Wednesday, November 24, 2010

" ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!

ಹಸಿರು ಹೊದ್ದು ಮಲಗಿದ  ಕಬಿನಿ ಹಿನ್ನೀರು
ನನ್ನ  ಹಾಡು ನನ್ನ ಪಾಡು
ಇದು ನನ್ನ ಮನೆ 

ಹಿಂದಿನ ದಿನ ಹುಲಿಯ ದರ್ಶನ ಮಾಡಿದ ನಾವು ಮುಂಜಾನೆ ಎದ್ದು ಸಿದ್ದತೆ ನಡೆಸಿ ತಯಾರಾದೆವು.ಮುಂಜಾವಿನ ಕಾನನದ ತಂಗಾಳಿ ಮನಸ್ಸನ್ನುಉಲ್ಲಾಸ ಗೊಳಿಸಿ ಮುದ ನೀಡಿತು. ಹಾಗೆಯೇ   " ಬಳ್ಳೆ"  ಎಂಬ ಮಾಯಾ ಲೋಕದ ನೆನಪಿನಾಳಕ್ಕೆ ಜಾರಿದೆ. ಅಯ್ಯೋ  ಕ್ಷಮಿಸಿ
ಒಮ್ಮೆ ನಿಲ್ಲಿ ಇಲ್ಲಿ  ತಪಾಸಣೆಗಾಗಿ


ನಿಮಗೆ    " ಬಳ್ಳೆ"   ಎಂಬ ಮಾಯಾಲೋಕ ಪರಿಚಯಿಸುತ್ತೇನೆ ಬನ್ನಿ .ಈ ಜಾಗ ಕಾಕನ ಕೋಟೆಯ ಕಾಡಿನ ಒಂದು ಮುಖ್ಯ ಆನೆ ಶಿಭಿರ.ಇಲ್ಲಿ ಒಂದು ಚೆಕ್ ಪೋಸ್ಟ್ ಇದ್ದು ಕರ್ನಾಟಕ -ಕೇರಳ ನಡುವೆ ಓಡಾಡುವ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಕರ್ನಾಟಕದ ಹೆಗ್ಗಡದೇವನ ಕೋಟೆ ಯಿಂದ  ಕೇರಳ ರಾಜ್ಯದ ಮಾನಂದವಾಡಿ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ  ಚಲಿಸುವುದು ಒಂದು ಸವಾಲೇ ಸರಿ .ರಸ್ತೆಯಲ್ಲಿ ಹಳ್ಳ ಕೊಳ್ಳಗಳಿದ್ದು ವಾಹನಗಳ ಚಕ್ರಗಳ ಸಂಕಟ ಹೇಳ ತೀರದು.ಈ ಮಧ್ಯೆ ಎಲ್ಲಿಂದಲೋ ಇದ್ದಕ್ಕಿದಂತೆ


ಸಂತಸ ಅರಳುವ ಸಮಯ
ಇದು ನಮ್ಮದೇ ರಾಜ್ಯ
                                 

ಸ್ವಚ್ಚಂದ  ವಿಹಾರ

ಆನೆಗಳು  ಹಳ್ಳಿಯಲ್ಲಿ ರಸ್ತೆಗೆ ಅಡ್ಡ ಬರುವ  ಎಮ್ಮೆಗಳನ್ನು ನೆನಪಿಗೆ ತರುತ್ತವೆ.  ವಾಹನ ಚಾಲನೆ ಮಾಡುವಾಗ ಇವುಗಳನ್ನು ನೆನಪಿನಲ್ಲಿ ಇಟ್ಟುಕೊಂಡೆ ಚಲಿಸಬೇಕಾಗುತ್ತದೆ.ನಾವುಗಳೂ ಸಹ ಇಲ್ಲಿಗೆ ಬರುವಾಗ ಹಲವಾರು ಬಾರಿ  ಇಂತಹ ಸಂದರ್ಭ ಎದುರಿಸಿದ್ದೇವೆ .ಇನ್ನೂ ಒಂದು ತಮಾಷೆ ಅಂದ್ರೆ ಇಲ್ಲಿರುವ ಒಂದು ಕುಂಡಾ  ಅಂತ ಕರೆಯುವ[ ಕುರುಡು ಆನೆ ಎಂದು ಹೇಳುತ್ತಾರೆ ]  ಆನೆಯದು !!! ಇದು ರಸ್ತೆಯಲ್ಲಿ ಬರುವ ಲಾರಿಗಳನ್ನು ಅಡ್ಡ ಹಾಕಿ  ಲಾರಿಯಲ್ಲಿ ಲೋಡ್ ಆಗಿರುವ  ತಿನ್ನುವ ಪದಾರ್ಥ ಗಳನ್ನೂ  ಸೊಂಡಿಲಿನಲ್ಲಿ ಹುಡುಕಿ  ತಿಂದು ನಂತರ ಲಾರಿಯನ್ನು ಬಿಡುತ್ತದೆ .ಈ ಚಾಣಾಕ್ಷ ಆನೆಯ ಬಗ್ಗೆ ಇಲ್ಲಿ ಹಲವಾರು ಕಥೆಗಳು ಹರಿದಾಡಿವೆ.     " ಬಳ್ಳೆ"ಕ್ಯಾಂಪ್ ಗೆ ನಾವು ಬಂದಾಗಲೆಲ್ಲ  ನಮ್ಮನ್ನು ಎದುರುಗೊಂಡು ಸ್ವಾಗತ ನೀಡಲು ನಮ್ಮ ಗೆಳೆಯರೊಬ್ಬರು ಇರುತ್ತಾರೆ. ಅವರಿಗಾಗಿ ನಾವು ಪ್ರೀತಿಯಿಂದ  ಕ್ಯಾರೆಟ್  ತೆಗೆದು ಕೊಂದು ಹೋಗಿರುತ್ತೇವೆ. ಎಲ್ಲಿರುತ್ತದೋ ಗೊತ್ತಿಲ್ಲ ನಾವು ಇಳಿದ ಕೂಡಲೇ ಓಡಿಬಂದು ಈ " ಜಿಂಕೆ " ನಿಲ್ಲುತ್ತದೆಇಂತೀ ನಿಮ್ಮ ಪ್ರೀತಿಯ
ನಿಮ್ಮ ಕ್ಯಾಮರಾಗೆ ನನ್ನದೊಂದು ಪೋಸು
.


ನಾವು ನೀಡುವ ಕ್ಯಾರೆಟ್ ತಿಂದು ನಮ್ಮ ಕಾರಿನ ಅಕ್ಕ ಪಕ್ಕ ಸುಳಿದಾಡಿ ನಂತರ ಕಾಡಿಗೆ ದೌಡಾಯಿಸುತ್ತದೆ.ಇದು ಸುಮಾರು ಐದಾರು ವರ್ಷಗಳಿಂದ  ನಡೆದುಕೊಂಡು ಬಂದ ಗೆಳೆತನ ವಾಗಿದೆ. ನಮ್ಮ ಕಣ್ಣುಗಳೂ ಸಹ ಅಲ್ಲಿಗೆ ಹೋದೊಡನೆ ಈ ಗೆಳೆಯನಿಗಾಗಿ ಹುಡುಕುತ್ತವೆ. ಇಲ್ಲೇ ಪಕ್ಕದಲ್ಲೇ ಇದೆ ಕಾಡಿನ  ದೇವಿಯ  ಒಂದು ದೇವಾಲಯ
ಕಾಡಿನ ತಾಯಿ ನಿನಗೆ ವಂದನೆ ಈ ದೇವರಿಗೆ ಇಲ್ಲಿನ ಪ್ರತಿಯೊಬ್ಬರೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹಾಗೆ ಸ್ವಲ್ಪ ಮುಂದೆ ಬಂದರೆ


ಕಾಡಿನ ಮಕ್ಕಳು ನಾವೆಲ್ಲಾ
ನನ್ನ ಭವಿಷ್ಯ  ಎಲ್ಲಿದೆ
    ಇಲ್ಲಿದೆ ಒಂದು ಗಿರಿಜನರ ಒಂದು ಹಾಡಿ.[ ಕಾಡಿನ ವಾಸಿಗಳು ವಾಸಿಸುವ ಗುಡಿಸಿಲುಗಳ  ಗುಂಪು ]  ಮಣ್ಣಿನ ಗೋಡೆ ಹಾಕಿದ ಬಿದುರಿನ ಗಳುಗಳ ಜೊತೆಗೆ ಜೊಂಡು ಹುಲ್ಲನ್ನು ಹೊದಿಸಿದ ಚಾವಣಿಯ ಈ ಪುಟ್ಟ ಗುಡಿಸಿಲಿನಲ್ಲಿ   ವನ್ಯ ಜೀವಿಗಳ ಜೊತೆಯಲ್ಲಿ ಪ್ರತಿ ಕ್ಷಣಗಳನ್ನೂ ಕಳೆವ ಜೀವಿಗಳು. ನಾವು ಭೇಟಿ ನೀಡಿದಾಗ ಅಲ್ಲಿ ಆಟ ಆಡುತ್ತಿದ್ದ  ಮಕ್ಕಳನ್ನು ನೋಡಿ  ಮನಸು ಮರುಗಿತು. ಇವರೂ ಸಹ ನಮ್ಮ ದೇಶದ ಆಸ್ತಿ ಅಲ್ಲವೇ?? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿಸಿತು. ಅರೆ ಇದೇನಿದು ಆನೆ ರಾಯರು
ನನಗೂ ಬೇಕು  ಇಂತಹ ಆರೈಕೆ
ವಿಶ್ರಾಂತಿಯ ಸಮಯ
ನನ್ನ ಹೆಸರು ಅರ್ಜುನ
 


ಇಲ್ಲಿ ವಿರಮಿಸಿದ್ದಾರೆ  ದೂಳಿನ ಸ್ನಾನ  ಅವರಿಗೆ ನಡೆಯುತ್ತಿದೆ !!! ಹೌದು  ನೋಡ್ರೀ ಆನೆ ರಾಯರಿಗೆ ನೀರಿನ ಸ್ನಾನಕ್ಕೆ ಮೊದಲು ಮಣ್ಣಿನ ಧೂಳಿನ ಮಜ್ಜನ ಆಗಲೇ ಬೇಕೆಂದು  ತಿಳಿಯಿತು.ಸುಮಾರು ಅರ್ಧ ಘಂಟೆ ನಡೆದ ಈ  ಕೆಲಸದ ನಂತರ ಮಾವುತರು ಆನೆಯನ್ನು ಕಬಿನಿ ಹಿನ್ನೀರಿನ   ಕಾಲುವೆಗೆ  ಕರೆತರಲು ಸಿದ್ದವಾದರು. ನಾವು ಹೊರಟೆವು. ಅಗೋ ನೋಡಿ
ಗಜ  ನಡಿಗೆ


 ಆನೆ ನಡೆದು ಬರುವ ನೋಟವನ್ನು ಆನೆಯ ಮೇಲೆ ಕುಳಿತ ಮಾವುತರು ಆನೆಯನ್ನು  ಕರೆದುಕೊಂಡು     ಬರುವ ಆ ದೃಶ್ಯ  ''ಗಂಧದ ಗುಡಿಯ '' ಸನ್ನಿವೇಶಗಳನ್ನು ನೆನಪಿಸಿತು. ಬನ್ನಿ ಆನೆಯ ಜಳಕ ನೋಡೋಣ
ಈಗ ಸ್ನಾನದ ಸಮಯ


ನೀರಿನಲ್ಲಿ  ಮಲಗೋದು ಅಂದ್ರೆ ಖುಷಿ ಕಣ್ರೀ
ಸರಿಯಾಗಿ ಕ್ಲೀನ್ ಮಾಡಪ್ಪ
ಸ್ನಾನ ಆಯ್ತು ಒಂದು ಫೋಟೋ ಪ್ಲೀಸ್ಅಬ್ಭ ಸುಮಾರು  ಒಂದು ಘಂಟೆಗೂ ಹೆಚ್ಚು ಕಾಲ ಆನೆಯ ಮೈಯನ್ನು ಉಜ್ಜಿ   ಧೂಳಿನಿಂದ   ಕೊಳೆಯಾಗಿದ್ದ ಆನೆಯನ್ನು  ಫಳ ಫಳ ಹೊಳೆಯುವಂತೆ ಮಾಡಿದ ಆ ಮಾವುತನ  ಶ್ರಮಕ್ಕೆ ಜೈ ಹೋ ಎನ್ನದೆ ಇರಲಾಗಲಿಲ್ಲ. ಅಂದ ಹಾಗೆ ಈ ಆನೆ ಯಾವುದು ಗೊತ್ತ ??? ನಮ್ಮ ಮೈಸೂರಿನ ದಸರಾಕ್ಕೆ ಪ್ರತೀ ವರ್ಷ ಆಗಮಿಸುವ " ಅರ್ಜುನ " ಎಂಬ ಗಂಡಾನೆ. ತುಂಟ ಸ್ವಭಾವದವನಾದ ಇವನು ಆಗಾಗ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಅಂತಾ ಅಂದು ಕೊಳ್ಳುತಿದ್ದಂತೆ  ವೇಣು ಬನ್ನಿ ಬನ್ನಿ  ಡಿ.ಬಿ. ಕುಪ್ಪೆ ಗೆ ಹೋಗ್ಬೇಕು  ಲೇಟಾಗುತ್ತೆ ಅಂದ್ರು . ಬರ್ತೀನಿ ಲೇಟಾಯ್ತು.ಮುಂದಿನ  ಸಂಚಿಕೆಯಲ್ಲಿ  ...ಅತ್ತ ಕೇರಳ  ಇತ್ತ  ಕರ್ನಾಟಕ  !!!!

Tuesday, November 9, 2010

ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!

ಹುಲಿಯ ಹೆಜ್ಜೆ ಗುರುತು


ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ  ನೀಡುತ್ತದೆ . ನನ್ನ ಎರಡನೇ ಕಂತನ್ನು ಸಹೋದರಿಬಿ.ಸೌಮ್ಯ ರವರ "ಹುಚ್ಚು ಮನಸಿನ ಹತ್ತೆಂಟು ಕನಸುಗಳು " ಬ್ಲಾಗಿನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ" ಅರಣ್ಯ ಹಾಗು ನದಿ"   ಕವಿತೆಯ ಕೆಲವು ಸಾಲಿನಿಂದ[ ಅವರ ಅನುಮತಿ ಪಡೆದು ] ಶುರುಮಾಡುತ್ತೇನೆ. ಸುಂದರ ಸಾಲುಗಳಲ್ಲಿ ಅರಣ್ಯ ಹಾಗು ನದಿಯ ಬಗ್ಗೆ  ಸುಂದರ ವರ್ಣನೆ ಇದೆ . ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ

 ನದಿ ಮತ್ತು ಅರಣ್ಯ'....! ವಾಹ್ ಎಂತಹ ಸಾಲುಗಳಲ್ವ ಕಾಡಿನಲ್ಲಿ ಅಲೆಯುವ ನನಗೆ ಒಮ್ಮೊಮ್ಮೆ ಹೀಗೆ ಆನಿಸುತ್ತದೆ.ನಮ್ಮ  ಮೊದಲ ಕಾಡಿನ ಅನುಭವ ಹೀಗೆ ಶುರುವಾಯಿತು.

ಮೈಸೂರಿನಿಂದ ಹುಣಸೂರಿನ ಮೂಲಕ ಸಾಗಿ ಹೆಗ್ಗಡದೇವನ ಕೋಟೆ ತಲುಪಿ ನಂತರ ನಾವು ಸಂಜೆ ತಲುಪಿದ ಜಾಗ " ಬಳ್ಳೆ" ಎಂಬ ಜಾಗಕ್ಕೆ .ಇದು ಕಾರಾಪುರ ಮಾನಂದ ವಾಡಿ ರಸ್ತೆಯಲ್ಲಿ ಬರುವ " ನಾಗರ ಹೊಳೆ' ರಕ್ಷಿತಾರಣ್ಯ ಕ್ಕೆ ಸೇರಿದ್ದು ಪ್ರವಾಸಿಗಳಿಗೆ  ನಿಶಿದ್ದ ಪ್ರದೇಶ !!, ಅರಣ್ಯ ಇಲಾಖೆಯ ಅಧಿಕಾರಿಗಳ  ಅನುಮತಿ  ಪಡೆದಿದ್ದ ನಮಗೆ [ಅನುಮತಿ ನೀಡುವ ಮೊದಲು ನಮ್ಮ ಬಗ್ಗೆ ವಿವರ ಪಡೆದಿದ್ದರು ]ಅಲ್ಲಿ ಉಳಿಯಲು  ತಡೆಯಾಗಲಿಲ್ಲ. ತಲುಪುವ ವೇಳೆಗೆ  ಸಂಜೆಯ ವೇಳೆ ಆಗಿತ್ತು. ಆದರದಿ ಸ್ವಾಗತಿಸಿದ ಅಲ್ಲಿನ ಅಧಿಕಾರಿ  ಕಾಫಿ ನೀಡಿ ಸತ್ಕರಿಸಿ  ಪರಿಚಯಿಸಿಕೊಂಡರು.ಬನ್ನಿ ಸಾರ್ ಒಂದು ರೌಂಡು ಹೋಗೋಣ ಅಂತಾ ನಮ್ಮನ್ನು ಕರೆದುಕೊಂಡು ಕಾಡಿನ ಒಳಗೆ ಹೋದರು ನಮಗೋ ಹಿಗ್ಗೋ ಹಿಗ್ಗು ಅರಣ್ಯದೊಳಗೆ ಕಾಲಿಟ್ಟ ಸಂತಸ ಕ್ಷಣ ಮುಧನೀಡಿತ್ತು.ಜೀಪಿನಲ್ಲಿ ಹೊರಟ ನಾವು ಅರಣ್ಯದಲ್ಲಿ ಕ್ಯಾಮರ ಸಿದ್ದ ಪಡಿಸಿಕೊಂಡು  ಬಳ್ಳೆ ಯಿಂದ ಕೈಮರ ಎಂಬ ಜಾಗಕ್ಕೆ ಹೊರಟಿದ್ದೆವು.ಸುಮಾರು ನಾಲ್ಕು ಕಿ.ಮಿ.ಕ್ರಮಿಸಿದ ನಮಗೆ ಗೇಂ   ರೂಟಿನ [ಅರಣ್ಯ ಇಲಾಖೆ ವಾಹನಗಳು ಗಸ್ತು ತಿರುಗುವ ಹಾದಿ ಗೆ ಹಾಗೆ ಕರೆಯುತ್ತಾರೆ ] ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡ ಹುಲ್ಲುಗಳ ಹಾದಿಯಲ್ಲಿ ಬೆಳೆದಿದ್ದ ಪೊದೆಗಳ ಸಾಲು ಸಿಕ್ಕಿತ್ತು. ಮುಂದೆ ಕುಳಿತಿದ್ದ  ನನ್ನ ಸಹೋದರ ವೇಣು " ಹುಲಿ ಹುಲಿ " ಮೆಲುದನಿಯಲ್ಲಿ ಉಸುರಿದರು
ಚಿತ್ರಕೃಪೆ    ಅಂತರ್ಜಾಲ


ದಟ್ಟ ಕಾನನದ ಮಧ್ಯೆ  ಜೀಪಿನಿಂದ ಕೇವಲ ಕೆಲವೇ ಅಡಿಗಳ ದೂರದಲ್ಲಿ  ಹುಲಿರಾಯ ದರ್ಶನ ನೀಡಿದ್ದ !! ಹುಲಿ ನೋಡಲು ಆಸೆ ಯಿಂದ ಎಲ್ಲರು ತವಕಪಡುತ್ತಿರುವಾಗ ಡ್ರೈವರ್ ಸ್ವಲ್ಪ ಜೀಪನ್ನು ಸ್ವಲ್ಪ ಮುಂದೆ ಕೆಲವು ಅಡಿ ಮುನ್ನಡೆಸಿದ್ದರು. ಸ್ವಲ್ಪ ಮುಂದೆ ಬಂದ ಜೀಪು ಗೊರ ಗೊರ ಅಂದು  ಸದ್ದುಮಾಡಿ ನಿಂತೇ ಬಿಟ್ಟಿತು. ಬಾಲೂ ಸಾರ್ ಸ್ವಲ್ಪ ನಿಮ್ಮ ಕಾಲನ್ನು ಬ್ಯಾಟರಿ ಮೇಲಿಂದ  ತೆಗಿರೀ ಅಂದ್ರೂ . ಕೆಳಗೆ ಇಳಿಯಲು ಎಲ್ಲರಿಗೂ ಭಯ  ಹುಲಿರಾಯ ನಮ್ಮಿಂದ ಕೆಲವೇ ಅಡಿಗಳ ಅಂತರದಲ್ಲಿ [ಅಂದಾಜು ಹತ್ತು ಅಡಿ ]ಪೊದೆಯೊಳಗೆ  ನಮ್ಮನ್ನು ಲೆಕ್ಕಿಸದೆ ಕುಳಿತಿದ್ದ.ನಮಗೋ ಇಂತಹ ಅನುಭವ ಜೀವಮಾನದಲ್ಲ್ಲಿ ಹೊಸದು!!!,  . ಕತ್ತಲು ಬೇರೆ  ನಮಗಿದ್ದ ಧೈರ್ಯ ಅಂದ್ರೆ ಡಿಸ್ಕವರಿ , ನ್ಯಾಷನಲ್ ಜಿಯೋಗ್ರಫಿ  ಚಾನಲ್ ನೋಡಿದ್ದ ಅನುಭವ ಅಷ್ಟೇ . ನಮ್ಮ ಜೊತೆಗಿದ್ದ ಅರಣ್ಯಾಧಿಕಾರಿ ಪಿಸು ಮಾತಿನಲ್ಲಿ   ಹೆದರಬೇಡಿ  ಹಾಗೆ ಕುಳಿತಿರಿ ಅಂದ್ರೂ, ದಟ್ಟ ಅರಣ್ಯದ ಮಧ್ಯೆ ಹುಲಿಯ ಸನಿಹದಲ್ಲಿ ಕೆಟ್ಟು ನಿಂತಿರುವ ಜೀಪಿನೊಳಗೆ ರಾತ್ರೀ ವೇಳೆ ಅಲುಗಾಡದೆ ಕುಳಿತು ಪೊದೆಯೊಳಗೆ ಅಡಗಿದ್ದ ಹುಲಿಯನ್ನು ನೆನೆಯುತ್ತಾ ಸುಮಾರು ಮುಕ್ಕಾಲು ಘಂಟೆ ಅಲುಗಾಡದೆ ಉಸಿರು ಬಿಗಿಹಿಡಿದು  ಕುಳಿತಿದ್ದೆವು.ಸ್ವಲ್ಪ ಸಮಯದಲ್ಲಿ ವಾಚರ್ ಒಬ್ಬರು ಸಾ ಹುಲಿ ಓಯ್ತು ಅಂದ್ರು !!! ಸರಿ ತಾಳಿ ಸಡನ್ನಾಗಿ ಇಳೀಬೇಡಿ ಅಂತಾ ಅರಣ್ಯಾಧಿಕಾರಿಗಳು ಮೊದಲು ತಾವು ಇಳಿದು ಸ್ವಲ್ಪ ಸಮಯದ  ನಂತರ ನಮ್ಮನ್ನು ಇಳಿಯಲು ಹೇಳಿದರು. ಹುಲಿಎನೋ ಹೋಯ್ತು  ಆ ಭಯದಲ್ಲಿ ಫೋಟೋ ತೆಗೆಯುವ ಕೈಗಳು ಕ್ಯಾಮರಾವನ್ನು ಕೆಳಗಿಟ್ಟು ಹುಲಿಯ ಫೋಟೋ ತೆಗೆಯಲು ನಿರಾಕರಿಸಿದ್ದವು .ಮುಂದಿನ ಕಾರ್ಯ ಕೆಟ್ಟ ಜೀಪಿನ ರಿಪೇರಿ; ಒಬ್ಬೊಬ್ಬರಾಗಿ ಇಳಿದ ನಾವು ಜೀಪಿನ  ಮುಂಬಾಗ ಬಂದು ತಲೆಗೆ ಕಟ್ಟಿಕೊಂಡಿದ್ದ ಲೈಟ್ ಆನ್ ಮಾಡಿದೆವು .ಜೀಪಿನ ಬ್ಯಾಟರಿ ಸರಿಯಾಗಿತ್ತು ಬಾನೆಟ್ ತೆಗೆದು ನೋಡಿದರೆ ವೈರು ಶಾರ್ಟ್ ಸರ್ಕ್ಯುಟ್ ಆಗಿ ಬೆಂದು ಹೋಗಿತ್ತು. ಸರಿ ರಿಪೇರಿ ಪ್ರಾರಂಭ ನಮ್ಮ ತಂಡದ ಸದಸ್ಯರೇ ಸೇರಿ ವೈರನ್ನು ಡೈರೆಕ್ಟ್  ಲಿಂಕ್ ಮಾಡಿ ಗಾಡಿಯನ್ನು ಸ್ಟಾರ್ಟ್ ಮಾಡಿದರು. ತುಂಬಾ ಹೊತ್ತಾಯ್ತು; ಕೈಮರ ಬೇಡ ವಾಪಸ್ಸು ಹೋಗೋಣ ಅಂತಾ ತೀರ್ಮಾನಿಸಿ ಜೀಪನ್ನು ಹಿಂದಕ್ಕೆ ತಿರುಗಿಸೋಣ ಅಂದ್ರೆ ಜಾಗ ಇದ್ರೆ ತಾನೇ ಹಾದಿಯ ಇಕ್ಕೆಲಗಳಲ್ಲೂ ಪೊದೆ ಮರಗಳಿಂದ  ಜೀಪ್ ತಿರುಗಿಸಲು ಆಗದ ಪರಿಸ್ತಿತಿ.ಸರಿ ನಮ್ಮ ಡ್ರೈವರ್ ಸೈಯದ್ ಸಾಹೇಬರು ಬುಡಿ ಸಾ ರಿವರ್ಸ್ ನಲ್ಲೆ ಹೋಗೋಣ ಅಂತಾ ಸುಮಾರು ಒಂದು ಕಿ.ಮಿ. ರಿವರ್ಸ್ ನಲ್ಲೆ ಜೀಪನ್ನು ಸಾಗಿಸಿ ನಂತರ ಸಿಕ್ಕ ಒಂದು ಜಾಗದಲ್ಲಿ ರಿವರ್ಸ್ ತೆಗೆದು ಮುಖ್ಯ ರಸ್ತೆ ತಂದು ನಮ್ಮನ್ನು ಜೋಪಾನವಾಗಿ; ಮೊದಲಿನ ಜಾಗಕ್ಕೆ ಸೇರಿಸಿ ನಿಟ್ಟುಸಿರು ಬಿಟ್ಟರು .ನಂತರ ಅಲ್ಲಿದ್ದ ರೂಮುಗಳಲ್ಲಿ ಸಿದ್ದವಿದ್ದ ಆಹಾರ ಸೇವಿಸಿ ರಸ್ತೆಯಲ್ಲಿ ಮತ್ತೊಂದು ಸುತ್ತು ಸುಮಾರು ಎರಡು ಮೂರು ಕಿ.ಮಿ. ಹೋಗಿ ಬಂದು ಕೆಲವು ಕಾಡೆಮ್ಮೆ ಹಾಗು ಜಿಂಕೆಗಳನ್ನು ಕಣ್ತುಂಬ ನೋಡಿ ಬಂದು ಮಲಗಿದೆವು. ರಾತ್ರಿ ವೇಳೆ ತೆಗೆದ ಫೋಟೋಗಳು ಅಂದು ಕೊಂಡ ರೀತಿ ಬರದ ಕಾರಣ ನೋಡಿದ್ದಷ್ಟೇ ಭಾಗ್ಯ ಅಂತಾ ನಿದ್ರೆಗೆ ಜಾರಿದೆವು. ನನ್ನ ಮನಸ್ಸಿನಲ್ಲಿ ಅರಣ್ಯಾಧಿಕಾರಿ ಹೇಳಿದ್ದ ಮಾತು ""ಸಾರ್ ನೀವು ಪುಣ್ಯಾ ಮಾಡಿದ್ರೀ ಸಾವಿರಾರು ರುಪಾಯಿ ಖರ್ಚು ಮಾಡಿ ಇಲ್ಲಿಗೆ ಬಂದು ಜಂಗಲ್ ಲಾಡ್ಜ್ ನಲ್ಲಿ ಉಳಿದು ಹಲವಾರು ದಿನ ಅಲೆಯೋ ಜನರಿಗೆ ಹುಲಿ ಸಿಗೋಲ್ಲ ಆದ್ರೆ ನಿಮ್ ಅದೃಷ್ಟ ನೋಡಿ  " ಅನ್ನೋ ಮಾತು


ಹುಲಿಯ ಹೆಜ್ಜೆ ಗುರುತು


ಮನದಲ್ಲಿ ಹಾಗೆ ಉಳಿದು ಮನದಲ್ಲಿ ಮಂಡಿಗೆ ತಿನ್ನುತ್ತಾ ನಿದ್ರೆಗೆ ಜಾರಿದ್ದೆ.ಹುಲಿಯ ಹೆಜ್ಜೆಯಂತೆ  ಈ ಮಾತು ಮನದಲ್ಲಿ ಉಳಿದು ಕನಸುಗಳೂ ಸಹ ಹೆದರಿಕೊಂಡು ಅವಿತುಕೊಂಡು  ಕನಸಿಲ್ಲದ ರಾತ್ರಿಯಲ್ಲಿ ಘಾಡ ನಿದ್ದೆ ಹೊಡೆದಿದ್ದೆ.!!!  ನಿದ್ದೆ ಮಾಡುತ್ತೇನೆ  ತಾಳಿ  ಮುಂದಿನ ಸಂಚಿಕೆಯಲ್ಲಿ ಬಾಕಿ ಪುರಾಣ ಓದೋರಂತೆ. ಅಲ್ಲಿವರ್ಗೆ  ನಿಮಗೆ ವಂದನೆಗಳು .  

Tuesday, November 2, 2010

ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!!

ಕಾನನದ ಮಡಿಲಲ್ಲಿ
 


ಈ ಹಾಡು ಕೇಳಿದಾಗ ಏನೇ ಕೆಲಸವಿದ್ದರೂ ಹಾಗೆ ನಿಂತು ಬಿಡುತ್ತೇನೆ.ಇನ್ನು ಟಿ.ವಿ. ನಲ್ಲಿ ಬಂದರೆ ನೋಡುತ್ತಾ ಮೈಮರೆಯುತ್ತೇನೆ ಹಸಿರ ಕಾನನದ ವರ್ಣನೆ ನನ್ನನ್ನು ಮಂತ್ರ ಮುಗ್ದ ಗೊಳಿಸುತ್ತದೆ.   ಬಹಳ ದಿನಗಳಿಂದ ಈ ಪೋಸ್ಟ್ ಪ್ರಕಟಿಸಬೇಕೆಂಬ  ಆಸೆ ಇತ್ತು ಕಬಿನಿಯ ಮಡಿಲ ಕಾಕನ ಕೋಟೆ ಅರಣ್ಯ ದಲ್ಲಿನ ಚಿತ್ರಗಳು ಪದೇ ಪದೇ  ಕಾಡಿ ಈ ಕಾಡಿನ ಅನುಭವಗಳನ್ನು ನಿಮ್ಮ ಮುಂದೆ ಇಡಲು ಪ್ರೇರೇಪಿಸಿ ಇಂದು ಅದು ನನಸಾಗಿದೆ. ನಮ್ಮ ಮನೆ ದೇವರ ಸನ್ನಿಧಿಗೆ ತೆರಳುವಂತೆ ಈ ಕಾಡಿಗೆ ಪ್ರತೀವರ್ಷ  ಸುಮಾರು ಐದು ಸಾರಿತೆರಳಿ  ಅಲ್ಲಿನ ಕಾನನದ ವೈಭವವನ್ನು ಅನುಭವಿಸಿದ್ದೇನೆ. ಇದಕ್ಕೆ ಸ್ಪೂರ್ತಿಯಾಗಿ ನನ್ನ ಆತ್ಮೀಯ ಸಂಬಂಧಿಗಳು   [ಹೆಂಡತಿಯ ಇಬ್ಬರು ತಂಗಿಯರ  ಪತಿರಾಯರುಗಳು ,ಹಾಗು  ನಮ್ಮ ಭಾವ  ಇವರುಗಳು ಇದೆ ರೀತಿ ಮನೋಭಾವ ಹೊಂದಿ ಜೊತೆಗಿದ್ದರು ] ಹೌದು ನಾವು ಮೂವರು ಅಳಿಯಂದಿರು ನನ್ನ ಮಾವನ ಮನೆಗೆ , ಎಲ್ಲರೂ ಬೇರೆ ಬೇರೆ ಕುಟುಂಬದಿಂದ ಬಂದಿದ್ದರೂ ಅಣ್ಣ ತಮ್ಮಂದಿರ ತರಹ ಸಲಿಗೆ ,ಪ್ರೀತಿ ವಿಶ್ವಾಸವಿದೆ.ಜೊತೆಗೆ ನಮ್ಮ ಹವ್ಯಾಸಗಳೂ ಸಹ  ಒಂದೇ ಆಗಿವೆ .ಹಾಗಾಗಿ ನಮ್ಮಲ್ಲಿ ಬಿನ್ನಾಬಿಪ್ರಾಯ ಇಲ್ಲ . ಹಾಗೆ ಈ ಕಾಡು ಸುತ್ತುವ ಹವ್ಯಾಸ.ಪ್ರತೀವರ್ಷ ನಾವುಗಳು ಕಾಡಿಗೆ ಹೋಗಿಯೇ ಸಿದ್ಧ . ನಮ್ಮ ನೆಂಟರೂ ಸಹ ಏನ್ ಅಳಿಯಂದ್ರೆ ಕಾಡಿಗೆ ಹೋಗಿಲ್ವಾ ಅಂತಾ ಚುಡಾಯಿಸ್ತಾರೆ. ಕಾಡಿನಲ್ಲಿ ನಮ್ಮ ಅನುಭವ ಬಹುಕಾಲ  ನೆನಪಿನಲ್ಲಿ ಉಳಿದಿದೆ.ಬನ್ನಿ ನಮ್ಮ ಕಾನನದ ನೆನಪಿನ ಲೋಕಕ್ಕೆ  ಹೋಗೋಣ.ಬಾಲ್ಯದಿಂದಲೂ ನನಗೆ ಈ ಕಾಡಿನ ಬಗ್ಗೆ ಸೆಳೆತ ಯಾಕೆ? ಅಂಥಾ ಗೊತ್ತಿಲ್ಲ , ಚಿಕ್ಕವನಿದ್ದಾಗ ನಾನು ನನ್ನ ಹಳ್ಳಿಯಿಂದ ನನ್ನ  ಅಜ್ಜಿಯ ಜೊತೆ  ಅವಳ  ಸಹೋದರಿಯರ ಹಾಗು ನನ್ನ ಸೋದರ ಮಾವಂದಿರ ಮನೆಗೆ   ಹುಣಸೂರಿನ ಸಮೀಪದ" ಚೆನ್ನಸೋಗೆ'' ಎಂಬ ಹಳ್ಳಿಗೆ ರಜೆಕಳೆಯಲು ಹೋಗುತ್ತಿದ್ದೆ.ಪ್ರತಿಭಾರಿಯೂ ಅಲ್ಲಿ ಕನಿಷ್ಠ ಹತ್ತರಿಂದ ಹದಿನೈದು ದಿನಗಳ ವಾಸ್ತವ್ಯ ಇರುತ್ತಿದ್ದೆವು.ಪ್ರತಿ ನಿತ್ಯ ಮಲಗುವಾಗ ನನ್ನ ಸೋದರ ಮಾವಂದಿರು ಪಕ್ಕದಲ್ಲಿ ಮಲಗಿಸಿಕೊಂಡು ನನಗೆ ಕಾಡಿನ ಕಥೆಗಳನ್ನು ಹೇಳುತ್ತಿದ್ದರು.ಪಕ್ಕದಲ್ಲೇಅಂದರೆ  ಸುಮಾರು ಹದಿನೈದುಕಿ.ಮಿ.ಇದ್ದ ನಾಗರ ಹೊಳೆಯ ಕಾಡಿನಬಗ್ಗೆ ಅಲ್ಲಿನ ವನ್ಯ ಜೀವಿಗಳ ಬಗ್ಗೆ ಪ್ರತಿರಾತ್ರಿ  ಒಂದೊಂದು ಕಥೆ ಕೇಳಿಯೇ ನಾನು ಮಲಗುತ್ತಿದ್ದುದು.ಹಾಗೆ ಬೆಳೆಯುತ್ತಾ ನನಗೆ ಕಾಡನ್ನು ನೋಡುವ ಬಯಕೆ ಮೊಳಕೆಯೊಡೆಯಲು ಪ್ರಾರಂಭವಾಗಿತ್ತು.ಅಂದು ಚಿಕ್ಕಹುಡುಗನಾಗಿದ್ದಾಗ  ನನ್ನ ದೃಷ್ಟಿಯಲ್ಲಿ ಕಾಡಿಗೆ ಹೋದ ಕೂಡಲೇ  ಎಲ್ಲಾ ಪ್ರಾಣಿಗಳು ಸಾಲಾಗಿ ನಿಂತು ನನ್ನನ್ನು ಸ್ವಾಗತಿಸಿ ಹಾಯ್ ಹೇಳುತ್ತವೆ!!! ಅಂತಾ ಆಶಾಭಾವ.ಹಾಗು ಎಲ್ಲಾ ಪ್ರಾಣಿಗಳನ್ನೂ ಮುಟ್ಟಿ ಸವರಿ ಚಲನಚಿತ್ರಗಳಲ್ಲಿ ಆಗುವಂತೆ ಅವುಗಳೊಂದಿಗೆ ಆಟವಾಡುವ ಆಸೆ.ಸರಿ ನನ್ನನ್ನು" ನಾಗರ ಹೊಳೆಗೆ " ಕರೆದುಕೊಂಡು ಹೋಗಲು ಸೋದರ ಮಾವಂದಿರನ್ನು ಪೀಡಿಸಲು ಶುರುಮಾಡಿದೆ.ಅವರೂ ಪಾಪ ನನ್ನ ಆಸೆಯನ್ನು ಹೇಗೆ ತೀರಿಸ ಬಹುದೆಂಬ ಕಲ್ಪನೆಯೇ ಇಲ್ಲದೆ ನೋಡು ಮಗೂ ಹುಣಸೂರಿನಿಂದ" ನಾಗರ ಹೊಳೆ'ಗೆ ಇವತ್ತು ಬಸ್ಸು ಇಲ್ವಂತೆ ಇನ್ನು ಮೂರುದಿನದ ನಂತರ ಹೋಗೋಣ ಬಿಡು ಅನ್ನುತಿದ್ದರು ಮೂರುದಿನಗಳನ್ನು ಆಸೆಯಿಂದ  ಕಳೆದ ನಾನು ಮತ್ತೆ ಕೇಳಿದಾಗ ಮತ್ತೊಂದು ಸಬೂಬು ಎದುರಾಗುತ್ತಿತ್ತು.ಹೀಗೆ ಇದೆ
ಅನುಭವದ ಪುನರಾವರ್ತನೆ ಹಲವು ವರ್ಷಗಳು ನಡೆದು ಚಿಕ್ಕ ವಯಸ್ಸಿನಲ್ಲಿ ಕಾಡು ನೋಡುವ ಆಸೆ ಮುರುಟಿಹೋಗಿತ್ತು.
ಹಾಗೆ ಜೀವನ ಚಕ್ರ ಉರುಳಿ ಗೆಳೆಯರೊಂದಿಗೆ ಕಾಡು ನೋಡುವ ದಿನ ನಾನು ಪಿ.ಯು.ಸಿ. ಯಲ್ಲಿದ್ದಾಗ ಬಂತು.ಕಾಡಿಗೆ ಉತ್ಸಾಹದಿಂದ ಹೋರಾಟ ನಾನು ಮೊಜುಮಾಡಲು ಬಂದಿದ್ದ ನನ್ನ ಗೆಳೆಯರು ಕಾಡು ನೋಡಿದ ಬಗೆ ವಿಚಿತ್ರವಾಗಿತ್ತು,ಕಾಲೇಜಿನ ಹುಡುಗರು ನಾವುಗಳು ,ನಾಗರ ಹೊಳೆ ಅರಣ್ಯ ನೋಡಲು ಹೊರಟೆವು ಯಾರಿಗೂ ಸರಿಯಾದ ಕಲ್ಪನೆ ಕಾಡಿನ ಬಗ್ಗೆ ಇರಲಿಲ್ಲ ನಾಗರ ಹೊಳೆ ತಲುಪಿದ ನಾವು ಮೊದಲು ಮಾಡಿದ ಕೆಲಸ ಸಾರ್ ಇಲ್ಲಿ ಒಳ್ಳೆ ಹೋಟೆಲ್ ಇದ್ಯಾ? ಅಂತಾ ಕೇಳಿ ನಗೆ ಪಾಟಲಿಗೆ ಈಡಾಗಿದ್ದೆವು.ಸಫಾರಿಗೆ ತೆರಳಿ ನಾವು ಮೊದಲು  ನೋಡಿದ ಪ್ರಾಣಿ ಆನೆ ಸಫಾರಿ ವ್ಯಾನಿನ ಚಾಲಕರಿಗೆ  ಸಾರ್ ಸ್ವಲ್ಪ ನಿಲ್ಸಿ ಕೆಳಗಡೆ ಇಳಿದು ಒಂದುಫೋಟೋ  ತೆಗೀತೀನಿ ಅಂದಿದ್ದೆ.ಅದಕ್ಕೆ ಆ ಚಾಲಕ ರೀ ಸುಮ್ನಿರ್ರಿ ಓ ಕೆಳಗೆ ಇಳಿತಾರಂತೆ ಅಂದು ಇಲ್ಲೆಲ್ಲಾ ಪಟ್ಟಣದತರ ಅಲ್ಲಪ್ಪ ಪ್ರಾಣಿಗಳು ಅಟ್ಯಾಕ್ ಮಾಡುತ್ತೆ ಅಂದರು , ನೋಡಿಇವನೇ ಅರ್ಜುನ ಅಂಬಾರಿ ಹೊರುತ್ತಾನೆ
 
ನಂಗೆ ಆಶ್ಚರ್ಯ!! ಅಲ್ಲಾ ಆನೆ ಫೋಟೋ ತೆಗೆದರೆ ಆನೆಗೆ ಕೊಪಾ ಯಾಕೆ ಬರುತ್ತೆ ?? ಅನ್ಕೊಂಡೆ !!!.  ನಾನಾದರೂ ಏನ್ ಮಾಡ್ಲಿ ನಾನು ಓದಿದ ಯಾವ ಶಾಲೆಯಲ್ಲೂ ಕಾಡಿನ ಪ್ರಾಣಿಗಳ ಜೊತೆ ನಾವು ಯಾವ ರೀತಿ ವ್ಯವಹರಿಸಬೇಕೆಂದು ಯಾವ ಶಿಕ್ಷಕರೂ ಹೇಳಿ ಕೊಟ್ಟಿರಲಿಲ್ಲ!!!ಹಾಗು ಯಾವ ಪುಸ್ತಕವೂ ಈ ಬಗ್ಗೆ ಪಟ್ಯವಾಗಿರಲಿಲ್ಲ!! ನಾನು ನನ್ನ ಮಿತ್ರರು ಪ್ರತಿ ಪ್ರಾಣಿ ಕಂಡಾಗಲೂ ಕಾಡಿನ ನಿಶಬ್ಧತೆಯನ್ನು ಹಾಳುಮಾಡುವಂತೆ ಕಿರುಚಿ!!; ನಾವೇ ಪ್ರಾಣಿಗಳಂತೆ ಆಡಿ ಅವುಗಳಿಗೆ ತೊಂದರೆ ಕೊಟ್ಟುವಿಕೃತ ಸಂತೋಷ ಅನುಭವಿಸಿಬಂದಿದ್ದೆವು.ಕಾಡಿನ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದ್ದು ಪುಸ್ತಕ ಓದಲು ಪ್ರಾರಂಭಿಸಿ ದಾಗ ಹಾಗು ಕಾಡಿನ ಬಗ್ಗೆ ಇಂಗ್ಲೀಶ್ ಸಿನೆಮಾ ನೋಡಿದಾಗ.ಅಲ್ಲಿಯವರೆಗೂ ನಾನು; ಅಜ್ಞಾನದ ಸಾಗರದ ಒಡೆಯನಾಗಿದ್ದೆ !!!!ಕಾಡಿನ ದಾರಿಯಲ್ಲಿ ಸಾಗುವಮೊದಲು ಕಾಡಿನ ಬಗ್ಗೆ ತಿಳಿಯಲು ಸ್ವಲ್ಪ ವಿರಮಿಸೋಣ ಆಲ್ವಾ. ನನ್ನ ದೃಷ್ಟಿಯಲ್ಲಿ .ಕಾಡು ಹಾಗಂದ್ರೇನು??? ಇನ್ನೂ ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುವೆ ವಂದನೆಗಳು.