Sunday, November 24, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....3 ದ್ವಾರ ಸಮುದ್ರ ಕ್ಕೆ ಸಮುದ್ರದಷ್ಟು ಇತಿಹಾಸ

ದ್ವಾರ ಸಮುದ್ರದ ಪಕ್ಷಿನೋಟ {ಗೂಗಲ್ ಮ್ಯಾಪ್ ಕೃಪೆ }

ನಮಸ್ಕಾರ  , ಕಳೆದ ಸಂಚಿಕೆಯಲ್ಲಿ ವೆಲಾಪುರದ [ ಬೇಲೂರಿನ ] ವೈಜ್ಞಾನಿಕ  ವೈಭವವನ್ನು ಸ್ವಲ್ಪ ಇತಿಹಾಸದೊಡನೆ ಕಂಡೆವು, ಬನ್ನಿ ಇಂದು ಹೊಯ್ಸಳರ  ಮೊದಲ ರಾಜಧಾನಿ  ಹಳೇಬೀಡು ಅಲಿಯಾಸ್ ದ್ವಾರಸಮುದ್ರ ಅಥವಾ ದೊರಸಮುದ್ರ. ದಲ್ಲಿ ಅಲೆದಾಡೋಣ . ಹೊಯ್ಸಳ ಅರಸರ  ಮೊದಲ ರಾಜಧಾನಿ  ಈ ದ್ವಾರ ಸಮುದ್ರ . ದ್ವಾರ ಸಮುದ್ರ  ಎಂಬ ಹೆಸರು ಬರಲು   ಪಟ್ಟಣದ  ಪಕ್ಕದಲ್ಲೇ ಇರುವ  ವಿಶಾಲವಾದ ಕೆರೆ ಕಾರಣವೆಂದು ಕೆಲವು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ, ಅದು ಸ್ವಲ್ಪ ವಾಸ್ತವಕ್ಕೆ ಹತ್ತಿರ ಅನ್ನಿಸುತ್ತದೆ, ಗೂಗಲ್ ಮ್ಯಾಪ್ ನೋಡಿದಾಗ  ವಿಶಾಲವಾದ ಕೆರೆ ದ್ವಾರ ಸಮುದ್ರ ನಗರಕ್ಕೆ ಪೂರ್ವ ಭಾಗದಲ್ಲಿ ಕಾಣುತ್ತದೆ . ಹಳೇಬೀಡು  ಹೆಸರು ಬರಲು  ಮತ್ತೊಂದು ಕಾರಣ ಇಲ್ಲಿದೆ ನೋಡಿ, ಹೊಯ್ಸಳ ಸಾಮ್ರಾಜ್ಯದಲ್ಲಿ ಮೊದಲ ರಾಜಧಾನಿ  ಹಳೇಬೀಡು/ ದ್ವಾರಸಮುದ್ರ , "ದ್ವಾರ ಸಮುದ್ರ"  ಪತನಗೊಂಡು  ಹಾಳು ಬೀಡಾಯಿತು ನಂತರ ವೇಲಾಪುರಿ/ ಬೇಲೂರು ,ರಾಜಧಾನಿ ಆಯಿತು.   ಅಲ್ಲಿನ ಪ್ರಜೆಗಳ ಬಾಯಲ್ಲಿ ಮೊದಲ ಬೀಡು  "ಹಳೇಬೀಡು /ದ್ವಾರ ಸಮುದ್ರ" ನಂತರದ್ದು  ಹೊಸ ಬೀಡು  ''ವೇಲಾಪುರಿ / ಬೇಲೂರು . ಹಾಳಾದ ಬೀಡು , ಹಳೆಯ ಬೀಡು  ನಂತರ ಹಳೇಬೀಡು ಎಂದು ಹೆಸರು ಹೊಂದಿತು .


ಹಳೇ ಬೀಡಿನ ದರ್ಶನ


ಹಳೆಬೀಡು  ನಾಶಕ್ಕೆ ಹೊಯ್ಸಳ ರಾಜ ವಿರೂಪಾಕ್ಷ ಬಲ್ಲಾಳನ ಸಹೋದರಿ ಹರಿಯಾಳ ದೇವಿಯ  ಶಾಪ ಕಾರಣವೆಂದು ಕೆಲವು ಸ್ಥಳೀಯರು ಹೇಳುತ್ತಾರೆ , ಹರಿಯಾಳ  ದೇವಿಯ ಮಕ್ಕಳಾದ  ಲಕ್ಷ್ಮೇಶ , ವೀರೇಶ  ರನ್ನು  ತಪ್ಪು ಮಾಹಿತಿಯಿಂದ ರಾಜ ವಿರೂಪಾಕ್ಷ  ಶೂಲಕ್ಕೆ ಹಾಕಿಸಿರುತ್ತಾನೆ, ಅದನ್ನು ಕೇಳಲು ಬಂದ  ಹರಿಯಾಳ ದೇವಿಯನ್ನು ಅವಮಾನಿಸಿ , ತನ್ನ ರಾಜ್ಯದ ಯಾವ ಪ್ರಜೆಯೂ ಅವಳಿಗೆ  ಅನ್ನ ನೀರು ಕೊಡದಂತೆ ಆಜ್ಞೆ  ಮಾಡುತ್ತಾನೆ , ಮಕ್ಕಳ ಅಂತ್ಯ ಸಂಸ್ಕಾರ ಮಾಡಿ ಬಳಲಿದ್ದ ಹಾಗು ರಾಜ ಬೀದಿಯಲ್ಲಿ  ಬರುತ್ತಿದ್ದ ರಾಣಿ ಗೆ ಯಾರೂ ಸಹಾಯ ಮಾಡುವುದಿಲ್ಲ,  ರಾಣಿಯು ಅಲೆಯುತ್ತ  ಅಲೆಯುತ್ತಾ "ಬಸ್ತಿ ಹಳ್ಳಿ  " ಕುಂಬಾರ ಕೇರಿ ಯಲ್ಲಿ ರಾಜಯ್ಯ  ಎಂಬುವರ ಮನೆಯ  ಸಮೀಪ ಅನಾಥಳಾಗಿ ಬಿದ್ದುಬಿಡುತ್ತಾಳೆ , ರಾಜಯ್ಯ  ನು ಇವಳನ್ನು ಗುರುತು ಹಿಡಿದು  ಆದರಿಸುತ್ತಾನೆ, ಆಗ ರಾಣಿ ತನಗೆ ರಾಜ ನೀಡಿದ ಶಿಕ್ಷೆಯನ್ನು ತಿಳಿಸಿ, ತನಗೆ ಅನ್ನ ,ನೀರು ಕೊಟ್ಟರೆ  ನಿನಗೆ ತೊಂದರೆ ಆಗುತ್ತೆ ಎನ್ನುತ್ತಾಳೆ, ಆದರು ಲೆಕ್ಕಿಸದ  ಕುಂಬಾರ ರಾಜಯ್ಯ  ಅವಳನ್ನು ಸತ್ಕರಿಸಿ  ಆಹಾರ ನೀಡುತ್ತಾನೆ , ರಾಣಿಯು ಕುಂಬಾರ ರಾಜಯ್ಯ ನ  ತೊಡೆಯ ಮೇಲೆ ತಲೆ ಇಟ್ಟು , ಇಹ ಲೋಕ ತ್ಯಜಿಸಿದಳೆಂದೂ , ಅದಕ್ಕೆ  ಮೊದಲು ರಾಣಿ ಕೋಪದಿಂದ   "ದ್ವಾರ ಸಮುದ್ರ ಹಾಳು ಬೀಡಾಗಲಿ , ಈ ಕುಂಬಾರ ಕೇರಿ ಊರ್ಜಿತ ವಾಗಿ ಇಲ್ಲಿನವರು ಚೆನ್ನಾಗಿ ಬಾಳಲಿ "  ಎಂದು ಶಾಪ  ಕೊಟ್ಟಳೆಂದು ಹೇಳುತ್ತಾರೆ .


ಹಳೇಬೀಡು  ಪಕ್ಷಿನೋಟ {ಗೂಗಲ್ ಮ್ಯಾಪ್ ಕೃಪೆ }
 
ಹಳೆಬೀಡು  ನಮಗೆಲ್ಲಾ  ತಿಳಿದಂತೆ ಹೊಯ್ಸಳರ ಪ್ರಥಮ ರಾಜಧಾನಿ,ಹೊಯ್ಸಳ ದೊರೆಗಳ  ರಾಜ್ಯಭಾರ  1026–1343 ಎಂದು ದಾಖಲಿಸಲಾಗಿದೆ.  ಈ ಸಮಯದಲ್ಲಿ   ೧] ಎರಡನೇ  ನ್ರಿಪಕರ್ಮ 1026–1047  ೨] ಹೊಯ್ಸಳ ವಿನಯಾದಿತ್ಯ 1047–1098, ೩] ಎರೆಯಂಗ 1098–1102, ೪]  ಒಂದನೇ ವೀರ ಬಲ್ಲಾಳ 1102–1108 ೫]  ವಿಷ್ಣುವರ್ಧನ [ ಬಿಟ್ಟಿದೇವ ] 1108–1152, ೬] ಒಂದನೇ  ನರಸಿಂಹ 1152–1173  ೭]  ಎರಡನೆ ವೀರ ಬಲ್ಲಾಳ 1173–1220 ೮] ಎರಡನೆ ವೀರ ನರಸಿಂಹ 1220–1235  ೯] ವೀರ ಸೋಮೇಶ್ವರ 1235–1254  ೧೦] ಮೂರನೇ ನರಸಿಂಹ 1254–1291 ೧೧] ಮೂರನೇ ಬಲ್ಲಾಳ 1292–1343 .  ಸುಮಾರು ಮುನ್ನೂರ ಹದಿನೇಳು  ವರ್ಷಗಳ ಕಾಲ  ವೈಭವಯುತವಾಗಿ ಹೊಯ್ಸಳ ಸಾಮ್ರಾಜ್ಯ ಮೆರೆದಿದೆ.  ಆ ನಂತರವಷ್ಟೇ  ವಿಜಯನಗರ  ಸಾಮ್ರಾಜ್ಯದ ಉದಯವಾಗುತ್ತದೆ. ಉತ್ತರದಲ್ಲಿ ಬಾದಾಮಿಯ ಚಾಲುಕ್ಯರು ದಕ್ಷಿಣದಲ್ಲಿ ತಲಕಾಡಿನ  ಚೋಳರು  ಇವರಿಬ್ಬರ ಮಧ್ಯದಲ್ಲಿ  ಶೂರತನದಿಂದ ಹೊಯ್ಸಳ ಸಾಮ್ರಾಜ್ಯ  ಮೆರೆದಿತ್ತು. ಇನ್ನು ಹಳೇಬೀಡಿನಲ್ಲಿ  ನೋಡ ಬಹುದಾದ ಮಾಹಿತಿ ಯನ್ನು ಗೂಗಲ್ ನಕ್ಷೆಯಲ್ಲಿ ಗುರುತಿಸಲಾಗಿದೆ. [ ಇದಕ್ಕೆ ಸಹಕಾರ ನೀಡಿದ  ಗೆಳೆಯ ಗಿರೀಶ್ ಸೋಮಶೇಖರ್ , ಹಾಗು ಹಳೆಬೀಡಿನ ಸುಬ್ರಮಣ್ಯ ಇವರನ್ನು  ಕೃತಜ್ಞತೆ ಯಿಂದ ನೆನೆಯುತ್ತೇನೆ ] ೧} ಹಳೆಬೀಡಿನ ಪೂರ್ವಕ್ಕೆ ದ್ವಾರ ಸಮುದ್ರ ಕೆರೆ ಇದೆ ಐತಿಹಾಸಿಕ ವಾಗಿ ಮಹತ್ವ ಪಡೆದ  ಈ ಕೆರೆ ಒಳ್ಳೆಯ  ನೋಟ  ಒದಗಿಸುತ್ತದೆ, ೨ } ಹೊಯ್ಸಳೇಶ್ವರ  ದೇವಾಲಯ  ೩} ಬೆಣ್ಣೆ ಗುಡ್ಡ  ೪} ಜೈನ  ಬಸದಿಗಳು  ೫] ಕೇದಾರೇಶ್ವರ  ದೇವಾಲಯ ೬ } ದೊಡ್ಡ ಆಲದಮರ  ಇವುಗಳನ್ನು ನೋಡದಿದ್ದರೆ ಹಳೆಬೀಡಿನ ಇತಿಹಾಸ ಅರ್ಥವಾಗದು.

ಹೊಯ್ಸಳೇಶ್ವರ  ದೇವಾಲಯ


ಈ ಊರಿನ  ವಿಶೇಷ ಅಂದ್ರೆ  ೧} ಹೊಯ್ಸಳ ಸಾಮ್ರಾಜ್ಯದ ಮೊದಲ ರಾಜಧಾನಿ, ೨} ಮೂರು ಧರ್ಮಗಳ ತ್ರಿವೇಣಿ ಸಂಗಮ, ಜೈನ ಧರ್ಮ, ವೈಷ್ಣವ ಧರ್ಮ, ಶೈವ ಧರ್ಮಗಳ ಸಂಗಮ ಸ್ಥಳ ಇದು, ಹಾಗಾಗಿ ಇಲ್ಲಿ  ಮೂರೂ ಧರ್ಮಗಳಿಗೆ ಸಂಬಂಧಪಟ್ಟಂತೆ   ದೇವರ ಮೂರ್ತಿಗಳ ದರ್ಶನ ಆಗುತ್ತದೆ. ೩} ಹಳೆಬೀಡಿನ ದೇವಾಲಯದ ರೂವಾರಿ ಶಿಲ್ಪಿಗಳು ಮಾಬಲ , ಬಲ್ಲಣ್ಣ ,ಮಾಣಿಕ , ನಾಗೋಜ , ಬೋಚಣ್ಣ , ಸರಸ್ವತಿ ದಾಸ, ಬಾಚಿ, ಲಾಕಪ, ಹರಿಪ , ನಾಗೊಜಾ ಚಾರ್ಯ [ ಮಾಹಿತಿ ಕೃಪೆ ಶ್ರೀ ಕೆ.ಎನ್. ವೆಂಕಟ ಕೃಷ್ಣ [ ಸ್ವಾಮಿ]  ಹಾಸನ, ಇವರ ಹೊಯ್ಸಳ  ಸಾಮ್ರಾಜ್ಯದ ಬಗ್ಗೆ ಇರುವ ಕಥಾ ಪುಸ್ತಕ ] ಎಂದು ತಿಳಿದು ಬರುತ್ತದೆ.ಹೊಯ್ಸಳೇಶ್ವರ ದೇವಾಲಯದ ಹೆಬ್ಬಾಗಿಲ ದರ್ಶನ


 ನಮ್ಮ ಗಿರೀಶ್ ಸೋಮಶೇಖರ್  ಅವರ  ಮಾರ್ಗದರ್ಶನ ದಲ್ಲಿ  ಮೊದಲು  ದರ್ಶಿಸಿದ್ದು  ಹೊಯ್ಸಳೇಶ್ವರ ದೇವಾಲಯವನ್ನು, ಈ ದೇವಾಲಯ ನಿರ್ಮಾಣ ಕಾರ್ಯ ಭವ್ಯವಾದ ದೇವಾಲಯಕ್ಕೆ  ನಾಲ್ಕು ಬಾಗಿಲುಗಳಿವೆ ಉತ್ತರ ಭಾಗದಲ್ಲಿ ಒಂದು, ಪೂರ್ವ ಭಾಗದಲ್ಲಿ ಎರಡು , ದಕ್ಷಿಣ ಭಾಗದಲ್ಲಿ ಒಂದು  ಬಾಗಿಲುಗಳಿವೆ .. ಉತ್ತರಭಾಗದ  ಬಾಗಿಲಿನಿಂದ ಪ್ರವೇಶ ಪಡೆದು ಹೊಯ್ಸಳೇಶ್ವರ , ಶಾಂತಲೆಶ್ವರ ಸನ್ನಿಧಿ ಯ  ದರ್ಶನ ಮಾಡ ಬಹುದು . ದೇವಾಲಯದಲ್ಲಿ ಪ್ರಮುಖವಾಗಿ ಒಟ್ಟು ೨೮೧ ಅದ್ಭುತ ಶಿಲ್ಪಗಳಿದ್ದು, ಅದರಲ್ಲಿ ೧]  ಗಣಪತಿ- ೪, ೨] ಸುಬ್ರಮಣ್ಯ -೩ , ೩] ಶಿವ -೩೩ ೪] ವಿಷ್ಣು  ವಿವಿಧ ಅವತಾರಗಳಲ್ಲಿ -೨೦,  ೫] ಬ್ರಹ್ಮ-೪, ೬]  ಹರಿಹರ -೧, ೭] ದಕ್ಷಿಣ ಮೂರ್ತಿ -೧,  ೮]  ಭೈರವ -೧,೯ ]  ದುರ್ಗಾವಿವಿಧ ಅವತಾರಗಳಲ್ಲಿ - ೧೮, ೧೦] ಸರಸ್ವತಿ -೯, ೧೧] ಇಂದ್ರ, ಅರ್ಜುನ, ರಾವಣ  ತಲಾ ಒಂದು  ಹೀಗೆ  ಸುಂದರವಾಗಿ ಅನಾವರಣಗೊಂಡಿವೆ .


ನಂದಿ  ಮಂಟಪಗಳು

ಸುಂದರ  ನಂದಿ


ದೇವಾಲಯದ ಹೊರಗೆ ನಿಮಗೆ ಕಾಣುವುದು  ನಂದಿ ಮಂಟಪಗಳ  ದರ್ಶನ , ಅದರೊಳಗೆ  ಹೊಯ್ಸಳೇಶ್ವರ, ಶಾಂತಲೆಶ್ವರ  ಸನ್ನಿಧಿ ಗೆ ಪ್ರತ್ಯೇಕವಾಗಿ ಸುಂದರ  ನಂದಿಗಳನ್ನು ಸ್ಥಾಪಿಸಲಾಗಿದೆ .ದೇವಾಲಯಗಳನ್ನು ನಿಧಾನವಾಗಿ ದರ್ಶಿಸುತ್ತಾ ನಡೆದರೆ  ನಮಗೆ ಅದ್ಭತ ಶಿಲ್ಪ ಕಲಾ ವೈಭವ  ತೆರೆದುಕೊಳ್ಳುತ್ತದೆ . ಅಂದಿನ ಕಲಾ ನೈಪುಣ್ಯತೆಗೆ ನಮಗರಿವಿಲ್ಲದಂತೆ ಮಾರುಹೋಗಿ  ಬೆರಗಾಗುತ್ತೇವೆ .


ಚಕ್ರವ್ಯೂಹ ದ ರಚನೆ


ಮಹಾಭಾರತದ ಯುದ್ಧದಲ್ಲಿ  ಅಭಿಮನ್ಯು ಚಕ್ರವ್ಯೂಹ ಭೇದಿಸಲಾಗದೆ  ಮರಣ ಹೊಂದಿದ್ದು ನಮ್ಮೆಲ್ಲರಿಗೂ ತಿಳಿದಿದೆ, ಅಂತಹ ಒಂದು ಕಲ್ಪನೆಯ  ಅದ್ಭುತ ನೋಟವನ್ನು ಕಲ್ಲಿನಲ್ಲಿ  ಚಕ್ರವ್ಯೂಹದ  ಚಿತ್ರ ಬಿಡಿಸಲಾಗಿದೆ , ಇದನ್ನು ಅರ್ಥ ಮಾಡಿಕೊಂಡರೆ  ಮಹಾಭಾರತದ ಯುದ್ದದಲ್ಲಿ  ಪ್ರತಿನಿತ್ಯ ಒಂದೊಂದು ವ್ಯೂಹ ರಚನೆಮಾಡಿ  ತಂತ್ರ ರೂಪಿಸಿ  ಯುದ್ದ  ಮಾಡುತ್ತಿದ್ದ  ಬಗ್ಗೆ ಅಚ್ಚರಿ ಮೂಡಿಸುತ್ತದೆ . ಇದನ್ನು ನನ್ನ ಕ್ಯಾಮರದಲ್ಲಿ ನೋಡುತ್ತಾ ಮೈಮರೆತು ಹೋಗಿದ್ದೆ ನಾನು.

 
ಅಪರೂಪದ  ವಿಷ್ಣುವಿನ  ಚಿತ್ರ
 
 ಮುಂದೆ ಬಂದು   ಮೂರ್ತಿಗಳನ್ನು  ವಿವರವಾಗಿ  ನೋಡುತ್ತಾ ಸಾಗಿದೆ  ಅಲ್ಲೊಂದು ವಿಷ್ಣು ವಿನ ಮೂರ್ತಿ ಗೋಚರಿಸಿತ್ತು ಕಿರೀಟ ಧಾರಿ ವಿಷ್ಣು  ಪಾದದ   ಬಳಿ  ವಾಹನ ಗರುಡ  ಕಾಣುತ್ತದೆ, ಬಲ ಕಾಲನ್ನು ಮೇಲೆತ್ತಿರುವ  ಬಂಗಿಯಲ್ಲಿದ್ದು , ಬಲ ಕಾಲಿನ ಮೇಲೆ ಬ್ರಹ್ಮನ  ಮೂರ್ತಿ ಇದೆ, ನಾನು ಓದಿರುವ ಯಾವುದೇ ಪೌರಾಣಿಕ ಕಥೆಗಳಲ್ಲಿ ಇಂತಹ ಸನ್ನಿವೇಶ  ಬಂದಿರಲಿಲ್ಲ,ಇದರಬಗ್ಗೆ  ಯಾವುದೇ ವಿವರಣೆ ಇಲ್ಲಿ ದೊರೆಯಲಿಲ್ಲ, ಆದರೆ ಅಪರೂಪದ ಶಿಲ್ಪ ಇದು ಅನ್ನಿಸಿತು.

 
ಇದ್ಯಾರು ಇಲ್ಲಿ ವಿದೇಶೀಯ

ಮತ್ತೊಂದು   ಮೂರ್ತಿ ನನ್ನ ಗಮನ ಸೆಳೆದು ಹತ್ತಿರ ಹೋದರೆ , ವಿಸ್ಮಯ ಮೂಡಿತು, ಇಡೀ ದೇವಾಲಯದಲ್ಲಿ ಕಂಡು ಬಂದ ಯಾವುದೇ ಮೂರ್ತಿಗೂ ಇಂತಹ  ಉಡುಪು ಕೆತ್ತನೆ ಆಗಿರಲಿಲ್ಲ , ದೇಹದಲ್ಲಿ ಕಾಲಿನ ವರೆಗೆ ವಿದೇಶಿಯರ  ಉಡುಪಿನಂತೆ  ಇದ್ದು, ತಲೆಯ ಕೂದಲು ಭುಜದ ವರೆಗೆ ಇಳಿ ಬಿದ್ದಿದೆ , ಇಲ್ಲಿನ ಸನ್ನಿವೇಶ ಗಮನಿಸಿದರೆ ಯಾವುದೋ ವಿದೇಶಿ ವ್ಯಕ್ತಿಯ  ಚಿತ್ರದಂತೆ ಕಾಣುತ್ತದೆ, ಆಕಾಲದಲ್ಲಿ  ಇದಕ್ಕೆ ರೂಪದರ್ಶಿಯಾದ ವಿದೇಶಿ ವ್ಯಕ್ತಿ ಯಾವ ದೇಶದವನು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಲಾರದು.

ಅಂದಿನ ಯುದ್ದದಲ್ಲಿ ಮಿಸೈಲ್ ಬಳಸಿದ್ದರೆ ..?

ಮತ್ತೊಂದು ಚಿತ್ರ ಅಚ್ಚರಿ ಮಾಡಿದ್ದು ಇಲ್ಲಿದೆ, ಯುದ್ಧದ ಚಿತ್ರಗಳ ಸಾಲಿನಲ್ಲಿದ್ದ  ಚಿತ್ರವೊಂದನ್ನು ತೋರಿದ ಗಿರೀಶ್ ಸರ್ ನೋಡಿ ಇದು  ಬ್ರಹ್ಮಾಸ್ತ್ರದ  ಚಿತ್ರ ಆಲ್ವಾ ಅಂದರು ಹತ್ತಿರ ಹೋಗಿ ನೋಡಿದಾಗ,  ಅಲ್ಲಿನ ವಿಗ್ರಹದ ಜೊತೆಯಲ್ಲಿ ಕೆತ್ತಲಾಗಿದ್ದ  ಅಸ್ತ್ರ ಇಂದಿನ ಯುದ್ಧದಲ್ಲಿ ಬಳಸುವ " ರಾಕೆಟ್  ಮಿಸೈಲ್ " ನಂತೆ ಗೋಚರಿಸುತ್ತದೆ,  ಇಂದಿನ ಯುದ್ಧಗಳಲ್ಲಿ  ರಾಕೆಟ್ ಮಿಸೈಲ್ ಗಳನ್ನ ಬಳಸದಿದ್ದರೆ  ಅದು ಯುದ್ಧವೇ ಅಲ್ಲ  ಎನ್ನುವಷ್ಟು ಇದರ ಉಪಯೋಗ ಇದೆ, ಅಂದಿನ ಯುದ್ಧದಲ್ಲಿ ಬಳಸುತ್ತಿದ್ದ ಬ್ರಹ್ಮಾಸ್ತ್ರ ಇದೆ ರೀತಿ ಇತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ,  ಶಿಲ್ಪಿಯ ಕಲ್ಪನೆಗೆ  ಮನದಲ್ಲೇ ನಮಸ್ಕಾರ ಮಾಡಿದೆ, ವೇಳೆ ಯಾಗುತ್ತಿತ್ತು,  ಹಳೇಬೀಡಿನಲ್ಲಿ  ನೋಡಲು ಸಾಧ್ಯವಾದದ್ದು ಇಷ್ಟೇ , ಆದರೆ ಮತ್ತಷ್ಟು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳ  ಬೇಕಾಗಿದೆ,  ಬನ್ನಿ ನಾನು ನೋಡದಿದ್ದರೂ ಮುಂದಿನ ಕೆಲವು ಪ್ರದೇಶಗಳ ಪರಿಚಯ ಮಾಡಿಕೊಡುತ್ತೇನೆಹೊಯ್ಸಳ ಅರಸರ   ಅರಮನೆ ಇದ್ದ ಪ್ರದೇಶ

ಹಳೆಬೀಡಿನ ಸಮೀಪ ದಕ್ಷಿಣ ಭಾಗಕ್ಕೆ  ಒಂದು ಸಣ್ಣ ಗುಡ್ಡ ಕಂಡು ಬರುತ್ತದೆ,  ಆ ಗುಡ್ಡವನ್ನು "ಬೆಣ್ಣೆ ಗುಡ್ಡ" ಎಂದು ಕರೆಯುತ್ತಾರೆ . ಹಾಲಿ ಆ ಗುಡ್ಡದ ಸಮೀಪ ಒಂದು  ಸರ್ಕಾರಿ ಕಾಲೇಜು ಇದೆ. ಬೆಣ್ಣೆ ಗುಡ್ಡದ ಪ್ರದೇಶದಲ್ಲಿ ಹೊಯ್ಸಳ ಅರಸರ ಅರಮನೆ ಇತ್ತೆಂದು ಹೇಳಲಾಗುತ್ತದೆ , ಇಲ್ಲಿ ವಿವಿಧ  ಲಾಯಗಳು ಇದ್ದ ಬಗ್ಗೆ ಸಂಶೋದಕರು ಕಂಡುಹಿಡಿದಿರುವುದಾಗಿ ತಿಳಿದುಬರುತ್ತದೆ,


ಜೈನ ಬಸದಿಗಳು
"ಬೆಣ್ಣೆ ಗುಡ್ಡ" ದಿಂದ ಮುಖ್ಯರಸ್ತೆ ಬಂದು ಸ್ವಲ್ಪ ಪೂರ್ವದ ಕಡೆ ನಡೆದರೆ  ಕಾಣುತ್ತವೆ ಈ ಜೈನ ಬಸದಿಗಳು, ಮೊದಲು  ದ್ವಾರ ಸಮುದ್ರ ದಲ್ಲಿ  ೭೨೦ ಕ್ಕೂ ಹೆಚ್ಚು ಜೈನ ಬಸದಿ ಗಳು ಇದ್ದವೆಂದೂ , ನಂತರ  ಜೈನ ಧರ್ಮದಿಂದ ಬಿಟ್ಟಿದೇವ ವೈಷ್ಣವ ಧರ್ಮ ಸ್ವೀಕರಿಸಿ  ವಿಷ್ಣುವರ್ಧನ ನಾದ ನಂತರ ಆದ ಬದಲಾವಣೆ ಕಾರಣ , ಹಲವು ಜೈನ ಬಸದಿಗಳು  ಪರಿವರ್ತನೆ ಗೊಂಡು  ವಿವಿಧ ಧರ್ಮದ ಕೇಂದ್ರಗಳಾಗಿ ಮಾರ್ಪಾಡು ಆಗಿವೆ,  ಇಂದು ಕೇವಲ ಮೂರು ಬಸದಿಗಳನ್ನು ಮಾತ್ರ  ಕಾಣಬಹುದಾಗಿದೆ, ಇವುಗಳನ್ನು, ಆದಿನಾಥೆಶ್ವರ , ಶಾಂತೇಶ್ವರ ಹಾಗು ಪಾರ್ಶ್ವನಾಥೆಶ್ವರ  ಬಸದಿಗಳೆಂದು  ಗುರುತಿಸಲಾಗಿದೆ.  ಪತಿ ಬಿಟ್ಟಿದೇವ ಜೈನ ಮತ  ದಿಂದ ವೈಷ್ಣವ ಮತ  ಸ್ವೀಕಾರಮಾಡಿದರೂ ರಾಣಿ ಶಾಂತಲೆ  ತಾನು ಮಾತ್ರ ಜೈನ ಮತದಲ್ಲೇ  ಉಳಿಯುತ್ತಾಳೆ . ಆದರೆ ಈ ಮತಗಳ  ವಿಚಾರ ಇಬ್ಬರಿಗೂ ಅಂತಹ ಸಮಸ್ಯೆ ಆಗಿರಲಿಲ್ಲ ಎಂದು ತಿಳಿದು ಬರುತ್ತದೆ.


ಕೇದಾರೇಶ್ವರ  ದೇವಾಲಯ

ಕೇದಾರೇಶ್ವರ ದೇವಾಲಯ [ ಚಿತ್ರ ಕೃಪೆ ವಿಕಿ ಪಿಡಿಯ ] 


ಜೈನ ಬಸದಿಯಿಂದ ಪೂರ್ವಕ್ಕೆ  ಸಾಗಿದರೆ  ಕಾಣ ಸಿಗುವುದೇ ಕೇದಾರೇಶ್ವರ ದೇವಾಲಯ , ಇದು ದ್ವಾರ ಸಮುದ್ರದ ಕೆರೆಯ  ಸಮೀಪವಿದೆ, ಈ ದೇವಾಲಯವನ್ನು ಹದಿಮೂರನೆ ಶತಮಾನದಲ್ಲಿ ಎರಡನೆ ಬಲ್ಲಾಳ ಹಾಗು ಕುಂತಲಾದೇವಿ  ಕಾಲದಲ್ಲಿ ನಿರ್ಮಿಸಲಾಯಿತೆಂದು  ಹೇಳುತ್ತಾರೆ , ಈ ದೇವಾಲಯ  ತ್ರಿಕುಟಾಚಲ  ವಾಗಿದ್ದು, ಸೋಮನಾಥಪುರದ  ದೇವಾಲಯವನ್ನು  ಹೋಲುವುದಾಗಿ  ಕೆಲವರು  ತಿಳಿಸುತ್ತಾರೆ ,  ಇದರ ಬಗ್ಗೆ ಕೆಲವು ವಿದೇಶಿ ವಿದ್ವಾಂಸರು  ಹೇಳುತ್ತಾ  ಈ ದೇವಾಲಯ ಬ್ರಿಟನ್ನಿನ ಲಿಂಕನ್, ಸಲಿಸ್ಬರೀ, ವೇಲ್ಸ್  ಇಂಗ್ಲೀಷ್ ಕ್ಯಾಥೆಡ್ರಲ್ ಗಳ ನಿರ್ಮಾಣ ಕಾಲಕ್ಕೆ ಸಮಕಾಲಿನದೆಂದು     ಗುರುತಿಸುತ್ತಾರೆ,  ಇಲ್ಲಿಗೆ ಸಮೀಪದಲ್ಲಿ ಐತಿಹಾಸಿಕ ದೊಡ್ಡ ಆಲದ  ಮರ ಇದ್ದು, ಹಲವು ನೂರು ವರ್ಷಗಳ  ಇತಿಹಾಸಕ್ಕೆ ಸಾಕ್ಷಿಯಾಗಿರುವುದು  ಕಂಡು ಬರುತ್ತದೆ . 


ಹಳೆಬೀಡಿನ  ಪೇಟೆಯಲ್ಲಿ ನಗೆಯ ಚೆಲ್ಲಾಟ
ಅರೆ ನಿಮ್ಮೊಡನೆ  ಇತಿಹಾಸ ಹಂಚಿಕೊಳ್ಳುತ್ತ  ಸಮಯ ಕಳೆದದ್ದೇ ಗೊತ್ತಾಗಲಿಲ್ಲ .   ಕತ್ತಲಾಗುತ್ತಿದೆ  ನಮ್ಮ ಗಿರೀಶ್  ಕರೆಯುತ್ತಿದ್ದಾರೆ, ಹಳೆಬೀಡಿನ  ಅಂಗಡಿ ಬೀದಿಯಲ್ಲಿ ಸಂಭ್ರಮದ ಓಡಾಟ ಮಾಡಿ ಬಂದು ನಗು ನಗುತ್ತ, ಸಾರ್ ಹಳೇಬೀಡು ಮುಗೀತು ಸಾರ್, ಬನ್ನಿ ನಮ್ಮ ಮನೆಗೆ ಹೋಗೋಣ, ಅಮ್ಮಾ ಕಾಯ್ತಿರ್ತಾರೆ ಅಂದ್ರು .......  ನಮ್ಮ ಕಾರು    ಗಿರೀಶ್ ಮನೆಕಡೆಗೆ  ತಿರುಗಿತು. ...............!!

Friday, November 15, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....೨ ವೇಲಾಪುರಿ ಯಲ್ಲಿ ಅರಳಿದೆ ಶಿಲೆಯಲ್ಲಿ ಕಲೆಯು.


ಹೊಯ್ಸಳ  ಸಾಮ್ರಾಜ್ಯಕ್ಕೆ ಸ್ವಾಗತ

ಕಳೆದ ಸಂಚಿಕೆಯಲ್ಲಿ  ಸಕಲೇಶಪುರದ ಬಳಿ  ಇರುವ  "ಮಂಜರಾಬಾದ್ ಕೋಟೆ ಕೊತ್ತಲ "ಗಳ  ದರ್ಶನ ಮಾಡಿ, ಇಲ್ಲಿಗೆ ಬಂದಾಗ  ನಮ್ಮನ್ನು ಸ್ವಾಗತಿಸಿದ್ದು "ಕಲ್ಲಿನ  ಕುಟ್ಟಾಣಿ." ,  ಅಚ್ಚರಿ ಎಂದರೆ ಇಲ್ಲಿ ಶಿಲೆಗಳನ್ನು   ಕುಟ್ಟಿ ಸುಂದರ ಆಕಾರ ನೀಡಿ  ಐತಿಹಾಸಿಕ  ಕಲೆಯನ್ನು ವೈಜ್ಞಾನಿಕವಾಗಿ ಅರಳಿಸಿ  ಕೊಡುಗೆ ನೀಡಿದ್ದಾರೆ ಅಂದಿನ ಜನರು. ಹೌದು ಇಲ್ಲಿ ಅಂದಿನ ವಿಜ್ಞಾನದ , ಅಂದಿನ ತಾಂತ್ರಿಕತೆಯ , ಅಂದಿನ ಕಲಾ ಶ್ರೀಮಂತಿಕೆಯ ದರ್ಶನ ಆಗುತ್ತದೆ, ತೆರೆದ ಮನಸ್ಸಿನಿಂದ ನೋಡಲು  ತೆರಳುವ ಮನುಷ್ಯನಿಗೆ  ಸೌಂದರ್ಯದ ಜೊತೆ ಜ್ಞಾನ  ದರ್ಶನ ಮಾಡಿಸುತ್ತದೆ .. ಆ ಊರೇ  ಅಂದಿನ ಪ್ರಸಿದ್ದ  ವೇಲಾಪುರಿ ಅಲಿಯಾಸ್ ವಿಶ್ವ ವಿಖ್ಯಾತ  ಬೇಲೂರು .ಬೇಲೂರು  ದೇವಾಲಯದ  ಪಕ್ಷಿನೋಟ

ಬೇಲೂರಿಗೆ ಬರುವ ಹಾದಿಯಲ್ಲಿ ನಮ್ಮ ಗಿರೀಶ್ ಸೋಮಶೇಖರ್ ಹಲವಷ್ಟು ವಿಚಾರಗಳನ್ನು  ತಿಳಿಸುತ್ತಾ ಬಂದರು , ದೇವಾಲಯದ ಆವರಣ ತಲುಪಿದ ನಾವು  ಐತಿಹಾಸಿಕ  ನೆಲದಲ್ಲಿ  ಕಾಲಿಟ್ಟು ಧನ್ಯವಾದೆವು,  ಬೇಲೂರ ಬಗ್ಗೆ ನಮಗೆ ಗೊತ್ತು ಇವನೇನು ಹೇಳುತ್ತಾನೆ , ಅನ್ನುತೀರಿ ಆಲ್ವಾ ? ಹೌದು ಇಲ್ಲಿಗೆ  ಬರುವ ಎಲ್ಲರಿಗೂ  ಇಲ್ಲಿನ ದೇವಾಲಯದ ಪ್ರತೀ ವಿಗ್ರಹದ ಪರಿಚಯ ಆಗಿರುತ್ತದೆ  , ಹಾಗಾಗಿ ನಾನು ಆ ವಿಚಾರಕ್ಕೆ ಹೋಗುವುದಿಲ್ಲ, ಇಲ್ಲಿ ಕಳೆದ ಕೆಲವು ಘಂಟೆಗಳ  ಕಾಲ ನಾನು ಗಮನಿಸಿದ  ವಿಚಾರಗಳನ್ನು ಮಾತ್ರ ಇಲ್ಲಿ ದಾಖಲೆ  ಮಾಡಿದ್ದೇನೆ . ನಿಜವಾಗಿಯೂ ಬೇಲೂರನ್ನು ಅರ್ಥ ಮಾಡಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ . ಇಲ್ಲಿನ ದೇವಾಲಯದ  ಪೂರ್ತಿ ವಿಚಾರ ತಿಳಿಯಲು  ಕನಿಷ್ಠ  ಒಂದು ತಿಂಗಳು ಬೇಕಾಗುತ್ತದೆ .  ಎಷ್ಟು ನೋಡಿದರೂ  ಪೂರ್ಣ ಇತಿಹಾಸ ತಿಳಿಯಲು  ಸಾಧ್ಯವಾಗುವುದಿಲ್ಲ .  ಆದರೂ ಸ್ವಲ್ಪ ವಿಚಾರ ತಿಳಿಯೋಣ ಬನ್ನಿಬೇಲೂರ  ದೇವಾಲಯದ  ಕೀ ಪ್ಲಾನ್ [ ಚಿತ್ರ ಕೃಪೆ  ವಿಕಿ ಪೀಡಿಯಾ ]

 ಪುರಾಣಗಳಲ್ಲಿ  ಬೇಲೂರು  ಪ್ರದೇಶವನ್ನು  ವೇಲಾಪುರಿ ಅಥವಾ ವೇಲೂರು  ಎಂದು ಕರೆಯಲಾಗಿದೆ, ಇದನ್ನು ದಕ್ಷಿಣದ ವಾರಣಾಸಿ ಎಂದು ಕರೆಯುತ್ತಿದ್ದುದ್ದಾಗಿ .... ಕೆಲವು ಕಡೆ ದಾಖಲಿಸಲಾಗಿದೆ . ಹೊಯ್ಸಳ  ಅರಸರ ಕಾಲದಲ್ಲಿ ಅಪಾರ ಕೀರ್ತಿ ಗಳಿಸಿದ ಈ ಊರು, ಚನ್ನ ಕೇಶವನ  ಸುಂದರ ದೇವಾಲಯದಿಂದ  ವಿಶ್ವ ವಿಖ್ಯಾತಿ   ಹೊಂದಿತು . ಸುಂದರ ದೇವಾಲಯದ ನಿರ್ಮಾಣದ ಬಗ್ಗೆ ಹಲವು ಕಥೆಗಳಿವೆ , ಹಲವು ಅಚ್ಚರಿಯ ವಿಚಾರಗಳಿವೆ


ಬೇಲೂರ  ಚನ್ನಕೇಶವ ಸ್ವಾಮಿ [ ಚಿತ್ರ ಕೃಪೆ  ವಿಕಿಪಿಡಿಯಾ ]

ದೇವಾಲಯದ ನಿರ್ಮಾಣದ ಬಗ್ಗೆ  ಮೂರು ವಿವಿಧ  ಕಾರಣಗಳನ್ನು ಇತಿಹಾಸದ   ವಿದ್ವಾಂಸರು  ಹೇಳುತ್ತಾರೆ, ೧]  ಹೊಯ್ಸಳ ದೊರೆಗಳಲ್ಲಿ ವಿಷ್ಣುವರ್ಧನ  ಮಹಾರಾಜ ಬಹಳ ಪ್ರಸಿದ್ಧಿ ಹೊಂದಿದವ, ಆತ   ಮೊದಲು ಜೈನ ಧರ್ಮ ಆಚರಣೆ  ಅನುಸರಿಸಿ   ನಂತರ ವೈಷ್ಣವ  ಧರ್ಮ ಸ್ವೀಕರಿಸಿದ ಕುರುಹಾಗಿ   ಬೇಲೂರಿನಲ್ಲಿ  ಚೆನ್ನ ಕೇಶವನ ದೇವಾಲಯ ನಿರ್ಮಾಣ ಆಯಿತೆಂದು  ವಿದ್ವಾಂಸರ ಒಂದು ತಂಡ   ಅಭಿಪ್ರಾಯ ಪಡುತ್ತದೆ, ಆದರೆ ಅವನ ಪತ್ನಿ ಶಾಂತಲೆ  ತಾನು ಜೈನ  ಧರ್ಮದಲ್ಲೇ ಮುಂದುವರೆಯುತ್ತಾಳೆ , ಹಾಗಾಗಿ  "ವಿಷ್ಣು ವರ್ಧನ ಅಥವಾ  ಬಿಟ್ಟಿದೇವ"  ನ  ಕಾಲದಲ್ಲಿ ಜೈನ ಧರ್ಮ, ಹಾಗು ವೈಷ್ಣವ ಧರ್ಮಕ್ಕೆ ಸಮನಾದ ಮಹತ್ವ  ನೀಡಲಾಗಿದೆಯೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.


ಬೇಲೂರ ದೇವಾಲಯ ಗೋಪುರ


 ೨] ದೇವಾಲಯ ನಿರ್ಮಾಣದ ಬಗ್ಗೆ ಎರಡನೆಯ ಕಾರಣ ಬಸವ ಕಲ್ಯಾಣದ  ಚಾಲುಕ್ಯ ದೊರೆ  ವಿಕ್ರಮಾದಿತ್ಯ I V ನ ವಿರುದ್ದ  ಸಾಧಿಸಿದ  ವಿಜಯದ ನೆನಪಿಗಾಗಿ  ಅಂದರೆ ಚಾಲುಕ್ಯರ  ವಿರುದ್ದ  ಹೊಯ್ಸಳರು  ಸಾಧಿಸಿದ ವಿಜಯದ ನೆನಪಿಗಾಗಿ  ಈ ದೇವಾಲಯ ನಿರ್ಮಾಣ ಆಯಿತೆಂದು  ಅಭಿಪ್ರಾಯ  ಪಡಲಾಗಿದೆ . ಇದಕ್ಕೆ ಕಾಲ ನಿರ್ಣಯ  ತಾಳೆ ಆಗುತ್ತಿಲ್ಲ.


ಬೇಲೂರ ದೇವಾಲಯಕ್ಕೆ  ನಾ ನಾ ಕಥೆಗಳು

೩] ಮತ್ತೊಂದು, ಬಹು ಮುಖ್ಯ  ವಿಚಾರ  ಇಲ್ಲಿದೆ , ಕ್ರಿಸ್ತ ಶಕ  ೧೧೧೬ ರಲ್ಲಿ   ವಿಷ್ಣು ವರ್ಧನ  ಗಂಗ ಅರಸರ  ಸಹಾಯ ಪಡೆದು ತಲಕಾಡಿನ  ಚೋಳ ಅರಸರೊಡನೆ    ಕಾದಾಡಿ  ದಿಗ್ವಿಜಯ  ಸಾಧಿಸುತ್ತಾನೆ  , ಈ ದಿಗ್ವಿಜಯದ ನೆನಪಿಗಾಗಿ  ಕ್ರಿ.ಶ . ೧೧೧೭ ರಲ್ಲಿ ಬೇಲೂರಿನಲ್ಲಿ  ಚೆನ್ನಕೇಶವನ  ದೇವಾಲಯದ  ನಿರ್ಮಾಣ ಪ್ರಾರಂಭಿಸಿದನೆಂದು  ವಾದ ಮಂಡಿಸುತ್ತಾರೆ .


ಸುಂದರ ದೇವಾಲಯ ದರ್ಶನ

ಮೇಲಿನ ಮೂರು ಕಾರಣ ಗಳನ್ನೂ ಅವಲೋಕಿಸಿದರೆ  ಮೂರನೆಯ ಕಾರಣ ಸರಿ ಎನ್ನಿಸುತ್ತದೆ , ಅದಕ್ಕೆ ಪೂರಕ  ಘಟನೆಗಳ ಆಧಾರವಿದೆ,  ಮೊದಲನೆಯದಾಗಿ  ತಲಕಾಡು ಯುದ್ಧ  ನಡೆದದ್ದು  ೧೧೧೬ ರಲ್ಲಿ  ದೇವಾಲಯ ನಿರ್ಮಾಣ ೧೧೧೭ ರಲ್ಲಿ ಪ್ರಾರಂಭ ಆಯಿತೆಂಬ ಬಗ್ಗೆ  ಯಾವುದೇ  ಜಿಜ್ಞಾಸೆ ಇಲ್ಲ , ೧೧೧೭ ರಲ್ಲಿ ದೇವಾಲಯದ ನಿರ್ಮಾಣ  ಶುರು ಆಯಿತೆಂದು ಐತಿಹಾಸಿಕ ದಾಖಲೆಗಳು  ಹೇಳುತ್ತಿವೆ , ಹಾಗಾಗಿ  ಇದು ಸತ್ಯಕ್ಕೆ ಹತ್ತಿರ ವಿರಬಹುದೆಂದು  ಅನ್ನಿಸುತ್ತದೆ, ದೇವಾಲಯ ನಿರ್ಮಾಣ೧೧೧೭ ರಲ್ಲಿ ಪ್ರಾರಂಭವಾಗಿ ಬೇಲೂರು ದೇವಾಲಯದ ನಿರ್ಮಾಣ  ಪೂರ್ಣ ಗೊಳಲು ೧೦೩  ವರ್ಷ ಆಯಿತೆಂದು ತಿಳಿದು ಬರುತ್ತದೆ, ವಿಷ್ಣುವರ್ಧನ ಅರಸನ  ಮೊಮ್ಮೊಗ "ಎರಡನೇ  ವೀರ ಬಲ್ಲಾಳ"  ನ ಆಳ್ವಿಕೆಯಲ್ಲಿ ಪೂರ್ಣ ವಾಯಿತೆಂದು  ಇತಿಹಾಸ ಕಾರರು ತಿಳಿಸುತ್ತಾರೆ .

ದೇವಾಲಯದ ಸುಂದರ  ಆವರಣ


 ದೇವಾಲಯದ ಪ್ರಾಕಾರದಲ್ಲಿ  ಅಲೆಯುತ್ತಿದ್ದ ನನಗೆ ಇವೆಲ್ಲಾ ವಿಚಾರಗಳು  ಅಚ್ಚರಿ ಮೂಡಿಸಿದವು,  ಆಗಿನ ಕಾಲದಲ್ಲಿ ರಾಜರು  ತಮ್ಮ  ಕಾಲದ  ಐತಿಹಾಸಿಕ  ಘಟನೆಗಳನ್ನು  ಶಾಶ್ವತ ಗೊಳಿಸಲು  ಇಂತಹ ಮಹತ್ವದ  ದೇವಾಲಯಗಳ ನಿರ್ಮಾಣಕ್ಕೆ  ಮುಂದಾಗುತ್ತಿದ್ದರು ಎಂಬ  ವಿಚಾರ  , ಹಾಗು ಅವನ್ನು ಹಲವಾರು ಶತಮಾನ ಕಳೆದರೂ  ಜನಗಳ ಮನದಲ್ಲಿ ಅಚ್ಚಳಿಯದೆ ಉಳಿಸಲು ಕಂಡು ಹಿಡಿದುಕೊಂಡ ಮಾರ್ಗ  ವಿಸ್ಮಯ ಗೊಳಿಸಿತು . ತಮ್ಮ ಕಾಲದ ಕಲೆ, ಜನ ಜೀವನ,  ಆ ಕಾಲದ ಯುದ್ಧಗಳಲ್ಲಿ ಉಪಯೋಗಿಸುತ್ತಿದ್ದ ಉಪಕರಣಗಳು , ಪ್ರಾಣಿಗಳು,   ಧಾರ್ಮಿಕ ಘಟನೆಗಳ ವಿವರ , ಇವುಗಳನ್ನು ಅನಾವರಣ ಗೊಳಿಸಲು , ತಮ್ಮ ಕಾಲದ ವಿಜ್ಞಾನದ  ತಾಂತ್ರಿಕತೆಯನ್ನು  ಮೆರೆಸಲು ಇದಕ್ಕಿಂತಾ ಇನ್ನೊಂದು ಮಾರ್ಗ ಖಂಡಿತ ಇರಲಿಲ್ಲ, ಈ ನಿಟ್ಟಿನಲ್ಲಿ  ಈ ದೇವಾಲಯ ಸಾಕ್ಷಿಯಾಗಿ ನಮ್ಮ ತಾಂತ್ರಿಕತೆಯನ್ನು ಅಣಕಿಸುತ್ತಾ  ನಿಂತಿದೆ .ವಿಸ್ಮಯ ದೀಪ ಸ್ತಂಭ .


ಬನ್ನಿ ಮತ್ತಷ್ಟು ವಿಚಾರದ ಒಳಗೆ ಹೋಗೋಣ ಬೇಲೂರಿನ  ದೇವಾಲಯದ  ನಿರ್ಮಾಣಕಾರ ಜಕಣಾ ಚಾರಿ ಎಂದು ಅಂದು ಕೊಂಡರೂ  ನಿಖರವಾಗಿ  ಕಲ್ಯಾಣ  ಚಾಲುಕ್ಯ  ಅರಸರ ಆಳ್ವಿಕೆಗೆ ಸೇರಿ ನಂತರ  ಹೊಯ್ಸಳ  ರಾಜರ ವಶವಾದ  ಬಳ್ಳಿಗಾವೆ  ಎಂಬ ಊರಿನ  "ದಾಸೋಜ"  ಹಾಗು "ಚವನ '' ಎಂಬ ಶಿಲ್ಪಿಗಳ ಉಸ್ತುವಾರಿಯಲ್ಲಿ ದೇವಾಲಯ ನಿರ್ಮಾಣ ಕಾರ್ಯ ಆಯಿತೆಂದು ತಿಳಿದುಬರುತ್ತದೆ. ದೇವಾಲಯ ನಿರ್ಮಾಣಕ್ಕೆ ೧೦೩ ವರ್ಷ ತೆಗೆದುಕೊಂಡ   ಕಾರಣ ಹಲವು ಶಿಲ್ಪಿಗಳು ಬದಲಾಗಿರುವ ಸಾಧ್ಯತೆ ಇರುತ್ತದೆ  ಈ ಬಗ್ಗೆ ಹೆಚ್ಚಿನ ಸಂಶೋದನೆ ಅಗತ್ಯವಿದೆ . ಸುಂದರ ಚೆನ್ನಕೇಶವನ ಮೂರ್ತಿಯನ್ನು "ಬಾಬಾ ಬುಡನ್ ಗಿರಿ " ಬೆಟ್ಟಗಳ ಶ್ರೇಣಿಯಲ್ಲಿ ಸಿಕ್ಕ ಕಲ್ಲುಗಳಲ್ಲಿ ಕೆತ್ತಿ  ತರಲಾಯಿತೆಂದು , ಆ ಸಮಯದಲ್ಲಿ  ಅಮ್ಮನವರ ಮೂರ್ತಿ ಕೆತ್ತುವಾಗ ತಾಂತ್ರಿಕವಾಗಿ ತಪ್ಪಾಗಿ ಅದನ್ನು ಅಲ್ಲಿಯೇ  ಬಿಡಲಾಯಿತೆಂದೂ  ಹಾಗಾಗಿ  ಚೆನ್ನಕೇಶವ ದೇವರು  ಬಾ ಬಾ ಬುಡನ್ ಗಿರಿ ಶ್ರೇಣಿಗೆ  ಸಂಚಾರಕ್ಕಾಗಿ  ಆಗಾಗ್ಗೆ ತೆರಳುವುದಾಗಿಯೂ , ಆ ಕಾರಣದಿಂದ  ಪ್ರತೀ ವರ್ಷ ಹೊಸ ಚಪ್ಪಲಿ ಮಾಡಿಕೊಡುತ್ತಿರುವುದಾಗಿ ಇಲ್ಲಿನ ಜನ ಹೇಳುತ್ತಾರೆ, ಇದನ್ನು ಸಿದ್ದಪಡಿಸಲು  ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ಸಮೀಪದ ಬಸವಪಟ್ಟಣದ  ಕೆಲವು ಮನೆತನದವರು  ಸೇವೆ ಮಾಡುತ್ತಿದ್ದು, ಅವರಿಗೆ ದೇವಾಲಯದಲ್ಲಿ ಪ್ರತೀ ವರ್ಷ ಈ ಸೇವೆ ಮಾಡಲು ಇಂದಿಗೂ ಅವಕಾಶ ಮಾಡಿಕೊಡುತ್ತಿರುವುದಾಗಿ ಹೇಳಲಾಗುತ್ತದೆ. ಈ ವಿಚಾರವನ್ನು  ಹಯವದನ ರಾಯರ ಗೆಜೆಟ್ ನಲ್ಲಿಯೂ ಪ್ರಸ್ತಾಪಿಸಲಾಗಿದೆ.

ಸುಂದರ ಗರುಡ ಮೂರ್ತಿ
ದೇವಾಲಯದಲ್ಲಿ  ಅದ್ಭುತ ಕೆತ್ತನೆ ಇದ್ದು  ಯಾವ ಮೂರ್ತಿಗಳು ಎಷ್ಟು ಇವೆ ಎಂಬ ಬಗ್ಗೆ  ಮಾಹಿತಿ ಎಲ್ಲಿಯೂ ದೊರೆಯಲಾರದು ಆದರೆ ಹಳೆಯ ಗೆಜೆಟ್ ಗಳಲ್ಲಿ ಅದನ್ನು ಸಹ  ವಿವರವಾಗಿ ದಾಖಲೆ ಮಾದಲಾಗಿದೆ.  ಬೇಲೂರ ದೇವಾಲಯದಲ್ಲಿ ಮೂರು ಬಾಗಿಲುಗಳು ಇದ್ದು  ಅವು ಪೂರ್ವ, ದಕ್ಷಿಣ ಹಾಗು ಉತ್ತರ ಅಬಿಮುಖವಾಗಿವೆ. ಪೂರ್ವ ಬಾಗಿಲು ಹೆಬ್ಬಾಗಿಲು ಆದರೆ , ದಕ್ಷಿಣದ ಬಾಗಿಲು  ಶುಕ್ರವಾರದ ಬಾಗಿಲು [ ಬಹುಷಃ  ಹಿಂದಿನ ಶತಮಾನಗಳಲ್ಲಿ  ಶುಕ್ರವಾರದಂದು ಈ ಬಾಗಿಲಿನಲ್ಲಿ ಪ್ರವೇಶ ಇತ್ತೆಂದು ಕಾಣುತ್ತದೆ ] , ಉತ್ತರದ ಬಾಗಿಲು   ಸ್ವರ್ಗದ ಬಾಗಿಲು, ಇದನ್ನು ಉತ್ತರಾಯಣ ಪುಣ್ಯಕಾಲದಲ್ಲಿ ತೆರೆದು  ಪ್ರವೇಶಕ್ಕೆ ಅನುವು ಮಾಡಿ  ಕೊಡುತ್ತಾರೆ . ದೇವಾಲಯದ ಆವರಣದ  ಮಧ್ಯಭಾಗದಲ್ಲಿ ಚನ್ನಕೇಶವ ದೇಗುಲ,   ದೇಗುಲದ ಹಿಂಬಾಗಕ್ಕೆ ಸ್ವಲ್ಪ  ದಕ್ಷಿಣಕ್ಕೆ "ಕಪ್ಪೆ ಚನ್ನಿಗರಾಯ" ಹಾಗು ಸೌಮ್ಯ ನಾಯಕಿ ದೇಗುಲ ಇದೆ,  ಅದರ ಸನಿಹದಲ್ಲಿ "ವೀರ ನಾರಾಯಣ"  ದೇಗುಲ ,ಕಂಡು ಬರುತ್ತದೆ.


ಅನಂತ ಶಯನ ಇಲ್ಲಿದ್ದಾನೆ

ದೇವಾಲಯದಲ್ಲಿ  ಯಾವ ಮೂರ್ತಿಗಳು ಎಷ್ಟಿವೆ ಎಂಬ ಬಗ್ಗೆ ತಿಳಿಯೋಣ ಬನ್ನಿ , ಗೆಜೆಟ್ ನಲ್ಲಿ ದಾಖಲಾದ ಅಧಿಕೃತ ಮಾಹಿತಿಯಂತೆ ವಿಷ್ಣುವಿನ ೩೨ , ಲಕ್ಷ್ಮಿ ನಾರಾಯಣ..  ೨, ವಾಮನ.. ೧
, ನರಸಿಂಹ ..,೨ , ವರಾಹ .., ೨ , ರಂಗನಾಥ .. ೧, ಬಲರಾಮ .. , ೧, ಶಿವ ಪಾರ್ವತಿ.. , ೧,  ಶಿವ ಗಜಾಸುರನಾಗಿ.. .  ೧ , ಹರಿಹರ ... ೨,  ಸೂರ್ಯ .., ೪, ಪಾರ್ವತಿಯ  ವಿವಿಧ ಅವತಾರ.. . ೫  , ಭೈರವ.. ೨ , ರತಿ ಮನ್ಮತ.. , ೧,  ಗಣೇಶ,ಸರಸ್ವತಿ, ಬ್ರಹ್ಮ, ಗರುಡ ತಲಾ ಒಂದು , ದೇವರ ಮೂರ್ತಿಗಳನ್ನು ನೋಡ ಬಹುದು . ಜೊತೆಗೆ ಎಂಬತ್ತಕ್ಕೂ ಹೆಚೀನ ಮದನಿಕೆಯರ  ಸುಂದರ ಮೂರ್ತಿಗಳು ಇಲ್ಲಿ ಕಾಣ ಸಿಗುತ್ತವೆ.ದೇವಾಲಯದ ಆವರಣದಲ್ಲಿ  ಸುಂದರ ಕಿಟಕಿಯ ಕೆತ್ತನೆ

ಚೆನ್ನಕೇಶವನ  ಸನ್ನಿಧಿಯಲ್ಲಿ ದರ್ಶನ ಪಡೆದು ಅಡ್ಡಾಡಿದ ನನ್ನ ಕಣ್ಣಿಗೆ   ಅಚ್ಚರಿ ಮೂಡಿಸಿದ  ಒಂದು ಕಿಟಕಿ ಇದು  ಯಾವ ಶಿಲ್ಪಿಯ  ಕಲ್ಪನೆಯ  ಕಲೆಯೋ ಕಾಣೆ  ಕಲ್ಲಿನಲ್ಲಿ  ಹೂಗಳನ್ನು ಅರಳಿಸಿ ತಾಂತ್ರಿಕವಾಗಿ ಉತ್ಕೃಷ್ಟವಾದ  ಈ ಕೆತ್ತನೆ ರಚನೆ ಕಣ್ಣಿಗೆ ಬಿತ್ತು ,  ಯಾವುದೇ ಯಂತ್ರದ ಸಹಾಯವಿಲ್ಲದೆ, ಎಲ್ಲಿಯೂ  ಗಣಿತದ ಸೂತ್ರಗಳಿಗೆ ಲೋಪವಾಗದಂತೆ, ತನ್ನ ಕೌಶಲ ತೋರಿದ ಆ ಕೈಗಳಿಗೆ  ಯಾವ ದೈವ ಶಕ್ತಿ ನೀಡಿತು ಎಂಬ ಅಚ್ಚರಿ ಕಾಡಿತು . ನನ್ನ ಈ  ಹುಡುಕಾಟವನ್ನು ಕಂಡು  ಅತ್ತ ಮದನಿಕೆಯರು  ಮನದಲ್ಲೇ ನಗುತ್ತಿರುವಂತೆ ಅನ್ನಿಸಿ .... ಮದನಿಕೆಯರ  ಬಳಿ ಸಾಗಿದೆ.

ಸೌಂದರ್ಯಕ್ಕೆ  ಮನಸೋತ ಮನಸೆಂಬ ಕೊತಿ.

ಮೊದಲು ಹೋದದ್ದು ಈ ವಿಗ್ರಹದ ಹತ್ತಿರ  ಶಿಲೆ ಆಗಿದ್ದರು ತನ್ನ ಸೌಂದರ್ಯದಿಂದ ಎಂತಹ ಮನಸನ್ನಾದರೂ ಚಂಚಲ ಗೊಳಿಸುವ ತಾಕತ್ತು ಈ ಮೂರ್ತಿಗಿದೆ , ಅದಕ್ಕೆ ಇರಬೇಕು  ಒಂದು ಕೋತಿ  ಸುಂದರಿಯ ವಸ್ತ್ರ ಎಳೆಯುವ ಸನ್ನಿವೇಶ  ಎಷ್ಟಾದರೂ ನಮ್ಮ ಮನಸುಗಳು ಕೋತಿ ಇದ್ದ ಹಾಗೆ ಅಲ್ವೆ.. !


ದರ್ಪಣ ಸುಂದರಿ

ಮತ್ತೊಬ್ಬಳು ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡುತ್ತಾ ಮೈಮರೆತಿರುವ  ಸುಂದರಿ, ತನ್ನ ರೂಪ ಅಲಂಕಾರದ ಬಗ್ಗೆ  ತನ್ನ ಬಿಂಬವನ್ನು ಕನ್ನಡಿಯಲ್ಲಿ ನೋಡುತ್ತಾ ಮೈಮರೆತ  ಸುಂದರಿ , ತನ್ನ ಸುತ್ತಲಿನ ಪ್ರಪಂಚದ ಅರಿವಿಲ್ಲದೆ  ತನ್ನದೇ  ಲೋಕದಲ್ಲಿ ವಿಹರಿಸುತ್ತಾ  ಚೆಲುವನ್ನು  ಚೆಲ್ಲುತ್ತಾ ನಿಂತಿದ್ದಾಳೆ,  ನಾನು ನಕ್ಕರು ಅವಳು ನಗಲಿಲ್ಲ. ಹಾಗೆ ಎಲ್ಲಾ ಮದನಿಕೆಯರ ಚಿತ್ರ ತೆಗೆಯುತ್ತಾ ಮೈಮರೆತು ಸಾಗಿದೆ.  ಮದನಿಕೆಯ ಚೆಲುವಿನ ಬಲೆಯಲ್ಲಿ ಕರಗಿ ಹೊಗಿದ್ದೆ.  ಕ್ಯಾಮರ ಇವರ ಸೌಂದರ್ಯವನ್ನು  ತನ್ನ ಹೊಟ್ಟೆಗೆ  ತುಂಬಿಸಿಕೊಳ್ಳುತ್ತಿತ್ತು ,


ಹಿರಣ್ಯ ಕಶಿಪುವಿನ ವಧೆ


ಮಾನವನ ಕರುಳು

  ಮುಂದೆ ಸಾಗಿದ ನನಗೆ ನರಸಿಂಹ ದೇವರ ವಿಗ್ರಹದ   ದರ್ಶನ ಆಯಿತು, ಯಾಕೋ ಗೊತ್ತಿಲ್ಲ,  ಈ ನರಸಿಂಹ ಹಿರಣ್ಯ ಕಷಿಪುವನ್ನು ಸಂಹಾರ ಮಾಡುತ್ತಿರುವ ಚಿತ್ರ  ವೈಜ್ಞಾನಿಕವಾಗಿ  ಅಚ್ಚರಿ ಮೂಡಿಸಿತು,  ಚಿತ್ರಗಳನ್ನೂ   ಒಮ್ಮೆ ಹೋಲಿಸಿ ನೋಡಿ  ನರಸಿಂಹ ವಿಗ್ರಹದ  ಕೈಯಲ್ಲಿ ಹಿರಣ್ಯಕಶಿಪುವಿನ  ಕರುಳಿನ ಹಾರವಿದೆ. ಕೆಳಗಿನ ಚಿತ್ರ ನೋಡಿ ನಮ್ಮ ಹೊಟ್ಟೆಯೊಳಗೆ ಅಡಗಿರುವ ಕಣ್ಣಿಗೆ ಕಾಣದ  ಕರುಳುಗಳ ಮಾಲೆ  ರಚನೆ ಇದೆ , ಇಲ್ಲಿ ಅಚ್ಚರಿ ಎಂದರೆ ಕ್ರಿ.ಶ . ೧೧೧೭  ದೇವಾಲಯ ನಿರ್ಮಾಣ ಮಾಡುವ ಸಮಯದ ಶಿಲ್ಪಿಗಳಿಗೆ ಹೊಟ್ಟೆಯೊಳಗೆ ಇರುವ ಕರುಳಿನ ಕಲ್ಪನೆ  ಹೇಗೆ ಬಂತೂ  ಅನ್ನುವ ವಿಚಾರ . ಹೌದಲ್ವಾ  ಅಂದಿನ ದಿನಗಳಲ್ಲಿ ಯಾವುದೇ ಸ್ಕ್ಯಾನರ್ ಗಳು ಇರಲಿಲ್ಲ,  ಹೊಟ್ಟೆಯೊಳಗಿನ ಅಂಗಗಳನ್ನು ತೋರುವ  ಯಾವುದೇ ಯಂತ್ರ  ಆ ದಿನಗಳಲ್ಲಿ ಇರಲಿಲ್ಲ ಆದರೂ ನಿಜದ ತಲೆಯ ಮೇಲೆ ಹೊಡೆದಂತೆ ಕರುಳಿನ ರಚನೆಯನ್ನು ಕಲ್ಲಿನಲ್ಲಿ ಕೆತ್ತಿದ  ಶಿಲ್ಪಿ  ಎಂತಹ ವಿಜ್ಞಾನಿ ಇರಬೇಕು ಆಲ್ವಾ, ... ಇತಿಹಾಸವನ್ನು ನಿಕೃಷ್ಟವಾಗಿ ಕಾಣುವ ನಾವು ಇಂತಹ ವಿಚಾರಗಳ ಬಗ್ಗೆ ಯಾಕೆ ಅರಿಯುವುದಿಲ್ಲವೋ  ಕಾಣೆ,  ಒಂದು ಕ್ಷಣ ನನ್ನ ಬಗ್ಗೆ ನನಗೆ ನಾಚಿಕೆ ಆಯಿತು.
ಗಜಾಸುರ  ಸಂಹಾರ  ಮಾಡುತ್ತಿರುವ ಶಿವ
 ಇಲ್ಲಿನ ಕಲೆಗಳ ಒಳ ಅರ್ಥವನ್ನು ನೋಡುತ್ತಾ  ನಡೆಯುತ್ತಿದ್ದಷ್ಟು  ನನ್ನ ಅಜ್ಞಾನದ ಅಹಂ ಕಡಿಮೆ ಆಗುತ್ತಿತ್ತು,  ಇಂದಿನ ತಾಂತ್ರಿಕತೆ ಬಗ್ಗೆ ಬೀಗುತ್ತಿರುವ ನಾವು  ಅರಿಯದೆ ಇರುವ ಬಹಳಷ್ಟು ವಿಚಾರಗಳನ್ನು ಬೇಲೂರಿನ ದೇಗುಲ  ಅಡಗಿಸಿಕೊಂಡಿದೆ , ಕಣ್ತೆರೆದು  ನೋಡಬೇಕಾದ  ನಾವುಗಳು ವಿಜ್ಞಾನದ ಯಂತ್ರಗಳ ದಾಸರಾಗಿ , ವೈಜ್ಞಾನಿಕತೆ ಎಂಬ  ಸೋಗಿನ  ಕಪ್ಪು ಬಟ್ಟೆಯನ್ನು ಕಣ್ಣಿಗೆ ಕಟ್ಟಿಕೊಂಡು   ಕೋಪ ಮಂಡೂಕಗಳಂತೆ ಬಾಳುತ್ತಿದ್ದೇವೆ,   ಅತ್ತ ಶಿವ ಗಜಾಸುರ ಸಂಹಾರ  ಮಾಡುತ್ತಿದ್ದರೆ  ಇತ್ತ ನನ್ನಲ್ಲಿನ  ಅಹಂಕಾರ ಸಂಹಾರ ಆಗುತ್ತಿತ್ತು.   ಹೆಚ್ಚಿನ ಸಮಯ ಕಳೆಯಲು ಆಸೆ ಇದ್ದರೂ ಮುಂದಿನ ಪಯಣ ಸಾಗಬೇಕಾಗಿತ್ತು, ಒಲ್ಲದ ಮನಸಿನಿಂದ  ಹೊರಡಲು ಅನುವಾದೆ , ಅಲ್ಲೇ ಇದ್ದ ಮಗುವೊಂದು ಶಿಲ್ಪವನ್ನು ಕೈನಿಂದ ಸ್ಪರ್ಶಿಸಿ ಸಂತಸ ಪಡುತ್ತಿತ್ತು, ಇತ್ತ  ಬಳಪದ ಕಲ್ಲಿನ  ಮೂರ್ತಿಗಳು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದ ದೃಶ್ಯ  ಕಂಡು ಬರುತ್ತಿತ್ತು,   ಮುಂದಿನ ಪೀಳಿಗೆಯ ಜನರು ನಮ್ಮನ್ನು ಬೈಯ್ದುಕೊಳ್ಳದಂತೆ   ಈ ಕಲೆಯ ಸಾಗರವನ್ನು ರಕ್ಷಣೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಅನ್ನಿಸಿತು.


ದಯವಿಟ್ಟು ನನಗಾಗಿ ಇದನ್ನು  ಉಳಿಸಿ
ಅಷ್ಟರಲ್ಲಿ ಗಿರೀಶ್ ಹತ್ತಿರ ಬಂದರು, ನಗುತ್ತಾ ಹತ್ತಿರ ಬಂದ  ಗಿರೀಶ್ ಗೆ ಮನದಲ್ಲೇ  ನಮಿಸಿದೆ , ಮುಂದಿನ ಪಯಣಕ್ಕೆ   ಹೊರಟು  ನಿಂತೆವು,   ಮನದಲ್ಲಿ  ಅಂದಿನ  ಜ್ಞಾನ  ಹಾಗು ಇಂದಿನ ವಿಜ್ಞಾನದ ನಡುವೆ   ಸಂಘರ್ಷಣೆ   ನಡೆದಿತ್ತು . ಬೇಲೂರಿನ  ಮಯೂರ ಹೋಟೆಲ್ ನಲ್ಲಿದ್ದ ಗೆಳೆಯ ಮಂಜು ನಾಥ್ ಭೇಟಿ ಮಾಡಿ  ಪಕೋಡ , ಹಾಗು ಕಾಫಿ ಸವಿದು,  ಹರ್ಷ ಚಿತ್ತರಾಗಿ   ಹೊರಟೆವು ...  ದ್ವಾರ  ಸಮುದ್ರದೆಡೆಗೆ , ........ !!!


Saturday, November 9, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....೧

ಬನ್ನಿ ನಮ್ಮ ಜೊತೆ

ನಮಸ್ಕಾರ  ಬಹಳ ದಿನಗಳ ನಂತರ ಭೇಟಿ ನಮ್ಮದು,   ಈ ಸರಕು ಬಹಳ  ತಿಂಗಳಿನದು , ಹೌದು ಸಾರ್ ಹಳೆಯ ಅಕ್ಕಿ ಯಿಂದ  ಮಾಡಿದ ಅನ್ನ   ಬಹಳ ರುಚಿ ನಿಮಗೆ ಗೊತ್ತಲ್ಲ, , ಹಾಗೆ ನನ್ನ ಪ್ರವಾಸದ ನೆನಪು ಕೂಡ   ಸುಮಾರು ಒಂದೂವರೆ ವರ್ಷದ್ದು  ,  ಬನ್ನಿ ಜಾರೋಣ ನೆನಪಿಗೆ

ಒಂದು ದಿನ ಮನೆಯಲ್ಲಿ ಕುಳಿತವನಿಗೆ ಯಾಕೋ ಬೇಸರ,  ಮೂಲೆಯಲ್ಲಿ  ಕುಳಿತಿದ್ದ ಕ್ಯಾಮರ  ಮುನಿಸಿಕೊಂಡಿತ್ತು,  ಬಾರಯ್ಯ ಎಲ್ಲಾದರೂ ಹೋಗೋಣ ಅಂತಾ ಮಗನನ್ನು ಕರೆದರೆ  ನನಗೆ ಪರೀಕ್ಷೆ ಇದೆ   ಬರಲ್ಲಾ ಎಂಬ ಉತ್ತರ, ಹೆಂಡತಿ  ಅಯ್ಯೋ ಅವನಿಗೆಪರೀಕ್ಷೆ  ಇದ್ಯಂತೆ  ನಾನು ಬರಲ್ಲಾ ಅಂತಾ ಅವಳಿಗೆ ಪರೀಕ್ಷೆ ಬಂದಂತೆ ಆಡಿದಳು , ಇನ್ನು ಅಮ್ಮ  ಪಾಪ ನೀನು  ಎಲ್ಲಾದರು ಹೋಗಿ ಬಾ ಮನಸಿಗೆ ಖುಷಿಯಾಗುತ್ತೆ, ಅನ್ನುತ್ತಾ ಪ್ರೇರಣೆ ನೀಡಿದರು, ಅಮ್ಮನ ಮಾತಿಗೆ ನನ್ನ ಪತ್ನಿ ಮಗನ ಹಿಮ್ಮೇಳ ಬೇರೆ, ಎಲ್ಲರೂ ಸೇರಿ ನನ್ನನ್ನು ಆಚೆ ಕಳುಹಿಸಲು ಪ್ಲಾನ್ ಮಾಡಿದಂತೆ  ಅನ್ನಿಸಿತು, ಹ ಹ  ಆದರೆ ಆದರ ಹಿಂದೆ  ಎಲ್ಲರಿಗೂ  ನನ್ನ ಬಗ್ಗೆ ಕಾಳಜಿ ಇತ್ತು,


ಗಿರಿ ಶಿಖರ ದ ಒಂದು ನೋಟ ಕ್ಯಾಮರದಲ್ಲಿ

ಎಲ್ಲಿಗೆ ಹೋಗೋದು ಅನ್ನುತ್ತಾ  ಯೋಚಿಸುತ್ತಾ ಇರಲು , ನಮ್ಮ ಗಿರೀಶ್ ಸೋಮಶೇಖರ್  ನೆನಪಾಗಿ ಫೋನ್  ಮಾಡಿದರೆ ಸಾರ್ ಬಹಳ ಖುಷಿಯಾಗುತ್ತೆ ಸಾರ್   ನಿಮಗೆ ಹೇಗೂ ಎರಡನೇ ಶನಿವಾರ, ಭಾನುವಾರ  ಸೇರಿ ಎರಡುದಿನ ರಜೆ ಇರುತ್ತೆ  ಬನ್ನಿ ನಾನೂ ನಿಮ್ಮ ಜೊತೆ ಬರುವೆ  ಎಂಬ ಪ್ರೀತಿಯ ಆಮಂತ್ರಣ, ಕೊಟ್ಟರು

  ಕಟ್ ಮಾಡಿದ್ರೆ  ಗಿರೀಶ್ ನನ್ನ ಭೇಟಿ  ಹಾಸನ ನಗರದ  ಬಸ್ ನಿಲ್ದಾಣದಲ್ಲಿ  , ನಗುಮುಖದಿಂದ  ಬಂದವರು  ಜೊತೆ ಗೂಡಿದರು, ಗೆಳೆಯನ ಹೊತ್ತ ಗೆಳೆಯನ  ಕಾರು ಸಕಲೇಶಪುರಕ್ಕೆ  ಓಡಿತು, ದಾರಿ ಸವೆಸುತ್ತಾ  ಎರಡು ದಿನದಲ್ಲಿ ನೋಡಬೇಕಾದ ಸ್ಥಳಗಳ ಬಗ್ಗೆ  ಒಂದು ಪಟ್ಟಿ ಸಿದ್ದಪಡಿಸಿದೇವು,   ಮೊದಲು ಲಗ್ಗೆ  ಇಟ್ಟ  ಸ್ಥಳ  ಅದ್ಭುತವಾದ  ಇತಿಹಾಸವನ್ನು ತನ್ನೊಳಗೆ  ಅಡಗಿಸಿಕೊಂಡ  ಸಕಲೇಶಪುರದ  ಮಂಜರಾಬಾದ್  ಕೋಟೆಗೆ .


ನಕ್ಷತ್ರ  ಆಕಾರದಲ್ಲಿ  ನಿರ್ಮಿತವಾದ ಕೋಟೆ  ಗೂಗಲ್ ನಲ್ಲಿ ಕಂಡಂತೆ

ಹೌದು ಬಹಳ ದಿನಗಳಿಂದ  ಈ ಕೋಟೆ ನೋಡಬೇಕೆಂಬ ಆಸೆ ಇತ್ತು,  ಹಿಂದೆ ಒಮ್ಮೆ ಬಂದಿದ್ದರೂ  ಕ್ಯಾಮರ  ಇಲ್ಲದೆ  ಯಾವ ಚಿತ್ರವೂ ನನ್ನಲ್ಲಿ ಇರಲಿಲ್ಲ.  ನಮ್ಮ ದೇಶದ   ತಂತ್ರಜ್ಞಾನ ದಲ್ಲಿ ಮಹತ್ತರ  ಪಾತ್ರ ವಹಿಸಬೇಕಾದ  ಈ ಕೋಟೆ ತನ್ನ ಇತಿಹಾಸವನ್ನು  ಬಿಟ್ಟು ಕೊಡದೆ  ಹಸಿರ ಮರೆಯಲ್ಲಿ  ಕೇವಲ ಪಿಕ್ನಿಕ್  ಜಾಗವಾಗಿ  ಮಲಗಿದೆ.

ಶ್ರೀ ರಂಗಪಟ್ಟಣ   ಆಳುತ್ತಿದ್ದ  ಟಿಪ್ಪೂ ಸುಲ್ತಾನ  1784   ರ ಸುಮಾರಿನಲ್ಲಿ  ಮಂಗಳೂರು ಪ್ರಾಂತದಲ್ಲಿ  ಎದ್ದ ದಂಗೆ  ಅಡಗಿಸಿ ಬರುವಾಗ  ಈ ಆಯಕಟ್ಟಿನ  ಪ್ರದೇಶದಲ್ಲಿ  ರಕ್ಷಣೆ ಉದ್ದೇಶ  ವ್ಯಾಪಾರಿ  ಉದ್ದೇಶಕ್ಕಾಗಿ ಈ  ನಕ್ಷತ್ರಾಕಾರದ  ಕೋಟೆಯನ್ನು  ಕಟ್ಟಿಸಿದನೆಂದು  ತಿಳಿದು ಬರುತ್ತದೆ,  ಇದರ ನಿರ್ಮಾಣ 1785 ರಲ್ಲಿ ಪ್ರಾರಂಭವಾಗಿ 1792 ರಲ್ಲಿ ಮುಕ್ತಾಯಗೊಂಡಿದೆ . 1792 ರಿಂದ ಇಂದಿನವರೆಗೂ  ಸುಮಾರು ಎರಡು ಶತಮಾನ  ಕಳೆದರು ನಿಸರ್ಗದ ಎಲ್ಲಾ ಬಗೆಯ  ಸವಾಲು ಗಳನ್ನ ಎದುರಿಸಿ  ನಿಂತಿದೆ .

ಮಂಜರಬಾದ್ ಕೋಟೆ  ಕೊಡಗು ಹಾಗು  ಮಂಗಳೂರು ಪ್ರಾಂತಕ್ಕೆ  ಹೆಬ್ಬಾಗಿಲಿನಂತೆ  ಆಗಿತ್ತು.
ಅಂದಿನ  ಐತಿಹಾಸಿಕ ರಕ್ಷಣೆಯ ದೃಷ್ಟಿಯಿಂದ  ಬಹಳ ಆಯಕಟ್ಟಿನ ಜಾಗದಲ್ಲಿದ್ದ  ಕೋಟೆ ಇದು, ಟಿಪ್ಪೂ ಸುಲ್ತಾನನಿಗೆ  ತಲೆ ನೋವಾಗಿದ್ದ  ಮಂಗಳೂರು, ಮಡಿಕೇರಿ ಪ್ರಾಂತದ  ಮೇಲೆ ಹಿಡಿತ ಸಾಧಿಸಲು  ಹಾಗು ಮಂಗಳೂರು ಮೂಲಕ ತನ್ನ ವ್ಯಾಪಾರ ವಹಿವಾಟನ್ನು  ಮಾಡಲು  ಅನುಕೂಲವಾಗುವಂತೆ  ವ್ಯಾಪಾರ   ಸಾಮಗ್ರಿಗಳನ್ನು  , ರಕ್ಷಣೆಗಾಗಿ ಮದ್ದು ಗುಂಡುಗಳನ್ನು  ಸಂಗ್ರಹ ಮಾಡಲು  ಅನುಕೂಲವಾಗಿತ್ತು ಈ ಕೋಟೆ . ಬಯಲುಸೀಮೆ , ಯಿಂದ  ಮಲೆನಾಡು , ಕರಾವಳಿ ಪ್ರದೇಶಕ್ಕೆ ಹೆಬ್ಬಾಗಿಲಿನಂತೆ  ಈ ಕೋಟೆ ಕಾರ್ಯನಿರ್ವಹಣೆ  ಮಾಡಿರುವುದು  ಕಂಡು ಬರುತ್ತದೆ. ಈ ಕೋಟೆಯ ರಚನೆ  ಹಿಡಿದೆ ಅಂದರೆ ವೈರಿಗಳ   ಚಲನ ವಲನ  ವೀಕ್ಷಣೆ   ಹಾಗು ಅವರನ್ನು ಹತ್ತಿಕ್ಕಲು  ಅನುಕೂಲವಾಗುವಂತೆ  ವೈಜ್ಞಾನಿಕವಾಗಿ ಈ ಕೋಟೆ ನಿರ್ಮಾಣ  ಆಗಿದೆ.

ಕೋಟೆಯ ಹೆಬ್ಬಾಗಿಲು


 ಕೋಟೆ ವಿಶೇಷವಾಗಿದ್ದು  ಇದರಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯ   ಕಲೆ ಅನಾವರಣಗೊಂಡಿದ್ದು , ಸೂಕ್ಷ್ಮವಾಗಿ ಗಮನಿಸಿದರೆ  ಕೋಟೆಯ ಹಲವು ಬಾಗಿಲುಗಳ ಕಾಮಾನಿನ ಮೇಲೆ ಸುಂದರ ಕಲೆ ಅನಾವರಣ  ಆಗಿರುವುದನ್ನು  ಗಮನಿಸಬಹುದು, ಇನ್ನೊಂದು ವಿಶೇಷ  ಎಂದರೆ ಈ ಕೋಟೆಯ ನಿರ್ಮಾಣದಲ್ಲಿ  ಗಾರೆ ಗಚ್ಚು, ಚಪ್ಪೆ ಇಟ್ಟಿಗೆ ,  ಕಲ್ಲು,  ಮರ ಇಷ್ಟರ  ಉಪಯೋಗ ಮಾತ್ರ ಆಗಿದೆ, ಕಬ್ಬಿಣದ ಉಪಯೋಗ ಬಹಳ ಕಡಿಮೆ ಆಗಿದೆ,  ಕಮಾನು ಗಳ ನಿರ್ಮಾಣ ದಲ್ಲಿಯೂ ಸಹ ಕಬ್ಬಿಣದ ಉಪಯೋಗ ಆಗಿಲ್ಲ, ಚಪ್ಪಟೆಯಾದ ಇಟ್ಟಿಗೆ, ಗಾರೆ ಗಚ್ಚುವಿನಿಂದ   ಕಮಾನುಗಳನ್ನು ನಿರ್ಮಿಸಲಾಗಿದೆ.   ಜೊತೆಗೆ ಇದರಲ್ಲಿ ಫ್ರೆಂಚ್  ತಂತ್ರಜ್ಞರ , ಹಾಗು ಸ್ಥಳೀಯ ತಂತ್ರಜ್ಞರ ಸಂಯೋಗದಲ್ಲಿ  ತಾಂತ್ರಿಕವಾಗಿ  ಬಲಿಷ್ಠ ಕೋಟೆ ರೂಪ ತಳೆದಿದೆ . ಕಟ್ಟಡ ತಂತ್ರಜ್ಞಾನ , ವಿನ್ಯಾಸ , ನಿರ್ಮಾಣ , ಜೊತೆಗೆ ಪರಿಸರ ನಿರ್ವಹಣೆ  ಬಗ್ಗೆ ಇದನ್ನು ಉತ್ತಮ ಉದಾಹರಣೆ ಎಂದು ಪರಿಗಣಿಸಿ ಸಂಶೋಧನೆ ನಡೆಸ ಬೇಕಾಗಿದೆ .


ಮಂಜರಾಬಾದ್  ಕೋಟೆಗೆ ಇರುವ ಮೆಟ್ಟಿಲುಗಳು


ಸಕಲೇಶಪುರದಿಂದ  ಮಂಗಳೂರು ಹೆದ್ದಾರಿಯಲ್ಲಿ  ಸಕಲೇಶಪುರದಿಂದ  ಏಳು ಕಿಲೋಮೀಟರು   ಕ್ರಮಿಸಿದರೆ ತಿರುವು ಸಿಗುತ್ತದೆ  , ಅಲ್ಲಿಂದ ಸಾಗುವ ಕಾಲು ಹಾದಿಯಲ್ಲಿ ಕ್ರಮಿಸಿದರೆ ನಿಮಗೆ  ಮೆಟ್ಟಿಲುಗಳ ದರ್ಶನ ಆಗುತ್ತದೆ, ಮೆಟ್ಟಿಲು ಹತ್ತಿ ಹೊರಟರೆ ನೀವು ಒಂದು ಬೆಟ್ಟದ ಮೇಲೆ ಸಮತಟ್ಟಾದ  ಪ್ರದೇಶದಲ್ಲಿ  ಸಮುದ್ರ ಮಟ್ಟದಿಂದ  ೩೨೪೦ ಅಡಿ ಎತ್ತರದಲ್ಲಿರುತ್ತೀರಿ
ಅಲ್ಲಿದೆ ಈ ಮಂಜರಾಬಾದ್ ಕೋಟೆ,  ಮಲೆನಾಡಿನ ಮಂಜಿನಿಂದ  ಆವರಿಸುವ ಪ್ರದೇಶದಲ್ಲಿರುವ ಕಾರಣ  ಇದನ್ನು ಮಂಜರಬಾದ್  ಎಂದು ಕರೆದರೂ ಎನ್ನುತ್ತಾರೆ. ಬನ್ನಿ ಮುಂದೆ ಹೋಗೋಣ


ಕೋಟೆಗೆ ತೆರಳುವ  ಹಾದಿ

ಸ್ಮಾರಕಗಳ  ಬಳಕೆ ಇಂತಹ ಕಾರ್ಯಕ್ಕಾಗಿ ಮಾತ್ರ  


ಮೆಟ್ಟಿಲು ಹತ್ತಿ  ಮಣ್ಣಿನ ಹಾದಿಯಲ್ಲಿ ನಡೆದ ನಾವು ಮುಂದೆ ಬಂದೆವು , ಅಲ್ಲಿಯೇ ಸಮೀಪದಲ್ಲಿ   ಪ್ರವಾಸದ ನೆಪದಲ್ಲಿ ಬರುವ ನಮ್ಮವರು ಮಾಡುವ  ಕೆಲಸದ ಗೋಚರವಾಯಿತು,  ಹೌದು  ನಾನು ಪ್ರತಿ  ಪ್ರವಾಸಿ ತಾಣದಲ್ಲಿಯೂ,  ಐತಿಹಾಸಿಕ ತಾಣಗಳಲ್ಲಿ ,ನೋಡುವ ದೃಶ್ಯ  ಇಲ್ಲಿ ಮತ್ತೆ ಗೋಚರಿಸಿತು,   ಇಂತಹ ಜಾಗಗಳು   ಹೆಂಡ ಕುಡಿಯಲು, ಮೊಜುಮಾಡಲು , ಜೂಜಾಡಲು ,  ಅನೈತಿಕ  ಚಟುವಟಿಕೆ ನಡೆಸಲು  ಉತ್ತಮವಾದ  ಜಾಗಗಳೆಂದು  ನಮ್ಮ ನಾಗರೀಕ ಸಮಾಜದ  ಪ್ರಭುಗಳು ನಿರ್ಧರಿಸಿ  ಇಂತಹ ಕಾರ್ಯ ಮಾಡುತ್ತಾರೆ,  ಅವಿಧ್ಯಾವಂತರ ಜೊತೆ ಆಧುನಿಕ  ಪ್ರಪಂಚದ  ಹೈ  ಟೆಕ್   ವಿಧ್ಯೆ  ಕಲಿತ ನಾವುಗಳೂ ಸಹ  ಹೀಗೆ ನಡೆದುಕೊಂಡು  ನಮ್ಮ  ನಾಡಿಗೆ, ಸಂಸ್ಕೃತಿಗೆ  ಪ್ರತಿನಿತ್ಯ  ಅವಮಾನ ಮಾಡುತ್ತಿದ್ದೇವೆ .ಹೆಬ್ಬಾಗಿಲಿನಲ್ಲಿ  ಕಲೆಯ ಅನಾವರಣ

ಕೋಟೆಯ ಕೀ ಪ್ಲಾನ್ ಇಲ್ಲಿದೆ ನೋಡಿ

ಮುಂದೆ  ಹೋರಟ  ನಮ್ಮನ್ನು ಸುಂದರ ಕಲೆಯನ್ನು ಹೊತ್ತ ಹೆಬ್ಬಾಗಿಲು ಸ್ವಾಗತಿಸಿತು,  ಹೌದು ಹೆಬ್ಬಾಗಿಲ ಕಮಾನಿನ ಮೇಲೆ ಸುಂದರ  ಇಂಡೋ ಸಾರ್ಸೆನಿಕ್ ಶೈಲಿಯ  ಕಲೆ  ಅನಾವರಣ ಆಗಿತ್ತು, ಇಂತಹದೆ  ಕಲೆಗಳನ್ನು, ಶ್ರೀರಂಗಪಟ್ಟಣ,  ಮೈಸೂರಿನ  ಸ್ಮಾರಕಗಳಲ್ಲಿ   ಕಾಣಬಹುದು .  ಹೆಬ್ಬಾಗಿಲು  ಒಳಗೆ ಹೊಕ್ಕ ನನ್ನ ಕ್ಯಾಮರ  ಒಮ್ಮೆ  ಎಲ್ಲಾ ಕಡೆ ತಡಕಾಡಿತು,  ಅರೆ ನನ್ನ ನೆತ್ತಿಯ ಮೇಲೆ ಇತ್ತು  ಒಂದು ನಕ್ಷತ್ರ ,  ಅಚ್ಚರಿಯಿಂದ  ಗಮನವಿಟ್ಟು ನೋಡಿದೆ,  ಹೆಬ್ಬಾಗಿಲ  ಚಾವಣಿ ಮೇಲೆ ಮೂಡಿಸಲಾಗಿತ್ತು, ಮಂಜರಾಬಾದ್ ಕೋಟೆಯ  ವಿವರವಾದ ಕೀ ಪ್ಲಾನ್  ,  ಅಬ್ಬ  ಎಂತಹ ಜನ ಸಾರ್  ಅಂದಿನವರು,   ಆಲ್ವಾ, ಬಹುಷಃ ಇನ್ಯಾವರೀತಿ ಯಿಂದಲೂ  ಎರಡು ಶತಮಾನ ಕಳೆದರೂ  ಅಳಿಸಿ ಹೋಗದ ಒಂದು ಕೀ ಪ್ಲಾನ್ ಅನ್ನು ಹೀಗೆ   ಸಂರಕ್ಷಿಸಲು ಅನುಕೂಲ ಆಗುವಂತೆ  ರಚಿಸಿದ್ದಾರೆ.  ಮನದಲ್ಲೇ ಅವರಿಗೆ ವಂದಿಸಿ ಮುಂದೆ ಹೊರಟೆವು

ಕೋಟೆಯ ಒಳ ಆವರಣ ಮ್ಯಾಗಜಿನ್  ಹೌಸ್

ಕೋಟೆಯ ಒಳ ಆವರಣ  ನೀರು ಸಂಗ್ರಹಣೆ  ಕೊಳ

 ಕೋಟೆಯ ಒಳ  ಆವರಣಕ್ಕೆ ಬಂದ  ನಮಗೆ ಕೋಟೆಯ  ಒಳ ಸನ್ನಿವೇಶ ಗೋಚರ ಆಯಿತು, ಮದ್ದಿನ ಮನೆ ,  ಜನಗಳು ಉಳಿಯಲು ಅನುಕೂಲ ಆಗುವ ಗೃಹಗಳು, ವ್ಯಾಪಾರ ಸಾಮಗ್ರಿ ಶೇಖರಣೆ ಗೆ ಅನುಕೂಲ ವಾಗುವ  ಕೋಣೆಗಳು , ನೀರು ಸಂಗ್ರಹಣೆಗೆ  ಕೋಟೆಯ ಮದ್ಯ ಭಾಗದಲ್ಲಿ  ಕೊಳ  , ಸುತ್ತಲೂ  ಅಬೇಧ್ಯ  ಗೋಡೆಗಳು, ಕಾವಲು ಬುರುಜು,  ಎಲ್ಲವನ್ನು ಅಲ್ಲಿ  ದರ್ಶಿಸಿದೆವು. ಹಸಿರ ಸಿರಿಯ ನಡುವೆ  ಈ ಕೋಟೆ ತನ್ನದೇ ಶೈಲಿಯಲ್ಲಿ  ಮೆರೆದಿತ್ತು.
 ಅ ಹೌದು ಅಲ್ಲಿದ್ದ ಮದ್ದು ಸಂಗ್ರಹಣ  ಮನೆ [ ಮ್ಯಾಗಜಿನ್  ಹೌಸ್ ] ಬಗ್ಗೆ ವಿಚಾರದ ಅರಿವಿಲ್ಲದ  ಕೆಲವು ಪ್ರವಾಸಿಗಳ   ಚೆಲ್ಲಾಟಕ್ಕೆ  ಬಲಿಯಾಗಿತ್ತು,ಈ ಮದ್ದಿನ ಮನೆಯ ವಿಶೇಷ  ಎಂದರೆ ಯಾವುದೇ  ಹವಾಮಾನ  ಏರಿತಗಳನ್ನು  ತಡೆದುಕೊಂಡು  ಮದ್ದು ಗುಂಡುಗಳನ್ನು  ಸಂರಕ್ಷಣೆ  ಮಾಡಲು ಇಂತಹ ಮನೆಗಳ ನಿರ್ಮಾಣ  ಆಗಿದೆ, ಪಿರಮಿಡ್ ಆಕೃತಿಯಲ್ಲಿ ರಚನೆಯಾಗಿರುವ ಇವುಗಳ ಒಳಗೆ ಹೊಕ್ಕರೆ ನಿಮಗೆ ಹವಾ ನಿಯಂತ್ರಿತ  ಕೋಣೆಯ ಅನುಭವ  ಆಗುತ್ತದೆ,  ಚಳಿಗಾಲದಲ್ಲಿ ಕೊರೆಯುವ ಚಳಿಯಲ್ಲೂ ಬೆಚ್ಚನೆ ಅನುಭವ ನೀಡುವ  ಇವು,  ಬೇಸಿಗೆಯಲ್ಲಿ ಉರಿ ಬಿಸಿಲನ್ನು ನಿಗ್ರಹಿಸಿ  ತಣ್ಣನೆಯ ಅನುಭವ ನೀಡುತ್ತವೆ,  ಮಳೆಗಾಲದಲ್ಲಿ  ಶೀತದಿಂದ  ರಕ್ಷಣೆ ನೀಡುವ  ಈ ಮದ್ದಿನ ಮನೆಯ ವಿಶೇಷ , ಇಂತಹ ಸುಮಾರು  ಮದ್ದಿನ ಮನೆಗಳನ್ನು ಶ್ರೀ ರಂಗ ಪಟ್ಟಣ ಕೋಟೆಯ ಒಳಗೆ ಕಾಣಬಹುದು,  ನಿರ್ಮಾಣ ಕ್ಷೇತ್ರದಲ್ಲಿ   ಇಂದಿಗೂ ಇಂತಹ  ಹವಾನಿಯಂತ್ರಿತ  ಮದ್ದಿನ ಮನೆಗಳು ಇಂದಿನ ತಾಂತ್ರಿಕತೆಗೆ ಸವಾಲಾಗಿ  ನಿಂತಿವೆ .  ಸುಮಾರು ಒಂದು ಘಂಟೆಗೂ ಹೆಚ್ಚು ಹೊತ್ತು ಅಲ್ಲಿ ಕಳೆದ ನಾವು ಮುಂದಿನ ಹಾದಿ ಹಿಡಿಯಲು  ಇತಿಹಾಸದ  ಕೋಟೆಯಿಂದ  ಹೊರಗೆ  ಬಂದೆವು .


ಹಾದಿ ಬದಿಯಲ್ಲಿನ ಅಂಗಡಿಗಳು

ಕೋಟೆಯಿಂದ ಮುಖ್ಯ ರಸ್ತೆಗೆ ಬಂದ  ನಾವು  ಕಂಡ ದೃಶ್ಯ ಒಮ್ಮೆ ನಗು ಬರಿಸಿತ್ತು,  ಅತ್ತಾ ಇತಿಹಾಸ ನರಳುತ್ತಿದ್ದರೆ, ಇತ್ತ  ಅದರ ಚಿಂತೆ ಇಲ್ಲದೆ ಸಮಾಜ  ಯಾಂತ್ರಿಕ  ಬದುಕಿನಲ್ಲಿ ಮುಳುಗಿ ಹೋಗಿತ್ತು,  ಮಂಗಳೂರು,  ಸಕಲೇಶ ಪುರ ರಸ್ತೆಯಲ್ಲಿ  ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ  ವಾಹನಗಳು ಹರಿದಾಡುತ್ತಿದ್ದವು , ಅತ್ತ  ಪ್ರವಾಸಿಗಳಿಗೆ ಕಾಯುತ್ತಾ ಕುಳಿತ  ಅಂಗಡಿಯವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು,ಸದ್ದಿಲ್ಲದೇ ಜಾಗ ಖಾಲಿ ಮಾಡಿದ ನಾವು  ಕಲ್ಲಿನಲ್ಲಿ ಕಲೆಯ ಅರಳಿಸಿ ಮೆರೆದಿಹ  ಐತಿಹಾಸಿಕ ಊರಿಗೆ  ಬಂದೆವು ನಮ್ಮನ್ನು ಸ್ವಾಗತ ಕೋರಿದ್ದು  ಈ ಕಲ್ಲಿನ  ಕುಟ್ಟಾಣಿ.  ................................. ಕಲೆಯ ಸಾಮ್ರಾಜ್ಯದೊಳಗೆ  ಹೋಗುತ್ತಿದ್ದ ನನಗೆ ರೋಮಾಂಚನ ಶುರು ಆಗಿತ್ತು. ................ ಮುಂದೆ????  ಎರಡನೇ ಕಂತಿನಲ್ಲಿ  ಜೊತೆಯಾಗೊಣ