Sunday, December 30, 2012

ಶಿಂಷಾ ಕಾಡಿನ ಅಲೆದಾಟ ....೦೪ [ ಅಂತಿಮ ಸಂಚಿಕೆ ]ಹಕ್ಕಿಗಳ ಹುಡುಕಾಟ, ಉಳುಬ ಹಳ್ಳದ ಕಣಿವೆಯ ಸುಂದರ ನೋಟ.!!!!


ಸನ್ ಬರ್ಡ್ 


ಚುಕ್ಕೆ  ಮುನಿಯ 


ಕಳೆದ ಸಂಚಿಕೆಯಲ್ಲಿ  ವಿವರಿಸಿದಂತೆ  ಚಿಪ್ಪು ಹಂದಿಯ ಘಟನೆ ನೋಡಿ ಮನಸು ವ್ಯಾಕುಲ ಗೊಂಡಿತ್ತು, ರೆಸಾರ್ಟಿಗೆ ವಾಪಸ್ಸು ಬಂದು ಸ್ವಲ್ಪ ಹೊತ್ತು  ಕುಳಿತು ವಿಶ್ರಮಿಸಿದೆವು. ದೈನಂದಿನ ಕಾರ್ಯಕ್ರಮ ಮುಗಿಸಿ, ನಮ್ಮ ಸುತ್ತ ಮುತ್ತ ಇದ್ದ ಪ್ರದೇಶದಲ್ಲಿ ಕೆಲವು ಸಮಯ ಪಕ್ಷಿ ವೀಕ್ಷಣೆ ಮಾಡಿದೆವು,ಬೆಳಗಿನ ತಂಪಾದ ವಾತಾವರಣದಲ್ಲಿ  ನಮಗೆ ಹಲವು ಪಕ್ಷಿಗಳ ದರ್ಶನ ಭಾಗ್ಯ ಲಭಿಸಿತು.ಸನ್ ಬರ್ಡ್, ಮೈನಾ , ಚುಕ್ಕೆ ಮುನಿಯ ಬೀ  ಈಟರ್, ಮುಂತಾದ ಹಲವಾರು ಪಕ್ಷಿಗಳನ್ನು ಕಂಡೆವು, ಬಹಳಷ್ಟು ನಮ್ಮ ಕ್ಯಾಮರದಲ್ಲಿಸೆರೆಯಾದವು .


ಉಳುಬ ಹಳ್ಳ ಕಣಿವೆ 

ಉಳುಬ  ಹಳ್ಳದ   ಜಲಪಾತ 

ಮುಂದಿನ ಕಾರ್ಯಕ್ರಮದ ಸಿದ್ದತೆಗಾಗಿ ತಯಾರಿ ನಡೆಸಿದೆವು, ಬೆಳಗಿನ ಉಪಹಾರ ಮುಗಿಸಿ, ಶಿಂಷಾ ಜಲಪಾತ ದ ಕಡೆ ನಮ್ಮ  ತಂಡ  ಹೊರಟಿತು, ಶಿಂಷಾ  ಕಾಲೋನಿಯ ಪ್ರವೇಶ ದ್ವಾರದ ಪಕ್ಕದಲ್ಲಿ ಎಡಕ್ಕೆ ಸಾಗುವ ಹಾದಿಯಲ್ಲಿ ಹೊರಟೆವು, ಕಡಿದಾದ ಅಂಕು ಡೊಂಕಿನ   ಪ್ರಪಾತದಂತಹ ಇಳಿಜಾರಿನಲ್ಲಿ  ಹೊರಟ ನಮಗೆ  ಮೊದಲು ಕಂಡಿತ್ತು ಈ ಉಳುಬ ಹಳ್ಳ [ಇದನ್ನು ಹಂದಿ ಹಳ್ಳ  ಅಂತಾನೂ ಕರೀತಾರೆ]. ಶಿಂಷಾ ಊರಿನ ಸುತ್ತಾ ಗುಡ್ಡ ಬೆಟ್ಟ ಹಾಗು ಕಾಡನ್ನು ಪ್ರಕೃತಿ  ಕೊಡುಗೆಯಾಗಿ ನೀಡಿದೆ,  ಮಳವಳ್ಳಿ ಸಮೀಪವಿರುವ  ಮಾರೆಹಳ್ಳಿ ಕೆರೆ ಬಹಳ ವಿಶಾಲವಾದ ಕೆರೆ , ಅಲ್ಲಿಂದ ಒಂದು ನೀರಿನ ಹಳ್ಳ ಅಥವಾ ಸಣ್ಣ ನೀರಿನ ಜರಿ   ಸಣ್ಣ ನದಿಯಂತೆ ಮಾರ್ಪಟ್ಟು  ಹರಿಯುತ್ತದೆ. ಅದನ್ನು ಇಲ್ಲಿನ  ಸ್ಥಳೀಯರು ಹಂದಿ ಹಳ್ಳ ಎನ್ನುತ್ತಾರೆ. ಆ ಹಂದಿ ಹಳ್ಳದ ನೀರು  ಮಾರೆ ಹಳ್ಳಿ ಕೆರೆಯಿಂದ  ಹರಿದು ಇಲ್ಲಿನ ಶಿಂಷಾ ನದಿಯನ್ನು ಸೇರುತ್ತದೆ.  ದಾರಿಯ ನಡುವೆ ಇಲ್ಲಿನ ಕಣಿವೆಯಲ್ಲಿ ಸಣ್ಣ ಜಲಪಾತ ವಾಗಿ ದುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಇಲ್ಲಿ ಜಲಪಾತದ  ಅದ್ಭತ ನೋಟವನ್ನು ಕಾಣಬಹುದು. ಕಣಿವೆಯ ನೋಟ ಹಾಗು ಜಲಪಾತದ ದರ್ಶನ ಪಡೆದ ನಾವು  ಮುಂದೆ ಸಾಗಿದೆವು.



ಜಲಪಾತಕ್ಕೆ ಸಾಗುವ ಹಾದಿ 


ಅಂಕು ಡೊಂಕಿನ ಕಡಿದಾದ ಅಪಾಯದ  ಹಾದಿ, ಸ್ವಲ್ಪ ಜಾರಿದರೂ ಪ್ರಪಾತ ಕಾಣುವುದು ಗ್ಯಾರಂಟೀ .ಈ ರಸ್ತೆಯನ್ನು ಬಹುಷಃ  ಜಲ ವಿದ್ಯುತ್ ಯೋಜನೆ ನಿರ್ಮಾಣ ಸಮಯದಲ್ಲಿ  ದೊಡ್ಡ ದೊಡ್ಡ ಯಂತ್ರಗಳನ್ನು ಸಾಗಿಸಲು  ಮಾಡಿರಬಹುದು. ಅಂದಿನವರ ಸಾಹಸಕ್ಕೆ  ಮನದಲ್ಲಿ ಕೃತಜ್ಞತೆ ಮೂಡಿತು. ಇಳಿಜಾರಿನ ಹಾದಿಯಲ್ಲಿ ನಮ್ಮ ಕಾರುಗಳು ಇಳಿದವು.



ಜಲ ವಿಧ್ಯುತ್ ಉತ್ಪಾದನಾ ಕೇಂದ್ರ 

ರಾಜ ಲಾಂಛನ ಹೊತ್ತ ಕಟ್ಟಡ 


ಪೂರ್ಣವಾಗಿ  ಗುಡ್ಡ/ಬೆಟ್ಟ ಗಳನ್ನು  ಇಳಿಯುತ್ತಿದ್ದ ನಾವು  ದೂರದಲ್ಲೇ  ಶಿಂಷಾ ಜಲ ವಿಧ್ಯುತ್ ಉತ್ಪಾದನಾ ಕೇಂದ್ರ ದ ದರ್ಶನ ಮಾಡಿದೆವು. ೧೯೩೯ ರಲ್ಲಿ ನಿರ್ಮಿತವಾದ ಈ  ಕಟ್ಟಡ  ಮೈಸೂರಿನ ಅರಸರ ರಾಜ ಲಾಂಛನ ಹೊತ್ತು ಮೆರೆದಿದೆ. ಈ ಕಟ್ಟಡದಲ್ಲಿ  ಹಲವು ದಶಕಗಳಿಂದ ಜಲ ವಿಧ್ಯುತ್  ಯೋಜನೆಯಲ್ಲಿ  ವಿಧ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿನ  ಜನರೇಟರ್  ತಾಂತ್ರಿಕತೆ ಎಂತಹವರನ್ನೂ ಬೆರಗು ಗೊಳಿಸುತ್ತದೆ. ಪೂರ್ಣವಾಗಿ ಗುಡ್ಡ /ಬೆಟ್ಟ ಇಳಿದು ಕಾರನ್ನು ನಿಲ್ಲಿಸಿ,  ಶಿಂಷಾ  ಜಲಪಾತ ನೋಡಲು ಸಾಗಿದೆವು.  ಸಾಗಿದ ಹಾದಿ, ಕಾಡಿನಿಂದ ಕೂಡಿತ್ತು,




ಟ್ರಾಲಿಗಳು ಸಾಗುವ ಹಾದಿ 


ಸಾಗಿದ ಹಾದಿಯಲ್ಲಿ ಒಂದು ಕಡೆ ಟ್ರಾಲಿ ಮಾರ್ಗದ  ದರ್ಶನ ವಾಯಿತು .ವಿಧ್ಯುತ್ ತಯಾರಿಕಾ ಕೇಂದ್ರಕ್ಕೆ ಕಾರ್ಮಿಕರನ್ನು ಕರೆದೊಯ್ಯಲು ಈ ಟ್ರಾಲಿ ವ್ಯವಸ್ತೆ ಮಾಡಲಾಗಿದೆ. ಮೊದಲು ಪ್ರವಾಸಿಗಳೂ ಸಹ ಈ ಟ್ರಾಲಿ ಗಳಲ್ಲಿ  ಇಳಿದು  ವಿಧ್ಯುತ್ ಉತ್ಪಾದನೆ  ನೋಡಬಹುದಿತ್ತು, ನಂತರ ಇತ್ತೀಚಿಗೆ ಕೆಲವು ವರ್ಷಗಳಿಂದ  ಭದ್ರತೆ ದೃಷ್ಟಿಯಿಂದ ಇಲ್ಲಿಗೆ ಪ್ರವಾಸಿಗಳ  ಭೇಟಿಗೆ   ನಿರ್ಬಂಧ ವಿಧಿಸಲಾಗಿದೆ.ಚಿಕ್ಕವಯಸ್ಸಿನಲ್ಲಿ ನಾನೂ ಸಹ ಟ್ರಾಲಿಯಲ್ಲಿ ಹಲವಾರು ಸಾರಿ ಕುಳಿತು ಖುಶಿಪತ್ತಿದ್ದ ದಿನಗಲಿ ಜ್ಞಾಪಕಕ್ಕೆ ಬಂದವು.


ತೂಗು ಸೇತುವೆ.


ತೂಗು ಸೇತುವೆಯ ಹಾದಿಯಲ್ಲಿ 


ಮುಂದೆ ಸಾಗಿದ ನಾವು  ಮರಗಳು ಹಾಗು ಪೊದೆಗಳಿಂದ ಕೂಡಿದ ಕಾಡಿನ ಹಾದಿಯಲ್ಲಿ ಸ್ವಲ್ಪ ದೂರ ಸಾಗಿದರೆ ನಮಗೆ ಒಂದು ತೂಗು ಸೇತುವೆ ಸಿಕ್ಕಿತು. ಅದನ್ನೂ ಸಹ  ಸುಮಾರು ದಶಕಗಳ ಹಿಂದೆಯೇ ನಿರ್ಮಿಸಲಾಗಿದ್ದು,  ಬಲಿಷ್ಟವಾಗಿದೆ. ಹಲವು ಜನರು ಒಟ್ಟಿಗೆ ನಡೆದರೂ  ಅಲ್ಲಾಡದ ಇದರ ತಾಂತ್ರಿಕತೆ ಎಂತಹವರನ್ನೂ ಬೆರಗುಗೊಳಿಸುತ್ತದೆ.



ಕೊಂಡದಮ್ಮ   ಬಯಲು ದೇವಾಲಯದ ಮೆಟ್ಟಿಲು.


ತೂಗುಸೇತುವೆ ದಾಟಿ ಮುಂದೆ ಬಂದ  ನಮಗೆ ಒಂದು ಕಮಾನಿನ  ಕೆಳಗೆ ಬಣ್ಣ ಬಣ್ಣದ ಮೆಟ್ಟಿಲುಗಳು ಕಾಣಿಸಿತು. ಈ ಪ್ರದೇಶವನ್ನು ಶ್ರೀ ಕೊಂಡದಮ್ಮ  ದೇವಾಲಯ ಎನ್ನುತ್ತಾರೆ. ಇದೊಂದು ಬಯಲು ದೇವಾಲಯ , ಕೆಳಗೆ ಪಾದುಕೆಗಳಿದ್ದು ಕಾಮಾನಿನ  ಕೆಳಗೆ ಬಣ್ಣ ಬಣ್ಣ ದ ಮೆಟ್ಟಿಲುಗಳಿವೆ. ಹಸಿರ ಪ್ರಕೃತಿಯ ನಡುವೆ ಬಣ್ಣ ಬಣ್ಣದ ಮೆಟ್ಟಿಲುಗಳು  ಯಾವುದೋ ಸಿನಿಮಾ ತೆಗೆಯಲು ಸೆಟ್ಟಿಂಗ್  ಹಾಕಿದ್ದಾರೆ ಅನ್ನುವ ಭಾವನೆ ಮೂಡಿಸಿತ್ತು.  ಮೆಟ್ಟಿಲು ಹತ್ತಿ ಮೇಲೆ ಹೋದರೆ ಕೆಲವು ಮೂರ್ತಿಗಳು ಕಂಡು ಬರುತ್ತವೆ, ಮೂರ್ತಿಗಳಿಗೆ ರಕ್ಷಣೆ  ಕೊಡಲು ಯಾವುದೇ ಕಟ್ಟಡ/ಚಾವಣಿ  ಇಲ್ಲ, ಬಯಲಿನಲ್ಲೇ ಇವೆ. ಈ ದೇವರಿಗೆ ಸುತ್ತ ಮುತ್ತಲಿನ ಹಲವು ಗ್ರಾಮಗಳ, ಹಾಗು ಮಳವಳ್ಳಿಯ ಕಡೆ ಬಹಳಷ್ಟು ಜನ ಭಕ್ತಾದಿಗಳು ಇದ್ದಾರೆ. ಅವರೆಲ್ಲಾ ಇಲ್ಲಿ ಬಂದು  ದೇವರಿಗೆ ಪೂಜೆ ಮಾಡಿ ಬಹಳಷ್ಟು ಜನ ಕೋಳಿ,  ಕುರಿ ಮುಂತಾದ ಹರಕೆ ಕಾಣಿಕೆ ಸಲ್ಲಿಸಿ , ಇಲ್ಲೇ ಅಡಿಗೆ ಮಾಡಿಕೊಂಡು ಉಂಡು  ತೆರಳುತ್ತಾರೆ.


ಜಲಪಾತ ನೋಡಲು ಸಾಗಬೇಕಾದ ಹಾದಿ 


ಇಲ್ಲಿಂದ ಮುಂದೆ ಕಾಡಿನಲ್ಲಿ ಕಲ್ಲು ಬಂಡೆ ಗಳಿಂದಾ , ದೊಡ್ಡ ದೊಡ್ಡ ಮರಗಳ ಬೇರಿನಿಂದ ಕೂಡಿದ  ಹಾದಿ , ಚಪ್ಪಲಿ/ ಬೂಟು ಹಾಕಿದ್ದರೆ  ಜಾರುತ್ತದೆ , ಹುಷಾರಾಗಿ ಹೆಜ್ಜೆ  ಹಾಕುತ್ತಾ  ಸಾಗಿದೆವು. ಇಂತಹ ಹಾದಿಯಲ್ಲೂ ನನ್ನ ಕ್ಯಾಮರಾ ಪ್ರಕೃತಿಯನ್ನು ಸೆರೆ ಹಿಡಿಯಲು ಹಾತೊರೆಯುತ್ತಿತ್ತು. ದಾರಿಯಾಲಿ ಸಾಗುತ್ತಿದ್ದ ನಮಗೆ  ಜುಳು ಜುಳು ಹರಿಯುತ್ತಿದ್ದ ನದಿಯ ನೀರಿನ ಕಲರವ, ಜಲಪಾತದ  ನೀರು ದುಮ್ಮಿಕ್ಕುವ ಶಬ್ದ ಕೇಳುತ್ತಿತ್ತು. ಜಲಪಾತದ ಸನಿಹ ಬರುತ್ತಿದ್ದೆವು.


ಶಿಂಷಾ ನದಿಯ ನೋಟ  

ಶಿಂಷಾ ಜಲಪಾತ 

ಕಲ್ಲಿನ ಗವಿಯೊಳಗೆ  ದುಮ್ಮಿಕ್ಕುವ ಜಲಪಾತ.


ಹಸಿರ ಕಾಡಿನಲ್ಲಿ ಬಂಡೆ ಗಳನ್ನು ಹತ್ತಿಳಿದು, ಮರದ ಬೇರುಗಳನ್ನು  ದಾಟಿಕೊಂಡು  ನದಿಯ ಸನಿಹ ಬಂದೆವು,ಕಣ್ಣೆದುರಿಗೆ  ರಮಣೀಯ ನೋಟ ಅನಾವರಣ ಗೊಂಡಿತು, ಅಲ್ಲಿಯವರೆಗೂ ಕಷ್ಟಪಟ್ಟು ಬಂದು ಸುಸ್ತಾಗಿದ್ದ ನಮಗೆ ಅಲ್ಲಿನ ನೋಟ ಬಹಳ ಮುದ ನೀಡಿ ನಮ್ಮ ಆಯಾಸ  ಮಾಯವಾಗಿತ್ತು, ಹೊಸ ಚೈತನ್ಯ  ಮೂಡಿತು. ಶಿಂಷಾ ಜಲಪಾತ  ತನ್ನ ಸೌಂದರ್ಯ ಮೆರೆದು ದರ್ಶನ ನೀಡಿತ್ತು. ಮಳೆಗಾಲದಲ್ಲಿ ಇಲ್ಲಿಗೆ ಬರುವುದು ಅಸಾಧ್ಯ ವಾದರೂ  ಮಳೆಗಾಲ ಕಳೆದು ಇಲ್ಲಿಗೆ ಬಂದಲ್ಲಿ ಒಳ್ಳೆಯ ಅನುಭವ ಪಡೆಯಬಹುದು.ನಾವಿದ್ದ ವೇಳೆಯಲ್ಲಿ ಅಂತಹ ಮಳೆ ಇಲ್ಲದೆ  ನೀರು ಕಡಿಮೆ  ಆಗಿತ್ತು, ಆದರೂ ಒಳ್ಳೆಯ ನೋಟ ಸಿಕ್ಕಿತು.



ಸೌಂದರ್ಯದ ನೆಲೆ ಇಲ್ಲಿದೆ 

ಪ್ರಕೃತಿ ಹಾಕಿರುವ ಸೆಟ್ಟಿಂಗ್ ಇದು 

ನಿರ್ಮಲ ವಾತಾವರಣ ಎಂದರೆ ಇದೆ ಆಲ್ವಾ ??


ಜಲಪಾತದ ನೋಟ ಸವಿಯುತ್ತಾ  ಮಂತ್ರ ಮುಗ್ಧರಾಗಿ ಕುಳಿತೆವು, ನಾವು ಕುಳಿತ್ತಿದ್ದ ಬಂಡೆಯ ಮೇಲೆ ಸುತ್ತಲ ರಮಣೀಯ ದೃಶ್ಯ ಕಂಡಿತ್ತು.  ಸುಮನ ದೀಪಕ್  ತನ್ನ ಕೈಚಳಕ ದಿಂದ ದಿಡೀರ್  ತಿನಿಸು ತಯಾರು ಮಾಡಿ ನಮ್ಮ ಹಸಿವನ್ನು ನೀಗಿಸಿದರು , ನಮ್ಮ ಮುಂದೆ ಯಾವುದೋ ಹಾಲಿವುಡ್ ಚಿತ್ರದ  ನೋಟ ವೆಂಬಂತೆ ಸುಂದರ ಪರಿಸರ ಕಾಣುತ್ತಿತ್ತು. ನನಗಂತೂ "ಮೆಖಾನೆಸ್  ಗೋಲ್ಡ್' " ಚಿತ್ರದ ಹಲವು ದೃಶ್ಯಗಳು ನೆನಪಿಗೆ ಬಂದವು. ಸುಮಾರು ಘಂಟೆಗಳ ಕಾಲ  ಅ ಸ್ವೆಗದಲ್ಲಿ ವಿಹರಿಸ್ದ ನಮಗೆ ಆ ಜಾಗ ಬಿಟ್ಟು ಬರಲು ಮನಸೇ ಇರಲಿಲ್ಲ ಆದರೆ  ವಿಧಿಯಿಲ್ಲದೇ ಜಾಗ ಖಾಲಿ ಮಾಡ ಬೇಕಾಯಿತು. ಸನಿಹದಲ್ಲೇ ಹಾರಾಡುತ್ತಿದ್ದ  ಗರುಡ ಪಕ್ಷಿಯು ನಮಗೆ ಶುಭ ವಿದಾಯ ಹೇಳಿತು.



ಶುಭಾಶಯಗಳು ನಿಮಗೆ 


ಅಂದಹಾಗೆ  "ನಿಮ್ಮೊಳಗೊಬ್ಬ ಬಾಲು " ಬ್ಲಾಗ್  ಪ್ರಾರಂಭವಾಗಿ ಇಂದಿಗೆ ಐದು ವರ್ಷ ಪೂರ್ಣವಾಯಿತು. ನನ್ನ ಜ್ಞಾನ ಭಂಡಾರ ಬೆಳೆಯಿತು. ಬ್ಲಾಗ್ ಲೋಕದಲ್ಲಿ  ನಿಮ್ಮೊಳಗೆ ನಾನೂ ಒಬ್ಬನಾಗಿ  ಬೆಳೆಯುತ್ತಿದ್ದೇನೆ . ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ಸಂತಸದ ವಿಚಾರ ನಿಮ್ಮೊಡನೆ ಹಂಚಿಕೊಂಡಾಗ ಮನಸ್ಸಿಗೆ ಖುಷಿಯಾಗುತ್ತದೆ. ಈ ವರ್ಷ ದಲ್ಲಿ ೪೨ ಪೋಸ್ಟ್ ಗಳನ್ನು ಪ್ರಕಟಿಸಿದ್ದು. ಅವೆಲ್ಲವನ್ನು ಬಹಳಷ್ಟು ಜನ ಸ್ವಾಗತಿಸಿ ಓದಿ ಹರಸಿದ್ದೀರಿ. ಕಾಮೆಂಟ್ಗಳು ಕಡಿಮೆ ಇರಬಹುದು, ಅದನ್ನು ಓದಿ ಹರಸಿದ ಎಲ್ಲರಿಗೂ ನಾನು ಕೃತಜ್ಞ.  ಇಲ್ಲಿಯವರೆಗೂ ೨೧೫ ಲೇಖನ ಬಂದಿದ್ದು ಅದರಲ್ಲಿ ಜಳ್ಳನ್ನು ಕಳೆದರೆ ಸುಮಾರು ೧೮೦ ಕ್ಕೂ ಹೆಚ್ಚು ನಿಮಗೆ ಒಳ್ಳೆಯ ಮಾಹಿತಿ ಕೊಡುವ ಲೇಖನಗಳು. ಈ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ನನ್ನ ಕೃತಜ್ಞತೆಗಳು.  ಮುಂದಿನ ಹಾದಿಯಲ್ಲಿ ಜೋತ್ಯಾಗಿರಿ, ಒಟ್ಟಿಗೆ ಸಾಗೋಣ. ನಿಮಗೆಲ್ಲ ೨೦೧೩ ರ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.  

Tuesday, December 25, 2012

ನಮ್ಮ ಹತ್ತಿರದಲ್ಲೆ ನಡೆದಿತ್ತು ಒಂದು ಜೀವಿಯ ಕಗ್ಗೊಲೆ .......!!! ಶಿಂಷಾ ಕಾಡಿನ ಅಲೆದಾಟ ....೦೩


ನನಗೂ ಯೋಗ ಬರುತ್ತೆ ಅಂತೂ ಈ ನಾಯಿಮರಿ.


ಮಾರನೆಯ ದಿನ ಮುಂಜಾನೆಯ ಪಕ್ಷಿಗಳ ಸುಪ್ರಬಾತಕ್ಕೆ ಎಚ್ಚರವಾಗಿ ಹೊರಗೆ ಬಂದು ನೋಡಿದರೆ  ನಮ್ಮ ರೂಮಿನ ಎದುರಿಗಿದ್ದ ಸುರಗಿ ಮರದಲ್ಲಿ ಕುಳಿತ ಎರಡು  ಹಕ್ಕಿಗಳು ಸುಪ್ರಬಾತ  ಹಾಡಿದ್ದವು, ಮತ್ತಷ್ಟು ಮುಂದೆ ಬಂದು  ಗೋಲ್ ಘರ್ ನಲ್ಲಿ ನೋಡಿದರೆ ನಮ್ಮ ರವಿಂದ್ರ ಯೋಗಾಸನ ಮಾಡುತ್ತಿದ್ದ  ಅವನ ಪಕ್ಕದಲ್ಲಿ ರೆಸಾರ್ಟ್ ನವರು ಸಾಕಿದ್ದ ಮುದ್ದು ನಾಯಿ ಮರಿ  ಅವನ ಪಕ್ಕದಲ್ಲಿ  ತಾನೂ ಅವನಂತೆ ಮೈ ಬಗ್ಗಿಸಿ ಯೋಗಾಸನ ಮಾಡಿತ್ತು...............................!!!!! ಮುಂಜಾನೆ ಮಬ್ಬು ಬೆಳಕಿನಲ್ಲಿ ಆ ಮುದ್ದು ನಾಯಿ ಮರಿ ರವಿಂದ್ರ ಹಾಕಿದ ಯೋಗಾಸನದ  ವಿವಿಧ ಆಸನಗಳನ್ನು ಅನುಕರಿಸುತ್ತಾ ತಾನೂ ಯೋಗ ಮಾಡ್ತೀನಿ ನೋಡಿ ಅಂತಾ  ಸಾಬೀತು ಪಡಿಸಿತ್ತು.  ಇದನ್ನು ನೋಡುತ್ತಾ   ಬಹಳ ಹೊತ್ತು ಕಳೆದಿದ್ದೆ.



ಗೋಲ್ ಘರ್ 


 ಮುಂದೆ ಸಾಗಿದ ನನಗೆ   ಸುತ್ತ ಮುತ್ತ ಇದ್ದ ಸುರುಗಿ ಮರಗಳಿಂದ ಹಕ್ಕಿಗಳ ಚಿಲಿಪಿಲಿ ನಾದ ಕೇಳುತ್ತಲೇ ಇತ್ತು. ಅಷ್ಟರಲ್ಲಿ  ಎಲ್ಲರೂ ಒಟ್ಟಿಗೆ ಗೋಲ್ ಘರ್ ನಲ್ಲಿ ಸೇರಿದೆವು, ಮುಂಜಾವಿನ ತಣ್ಣನೆ ಗಾಳಿಯಲ್ಲಿ ಬಿಸಿ ಬಿಸಿ ಕಾಫಿಯ ಸೇವನೆ ಆಯಿತು, ಮನೆಯಲ್ಲಿ ಒಂದೇ ಕಪ್  ಕಾಫಿ ಹೀರುತ್ತಿದ್ದ ನಾನು  ಆ ತಣ್ಣನೆಯ  ಗಾಳಿಯ ಚಳಿಗೆ ಒಟ್ಟಿಗೆ ಮೂರು ಕಪ್  ಹೀರಿದೆ . ಬಿಸಿ ಕಾಫಿ ದೇಹ ದೊಳಗೆ ಇಳಿದು  ಮುಂದಿನ ಕಾರ್ಯಕ್ಕೆ ಚೈತನ್ಯ ನೀಡಿತು.   ಸರಿ ನಮ್ಮ ಕ್ಯಾಮರ ಹಿಡಿದು  ಸ್ವಲ್ಪ ದೂರ ಅಡ್ಡಾಡಿ ಬರೋಣ ಅಂತಾ ರೆಸಾರ್ಟ್ ಪಕ್ಕದಲ್ಲಿ   ಹೊರಟೆವು. ಸ್ವಲ್ಪ ದೂರ ಹೋದ ನಮಗೆ ಎದುರಾಗಿ ಒಬ್ಬ ವ್ಯಕ್ತಿ ಬಂದರು. ಅವರು ನಿನ್ನೆ ರಾತ್ರಿ  ರೆಸಾರ್ಟಿಗೆ ಬಂದೆನೆಂದು ಪರಿಚಯ ಮಾಡಿಕೊಂಡರು., ಆಗಲೇ ಕಾಡಿನಲ್ಲಿ ಒಂದು ಸುತ್ತು ಅಲೆದಾಡಿ ಬಂದಿದ್ದರು.  ಹಾಗೆ ಪರಿಚಯದ ನಡುವೆ  ನಿನ್ನೆ ರಾತ್ರಿ ನೋಡಿ ಒಂದು ಜೀವಿ ಸತ್ತು ಬಿದ್ದಿದೆ ನಮಗೆ ಗೊತ್ತೇ ಆಗಿಲ್ಲಾ ಅಂದರು. ನಮಗೆ ಅಚ್ಚರಿ  , ಅವರೇ ಮುಂದು ವರೆದು  ನಮ್ಮನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋದರು.





ಹತ್ಯೆ ನಡೆದಿದ್ದ ಜಾಗದ ಪ್ರದೇಶ 

ದಟ್ಟ ಕಾಡಿನ ಹಾದಿಯ ನೋಟ 

 ಹೌದು ನಾವಿದ್ದ ಜಾಗದಿಂದ ಕೆಲವೇ ಅಡಿಗಳ  ಅಂತರದಲ್ಲಿ  ಆ ಘಟನೆ ನಡೆದಿತ್ತು. ಕಳೆದ ರಾತ್ರಿ  ಬಹಳ ಸಮಯ ನಾವು ಹೊರಗೆ ಕುಳಿತು  ಹರಟೆ ಹೊದೆದಿದ್ದೆವು, ಕ್ಯಾಂಪ್ ಫೈರ್  ಹಾಕಿದ್ದರೂ  , ನಾವಿದ್ದ ಜಾಗದ ಅತೀ ಸನಿಹದಲ್ಲಿ  ಸದ್ದಿಲ್ಲದೇ  ಈ ಜೀವಿಯ ಹತ್ಯೆ ಆಗಿತ್ತು.ಒಂದು ವೇಳೆ ಕೆಟ್ಟ ಕುತೂಹಲದಿಂದ ರಾತ್ರಿ ನಾವೇನಾದರೂ  ನಮ್ಮ ಜಾಗ ಬಿಟ್ಟು ಹೊರಗೆ ಅಡ್ಡಾಡಲು ಬಂದಿದ್ದರೆ   ಬಹುಷಃ ನಮ್ಮ ಕಥೆಯೂ ಹೀಗೆ  ಆಗುತ್ತಿತ್ತು  ಅನ್ನಿಸುತ್ತದೆ. ಆದರೆ ಕಾಡಿನಲ್ಲಿ ಇವೆಲ್ಲಾ  ಸ್ವಾಭಾವಿಕವಾಗಿ ನಡೆಯುವ ಸಾಮಾನ್ಯ ಘಟನೆಗಳಷ್ಟೇ.  ನಾವೂ ಸಹ ಕುತೂಹಲದಿಂದ  ಕಾಡಿನ ಹಾದಿಯಲ್ಲಿ ನಡೆದೆವು, ಹತ್ಯೆ ನಡೆದಿದ್ದ ಜಾಗ ಹತ್ತಿರವಾಗಿತ್ತು.


ಹತ್ಯೆಯಾದ ಜೀವಿಯ  ದೇಹದ ಒಂದು ಭಾಗ 

ಜೀವಿಯ ಒಳ ಕವಚ.


ಹತ್ಯೆಯ ಜಾಗ ಸನಿಹ ಬರುತ್ತಿದ್ದಂತೆ  ಕೆಟ್ಟ ವಾಸನೆ ಬರುತ್ತಿತ್ತು,  ಮತ್ತಷ್ಟು  ಹತ್ತಿರ ಹೋದ ನಮಗೆ  ಕಂಡಿದ್ದು  ಭೀಕರವಾಗಿತ್ತು.  ಮೊದಲು ನಮಗೆ  ಕಂಡಿದ್ದು ಸುತ್ತಾ ಚೆಲ್ಲಾಡಿ ಹೋಗಿದ್ದ ಕೆಲವು ದೇಹದ ಭಾಗಗಳು. ನಂತರ  ನಮಗೆ ಕಂಡಿದ್ದು  ಬಿದ್ದಿದ್ದ ಚಿಪ್ಪು ಹಂದಿಯ  ದೇಹದ ಭಾಗ, ಹೌದು ಅಲ್ಲಿ  ಒಂದು ಚಿಪ್ಪು ಹಂದಿಯನ್ನು   ಚಿರತೆ ತಿಂದು ಹಾಕಿತ್ತು. . ಆಗ ಕಂಡ ದೃಶ್ಯ  ಹೆದರಿಕೆ ಉಂಟು ಮಾಡಿತ್ತು. ಪೆಂಗೊಲಿನ್  ಅಥವಾ  ಚಿಪ್ಪು ಹಂದಿ ಯನ್ನು  ಆ ರಾತ್ರಿ ಹೊಂಚು ಹಾಕಿ  ಒಂದು ಚಿರತೆ ಬೇಟೆಯಾಡಿ  ತಿಂದಿತ್ತು.


ಚಿಪ್ಪು ಹಂದಿ ಅಥವಾ ಪೆಂಗೊಲಿನ್ [ ಚಿತ್ರ ಕೃಪೆ ಅಂತರ್ಜಾಲ]
ಚಿಪ್ಪು ಹಂದಿ  ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯ 

ಚಿಪ್ಪು ಹಂದಿಯ  ಬಿಲ 

ಸಾಮಾನ್ಯವಾಗಿ ಈ ಚಿಪ್ಪು ಹಂದಿ ತುಂಬಾ ನಾಚಿಕೆ ಸ್ವಭಾವದ ಪ್ರಾಣಿ, ದೇಹದ ರಚನೆ ಮೇಲುಭಾಗದಲ್ಲಿ  ಚಿಪ್ಪುಗಳಿಂದ ಕೂಡಿದ್ದು, ಬಹಳ ಗಟ್ಟಿಯಾಗಿದೆ,  ಎಂತಹ ಗಟ್ಟಿ ಕಲ್ಲನ್ನು ಎತ್ತಿ ಹಾಕಿದರೂ  ತಡೆಯುವ ಶಕ್ತಿ  ಮೇಲಿನ ಚಿಪ್ಪು ಹೊಂದಿದೆ. ಜೊತೆಗೆ ಕೆಳಭಾಗ  ಬಹಳ ಮೃದುವಾಗಿದ್ದು  ಯಾವುದೇ ಪ್ರಾಣಿ ಸುಲಭವಾಗಿ ಈ ಭಾಗದಲ್ಲಿ  ದಾಳಿ ಮಾಡಿ ಇವುಗಳನ್ನು ಕೊಲ್ಲಬಹುದು . ಕೆಲವೊಮ್ಮೆ ಕಾಡು ಪ್ರಾಣಿಗಳು ಇದನ್ನು ಬೇಟೆಯಾಡಲು ಬಂದರೆ  ಇದು  ತನ್ನ ದೇಹವನ್ನು ಮಡಿಸಿಕೊಂಡು ವೃತ್ತಾಕಾರವಾಗಿ  ಸುರುಳಿ ಸುತ್ತಿ ಕೊಳ್ಳುತ್ತದೆ . ಆಗ ಇದನ್ನು ಯಾವ ಕಡೆ  ನೋಡಿದರೂ ಬರಿ ಚಿಪ್ಪಿನ ಭಾಗ ಕಾಣುತ್ತದೆ, ಈ ಚಿಪ್ಪಿಗೆ  ಹುಲಿ, ಚಿರತೆ, ಸಿಂಹಗಳು   ಪಂಜದಿಂದ ಹೊಡೆದರೂ ಏನೂ ಆಗುವುದಿಲ್ಲ ,   ಈ ಜೀವಿ  ಸಾಮಾನ್ಯವಾಗಿ ನೆಲದಲ್ಲಿ ಬಿಲಗಳನ್ನು  ತೋಡಿಕೊಂಡು  ಬಿಲಗಳಲ್ಲಿ ವಾಸ ಮಾಡುತ್ತದೆ. . ಇದು ಕೀಟ ಭಕ್ಷಕ ಪ್ರಾಣಿ.  ಆದರೆ ದುರದೃಷ್ಟ ವಶಾತ್  ಇಲ್ಲಿ  ಚಿರತೆಗೆ ಬಲಿಯಾಗಿತ್ತು,



ಚಿಪ್ಪು ಹಂದಿಯನ್ನು ಚಿರತೆ ತಿಂದಿರುವ ಒಂದುನೋಟ 


ಎಲ್ಲಿಎನಾದ್ರೆ ನಮಗೇನು
ನಾವೂ ಸುತ್ತ ಮುತ್ತ  ಚಿರತಯ ಹೆಜ್ಜೆ ಗುರುತಿಗೆ  ಹುಡುಕಾಟ ಮಾಡಿದೆವು, ಆದರೆ ಆ ಪ್ರದೇಶದಲ್ಲಿ  ಹುಲ್ಲು ಬೆಳೆದು ನಿಂತಿದ್ದ  ಕಾರಣ ನಮಗೆ ಹೆಚ್ಚಿನ  ಗುರುತು ಸಿಕ್ಕಲಿಲ್ಲ , ಕಾಡಿನಲ್ಲಿ ಒಮ್ಮೊಮ್ಮೆ ಸಿಗುವ ಇಂತಹ ನೋಟಗಳು  ನಮ್ಮ ಧೈರ್ಯವನ್ನು ಕೆಣಕುತ್ತವೆ,  ಭೀಕರ ದೃಶ್ಯ ನೋಡಿದ ನಾವು,  ವಾಪಸ್ಸು  ನಮ್ಮ ರೆಸಾರ್ಟಿಗೆ  ಬಂದೆವು  ಅಲ್ಲೇ ಇದ್ದ ಒಂದು ಸುರಗಿ ಮರದಲ್ಲಿ  ಎರಡು ಪಿಳಾರಕ  ಹಕ್ಕಿಗಳು  ಮರದಲ್ಲಿ ಸರಸವಾದುತ್ತಿದ್ದವು .........!! ಪಾಪ  ಅವುಗಳಿಗೆ  ಹತ್ತಿರದಲ್ಲಿ ನಡೆದಿದ್ದ ಘಟನೆ ಗೊತ್ತೇ ಇರಲಿಲ್ಲ  .....................!!! 

Wednesday, December 19, 2012

ಆ ರಾತ್ರಿ ಕಂಡಿತ್ತು ಒಂದು ವಿಶೇಷ !!!!ಶಿಂಷಾ ಕಾಡಿನ ಅಲೆದಾಟ ....೦೨

ಪೈಪ್ ಲೈನ್  ಹಾದಿ.


ಕಳೆದ ಸಂಚಿಕೆಯಲ್ಲಿ ಶಿಂಷಾ ಕಾಡಿನಲ್ಲಿ ಮೊದಲ ಹಂತದ  ಟ್ರೆಕಿಂಗ್  ಅನುಭವ ನಿಮ್ಮೊಂದಿಗೆ ಹಂಚಿಕೊಂಡೆ. ಬನ್ನಿ  ನಂತರದ ಕಥೆ ಓದುವಿರಂತೆ. ಮಧ್ಯಾಹ್ನದ ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದ ನಾವು ಸಂಜೆ ತಿರುಗಾಟಕ್ಕೆ ಸಿದ್ಧರಾದೆವು.ಅಷ್ಟರಲ್ಲಿ ನನ್ನ ನೆಂಟ ರಾಘು ನಮ್ಮ ಜೊತೆ ಸೇರಿಕೊಂಡ [ ಇವನು ಶಿಂಷಾ ಊರಿನಲ್ಲಿಯೇ ಹುಟ್ಟಿ ಬೆಳೆದದ್ದು]  ಊರಿನ ವಿಶೇಷ ತೋರಿಸಲು ಕರೆದುಕೊಂಡು  ಹೊರಟ  . ಮೊದಲು ನಮ್ಮ ಕಾರುಗಳು ಹೊರಟದ್ದು ಶಿಂಷಾ ಕಡೆಯಿಂದ ತೊರೆ ಕಾಡನ  ಹಳ್ಳಿಗೆ ಸಾಗಿದ್ದ  ಕಾವೇರಿ ಪೈಪ್ ಲೈನ್ ಮಾರ್ಗ  ದೆಡೆಗೆ. ಹೌದು ಅಲ್ಲಿ   "ಉಲಬ ಹಳ್ಳ" ದ ಬಳಿ ಸುಂದರ ಪರಿಸರ ಇದೆ.  ಸಂಜೆ ವೇಳೆ ಪಕ್ಷಿ  ವೀಕ್ಷಣೆಗೆ ಅಲ್ಲಿಗೆ  ನಾವು ತೆರಳಿದೆವು.



ಉಲಬ ಹಳ್ಳ ದ ಪರಿಸರ 

ಅಲ್ಲಿದ್ದ ತೊರೆಯ ಸಮೀಪ ಕೆಲವು ಗೌಜುಗ ಹಕ್ಕಿಗಳ ಗೂಡು ಕಾಣಿಸಿತು. ಸುತ್ತಲ ಪರಿಸರ ಮುದ ನೀಡಿತು. ಹಾಗೆ ಸಾಗಿದ ನಾವು ಅಲ್ಲಿಂದ ಹಿಂತಿರುಗಿ  ಶಿಂಷಾ ಪುರದ  ನೀರು ಸಂಗ್ರಹಾಗಾರಕ್ಕೆ ತಲುಪಿದೆವು.ಅದನ್ನು " ಫೋರ್ ಬೇ" ಎನ್ನತ್ತಾರೆ. ನೆಲದಿಂದ ಎತ್ತರದ ಗುಡ್ಡ ಏರಿದೊಡನೆ  " ಫೋರ್ ಬೇ"ಗೋಚರಿಸಿತು . ಇಲ್ಲಿ ಸಂಗ್ರಹಿಸಿದ ನೀರನ್ನು ಮತ್ತೆ ಪಂಪ್ ಮಾಡಿ ಪೈಪಿನ  ಮೂಲಕ ನೀರನ್ನು ತೊರೆ ಕಾಡನ ಹಳ್ಳಿಯಲ್ಲಿರುವ   ಬೆಂಗಳೂರು ನೀರು ಸರಬರಾಜು ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ.


ಶಿಂಷಾ ಫೋರ್ ಬೇ ಯಾ ಒಂದು ನೋಟ 

ಶಿಂಷಾ ಫೋರ್ ಬೇ  ಮತ್ತೊಂದು ನೋಟ.

ಒಂದು ಗುಡ್ಡದಲ್ಲಿ  ಆಳವಾದ ಹಾಗು ವಿಶಾಲವಾದ ಒಂದು ಕೃತಕ  ಸರೋವರ ನಿರ್ಮಿಸಿದ್ದು  ಅದರಲ್ಲಿ ನೀರನ್ನು ಸಂಗ್ರಹ ಮಾಡುವ  ಜಾಣ್ಮೆಗೆ ತಲೆದೂಗಿದೆವು. ಹಾಗೆ ಅಲ್ಲಿನ ಶಾಂತವಾದ ವಾತಾವರಣ ಮನಸಿಗೆ ಹಿಡಿಸಿತು. ಅಷ್ಟರಲ್ಲಿ ಪಡುವಣ ದಿಕ್ಕಿನಲ್ಲಿ  ಸೂರ್ಯ ಅಸ್ತಮಿಸಲು ಹೊರಟಿದ್ದ.  ನಾವಿದ್ದ ಜಾಗದಲ್ಲಿ ಸೂರ್ಯಾಸ್ತ ನೋಡುವ ಒಳ್ಳೆಯ ಅವಕಾಶ ನಮಗೆ ಸಿಕ್ಕಿತು.




ಸೂರ್ಯನ  ಚಿತ್ತಾರದ ವೈಭವ.

ಮೋಡ ಗಳೊಂದಿಗೆ ಸೂರ್ಯನ ಕಣ್ಣಾಮುಚ್ಚಾಲೆ.
ಸೂರ್ಯಾಸ್ತದ ವಿಸ್ಮಯ ನೋಟ.


ಹೊನ್ನಿನ ಚೆಂಡಿನಂತೆ ಕಾಣುತ್ತಿದ್ದ ಸೂರ್ಯ   ಚಲುವಿನ  ಚಿತ್ತಾರ ಬಿಡಿಸಿದ್ದ, ಆಗಸದ ಅಂಗಳದಿ ಕರಿ ಮೋಡಗಳ  ಜೊತೆಗೆ ಕಣ್ಣಾಮುಚ್ಚಾಲೆ  ಆಡುತ್ತಾ ಆಗಸದಿ ಹೊನ್ನಿನ ರಂಗು ಚೆಲ್ಲಿ  ಸುಂದರ ವಿಸ್ಮಯ ಲೋಕ ತೆರೆದಿಟ್ಟ.  ಅನತಿ ದೂರದಲ್ಲಿ ಹಾದುಹೋಗಿದ್ದ  ಅಧಿಕ ಶಕ್ತಿಯ ವಿದ್ಯುತ್ ಮಾರ್ಗದ ದೊಡ್ಡ ಕಂಬಗಳ ಹಿಂದೆ ಸೂರ್ಯ  ಬಂದಾಗ  ಅದೊಂದು ಕಲಾಕೃತಿಯಂತೆ  ಕಂಡು ಬಂತು.ಸೂರ್ಯಾಸ್ತ ನೋಡುತ್ತಾ ನಮ್ಮನ್ನೇ  ನಾವು ಮರೆತಿದ್ದೆವು.




ಬಾನಿನ ಸೋರ್ರ್ಯನ ಕಂಡ ಭುವಿಯ ರವೀಂದ್ರ ಹಾಗು ವೇಣು 


ಅಲ್ಲಿಂದ ತೆರಳಿದ ನಾವು ಕತ್ತಲೆಯ ಹಾದಿಯಲ್ಲಿ  ಸುತ್ತ ಮುತ್ತಲ ಕಾಡಿನಿಂದ ಯಾವುದಾರು ಪ್ರಾಣಿ  ಹೊರಬಂದು ಕಂಡಿತೇನೋ  ಎಂಬ ಆಸೆಯಿಂದ  ಅದ್ದಾಡಿದೆವು  ಉ ಹೂ  ಯಾವುದೇ ಪ್ರಯೋಜನ ಆಗಲಿಲ್ಲ.  ಹಾಳಾಗಿ ಹೋಗ್ಲಿ ಅಂತಾ ಶಾಪ ಹಾಕುತ್ತಾ  ನಮ್ಮ ರೆಸಾರ್ಟ್ಗೆ  ಬಂದೆವು .



ಆಗಸದಿ ಚಂದ್ರನ ಚೂರು 

ಕತ್ತಲಲ್ಲಿ  ಬೆಂಕಿಯ ಜ್ವಾಲೆಯ  ನರ್ತನ.


ನಾವಿದ್ದ ಜಾಗದಲ್ಲಿ  ಕತ್ತಲಿತ್ತು, ಕಗ್ಗತ್ತಲ ಜಾಗದಲ್ಲಿ ಯಾವುದೇ ಬೆಳಕಿರಲಿಲ್ಲ  ಆಗಸದಿ ಚಂದ್ರನ ಚೂರು   ಟೋಪಿಯಂತೆ ಕಾಣುತ್ತಿತ್ತು.  ಊಟ ಮಾಡಲು ಅಣಿಯಾಗುತ್ತಿದ್ದೆವು  ಅಷ್ಟರಲ್ಲಿ  ಹಲಗೂರಯ್ಯ  ಪ್ರತ್ಯಕ್ಷನಾಗಿ ಕ್ಯಾಂಪ್ ಫೈರ್  ಹಾಕಿದ. ಸುತ್ತಲ ಕತ್ತಲ ಪ್ರಪಂಚದಲ್ಲಿ  ಚುಮು ಚುಮು ಚಳಿಗೆ  ಕ್ಯಾಂಪ್ ಫೈರಿನ  ಬೆಂಕಿಯ ಕಾವು ಮುದ ನೀಡಿತು. ಹೊಟ್ಟೆಗೆ  ಭರ್ಜರಿ ಊಟ  ಸಿಕ್ಕಿತು. ಅಷ್ಟರಲ್ಲಿ ರೆಸಾರ್ಟ್ ಮಾಲೀಕ ವಿಜಯ್ ಬಂದು ಸಾರ್  ರಾತ್ರಿ ಸಫಾರಿ ಹೋಗ್ತೀರಾ ?? ಜೀಪ್ ರೆಡಿ ಇದೆ ಅಂದರು,  ಆ ಜೀಪನ್ನು ಏರಿ ಶಿಂಷಾ ಗೇಟ್  ನಿಂದ  ಜೆ.ಎಲ್. ಆರ್. ಕಡೆಗೆ ಸಾಗಿದ್ದ ಕಾಡಿನ ಹಾದಿಯಲ್ಲಿ ಹೊರಟೆವು.



ಇಂಡಿಯನ್ ನೈಟ್ ಜಾರ್ ಪಕ್ಷಿ 

ಕತ್ತಲ ಹಾದಿಯಲ್ಲಿ ಸಾಗಿದ್ದ ಜೀಪು, ನಿಶ್ಯಬ್ಧವಾಗಿ ಕುಳಿತಿದ್ದ ನಾವು  , ಯಾವುದಾದರು ವನ್ಯ ಜೀವಿ ಕಂಡೀತೆ ಎಂಬ  ಕಾತರ, ಇವೆಲ್ಲಾ  ಜೀಪಿನೊಡನೆ ಸಾಗಿದ್ದವು. ಇಲ್ಲಿಗೆ ಬರುವ ಮೊದಲು ದಿನ ನಿತ್ಯಾ ಪತ್ರಿಕೆಗಳಲ್ಲಿ  ಇಲ್ಲಿ  ಆನೆಗಳು ಮಾಡಿದ ಅವಾಂತರದ ವರಧಿ ಓದಿದ್ದ ನನಗೆ   ಇವತ್ತು ಆನೆಗಳು ಸಿಗಲಿ ಎಂಬ ಬಯಕೆ ಇತ್ತು.  ಆದರೆ ನಮ್ಮ ನಸೀಬಿಗೆ ಯಾವುದೇ ವನ್ಯ ಜೀವಿ ನೋಡುವ ಬಾಗ್ಯ ಇರಲಿಲ್ಲ . ಕತ್ತಲ ಸೀಳಿಕೊಂಡು ಜೀಪು ಕಾಡಿನಲ್ಲಿ ಸಾಗಿತ್ತು. ಮುಂದೆ ಕುಳಿತಿದ್ದ ನನಗೆ  ಹಾದಿಯಲ್ಲಿ ಒಂದು ಹಕ್ಕಿ ಜೀಪಿನ ಲೈಟ್  ಬೆಳಕಿಗೆ ಹೆದರಿ  ರಸ್ತೆಯ ನಡುವೆ ಮುದುರಿ  ಕುಳಿತಿದ್ದುದನ್ನು   ಕಂಡು ಜೀಪ್ ನಿಲ್ಲಿಸಲು ಹೇಳಿದೆ  , ಸುತ್ತ ಮುತ್ತ ಗಮನಿಸಿ  ಮೆತ್ತಗೆ ಜೀಪಿನಿಂದ ಇಳಿದೆವು, ಹತ್ತಿರ ಹೋಗಿ ನೋಡಿದರೆ ಈ ಅಪರೂಪದ ಹಕ್ಕಿ  ಕಂಡು ಬಂತು. ಅದೇ  "ಇಂಡಿಯನ್ ನೈಟ್ ಜಾರ್ ಅಥವಾ ಕುರುಡುಗಪ್ಪಟ ಹಕ್ಕಿ"  ಈ ಅಪರೂಪದ ಹಕ್ಕಿ ಗೂಡು ಕಟ್ಟುವುದಿಲ್ಲ,ಫೆಬ್ರವರಿ ಯಿಂದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವರೆಗೆ ನೆಲದ ಮೇಲೆ ಸಣ್ಣ ಗುಳಿ ಮಾಡಿ  ಅದರಲ್ಲಿ ಮೊಟ್ಟೆ ಇಟ್ಟು  ಮರಿ ಮಾಡುತ್ತವೆ.  ತುಂಬಾ  ಅಪರೂಪದ ನಾಚಿಕೆ ಸ್ವಭಾವದ ಹಕ್ಕಿ ಇದು. ನಮ್ಮ ಕ್ಯಾಮರಾ ಕಣ್ಣಿಗೆ ಸೆರೆಯಾಯಿತು. ಮನಸಿಗೆ ಸ್ವಲ್ಪ ಸಮಾಧಾನ ಆಯಿತು, ಬಹಳ ದೂರ ಬಂದಿದ್ದ ನಾವು ಮತ್ತೆ ವಾಪಸ್ಸು ನಮ್ಮ ರೆಸಾರ್ಟ್ ಗೆ ತಲುಪಿದೆವು. ಇದರ ನೆನಪಿನಲ್ಲೇ  ಮಲಗಿದೆವು,. ದಣಿದಿದ್ದ  ದೇಹ  ನಿದ್ರಾದೇವಿಯ ಆಸರೆ ಬಯಸಿ ಮಲಗಿತು.



ಮುಂಜಾವಿನ ಸುಪ್ರಬಾತ ಹಾಡಿದ ಹಕ್ಕಿಗಳು.


ನಾನೂ ಯೋಗಾ ಮಾಡ್ತೀನಿ ಅಂದಿತ್ತು ಮುದ್ದು ನಾಯಿಮರಿ.


 ಮಾರನೆಯ ದಿನ ಮುಂಜಾನೆಯ ಪಕ್ಷಿಗಳ ಸುಪ್ರಬಾತಕ್ಕೆ ಎಚ್ಚರವಾಗಿ ಹೊರಗೆ ಬಂದು ನೋಡಿದರೆ  ನಮ್ಮ ರೂಮಿನ ಎದುರಿಗಿದ್ದ ಸುರಗಿ ಮರದಲ್ಲಿ ಕುಳಿತ ಎರಡು  ಹಕ್ಕಿಗಳು ಸುಪ್ರಬಾತ  ಹಾಡಿದ್ದವು, ಮತ್ತಷ್ಟು ಮುಂದೆ ಬಂದು  ಗೋಲ್ ಘರ್ ನಲ್ಲಿ ನೋಡಿದರೆ ನಮ್ಮ ರವಿಂದ್ರ ಯೋಗಾಸನ ಮಾಡುತ್ತಿದ್ದ  ಅವನ ಪಕ್ಕದಲ್ಲಿ ರೆಸಾರ್ಟ್ ನವರು ಸಾಕಿದ್ದ ಮುದ್ದು ನಾಯಿ ಮರಿ  ಅವನ ಪಕ್ಕದಲ್ಲಿ  ತಾನೂ ಅವನಂತೆ ಮೈ ಬಗ್ಗಿಸಿ ಯೋಗಾಸನ ಮಾಡಿತ್ತು...............................!!!!!





Monday, December 10, 2012

ಬನ್ನಿ ಜಾರೋಣ ಬನ್ನಿ ಕಾಡಿನ ನೆನಪಿಗೆ......!!! ಶಿಂಷಾ ಕಾಡಿನ ಅಲೆದಾಟ ....೦೧

ಬನ್ನಿ ನಿಮಗೆ ಸ್ವಾಗತ  ಅಂದಿತ್ತು ಪರಿಸರ.



ನಮಸ್ಕಾರ  ಹೇಗಿದ್ದೀರಾ? ಬಹಳ ದಿನಗಳ ನಂತರ ಕಾಡಿನ ಅನುಭವದ ಬಗ್ಗೆ ಬರೆಯುವ ಮನಸಾಗಿ , ಮತ್ತೆ ಹಳೆಯ ನೆನಪನ್ನು  ಕೆದಕಿ ಬರೆಯಲು  ಪ್ರಾರಂಭ ಮಾಡಿದ್ದೇನೆ. ಹಿಂದೆ ಬರೆದ ಕಾಡಿನ ಅನುಭವಗಳಂತೆ ಈ ಅನುಭವವವೂ ನಿಮಗೆ ಇಷ್ಟಾ ಆಗುತ್ತದೆ. ಬನ್ನಿ ಜಾರಿ  ಹೋಗೋಣ ಕಾಡಿನ ನೆನಪಿನ ಪುಟಗಳಿಗೆ.


ಕಾಡಿನಲ್ಲಿ ಕೆಲಸಕ್ಕೆ ಬಾರದ ಕಾರುಗಳು.


ಬಾಲೂ ಯಾವುದಾದರೂ ಕಾಡಿಗೆ ಹೋಗೋಣ ಪ್ಲಾನ್ ಮಾಡಿ ಹೋಗೋಣ ಅಂತಾ ವರ್ಷದಲ್ಲಿ ಕನಿಷ್ಠ ಎರಡು ಸಾರಿ ನನಗೆ ನನ್ನ ಕೋ ಬ್ರದರ್ಗಳು , ಹಾಗು ಕೆಲವು ಗೆಳೆಯರು ಒತ್ತಾಯ   ಮಾಡುತ್ತಿರುತ್ತಾರೆ . ನಾನೂ ಸಹ ಈ ಬಗ್ಗೆ ತಲೆ ಕೆಡಿಸಿಕೊಂಡು ಸಿದ್ಧನಾಗುತ್ತೇನೆ. ಕಳೆದ೨೦೧೧  ನೇ ಜುಲೈ ನಲ್ಲಿ ಒಂದು ದಿನ ಕಾಡಿಗೆ ಹೋಗುವ  ಕಾರ್ಯಕ್ರಮ ಹಾಕಲು ಸಿದ್ದತೆ ನಡೆದಿತ್ತು. ಈ ಸಾರಿ ಇದರ ಉಸ್ತುವಾರಿ ಹಾಗು ಹೋಗುವ ಜಾಗದ ಆಯ್ಕೆ ನನ್ನ ನಾದಿನಿಯ ಗಂಡ ಅಂದರೆ ನನ್ನ ಕೊಬ್ರದರ್ ಶ್ರೀ  ವೇಣುಗೋಪಾಲ್  ಹೆಗಲಿಗೆ  ಬಿತ್ತು . ಅವರು ಎಲ್ಲಾ ವಿಚಾರ ಜಾಲಾಡಿ ಆಯ್ಕೆ ಮಾಡಿದ ಜಾಗ ಮಂಡ್ಯ ಜಿಲ್ಲೆಯ  ಮಳವಳ್ಳಿ ತಾಲೂಕಿನ " ಶಿಂಷಾ" ಎಂಬ   ಊರಿನ ಹತ್ತಿರವಿದ್ದ "ಅಬ್ಬೀಸ್  ವೈಲ್ಡ್ ರ್ನೆಸ್"  ಎಂಬ  ರೆಸಾರ್ಟ್ , ನನಗೂ  ಶಿಂಷಾ ಹೊಸದಲ್ಲ  ಆದರೆ ರೆಸಾರ್ಟ್ ಹೆಸರು ಮೊದಲು ಕೇಳಿದ್ದು. ಸರಿ ಇದೂ ಒಂದು ಅನುಭವ ಆಗಲಿ ಅಂತಾ  ಗಂಟು ಮೂಟೆ ಕಟ್ಟಿ ಮೈಸೂರಿನಿಂದ  ನನ್ನ ಮತ್ತೊಬ್ಬ ಕಸಿನ್ ರವಿಂದ್ರ  ಜೊತೆ ಹೊರಟೆ, ಬೆಂಗಳೂರಿನಿಂದ  ನನ್ನ ಕೊಬ್ರದರ್ ವೇಣುಗೋಪಾಲ್ , ಹಾಗು ಅವರ ಜೊತೆಗಾರ  ದೀಪಕ್ ವಸ್ತಾರೆ, ಹಾಗು ದೀಪಕ್ ಪತ್ನಿ ಸುಮನ ದೀಪಕ್.ನಮ್ಮನ್ನು ಮಳವಳ್ಳಿ ಯಲ್ಲಿ ಸೇರಿಕೊಂಡರು.

"ಶಿಂಷಾ " ಅಥವಾ "ಶಿಂಷಾಪುರ" ಇದು ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಪ್ರಮುಖ ಸ್ಥಳ. ಸುತ್ತಲೂ ಕಾಡಿನಿಂದ ಬೆಟ್ಟಗಳಿಂದ ಕೂಡಿದ ಊರು ಇದು. ಮಳವಳ್ಳಿ ಯಿಂದ ಕೊಳ್ಳೇಗಾಲಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಪಂಡಿತ ಹಳ್ಳಿಯ  ಬಳಿ  ಸಿಗುವ ಜಂಕ್ಷನ್ ನಲ್ಲಿ ಎಡಕ್ಕೆ ಸಾಗುವ ರಸ್ತೆಯಲ್ಲಿ  ಸುಮಾರು ಹತ್ತು ಕಿ.ಮೀ. ಚಲಿಸಿದರೆ ಈ ಊರು ಸಿಗುತ್ತದೆ. " ಏಶಿಯಾ ಖಂಡದಲ್ಲೇ ಪ್ರಪ್ರಥಮವಾಗಿ  ಜಲ ವಿಧ್ಯುತ್ ಯೋಜನೆಯನ್ನು ಇಲ್ಲಿ ಕೈಗೊಳ್ಳಲಾಗಿದೆ. ೧೯೦೨ ರಲ್ಲಿ ಅಂದಿನ ಮೈಸೂರು ಮಹಾರಾಜರಾದ  ನಾಲ್ಕನೆ ಕೃಷ್ಣರಾಜ ಒಡೆಯರ್ ರವರ ಆಡಳಿತ   ಕಾಲದಲ್ಲಿ ದಿವಾನ್ ಶೇಷಾದ್ರಿ ಐಯ್ಯರ್ ರವರ  ಉತ್ಸಾಹ ದೊಂದಿಗೆ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿತು. ೧೭೨೦೦  ಕಿಲೋ ವ್ಯಾಟ್ ವಿಧ್ಯುತ್  ಉತ್ಪಾದನೆ  ಸಾಮರ್ಥ ಹೊಂದಿದ ಈ ಯೋಜನೆ , ಮೊದಲು ಕೋಲಾರ ಚಿನ್ನದ ಗಣಿಗೆ ವಿಧ್ಯುತ್ ಪೂರೈಕೆ ಮಾಡಿ , ನಂತರ ಬೆಂಗಳೂರಿಗೆ  ೧೯೩೭ ರಲ್ಲಿ ವಿಧ್ಯುತ್ ಪೂರೈಸಿದ ಹೆಗ್ಗಳಿಗೆ ಹೊಂದಿದೆ. ಶಿಂಷಾ ನದಿ ಈ ಊರಿನ ಹತ್ತಿರ ಜಲಪಾತ ನಿರ್ಮಿಸಿರುವ ಕಾರಣ  ಈ ಊರನ್ನು  "ಶಿಂಷಾಪುರ" ಅಥವಾ ಶಿಂಷಾ ಅಂತಾ ಕರೆಯುತ್ತಾರೆ."

ಸೀನ್ ಕಟ್ ಮಾಡಿದ್ರೆ ಎಲ್ಲಾ  ಮಧ್ಯಾಹ್ನ  ಹನ್ನೊಂದು ಘಂಟೆ ಸುಮಾರಿಗೆ ರೆಸಾರ್ಟ್ ತಲುಪಿದ್ವಿ.   ಅಲ್ಲಿದ್ದ ರೆಸಾರ್ಟ್ ಮಾಲೀಕ ವಿಜಯ್ ಪರಿಚಯ ಮಾಡಿಕೊಂಡು ನಮ್ಮ ಲಗ್ಗೇಜ್ ಗಳನ್ನೂ ಒಂದೆಡೆ ಇಟ್ಟು , ಕಾಫಿ ಕುಡಿದು  ವಿಜಯ್ ರವರ ಸಲಹೆಯಂತೆ  ರೆಸಾರ್ಟ್ ಸಮೀಪವಿದ್ದ   ಬೆಟ್ಟಕ್ಕೆ ಟ್ರೆಕಿಂಗ್  ಹೊರಟೆವು, ಆಗ ವಿಜಯ್ ರವರು ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿ" ಸಾರ್ ಇವರೇ ನಿಮ್ಮ ಟ್ರೆಕಿಂಗ್  ಗೈಡು"  "ಇವರು ನಿಮ್ಮನ್ನು ಕಾಡಿನ ಒಳಗೆ ಟ್ರೆಕಿಂಗ್  ಕರೆದು ಕೊಂಡು  ಹೋಗ್ತಾರೆ" , ಅಂದರು. 
ನಮಗೆ  ಆ ವ್ಯಕ್ತಿಯನ್ನು ನೋಡಿ ಅಚ್ಚರಿ , 

ಒಂದು ಸಾದಾರಣ  ಮಾಸಿದ ಚಡ್ಡಿ, ಬಿಳಿಯ ಅಂಗಿ, ಹೆಗಲ ಮೇಲೆ ಟವಲ್ಲು ಹಾಕಿದ ಒಬ್ಬ ಇಳಿವಯಸ್ಸಿನ ಮನುಷ್ಯ ನಮ್ಮ ಮುಂದೆ ನಿಂತಿದ್ದರು. ಇವರ ಹೆಸರು ಹಲಗೂರಯ್ಯ. 



ನಮ್ಮ ಟ್ರೆಕಿಂಗ್ ಗೈಡ್  ಹಲಗೂರಯ್ಯ 

ಟ್ರೆಕಿಂಗ್  ಹೋರಟ ಹಾದಿ 
" ಬನ್ನಿ ಸಾ  ನನ್ ಜೊತೆ  ಹುಸಾರಾಗಿ  ಕರಕೊಂದೋಯ್ತೀನಿ" , ಎಂದು  ಹೇಳಿ ಬನ್ನಿ  ಹೋಗುಮಾ ........! ಅಂತಾ ಹೇಳಿ ಮುಂದೆ ಹೊರಟರು.ನಮ್ಮ ಟ್ರೆಕಿಂಗ್  ಪಯಣ ಸಾಗಿತು. ದಾರಿ ಸಾಗುತ್ತಿದ್ದಂತೆ ಎದುರಿಗೆ ಹಸಿರ ಹೊದ್ದ ಸುಂದರ  ಬೆಟ್ಟ ಕೈಬೀಸಿ ಕರೆಯುತ್ತಿತ್ತು.  ನಾವೂ ಸಹ ಹಲಗೂರೈಯ್ಯನ ಹಿಂದೆ  ಹೊರಟೆವು.  ನಡೆಯುತ್ತಿದ್ದ ಹಾದಿಯಲ್ಲಿ ಕಲ್ಲು ಮುಳ್ಳುಗಳು , ಪೊದೆ, ಆನೆ ಜೊಂಡು ಹುಲ್ಲು ಗೋಚರವಾಯಿತು.



ಚಾರಣಕ್ಕೆ ಹೋರಟ  ನಮಗೆ ಕಂಡ ದೂರದ ಬೆಟ್ಟ.



ಕಲ್ಲು ಮುಳ್ಳು , ಹಾಗು ಆನೆ ಹುಲ್ಲಿನಿಂದ ಕೂಡಿದ ಹಾದಿ.



 ಬೆಟ್ಟ ಹತ್ತಲು ಆರಂಭಿಸಿದ ನಮಗೆ ಮೊದಲು ಸುಂದರವಾಗಿ ಕಂಡ ಹಸಿರ ಬೆಟ್ಟ ತನ್ನ ಒಡಲಲ್ಲಿ ಇಟ್ಟುಕೊಂಡಿದ್ದ ಪ್ರಕೃತಿದತ್ತ  ಲಕ್ಷಣಗಳನ್ನು  ಪರಿಚಯ ಮಾಡಲು ಶುರುಮಾಡಿತು.  ಮೊದಲು  ಹಸಿರ ಹುಲ್ಲು  ಹೂವಿನ ಹಾಸಿಗೆ ಅಂತಾ ನಡೆದಿದ್ದ ನಮಗೆ ಅದರಲ್ಲಿನ ಕಲ್ಲು ಮುಳ್ಳುಗಳು  ಪಾದಕ್ಕೆ ಚುಚ್ಚಿ  ತಮ್ಮ ಪ್ರತಾಪ ಮೆರೆದಿದ್ದವು. ಹಾಕಿದ್ದ ಚಪ್ಪಲಿಗಳ ಪ್ರತಾಪ ಅವುಗಳ ಆಟದ ಮುಂದೆ ಏನೂ ನಡೆಯಲಿಲ್ಲ  ಹಿತವಾದ ಗಾಳಿ ಮುದನೀಡಿದರೂ  , ಹಸಿರ ಸಿರಿ ಕಣ್ಣಿಗೆ  ಬಿದ್ದರೂ , ಪಾದಗಳಿಗೆ  ಚುಚ್ಚುತ್ತಿದ್ದ ಚೂಪಾದ ಕಲ್ಲು, ಹಾಗು ಮುಳ್ಳುಗಳು ನಮ್ಮ ಪಾದಗಳಿಗೆ  ಚುಚ್ಚಿ ಸ್ವರ್ಗದಲ್ಲೂ ನರಕ ಇರುತ್ತದೆ ಎಂಬ ಸಂದೇಶ ನೀಡಿದ್ದವು.  ಮೊದ  ಮೊದಲು  ಇವುಗಳಿಗೆ ಭಯಗೊಂಡಿದ್ದ ನಾವು  ಆಮೇಲೆ  ಅವುಗಳನ್ನು ಲೆಕ್ಕಿಸದೆ  ಮುಂದೆ ಸಾಗಿದೆವು. ಆದರೂ  ಎತ್ತರಕ್ಕೆ ಬೆಳೆದ  ಹುಲ್ಲಿನ ನಡುವೆ  ಹಾವುಗಳು, ಅಥವಾ ಹೆಬ್ಬಾವು ಇರುವ ಸಾಧ್ಯತೆ  ತಳ್ಳಿ ಹಾಕುವಂತಿರಲಿಲ್ಲ. ಈ ಪ್ರದೇಶದಲ್ಲಿ ಹೆಬ್ಬಾವುಗಳ ಹಾವಳಿ  ಜಾಸ್ತಿ  ಎಂಬುದು ಇಲ್ಲಿನ ಸ್ಥಳಿಯರ ಅನುಭವದ ಮಾತು.





ಕಾದಿನಿದ ಕಂಡ  ಜಲ ವಿದ್ಯುತ್ ಯೋಜನೆಯ ನೋಟ.

ಕಾಡಿನಲ್ಲಿ ಸಾಗಿದ ನಮಗೆ ಯಾವುದೇ ಪ್ರಾಣಿ ಗೋಚರಿಸದೆ ಇದ್ದರೂ ವಿವಿಧ ಬಗೆಯ ಹಕ್ಕಿಗಳ  ಕಲರವ ಕೇಳುತ್ತಿತ್ತು, ನಮ್ಮ ಗೈಡ್  ಹಲಗೂರಯ್ಯ  ಹಾದಿಯುದ್ದಕ್ಕೂ  ಪರಿಸರದ ಪರಿಚಯ  ಮಾಡುತ್ತಾ ಹೊರಟರು. ಪ್ರಕೃತಿಯ ಬಗ್ಗೆ ಅವರಿಗಿದ್ದ ಅರಿವು ಕಂಡು ಅಚ್ಚರಿಯಾಯಿತು. ಒಂದು ಜಾಗದಲ್ಲಿ ನಿಲ್ಲಿಸಿ  "ಸಾ ಅಲ್ನೋಡಿ   ಬಳಾಪು"   ಅಂದರು ಹೌದು ಇಲ್ಲಿನ ಜನ "ಬ್ಲಫ್ " ಅನ್ನೋ ಊರನ್ನು ಆಡು ಭಾಷೆಯಲ್ಲಿ  "ಬಳಾಪು" ಅನ್ನುತ್ತಾರೆ.  ನಾವು ನಿಂತ ಜಾಗದಿಂದ  "ಏಶಿಯಾ ಖಂಡದಲ್ಲಿ  " ಪ್ರಥಮವಾಗಿ ಜಲ ವಿಧ್ಯುತ್ ಯೋಜನೆ ಕಾರ್ಯಗತ ಗೊಂಡ ಜಾಗಗಳಲ್ಲಿ ಒಂದಾದ    "ಬ್ಲಫ್" ನಲ್ಲಿನ  ವಿಧ್ಯುತ್  ಉತ್ಪಾದನಾ ಕೇಂದ್ರ ಗೋಚರಿಸಿತು.  ಹಾಗು ಟ್ರಾಲಿ ಮನೆ ಹಾಗು ಟ್ರಾಲಿ ಸಾಗುವ ಹಾದಿ  ಸಹ ಒಳ್ಳೆಯ ನೋಟ ನೀಡಿತ್ತು.
                                                   


ಜಲ ವಿಧ್ಯುತ್ ಯೋಜನೆಯ ಟ್ರಾಲಿ ಸಾಗುವ ಹಾದಿ.

ಇನ್ನು ನಮ್ಮ  ಗೈಡ್ ಹಲಗೂರಯ್ಯ ಹೇಳಿದ  "ಬಳಾಪು"  ಅಥವಾ "ಬ್ಲಫ್"  ಬಗ್ಗೆ ತಿಳಿಯೋಣ ಬನ್ನಿ, ಈ ಊರು ಸಹ ಜಲ ವಿಧ್ಯುತ್ ಯೋಜನೆ ಹೊಂದಿದ್ದು, ಶಿಂಷಾ ದಲ್ಲಿ ನಿರ್ಮಿತವಾದ ಕಾಲದಲ್ಲಿಯೇ ಇಲ್ಲಿಯೂ ಜಲ ವಿಧ್ಯುತ್ ಯೋಜನೆ ಆರಂಭ ಮಾಡಲಾಗಿದೆ. ಹತ್ತಿರದಲ್ಲಿ "ಗಗನ ಚುಕ್ಕಿ" ಜಲಪಾತವಿದ್ದು,  ಈ ಜಲಪಾತ ತುಂಬಾ ಹತ್ತಿರ ಹೋಗುವವರೆಗೆ ಕಣ್ಣಿಗೆ ಕಾಣುವುದಿಲ್ಲ. ಆದರೆ ಜಲಪಾತದ ಶಬ್ದ ಬಹಳ ದೂರದ ವರೆಗೆ ಕೇಳಿಸಿ, ನಿಮಗೆ ಇಲ್ಲೇ ಹತ್ತಿರದಲ್ಲೇ ಜಲಪಾತ ಇದೆ ಎಂಬ ಭ್ರಮೆ ಹುಟ್ಟಿಸುತ್ತದೆ, ಈ ರೀತಿ ಭ್ರಮೆ  ಹುಟ್ಟಿಸುವ ಜಲಪಾತ ಇರುವ ಈ ಊರನ್ನು ಬ್ರಿಟೀಷರು " ಬ್ಲಫ್  " ಎಂದು ನಾಮಕರಣ  ಮಾಡಿದ್ದಾರೆ. ಇಂತಹ ಹೆಸರಿನ ಒಂದು ಊರು ನಮ್ಮ ದೇಶದಲ್ಲಿ ಎಲ್ಲೂ ಇಲ್ಲ. ಅದೇ ಈ ಊರಿನ ಹೆಗ್ಗಳಿಕೆ.
 



ಪಕ್ಷಿಲೋಕ , ಹಾಗು ಸಂಸ್ ಕಸಿನ್  ಬ್ಲಾಗಿನ ಸುಮನ ಹಾಗು ದೀಪಕ್ ದಂಪತಿಗಳು 


ಕಾಡಿನಲ್ಲೂ ನಗೆ ಚಿಮ್ಮಿಸಿದ ವೇಣುಗೋಪಾಲ್.


ನಮ್ಮ  ಟ್ರೆಕಿಂಗ್ ಮುಂದುವರೆಯಿತು.  ಕಾಡಿನಲ್ಲಿ ಸುತ್ತಲು ಹೊರಟ  ನಮ್ಮ ತಂಡದ ಯಾರು ಆಯಾಸಗೊಂಡಿರಲಿಲ್ಲ ,  "ಸಂಸ್ ಕಸಿನ್" ಎಂಬ ಅಡಿಗೆ ಬ್ಲಾಗ್ ಹಾಗು "ಪಕ್ಷಿಲೋಕ" ಎಂಬ  ಹಕ್ಕಿಗಳ ಪರಿಚಯದ ಬ್ಲಾಗಿನ  ಸುಮನ ಹಾಗು ದೀಪು  ದಂಪತಿಗಳು  ತಾವು ಕಂಡ  ನೋಟಗಳನ್ನು ಸೆರೆ ಹಿಡಿಯುತ್ತಾ , ಜೊತೆಯಾಗಿ ನಗುತ್ತಾ ಬರುತ್ತಿದ್ದರು, ಇನ್ನು ನಮ್ಮ ವೇಣುಗೋಪಾಲ್  ನಗುತ್ತಾ ಎಲ್ಲಾ ಅನುಭವಗಳನ್ನು  ಖುಷಿಯಿಂದ ಸ್ವೀಕರಿಸುತ್ತಾ ಹಸನ್ಮುಖಿಯಾಗಿ ನಡೆದಿದ್ದರು.ಇನ್ನು ನನ್ನ ಕಸಿನ್ ರವಿಂದ್ರ  ಟ್ರೆಕಿಂಗ್  ನೀರು ಕುಡಿದಂತೆ ಆರಾಮವಾಗಿ ಪ್ರಕೃತಿಯ ಸವಿ ಸವಿಯುತ್ತಿದ್ದ.   ಮುಂದೆ ಸಾಗಿದ ನಮ್ಮನ್ನು ಹಲಗೂರಯ್ಯ  "ಸಾ ಅಲ್ನೋಡಿ  ಸಾ ಆನೆಯ"  ಅಂದರು  ನಾವು ಅವರು ತೋರಿದ ದಿಕ್ಕಿನೆಡೆಗೆ ಕಣ್ಣು ಹಾಯಿಸಿದರೂ  ನಮಗೆ ಆನೆ ಕಾಣಲಿಲ್ಲ.

ಈ ಹಸಿರ ನಡುವೆ ಆನೆಯ ಹುಡುಕಾಟ ನಡೆದಿತ್ತು.

ಇಲ್ಲೆಲ್ಲಿ ಹುಡುಕೋದು ಆನೆಯ ?


 "ಎಲ್ಲಿ ಹಲಗೂರಯ್ಯ  ಆನೆ?" ಅಂತಾ ಮತ್ತಷ್ಟು ಕಣ್ಣುಗಳನ್ನು ಅಗಲ ಮಾಡಿಕೊಂಡು  ಎದುರಿಗೆ ಕಾಣುತ್ತಿದ್ದ ಕಾಡಿನ ಹಸಿರಲ್ಲಿ  ಆನೆಯ ನೋಡಲು ಹುಡುಕಿದೆವು. "ಅಲ್ಲೇ ಅಸೆ ನೋಡಿ ಸಾ".....  , "ಕಿಮಿ ಅಲ್ಲಾಡಿಸುತ್ತಿಲ್ವೆ" , "ಅಲ್ಲೇ ನೋಡಿ ಸಾ ಕಾಣ್ತಾ  ಅದೇ" ಅಂದಾ  ಆದರೆ ಹಸಿರ ಕಾನನದಲ್ಲಿ ಆನೆ ಕಾಣುವಷ್ಟು ನಮ್ಮ ಕಣ್ಣುಗಳು ತೀಕ್ಷ್ಣ ವಾಗಿರಲಿಲ್ಲ . ಆದರೆ ಆ ವಯಸ್ಸಾದ  ನಮಗಿಂತ  ಹಿರಿಯರಾದ  ಆ ಹಲಗೂರಯ್ಯ ನ  ಸೂಕ್ಷ್ಮ  ಕಣ್ಣುಗಳು ಬಹಳ ದೂರದಲ್ಲಿ  ಹಸಿರಿನ ಬೆಟ್ಟದ ನಡುವೆ ಇದ್ದ  ಆನೆಯನ್ನು  ಕಂಡಿದ್ದವು. ನನ್ನ ಜೂಮ್ ಲೆನ್ಸ್ ನಲ್ಲಿ ಇಡೀ ಪ್ರದೇಶವನ್ನು ಜಾಲಾಡಿದೆ ಯಾವ ಪ್ರಯೋಜನವೂ ಆಗದೆ  ಬೆಪ್ಪನಾದೆ. ಹಲಗೂರಯ್ಯ  "ಅಲ್ಲೇ  ಇತ್ತು ನಿಮಗೆ ಕಾಣಲಿಲ್ಲ ಅಂತೀರಲ್ಲಾ"   ಅಂತಾ ಹೇಳುತ್ತಾ ಮುನ್ನಡೆದರು.


ಮರದಲ್ಲಿ ಗೊಂದು ತೆಗೆಯುವ ನೋಟ,
ಕಣ್ಣಿಗೆ ಕಂಡ  ಚಿಟ್ಟೆ 
ತಲೆ ಎತ್ತಿ ನೋಡಿದಾಗ ಕಂಡ ಹಸಿರ ಚಪ್ಪರ.  


ಹಾಗೆ ಮುಂದೆ ನಡೆದ ನಮಗೆ ಹಲಗೂರಯ್ಯ  ಅಲ್ಲಿನ ಮರಗಳ ಪರಿಚಯ ಮಾಡುತ್ತಾ ಹೊರಟರು, ಕೆಲವು ಹಕ್ಕಿಗಳ ಬಗ್ಗೆ ಹೇಳುತ್ತಾ  ನಡೆದರೂ. ಅಲ್ಲೇ ಇದ್ದ ಒಂದು ಮರದಲ್ಲಿ ಗೊಂದು ಕಿತ್ತು  ನಮಗೆ ನೀಡಿದರು.  ಹೀಗೆ ಸಾಗಿತ್ತು ನಮ್ಮ ಟ್ರೆಕಿಂಗ್. ದಾರಿಯಲ್ಲಿ ಒಂದು ಏರೋಪ್ಲೇನ್  ಚಿಟ್ಟೆ   ತನ್ನ ಬಾಲ ಎತ್ತಿಕೊಂಡು  ನನ್ನ ಕ್ಯಾಮರಾಗೆ  ಪೋಸ್ ಕೊಟ್ಟಿತು.   ಸಾಗುತ್ತಾ ತಲೆ ಎತ್ತಿ  ನೋಡಿದರೆ ಕಾಣಿಸಿತು ಹಸಿರ ಚಾವಣಿ ಹಾಕಿದ್ದ  ಮರಗಳ ಕೊಂಬೆ. ಬಹಳ ಹೊತ್ತು ಅಲೆದಾಟ ನಡೆಸಿದ ನಾವು ಬೆಟ್ಟ ಇಳಿಯಲು  ಶುರುಮಾಡಿದೆವು.




ಮುಂದಿನ ದಾರಿ ಎಲ್ಲಿದೆ 


ಇಳಿಯುವ ಹಾದಿಯಲ್ಲಿ ನಮ್ಮ ಹಲಗೂರಯ್ಯ  ಸ್ವಲ್ಪ ಗಲಿಬಿಲಿಗೊಂಡು  ಒಂದೆಡೆ  ತಂದು ನಿಲ್ಲಿಸಿದರು , ನೋಡಿದರೆ ಯಾವ ಕಡೆ ಹೋಗಲೂ  ಜಾಗವಿಲ್ಲಾ, ಸಂಪೂರ್ಣ ಪ್ರದೇಶ ಮುಳ್ಳು ಗಿಡಗಳಿಂದ  ತುಂಬಿತ್ತು, ಹೇಗೋ ದಾರಿ ಮಾಡಿಕೊಂಡು  ತೆವಳುತ್ತಾ ನಡೆದೆವು, ಆ ಸಮಯದಲ್ಲಿ ನನಗೆ  ಏನೋ ಕಚ್ಚಿದ ಅನುಭವ   ಬಲ ಕಾಲಿನ ತೊಡೆಗೆ  ಏನೋ ಕಚ್ಚಿದಂತೆ ಆಗಿ ಉರಿಯ ತೊಡಗಿತು.  ಮನದಲ್ಲಿ  ಹಾವೆನಾದರು ಕಚ್ಚಿತೆ ಎನ್ನುವ  ಆತಂಕ. ಸ್ವಲ್ಪ ಮುಂದೆ ಹೋಗಿ ಆ ಜಾಗ ನೋಡಿದರೆ  ತೊಡೆಯಲ್ಲಾ   ಕೆಂಪಾಗಿತ್ತು,  ಆದರೆ ರಕ್ತ ಬಂದಿರಲಿಲ್ಲ  , ಆಮೇಲೆ ತಿಳಿಯಿತು, ಅದು ಯಾವುದೋ ಗಿಡದ ಮುಳ್ಳು  ಚುಚ್ಚಿ ಆದ ಅನಾಹುತ ಅಂತ.  ಅದರ ಉರಿ ಸುಮಾರು ಎರಡು ಘಂಟೆಗಳ ಕಾಲ ನನ್ನನ್ನು ಕಾಡಿತು . ಹಾಗು ಹೀಗೂ ಬೆಟ್ಟ ಇಳಿದು ರೆಸಾರ್ಟಿಗೆ  ವಾಪಸ್ಸು ಬಂದು ಉಸ್ಸಪ್ಪಾ  ಅಂತಾ ಕುಸಿದು ಕುಳಿತೆವು


.
ಟ್ರೆಕಿಂಗ್ ಮುಗಿಸಿ ಕುಳಿತ ರವಿಂದ್ರ 

  ಎದುರಿಗೆ ತಣ್ಣನೆಯ ನಿಂಬೆ ಶರಬತ್ತು,  ಹಾಗು ಹಸಿದ ಹೊಟ್ಟೆಗೆ ಬಿಸಿ ಬಿಸಿ  ಊಟ ಕಾಯುತ್ತಿದ್ದವು,..................., ಮೊದಲ ಹಂತದ ಟ್ರೆಕಿಂಗ್ ಮುಗಿದಿತ್ತು, ಇನ್ನೂ ಹಲವು ಚಟುವಟಿಕೆ ಬಾಕಿಯಿತ್ತು.  ................!!!!