Sunday, January 30, 2011

ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ಇದೆ ಇರ್ಬೇಕು ಅಂದಿತ್ತು ಮನಸು!!!



ಯಾವ   ಕಲಾವಿದನ  ಕಲ್ಪನೆಯೂ  ಕಾಣೆ  !!!

ಕಳೆದ ಎಂಟು ಸಂಚಿಕೆಯಿಂದ ನನ್ನೊಡನೆ ಕಬಿನಿಯ ಕಾಡಲ್ಲಿ ಅಲೆಯುತ್ತಿದ್ದೀರಿ , ಕಳೆದ ಸಂಚಿಕೆಯಲ್ಲಿ ಆನೆಗಳ ಸಾಮ್ರಾಜ್ಯದೊಳಗೆ ಹೊಕ್ಕಿಬಂದ  ನಾವು ಈ ಸಂಚಿಕೆಯಲ್ಲಿ ಕಬಿನಿಯ ಮಡಿಲಲ್ಲಿ ನಡೆಯುವ ಪ್ರಕೃತಿಯ ನರ್ತನ ನೋಡೋಣ ಬನ್ನಿ .ಹೌದು ಸ್ವಾಮೀ ಇದೊಂದು ಮನರಂಜಿಸುವ ನೃತ್ಯವೇ ಸರಿ,ಕಬಿನಿಯ ಹಿನ್ನೀರಿನಲ್ಲಿ  ಒಮ್ಮೆ ತೇಲುತ್ತಾ ಹೊರಟ ನಮಗೆ  ಯಾವುದೇ ಪ್ರಾಣಿಯ ದರ್ಶನ ಆಗಲಿಲ್ಲ , ನಮಗೆ ನಾವೇ ಸಮಾಧಾನ ಮಾಡಿಕೊಂಡ ನಾವು ಯಾವುದನ್ನು ನೋಡಿ ಆನಂದ ಪಡೋಣ ಎಂದುಕೊಳ್ಳುವಷ್ಟರಲ್ಲಿ  ಕಬಿನಿಯ ಹಿನ್ನೀರಿನಲ್ಲಿ  ಮರಗಳ ಮೋಹಕ  ನರ್ತನ ಕಣ್ಣಿಗೆ ಬಿತ್ತು.                                                                         
ಬೇಲೂರ ಬಾಲೆಯರಿಗೆ  ನೃತ್ಯ ಕಲಿಸಿದವರು ನಾವೇ !!!                   
  
ಮುಗಿಲ ಚುಂಬಿಸುವ ಆಸೆ ನಮಗೆ !!!
ಒಂಟೀ ಒಂಟಿಯಾಗಿರುವುದು  ಬೋರೋ ಬೋರು !!
ಬಲು ಅಪರೂಪ ನಮ್ಜೋಡಿ ,ಎಂತ ಕಚೇರಿಗೂ ನಾವ್ ರೆಡಿ !!
ನೀರಿನಲ್ಲಿ ಅರಳಿದ ಕಲೆಯ ಮೋಹಕ ಬಲೆ !!
ಜೋಕೆ ನಾನು ಬಳ್ಳಿಯ ಮಿಂಚು !!!
ಬನ್ನಿ ಕುಣಿಯೋಣ !!ನಲಿದು ನರ್ತಿಸೋಣ!!!

         ತೇಲುತ್ತಾ ಸಾಗಿದ ನಾವು ನೀರಿನ ಸಭಾಂಗಣದಲ್ಲಿ  ಮೆರೆದಿಹ ಅದ್ಭುತ ನೃತ್ಯ ಗಳನ್ನೂ ಸೆರೆಹಿಡಿಯಲು  ಆರಂಭಿಸಿದೆವು.  ಹಾಗೆ ಸಾಗಿದ ನಮಗೆ  ಮೋಹಕ ಜಾಲದಲ್ಲಿ ಮರಗಳ ಸುಂದರ ಹಾವ ಭಾವ ದೊಳಗೆ ಮೆರುಗು ನೀಡಿದ ಹಕ್ಕಿಗಳ ದರ್ಶನ  ಭಾಗ್ಯ ದೊರೆಯಿತು.                                                                                                             
ಸ್ವರ್ಗದಲ್ಲಿ ನಮ್ಮ ಮನೆ !!!
ನಾನು ನೀನು ಜೋಡಿ !!! 
ನಮ್ಮ ಪುಟ್ಟ ಸಂಸಾರ,ಲೋಕದಿಂದ ಬಹುದೂರ !!
ದೂರ ಬಹುದೂರ ಹೋಗುವ ಬಾರಾ !!
ಯಾವ ತಾಳ ಯಾವ ಮರಕೋ !!!
ನಮ್ಮ ಲೋಕ ಯಾವ ಸ್ವರ್ಗಕ್ಕೆ ಕಡಿಮೆ !!
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ !!!
ಯಾವ ಮೋಹಕ ಕಲಾವಿದನ ಕೈಚಳಕ  ಇದು  !!

ಸ್ವರ್ಗ ಸುಂದರಿಯರ ಸನಿಹದಿಂದ ಬಿಡಿಸಿಕೊಂಡು    ದಡದ ಸನಿಹ ಹೊರಟ ನಮಗೆ  ಮೊಸಳೆಯೊಂದು ನೀರಿಗೆ ಜಾರುತ್ತಿರುವ ನೋಟ ಕಂಡಿತು. 
ನಾನವನಲ್ಲಾ!!! ನಿಮ್ ಸಹವಾಸ ಬೇಡ ನಂಗೆ!!!!
ಹರಿಣಗಳ  ಲೋಕ !!!
  • ಹಾಗೆ ತೇಲುತ್ತಾ ದಡಕ್ಕೆ ಹೊರಟ ನಮಗೆ ದೂರದಲ್ಲಿ ಜಿಂಕೆಗಳ ಹಿಂಡು ಮೇಯುತ್ತಿರುವುದು ಕಾಣಿಸಿತು. ಕಬಿನಿಯ ಸ್ವರ್ಗ ಲೋಕದಿಂದ ನೆನಪುಗಳ ಮೂಟೆ ಹೊತ್ತು ಮರಳಿ ಗೂಡಿಗೆ ಬಂದೆವು.ಇಷ್ಟರವರೆಗೂ ನನ್ನ ಜೊತೆಯಲ್ಲಿ ಕಾನನದ ಪ್ರವಾಸ ಮಾಡಿದ ನಿಮಗೆ ನನ್ನ ಕೋರಿಕೆ ಇಷ್ಟೇ ನೀವು ಯಾವ  ಕಾಡಿಗೆ ಹೋದರು ದಯವಿಟ್ಟು ಕೆಳಕಂಡ ವಿಚಾರಗಳನ್ನು ಗಮನಿಸಿರಿ .                                                                                                                     1 ] ಕಾಡಿನಲ್ಲಿ ವಿಹಾರಕ್ಕೆಂದು  ತೆರಳಿ  ಕೂಗಾಟ ಕಿರುಚಾಟ ಮಾಡುವುದನ್ನು ಮಾಡಬೇಡಿ,ಇದರಿಂದ ನಿಮ್ಮ ಗದ್ದಲಕ್ಕೆ ಹೆದರಿದ ಪ್ರಾಣಿಗಳು ದೂರ ಹೋಗಿ ನಿಮಗೆ ಪ್ರಾಣಿಗಳ ದರ್ಶನ ಆಗುವ ಸಂಭವ ಕಡಿಮೆ .[ಈ ವಿಚಾರದಲ್ಲಿ ನಾವು ವಿದೇಶಿಯರನ್ನು ಗಮನಿಸುವುದು ಒಳ್ಳೆಯದು.]                                                                                  2 ]    ಕಾನನದಲ್ಲಿ ಪ್ರಾಣಿಗಳನ್ನು ಅಣಕಿಸುವುದು, ಕಾರಿನ ಹಾರನ್ ಜೋರಾಗಿ ಮಾಡಿ ಅವುಗಳನ್ನು ರೇಗಿಸುವುದು ಮಾಡಬೇಡಿ  ಕೆರಳಿದ ಪ್ರಾಣಿಗಳು ಮನುಷ್ಯರನ್ನು ಅಟ್ಟ್ಯಾಕ್ ಮಾಡಿದ್ರೆ ಮನುಷ್ಯನ ಯಾವ ಆಟಗಳು ಅಲ್ಲಿ ನಡೆಯದು .ಕಾಡಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ  ತಕ್ಷಣ ಇಳಿಯಬೇಡಿ  ಇದು ಅತ್ಯಂತ  ಅಪಾಯಕಾರಿ ಹೀಗೆ ಮಾಡಿದ ಹಲವರು ತಮ್ಮ ಪ್ರಾಣ ತೆತ್ತಿದ್ದಾರೆ.                                                                                                 3 ]ನೀವು ತೆಗೆದು ಕೊಂಡು ಹೋದ  ಆಹಾರದ ಪ್ಯಾಕೆಟುಗಳು, ಪ್ಲಾಸ್ಟಿಕ್ ಬಾಟಲುಗಳು,ಅರ್ದ ತಿಂದು ಮಿಕ್ಕಿದ ಆಹಾರ ಪದಾರ್ಥಗಳು, ಉಪಯೋಗಿಸಿದ ಸೋಪುಗಳು, ಟೂತ್ ಪೇಸ್ಟು , ಕಾಗದ ,ಇವುಗಳನ್ನು  ಕಾಡಿನಲ್ಲಿ ಬಿಸಾಕಿ ಬರಬೇಡಿ ಇದರಿಂದ ಪ್ರಾಣಿಗಳ ಜೀವ ಹೋಗುವ ಸಾಧ್ಯತೆ ಹೆಚ್ಚು,  ಕಾಡು ಕಸದ ತೊಟ್ಟಿಯಲ್ಲ!!!                              4 ] ಕಾಡಿನಲ್ಲಿ ಮಜಾ ಮಾಡಲು ಹೋಗಬೇಡಿ ಕಂಠ ಪೂರ್ತಿ ಕುಡಿದು,ಬಾಟಲುಗಳನ್ನು ಎಲ್ಲೆಂದರಲ್ಲಿ ಒಡೆದುಹಾಕಿ,  ಜೋರಾಗಿ ಮ್ಯೂಸಿಕ್ ಹಾಕಿಕೊಂಡು  ಪ್ರತಿಬಾ  ಪ್ರದರ್ಶನ ಮಾಡುವವರಿಗೆ ಕಾಡು ಸೂಕ್ತ ಸ್ತಳವಲ್ಲಾ .     5 ] ಟ್ರೆಕ್ಕಿಂಗ್ ಗೆ ಹೋದರೆ ನೀವು ಹೋಗುವ ಜಾಗದ ಬಗ್ಗೆ ಸಾಕಷ್ಟು ವಿವರಗಳನ್ನು ಸಂಗ್ರಹಿಸಿ  ,ಹವಾಮಾನದ ಬಗ್ಗೆ ತಿಳಿದು ಕೊಂಡು ಹೊರಡಿ.                                                                                                                    6 ] ಕಾಡು ಪ್ರಾಣಿಗಳ  ಫೋಟೋ  ತೆಗೆಯುವಾಗ ಎಚ್ಚರ ವಹಿಸಿ, ನಿಮ್ಮ ಗಮನ ಫೋಟೋ/ವೀಡಿಯೊ  ತೆಗೆಯುವ ಕಡೆ ಇದ್ದಾಗ ಪ್ರಾಣಿಗಳು ಎರಗಿಬಂದರೆ ಕಷ್ಟವಾಗಬಹುದು.ಈ ಬಗ್ಗೆ ಎಚ್ಚರವಿರಲಿ.                              7 ]        ನಿಮ್ಮ ಗೆಳೆಯರಿಗೆ ,ನಿಮ್ಮ ಮನೆಯ ಕಿರಿಯರಿಗೆ ಕಾಡಿನಲ್ಲಿ ನಮ್ಮ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ಕೊಡಿ.                                                                                                                                     8 ] ಕಾಡಿಗೆ ನೀವು ಹೋದ ತಕ್ಷಣ ಕಾಡಿನಲ್ಲಿನ ಪ್ರಾಣಿಗಳು   ನಿಮ್ಮನ್ನು ದಾರಿಯಲ್ಲಿ ನಿಂತು  ಸ್ವಾಗತಿಸುತ್ತವೆ ಎಂಬ ಬ್ರಮೆ ಬೇಡ. ಪ್ರಾಣಿಗಳು ಸಿಗಲು ಅದೃಷ್ಟವೂ ಬೇಕೂ , ಯಾವುದೇ ಪ್ರಾಣಿ ಸಿಕ್ಕದಿದ್ದರೆ ಬೇಸರ ಬೇಡ ಬೇರೆ ವಿಚಾರಗಳ ಕಡೆ ಗಮನ ಹರಿಸಿ ಅಲ್ಲಿನ ಹೂ , ಹಣ್ಣು, ಮರ ,ಗಿಡ, ಪ್ರಕೃತಿ ಇವುಗಳ ಬಗ್ಗೆ ಕಲಿಯಲು ಪ್ರಯತ್ನಿಸಿ.          ನನಗೆ ಅನ್ನಿಸಿದ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ.ಮೇಲಿನ ಅಂಶಗಳನ್ನು ಕಾಡಿನಲ್ಲಿ ಪಾಲಿಸಿದರೆ ಕಾಡನ್ನು ಅಲ್ಲಿನ ಪ್ರಾಣಿಗಳನ್ನು ಉಳಿಸಿದ ಕೀರ್ತಿ ನಮಗೆ ಬರುತ್ತದೆ.    ಮುಂದೆ ನೀವು ಕಾಡಿಗೆ ಹೋದಾಗ ಅಥವಾ ನಿಮ್ಮ ಸ್ನೇಹಿತರು ಹೋದಾಗ ಅವರಿಗೆ ಮೇಲಿನಂತೆ  ಅರಿವು ಮೂಡಿಸಿದರೆ  ನನ್ನ ಬರಹ ಸಾರ್ಥಕವಾದಂತೆ .   ಕಬಿನಿಯ ಯಾತ್ರೆಯಲ್ಲಿ ಜೊತೆಗಿದ್ದು ಒಳ್ಳೆಯ ಮಾತುಗಳನ್ನು ಹೇಳಿ ಮೆಚ್ಚುಗೆ ನೀಡಿದ ಎಲ್ಲಾ ಬ್ಲಾಗ್ ಗೆಳೆಯರಿಗೂ ನನ್ನ ಕೃತಜ್ಞತೆಗಳು.ಇಲ್ಲಿಗೆ ಕಬಿನಿ  ಕಾಡಿನ ಅನುಭವಗಳ ನೆನಪಿನ ಮೂಟೆ ಖಾಲಿಯಾಗಿದೆ. ನಮಸ್ಕಾರ ಮತ್ತೆ ಹೊಸ ವಿಷಯದೊಂದಿಗೆ ಭೇಟಿಯಾಗೋಣ.     ಪ್ರೀತಿಯಿಂದ ಈ ವಿಚಾರವನ್ನು ಓದಿದ ಬ್ಲಾಗಿಗ ಮಿತ್ರರಾದ ಶ್ರೀ Iynanda Prabhukumar ಹೇಳಿರುವ ಪ್ರೀತಿ ಮಾತಿನ ಸಲಹೆ ಇದು ಓದಿ ಒಮ್ಮೆ [ 

    ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ... ಹೊಸತು

    ಶ್ರೀ ಬಾಲಸುಬ್ರಹ್ಮಣ್ಯರವರಿಗೆ ನಮಸ್ಕಾರಗಳು.
    ಒಳ್ಳೆಯ ಬರೆಹ ಮತ್ತು ಚಿತ್ರಗಳು. ಅಭಿನಂದನೆಗಳು.
    ಕೊನೆಯಲ್ಲಿರುವ ಕಾಡಿನಲ್ಲಿ ನಾವು ವೀಕ್ಷಕರಾಗಿ ಹೋಗಿರುವಾಗ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆನ್ನುವ ಸೂಚನೆಗಳನ್ನು ಕೊಟ್ಟಿದ್ದೀರಿ. ಇವು ಬಹಳ ಮಹತ್ವಪೂರ್ಣವೂ ತಪ್ಪದೆ ಅನುಸರಿಸಬೇಕಾದವೂ ಆಗಿದೆ.ಇದಕ್ಕೆ ಧನ್ಯವಾದಗಳು. ಇದರ ಜತೆಗೆ ನಾನು ಈ ಕೆಳಗಿನವನ್ನು ತಮ್ಮ ಅನುಮತಿಯಿಂದ ಸೇರಿಸಬೇಕೆಂದಿದ್ದೇನೆ.
    "ಸಿಗರೇಟು, ಬೀಡಿ, ಮೊದಲಾದ ತಂಬಾಕು ಸೇವನೆ ಮಾಡಲೇ ಬೇಡಿ. ಕಾಡಿನೊಳಗಂತೂ ಅವನ್ನು ತೆಗೆದುಕೊಂಡೂ ಹೋಗಲೇಬೇಡಿ. ಯಾವ ಕಾರಣಕ್ಕೂ ಬೆಂಕಿಕಡ್ಡಿ ಗೀರಬೇಡಿ; ಬೆಂಕಿ ಹಚ್ಚಬೇಡಿ. ನಾವು ಅಂದುಕೊಂಡಿರುವದಕ್ಕಿಂತ ಬೇಗನೇ ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತದೆ; ಹರಡುತ್ತದೆ.
    "ಯಾವದೇ ಸಿನಿಮಾಗಳಲ್ಲಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಮೊದಲಾದ ಚಾನೆಲ್‌ಗಳಲ್ಲಿ ಎಷ್ಟೇ ನೈಜತೆಯಿಂದ ಕಾಡುಗಳನ್ನು ತೋರಿಸಿದರೂ ನಿಜವಾದ ಕಾಡಿನಲ್ಲಿನ ಅನುಭವವೇ ಬೇರೆ. ಕಾಡಿನಲ್ಲಿ ಯಾವದೇ ಚಾಲೆಂಜ್ ತೆಗೆದುಕೊಳ್ಳದಿರಿ. ತುಂಬಾ restrictions ಇರುವ ದೇವಸ್ಥಾನಗಳಲ್ಲಿರುವಂತೆ ಶಿಸ್ತು-ಸಂಯಮದಿಂದಿರಿ.
    "ಆನೆಗಳ ವಿಷಯದಲ್ಲಂತೂ ಹೆಚ್ಚಿನ ಜಾಗ್ರತೆ ಅವಶ್ಯ. ಶ್ರೀ ಗಣೇಶನ ರೂಪ, ಸಾಧುವಾಗಿ ತೋರುವ ನಿಧಾನದ ಪ್ರಾಣಿ - ಎಂದೆಲ್ಲಾ ಅವುಗಳೊಡನೆ ಸಲಿಗೆ ತೋರಬೇಡಿ. ಅವು ಬಹಳ ಬುದ್ದಿವಂತ, ಅತಿ ವೇಗದ, ಬಲಶಾಲಿ ಪ್ರಾಣಿಗಳು. ಅವಕ್ಕೆ ಸರಿಗಾಣದಂತೆ ವರ್ತಿಸಿದರೆ ಕಣ್ಣೆವೆಯಿಕ್ಕುವದರೊಳಗೆ ಸೊಂಡಿಲಲ್ಲೆತ್ತಿ ಬೀಸಾಕಿದರೆ ಸಾವಷ್ಟೇ ಗತಿ] ಪ್ರೀತಿಯಿಂದ ನೀಡಿರುವ ಈ ಸಲಹೆಯನ್ನು ನಾವುಗಳು ಪಾಲಿಸುವುದು ಪ್ರಕ್ರತಿ ಧರ್ಮ ಈ ಬಗ್ಗೆಯೂ ಸಹ ಬ್ಲಾಗಿಗ ಮಿತ್ರರು  ಗಮನಹರಿಸಲು ಕೋರುತ್ತೇನೆ.                

Saturday, January 15, 2011

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!



          ಕಳೆದ ಸಂಚಿಕೆಯಲ್ಲಿ ನಿಮಗೆ  ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ ಕಥಾನಕ ನಾನು  ಹೇಗೆ ಶುರುಮಾಡಿದೆನೋ ಕಾಣೆ ಇಲ್ಲಿಯವರೆಗೆ ಏಳು ಕಂತುಗಳಾಗಿ  ಇಂದಿನದು ಎಂಟನೆಯ ಕಂತಾಗಿ ನಿಮ್ಮ ಮುಂದೆ ಬರುತ್ತಿದೆ.ನನಗೆ ಗೊತ್ತು ಯಾವುದೇ ವಿಚಾರವನ್ನು ಎಳೆದು ಎಳೆದೂ ಬರೆದರೆ ಅದಕ್ಕೆ ಸ್ವಾರಸ್ಯ ವಿರುವುದಿಲ್ಲಾ ಎಂದು .ಅದಕಾಗಿ ನಿಮಗೆ ಅತಿಯಾಗಿ ಎಳೆಯದೆ ವಿಷಯವನ್ನು ನೇರವಾಗಿ ಹೇಳಲು ಪ್ರಯತ್ನಿಸುತ್ತಿದ್ದೇನೆ.ಕೆಲವರು ಬ್ಲಾಗ್ ಕಾಮೆಂಟ್ ಮೂಲಕ , ದೂರವಾಣಿ/ಮೊಬೈಲ್  ಮೂಲಕ , ಕಾಡಿನ ಲೇಖನಗಳ ಬಗ್ಗೆ ಮೆಚ್ಚಿನ ಮಾತಾಡಿ ಸಲಹೆ ಸೂಚನೆಗಳನು ನೀಡಿದ್ದಾರೆ.ಎಲ್ಲರಿಗೂ ನನ್ನ ಶುಭ ಕಾಮನೆಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.                                                                                                                                                                                                               ಮತ್ತೊಂದು ಸಂತಸದ ವಿಚಾರ . "ನಿಮ್ಮೊಳಗೊಬ್ಬ  ಬಾಲು"   ಎಂಬ ಅನಾಮದೇಯ ಬ್ಲಾಗ್ ಲೋಕಕ್ಕೆ ಕಾಲಿಟ್ಟು  ಮೂರು ವರ್ಷ ಕಳೆದು ಹೋಗಿದೆ. ದಿನಾಂಕ 07 ಡಿಸೆಂಬರ್ 2009  ರಂದು ಬ್ಲಾಗ್ ಲೋಕಕ್ಕೆಅಳುಕುತ್ತಾ  ಕಾಲಿಟ್ಟ ಈ ಪೆದ್ದು ಬ್ಲಾಗಿಗ ನಿಧಾನವಾಗಿ ಎಲ್ಲರಿಂದ ಹೊಸ ವಿಚಾರ ತಿಳಿಯುತ್ತಾ ಬೆಳೆಯುತ್ತಿದ್ದಾನೆ.''ಎಲ್ಲ ಬಲ್ಲವರಿಲ್ಲ ,ಎಲ್ಲ ಬಲ್ಲವನಂತೂ ನಾನಲ್ಲ , ಜೀವನ ಹಾದಿಯಲ್ಲಿ ಎಲ್ಲ ಬಲ್ಲವರು ನೀವೆಲ್ಲರೂ ಜೊತೆಯಾಗಿ ಇರುವಿರಲ್ಲಾ  " ಅಷ್ಟೇ ಸಾಕು ನನಗೆ  .ನಿಮ್ಮಗಳ ಪ್ರೀತಿ ಹೀಗೆ ಇರಲಿ. ಬನ್ನಿ ನಮ್ಮ ಕಾನನ ಸಾಮ್ರಾಜ್ಯಕ್ಕೆ ತೆರಳೋಣ. ಆನೆಗಳ ಸಾಮ್ರಾಜ್ಯದಲ್ಲಿ ವಿಹರಿಸಿ ಬರೋಣ.
  ನಮಗೆಲ್ಲರಿಗೂ  ತಿಳಿದಂತೆ  ಕಾಡು ಎಂದೊಡನೆ ನೆನಪಿಗೆ ಬರೋದು  ಆನೆ ಹುಲಿ, ಸಿಂಹ ಇತ್ಯಾದಿಗಳು ,ಹಲವರು ಕೇಳಿದರು ಅಲ್ಲಾಪ್ಪಾ  ನಿಮಗೆ ಆನೆ ಸಿಕ್ಕಲಿಲ್ವಾ ಅವುಗಳ ಜೊತೆ ನಿಮ್ಮ ಅನುಭವ ಏನೂ ಇಲ್ವಾ ಅಂತಾ ಪ್ರಶ್ನೆಗಳ ಮೇಲಿಂದ ಮೇಲೆ ಪ್ರಶ್ನೆ ಎಸೆಯುತ್ತಿದ್ದರು. ನಾನು "ತಾಳಿ ಸಾರ್ ಸ್ವಲ್ಪ ಅದೂ ಬರುತ್ತೆ ಆತ್ರಾ ಮಾಡ್ಬೇಡಿ "ಅಂತಾ ಹೇಳಿಕೊಂಡು.ಬರುತ್ತಿದ್ದೆ!!                
ಬಿದಿರಿನ ಚಿಗುರು ತಿನ್ನಲು ಬಂದಿರುವ ಆನೆ !!

ತನ್ನ ಸುತ್ತ ಮುತ್ತ ಒಂದು ಸಣ್ಣ ಚಲನೆಯಾದರೂ ಎಚ್ಚರ ವಹಿಸುವಈ ಪರಿ !!
                                                                                                                                                      .ಕಾನನದಲ್ಲಿ ಆನೆಗಳ ಹಲವು ಕೌತುಕಮಯ ,ಅಚ್ಚರಿಯ ,ಹೆದರಿಕೆಯ ಸನ್ನಿವೇಶಗಳನ್ನು ನಾವುಗಳು ಎದುರಿಸಿದ್ದು ಹೌದು, ಒಮ್ಮೆ ಹೀಗೆ ಆಯಿತು ನಾವು ಕಬಿನಿಯಲ್ಲಿ ತೇಲುತ್ತಾ  ಕಾಡಿನ ಚಿತ್ರ ಫೋಟೋ ತೆಗೆಯುತ್ತಿದ್ದೆವು ನಿರ್ಜನ ಕಾಡು ನಮ್ಮ ದೋಣಿಯ ಚಾಲಕರು "ಸಾರ್ ಅಲ್ಲಿ ನೋಡಿ!!ಒಂದು ಆನೆ ಐತೆ !!!,ಅಂಗೆ ಇರಿಒಸಿ ಹತ್ರಾ ಓಗುವಾ "ಅಂತಾ ದೋಣಿಯನ್ನು ಸಾಧ್ಯವಾದಷ್ಟೂ  ಆನೆಯ ಹತ್ತಿರ ತೆಗೆದುಕೊಂಡು ಹೋದರು. ಅಲ್ಲಿ ನೋಡಿದರೆ ಒಂದು ಒಂಟಿ ಸಲಗ  ಬಿದಿರಿನ ಮೆಳೆ ಸಮೀಪ ಇದ್ದು  ಬಿದುರಿನ ಚಿಗುರನ್ನು ಸೊಂಡಿಲಿನಿಂದ ಕಿತ್ತು ತಿನ್ನುತ್ತಿತ್ತು.ದೋಣಿಯ ಹಾಯಿ ಉಂಟು ಮಾಡಿದ ಅಲೆಗಳ ಹೊಯ್ದಾಟಕ್ಕೆ ನಮ್ಮ ಇರುವಿಕೆಯನ್ನು ಸುಲಭವಾಗಿ ಗುರುತಿಸಿತ್ತು. ನಮ್ಮ ಕಡೆ ಮುಖ ಮಾಡದಿದ್ದರೂ ಅದು ನಮ್ಮ ಚಲನ ವಲನಗಳನ್ನು ಗಮನಿಸುತ್ತಿರುವುದು ನಮಗೂ ತಿಳಿದಿತ್ತು. ನಾವೂ ಸಹ ಶಬ್ದಮಾಡದೆ ಅದನ್ನು ಸುಮಾರು ಅರ್ಧ ಘಂಟೆ ನೋಡುತ್ತಾ ದೋಣಿಯಲ್ಲಿ ತೇಲುತ್ತಾ ಕುಳಿತೆವು , ಏನಾಯಿತೋ ಕಾಣೆ  ಇದ್ದಕ್ಕಿದ್ದಂತೆ  ಒಮ್ಮೆ ಸಣ್ಣದಾಗಿ ಆನೆ  ಗೀಳು ಕೇಳಿಸಿ ಕೈಲಿದ್ದ ಕ್ಯಾಮರ ಕೆಳಗೆ ಬಿದ್ದು ಹೋಯ್ತು.[ಪುಣ್ಯಕ್ಕೆ ಅದು ದೋಣಿಯೊಳಗೆ ಬಿತ್ತು] ಆಮೇಲೆ ನೋಡಿದರೆ ದೂರದಲ್ಲಿ ಮತ್ತೊಂದು  ಆನೆ ಕೂಗಿದ ಸದ್ದು ನಮಗೆ ಕೇಳಿಸಿ ಗಲಿಬಿಲಿಯಾಗಿತ್ತು.ಆಷ್ಟರಲ್ಲಿ  ಈ ಆನೆ ಹಾಗೆ ಮರೆಯಾಗಿತ್ತು. ಮೇಲಿನ ಚಿತ್ರಗಳು ಅದಕ್ಕೆ ಸಾಕ್ಷಿಯಾದವು.


ಆನೆ ಮೈಮರೆತು ಹಸಿರ ತಿನ್ನುವ ಈ ಪರಿ !!               
ಹತ್ತಿರ ಬಂದರೆ ಹುಷಾರ್ 

                                                                                     ಬನ್ನಿ ಎರಡನೇ ಸನ್ನಿವೇಶಕ್ಕೆ ಮೇಲಿನ ಚಿತ್ರದಲ್ಲಿದೆಯಲ್ಲಾ ಈ ಆನೆ ನಮ್ಮನ್ನು ಹೆದರಿಸಲು ಬಂದಿದ್ದ ದಿನ ನೆನೆದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ . ಹಾಗೆ ಕಾಡು ನೋಡುತ್ತಾ ತೇಲುತ್ತಾ ಸಾಗಿದ್ದ ನಮಗೆ ದೂರದಲ್ಲಿ ಈ ಆನೆ ಕಾಣಿಸಿತು ದೋಣಿಯವರು ನಮ್ಮ ಕೋರಿಕೆಯಂತೆ ಆನೆಯ ಸಮೀಪಕ್ಕೆ ಕೊಂಡೊಯ್ದಿದ್ದರು  ಹತ್ತಿರ ಹೋಗಿ ನೋಡಿದರೆ ಒಂಟಿ ಸಲಗ ಮೈಮರೆತು ಹಸಿರು ಮೆಳೆಯಲ್ಲಿ ಭೋಜನ ನಡೆಸಿತ್ತು. ನಿಶ್ಯಬ್ದ ವಾದ ಕಾಡಿನಲ್ಲಿ ಕೇವಲ ಅಲೆಯ ಸಪ್ಪಳದಿಂದ ನಮ್ಮ ಇರುವಿಕೆಯನ್ನು ಗ್ರಹಿಸಿದ ಈ ಆನೆ ಹತ್ತಿರ ಬಂದರೆ ಹುಷಾರ್ ಅನ್ನೋತರ ನಮ್ಮ ಮೇಲೆ ಎರಗಲು ಮುಖಮಾಡಿ ಸಿದ್ದವಾಗ ತೊಡಗಿತು.ಆದರೆ ನಮ್ಮ ಕಡೆಯಿಂದ ಗದ್ದಲವೇ ಇರಲಿಲ್ಲ ಹಾಗು ಅದನ್ನು ಕೆರಳಿಸುವ ಯಾವುದೇ ಚಟುವಟಿಕೆ ಇಲ್ಲದೆ ನಾವು ಕಲ್ಲು ಬಂಡೆಗಳಂತೆ ದೋಣಿಯಲ್ಲೇ ಕುಳಿತು ಇದರ ಆಟ ವನ್ನು ನೋಡುತ್ತಾ  ನಿಶ್ಯಬ್ದವಾಗಿ ಅರ್ಧ ಘಂಟೆ ಕಾಲ ಕಳೆದೆವು ಕೊನೆಗೆ ಅದೇ ನಮ್ಮಿಂದ ಯಾವುದೇ ತೊಂದರೆ ಇಲ್ಲವೆಂದು ತಿಳಿದು ನಿಧಾನವಾಗಿ ಕಾಡನ್ನು ಹೊಕ್ಕಿ ಮರೆಯಾಯ್ತು.ಕಾಡಿನಲ್ಲಿ ಇಂತಹ ಸನ್ನಿವೇಶಗಳಲ್ಲಿ ಭಯಪಟ್ಟು ಕಿರುಚಿ ದಾಗ ಅಲ್ಲಿನ ಪ್ರಾಣಿಗಳು ಕೋಪಗೊಂಡು ಎರಗಿ ಬರುವ ಸಾಧ್ಯತೆ ಜಾಸ್ತಿ.ಮುಂದಿನ ಸನ್ನಿವೇಶ ಮತ್ತಷ್ಟು ಕೌತುಕವಾಗಿದೆ. ಒಂದು ಭಾರಿ ಹಾಗೆ ತೇಲುತ್ತಾ ಕಾಡಿನ ಸೌಂದರ್ಯ   ಸವಿಯುತ್ತಾ ಸಾಗಿದ್ದೆವು , "ಸಾ ಅಲ್ನೋಡಿ ಆನೆ ಅದೇ, ಬನ್ನಿ ""ಅಂತಾ ಹೇಳಿ ಹತ್ತಿರ ಕರೆದುಕೊಂಡು ಹೋದರು ನಿಶ್ಯಬ್ದ ವಾದ ಕಾನನದಲ್ಲಿ ಬಿದಿರ ಮೆಳೆಯಲ್ಲಿ ಆನೆಯೊಂದು ಮೇಯುತ್ತಿತ್ತು ,ನಿಧಾನವಾಗಿ ಸದ್ದಿಲ್ಲದೇ ಅದರ ಚಲನವಲನ ನೋಡುತ್ತಾ ಇದ್ದ ನಮಗೆಅದು ಕೋಪಗೊಂಡು ಹಸಿರು  ಬಿದಿರು ಬೋಂಬನ್ನು ಜೋರಾಗಿ ಎಳೆದು ಅದರ  ಸಿಟ್ಟನ್ನು ತೋರಿಸುತ್ತಿತ್ತು.   ನಿಷ್ಯಬ್ದವಾಗಿದ್ದ ಕಾಡಿನಲ್ಲಿ ಹಸಿ ಬಿದಿರನ್ನು "ಫಟಾರ್" ಅಂತಾ ಮುರಿದುಹಾಕಿದ ಶಬ್ದ ಮಾರ್ಧನಿಸಿತ್ತು.ನಮ್ಮ ಸುತ್ತಲೂಹಲವು ಆನೆಗಳು ಬಿದಿರನ್ನು ಮುರಿದು ಹಾಕಿದರೆ ಯಾವ ಶಬ್ಧ ಬರುತ್ತಿತ್ತೋ ಹಾಗೆ ಭಯಾನಕ ವಾತಾವರಣ ನಿರ್ಮಾಣ ವಾಗಿತ್ತು. ನಾವು ಕಲ್ಲು ಗಳಂತೆ ಸುಮ್ಮನೆ ದೋಣಿಯಲ್ಲಿ  ಸೈಲೆಂಟಾಗಿ ಕುಳಿತು ಈ ಕೌತುಕಮಯ  ಸನ್ನಿವೇಶ ನೋಡುತ್ತಾ ಇದ್ದೆವು.ಪಕ್ಕದಲ್ಲಿದ್ದ  ಅರಣ್ಯ ಇಲಾಖೆ ಸಿಬ್ಬಂದಿ "ಸಾ ಅದು ಈಟ್ ಗೆಬಂದದೆ, ,ಹೆಣ್ಣಾನೆ ಜೊತೆಗೆ ಸಿಕ್ಕಿಲ್ಲ ಅದ್ಕೆಯಾ ಇಂಗೆ ಆಡ್ತದೆ " ಅಂತಾ ಪಿಸುಗುಟ್ಟಿದರು. ನಂತರ ನಮ್ಮನ್ನು ನೋಡಿದ ಆ ಆನೆ ಕೋಪದಿಂದ ಸೊಂಡಿಲು ಬಡಿದು ಸರ ಸರನೆ ಮಾಯವಾಯಿತು. ಅಷ್ಟು ರಭಸದಿಂದ ಹೆಜ್ಜೆ ಹಾಕಿದರೂ  ಆನೆಯ ಹೆಜ್ಜೆಯ ಸಪ್ಪಳ ನಮಗೆ ಕೇಳಿಸಲಿಲ್ಲ.ಆನೆಯ ವಿಶಿಷ್ಟತೆ ಇದು  ಕಾಡಿನಲ್ಲಿ ಆಷ್ಟು ಮೌನತೆ ಇದ್ದರೂ ಶಬ್ದಮಾಡದೆ ಚಲಿಸುವ ಗುಣ ಆನೆಗಿದೆ. ಬನ್ನಿ ಚಿತ್ರ ನೋಡೋಣ .

    
ಕೋಪದಿಂದ ನಿಂತಿದ್ದ ಒಂಟಿ ಸಲಗ
ಶೀರ್ಷಿಕೆ ಸೇರಿಸಿ
 
ಬಲ ಭೀಮ ಇವನು

ಹಸಿ ಬಿದಿರಿನ ಬೊಂಬು ಮುರಿಯುವ ಆ ಕ್ಷಣ   
ಆನೆ ಹಸಿ ಬಿದಿರ ಬೋಂಬನ್ನು ಮುರಿದ  ಆ ಕ್ಷಣ!!
ನಮ್ಮನ್ನು ನೋಡಿ ಎಸ್ಕೇಪ್ ಆದ ಆನೆ.


 ಇಲ್ಲಿಯವರೆಗೂ ಒಂಟಿ ಸಲಗಗಳ ಬಗ್ಗೆ ಆಯ್ತು ಬನ್ನಿ ಆನೆಗಳ ಗುಂಪಿನ ಲೋಕಕ್ಕೆ ಬೇಸಿಗೆಯಲ್ಲಿ ಕಬಿನಿ ಒಣಗಿ ಹೋಗಿ ಕಾಡಿನ ಎಲ್ಲಾ  ಪ್ರಾಣಿಗಳು ನದಿಯ ಎರಡೂ ಬದಿಯಲ್ಲಿ ಗುಂಪಾಗಿ ಕಾಣಿಸಿಕೊಳ್ಳುತ್ತವೆ ,ಆದ್ರೆ ಹಸಿವಿಲ್ಲದೆ ಯಾವ ಪ್ರಾಣಿಯೂ  ಮತ್ತೊಂದು ಪ್ರಾಣಿಯನ್ನು ಬೇಟೆ ಆಡುವುದಿಲ್ಲ.ಆದಾಗ್ಯೂ ಗುಂಪಾಗಿ  ಬಹಳ ಎಚ್ಚರಿಕೆಯಿಂದ ಜೀವಿಸುತ್ತವೆ.ನಾವು  ಬೇಸಿಗೆಯಲ್ಲಿ ಹೋದಾಗ ನದೀ ಪಾತ್ರ ಒಣಗಿ ಹಿಂದೆ ದೋಣಿಯಲ್ಲಿ ಕುಳಿತು ತೇಲಿದ ಪ್ರದೇಶದಲ್ಲಿ  ವಾಹನದಲ್ಲಿ ಹೋಗಬಹುದಾಗಿತ್ತು, ಹಾಗಾಗಿ ಈ ಬಾರಿ ಬಹಳಷ್ಟು ಓಡಾಡ್ತಾ ನಡೆಸಿದೆವು ಗುಂಪು ಗುಂಪಾಗಿ ಕಂಡ ಆನೆಗಳ ಮೇಳ  ಕಾನನದಲ್ಲಿ ನಡೆದಿತ್ತು. ಬಹುಶಃ ಜೀವನದಲ್ಲಿ ಒಮ್ಮೆಗೆ ಅಷ್ಟೊಂದು  ಆನೆಗಳನ್ನು  ನೋಡಿರಲಿಲ್ಲ. ಆನೆಗಳ ಗುಂಪನ್ನು ಬೆಳಗಿಂದ ಸಂಜೆವರೆಗೆ ನೋಡಿದರೂ ಬೇಸರ ವಾಗಲಿಲ್ಲ ಬನ್ನಿ ನೀವೂ ಅದನ್ನು ನೋಡಿ.                       
ಹಸಿರ ಕಾನನದಿ ಮೆರೆದಿದ್ದ  ಗಜ ಸಮೂಹ !!

ಬಾ ಮಗು ಜೊತೆಯಾಗಿ ಸಾಗೋಣ!!!
          
ಯಾರೋ ಬಂದ್ರೂ ನಡೀರಿ ಹೋಗೋಣ!!
ನಮ್ಮ ಸಂಸಾರ ಆನಂದ ಸಾಗರ !!!
ಕಾಡಿನ ಮಕ್ಕಳು ನಾವೆಲ್ಲಾ!!
ನಮ್ಮದೇ  ಕೋಟೆ ನಮ್ಮ ಮರಿಗಳನ್ನು ರಕ್ಷಿಸಲು
                                                       
ಆನೆಗಳ ಸಾಮ್ರಾಜ್ಯದಿಂದ ಹೊರಗೆ ಬರುವಾಗ ಕೊನೆಯ ಚಿತ್ರದಲ್ಲಿನ ದೃಶ್ಯ ನನ್ನ ಮನ ಕಲಕಿತು. ಹೌದು ಈ ಆನೆಗಳು ಒಂದು ಮರಿಯನ್ನು ರಕ್ಷಿಸಲು ನಿಂತ ಪರಿ ನನ್ನ ಮಾನವ ಸಂಕುಚಿತ ಬುದ್ದಿಗೆ ದಿಕ್ಕಾರ ಕೂಗಿದಂತಿತ್ತು.  ನಾವೇನು ಕಡಿಮೆಯೇ ಪ್ರಾಣಿಗಳು ಹಸಿದಾಗ ಬೇಟೆಯಾಡಿದರೆ ನಾವು ಹೊಟ್ಟೆ ತುಂಬಿದ್ದರೂ ಬರಗೆಟ್ಟವರಂತೆ ಬಕಾಸುರರಾಗಿ ಸಿಕ್ಕಿದ್ದೆಲ್ಲವನ್ನೂ ಕಬಳಿಸಿ ಬೇರೆ ಜೀವಿಗಳ ನೆಮ್ಮದಿ ಹಾಳು ಮಾಡಿ ಮೆರೆದಿರುವ ಬಗ್ಗೆ ನಾಚಿಕೆಯಾಯಿತು.[ಬ್ಲಾಗಿಗೆ ಪ್ರಕಟಿಸಲು ಆನೆಗಳ  ಗುಂಪು ಬಗ್ಗೆ ಕೆಲವು ಫೋಟೋಗಳನ್ನು ನೀಡಿದ ಶ್ರೀಧರ್ ಗೆ ಧನ್ಯವಾದಗಳು.]

Wednesday, January 5, 2011

ಕಾನನದ ವಿಸ್ಮಯ ಸಾಮ್ರಾಜ್ಯದಲ್ಲಿ !! ನಾವರಿಯದ ಲೋಕ !!!

ಕಾಡಿನ ಆಭರಣಗಳು


ಅಪ್ಪಚ್ಚಿಯಾದ ಟೈರ್ ಅನ್ನು  ಜೀಪಿನಲ್ಲಿ ಹಾಕಿಕೊಂಡು  ನಾವಿದ್ದ ಜಾಗದಿಂದ ಕೇರಳದ  ಮಾನಂದವಾಡಿಗೆ ಬಂದೆವು.ಒಂದು ಟೈರ್ ಷೋ ರೂಂ ಬಳಿಬಂದು  ನಮ್ಮ ಎರಡೂ  ಟೈರ್ ಪಂಚರ್ ಕಥೆ  ಹೇಳಿದಾಗ   ನಮ್ಮನ್ನು ನೀವು ಮನುಷ್ಯರೇ?? ಅನ್ನುವಹಾಗೆ ನೋಡಿ ಅಚ್ಚರಿಪಟ್ಟರು.ಅಲ್ಲಿದ್ದ ಒಬ್ಬರು ಒಂದು   ಟೈರ್ ಬಿಚ್ಚಿ ನೋಡಿದರೆ ಒಳಗಿದ್ದ ಟ್ಯೂಬೆ ಮಾಯ !!!ಅವರಿಗೆ ಅಚ್ಚರಿ" ಏನ್ ಸಾರ್ ಇದು ಟ್ಯೂಬು ರವೆ ಆದಂಗೆ ಆಗಿದೆ" ಅಂತಾ ಮಾತಾಡಿ "ಏನ್ ಮಾಡೋದು"?? ಅಂತಾ ನಮ್ಮ ಕಡೆ ನೋಡಿ ಟೈರ್ ನೋಡಿದ್ರೆ ಅದರ ಆಯಸ್ಸೂ ಮುಗಿದೆಹೊಗಿತ್ತು. ಆಗ ವೇಣು" ಹೋಗ್ಲಿ ಹೊಸ ಟೈರ್ ಟ್ಯೂಬು ಸಿಗುತ್ತಾ???" ಅಂತಾ ಕೇಳಿದ್ರೆ ಟೈರ್ ನೋಡಿ "ನಿಮ್ದೂ ಹೊಸ ಅಳತೆಯ ರೇಡಿಯಲ್ ಟೈರು ಇಲ್ಲಿ ಲಭ್ಯವಿಲ್ಲ ,ತಾಳಿ ಬೇರೆಡೆ ವಿಚಾರಿಸುತ್ತೇನೆ "ಅಂತಾ ಹೇಳಿ ಸುಮಾರು ಹತ್ತು ಕಡೆ ಫೋನ್ ಮಾಡಿ ವಿಚಾರಿಸಿ" ಸಾರಿ ಸರ್ ನಿಮಗೆ ಕೇರಳದಲ್ಲಿ ಈಗ ಈ ಹೊಸ ನಮೂನೆ ಟೈರ್ ಟ್ಯೂಬ್ ಸಿಗಲ್ಲಾ ನೀವು ಮೈಸೂರು ಅಥವಾ ಬೆಂಗಳೂರ್ ನಲ್ಲೆ ಪ್ರಯತ್ನಿಸಿ ಅಂದ್ರೂ !!," "ಅದ್ಸರಿಯಪ್ಪಾಈಗೇನು ಮಾಡೋದು"? ಅಂತಾ ಕೈಚೆಲ್ಲಿ ಕುಳಿತಾಗ "ತಾಳಿ ಮತ್ತೊಂದು ಟೈರ್ ನೋಡ್ತೀನಿ" ಅಂತಾ ಹೇಳಿ ಅದನ್ನೂ ಸಹ ಪರೀಕ್ಷಿಸಿ "ಇದನ್ನು ತಾತ್ಕಾಲಿಕವಾಗಿ ರಿಪೇರಿ ಮಾಡ್ತೀನಿ ನಿಧಾನವಾಗಿ ಹೋದ್ರೆ ಮೈಸೂರು ತಲುಪಲು ಆಗುತ್ತೆ" ಅಂತಾ ಹೇಳಿ ಒಂದು ಟೈರ್ ಹಾಗು ಟ್ಯೂಬನ್ನು ಸರಿಪಡಿಸಿಕೊಟ್ಟರು.ನಾವು ವಾಪಸ್ಸು ಬಂದು ಸರಿಯಾಗಿದ್ದ ಟೈರನ್ನು ಕಾರಿಗೆ ಹಾಕಿದ್ವಿ.ಮತ್ತೆ ಕಾರನ್ನು   ಡಿ.ಬಿ.ಕುಪ್ಪೆಗೆ ತಂದು ನಿಲ್ಲಿಸಿ  ಅರಣ್ಯ ಇಲಾಖೆ ಸಿಬ್ಬಂದಿ ಒದಗಿಸಿದ ಬಾಡಿಗೆಯ ಜೀಪ್ನಲ್ಲಿ ಕಾಡಿನಲ್ಲಿ ಸುತ್ತಾಟ ಮಾಡಿದ್ವಿ .ಹಿಂದೆ  ಕೈಮರ ನೋಡಿದ್ದ  ನಾವು ಈಗ  " ಕುದುರೆ ಸತ್ತ ಹಳ್ಳ " 



ಸುತ್ತಿನ ಹಳ್ಳ  ಕ್ಯಾಂಪ್



ಕ್ಯಾಂಪ್ ಕಡೆ ಹೊರಟೆವು ಇದೊಂದು ದಟ್ಟ ಅರಣ್ಯದ ಮಧ್ಯೆ ಇರುವ ಕಾಡು ಕಳ್ಳರ ನಿಗ್ರಹ  ಕ್ಯಾಂಪ್ ಆಗಿದೆ. ಹಿಂದೊಮ್ಮೆ ಮಹಾರಾಜರು ಈ ಜಾಗಕ್ಕೆ ಬೇಟೆಗಾಗಿ ಬಂದ ಸಮಯದಲ್ಲಿ  ಅವರ ಕುದುರೆ ಮರಣ ಹೊಂದಿದ ಕಾರಣ ಈ ಕ್ಯಾಂಪಿಗೆ " ಕುದುರೆ ಸತ್ತ ಹಳ್ಳ " ಕ್ಯಾಂಪ್ ಎಂದು ನಾಮಕರಣ ಮಾಡಲಾಗಿದೆ.ಇಂತಹ ಕ್ಯಾಂಪ್ಗಳಲ್ಲಿ ಅರಣ್ಯ ಇಲಾಖೆಯ " ಫಾರೆಸ್ಟ್ ವಾಚರ್ಸ್ "  ಉಳಿದು ಹಗಲುರಾತ್ರಿ ಕರ್ತವ್ಯ ನಿರ್ವಹಿಸುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಈ ಕ್ಯಾಂಪುಗಳಲ್ಲಿ ಕುಡಿಯುವ ನೀರಿನ ಸೌಲಭ್ಯ , ವಿಧ್ಯುತ್ ಬೆಳಕಿನ ಸೌಲಭ್ಯ ಇರುವುದಿಲ್ಲ ,ಕುಡಿಯುವ ನೀರನ್ನು ತರಲು ಹಲವು ಕಿ.ಮಿ.ದೂರ ನಡೆದು ತರಬೇಕು. ರಾತ್ರಿವೇಳೆಕಾಡಿನಲ್ಲಿ ಗಸ್ತು ತಿರುಗುವ ಇವರು ಎತ್ತರದ ಮರ ಏರಿ ಕಾಡಿನಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಹಾಗು ಬೇಟೆಗಾರರ ಬಗ್ಗೆ ವೀಕ್ಷಣೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ವೈರ್ ಲೆಸ್ ಮೂಲಕ  ವರಧಿ ನೀಡಬೇಕು. ಕತ್ತಲಲ್ಲಿ ಬೆಳಕು ಹರಿಸದೆ ಅರಣ್ಯ ಕಳ್ಳರ ಚಲನ ವಲನ ಗಳ ಮಾಹಿತಿ ತಿಳಿಯುತ್ತಾರೆ. ಬೆಳಕಿದ್ದಾಗಲೇ ಅರಣ್ಯದಲ್ಲಿ ನೆಟ್ಟಗೆ ನಡೆಯಲಾಗದ ನಾವು ಇವರ ಕಾರ್ಯ ಶ್ಲಾಘಿಸಲೇ  ಬೇಕು. ಒಮ್ಮೊಮ್ಮೆ ಇವರು ಕಾಡಿನ ಕಳ್ಳರ ಬಂದೂಕದ ಗುಂಡಿನಿಂದ  ಗಾಯಗೊಂಡಿದ್ದು  ಉಂಟೆಂದು ತಿಳಿದುಬರುತ್ತದೆ ..ಕಾಡು ಪ್ರಾಣಿಗಳ ಮದ್ಯೆ  ಧೈರ್ಯದಿಂದ ಕಾಡು ಗಳ್ಳರ  ವಿರುದ್ದ  ಪ್ರತಿಕ್ಷಣವೂ ಕಾರ್ಯ ನಿರ್ವಹಣೆ ಮಾಡುತ್ತಿರುವ ಇವರು ಯಾವ ಯೋಧನಿಗೂ ಕಮ್ಮಿ ಇಲ್ಲವೆನ್ನಿಸುತ್ತದೆ. ಪಾಪ ನಮ್ಮ ಸಮಾಜ ಇಂತಹ ಸಿಬ್ಬಂದಿ ಗಳನ್ನೂ ಗುರುತಿಸಲು ವಿಫಲವಾಗಿರುವುದು ವಿಷಾದನೀಯ.ನಾವಿದ್ದಾಗ ಒಮ್ಮೆ ವೈರ್ ಲೆಸ್ ಲಿಂಕ್ ಸಿಕ್ತಿಲ್ಲಾ ಅಂತಾ ಒಬ್ಬರು ರಾತ್ರಿವೇಳೆ  ಕಗ್ಗತ್ತಲಿನಲ್ಲಿ ಸರ ಸರನೆ ಎತ್ತರದ ಮರ ಏರಿ ವೈರ್ ಲೆಸ್  ಮೂಲಕ ಯಾವುದೇ ತೊಂದರೆ ಇಲ್ಲವೆಂದು ಮಾಹಿತಿ ನೀಡಿದರು.ಅಚ್ಚರಿಯೆಂದರೆ ಆ ಮರ ಸುಮಾರು ಐನೂರು ಅಡಿಗಳಿಗೂ ಮೀರಿದ ಎತ್ತರ ವಾಗಿತ್ತು. ನಾವು ನೋಡಿದ ಈ ಕ್ಯಾಂಪ್ ಕಾಡಿನ ಮಧ್ಯದಲ್ಲಿದ್ದು ಒಂದು ಹಳೆಯ ಅರ.ಸಿ.ಸಿ ಕಟ್ಟಡ ಹೊಂದಿತ್ತು,[ಕೆಲವು ಕ್ಯಾಂಪ್   ಗಳಲ್ಲಿ ಹರಿದ ಟಾರ್ಪಾಲಿನಿಂದ  ಮಾಡಿದ ಶೆಡ್ದೆ ಗತಿ !!]ಅದರ  ಸುತ್ತಲು ಆನೆಗಳಿಂದ ರಕ್ಷಣೆ ಪಡೆಯಲು  ಹಳ್ಳ ತೆಗೆಯಲಾಗಿತ್ತು.  ಸನಿಹದಲ್ಲಿ ""ಮಸಾಲೆ ಬೆಟ್ಟ"" ವಿದ್ದು ಅಲ್ಲಿ ಗಂಧದ ಗುಡಿ ಚಿತ್ರದ ಕೆಲವು ದೃಶ್ಯಗಳನ್ನು  ಚಿತ್ರೀಕರಿಸಿರುವುದಾಗಿ ತಿಳಿದು ಬಂತು.ನಾವು ಸಹ ಅಲ್ಲಲ್ಲಿ ಕೆಲವುಜಾಗಗಳ ಬಗ್ಗೆ ತಿಳಿದುಕೊಂಡೆವು ಅರಣ್ಯ ಸಿಬ್ಬಂದಿ ಪ್ರೀತಿಯಿಂದ ಜಾಗಗಳ ಪರಿಚಯ ಮಾಡಿಕೊಟ್ಟರು.




ಯಾರದು..... ?


ಸನಿಹದಲ್ಲೇ ಮೇಯುತ್ತಿದ್ದ ಕಾಡೆಮ್ಮೆಯ ಚಿತ್ರ ತೆಗೆದು ಅಲ್ಲಿನವರು ಕಾಡು ಪ್ರಾಣಿಗಳ ಬಗ್ಗೆ ತಮ್ಮ ಅನುಭವ ಹೇಳುವುದನ್ನು ಕೇಳಿದೆವು.ನಮ್ಮ ಪಯಣ ಹಾಗೆ ಸಾಗಿತ್ತು ದಾರಿಯಲ್ಲಿ ನಮಗೆ ಜಿಂಕೆಗಳ





ಇಲ್ಲಿ ನಮ್ಮದೇ ದರ್ಭಾರ್



ಹಾಗು ಲಾಂಗೂರ್  ಗಳ ದರ್ಶನ ಅಲ್ಲಲ್ಲೇ ಆಗುತ್ತಿತ್ತು.ಮುಂದುವರೆದು ಎಂಟನೆ ಮೈಲಿಕಲ್ಲು ಕ್ಯಾಂಪ್ಗೆ ಬಂದೆವು  ಈ ಕ್ಯಾಂಪ್ ವಿಶೇಷವೆಂದರೆ






anti poaching camp





ಇದು ಸಂಪೂರ್ಣ ಮರದ ಅಟ್ಟಣಿಗೆ ಸುತ್ತಲೂ ರಮಣೀಯ ಪ್ರದೇಶದಿಂದ ಕೂಡಿದ್ದು






ಕ್ಯಾಂಪಿನ ಒಳಗೆ ನಾವೆಲ್ಲಾ



ಮೇಲೆ ಹತ್ತಿ ನೋಡಿದರೆ ಸುಂದರ ದೃಶ್ಯಾವಳಿಗಳು ಕಾಣುತ್ತದೆ.ಮುಂದೆ ಸಾಗಿದ ನಾವು ಕಾಡಿನ ಮರಗಳ ಬಗ್ಗೆ ಹಲವು ವಿಚಾರಗಳನ್ನು ಅರಿತು ಕೊಂಡೆವು ನಮ್ಮ ಜೊತೆಯಲ್ಲಿದ್ದವರು ಅಲ್ಲೇ ಇದ್ದ ಒಂದು ಮರವನ್ನೂ ನಾವು ನಾಲ್ಕೂ ಜನರೂ ತಬ್ಬಿಕೊಳ್ಳಲು ಹೇಳಿದರು!! ನಾವು ನೋಡಿದ ಮರ ಸಣ್ಣದಾಗಿ ಕಂಡರೂ  ನಾವು ನಾಲ್ಕೂ ಜನ ಕೈಗಳಸರಪಣಿ ನಿರ್ಮಿಸಿ ಆ ಮರವನ್ನು ತಬ್ಬಿದರೂ ಪೂರ್ಣ ಮರವನ್ನು ಬಳಸಲು ನಿಮ್ಮಿಂದ ಆಗಲಿಲ್ಲ .ಮತ್ತೊಂದು ಮರವನ್ನು ತೋರಿಸಿದಾಗ ಆ ಮರದಲ್ಲಿ ಗುಹೆಯಂತೆ ಬಾಗಿಲು ಉಂಟಾಗಿರುವುದನ್ನು ನೋಡಲು ಹತ್ತಿರ ಹೋಗಿ ಕ್ಯಾಮರಾ ಮೂಲಕ ಮರದಲ್ಲಿ ಇಣುಕಿ





ವಿಸ್ಮಯದ ಮರ




ನೋಡಿದರೆ ಕಣ್ಣು ಹಾಯಿಸಿದಷ್ಟೂ ದೂರ  ಸುರಂಗ ದಂತೆ ಮರದಲ್ಲಿ ಟೊಳ್ಳು ಇತ್ತು. ಹಲವು ಮರಗಳ ಪರಿಚಯ ಮಾಡಿಕೊಂಡು ಧನ್ಯರಾದ ನಾವು ಡಿ.ಬಿ.ಕುಪ್ಪೆಯ ಮಾರ್ಗ  ಹಿಡಿದೆವು. ದಾರಿಯ  ನಡುವೆ ಸಿಕ್ಕ ಊರಿನಲ್ಲಿ






ಕಾಡಿನಲ್ಲಿ ಬದುಕಲು ಬೇಕಾದ ವಿಧ್ಯೆ



ಒಬ್ಬ ಗಿರಿಜನ ವ್ಯಕ್ತಿ  ಬಿದಿರಿನ ಬೊಂಬು ಕಡಿದು ಏನೋ ಮಾಡುತ್ತಿದ್ದರು  ಅಚ್ಚರಿಯೆಂದರೆ  ಅವರ   ಸಮೀಪ ನಿಂತೊಡನೆ ಕಲಾತ್ಮಕವಾಗಿ  ಬಿದಿರಿನ ಬೊಂಬಿನ ಅಂದ ಕೆಡದಂತೆ ಪರಿಸರಕ್ಕೆ ಹಾನಿಯಾಗದ ಒಂದು ಕಲಾತ್ಮಕ ಕುಡಿಕೆ ಮಾಡಿಕೊಟ್ಟರು.







ಮಾಡುವ ಕೆಲಸವನ್ನು ನಗು ನಗುತ್ತಾ ಮಾಡಿ




 ಇಂತಹ ಕುಡಿಕೆಗಳನ್ನು ಕಾಡಿನ ಕ್ಯಾಂಪ್ ಗಳಲ್ಲಿ ಧಾನ್ಯ ಸಂರಕ್ಷಣೆಗೆ, ನೀರು ಉಪಯೋಗಿಸಲು  ಬಳಸುತ್ತಿದ್ದುದು ಜ್ಞಾಪಕಕ್ಕೆ ಬಂದಿತ್ತು. ಆ ವ್ಯಕ್ತಿಯ ನಗು ಮುಖ ಯಾಕೋ ಕಾಣೆ ನನ್ನನ್ನು ಸೆಳೆದು ಬಿಟ್ಟಿತು.ನಿಷ್ಕಲ್ಮಶ ಪ್ರೀತಿಯಿಂದ ಅವರು  ನನಗೆ ನೀಡಿದಕಾಣಿಕೆ ಸುಮಾರು ತಿಂಗಳು ನನ್ನ ಜೊತೆಯಲ್ಲಿದ್ದು ಇವರ ಪ್ರೀತಿಯನ್ನು ಜ್ಞಾಪಿಸುತ್ತಿತ್ತು.!!!!!





ಕಾನನದ  ನಟ್ಟ ನಡುವಿನ ಹಾದಿ




ಕಾಡಿನ ಸುಂದರ ದೃಶ್ಯಗಳು ಅಂದಿನ ಕನಸಿನಲ್ಲಿ ಪದೇ ಪದೆ ಬಂದ್ದಿದ್ದವು.