Saturday, March 29, 2014

ಆದಿ ಕವಿ ಪಂಪನ ಪ್ರೀತಿಯ ಬನವಾಸಿಯಲ್ಲಿ , ಕೋಟೆ ಇತ್ತಂತೆ ...... !!!

ಬನವಾಸಿಗೆ  ಸ್ವಾಗತ


ನಮಸ್ಕಾರ  ಗೆಳೆಯರೇ , ಮೊದಲು ನಿಮಗೆ  ಯುಗಾದಿ ಹಬ್ಬದ  ಶುಭಾಶಯಗಳು, "ಜಯ ನಾಮ ಸಂವತ್ಸರ " ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಶುಭ ತರಲಿ. ಬೇವೂ ಬೆಲ್ಲಾ  ಮಿಳಿತದ ಜೀವನದ  ಹಾದಿ ಯುಗಾದಿಯ ಸಂಭ್ರಮದಲ್ಲಿ ಜಯದ ಹಾದಿಯಾಗಿ ಪರಿವರ್ತನೆ ಆಗಲಿ ಎಂದು ಹಾರೈಸುತ್ತೇನೆ .


   ಕಳೆದ ಸಂಚಿಕೆಯಲ್ಲಿ    "ಮತ್ತೊಮ್ಮೆ ಶಿರಸಿಯ ನೆನಪು ..... !!ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ" . ಎಂಬ ಲೇಖನ ಬರೆದಿದ್ದೆ,  ಅಚ್ಚರಿ ಮೂಡಿಸುವಂತೆ ನಿಮ್ಮೆಲ್ಲರ ಒಳ್ಳೆಯ  ಪ್ರೋತ್ಸಾಹ ಸಿಕ್ಕಿದೆ.  ಬಹಳಷ್ಟು ಜನ ಶಿರಸಿಯವರು  ಕರೆ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದು   ಖುಷಿಯಾಯಿತು . ಈಗ ಮತ್ತೊಂದು ವಿಚಾರಕ್ಕೆ  ಹೋಗೋಣ ಬನ್ನಿ , ಶಿರಸಿಯ ಸಮೀಪದ  ಐತಿಹಾಸಿಕ   ಊರಿನ ಬಗ್ಗೆ  ಹಾಗು ಅಲ್ಲಿನ ಕೋಟೆಯ ಬಗ್ಗೆ ಸಿಕ್ಕ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ . ಬನ್ನಿ ನಿಮಗೆ ಸ್ವಾಗತ.


ಬನವಾಸಿ  ಮಧುಕೇಶ್ವರ ಸ್ವಾಮಿ


 ಬನವಾಸಿ  ನಮ್ಮ ಕನ್ನಡ ನೆಲದ ಒಂದು  ಅದ್ಭುತ  ಪುರಾತನ ಊರು ,  ಕಳೆದ ಎರಡು ವರ್ಷದ ಹಿಂದೆ  ಹರ್ಷ ಹೆಗ್ಡೆ  ಜೊತೆಗೆ  ಬನವಾಸಿಯ  ಪ್ರಥಮ  ದರ್ಶನ ಆಗಿತ್ತು,  ನನ್ನ ಪಯಣದ ಹಾದಿಯ ಬಗ್ಗೆ ಸಿಕ್ಕ ಅಲ್ಪ ಮಾಹಿತಿಯನ್ನು  ಆಧರಿಸಿ ಈ ಊರಿನ ಬಗ್ಗೆ  ಹಿಂದೆ ನನ್ನ ಬ್ಲಾಗ್ ನಲ್ಲಿ  ಬರೆದಿದ್ದೆ ೧] http://nimmolagobba.blogspot.in/2012/10/9.html  ,
 ೨] http://nimmolagobba.blogspot.in/2012/10/10.html   ಆದರೂ ತೃಪ್ತಿ ಸಿಕ್ಕಿರಲಿಲ್ಲ, ಅಲ್ಲೇ ದೇವಾಲಯದ ಸಮೀಪ ಗೋಡೆಯ ಮೇಲೆ ಬನವಾಸಿ ಕೋಟೆ  ಎಂದು ಬರೆದಿದ್ದ ಬಗ್ಗೆ  ಕೇಳಲಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ, ಆದರೆ ಹುಡುಕಾಟ ನಿಲ್ಲಲಿಲ್ಲ, ಕೊನೆಗೂ ಬನವಾಸಿ ಕೋಟೆ ಬಗ್ಗೆ ಅಧಿಕೃತ ಎನ್ನುವಂತಹ  ಮಾಹಿತಿ  ದೊರಕಿದೆ .ಬನವಾಸಿಯ  ಉಪಗ್ರಹ ಚಿತ್ರ


ಬನವಾಸಿ ಶಿರಸಿ ತಾಲೂಕಿನ ಒಂದು ಹೋಬಳಿ ಕೇಂದ್ರ , ಶಿರಸಿ ಯಿಂದ ೨೨ ಕಿ. ಮಿ . ದೂರವಿದೆ, ಬನವಾಸಿ ಯ ಉಲ್ಲೇಖ ಮಹಾಭಾರತದಲ್ಲಿ  "ವನವಾಸಿಕ"  ಎಂಬ ಹೆಸರಿನಿಂದ ಕರೆಯಲಾಗಿದೆ, ಕೆಲವು ಶ್ರೀ ಲಂಕೆಯ ಬೌದ್ಧ  ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ  ಅಶೋಕ ಚಕ್ರವರ್ತಿ  ಬೌದ್ಧ ಮತ ಸ್ವೀಕಾರ ಮಾಡಿದ ನಂತರ    ರಖಿತ  ಎಂಬ ಬೌದ್ಧ ಸನ್ಯಾಸಿ ಯನ್ನು   ಬನವಾಸಿಗೆ  ಕಳುಹಿಸಿರುವುದಾಗಿ ಹೇಳಲಾಗಿದೆ .  ಚುಟು ವಂಶಸ್ಥ  ರಾಜರ  ಆಳ್ವಿಕೆಯನ್ನೂ   ಸಹ ಈ ಊರು  ಕಂಡಿದೆ .. ಕದಂಬರ ಕಾಲದಲ್ಲಿ "ಜಯಂತಿ ಪುರ ಅಥವಾ ವೈಜಯಂತಿ " ಎಂಬ ಹೆಸರಿನಿಂದ ಮೆರೆದ ಊರು ಬನವಾಸಿ, ಆದಿ ಕವಿ ಪಂಪ  ರಚಿಸಿದ  "ವಿಕ್ರಮಾರ್ಜುನ ವಿಜಯ"   ದಲ್ಲಿ, ಹಾಗು ಚಾಮರಸನ " ಪ್ರಭುಲಿಂಗ ಲೀಲೆ" ಯಲ್ಲಿ  ಬನವಾಸಿಯ  ವರ್ಣನೆ  ಇದೆ .ಮಧುಕೇಶ್ವರ ದೇವಾಲಯದ  ನಕ್ಷೆ [ ಚಿತ್ರ ಕೃಪೆ ಗೆಜೆಟ್ ]

 ಬನವಾಸಿ ಎಂದರೆ ಶ್ರೀ  ಮಧುಕೆಶ್ವರ  ಸ್ವಾಮಿಯ  ಉಲ್ಲೇಖ  ಇರಲೇಬೇಕು .  ಮಧುಕೇಶ್ವರ  ದೇವಾಲಯದ ಬಗ್ಗೆ ಹಲವಾರು  ಮಾಹಿತಿಗಳಿವೆ,  ಕದಂಬರ ಕಾಲದಲ್ಲಿ ಈ ದೇವಾಲಯ ಇಟ್ಟಿಗೆಯಿಂದ ನಿರ್ಮಿತವಾಗಿ , ನಂತರ  ಕಲ್ಲಿನಿಂದ  ನಿರ್ಮಾಣ ಮಾಡಲಾಗಿದೆಯೆಂದು ಕೆಲವು ಇತಿಹಾಸ ತಜ್ಞರು ಹೇಳುತ್ತಾರೆ.   ಈ ದೇವಾಲಯದ ಬಗ್ಗೆ  ಪ್ರಾಚ್ಯವಸ್ತು ತಜ್ಞರ ಅಭಿಪ್ರಾಯ ಹೀಗಿದೆ, ಮೂಲತಹ ಈ ದೇವಾಲಯ ವಿಷ್ಣು ದೇವಾಲಯ ಆಗಿತ್ತೆಂದೂ ಕಾಲಾನಂತರ ಇದನ್ನು  ಪರಿವರ್ತಿಸಿ  ಶಿವ ದೇವಾಲಯವಾಗಿಸಲಾಗಿದೆ, ಎಂದು ಹೇಳಲಾಗುತ್ತದೆ ,ಮಾಹಿತಿ ಏನಾದರೂ ಇರಲಿ ಕೆಲವು ಶತಮಾನಗಳಿಂದ ಇಲ್ಲಿ ಮಧುಕೇಶ್ವರ ನೆಲೆಸಿರುವುದು ನಿಜ.ಮೊದಲು ಯಾವುದೇ ರಾಜ ಧರ್ಮ ಬದಲಾವಣೆ ಮಾಡಿದರೆ   ದೇವಾಲಯಗಳ  ರೂಪದಲ್ಲಿಯೂ ಸಹ  ಸಹಜವಾಗಿ  ಬದಲಾವಣೆ ಆಗುತ್ತಿತ್ತು, ಅದನ್ನು ಪ್ರಜೆಗಳೂ ಸಹ ಒಪ್ಪಿಕೊಳ್ಳುತ್ತಿದ್ದರು.ಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣು  ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು.ಈ ದೇವಾಲಯ ಮೂಲತಹ  ಕದಂಬರ ಕಾಲದಲ್ಲಿ ನಿರ್ಮಾಣವಾಗಿ, ನಂತರ ಚಾಲುಕ್ಯ, ಹಾಗು ಸೋಂದೆ ಅರಸರ ಕಾಲದಲ್ಲಿ  ನವೀಕೃತಗೊಂಡಿದೆ , ಈ ಅರಸರುಗಳೇ ತಮ್ಮ ಕಾಲದಲ್ಲಿ ಹೊಸದನ್ನು ಸೇರ್ಪಡೆ  ಮಾಡಿದ್ದಾರೆ . ದೇವಾಲಯದಲ್ಲಿ, ಇಂದ್ರ, ಅಗ್ನಿ, ಪಾಂಡುರಂಗ, ವಿಶ್ವೇಶ್ವರ , ವರದೇಶ್ವರ , ಹವಲಿ ಮಧುಕೇಶ್ವರ , ಯಮ, ಕೇದಾರೇಶ್ವರ, ಚಿಂತಾಮಣಿ ಗಣಪತಿ, ನಿರುತಿ, ದುಂಡಿರಾಜ ಗಣಪತಿ, ಲಕ್ಷ್ಮೀನರಸಿಂಹ ಸ್ವಾಮಿ, ರಾಮೇಶ್ವರ, ಬಸವಲಿಂಗೇಶ್ವರ ,, ವಾಯು, ಸೂರ್ಯ ನಾರಾಯಣ, ಅರ್ಧಗಣಪತಿ, ಪರಶುರಾಮ, ಆಧಿಶೇಷ ,ಕೇಶವ, ಕುಬೇರ, . ಈ ದೇವಾಲಯದ ಕೆಲವು ಶಿವ ವಿಗ್ರಹಗಳನ್ನು ೧೭೫೩ ರಲ್ಲಿ ಸೋಂದ ಸದಾಶಿವರಾಯ  ಅರಸರು ಸ್ಥಾಪಿಸಿದರೆಂದು ತಿಳಿಯುತ್ತದೆ.     


ಮಧು ಕೇಶವರ ದೇವಾಲಯ ಪಕ್ಷಿ ನೋಟ

ಈ ದೇವಾಲಯದಲ್ಲಿ   ಸೋಂದಾರಾಜ್ಯದ ಒಂದನೇ ಸದಾಶಿವ ನಾಯಕರು ನೀಡಿರುವ ಕಲ್ಲಿನ ಸುಂದರ ಕೆತ್ತನೆಯ ಮಂಚ ವಿದೆ , ಅದನ್ನು ಆಸ್ಥಾನ ಮಂಟಪ ಎನ್ನುತ್ತಾರೆ . ಸುಂದರ ದೇವಾಲಯ  ವಿವರವಾಗಿ ನೋಡಲು ಕನಿಷ್ಠ ಒಂದು ವಾರ ಬೇಕಾಗುತ್ತದೆ,  ಈ ದೇವಾಲಯದಲ್ಲಿ  ಮಯೂರ ವರ್ಮ, ಪಂಪ ಮಹಾ ಕವಿ,  ಎಲ್ಲೆಲ್ಲಿ ನಡೆದಾದಿರಬಹುದು  ಎಂಬುದನ್ನು ಕಲ್ಪಿಸಿಕೊಳ್ಳಲು  ಮನ ಹಾ ತೊರೆಯುತ್ತದೆ.  ಭಾರತ ಖಂಡದ   ಎರಡನೇ ಪ್ರಾಚೀನ ನಗರ ಎಂದು  ವಾರಣಾಸಿ ನಂತರ  ಹೊಗಳಿಕೆ  ಕಂಡ ಬನವಾಸಿ  ಕೋಟೆ ಯನ್ನು ಹೊಂದಿದ್ದ ಬಗ್ಗೆ   ಹೆಮ್ಮೆ ಯಾಗುತ್ತದೆ.


ಜಲದುರ್ಗ  ವೆಂಬ ಬಗ್ಗೆ ಉಪಗ್ರಹ ಚಿತ್ರ

ಬನವಾಸಿಯನ್ನು  "ಜಲದುರ್ಗಾ" ವೆಂದು ಹಿಂದೆ ಕರೆಯಲಾಗಿದೆ ಅಚ್ಚರಿಯೆಂದರೆ  ಬನವಾಸಿಯ ಊರಿನ ಮೂರುಕಡೆ  ವರದ ನದಿಯ  ಹರಿಯುವಿಕೆ ಇದೆ  ಸ್ವಾಭಾವಿಕವಾಗಿ  ಈ ಊರನ್ನು ಮುತ್ತಿಗೆ ಹಾಕಲು  ವೈರಿಗಳು  ವರದಾ ನದಿಯನ್ನು ದಾಟಿ  ಕೊಂಡೆ ಬರಬೇಕಾಗಿತ್ತು, ಆದರೆ ಅ ಕಾಲದಲ್ಲಿ ಸದಾ ತುಂಬಿ ಹರಿಯುತ್ತಿದ್ದ ವರದ ನದಿಯನ್ನು ದಾಟುವುದು ಅಷ್ಟು ಸುಲಭ ಆಗಿರಲಿಲ್ಲ,  ಹಾಗಾಗಿ ಈ ಊರನ್ನು ಜಲದುರ್ಗಾ ಎಂದು ಕರೆದಿರುವುದು  ಸರಿಯಾಗಿದೆ. ಇಷ್ಟರ ಜೊತೆಗೆ  ಬನವಾಸಿ ಕೋಟೆ ಹೊಂದಿದ್ದ ಬಗ್ಗೆ ರಾಜ್ಯ ಗೆಜೆಟ್ ನಲ್ಲಿ  ಕೋಟೆಯ ನಕ್ಷೆ ನೀಡಲಾಗಿದ್ದು,  ಅಚ್ಚರಿ ಎನಿಸಿತು. ಕೋಟೆಯ ನಕ್ಷೆಯಲ್ಲಿ  ಬನವಾಸಿಯ ಪ್ರಮುಖ   ಸ್ಥಳಗಳ  ವಿವರ ನೀಡಲಾಗಿದೆ .  ವೈಜ್ಞಾನಿಕ ಆವಿಷ್ಕಾರ  ಅಷ್ಟಾಗಿ ಇಲ್ಲದ ಆ ದಿನಗಳಲ್ಲಿ  ಅಚ್ಚುಕಟ್ಟಾಗಿ   ನಕ್ಷೆಯನ್ನು ರಚಿಸಿರುವುದು  ಹೆಮ್ಮೆಯ ವಿಚಾರ .


ಬನವಾಸಿಯ ಕೋಟೆ ನಕ್ಷೆ [ ಚಿತ್ರ ಕೃಪೆ ಗೆಜೆಟ್ ]ಬನವಾಸಿಯ ಕೋಟೆ  ಭದ್ರವಾಗಿ ವರದ ನದಿಯ ದಡವನ್ನೂ ಸೇರಿದಂತೆ  ನಿರ್ಮಾಣ  ಗೊಂಡಿತ್ತು, ಮಣ್ಣಿನ ಇಟ್ಟಿಗೆಯ ನಿರ್ಮಾಣದ ಆ ಗೋಡೆ ಭದ್ರವಾಗಿ ಬನವಾಸಿಯನ್ನು ರಕ್ಷಣೆ  ಮಾಡಿತ್ತು . ಕೋಟೆಯ ಒಳಗಡೆ ಹಲವು ಶಾಸನಗಳು ದೊರಕಿದ್ದು, ಆಧಿ ಮಾಧವ, ಸರಸ್ವತಿ, ಕಾರ್ತಿಕೇಯ  ಮೂರ್ತಿಗಳು  ಸಿಕ್ಕಿವೆ. ಪೇಟೆ ಮರಿಯಮ್ಮ ಬಯಲು ಬಸವಣ್ಣ ದೇಗುಲಗಳ ಜೊತೆಗೆ  ಎರಡು ಮಸೀದಿಗಳೂ ಸಹ  ಇದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಂಚುಗಕೇರಿ ಬಳಿ ಹನುಮನ  ದೇವಾಲಯ, ವಿತ್ತೆಂದು ಪುರಾವೆ ಸಿಕ್ಕಿದೆ. ಆದಿ ಬನವಾಸಿಯು ಈಗಿರುವ ಬನವಾಸಿಯ  ವರದ ನದಿಯ ಸೇತುವೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಬಗ್ಗೆ ಆದಿ ಮಧುಕೇಶ್ವರ  ದೇಗುಲ ಸಾಕ್ಷ್ಯ ನೀಡುತ್ತಿದೆ .ಬನವಾಸಿಯ ಮತ್ತೊಂದು ಅಚ್ಚರಿ ಎಂದರೆ ಕ್ಯಾತ ಕಥೆಗಾರ   ಹರ್ಡೇಕರ್ ಮಂಜಪ್ಪ  ಅವರ  ಜನ್ಮ ಸ್ಥಳ, ಇವರ ಬಗ್ಗೆ ತಿಳಿಯಲು http://en.wikipedia.org/wiki/Hardekar_Manjappa  ಲಿಂಕಿಗೆ ಹೋಗಿ  , ಹಾಗು ಬನವಾಸಿ ಯಲ್ಲಿ ದತ್ತಾತ್ರೇಯ ಯೋಗೇಂದ್ರ ಹಾಗು ದಾಮೊದರಾನಂದ ಸರಸ್ವತಿ  ಎಂಬ ಇಬ್ಬರು  ಸಂತರು  ನೆಲೆಸಿದ್ದರೆಂದು  ತಿಳಿಯುತ್ತದೆ . ಇಂತಹ ಬನವಾಸಿಯನ್ನು , ಆದಿ ಕವಿ ಪಂಪನ ಬನವಾಸಿಯನ್ನು  ಅರಿಯದೆ  ನಾವು ಕನ್ನಡಿಗರೆಂದು  ಹೇಳಿಕೊಳ್ಳುವುದು  ಎಲ್ಲಿಯ ನ್ಯಾಯ ಅಲ್ಲವೆ?.  ಕನ್ನಡಿಗನಾಗಿ ಹುಟ್ಟಿ ಒಮ್ಮೆಯಾದರೂ ಈ ಬನವಾಸಿಯನ್ನು  ದರ್ಶಿಸದೆ ಹೋದರೆ  ಈ ನೆಲವನ್ನು  ಸ್ಪರ್ಶಿಸದೆ  ಹೋದರೆ  ಏನು ಫಲ ಸ್ವಾಮೀ?,  ಅಯ್ಯಾ ಬನವಾಸಿ ಪ್ರಜೆಗಳೇ   ಇಲ್ಲಿ  ಹುಟ್ಟಿದ ನೀವೆಷ್ಟು ಪುಣ್ಯವಂತರು   ಅನ್ನಿಸುತ್ತದೆ.  ಶಿರಸಿಯ ತಾಲೂಕಿನ ಹೆಮ್ಮೆಯ ಜಾಗವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದಲ್ಲಿ  ಬನವಾಸಿಯ ಮೆರುಗು ಹೆಚ್ಚುವುದು, ಬನವಾಸಿಯ ಬಗ್ಗೆ ಅಧ್ಯಯನ  ಮಾಡಲು ಇಲ್ಲಿ   ಒಂದು ಅಧ್ಯಯನ ಕೇಂದ್ರ  ಸ್ಥಾಪಿಸಿದರೆ , ಆದಿ ಕವಿ ಪಂಪನ  ಮಾತಿಗೂ  ಮರ್ಯಾದೆ ಕೊಟ್ಟಂತೆ ಆಗುತ್ತದೆ .  '' ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ"   ಎಂಬ  ಮಾತು  ಸತ್ಯ ಸತ್ಯ ಸತ್ಯ . ಇದಕಾಗಿಯಾದರೂ ಶಿರಸಿ ಹಾಗು ಬನವಾಸಿಯ  ಜನಗಳೇ ಹೆಮ್ಮೆಪಡಿ . 

ಬ್ಲಾಗ್ ಮಿತ್ರರೆಲ್ಲರಿಗೂ  ಮತ್ತೊಮ್ಮೆ ಜಯನಾಮ ಸಂವತ್ಸರದ  ಶುಭಾಶಯಗಳು, ನಿಮ್ಮ  ಒಳ್ಳೆಯ ಕನಸುಗಳು ನನಸಾಗಲಿ , ನಿಮ್ಮ ಕುಟುಂಬದ ಎಲ್ಲರಿಗೂ ಸಂತಸದ ಜೀವನ  ಸಿಗಲಿ, ಎಲ್ಲರಿಗೂ ಶುಭವಾಗಲಿ .  ಎಂದು ಪ್ರೀತಿಯಿಂದ ಹಾರೈಸುತ್ತೇನೆ . ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗೋಣ , ಬೈ ಬೈFriday, March 21, 2014

ಮತ್ತೊಮ್ಮೆ ಶಿರಸಿಯ ನೆನಪು ..... !!ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ .
ಯಾಕೋ   ಶಿರಸಿಗೆ  ಬರೋದಿಲ್ವಾ  ನೀನು , ಅಂದ್ಲು   ಹೂ ಕಣೆ ಆಗಿಲ್ಲಾ, ಬರ್ತೀನಿ ಮೊದಲು ನೀನು ಹುಶಾರಾಗು ಅಂದೇ,  ಹೌದು ಅನಾರೋಗ್ಯದ ಕಾರಣ ವಿಶ್ರಾಂತಿಗಾಗಿ  ಮೈಸೂರಿನಲ್ಲಿ  ಇರುವ ನನ್ನ ಶಿರಸಿ  ಸೋದರತ್ತೆ  ನಾಗು, [ ನಾಗಲಕ್ಷ್ಮಿ ] ಹಾಗು ನನ್ನ ನಡುವೆ ನಡೆದ ಸಂಭಾಷಣೆ , ಮತ್ತೊಮ್ಮೆ ಶಿರಸಿ ಬಗ್ಗೆ ಯೋಚಿಸಲು  ಪ್ರೇರಣೆಯಾಯಿತು, ಲೋ ಶಿರಸಿ ಜಾತ್ರೆ ಇದೆ  ಹೋಗಿ ಬಾ  ಕಳೆದ ಸಾರಿ ಬಂದು ನಮ್ಮ ಮನೆಯಲ್ಲಿ ಸರಿಯಾಗಿ ನಿಲ್ಲದೆ ಅಲೆದಾಡಿದ ಭೂಪ ನೀನು , ಅಲ್ಲಿಗೆ ಫೋನ್ ಮಾಡ್ತೀನಿ  ಹೊರಡು ಮಾರಾಯ ಅಂದ್ಲು,  ಅಲ್ಲಮ್ಮಾ  ಈಗ ಆಗೋಲ್ಲಾ  ಮತ್ತೊಮ್ಮೆ ಪ್ರಯತ್ನಿಸುವೆ  ಬಿಡು, ಮೊದಲು ನಿನ್ನ ಆರೋಗ್ಯ ನೋಡಿಕೋ , ಆಮೇಲೆ ಖಂಡಿತಾ ಬರ್ತೀನಿ ಅಂದೇ,

ಹೌದಲ್ವಾ  ಎರಡು ವರ್ಷದ ಹಿಂದೆ ಗುರುಮೂರ್ತಿ ಹೆಗ್ಡೆ  ಸಹೋದರನ ಮದುವೆ ನೆಪದಲ್ಲಿ  ಶಿರಸಿಯಲ್ಲಿ ಅಲೆದದ್ದು,  ಹಿಂದಿನ ಶಿರಸಿ ಭೇಟಿ ಬಗ್ಗೆ  ಬರೆದ ಸರಣಿ ಲೇಖನ  [೧] http://nimmolagobba.blogspot.in/2012/09/1.html ೨] http://nimmolagobba.blogspot.in/2012/09/2_30.html   ೩] http://nimmolagobba.blogspot.in/2012/10/12.html   ಹಾಗೆ   ಬರೆದ  ಪ್ರವಾಸ ಸರಣಿಗೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು ಬಿಡಿ ] ನನ್ನ ಪ್ರೀತಿಯ  ತಮ್ಮನಂತಹ  ಗೆಳೆಯ ಹರ್ಷ ಹೆಗ್ಡೆ  ನನ್ನ ಜೊತೆಗೆ ಅಲೆದಾಡಿ ಶಿರಸಿ ತಾಲೂಕಿನ ದರ್ಶನ ಮಾಡಿಸಿದ್ದು  ಮತ್ತೊಮ್ಮೆ ಕಣ್ಣ ಮುಂದೆ  ಹಾದು ಹೋಯಿತು, ಮತ್ತೆ ನನ್ನ  ಬಿಡುವಿಲ್ಲದ ಕೆಲಸದಲ್ಲಿ ಮುಳುಗಿ ಹೋದೆ . ಆದರೆ ನಿನ್ನೆ ಅಪರೂಪಕ್ಕೆ  ಮನೆಗೆ ಬಂದ ಗೆಳೆಯನೊಬ್ಬ ಮರೆಯಲಾರದ  ಪುಸ್ತಕಗಳ  ಉಡುಗೊರೆ ಕೊಟ್ಟ, ಅದರಲ್ಲಿ ನೋಡಿದರೆ ರಾಶಿ ರಾಶಿ ಮಾಹಿತಿ  , ಊಟವನ್ನೂ ಮರೆತು  ಓದಲು ಕುಳಿತೆ , ಯಾವುದೋ ಲೋಕಕ್ಕೆ ಕರೆದೊಯ್ಯುವ  ಪುಸ್ತಕಗಳು ಅವು.  ಅದರಲ್ಲಿ ಶಿರಸಿಯ ಬಗ್ಗೆ  ಸಿಕ್ಕ ಮಾಹಿತಿ ನನ್ನ  ಆಸಕ್ತಿಯನ್ನು ಕೆರಳಿಸಿತು . ಅರೆ ಈ ಊರಿನ ಬಗ್ಗೆ ಇಷ್ಟೆಲ್ಲಾ ಇದೆಯಾ ಅನ್ನಿಸಿತು. ಹಲವು  ಪುಸ್ತಕಗಳ ಹುಡುಕಾಟದಲ್ಲಿ ಸಿಕ್ಕ ಮಾಹಿತಿಗಳನ್ನು  ನಿಮ್ಮ ಜೊತೆ ಹಂಚಿಕೊಳ್ಳಲು  ಖುಶಿಯಾಗುತ್ತಿದೆ. ಮೊದಲಿಗೆ ಬನ್ನಿ "ಶಿರಸಿ " ಊರಿನ ಹೆಸರಿಗೆ  ಒಂದು ಆಸಕ್ತಿ ಇರುವ ವಿಚಾರವಿದೆ . ಶಿರಸಿ ತಾಲೂಕಿನ ಸಿದ್ದಾಪುರದ  ಬಳಿ  ಇರುವ "ತಮಡಿ  ಕಲ್ಲಳ್ಳ" ಎಂಬ ಜಾಗದಲ್ಲಿ ಇರುವ ವೀರಗಲ್ಲಿನಲ್ಲಿ  ಶಿರಸಿ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆ ಕ್ರಿ. ಶ ೧೧೫೦  ರಲ್ಲಿನ ಒಂದು ಶಾಸನ  ಇರುವುದಾಗಿ ಹೇಳಲಾಗಿದೆ , ಅದರಲ್ಲಿ ಶಿರಸಿ ಎಂಬ ಹೆಸರು ಹಾಗು ಅಲ್ಲಿ ನಡೆದ ಒಂದು ಯುದ್ದದ  ಬಗ್ಗೆ ಮಾಹಿತಿ ನೀಡಿ, "ಶಿರಸೇ" ಎಂದು ಶಿರಸಿಯನ್ನು ಕರೆಯುತ್ತಿದ್ದ ಬಗ್ಗೆ ಮಾಹಿತಿ ನೀಡಿದೆ .  ಶಿರಸೇ ಎಂಬ ಹೆಸರು  ಶಿರಿಶ ಅಥವಾ ಸಿರ್ಸಾಲ   ಮರದಿಂದ ಉದ್ಭವವಾದ ಹೆಸರೆಂದೂ , ಅದನ್ನು ಕನ್ನಡ ಭಾಷೆ ಯಲ್ಲಿ ''ಬಾಗೆ''  ಮರವೆಂದು ಹೇಳುವುದಾಗಿ ತಿಳಿಸಲಾಗಿದೆ . ಬಾಗೆ ಮರಕ್ಕೂ ಶಿರಸಿ ಊರಿಗೂ ಏನು ಸಂಬಂಧ ಎಂಬ ಬಗ್ಗೆ ಹೆಚ್ಚಿನ  ಸಂಶೋದನೆ  ಆಗಬೇಕಾಗಿದೆ .ಡಾಕ್ಟರ್ ಫ್ರಾನ್ಸಿಸ್ ಬುಕನನ್   ಎಂಬ ಬ್ರಿಟೀಷ್ ಅಧಿಕಾರಿ ತನ್ನ ಮಲಬಾರ್ , ಮೈಸೂರು ಹಾಗು ಕೆನರಾ  ಪ್ರಾಂತದ ಪ್ರವಾಸದಲ್ಲಿ ೧೮೦೧ ರ ಮಾರ್ಚ್ ೧೪ ಹಾಗು ೧೫ ರಂದು ಶಿರಸಿಯಲ್ಲಿ ಉಳಿದು ಅಲ್ಲಿನ ವಿಶೇಷತೆ  ಬಗ್ಗೆ ತನ್ನ ಡೈರಿಯಲ್ಲಿ ದಾಖಲಿಸಿದ್ದಾನೆ, ಅವನು ಭೇಟಿ ನೀಡಿದ ಸಮಯದಲ್ಲಿ ಶಿರಸಿ ಒಂದು ಸಣ್ಣ ಹಳ್ಳಿ  ಯಾಗಿತ್ತು, ಜೊತೆಗೆ ಅದು "ಸೋಂದ   ತಹಸಿಲ್ದಾರ್ " ಅವರ ಅಧಿಕೃತ  ನಿವಾಸ ಸ್ಥಳವಾಗಿತ್ತು . ೧೮೫೯ ರಲ್ಲಿ  ಶಿರಸಿ ಎಂದು ಈ ತಾಲೂಕನ್ನು ಕರೆದು ತಾಲೂಕು ಕೇಂದ್ರವನ್ನಾಗಿ ಮಾಡಲಾಯಿತು, ೧೯೫೬ ರಲ್ಲಿ  ಇದನ್ನು ಉಪವಿಭಾಗ ಕೇಂದ್ರವನ್ನಾಗಿ   ಉನ್ನತೀಕರಣ ಮಾಡಲಾಯಿತು .  ಹಿಂದಿನ ಕಾಲದಲ್ಲಿ ಶಿರಸಿಯಲ್ಲಿ ಕೋಟೆ ಇದ್ದು ಅದನ್ನು  ಸೊಂದೆಯ  ರಾಮಚಂದ್ರ ನಾಯಕ [ ೧೬೦೨-೧೬೧೦] ನಿರ್ಮಿಸಿ, ಈ ಊರನ್ನು  "ಚೆನ್ನಪಟ್ಟಣ"  ವೆಂದು ಕರೆಯುತ್ತಾನೆ .  ಈ ಊರಿನ ಅತ್ಯಂತ  ಹಳೆಯ ದೇವಾಲಯ  ವಿಜಯನಗರ ಕಾಲದ  ಗಣಪತಿ ಹಾಗು ಶಂಕರ ದೇವಾಲಯ ಎಂದು ತಿಳಿದುಬರುತ್ತದೆ ಅಂದಿನ ಕಾಲಕ್ಕೆ ಶಂಕರ ದೇವಾಲಯ ಶಿಥಿಲಾವಸ್ತೆ ಕಂಡಿತ್ತು, ಅದರ ಸಮೀಪವಿದ್ದ ಕೊಳವನ್ನು  "ಶಂಕರ ತೀರ್ಥ"  ಎಂದು ಕರೆಯಲಾಗುತ್ತಿತ್ತು. ಆ ನಂತರದ ಕಾಲದಲ್ಲಿ ನಿರ್ಮಾಣ ಗೊಂಡವು ಮಾರಿಕಾಂಬ, ವೀರಭದ್ರ, ಈಶ್ವರ , ಹಾಗು ಪಾರ್ಶ್ವನಾಥ ಬಸದಿ  , ಮಾರಿಕಾಂಬ ದೇವಾಲಯ ನಿರ್ಮಾಣ ೧೬೮೯ ರ ಕಾಲದಲ್ಲಿ ಆಯಿತು,  ಶಿರಸಿಯಿಂದ ಹಾನಗಲ್ ಕಡೆಗೆ ಹೋಗುವ ಹಾದಿಯಲ್ಲಿನ  ಒಂದು ಕೊಳದ ಬಳಿ  ಒಂದು ಎಂಟು ಅಡಿಯ ದೇವಿಯ ಕಟ್ಟಿಗೆಯ ಮೂರ್ತಿ ಸಿಕ್ಕುತ್ತದೆ. ಆ ಸಮಯದಲ್ಲಿ  ಶಿರಸಿಯು ಒಂದು ಕುಗ್ರಾಮವಾಗಿ ಸೋಂದೆ ರಾಜರ ಆಡಳಿತಕ್ಕೆ ಒಳಪಟ್ಟಿರುತ್ತದೆ.  ಆಗ  ಸೋಂದೆ ರಾಜರಾಗಿದ್ದ "ಇಮ್ಮಡಿ ಸದಾಶಿವರಾಯ " [1678-1718,] ರ  ಕಾಲದಲ್ಲಿ ಅವರ ಅನುಮತಿ ಪಡೆದು  1689 ರಲ್ಲಿ ಶಿರಸಿಯ "ಮಾರಿಕಾಂಬೆ"  ಯ  ದೇವಾಲಯ ನಿರ್ಮಾಣ ಮಾಡುತ್ತಾರೆ. "ಮಾರಿಕಾಂಬೆ"  ಯನ್ನು ಗ್ರಾಮ ದೇವತೆಯಾಗಿ ಸ್ವೀಕರಿಸಿದ ಶಿರಸಿ ಗ್ರಾಮದ  ಭಕ್ತರು  ತಮ್ಮ  ಯಜಮಾನರುಗಳ  ನೇತೃತ್ವದಲ್ಲಿ ದೇವಾಲಯದ ಆಡಳಿತ ನಡೆಸಿಕೊಂಡು ಬರುತ್ತಾರೆ. 1850 ರಿಂದ 1875 ರವರೆಗಿನ ಬ್ರಿಟೀಶ್  ಆಡಳಿತ  ಅವಧಿಯಲ್ಲಿ  ದೇವಾಲಯಕ್ಕೆ ದೇವಾಲಯಕ್ಕೆ ಗರ್ಭಗುಡಿ, ಚಂದ್ರ ಶಾಲೆ, ಗೋಪುರ , ಮಹಾದ್ವಾರ  ಮುಂತಾದವುಗಳನ್ನು ನಿರ್ಮಾಣ  ಮಾಡಿದ್ದಾರೆ.ಮಾರಿಕಾಂಬೆ  ದೇಗುಲದ  ಸಮೀಪದಲ್ಲಿ  ತ್ರಯಂಬಕೇಶ್ವರ  ದೇವಾಲಯವಿದೆ . ಜೊತೆಗೆ ಇಲ್ಲೇ ಸಮೀಪದಲ್ಲಿ ಎರಡು  ಹನುಮಾನ್ ದೇವಾಲಯಗಳೂ ಸಹ ಇವೆ.
 ಶಿರಸಿಯಲ್ಲಿ ಜೈನ ಬಸದಿ ಗಳೂ ಸಹ ಇವೆ  ಬಸ್ತಿ ಗಲ್ಲಿಯಲ್ಲಿನ  ಪಾರ್ಶ್ವನಾಥ ಬಸದಿ ಐತಿಹಾಸಿಕವಾದದ್ದು,  ಇದನ್ನು ೧೮೦೦ ರರಲ್ಲಿ "ಆಲೂರ್ ಪದ್ಮಪ್ಪ"   ಎಂಬುವರು  ಸ್ಥಾಪಿಸುತ್ತಾರೆ . ಮತ್ತೊಂದು ಸುಮಾರು ಒಂದು ನೂರುವರ್ಷದ ಬಸದಿ  ಖಾಸಗಿ ಮಿಲ್  ಸಮೀಪವಿದೆ , ಇಲ್ಲಿನ ಕಲ್ಲಿನ  ಮೂರ್ತಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲ, ಶಿರಸಿಯಲ್ಲಿ "ಉನ್ನಿ ಮಠ", ಬಣ್ಣದ ಮಠ,[ ಚೌಕಿ ಮಠ]  ಹಾಗು "ಶಾಂತ ವೀರ ಸ್ವಾಮೀ ಮಠ" ಇವುಗಳು  ಬಹಳ ಕಾಲದಿಂದಲೂ ನೆಲಸಿವೆ. ಮೂರು ಮಸೀದಿಗಳು   ಸುಲ್ತಾನ್  ಎ  ಹನೀಫಿ , ಮದೀನ ಹನೀಫಿ, ಹಾಗು ಅಹಲೇ ಹದೀಸ  ನೆಲೆ ಕಂಡಿವೆ . ೧೮೭೭ ರಲ್ಲಿ ಸುಲ್ತಾನ್ ಶರೀಫ್ ಎಂಬ  ಟಿಪ್ಪುವಿನ  ಸಾಮಂತ   ಶಿರಸಿಯ "ಚನ್ನಪಟ್ಟಣ   ಬಜಾರ್ "  ನಲ್ಲಿ   "ಅಹಲೇ ಹದೀಸ " ಮಸೀದಿ ನಿರ್ಮಿಸಿದ್ದು ಇದು ಶಿರಸಿ ಟಿಪ್ಪುವಿನ  ಆಡಳಿತಕ್ಕೆ  ಒಳಪಟ್ಟ ಬಗ್ಗೆ ಮಾಹಿತಿ ನೀಡುತ್ತದೆ .  ಶಿರಸಿಯಲ್ಲಿ ೧೮೪೮ ರಲ್ಲಿ ರೋಮನ್ ಕ್ಯಾಥೊಲಿಕ್  ಚರ್ಚ್  ನಿರ್ಮಾಣವಾಯಿತು ಅದನ್ನು  ಸಂತ ಅಂತೋನಿ ಚರ್ಚ್  ಎಂದೂ ಸಹ ಕರೆಯುತ್ತಾರೆ. ಬ್ರಿಟೀಷರ ಒಂದು ಸೈನಿಕ ಪಡೆ ಇಲ್ಲಿ ನೆಲೆಗೊಂಡಿತ್ತು ಹಾಗಾಗಿ ಶಿರಸಿ ಬ್ರಿಟೀಶ್ ಸೈನಿಕ ಕೇಂದ್ರವೂ ಸಹ ಆಗಿತ್ತು.  ೧೮೩೧ ರಲ್ಲಿ ಬ್ರಿಟೀಷರ ವಿರುದ್ದ  ಶಿರಸಿಯಲ್ಲಿ ದಂಗೆ ಆಗಿತ್ತೆಂದು  ಮಾಹಿತಿಯಿಂದ   ತಿಳಿಯುತ್ತಿದೆ , ಶಿರಸಿ ಕುಮಟಾ ರಸ್ತೆಯಲ್ಲಿ ಮೂರು ಕಿ.ಮಿ ದೂರದ ಕಲ್ಕುಣಿ  ಎಂಬಲ್ಲಿ ಸೋಮೇಶ್ವರ ದೇವಾಲಯವಿದ್ದು  ಅಲ್ಲಿರುವ ಸಂಸ್ಕೃತ  ಶಾಸನ ಹಾಗು ಮಹಾಸತಿ  ಕಲ್ಲು ಇರುವುದಾಗಿ ತಿಳಿದು ಬರುತ್ತದೆ. ಒಟ್ಟಿನಲ್ಲಿ ಶಿರಸಿ ಪಟ್ಟಣ  ಎಲ್ಲಾ  ಧರ್ಮಗಳಿಗೂ  ಆಶ್ರಯ  ನೀಡಿತ್ತು .ಇಷ್ಟೆಲ್ಲಾ ಇರುವ ಶಿರಸಿಯಲ್ಲಿ ನಡೆದ  ಐತಿಹಾಸಿಕ ಘಟನೆ  ಇಲ್ಲಿದೆ ನೋಡಿ ಆಗ ನಮ್ಮ ದೇಶದಲ್ಲಿ  "ಮಹಾತ್ಮಾ ಗಾಂಧೀ ಜಿ"  ಯವರ ಅಲೆ ಎದ್ದಿದ್ದ ಕಾಲ..ಗಾಂಧೀಜಿ ತತ್ವಗಳು ಹಳ್ಳಿ ಹಳ್ಳಿಗೂ ಮುಟ್ಟುತ್ತಿದ್ದವು,ಇವುಗಳಿಂದ  ಪ್ರಭಾವಿತರಾಗಿ  ಹಲವು ಜನ ಅಹಿಂಸಾ ವಾದದತ್ತ  ಸಮಾಜವನ್ನು ಕೊಂಡೊಯ್ಯಲು ಪ್ರಯತ್ನಿಸಿದರು . ಆಗ ಶಿರಸಿಯಲ್ಲಿ ಕಾಣಿಸಿದವರೆ  ಎಸ.ಏನ್.ಕೆಶ್ವಿನ್ [S.N Keshwain] ರವರು ಮೊದಲು ಶಿರಸಿಯ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ  ನಿಲ್ಲಿಸಲು  ನಿರ್ಧರಿಸಿದರು.ಜೊತೆಗೆ ಅಂದಿನ ದಿನಗಳಲ್ಲಿ  ಇವರೇ ದೇವಾಲಯದ ಮುಖ್ಯ ಟ್ರಸ್ಟಿ ಆಗಿದ್ದರು,  ಇವರ ಜೊತೆ ಸಾಥ್ ನೀಡಿದ್ದು ಮತ್ತೊಬ್ಬ   ಗಾಂಧೀವಾದಿಯಾಗಿದ್ದ  ಶ್ರೀ ವಿಟ್ಟಲ್ ರಾವ್  ಹೊದಿಕೆ   {vitthal rao hodike} .ವೃತ್ತಿಯಿಂದ ಉಪಾಧ್ಯಾಯರಾಗಿದ್ದ ಶ್ರೀ ವಿಟ್ಟಲ್ ರಾವ್  ಹೊದಿಕೆ   ರವರು ಪ್ರಾಣಿ ಬಲಿ   ವಿರುದ್ಧ ಜನ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಹೊತ್ತರು. S.N Keshwain   ರವರು ಪ್ರಾಣಿ  ಬಲಿಗೆ ತಂದಿದ್ದ  ಕೋಣವನ್ನು  ಬಲಿ ಕೊಡುವ ದಿನದ  ಹಿಂದಿನ  ರಾತ್ರಿ ಅಪಹರಿಸಿ  , ಬಲಿಯನ್ನು ತಪ್ಪಿಸುತ್ತಾರೆ. ಕೋಪಗೊಂಡು ಗಲಾಟೆ ಮಾಡಲು ಸಿದ್ದವಾಗಿದ್ದ  ಅಪಾರ ಸಂಖ್ಯೆಯ  ಭಕ್ತರನ್ನು ತನ್ನ ಅಸಾಧ್ಯ  ಧೈರ್ಯ  ಹಾಗು ಜಾಣ್ಮೆಯಿಂದ ಸಮಾಧಾನ ಪಡಿಸಿ ಮೊದಲ ಹೆಜ್ಜೆ ಇಡುತ್ತಾರೆ. 1933 ರಲ್ಲಿ  ಮಹಾತ್ಮಾ ಗಾಂಧೀಜಿ ಯವರು ಶಿರಸಿಗೆ ಆಗಮಿಸಿದಾಗ  ಶಿರಸಿಯ ಮಾರಿಕಾಂಬೆ ದೇಗುಲದಲ್ಲಿ ಪ್ರಾಣಿ ಬಲಿ ನೀಡುವ ವಿಚಾರ ತಿಳಿದು  ಆ ದೇವಾಲಯಕ್ಕೆ ಬರಲು ನಿರಾಕರಿಸುತ್ತಾರೆ. ಇದರಿಂದ ನೊಂದ ಶಿರಸಿಯ ನಾಗರೀಕ ಜನತೆ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ ಕೊಡುವುದನ್ನು  ನಿಲ್ಲಿಸಲು ಮನಸು ಮಾಡಿ  ಅದರಲ್ಲಿ ಯಶಸ್ವಿಯಾಗುತ್ತಾರೆ.

ಶಿರಸಿಯ  ಪುರಸಭೆ  ೧೮೬೬ ರಲ್ಲಿ ಅಸ್ತಿತ್ವಕ್ಕೆ ಬರುತ್ತದೆ. ೧೮೮೫ ರಲ್ಲಿ  ಪುರಸಭೆಗೆ ಪ್ರಥಮವಾಗಿ ಚುನಾವಣೆ  ನಡೆದು ಆರು ಜನ ಪುರಸಭ ಸದಸ್ಯರು ಆಯ್ಕೆಯಾಗುತ್ತಾರೆ. ೧೮೮೯-೯೦ ನೆ ಸಾಲಿನಲ್ಲಿ ಶಿರಸಿಯಲ್ಲಿ ಮನೆ ಕಂದಾಯ ನಿಗಧಿ ಮಾಡಲು ಪುರಸಭೆ  ಪ್ರಾರಂಭಿಸುತ್ತದೆ . ೧೯೬೨-೬೩ ನೆ ಸಾಲಿನಲ್ಲಿ ಶಿರಸಿಯ ಪಟ್ಟಣ ವ್ಯಾಪ್ತಿ ಹೆಚ್ಚಿಸಲು  "ಮರಾಟಿ ಕೊಪ್ಪ " ಬಡಾವಣೆ  ನಿರ್ಮಾಣ ಆಗುತ್ತದೆ .  ೧೯೬೯ ರಲ್ಲಿ ಶಿರಸಿಗೆ ಕುಡಿಯುವ ನೀರು ಯೋಜನೆ ಶುರುವಾಗಿ, ಪಟ್ಟಣದಿಂದ ಎಂಟು ಕಿ.ಮಿ  ದೂರದಲ್ಲಿರುವ "ಕೆಂಗ್ರೆ ನಾಲೆ " ಯಿಂದ ಪಟ್ಟಣಕ್ಕೆ ಕುಡಿಯುವ ನೀರು ತರಲಾಗುತ್ತದೆ . ಶಿರಸಿಯ ಪಂಡಿತ್ ಕಾಟೇಜ್  ಆಸ್ಪತ್ರೆ  ೧೮೬೬ ರಲ್ಲಿ  ಪ್ರಾರಂಭವಾಯಿತು . ೧೯೬೫ ರಲ್ಲಿ ಇದನ್ನು ಸರ್ಕಾರದ ವಶಕ್ಕೆ  ನೀಡಲಾಯಿತು . ೧೯೪೯ ರ ವರೆಗೂ ಶಿರಸಿಯಲ್ಲಿ  ವಿದ್ಯುತ್ ದೀಪ ಇರಲಿಲ್ಲ, ಕೆನರಾ ಪವರ್ ಸಪ್ಲೈ ಕಂಪನಿ  ಸಹಯೋಗದೊಂದಿಗೆ ೧೯೫೦-೫೧ ರಲ್ಲಿ  ಶಿರಸಿ ಪಟ್ಟಣಕ್ಕೆ   ವಿದ್ಯುತ್ ದೀಪಗಳ  ಆಗಮನವಾಗುತ್ತದೆ.  ಇವಿಷ್ಟೂ ಶಿರಸಿ ಪಟ್ಟಣದ ಬೆಳವಣಿಗೆಯ  ಪ್ರಮುಖ ಹಂತಗಳು . ಮುಂದೊಮ್ಮೆ  ಇವುಗಳು ಮರೆತು ಹೋಗುವ ಮುನ್ನ  ಇವುಗಳನ್ನು ನೆನಪಿತ್ತು ಕೊಳ್ಳುವ ಕಾರ್ಯ ನಮ್ಮೆಲ್ಲರದಾಗಬೇಕು .
ಹೀಗಾಗಿ ಶಿರಸಿಯ ಬಗ್ಗೆ  ಎಷ್ಟೊಂದು ವಿಚಾರಗಳು  ನಮ್ಮ ಸುತ್ತ  ಹರಡಿವೆ, ಕರ್ನಾಟಕದ  ಐತಿಹಾಸಿಕ ಹಿನ್ನೆಲೆ ಹೊಂದಿದ ಈ ಊರು ಬ್ರಿಟೀಷರ ಕಾಲದಲ್ಲಿ  '' ಶ್ರೀ ಗಂಧದ  ಕೋಟಿ ''  ಇಲ್ಲಿದ್ದು  ಈ ಊರು  ಸಿರಿಗಂಧದ  ಪರಿಮಳ ನೀಡಿದ ಊರಾಗಿತ್ತು . ಶಿರಸಿ  ನನಗೆ  ಜನುಮ ನೀಡಿದ ಊರು ಅಲ್ಲದಿದ್ದರೂ ಯಾವ ಕಾರಣಕ್ಕೋ  ನನಗೆ ಅರಿವಿಲ್ಲದಂತೆ   ಕಾಡುತ್ತದೆ,  ಅರೆ ಹೊರಗಿನವನಾದ ನನಗೆ ಇಷ್ಟು  ಹೆಮ್ಮೆಯಾದರೆ  ಇನ್ನು  ನಿಮಗೆ  ಎಷ್ಟು ಹೆಮ್ಮೆ ಆಗುತ್ತೆ ಆಲ್ವಾ ..? ಅದಕ್ಕೆ ಹೇಳಿದ್ದು ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ .    ಈ ಲೇಖನದಲ್ಲಿ  ನನಗೆ ದೊರೆತ ಅದಿಕೃತ ಮಾಹಿತಿ ಅಷ್ಟೇ ಇದೆ.  ಯಾರಾದರು ಹೆಚ್ಚಿನ ಮಾಹಿತಿ ಇದ್ದಲ್ಲಿ, ಇಲ್ಲಿರುವ ಮಾಹಿತಿ ತಪ್ಪಾಗಿದ್ದಲ್ಲಿ,  ಮಾಹಿತಿ ಹಾಗು ದಾಖಲೆ ನೀಡಿದರೆ ಅದನ್ನು ಸರಿಪಡಿಸಲು ಸಹಕಾರಿಯಾಗುತ್ತದೆ. ಅಲ್ಲಿಯವರೆಗೆ ಈ ಮಾಹಿತಿ  ಸತ್ಯವೆಂದು ತಿಳಿಯಬಹುದಾಗಿದೆ .ತಾಳ್ಮೆ ಯಿಂದ ಓದಿದ ನಿಮಗೆ ಥ್ಯಾಂಕ್ಸ್
Sunday, March 9, 2014

ನಮ್ ಪುಟ್ಮಾದನ ಮದುವೆ ಹಿಂಗಿತ್ತು ....... !!

ಚಿತ್ರ ಕೃಪೆ ಅಂತರ್ಜಾಲ


ಕಳೆದ ಎರಡು ಸಂಚಿಕೆಯಲ್ಲಿ  ಬರೆದ ಸಣ್ಣ ಕಥೆಗಳಿಗೆ   ನಿಮ್ಮಿಂದ  ಬಹಳ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು , ಈಗ ಮತ್ತೊಂದು ಕಥೆ ನಿಮ್ಮ ಮುಂದೆ ಇಟ್ಟಿದ್ದೇನೆ . ಬನ್ನಿ ಈ ಕಥೆಗೆ .ಇಲ್ಲಿ ಭಾಷೆಯ ಬಳಕೆ  ಗ್ರಾಮ್ಯ ಭಾಷೆಯಲ್ಲಿದೆ , ಮಂಡ್ಯಾ ಭಾಷೆ ಬಲ್ಲವರಿಗೆ  ಇದೊಂದು ಮಜಾ ಕೊಡುವ ಕಥೆಯಾಗುತ್ತದೆ .

"ಲೇ  ಹೈದ ಬರಲೇ ಬೇಕು ಕನ್ಲಾ    ಮನೆಗೆ  ..... ಬರ್ನಿಲ್ಲಾ ಅಂದ್ರೆ  ನೋಡು .......! "ಅಂತಾ ದಮಕಿ  ಹಾಕ್ತಾ  ಬಂದ  ನಮ್ ಪುಟ್ಮಾದ .ಮನೆಯ ಮುಂದೆ ಅವನ  ಬಿಳೀ ಮಾರುತಿ ಕಾರು ನನ್ನನ್ನು ನೋಡಿ ಕಣ್ ಹೊಡೆದು ಅಣಕಿಸುತ್ತಾ  ನಿಂತಿತ್ತು,

  ಓ ನಮ್ ಪುಟ್ಮಾದ   ಯಪ್ಪಾ ನಿಮಗೆ ಗೊತ್ತಿಲ್ಲಾ......!   ನಮ್  "ದುರಾಸೆಪುರದಲ್ಲಿಯೇ"   ಬಹಳ  ವಿಚಿತ್ರಾ  ಕಣ್ರೀ , ಬಹಳ  ಒರಟ ,ನನ್ನ ಕ್ಲಾಸ್ ಮೆಟ್ಟು ...? ,  ಯಾತಕ್ಕೂ ಹೆದರದ  ಹುಂಬ . ಆದರೆ  ಬೆನ್ನಿಗೆ ಬಿದ್ದ ಗೆಳೆಯ,  ಮನೆಗೆ ಬಂದ.   ಪುಟ್ಮಾದನನ್ನು  ಕಂಡೊಡನೆ  ಅವನ  ಮದುವೆಯ  ಮಾತು ಕಥೆಯ  ನೆನಪಾಯ್ತು.

ಹೂ ಕಣ್ರೀ ಅದು ಒಂತರಾ ವಿಚಿತ್ರ ಕಥೆ , ಅವತ್ತು  ಹೀಗಾಯ್ತು ,   ನನ್ನ  ಮನೆಯಲ್ಲಿ ವಿರಾಮವಾಗಿ ರಜೆಯ ಸವಿಯನ್ನು ಸವಿಯುತ್ತಿದ್ದೆ, "ಲೇ ಹೈದಾ  ಏನ್ಲಾ  ಬೊ ಪುರುಸೋತ್ತಾಗಿದ್ದೀ ...... ?" ಅಂತಾ ನಗು ನಗುತ್ತಾ  ಎದುರು ನಿಂತಾ  ಪುಟ್ಮಾದ .

 "ಓ ಹೊ ಹೊ  ಬಾರೈಯ್ಯಾ ಬಾ ಬಾ  ಅಪರೂಪಕ್ಕೆ ಈ ಕಡೆ  ನಮ್ ಮನೆಗೆ ಬಂದೆ  ಬಾ ಬಾ" ಅಂತಾ  ಸ್ವಾಗತಿಸಿದೆ .

ಲೇ ಅನಿಲ್  ಜಾಸ್ತಿ ಮಾತಾಡೋಕೆ ಪುರುಸೋತ್ತಿಲ್ಲಾ  ಬ್ಯಾಗ ರೆಡಿ ಆಗು ಕಿತಾಪತಿ ಪುರಕ್ಕೆ  ಹೋಗ್ಬೇಕು  ಅಂತಾ  ನನ್ನನ್ನು  ಎಬ್ಬಿಸಿಕೊಂಡು ಹೊರಟ .

ದಾರಿಯಲ್ಲಿ ತಿಳಿದು ಬಂತು   ಈ ಶತ ಒರಟ ಮದುವೆ ಆಗಲು ಹುಡುಗಿ ಹುಡುಕುತ್ತಿದ್ದು , ಅವತ್ತು ಒಬ್ಬರ ಸಹಾಯದಿಂದ  ಒಂದು ಹುಡುಗಿ ನೋಡಲು ತೆರಳಿದ್ದ , ಜೊತೆಗೆ  ನನ್ನನ್ನೂ ಬಲವಂತಾ ಮಾಡಿ   ಕರೆದುಕೊಂಡು  ಹೊರಟಿದ್ದಾ . ಇವನಿಗಿಂತಾ  ಮೊದಲೇ ಅವನ ಅಪ್ಪಾ ಅಮ್ಮ  ಹೊರಟಿದ್ದರು ,  "ಕಿತಾಪತಿ ಪುರ"   ತಲುಪಿದ ನಾವು ,  ಅವನ ಗೆಳೆಯರ ಮನೆಗೆ ತೆರಳಿ ಅವರ ಕುಟುಂಬದ  ಜೊತೆ  ಹುಡುಗಿಯ  ಮನೆಗೆ ತೆರಳಿದೆವು. ಹುಡುಗನ ಅಪ್ಪಾ  ಅಮ್ಮ ಆಗ್ಲೇ ಅಲ್ಲಿ ತಲುಪಿದ್ದರು

ಹುಡುಗಿಯ ಮನೆ ಹೊಕ್ಕ ನಮ್ಮನ್ನು  ನಮ್ಮಿಬ್ಬರ ಎರಡೂ ಕುಟುಂಬವನ್ನು  ಬಲ್ಲ ಒಬ್ಬರು  ಸ್ವಾಗತಿಸಿದರು . ಪರಸ್ಪರ ಪರಿಚಯ  ಆಯ್ತು , ಮಾತುಕತೆ ಪ್ರಾರಂಭ ಆಯ್ತು.

ಹುಡುಗಿ ಅಪ್ಪಾ :-"ಏನ್ರಪ್ಪಾ  ನಮ್  ಪ್ಯಾಮಿಲಿ  ಎಲ್ಲಾ ನಿಮಗೆ ಗೊತ್ತು , ನಿಮ್ ಪ್ಯಾಮಿಲಿ ಇಚಾರ ಬಾಳ ಕೇಳಿವ್ನಿ ,                      ಭಾರಿ ದೊಡ್ಡ     ಕುಳ ಅಂತಾ ಸರೀಕರು ಹೇಳವ್ರೆ ,ಈ ಮದ್ವೆ ಆಗ್ಬುಟ್ರೆ , ನಮ್  ಹೆಣ್ಣು                                  ಸಂದಾಕೆ  ಇರಬೈದು ಅಂತಾ ಅನ್ಸದೆ ,  ಮಾತ್ ಮುಂದುವರ್ಸದೆ  ಯೋಳ್ರಪ್ಪಾ ...?"


ಹುಡುಗನ ಅಪ್ಪಾ :-   "ಅಯ್ಯೋ ಎಲ್ಲಿ  ಭಾರಿ ಕುಳಾ  ಅಂದೀರಿ ತಗಳಿ , ಯವಾರಾ ಎಲ್ಲಾ   ಡಲ್  ಆಯ್ತಾ ಅದೇ , ಇನ್          ಮ್ಯಾಕೆ ನಮ್ ಹೈದನೆ  ಯವಾರ  ನೋಡ್ಕಬೇಕು ನಂಗೂ  ಸಾಕಾಗೋಗದೆ , ನಮ್ ಹೈದಾ  ನಿಮ್                            ಮಗ್ಳಾ  ಇನ್ನೂ ನ್ವಾಡೆ  ಇಲ್ಲಾ , ಆಗ್ಲೇ ಮಾತು ಕತೆ ಅಂತೀರಲ್ಲಾ ? ಕರ್ಸಿ  ಹೆಣ್  ಮೊಗವ  , ನಾಮು  ನೋಡುಮ ."  

ಹುಡುಗಿ ಅಪ್ಪಾ :-  ''ಊ ಅದೂ ಸರ್ಯೇ , ಲೇ ಯಾರಮ್ಮಿ ಒಳಗೆ  ಕರ್ಕಾ  ಬಮ್ಮಿ  ಲಕ್ಸ್ಮಿಯ  ಒರಾಕೆ''  ಅಂದ್ರು
.
ಹುಡುಗಿ ನಗು ನಗುತ್ತಾ ನಾಚುತ್ತಾ  ಕೈಲಿ   ಶರಬತ್  ಗ್ಲಾಸುಗಳ   ತಟ್ಟೆ ಹಿಡಿದು  ಬಂತು , ಎಲ್ಲರಿಗೂ ತಲೆ ತಗ್ಗಿಕೊಂಡು  ಶರಬತ್  ತುಂಬಿದ   ಗ್ಲಾಸ್ ಗಳನ್ನ  ನೀಡುತ್ತಾ  ಬರುತ್ತಿತ್ತು.

ಹುಡುಗಿ ಅಪ್ಪಾ :- "ಅವ್ವಾ  ನಾಚ್ಕಾ ಬ್ಯಾಡ  ಇವರೆಲ್ಲಾ ನಮ್ ಜನ್ಗಳೇ ,  ಇಲ್ಲವ್ರಲ್ಲಾ  ದೊಡ್ಡವರು  ಅವರಿಗೆ ಕೊಡು ತಾಯಿ, " ಅಂತಾ ಹೇಳಿ, ಮುತುವರ್ಜಿ ವಹಿಸಿ  ಮಗಳಿಗೆ ಧೈರ್ಯ ತುಂಬಿ ಎಲ್ಲರಿಗೂ ಶರಬತ್ ಕೊಡಿಸಿದರು,  ಶರಬತ್ ಕೊಟ್ಟ  ಹುಡುಗಿ  ನಮ್  ಪುಟ್ಮಾದ ನ ಕಡೆ ಒಂದು ಕಿರು ನಗೆ ಬಿಸಾಕಿ  ಒಳಗೆ  ಹೋದಳು,

ನಮ್ ಪಕ್ಕಾ ಕುಳಿತಿದ್ದ  ಪುಟ್ಮಾದ ಸಣ್ಣಗೆ ಕಂಪಿಸಿದ , ನಾನು ಯಾಕೋ  ಪುಟ್ಮಾದ ಎನಾಯ್ತು ?  ಹುಡುಗಿ ಚೆನ್ನಾಗಿದ್ದಾಳೆ ಅನ್ಸುತ್ತೆ  ಒಪ್ಪಿಗೆನಾ ? ಅಂತಾ ಅವನ  ಕಿವಿಯಲ್ಲಿ ಉಸುರಿದೆ , ಏನಿಲ್ಲಾ ಅಂತಾ   ಮುಖ ಅರಳಿಸಿ ಅವಳು ಕೊಟ್ಟಾ ಶರಬತ್ ರುಚಿಯಲ್ಲಿ ಅವಳ  ಚೆಲುವಿನ ಸವಿ ಸವಿಯುತ್ತಿದ್ದ .

ಸ್ವಲ್ಪ ಹೊತ್ತು ಅದು ಇದೂ ಮಳೆ  ಬೆಲೆ  ವಿಚಾರ ಮಾತಾಡಿದ   ಎರಡೂ  ಕಡೆಯವರು  ಮುಖ್ಯ ವಿಚಾರಕ್ಕೆ ಬಂದರು,

ಹುಡ್ಗಿಯ ತಾಯಿ ಹೊರಬಂದು , ಒಸಿ   ಬನ್ನಿ ಒಳಾಕೆ  ಅಂತಾ   ಹುಡುಗಿಯ  ಅಪ್ಪನನ್ನು  ಮನೆಯ ಕೋಣೆಯೊಳಗೆ  ಕರೆದು ಕೊಂಡು ಹೋದರು .  ಸ್ವಲ್ಪ ಸಮಯದ ನಂತರ  ಹೊರಬಂದಾ ಇಬ್ಬರ ಮುಖದಲ್ಲೂ ಹುಡುಗ ಒಪ್ಪಿಗೆಯಾದ ಬಗ್ಗೆ  ಭಾವನೆ ವ್ಯಕ್ತವಾಗುತ್ತಿತ್ತು.

ಹುಡುಗಿಯ ಅಪ್ಪ :-  "ಬಾಳಾ ಒತ್ತಾಯ್ತು ,  ನಮ್  ಹುಡ್ಗಿ , ಬಗ್ಗೆ ಏನೂ ಯೋಳಲೇ ಇಲ್ಲಾ  ನೀವೆಲ್ಲಾ , ನಮ್ಗೆ  ನಿಮ್  ಹುಡುಗ ಒಪ್ಗೆ  ಆಗವ್ನೆ , ಏನ್ರಪ್ಪಾ  ಒಪ್ಪಿಗೆಯ ನಿಮಗೆ ಈ ಸಂಬಂಧ , ಊ  ಅನ್ನೋದಾದ್ರೆ  ಮುಂದುವರ್ಸಿ ಮಾತಾಡುಮಾ ," ಏನನ್ದೀರಿ?  ಅಂದ್ರು . 

ಹುಡುಗನ ಅಪ್ಪಾ :- "ಓ  ಇದಾ ಇಸ್ಯಾ , ಏನ್ಲಾ  ಮೊಗ ಹುಡುಗಿ ನಿಂಗೆ  ಒಪ್ಪಿಗೆಯಾ ? "ಯೋಳ್ಲಾ  ಅಂದ್ರ್ರೂ,

ಪುಟ್ಮಾದ :- ನನ್ದೆನದೇ  ಎಲ್ಲಾ  ದೊಡ್ಡವರು  ನೀಮೆ ಇದ್ದೀರಲ್ಲಾ , ನಿಮಗೆ ಒಪ್ಗೆ  ಆಗಿದ್ರೆ , ನಂಗೂ  ಒಪ್ಪಿಗೆಯಾ  ಅಂದಾ ,

ಹುಡುಗನ ಅಪ್ಪಾ:- "ಲೇ  ಮದುವೇ  ಆಗಿ ಸಂಸಾರ  ಮಾಡೋವ್ನು  ನೀನು ಕನ್ಲಾ ," "
                            ಸರ್ಯಾಗಿ ಯೋಳೋ ಐವಾನ್ ", ಅಂದ್ರೂ 
                            ನನ್ನ ಕಡೆ ತಿರುಗಿ  , ಒಸಿ ಆಚೆ ನಮ್ ಹೈದನ  ಆಚೆ ಕರ್ಕಂಡು ಓಗಿ  ಕೇಳಪ್ಪಾ , 
                           ನೀನೆ ಸರಿ  ಇವನ  ದಾರಿಗೆ ತರೋಕೆ , ಅಂದು ಇಬ್ಬರನ್ನು ಮನೆಯ ಹೊರಗೆ ಕಳುಹಿಸಿದರು

ನಾನು:-              "ಲೇ ಪುಟ್ಮಾದ  ಹುಡುಗಿ ಒಪ್ಪಿಗೆ  ಏನೋ ? " ಅಂದೇ

ಪುಟ್ಮಾದ :-  "ಊ  ಗುರು, ಉಡ್ಗಿ  , ಸಂದಾಗ್ ಅವ್ಳೇ ",   
                    "ಒಸಿ ನೋಡೂಕೆ  ಸಿನ್ಮಾ  ಆರ್ತಿ  ಕಂಡಂಗ್  ಆಯ್ತಾ ಅದೇ" 
                     ಅಂತಾ   ಜೊಲ್ಲು ಸುರುಸಿದ.

ನಾನು :-      ಸರಿ ಹಾಗಿದ್ರೆ  , ಒಪ್ಪಿಗೆ ಅಂತಾ ಹೇಳೋಣ ಬಾ , ಅಂದೇ .

ಪುಟ್ಮಾದ :-  ಲೇ ಇರೋ ಒಸಿ ,    ಮದುವೇಲಿ  ಎನ್ಕೊಡ್ತಾರೆ , ಅಂತಾ ತಿಳ್ಕಂಡು , ಆಮ್ಯಾಕೆ  ಒಪ್ಗೆ  ಅಂತಾ ಯೋಳುಮ .                  ನಮ್ ಅಪ್ಪನ ಕರಿ  , ಮಾತಾಡ್ಬೇಕೂ  ಅಂದಾ

ನಾನು ಹೋಗಿ ಹುಡುಗನ  ಅಪ್ಪನನ್ನು ಕರೆದುಕೊಂಡು ಬನ್ದೆ.  ಏನ್ಲಾ ನಿಂದು  ತಕರಾರು ಲೇ , ಅಂತಾನೆ ಬಂದ್ರು ,

ಪುಟ್ಮಾದ :- ಅಪ್ಪವ್ , ಒಪ್ಕಂಡ್ಬುಟ್ಟಾ  ನೀನು ?  ಏನ್ ಕೊಟ್ಟಾರಂತೆ , ? ಈಗಲೇ ಯೋಳ್ತೀನಿ , ನಂಗೆ  ಮಾರುತಿ  ಕಾರ್        ಕೊಡ್ಸುಕೆ  ಯೋಳು , ನೀನಾದ್ರೂ  ತಕೊಡ್ಲಿಲ್ಲ , ಇಂಗಾದ್ರೂ  ಬರ್ಲಿ  ಅನ್ದಾ.


ಪಕ್ಕದಲ್ಲಿ ಇದ್ದ ನನಗೆ  ಇವನ ಮಾತು ಕೇಳಿ  ಸುಸ್ತಾಯ್ತು , ಇವನಿಗೆ ನೆಟ್ಗೆ  ಮೋಟಾರ್  ಬೈಕ್  ಓದ್ಸೋಕೆ ಬರ್ತಿರ್ಲಿಲ್ಲಾ , ಇನ್ನು ಹುಡುಗಿ ಜೊತೆ ಹೊಸ ಕಾರ್ ಕೊಟ್ರೆ ,  ಹುಡುಗಿ ಕಥೆ ? ಅಂತಾ ಅನ್ನಿಸಿ , ದಿಕ್ಕು ತೋಚದಂತೆ  ಆಯಿತು.
ಹುಡುಗನ ಅಪ್ಪಾ  ಮಗನ ಬೇಡಿಕೆಗೆ ನಸು ನಕ್ಕು  , ನಂ ಮಗ  ದಾರೆ ಮಂಟಪದಲ್ಲಿ  ತಾಳಿ ಕಟ್ಟುವಾಗ  ಮದುವೆಮನೆ ಮುಂದೆ ಸೋರೂಂ  ಕಾರು ನಿಂತಿರ್ಬೇಕೂ  ಅಂತೀನಿ  ಕನ್ಲಾ  ಮಗ   ನಡಿ ಬಿರಬಿರನೆ , ಅಂತಾ  ಹುಡುಗಿಯ  ಮನೆಯ ಒಳಗೆ  ನಮ್ಮನ್ನೆಲ್ಲಾ ಕರೆದುಕೊಂಡು  ಹೊದ್ರು.  ನಾನು ಏನೂ ಅರ್ಥವಾಗದವನಂತೆ  ಪೆಚಾಗಿ ಮನೆಯ ಒಳಗೆ  ನಡೆದೇ .

ಮಾತುಕತೆ  ಶುರು ಆಯ್ತು,  ನಮ್ ಐದಾ  ಎಂ  . ಎ . ಪಾಸ್ ಮಾಡವ್ನೆ ,   ಮನೆಹಾಳ್ ಪುರ ದಲ್ಲಿ ,  ನಾಮೂವೆ   ಅವನನ್ನ  ದೊಡ್ ಕಾಲೇಜ್ಗೆ  ಹಾಕಿ  ಓದುಸ್ದೋ , ಅಲ್ಲೂ  ಬಾಳ  ಒಳ್ಳೆ ಎಸ್ರು ತಗಂಡಾ , ಈಗ ನಮ್ ಯವಾರ ನೋಡ್ಕಳ್ಳೀ ಅಂತಾ , ನಾಮೇ ಕೆಲಸಕ್  ಬ್ಯಾಡ ಮಗಾ ಅಂದೋ ,  ಅದ್ಯಾಕೋ ಕಾಣೆ ನಿಮ್ ಹುಡ್ಗಿ  ನೋಡಿ  ಒಪ್ಕಂದವ್ನೆ , ಬಾಳ ಉಡ್ಗಿರ್  ನೋಡಿದರೂ  ಒಪ್ಪಿರ್ನಿಲ್ಲಾ , ನಿಮ್ ಉಡ್ಗಿ  ನಸೀಬು ಚಂದಾಕದೆ  , ಮಾತು ಕಥೆ ನಡೀಲಿ   ಅನ್ನುತ್ತಾ   ಪ್ರಸ್ಥಾಪ ಇಟ್ಟರು .

ಹುಡುಗಿ ಅಪ್ಪಾ , ಇನ್ನೇನು ಎಲ್ರುದೂ ಒಪ್ಗೆ  ಅಂದಮ್ಯಾಕೆ , ಸುರು ಮಾಡುಮ ಮಾತುಕತೆ, ಆದ್ರೆ  ಉಡುಗ  ಸರ್ಕಾರಿ  ಕೆಲ್ಸಾ ಮಾಡ್ತಾ   ಇಲ್ಲಾ ಅನ್ನೋದೇ  ಒಸಿ  ಬ್ಯಾಸರಾ , ನಮ್ ಹುಡುಗಿ ಚೆನ್ನಾಗಿ   ಬಿ. ಎ .  ಓದವಳೇ  , ಮನೆಕೆಲ್ಸಾ  ಎಲ್ಲಾ ಮಾಡ್ತಾಳೆ ,  ನಮ್ ಹಟ್ಟಿಗೆ  ಲಕ್ಸ್ಮಿ ಇದ್ದಂಗೆ , ಇವಳು   ಹುಟ್ಟಿದ್  ಮ್ಯಾಕೆ   ನಮ್ ಯಾಪಾರ, ಯವಾರ ಇನ್ನೂ ಜೋರಾಯ್ತು . ಸರ್ಕಾರಿ ಕೆಲ್ಸಾ ಇರೋ ಗಂಡ  ಬೇಕೂ ಅಂತಿದ್ಲು , ಏನ್ ಮಾದುಮಾ ಈಗ , ಒಳ್ಳೆ ಫಜೀತಿ ಆಯ್ತಲ್ಲಾ , ಅಂತಾ ತಲೆ  ಕೆರೀತ , ಸರಿ ಬುಡಿ ,  ನಾಮೇ ನಮ್  ನೆಂಟ್ರು  ಒಬ್ಬರು ಮಂತ್ರಿಯಾಗವ್ರೆ  ಅವ್ರ್ತಾವು  ಕೈ ಕಾಲ್ ಕಟ್ಟಿ ಕೆಲ್ಸಾ  ಕೊಡಿಸ್ತೀವಿ , ನಮ್ ಕೈಲಾದಂಗೆ  ಚಿನ್ನಾ , ಬಣ್ಣಾ  ಆಕಿ  ಮರ್ಯಾದೆಗೆ ತಕ್ಕಂಗೆ   ಕಿತಾಪತಿ ಪುರದಲ್ಲಿ  ಆ  ಪುಟ್ಟಣ್ಣನವರ  ದೊಡ್ಡ  ಚತ್ರಾ  ಅದಲ್ಲಾ , ಅದನೆ ಬುಕ್  ಮಾಡಿ  ಮದುವೇ ಮಾಡಿಕೊಡ್ತೀವಿ   ಬುಡಿ . 

 ನಮ್ಮ   ಪುಟ್ಮಾದನ  ಮುಖ ಬಿಳಿಚಿ ಕೊಂಡಿತು , ಪೆಚ್ಛಾಗ್  ಹ್ಯಾಪ ಮೊರೆ ಹಾಕಿಕೊಂಡು ನಿಂತಾ , ಅವನ ಕನಸಿನ ಮಾರುತಿ ಕಾರಿನ  ವಿಚಾರ  ಬಂದಿರಲೇ ಇಲ್ಲಾ  ಹುಡುಗಿಯ ಅಪ್ಪನ ಬಾಯಲ್ಲಿ,

ಹುಡುಗನ ಅಪ್ಪಾ :- ಅಯ್ಯೋ ನಮ್  ಹುಡುಗ  ಬಾಳ  ಒದವ್ನೆ , ಅವನಿಗೆ  ಸರ್ಕಾರಿ ಕೆಲ್ಸಾ  ಕೊಡ್ಸೋಕೆ , ನಮ್  ಕಡೆ   ಮಂತ್ರಿಗೊಳು    ಊ ಅಂದಿದ್ರು ,  ಅವರ  ಸಹಾಯದಿಂದ ಕೆಲಸದ  ಆಡ್ರೂ  ಸೈತಾ  ಬಂದಿತ್ತು, ನಮ್ ಐದ  ಯಾಕೋ ಕಾಣೆ  ಮನಸು ಮಾಡ್ನಿಲ್ಲಾ , ಅಯ್ಯೋ ಬುಡಪ್ಪಾ , ನಮ್ ಆಸ್ತಿ, ಕಂತ್ರಾಟು ,  ಜಮೀನು, ನೋಡ್ಕಂಡು ಇರ್ತೀನಿ ಅಂತಾ ಅಂದಾ, ನಾನು ಒಗ್ಲಿ  ಅಂತಾ  ಸುಮ್ಕಾದೆ . ಆದ್ರೆ ನಿಮ್ ಮಗಳು  ಸರ್ಕಾರಿ ಕೆಲಸದ  ಗಂಡು ಬೇಕೂ ಅಂತಾಳೆ ಅಂತೀರಿ , ಯಂಗು ನಿಮ್ ಕಡೆ ಮಂತ್ರಿಗಳು ಅವ್ರೆ  ಅಂತೀರಿ , ನೀಮೆ ಒಂದ್ ಸರ್ಕಾರಿ ಕೆಲ್ಸಾ  ಕೊಡ್ಸಿಬುಡಿ  ಅತ್ಲಾಗೆ , ಪಾಪ ನಿಮ್ ಹೆಣ್ಮಗಿ ಆಸೆ ಪಡ್ತಾಳೆ , ಅವ್ಲ್ಗೂ ಖುಸಿಯಾಯ್ತದೆ , ನಮ್ ದೇನು  ಬಿದ್ದೊಗೋ  ಮರ  ಮುಂದೆ ಬಾಳ್ಮೆ  ಮಾಡೋವ್ರು ಅವ್ರೆ ಅಲ್ವೇ ....? ಅಂತಾ  ಬೋ ಉಪಕಾರ ಮಾಡೋ ತರಹ ಮಾತು ನಿಲ್ಲಿಸಿದರು.

ಹುಡುಗನ  ತಾಯಿ :- ಓ  ಇವರ ಮಾತೂ ನಿಜವೇ , ನಮ್ದೇನು, ಮುಂದಕ್ಕೆ ಇವರೇ ಅಲ್ವೇ ಸಂಸಾರ ಮಾಡೋವ್ರು,  ನಮ್ ಕಡೆ ಇಂದಲೂ  ಹುಡುಗಿಗೆ  ಕೊಡೊ ಚಿನ್ನಾ, ಬಣ್ಣಾ, ಸೀರೆ , ಒಡವೆ , ಎಲ್ಲ ಕೊಡ್ತೀವಿ, ಸರೀಕರ ಮುಂದೆ   ಸೈ  ಅನ್ನೋ ಹಂಗೆ ನಮ್ ಸೊಸೆಗೆ  ಕೊಡಬೇಕಾದದ್ದ  ಕೊಡ್ತೀಮಿ  ಬುಡಿ,  ಆದ್ರೆ ನಮ್   ಗಂಡು  ಪಾಪ  ಒಳ್ಳೆ ಮಗ , ಇಂತಾ  ಅಳಿಯನ  ಪಡೆಯಾಕೆ  ಪುಣ್ಯಾ ಮಾಡಿದ್ರಿ ಬುಡಿ ,  ಹುಡುಗಿ  ಋಣ  ನಿಮ್ಮ ಹಟ್ಟೀಲಿ ಅದೇ   ಅವಂದು ,  ಎಲ್ಲಾ  ದ್ಯಾವ್ರ್ ಇಚ್ಚೆ  , ನಮ್ ದೇನದೆ , ನಮ್ ಸೊಸೆಯ ನಮ್ ಮಗಳು ನೋಡ್ಕಂದಂಗೆ  ನೋಡ್ಕತೀಮಿ  ಯೊಸ್ನೆ ಬ್ಯಾಡ ,       ನಿಮ್ ಮಗಳು ಅಳಿಯ ಓಡಾಡೂಕೆ  ಕಾರು ಗೀರೂ ಕೊಡಿ , ಅವನ  ಜೊತೆಯವ್ರ್ಗೆಲ್ಲಾ  ಅವರ ಮಾವನ  ಮನೆಯವರು  ಕಾರು ಕೊಟ್ಟವ್ರೆ , ಸರೀಕರ ಮುಂದೆ  ಮರ್ವಾದೆ  ಉಳೀಬೇಕೂ  ಅಲ್ವೇ   ಅಂದ್ರು .

ಹುಡುಗಿಯ  ತಾಯಿ :-  ಓ  ಇದ್ಯಾಕೋ  ದುಬಾರಿ  ಆಯ್ತದೆ , ನಮ್ ಹೆಣ್  ಮದುವೆ  ಆಗಾಕೆ, ಸರ್ಕಾರಿ ಕೆಲಸದ  ಗಂಡುಗಳೇ ಬಂದಿದ್ದೋ , ಆದ್ರೂವೆ  ಯಾಕೋ ನಮ್ ಲಕ್ಸ್ಮಿ  ಯಾರ್ನೂವೆ ಒಪ್ಪಿರ್ನಿಲ್ಲಾ , ಯಾಕೋ  ಈ ನಿಮ್  ಮಗನ್ನ  ಒಪ್ಪ್ಕಂದವ್ಲೆ ,  ಈಗ ಸರ್ಕಾರಿ ಕೆಲ್ಸಾ  ಕೊಡ್ಸಿ , ಚಿನ್ನಾ , ಬಣ್ಣಾ , ಬಟ್ಟೆ, ಎಲ್ಲಾ  ಕೊಟ್ಟು ಜೋರಾಗಿ ಮದುವೆ  ಮಾಡ್ತೀಮಿ , ದೀಪಾವಳಿ  ಒತ್ಗೆ   ಕಾರ್   ಕೊಡ್ತೀವಿ ಬುಡಿ ,  ಜೊತೆಗೆ ನಮ್ ಮಗಳ  ಹೆಸರಲ್ಲಿ   ಐದು  ಎಕರೆ   ನೀರಾವರಿ ಜಮೀನದೆ  ಅದೂ ಅವಳ್ಗೆ  ಅಂತ್ಲೇ ಬುಟ್ತಿದ್ದೋ  ಅಂದ್ರೂ,  ಈಗ  ಅದ  ಮಾರ್ಬುಟ್ಟು   ಮದುವೇ  ಮಾಡಬೇಕೂ  ಅಂದ್ರೂ . .

 ಪುಟ್ಮಾದ ನ  ಮನದಲ್ಲಿ ಮತ್ತೆ ಟೈರ್ ಪಂಚರ್  ಆಯ್ತು, ನನ್ ಕಡೆ ನೋಡಿ ,  ಅವರ ಅಪ್ಪನಿಗೆ ಕಿವಿಯಲ್ಲಿ ಪಿಸುಗುಟ್ಟಿದ , ನನಗೋ  ಇಲ್ಲಿನ ಸನ್ನಿವೇಶ   ವಿಚಿತ್ರವಾಗಿ, ಶೇರ್  ಮಾರುಕಟ್ಟೆ  ಯಂತೆ  ಕಾಣ್ತಿತ್ತು . ಒಂದು ಮದುವೆಯಲ್ಲಿ ಇಷ್ಟೊಂದು  ಹಣ ಆಸ್ತಿಯ  ವ್ಯವಹಾರ ಇದ್ಯಾ ಅಂತಾ ಅಚ್ಚರಿ ಯಾಗಿತ್ತು.

ಹುಡುಗನ ತಂದೆ:- ನೋಡ್ರಪ್ಪಾ , ಜಾಸ್ತಿ  ಎಳದಷ್ಟೂ   ಕಿತ್ತೊಯ್ತದೆ , ಎಲ್ಲಾ ಒಂದು ಹಂತಕ್ಕೆ ಬಂದದೆ , ಇನ್ನು  ಕಾರ್ ಗೋಸ್ಕರ  ಯಾಕೆ ಮುಖಮುನಿಸು , ಮದುವೇ  ದಿನ ಧಾರೆ ಮಂಟಪದಲ್ಲಿ   ಹುಡುಗ ಹುಡುಗಿ, ಮದುವೆಮನೆ  ಮುಂದೆ  ನೀವು ಕೊಡೊ ಹೊಸ  ಕಾರು ನಿಂತಿದ್ರೆ , ನಿಮಗೂ  ಸರೀಕರ  ಮುಂದೆ  ಮರ್ವಾದೆ  ಎಚ್ಛಾಯ್ತದೆ , ನಮ್  ದುರಾಸೆಪುರದ ಕಡ್ಯೋರಿಗೂ  ನಿಮ್ ತಾಕತ್ತು ಗೊತ್ತಾಯ್ತದೆ ,  ಚೇರ್ಮನ್  ಮನೆ ಸೊಸೆ ಮನೆಯವರು  ಅಳಿಯನಿಗೆ ಒಂದು ಕಾರ್ ಕೊಡಲಿಲ್ಲಾ  ಅನ್ನೋ  ಅಪಾದನೆ  ಬರ್ಬಾರ್ದು  ನೋಡಿ, ಸುಮ್ಕೆ  ಖರ್ಚಿನ ಜೊತೆ ಇದೂ ಒಂದು  ಖರ್ಚೂ  ಮನಸ್ ಮಾದ್ಬುಡಿ ಅಂದ್ರೂ .

ಕೊನೆಗೆ  ಅಳೆದು  ಸುರಿದೂ  ಎರಡೂ ಕಡೆಯವರೂ  ಒಪ್ಪಿ ಹುಡುಗನ  ಆಸೆಯಂತೆ  ಹೊಸ ಮಾರುತಿ  ಬಿಳೀ  ಕಾರು ಕೊಡಿಸಲು  ಒಪ್ಪಿದರು, ಹುಡುಗನ ಕಡೆ  ಎರಡು ಸಾವಿರ , ಹುಡುಗಿ ಕಡೆ  ಎರಡು ಸಾವಿರ  ಜನ ಬರೋದಾಗಿ  ಒಪ್ಪಂದವಾಗಿ , ಹುಡುಗನ ಕಡೆಯ ಜನರನ್ನು ಮದುವೇ ಮನೆಗೆ ಕರೆತರಲು, ಎರಡು ಕಾರು, ಒಂದು ಬಸ್ಸು, ಎರಡು ಲಾರಿ  ಕಳುಹಿಸಿಕೊಡಲು  ಹುಡುಗಿಯ ಮನೆಯವರು ಒಪ್ಪಿದರು .   ಕಿತಾಪತಿ ಪುರದಲ್ಲಿ  ನಡೆಯುವ ಮದುವೇಗೆ   ಆರ್ಕೆಸ್ಟ್ರಾ   ಬೇಕೆಂದು ತೀರ್ಮಾನ ಆಯ್ತು.   ಕಿತಾಪತಿಪುರ ದಲ್ಲಿ   ದೊಡ್ಡ    ಮದುವೇ  ಛತ್ರ ದಲ್ಲಿ  ಮದುವೇ  ನಡೆಸಲು ಸರ್ವ ಸಮ್ಮತಿಯಿಂದ  ತೀರ್ಮಾನವಾಯಿತು, ......... ! 

ನಮ್ಮ  ಪುಟ್ಮಾದ   ಆಕಾಶದಲ್ಲಿ ಹಾರಾಡಿದ , ಕನಸುಗಳ  ಸಾಮ್ರಾಜ್ಯದಲ್ಲಿ  ರಾಜ್ಯಭಾರ  ಮಾಡಿದ , ತನ್ನ ಮದುವೆಗೆ  ಎಲ್ಲರನ್ನೂ  ತಾನೇ ಖುದ್ದು  ಆಹ್ವಾನಿಸಿ ಲಗ್ನ  ಪತ್ರಿಕೆ  ಹಂಚಿದ . ಮದುವೆಯ  ದಿನ  ಬಂದೆ ಬಿಟ್ಟಿತು, ಹುಡುಗನ ಮನೆಯಿಂದ  ಕಿತಾಪತಿ ಪುರದಲ್ಲಿ ಎರಡು ಕಾರು, ಒಂದು ಬಸ್ಸು, ಎರಡು ಲಾರಿ ಸಹಿತ ದಿಬ್ಬಣ  ಹೊರಟಿತು .  ಆಗಿನ ಮದುವೆಯಲ್ಲಿ  ಮೊದಲು ಧಾರೆ , ನಂತರ  ಆರತಕ್ಷತೆ  ಇತ್ತು ,

ಬೆಳಿಗ್ಗೆಯೇ  ಮದುವೇ  ಮಾಡಿಸಲು ಬಂದಿದ್ದ  ಪುರೋಹಿತರು  ಶಾಸ್ತ್ರಾ  ಶುರು ಮಾಡಿದ್ದರು,  ಕಾಶಿಯಾತ್ರೆ  ಗೆ  ಹೊರಟ  ಗಂಡು ಮಂಗಳ ವಾಧ್ಯ ದೊಡನೆ   ಛತ್ರದ  ಮುಂದೆ  ಬಂತು,  ಅಲ್ಲಿ ಶಾಸ್ತ್ರ  ನಡೆದಿತ್ತು, ಆದರೆ ನಮ್ಮ  ಪುಟ್ಮಾದ ನ ಕಣ್ಣು  ಕಾರಿಗಾಗಿ ಹುಡುಕುತ್ತಿತ್ತು , ಆದರೆ ಕಾರಿನ  ದರ್ಶನವಿಲ್ಲಾ, ಅಲ್ಲೇ ಇದ್ದ  ನನ್ನನ್ನು  ಕರೆದು ಗುರು ಇನ್ನೂ ಕಾರು ಬಂದಿಲ್ಲಾ  ವಿಚಾರಿಸು  ,  ಅಂತಾ ಹೇಳಿದ .

ನನಗೋ ನಾಚಿಕೆ , ಆದರೂ ಮನಸು ಮಾಡಿ ಹುಡುಗಿಯ  ಚಿಕ್ಕಪ್ಪನ  ಹತ್ತಿರ ಹೋಗಿ  , ನಿಮ್ ಅಣ್ಣನ  ಅಳಿಯ ಕೇಳ್ತಾ ಇದ್ದಾರೆ  ಕಾರು ಬಂದಿಲ್ವಾ ? ಅಂದೇ,  ಅವರು ನನ್ನನ್ನು ಕೆಕ್ಕರಿಸಿ ನೋಡಿ,  ಸೋ  ರೂಂ   ಗೆ ಒಗವ್ರೆ  ತರೋಕೆ ಬತ್ತದೆ ಇನ್ನೇನೂ  ಅಂದರು , ಅದನ್ನೆ  ಪುಟ್ಮಾದನಿಗೆ  ಹೇಳಿದೆ , ಸ್ವಲ್ಪ ಹೊತ್ತಾಯ್ತು, ಕಾಶಿಯಾತ್ರೆ  ಶಾಸ್ತ್ರ ಮುಗೀತು,  ಮದುವೇ ಮಂಟಪಕ್ಕೆ ಹುಡುಗನನ್ನು ಕರೆದೊಯ್ದರು,  ಪುರೋಹಿತರು, ಉತ್ಸಾಹದಿಂದ  ಮಂತ್ರಾ ಹೇಳುತ್ತಿದ್ದರು , ಆದರೆ ನಮ್ಮ ಗಂಡು ಮಾತ್ರ  ಮದುವೇ ಮಂಟಪದಲ್ಲಿ ಕಾರನ್ನು ಹುಡುಕುತ್ತಿತ್ತು,  ಮತ್ತೆ ನನ್ನನ್ನು ಹತ್ತಿರ ಕರೆದು  ಕಾರ್ ಬಂತಾ ನೋಡು ? ಅಂತಾ  ಸಿಟ್ಟಿನಿಂದಾ  ಕೇಳಿದನು


 .


ನನಗೋ ಧರ್ಮ ಸಂಕಟ  ಮತ್ತೆ ಆಚೆ ಹೋಗಿ ನೋಡಿದೆ ಕಾರಿನ  ಸುಳಿವಿಲ್ಲಾ , ಅಲ್ಲೇ ಇದ್ದ ಹುಡುಗಿಯ  ತಂದೆಯವರನ್ನು ಕೇಳ್ದೆ , ಕಾರಾ  ಇನ್ನೇನು ಬತ್ತುದೆ , ತರಾಕೆ ಒಗವ್ರೆ , ನಿಮ್ ಸಿನೆಹಿತರಿಗೆ ನೆಮ್ದಿಯಾಗಿ  ಇರಾಕೆ  ಯೋಳಿ , ನಾಮು ಅಂಗೆಲ್ಲಾ  ಖಾಲಿ ಪೋಲಿ  ಜನ ಅಲ್ಲಾ ಮಾತು ಅಂದ್ರೆ ಮಾತೆಯ , ಅಂದ್ರು ಅದನ್ನೇ ನನ್ನ ಈ ಎಡವಟ್ಟು ಗೆಳೆಯನಿಗೆ  ಹೇಳಿದೆ , ಅಷ್ಟರಲ್ಲಿ ಅವನ ಪಕ್ಕದಲ್ಲಿ ಹುಡುಗಿಯನ್ನು ಕೂರಿಸಿದ್ದರು  ಶಾಸ್ತ್ರ ಮುಂದುವರೆದಿತ್ತು, ಆ ಹುಡುಗಿ ಪುರೋಹಿತರು  ಹೇಳಿದ್ದನ್ನು  ಭಕ್ತಿಯಿಂದ  ಮಾಡುತ್ತಿದ್ದರೆ,  ಪುಟ್ಮಾದ ಮಾತ್ರ  ಕಾರನ್ನು ನೆನೆಸಿಕೊಂಡು  ಕಾಟಾ ಚಾರಕ್ಕೆ  ಕುಳಿತಿದ್ದ,  ನನ್ನನ್ನೂ ಆ ಹುಡುಗಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದ .  ನಾನು ಅವನ ನೋಟ ಎದುರಿಸಲಾಗದೆ  ಮರೆಯಾಗಿ ನಿಂತೇ  ಅಷ್ಟರಲ್ಲಿ ಯಾರ್ರೀ  ಹುಡುಗನ ಸ್ನೇಹಿತ ಅನಿಲ್ ಮುಂದೆ ಬನ್ರೀ , ಅಂದ್ರೂ ನಾನೂ  ಮೆತ್ತಗೆ ಹತ್ತಿರ ಹೋದೆ, ಪುಟ್ಮಾದ  ಮಾತಾಡಿ, "ಲೇ ಗುರು, ಅದೇನು  ಕಾರು ಬತ್ತುದೋ ಇಲ್ವೋ   ಕೇಳಪ್ಪ ,  ನಮಗೆ ಇಂಗಾ ಅವಮಾನ  ಮಾಡಾದು ಇವ್ರು ?, ಮುಂಚೆನೇ ಯೋಳಿದ್ರೆ  ಹತ್ತು  ಹೊಸ  ಕಾರು ತಂದು  ನಿಲ್ಲಿಸ್ತಿದ್ದೆ ,   ರೀ ಪುರೋಯ್ತರೆ ಇರೀ ಒಸಿ  ಕಾರ್ ಬರಲಿ  ಆಮ್ಯಾಕೆ ತಾಳಿ  ಕಟ್ಟ್ಸೋರಂತೆ ," ಅಂದಾ, ಅದಕ್ಕೆ ಹುಡುಗನ  ಅಪ್ಪಾ , ಅಮ್ಮಾ  ಕೂಡ ಹುಡುಗಿಯ ಕಡೆಯವರನ್ನು   ವಿಲ್ಲನ್ ಗಳ ತರಹ  ನೋಡುತ್ತಿದ್ದರು,


ಚಿತ್ರ ಕೃಪೆ ಅಂತರ್ಜಾಲ


ಧಾರೆಗೆ ಇನ್ನು ಕೇವಲಇಪ್ಪತ್ತು  ನಿಮಿಷ ಇತ್ತು, ಪುರೋಹಿತರು ಸಾರ್  ನಿಮ್ಮ ಗೆಳೆಯನಿಗೆ ಹೇಳಿ , ಹಟಾ  ಬೇಡಾ ಅಂತಾ , ಕಾರು ಬಂದೆ ಬರುತ್ತೆ,  ಹೊಸ ಕಾರು ಬುಕ್ ಮಾಡುವಾಗ  , ನಾನೇ ಒಳ್ಳೆ ದಿನಾ  ನೋಡಿ ಕಳುಹಿಸಿದ್ದೆ ,   ಇಬ್ಬರ ಕೂಟಗಳನ್ನೂ  ಲೆಕ್ಕಾಚಾರ ಮಾಡಿ  ಬಿಳೀ ಕಾರನ್ನೇ ಬುಕ್ ಮಾಡಲು ತಿಳಿಸಿದ್ದೆ , ಎಂದರು, 


ನಾನೂ ಇದ್ಯಾಕೋ ಒಳ್ಳೆ ಫಜೀತಿ  ಆಯ್ತಲ್ಲಾ  ಅಂತಾ   ಗೊಂದಲದಲ್ಲಿ  ಆಚೆ ಬರುತ್ತಿದ್ದೆ, ಒಂದು ಕಾರು ಮದುವೇ ನಿಲ್ಲಿಸುತ್ತಿದೆ ಎಂಬ ಕಲ್ಪನೆ ನನಗೆ  ಬೇಸರ ತಂದಿತ್ತು ,   ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಮಾತ್ರ ಇತ್ತು,  ಮದುವೇ  ಮನೆಗೆ ಆಗಮಿಸಿದ್ದ ಎಲ್ಲರೂ  ದೇವ್ರೇ ಕಾರು  ಬೇಗ ಬರ್ಲಪ್ಪಾ , ಅಂತಾ ಪ್ರಾರ್ಥನೆ ಮಾಡಿದರೂ ಅಂತಾ ಕಾಣ್ಸುತ್ತೆ,  ದೂರದಲ್ಲಿ ಬಿಳೀ  ಮಾರುತಿ ಕಾರೊಂದು   ರಭಸದಿಂದ ಬರುತ್ತಿತ್ತು,   ನಾನೂ ತಡೆಯಲಾರದೆ  ಹೊಸ ಕಾರ್ ಬಂತೂ ಅಂದೇ . ನಿಂತಿದ್ದ ಮಂಗಳ ವಾಧ್ಯ ಮೊಳಗ ತೊಡಗಿತು, ಪುರೋಹಿತರು   ಹರುಷ ಗೊಂಡು ಮಂತ್ರ  ಘೋಷ  ಮಾಡಿದರು,   ಅಳಿಯನಿಗಿಂತಾ  ಬಿಂಕದಿಂದ ಒಳಬಂದಾ ಹೊಸ ಮಾರುತಿ ಕಾರು  ಮದುವೆಯ ಮನೆಯ ಮುಂದೆ ಅದಕ್ಕಾಗಿ ಹಾಕಿದ್ದ ಚಪ್ಪರದಲ್ಲಿ ನಿಂತಿತು .  ಮದುಮಗನ ಮುಖದಲ್ಲಿ ಕಾರನ್ನು ಕಂಡು  ಪೂರ್ಣ ಚಂದ್ರ ದರ್ಶನ ಆಯ್ತು,  ಗಟ್ಟಿಮೇಳ  ಮೊಳಗಿ  ತಾಳಿ  ಆ ಹುಡುಗಿ ಕುತ್ತಿಗೆಗೆ  ಬಿತ್ತು.  ಅತ್ತಾ ಹೊರಗೆ  ಹೊಸ ಕಾರು  ಈ ನಾಟಕ ನೋಡ್ತಾ  ಕಣ್ ಹೊಡೆದು  ಸ್ಟೈಲಾಗಿ  ನಸು ನಗುತ್ತಾ ನಿಂತಿತ್ತು,


Tuesday, March 4, 2014

"ಸುಲೇಖ" ಹೇಳಿದ ಕಥೆ ಇದು ....!! ಹೇಗಿದ್ದ ಜೀವನ ಹೇಗಾಗೊಯ್ತು ....!ಶೀರ್ಷಿಕೆ ಸೇರಿಸಿ

 ಕಳೆದ ಸಂಚಿಕೆಯಲ್ಲಿ  ಬರೆದ , "ಹೆಣ್ಣು ಮಕ್ಕಳೇ ಇವಳನ್ನು ಕ್ಷಮಿಸಿಬಿಡಿ "  ಲೇಖನಕ್ಕೆ  ಬಹಳ ಒಳ್ಳೆಯ ಪ್ರತಿಕ್ರಿಯೆ ಬಂತು, ಕೆಲವು ಹೆಣ್ಣುಮಕ್ಕಳು  ಕಥೆಯನ್ನು ಮೆಚ್ಚಿ  ಕಾಮೆಂಟ್ ಹಾಕಿದ್ರೆ  ಮತ್ತೆ ಕೆಲವರು ಫೋನ್ ಮಾಡಿ  ತಮ್ಮ ಅನಿಸಿಕೆ  ಹೇಳಿದರು, ಹಾಗಾಗಿ ಮತ್ತೊಂದು  ನೈಜತೆಗೆ ಹತ್ತಿರವಿರುವ  ಸಣ್ಣ ಕಥೆ ಬರೆದಿದ್ದೇನೆ  , ಓದಿ ಇಷ್ಟಾ ಆದ್ರೆ   ನಿಮ್ಮ ಅನಿಸಿಕೆ  ಬರೆಯಿರಿ.

"ಸುಲೇಖ"   ನಮ್ಮ ಕಥೆಯ ನಾಯಕಿ, ಹುಟ್ಟಿದ್ದು  ಹಳ್ಳಿಯಲ್ಲಿ  ಹತ್ತನೇ ತರಗತಿಯ ವರೆಗೆ  ಓದಿ,  ಮಲ್ಲಿಗೆಯ ಪಟ್ಟಣದಲ್ಲಿ  ಕಾಲೇಜು ಕಲಿತು,  ಸಂಸಾರ  ಕಟ್ಟಿಕೊಂಡು  ನರಳಿ ಅವಮಾನ , ಅಪಹಾಸ್ಯ  ಎಲ್ಲವನ್ನೂ ಎದುರಿಸಿ , ಜೀವನ ಗೆದ್ದ  ಸಾಹಸಿ , ಬನ್ನಿ ಅವಳ ಬಾಯಿಂದ  ಕತೆ  ಕೇಳೋಣ .

ನಾನು "ಸುಲೇಖ"  ನನ್ನ ಬಾಲ್ಯ  ಕಳೆದದ್ದು  ನಮ್ಮ ಹಳ್ಳಿ "ಕಾಶಿಪುರ "ದಲ್ಲಿ ಪ್ರೀತಿ ತೋರುವ  ಅಪ್ಪ , ಅಮ್ಮ, ಅಜ್ಜಿ , ಅಣ್ಣ  ಹಾಗು ,ತಮ್ಮ   ಎಲ್ಲರ ಜೊತೆ ಸಾಗಿತ್ತು ನನ್ನ  ಸುಖಮಯ ಜೀವನ . ನನ್ನ ಓದು  ಪಕ್ಕದ  ಪುಟ್ಟ ಪಟ್ಟಣ   "ಸೇವಂತಿಗೆ"   ಪುರದಲ್ಲಿ ಹತ್ತನೇ ತರಗತಿ ಓದಿ ,   "ಶ್ರೀಗಂಧ ಪುರ" ದಲ್ಲಿ  ಕಾಲೇಜು ಸೇರಿ ಪದವಿ ಪಡೆದೆ , ಅಪ್ಪಾ ಇರುವವರೆಗೆ  ಜೀವನ ನಡೆದೇ ಇತ್ತು,  ಯಾವ ಅಡೆತಡೆ  ಇರಲಿಲ್ಲ .  ಅದೊಂದು ದಿನ  ಜೀವನದ ಬರಸಿಡಿಲು ನಮ್ಮ ಕುಟುಂಬಕ್ಕೆ  ಬಡಿಯಿತು,  ಅಪ್ಪಾ ಒಬ್ಬರೇ  ಈ ಲೋಕ ತ್ಯಜಿಸಿ  ಪಯಣ ಬೆಳೆಸಿದ್ದರು.

ಅಪ್ಪನ ಸಾವು  ನಮ್ಮೆಲ್ಲರ ಜೀವನ  ಬದಲಿಸಿ, ಕಷ್ಟ ಎಂದರೇನು   ಎಂದು   ತಿಳಿಯುವಂತೆ ಮಾಡಿತು,   ಅಪ್ಪನ ಸಾವಿನ ನಂತರ ಶುರು ಆಯಿತು , ಅಪ್ಪನ ಆಸ್ತಿಗಾಗಿ   ಬಂಧುಗಳ  ದೊಂಬರಾಟ   , ಬಣ್ಣ ಬಣ್ಣದ ಮಾತನಾಡುತ್ತಾ , ಅಪ್ಪನ ಕನಸನ್ನು  ನನಸು ಮಾಡುವುದಾಗಿ  ಹೇಳಿಕೊಂಡು  ಸವಿಯಾದ ಮಾತನಾಡಿ,  ಅಪ್ಪನ   ಆಸ್ತಿಯನ್ನು  ಕೊಳ್ಳೆ ಹೊಡೆದರು, ಅಸಹಾಯಕ, ಅಮ್ಮಾ , ಪ್ರಪಂಚ ತಿಳಿಯದ  ನಾವು  ಕೊಳ್ಳೆ ಹೊಡೆಯುವ  ಬಂದುಗಳ ಗಾಳಕ್ಕೆ  ಸಿಕ್ಕಿ  ವಿಲ ವಿಲ ಒದ್ದಾಡಿದೆವು , ಕಣ್ಬಿಟ್ಟು ಪ್ರಪಂಚ ತಿಳಿಯುವಷ್ಟರಲ್ಲಿ  ಎಲ್ಲಾ ಆಸ್ತಿ ಖಾಲಿ ಯಾಗಿತ್ತು.  ಇರುವ ಮಗಳ  ಮದುವೆ  ಮಾಡಿ  ಸಂಸಾರದ  ದೊಡ್ಡ ಜವಾಬ್ಧಾರಿಯನ್ನು  ಕಳೆಯಲು, ಅಮ್ಮಾ  ಬಹಳ ಪ್ರಯತ್ನ  ಮಾಡಿದಳು , ಹೌದು  ಬೆಳೆದ ಮಗಳನ್ನು  ಎಷ್ಟು ದಿನ  ಮನೆಯಲ್ಲಿ ಇಟ್ಟು ಕೊಳ್ಳೋದು?  ವಯಸ್ಸಾದ  ಹೆಣ್ಣುಮಕ್ಕಳನ್ನು ನಾಳೆ  ಯಾರು ಮದುವೆ  ಆಗ್ತಾರೆ ? ನನ್ನ ಜೀವ ಗಟ್ಟಿ ಯಾಗಿರುವಾಗಲೇ , ಈ ಕಾರ್ಯ ಮುಗಿಸ ಬೇಕು, ಎಂಬ  ಕಾರಣಕ್ಕೆ   ನನ್ನ ಮದುವೆ  ಮಾಡುವ  ಕಾರ್ಯಕ್ಕೆ ಕೈ ಹಾಕಿ, ಮನೆಯ ಆಪ್ತ  ಬಂದುಗಳ  ಸಹಾಯದಿಂದ  ಮುಂದುವರೆದಳು, ಹಲವು ಗಂಡುಗಳ  ಸಂದರ್ಶನ  , ಗಂಡಿನ ಮನೆಯವರು   ಒಡ್ಡುವ  ಹಲವಾರು ಪರೀಕ್ಷೆಗೆ  ಮೂಕಳಾಗಿ   ಒಳಗಾಗುತ್ತಿದ್ದೆ, ಹಾಗು ಹೀಗೂ  "ಕಲ್ಯಾಣ ಪುರ" ದಲ್ಲಿ   ಒಂದು ಗಂಡು  ನನ್ನ ಮದುವೆಯಾಗಲು  ಮುಂದೆ ಬಂದಿತ್ತು,  ನಿಶ್ಚಿತಾರ್ಥ  ಆಗಿ  ಮದುವೆ  ಛತ್ರಕ್ಕೆ ದುಡ್ಡು ಕೊಟ್ಟು  ಕಾಯ್ದಿರಿಸಿ  , ಲಗ್ನ ಪತ್ರಿಕೆ ಅಚ್ಚು ಮಾಡಿಸಿ ತಯಾರಿ  ಮಾಡಿಕೊಳ್ಳುವ  ವೇಳೆಗೆ  ರಪ್ಪನೆ ಅಪ್ಪಳಿಸಿತ್ತು,  ಹುಡುಗ  ನನ್ನನ್ನು  ಮದುವೆ ಆಗಲು  ಇಷ್ಟಾ ಪಡುತ್ತಿಲ್ಲಾ   ಎಂಬ ಸುದ್ದಿ,  ಕಾರಣ ತಿಳಿಯುವ ಹಂತದಲ್ಲಿ   ನಮ್ಮ  ಮನೆಯ  ಅಪ್ಪನ ಆಸ್ತಿ ತಿಂದ   ಬಂದುಗಳೇ  ಹುಡುಗನ  ಮನೆಗೆ ಹೋಗಿ  ಮದುವೆಗೆ  ಕೊಳ್ಳಿ ಇಟ್ಟು ಬಂದಿದ್ದರು . ಇತ್ತಾ ಅಪ್ಪನ ಗೆಳೆಯ ಹಾಗು ಅವರ ಕುಟುಂಬ  ಅಪ್ಪನ  ಮೇಲಿನ ಗೌರವದಿಂದ  ಒಳ್ಳೆಯ ಕೆಲಸ ಮಾಡುತ್ತಿದ್ದರೆ , ಅತ್ತಾ  ರಕ್ತ  ಹಂಚಿಕೊಂಡು  ಹುಟ್ಟಿದ  ಬಂಧುಗಳು  ಒಳ್ಳೆಯ ಕೆಲಸಗಳಿಗೆ  ಅಡ್ಡಿ ಮಾಡುತ್ತಿದ್ದರು .

ಹೀಗಿರುವ ಸಮಯದಲ್ಲಿ  ನನ್ನ ಜೀವನಕ್ಕೆ  ತಿರುವು ಕೊಡಲು  ಬಂದ ಒಂದು ಹುಡುಗ ,  ಹೌದು ಯಾವುದೋ ಖಾಸಗಿ ಕಂಪನಿಯಲ್ಲಿ  ಉದ್ಯೋಗ ಮಾಡುತ್ತಾ , ತನ್ನದೇ ವಿಚಾರಗಳಿಗೆ  ಹೆತ್ತವರಿಂದ ದೂರವಾಗಿ , ತನ್ನ  ಜೀವನದ ಸಂಗಾತಿ ಯನ್ನು ಅರಸಿಕೊಂಡು  ನನ್ನ  ಬಳಿ  ಬಂದಿದ್ದ,  ನೇರ ಮಾತು, ದಿಟ್ಟ ನಡೆ , ನನಗೆ ಇಷ್ಟವಾಗಿ  ಅವನೊಡನೆ ಸಪ್ತಪದಿ  ತುಳಿದೆ .ಆ ಹುಡುಗನೇ ನನ್ನ ಪತಿ "ಪುರುಷೋತ್ತಮ"  ಹೊಸ ಸಂಸಾರ  , ಆರಂಭ ಗೊಂಡ  ಸ್ವಲ್ಪ ದಿನಕ್ಕೆ   ಈ  ಸಂಸಾರಕ್ಕೂ   ಕೊಳ್ಳಿ ಇಡಲು  ನೋಡಿದ ಬಂಧುಗಳ  ಆಟ ನಡೆಯಲಿಲ್ಲ, ಅಪ್ಪ ಬದುಕಿರುವಾಗ  ಇವರಿಗೆ ವಿಧ್ಯೆ  ಕಳಿಸಿ,  ಕೆಲಸ ಕೊಡಿಸಿ,  ಇವರ  ಮದುವೆ  ಸಹ ಅದ್ದೂರಿಯಾಗಿ  ಮಾಡಿದ  ಅಪ್ಪನ  ಸಹಾಯಕ್ಕೆ   ಇವರುಗಳು  ನೀಡಿದ  ಕೊಡುಗೆ ಇದಾಗಿತ್ತು.  ಜೀವನ ಚಕ್ರ  ಉರುಳಿತು,  ಒಂಟಿಯಾಗಿದ್ದ  ನನ್ನ ಪತಿ  ತನ್ನ ತಂದೆ ತಾಯಿಗಳ  , ಸಹೋದರರ  ಜೊತೆ  ರಾಜಿಯಾಗಿ   ಒಟ್ಟು   ಕುಟುಂಬಕ್ಕೆ ಸೇರಿಕೊಂಡರು .ತುಂಬಿದ ಮನೆ  ಎಂಟು ಜನ  ಸಹೋದರ  ಒಟ್ಟು ಕುಟುಂಬ , ನನ್ನಂತೆಯೇ ಸೊಸೆಯರಾಗಿ   ಆ ಮನೆಗೆ  ಬಂದಿದ್ದ  ಹೆಣ್ಣುಮಕ್ಕಳು  ನನ್ನೊಡನೆ ಬಹುಬೇಗ ಹೊಂದಿಕೊಂಡರು , ನಾವೆಲ್ಲರೂ ಒಂದೇ ಕಾಲೇಜಿನಲ್ಲಿ ಓದಿದ  ಗೆಳತಿಯರಂತೆ  ಒಬ್ಬರಿಗೊಬ್ಬರು  ಜೋತೆಯಾದೆವು . ಇಷ್ಟು ಹೊತ್ತಿಗೆ  ನಾನು ಇಬ್ಬರು  ಮಕ್ಕಳ ತಾಯಿಯಾಗಿದ್ದೆ.  ನನ್ನ ಪತಿ  ಪುರುಷೋತ್ತಮ  ಅದೇ ಖಾಸಗಿ ಕಂಪನಿಯಲ್ಲಿ  ಉದ್ಯೋಗ ಮಾಡುತ್ತಾ  , ಬೇರೆಡೆ ಒಳ್ಳೆಯ ಅವಕಾಶ  ಸಿಕ್ಕಿದರೂ  ಹೋಗದೆ  ತನಗೆ ಮೊದಲು ಅನ್ನ  ನೀಡಿದ  ಆ ಕಂಪನಿಗೆ ನಿಷ್ಟನಾಗಿ   ಉಳಿದಿದ್ದರು . ಒಟ್ಟು ಕುಟುಂಬದಲ್ಲಿ  ನಡೆದಿದ್ದ  ಜೀವನ ನಾಟಕದಲ್ಲಿ  ನನ್ನದು ಒಂದು  ಪಾತ್ರವಿತ್ತು,  ಅದೇ ನನ್ನ ಪತಿ  "ಪುರುಷೋತ್ತಮ " ರ  ಪತ್ನಿಯಾಗಿ ಆ ಸಂಸಾರಕ್ಕೆ  ಒಳ್ಳೆಯ ಕೊಡುಗೆ ನೀಡುವುದು . ಹೀಗಿರಲು ಒಂದು ದಿನ  ನಾನು  ನನ್ನ ಪತಿ  ಕಂಪನಿಯ ಕೆಲಸ ಮುಗಿಸಿ ಮನೆಗೆ ಬರುವುದನ್ನು  ಕಾಣಲು ನನ್ನ ಪುಟ್ಟ ಮಗನೊಡನೆ ತೆರಳುತ್ತಿದ್ದೆ,  ಆಗ ಒಂದು ಮಾತು ಬಂದು  ಎರಗಿತು, ಪಕ್ಕದ ರೂಂ ನಲ್ಲಿ  ನನ್ನವರ  ಕೊನೆಯ ತಮ್ಮ  ಹಾಗು ಅವನ ಮಡದಿ  ನನ್ನ ಬಗ್ಗೆ ಮಾತನಾಡುತ್ತಾ  ಕುಳಿತಿದ್ದರು ,  ಅಯ್ಯೋ ಅವಳ ಹಳ್ಳಿ ಹುಡುಗಿ  , ಇನ್ನು ಅವಳ ಗಂಡ  ಅವನೋ ಅದೇ ಖಾಸಗಿ  ಕಂಪನಿಯಲ್ಲಿ  ಕೆಲಸ  , ಬೆಳಿಗ್ಗೆ ಹೋದರೆ ರಾತ್ರಿ ಬರ್ತಾನೆ, ಇವರಿಬ್ಬರು ಸಾಕುವ ಮಕ್ಕಳು  ...? ಅವೋ ಈಗಲೇ ಹಿಂಗಿವೆ, ಅವುಗಳು  ಓದುವ ಲಕ್ಷಣ ಅಂತೂ ಗೋಚರಿಸುತ್ತಿಲ್ಲಾ,  ಇನ್ನು ಇವರ ಬದುಕು  ದೇವರೇ ಗತಿ,  ಮಕ್ಕಳನ್ನು  
ಮುಂದೇ  ತರೋದು ಅಷ್ಟು ಸುಲಭ ಅಲ್ಲಾ ....! ಮುಂದೆ ನೋಡ್ತಾ ಇರು  ಇವರ ಜೀವನ ಚಿತ್ರಾನ್ನ ಆಗೋದಂತೂ  ಗ್ಯಾರಂಟೀ , ಎಂಬ ಮಾತುಗಳು  ಬರ ಸಿಡಿಲಿನಂತೆ  ಎರಗಿದವು.  ಮುಂದೆ ಒಳ್ಳೆಯವರಂತೆ  ನಟಿಸುವ ಇವರ ಅಸಲಿ  ಬಣ್ಣ  ಗೋಚರಿಸಿತ್ತು .

 ಈ ಮಾತನ್ನು ಕೇಳಿದ ನನ್ನ ಮಗ , ಅಮ್ಮಾ  ಚಿಕ್ಕಪ್ಪ , ಚಿಕ್ಕಮ್ಮಾ  ಹೇಳಿದ್ದು ಏನಮ್ಮಾ , ಅವರು ಯಾಕೆ ನಮ್ಮ ಬಗ್ಗೆ ಹೀಗೆ ಮಾತನಾಡಿದರು , ಎಂದು ಪ್ರಶ್ನಿಸಿದ , ಅವನನ್ನು ಸಮಾಧಾನ  ಮಾಡಿ, ನೋಡು ಮಗನೆ  ಅವರ ಮಾತಿಗೆ ಪ್ರತೀ ಉತ್ತರ  ಮಾತಿನ ಮೂಲಕ  ನೀಡಬಾರದು, ಅಪ್ಪನಿಗೆ ಕಮ್ಮಿ ಕೆಲಸ, ನಾನು ದುಡಿಯುತ್ತಿಲ್ಲಾ,  ಬರುವ ಸಣ್ಣ ಆದಾಯದಲ್ಲೇ  ನಾವೆಲ್ಲಾ ಬದುಕಬೇಕು ಮಗನೆ  , ನೀನು, ನಿನ್ನ ತಮ್ಮ  ಚೆನ್ನಾಗಿ ಓದಿ ಮುಂದೆ ಬಂದರೆ   ಅದೇ ನೀವು ಅವರಿಗೆ ನೀಡುವ  ಒಳ್ಳೆಯ ಉತ್ತರ , ಹಾಗಾಗಿ ಈಗ  ಕೋಪ ಮಾಡಬೇಡ ಮಗು  ಎಂದು ಹೇಳಿದೆ . ಅಂದು ಸಂಜೆಯೇ  ನಾನು, ನನ್ನ ಪತಿ, ಹಾಗು ಇಬ್ಬರು ಮಕ್ಕಳು ಹೊರಗೆ ಹೋಗಿ  ಪಾರ್ಕಿನಲ್ಲಿ ಕುಳಿತು , ನಮ್ಮ ಸಂಸಾರದ ಬಗ್ಗೆ ಬರುತ್ತಿರುವ  ಮಾತುಗಳ ಬಗ್ಗೆ  ಚರ್ಚೆ ನಡೆಸಿದೆವು . ಯಾವುದೇ ಕಾರಣಕ್ಕೂ  ಯಾವ ಅವಮಾನವಾದರೂ ಸಹ ಎದುರು ಮಾತನಾಡದೆ  ಎಲ್ಲರ ಜೊತೆ  ಹೊಂದಿಕೊಂಡು ಹೋಗಬೇಕು,  ಇಂತಹ  ಮಾತುಗಳಿಗೆ ಸಾಧನೆಯ ಮೂಲಕ  ಉತ್ತರ ನೀಡಲು  ನಿರ್ಧರಿಸಿ,  ನನ್ನ ಕುಟುಂಬದ  ನಾಲ್ಕೂ   ಜನರೂ ಸಹ ಒಬ್ಬರಿಗೊಬ್ಬರು  ಬೆಂಬಲವಾಗಿ ನಿಲ್ಲಲು  ತೀರ್ಮಾನಿಸಿದೆವು .


ಕಾಲಚಕ್ರ  ಉರುಳುತ್ತಿತ್ತು,  ಒಟ್ಟು ಕುಟುಂಬದಲ್ಲಿ   ಎಂಟು  ಜನರ ಸಂಸಾರ  ಬೇರೆ ಬೇರೆ ಯಾಗಿ ವಾಸ ಮಾಡುತ್ತಿದ್ದೆವು . ನನ್ನ ಮಕ್ಕಳು ದೊಡ್ಡವರಾಗಿ  ಕಷ್ಟ ಪಟ್ಟು  ವಿಧ್ಯೆ ಕಲಿತು   ಸಾಧನೆಯ  ಮೆಟ್ಟಿಲು ಏರಿದ್ದರು, ಇವರಿಗಾಗಿ  ಹಗಲೂ ರಾತ್ರಿ  ಬೆಂಬಲ ನೀಡಿದ  ನಾನೂ ಸಹ  ಹರುಷಗೊಂಡಿದ್ದೆ, ಮಕ್ಕಳ ಭವಿಷ್ಯ ರೂಪಿಸಲು  ಕಷ್ಟ ಪಟ್ಟ ನನ್ನ  ಬಗ್ಗೆ ಪತಿರಾಯರೂ  ಸಹ  ಹೆಮ್ಮೆ ಪಟ್ಟಿದ್ದರು , ನನ್ನ ಕಿರುಕುಳವನ್ನು ಸಹಿಸಿಕೊಂಡು  ಕಷ್ಟಪಟ್ಟು  ಓದಿ, ಸಾಧನೆ ಮಾಡಿ   ಸಾಫ್ಟ್ ವೇರ್ ಇಂಜಿನಿಯರ್  ಗಳಾಗಿ   ತಮ್ಮ ಬುದ್ಧಿ ಶಕ್ತಿಯಿಂದ  ಸುಲಭವಾಗಿ  ಕೆಲಸ ಗಿಟ್ಟಿಸಿದರು .  ಅಂದು  ಅಯ್ಯೋ ಅವಳ ಹಳ್ಳಿ ಹುಡುಗಿ  , ಇನ್ನು ಅವಳ ಗಂಡ  ಅವನೋ ಅದೇ ಖಾಸಗಿ  ಕಂಪನಿಯಲ್ಲಿ  ಕೆಲಸ  , ಬೆಳಿಗ್ಗೆ ಹೋದರೆ ರಾತ್ರಿ ಬರ್ತಾನೆ, ಇವರಿಬ್ಬರು ಸಾಕುವ ಮಕ್ಕಳು  ...? ಅವೋ ಈಗಲೇ ಹಿಂಗಿವೆ, ಅವುಗಳು  ಓದುವ ಲಕ್ಷಣ ಅಂತೂ ಗೋಚರಿಸುತ್ತಿಲ್ಲಾ,  ಇನ್ನು ಇವರ ಬದುಕು  ದೇವರೇ ಗತಿ,  ಮಕ್ಕಳನ್ನು  ಮುಂದೇ  ತರೋದು ಅಷ್ಟು ಸುಲಭ ಅಲ್ಲಾ ....! ಮುಂದೆ ನೋಡ್ತಾ ಇರು  ಇವರ ಜೀವನ ಚಿತ್ರಾನ್ನ ಆಗೋದಂತೂ  ಗ್ಯಾರಂಟೀ ಎಂಬ  ಮಾತನಾಡಿದ್ದ ಅವರ ಮಾತನ್ನು  ಅವರ ಮಕ್ಕಳು  ನಿಜ ಮಾಡಿಬಿಟ್ಟರು,   ಅಂದು ಗೇಲಿ ಮಾಡಿದ್ದ  ಜನರು  ಬೇರೆಯವರ ಸಂಸಾರದ ಬಗ್ಗೆ ತಲೆ ಕೆಡಿಸಿಕೊಂಡು  ತಮ್ಮ ಸಂಸಾರದಲ್ಲಿ  ಎಡವಿದ್ದರು .


ಅದೊಂದು ದಿನ  ಮನೆಗೆ  ಬಂದ  ನನ್ನ ಪತಿಯ ಕೊನೆಯ ತಮ್ಮ  ,   ಅತ್ತಿಗೆ ನಮ್ಮನ್ನು ಕ್ಷಮಿಸಿ  , ನಿಮಗೆ ಗೊತ್ತಿಲ್ಲಾ   ನಾವೆಲ್ಲಾ  ಒಟ್ಟಿಗೆ ಇದ್ದಾಗ  ನಿಮ್ಮ ಸಂಸಾರ  ಇಷ್ಟು ಚೆನ್ನಾಗಿ   ಮುಂದೆ ಬರುತ್ತೆ ಎಂಬ ಕಲ್ಪನೆ ನನಗಿರಲಿಲ್ಲ, ನನಗೇನು ಯಾರಿಗೂ ಇರಲಿಲ್ಲ,  ಆದರೆ ನೀವು ಹಳ್ಳಿ ಹುಡುಗಿಯಾದರೂ   ನಿಮ್ಮ ಮಕ್ಕಳನ್ನು ಮುಂದೆ ತಂದ ರೀತಿ  ನಮ್ಮೆಲ್ಲರಿಗೂ  ಒಂದು ಪಾಠ  ಆಯಿತು,  ಮಕ್ಕಳ ಜೊತೆ  ಹತ್ತಾರು ವರ್ಷ ಹಗಲು ರಾತ್ರಿ ಎನ್ನದೆ  ಸಮವಾಗಿ ನಿಂತು, ಅವರ ಬೆನ್ನೆಲುಬಾಗಿ  ಮಾರ್ಗದರ್ಶನ ನೀಡಿ  ಅಂದಿನ ಅನ್ನದ ಮಕ್ಕಳನ್ನು  ಚಿನ್ನದ ಮಕ್ಕಳಾಗಿ  ಮಾಡಿ  ನಿಮ್ಮ ಗುರಿ ಸಾಧಿಸಿದಿರಿ  ಅದಕಾಗಿ ನಮ್ಮ ಮನೆಯಲ್ಲಿ  ನಿಮ್ಮನ್ನು ಸತ್ಕರಿಸುವ  ಆಸೆಯಿಂದ ಬಂದಿದ್ದೇನೆ ಅಣ್ಣನನ್ನೂ ಸಹ ಒಪ್ಪಿಸಿದ್ದೇನೆ ಖಂಡಿತಾ  ಮಕ್ಕಳೊಡನೆ ನಾವು ಬರಬೇಕು   ಎಂದು ಆಹ್ವಾನ ನೀಡಿದ , ಪತಿರಾಯರು  ಕೂಡ  ಒಪ್ಪಿ ಎಲ್ಲರೂ  ಆ ಕಾರ್ಯಕ್ರಮಕ್ಕೆ  ಹೊರಟೆವು .

ಸುಮಾರು ಇನ್ನೂರು ಜನರ ಒಂದು  ಕೂಟ  , ಅದರಲ್ಲಿ  ನಮ್ಮ ಆಗಮನಕ್ಕೆ ಕಾಯ್ದವರಂತೆ  ಎಲ್ಲರೂ  ಬಹಳ ಪ್ರೀತಿ  ತೋರಿ, ಆದರಿಸಿ  ಸತ್ಕಾರ ಮಾಡಿದರು, ಅಂದು ಅಪ್ಪನ ಸಾವಿನಿಂದ ಕಂಗೆಟ್ಟಿದ್ದ ಜೀವನ  ಹಲವು ಪರೀಕ್ಷೆಗೆ ಒಳಪಟ್ಟು , ಅದರಲ್ಲಿ  ತೇರ್ಗಡೆ ಯಾಗಿ  ಇಂದು ಈ ಹಂತಕ್ಕೆ  ತಂದು ನಿಲ್ಲಿಸಿತ್ತು.  ಸತ್ಕಾರ ಕೂಟದಲ್ಲಿ  ಹಳ್ಳಿ ಹುಡುಗಿಯಾಗಿ  ಬಂದ  ಸೊಸೆ ಮಾಡಿದ  ಮ್ಯಾಜಿಕ್  ಎಂಬಂತೆ ನನ್ನನ್ನು ಹೊಗಳುತ್ತಿದರು ,  ಪಕ್ಕದಲ್ಲಿದ್ದ ನನ್ನ ಮಕ್ಕಳು ಹರುಷದಿಂದ ಅಮ್ಮಾ  ಹೇಗಿದ್ದ ಜೀವನ  ಹೇಗಾಗೊಯ್ತು  ಆಲ್ವಾ .... ಅಂತಾ  ಕೆಣಕಿ  ಒಳ್ಳೆ ಹಳ್ಳಿ ಅಮ್ಮಾ ನೀನು ನಮಗೆ  ಅಂತಾ ತಬ್ಬಿಕೊಂಡರು .  ನನ್ನ ಕಣ್ಣಲ್ಲಿ  ಆನಂದದ ಅಮೃತ  ಚಿಮ್ಮಿತ್ತು.  ತಾಳ್ಮೆ ಇದ್ದಲ್ಲಿ ಏನನ್ನಾದರೂ  ಸಾಧಿಸ ಬಹುದು   ಎಂದು ಅಪ್ಪಾ ಹೇಳುತ್ತಿದ್ದ ಮಾತು ನಿಜವಾಗಿತ್ತು.