Sunday, May 29, 2011

ಬಿಳಿಗಿರಿಯ ಬೆಟ್ಟಕ್ಕೆ ಹೋಗೋಣ ಬನ್ನಿ !!! ದಾರಿಯಲ್ಲಿ ಕಾಣುವ ಯಳಂದೂರಿನ ವಿಸ್ಮಯ ದೇಗುಲ ನೋಡಿಬನ್ನಿ!!!! !!! ಪಯಣ ..01 .!!!
ದಾರಿ  ದರ್ಶನ!!!ಮನೆಯಲ್ಲಿ ಸಡಗರವೋ ಸಡಗರ  ಬಿಳಿಗಿರಿ ರಂಗನ ಬೆಟ್ಟದಲ್ಲಿ  ದಿನಾಂಕ ೨೭/೦೫/೨೦೧೧ ರಂದು  ನಡೆಯಲಿದ್ದ ಮನೆಯ ಕಾರ್ಯಕ್ರಮ ಒಂದರ ತಯಾರಿ ನಡೆದಿತ್ತು. ಹಿರಿಯರು ಮನೆಯ ನೆಂಟರು, ಎಲ್ಲರೂ ಕಾದಿದ್ದ ಆ ದಿನ ಬಂದಿತು. ಬಿಳಿಗಿರಿ ರಂಗನ ಬೆಟ್ಟದ ಕಡೆ ಪಯಣ ಶುರುವಾಯಿತು.ಎಲ್ಲರಿಗೂ ಆ ಬೆಟ್ಟದ ಬಗ್ಗೆ ಏನೋ ವಿಶೇಷ ಒಲವು,ಪ್ರಕೃತಿಯ ಒಡಲಲ್ಲಿ ನಲಿದಿರುವ ಆ ಸ್ಥಳದ ಬಗ್ಗೆ  ಕುತೂಹಲ !!!. ಎಷ್ಟು ಬಾರಿ ತೆರಳಿದರೂ ಹೊಸದಾಗಿ ಕಾಣುವ ಪ್ರಕೃತಿ ಚೆಲುವು, ವನ್ಯ ಜೀವಿಗಳ ದರ್ಶನ ,ಹಾಗು ಚೆಲುವ ಬಿಳಿಗಿರಿ ರಂಗನ ಬಗ್ಗೆ ಹರಡಿರುವ ಹಲವಾರು ಕಥೆಗಳು ಇವೆಲ್ಲಾ ಇಲ್ಲಿನ ವಿಶೇಷ.ಪಯಣ ಮೈಸೂರಿನಿಂದ ಹೊರಟು ಟಿ. ನರಸೀಪುರ , ಸಂತೆ ಮರಹಳ್ಳಿ ,  ಯಳಂದೂರು  ತಲುಪುವಷ್ಟರಲ್ಲಿ  ಕೆಲವರಿಗೆ  ಕಾಫಿ ಕುಡಿಯುವ ಹಂಬಲ.ಹಾಗಾಗಿ  ಸ್ವಲ್ಪ ವಿರಾಮಕ್ಕಾಗಿ ಅಲ್ಲಿ ನಿಲ್ಲ ಬೇಕಾಯಿತು. ಕಾಫಿ ಕುಡಿಯುತ್ತಾ ಹಾಗೆ ಕಣ್ಣು ಹಾಯಿಸಿದರೆ ಅಲ್ಲಿ ಕಂಡಿದ್ದು  ಒಂದು ಹಳೆ ದೇವಾಲಯ ಸಂಕೀರ್ಣ , ಹತ್ತಿರ ಹೋಗಿ  ನೋಡಿದಾಗ ಅದ್ಭುತ ವೆನ್ನುವ ಮಾಹಿತಿ ದೊರಕಿತು.ಸುಮಾರು ಒಂದು ಘಂಟೆ ಕಾಲ ನನ್ನ ಕ್ಯಾಮರಾಗೆ ಬಿಡುವಿಲ್ಲದ ಕೆಲಸ. ಮನೆಗೆ ಬಂದು ಇತಿಹಾಸದ ಪುಸ್ತಕ ತೆರೆದಾಗ ಸಿಕ್ಕ  ಮಾಹಿತಿ ಅಚ್ಚರಿ ಹುಟ್ಟಿಸಿತ್ತು.ಬನ್ನಿ ದೇವಾಲಯ ಪರಿಚಯ ಮಾಡಿಕೊಳ್ಳೋಣ.ವಿಸ್ಮಯ ಲೋಕಕ್ಕೆ ಹೋಗಿಬರೋಣ.                                                                                                                                                                "ಯಳಂದೂರು"  ಕರ್ನಾಟಕದ ಅತಿ ಚಿಕ್ಕ ತಾಲೂಕು ಕೇಂದ್ರವಾಗಿದ್ದು, ಚಾಮರಾಜ ನಗರ ಜಿಲ್ಲೆಗೆ ಸೇರಿದೆ.ಕೇವಲ ಅರವತ್ತ ಮೂರು ಗ್ರಾಮಗಳ ತಾಲೂಕು ಇದು.ಎರಡು ಹೋಬಳಿ ಕೇಂದ್ರಗಳನ್ನು ಹೊಂದಿದೆ.ಈ ಊರಿನ ಅಸ್ತಿತ್ವದ ಬಗ್ಗೆ ಒಂದು ಸ್ವಾರಸ್ಯಕರವಾದ ಕಥೆ ಹೀಗಿದೆ,   ನೀಲಗಿರಿಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದ  "ಕಪಿಲ ಋಷಿ " ತನ್ನ ಕಮನ್ದಲದಲ್ಲಿ ಗಂಗೆಯ  ನೀರನ್ನು ಉತ್ತರಾಭಿಮುಖವಾಗಿ  ಪ್ರೋಕ್ಷಣೆ ಮಾಡಿ  ನದಿಯನಾಗಿ ಮಾಡಿ ಹರಿಸಬೇಕೆಂದು ನಂದೀಶ್ವರನು ಪ್ರಾರ್ಥಿಸಿದನೆಂದೂ , ಆ ಪ್ರಾರ್ಥನೆಯಂತೆ  "ಕಪಿಲ ಋಷಿ"  ಗಂಗಾ ನದಿ ನೀರನ್ನು ಪ್ರೋಕ್ಷಣೆ ಮಾಡಲಾಗಿ  "ಸುವರ್ಣಾವತಿ"  ನದಿ ಹುಟ್ಟಿತೆಂದೂ, ಆ ನಂತರ ಬ್ರಹ್ಮ ದೇವನು ನದಿಯ ದಡದ ಮೇಲೆ "ಎಳೆಯನ್ದೂರು" ಎಂಬ ಹೆಸರಿನ ಪಟ್ಟಣ ಸ್ಥಾಪಿಸಿದನೆಂದು ಹೇಳುತ್ತಾರೆ. ಇದನ್ನು "ಎಪಿಗ್ರಾಫಿಯಾ ಕರ್ನಾಟಕ"  ದಲ್ಲೂ  ತಿಳಿಸಲಾಗಿದೆ
ಯಳಂದೂರು ಪಟ್ಟಣ ಮೊದಲು ಹದಿನೈದು ಹದಿನಾರನೇ ಶತಮಾನದಲ್ಲಿ  ಚೋಳರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದ್ದು  ಅಲ್ಲಿ ಅನೇಕ ಕುರುಹುಗಳನ್ನು ಕಾಣಬಹುದಾಗಿದೆ. ಅಂತಹ ಒಂದು ವಿಸ್ಮಯ ದೇಗುಲವೇ  'ಗೌರೀಶ್ವರ " ದೇವಾಲಯ. ಸುಂದರ ಕೆತ್ತನೆಯ ಕಲಾ ದೇಗುಲದಲ್ಲಿ ವಿಸ್ಮಯ ಗೊಳಿಸುವ ಅದ್ಭುತ ಶಿಲ್ಪಕಲೆಗಳನ್ನು  ನೋಡಬಹುದಾಗಿದೆ. ಬನ್ನಿ  ವಿಸ್ಮಯ  ಲೋಕಕ್ಕೆ  ಹೋಗಿಬರೋಣ .
ಕಲ್ಲಿನ  ಬಳೆಯ  ವಿಸ್ಮಯ ಇಲ್ಲಿದೆ!!
ಇದು ಅಂದಿನ ವಿಜ್ಞಾನದ ವಿಸ್ಮಯ!! ಇಂದು ಯಾರಿಗೂ ಬೇಡವಾಗಿದೆ.
ಈ ಕಲ್ಲಿನ  ಬಳೆಗಳಲ್ಲಿ[joint ]  ಬೆಸುಗೆಯನ್ನು ಯಾರು ಕಂಡಿಲ್ಲಾ !!!

ಬೆನಕ ದರ್ಶನ ನೀಡಿದ್ದು ಹೀಗೆ>
ಭೈರವ ನರ್ತನ !!!
ಇಲ್ಲಿ ವಿಷ್ಣು ದರ್ಶನವೂ ಆಗುತ್ತದೆ!!!!

vi
ಅಂದಿನ ಸಂಪ್ರದಾಯದ ಜನರೇ ಇವರು !!!

ಯಾವ ಶಿಲ್ಪಿಯ ಕಲ್ಪನೆಯ ಕನಸೋ ಇದು!!!

ಮಾತುಗಳಿಗೆ ನಿಲುಕದ ವಿಸ್ಮಯ !!!
ವಾಲೀ ಸುಗ್ರೀವರ ಮಲ್ಲ ಯುದ್ದ !!!
ಸುಂದರ ನಕ್ಷತ್ರಾಕಾರದ  ಕಿಟಕಿಗಳು
ಚೌಕದೊಳಗೆ ಚೌಕ  ಕಿಟಕಿ ವಿಸ್ಮಯ !!!!
ಪದ್ಮ ಚಕ್ರ !!!
ಹೂವಂತೆ ಕಲ್ಲಿನಲ್ಲಿ  ಅರಳಿದ  ಶಂಖ!!!
ಶಾಸನ ಮಂಟಪ ಇಲ್ಲಿನ ವಿಶೇಷ!!!
ಯಾರಿಗೂ ಬೇಡದ ಗತ ಇತಿಹಾಸ ಸಾರುವ  ಶಾಸನ ಕಲ್ಲು, ಮೂಕವಾಗಿ ರೋದಿಸಿದೆ!!!

ಅವಸಾನ ವಾಗುತ್ತಿರುವ ನಮ್ಮನ್ನು ನೋಡಿ ನಿಮ್ಮ ಮನ ಕರಗದೆ???   ಎಂತಹ ಅದ್ಭುತ ಶಿಲ್ಪಕಲೆ ಆಲ್ವಾ !!! ಈ ದೇವಾಲಯವನ್ನು ] ಪದಿನಾಡಿನ ಪ್ರಥಮ ಪ್ರಭುವಾದ "ಸಿಂಗದೇಪಭೂಪ "[ದೇಪೇಂದ್ರ]  ಕಟ್ಟಿಸಿದ್ದಾಗಿಯೂ, ಈ "ಗೌರೀಶ್ವರ" ದೇವಾಲಯವನ್ನು ಕ್ರಿ.ಶ. 1535-1560 ರೊಳಗೆ ನಿರ್ಮಾಣವಾಗಿರುವುದಾಗಿ ಎಪಿಗ್ರಾಫಿಯಾದಲ್ಲಿ  ಅಂದಾಜಿಸಲಾಗಿದೆ. ವಿಕಿ ಪೀಡಿಯಾದಲ್ಲಿ ಹೀಗೆ ಬರೆಯಲಾಗಿದೆ             Gaurishwara temple was built in 1550 A.D during the reign of Devabhupala (Singadepa) of the Chola dynasty. This temple was rebuilt in 1654 -1655 by Muddabhupa, grand son Devabhupala, as the old temple was highly dilapidated. The temple has some unique features which makes it very distinctive. Though there is no towering entrance gopura (as is common in South Indian temples), it has a mahadwara or gate called “Bale Mantapa” (Bangle entrance) which has exquisitely stone carved themes, on the walls and pillars, depicting mythological stories of Andhakasura [1] (slaying of demon Andhakasura0, Narasimha (Half Man – Half Lion God) in various manifestations of Dakshinamurthy and Sharaba, Bhirava, Kalingamardhana krishna, Vali and Sugriva. Monolithic stone chains (stone carved rings - 20 cm each) adorn the four corners and the door side of the entrance which gives the name of Bale (Bangle) Mantapa to the temple entrance. 

Friday, May 20, 2011

ಐಸ್ ಕ್ಯಾಂಡಿ ಪುರಾಣ !!!! ಹಳ್ಳಿ ಯಲ್ಲೊಂದು ರಾಮಾಯಣ., ನಾನು ವಿಜ್ಞಾನಿ ಆಗಿದ್ದೆ !!!!


                                                                                                                                                                                     ಐಸ್ ಕಿರೀ ........>>>> ಅಂತಾ ಅವನು ಬಂದ್ರೆ ಸಾಕು ಹಳ್ಳಿಯ ಮಕ್ಕಳೆಲ್ಲಾ ಅವನ ಹಿಂದೆ . ಅವನೋ ಹಳ್ಳಿಯ ಮಕ್ಕಳಿಗೆ ಬಣ್ಣ  ಬಣ್ಣ ದ ಐಸ್ ಕ್ಯಾಂಡಿಯನ್ನು  ಪಟ್ಟಣದಿಂದ ಹಳ್ಳಿಗೆ ತಂದು ಸರಿಯಾಗಿ ಬೆಳಿಗ್ಗೆ ಹನ್ನೊಂದು ಘಂಟೆಗೆ  ಹಳ್ಳಿಯ ಶಾಲೆ ಬಿಡುವ ವೇಳೆಗೆ  ಹಾಜರಾಗುತ್ತಿದ್ದ. ಒಂದು ಮರದ ಪೆಟ್ಟಿಗೆಯೊಳಗೆ ಥರ್ಮೊಕೊಲ್ ನ ಪ್ಯಾಕಿಂಗ್ ಮಾಡಿ ಬಣ್ಣ ಬಣ್ಣ ದ  ಐಸ್ ಕ್ಯಾಂಡಿಗಳನ್ನು ಅದರಲ್ಲಿ ತುಂಬಿ ಕೊಂಡು ಬಂದು  ಮಳವಳ್ಳಿ ಪಟ್ಟಣದಿಂದ  ಐದು ಕಿ.ಮಿ.ದೂರವಿದ್ದ ನಮ್ಮ ಹಳ್ಳಿಗೆ ಬಂದು ಐದು ಪೈಸೆಗೆ ಒಂದರಂತೆ ಮಾರುತಿದ್ದ.ಇನ್ನು ಇವ ಮಾರುತಿದ್ದ "ಐಸ್ ಕ್ಯಾಂಡಿಗಳು" ನಾನೂ ಸೇರಿದಂತೆ ಎಲ್ಲಾ ಹಳ್ಳಿ ಹೈಕಳಿಗೂ ಬಲು. ಅಚ್ಚುಮೆಚ್ಚು. ಗುಂಡಾದ ಕಡ್ಡಿಗೆ ಐಸ್ ಕ್ಯಾಂಡಿ ಸಿಕ್ಕಿಸಿ  ಹಳದಿ, ನೀಲಿ, ಹಸಿರು, ಕೆಂಪು, ಬಣ್ಣದ ಒಂದೊಂದು  ಐಸ್ ಕ್ಯಾಂಡಿ ಕೈಯಲ್ಲಿ ಎತ್ತಿ  ಹಿಡಿದು ತನ್ನದೇ ಆದ ಗತ್ತಿನಲ್ಲಿ ಜೋರಾಗಿ ಇಡೀ ಬೀದಿಗೆ  ಕೇಳುವಂತೆ   ಐಸ್ ಕಿರೀ ...........>>>>>. ಅಂದ್ರೆ  ಸಾಕು ಇತ್ತ ಹೈಕಳು ಅಪ್ಪಂದಿರ ಚಡ್ಡಿ/ಪಂಚೆ ಎಳೆದು, ಅವ್ವಂದಿರ ಸೀರೆ ಎಳೆದು ಅತ್ತೂ, ಕುಣಿದು,ರಂಪಾಟ ಮಾಡಿ "ಐಸ್ ಕ್ಯಾಂಡಿ"  ತಿಂದೇ ತಿನ್ನುತ್ತಿದ್ದವು. ಆ ದಿನಗಳಲಿ ಕಡಿಮೆ ಸಂಪಾದನೆಯ ಹಳ್ಳಿಯ  ಹಲವು ಜನಗಳಿಗೆ ದಿನಾ ಇದೊಂದು ಸಂಕಟ.  ತಮ್ಮ ಹೈಕಳು "ಐಸ್ ಕ್ಯಾಂಡಿ" ತಿಂದು ತಾವು ಬೀಡಿ ಸೇದುವ ದುಡ್ಡನ್ನು, ಹಾಳು ಮಾಡುತ್ತಿವೆ ಎಂಬ ಕೊರಗು ಅಪ್ಪಂದಿರಿಗಾದರೆ , ಎಲೆ ಅಡಿಕೆ ಕಾಸು ಹಿಂಗೆ ಮಕ್ಕಳ ಐಸ್ ಕ್ಯಾಂಡಿ ಪಾಲಾಗ್ತಿದೆ ಎಂಬ ಕೊರಗು ಅವ್ವಂದಿರಿಗೆ,                                                                                                                                                                     ಇದು ಹೀಗೆ ಸಾಗಿತ್ತು. ಇನ್ನು ಐಸ್ ಕ್ಯಾಂಡಿ ಮಾರುವವನೋ  ಪಕ್ಕಾ ಶಿವಾಜಿ ಗಣೇಶನ್ ಸಿನೆಮಾದ  ಸ್ಟೈಲು. ಗುಂಗುರು ಕೂದಲನ್ನು ಹಣೆಯ ಮೇಲೆ ಇಳಿಬಿಟ್ಟು., ಹಣೆಗೆ ತಮಿಳರ ಕುಂಕುಮ ಧರಿಸಿಕೊಂಡು, ಕಣ್ಣಿಗೆ ರಾಚುವ ಬಣ್ಣಗಳ ಶರ್ಟು, ಬಣ್ಣ ಬಣ್ಣ ದ ಹೂವುಗಳ  ಲುಂಗಿ ಉಟ್ಟುಕೊಂಡು, ಸೈಕಲ್ಲನ್ನು ತನ್ನದೇ ಆದ ಸ್ಟೈಲಿನಲ್ಲಿ  ಅಲಂಕರಿಸಿ " ಪುವಾಯ್  ಪುವಾಯ್ " ಅಂತಾ ಜೋರಾಗಿ ಹಾರನ್ ಮಾಡ್ತಾ  ತಾನೇ ಶಿವಾಜಿ ಗಣೇಶನ್ ನಂತೆ ಪೋಸ್ ಕೊಡ್ತಿದ್ದ,[ಪುಣ್ಯಾ ಆಗ  ಸಿನಿಮಾ ರಂಗದಲ್ಲಿ ರಜನೀಕಾಂತ್  ಇರಲಿಲ್ಲ ]  ಆದರೂ ಕಷ್ಟ ಪಟ್ಟು  ಉರಿ ಬಿಸಿಲಿನಲ್ಲಿ  ಊರೂರು ತಿರುಗಿ ಐಸ್ ಕ್ಯಾಂಡಿ ಮಾರಿ ಜೀವನ  ಸಾಗಿಸುತ್ತಿದ್ದ . ಆದ್ರೆ ಯಾವಾಗಲು ನಗುತ್ತಾ ನಗುತ್ತಾ ಮಕ್ಕಳಿಗೆ  ಐಸ್ ಕ್ಯಾಂಡಿ ಮಾರುತ್ತಿದ್ದ. ಹೀಗೆ ಸಾಗಿತ್ತು ದಿನಗಳು. ಹಳ್ಳಿಯಲ್ಲಿ ಒಮ್ಮೆ ಇದ್ದಕಿದ್ದಂತೆ  ಜೋರಾಗಿ ಗಲಾಟಿ ನಡೆದಿತ್ತು.  ಊರಿನ  "ಪಟೇಲ್  ಬೋರೆಗೌಡರು" ಜೋರಾಗಿ ಐಸ್ ಕ್ಯಾಂಡಿ ಮಾರುತ್ತಿದ್ದ ನಮ್ಮ  ಐಸ್ ಕ್ಯಾಂಡಿ "ಶಿವಾಜಿ ಗಣೇಶನ್" ಮೇಲೆ ಎಗರಿದ್ದರು !!!  ಬನ್ನಿ ನಾವೂ ಗಲಾಟೆಯ ಡೈಲಾಗ್ ಕೇಳೋಣ.                                                                                                                                                 ."ಪಟೇಲ್ ಬೋರೆಗೌದರು" [ ಮುಂದೆ ಇವರನ್ನು ಪಟೇಲರು   ಎನ್ನೋಣ.] :- "ಲೇ ಯಾವನ್ಲಾ ಅದು ಐಸ್ ಕ್ಯಾಂಡಿ ಬಲಾ ಇಲ್ಲಿ".                                                                                                                                                        "ಐಸ್ ಕ್ಯಾಂಡಿ ಶಿವಾಜಿ ಗಣೇಶನ್"[ ಮುಂದೆ  ಶಿವಾಜಿ ಎನ್ನೋಣ ]:-  ಬಂದೆ ಪಟೇಲ್ರೇ.                                                                                      ಪಟೇಲರು:- "ಏನ್ಲಾ ನಮ್ ಹಳ್ಳಿ ಹೈಕಳನೆಲ್ಲಾ  ನಿನ್ ಕಳಪೆ  ಐಸ್ ಕ್ಯಾಂಡಿ ತಂದು ಮಾರಿ  ಹಾಳು ಮಾಡ್ತಾ ಇದ್ದೀಯ???" ಒಂದ್ ಮಾಡಗ್ದಾ ಅಂದ್ರೆ  ನೋಡು!!!"  ಅಂದ್ರೂ ,                                                                                                                      ಶಿವಾಜಿ:- "ಅಲ್ಲಾ ಸ್ವಾಮೀ ನಂ ಮಾಲು ಕಳಪೆ ಅಲ್ಲಾ ಬೇಕಾದ್ರೆ ಪರೀಕ್ಸೆ ಮಾಡಿ ಈ ಹಳ್ಳಿ  ಹೈಕಳು ನಮ್ಮ ಮನೆ ಮಕ್ಕಳಂಗೆ"ಅಂದಾ ,
ಪಟೇಲರು:- ಏನ್ಲಾ ನಾನು ಪಟೇಲ ನಂ ಮಾತ್ಗೆ  ಎದುರ್ಮಾತಾ ?? ಲೇ ಹುಸಾರು  ಕಂಬಕ್ಕೆ ಕಟ್ಟಿ ಕಜ್ಜಾಯ ಕೊಡ್ಬೇಕಾಯ್ತದೆ. ಅಲ್ಲಾ ಕನ್ಲಾ ದಿನಾ ನಮೂರಲ್ಲಿ ಹೈಕಳು ಐಸ್ ಕ್ಯಾಂಡಿ ತಿನ್ನೋಕೆ ಮನೇಲಿ ದುಡ್ಡಾ ಕದೀತಾವಂತೆ , ಕೂಲಿ ನಾಲಿ ಮಾಡಿ ಮಡಗಿದ್ದ ದುಡ್ದ ನೀನು ಹೈಕಳಿಗೆ ಐಸ್ ಕ್ಯಾಂಡಿ ಕೊಟ್ಟು ಕಿತ್ಕಂಡು ಒಯ್ತಿ  !!! ನಮ್  ಅಳ್ಳಿ ಜನ          ಹೊಟ್ಟೆಗೆ ಮಣ್ಣು ತಿನ್ಬೇಕೆನ್ಲಾ ???  ಅದೂ ಅಲ್ದೆ ನಿನ್ ಐಸ್ ಕ್ಯಾಂಡಿಯಲ್ಲಿ  ಹುಳ ಅವೇ ಅಂತಾ ನಮ್ಮೂರ  ಬಸಪ್ಪಾ ದಾಕುಟ್ರೂ ಬ್ಯಾರೆ ಏಳುದ್ರೂ !!! ಈ ಉಳಾ ನೆಲ್ಲಾ ನಮ್ ಹೈಕಳಿಗೆ ತಿನ್ಸಿ ರೋಗಾ ಬರ್ಸಿ ಸಾಯ್ಸ್ ಬೇಕೂ ಅಂತಾ ಅನ್ಕಂಡಿದ್ದೀಯ?? ಹುಸಾರು ಇನ್ನೊಂದಿನ  ಈ ಊರಲ್ಲಿ ನಿನ್ನ ಕಂಡ್ರೆ  ನಿನ್ನೂವೆ ನಿನ್ ಸೈಕೊಲ್ನುವೆ ಪಿನಿಸ್ ಮಾಡ್ಬೇಕಾಯ್ತದೆ !!! ಅಂದ್ರೂ [ ಸುತ್ತಾ ನಿಂತಿದ್ದ ಹಳ್ಳಿಹೈಕಳ  ಮುಖದಲ್ಲಿ  ನಾಳೆಯಿಂದ ಐಸ್ ಕ್ಯಾಂಡಿ ಸಿಗಲ್ಲಾ ಅನ್ನುವ ಘಾಬರಿ   ಒಂದೆಡೆ ಯಾದರೆ  ಅಪ್ಪ ಅವ್ವಂದಿರ ಮನದಲ್ಲಿ  ತಮ್ಮ ಬೀಡಿ ಎಲೆ ಅಡಿಕೆ ಕಾಸು ಐಸ್ ಕ್ಯಾಂಡಿಗೆ ಹೋಗೋದಿಲ್ಲ ಅನ್ನುವ ಖುಷಿ ]                   ಶಿವಾಜಿ :- ಸ್ವಾಮೀ ಪಟೇಲ್ರೇ  ನನ್ನ ಮಾಲಲ್ಲಿ ಹುಳಾ  ಐತೆ ಅಂದಾ ದಾಕುಟ್ರೂ ಸುಳ್ಳ, 
  ಅವೈಯ್ಯ  ದಾಕುಟ್ರೆ ಅಲ್ಲಾ ಅಂತಾ  ಹಿಂದ್ಲೂರ್ ನಲ್ಲಿ ಹೊಡ್ದಿದ್ರೂ,
 ಈಗ ನಿಮ್ಮೂರಿಗೆ ಬಂದವನೇ , 
ಈಗ ನಂ ಮ್ಯಾಲೆ ಪಿಟ್ಟಿಂಗ್ ಇಟ್ಟವ್ನೆ , 
ನಾನು ಪೋಲಿಸ್ ಗೆ ಕಂಪ್ಲೇಂಟ್  ಕೊಡ್ತೀನಿ,
 ಆಮ್ಯಾಕೆ ಗೊತ್ತಾಯ್ತದೆ ,
ಇನ್ಸ್ಪೆಟ್ರೂ   ನಂ ನೆಂಟರೆ ಅವ್ರ್ನೆ 
ಕರ್ಕಂಬತ್ತೀನಿ ಬುಡಿ ಅಂದಾ !!!                                      
 ಪಟೇಲರೂ :- [ ಮನಸ್ಸಿನಲ್ಲಿ ಇದ್ಯಾಕೋ  ಸರಿ ಹೋಗ್ತಿಲ್ಲಾ , ನಾಳೆ ಪೋಲಿಸ್ ಬಂದ್ರೆ ನಂ ಮರ್ವಾದೆ ಹೋಗುತ್ತೆ ಅಂತಾ ಯೋಚಿಸಿ ] "ಲೇ ಐಸ್ ಕ್ಯಾಂಡಿ ಒಂದ್ ಕೆಲಸ ಮಾಡು,
 ನಮ್ ಊರಿಗೆ  ಪೋಲಿಸ್ ಯಾಕ್ಲಾ ಬೇಕೂ?
 ನಾಮೆನು ಮನುಸ್ರಲ್ವಾ?
  ಏನೋ ಬಡವಾ ಬದೀಕಾ ಓಗು"
 "ಏನಾದರೂ ನಮ್ ಹಳ್ಳಿ ಹೈಕಳು ಒಸಾರಿಲ್ದೆ ಮನೀಕಂದ್ರೆ......
  ನಿನ್ನ ಗತಿ ಕಾಣಿಸ್ಬುಡ್ತೀನಿ ಉಸಾರು"!!! 
ಅಂದಾ ಜಾರಿ ಕೊಂಡರೂ .
ಅಲ್ಲಿದ್ದ ಜನ  ನಿರಾಸೆಯಿಂದ ನಮ್ ಕಥೆ ಇಷ್ಟೇನೆ ಅಂತಾ  ಚದುರಿದರು.                                                                                                       

Sunday, May 15, 2011

"ಅಪ್ಪೆ ಹುಳಿ" ಮಜಾ ನೆ ಮಜಾ !!! ನಿಮ್ಮನೆಗೆ ಬಂದ್ರೆ "ಅಪ್ಪೆಹುಳಿ " ಕೊಡ್ತೀರ ???


ಹೌದು ಕಳೆದ ರಾತ್ರಿ ಒಳ್ಳೆ ನಿದ್ದೆ ತೆಗೆದು ಇವತ್ತು ಬೆಳಿಗ್ಗೆ ಎದ್ದವನಿಗೆ ಯಾಕೋ?? ಗೊತ್ತಿಲ್ಲ, "ಅಪ್ಪೆ ಹುಳಿ"  ಜ್ಞಾಪಕಕ್ಕೆ ಬರೋದೆ !!!!ಉತ್ತರ ಕನ್ನಡದ ಗೆಳೆಯರಿಗೆ ಬಿಟ್ರೆ ಬೇರೆ ಭಾಗದ ಗೆಳೆಯರಿಗೆ ಇದರ ಪರಿಚಯ ಹೆಚ್ಚಾಗಿ ಇರುವುದಿಲ್ಲ.ಬನ್ನಿ "ಅಪ್ಪೆ ಹುಳಿ " ನನಗೆ ಪರಿಚಯವಾದ ಕಥೆ ಹೇಳ್ತೀನಿ.
ಅಪ್ಪೆ ಹುಳಿ [ ಚಿತ್ರ ಕೃಪೆ  ಮನೆ ಅಡಿಗೆ ಬ್ಲಾಗ್ ]
                               ನಾನು ಆಗ ಶ್ರೀ ರಂಗ ಪಟ್ಟಣದಲ್ಲಿ  ಕರ್ತವ್ಯದಲ್ಲಿದ್ದೆ. ಆಗಷ್ಟೇ ಪರಿಚಯವಾಗಿದ್ದ "ಸುಬ್ಬರಾಯ ಭಟ್" ಮದುವೆ ಆಮಂತ್ರಣ ನೀಡಿ "ಸಾರ್ ನನ್ನ ಮದುವೆಗೆ ಬರಬೇಕು ಅಂದ್ರೂ !!!"    ಅವರು ಕರೆಯುವ ರೀತಿಯಲ್ಲಿ ಪ್ರೀತಿ ಯಿದ್ದರೂ,  ಈ ಬಯಲು ಸೀಮೆ ಜನ  ಅಲ್ಲಿಗೆ ಬಂದಾರೆ??? ಎನ್ನುವ  ಭಾವನೆ ಇದ್ದುದು  ಸುಳ್ಳಲ್ಲಾ . ಸರಿ ನಾನು ನನ್ನ ಗೆಳೆಯರೆಲ್ಲಾ  ಈ ಮದುವೆಗೆ ಹೋಗಿ ಬರೋಣ ಅಂತಾ ತೀರ್ಮಾನಿಸಿ ಹೊರಟೆ ಬಿಟ್ಟೆವು.ಪಯಣ ಸಾಗಿತು, ಶ್ರೀ ರಂಗ ಪಟ್ಟಣ ದಿಂದ ಕಾರಿನಲ್ಲಿ  ಸಂಜೆ ಆರಕ್ಕೆ ಬಿಟ್ಟು  ಕೆ.ಆರ್.ಪೇಟೆ.  ಚನ್ನರಾಯಪಟ್ಟಣ ,ಅರಸೀಕೆರೆ ,ಕಡೂರು, ತರಿಕೆರೆ,ಭದ್ರಾವತಿ, ಶಿವಮೊಗ್ಗ  , ಸಾಗರ, ಸಿದ್ದಾಪುರ , ದಾಟಿ ಶಿರಸಿ ಸೇರಿದಾಗ ಬೆಳಿಗ್ಗೆ ಎಂಟು ಘಂಟೆ ಯಾಗಿತ್ತು.ಮುಂಚೆಯೇ ವಿಚಾರ ಗೊತ್ತಿದ್ದ  ಗೆಳೆಯ ರಾಜ ಕೆ. ಭಟ್   ಹಾಗು ಅವರ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಂಡು  ಅಲ್ಲಿಯೇ ಇದ್ದ ಐ.ಬಿ ಗೆ ಕರೆದು ಕೊಂಡು ಹೋಗಿ  ನಾವು ವಿಶ್ರಾಂತಿ ಪಡೆಯಲು ತಿಳಿಸಿ ಮುಂದಿನ ಸಿದ್ದತೆ ನಡೆಸಿದ್ದರು.  ಬೆಳಗಿನ ಕಾರ್ಯಪೂರ್ಣಗೊಳಿಸಿ ಸಿದ್ದವಾದೆವು, ನಾನು ಕೇಳಿದೆ " ರಾಜಾ ಕೆ ಭಟ್  ಅವರೇ ಮದುವೆ ನಡೆಯುವ ಊರಿನ ಹೆಸರು ಏನು?? "  ಅದಕ್ಕೆ ರಾಜಾ ಕೆ. ಭಟ್ :-ಸರ್ ಅದಾ  "ಉಪ್ಪರಿಗಿ"  ಮನೆ ಅಂತಾ   ಸಿರ್ಸಿ ಯಿಂದಾ ಎಲ್ಲಾಪುರ ಕಡೆ ಹೋಗುವ ದಾರಿಯಲ್ಲಿದೆ." ಅಂದ್ರೂ  ನನ್ನ ಮನದಲ್ಲಿ ಈ ಊರು ತಲುಪಲು ಬಹುಷಃ ಬೆಟ್ಟ ಹತ್ತ ಬೇಕೆಂದು ಅಂದು ಕೊಂಡೆ . ಪಯಣ ಸಾಗಿತು. ಸಿರ್ಸಿ ಯಿಂದ ಎಲ್ಲಾಪುರ ರಸ್ತೆಯಲ್ಲಿ ಸಾಗಿದೆವು. ದಾರಿಯಲ್ಲಿ ಒಂದು ಕಡೆ ಕಾರನ್ನು ನಿಲ್ಲಿಸಲು ಹೇಳಿದ ರಾಜಾ.ಕೆ.ಭಟ್  ಬನ್ನಿ  ಊರು  ಹತ್ತಿರ ಬಂದಿದೆ ಇಲ್ಲಿಂದ ನಡೀಬೇಕೂ ಅಂದ್ರೂ. ಸರಿ ಕಾರನ್ನು ಅಲ್ಲೇ ಪರಿಚಯದವರ ಮನೆಯ ಬಳಿ ಬಿಟ್ಟು. ನಡೆದೆವು.  ಇಲ್ಲಿಂದ  ಚಾರಣ ಶುರುವಾಯ್ತು  ಸುಮಾರು ನಾಲ್ಕು ಕಿ.ಮೀ  ಆಳಕ್ಕೆ ಇಳಿದೆವು     ಅಲ್ಲಿ ಒಂದು ಕಡೆ ತೋಟದ ನಡುವೆ ಒಂಟಿ ಮನೆಯಲ್ಲಿ  ಮದುವೆ ಸಡಗರ ನಡೆದಿತ್ತು. ನಾನು "ಅಲ್ಲ್ರಯ್ಯ  ಈ ಊರಿಗೆ ಉಪ್ಪರಿಗೆ ಮನೆ ಅಂತೀರಾ ಆದ್ರೆ ನಾವೀಗ ಬಂದದ್ದು ಪಾತಾಳಕ್ಕೆ ಆಲ್ವಾ ??  ಇದಕ್ಕೆ ಸರಿಯಾದ ಹೆಸರು "ಪಾತಾಳ ಮನೆ"  ಅಂದೇ ಅದಕ್ಕೆ ಅಲ್ಲಿದ ಸ್ನೇಹಿತರು ನಗುತ್ತಾ   ನೀನೆಳೋದೂ ಸರಿನೆ, ಅಂತಾ  ಹೇಳಿದ್ರೂ, ಮದುವೆ ಮನೆಗೆ ಪ್ರವೇಶ ಮಾಡಿದೆವು.  ಬಹು ದೂರದಿಂದ ಬಂದ ನಮಗೆ ಪ್ರೀತಿಯ ಸಿಂಚನದ ಸ್ವಾಗತ ಅಲ್ಲಿನವರಿಂದ , ಯಾರಿಗೂ ನಾವು ಹೊರಗಿನವರೆಂಬ ಭಾವನೆ ಇಲ್ಲ!! ಇಡೀ ವಾತಾವರಣ  ಆನಂದವಾಗಿತ್ತು. ಮದುವೆ ಮುಗಿಸಿ ಗೆಳೆಯರ  ಮನೆಗೆ ನಡೆದೆವು.ಬರುವಾಗ ಸುಲಭವಾಗಿ ಗುಡ್ಡ ಇಳಿದು ಬಂದಿದ್ದ ನಾವು ಮದುವೆ ಊಟ ತುಂಬಿದ್ದ  ಗುಡಾಣಗಳಾಗಿದ್ದ  ಹೊಟ್ಟೆಗಳನ್ನು ಹೊತ್ತುಕೊಂಡು  ಗುಡ್ಡ ಏರಿದೆವು  ಉಸಿರು ಬಾಯಿಗೆ ಬಂದಿತ್ತು !!!ಸ್ವಲ್ಪ ವಿಶ್ರಾಂತಿ ಪಡೆದು  ಮತ್ತೆ ಗುಡ್ಡ  ಬೆಟ್ಟಗಳನ್ನು ಹತ್ತಿ ಇಳಿದು  ಹಲವರ ಮನೆಗಳಿಗೆ ಭೇಟಿ ಕೊಟ್ಟೆವು ಎಲ್ಲರ ಮನೆಯಲ್ಲಿಯೂ ಹಲಸಿನ ಸಿಹಿ ,ಖಾರ ತಿನಿಸುಗಳ ಸಮಾರಾಧನೆ . ಸಂಜೆಯ ಹೊತ್ತಿಗೆ  ರಾಜಾ ಕೆ.ಭಟ್ ಮನೆಗೆ ಬಂದರೆ  ಮೈ ಕೈ ಎಲ್ಲಾ ನೋವು  ಸುಸ್ತು ರಾತ್ರಿ ಊಟ ಮಾಡಲು ಮನಸ್ಸಿಲ್ಲದಿದ್ರೂ  ಹೊಟ್ಟೆ ಹಸಿವು ಕಾಡುತ್ತಿತ್ತು.  ರೀ ರಾಜು ಯಾಕೋ ಮೈಕೈ ಎಲ್ಲಾ ನೋವು ನಿದ್ದೆ ಬರೋಲ್ಲ ಅಂತಾ ಕಾಣ್ತಿದೆ ಕಣ್ರೀ" ಅಂದೇ, ಆಗ ರಾಜು "ಸಾರ್ ನೀವೇನು ಯೋಚಿಸಬೇಡಿ ಒಳ್ಳೆ ನಿದ್ದೆ ಬರುತ್ತೆ ಮೈಕೈ ನೋವು ಹೋಗುತ್ತೆ ಅದಕ್ಕೆ ಮದ್ದು ಕೊಡ್ತೀನಿ ಈಗ  ಊಟ ಮಾಡಿ "ಅಂತಾ ಹೇಳಿ ಒಂದು ಲೋಟದಲ್ಲಿ  ತಿಳೀ ಸಾರಿನಂತಾ  ದ್ರವ ತಗೊಂಡು ಬಂದು  "ಸರ್ ಇದನ್ನು ಕುಡೀರಿ" ಅಂದ್ರೂ." ಏನ್ರೀ ಇದು ಅಂದೇ ಇದು "ಅಪ್ಪೆ ಹುಳಿ" ಅಂತಾ ಒಳ್ಳೆ ನಿದ್ದೆ ಬರುತ್ತೆ ಕುಡೀರಿ" ಅಂತಾ  ಏನೇನೋ ಹೇಳಿದ್ರು .ಸ್ವಲ್ಪ ಕುಡಿದೆ ರುಚಿಯಾಗಿತ್ತು  ಪೂರ್ತಿ ಕುಡಿದೆ  ಮಜವಾಗಿತ್ತು , ಕಟ್ ಮಾಡಿದ್ರೆ ನಾನು ನಿದ್ರಾ ದೇವಿಯ ಲೋಕದೊಳಗೆ ಲೀನವಾಗಿದ್ದೆ ' "ಸಾರ್ ಎದ್ದೇಳಿ  ಮಾಗೋಡು ಫಾಲ್ಸಿಗೆ  ಹೋಗೋಣ!!" ಅಂತಾ ಯಾರೋ ಕೂಗಿದ ಹಾಗೆ ಕೇಳಿಸಿತು ಎಚ್ಚರವಾಗಿ ನೋಡಿದ್ರೆ "ಏನ್ ಸಾರ್  ನಿನ್ನೆ  ರಾತ್ರಿ  ಎಂಟು ಘಂಟೆಗೆ ಮಲಗಿ ಇವತ್ತು   ಹನ್ನೊಂದು ಘಂಟೆಗೆ ಎದ್ದಿದ್ದೀರಾ!!!" ಅಂದ್ರು. ಆ ಅಂತಾ  ವಾಚ್   ನೋಡಿದ್ರೆ  ಹನ್ನೊಂದು ಅಂತಾ ಸಮಯ ತೋರಿಸಿ ವಾಚು "ಲೋ ಸೋಮಾರಿ" ಅಂತಾ  ನಕ್ಕಂತೆ ಅನ್ನಿಸಿತು.   ಹಿಂದಿನ ದಿನದ ಆಯಾಸ ಎಲ್ಲಾ ಪರಿಹಾರವಾಗಿ  ಮೈಯೆಲ್ಲಾ ಹಗುರವಾಗಿ  ಹೊಸ ಉಲ್ಲಾಸ ತುಂಬಿತ್ತು!!! ಹೊಸ ಚೈತನ್ಯ ದೊಡನೆ  ತಡಬಡಾಯಿಸಿ   ಎದ್ದು  ನೋಡಿದ್ರೆ ನನ್ನ ಗೆಳೆಯರ ಕಥೆಯೂ ಅಷ್ಟೇ ಆಗಿತ್ತು. ಮನೆಯಲ್ಲಿ ಹಬ್ಬದ ದಿನಗಳಲ್ಲಿ "ಗಸಗಸೆ  ಪಾಯಸ" ಕುಡಿದು  ನಿದ್ದೆ ತೆಗೆಯುತ್ತಿದ್ದವನಿಗೆ  ಈ "ಅಪ್ಪೆ ಹುಳಿ"   ನಾನು  "ಗಸಗಸೆ  ಪಾಯಸದ ಅಪ್ಪಾ" ಅಂತಾ ಪ್ರೂವ್ ಮಾಡಿತ್ತು. ಈ ರೀತಿ ಪರಿಚಯವಾದ "ಅಪ್ಪೆಹುಳಿ"   ಇವತ್ತಿಗೂ ನನ್ನ ಮೆಚ್ಚಿನ ಪಾನೀಯ ವಾಗಿದೆ. ಆನಂತರ ರೀ ರಾಜು ಈ ಅಪ್ಪೆ ಹುಳಿ ಮಾಡೋದು ಹೇಗ್ರೀ ಅಂದೇ ಅಂದು ಅವರು ಹೇಳಿದ್ದು ನನಗೂ ಸರಿಯಾಗಿ ಅರ್ಥ ಆಗಿರಲಿಲ್ಲ.

Tuesday, May 10, 2011

ಪಿ.ಯೂ.ಸಿ ಸ್ವಾಮೀ ಪಿ.ಯೂ.ಸಿ.!!!!! ಫಲಿತಾಂಶದ ಹಲವು ಮುಖಗಳು.

ಹೌದೂ ಸಾರ್ ಈಗ ಎಲ್ಲೆಲ್ಲೂ ಪಿ.ಯೂ.ಸಿ.ಜ್ವರ .ಇವತ್ತು ತಾನೇ ವೆಬ್ಸೈಟ್ ನಲ್ಲಿ ಪಿ.ಯೂ.ಸಿ. ಫಲಿತಾಂಶ ಹೊರ ಬಂದಿದೆ. ಬೆಳಿಗ್ಗೆ ಪೇಪರ್ ನಲ್ಲಿಯೂ ಇದೆ ವಿಚಾರ  ಇವತ್ತು ಸಂಜೆ ಪಿ.ಯೂ.ಸಿ.ಫಲಿತಾಂಶ ಪ್ರಕಟಣೆ ಆಗುತ್ತೆ ಅದಕಾಗಿ ಈ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಪಡೆಯಬಹುದು ಎಂದು ನಾಲ್ಕಾರು ವೆಬ್ ವಿಳಾಸ ನೀಡಿ ಸುದ್ದಿ ನೀಡಿ ಪಿ .ಯೂ.ಸಿ.ಪರೀಕ್ಷೆ ಬರೆದ ಹೈಕಳ ಹೃದಯ ಬಡಿತ ಜಾಸ್ತಿ ಮಾಡಿದ್ದವು. ಇನ್ನು ಟಿ.ವಿ.ಚಾನಲ್ ಗಳ ಸ್ಟೈಲೇ ಬೇರೆ ಬಿಡಿ. ಕನ್ನಡ ಸುದ್ದಿ ಚಾನಲ್ ನ  ನ್ಯೂಸ್ ನಲ್ಲಿ  ವರದಿಗಾರ್ತಿ  ಒಬ್ಬರು ರೈಲ್ವೆ ಹಳಿಗಳ ಹತ್ತಿರ ನಿಂತು ಕೊಂಡು ಹೇಳುತ್ತಿದ್ದರು '' ಇವತ್ತು ಪಿ.ಯೂ.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ  ಪರೀಕ್ಷೆಯಲ್ಲಿ  ಫೈಲ್ ಆದ ವಿಧ್ಯಾರ್ಥಿಗಳು  ಆತ್ಮಹತ್ಯೆಗೆ ಒಳಗಾಗುವ ಸಂಭವವಿದ್ದು  ಈ ಬಗ್ಗೆ ತಂದೆ ತಾಯಿಯರು  ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಸೂಕ್ತ" ವೆಂದು ಹೇಳುತ್ತಿದ್ದರು.ಅಲ್ಲಾ ಸ್ವಾಮೀ ಇದನ್ನು ಹೇಳಲು ರೈಲ್ವೆ ಹಳಿಯ ಬಳಿ ಹತ್ತಿರ ಯಾಕೆ  ಹೋಗಬೇಕೂ ??ಸುಮ್ಮನೆ ಸ್ಟುಡಿಯೋ  ದಲ್ಲೇ  ಇದನ್ನು  ಹೇಳಬಹುದಿತ್ತಲ್ವಾ ?? ಅನ್ನಿಸಿತು. 

                                                                                                      ೧}ನಮ್ಮ ಮನೆಯ ಹತ್ತಿರ  ಒಬ್ಬ ಅಂಗಡಿಯವರು  ಸಾರ್,  ಸ್ವೀಟ್ ತೆಗೊಳ್ಳಿ  ನನ್ನ ಮಗ ಬಸವರಾಜ ಪಿ.ಯೂ.ಸಿ.ಯಲ್ಲಿ ಹೆಚ್ಚು ಅಂಕ ಪಡೆದು ಪಾಸಾದ , ನಿಮಗೆ ಗೊತ್ತಲ್ಲಾ ಸಾರ್  "ನಾವು ಅಂತಾ ಸಿರಿವಂತರಲ್ಲಾ, ನಮಗೆ ನೆಟ್ಟಗೆ ವಿಧ್ಯೆ ಹತ್ತಲಿಲ್ಲ , ಓದುವ ವಯಸ್ಸಿನಲ್ಲಿ  ನಮ್ಮ ಮನೆಯಲ್ಲಿ ಕಡು ಬಡತನ,  ಹೊಟ್ಟೆ ತುಂಬಿದರೆ ಸಾಕಿತ್ತು  , ಅಪ್ಪನಿಗಿದ್ದ  ಸಂಪಾದನೆ ನಮ್ಮ ಸಂಸಾರ ತೂಗಿಸಲು ಆಗುತ್ತಿರಲಿಲ್ಲ , ಹಸಿವು ಬಡತನದಿಂದ  ನನ್ನ ವಿಧ್ಯೆ ನೈವೇಧ್ಯೆ ಆಗಿಹೋಯಿತು. ಅವತ್ತಿನ ಸಂಕಟಕ್ಕೆ ನನ್ನ ಮಗ ಇವತ್ತು ಸಮಾಧಾನ ಒದಗಿಸಿದ " ಅಂದ್ರೂ. ನಾನು ನೋಡಿದಂತೆ ಇವರ ಪರಿಚಯ ಮೂರು ವರ್ಷಗಳದ್ದು  ಇವರ ಮಗ ಬಸವರಾಜು ಪಾಪ ಯಾವಾಗಲೂ ಅಪ್ಪನಿಗೆ ಬೆನ್ನೆಲುಬಾಗಿ ಯಾವಾಗಲೂ ಅಂಗಡಿ ಕೆಲಸ ಮಾಡುತ್ತಿದ್ದ , ಕಾಲೇಜು ಬಿಟ್ಟರೆ  ಟ್ಯೂಶನ್ ಗೆ ಹೋಗಲು  ದುಡ್ಡಿರದಕಾರಣ ಅವನೇ ಓದಬೇಕಾಗಿತ್ತು, ಯಾವಾಗ ಓದುತ್ತಿದ್ದನೋ ಗೊತ್ತಿಲ್ಲಾ ಸರ್ಕಾರಿ ಕಾಲೇಜಿನಲ್ಲಿ ಓದಿ ಸಾಧಿಸಿದ್ದಾ !!!!    
 ೨}    ಅನತಿ ದೂರದಲ್ಲಿ ಒಂದು ಮನಯಲ್ಲಿ ಗಲಾಟೆ ನಡೆಯುತ್ತಿತ್ತು." ಲೇ  ಹಿಡ್ಕೊಳ್ಳೆ ಅವನ್ನ  ಇವತ್ತು ಹುಟ್ಲಿಲ್ಲಾ ಅನ್ನಿಸ್ಬಿಡ್ತೀನಿ "  "ಕೇಳಿದ್ದೆಲ್ಲಾ ಕೊಡ್ಸಿ ಹೊಸ ಬೈಕ್ ತೆಕ್ಕೊಟ್ಟು, ಸಾವಿರಾರು ರುಪಾಯಿ ಕೊಟ್ಟು ಪಾಠ ಹೇಳಿಸಿದರೆ  ಕಾಲೇಜಲ್ಲಿ ಮಜಾ ಮಾಡಿ ಪಿ.ಯೂ.ಸಿ.ಯಲ್ಲಿ  ಬರಿ ಐವತ್ತು ಪರ್ಸೆಂಟ್ ತಗೊಂಡಿದ್ದಾನೆ " ನಾಚಿಕೆ ಆಗೋಲ್ವಾ  ಸರೀಕರ ಎದುರು ನಮ್ಮ ಮರ್ಯಾದೆ ಮಣ್ಣು ಪಾಲಾಯ್ತು" ಅಂತಾ  ಅಪ್ಪಾ ಬಯ್ತಿದ್ರೆ , ಮಗಾ ಹೇಳಿದಾ ನೋಡಿ ಅಪ್ಪಾ  "ನೀವೇನು ನನ್ನ ಮೇಲಿನ ಪ್ರೀತಿಯಿಂದ ಇವೆಲ್ಲಾ ತೆಕ್ಕೊಟ್ಟಿಲ್ಲಾ, ನಾನು ಪಿ.ಯೂ.ಸಿ.ಪರೀಕ್ಷೆಯಲ್ಲಿ ಓಡುವ ಜೂಜಿನ ಕುದುರೆ ಅಂತಾ ತಿಳಿದು  ಕೊಡಿಸಿದ್ರೀ !!! "ನನ್ನ  ಮಾತು ನೀವು ಯಾವತ್ತಾದರೂ  ಕೇಳಿ ಮರ್ಯಾದೆ ಕೊಟ್ರಾ ?, ನಾನು ಪಿ.ಯೂ.ಸಿ.ಕಾಮರ್ಸ್ ತಗೋತೀನಿ ಅಂದೇ , ಆದ್ರೆ ನೀವು ನಾನು ಸೈನ್ಸೆ ಓದಬೇಕು ಅಂತಾ    ಹಟಾ          ಹಿಡಿದು ಬಲವಂತವಾಗಿ ಸೈನ್ಸ್ ಕೊಡ್ಸಿದ್ರೀ , ಈಗ ನನ್ನನ್ನೇ  ವಿಲನ್ ಮಾಡಿ ಅವಮಾನ ಮಾಡ್ತೀರಾ!!"   ಅಂತಾ ಆಳುತ್ತಾ ಆ ಹುಡುಗ ಹೇಳಿದ ಮಾತು ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ .


೩}ಕ್ಯಾತ :- " ಏನ್ಲಾ  ಆಯ್ತು ರಿಜಲ್ಟೂ??"  

   
 ತಿಮ್ಮ :-  " ಮೂರು ಹೋಗವೆ  ಮೂರು ಆಗವೆ ",       
    
 ಕ್ಯಾತ :- "ಓಗಿ ಎಲ್ಲಾರು  ಕುರಿ /ಎಮ್ಮೆ ಮೆಯ್ಸು   
  
   ತಿಮ್ಮ :-  ನಾನೇನು ಮಾಡನೇ " ಆ  ಹೆಣ್ಣು ಇಂಗ್ ಮಾಡ್ತು "                       


  ಕ್ಯಾತ :-   "ಆ ಕೋತಿ ನೆಮ್ಕಂಡು ಇನ್ಗಾದೆ ಅನ್ನು "                                      

ತಿಮ್ಮ :- "ಅನ್ಗೆಲ್ಲಾ ಅನ್ಬ್ಯಾಡಾ,   ಕ್ವಾಪಾ ಬತ್ತುದೆ ನಂಗೆ "                            

ಕ್ಯಾತ :- ಅವಳ್ದೆನಾಯ್ತು  ಪರೀಕ್ಸೆ??                                                            

ತಿಮ್ಮ :- "ನಮ್ ಸವಿತಾ    ಪ್ರಸ್ಟ್ ಕ್ಲಾಸ್ ಪಾಸು  ಕಣನ್ನೋ"                     

ಕ್ಯಾತಾ :- "ಸರಿ ಬುಡು ಅವ್ಳು ಮುಂದಕ್ಕೆ ಓದಿ ದೊಡ್ ಆಫಿಸರ್ ಆಗಿ ಬತ್ತಾಳೆ "  "ಇನ್ನು ನೀನು ನೆಟ್ಗೆ ಓದೋದ ಬುಟ್ಟು ಅವಳ ಹಿಂದೆ ನಾಯಿ ಯಂಗೆ ಅಲಿತಾ ಲವ್ವು ಅನ್ಕಂಡು ನೆಗೆದು ಬಿದ್ದು  ಪಿ.ಯೂ.ಸಿ.ಡುಮ್ಕಿ  ವಡಕಂಡೆ " "ಅವಳ್ತವೆ ಜವಾನಾ  ಆಯ್ತಿಯೇ ಬುಡು ನೀ ಅದಕ್ಕೆ ಲಾಯಕ್ಕೂ!!!"                                          

ತಿಮ್ಮ:- ಊ ಕಣಣ್ಣಾ ಅಂಗೆ ಆಗದೆ  ನಾ ಪೆಲಾದಾಗಿಂದ ಆ ಹೆಣ್ಣು ನನ್ ನೋಡ್ತಾನೆ ಇಲ್ಲಾ ಕಣಣ್ಣಾ ಅದ್ಕೆ  ಶಾನೆ ಬೇಜಾರಾಗಿ "ರಕ್ತ ಕಣ್ಣೀರು" ಪಿಚ್ಚರ್ ಗೆ ಹೊಂಟೆ, ಬಂದಿಯಾ ನೀನೂವೆ ??                                                                          

ಕ್ಯಾತ :- ಅಲ್ಲಾ ಕನ್ಲಾ  ಪಿ.ಯೂ.ಸಿ.ಪೇಲಾಗಿ ಇನ್ನೂ ಇನ್ಗಾಡ್ತಿಯಲ್ಲಾ ,ನಿಂಗೆ ಬುದ್ದಿ ಐತಾ  ??                                                                                             

ತಿಮ್ಮ :- ಏ ಬುಡು ಅಣ್ಣಾ  ಅದ್ಯಾಕೋ ಕಾಣೆ  ಓದುಕೇ ಅಂತಾ ಕುಂತಾಗ್ಲೆಲ್ಲಾ  ಪುಸ್ತಗ್ದಲ್ಲಿ ಅವಳೇ ಕಂಡು  ಅಕ್ಸರ ಕಾನ್ಸುದೆ ಇಲ್ಲಾ, ಅದ್ಕೆ ತೀರ್ಮಾನ ಮಾಡಿವ್ನಿ  ಮೊದ್ಲು ಲವ್ವು ಆಮೇಕೆ ಓದು, !!!   ಅಂತಾ  "ಪ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನನ್ನ ಬಾಳಿಗೆ" [ಹಾಡು ಹೇಳ್ತಾ ಮುಂದೆ ಹೊರಟ  ತಿಮ್ಮ]

Sunday, May 1, 2011

ನಗುವನ ಹಳ್ಳಿ " ಬೀ ಈಟರ್ " ಹಕ್ಕಿಯ ಹಿಂದೆ !!!! ನೆರೆದಿದೆ ನೋಡ ಛಾಯಾಗ್ರಾಹಕರ ಸಂತೆ !!!!!

ನಂಗೊಂದ್ ಚಿಟ್ಟೆ ನಿಂಗೊಂದ್ ಚಿಟ್ಟೆ
ಅದೊಂದು ಶನಿವಾರ ಮನೆಯಲ್ಲೇ ಕುಳಿತಿದ್ದವನಿಗೆ  ಗೆಳೆಯ ಸತ್ಯ  ಫೋನ್ ಮಾಡಿ ಬಾಲು "ನಾಳೆ ಎಲ್ಲಾರು ಹೋಗೋಣ ರೆಡಿ ಇರಿ" ಅಂದು   ಬನ್ನಿ ನಗುವನಹಳ್ಳಿಗೆ ಹೋಗೋಣ"ಅಂತಾ ಕರೆದರೂ."ಅಲ್ಲೇನ್ ಸಾರ್" ವಿಶೇಷ ಅಂತಾ ಮಾತಿಗೆ ಎಳೆದೆ "ಅಲ್ಲಿಗೆ ಪ್ರತೀವರ್ಷ ಈ ಸೀಸನ್ ನಲ್ಲಿ "ಬೀ ಈಟರ್ಸ್" ಇರ್ತಾವೆ ಫೋಟೋ ತೆಗೆಯೋಕೆ ಒಳ್ಳೆ ಅವಕಾಶ ಬನ್ನಿ ಅಂದ್ರೂ !!"ಸರಿ ನಡೀರಿ ಸಾರ್ ಅಂತಾ  ಹೇಳಿ, ನಾಳೆ ಎಷ್ಟೊತ್ತಿಗೆ ಅಂದ್ರೆ ಬೆಳಿಗ್ಗೆ ಐದು ಘಂಟೆಗೆ ಮನೆಬಿಟ್ಟು ನಮ್ಮ ಮನೆಗೆ ಬಂದ್ಬಿಡಿ" ಅಂದ್ರೂ !!! ನಗುವನ ಹಳ್ಳಿ ಬಗ್ಗೆ ಸ್ವಲ್ಪ ಹೇಳ್ತೀನಿ ಕೇಳಿ ಈ ಊರು ಮಂಡ್ಯಾ ಜಿಲ್ಲೆಯ  ಶ್ರೀ ರಂಗ ಪಟ್ಟಣ ತಾಲೂಕಿನ ಒಂದು ಗ್ರಾಮ , ಶ್ರೀ ರಂಗ ಪಟ್ಟಣದಿಂದ ಸುಮಾರು ಆರು ಕಿ.ಮಿ. ಇದೆ. ಮೈಸೂರಿನಿಂದ ಸುಮಾರು ಹನ್ನೆರಡು ಕಿ.ಮಿ.ಇದೆ. ಕಾವೇರಿಯ ತಟದಲ್ಲಿ ಈ ಊರಿಗೆ ಸಂಬಂಧಿಸಿದ ಜಮೀನುಗಳಿದ್ದು   ಇಲ್ಲಿ " BLUE -TAILED BEE EATER"[ ಕನ್ನಡ ದಲ್ಲಿ" ಜೇನು ಹಿಡುಕ'  , "ಚಿಟ್ಟೆ ಹಿಡುಕ"  ಹಕ್ಕಿಅನ್ನುತಾರೆ.ನಾವು "ಬೀ ಈಟರ್ " ಹಕ್ಕಿ ಅನ್ನೋಣ ಬಿಡಿ].ಹಕ್ಕಿಗಳು  ಕಾಣ ಸಿಗುತ್ತವೆ.ಮಾರ್ಚಿ ಯಿಂದ ಮೇ  ಅಂತ್ಯದವರೆಗೆ  ಅವುಗಳ ಸಂತಾನ ಕ್ರಿಯೆ ಪ್ರಾರಂಭ ಆದ ಕಾರಣ ಬಹಳಷ್ಟು ಜನ ಇಲ್ಲಿಗೆ ಛಾಯಾಗ್ರಾಹಕರಿಗೆ ಇದು ನೆಚ್ಚಿನ ತಾಣ. ಇಲ್ಲಿ ತೆಗೆದ ಎಷ್ಟೋ  "ಬೀ ಈಟರ್ ಹಕ್ಕಿ" ಚಿತ್ರಗಳು ಹಲವಾರು ದಿನಪತ್ರಿಕೆ  /ವಾರಪತ್ರಿಕೆ ಗಳಲ್ಲಿ ಪ್ರಕಟಗೊಂಡಿವೆ, ಹಾಗು ಇಲ್ಲಿ ತೆಗೆದ"ಬೀ ಈಟರ್ ಹಕ್ಕಿ" ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ.

ಸ್ವಲ್ಪ ಕಟ್ ಮಾಡಿದ್ರೆ ಮಾರನೆಯ ದಿನ ಭಾನುವಾರ ಮುಂಜಾನೆ ಬೆಳಿಗ್ಗೆ ಆರು ಘಂಟೆಗೆ ನಗುವನಹಳ್ಳಿ ಕಾವೇರಿ ತೀರಕ್ಕೆ ಪ್ರವೇಶ !!!! ಆ ಪ್ರದೇಶ ಸೇರುತ್ತಿದ್ದಂತೆ ಸ್ವಾಗತ ಕೋರಿದ್ದು ಎರಡು ವ್ಯಾಗನ್ ಆರ್ ಕಾರುಗಳು ಹಾಗು ಕೆಲವು ಛಾಯ ಗ್ರಾಹಕರು.                        
ಊಟ, ತಿಂಡಿ,ಮಾಡುವ ಮನೆ  ಸ್ಟುಡಿಯೋ ,ವಿಶ್ರಾಂತಿ ಮಂದಿರ ಎಲ್ಲಾ ಕಾರುಗಳೇ!!!
ಹಕ್ಕಿಗಳಿಗೆ  ತಿರುಮಂತ್ರ  ಸುಂದರ ಚಿತ್ರಗಳ ತೆಗೆಯುವ ತಂತ್ರ !!!
ಹಾಗೆ ಮುಂದುವರೆದ ನಮಗೆ ಕಂಡಿದ್ದು  ಒಬ್ಬ ಛಾಯ ಗ್ರಾಹಕರು  ಹಕ್ಕಿಗೆ ಕಾಣದಂತೆ ಮರೆಯಾಗಿ  ಫೋಟೋ ತೆಗೆಯಲು  ಸಣ್ಣ ಟೆಂಟು ನಿರ್ಮಿಸುತ್ತಿದ್ದರು. ಇಂತಹ ಹಲವಾರು ಟೆಂಟು ಗಳು ದೂರಕ್ಕೆ ಯಾವುದು ಮಿಲಿಟರಿ ಕ್ಯಾಂಪ್ ಇರಬೇಕೂ ಅನ್ನಿಸುವಂತೆ ಕಾಣುತಿತ್ತು . 
ಉಶ್  ಗಲಾಟೆ ಮಾಡ್ಬೇಡಿ ಪ್ಲೀಸ್ !!!
ಹತ್ತಿರದಲ್ಲಿ ಒಂದು ಗುಂಪು  ತಮ್ಮ ಕ್ಯಾಮರಾಗಳನ್ನು  ಟ್ರೈ ಪಾಡಿಗೆ  ಫಿಟ್ ಮಾಡಲು ಪ್ರಯತ್ನಿಸುತ್ತಿದ್ದರು. ಸ್ವಲ್ಪ ಗದ್ದಲವಿತ್ತು ಬಹುಷಃ ಹೊಸಬರು ಇರಬೇಕು ಅನ್ನಿಸಿತು. ಇವರನ್ನು ದಾಟಿ ಮುಂದೆ ಹೋದೆ.ಅನತಿ ದೂರದಲ್ಲಿ ಹಕ್ಕಿಗಳ ಚಲನ ವಲನ ಗಮನಿಸುತ್ತಾ ತಮಗೆ ಬೇಕಾದ ಸನ್ನಿವೇಶಕ್ಕಾಗಿ   ಕಾದ  ಇಬ್ಬರು ಛಾಯಾಗ್ರಾಹಕರು ಕಾಣಿಸಿದರು.ಅವರಿಗೆ ಸ್ವಲ್ಪ ಸಮೀಪ ಒಂದು ಹಕ್ಕಿ ಕುಳಿತಿತ್ತು  ಸತ್ಯ ಅದನ್ನು ತೋರಿಸಿ ಬಾಲು ಅದೇ "ಬೀ ಈಟರ್ " ಹಕ್ಕಿ ಅಂದ್ರೂ. ಹಕ್ಕಿಗಳ ಛಾಯ ಚಿತ್ರ ತೆಗೆಯುವುದು ಬಹಳ ಕಷ್ಟದ ಕೆಲಸ ತಪಸ್ಸಿನಂತೆ ಏಕಾಗ್ರತೆಯಿಂದ ಘಂಟೆಗಟ್ಟಲೆ ಕಾಯಬೇಕಾಗುತ್ತದೆ.ಕೆಲವೊಮ್ಮೆ  ಕಾದ ಬಳಿಕವೂ ನಿಮಗೆ ಉತ್ತಮ ಚಿತ್ರ ಬರದೆ ನಿಮ್ಮ ಸಹನೆ ಪರೀಕ್ಷೆಯಾಗುವುದೂ ಉಂಟು. ಒಟ್ಟಿನಲ್ಲಿ ಈ ಸನ್ನಿವೇಶ ಮನುಷ್ಯರಿಗೆ ತಾಳ್ಮೆ ಕಲಿಸುತ್ತದೆ.
 ಪಕ್ಷಿ ಛಾಯಾಗ್ರಹಣ ಒಂದು ತಪಸ್ಸಿನಂತೆ 

"ನಾನೇ ರೀ" ಬೀ ಈಟರ್ ಹಕ್ಕಿ ಅಂದ್ರೆ

ಎಲ್ಲಿವೆ  ಬೀ ಈಟರ್ ಹಕ್ಕಿಗಳು.
ಅಲ್ಲಿ ಅಲ್ಲಿ ಕುಳಿತಿವೆ  ನೋಡಿ  !!!
ಎಲ್ಲರೂ ನಿಶ್ಶಬ್ದವಾಗಿ ನಮ್ಮ ನಮ್ಮ ಕಾರ್ಯ ದಲ್ಲಿ ತಲ್ಲೀನರಾಗಿ ಫೋಟೋ ತೆಗೆಯುವ ಕಾಯಕ ನಡೆಸಿದ್ದೆವು.
ಹಾಗೆ ನನಗೆ ಅನುಕೂಲಕರ ಜಾಗ ಹುಡುಕುವ ಸಮಯದಲ್ಲಿ  ಅಚ್ಚರಿಯಂತೆ ಕಂಡುಬಂದಿದ್ದು ಕ್ಯಾಮರ ದಿಂದ ಹೊರತೆಗೆದ ಉಪಯೋಗಿಸಿದ ಸೆಲ್ ಅನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ಯಾರೋ ಪಕ್ಷಿಪ್ರಿಯ ಫೋಟೋ ಗ್ರಾಫಾರ್!!!!!  ಬೇಸರ ದಿಂದ ಅದನ್ನು ನನ್ನ ಬ್ಯಾಗಿಗೆ  ಸೇರಿಸಿ  ಮುಂದುವರೆದೆ ಸ್ವಲ್ಪ ದೂರದಲ್ಲಿ ಕಂಡ ನೆಲದ ಬಿಲದಲ್ಲಿ ಹಕ್ಕಿ ಗೂಡೆಂದು  ಇಣುಕಿ ನೋಡಿದರೆ ಅಲ್ಲಿಯೂ  ನನ್ನನ್ನು ಅಣಕಿಸಿ ನಗುತಿತ್ತು  ಮತ್ತೊಂದು ಸೆಲ್ಲು !!!!  ಅನತಿ ದೂರದಲ್ಲಿ  ತಿಂದು ಉಂಡು ಬಿಸಾಕಿದ ಪ್ಲಾಸ್ಟಿಕ್  ಕವರ್ಗಳು, ಸಾಚೆಟ್ ಗಳು, ಇನ್ನೂ ಹಲವಾರು ತ್ಯಾಜ್ಯ ವಸ್ತುಗಳು ಕಂಡು ಬಂತು !!!
"ಇದರಲ್ಲಿ ನಮ್ಮ ತಪ್ಪಿಲ್ಲಾ  ನಮ್ಮನ್ನುಮನುಷ್ಯರು ಎಸೆದುಹೊಗಿದ್ದಾರೆ" ಅಂದವು ಈ ಸೆಲ್ಲುಗಳು

ಹಕ್ಕಿ ಗೂಡಿನೊಳಗೆ ನಕ್ಕ ಈ ಸೆಲ್ಲು ನನ್ನನ್ನು ನೋಡಿ  ಅಣಕಿಸಿತು.

ಒಮ್ಮೆ ನನಗೋ ಅಚ್ಚರಿ , ನಾವೆಲ್ಲಾ  ಈ ಸುಂದರ ಪರಿಸರ ಹಾಳುಮಾಡಿ  ಹಕ್ಕಿಗಳ ಚಿತ್ರ ತೆಗೆದು ಪತ್ರಿಕೆಗಳಲ್ಲಿ ,  ದೇಶ, ವಿದೇಶಗಳ ಸ್ಪರ್ಧೆಗಳಲ್ಲಿ  ಪ್ರಕಟಿಸಿ  ಹೆಸರು ಹಣ ಗಳಿಸಲು ಹಾ ತೊರೆಯುತ್ತಿರುವ  ಖಳನಾಯಕರೆ ಇರಬೇಕು ಅನ್ನಿಸುತಿತ್ತು.ಪರಿಸರ ರಕ್ಷಕರೆಂದು  ವಿಶ್ವಕ್ಕೆ ಹಕ್ಕಿಗಳ ಬಗ್ಗೆ ಮಾಹಿತಿ ನೀಡುವೆ ಎಂದು ಹೆಮ್ಮೆ ಪಡುವ ನಾವು  ಮಾಡುತ್ತಿರುವ ಇಂತಹ ಕೆಲಸ ಪರಿಸರಕ್ಕೆ ಮಾಡುತ್ತಿರುವ ಅಪಕಾರ ಅನ್ನಿಸತೊಡಗಿತು.ಮತ್ತೊಮ್ಮೆ ಯಾರೋ ಕೆಲವರು ಮಾಡಿರಬಹುದಾದ ಕೆಲಸಕ್ಕೆ ಎಲ್ಲರನ್ನು ಯಾಕೆ ತೆಗಳಬೇಕೂ ಅನ್ನಿಸಿತು. ಆದರೂ  ಪರಿಸರ ಕಾಳಜಿ ಇರುವ ಗೆಳೆಯರು ಈ ಪ್ರದೇಶದಲ್ಲಿ ಹರಡಿರುವ ತ್ಯಾಜ್ಯ ವಸ್ತುಗಳನ್ನು ತೆಗೆಯುವ ಕಾರ್ಯಕ್ರಮ ಹಾಕಿ ಕೊಳ್ಳುವುದು ಒಳ್ಳೆಯದು.ಎಲ್ಲರು ಕೈಜೋಡಿಸಿದರೆ ಇದು ಅಸಾಧ್ಯದ ಕಾರ್ಯವಲ್ಲ .
ಬೇಸರ ಗೊಂಡ ಮನಸ್ಸಿಗೆ ಮುದನೀದಲೋ ಎಂಬಂತೆ  ಕಾವೇರಿ ಅಲ್ಲಿಯೇ ಜುಳು ಜುಳು ನಾದ ಹೊಮ್ಮಿಸುತ್ತಾ ಹರಿದಿದ್ದಳು. ಹಾಗೆ ಕ್ರಮಿಸಿದ ನಾನು ಎಲ್ಲರಿಂದ ದೂರವಾದ  ನಿಶಬ್ದವಾದ ಒಂದು ಜಾಗ ಹುಡುಕಿ ಕೊಂಡೆ  ನನ್ನ ಅದೃಷ್ಟಕ್ಕೆ ಬೀ ಈಟರ್ ಗಳು  ನನ್ನ ಕ್ಯಾಮರ ಮುಂದೆ ಸಹಕರಿಸಿ ಹೊಸ ಲೋಕವನ್ನು ತೆರೆದವು. ಈ  ಸುಂದರ ಹಕ್ಕಿಯ ಮಾಯಾ ಜಾಲದೊಳಗೆ ನಾ ಕಳೆದು ಹೋದೆ  ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ. " BLUE -TAILED BEE EATER"[ ಕನ್ನಡ ದಲ್ಲಿ" ಜೇನು ಹಿಡುಕ'  , "ಚಿಟ್ಟೆ ಹಿಡುಕ" } ಸಾಮಾನ್ಯವಾಗಿ ರೆಕ್ಕೆ ಹಾಗು ನೆತ್ತಿ ಕಂಡು ಹಸುರು ಬಣ್ಣ ಹೊಂದಿದ್ದು,ಕಣ್ಣು ಹಾಗು ಕೊಕ್ಕಿನ ಭಾಗ ಕಪ್ಪು ಬಣ್ಣ ಕಂಡು ಬರುತ್ತದೆ.ಎದೆಯ ಭಾಗ ಕಂಡು ಬಣ್ಣ ಹೊಂದಿದ್ದು ಬಾಲದ  ಪುಕ್ಕಗಳು ನೀಲಿ ಬಣ್ಣ ಹೊಂದಿದ್ದು ಈ ಹಕ್ಕಿಗೆ ಬಣ್ಣಗಳ ಸುಂದರ ಅಲಂಕಾರ ನೀಡಿರುತ್ತದೆ. ಈ ಹಕ್ಕಿ ಗಳು ನೆಲದಲ್ಲಿ ಬಿಲ/ಪೊಟರೆ ಯಲ್ಲಿ   ವಾಸ ಮಾಡುತ್ತವೆ " ಹಾಗು ಇವು ಗುಂಪುಗಳಲ್ಲಿ ವಾಸ ಮಾಡುತ್ತವೆ,ಇವುಗಳು ಮರ ಗಳಿಂದ  ಹಾರುವ ಕೀಟ,ಹಾರುವ ಚಿಟ್ಟೆಗಳನ್ನು ಕೊಕ್ಕಿನಲ್ಲಿ ಹಿಡಿದು  ಗಿಡಗಳಿಂದ  ಚಾಚಿದ  ಕಡ್ಡಿಗಳ ಮೇಲೆ ಕುಳಿತು  ಕುಕ್ಕಿ ಕುಕ್ಕಿ ತಿನ್ನುತ್ತಾ ಇರುವುದನ್ನು ಕಾಣ ಬಹುದು.ನನ್ನ ಕ್ಯಾಮರಾ ಕಣ್ಣಿಗೆ ಬೀ ಈಟರ್ ಹಕ್ಕಿ ಪೋಸ್ ನೀಡಿದ್ದು ಹೀಗಿತ್ತು.

ನಾನು " BLUE -TAILED BEE EATER"[ ಕನ್ನಡ ದಲ್ಲಿ" ಜೇನು ಹಿಡುಕ'  , "ಚಿಟ್ಟೆ ಹಿಡುಕ" }

ವಾಹ್   ಎಂತಹ ಚಿಟ್ಟೆ !!!!

ಯಾರಲ್ಲಿ ????

ನಗೊಂದ್ ಚಿಟ್ಟೆ ನಿಂಗೊಂದ್ ಚಿಟ್ಟೆ

ಹೆಲಿಕಾಪ್ಟರ್  ಚಿಟ್ಟೆ  ನನಗೆ ಬಹಳ ಇಷ್ಟಾ

ನನ್ನ ಸಂದರ್ಶನ ಬೇಡಪ್ಪಾ

ಇಂದೆನಗೆ ಆಹಾರ ಸಿಕ್ಕಿತು.

ಯಾವ ಚಿಟ್ಟೆ ಯಾವ ಹಕ್ಕಿಗೋ

ಮನುಷ್ಯರ ಕಾಟ ತಪ್ಪಿಸಲು ಹಕ್ಕಿಗಳು ನಡೆಸಿರುವ ಸಭೆಯೇ ???

                                "ಹಕ್ಕಿ ಚಿತ್ರ ಹೆಕ್ಕಲು ಕಾಯ್ದ  ಛಾಯಾ ಸುರರು"