್ಯ ನಡೆಯುವ ಸಂಗೀತ ಸೇವಾ ಕೈಂಕಯ೯ವನ್ನು ಸವಿದು ಹುರಿದುಂಬಿಸೋಣವೇ? ನಮ್ಮ ಜನ್ಮವನ್ನು ಪಾವನಗೊಳಿಸಿಕೊಳ್ಳೋಣವೇ? ನಮ್ಮ ಮುಂದಿನ ಪೀಳಿಗೆಗೆ ಅವರು ನೀಡಿರುವ ಅಮೂಲ್ಯ ಬಳುವಳಿಯನ್ನು ಸಂದಶಿ೯ಸಿ ಅವರಿಗೆ ಧನ್ಯವಾದಗಳನ್ನು ಅಪಿ೯ಸೋಣವೇ?

bharathi said...

ಇಂಥದ್ದೊಂದು ಊರಿದೆ ಎನ್ನುವುದೇ ತಿಳಿದಿರಲಿಲ್ಲ! ಥ್ಯಾಂಕ್ಸ್ ತಿಳಿಸಿಕೊಟ್ಟಿದ್ದಕ್ಕೆ.ಬರಹ ಚೆನ್ನಾಗಿದೆ

bharathi said...

ಇಂಥದ್ದೊಂದು ಊರಿದೆ ಎನ್ನುವುದೇ ತಿಳಿದಿರಲಿಲ್ಲ! ಥ್ಯಾಂಕ್ಸ್ ತಿಳಿಸಿಕೊಟ್ಟಿದ್ದಕ್ಕೆ.ಬರಹ ಚೆನ್ನಾಗಿದೆ

Moahan said...

Nice article. By the way, i am from Anandur just 2 kms away from this village.
I love this Sangeetha Graama becoz most of my favorite musicians are from this village.

Badarinath Palavalli said...

ಮೊದಲಿಗೆ ಸಪ್ತ ಸ್ವರಗಳ ಪರಿಚಯ ಮಾಡಿಕೊಟ್ಟ ತಮಗೆ ಧನ್ಯವಾದಗಳು.
ಫಲಕದಲ್ಲೇ ಸಂಗೀತ ಗ್ರಾಮ ಎಂದಿರುವುದು ರುದ್ರಪಟ್ಟಣ್ಣದ ಗಿರೆಮೆಯ ಸಂಕೇತ.
ಆರ್.ಕೆ. ಪದ್ಮನಾಭನ್ ಅವರ ಶ್ರಮವು ಪ್ರಶಂಸನಾರ್ಹ.
ಗುಂಡಿ ಒತ್ತಿದ್ದರೆ ಸಂಗೀತ! great...
ಭಗವಂತ ಅವಕಾಶಕೊಟ್ಟರೆ ರುದ್ರ ಪಟ್ಟಣಕ್ಕೆ ಭೇಟಿ ಕೊಡುವ ಆಸೆ ಮೂಡಿಸಿತು, ನಿಮ್ಮ ಈ ಬ್ಲಾಗ್ ಬರಹ ಬಾಲಣ್ಣ.

ದಕ್ಷಿಣ ಕನ್ನಡ said...

ತುಂಬಾ ಧನ್ಯವಾದಗಳು ಸರ್.