Sunday, January 27, 2013

ನಾವೂ ಭಾರತೀಯರೇ .............???ನೀವೇನು ಹೇಳುತ್ತೀರಾ ??

ಚಿತ್ರ ಕೃಪೆ ಅಂತರ್ಜಾಲ 
ನಿನ್ನೆ ತಾನೇ ಭಾರತ ಗಣರಾಜ್ಯೋತ್ಸವ  ಆಚರಿಸಿಕೊಂಡಿದೆ, ಇವತ್ತಿನ ಪತ್ರಿಕೆಗಳಲ್ಲಿ  ರಾಷ್ಟ್ರ ದ್ವಜ ಹಲವೆಡೆ ಅಪಮಾನಕ್ಕೆ ಈಡಾದ ಬಗ್ಗೆ ವರದಿ ಬಂದಿದೆ.  ಗಣರಾಜ್ಯೋತ್ಸವ ಬಂತು ಕಾಟಾಚಾರಕ್ಕೆ ಆಚರಣೆ ಮಾಡಿದ ನಾವು ಮುಂದಿನ ರಾಷ್ಟ್ರೀಯ ಹಬ್ಬಗಳ ವರೆಗೆ ಸುಮ್ಮನಾಗುತ್ತೇವೆ. ನಿನ್ನೆ ನಡೆದ ಗಣರಾಜ್ಯೋತ್ಸವ ದಿನಾಚರಣೆ ಯಲ್ಲಿ ಮೂರು ಕಾರ್ಯಕ್ರಮ ನೋಡುವ ಅವಕಾಶ ನನಗೆ ಸಿಕ್ಕಿತು.

ದೃಶ್ಯ ..೦೧ } ಅದೊಂದು ಶಾಲೆ ಅಲ್ಲಿ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ  ಶಾಲೆಯ ಮುಂದೆ ಗಣರಾಜ್ಯೋತ್ಸವ ಆಚರಿಸಲು ನಿಂತಿದ್ದವು., ಕಾರ್ಯಕ್ರಮದಲ್ಲಿ  ಭಾಗವಹಿಸ ಬೇಕಾದ ಮುಖ್ಯ ಅತಿಥಿಗಳು ಸುಮಾರು ಒಂದು ಘಂಟೆ ಕಾಲ ವಿಳಂಭವಾಗಿ ಆಗಮಿಸಿದರು, ಬಂದವರೇ , ಆತುರ ಆತುರವಾಗಿ ರಾಷ್ಟ್ರ ದ್ವಜಆರೋಹಣ  ಮಾಡಿದರು,  ನಂತರ  ರಾಷ್ಟ್ರ ಗೀತೆ ಹಾಡಲು ಶಾಲಾ ಶಿಕ್ಷಕರಿಗಾಗಲೀ , ಅತಿಥಿ ಗಳಿಗಾಗಲಿ  , ಸರಿಯಾದ ಕ್ರಮವೇ ಗೊತ್ತಿರಲಿಲ್ಲ  ಎದೆ ಯುಬ್ಬಿಸಿ ,  ಹೆಮ್ಮೆಯಿಂದ  ಜೋರಾಗಿ ಹಾಡಬೇಕಾದ ರಾಷ್ಟ್ರ ಗೀತೆ ಯನ್ನು  ಅತೀ ಸಣ್ಣ ಶಬ್ಧದಲ್ಲಿ  ಹಾಡಿ  ಮುಗಿಸಿದರು,   ಹಾಡುವಾಗ ರಾಷ್ಟ್ರ ಗೀತೆಯ ಪದಗಳ ತಪ್ಪು ಉಚ್ಚಾರಣೆ ಕೂಡ ನಡೆದಿತ್ತು, ಗಣ್ಯರ  ಗಣರಾಜ್ಯೋತ್ಸವ ಸಂದೇಶ ದೇವರಿಗೆ ಪ್ರೀತಿ,  ಸಂದೇಶದಲ್ಲಿ ದೇಶದ  ಗಣರಾಜ್ಯೋತ್ಸವದ  ಬಗ್ಗೆ  ಏನೂ ಇರಲಿಲ್ಲ.  ಇನ್ನು ಮಕ್ಕಳು ಮೊದಲೇ ಬಿಸಿಲಿನಲ್ಲಿ ಬಳಲಿ  ರಾಷ್ಟ್ರ ಗೀತೆ ಹಾಡಿ  ಶಾಲೆಯವರು ನೀಡಿದ ಚಾಕ್ಲೆಟ್  ತಿಂದು ಮನೆಗೆ ತೆರಳಿದವು.

ದೃಶ್ಯ ೨} ಮತ್ತೊಂದು  ಕಚೇರಿ ಯಲ್ಲಿ ಸಿಬ್ಬಂದಿ  ಹಾಗು ಅಧಿಕಾರಿಗಳು  ಗಣರಾಜ್ಯೋತ್ಸವ ಆಚರಣೆ ಮಾಡಲು ಸೇರಿದ್ದರು, ಕಾರ್ಯಕ್ರಮ ಶುರುವಾಯಿತು,  ರಾಷ್ಟ್ರ ದ್ವಜ  ಆರೋಹಣ ಮಾಡುವಾಗ ದ್ವಜ ಹಾರಲೇ ಇಲ್ಲ, ಹಾರಿಸುವಾಗ ದಾರ ಎಳೆದರೆ ದ್ವಜ  ಸಿಕ್ಕಿಕೊಂಡು ಪರದಾಡ  ಬೇಕಾಯಿತು,  ಇನ್ನು ರಾಷ್ಟ್ರ ಗೀತೆ ಹಾಡುವಾಗ ಯಾರ ದ್ವನಿಯೂ ಜೋರಾಗಿ ಹೊರಡಲಿಲ್ಲ, ಬೇರೆ ದಿನಗಳಲ್ಲಿ ಜೋರಾಗಿ ದ್ವನಿ ಎತ್ತುವ ಜನ ರಾಷ್ಟ್ರ ಗೀತೆ ಹಾಡಲು ದ್ವನಿ ಹೊರಡಿಸಲೇ ಇಲ್ಲ. ಜೊತೆಗೆ ಹಾಡಿದ್ದು ತಪ್ಪು ತಪ್ಪು, ಪದಗಳ ರಾಷ್ಟ್ರ ಗೀತೆ,  ಇನ್ನು  ಗಣ್ಯರು ಸಂದೇಶ ನೀಡುವ ಮನಸ್ಥಿತಿಯಲ್ಲಿ  ಇರಲಿಲ್ಲ. ಕೂಡಲೇ ತರಾತುರಿಯಲ್ಲಿ ಹೊರಟೆ ಬಿಟ್ಟರು, ಉಳಿದವರು ಹೋಟೆಲ್ ನಿಂದ ತರಿಸಿದ್ದ  ಉಪಹಾರ ಸೇವಿಸಿ  ಹೊರಟರು.

ದೃಶ್ಯ ೩} ಮತ್ತೊಂದು ಸಂಸ್ಥೆ ಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆದಿತ್ತು, ಎಲ್ಲರೂ ಕೋಟು, ಧರಿಸಿ, ಟೈ ಕಟ್ಟಿ ಕೊಂಡು  ಟಾಕೂ ಟೀಕಾಗಿ  ಬಂದಿದ್ದರು,  ಕಾರ್ಯಕ್ರಮ ಶುರು ಆಯಿತು, ಗಣ್ಯರಾಗಿ  ಆ ಸಂಸ್ಥೆಯ ಹಿರಿಯರು ಬಂದಿದ್ದರು,  ರಾಷ್ಟ್ರ ದ್ವಜ ವನ್ನು ಕಟ್ಟಲು,  ನಿವೃತ್ತ ಶಿಕ್ಷಕರನ್ನು  ಕರೆದುಕೊಂಡು  ಬಂದಿದ್ದರು, ಗಣ್ಯರು ರಾಷ್ಟ್ರ ದ್ವಜ ಹಾರಿಸಿದರು, ಆದರೆ ರಾಷ್ಟ್ರ ದ್ವಜ  ಉಲ್ಟಾ ಕಟ್ಟಲಾಗಿತ್ತು, ಅದನ್ನು ತಕ್ಷಣವೇ ಕೆಳಗಿಳಿಸಿ  ಮತ್ತೊಮ್ಮೆ ಸರಿಪಡಿಸಿ ರಾಷ್ಟ್ರ ದ್ವಜ  ಹಾರಿಸಲಾಯಿತು,  ಇನ್ನು ರಾಷ್ಟ್ರ ಗೀತೆ ಹಾಡಲು ಪಾಪ ಇವರಿಗೂ ಧ್ವನಿಯೇ  ಹೊರಡಲಿಲ್ಲ. ನಂತರ ಭಾಷಣ ಮಾಡಲು ತಾ ಮುಂದು ತಾ ಮುಂದು ಎಂಬಂತೆ ಬಂದ. ಯಾರ ಭಾಷಣದಲ್ಲೂ ಗಣರಾಜ್ಯೋತ್ಸವದ ಬಗ್ಗೆ ಮಾತಿಲ್ಲ. ತಮ್ಮ ಸಂಸ್ಥೆಯ ಸಾಧನೆ ಬಗ್ಗೆ  ಮಾತೂ ಮಾತೂ ಮಾತು.


ಇದು ಈ ಭಾರಿ ನಾನು ನೋಡಿದ ಗಣರಾಜ್ಯೋತ್ಸವ ಸಂಭ್ರಮ , ಇದನ್ನು ನೋಡಿ ರಾಷ್ಟ್ರೀಯ ಹಬ್ಬಗಳು ನಮ್ಮೆಲ್ಲರ ಮನಸ್ಸಿನಿಂದ  ಮರೆಯಾಗುತ್ತಿರುವುದೇನೋ ಎಂದು ಅನ್ನಿಸಿ  ನೋವಾಯಿತು.ಯಾಕೆ ಹೀಗೆ ಎಂಬ ಪ್ರಶ್ನೆಗೆ  ಉತ್ತರ ಸಿಗದೇ ನಿರಾಶೆಯಾಗಿದೆ.  ಅದ್ಸರಿ ನಾವ್ಯಾಕೆ ಹೀಗೆ?? ದೇಶದ ಬಗ್ಗೆ ಉದ್ದ ಉದ್ದ ಭಾಷಣ ಬಿಗಿಯುವ ನಾವು,  ಕನಿಷ್ಠ ನಮ್ಮ ದೇಶದ ರಾಷ್ಟ್ರೀಯ  ಹಬ್ಬಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ಯಾಕೆ. ಇದನ್ನೂ ವಿದೇಶಿಯರಿಂದ  ಹೇಳಿಸಿ ಕೊಳ್ಳಬೇಕೆ ??? ಅಥವಾ ನನಗೆ  ದೇಶದ ಬಗ್ಗೆ ಏನೂ ಗೊತ್ತಿಲ್ಲಾ  ಎಂಬುದೇ ನಮ್ಮ  ಹೆಗ್ಗಳಿಕೆಯೇ ?? ಉತ್ತರ ಸಿಗುತ್ತಿಲ್ಲ 



ದೆಹಲಿಯ ಕೆಂಪು ಕೋಟೆ 

ಒಮ್ಮೆ ಹೀಗಾಯ್ತು ಬಹಳ ವರ್ಷಗಳ ಹಿಂದೆ ಶ್ರೀ ರಂಗ ಪಟ್ಟಣದಲ್ಲಿ  ಒಂದು ಸರ್ಕಾರಿ ಕಚೇರಿಯ ಮುಂದೆ  ರಾಷ್ಟ್ರೀಯ ಹಬ್ಬದ ಆಚರಣೆ  ನಡೆಯುತ್ತಿತ್ತು, ಇದನ್ನು ನೋಡಿದ ಇಬ್ಬರು ವಿದೇಶಿಯರು  ಆ ಕಚೇರಿಯ ಆವರಣದೊಳಗೆ ಬಂದು ತಾವೂ ಸಹ  ನಮ್ಮ ರಾಷ್ಟ್ರ ದ್ವಜಕ್ಕೆ ವಂದಿಸಿ  , ರಾಷ್ಟ್ರ ಗೀತೆ ಹಾಡುವಾಗ ಮುಗಿಯುವವರೆಗೆ  ಅಲ್ಲಾಡದೆ  ಗೌರವದಿಂದ ನಿಂತು ವಂದಿಸಿದರು.  ನನಗೂ ಕುತೂಹಲ ತಡೆಯದೆ ಅವರನ್ನು ಕೇಳಿದೆ  "ಇದು ನಿಮ್ಮ ರಾಷ್ಟ್ರದ ಹಬ್ಬ ಅಲ್ಲಾ ಅದರೂ ನೀವು ನಮ್ಮೊಡನೆ ಬಂದು  ಪಾಲ್ಗೊಂಡಿರಿ  ಯಾಕೆ ??"  ಅಂದೇ ಅದಕ್ಕೆ  ಅವರು ಹೇಳಿದ್ದು ಹೀಗೆ "ನಾವು  ಬಹಳಷ್ಟು ದೇಶಗಳಿಗೆ ಪ್ರವಾಸ ಹೋಗುತ್ತೇವೆ  ಹೀಗೆ ಹೋದಾಗ  ಆ ದೇಶದ ಭಾವನೆಗಳಿಗೆ ಅಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸ ಬೇಕಾದದ್ದು  ನಮ್ಮ ಕರ್ತವ್ಯ, ಇಲ್ಲಿಯೂ  ಸಹ ನಿಮ್ಮ ದೇಶದ ಅತಿಥಿಗಳು ನಾವು, ನಿಮ್ಮ ದೇಶದ  ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವುದು, ನಿಮ್ಮ ರಾಷ್ಟ್ರ ದ್ವಜಕ್ಕೆ, ರಾಷ್ಟ್ರ ಗೀತೆಗೆ  ಗೌರವ ನೀಡುವುದು  ನಮ್ಮ ಕರ್ತವ್ಯ" ಹಾಗು ನಮ್ಮ ದೇಶದಲ್ಲಿ  ಇದನ್ನು ಖಡ್ಡಾಯವಾಗಿ ಪ್ರತೀ ಪ್ರಜೆಗೂ ತಿಳಿ ಹೇಳಲಾಗುತ್ತದೆ.ಎಂದರು. ನನಗೆ ಒಮ್ಮೆಲೇ ತಲೆ ತಿರುಗಿತು.

 ಹೌದಲ್ವಾ ನಮಗೆ ಇದನ್ನು ಯಾರು ಹೇಳಿ ಕೊಡಲಿಲ್ಲ. ಯಾವ ಶಾಲೆಯಲ್ಲೂ ಸಹ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುತ್ತಿಲ್ಲ. ಬರಿ ಪರೀಕ್ಷೆ ಬರೆಯಲು ಇರುವ ಪಾಠವಾಗಿ  ಸಂವಿಧಾನದ ವಿಚಾರಗಳು ಇವೆ. ಇನ್ನು ನಮ್ಮ ಹಿರಿಯರು ಮಕ್ಕಳಿಗೆ ದೇಶದ ಬಗ್ಗೆ ಇಂತಹ ವಿಚಾರ ತಿಳಿಸುವುದಿಲ್ಲ, ಇವನ್ನು ಪಾಲನೆ ಮಾಡದೆ ಇದ್ದರೂ ಯಾವುದೇ ಶಿಕ್ಷೆ ಇಲ್ಲ. , ಇವೆಲ್ಲದರ ನಡುವೆ ನಾವು ಭಾರತೀಯರೆಂಬ ಬಗ್ಗೆ ನಮ್ಮ ಜಂಭದ  ಮಾತುಗಳು  ಲೆಕ್ಕವಿಲ್ಲ ,



ನಮ್ಮ ಬಾವುಟದ ಹಿರಿಮೆ ಇಲ್ಲಿದೆ 

ನಿಜಾ ಹೇಳಿ  ೧} ರಾಷ್ಟ್ರ ಗೀತೆಗೆ ಗೌರವ ನೀಡದ ನಾವು, ರಾಷ್ಟ್ರ ಗೀತೆ ಹಾಡಲು ನಾಚಿಕೆ ಪಡುವ ನಾವು,  ಯಾವ ರಾಷ್ಟ್ರಕ್ಕೆ        ಸೇರಿದವರು ??

೨} ರಾಷ್ಟ್ರ ದ್ವಜ ಹಾರಿಸಲು ತಿಳಿಯದ , ರಾಷ್ಟ್ರ ದ್ವಜ ದ ಬಗ್ಗೆ ಅರಿಯಲು ಇಷ್ಟ ಪಡದ  ನಾವು ಯಾವ ದೇಶದವರು ??

೩} ರಾಷ್ಟ್ರ ಲಾಂಛನದ  ಬಗ್ಗೆ   ಅರಿಯದೆ , ಅದರ ಮಹತ್ವ ತಿಳಿಯದ ನಾವು  ಯಾರು ??


 ಮುಂದೊಮ್ಮೆ ರಾಷ್ಟ್ರ ದ್ವಜ ಕಟ್ಟಲು, ರಾಷ್ಟ್ರ ಗೀತೆ ಹಾಡುವುದನ್ನು ಹೇಳಿ ಕೊಡಲು  ವಿದೇಶಿಯರನ್ನು ಕರೆಸ ಬೇಕಾಗ ಬಹುದು  ಒಮ್ಮೊಮ್ಮೆ ಅನ್ನಿಸುತ್ತದೆ. ಇವೆಲ್ಲಾ ದಿನ ನಿತ್ಯ ನೋಡುತ್ತಿದ್ದರು ತಿದ್ದಿಕೊಳ್ಳದ ನಾವು ನಿಜವಾಗಿಯೂ  ಈ ದೇಶದ ಹೆಮ್ಮೆಯ ಭಾರತೀಯರೇ  ನೀವೇ ಹೇಳಿ.ಅಂದ ಹಾಗೆ ನಿಮಗೆ ರಾಷ್ಟ್ರ ದ್ವಜ ಕಟ್ಟಲು, ರಾಷ್ಟ್ರ ಗೀತೆ ಹಾಡಲು ಬರುತ್ತದೆಯೇ ??  ಬರದಿದ್ದರೆ ಮುಂದಿನ ರಾಷ್ಟ್ರೀಯ ಹಬ್ಬದ ವೇಳೆಗೆ  ದಯವಿಟ್ಟು ಕಲಿತು , ಈ ದೇಶದ ಹೆಮ್ಮೆಯ ಭಾರತೀಯರಾಗಿ. ಏನಂತೀರ??



Tuesday, January 22, 2013

ಹೀಗೊಂದು ಎಡವಟ್ಟು ಪರಸಂಗ .............!!!

ಇವರದೇ ಒಂದು ಪರ್ಪಂಚ  [ ಚಿತ್ರ ಕೃಪೆ ಅಂತರ್ಜಾಲ ]

ಒಮ್ಮೊಮ್ಮೆ ನಾವು ಅಂದುಕೊಳ್ಳದ ರೀತಿಯಲ್ಲಿ ನಮಗೆ ಕೆಲವು ವಿಚಿತ್ರ  ಸನ್ನಿವೇಶಗಳು ಸೃಷ್ಟಿಯಾಗಿ ನಮ್ಮ ಜೀವನದಲ್ಲಿ ನಗೆ ಹುಟ್ಟಿಸುತ್ತವೆ. ಈ ಸನ್ನಿವೇಶವೂ ಸಹ ಅಂತಹುದೇ ಒಂದು.

ಒಮ್ಮೆ ಬಸ್ಸಿನಲ್ಲಿ ಪ್ರಯಾಣ ಹೊರಟಿದ್ದೆ. ಬಸ್ ಅಂದಮೇಲೆ ಗೊತ್ತಲ್ಲಾ , ಪ್ರತಿಯೊಬ್ಬ ಪ್ರಯಾಣಿಕನೂ ಅವರದೇ ಒಂದು ಪರ್ಪಂಚ ದಲ್ಲಿ ವಿಹರಿಸುತ್ತಿರುತ್ತಾನೆ. ಎಷ್ಟು ಹೊತ್ತಾದರೂ ಆ ಬಸ್ಸು ಹೊರಟಿರಲಿಲ್ಲ ಪ್ರಯಾಣಿಕರಿಂದ ಚಾಲಕ ನಿರ್ವಾಹಕರಿಗೆ  ಹಿಡಿ ಶಾಪ. ಅವರನ್ನು ಬಯ್ಯಲು ಪ್ರತಿಯೊಬ್ಬರಿಗೂ  ಏನೋ  ಮಜಾ ಉತ್ಸಾಹ. ಹಾಗೂ ಹೀಗೂ ಈ ಮನರಂಜನೆ ನಡುವೆ ಬಸ್ ಹೊರಟಿತು,

ಇನ್ನು ಬಸ್ ಚಾಲಕ ನಿರ್ವಾಹಕರಿಗೆ ಪ್ರಯಾಣಿಕರನ್ನು ಸಂಬಾಳಿಸುವಲ್ಲಿ  ಸುಸ್ತೋ ಸುಸ್ತು . ಹೀಗಿರುವಲ್ಲಿ ಚಾಲಕ ಮಹಾಶಯ  ಬಸ್ಸನ್ನು ಚಾಲನೆ ಮಾಡುತ್ತಾ ಎದುರಿಗೆ ಬರುವ ವಾಹನಗಳ ಚಾಲಕರಿಗೆ  ಬೈಗುಳದ ಅರ್ಚನೆ ಮಾಡುತ್ತಾ , ತಾನೊಬ್ಬನೇ ಸರಿಯಾದ ಚಾಲಕ ಬೇರೆಯವರು  ಚಾಲಕರೇ ಅಲ್ಲಾ ಎನ್ನುವ ಹಾಗೆ ವರ್ತಿಸುತ್ತಿದ್ದ. ಇನ್ನು ನಿರ್ವಾಹಕ  ಮಹಾಶಯ ಸ್ವಲ್ಪ ಹಾಸ್ಯ ಪ್ರಿಯ , ನಗೆ ಚಟಾಕಿ ಹಾರಿಸುತ್ತಾ  , ಉಪಾಯವಾಗಿ ಟಿಕೆಟುಗಳನ್ನು ಪ್ರಯಾಣಿಕರಿಗೆನೀಡುತ್ತಿದ್ದ. "ಬನ್ನಿ ಸಾರ್ ಬನ್ನಿ ನೀವು ಒಳ್ಳೆಯವರು  ಮುಂದೆ ಬನ್ನಿ  ಇಲ್ಲಿ ಹಾಗೆ ಹಾಗೆ ನಿಲ್ಲಿ ಸಾರ್ ಪರವಾಗಿಲ್ಲ ನಿಮ್ ಊರು ಬಂದಾಗ ಖಂಡಿತಾ ನಿಮ್ಮನ್ನು ಜೋಪಾನವಾಗಿ ಇಳಿಸುತ್ತೇನೆ", ಅಂತ ಒಬ್ಬರಿಗೆ ಹೇಳಿದರೆ,  ಮತ್ತೊಬ್ಬ ಹುಡುಗನಿಗೆ  "ಓ ಅಣ್ಣಾ ಇದೇನು ಅತ್ತೆ ಮನೆಗೆ ಅಳಿಯ  ಬಂದು ಬಾಗಿಲು ಮುಂದೆ ನಿಂತ ಹಾಗೆ ಬಾಗಿಲು ಕಾಯ್ತಿಯಾ ಬಾ ಅಣ್ಣಾ ಒಳಗೆ , ಕಾಲೇಜು ಪರೀಕ್ಸೆ ಬ್ಯಾರೆ ಹತ್ತಿರಾ ಬಂತು ಹೆಚ್ಚು ಕಡಿಮೆ ಆದೀತು"  ಅಂದಿದ್ದ. ಮತ್ತೊಬ್ಬ ಹೆಂಗಸಿಗೆ  "ಅಕ್ಕೋ ಬಾ ಇಲ್ಲಿ ಒಳಕೆ  ನೀ ಬಸ್ಸಿಂದ ಬಿದ್ದು ಹೆಚ್ಚು ಕಡಿಮೆ ಆದ್ರೆ  ನಿಮ್ ಯಜಮಾನ ನನ್ನ ಸುಮ್ನೆ ಬುಟ್ಟಾನೆ" ಅಂತಾ ಅಂದ ಮಾತಿಗೆ ಬಸ್ಸಿನಲ್ಲಿ ಎಲ್ಲರು ನಕ್ಕರು.ಹೀಗೆ ಸಾಗಿತ್ತು ಪಯಣ.


ಹಳ್ಳಿ ಬಸ್ಸಿನ ಒಂದು  ನೋಟ [ ಚಿತ್ರ ಕೃಪೆ ಅಂತರ್ಜಾಲ ]


 ನಿರ್ವಾಹಕ ಟಿಕೆಟ್ ಕೊಡುತ್ತಾ  ಒಬ್ಬ ಹೆಂಗಸಿನ ಹತ್ತಿರ ಬಂದಾ  "ಯಾವ್ ಕಡೀಕೆ ತಾಯಿ  ಬಿರ್ ಬಿರ್ ನೆ [ ಬೇಗ ಬೇಗ ] ತತ್ತಾ [ ಕೊಡು]  ದುಡ್ಡಾ"  ಅಂದಾ  "ಯೋ ಒಸಿ ತಾಳು"  ಅಂದವಳೇ  ವಿಳ್ಳೆದೆಲೆ  ಅಡಿಕೆಯನ್ನು ಬಾಯಿಯೊಳಗೆ ಹಾಕಿ ಕೊಂಡು "ಜಕ್ಕನಹಳ್ಳಿ ಒಂದು ಸೀಟು"  ಅಂದಳು  ನಿರ್ವಾಹಕ  ಪರ್ ಅಂತಾ ಟಿಕೇಟು ಹರಿದು "ಹತ್ತು ರುಪಾಯಿ ಕೊಡವ್ವ" ಅಂದಾ . ಎಲೆ ಅಡಿಕೆ ಜಗಿಯುತ್ತಾ ತನ್ನ ಸಂಚಿಯನ್ನು [ ಹಳ್ಳಿ ಹೆಂಗಸರು ಬಳಸುವ ಬಟ್ಟೆಯ ಪಾಕೆಟು ]  ತೆಗೆದು ದುಡ್ಡು  ಹುಡುಕಿದಳು , ಉ ಹು ಅದರಲ್ಲಿ ದುಡ್ಡು ಇರಲಿಲ್ಲ , ತನ್ನ ಬ್ಯಾಗನ್ನು ತದಕಿದರೂ ದುಡ್ಡು ಪತ್ತೆ ಇಲ್ಲ , ಒಸಿ ತಡಿಯಪ್ಪ , ಹತ್ತು ರುಪಾಯಿ ಮಡಗಿದ್ದೆ ಕಾಣಿಸ್ತಾ ಇಲ್ಲಾ ಅಂತಾ  ಬಾಯಲ್ಲಿ ತುಂಬಿದ ಎಲೆ ಅಡಿಕೆ ಜಗಿಯುತ್ತಾ ಹೇಳಿದಳು.  ಚಾಲಕನಿಗೋ ಇವಳಿಂದ ಹಣ ಪಡೆದು ಎಂಟ್ರಿ  ಕ್ಲೋಸ್ ಮಾಡಿ ಮುಂದಿನ ಸ್ಟೇಜ್ ತಲುಪುವ ಆತುರ. ಒಳ್ದೆನ್ ಅಂತಾ ಜೋರಾಗಿ ಹೇಳಿ " ಅಮ್ಮೋ  ಕಾಸು ಕೊಡು ಇಲ್ಲಾಂದ್ರೆ ಬಸ್ಸಿಂದಾ ಇಳಿ"  ಅಂತಾ  ಅನ್ನುವ ಹಂತಾ ತಲುಪಿದ, ಇದನ್ನೆಲ್ಲಾ ನೋಡುತ್ತಿದ್ದಾ, ಒಬ್ಬ ಪ್ರಯಾಣಿಕ  "ಅಮ್ಮೋ ತಾಯಿ ಎಲೆ ಜೊತೆ ಏನಾದ್ರೂ  ರುಪಾಯಿ ಬಾಯಿಗೆ ಹಾಕಂಡಿದ್ದೀಯ  ನೋಡವ್ವಾ"   ಅಂದಾ  ಆ ಯಮ್ಮಾ ತನ್ನ ಬಾಯಿ ಯಿಂದ  ಎಲೆ ತೆಗದು ಕೈಗೆ ಹಾಕಿ ಕೊಂಡಳು  ನೋಡಿದ್ರೆ  ಹತ್ತು ರುಪಾಯಿ ವಿಳ್ಳೆದೆಲೆ ಜೊತೆಗೆ ಸೇರಿ ಕೊಂಡು   ಬಾಯಿಯಲ್ಲಿ  ಸೇರಿ ಹೋಗಿತ್ತು. ಪಾಪ ಆ ಹತ್ತು ರುಪಾಯಿ ಬಿಟ್ಟು ಬೇರೆ ಹಣವಿಲ್ಲದ ಆಕೆ  ಕಣ್ಣೀರು ಹಾಕುತ್ತಾ ನಿಂತಳು. ಕಡೆಗೆ ಬಸ್ಸಿನ ನಿರ್ವಾಹಕ  ಆಕೆಯನ್ನು  ಸಮಾಧಾನ  ಮಾಡಿ  , ಟಿಕೆಟ್ ನೀಡಿ  , ಹೇಳಿದ  "ನೋಡವ್ವಾ ತಿನ್ನೋ ಪದಾರ್ಥದ  ಜೊತೆಗೆ  ಹಣ  ಇಡ ಬ್ಯಾಡ  ಇಟ್ಟರೆ  ನೋಡು ಇಂಗಾಯ್ತದೆ ಗೊತ್ತಾಯ್ತಾ ಇನ್ಯಾಕೆ ನಗು ಮತ್ತೆ"  ಅಂದಾ  ಆ ಹೆಂಗಸು  ಬಂದಿದ್ದ ಸಮಸ್ಯೆ ಪರಿಹಾರ ವಾದ ಖುಷಿಯಲ್ಲಿ  ನಕ್ಕಳು      " ಆ  ಹ ಹ   ನೋಡವ್ವಾ    ನಕ್ಕರೆ ಹತ್ತುವರ್ಷ ಚಿಕ್ಕವಳಂಗೆ  ಕಾಣ್ತೀಯೆ ನಮ್ಮ ಅಮ್ಮ ನೆನಪಾದಳು  ಹಿಂಗೆ ನಗ್ತಾ ನಗ್ತಾ  ಚಂದಾಗಿ  ಇರವ್ವಾ"  ಅಂದ   ಪುಣ್ಯಾತ್ಮ.   ಮತ್ತೆ ಮುಂದು ವರೆದು   ಯಾರ್ರೀ ಟಿಕೇಟು . ಟಿಕೇಟು ,  ಬಾಯಲ್ಲಿ ದುಡ್ಡು ಹಾಕೊಳೋ ಮೊದಲು ಜಲ್ದಿ  ಟಿಕೆಟ್  ಕಾಸುಕೊಡಿ ಅಂತಾ ನಗೆ ಚಟಾಕಿ ಹಾರಿಸುತ್ತಾ  ಮುಂದೆ ಹೋದ. ಬಸ್ಸಿನಲ್ಲಿ ಮತ್ತೊಮ್ಮೆ ನಗೆಯ ಕಲರವ ಕೇಳಿತು.

ಈ ಘಟನೆ ನಡೆದು ಬಹಳ ವರ್ಷ ಆದರೂ ಮನದಲ್ಲಿ ಆಗಾಗ  ನೆನಪಾಗುತ್ತಾ  ಇರುತ್ತೆ. ಮಾನವೀಯತೆ ಮೆರೆದ ಆ ನಿರ್ವಾಹಕನ ಗುಣ, ಅವನ ಕೆಲಸದಲ್ಲಿ ಮೂಡಿಸುವ  ಹಾಸ್ಯ ನಡವಳಿಕೆ ಇತ್ಯಾದಿ ನೆನಪಾಗುತ್ತದೆ. ಬಹಳ ದಿನಗಳಿಂದ ಕೊರೆಯುತ್ತಿದ್ದ ಈ ನೈಜ ಕಥೆ ಇವತ್ತು  ಇಲ್ಲಿ ಬಂದಿದೆ. ಓದಿ ಒಮ್ಮೆ ನಕ್ಕು ಬಿಡಿ.

Sunday, January 13, 2013

ಬಾಲ್ಯದಲ್ಲಿ ನಾ ಕಂಡ ಆ ಸಂಕ್ರಾಂತಿ ............!!ನಾನು ಈಗ ಕಾಣುತ್ತಿರುವ ಬ್ರಾಂತಿಯ ಸಂಕ್ರಾಂತಿ !!!

ಚಿತ್ರ ಕೃಪೆ  ಅಂತರ್ಜಾಲ.  



ಲೇ ಯಾರೋ ಅಲ್ಲಿ  ಇನ್ನೆರಡು  ತಿಂಗಳಿಗೆ ಸಂಕ್ರಾಂತಿ ಬರ್ತದೆ ಇನ್ನೂ ಏನೂ  ಬಂದಿಲ್ಲವಲ್ಲೋ ... ಅಪ್ಪನ  ಆರ್ಭಟ ಶುರು ಆಯಿತೆಂದರೆ ಸಂಕ್ರಾಂತಿ ಹಬ್ಬಕ್ಕೆ ಮುನ್ನುಡಿ ಬರೆಯುತ್ತಿತ್ತು ನಮ್ಮನೆಯಲ್ಲಿ. ಹೌದು ನಮ್ಮ ಮನೆಯ ಸಂಕ್ರಾಂತಿ ಹಬ್ಬದ ಸಡಗರ ಶುರು ಆಗುತ್ತಿದ್ದುದು  ಹೀಗೆ. ಆಗ ಈಗಿನಂತೆ ಪಟ್ಟಣಗಳಲ್ಲಿ /ಹಳ್ಳಿಗಳಿಗೆ ಟಿ . ವಿ . ಇಲ್ಲದ ಕಾಲ. ದೊಡ್ಡ ದೊಡ್ಡ ರೇಡಿಯೋ ಗಳು ಟೇಬಲ್ ಅಲಂಕರಿಸಿದ್ದ ಕಾಲ. ಜನಗಳು ತಾವೇ  ದೈಹಿಕವಾಗಿ ಶ್ರಮ ಪಟ್ಟು ಹಬ್ಬಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆಗಲೂ ಪಟ್ಟಣಗಳಲ್ಲಿ  ಸಿದ್ದ ಪಡಿಸಿದ ಎಳ್ಳು ಬೆಲ್ಲ ಹಾಗೂ ಸಕ್ಕರೆ ಅಚ್ಚು  ಅಂಗಡಿಗಳಲ್ಲಿ  ಸಿಗುತ್ತಿದ್ದವಾದರೂ  ಅದನ್ನು ಕೊಂಡು  ತರಲು ಜನರಿಗೆ ಹಿಂಜರಿಕೆ ಇತ್ತು. ತಾವು ಮಾಡಿದ ಎಳ್ಳು ಬೆಲ್ಲ ಸಂಕ್ರಾಂತಿಗೆ ಇದ್ದರೆ ಚಂದಾ ಎನ್ನುವ ಭಾವನೆ ಹಾಗು ಹೆಮ್ಮೆ.


ಸಂಕ್ರಾಂತಿ ಸಿದ್ದತೆಯಲ್ಲಿ ಮೊದಲು ಮನೆಗೆ ಬರುತ್ತಿದ್ದುದು, ಕರಿ ಎಳ್ಳು , ಕಡಲೆ ಕಾಯಿ ಬೀಜ, ಹುರಿ ಕಡಲೆ , ಬೆಲ್ಲ,ಕೊಬ್ಬರಿ, ಇತ್ಯಾದಿ. ಇವುಗಳು ಮನೆಗೆ ಬಂದ  ಮಾರನೆಯ ದಿನವೇ ಮನೆಯಲ್ಲಿ ನನ್ನ ಅಜ್ಜಿ [ ತಾಯಿಯ ತಾಯಿ]  ಹಾಗು ನನ್ನ ಅಮ್ಮ ಇವರಿಬ್ಬರಿಗೆ  ಕೆಲಸ ಶುರು.ಸುಮಾರು ಐದರಿಂದ ಆರು ಸೇರು   ಕರಿ ಎಳ್ಳನ್ನು ತೊಳೆದು  ಉಜ್ಜಿ  ಅದರ ಸಿಪ್ಪೆ ತೆಗೆದು  ಬೆಳ್ಳಗೆ ಮಾಡಿ ಅದನ್ನು ಒಣಗಿ ಹಾಕಲು ಒಂದೆರಡು ದಿನ ಆಗುತ್ತಿತ್ತು. ನಂತರ ಬೆಲ್ಲ ಕೊಬ್ಬರಿ  ಹೆಚ್ಚಿ  ತುಂಡು ಮಾಡುವ ಕೆಲಸ, ಕೊಬ್ಬರಿಯ ಮೇಲ್ಭಾಗ ತುರಿದು ಅದರ ಕಪ್ಪಿನ ಪದರವನ್ನು ತೆಗೆದು ಹಾಕಿ  ಹೆಚ್ಚಲು ಬಹಳಷ್ಟು ಸಮಯ  ತಗಲುತ್ತಿತ್ತು . ಇನ್ನು ಬೆಲ್ಲದ ಅಚ್ಚನ್ನು ಒಂದೇ ಆಕಾರದಲ್ಲಿ ಹೆಚ್ಚುವ [ತುಂಡು ಮಾಡುವ] ಕೆಲಸ ಸಹ ಒಂದೆರಡು ದಿನ ಸಾಗುತ್ತಿತ್ತು. ನಂತರ ಹುರಿ ಕಡಲೆ  ಯನ್ನು ಆರಿಸಿ ಅದರಲ್ಲಿನ ಕಸ ತೆಗೆದು, ಮತ್ತೊಮ್ಮೆ ಹುರಿಯುತ್ತಿದ್ದರು, ನಂತರ ಒಣಗಿದ ಕಡಲೆ ಕಾಯಿಯನ್ನು  ಬಿಡಿಸಿ  ಅದರಲ್ಲಿನ ಕಾಳುಗಳನು ಶೇಖರಿಸಿ, ಅದರಲ್ಲಿನ ಪೇಚು ಕಾಳುಗಳನ್ನು ಹೆಕ್ಕಿ ತೆಗೆದು, ಉತ್ತಮ ಕದಲೆಕಾಯಿಯ ಕಾಳುಗಳನ್ನು ಸೌದೆ ಒಲೆಯ ಮೇಲೆ  ದೊಡ್ಡ ಬಾಣಲೆಇಟ್ಟು  ಹುರಿಯುತ್ತಿದ್ದರು.  ಸೌದೆ ಒಲೆಯ ಉರಿಯಲ್ಲಿ ಚಿನ್ನದ ಬಣ್ಣದಂತೆ  ಹೊಮ್ಮಿದ ಬೆಂಕಿಯ ಕೆನ್ನಾಲಿಗೆಯ ಬಿಸಿಯಲ್ಲಿ  ಅಜ್ಜಿ ಹಾಗೂ ಅಮ್ಮಾ  ಸ್ವಲ್ಪವೂ ಬೇಸರಿಸದೆ  ನಗು ಮುಖದಿಂದ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಬಹಳ ಸಮಯದನಂತರ  ಹುರಿಯುವ ಕಾರ್ಯ ಮುಗಿದು  ಕಡಲೆ ಕಾಯಿಯನ್ನು ಒಣಗಲು ಹಾಕಿ  ವಿಶ್ರಾಂತಿ ಪಡೆಯಲು ಕೂರುತ್ತಿದ್ದರು. ಮತ್ತೆ ಸ್ವಲ್ಪ ಸಮಯದ ನಂತರ  ಕಡಲೆ ಕಾಯಿ ಬೀಜದ  ಮೇಲಿನ ಸಿಪ್ಪೆ ತೆಗೆಯುವ ಕಾರ್ಯ ಶುರುವಾಗಿ, ಸಂಜೆಯೊಳಗೆ  ಈ ಕಾರ್ಯಕ್ಕೆ ಮಂಗಳ ಹಾಡದೆ  ಇಬ್ಬರೂ ವಿಶ್ರಮಿಸುತ್ತಿರಲಿಲ್ಲ . ಪ್ರತೀದಿನ ಅಂದು ಮಾಡಿದ ಕಾರ್ಯದ ವಿವರ, ನಾಳೆ ಮಾಡುವ ಕಾರ್ಯದ  ವಿವರದ ರಿಪೋರ್ಟು ಅಪ್ಪನಿಗೆ ಸಲ್ಲಿಕೆ ಯಾಗುತ್ತಿತ್ತು. ಅಪ್ಪನೂ ಸಹ ಈ ಬಗ್ಗೆ ತನ್ನ ಸಲಹೆ ನೀಡುತ್ತಾ  ,  ಗದ್ದೆ ಕುಯಿಲಿನ ಬಗ್ಗೆ  , ರಾಸುಗಳ ತಯಾರಿ ಬಗ್ಗೆ , ಕಾರ್ಯಕ್ರಮ ರೂಪಿಸುತ್ತಿದ್ದರು.
ಇನ್ನೇನು  ಬಾಕಿ ಎನ್ನುವಷ್ಟರಲ್ಲೇ  ಅಜ್ಜಿ ಹಾಗು ಅಮ್ಮ ಮುಂದಿನ ತಯಾರಿಗೆ ರೆಡಿ ಆಗುತ್ತಿದ್ದರು. ಸಿದ್ದಪದಿಸಲಾಗಿದ್ದ  ಸಾಮಗ್ರಿಗಳನ್ನು ಭದ್ರವಾಗಿ ಡಬ್ಬಿಗಳಲ್ಲಿ ತುಂಬಿ , ಮುಂದಿನ ಕಾರ್ಯ ಶುರು ಮಾಡುತ್ತಿದ್ದರು, ಮರದ ಸಕ್ಕರೆಅಚ್ಚು ಮಣೆಗಳನ್ನು   ಅಟ್ಟದಿಂದ ಇಳಿಸಿ  ಅದನ್ನು ತೊಳೆದು , ಅದನ್ನು ಬಿಸಿಲಿನಲ್ಲಿ ಒಣಗ ಹಾಕಿ ಅದರಲ್ಲಿನ ದೂಳು, ಕಸ ಎಲ್ಲವನ್ನೂ ತೆಗೆದು,  ಸಕ್ಕರೆ ಅಚ್ಚು ತಯಾರಿಸಲು  ಆರಂಭಿಸುತ್ತಿದ್ದರು. ಮೊದಲು ಸಕ್ಕರೆಯಲ್ಲಿನ ಕಸವನ್ನು ತೆಗೆದು  ಸಕ್ಕರೆಯನ್ನು ಒಂದು ಕಡಾಯಿ ಯಲ್ಲಿ ಹಾಕಿ ನೀರು ಮಿಶ್ರಣ ಮಾಡಿ   ಅದನ್ನು ಸೌದೆ ಒಲೆಯ ಮೇಲೆ ಮೇಲೆ ಇಡುತ್ತಿದ್ದರು,  ಸಣ್ಣಗಿನ ಬೆಂಕಿಯ  ಜ್ವಾಲೆಯಲ್ಲಿ ಹಿತವಾದ ಶಾಖದಲ್ಲಿ  ಸಕ್ಕರೆ ಮಿಶ್ರಣದ ನೀರು  ಕುದಿಯಲು  ಶುರುವಾಗುತ್ತಿದ್ದಂತೆ  ಅಮ್ಮ ಅಲ್ಲೇ ಸಿದ್ದ ಪಡಿಸಿಕೊಂಡಿದ್ದ ಹಸುವಿನ   ಹಸಿ ಹಾಲನ್ನು  ಬಾಣಲೆಗೆ ಹಾಕುತ್ತಿದ್ದಳು  , ನೋಡ ನೋಡುತ್ತಿದಂತೆ  ಕುದಿಯುತ್ತಿದ್ದ  ಸಕ್ಕರೆ ಪಾಕದಲ್ಲಿ ಕಪ್ಪಗಿನ  ಕಸವು  ಮೇಲೆದ್ದು ಬಂದು ಅದನ್ನು ಜಾಲರಿಯಿಂದ  ತೆಗೆಯುತ್ತಿದ್ದರು. ಅದನ್ನು ನೋಡಿದರೆ ಸಕ್ಕರೆಯಲ್ಲಿ ಇಷ್ಟೊಂದು ಕಸವಿದೆಯೇ ಅಂತಾ ಅಚ್ಚರಿ ಆಗುತ್ತಿತ್ತು.   ಹೀಗೆ ಹಲವು ಭಾರಿ ಕಸ ತೆಗೆದು ಶುದ್ಧೀಕರಿಸಿದ ಪಾಕವನ್ನು  ನೀರಿನಲ್ಲಿ ನೆನೆಹಾಕಿ ಒದ್ದೆಯಾಗಿ ಸಿದ್ದ ಪಡಿಸಿದ  ಸಕ್ಕರ ಅಚ್ಚಿನ ಮಣೆಗಳ  ಕಿಂಡಿಯೊಳಗೆ  ಸಕ್ಕರೆ ಪಾಕವನ್ನು ಸುರಿಯುತ್ತಿದ್ದರು,  ಕೆಲವೊಮ್ಮೆ ಬಣ್ಣ ನೀಡಲು ಅಡಿಗೆ ಕೇಸರಿಯನ್ನು ಅಗತ್ಯವಿದ್ದಷ್ಟು ಸೇರಿಸಿ ಪಾಕ ಮಾಡಿ ಅಚ್ಚಿನ ಮಣೆ ಗಳ ಕಿಂಡಿಗಳಿಗೆ ಸುರಿಯಲಾಗುತ್ತಿತ್ತು.  ಅಚ್ಚಿನ ಒಳಗೆ ಇಳಿದ ಸಕ್ಕರೆ   ಪಾಕ , ವಾತಾವರಣದ ಗಾಳಿಗೆ ತಂಪಾಗಿ ಘನವಾಗಿ ಅಚ್ಚಿನ ಆಕಾರದ ಮೂರ್ತಿಯಾಗಿ ಹೊರ ಹೊಮ್ಮುತ್ತಿತ್ತು  , ಅಚ್ಚಿನಿಂದ ಹೊರಬಂದ ಸಕ್ಕರೆ ಅಚ್ಚು  ಆನೆ, ಕುದುರೆ ಕಲಶ, ಹಸು, ಕಂಬ , ದೇವಾಲಯ, ಚಕ್ರ, ಬೆಲ್ಲದ ಅಚ್ಚಿನ  ಮುಂತಾದ ಆಕಾರ ಪಡೆದು ನಮ್ಮ ನಾಲಿಗೆಯಲ್ಲಿ ನೀರು ಚಿಮ್ಮಿಸುತ್ತಿತ್ತು. ಎಳ್ಳು ಬೆಲ್ಲ ಸಿದ್ಧತೆ ಏನೋ ಆಯ್ತು  ಇನ್ನು ಮಿಶ್ರಣ  ಮಾಡುವ ಕೆಲಸ ಒಂದು ದಿನ ಹಿಡಿದು, ಎಲ್ಲವನ್ನೂ ಸಿದ್ಧಪಡಿಸಿ ದೊಡ್ಡ ದೊಡ್ಡ ಡಬ್ಬಗಳಲ್ಲಿ ತುಂಬಿ ತೆಗೆದಿಡುತ್ತಿದ್ದರು. ಇನ್ನು ಅವು ಆಚೆ ಬರುತ್ತಿದ್ದುದು ಹಬ್ಬದ ಹಿಂದಿನ ದಿನ ಅಷ್ಟೇ  ಅಲ್ಲಿಯ ವರೆಗೂ ಅವುಗಳಿಗೆ  ಬಹಳವಾದ  ಟೈಟ್ ಸೆಕ್ಯೂರಿಟಿ, ಅಜ್ಜಿ ಹಾಗು ಅಮ್ಮನಿಂದ.      

ಚಿತ್ರ ಕೃಪೆ ಸಹೋದರಿ ಸುಮನ ಹಾಗು ದೀಪಕ್ 
 


ಈ ಹಂತದಲ್ಲಿ ಮಕ್ಕಳಾಗಿದ್ದ  ನಮ್ಮ ಕೆಲಸ ಶುರು,  ನಾನೂ ನನ್ನ ಅಕ್ಕ  ಈ ಟೈಟ್ ಸೆಕ್ಯೂರಿಟಿ ಭೇದಿಸಿ  ಕೆಲವೊಮ್ಮೆ ಲಗ್ಗೆ ಹಾಕಿ  ಮಾಲನ್ನು  ದೂಚುತ್ತಿದ್ದು ಹೌದು ,  ಕೆಲವೊಮ್ಮೆ ಮಾಲು ಸಹಿತ ಸಿಕ್ಕಿ  ಬಿದ್ದು ಕೆಲವೊಮ್ಮೆ  ಏಟಿನ ಉಡುಗೊರೆ ದೊರೆಯುತ್ತಿತ್ತು. ನಮ್ಮಿಂದ ಪದಾರ್ಥಗಳನ್ನು ರಕ್ಷಿಸಲು ದೊಡ್ಡವರ ಹದ್ದಿನ ಕಣ್ಣಿಟ್ಟು ಇದ್ದೆ ಇರುತ್ತಿತ್ತು.


ಚಿತ್ರ ಕೃಪೆ ಸಹೋದರಿ ಸುಮನ ಹಾಗು ದೀಪಕ್ 


ಇದೆ ಸಮಯದಲ್ಲಿ  ಗದ್ದೆಯಲ್ಲಿ ಬೆಳೆದಿದ್ದ   ಭತ್ತದ  ಬೆಳೆ  ಮನೆಗೆ ಬಂದು ಮನೆಯ ಹಿಂದಿನ ಕಣದಲ್ಲಿ  ನೆಲಸುತ್ತಿತ್ತು, ಅದರ ಒಕ್ಕಣೆ ಕಾರ್ಯವೂ ಸಹ ಈ ಸಂಭ್ರಮದಲ್ಲೇ  ನಡೆಯುತ್ತಿತ್ತು, ಭತ್ತದ ಹೊರೆಯನ್ನು ಬೀಸಿ ಬಡಿಯುವಾಗ  ಕೆಲಸದವರು ಹೂಯ್ಲೋ ವಾಸುದೇವಾ ಅಂತಾ  ಹೇಳುತ್ತಾ ಕೇಕೆ ಹಾಕುತ್ತಾ , ಬತ್ತ ಬಡಿಯುತ್ತಾ ಬಡಿದ ಭತ್ತದ ಬೀಜಗಳನ್ನು ತೋರುತ್ತಾ ಕೆಲಸ ಮಾಡುತ್ತಿದ್ದರು, ನಂತರ ಭತ್ತದ ರಾಶಿ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ  ಮನೆಗೆ ತರಲಾಗುತ್ತಿತ್ತು,  ಮನೆಯಲ್ಲಿ ನಿರ್ಮಿಸಲಾಗುತ್ತಿದ್ದ  ಬಿದಿರಿನ ತೊಂಬೆ , ಹಗೆವಿನಲ್ಲಿ  ಹೊಸ ಭತ್ತ  ಬಂದು ಶೇಖರಣೆ ಆಗುತ್ತಿತ್ತು.  ಸಂಕ್ರಾಂತಿಯ ಹುಗ್ಗಿಗೆ ಈ ಭತ್ತದ ಅಕ್ಕಿ ಬಳಕೆ ಯಾಗುತ್ತಿತ್ತು.

ಮುಂದಿನದು ರಾಸುಗಳನ್ನು ಸಿದ್ದ ಪಡಿಸುವ ಕಾರ್ಯ  , ವರ್ಷ ಪೂರ್ತಿ ದುಡಿದ  ರಾಸುಗಳನ್ನು ಸಂಕ್ರಾಂತಿಗೆ ಸಿದ್ದ ಪಡಿಸುವ ಕಾರ್ಯ ಸಹ ಸಂಕ್ರಾಂತಿಯ  ಸಂಭ್ರಮವೇ  ಆಗಿತ್ತು, ಮೊದಲು ರಾಸನ್ನು ಚೆನ್ನಾಗಿ ತೊಳೆದು, ಶುಚಿಮಾಡಿ,  ಅದರ ಕೊಂಬನ್ನು  ಕುಡುಗೋಲಿನಿಂದ  ಒರೆದು ನುಣುಪು ಮಾಡಲಾಗುತ್ತಿತ್ತು, ಈ ಕೆಲಸ ಮಾಡಲು ಹಳ್ಳಿಯಲ್ಲಿ ಕೆಲವು ಜನರಿದ್ದರು,  ಒಂದು ಎತ್ತಿನ ಎರಡು ಕೊಂಬನ್ನು  ಒರೆಯಲು  ಐವತ್ತು ಪೈಸೆ / ಎಂಟಾಣೆ  ಚಾರ್ಜ್ ಮಾಡುತ್ತಿದ್ದರು, ಅವರಿಂದ ರಾಸುಗಳ ಕೊಂಬನ್ನು ಒರೆಸಿ ನುಣುಪು ಮಾಡಿಸಿ,  ನಂತರ  ಲಾಳ ಕಟ್ಟುವವರಿಂದ  ಲಾಳ ಕಟ್ಟಿಸಿ  ಕಾಲಿಗೆ ಪಾದರಕ್ಷೆ ಕೊಡಲಾಗುತ್ತಿತ್ತು.  ಅದು  ಹೇಗೋ   . ಇಷ್ಟೆಲ್ಲಾ  ಆಗುವ ವೇಳೆಗೆ ಸಂಕ್ರಾಂತಿ ಹಬ್ಬ ನಾಳೆ ಅಂತಾ ಅನ್ನಿಸಿ ಬಿಡುತ್ತಿತ್ತು.  ಎಲ್ಲಾ ಆಯ್ತೆನ್ರೋ  ನಾಳೆ ಹಬ್ಬ  ಹೋಗಿ  ರಾಸುಗಳನ್ನು  ಅಲಂಕರಿಸಲು  ಬಣ್ಣ , ಗುಲಾಮ್ ಪಟ್ಟೆ [ ಒಂದು ತರಹದ ಬಣ್ಣ ಬಣ್ಣದ ಟೀಪು] , ಕಾಗದದ ಹೂವಿನ  ಸರ,  ಗೆಜ್ಜೆ, ಗೊರಸು, ಕಪ್ಪನೆ ಹುರಿದಾರ , ತರೋಣ ಬನ್ನಿ ಅಂತಾ  ಪೇಟೆಗೆ ಕರೆದುಕೊಂಡು  ಹೋಗಿ ತೆಗೆದು ಕೊಡುತಿದ್ದರು. ಇಷ್ಟರಲ್ಲಿ ಮನೆಯವರಿಗೆಲ್ಲಾ ಹೊಸ ಬಟ್ಟೆ  ಬಂದಿರುತ್ತಿತ್ತು.



ಚಿತ್ರ ಕೃಪೆ  ಅಂತರ್ಜಾಲ 


ಇಷ್ಟೆಲ್ಲಾ ಸಂಭ್ರಮದ ನಡುವೆ  ಮಾರನೆಯ ದಿನ ನಮ್ಮ ಮನೆಗೆ ಸಂಕ್ರಾಂತಿಯ  ಆಗಮನ ಆಗುತ್ತಿತ್ತು, ಬೆಳಗಿನ ಪೂಜೆ ಮುಗಿಸಿ ಹೊಸ ಭತ್ತದಿಂದ ಬೇರ್ಪಪಟ್ಟ ಅಕ್ಕಿಯಿಂದ ಪೊಂಗಲ್ ತಯಾರಿಸಿ  ದೇವರಿಗೆ ಅರ್ಪಿಸಿ, ಎಳ್ಳು ಬೆಲ್ಲಾ, ಸಕ್ಕರೆ ಅಚ್ಚು, ಕಬ್ಬು ಬಾಳೆ  ಹಣ್ಣು  ಇವುಗಳನ್ನು ಹಲವು  ಮನೆಯವರೊಂದಿಗೆ ವಿನಿಮಯ ಮಾಡಿ , ಶುಭ ಕೊರುತ್ತಿದ್ದೆವು.. ಹಬ್ಬದ ಊಟ ಮಾಡಿ    ಮನೆಯಲ್ಲಿದ್ದ  ಹಸು, ಎಮ್ಮೆ, ರಾಸುಗಳನ್ನು ಶೃಂಗಾರ  ಮಾಡುವ ವೇಳೆಗೆ   ಸೂರ್ಯದೇವ ಪಶ್ಚಿಮದ ಕಡೆ ಬರುತ್ತಿದ್ದ, ಊರಿನಲ್ಲಿದ್ದ  ಎಲ್ಲರ ಮನೆಯ ರಾಸುಗಳು  ಊರಿನ ಮುಖ್ಯ ರಸ್ತೆಗೆ ಬಂದು ಸಾಲಾಗಿ ನಿಲ್ಲು ತ್ತಿದ್ದವು   ಊರಿನ ಪ್ರಮುಖರು  ಆಗಮಿಸಿ  ಎಲ್ಲರ ಮನೆಯಿಂದ ತರಲಾಗಿದ್ದ  ಭತ್ತದ ಒಣ ಹುಲ್ಲನ್ನು  ಬಹಳ ಎತ್ತರಕ್ಕೆ ರಸ್ತೆ ಅಡ್ಡಲಾಗಿ  ಹಾಕಿ ರಾಶಿ ಮಾಡುತ್ತಿದ್ದರು,   ಈ ಸಮಯದಲ್ಲಿ  ಗ್ರಾಮದ ಕೆಲ ಯುವಕರು,  ದೊಣ್ಣೆ  ವರೆಸೆ , [ ಒಂದು ಕಾಲದ ಸಮರ ಕಲೆ ಇದು ] ಕೋಲಾಟ, ಮುಂತಾದ ಮನರಂಜನೆ  ಕಾರ್ಯಕ್ರಮ ಕೊಡುತ್ತಿದ್ದರು, ಮುಸ್ಸಂಜೆ ಆಗುತ್ತಿದ್ದಂತೆ  ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ  ಒಣ ಹುಲ್ಲಿಗೆ ದೇವರ ಹೆಸರಿನಲ್ಲಿ  ಅಗ್ನಿ ಸ್ಪರ್ಶ ಮಾಡಲಾಗುತ್ತಿತ್ತು. ಇದಕ್ಕೆ ಕಾದು  ನಿಂತ ರಾಸುಗಳನ್ನು ಹುರಿದುಂಬಿಸಿ  ಕಿಚ್ಚನ್ನು ಹಾಯಿಸಲಾಗುತ್ತಿತ್ತು,  ಮೊದಲು ಕಿಚ್ಚು ಹಾದವರಿಗೆ  ಬಹುಮಾನ   ಇರಲಿಲ್ಲ ವಾದರೂ ಯಾವುದೋ ಬಗೆಯ  ಉತ್ಸಾಹ, ಸಂತೋಷ  ಮನೆ ಮಾಡಿ ಇದೇ ಊರಿನ ಜನ ಪರಸ್ಪರ  ಸಂಭ್ರಮಿಸಿ ಆಚರಣೆ ಮಾಡುತ್ತಿದ್ದರು

.
ಚಿತ್ರ ಕೃಪೆ  ಸಹೋದರಿ ಸುಮನ ಹಾಗು ದೀಪಕ್  


ಈ ಆಚರಣೆಯಲ್ಲಿ ಮತ್ಸರ ಇರಲಿಲ್ಲ, ಪರಸ್ಪರ ಗೌರವ ಎಲ್ಲರಲ್ಲೂ ಇತ್ತು. ,


ಆದರೆ ಇಂದು ??  ಎಲ್ಲವೂ ಕೃತಕ  .... ಸಿದ್ದ ಪಡಿಸಿದ   ಎಳ್ಳು ಬೆಲ್ಲ ಬೀರಿ, ಕೃತಕ ಬಣ್ಣದ ಸಕ್ಕರೆ ಅಚ್ಚು  ತಿಂದು  ಕೃತಕ  ನಗೆ ಯೊಡನೆ,  ಎಲ್ಲರೊಡನೆ ಬೆರೆತಂತೆ ನಟಿಸುತ್ತಾ  , ಟಿ .ವಿ . ವಾಹಿನಿಗಳ ಮುಂದೆ  ಕುಳಿತು,  ಸಂಸ್ಕೃತಿಯ ಬಗ್ಗೆ ಮಾತಾಡುತ್ತಾ   ಸಂಕ್ರಾಂತಿಯನ್ನು  ಸಂ  ಕ್ರಾಂತಿ ಎಂಬಂತೆ  ಬೀಗುತ್ತಾ  ಬ್ರಾಂತಿ ಯಿಂದ ಆಚರಣೆ ಮಾಡುತ್ತಿದ್ದೇವೆ  .. ಯಾಕೋ ಈ ಸಂಕ್ರಾಂತಿಯಲ್ಲಿ ಇದೆಲ್ಲಾ ನೆನಪಿಗೆ ಬಂತೂ ಹಾಗೆ ಬರೆದು ಬಿಟ್ಟೆ.   ನಿಮಗೆಲ್ಲಾ  ಮಕರ ಸಂಕ್ರಾಂತಿಯ ಶುಭಾಶಯಗಳು  ನಿಮ್ಮ ಕುಟುಂಬದವರಿಗೆಲ್ಲಾ  ಮಕರ ಸಂಕ್ರಾಂತಿ ಶುಭ ತರಲಿ.  ಎಂದು ಹೃದಯ ಪೂರ್ವಕವಾಗಿ ಹಾರೈಸುವೆ.  ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ  ಸಂಕ್ರಾಂತಿಯನ್ನು  ಆಚರಿಸಿ  .ಮತ್ತೆ ಸಿಗೋಣ ಮುಂದಿನ ಸಂಚಿಕೆಯಲ್ಲಿ.



Sunday, January 6, 2013

ಯಾರ್ರೀ ಮದ್ದೂರ್ , ಬೆಂಗಳೂರ್ ............!!! ಕಾಲಾಯ ತಸ್ಮೈ ನಮಃ .


ಚಿತ್ರ ಕೃಪೆ ಅಂತರ್ಜಾಲ 


ಅದೊಂದು ದಿನ ಕಾರ್ಯ ನಿಮಿತ್ತ ಮಳವಳ್ಳಿ ಗೆ ಹೋಗಿದ್ದೆ.  ಕಾರ್ಯ ಮುಗಿಸಿ  ವಾಪಸ್ಸು ಬರಲು ಬಸ್ ನಿಲ್ದಾಣಕ್ಕೆ ಬಂದೆ. ಅದೇನೋ ಕಾಣೆ ಅವತ್ತು ಮೈಸೂರಿನ ಕಡೆಗೆ ತೆರಳುವ ಬಸ್ಸುಗಳು ಮಾಯವಾಗಿದ್ದವು. ಸರಿ ಇನ್ನೇನು ಎನ್ನುವಷ್ಟರಲ್ಲಿ ಮಳವಳ್ಳಿ ಯಲ್ಲಿ ನನ್ನ ಜೊತೆ ಓದುತ್ತಿದ್ದ ಬಾಲ್ಯದ ಗೆಳೆಯನೊಬ್ಬ ಸಿಕ್ಕ.  ಅದು ಇದು ಮಾತಾಡುತ್ತಾ ನಿಂತೆವು. ಅಷ್ಟರಲ್ಲಿ ಒಂದು ಖಾಸಗಿ ಬಸ್ಸು ಕೊಳ್ಳೆಗಾಲದಿಂದ ಬೆಂಗಳೂರಿಗೆ ತೆರಳಲು ಮಳವಳ್ಳಿ ಬಸ್ ನಿಲ್ದಾಣಕ್ಕೆ ಬಂತು. ಖಾಸಗಿ ಬಸ್ಸುಗಳು ಬಂದರೆ ಅದರ  ಏಜೆಂಟರುಗಳು  ಪರಾಕು ಹೇಳಲು ತೊಡಗುತ್ತಾರೆ. ಈ ಬಸ್ಸು ಬಂದಾಗಲೂ  ಯಾರ್ರೀ ಮದ್ದೂರ್, ಬೆಂಗಳೂರ್ , ಮದ್ದೂರ್ ಬೆಂಗಳೂರ್  ಅಂತಾ ನಾಲ್ಕಾರು ಏಜೆಂಟ್ ಗಳು   ಕೂಗಲು ತೊಡಗಿದರು . ನನ್ನ ಗೆಳೆಯ ಅಲ್ಲಿ ಕೂಗುತ್ತಿದ್ದ ಒಬ್ಬನನ್ನು ತೋರಿಸಿ , ಲೋ ಬಾಲು  ಅವನು ನಿನಗೆ ಗೊತ್ತಿಲ್ವಾ?? ಅಂದಾ. ಸರಿಯಾಗಿ ಗುರುತು ಸಿಗಲಿಲ್ಲ  , ಇಲ್ಲಾ ಕಣೋ ಗುರುತು ಸಿಗಲಿಲ್ಲಾ ಅಂದೇ .
 ಲೇ ಗುಗ್ಗು  ಅವನು ಅದೇ ನಮ್ಮ  ಸ್ಕೂಲಿನಲ್ಲಿ ಓದುತ್ತಿದ್ದ  ಅದೇ  "ಬೊಂಬಾಟ್  ಸುರೇಶ"  [ ಹೆಸರು ಬದಲಿಸಲಾಗಿದೆ] ಕಣೋ 

ಆ ಹೌದಾ  ಲೇ ಅವನ್ಯಾಕೋ ಹಿಂಗಾದ  ??? ಅಂತಾ ಉದ್ಗಾರ ಹೊರಟಿತು ನನ್ನಿಂದಾ

ಅದೇ ಕಣೋ   "ಕಾಲಾಯ  ತಸ್ಮೈ ನಮಃ"  ಅದೇ ನಿನಗೆ ಗೊತ್ತಲ್ವಾ ಅವನು ಹೈಸ್ಕೂಲಿನಲ್ಲಿ ಹೆಂಗೆ ಮೆರೀತಿದ್ದ ಅಂತಾ ಈಗ ನೋಡು ಅವನ ಗತಿ, ಅಂತಾ ನಿಟ್ಟುಸಿರು ಬಿಟ್ಟ.

 ಬನ್ನಿ ನಮ್ಮ  "ಬೊಂಬಾಟ್  ಸುರೇಶ"ನ ಪರಿಚಯ ಮಾಡಿಕೊಡುತ್ತೇನೆ.  ಈ ಸುರೇಶ  ನಮ್ಮ ಜೊತೆ ಅದೇ ಹೈಸ್ಕೂಲಿನಲ್ಲಿ ಓದುತಿದ್ದ ಒಂದು ವರ್ಷದ ಹಿರಿಯ,ಆ ದಿನಕ್ಕೆ  ನಮ್ಮ ಹೈಸ್ಕೊಲಿನ ಹೀರೋ ಅಂತಾನೆ ಹೇಳಬಹುದು.

ನಮ್ಮ ಬೊಂಬಾಟ್ ಸುರೇಶನ ತಂದೆ  ವ್ಯಾಪಾರಿಯಾಗಿದ್ದು  ಅನಕ್ಷರಸ್ತರು ಒಬ್ಬ ಮಗ ವಿದ್ಯೆ  ಕಲಿಯದೇ  ತನ್ನ ಜೊತೆ ಅಂಗಡಿ ನಡೆಸುತಿದ್ದ, ಇನ್ನು ಕಿರಿಯ ಮಗ  ಇವನಾದರೂ  ಚೆನ್ನಾಗಿ ಓದಿ  ಮುಂದೆ ಬರಲಿ ಅಂತಾ ಇವನಿಗೆ ಮುದ್ದಿನಿಂದ ಕೇಳಿದಷ್ಟು ಹಣ ಕೊಟ್ಟು ಸ್ಕೂಲಿಗೆ ಕಳುಹಿಸುತ್ತಿದ್ದರು. ಇವನಿಗೆ  ಎಲ್ಲಿಂದಾ  ಅಷ್ಟು ದುಡ್ಡು ಬರುತ್ತಿತ್ತೋ ಕಾಣೆ  ಐವತ್ತು, ನೂರು  ರೂಪಾಯಿ ಲೆಕ್ಕಾ ಇರಲಿಲ್ಲ . ಆದರೆ ಈ ಪುಣ್ಯಾತ್ಮಾ ಅಂದಿಗೆ ಹೈಸ್ಕೂಲಿನ ದಾದಾ ಆಗಿದ್ದ. ಬೆಳಿಗ್ಗೆ ಒಂದು ಡ್ರೆಸ್ಸು, ಮಧಾಹ್ನ ಒಂದು ಡ್ರೆಸ್ಸು ಹಾಕಿ ಕೊಂಡು ಹುದುಗಿಯರನ್ನು   ಚುಡಾಯಿಸುತ್ತಾ,  ಮಜಾ ಮಾಡುತ್ತಿದ್ದ. ಈ ವಾರ  ಬಿಡುಗಡೆಯಾದ  ಹೊಸ ಚಲನ ಚಿತ್ರಗಳಲ್ಲಿ  ಕಾಣುವ ಹೊಸ ತರಹದ  ಡ್ರೆಸ್ ಗಳನ್ನ   ಮುಂದಿನ ವಾರದೊಳಗೆ ಹಾಕಿಕೊಂಡು ಬರದಿದ್ದರೆ  ಅವನಿಗೆ ನಿದ್ದೆ ಬರುತ್ತಿರಲಿಲ್ಲ  ಯಾವ ಬಣ್ಣದ ಡ್ರೆಸ್ ಹಾಕಿದರೂ ಅದಕ್ಕೆ ಮ್ಯಾಚ್ ಆಗುವ ಬಣ್ಣ ಬಣ್ಣದ ಬೂಟು, ವಾಚುಗಳನ್ನು   ಹಾಕುತ್ತಿದ್ದ.  ಕಿರಿಯ ಮಗ ಎಂಬ ಪ್ರೀತಿಯಿಂದ ಇವೆಲ್ಲಕ್ಕೂ ಅವರ ಮನೆಯಲ್ಲಿ ಎಲ್ಲಕ್ಕೂ  ಮಾಫಿ ಇತ್ತು. ಬಹುಷಃ   ಕಾಲೇಜು ಹಂತದಲ್ಲಿ  ಆಡುವ ಆಟಗಳನ್ನು ಹೈಸ್ಕೂಲ್ ಹಂತದಲ್ಲಿಯೇ  ಆಡಿ  ಮುಗಿಸಿದ್ದ ಈ ಭೂಪ.ಆ ಕಾಲಕ್ಕೆ ಬಹಳ  ಅಡ್ವಾನ್ಸ್ ಆಗಿದ್ದ ಈ ಹುಡುಗ . ಮೊದಲೇ ಅದು ಗಂಡು ಹಾಗು ಹೆಣ್ಣು ಮಕ್ಕಳು ಜೊತೆಯಾಗಿ ಕಲಿಯುತ್ತಿದ್ದ ಶಾಲೆ, ಇವನ ಆಟೋಟಗಳಿಗೆ ಕಡಿವಾಣವೇ ಇರಲಿಲ್ಲ .ಇವನ ಜೊತೆ ಯಾವಾಗಲೂ ಒಂದಷ್ಟು ಹುಡುಗರ  ದಂಡೆ ಇರುತ್ತಿತ್ತು. ಇವನು ರಾಜ ನಂತೆ  ಅವರಿಂದ ಸೇವೆ ಪಡೆಯುತ್ತಿದ್ದ.ಇವನು ನೀಡುವ ಕಾಸಿನಿಂದ  ಆ ಹುಡುಗರು ಇವನನ್ನು ಬಾಸ್ ಅಂತಿದ್ದರು .ಇವನ ಬೈಕ್ ಶೋಕಿ  ಆಗಲೇ ಹೆಸರುವಾಸಿಯಾಗಿತ್ತು. ಇವನ ಬಿಂದಾಸ್ ಜೀವನ ಶೈಲಿ ನೋಡಿ ಹೈಕಳು "ಬೊಂಬಾಟ್ ಸುರೇಶ "ಅಂತಾ ಕರೆಯಲು ಶುರುಮಾಡಿದ್ದರು.



ಚಿತ್ರ ಕೃಪೆ ಅಂತರ್ಜಾಲ 

ಇಂತಹ ನಮ್ಮ ಹೀರೋ ಹಿಂಗ್ಯಾಕೆ ಆದಾ ?? ಎನ್ನುವ ಅಚ್ಚರಿ ಆಯಿತು, ನನ್ನ ಗೆಳೆಯ ಲೇ ಬಾರಲೇ ನಿನ್ನ ಫ್ರೆಂಡ್ ಬಂದವನೇ ಮಾತಾಡಿಸುವಂತೆ  ಅಂತಾ ಅಲ್ಲೇ "ಯಾರ್ರೀ ಮದ್ದೂರ್, ಬೆಂಗಳೂರ್ , ಮದ್ದೂರ್ ಬೆಂಗಳೂರ್ ಅಂತಾ ಕೂಗುತ್ತಿದ್ದ "ಬೊಂಬಾಟ್ ಸುರೇಶ "ನನ್ನು  ಕರೆದುಕೊಂಡು ಬಂದಾ  , ನನ್ನನ್ನು ನೋಡಿ  ಸುರೇಶ ಒಮ್ಮೆಲೇ  ಗರ ಬಡಿದಂತೆ ಆಗಿದ್ದ  ಕಣ್ಣಲ್ಲಿ ನೀರು ತುಂಬಿ ಕೊಂಡು ನಿಂತಾ. ಅವನನ್ನು ಸಮಾಧಾನ ಮಾಡಿ ಅಲ್ಲಾ ಕಣೋ ಸುರೇಶ ಏನೋ ಇದು ನೀನು ಹೀಗೆ !! ಇದೆಲ್ಲಾ  ಏನುಕಥೆ? ಅಂತಾ ಕೇಳಿದೆ .  ಬಾ ಕಾಫಿ ಕುಡಿಯೋಣ ಬಹಳ ದಿನಗಳ ಭೇಟಿ ನಮ್ಮದು ಅಂತಾ ಅಲ್ಲೇ ಇದ್ದ ಒಂದು ಹೋಟೆಲ್  ಗೆ ಹೋದೆವು.

ಹೋಟೆಲ್ ನಲ್ಲಿ ತನ್ನ ವಿಚಾರ ಬಿಚ್ಚಿಟ್ಟ  ಸುರೇಶ,ನೋಡು ಬಾಲೂ ನಿನಗೆ ಗೊತ್ತಲ್ಲಾ ನಾನು ಹೇಗೆ ಇದ್ದೆ ಅಂತಾ , ಹಾಗೆ ಮೆರೆದ ನಾನು  ಹತ್ತನೇ ಕ್ಲಾಸ್  ಡುಮ್ಕಿ ಹೊಡೆದೆ. ನೀವೆಲ್ಲಾ ಮುಂದೆ ಹೋದಿರಿ. ಎಷ್ಟು ಸರಿ ಕಟ್ಟಿದರೂ ಪಾಸಾಗಲಿಲ್ಲ  , ನಿನಗೆ ಗೊತ್ತಲ್ಲಾ  ಆ ಹುಡುಗಿ ಅವಳನ್ನು ಬಹಳ ಪ್ರೀತಿಸುತ್ತಿದ್ದೆ ,  ಅವಳಿಗಾಗಿ  ಬಹಳ ದುಡ್ಡು ಖರ್ಚು  ಮಾಡಿದೆ  ಆದರೆ ಅವಳ ಅಪ್ಪಾ ಅಮ್ಮಾ  ನಮ್ಮದೇ ಪಂಗಡ ಆದರೂ ನನಗೆ ಆ ಹುಡುಗಿಯನ್ನು ಕೊಡಲಿಲ್ಲ , ನಾನು ಹತ್ತನೇ ಕ್ಲಾಸ್ ಡುಮ್ಕಿ ಎನ್ನುವ  ಕಾರಣ ನೀಡಿ  ಅವಳಿಗೆ ಬೇರೆ ಮದುವೆ  ಮಾಡಿದರು. ಅಷ್ಟರಲ್ಲಿ ನನ್ನ ಅಣ್ಣಾ ಅತ್ತಿಗೆ ಹಾಗು ಅಪ್ಪನೊಡನೆ ಜಗಳ ಆಗಿ ನನ್ನ ಪಾಲಿನ ಆಸ್ತಿಯನ್ನು  ಭಾಗ ಮಾಡಿಸಿದೆ.  ನನ್ನ ಪಾಲಿಗೆ ಲಕ್ಷಾಂತರ ಮೌಲ್ಯದ  ಆಸ್ತಿ ಹಾಗು ಹಣ ಬಂತು .ಆಗ ಶುರು ಆಯ್ತು  ಮತ್ತೊಂದು ಲವ್ವು,  ಒಬ್ಬಳು ಟೀಚರು ಗುರು ತುಂಬಾ ಚೆನ್ನಾಗಿದ್ದಳು,  ಅವಳನ್ನು ರಾಣಿ  ತರಹ  ಮೆರೆಸಿದೆ, ಕೈಯ್ಯಲಿದ್ದ ಲಕ್ಷಾಂತರ ಹಣ ಎರಡು ವರ್ಷದಲ್ಲಿ ಖಾಲಿಯಾಗಿತ್ತು.   ಹಣ ಖಾಲಿಯಾದ ನಂತರ ಅವಳು ಒಬ್ಬ ಇಂಜಿನಿಯರ್ ನ ಮದುವೆಯಾಗಿ ಈ ಊರನ್ನೇ ತೊರೆದಳು.  ಹಣ ಕಳೆದುಕೊಂಡ ನಾನು  ಯಾರಿಗೂ ಬೇಡವಾದೆ  , ಅಪ್ಪಾ ಇದೆ ಕೊರಗಿನಲ್ಲಿ ಪ್ರಾಣ ಬಿಟ್ಟ, ಅಣ್ಣಾ ಅತ್ತಿಗೆ,  ದೂರಮಾಡಿದರು. ವಿಧ್ಯೆ ಇಲ್ಲದ ನನಗೆ  ಯಾವ ಕೆಲಸ ಸಿಗುತ್ತೆ ಗುರು, ಸ್ವಲ್ಪ ದಿನ ಬೆಂಗಳೂರಿನ  ಯಾವುದೋ ಅಪಾರ್ಟ್ಮೆಂಟಿನಲ್ಲಿ  ಗೆಟ್ ಕೀಪರ್ ಆಗಿದ್ದೆ, ಅಲ್ಲಿ ನೀಡುತ್ತಿದ್ದ  ಎರಡು ಸಾವಿರ ಸಾಲದೇ ಮತ್ತೆ ಇಲ್ಲೇ ಬಂದೆ  , ನನ್ನ ಪರಿಸ್ಥಿತಿ ನೋಡಿ ಅವನು ಆ ರಾಜೇಂದ್ರ ಅವರ ಎಲ್ಲಾ ಬಸ್ಸುಗಳ  ಏಜೆಂಟು ಅಂತಾ  ನೇಮಕ ಮಾಡಿದ್ದಾನೆ, ಕಳೆದ ಎರಡು ವರ್ಷಗಳಿಂದಾ  ಈ ಕೆಲಸ ಗುರು ಏನೋ ಊಟ ಬಟ್ಟೆಗೆ  ನಡೀತಾ ಇದೆ, ಈ  ಬಸ್ ನಿಲ್ದಾಣದಲ್ಲೇ ಕಳೆದ ವರ್ಷ  ಒಂದು ದಿನ ಸಿಕ್ಕ ಒಬ್ಬ ಅನಾಥ ಮಹಿಳೆ ಯನ್ನು ಯಾವುದೇ ಕುಲ ವಿಚಾರಿಸದೆ  ಮದುವೆ  ಆದೆ, ಕೆಲವು ಗೆಳೆಯರು  ಸಹಾಯ ಮಾಡಿ  ಆಶ್ರಯ ಮನೆ ಕೊಡಿಸಿದರು.  ಈಗ ಒಂದು ಪುಟ್ಟ ಮಗು ಆಗಿದೆ.  ನನ್ನ ಗತ ಕಾಲದ ತಪ್ಪುಗಳನ್ನು  ಆ ಮಗುವಿನ ಮುಖ ನೋಡುತ್ತಾ  ಮರೆಯುತ್ತಿದ್ದೇನೆ. ನನ್ನ ಹೆಂಡತಿ  ಅಕ್ಕ ಪಕ್ಕದ ಮಕ್ಕಳಿಗೆ ಪಾಠ  ಹೇಳಿಕೊಡುತ್ತಾಳೆ   ಅವಳೂ ಪಿ.ಯೂ.ಸಿ.ವರೆಗೆ ಓದಿದ್ದಾಳೆ  ಹೆಂಗೋ ಜೀವನ ನಡೀತಾ ಇದೆ ಅಂತಾ  ಹೇಳಿ ನಿಟ್ಟುಸಿರು ಬಿಟ್ಟ.  
ಅಬ್ಬಬ್ಬಾ  ಎನ್ನಿಸುವಂತಾ ನನ್ನ ಗೆಳೆಯ ಸುರೇಶನ  ಜೀವನ ಕಥೆ ಕೇಳಿ ಕಣ್ತುಂಬಿ ಬಂತು. ಅಷ್ಟರಲ್ಲಿ ಮತ್ತೊಂದು ಅವನ ಮಾಲಿಕರ   ಬಸ್ಸು ಬಂತು .  ಗುರು ನಿನ್ನ ನೋಡಿ ಬಹಳ ಖುಷಿಯಾಯಿತು  ನಿನ್ನ ಫೋನ್ ನಂಬರ್ ಕೊಡು ಅಂತಾ ಅದನ್ನು ಪಡೆದು ಹೊರಟ ,  ಹೋಗುವಾಗ ಆ ಹೋಟೆಲ್ ನವರಿಗೆ ಯೋ ಅವರ ಹತ್ರ ದುಡ್ಡು  ಈಸ್ಗ ಬ್ಯಾಡ . ಅಂತಾ ಓಟ  ಕಿತ್ತಾ. ಅವನು, ಹೋಟೆಲ್ ನವರು ನಮ್ಮ ಬಿಲ್ಲನ್ನು ತೆಗೆದುಕೊಳ್ಳದೆ ಹೋದರು.

 ಯಾರ್ರೀ ಮದ್ದೂರ್, ಬೆಂಗಳೂರ್ , ಮದ್ದೂರ್ ಬೆಂಗಳೂರ್ ಅಂತಾ ಕೂಗಲು  ಶುರು ಮಾಡಿದ  ಅದನ್ನು ನೋಡುತ್ತಾ  ಭಾರವಾದ ಮನಸಿನಲ್ಲಿ ಅವನಿಗೆ ವಿದಾಯ ಹೇಳಿ  ಮೈಸೂರಿನ ಬಸ್ಸಿನೆಡೆಗೆ ನಡೆದೇ. ಗೆಳೆಯ ಹೇಳಿದ ಮಾತು ನಿಜ ಕಾಲಾಯ ತಸ್ಮೈ ನಮಃ. ಅಂತಾ ಕಣ್ಣು ಮುಚ್ಚಿ ಕುಳಿತೆ.