Tuesday, July 26, 2011

"ದೊಡ್ಡ ಸಂಪಿಗೆ" ಮರದ ವಿಸ್ಮಯ !!!! ಕೆ.ಗುಡಿಯಲ್ಲಿ ಕಳೆಯುವ ಸಮಯ ಆನಂದಮಯ !!!! ಪಯಣ ...08ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಷ್ಟೋ ಕೌತುಕಗಳು ಅಡಗಿವೆ.!! ಅಂತ ಒಂದು ಕೌತುಕದ ಬಗ್ಗೆ ತಿಳಿಯೋಣ ಬನ್ನಿ.ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಕಾಡುಗಳು ದಟ್ಟವಾಗಿದ್ದು ವನ್ಯಜೀವಿಗಳಿಂದ ತುಂಬಿದೆ.ಇಂತಹ ಒಂದು ದಟ್ಟ ಕಾನನದ ಮಧ್ಯೆ ಸುಮಾರು ೨೦೦೦ ವರ್ಷ!!![ಅರಣ್ಯ ಇಲಾಖೆಯ ಮಾಹಿತಿಯಂತೆ}ಗಳಿಂದ ಈ  ವಿಸ್ಮಯ ದೊಡ್ಡ ಸಂಪಿಗೆ ಮರ  ಭಾರ್ಗವಿ ನದಿ ತೀರದಲ್ಲಿ  ನಿಂತಿದೆ ,               ಭಾರ್ಗವಿ ನದಿ [ ಈ ಸಣ್ಣ ನದಿ ಕಾವೇರಿಯ ಉಪನದಿ!! ಬಿಳಿಗಿರಿಯ ಬನದ  ಹಲವಾರು ಸಣ್ಣ ಜರಿಗಳು ಸೇರಿ ಆಗಿರುವ   ನದಿ!ಇದು ಕಾವೇರಿ ನದಿಯ ಉಪನದಿಯೂ ಹೌದು ,] ತೀರದಲ್ಲಿ  ಈ ಮರ ಸಂಪಿಗೆ ಸುವಾಸನೆ ಬೀರುತ್ತಿದೆ.ದೊಡ್ಡ ಸಂಪಿಗೆ ಮರದ ವಿಶೇಷ ವೆಂದರೆ ಒಂದೆಮರದಲ್ಲಿ ಕೆಂಪು ಹಾಗು ಹಳದಿ ಬಣ್ಣದ ಹೂ ಗಳನ್ನ ಬೆಳಸುವುದು!!ಈ ಮರದ ಸನಿಹ ಹರಿವ ನದಿ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕ ದೇವಿಯ ಅವತಾರವೆಂದೂ,ಈ ಪ್ರದೇಶದಲ್ಲೇ ವಾಸಿಸುತ್ತಿದ್ದರೆಂದೂ, ಪ್ರತೀತಿ [ಇದು ಕರ್ನಾಟಕ ಗೆಜೆತೀರ್ನಲ್ಲಿ ದಾಖಲಾಗಿದೆ]ದೊಡ್ಡ ಸಂಪಿಗೆ ಮರದ  ಸುತ್ತ ಲಿಂಗ ಗಳೆಂದು ಪೂಜಿಸುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಶಿಲೆಗಳಿದ್ದು ,ಮರದ ಸುತ್ತಳತೆ ೨೦ ಮೀಟರ್ ಇರುತ್ತದೆ!!! ಮರದ ಎತ್ತರ ೧೩೦ ಅಡಿ ಇದ್ದು ಗಗನ ಚುಂಬಿಯಾಗಿದೆ!!ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಕೆ .ಗುಡಿ ಇಂದ ಬಿ.ಆರ್. ಹಿಲ್ಲ್ಸ್ ದಾರಿಯ ಮಧ್ಯೆ ಸಿಗುವ ಅರಣ್ಯ ಇಲಾಖೆಯ ಗೇಂ ರೂಟ್ ನಲ್ಲಿ ಸಾಗಬೇಕು.ದಟ್ಟ ಕಾಡಿನಲ್ಲಿನ ಪ್ರದೇಶ ವಾದ ಕಾರಣ ಆನೆ, ಕಾಟಿ, ಕಾಡು ಹಂದಿ, ,ಹುಲಿ,ಸಾರಂಗ, ಮುಂತಾದ ಜೀವಿಗಳು ಅದೃಷ್ಟವಿದ್ದರೆ ಸಿಗಬಹುದು !!!.            ನೆನಪಿಡಿ ಇದು  ಕಾಡುಗಳ್ಳ ವೀರಪ್ಪನ್  ಓಡಾಡಿದ ಪ್ರದೇಶ !!!.ಇಲ್ಲಿನ ಗಾಳಿ ,ನೀರು ಸಂಪೂರ್ಣ ಶುದ್ದ ವಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.ಅವಕಾಶ ಸಿಕ್ಕರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಿಬನ್ನಿ.

Sunday, July 17, 2011

ಚುಮು ಚುಮು ಚಳಿಯಲ್ಲಿ ಇನ್ನಷ್ಟು ನೋಟ !!! ಸಂಜೆಯಲ್ಲಿ ಅಂತಿಮ ವಿರಾಮ..ಪಯಣ ..07


ಹೌದು  ಕಳೆದ  ಆರು  ಸಂಚಿಕೆಯಿಂದ ಬಿಳಿಗಿರಿ ರಂಗನ ಬೆಟ್ಟ ಪ್ರವಾಸದ ಪಯಣದಲ್ಲಿ ಭಾಗವಹಿಸಿ ಸುಸ್ತಾಗಿದ್ದೀರಿ,  ಈಗಾಗಲೇ ಬೆಟ್ಟದಲ್ಲಿ ನೋಡ ಬೇಕಾದ ಬಹಳಷ್ಟು ಸ್ಥಳಗಳನ್ನು ದರ್ಶಿಸಿದ್ದೀರಿ ,  ಇನ್ನು ಉಳಿದಿರುವ ಕೆಲವೇ ದರ್ಶನ ಯೋಗ್ಯವಾದ ಸ್ಥಳಗಳ ಪರಿಚಯ ಮಾಡಿಕೊಂಡು ಇಲ್ಲಿಂದ ವಿರಮಿಸೋಣ. ಬಿಳಿಗಿರಿ ರಂಗನ ಬೆಟ್ಟದಲ್ಲಿ  ಉಳಿಯಲು ಹಲವಾರು ಇಲಾಖೆಗಳ ವಸತಿ ಗೃಹಗಳು ಇವೆ, ಅವುಗಳು ರಜದ ದಿನಗಳಲ್ಲಿ ಸಿಗುವುದು ಕಷ್ಟ ಅದಕ್ಕೆ ನೀವು ರಜ ಇಲ್ಲದ ದಿನಗಳಲ್ಲಿ ಹೋದರೆ ನಿಮ್ಮ ಪ್ರವಾಸ ಉತ್ತಮವಾಗಿರುತ್ತದೆ.  ಮುಂಜಾವಿನ ಮಬ್ಬಿನಲಿ ವಾಕಿಂಗ್ ಹೊರಟರೆ ನಿಮಗೆ ಆಗುವ ಅನುಭವ , ಮನಸ್ಸಿಗೆ ಆಗುವ ಉತ್ಸಾಹದ ಉಲ್ಲಾಸ ವರ್ಣಿಸಲು ಅಸದಳ.
ಮಂಜಿನ ಮುಸುಕು ಹೊದ್ದ ಪರಿಸರ
ಮಂಜು ಮುಸುಕಿದ ಹಾದಿಯ ನೋಟ

ಮುಂಜಾನೆಯ ಮಂಜಿನ ಮಳೆಯಲ್ಲಿ ನಡಿಗೆ

ಮಂಜಿನ ಲೋಕದಲ್ಲಿ ನಿಮಗೆ ಸುಂದರ ಪ್ರಕೃತಿಯ ದರ್ಶನ ಭಾಗ್ಯ ಲಭಿಸುತ್ತದೆ.   ಹಾಗುಹೀಗೂ ಸೂರ್ಯ ಕಿರಣಗಳು ಮಂಜಿನ ಪರದೆಯನ್ನು ಹರಿದು ಬೆಳಕ ಚೆಲ್ಲಲು ಹೊರಟಾಗ ನಿಮಗೆ ವಿಸ್ಮಯ ಲೋಕದ ದರ್ಶನವಾಗುತ್ತದೆ.
ಮುಂಜಾವಿನ ನೋಟ 
ಮುಂಜಾವಿನ ರಮ್ಯ ನೋಟ.

ಕೆಲವೊಮ್ಮೆ ನೀವೇ ಸ್ವರ್ಗ ಲೋಕದಲ್ಲಿ ರುವ ಭಾವನೆ ಮೂಡುತ್ತದೆ ನೀವು ಛಾಯಾಗ್ರಾಹಕರಾಗಿದ್ದರಂತೂ ನಿಮ್ಮ ಕ್ಯಾಮರಾಗೆ ಈ ಸುಂದರ ನೋಟ ಕ್ಲಿಕ್ಕಿಸುವ ಅವಕಾಶ ಖಂಡಿತ ಸಿಗುತ್ತದೆ . ಬನ್ನಿ ಇಲ್ಲೇ ಹತ್ತಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮೀ ಸನ್ನಿಧಿ ಇದೆ ಅಲ್ಲಿಗೆ ಹೋಗೋಣ.ಈ ರಾಘವೇಂದ್ರ ಸ್ವಾಮೀ ಆಲಯವನ್ನು 12 -07 - 1975  ರಲ್ಲಿ  ಸೋಸಲೆ ಶ್ರೀ ಗಳು ಪ್ರತಿಷ್ಟಾಪಿಸಿದರೆಂದು ತಿಳಿಯುತ್ತದೆ
ರಾಘವೇಂದ್ರ ಸ್ವಾಮೀ ಆಲಯ 

ಸುಂದರ ದೇವಾಲಯ ಸುಂದರ ಮೂರ್ತಿಗಳು, ಹಾಗು ನಿಶ್ಯಬ್ದ ವಾತಾವರಣ  ನಿಮ್ಮನ್ನು ಶಾಂತ ಚಿತ್ತರನ್ನಾಗಿ ಮಾಡುತ್ತವೆ. ದರ್ಶನ  ಮುಗಿಸಿ ಹೊರಬನ್ನಿ , ಇಲ್ಲೇ ಸಮೀಪದಲ್ಲೇ ಇದೆ ಗಂಗಾಧರೇಶ್ವರ ದೇವಾಲಯ 
ಗಂಗಾಧರೇಶ್ವರ ದೇವಾಲಯ.

ಭಸ್ಮಾಸುರ ನಿಂದ ಪೀಡಿತನಾದ  ಶಿವನು ವಿಷ್ಣು ವಿನ ಅನುಗ್ರಹದಿಂದ ಮುಕ್ತ ನಾಗಿ  ವಿಷ್ಣುವನ್ನು ಪೂಜಿಸುತ್ತಾಬಿಳಿಗಿರಿರಂಗನ ಬೆಟ್ಟದಲ್ಲಿ  ನೆಲೆಸಿದನೆಂದುಹೇಳುವ ಈ ದೇವಾಲಯ ಇಲ್ಲಿದೆ.  ಇಷ್ಟನ್ನು ನೋಡಿ ಹೊಟ್ಟೆ ಚುರುಗುತ್ತಿದೆ ಅಲ್ವೇ . ಬನ್ನಿ ಬಿಳಿಗಿರಿ ರಂಗನ ಬೆಟ್ಟದಲ್ಲಿ  ಹಲವು ವರ್ಷಗಳಿಂದ  ಯಾತ್ರಿಗಳಿಗೆ ಹಸಿವು ತಣಿಸುವ "ಗಿರಿ ದರ್ಶಿನಿ" ಹೋಟೆಲಿಗೆ ಹೋಗೋಣ.
ಗಿರಿ ದರ್ಶಿನಿ ಹೋಟೆಲ್
ಈ ಹೋಟೆಲಿನಲ್ಲಿ ಕಡಿಮೆ ಬೆಲೆಯಲ್ಲಿ ಶುಚಿಯಾದ ರುಚಿಯಾದ ಊಟ ತಿಂಡಿ ಯನ್ನು ಯಾತ್ರಿಗಳಿಗೆ ನೀಡುತ್ತಾರೆ , ಮಾಲೀಕ ಶಂಕರಪ್ಪ ರವರು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಸೇವೆಗೆ ಮಕ್ಕಳಾದ ವಾಸು , ಹಾಗು ಗುರು ಸಾತ್ ನೀಡಿದ್ದಾರೆ . ಸೌದೆ ವಲೆಯಲ್ಲಿ ತಯಾರಾಗುವ ಊಟ ತಿಂಡಿ ಗಳು ಆರೋಗ್ಯ ಕರವಾಗಿ  ನಿಮ್ಮ ಹಸಿವನ್ನು ನೀಗಿಸುತ್ತವೆ . ಈ ಪ್ರದೇಶ ಗಿರಿ ಧಾಮ ಆಗಿರುವ ಕಾರಣ ನೀವು ಪ್ರತಿ ನಿತ್ಯ ತೆಗೆದುಕೊಳ್ಳುವ ಆಹಾರಕ್ಕಿಂತ ಜಾಸ್ತಿಯಾಗಿ  ತಿನ್ನುವುದಂತೂ ನಿಜ ,   ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದರೆ ಗಿರಿ ದರ್ಶಿನಿಯಲ್ಲಿ ತಿಂಡಿ, ಊಟ ಮಾಡದೆ ಬರಬೇಡಿ .  ಊಟವಾಯಿತೇ ಬನ್ನಿ ಸ್ವಲ್ಪ ವಿಶ್ರಾಂತಿ ಪಡೆದು , ವಿರಮಿಸೋಣ.  ಅದ್ಸರಿ ನೀವು ಇಲ್ಲಿ ಜೇನುತುಪ್ಪ ಸವಿದಿದ್ದೀರಾ  ಅರೆ ಬನ್ನಿ ಬನ್ನಿ ಬಿಳಿಗಿರಿಯ ಜೇನು, ಸೊಗದೆ  ಬೇರಿನ ಶರಬತ್ತು,  ಸೀಗೆ ಪುಡಿ,  ನೆಲ್ಲಿಕಾಯಿ , ಚಕ್ಕೋತ ಹಣ್ಣು, ಕೆಂಡ ಸಂಪಿಗೆ ಹೂವು  ಪ್ರಸಿದ್ಧಿ  ಇಲ್ಲಿಗೆ ಬಂದ ನೆನಪಿಗೆ  ನಿಮಗೆ ಬೇಕಾದದ್ದನ್ನು ಖರೀದಿಸಿರಿ  ಗಿರಿಜನ ಕೇಂದ್ರ,    "ಗಿರಿ ದರ್ಶಿನಿ"  ಹಾಗು ಹಲವು ಕಡೆ ಯಲ್ಲಿ  ಸಿಗುತ್ತದೆ.  ಸಂಜೆಯನ್ನು  ಹತ್ತಿರದಲ್ಲಿರುವ ಕೆರೆಯಲ್ಲಿ ಕಳೆಯೋಣ ಸುಂದರ ಸೂರ್ಯಾಸ್ತ ದೃಶ್ಯವನ್ನು ನೋಡೋಣ. 

Monday, July 11, 2011

ಅಂದಹಾಗೆ ಸೋಲಿಗರು ಅಂದ್ರೆ ಯಾರು.???? ಪಯಣ 06

ಬಿಳಿಗಿರಿರಂಗನ ಬೆಟ್ಟ ಅಂದೊಡನೆ ಸಾಮಾನ್ಯವಾಗಿ ಕೇಳಿಬರುವ ಹೆಸರು "ಸೋಲಿಗರು" , ಹಲವರಿಗೆ ಈ ಹೆಸರಿನ ಪರಿಚಯ ಇಲ್ಲದ ಕಾರಣ ಸೋಲಿಗರ ಬಗ್ಗೆ ತಿಳಿಯಬೇಕೆಂಬ ಆಸೆ ಆಗುತ್ತದೆ. ನನಗೂ ಸಹ ಇಲ್ಲಿಗೆ ಹಲವಾರು ಸಾರಿ ಬಂದಾಗ ಇವರ ಬಗ್ಗೆ ತಿಳಿಯ ಬೇಕೆಂಬ ಹಂಬಲ ಇತ್ತು. ಬನ್ನಿ ಸೋಲಿಗರ ಪರಿಚಯ ಮಾಡಿಕೊಡುತ್ತೇನೆ."ಸೋಲಿಗ" ಎಂದರೆ  ಬಿದಿರಿನ ಮಕ್ಕಳೂ ಅಂತ ಅರ್ಥ!!! ಈ ಜನರಲ್ಲಿ  ತಮ್ಮ ಜನಾಂಗದ ಮೊದಲ ಮನುಷ್ಯ ಬಿದಿರಿನಿಂದ  ಉದ್ಭವಿಸಿದ ಎಂಬ ನಂಬಿಕೆ ಇದೆ. ಹಾಗಾಗಿ ಇವರು ತಮ್ಮನ್ನು  "ಸೋಲಿಗ" ಅಥವಾ "ಬಿದಿರಿನ ಮಕ್ಕಳು"  ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ  ಈ ಸೋಲಿಗ ಜನರು "ಮಲೆ ಮಹದೇಶ್ವರ ಬೆಟ್ಟ ಶ್ರೇಣಿ," "ಬಿಳಿಗಿರಿ ರಂಗನ ಬೆಟ್ಟ ಶ್ರೇಣಿ " ಹಾಗು "ಬಂಡೀಪುರ ಅರಣ್ಯ ಶ್ರೇಣಿ"  ಯಲ್ಲಿ ಮಾತ್ರ ಕಂಡುಬರುತ್ತಾರೆ. ಇನ್ನೆಲ್ಲಿಯೂ ಇವರ ಅಸ್ತಿತ್ವ ಇರುವುದನ್ನು ನೀವು ಕಾಣಲಾರಿರಿ .ಇವರ ನಂಬಿಕೆಗಳು  ಪರಿಸರ ಅಭಿವೃದ್ದಿಗೆ ಪೂರಕವಾಗಿದ್ದು  ಅಚ್ಚರಿ ಮೂಡಿಸುತ್ತದೆ.
ಸೋಲಿಗರ ವ್ಯವಸಾಯ
1 ] ಒಬ್ಬ ಸೋಲಿಗ ವ್ಯಕ್ತಿ  ಎಂದಿಗೂ  ಮರದಲ್ಲಿ ಹಣ್ಣಾಗದ    ಕಾಯಿ ಅಥವಾ ದೊರು ಹಣ್ಣನ್ನು ಕೀಳಲಾರ, ಮರ/ ಗಿಡ ದಲ್ಲಿಯೇ ಪೂರ್ಣವಾಗಿ ಹಣ್ಣಾಗಿರುವ ಹಣ್ಣುಗಳನ್ನು ಮಾತ್ರಾ ಕಿತ್ತು ತಿನ್ನುತ್ತಾನೆ,  ಇದರಿಂದ ಇತರೆ ಪ್ರಾಣಿ ಪಕ್ಷಿಗಳಿಗೂ  ಹಣ್ಣನ್ನು ತಿನ್ನುವ ಅವಕಾಶ ದೊರೆಯುತ್ತದೆ.   2 ] ತಾನು ವ್ಯವಸಾಯ ಮಾಡುವ ಭೂಮಿಯನ್ನು  ಕೇವಲ 06 ರಿಂದ 07  ವರ್ಷ ಮಾತ್ರ ಉಳುಮೆಮಾಡಿ ಬೆಳೆತೆಗೆದು  ನಂತರ ಸುಮಾರು  60 ರಿಂದ 70 ವರ್ಷ ಆ ಭೂಮಿಯನ್ನು ವ್ಯವಸಾಯ ಮಾಡದೆ ಹಾಗೆ ಬಿಡುತ್ತಾನೆ. ಇದರಿಂದ ಭೂಮಿಯ ಸಾರ ಕಡಿಮೆಯಾಗುವುದು ತಪ್ಪಿ  ಭೂಮಿ ಫಲವತ್ತತೆ ಉಳಿಯುತ್ತದೆ. 3 ] ಬೇಸಿಗೆಯಲ್ಲಿ ಕುಡಿಯಲು ನೀರಿಗೆ  ತೊಂದರೆ ಯಾದಲ್ಲಿ ಕಾಡಿನ ಮರವನ್ನು ಪ್ರಾರ್ಥಿಸಿ  ಅದಕ್ಕೆ ಪೊಟರೆ[ ತೂತು]   ಕೊರೆದು  ಮರಕ್ಕೆ ಹಾನಿಯಾಗದಂತೆ  ಮರದಿಂದ ಸಾಕಷ್ಟು ನೀರನ್ನು ತೆಗೆಯುತ್ತಾರೆ. ಇದು ನಾಗರೀಕರಾದ ನಮಗೆ ತಿಳಿಯದ ವಿಧ್ಯೆ ಯಾಗಿದೆ.

Sunday, July 3, 2011

ಬಿ.ಆರ್ .ಹಿಲ್ಸ್ . ಅಂದ್ರೆ ಡಾಕ್ಟರ್ ಸುದರ್ಶನ್ ನೆನಪಿಗೆ ಬರ್ತಾರೆ!!!!! ಪಯಣ ..5

ಡಾಕ್ಟರ್ ಸುದರ್ಶನ್
ನಮ್ಮಲ್ಲಿ   ಬಹಳಷ್ಟು ಜನ ಡಾಕ್ಟರ್ ಗಳು ಇದ್ದಾರೆ ಅವರು ತಮ್ಮದೇ ದಾರಿಯಲ್ಲಿ ನಡೆದು ಜಗತ್ತಿಗೆ ಸೇವೆಸಲ್ಲಿಸಿ ನಕ್ಷತ್ರಗಳಾಗಿ ಪ್ರಕಾಶಿಸುತ್ತಾರೆ. ಅಂತಹ ಒಬ್ಬ ವ್ಯಕ್ತಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಂಡುಬರುತ್ತಾರೆ . ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರ  ಪ್ರಭಾವಕ್ಕೆ ಒಳಗಾಗಿ ಕಾಡಿನಲ್ಲಿ ನೆಲೆಸಿ  ಕಾನನದ ಮಕ್ಕಳಿಗೆ ದಾರಿ ದೀಪವಾಗಿ  ಅವರ ಜೊತೆಯೇ ನೆಲೆಸಿ ಕಾನನ ಸುಮವಾಗಿ ಸುವಾಸನೆ ಬೀರಿದ್ದಾರೆ. ಅವರೇ ಡಾಕ್ಟರ್ ಸುದರ್ಶನ್.ಬನ್ನಿ ಇವರ ಬಗ್ಗೆ ತಿಳಿಯೋಣ.  ಡಾಕ್ಟರ್ ಸುದರ್ಶನ್ ಹುಟ್ಟಿದ ಊರು ಬೆಂಗಳೂರು ಸಮೀಪದ ಹೊರವಲಯದ ಯೆಮಲೂರು ಗ್ರಾಮದಲ್ಲಿ 1950 ರ ಡಿಸೆಂಬರ್  30 ರಂದು ಜನಿಸಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿ 1973 ರಲ್ಲಿ ಡಾಕ್ಟರ್ ಆಗಿ ಹೊರಬರುತ್ತಾರೆ .ಆನಂತರ ರಾಮಕೃಷ್ಣ ಮಿಶನ್ ಸೇರಿ ಅಲ್ಲಿ ಸೇವಾಭಾವದಿಂದ  ಕಾರ್ಯ ನಿರ್ವಹಿಸುತ್ತಾರೆ. ವಿವಿಧ ಹಂತದಲ್ಲಿ ಕರ್ತವ್ಯ ನಿರ್ವಹಿಸಿ  
1981  ರಲ್ಲಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದು ನೆಲೆಸಿ "ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ"  ಸ್ಥಾಪಿಸಿ ನೆಲೆಸುತ್ತಾರೆ. ಗಿರಿಜನರ ಸೇವೆ ಮಾಡುವ ಬಗ್ಗೆ ಆಸಕ್ತಿಯಿಂದ ಶ್ರಮ ವಹಿಸಿ ಗಿರಿಜನರ ಮನೆ ಬಾಗಿಲಿಗೆ ವೈಧ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಂಡು ಉತ್ಸಾಹಿ ವೈಧ್ಯರ ಒಂದು ತಂಡ ರಚಿಸಿ  ಯಶಸ್ವಿಯಾದರು 1986 ರಲ್ಲಿ ಕರುಣಾ ಟ್ರಸ್ಟ್ ಸ್ಥಾಪಿಸಿ  ಗ್ರಾಮೀಣಾಭಿವೃದ್ಧಿ  ಕಾರ್ಯಗಳನ್ನು ಹಮ್ಮಿಕೊಂಡು ಗಿರಿಜನರ ಶ್ರೇಯೋಭಿವೃದ್ಧಿಗೆ  ನಾಂದಿ ಹಾಡಿದರು. ಗಿರಿಜನರ ಹಾಡಿಯಲ್ಲಿ  ಇವರು ರೂಪಿಸಿದ ಕಾರ್ಯಕ್ರಮಗಳು  ಕರುಣಾಳು ವಾಗಿ ಬಂದ ಬೆಳಕಿನಂತೆ  ಬೆಳಕಾಗಿ ಗಿರಿಜನರ ಮುಖದಲ್ಲಿ ಮಂದಹಾಸ ಮೂಡಿಸಲು ಸಫಲವಾಯಿತು .