Sunday, January 8, 2017

ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ.



ಶ್ರೀ  ಲಕ್ಷ್ಮೀಶ್ ಹೆಗ್ಡೆ  ಶಿರಸಿಯಲ್ಲೊಬ್ಬ  ಆಧುನಿಕ  ಬಿ.ಎಲ್. ರೈಸ್   



ನನಗೆ   ಒಬ್ಬರನ್ನು ಅನವಶ್ಯಕವಾಗಿ  ಹೊಗಳೋದು  ಆಗಿಬರಲ್ಲಾ,  ಹಾಗಾಗಿ  ಆದಷ್ಟು  ವ್ಯಕ್ತಿಗಳ  ಬಗ್ಗೆ  ನನ್ನ ಬ್ಲಾಗ್ನಲ್ಲಿ  ಬರಹಗಳು ಕಡಿಮೆ ಇರುತ್ತದೆ. ಆದರೂ  ಕೆಲವೊಮ್ಮೆ  ಕೆಲವು ಮಹನೀಯರು  ತಮ್ಮ   ಸಾಧನೆಗಳಿಂದ  ನನ್ನ  ಮನಸಿನಲ್ಲಿ  ನಿಂತುಬಿಡುತ್ತಾರೆ. ಇನ್ನು ಅಂತಹವರ   ಜ್ಞಾನ  ಭಂಡಾರ  ಕಂಡು ನಾನು  ಮೂಕ ವಿಸ್ಮಿತನಾಗಿಬಿಡುತ್ತೇನೆ  . ಅಂತಹ ಒಬ್ಬ   ಅಪರೂಪದ   ವ್ಯಕ್ತಿಯನ್ನು  ನನ್ನ ಬ್ಲಾಗಿನ  ಆವರಣಕ್ಕೆ ಕರೆ   ತಂದು ಅವರ ಪರಿಚಯ   ಮಾಡಿಕೊಡಲು  ನಿಜಕ್ಕೂ   ಸಂತಸ ಪಡುತ್ತೇನೆ.



ಆಗಿನ್ನೂ ಶಿರಸಿಗೆ  ಬಹಳ ವರ್ಷಗಳ ನಂತರ  ಹೊರಟ ಸಮಯ ,  ಶಿರಸಿ ಸಮೀಪದ  ಕೊಳಗಿ ಬೀಸ್  ನಲ್ಲಿ   ಶ್ರೀ ಗುರುಮೂರ್ತಿ  ಹೆಗ್ಡೆ  ಅವರ ಸಹೋದರನ  ವಿವಾಹಕ್ಕೆ   ಆಮಂತ್ರಣವಿತ್ತು, ಹೊರಡುವ ಮುಂಚೆ ಆಪ್ತ  ಮಿತ್ರ  ಪ್ರಕಾಶ್   ಹೆಗ್ಡೆ ಯವರಿಗೆ  ಶಿರಸಿ ಇತಿಹಾಸ  ತಿಳಿದವರ   ಬಗ್ಗೆ  ಮಾಹಿತಿ ಕೊಡುವಂತೆ  ಪೀಡಿಸಿದೆ , ಪಾಪ  ಅವರೂ ಸಹ   ತಮಗೆ ತಿಳಿದ  ಹಲವಾರು   ವ್ಯಕ್ತಿಗಳ  ವಿವರ ಕೊಟ್ಟರು ಆದರೆ  ಆ ಸಮಯದಲ್ಲಿ  ಶಿರಸಿ  ಮಾರಿಕಾಂಬೆ ಜಾತ್ರೆ  ಇದ್ದ ಕಾರಣ,  ನನಗೂ ಸಮಯ ಕಡಿಮೆ  ಇದ್ದ  ಕಾರಣ, ಮತ್ತೊಬ್ಬ  ಪ್ರೀತಿಯ ತಮ್ಮ  ಹರ್ಷಹೆಗ್ಡೆ  ಜೊತೆ  ಅಲೆದಾಡಿ  ಶಿರಸಿ  ಸುತ್ತ  ಮುತ್ತ  ಅಲೆದಾಡಿ ಸಾಕಷ್ಟು ಛಾಯಾಚಿತ್ರಗಳು  ಹಾಗು  ಸಿಕ್ಕಷ್ಟು   ಮಾಹಿತಿ   ದೋಚಿಕೊಂಡು  ಬಂದಿದ್ದೆ, ಆಗಿನ್ನೂ  ಶಿರಸಿಯ ಬಗ್ಗೆ ಬ್ಲಾಗ್ ನಲ್ಲಿ ಬರೆಯುವ ಮನಸು ಮಾಡಿರಲಿಲ್ಲ. ಒಂದು ದಿನ ಬ್ಲಾಗ್  ಬರಹಕ್ಕೆ ಏನೂ ವಿಚಾರ ಸಿಗದಿದ್ದಾಗ  ಶಿರಸಿಯ ಛಾಯಾಚಿತ್ರಗಳನ್ನು ನೋಡುತ್ತಾ  ಕುಳಿತೆ. ಸಹಸ್ರಲಿಂಗದ ಛಾಯಾಚಿತ್ರ ನೋಡುತ್ತಾ  ಈ ಪ್ರಾಂತದಲ್ಲಿ  ಏನೋ ವಿಶೇಷ ಇದೆ ಅನ್ನಿಸಿತು. ಅದರಂತೆ ಹುಡುಕಾಟ ನಡೆಸಿ, ಹಳೆ  ಗೆಝೆಟಿಯರ್ ಗಳನ್ನೂ ತಿರುವು ಹಾಕತೊಡಗಿದೆ. ಆಹಾ ಇಷ್ಟೆಲ್ಲಾ ಮಾಹಿತಿ ಇದೆಯಾ ಅನ್ನಿಸಿತು.  ಆದರೂ  ಸ್ಥಳೀಯ ವ್ಯಕ್ತಿಗಳ ಮಾಹಿತಿ ಇದ್ದರೆ ಚೆನ್ನ  ಅನ್ನಿಸಿ  ಹುಡುಕಾಟ ನಡೆಸುತ್ತಿದ್ದಾಗ  ನನಗೆ ಬಹುಮಾನವಾಗಿ ಸಿಕ್ಕವರೇ   ಶ್ರೀ  ಲಕ್ಷ್ಮೀಶ್ ಹೆಗ್ಡೆ  ಅವರು,  ಹೇಗೋ ಸಿಕ್ಕ  ಅವರ  ಮೊಬೈಲ್  ನಂಬರ್ ಗೆ ಕರೆ ಮಾಡಿದಾಗ  ಆತ್ಮೀಯವಾಗಿ ಪರಿಚಯ ಮಾಡಿಕೊಂಡು  ಶಿರಸಿ ಇತಿಹಾಸದ  ಬಗ್ಗೆ ಮೈಸೂರಿನಿಂದ  ಕರೆ  ಮಾಡಿದ್ದಕ್ಕೆ ಹರುಷ  ವ್ಯಕ್ತ ಪಡಿಸಿ.  ಕೆಲವು ಮಾಹಿತಿ ನೀಡಿದರು.  ಅಲ್ಲಿಂದ  ನಮ್ಮಿಬ್ಬರ  ಪರಿಚಯ ಆರಂಭವಾಯಿತು. ಹಲವಾರು ಸಾರಿ  ಶಿರಸಿಗೆ ಬಂದ್ರೂ  ಅವರ ಭೇಟಿಮಾಡಲು ಆಗಿರಲಿಲ್ಲ. 



ಇತಿಹಾಸ   ಜಾತ್ರೆಯ  ಮೆರವಣಿಗೆಗೆ   ಶಿರಸಿ ಮಾರಿಕಾಂಬೆ ಆಶೀರ್ವಾದ 


ಶಿರಸಿಯ  ಹಲವಾರು ವಿಚಾರಗಳ ಬಗ್ಗೆ  ಮಾಹಿತಿ  ತಿಳಿಯಲು ಇವರನ್ನು ಬಹಳಷ್ಟು ಸಾರಿ ಫೋನ್ ಮೂಲಕ ನಾನು ಕಾಡಿಸಿದ್ದರೂ  ಬೇಸರ ಮಾಡಿಕೊಳ್ಳದೆ, ಇತಿಹಾಸದ  ಮಾಹಿತಿ ನೀಡುತ್ತಿದ್ದ ಇವರನ್ನು ಭೇಟಿಯಾಗುವ ಹಂಬಲ  ಶುರುವಾಯ್ತು. ಅದಕ್ಕೆ ಕಾಲ ಕೂಡಿಬಂದಿದ್ದೆ  ಶಿರಸಿಯಲ್ಲಿ  ಜರುಗಿದ  ರಾಜ್ಯಮಟ್ಟದ  ಇತಿಹಾಸ ಸಮ್ಮೇಳನದಲ್ಲಿ. ನಿಜಕ್ಕೂ ಶಿರಸಿಯಂತಹ  ಒಂದು ತಾಲೂಕು ಕೇಂದ್ರದಲ್ಲಿ  ಒಂದು  ರಾಜ್ಯಮಟ್ಟದಲ್ಲಿ   ಜರುಗುವ  ಕಾರ್ಯಕ್ರಮಕ್ಕಿಂತ  ಶಿಸ್ತು ಬದ್ದವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ  ಆಯೋಜಿಸಿ  ನಿರ್ವಹಣೆ ಮಾಡಿದ್ದು  ಲಕ್ಷ್ಮೀಶ್ ಹೆಗ್ಡೆಯವರ  ಸಾಹಸಕ್ಕೆ ಸಾಕ್ಷಿ,


ನನಗೂ ಇಷ್ಟಾ  ಶಿರಸಿಯ  ಇತಿಹಾಸ  ಅಂದ್ರೂ ಕಮಲಾ ಹಂ  ಪ. ನಾ . 


ಶಿರಸಿಯ ಸುತ್ತಮುತ್ತ  ಬಹಳಷ್ಟು ಐತಿಹಾಸಿಕ ತಾಣಗಳಿವೆ, ಪ್ರಕೃತಿಯ ಮಡಿಲಲ್ಲಿ   ಅನೇಕ  ಇತಿಹಾಸದ  ಕುರುಹುಗಳನ್ನು ಬಚ್ಚಿಟ್ಟುಕೊಂಡು  ಶಿರಸಿ  ಇತಿಹಾಸಕಾರರಿಗೆ  ಸವಾಲಾಗಿ ನಿಂತಿದೆ. ಇಂತಹ ಇತಿಹಾಸದ ಚಕ್ರವ್ಯೂಹ ಭೇದಿಸುತ್ತ , ರಾಜ್ಯಮಟ್ಟದ ಇತಿಹಾಸ  ಜಾತ್ರೆ  ಏರ್ಪಡಿಸುತ್ತ   ಹಲವಾರು  ದಿಗ್ಗಜರ  ಸಮಕ್ಷಮದಲ್ಲಿ   ನೋಡ್ರಪ್ಪ  ನಮ್ಮೂರ ಇತಿಹಾಸದ ತಾಕತ್ತು ಇದು ಅಂತಾ ತೋರಿಸುವ  ಶ್ರೀ ಲಕ್ಷ್ಮೀಶ್ ಹೆಗ್ಡೆ  ರ    ಛಲಕ್ಕೆ  ಯಾರಾದ್ರೂ ಸೈ  ಅನ್ನಲೇಬೇಕು.  ಶಿರಸಿಯ ಇತಿಹಾಸ  ಹೇಳುವ  ಇವರ ಇತಿಹಾಸ   ಏನೂ ಅಂತಾ  ಕೆದಕಿದಾಗ   ಸಿಕ್ಕಿದ್ದು  ಮತ್ತೊಂದು ಇತಿಹಾಸ .

ಇತಿಹಾಸಕಾರ  ಹಾಗು ಅವರ ಅಂತರಂಗ      {ಚಿತ್ರ ಕೃಪೆ ಲಕ್ಷ್ಮೀಶ್ ಹೆಗ್ಡೆ. }



 




ಹೌದ್ರೀ  ಇತಿಹಾಸಕಾರನಿಗೂ ಒಂದು ಇತಿಹಾಸ  ಇರುತ್ತೆ,   ಬನ್ನಿ ಬನ್ನಿ ಹೀಗೆ ...! ಅದೊಂದು ದಿನ   ದಿನಾಂಖ  18 ಫೆಬ್ರವರಿ  1984  ರಂದು ಶಿರಸಿಯ  ಸೋಂದೆ ಸಮೀಪದ  ಬಾಡ್ಲಾ ಕೊಪ್ಪದ    ಶ್ರೀ ರಾಮಚಂದ್ರ ಹೆಗ್ಡೆ  ಹಾಗು ಮಮತಾ ಹೆಗ್ಡೆ ಯವರ ಮನೆಯಲ್ಲಿ  ಸಂಭ್ರಮವೋ ಸಂಭ್ರಮ.  ಅಂದು  ಒಂದು ಗಂಡು ಮಗು  ಅಳುತ್ತಾ  ಅಳುತ್ತಾ  ಐತಿಹಾಸಿಕ  ಸೋಂದಾ  ಪ್ರದೇಶದಲ್ಲಿ  ತನ್ನ ಜನ್ಮ ಪಡೆದಿತ್ತು. ಮನೆಯಲ್ಲಿನ ಹಿರಿಯರ ಪ್ರಭಾವವೋ ಅಥವಾ ಆ ಮಗು ಜನಿಸಿದ  ಮಣ್ಣಿನ  ಗುಣವೋ ಕಾಣೆ  ಆ ಮಗು ಬೆಳೆಯುತ್ತಾ  ಬೆಳೆಯುತ್ತಾ   ಇತಿಹಾಸದ ಕಡೆ  ಆಕರ್ಷಿತನಾಗಿ  ಶಿರಸಿ ಸುತ್ತ ಮುತ್ತಲಿನ    ದೇವಾಲಯ, ವೀರಗಲ್ಲು, ಮಾಸ್ತಿ ಕಲ್ಲು,  ಶಾಸನಗಳು,  ಸ್ಮಾರಕಗಳನ್ನು  ಪ್ರೀತಿಸತೊಡಗಿತು.ಆ ಮಗುವೇ  ಇಂದಿನ ಶ್ರೀಯುತರಾದ  ಲಕ್ಷ್ಮೀಶ್ ಹೆಗ್ಡೆಯವರು.      ಬಿ. ಎ . ಮುಗಿಸಿದ  ನಂತರ ಪುರಾತತ್ವ ಶಾಸ್ತ್ರ , ಇತಿಹಾಸದಲ್ಲಿ ಎಂ. ಎ . ಮಾಡಿ ನಂತರ ಎಂ. ಫಿಲ್.  ಮಾಡಿದರು, ನಂತರ ಇತಿಹಾಸಕ್ಕೆ ಶಾಸನಗಳೇ ಭದ್ರ ಬುನಾದಿ ಎಂದು ತಿಳಿದು  ಶಾಸನ ಶಾಸ್ತ್ರದಲ್ಲಿ ಡಿಪ್ಲಮೋ[ Diplama in  epigraphy] ಮಾಡಿ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ. ಇನ್ನೇನು ಇಷ್ಟೆಲ್ಲಾ ಮಾಡಿದ ಮೇಲೆ ಕೆಲ್ಸಾ ಸಿಗೋಲ್ವೆ  ಅನ್ನೋಹಾಗೆ   ಸೋಂದೆ  ಸ್ವರ್ಣವಲ್ಲಿ  ಸಂಸ್ಥಾನ ಮಠ ಕ್ಕೆ ಸೇರಿದ  ಶ್ರೀನಿಕೇತನ  ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ  ಜೊತೆಗೆ   ಆಡಳಿತಾಧಿಕಾರಿ  ಹುದ್ದೆ  ಲಭಿಸುತ್ತದೆ. ವೃತ್ತಿ ಯಾವುದಾದ್ರೇನು ಪ್ರವೃತ್ತಿ ಗೆ ನ್ಯಾಯ ದೊರಕಬೇಕಲ್ಲ.  ಶಿರಸಿ  ಸುತ್ತಮುತ್ತಲಿನ  ಇತಿಹಾಸದ   ಸೆಳೆತ  ಇವರನ್ನು ಆವರಿಸಿದ ಕಾರಣ,  ಪ್ರವೃತ್ತಿಯನ್ನೇ  ವೃತ್ತಿ ಮಾಡಿಕೊಳ್ಳುತ್ತಾರೆ  ಶಿರಸಿಯ  ಇತಿಹಾಸಕ್ಕೆ ಏನಾದರೂ ಕೊಡುಗೆ ನೀಡುವ  ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ..



ಸೋಂದಾ ಅರಸರ ಕಾಲ್ಪನಿಕ  ಚಿತ್ರ. 


  2007 ರಲ್ಲಿ ಉತ್ತರ ಕನ್ನಡ  ಜಿಲ್ಲೆ ಅದರಲ್ಲೂ ವಿಶೇಷವಾಗಿ  ಶಿರಸಿಯ ಸುತ್ತ ಮುತ್ತ ಐತಿಹಾಸಿಕ  ಬನವಾಸಿ, ಸುಧಾಪುರ ಅಥವಾ ಸೋಂದೆಯ  ಅರಸು ಮನೆತನ , ಒಂದೇ ಎರಡೇ  ಬಗೆದಷ್ಟು  ಇತಿಹಾಸದ  ಅಚ್ಚರಿಗಳು, ಮಾಹಿತಿ ಸಿಗುತ್ತವೆ, ಲಕ್ಷ್ಮೀಶ್ ಹೆಗ್ಡೆ  ಅವರು ಶಿರಸಿ ಸುತ್ತ ಮುತ್ತ ಶಾಸನ, ವೀರಗಲ್ಲುಗಳ   ಅಧ್ಯಯನ,       ಐತಿಹಾಸಿಕ   ಸೋಂದೆ ಅರಸರುಗಳ  ಬಗ್ಗೆ ಅವರ  ಕೋಟೆಗಳ , ಬಗ್ಗೆ ಸಂಶೋಧನೆ , ಬನವಾಸಿಯ  ಚಾಲುಕ್ಯರ  ಬಗ್ಗೆ  ಸಂಶೋಧನೆ  ಮಾಡುತ್ತಾ ಮಾಡುತ್ತಾ   ಹಳೆ ಮೈಸೂರು ಸಂಸ್ಥಾನದಲ್ಲಿ   ಬೆಂಜಮಿನ್  ಲೆವಿಸ್  ರೈಸ್  ಅವರು ಮಾಡಿದ  ಐತಿಹಾಸಿಕ  ಸಂಶೋಧನೆಗಳಿಗೆ ಸರಿ ಸಮಾನವಾಗಿ  ಇತಿಹಾಸದ ವಿಚಾರಗಳನ್ನು ಹೆಕ್ಕಿ ತೆಗೆದು  ಜನರ ಮುಂದಿಡುತ್ತಾರೆ.  ನಂತರ ಅಮೇರಿಕಾದ ಮಿಚಿಗನ್  ವಿಶ್ವವಿದ್ಯಾಲಯದ   ಸಂಶೋಧಕರಾದ "ಎಲಿಜಬತ್ ಬ್ರಡ್ಜಸ್ "  ರವರ  ಜೊತೆಯಲ್ಲಿ  ಇಕ್ಕೇರಿ ಹಾಗು ಕೆಳದಿ   ಸಂಶೋಧನೆಯಲ್ಲಿ  ಕಾರ್ಯನಿರ್ವಹಿಸಿ, ವಿದೇಶಿಯರು  ಹೇಗೆ  ಐತಿಹಾಸಿಕ  ವಿಚಾರಗಳನ್ನು ಸಂಶೋಧನೆ ಮಾಡುತ್ತಾರೆ ಎಂಬುದನ್ನು  ತಿಳಿದುಕೊಳ್ಳುತ್ತಾರೆ. ಅನುಭವ  ಮಾಗಿದಂತೆ  ಬರೆಯುವ ಕೈಗಳು  ಬರೆಯುತೊಡಗುತ್ತವೆ.  ಈ ಬರವಣಿಗೆಯಿಂದ  ಒಂಬತ್ತು  ಐತಿಹಾಸಿಕ ಕೃತಿಗಳು, ಹತ್ತು  ಐತಿಹಾಸಿಕ  ನಾಟಕಗಳು  ಉದಯವಾಗುತ್ತವೆ. ಐತಿಹಾಸಿಕ ನಾಟಕಗಳ  ಪಾತ್ರಗಳಿಗೆ  ಜೀವಕೊಡಲು  "ರಂಗ ಚರಿತ " ಎಂಬ  ರಂಗ ಸಂಘಟನೆಯನ್ನು  ಹುಟ್ಟುಹಾಕುತ್ತಾರೆ. ಈ ಮೂಲಕ  ಸಮಾಜಕ್ಕೆ ಇತಿಹಾಸದ  ಬಗ್ಗೆ ತಿಳುವಳಿಕೆ  ನೀಡಲು  ಹಾದಿ ಕಂಡುಕೊಳ್ಳುತ್ತಾರೆ.

ಬನ್ನಿ ಇತಿಹಾಸ  ತಿಳಿಯೋಣ

ಇತಿಹಾಸದೆಡೆಗೆ  ತುಡಿಯುತ್ತಿದ್ದ  ಶ್ರೀ ಲಕ್ಷ್ಮೀಶ್ ಹೆಗ್ಡೆ  ಸುಮ್ಮನೆ ಕೂರುವ  ವ್ಯಕ್ತಿಯಲ್ಲ  ಜನರಲ್ಲಿ ಇತಿಹಾಸ ಪ್ರೀತಿ  ಬೆಳಸಲು, ರಾಜ್ಯ ಮಟ್ಟದ ಇತಿಹಾಸದ   ಜಾತ್ರೆಯನ್ನು  ಕಳೆದ ಎರಡು ವರ್ಷಗಳಿಂದ  "ಉತ್ತರ ಕನ್ನಡ  ಜಿಲ್ಲಾ ಚರಿತ್ರಾ  ಅಭಿಯಾನ" ಎಂಬ   ಹೆಸರಿನಲ್ಲಿ  ಕಾರ್ಯಕ್ರಮ  ಮಾಡುತ್ತಿದ್ದಾರೆ  , ಸುಮಾರು ಒಂದೂವರೆ ತಾಸು  ಇತಿಹಾಸದ ಹಲವು ವಿಚಾರಗಳ ಬಗ್ಗೆ  ವಿದ್ವಾಂಸರಿಂದ   ವಿಚಾರ ಮಂಡನೆ  , ಉಪನ್ಯಾಸ, ನಂತರ  ದೃಶ್ಯ ಮಾಧ್ಯಮದ ಮೂಲಕ,  ಪ್ರಹಸನಗಳ ಮೂಲಕ  , ಉತ್ತರ ಕನ್ನಡ ಜಿಲ್ಲೆಯ,   ಇತಿಹಾಸದ ವಿಚಾರಗಳನ್ನು    ಜನರಿಗೆ  ಮನಮುಟ್ಟುವಂತೆ   ತಿಳಿಸಿಕೊಡುತ್ತಿದ್ದಾರೆ.  

 
ಇತಿಹಾಸ ತಿಳಿಯಲು ಬಂದ  ಮನಸುಗಳು 


ಹರಿಯುವ ನದಿಯನ್ನು ನಿಲ್ಲಿಸಲು ಸಾಧ್ಯವೇ,   ಹರಿಯುತ್ತಲೇ ಇರುತ್ತದೆ  ಹಾಗೆಯೇ  ಇವರ ಇತಿಹಾಸದ ಅಭಿಯಾನ  ಮುಂದುವರೆದು ಕಳೆದ ನಾಲ್ಕು  ವರ್ಷಗಳಿಂದ   " ನಮ್ಮ ನೆಲದ ಕಥೆ " ಎನ್ನುವ ಅಂಕಣದ ಮೂಲಕ  ಜನರಿಗೆ ಇತಿಹಾಸದ ಕೌತುಕಮಯ ವಿಚಾರಗಳನ್ನು  ತಿಳಿಸಿಕೊಡುತ್ತಿದ್ದಾರೆ.   ಇದನ್ನು ಓದಿದ ಯಾರಾದ್ರೂ   ಅಚ್ಚರಿಯಿಂದ   "ಆಹಾ  ನಮ್ಮೂರಿನಲ್ಲಿ ಹೀಗೂ ಉಂಟಾ.....?  "   ಅನ್ನಲೇಬೇಕು ಹಾಗಿರುತ್ತವೆ    ಮಾಹಿತಿ.  ಯಾರಿಗೆ ತಾನೇ  ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇರೋಲ್ಲಾ   ಹೇಳಿ,  ಹಾಗಾಗೇ   ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರು  ತಮ್ಮ ಸುತ್ತಮುತ್ತಲಿನ ಸ್ಥಳೀಯ ಇತಿಹಾಸ   ಕುರಿತು ಗಂಭೀರ  ಚಿಂತನೆ ನಡೆಯುವಂತಾಗಲು    ರಾಜ್ಯ ಮಟ್ಟದ  ಇತಿಹಾಸ ಸಮ್ಮೇಳನ   ಆಯೋಜನೆಗೆ ಮುಂದಾಗುತ್ತಾರೆ.  ಜೊತೆಗೆ   ಇತಿಹಾಸದ  ಪಯಣದಲ್ಲಿ ಕಾಣಸಿಗುವ ಸಾಧಕರನ್ನು ಗೌರವಿಸಲು ಸೋದೆ ಸದಾಶಿವರಾಯ  ಪ್ರಶಸ್ತಿಯನ್ನು   ಪ್ರತಿಷ್ಠಾಪಿಸುತ್ತಾರೆ  . ಕಳೆದ ಎರಡು ವರ್ಷಗಳಿಂದ   ಅದ್ಭುತವಾದ  ಯಶಸ್ಸನ್ನು   ಈ  ಇತಿಹಾಸ ಸಮ್ಮೇಳನ  ಗಳಿಸಿ ಶಿರಸಿ  ಊರಿನ   ಗೌರವಕ್ಕೆ  ಇತಿಹಾಸದ  ಹೆಮ್ಮೆಯ ಕಿರೀಟ  ತೊಡಿಸಿದೆ.  ನಾಡಿನ ಹಲವಾರು  ಪ್ರಖ್ಯಾತ  ಇತಿಹಾಸಕಾರರು   ಇದರಲ್ಲಿ ಭಾಗವಹಿಸಿ   ಶಿರಸಿಯ  ಇತಿಹಾಸದ  ಗೌರವವನ್ನು ಹೆಚ್ಚಿಸಿದ್ದಾರೆ.
ಅರೆ ಇತಿಹಾಸದ  ಸಮ್ಮೇಳನಕ್ಕೆ  ಇಷ್ಟು ಜನ ಬರ್ತಾರಾ...?


ಇತಿಹಾಸದ ಹುಚ್ಚನ್ನು ಹತ್ತಿಸಿಕೊಂಡವರು ಸುಮ್ಮನಿರಲು ಸಾಧ್ಯವೇ ...? ಮುಂದಿನ ಪೀಳಿಗೆಯವರು  ಇತಿಹಾಸದ ತೇರನ್ನು ಎಳೆಯ ಬೇಕಲ್ಲವೇ ...? ಅದಕ್ಕಾಗಿ  ತಮ್ಮ ಸಂಸ್ಥೆ   ಶ್ರೀ ನಿಕೇತನದ   ಮಕ್ಕಳಿಗೆ   ಇತಿಹಾಸದ ರುಚಿ ಹತ್ತಿಸಲು  ಶ್ರಮಿಸುತ್ತಿದ್ದಾರೆ, ಹಾಗಾಗಿ ಮಕ್ಕಳಿಂದಲೇ  ಇತಿಹಾಸದ ವಿಚಾರಗಳನ್ನು  ಅಧ್ಯಯನ  ಹಾಗು ಸಂಶೋಧನೆ ಮಾಡಿಸಿ  ನಾಡಿನ  ಐತಿಹಾಸಿಕ  ಸ್ಥಳ ಬನವಾಸಿಯ ಬಗ್ಗೆ  ಮಕ್ಕಳಿಂದಲೇ ಗ್ರಂಥ ರಚನೆ  ಮಾಡಿಸಿದ್ದು   ನಿಜಕ್ಕೂ ಹೆಮ್ಮೆ ಪಡುವ   ವಿಚಾರ.  ೨೦೧೩ ರಲ್ಲಿ  ಆ ಇತಿಹಾಸ ಕಾರರ  ಬಗ್ಗೆ ವಿಚಾರ ತಿಳಿದು ಇವರ ಸಂಶೋಧನಾ ಸಾಹಿತ್ಯಕ್ಕಾಗಿ   ಡಾಕ್ಟರ್ ಎಂ.ಎಂ. ಕಲಬುರ್ಗಿಯವರಿಂದ  " ಬಸವರಾಜ ಕಟ್ಟೇಮನಿ  ರಾಜ್ಯ ಪ್ರಶಸ್ತಿ"  ನೀಡಿ  ಗೌರವಿಸಲಾಗಿದೆ.


ಬನವಾಸಿಯ ಮೂಲ ಮಧುಕೇಶ್ವರ ದೇವಾಲಯ. 


ಇತಿಹಾಸವನ್ನೇ  ಉಸಿರಾಡುತ್ತಿರುವ  ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರ ಸಾಧನೆಯನ್ನು ಯಾರೂ ಗುರುತಿಸಲಿಲ್ವೇ  ಅಂತಾ  ಅಂದುಕೊಂಡಿರಾ ...?  ನಿಜ   ಇಂತಹ ಸಾಧನೆಗಳನ್ನು  ಗುರುತಿಸುವವರು ಬಹಳ ಕಡಿಮೆ, ಜೊತೆಗೆ  ಇಂತಹ  ಅದ್ಭುತ  ವ್ಯಕ್ತಿಗಳು  ಪ್ರಚಾರ ಪ್ರಿಯರಲ್ಲಾ, ಸದ್ದಿಲ್ಲದೇ  ತಮ್ಮ ಪಾಡಿಗೆ   ತಾವು  ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ.  "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ  " ಎನ್ನುವ ಕವಿತೆಗೆ   ಅನ್ವರ್ಥವಾಗಿ  ಬದುಕುವ  ಈ ಇತಿಹಾಸಕಾರನನ್ನು  ಕನ್ನಡ ನಾಡಿಗೆ ಕೊಡುಗೆ ನೀಡಿದ "ಶಿರಸಿ"  ಗೆ  ಅಲ್ಲಿನ ಇತಿಹಾಸಕ್ಕೆ  ಒಮ್ಮೆ ಜೈ ಅಂದುಬಿಡೋಣ.



2 comments:

Srikanth Manjunath said...

ಸುಂದರ ಮಾಹಿತಿ ಬಾಲು ಸರ್.. ಇತಿಹಾಸದ ರುಚಿ ಬಲ್ಲವರೇ ಬಲ್ಲರು.. ಸದ್ದಿಲ್ಲದೆ ಅವರ ಅಭಿರುಚಿಯನ್ನು ಸವಿರುಚಿಯನ್ನಾಗಿ ಮಾಡಿಕೊಂಡಿರುವ ಶ್ರೀ ಲಕ್ಷ್ಮೀಶ್ ಸರ್ ಗೆ ನಮ್ಮೆಲ್ಲರ ಕಡೆಯಿಂದ ಅಭಿನಂದನೆಗಳು.

ಅದ್ಭುತ ಮಾಹಿತಿ ಕೇಂದ್ರವಾಗಿ ಬೆಳೆಯುತ್ತಿರುವ ಅವರಿಗೆ ತಾಯಿ ಭುವನೇಶ್ವರಿ ಆಶೀರ್ವಾದ ಸದಾ ಇರುತ್ತದೆ

Unknown said...

ತುಂಬಾ ಸಂತಸದ ವಿಚಾರ.. ಒಳ್ಳೆಯ ಮಾಹಿತಿ.. ಸರ್ ಲಕ್ಷ್ಮೀಶ ಹೆಗಡೆಯವರ ಸಂಪರ್ಕ ಮಾಡೋದಾದರೆ ಹೇಗೆ? ಅವರ ಸಂಪರ್ಕ ಸಂಖ್ಯೆಯನ್ನ ನೀಡಲು ಸಾಧ್ಯವೇ?
9481578743 ಈ ನಂ ಗೆ ವಾಟ್ಸಾಪ್ ಮಾಡಿದರೆ ಉತ್ತಮ..
@ಪ್ರದೀಪ ಹೆಗಡೆ. ರಾಗಿಹೊಸಳ್ಳಿ, ಶಿರಸಿ.