Sunday, August 25, 2013

ದೂರ ಹೋಗು ಗೆಳತಿ ಉಳಿಯಲಿ ನಿನ್ನ ನೆನಪು ಅಮರವಾಗಿ .................... !!

ನೀನಂದ್ರೆ ನನಗೆ ಇಷ್ಟಾ ಕಣೋ
ಯಾಕೋ ಗೊತ್ತಿಲ್ಲಾ  ಕಳೆದ ಎರಡು ಸಾರಿ ಇಂದ  ಸಣ್ಣ ಕಥೆಗಳಲ್ಲಿ  ಪ್ರೀತಿಯ ಬಗ್ಗೆ  ಕಥೆ ಸುತ್ತುತ್ತಿದೆ. ಇಂದಿನದೂ ಸಹ ಅಂತದೆ ಒಂದು ಕಥೆ.

 ಅಜಯ್  ಇಂದಿನ ನಾಯಕ , ನಮ್ಮ ಅಜಯ್  ಒಂದು ಹಳ್ಳಿ ಯಲ್ಲಿ ಜನಿಸಿ  ಬಾಲ್ಯ ಕಳೆದವ, ಬಾಲ್ಯದ ಓದು ಅವನು ಜನಿಸಿದ  "ಜ್ಞಾನ ಪುರದಲ್ಲಿ" , ನಂತರ  ಐದನೇ ತರಗತಿ ಇಂದ ಹತ್ತರವರೆಗೆ   ಹತ್ತಿರದ ಪಟ್ಟಣ   "ವಿಜ್ಞಾನ ಪುರ"ದಲ್ಲಿ  ನಂತರ  ಕಾಲೇಜಿಗೆ  "ಚಂದನ ಪುರ" ಕ್ಕೆ ಬಂದವ , ನಂತರ  ಜೀವನ ಏರು ಪೇರಾಗಿ  ಇಂದು   ದಡ  ಸೇರಿ  ಜೀವನದಲ್ಲಿ ಸಾಧಿಸಿ  ಉತ್ತಮ  ಬಾಳು ಇಂದು ಅವನದಾಗಿದೆ. ಅದೊಂದು ದಿನ  ತನ್ನ ಆಫಿಸ್ ನಲ್ಲಿ ಕುಳಿತವನಿಗೆ  ದೂರದಿಂದ ತೇಲಿಬಂದ  ಹಾಡು
ಮನದಲ್ಲಿ ನಿಂತಿತು,  "ಜನ್ಮ ನೀಡಿದ  ಭೂ ತಾಯಿಯ  ನಾ ಹೇಗೆ ತಾನೇ ತೊರೆಯಲಿ"  "ಅನ್ನ ನೀಡಿದ  ಮಣ್ಣನು  ನಾ ಹೇಗೆ  ಮರೆಯಲಿ " ಅಂತಾ ಮನಸಿನಲ್ಲಿ ಹಾಡಿಕೊಂಡ ,  ಬಂದರೂ  ಆ  ಹಾಡು ಮನದಲ್ಲಿ ಕಾಡತೊಡಗಿತು . ಮಾರನೆಯ ದಿನ ಆಫಿಸ್ ಗೆ  ಹೋಗಿ ಎರಡು ದಿನ ರಜೆ  ಹಾಕಿ ಊರ ದಾರಿ ಹಿಡಿದ,

ಬಾಲ್ಯ ಕಳೆದ ಊರಿಗೆ ಬಂದು ಸುಮಾರು  ಇಪ್ಪತ್ತು ವರ್ಷಗಳಾಗಿದ್ದವು , ಏನಿದೆ ಎಂದು ಬಂದಾನು ಊರಿಗೆ?  ಇದ್ದ ಜಮೀನುಗಳು  ಅಕ್ಕ ತಂಗಿಯರ ಮದುವೆಗಾಗಿ  ಅಪ್ಪ ಮಾರಿದ್ದ,  ಅಪ್ಪ ಸತ್ತ ನಂತರ  ಊರಿನಲ್ಲಿ ಇರಲಾಗದೆ ಬದುಕನ್ನು ಅರಸಿ  ಚಂದನಪುರ ಪಟ್ಟಣಕ್ಕೆ  ಬಂದು ನೆಲಸಿದ್ದಾ ಯಿತು,  ಅದೇ ಉಸಿರಿನಲ್ಲಿ  ಆಗ ಇದ್ದ ಮನೆಯನ್ನು  ಬಂದಷ್ಟು ದುಡ್ಡಿಗೆ ಮಾರಿದ್ದಾಗಿತ್ತು, ಆದರೆ ಮನದ ಮೂಲೆಯಲ್ಲಿ ಬಾಲ್ಯ ಕಳೆದ ಆ ಊರಿನ  ಬೀದಿ ಬೀದಿಗಳು  , ಮನೆ ಮನೆಗಳೂ , ಅಲ್ಲಿನ ಬಾಲ್ಯ ಗೆಳೆಯರು  , ಬಾಲ್ಯದ ಜೀವನದ  ಅಮೂಲ್ಯ ಕ್ಷಣಗಳು  ಅವನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದವು.

ಊರಿಗೆ ಬಂದವನೇ  ತಾನು ಬಾಲ್ಯ ಕಳೆದ ಮನೆಗೆ ಬಂದ  ಇವನನ್ನು ಕಂಡ ಪುಟ್ಟ ಮಕ್ಕಳು,  "ಅಪ್ಪ ಅಪ್ಪಾ ಯಾರೋ ಬಂದವ್ರೇ " ಅಂತಾ  ಓಡಿ  ಹೋಗಿ ಒಬ್ಬ ಹಿರಿಯರನ್ನು ಕರೆದು ಕೊಂಡು  ಬಂದವು . ಒಳಗಿನಿಂದ ಬಂದ  ಹಿರಿಯರು   ಯಾರೂ ಅಂತಾ ಹತ್ತಿರ ಬಂದು "ನೀವು ನಮ್ಮ ಐನೋರ ಮಗ  ಅಜಯ್ ಸ್ವಾಮೆರಲ್ವೆ " "ಬನ್ನಿ ಬನ್ನಿ ಒಳಕೆ "  ಅಂತಾ  ಮನೆಯ ಒಳಗೆ ಕರೆದು ಕೊಂಡು  ಹೋಗಿ  ಉಪಚಾರ ಮಾಡಿದ್ರು, "ಸ್ವಾಮೀ ಬೊ ವರ್ಸಾ ಆಗಿತ್ತು ತಾಮು ಬಂದು" , "ಮನೆಕಡೆ ಎಲ್ಲಾ ಸಂದಾ ಕಿದ್ದಾರ" "ಅವ್ನೋರು  ಎನ್ಗವ್ರೆ ಬುದ್ದೀ??   ಅಂತಾ ಹೇಳಿ ಉಪಚರಿಸಿದರು.  ಇವತ್ತು  ಸ್ವಾಮೀ  ಆ ರೂಮಲ್ಲಿ  ಇರಿ  , ಅಂತಾ ಹೇಳಿ  ಮನೆಯ ಮುಂದೆ ಇದ್ದ , ಬಾಲ್ಯದಲ್ಲಿ ನಾನು ಉಳಿದಿದ್ದ  ರೂಂ ನಲ್ಲಿ  ನನ್ನ ಲಗ್ಗೇಜ್  ಇಟ್ಟರು . "ಲೇ ಇವಳೇ  ಆ ಸಾಮಣ್ಣ ನವರ ಮನೆಗೆ ಹೋಗಿ  ಐನೊರ್ ಮಗ ಅಜಯ್  ಬಂದವರೆ  ರಾತ್ರಿ ಊಟಕ್ಕೆ ಅಲ್ಲಿಗೆ ಬತ್ತಾರೆ ಅಂತಾ  ಯೋಳು " ಅಂತಾ ಹೇಳಿ , ಬನ್ನಿ ಸ್ವಾಮೀ  ಊರ ಒಂದು ಸುತ್ತು  ಹಾಕಿ ಬರುವ  ಅಂತಾ  ಕರೆದುಕೊಂಡು  ಹೊದ್ರು. ಬಾಲ್ಯ ಕಳೆದ  ಸರ್ಕಾರಿ ಸ್ಕೂಲು ಮಾಯವಾಗಿತ್ತು,ಸುತ್ತಲಿನ  ಮರಕೋತಿ ಆಟ ಆಡಿದ್ದ  ಮರಗಳು ಮಾಯವಾಗಿದ್ದವು ,  ಮರ ಹತ್ತಿ ನೇರಳೆ ಹಣ್ಣು ತಿನ್ನುತ್ತಿದ್ದ  ಮರಗಳು  ಕಣ್ಮರೆಯಾಗಿದ್ದವು,  ಸರ್ಕಾರಿ  ಕ್ವಾರ್ಟರ್ಸ್  ಸುತ್ತಾ ಹಾಕಲಾಗಿದ್ದ  ಕಾಂಪೌಂಡ್  ಉರಳಿ ಹೋಗಿತ್ತು, ಕಾಂಪೌಂಡ್ ಮೇಲೆ ಹತ್ತಿ ಅದರ ಉದ್ದಕ್ಕೂ ಓಡುತ್ತಾ , ಬಸ್ ಆಟ ಆಡಿದ ನೆನಪು ಕಳೆದು ಹೋಗಿತ್ತು,  ಮಾವಿನ ತೋಪಿನಲ್ಲಿ  ಮರ ಹತ್ತಿ ಕೋತಿಗಳಿಗೆ ಕಲ್ಲು ಹೊಡೆದು  ಓಡಿಸಿ ಮಾವಿನ ಹಣ್ಣು ತಿಂದ  ನೆನಪಿನ  ಮಾವಿನ ಮರಗಳು ನಿರ್ನಾಮ ವಾಗಿದ್ದವು,  ಬೇಲಿಯಲ್ಲಿ ಕಾರೆ ಹಣ್ಣು ಕಿತ್ತು ತಿಂದ  ಜಾಗದಲ್ಲಿ ಯಾವುದೋ  ಕಟ್ಟಡ ಬಂದಿತ್ತು,  ಈಚಲು ಹಣ್ಣು ನೀಡಿದ್ದ ಮರಗಳು  ಹೆಸರಿಗೂ ಇರಲಿಲ್ಲ,  ಈಜು ಕಲಿತ ಕಪಿಲೆ ಬಾವಿ  ಮುಚ್ಚಿ ಹೋಗಿತ್ತು,  ಸೈಕಲ್ಲು ಬಾಡಿಗೆ ಪಡೆಯುತ್ತಿದ್ದ ಅಂಗಡಿ ಇಲ್ಲವಾಗಿತ್ತು, ಬಿಸಿ ಬಿಸಿ ಮಿಟಾಯಿ ಮಾಡಿ ಎಲ್ಲರ  ನಾಲಿಗೆಗೆ ನೀಡುತ್ತಿದ ಮಿಟಾಯಿ  ಶಿವಣ್ಣ  ಬದುಕಿರಲಿಲ್ಲ,  ಅಂದಿನ ಬಾಲ್ಯದ ಗೆಳೆಯರು  ರಾಜಕೀಯದ ಒಳ ಸುಳಿಗೆ ಸಿಕ್ಕಿ ದುಶ್ಮನ್ ಗಳಾಗಿದ್ದರು,  ಒಟ್ಟಿನಲ್ಲಿ ಬಾಲ್ಯದ  ಸುಂದರ ಕನಸುಗಳೆಲ್ಲಾ ಭಗ್ನವಾದ  ಹಾಳು ನೆನಪಾದವು,  ಹಾಗು ಹೀಗೂ  ರಾತ್ರಿ   ಶ್ಯಾಮಣ್ಣನವರ  ಮನೆಯಲ್ಲಿ ಊಟ ಮಾಡಿ ತನ್ನ ರೂಂ ಗೆ ಬಂದ  ,

ಹೌದು ಈ ಮನೆಯನ್ನು ಅಜಯ್ ಮನೆಯವರು ಸುಮಾರು ಮೂವತ್ತು ವರ್ಷಗಳ ಹಿಂದೆ ಅವರ  ಮನೆಯ ಹಿತೈಷಿಯಾಗಿದ್ದ  ಬೋರೆ ಗೌಡರಿಗೆ ಮಾರಾಟ ಮಾಡಿದ್ದರು . ಬೋರೆಗೌಡರು  ಆ ಕಾಲಕ್ಕೆ ಆ ಊರಿನ ಶ್ರೀಮಂತರಾದರೂ ,  ಅಜಯ್ ತಂದೆಯ  ಆತ್ಮೀಯ ಗೆಳೆಯರಾಗಿದ್ದ ಕಾರಣ ಅವರೂ ಸಹ ಆ ಮನೆಯನ್ನುಅಜಯ್  ತಂದೆಯವರ ನೆನಪಿನಲ್ಲಿ   ಖರೀದಿ ಮಾಡಿದ್ದರು,  ಮನೆಯನ್ನು  ಒಂದು ಚೂರೂ  ಬದಲಾವಣೆ ಮಾಡದೆ  ಹಾಗೆ ಉಳಿಸಿಕೊಂಡು  ಬಂದಿದ್ದರು .. ಆ ರಾತ್ರಿ  ಅಜಯ್  ಉಳಿದಿದ್ದ  ರೂಂ ಗೆ ಬಂದ  ಬೋರೆಗೌಡರು ಹಾಲು ಹಣ್ಣು ನೀಡಿ  ಬಹಳಷ್ಟು ವಿಚಾರ  , ಹಳ್ಳಿಯ ಹಿಂದಿನ ದಿನಗಳಿಗೂ ಇವತ್ತಿನ  ದಿನಗಳಿಗೂ ಆದ ಬದಲಾವಣೆಯ  ಸಂಪೂರ್ಣ ಮಾಹಿತಿ ನೀಡಿದರು,. "ಅಜಯಪ್ಪಾ  ನೀವು ಬೊ ವರ್ಸ ಯಾರೋ ಈ ಕಡಿಕೆ  ಬರ್ನೆ ಇಲ್ಲಾ , ಹತ್ತೊರ್ಸದ  ಹಿಂದೆ  ಮನೆ ಅಟ್ಟದ ಮ್ಯಾಲೆ ಒಂದು ತುಕ್ಕು ಹಿಡಿದ ಕಬ್ಬಿಣದ ಪೆಟ್ಟಿ [ ಪೆಟ್ಟಿಗೆ] ಸಿಕ್ತು" , "ಆದ್ರೆ ಅದರಲ್ಲಿ ಏನು ಐತೆ ಅಂತಾ  ನೋಡಿಲ್ಲಾ" , "ನೀಮೆ ಯಾರಾದ್ರು ಬಂದಾಗ  ಅದನ್ನು ತೆಗೆಯುಮಾ  ಅಂತಾ ಜ್ವಾಪಾನವಾಗಿ  ಮಡಗಿದ್ದೆ"  , "ಪುಣ್ಯ ನಾ ಬದುಕಿದ್ದಾಗಲೇ ಬಂದ್ರೀ "  ಅಂತಾ  ಹೇಳಿ   ತುಕ್ಕು ಹಿಡಿದ ಒಂದು ಕಬ್ಬಿಣದ ಪೆಟ್ಟಿಗೆ ತಂದಿಟ್ಟ ,  ಅಜಯ್ ಗೂ ಕೆಟ್ಟ ಕುತೂಹಲ  ಉಂಟಾಗಿ  , ಇಬ್ಬರೂ ಸೇರಿ ಪೆಟ್ಟಿಗೆ ತೆರೆಯಲು  ಪ್ರಯತ್ನಿಸಿದರೂ,  ತುಕ್ಕು ಹಿಡಿದ ಬೇಗ  , ಬೀಗದ ಕೈ ಇಲ್ಲದೆ  ತೆರೆಯಲು ಕಷ್ಟವಾಗಿ,ನಂತರ ಬಲವಂತದಿಂದ ಒಡೆದು ತೆಗೆದದ್ದಾಯಿತು. ತೆರೆದ ಪೆಟ್ಟಿಗೆ ಒಳಗೆ  ಹಲವು  ವರ್ಷಗಳ ಕೆಟ್ಟ ಗಾಳಿ ತುಂಬಿತ್ತು, ಒಂದಷ್ಟು  ಜಿರಳೆ ಗಳು  ಹರಿದಾಡಿದ್ದವು , ,ಅದರಲ್ಲಿ ಒಂದು ಪುಸ್ತಕ , ಬ್ಯಾಗು ಇತ್ಯಾದಿ ಕಂಡು ಬಂದವು,  ಅಂತಹ ಮುಖ್ಯವಾದದ್ದು ಕಂಡು ಬರಲಿಲ್ಲ,  ಪುಸ್ತಕ  ತೆರೆದರೆ ಅಜಯ್ ಅಪ್ಪ ಬರೆದಿದ್ದ ಡೈರಿ  ಆಗಿತ್ತು, ಅಪ್ಪನ ನೆನಪಿಗೆ ಇರಲಿ ಅಂತಾ ಅನ್ನಿಸಿತು, ಪುಸ್ತಕ  ಬಿಡಿಸುತ್ತಿದ್ದಂತೆ  ಒಂದೆರಡು ಫೋಟೋಗಳು  ಕೆಳಗೆ ಬಿದ್ದವು  ಕುತೂಹಲದಿಂದ  ಎತ್ತಿ ಕೊಂಡು  ನೋಡಿದೆ  ಅಚ್ಚರಿ ಬಾಲ್ಯದಲ್ಲಿ  ತೆಗೆದ  ಆ ಫೋಟೋಗಳು  ಅಜಯ್ ಅದನ್ನು ತೆಗೆದಿಟ್ಟು ಕೊಂಡ , ಉಳಿದ ಯಾವುದು ಅಂತಹ ಮುಖ್ಯ ಅನ್ನಿಸದ ಕಾರಣ  ಅವುಗಳನ್ನು  ವಿಲೇವಾರಿ  ಮಾಡಲಾಯಿತು .  ಬೋರೆಗೌಡ ರು ತಾವು  ಬಂದ  ಕೆಲಸ ಆಯಿತು ಅಂತಾ  ಹೊರಟರು .

ರಾತ್ರಿ ರೂಂ ನಲ್ಲಿ ಮಲಗುವ ಮೊದಲು  ಅಪ್ಪನ ಡೈರಿ  ಓದತೊಡಗಿದ  ಅಪ್ಪನ ತ್ಯಾಗದ  ಪರಿಚಯ ಸಿಕ್ಕಿತು, ಅವರಿಂದ ಸಹಾಯ ಪಡೆದ  ಚಿಕ್ಕಪ್ಪ, ಅತ್ತೆ , ಎಲ್ಲರೂ ಕೈಕೊಟ್ಟು  ಮಾಡಿದ ಮೋಸದ ದರ್ಶನ ಸಿಕ್ಕಿತು.  ಅದರೊಳಗೆ ಕಂಡ ಫೋಟೋ ನೋಡತೊಡಗಿದ  ಆ ಹೌದು ಅವಳೇ , .......    ಅವಳು ..... ತೇಜಸ್ವಿನಿ .

ತೇಜಸ್ವಿನಿ ,   ಅಜಯ್  ಸೋದರಮಾವನ ಮಗಳು  ಪ್ರತೀವರ್ಷ ಬೇಸಿಗೆ ರಜೆಯಲ್ಲಿ ಈ  ಹಳ್ಳಿಗೆ   ಬರುತ್ತಿದ್ದಳು,  ಅಜಯ್ ಹಾಗು ಇವಳಿಗೆ ಚಿಕ್ಕಂದಿನಿಂದ   ಬಾಲ್ಯದ  ಒಡನಾಟ ಇತ್ತು.   ಇವನೂ ಸಹ ದಸರಾ ರಜೆಯಲ್ಲಿ ಅವಳಿದ್ದ ಪಟ್ಟಣಕ್ಕೆ  ಹೋಗಿ ಅವರ ಮನೆಯಲ್ಲಿ ಉಳಿಯುತ್ತಿದ್ದ ,  ಇವರಿಬ್ಬರು ಒಂದೇ ವಯಸ್ಸಿನವರಾಗಿದ್ದು  ಒಂದೇ ತರಗತಿಯಲ್ಲಿ ಓದುತ್ತಿದ್ದರು , ಅವಳು ಪಟ್ಟಣದಲ್ಲಿ, ಇವನು ಪಕ್ಕದ ಪಟ್ಟಣದಲ್ಲಿ  ಹತ್ತನೇ ಪ್ರೌಡಶಾಲೆ ಯಲ್ಲಿ ಕಲಿಯುತ್ತಿದ್ದರು.    ಹಳ್ಳಿಗೆ ಬಂದಾಗ ಇವನು ಅವಳನ್ನು ತನ್ನ ಸೈಕಲ್ ನಲ್ಲಿ ಕುಳ್ಳರಿಸಿಕೊಂಡು  ಗದ್ದೆ,  ತೋಟ , ಮುಂತಾದ ಕಡೆ ಓಡಾಡಿಸುತ್ತಿದ್ದ , ಅವಳು ಬಂದಾಗ ಇಬ್ಬರು ಮಕ್ಕಳಿಗೂ ಹೊಸ ಬಟ್ಟೆ ತರುವ ಕೆಲಸ ಅಜಯ್ ಅಪ್ಪನದಾಗಿತ್ತು. ಹೀಗೆ ಕಳೆದಿತ್ತು ಬಾಲ್ಯ, ಒಮ್ಮೆ ಅವಳು  ಬೇಸಿಗೆ ರಜಕ್ಕೆ ಬಂದವಳೇ  "ಲೇ ಬಾರೋ  ಅಜಯ್  ನಿಮ್ಮ  ಗದ್ದೆ ಕಡೆ ಹೋಗಿ ಬರೋಣ"  ಅಂತಾ  ಕರೆದಳು , ಅಜಯ್ "ತಾಯಿ ಲೋ ಹುಷಾರಾಗಿ ಕರೆದುಕೊಂಡು  ಹೋಗಿ ಬಾ  ಅಂತಾ ಸೈಕಲ್ಲಿನ ಕೀ ಕೊಟ್ಟರು . ಇಬ್ಬರ  ಸವಾರಿ  ಗದ್ದೆ ಕಡೆಗೆ ಹೊರಟಿತು, ದಾರಿಯಲ್ಲಿ ಸಿಕ್ಕ ಸೀಬೆ ಹಣ್ಣು, ಕಬ್ಬು . ನೇರಳೆ ಹಣ್ಣು , ಅಲ್ಲೇ ಇದ್ದ  ನೀರಿನ ಕಾಲುವೆ  ಇವೆಲ್ಲವನ್ನೂ ನೋಡಿ ಹರುಷ ಗೊಂಡ ಅವಳು,  "ಲೋ ಅಜಯ್   ನಿಂಗೆ ನನ್ನ ನೋಡಿದ್ರೆ ಏನು ಅನ್ನಿಸುತ್ತೆ ಅಂದಳು "  ಅಜಯ್" ಏನೇ ಹಾಗಂದ್ರೆ  , ನನಗೆ ಅರ್ಥ ಆಗಲಿಲ್ಲ,"  ಅಂದಾ . ಲೋ ಅಜಯ್  ನಿನ್ನ ಕಂಡ್ರೆ ನನಗೆ ಇಷ್ಟಾ ಕಣೋ,  ಮುಂದೆ ನಾವಿಬ್ಬರು ದೊಡ್ಡವರಾದ ಮೇಲೆ  ಮದುವೆ  ಆಗೋಣ  ಅಂದಳು ,  ಇವನು ಅವಳನ್ನು ಎಂದೂ ಅದೃಷ್ಟಿ ಯಲ್ಲಿ ಎಂದೂ ನೋಡಿರಲಿಲ್ಲ,   ಈ ಮಾತು ಕೇಳಿ ಮೌನವಾದ , ಆ ಮೇಲೆ  ಅವಳ  ಬಗ್ಗೆ  ಆಸಕ್ತನಾದ , [ ಈ ವಯಸ್ಸಿನಲ್ಲಿ ಪ್ರೀತಿ ಹುಟ್ಟೋದಿಲ್ಲ , ಆಕರ್ಷಣೆ ಅಷ್ಟೇ ] , ಇಬ್ಬರು ಕೈ ಹಿಡಿದು ಬಹಳಷ್ಟು ವಿಚಾರ ಮಾತನಾಡಿದರು, ಆದ್ರೆ ಮೊದಲಿದ್ದ  ಸಲಿಗೆ  ಕಡಿಮೆ ಯಾಯಿತು.  ಪ್ರೌಡ ಶಾಲೆ ಮುಗಿಸಿ, ಕಾಲೇಜಿಗೆ  ಬರುವಷ್ಟರಲ್ಲಿ  ಎರಡು ಕುಟುಂಬಗಳ ಮಧ್ಯೆ  ತಲೆದೋರಿದ  ವೈಮನಸ್ಸು   ದೊಡ್ಡವರ  ಸಂಬಂಧಕ್ಕೆ ಹುಳಿ ಹಿಂಡಿತ್ತು .. ಎರಡು ಕುಟುಂಬಗಳು  ದೂರವಾದವು .

ಅಜಯ್  ಕಾಲೇಜು ಮುಗಿಸಿ  ಜೀವನದಲ್ಲಿ ಬಹಳಷ್ಟು ಕಷ್ಟ ಎದುರಿಸಿ , ನೆಂಟರ  ಸಹಾಯವಿಲ್ಲದೆ  ಕಷ್ಟಪಟ್ಟು ತಾನೇ ಜೀವನದಲ್ಲಿ ನೆಲೆ ಕಂಡುಕೊಂಡ . ಬಹಷ್ಟು ವರ್ಷ ಆಗಿತ್ತು,  ಈ ಘಟನೆ ನಡೆದು,  ರೂಂ ನಲ್ಲಿ ನೋಡಿದ ಆ ಫೋಟೋಗಳು  ಗತ ಕಾಲದ  ನೆನಪಿನ  ಮೂಟೆಗಳನ್ನು ಗುಡ್ಡೆ ಹಾಕಿದ್ದವು, ಆ ರೂಂ ನಲ್ಲಿ ಕುಳಿತು ಆ ಫೋಟೋ ನೋಡುತ್ತಾ  ನೋಡುತ್ತಾ  ಅಜಯ್ ಕಣ್ಗಳಲ್ಲಿ
ಕಣ್ಣೇರು ಬರುತ್ತಿತ್ತು,  ಯಾಕೋ ಈ ಊರಿನಲ್ಲಿ ಇರೋದು ಬೇಡ ಅನ್ನಿಸಿ, ಮಾರನೆಯ ದಿನ ಮುಂಜಾವಿಗೆ ವಾಪಸ್ಸು ಹೊರಟು ಬಿಟ್ಟ , ಮನೆಗೆ ಬಂದವನೇ  ಅಜಯ್ ತನ್ನ ರೂಂ ಸೇರಿ ಹಾಗೆ ಮಂಚದ ಮೇಲೆ ಉರುಳಿದ ಪತ್ನಿ ಸವಿತಾ  ಕಾಫಿ ಯೊಂದಿಗೆ ಪ್ರತ್ಯಕ್ಷಳಾಗಿ, "ಯಾಕ್ರೀ  ಸುಸ್ತಾಗಿದ್ದೀರ  ತಗೋಳಿ ಕಾಫಿ", ಅಂತಾ ಕಾಫಿ ಕೊಟ್ಟು, ರಮಿಸಿ,  ಮನಸಿನ ದುಗುಡ ಕಡಿಮೆ ಮಾಡಿದಳು . ಆನಂತರ "ನೋಡಿ ನಿಮಗೆ ಒಂದು ಲಗ್ನ ಪತ್ರಿಕೆ  ಬಂದಿದೆ" , "ನಿಮ್ಮ  ಗೆಳೆಯನ ಮಗಳ ಮದುವೆಯಂತೆ " ಅನ್ನುತ್ತ   ಕೈಗಿತ್ತಳು .  ಗೆಳೆಯನ ಮಗಳ ಮದುವೆಗೆ ಎರಡು ದಿನ ಮುಂಚಿತವಾಗಿಯೇ  ಹೊರಡಲು  ನಿರ್ಧಾರ ಮಾದಿದೆವು.

ಗೆಳೆಯನ ಮಗಳ ವಿವಾಹ ಸಂಭ್ರಮ  ಜೋರಾಗಿತ್ತು,  ಮೊದಲೆಲ್ಲಾ ಮದುವೆಗಳಲ್ಲಿ ಮೊದಲು  ವರ ಪೂಜೆ, ಮಾರನೆಯ ದಿನ ಧಾರೆ , ನಂತರ  ಆರತಕ್ಷತೆ  ಇತ್ತು,  ಆದರೆ ಈಗ  ಬದಲಾಗಿ  ಎಲ್ಲ ಮದುವೆಗಳಂತೆ  ಈ ಮದುವೆಯಲ್ಲಿ ಮೊದಲೇ ಆರತಕ್ಷತೆ  ಇಂದ  ಕಾರ್ಯ ಪ್ರಾರಂಭ ವಾಯಿತು. ಬಂದ  ಗಣ್ಯರನ್ನು ಸ್ವಾಗತಿಸಿದ ಗೆಳೆಯನಿಗೆ ಆಸರೆಯಾಗಿ ಅಜಯ್ ನಿಂತಾ ,  ಆಗಮಿಸಿದ ಅತಿಥಿಗಳಿಗೆ ಸತ್ಕಾರ ಮಾಡುವ ಕಾರ್ಯ ಅವನಾದಾಗಿತ್ತು   ಒಬ್ಬೊಬ್ಬರಾಗಿ ಆಗಮಿಸಿದ ಆಹ್ವಾನಿತರನ್ನು   ಸ್ವಾಗತಿಸಿ ಸೌಲಭ್ಯ ನೀಡಿದ್ದಾಯಿತು, ಗೆಳೆಯ ಕೂಡ  ಹರುಷಗೊಂಡು  ಅಜಯ್ ನನ್ನು  ಹೊಗಳಿದ , ಎಲ್ಲಾ ಕಾರ್ಯ ನಡೆಯುತ್ತಿತ್ತು, ವೇದಿಕೆ ಯಲ್ಲಿ   ನವ ವಧುವರರು   ಸಂಭ್ರಮದಲ್ಲಿ ಮುಳುಗಿದ್ದರು.  ಅಜಯ್ ಹಾಗು ಗೆಳೆಯ  ಒಂದೆಡೆ ಕುಳಿತು  ನೋಡುತ್ತಿದ್ದರು, ಆಗ ಅಜಯ್ ಗೆಳೆಯ  , ಲೋ ಅಲ್ನೋಡು ಅವರನ್ನು ನಾವು ಮಾತನಾಡಿಸಿಯೇ ಇಲ್ಲಾ  ಬಾ ಮಾರಾಯ  ಅಂತಾ  ಅಜಯ್ ನನ್ನು ಎಳೆದುಕೊಂಡು  ಓಡಿದ , ಆ ದಂಪತಿಗಳ  ಹತ್ತಿರ ಬಂದವನೇ "ಹಲೋ ಮಿಸ್ಟರ್ ಭೂಷಣ್,    ಸಾರಿ ನಿಮ್ಮನ್ನು ಗಮಸಿರಲಿಲ್ಲ," ಅಂತಾ ಹೇಳಿ, "ಬನ್ನಿ ಬನ್ನಿ ಅಂತಾ ಉಪಚರಿಸಿ," "ಬಾ ಅಜಯ್ ಇವರ ಪರಿಚಯ ಮಾಡುತ್ತೇನೆ ಅಂತಾ ಹೇಳಿ ಇವರು ಭೂಶಣ್"  ಅಂತಾ  , "ಪಕ್ಕದಲ್ಲಿ ಇರುವವರು  ತೇಜಸ್ವಿನಿ  ಇವರ ಪತ್ನಿ,"  ಇಬ್ಬರು  "ಮೇಡ್  ಫಾರ್ ಈಚ್  ಅದರ್"    "ಇವನು ನನ್ನ ಆತ್ಮೀಯ ಗೆಳೆಯ  ಅಜಯ್"  ಎಂದು ಪರಿಚಯ ಮಾಡಿದ , ಇಬ್ಬರತ್ತ ಕೈಮುಗಿದ  ಅಜಯ್ ಬೆವತು ಹೋದ  , ಬಾಲ್ಯದಲ್ಲಿ ಕಳೆದು ಹೋಗಿದ್ದ   ತೇಜಸ್ವಿನಿ  ಇಲ್ಲಿ ಪ್ರತ್ಯಕ್ಷ ಆಗಿದ್ದಳು, ಆದರು ತೋರಿಸಿಕೊಳ್ಳದೆ ಯಾಂತ್ರಿಕವಾಗಿ  ಅವರನ್ನು ಉಪಚರಿಸಿದ.

ಗೆಳೆಯನ ಮಗಳ  ವಿವಾಹ ಸಂಭ್ರಮ ನಡೆದಿತ್ತು, ಬೆಳಿಗ್ಗೆ ಉಪಹಾರ ವ್ಯವಸ್ಥೆಯ  ನಿರ್ವಹಣೆ ಅಜಯ್ ನೋಡಿಕೊಳ್ಳುತ್ತಿದ್ದ , ಆಗ ಬಂದ ಭೂಷಣ್ ಆತ್ಮೀಯವಾಗಿ ಬನ್ನಿ ಅಜಯ್  ನಮ್ಮ ಜೊತೆ ಕಂಪನಿ ಕೊಡಿ ಎಂದು ಬಲವಂತ ಮಾಡಿ ಜೊತೆಯಲ್ಲಿ ಉಪಹಾರಕ್ಕೆ ಕುಳಿತರು, ಜೊತೆಯಲ್ಲಿ ತೇಜಸ್ವಿನಿ  ಕೂಡ ಬಂದಳು, ಉಪಹಾರ  ಮಾಡುತ್ತಾ ಪರಸ್ಪರ ಪರಿಚಯ ವಾಯಿತು,  ಆದರೆ ತೇಜಸ್ವಿನಿ ಒಂದೂ ಮಾತನಾಡಲಿಲ್ಲ,  ಸ್ವಲ್ಪ ಸಮಯದ ನಂತರ  ತೆರಳಿದ   ಅವರು ವಿವಾಹ ಕಾರ್ಯದಲ್ಲಿ ಮುಳುಗಿಹೋದರು,

ಧಾರೆ ಯಾಯಿತು, ಎಲ್ಲರೂ ಗಡಿಬಿಡಿ ಯಾಗಿ ಓಡಾಡುತ್ತಿದ್ದರು,  ಅಜಯ್ ಅಲ್ಲೇ  ಊಟದ ವ್ಯವಸ್ಥೆ  ಮಾಡುತ್ತಿದ್ದ, ಅಲ್ಲಿಗೆ ಬಂದಳು ತೇಜಸ್ವಿನಿ , "ನಾನು ಯಾರು ಗುರುತು ಸಿಕ್ತೇನೋ  ನಿನಗೆ"  ನೀನು ಅಜಯ್ ಆಲ್ವಾ, ಸಾರಿ ನಿನ್ನೊಡನೆ ಸರಿಯಾಗಿ ಮಾತನಾಡಲು ಆಗ್ತಿಲ್ಲ,   ನನ್ನ ಮೊಬೈಲ್ ನಂಬರ್ ತಗೊ. ನಿನ್ನ ನಂಬರ್ ಕೊಡು   ನಾಳೆ ಸಿಗು ನಿನ್ನಲ್ಲಿ ಸ್ವಲ್ಪ ಮಾತನಾಡಬೇಕು  ಅಂದಳು .

ವಿವಾಹ ಕಾರ್ಯ ಮುಗಿಯಿತು, ಮಾರನೆಯ ದಿನ  ಬೀಗರ ಔತಣ  ಪೂಜೆ ಇತ್ಯಾದಿ  ನಡೆದಿತ್ತು,  ಅವಳ ಫೋನ್ ಬಂತು  , ಸರಿ  ಅಂತಾ ಆ ದೇವಾಲಯದ ಹತ್ತಿರ ಹೊರಟ ,  ದೇವಾಲಯದಲ್ಲಿ ಸಿಕ್ಕ ಅವಳು    ಬಾ ಆ ಬಂಡೆಯ ಮೇಲೆ ಕುಳಿತು ಮಾತನಾಡೋಣ  ಅಂದಳು,  ಬಂಡೆಯ ಮೇಲೆ ಕುಳಿತ ಇಬ್ಬರು ಗತಕಾಲಕ್ಕೆ  ಜಾರಿದರು, ಏನೋ ನಿನ್ನ ಸಮಾಚಾರ  , ಇಷ್ಟು ವರ್ಷ ಎಲ್ಲಿಗೆ  ಹೋಗಿದ್ದೆ,  ನಾನಂತೂ  ನಿನ್ನ ನೋಡುವ ಆಸೆಯಿಂದ ಇಷ್ಟು ವರ್ಷ ಕಳೆದೆ , ತಪ್ಪು ತಿಳುವಳಿಕೆಯಿಂದ ಆದ ಆ ಘಟನೆ ನಮ್ಮಿಬ್ಬರ  ಮೆನೆಯವರನ್ನು ದೂರ ಮಾಡಿದೆ,  ಆ ಮೇಲೆ ಸತ್ಯ ತಿಳಿಯುವಷ್ಟರಲ್ಲಿ,  ನನ್ನ  ಮದುವೆ ಆಗಿ ಹೋಗಿತ್ತು, ಆದರೂ ನಿನ್ನ ನೆನಪಲ್ಲಿ  ಕೊರಗಿದೆ ನಾನು,  ಬಾಲ್ಯದಲ್ಲಿ  ನಮ್ಮಿಬ್ಬರ  ಒಡನಾಟದ ಸುಂದರ ಕ್ಷಣಗಳನ್ನು ಮೆಲುಕು ಹಾಕಿ  ಕಣ್ಣಲ್ಲಿ ನೀರು ಹಾಕಿದಳು , "ಸಾರಿ ಕಣೋ ನಿನ್ನ ಪಡೆಯುವ  ಭಾಗ್ಯ ನನ್ನದಾಗಲಿಲ್ಲ,""  ಆದರೆ ನನ್ನ ಗಂಡನಿಗೆ ಒಳ್ಳೆಯ ಪತ್ನಿಯಾಗಲು ಸಾಧ್ಯವಾಗುತ್ತಿಲ್ಲ", "ನಿನ್ನ ಕೊರಗು ನನ್ನನ್ನು ಕಾಡುತ್ತಿದೆ" , "ಯಾಕಂದ್ರೆ ನಿನ್ನಲ್ಲಿ ಪ್ರೀತಿಯ  ಗಿಡ  ನೆಟ್ಟವಳು  ನಾನು" , "ಅದನ್ನು ಸಾಯಿಸಿದ  ಪಾಪ ನನ್ನನ್ನು  ಕಾಡುತ್ತಿದೆ"  ,  ಎಂದು ಅಳುತ್ತಾ  ಅಜಯನ ಭುಜಕ್ಕೆ ಒರಗಿದಳು,  ಅವಳ ಕಣ್ಣೀರಿನಿಂದ  ಅವನ ಭುಜ ಒದ್ದೆಯಾಯಿತು, ಮನದಲ್ಲಿ  ಸಂಕಟದ ಬೆಂಕಿ ಹತ್ತಿ ಉರಿಯುತ್ತಿತ್ತು.

 ಸ್ವಲ್ಪ ಹೊತ್ತು ಮೌನ ನಂತರ  ಮತ್ತಷ್ಟು ಮಾತು  ಇವುಗಳ  ಜುಗಲ್ಬಂದಿ ನಡೆಯಿತು,  ಅಜಯ್  ಒಂದು ಕ್ಷಣ  ಯೋಚಿಸಿ,  ಮಾತನಾಡಲು  ಹೊರಟ   ಆದರೆ ಬಾಯಲ್ಲಿ ಮಾತುಗಳು ಬರುತ್ತಿಲ್ಲ,  ಇವಳ ಮಾತು ಕೇಳಿ ಇವಳ ಜೊತೆ ನಡೆದರೆ, ಅವಳ ಸಂಸಾರ ಹಾಳಾಗುತ್ತದೆ, ಜೊತೆಗೆ ತನ್ನನ್ನೇ ನಂಬಿ ಪ್ರೀತಿಸಿ ಬಂದಿರುವ ಸವಿತಾ  ಬಾಳು  ಹಾಳಾಗುತ್ತದೆ , , ಈಗ ದುಡುಕಿದರೆ  ನರಕ ದ ಬದುಕು ಇಬ್ಬರದಾಗುತ್ತದೆ ಎಂದು ಯೋಚಿಸಿ,  "ತೇಜಸ್ವಿನಿ,  ನೋಡು ನೀನು ಸಿಕ್ಕಿದ್ದು ಬಹಳ ಸಂತೋಷ ,"  "ನೀನೀಗ ಭೂಷಣ್ ರ ಪತ್ನಿ,"   "ಭೂಷಣ್  ತುಂಬಾ ಒಳ್ಳೆಯ ವ್ಯಕ್ತಿ, "  "ನನ್ನ ನೆನಪಿನಲ್ಲಿ ಅವರಿಗೆ ಅನ್ಯಾಯ ವಾದರೆ  ಅದು ನೀನು ನನಗೆ ಬಗೆಯುವ ದ್ರೋಹ ವಾಗುತ್ತದೆ" , "ಜೊತೆಗೆ ನನ್ನ ಕಷ್ಟದ ದಿನಗಳಲ್ಲಿ ಜೊತೆಯಾಗಿ  ನಡೆದು ಬಂದ ನನ್ನ ಪ್ರಿಯ ಪತ್ನಿ  ಸವಿತಾ ಬಾಳು  ಸಹ ನಿನ್ನ ದುಡುಕು ನಿರ್ಧಾರದಿಂದ  ಹಾಳಾಗುತ್ತದೆ" , "ಇದಕ್ಕೆ ನಾವಿಬ್ಬರೂ ಅಪಾರ ಬೆಲೆ ತೆರಬೆಕಾಗುತ್ತದೆ ", "ನೀನು ತುಂಬಾ ಒಳ್ಳೆಯವಳು,"  "ಆವೇಶದ ನಿರ್ಧಾರ ಒಳ್ಳೆಯದಲ್ಲ",  "ನಾವಿಬ್ಬರು ಒಳ್ಳೆಯ ಗೆಳೆಯರಾಗೋಣ",  "ಪರಸ್ಪರ ಗೌರವ ಇಟ್ಟುಕೊಳ್ಳೋಣ, "  " ಬಾಲ್ಯದ ನೆನಪುಗಳು  ಅಮರವಾಗಿ ಉಳಿಯಲಿ",    "ನಿನ್ನ ಕುಟುಂಬ  ಚೆನ್ನಾಗಿ ನಿರ್ವಹಿಸಿದರೆ ನೀನು ನನ್ನ  ನೆನಪುಗಳಿಗೆ ಗೌರವ ಕೊಟ್ಟಂತೆ " , "ತೇಜಸ್ವಿನಿ ಪ್ಲೀಸ್  ನನ್ನ ಗೆಳತಿಯಾಗಿ  ನನ್ನ ನೆನಪಾಗಿ ಉಳಿದುಕೊ  ಭೂಷಣ್  ರಿಗೆ ಒಳ್ಳೆಯ ಸತಿಯಾಗು ನಿನ್ನ ಸಂಸಾರದಲ್ಲಿ  ಸುಖ ಶಾಂತಿ ನೆಲಸಲಿ"   , "ನಿನಗೆ ಒಳ್ಳೆಯದಾಗಲಿ,  " ಎಂದಾ,
 ತೇಜಸ್ವಿನಿ ಇವನ ಮಾತು ಕೇಳಿ  ಮತ್ತೆ ಮೌನದ ಮೊರೆ ಹೋದಳು , ಸ್ವಲ್ಪ ಸಮಯದನಂತರ ಯೋಚಿಸಿ , ಅಜಯ್ ನೀನಿಷ್ಟು  ವಿಸ್ತಾರವಾಗಿ ಯೋಚಿಸಿದ್ದು  ಒಳ್ಳೆಯದಾಯಿತು, ನಿನ್ನ ಬಗ್ಗೆ ಗೌರವ ಜಾಸ್ತಿಯಾಯಿತು,   ನಿನ್ನ ಮಾತಿಗೆ ಬೆಲೆ ಕೊಡುತ್ತೇನೆ,  ಭೂಷಣ್  ಗೆ ಒಳ್ಳೆಯ ಸತಿಯಾಗುತ್ತೇನೆ,  ನಮ್ಮಿಬ್ಬರ ಬಾಲ್ಯದ ಸುಂದರ ನೆನಪುಗಳಿಗೆ  ಬಹುಮಾನವಾಗಿ ನಿನ್ನ ಕೋರಿಕೆಯಂತೆ ಬಾಳುತ್ತೇನೆ,ಅಂದಳು

ಅತ್ತಕಡೆ ದೇವಾಲಯದಲ್ಲಿ ದೇವರಿಗೆ ಮಂಗಳಾರತಿ ಆಗುತ್ತಿತ್ತು, ಇತ್ತ ಇವರಿಬ್ಬರ  ಬಾಳಿನಲ್ಲಿ ಹೊಸ ಮನ್ವಂತರ  ಶುರು ಆಗಿತ್ತು.

ಬಾಲ್ಯದನೆನಪಿನಲ್ಲಿ ಬದುಕೋಣ ಬಾ
..

Sunday, August 18, 2013

"ಐ ಲವ್ ಯೂ" ಅಂದಾ ಆ ಹುಡುಗ ತಲುಪಿದ್ದು ..................... !!

{ಈ ಚಿತ್ರಕ್ಕೆ ಮಾಲಿಕರ ಅನುಮತಿ ಪಡೆಯಲಾಗಿದೆ }


ಇಲ್ಲೊಂದು ಕಥೆ ಇದೆ ,  ಸುಮಾರು  ಇಪ್ಪತೈದು ವರ್ಷಗಳ  ಹಿಂದೆ ನಡೆದ ಕಥೆ  ಇದು , ಇದರ  ನಾಯಕ  ಪ್ರತಾಪ್ ,  ನಮ್ಮ ನಾಯಕನ ಪರಿಚಯ ಮಾಡಿಕೊಳ್ಳೋಣ ಬನ್ನಿ , ಇದು ಕೆಲವು ವರ್ಷಗಳ ಹಿಂದೆ ಪ್ರತಾಪ್ ಇದ್ದ  ಒಂದು ಚಿತ್ರಣ
"ಪ್ರತಾಪ್  ಒಂದು ಮಧ್ಯಮ ವರ್ಗದ ಕುಟುಂಬದ ಹುಡುಗ, ತಂದೆ  ಇಲ್ಲಾ,ತಾಯಿಯ ಆಸರೆ , ಅಮ್ಮ ತರುವ ಅಲ್ಪ ಸಂಬಳ  ಆ ಮನೆಯ ಆದಾಯ. ಇನ್ನು ಈ ಹುಡುಗ ಪಿ .ಯೂ .ಸಿ. ಯಲ್ಲಿ   ಡುಮ್ಕಿ ಹೊಡೆದು ಡ್ರಾಪ್ ಔಟ್ ,ಆಗಿದ್ದ ಹುಡುಗ . ನಂತರ ಯಾವುದೋ ಖಾಸಗಿ ಹಣಕಾಸು ಸಂಸ್ಥೆಯಲ್ಲಿ  ಏಜೆಂಟ್ ಆಗಿ ಕೆಲಸಕ್ಕೆ ಹೋಗುತ್ತಿದ್ದ  . ಇವನಿಗೆ ಒಬ್ಬ ಅಕ್ಕನಿದ್ದು  ಅವಳು ಹೆರಿಗೆಗಾಗಿ  ಆಸ್ಪತ್ರೆ ಸೇರಿದ್ದಳು , ಇನ್ನು ನಮ್ಮ ಹೀರೋ  ಕೆಲಸ  ಸಧ್ಯಕ್ಕೆ ಪ್ರತೀ ದಿನ ಮಧ್ಯಾಹ್ನ   ತನ್ನಮನೆ ಇರುವ  ಸ್ವಪ್ನ ನಗರದಿಂದ  ಬಸ್ಸಿನಲ್ಲಿ ತೆರಳಿ  ವೈಭವಿ  ಚಿತ್ರಮಂದಿರದ  ಬಳಿ ಇದ್ದ  ಹೆರಿಗೆ ಆಸ್ಪತ್ರೆಗೆ  ಊಟ ಕೊಂಡೊಯ್ಯುವುದಾಗಿತ್ತು , ನಮ್ಮ ಹೀರೋ ಕೂಡ ಈ ಕೆಲಸವನ್ನು ಶ್ರದ್ಧೆ ಯಿಂದ ಮಾಡುತ್ತಿದ್ದ  ಹೀಗಿರಲು ಒಂದು ದಿನ ..... !ಬನ್ನಿ ಫ್ಲಾಶ್ ಬ್ಯಾಕಿಗೆ ಹೋಗೋಣ .
{ನಮ್ಮ ಹೀರೋ ಕಾಲದಲ್ಲಿ ಮೊಬೈಲ್ ಇರಲಿಲ್ಲ, ಇಷ್ಟೊಂದು ತಾಂತ್ರಿಕತೆ  ಆ ಪೀಳಿಗೆಗೆ ಪರಿಚಯ ಆಗಿರಲಿಲ್ಲ   ಹಾಗಾಗಿ ನೀವೀಗ ಕಾಣುತ್ತಿರುವ ಜೀವನ ಶೈಲಿಗೆ  ಈ ಕಥೆ ಹೊಂದಾಣಿಕೆ  ಆಗದಿರಬಹುದು . }




ಆಸ್ಪತ್ರೆಗೆ ಊಟ ಕೊಟ್ಟು ವಾಪಸ್ಸು ಬರಲು  ವೈಭವಿ ಚಿತ್ರಮಂದಿರದ  ಬಳಿ ಇದ್ದ ಬಸ್ ನಿಲ್ದಾಣದಲ್ಲಿ  ಕಾಯುತ್ತಿದ್ದ, ಆದರೆ ಬರಬೇಕಾದ ಬಸ್ ನಾಪತ್ತೆ ಯಾಗಿತ್ತು, ಕಾಯುತ್ತಾ ಕಾಯುತ್ತಾ  ಅಡ್ಡಾಡುತ್ತಿದ್ದ  ಅವನಿಗೆ  ಎದುರುಗಡೆ ಯಿಂದ   ಒಬ್ಬ ಬಾಬ್ ಕಟ್ ಹುಡುಗಿ ಬರುತಿದ್ದಳು , ವಯಸ್ಸಿನ ಸಹಜ ವಾಗಿ ಆ ಹಾ ಸುಂದರವಾಗಿದ್ದಾಳೆ ಅಂದು ಕೊಂಡ , ಅಷ್ಟರಲ್ಲಿ ಬಸ್ ಬಂತು ಹತ್ತಿ ಮನೆಕಡೆಗೆ ಜಾರಿದ, ಆದರೆ ಆ  ಹುಡುಗಿ  ಮುಖ  ಪದೇ  ಪದೆ ಜ್ಞಾಪಕಕ್ಕೆ ಬರುತ್ತಿತ್ತು, ಹಾಗೂ ಹೀಗೂ ಆ ದಿನ ಕಳೆಯಿತು , ಹೀಗೆ ಒಂದೆರಡು ದಿನ ಕಳೆಯಿತು,  ಪ್ರತಿ ನಿತ್ಯ ಆ ಹುಡುಗಿಯ ದರ್ಶನ ಆಗುತ್ತಿತ್ತು, ಆದರೆ ಹುಡುಗನ ಮನಸು ಆ ಹುಡುಗಿಯ ಸೆಳೆತಕ್ಕೆ ಮನಸೋತಿತ್ತು, ಅದಕ್ಕಾಗಿ ಅವಳ ಬಗ್ಗೆ ವಿಚಾರ ಕಲೆಹಾಕಲು  ಅಡ್ಡಾಡಿದ  , ಒಂದಷ್ಟು ಮಾಹಿತಿ ಸಿಕ್ಕಿತು,  ಅವಳ ಗಮನ ಸೆಳೆಯಲು ಹಿಂದೆ ಮುಂದೆ  ಸುತ್ತಲು ಶುರು ಮಾಡಿದ , ಅವಳ ನೆನಪಲ್ಲಿ  ಕನಸುಗಳ ಸಾಮ್ರಾಜ್ಯ ಕಟ್ಟಿದ . ಆದರೆ ಆ ಹುಡುಗಿಗೆ ಇದ್ಯಾವುದೂ ಗೊತ್ತಿರಲಿಲ್ಲ,

ಆದರೆ ಅವಳ ಗೆಳತಿ  ಮಮತಾ  ಇದನ್ನು ಗಮನಿಸಿ ಹೇಳಿದಳು ."ಲೇ ನೋಡೇ ನಿನಗೆ ಒಬ್ಬ ಸುಂದರ ಹುಡುಗ  ಪ್ರಪೋಸ್ ಮಾಡಲು ಹಿಂದೆ ಬಿದ್ದಿದ್ದಾನೆ" , "ಪಾಪ  ನೋಡಿದ್ರೆ ಅಯ್ಯೋ ಅನ್ನಿಸುತ್ತದೆ " , ನಾನಾಗಿದ್ರೆ ....!!! ಅಂತಾ ರಾಗ  ತೆಗೆದಳು . ಅವನ ಕಡೆ ನೋಡಿದ ಆ ಹುಡುಗಿ  "ಹೂ ಕಣೆ ಪರವಾಗಿಲ್ಲ"'  "ಆದ್ರೆ   ಇವನಿಗೆ ನನ್ನ ಸಾಕುವಷ್ಟು ಹಣ ಇದೆಯೋ ಇಲ್ಲವೋ ಗೊತ್ತಿಲ್ಲ ", "ಬೇಕಾದ್ರೆ  ನೀನು  ಅವನನ್ನು ಒಪ್ಪಿಕೊ" "ನನ್ನ ಅಭ್ಯಂತರ ಇಲ್ಲಾ"  ಅಂದು ನಗುತ್ತಾ ಸುಮ್ಮನಾದಳು . ಅವಳೇ ನಮ್ಮ ಕಥೆಯ ನಾಯಕಿ "ಸ್ಪಂದನ" ಇವಳೂ ಸಹ  ಈಗ ದ್ವಿತೀಯ  ಪಿ. ಯೂ .ಸಿ ಓದುತ್ತಿದ್ದಾಳೆ, ಮನೆಯಲ್ಲಿ ಅಪ್ಪಾ ಬಹಳ ಶಿಸ್ತಿನ ಮನುಷ್ಯ , ಅಮ್ಮಾ ಬಹಳ ಮ್ರುದು. ಹಾಗಾಗಿ ಅಪ್ಪನ ಅಮ್ಮನ ಮುದ್ದಿನ ಮಗಳು ಇವಳು .

"ಸ್ಪಂದನ" ಳ  ಹಿಂದೆ ಬಿದ್ದ ನಮ್ಮ "ಪ್ರತಾಪ"   ಅವಳಲ್ಲಿ ಪ್ರೀತಿ ನಿವೇದನೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದ , ಯಾಕೋ ಕಾಣೆ  ಇವತ್ತು ಅವಳನ್ನು ಮಾತನಾಡಿಸಿಯೇ ಸಿದ್ದ ಎಂದು ಹೊರಟರೆ , ಅವಳು ಎದುರು  ಬಂದೊಡನೆ  ಎದೆ ಬಡಿತ ಜೋರಾಗಿ  ಬಾಯಲ್ಲಿ ನೀರೆಲ್ಲಾ ಒಣಗಿ ಮಾತಾಡಲು ಸ್ವರವೇ  ಹೊರಡುತ್ತಿರಲಿಲ್ಲ .  ಈ ದಿನಗಳಲ್ಲಿ ಅಂತಹ ಸಮಸ್ಯೆ ಇಲ್ಲಾ ಬಿಡಿ, ಮೊಬೈಲ್ ನಲ್ಲಿ ಒಂದು ಮೆಸೇಜು  ಕಳುಹಿದರೆ ಮುಗೀತು , ಆದರೆ ಆ ದಿನಗಳಲ್ಲಿ ಮೊಬೈಲ್ ಹೆಸರೇ ಇರಲಿಲ್ಲ, ಇದ್ದ ಟೆಲೆಫೋನ್ ಗಳು ಸಾಮನ್ಯರ ಕೈಗೆ ನಿಲುಕುವಂತಿರಲಿಲ್ಲ , ಹಾಗಾಗಿ ಪತ್ರ ಬರೆಯುವುದೇ ಇದ್ದ ಒಂದು ಉಪಾಯ ,  ಹಾಗೂ ಹೀಗೂ ವಾರಗಟ್ಟಲೆ ಕಷ್ಟ  ಪಟ್ಟು  ಒಂದು "ಪ್ರೇಮ ನಿವೇದನೆ ಪತ್ರ"  ಅಲ್ಲಲ್ಲ "ಪ್ರೇಮ ನಿವೇದನೆ ಅರ್ಜಿ" ತಯಾರು ಮಾಡಿದ , ಹೂ ಕಣ್ರೀ  ಜೀವನದ ಮೊದಲ ಪ್ರೇಮ ಪತ್ರ  ಅವನದು,  ಅದನ್ನು ಬರೆಯಲು ಎಷ್ಟು ಕಷ್ಟಪಟ್ಟ  ಅಂತಾ ಅವನಿಗೆ ಮಾತ್ರ ಗೊತ್ತು, ಸಾವಿರಾರು ಹಾಳೆಗಳ  ಬಲಿಯಾಗಿತ್ತು, ಈ ಕಾರ್ಯಕ್ಕೆ . ಇದನ್ನು ನೋಡೇ ಇರಬೇಕು ಜಗಜಿತ್ ಸಿಂಗ್  ತನ್ನ ಘಜಲ್ ನಲ್ಲಿ ಹೀಗೆ ಹಾಡಿದ್ದಾನೆ

Pyar Ka Pehla Khat Likhne Mein Waqt To Lagta Hai
Naye Parindo Ko Udne Mein Waqt To Lagta Hai

Jism Ki Baat Nahi Thi
Unke Dil Tak Jana Tha
Jism Ki Baat Nahi Thi
Unke Dil Tak Jana Tha

Lambi Doori Tai Karne Mein Waqt To Lagta Hai
Lambi Doori Tai Karne Mein Waqt To Lagta Hai

Pyar Ka Pehla Khat Likhne Mein Waqt To Lagta Hai

Gaanth Agar Lag Jaye To Phir Rishte Ho Ya Dori
Gaanth Agar Lag Jaye To Phir Rishte Ho Ya Dori

Laakh Kare Koshish Khulne Mein Waqt To Lagta Hai
Laakh Kare Koshish Khulne Mein Waqt To Lagta Hai

Pyar Ka Pehla Khat Likhne Mein Waqt To Lagta Hai

Humne Ilaaj-e-Jakhme-Dil To Dhoondh Liya Lekin
Humne Ilaaj-e-Jakhme-Dil To Dhoondh Liya Lekin
Gehre Zakhmo Ko Bharne Me Waqt To Lagta Hai
Gehre Zakhmo Ko Bharne Me Waqt To Lagta Hai

Pyar Ka Pehla Khat Likhne Mein Waqt To Lagta Hai
Naye Parindo Ko Udne Mein Waqt To Lagta Hai

ಅಂತಾ . .
ಒಂದು  ದಿನ ಏನಾಯ್ತು ಗೊತ್ತಾ ..??

ನಮ್ಮ ಹೀರೋ ಪ್ರತಾಪ್ ಧೈರ್ಯ ಮಾಡಿ ತನ್ನ ಅರ್ಜಿಯನ್ನು  ಸ್ಪಂದನಳಿಗೆ  ಅವಳ ಕಾಲೇಜಿನ ಸಮೀಪ  ನೀಡಿಯೇ ಬಿಟ್ಟ , ಹೇಗೆ ಕೊಟ್ಟ ಅವೆಲ್ಲಾ ಸಿನಿಮಾದಂತೆ ಬಿಡಿ, ಹಲೋ ಅಂದು ಹತ್ತಿರ  ತೆರಳಿ ಅವಳು ಚೆತರಿಕೊಳ್ಳುವಷ್ಟರಲ್ಲಿ ಬರೆದ ಚೀಟಿಯನ್ನು ಅವಳ ಕಾಲಿನ ಸಮೀಪ ಬೀಳಿಸಿ  ಎಸ್ಕೇಪ್  ಆಗಿಬಿಟ್ಟ,  ಇನ್ನು ಅವಳಿಗೋ  ಇವನ ವರ್ತನೆ ಕೋಪ ತಂದಿತ್ತು, ಆದರೆ ಪುಣ್ಯ ಯಾರೂ  ನೋಡಿರಲಿಲ್ಲ,ಒಂದು ವೇಳೆ  ಆ ಪತ್ರವನ್ನು ಬೀದಿಯಲ್ಲೇ ಬಿಟ್ಟಿದ್ದರೆ  ತನಗೆ ತೊಂದರೆ  ಎಂದು ಯೋಚಿಸಿ ಹಾಗೆ ಬಗ್ಗಿ ಕಾಲಿನ ಸಮೀಪ ಇದ್ದ ಪತ್ರವನ್ನು  ಎತ್ತಿ ಕೊಂಡು ತನ್ನ ಬ್ಯಾಗಿನಲ್ಲಿ ಹಾಕಿಕೊಂಡಳು ಮನೆಯಲ್ಲಿ ಹರಿದು ಹಾಕೋಣ  ಎಂದು ಕೊಂಡು  ಕಾಲೇಜಿನ ಹಾದಿ ಹಿಡಿದಳು .

ಇತ್ತ ನಮ್ಮ ಹೀರೋ "ಪ್ರತಾಪ"   ಅವಳ ಸಿಟ್ಟು ಕಂಡು ಎರಡು ದಿನ ನಾಪತ್ತೆ ಯಾಗಿ ಬಿಟ್ಟ, ಪ್ರೇಮ ನಿವೇದನೆ ಅರ್ಜಿ ಕೊಟ್ಟವನ ಧೈರ್ಯ ಹಾರಿ ಹೋಗಿತ್ತು,  ಏನೇನೋ ಕೆಟ್ಟ ಯೋಚನೆಗಳು , ಕಣ್ಣಿಗೆ ಸರಿಯಾಗಿ ನಿದ್ದೆ ಬಾರದೆ  ಒದ್ದಾಡ ತೊಡಗಿದ,  ಆಸ್ಪತ್ರೆ ಕೆಲಸಕ್ಕೆ ಬೇರೆ ದಾರಿಯಲ್ಲಿ ಕದ್ದು ಓದಾದ ಬೇಕಾದ  ಅನಿವಾರ್ಯ ಒದಗಿತ್ತು,

 ಇತ್ತ ನಮ್ಮ ನಾಯಕಿ "ಸ್ಪಂದನ" ಮನೆಗೆ ಬಂದು ಅವನ ಪತ್ರ ಹರಿಯಲು  ಕೈ ಹಾಕುತ್ತಾಳೆ, ಅದರಲ್ಲಿನ ಸುಂದರ ಅಕ್ಷರ ಮನ ಸೆಳೆಯುತ್ತದೆ ಓದುತ್ತಾಳೆ  ಅದರಲ್ಲಿ  ಪ್ರೇಮ  ಪತ್ರವಾಗಿರದೆ  ಅರ್ಜಿಯಾಗಿತ್ತು. "Application for the post of life partner"  ಎಂದು ಬರದು ವಿಚಿತ್ರವಾಗಿ ತನ್ನ ಬಗ್ಗೆ ವಿವರ ನೀಡಿ  ತನ್ನ ಆಸೆಯನ್ನು ತಿಳಿಸಿದ್ದಾನೆ, ಎಲ್ಲಿಯೂ  ಅಸಹ್ಯ ಪಡುವ ಪದಗಳಿಲ್ಲ  , ಆದರೆ ಇದನ್ನು ಏನು ಮಾಡುವುದು  ತಿಳಿಯುತ್ತಿಲ್ಲ , ಕೊನೆಗೆ ಯೋಚಿಸಿ  ಒಂದು ನಿರ್ಧಾರಕ್ಕೆ ಬಂದಳು, ಈ ವಿಚಾರವನ್ನು  ತಾನೇ ನಿರ್ವಹಿಸಲು ನಿರ್ಧಾರ ಮಾಡಿದಳು , ಅವನಿಗೆ  ಉತ್ತರದ ಪತ್ರ ಸಿದ್ದಪಡಿಸಿದಳು  " your application for the post of good friend is approved " ಎಂದು ಬರದ ಪತ್ರ ಸಿದ್ದ ಪಡಿ ಅದನ್ನು ಅವನಿಗೆ ನೀಡುವ ಅವಕಾಶ ಕ್ಕಾಗಿ ಕಾಯ್ದಳು  ಆದರೆ ಪುಣ್ಯಾತ್ಮ ಎರಡು ದಿನ ಪತ್ತೆ ಇರಲಿಲ್ಲ. ಕೊನೆಗೆ ಮೂರನೇ ದಿನ ಅವನಿಗೆ  ಪತ್ರವನ್ನು ಹೇಗೋ ದಾಟಿಸಿದಳು . ಇಂತಹ ಪತ್ರಗಳ ವ್ಯವಹಾರ  ಹಲವು ದಿನ ನಡೆದು, ಪರಸ್ಪರರ ಬಗ್ಗೆ  ತಿಳಿದುಕೊಂಡರು . ಕೊನೆಗೆ ಒಮ್ಮೆ  ಇಬ್ಬರು ಪರಸ್ಪರ ಭೇಟಿ ಮಾಡಲು  ನಿರ್ಧಾರ ಮಾದಿದರು. ಆ ದಿನ ಬಂತು . ಮುಂದೆ ...?

 ಹೌದು ಆ ದಿನ ಬಂತು  ಇಬ್ಬರಲ್ಲೂ ಮಾತಿಲ್ಲಾ,  ಮೌನ  ಅಲ್ಲಿ ಮನೆಮಾಡಿತ್ತು, ಕೊನೆಗೆ ಅವಳೇ ಮೌನ ಮುರಿದಳು
ಸ್ಪಂದನ :- ಅಂತೂ ಬಂದಿದ್ದಕ್ಕೆ ಥ್ಯಾಂಕ್ಸ್
 ಪ್ರತಾಪ್ :- ಹಾಗೇನಿಲ್ಲ, ಒಂತರ ಖುಷಿಯಾಯಿತು,
ಸ್ಪಂದನ :- ನೀವು ಬಹಳ ಸ್ಮಾರ್ಟ್ ಆಗಿದ್ದೀರಾ ..!!
ಪ್ರತಾಪ್ :- {ಮನದಲ್ಲೇ ಆಕಾಶಕ್ಕೆ ನೆಗೆದು ಬಿಟ್ಟ}  ನಾಚಿಕೊಳ್ಳುತ್ತಾ ಥ್ಯಾಂಕ್ಸ್  
ಸ್ಪಂದನ :- ಅದ್ಸರಿ  ,  "ಒಂದು ವೇಳೆ ನನ್ನನ್ನು ನೀವು ಮದುವೆ ಆದರೆ ಹೇಗೆ ಸಾಕುತ್ತೀರಿ",  ..??
ಪ್ರತಾಪ್ :- "ಅದಕ್ಕೇನಂತೆ  ನನ್ನಲ್ಲಿ ಜಾಣ್ಮೆ ಇದೆ ಹಣ ಗಳಿಸುವುದು ಹೇಗೆ ಅಂತಾ ನನಗೆ ಗೊತ್ತು" , "ನಿಮ್ಮನ್ನು ಮಹಾರಾಣಿ       ತರಹ ನೋಡಿಕೊಳ್ಳುತ್ತೇನೆ" .
ಸ್ಪಂದನ:- ಏನು ಕಳ್ಳ ತನ ಮಾಡ್ತೀರ ??
ಪ್ರತಾಪ್ :- "ಇಲ್ಲಪ್ಪಾ , ಕಷ್ಟಪಟ್ಟು ಕೆಲಸ ಮಾಡುತ್ತೇನೆ"  "ಹಣ ಸಂಪಾದನೆ ಮಾಡುತ್ತೇನೆ " .
ಸ್ಪಂದನ :- "ನೋಡಿ ಈ ಸಿನಿಮಾ ಡೈಲಾಗ್ ಎಲ್ಲಾ ಬೇಡ" . "ಮೊದಲು ವಾಸ್ತವವಾಗಿ ಯೊಚಿಸಿ."  "ನಿಮ್ಮ ಕ್ವಾಲಿಫಿಕೇಶನ್ ಗೆ ಯಾರು ಕೆಲಸ ಕೊಡ್ತಾರೆ '' "ಕೆಲಸ ಸಿಕ್ಕರೂ ಬರುವ ಸಂಪಾದನೆ ನಿಮಗೆ ಸಾಲಲ್ಲ" "ಇನ್ನು  ಅದರಲ್ಲಿ ಜೀವನ ಮಾಡುವ ನನ್ನ ಪಾಡೇನು? , "ಅದಕಾಗಿ  ಮುಂದೆ ನಾವಿಬ್ಬರು ನರಕ ಅನುಭವಿಸ ಬೇಕಾಗುತ್ತೆ",  "ನನ್ನ ಮೇಲೆ ನಿಜವಾಗಿಯೂ ಪ್ರೀತಿ ಇದ್ದಲ್ಲಿ,  ಅರ್ಧಕ್ಕೆ ನಿಲ್ಲಿಸಿರುವ ಎರಡನೆ  ಪಿ ಯೂ .ಸಿ. ಪರೀಕ್ಷೆ ಮತ್ತೆ ಬರೆಯಿರಿ", "ನಿಮ್ಮ ಮನೆಯ ಪರಿಸ್ಥಿತಿ  ಗೊತ್ತು, ನಿಮ್ಮ ತಾಯಿಯ ಸಂಪಾದನೆ ಅಷ್ಟೇ"    "ಜೀವನ ನೀವು ಅಂದುಕೊಂಡಷ್ಟು  ಸುಲಭ ಅಲ್ಲಾ" , "ಮೊದಲು ಓದು ಮುಂದು ವರೆಸಿ, ಜೊತೆಗೆ ಅಮ್ಮನಿಗೆ ಸಹಾಯ ಮಾಡಲು  ಪಾರ್ಟ್ ಟೈಮ್ ಕೆಲಸ ಮಾಡಿರಿ '
ಪ್ರತಾಪ :- "ಹಾಗೇನಿಲ್ಲ  ನಾನು ಮುಂದೆ ಓದುತ್ತೇನೆ, ಹಣ ಗಳಿಸುತ್ತೇನೆ"  "ಜೀವನದಲ್ಲಿ ಎಷ್ಟೊಂದು ಜನ  ಹಣವಿಲ್ಲದೆ ಜೀವನ ಮಾಡ್ತಾ ಇಲ್ವಾ?  ಹಾಗೆ  ನಾವಿಬ್ಬರು ಪ್ರೀತಿಯಿಂದ ಜೀವನ ಮಾಡೋಣ" ಎಂದ
ಸ್ಪಂದನ :- ಇವೆಲ್ಲಾ ವಾಸ್ತವಿಕ ನೆಲೆ ಇಲ್ಲದ  ಒಣ ಪುರಾಣಗಳು, ಇಂದಿನ ಜೀವನ ನಿರ್ವಹಣೆಗೆ ಹಣ ಬೇಕು, ಹಣ ಬೇಕಾದರೆ  ಒಳ್ಳೆಯ ಕೆಲಸ ಬೇಕು, ಒಳ್ಳೆಯ ಕೆಲಸಕ್ಕೆ  ಅಗತ್ಯ ಒಳ್ಳೆಯ ಕ್ವಾಲಿಫಿಕೇಶನ್  ಅದನ್ನು ಮೊದಲು ಪಡೆದು ಬಾ ಆನಂತರ  ನಿನ್ನನ್ನು ನನ್ನ ಲೈಫ್ ಪಾರ್ಟನರ್ ಎಂದು ಒಪ್ಪಿಕೊಳ್ಳುತ್ತೇನೆ .
ಎಂದು ಹೇಳಿದ ಸ್ಪಂದನ "ನಿನ್ನ ವಿಧ್ಯಾಭ್ಯಾಸ ಮುಂದುವರೆಸಲು ನನ್ನ ಪ್ರೀತಿಯ ಕಾಣಿಕೆ " ಎಂದು ಹೇಳಿ  ಐದು ನೂರು ರೂಪಾಯಿ ಅವನ ಜೇಬಿಗೆ ತುರುಕಿ  , ಇನ್ನು ಎರಡು ತಿಂಗಳಿಗೆ ಮಾತ್ರ ಒಮ್ಮೆ ಭೇಟಿ  ಎಂದು ಹೇಳಿ ಅವನ ಉತ್ತರಕ್ಕೆ ಕಾಯದೆ ಹೊರಟು  ಹೋದಳು,
 ಸ್ಪಂದನಳ ಉತ್ತರದಿಂದ  ತತ್ತರಿಸಿದ  ನಮ್ಮ ಹೀರೋ  ಪ್ರತಾಪ್ ವಾಸ್ತವಕ್ಕೆ ಬರಲು ಬಹಳ ಸಮಯ ಬೇಕಾಯಿತು,  ಅಲ್ಲೇ ಸನಿಹದಲ್ಲಿದ್ದ  ನದಿಯ ಸಮೀಪ ಕುಳಿತು, ಸ್ಪಂದನ ಹೇಳಿದ ಮಾತುಗಳನ್ನು   ಅವಲೋಕನ ಮಾಡತೊಡಗಿದ, ಅಲ್ಲೇ ಸನಿಹದಲ್ಲಿ  ಒಬ್ಬ ಹುಡುಗ ಹಾಗು ಹುಡುಗಿ ಜಗಳ  ಆಡುತ್ತಿದ್ದರು
 ಹುಡುಗ :- ಸಾರಿ ಕಣೆ  ಎಲ್ಲೂ ಹಣ ಸಿಗುತ್ತಿಲ್ಲಾ
 ಹುಡುಗಿ :- ಏನೋ ಹಾಗಂದ್ರೆ ನನ್ನ ಗತಿ ಏನು ಈಗ ?
ಹುಡುಗ :- ಸಾರಿ ಕಣೆ ಮನೆಯಲ್ಲಿ ಹೇಳೋಕೆ ಭಯ , ಸಂಪಾದನೆ ಮಾಡದ ನನ್ನ ಕಂಡರೆ ಎಲ್ಲರಿಗೂ  ಅಸಡ್ಡೆ .
ಹುಡುಗಿ:- ಮತ್ತೆ ಎಲ್ಲಾದ್ರೂ ಓಡಿಹೋಗಿ ಮದುವೆ  ಆಗೋಣ  ಇಲ್ಲದಿದ್ರೆ ಮಾನ ಹೋಗುತ್ತೆ,
ಹುಡುಗ :- ಲೇ ದಯವಿಟ್ಟು ಹೆದರಿಸ ಬೇಡ ಸ್ವಲ್ಪ ದಿನ  ಅಡ್ಜಸ್ಟ್ ಮಾಡಿಕೊ ಪ್ಲೀಸ್ , ಸ್ವಲ್ಪ ಯೋಚಿಸ್ತೀನಿ,
ಹುಡುಗಿ:- ಈಡಿಯಟ್  ಅವತ್ತು ಬೇಡಾ ಬೇಡಾ ಅಂದ್ರು  ಕೇಳಲಿಲ್ಲ , ಇವತ್ತು ನೋಡು ಕನ್ಸೀವ್  ಆಗಿದ್ದೀನಿ .
ಹುಡುಗ:- ಆ  ಏನ್ ಹೇಳ್ತಾ ಇದ್ದೀಯ, ಲೇ ಪ್ಲೀಸ್  ಹೇಗಾದರೂ ಮಾಡಿ ಇದನ್ನು ತೆಗೆಸು  ಅಂತಾ ಅಂಗಲಾಚುತ್ತಿದ್ದ .

ಆ ಹುಡುಗನ ಮಾತನ್ನು ಕೇಳಿ ಯೂ ಚೀಟ್  ಅಂತಾ ಅಳುತ್ತಾ   ನದಿಯ ಕಡೆಗೆ ಆ ಹುಡುಗಿ  ಹೋಗತೊಡಗಿದಳು , ಅವಳ ಹಿಂದೆ ಆ ಹುಡುಗ ಬೇಡಿಕೊಳ್ಳುತ್ತಾ  ಸಾಗಿದ  ಇಬ್ಬರೂ  ಪ್ರತಾಪ್  ದೃಷ್ಟಿಯಿಂದ ಮರೆಯಾದರು .

ಅವರಿಬ್ಬರ ಗೋಳಾಟ  ಪ್ರತಾಪ್ ಗೆ  ಚಾಟಿ ಯ ಹೊಡೆತ ನೀಡುತ್ತಿತ್ತು, ಇದನ್ನು ನೋಡಿ ಸ್ಪಂದನ ಮಾತು ಸರಿ ಎಂಬ  ಅರಿವಾಯಿತು. ಮನೆಗೆ ಬಂದವನೇ  ಮೂಲೆಗೆ ಬಿಸಾಡಿದ್ದ  ಹಳೆಯ ಮಾರ್ಕ್ಸ್ ಕಾರ್ಡ್ , ಹಾಗು ಇತರ ದಾಖಲೆಗಳನ್ನು ತೆಗೆದು  ಓದಲು  ಮುಂದು ವರೆದ  ಈ ಮಧ್ಯೆ  ಸ್ಪಂದನ ಪ್ರತೀ ಎರಡು ತಿಂಗಳಿಗೆ ಇವನನ್ನು ಭೇಟಿ ಮಾಡಿ ಸಲಹೆ ನೀಡುತ್ತಿದ್ದಳು ,

ಪ್ರತಾಪ್   ಬೆಳಕಿನ  ಹಾದಿ  ತೆರದು ಕೊಂಡಿತು , ಓದುತ್ತಾ ಜೊತೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ  ತನ್ನ ಜೀವನದ ಪಥದಲ್ಲಿ ಸಾಗಿದ , ಹಾಗೂ ಹೀಗೂ ಪಿ .ಯು .ಸಿ . ಮುಗಿಸಿದ  , ನಂತರ ಬಿ.ಕಾಮ್   ಸೇರಿದ  ಜೊತೆಗೆ  ಮಕ್ಕಳಿಗೆ ಪಾಠ  ಮಾಡಲು ಶುರುಮಾಡಿದ,   ಆದರೆ ಅವನ ಹಾಗು  "ಸ್ಪಂದನ" ಳ  ಭೇಟಿ ಪ್ರತೀ ಎರಡು ತಿಂಗಳಿಗೆ  ನಡೆಯುತ್ತಿತ್ತು,  ಅವನ ಪ್ರತೀ ಯಶಸ್ಸಿನ  ಹಿಂದೆ "ಸ್ಪಂದನ" ಲ   ಸಲಹೆ  ಸಹಕಾರ ಇರುತ್ತಿತ್ತು,  ಮುಂದೆ ಎಂ,ಕಾಂ ಮಾಡಿ,  ಜೊತೆಗೆ   ಮ್ಯಾನೆಜ್ಮೆಂಟ್ ಪದವಿ ಪಡೆದು  ಮುನ್ನುಗ್ಗಿದ ,  ಹಲವು ವರ್ಷ ಕಳೆದ ಮೇಲೆ  ಯಶಸ್ಸು ಅವನಾದಾಗಿತ್ತು,  ಹೌದು ಅವನಿಂದು ಒಂದು ಕಂಪನಿಯ ಸಿ,ಈ .ಒ . ಅವಳು ಸಹ ಕಡಿಮೆ ಇಲ್ಲದಂತೆ  ಎಮ್. ಎಸ್.ಸಿ  , ಪಿ. ಎಚ್. ಡಿ   ಮುಗಿಸಿ, ನಂತರ ಒಂದು ಶಿಕ್ಷಣ  ಸಂಸ್ಥೆಯಲ್ಲಿ  ಉಪನ್ಯಾಸಕಿಯಾದಳು .   ಜೀವನದ  ದಡ  ಸೇರಿದ ಇಬ್ಬರು  ಹಣಕಾಸಿನಲ್ಲಿ ಸ್ವಾವಲಂಬಿಗಳು  ಇಬ್ಬರು ತಮ್ಮ ನಿರ್ಧಾರ ತಿಳಿಸಿ  ಮನೆಯವರನ್ನು ಒಪ್ಪಿಸಿ  ಜೋಡಿಯಾದರು,


ವಾಸ್ತವದ ನೆಲೆಗಟ್ಟಿನಲ್ಲಿ ಜೋಡಿ ಹಕ್ಕಿ ನೀವಾಗಿ

ಮದುವೆಯ ದಿನ ಮೊದಲ ರಾತ್ರಿ :-
ಪ್ರತಾಪ್ :- "ಅಂತೂ ಜೀವನದಲ್ಲಿ ಈ ಕಗ್ಗಲ್ಲನ್ನು  ಒಂದು ಸುಂದರ ಮೂರ್ತಿಯನ್ನಾಗಿ ಮಾಡಿದ ಕೀರ್ತಿ ನಿನ್ನದು" ಚಿನ್ನಾ  
ಸ್ಪಂದನ:- ವಯಸ್ಸಿನ ಆತುರದಿಂದ  ಪ್ರೀತಿಯೆಂಬ  ಆಟದ ಬ್ರಮೆಯಲ್ಲಿ ಬೀಳದೆ  ನನ್ನ ಮಾತಿಗೆ ಗೌರವ ಕೊಟ್ಟ  ನನ್ನ ಮುದ್ದು  ಗಂಡ ನೀನು
ಪ್ರತಾಪ್ :- ಹೌದಮ್ಮಾ  ನಿನ್ನನ್ನು ಮಾತಿನಲ್ಲಿ ಗೆಲ್ಲಲಾರೆ , ಜೀವನದಲ್ಲಿ ಅಮೃತ ಸಿಂಚನ ಮಾಡಿದ ನೀನು ಇಂದು  ಹೊಸ ಬಾಳಿನ ಅಮೃತ ನೀಡು ಎಂದು  ಕೈ ಚಾಚಿದ.......!!!!

Sunday, August 11, 2013

ಪ್ರೀತಿ ಎಂಬ ಉಳಿತಾಯ ಖಾತೆ ............. !!

ಪ್ರೀತಿ ಎಂಬ ಮಾಯೆ

"ಪ್ರೀತಿಯೆಂಬ  ಉಳಿತಾಯ ಖಾತೆ " ಒಂದು ಕಥೆಯನ್ನಾಗಿ ಮೂಡಿಸಲು, ಸಹಾಯ ಮಾಡಿದ್ದು , ನನ್ನ ತಮ್ಮ ಭಾನು ಪ್ರಸಾದ್ , ಅವನು ಕೆಲವು ಘಟನೆಗಳನ್ನು ಹೆಕ್ಕಿ ನನಗೆ ಮೇಲ್ ಮಾಡಿ ಬರೆಯಲು ಪ್ರೇರಣೆ ನೀಡುತ್ತಾನೆ, ಈ ಕಥೆಯೂ ಅಷ್ಟೇ ಜೀವನದ ಯಾವುದೋ ಸಂದರ್ಭದಲ್ಲಿ ನೀಡಲಾದ ಒಂದು ಉಡುಗೊರೆ ವಹಿಸುವ ಪಾತ್ರ ಬಹಳ ಅಮೂಲ್ಯವಾದದ್ದು , ಅಂತಹ ಒಂದು ಸುಂದರ ಕಥೆ ನಿಮಗಾಗಿ.

 "ಸನ್ಮಿತ"   ತಾನು ಬಹಳ ಇಷ್ಟಪಟ್ಟು ಪ್ರೀತಿಸಿದ ಹುಡುಗ  ಸುಪ್ರೀತ್ ನನ್ನು ಜೀವನ ಸಂಗಾತಿಯಾಗಿ ಬಯಸುತ್ತಾಳೆ, ಇಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು  ಹತ್ತಿರವಾಗಿ,  ಮನೆಯವರ ಒಪ್ಪಿಗೆ ಪಡೆದು  ಹೊಸ ಬಾಳಿಗೆ ಹೆಜ್ಜೆ ಇಡಲು ಸಿದ್ದರಾಗಿದ್ದಾರೆ. ಹೌದು ಅವರಿಬ್ಬರ ಮದುವೆಗೆ ಯಾರ ಅಡ್ಡಿಯೂ ಇರಲಿಲ್ಲ. ಎರಡೂ ಮನೆಯವರೂ ಸಂತೋಷದಿಂದ ಒಪ್ಪಿಗೆ ನೀಡಿ ಇವರ ಜೀವನ ಪಥಕ್ಕೆ ಬೆಳಕಾಗುತ್ತಾರೆ, ಸುಂದರ ಕಲ್ಪನೆಯ ಕನಸುಗಳು ಮಾಗಿ ನನಸಾಗುವ ಕಾಲ ಹತ್ತಿರವಾಗುತ್ತದೆ .

ಹೌದು ಬಂದೆಬಿಟ್ಟಿತು ಇವರಿಬ್ಬರ ನಿಶ್ಚಿತಾರ್ಥ , ಬಹಳ ಖುಷಿಯಾಗಿ  ಬಂದುಗಳು, ಸ್ನೇಹಿತರು ಪಾಲ್ಗೊಂಡು ಶುಭ  ಹಾರೈಸಿದ ದಿನ ಅದು, ನಗು ಹರಟೆ, ಗೆಳೆಯರ  ಕೀಟಲೆ, ಒಂದಷ್ಟು ಆಟಗಳು, ಅಂದಿನ ಸಂಜೆ  ಎಲ್ಲರೂ ಸಂತಸದ ಶಿಖರ ಏರಿ ನಲಿದಾಡಿದರು, ಹೌದು ಇಂದಿಗೆ ಇನ್ನೆರಡು ತಿಂಗಳಿಗೆ ವಿವಾಹ ವೆಂದು ನಿಶ್ಚಯ  ಆಯ್ತು,ಸನ್ಮಿತ ಸುಪ್ರೀತ್ ಪರಸ್ಪರ  ಉಂಗುರ ಬದಲಾವಣೆ ಮಾಡಿಕೊಂಡು ವಿವಾಹ ದಿನದ ಬಗ್ಗೆ ಜಾತಕ ಪಕ್ಷಿಗಳಂತೆ ಕಾಯಲು ಸಿದ್ಧವಾದರು . ಇನ್ನು "ಸನ್ಮಿತ" ಅಮ್ಮ  ಶಾಲಿನಿ ಯವರಂತೂ ಇದೇ ಕಾರ್ಯಕ್ರಮದ ರುವಾರಿಯಾಗಿ  ಸಂಭ್ರಮದ  ಒಡತಿಯಾಗಿದ್ದರು, ಹೌದು ಅವರ ಹಾಗು ಮಗಳ ಮಧ್ಯೆ  ತಾಯಿ ಮಗಳ  ಸಂಬಂಧಕ್ಕಿಂತಲೂ  ಮಗಳಿಗೆ ಒಬ್ಬ ಆಪ್ತ ಗೆಳತಿಯಾಗಿ ಮಗಳ ಯಶಸ್ಸಿನ ಭಾಗವಾಗಿದ್ದರು. ಅಂದೂ ಸಹ ನಿಶ್ಚಿತಾರ್ಥ ಕಾರ್ಯ ಮುಗಿದ ನಂತರ  ಮಗಳು ಹಾಗು ಅಳಿಯನ ಬಳಿ ತೆರಳಿ, ಇಬ್ಬರ ಕೈಹಿಡಿದು  ಒಂದು ಬ್ಯಾಂಕ್  ಉಳಿತಾಯ ಖಾತೆಯ ಪುಸ್ತಕ ನೀಡಿದರು .

ಸನ್ಮಿತ :- "ಅಮ್ಮಾ ಏನಿದೆಲ್ಲಾ ಹೊಸದಾಗಿದೆ", ಈ  ಸಮಯದಲ್ಲಿ   ಈ ಬ್ಯಾಂಕ್  ಉಳಿತಾಯ ಖಾತೆ ಪುಸ್ತಕ ಏಕೆ ?        ಇನ್ನೂ          ನಿನ್ನ     ವ್ಯವಹಾರ  ಬಿಟ್ಟಿಲ್ವಾ ...??? "ಅದಕ್ಕೆನಾ  ಅವತ್ತು ನನ್ನಿಂದ ಬಲವಂತವಾಗಿ  ಸಹಿ ಪಡೆದು ಒಂದು ಖಾತೆ ತೆರೆದದ್ದೂ" "ಅವತ್ತು ಯಾಕೋ ಇರಲಿ ಅಂತಾ ಸಹಿ ಮಾಡಿಕೊಟ್ಟೆ",  "ಇವತ್ತು ನನಗೆ ಪಾಸ್ ಬುಕ್ ಕೊಡ್ತಾ ಇದ್ದೀಯ"  "ಇದೇನಮ್ಮಾ ವಿಚಿತ್ರಾ"  ಅಂದಳು 

ಶಾಲಿನಿ :- "ನೋಡು ಮಗಳೇ ಇಂದಿನಿಂದ ನಿಮ್ಮಿಬರ ಜೀವನದಲ್ಲಿ  ಈ ಪಾಸ್ ಪುಸ್ತಕ  ಹೊಸ ಪಾತ್ರ ವಹಿಸುತ್ತದೆ "," ಹಾಗಾಗಿ ಇಂದಿನ  ಈ ಶುಭ ದಿನಕ್ಕೆ ನಿಮ್ಮಿಬ್ಬರ ನಿಶ್ಚಿತಾರ್ಥದ ಬಗ್ಗೆ ನನ್ನ ಪುಟ್ಟ ಕೊಡುಗೆ ಇದು ಮಗಳೇ"

ಸುಪ್ರೀತ್ :- " ಅತ್ತೆಯವರೇ , ನಮ್ಮಿಬ್ಬರ ಬಳಿಯಲ್ಲೂ ಬಹಳ ಹಣ ಇದೆ , ಈಗ ಇದರ ಅವಶ್ಯಕತೆ  ಇದೆಯಾ ?? ಯೋಚಿಸಿ,..

ಶಾಲಿನಿ :- "ನೀವಿಬ್ಬರು ಬುದ್ದಿವಂತರು, ನಿಮ್ಮಲ್ಲಿ ಬಹಳ ವಿಧ್ಯೆ ಇದೆ, ಒಳ್ಳೆಯ ಕೆಲಸ ಇದೆ, ಹಾಗು ಬಹಳಷ್ಟು ಹಣ ಇದೆ,"  "ಆದರೆ ನಾನು ಕೊಡುವ ಈ ಬ್ಯಾಂಕ್ ಪಾಸ್ ಪುಸ್ತಕದಲ್ಲಿ  ನಿಮ್ಮಿಬರ ಬಗ್ಗೆ ನನಗಿರುವ ಕಾಳಜಿ ಇದೆ, " "ಇದನ್ನು  ತಿರಸ್ಕರಿಸುವ ಹಕ್ಕು ನಿಮ್ಮಿಬ್ಬರಿಗೂ ಇಲ್ಲಾ"  , "ಆದರೆ ಒಂದು ಷರತ್ತು,  ನಿಮ್ಮ ಈ ಪಾಸ್ ಪುಸ್ತಕಕ್ಕೆ  ನಿಮಗೆ ನೂರಕ್ಕೆ ನೂರು ಸಂತೋಷ ಕೊಟ್ಟ ದಿನಗಳಲ್ಲಿ ಮಾತ್ರ  ಇಬ್ಬರೂ ಸೇರಿ ಒಂದು ನೂರು ರುಪಾಯಿ ಹಾಕಬೇಕು, ಯಾವುದೇ ಕಾರಣಕ್ಕೂ ಒಂದು ನೂರಕ್ಕಿಂತ ಕಡಿಮೆ ಹಾಗು ಅದಕ್ಕಿಂತ ಜಾಸ್ತಿ ಹಣ ಹಾಕ ಕೂಡದು, ಇದು ನನ್ನ ಪ್ರೀತಿಯ ಕೋರಿಕೆ ಎಂದು ಬೇಕಾದರೆ ಅಂದುಕೊಳ್ಳಿ ,"   "ಹಾಗಾಗಿ ಈ ಉಳಿತಾಯ ಖಾತೆಯಲ್ಲಿ ಇಂದಿನ ಸಂತಸದ ಕುರುಹಾಗಿ ನಾನೇ ಒಂದುನೂರು ರೂಪಾಯಿ ಹಾಕಿ  ಉಳಿತಾಯ ಖಾತೆ ತೆರೆದಿದ್ದೇನೆ, ತೆಗೆದುಕೊಳ್ಳಿ" ಇದನ್ನು  ಎಂದು ಹೇಳಿ ಅಳಿಯ ಹಾಗು ಮಗಳಿಗೆ ಸಿಹಿ ತಿನ್ನಿಸಿ ಹಾರೈಸಿ  ಪಾಸ್ ಪುಸ್ತಕ ನೀಡಿದಳು,

ಸುಪ್ರೀತ್ ಹಾಗು ಸನ್ಮಿತ  ನಗುತ್ತಾ ಆ ಉಡುಗೊರೆ ಸ್ವೀಕರಿಸಿ  , ತಮಗೂ  ಈ ಸಲಹೆ ಇಷ್ಟವಾಗಿ, ತಾವು ಹಣ ಹಾಕಿದಂದು  ಯಾವ ಕಾರಣಕ್ಕೆ ಹಣ ಹಾಕಿದ್ದೇವೆಂದು  ಒಂದು ಡೈರಿಯಲ್ಲಿ ನಮೂದಿಸಲು  ನಿರ್ಧಾರ ಮಾಡಿದರು,

ದಿನಾಂಕ ೧೨-೦೬ - ೨೦೦೦ :- ಅಮ್ಮ ನೀಡಿದ ಕೊಡುಗೆ  ವಿವಾಹ ನಿಶ್ಚಿತಾರ್ಥದ ಅಂಗವಾಗಿ.
ದಿನಾಂಕ ೨೨-೦೬-೨೦೦೦:- ಸುಪ್ರೀತ್  ಜನುಮದಿನ ಹಾಗಾಗಿ  ಅವನಿಗೆ ನಾ ಕೊಟ್ಟ ಗಿಫ್ಟ್ ಇಷ್ಟವಾದ ಕಾರಣ
ದಿನಾಂಕ ೧-೦೭-೨೦೦೦:-  ಸನ್ಮಿತ  ತನ್ನ ಹುದ್ದೆಯಲ್ಲಿ ಪ್ರಮೋಶನ್ ಗಿಟ್ಟಿಸಿದ  ಕಾರಣ , ಅವಳಿಗೆ ನೀಡಿದ  ಸಿಹಿ ಮುತ್ತಿನ    ನೆನಪಿಗೆ

ಹೀಗೆ ಸಾಗಿತ್ತು  ಸಂತಸದ ದಿನಗಳ ಲೆಕ್ಕಾಚಾರ , ಜೀವನ ಪಯಣದಲಿ  ಸಂತಸದ ದಿನಗಳು  ಸಾಗೊದೆ ಗೊತ್ತಾಗೊಲ್ಲ , ಹಾಗೆ ಎರಡು ತಿಂಗಳು ಮುಗಿದು  ವಿವಾಹ  ಕಾರ್ಯ  ಅದ್ದೂರಿಯಾಗಿ ನೆರವೇರಿತು, ಆ ಮದುವೆ  ನಿಜವಾಗಿಯೂ ಸ್ವರ್ಗದಲ್ಲೇ ನಡೆಯಿತು . ಅಷ್ಟರಲ್ಲಾಗಲೇ ಉಳಿತಾಯ ಖಾತೆಯಲ್ಲಿ ಪ್ರತೀ ಸಂತೋಷದ ದಿನಕ್ಕೂ ನೂರು ರೂಪಾಯಿಯಂತೆ ಜಮಾ ಆಗಿ ಸುಮಾರು ಹತ್ತು ಸಾವಿರ ಜಮಾ ಆಗಿತ್ತು.

ಮಧುಚಂದ್ರಕ್ಕೆ ವಿದೇಶ ಗಳ  ಪ್ರಸಿದ್ಧ ತಾಣಗಳಲ್ಲಿ ಇವರ ಸಂತೋಷದ ಸಿಂಚನ ಪಸರಿಸಿತ್ತು, ಪ್ರತೀ ಕ್ಷಣದ , ಪ್ರತೀ ಘಟನೆಯೂ ಸಂತಸದ ಹೊಳೆ ಹರಿಸಿತ್ತು. ರಜವೆಲ್ಲಾ ಮುಗಿದು, ಇಬ್ಬರು ಹೊರಟರು ತಮ್ಮ ಕಾರ್ಯ ಕ್ಷೇತ್ರಕ್ಕೆ , ಜೀವನದ ಬಂಡಿ ಚಲಿಸಿತ್ತು.ಮೂರು  ವರ್ಷಗಳು ಕಳೆದಿದ್ದವು, ಇಬ್ಬರಲ್ಲೂ  ಯಾಕೋ ಹೊಂದಾಣಿಕೆ ಕೊರತೆ ಉಂಟಾಗಿ , ಸಿಹಿಯಾದ ಅಮೃತ   ಮೊಸರು ಆಗುವ ಹಂತ ತಲುಪಿತ್ತು, ಸರಿ ಇಬ್ಬರೂ ತೆಗೆದು ಕೊಂಡಿದ್ದು ಒಮ್ಮತದ  ತೀರ್ಮಾನ , "ನಾವು  ಪರಸ್ಪರ  ಒಪ್ಪಿಗೆಯಾಗಿ  ಡಿವರ್ಸ್  ಪಡೆಯೋಣ "

ಅಂತು ಇಬ್ಬರ ತೀರ್ಮಾನ  ಅನುಷ್ಠಾನ ಗೊಳಿಸಲು  ಹಿರಿಯರ ಒಪ್ಪಿಗೆ ಪಡೆಯ ಬೇಕಲ್ಲಾ , ಹಾಗಾಗಿ " ಸನ್ಮಿತ " ತನ್ನ ತಾಯಿ ಗೆ ವಿಚಾರ ತಿಳಿಸಿ  ತಮ್ಮ ನಿರ್ಧಾರವನ್ನು  ತಿಳಿಸಿದಳು . "ಅಮ್ಮಾ ಆ ಸುಪ್ರೀತ್ ಎಂಬ  ಜೀವಿಯನ್ನು ನಾಗು ಹೇಗೆ ಪ್ರೀತಿಸಿದೆ ಅನ್ನೋದೇ ನನ್ನ ಜೀವನದಲ್ಲಿ ಅರ್ಥವಾಗದ ಪ್ರಶ್ನೆಯಾಗಿದೆ," '' ಅದೇನು ಮಂಕು ಕವಿದಿತ್ತೋ ಕಾಣೆ ಅಂದು ಪ್ರೀತಿಸಿ ಬಿಟ್ಟೆ '.'

"ಶಾಲಿನಿ" ಯವರಿಗೆ ತಮ್ಮ ಮಗಳು ಅಳಿಯನ ತೀರ್ಮಾನ ಕೇಳಿ ಒಮ್ಮೆಗೆ  ನೋವು ಉಂಟಾದರೂ ಅದನ್ನು ತೋರ್ಪಡಿಸದೆ  "ಮಗಳೇ ನೀನು  ತಿಳಿದವಳು",  "ನಿನಗೂ ಒಬ್ಬ ಪುಟ್ಟ ಮಗಳಿದ್ದಾಳೆ" " ಪ್ರಪಂಚ ನೋಡಿದ್ದೆಯೇ " , "ಮೇಲಾಗಿ ನೀನು ನನ್ನ ಮಗಳು, ನಿನಗೆ ಸರಿ ತಪ್ಪುಗಳ ಅರಿವಿದೆ,ನಿನಗೆ ಸರಿ ಎನ್ನಿಸಿದ್ದನ್ನು ಮಾಡಲು ನೀನು ಸ್ವತಂತ್ರಳು'',  'ಆದರೆ ಒಂದು ಮಾತು, ನಾನು ನಿನಗೆ ಒಂದು ಬ್ಯಾಂಕ್  ಉಳಿತಾಯ ಖಾತೆ ಪುಸ್ತಕ ನೀಡಿದ್ದೆ, ಮೊದಲು ಅದನ್ನು  ಬ್ಯಾಂಕಿನಲ್ಲಿ ಕ್ಲೋಸ್ ಮಾಡಿಬಿಡು ಮಗಳೇ''  ಎಂದರು.

 ಸನ್ಮಿತ :-  ..... ಆ ಪಾಸ್ ಬುಕ್ ಕ್ಲೋಸ್  ಮಾಡ್ಲಾ ??
ಶಾಲಿನಿ:= "ಹೌದು ಮಗಳೇ , ಆ ಪಾಸ್ ಬುಕ್ ನಿನ್ನ ಬಾಳಿನ ಸಂತೋಷದ ಉಳಿತಾಯ ಖಾತೆ ಮಗಳೇ"," ಬಹುಷಃ ನಿನ್ನ ಸಂತಸದ ದಿನಗಳು ಖಾಲಿಯಾಗಿರ ಬಹುದು"  , "ಹಾಗಾಗಿ  ಅದನ್ನು ಮೊದಲು  ಕ್ಲೋಸ್ ಮಾಡು "
ಸನ್ಮಿತ :-  "ಅಮ್ಮಾ  ಯಾಕೋ ಅದನ್ನು ನೋಡಿದರೆ  ಕ್ಲೋಸ್ ಮಾಡಲು ಮನಸು ಬರುತ್ತಿಲ್ಲಾ",  "ಆದ್ರೂ ಪ್ರಯತ್ನ ಮಾಡುತ್ತೇನೆ "

ಎಂದು ಹೇಳಿದ ಸನ್ಮಿತ ನೇರವಾಗಿ ಮನೆಗೆ ಬಂದು ಬ್ಯಾಂಕ್ ಉಳಿತಾಯ ಖಾತೆಯ ಪುಸ್ತಕ ಹಾಗು  ಅದರಬಗ್ಗೆ  ತಾವಿಬ್ಬರು ಬರೆದಿದ್ದ  ಡೈರಿ ನೋಡುತ್ತಾ ಕುಳಿತಳು,  ಆದರು ಮನಸಿನ ಮೂಲೆಯಲ್ಲಿದ್ದ  ಡಿವರ್ಸ್  ರಕ್ಕಸ  ಕುಣಿಯ ತೊಡಗಿದ , ಬ್ಯಾಂಕ್ ಕಡೆಗೆ  ಹೆಜ್ಜೆ ಹಾಕಿದಳು .

ಬ್ಯಾಂಕ್ ಆವರಣ ಹೊಕ್ಕಿದ  ಒಡನೆ ಅಸಾಧ್ಯ ವೆನ್ನಿಸುವಂತಹ  ಜನ ಜಂಗುಳಿ  , ಹಾಗು ಹೀಗೂ ಕೌಂಟರ್  ಬಳಿ  ಹೋಗಿ ತನ್ನ ಖಾತೆ ರದ್ದು ಪಡಿಸುವುದಾಗಿ ಹೇಳಿ  ತನ್ನ ಪಾಸ್ ಬುಕ್  ನಮೂದನ್ನು ಸರಿಪಡಿಸಿಕೊಡಲು  ಕೋರಿದಳು, ಸಿಬ್ಬಂದಿ ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ ಕಾರಣ  , ಅಲ್ಲೇ ಇದ್ದ ಒಂದು ಕುರ್ಚಿಯಲ್ಲಿ   ಕುಳಿತಳು, ಹಾಗೆ ಸುಮ್ಮನೆ ತನ್ನ ಬಳಿ  ಯಿದ್ದ ಡೈರಿ ಓದಲು ಶುರುಮಾಡಿದಳು,
   ದಿನಾಂಕ :೧೫-೦೮-೨೦೦೦ :- ವಿವಾಹ ಮಹೋತ್ಸವ  , ಪ್ರೀತಿಯ ಧಾರೆ ಎರೆದ  ಸುಪ್ರೀತ್  ನಿನಗೆ  ನನ್ನ ಪ್ರೀತಿಯ ಸಿಹಿ ಮುತ್ತುಗಳು,  ೧೦೦%  ಖುಷಿ
ದಿನಾಂಕ :- ೨೦-೦೮-೨೦೦ರಿಂದ  ೧೦- ೦೯- ೨೦೦೦ ವರೆಗೆ  ಹನಿ ಮೂನ್ ಪ್ರವಾಸ  ಯೂರೋಪಿಗೆ    ವಃ ವಾಹ್ ಸುಂದರ ಕ್ಷಣಗಳು  ಪ್ರತೀ ಕ್ಷಣಕ್ಕೂ  ೧೦೦% ಖುಶಿ.
ದಿನಾಂಕ :-೨೨-೦೯-೨೦೦೦ :-  ಸುಪ್ರೀತ್   ಪ್ರಮೋಶನ್ ಪಡೆದ ದಿನ  ಖುಷಿಯಾಗಿ ಅಂದು ನನ್ನ ಬಹಳ ಮುದ್ದಾಡಿ ಬಿಟ್ಟ
   ೧೦೦% ಖುಷಿ
ದಿನಾಂಕ :- ೨೨-೧೨-೨೦೦೦ : - ನಾನು ತಾಯಿ ಆಗುವುದಾಗಿ ಡಾಕ್ಟರ್ ಹೇಳಿದ ದಿನ , ೧೦೦% ಖುಷಿ

ಹೀಗೆ ಸಾಗಿತ್ತು, ಖುಷಿಯ ಉಳಿತಾಯ ಖಾತೆಯ  ಇತಿಹಾಸ , ಯಾಕೋ  ಸನ್ಮಿತ  ಮನಸಿಗೆ  ನನ್ನಲ್ಲಿದ್ದ ಪಾಪ ಪ್ರಜ್ಞೆ  ಕಾಡಲು ತೊಡಗಿತು, ಅಷ್ಟರಲ್ಲಿ  ಬ್ಯಾಂಕ್ ಸಿಬ್ಬಂದಿ ಕರೆದು ಪಾಸ್ ಬುಕ್ ಅಪ್ಡೇಟ್ ಮಾಡಿ ಕೊಟ್ಟಿದ್ದರು,  ಹಾಗು ಬ್ಯಾಂಕ್ ಕಾತೆ ಕ್ಲೋಸ್  ಮಾಡಲು ದಾಖಲೆ  ನೀಡಿದರು, ಖಾತೆ  ಕ್ಲೋಸ್ ಮಾಡಲು ಬರೆಯಲು ಮನಸ್ಸೇ ಬರುತ್ತಿಲ್ಲ, ಇಷ್ಟೆಲ್ಲಾ ಪ್ರೀತಿ ಗಳಿಗೆ ನೆನಪಿಸಿದ ಈ ಬ್ಯಾಂಕ್ ಉಳಿತಾಯ ಖಾತೆ  ಕ್ಲೋಸ್ ಮಾಡಿದರೆ ನನ್ನನ್ನೇ ನಾನು ಕೊಂದುಕೊಂಡಂತೆ  ಎನ್ನಿಸಿತು, ದಾರಿಯಲ್ಲಿ ಎಳನೀರು ಕುಡಿದು, ಮನೆಗೆ ಬಂದಳು, ಆತ್ಮ ವಿಮರ್ಶೆ ಮಾಡ ತೊಡಗಿತು, ಹಾಗು ತಾಯಿ ನಿಶ್ಚಿತಾರ್ಥದ ಸಮಯದಲ್ಲಿ ಹೇಳಿದ ಮಾತುಗಳು  ನೆನಪಿಗೆ ಬಂದು, ತನ್ನ ತಪ್ಪಿನ ಅರಿವಾಯ್ತು.

ಅಲ್ಲೇ ಇದ್ದ ಫೋನ್  ರಿಂಗ್  ಆಯಿತು, ಅತ್ತಕಡೆಯಿಂದ  ಅಮ್ಮ ಕೇಳುತ್ತಿದ್ದಳು, "ಮಗಳೇ  ಆ ಬ್ಯಾಂಕ್ ಖಾತೆ ಕ್ಲೋಸ್ ಮಾಡಿದೆಯ ?? "
ಸನ್ಮಿತ :-: "ಅಮ್ಮಾ ನನ್ನನ್ನು ಕ್ಷಮಿಸಿ ಬಿಡು  ನಾನು ಅದನ್ನು ಕ್ಲೋಸ್ ಮಾಡಲ್ಲಾ"
  ಎಂದು ಫೋನ್ ಇಟ್ಟಳು

ಅಂದು ಸಂಜೆಯವರೆಗೆ ತನ್ನದೇ ತಾಕಲಾಟದಲ್ಲಿ ಕಳೆದಳು,  ಸಂಜೆ ಮನೆಗೆ  ಆಗಮಿಸಿದ  ಸುಪ್ರೀತ್ ," ಸನ್ಮಿತ  ಲಾಯರ್ ಫೋನ್ ಮಾಡಿದ್ರು" , "ಇವತ್ತು ಸಂಜೆ ನಾವಿಬ್ಬರು ಹೋಗಿ, "ಡಿವರ್ಸ್ ಪೇಪರ್ಗೆ ಸೈನ್ ಮಾಡಬೇಕಂತೆ " ಬೇಗ ರೆಡಿ ಆಗು ಹೋಗೋಣ  ಅಂದ

ಸನ್ಮಿತ :- ಓಡಿ  ಬಂದು ಸುಪ್ರೀತ್  ದಯವಿಟ್ಟು ನನ್ನನ್ನು ಕ್ಷಮಿಸಿಬಿಡು, ಜೀವನ ಅರಿಯದೆ  ನಿನ್ನ ಬಗ್ಗೆ ತಪ್ಪಾಗಿ ಭಾವಿಸಿ ದುಡುಕಿದ್ದೆ,  "ನನ್ನ ಜೀವನದ ಸಿಹಿ ಸಂತಸದ ಕ್ಷಣಗಳ  ಉಳಿತಾಯ ಖಾತೆಯ  ಯಜಮಾನ ನೀನು," "ನಿನ್ನನ್ನು ಕಳೆದು ಕೊಂಡರೆ  ಅದಕ್ಕಿಂದ ದೊಡ್ಡ ಅಪರಾಧ ಇನ್ನಿಲ್ಲಾ,"  "ನಾವಿಬ್ಬರು  ಮತ್ತೆ ಜೊತೆಯಾಗಿ ಸಾಗಲು  ಸಹಕರಿಸು ಪ್ಲೀಸ್"  ಎಂದಳು,

ಸುಪ್ರೀತ್ :- "ನೋಡು ಹುಚ್ಚಿ  ನಿನ್ನ ದುಡುಕುತನ ನನಗೆ ಹೊಸದಲ್ಲಾ," "ಅದರಿಂದ ಕೋಪಗೊಂಡು , ನಾನೂ ನಿನಗೆ ಡಿವರ್ಸ್  ಕೊಡಲು ಯೋಚಿಸಿದ್ದು ನಿಜ", "ಆದರೆ ನಿನ್ನ ಅಮ್ಮ ನಿಶ್ಚಿತಾರ್ಥದಲ್ಲಿ  ನೀಡಿದ್ದ ಪಾಸ್ ಬುಕ್, ಹಾಗು ನಾವಿಬ್ಬರೂ ಬರೆದ ಡೈರಿ  ನನ್ನ ನಿರ್ಧಾರ ಬದಲಿಸಲು ಕಾರಣವಾಯಿತು," "ನಿಜವಾಗಿಯೂ ನಿನ್ನ ಅಮ್ಮ ಗ್ರೇಟ್  ಕಣೆ", "ಆಗಲಿ ನಾವಿಬ್ಬರು  ಡಿವರ್ಸ್  ಯೋಚನೆ ಬಿಟ್ಟು,  ಪ್ರೀತಿಯ ಉಳಿತಾಯ ಖಾತೆಗೆ ಪ್ರೀತಿ ಜಮಾ ಮಾಡೋಣ" ಎಂದು ಹೇಳಿ ಸನ್ಮಿತ ಳನ್ನು ಎತ್ತಿಕೊಂಡು   ಹೊರಟೇಬಿಟ್ಟ .

ಇತ್ತ ಸೋಫಾ ಮೇಲೆ ಪವಡಿಸಿದ್ದ  ಬ್ಯಾಂಕ್ ಉಳಿತಾಯ ಖಾತೆ ಪುಸ್ತಕ , ಹಾಗಿ ಡೈರಿ ಪರಸ್ಪರ   ನಗುತ್ತಿದ್ದವು.

ಅಂದಹಾಗೆ ನಿಮಗೆಲ್ಲರಿಗೂ  ೬೭ ನೆ ಭಾರತ ಸ್ವಾತಂತ್ರ್ಯ ಹಬ್ಬದ  ಶುಭಾಶಯಗಳು , ಏನಾದರೂ ಆಗಿ ಮೊದಲು ಭಾರತೀಯರಾಗಿ

Friday, August 2, 2013

ಈ ಹುಡುಗನ ಕಥೆಗೆ ಒಂದು ಹೆಸರು ಕೊಡಿ .................. !!

ಕರುಣಾಳು ಬಾ ಬೆಳಕೇ



ಹೌದು ಈ ಹುಡುಗನ ಕಥೆಗೆ   ಯಾವ ಹೆಸರನ್ನು ಇಡಬೇಕೆಂದು ಕಥೆ ಓದಿದ ನಂತರ ನೀವೇ ನಿರ್ಧರಿಸಿ.....![ ಸುಮಾರು  ಮೂವತ್ತು ವರ್ಷಗಳ  ಹಿಂದಿನ  ನೈಜ ಕಥೆ  ಹೆಸರುಗಳನ್ನ ಬದಲಾಯಿಸಿಸಲಾಗಿದೆ ]

ಅದೊಂದು ತಾಲೂಕು ಕೇಂದ್ರದ  ಸರ್ಕಾರಿ ಪ್ರೌಡ ಶಾಲೆ , ಸುತ್ತ ಮುತ್ತಲಿನ  ಹಳ್ಳಿ ಗಳಿಂದ , ಅಲ್ಲಿಗೆ ಗಂಡು ಹಾಗು ಹೆಣ್ಣು ಮಕ್ಕಳು ಬರುತ್ತಿದರು, ಆ ಶಾಲೆ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿತ್ತು, ಅಲ್ಲಿನ ಶಿಕ್ಷಕರೋ ಯಾವುದೇ ಪಟ್ಟಣದ  ಶಿಕ್ಷಕರಿಗೆ ಸೆಡ್ಡು ಹೊಡೆಯುವಂತೆ ಮಕ್ಕಳಿಗೆ ಕಲಿಸುತ್ತಿದ್ದರು, ಇನ್ನು ಶಿಸ್ತು ವಿಚಾರದಲ್ಲಿ  ಮಕ್ಕಳನ್ನು ತೀವ್ರವಾಗಿ ದಂಡಿಸಲಾಗುತ್ತಿತ್ತು, ಈಗಿನಂತೆ  ಅಪ್ಪ ಅಮ್ಮಂದಿರು,  ಮಕ್ಕಳಿಗೆ ಹೊಡೆದ ಶಿಕ್ಷಕರ  ವಿರುದ್ಧ  ಉಸಿರು ಬಿಚ್ಚುತ್ತಿರಲಿಲ್ಲ ಬಿಡಿ, ಹಾಗಾಗಿ ಮಕ್ಕಳು  ಶಿಕ್ಷಕರ ವಿರುದ್ಧ ಯಾವುದೇ ದೂರು ಪೋಷಕರ ಬಳಿ ದೂರುತ್ತಿರಲಿಲ್ಲ. ಆದರೆ ಶಿಕ್ಷಕರು  ಅಶಿಸ್ತು  ಕಂಡಲ್ಲಿ ಮಾತ್ರ ಶಿಕ್ಷೆ  ನೀಡುತ್ತಿದ್ದರು . ಇಲ್ಲಿ ನಕಲಿಗೆ ಅವಕಾಶ ವಿರಲಿಲ್ಲ ಹಾಗಾಗಿ  ಈ ಶಾಲೆ ಮಕ್ಕಳು ತನ್ನದೇ ಆದ ಹಿರಿಮೆ ಹೊಂದಿದ್ದರು .


ಇಂತಹ ಶಿಸ್ತು  ಬದ್ದ ಶಾಲೆಯಲ್ಲಿ  ಹಳ್ಳಿ ಯಿಂದ ಬರುತ್ತಿದ್ದ ನಮ್ಮ  ಈ ಕಥಾ ನಾಯಕ  "ಕುಮಾರ್"   , ಈ ಹುಡುಗ ಹಳ್ಳಿ ಇಂದ ಬರುತ್ತಿದ್ದ, ಯಾವುದೇ ಪಟ್ಟಣದ  ವಿಧ್ಯಾರ್ಥಿಗಳಿಗೆ  ಕಡಿಮೆ ಇಲ್ಲದಂತೆ ಶಾಲೆಗ ಬರುತ್ತಿದ್ದ.ಓದಿನಲ್ಲೂ ಅಷ್ಟೇ  ತರಗತಿಯಲ್ಲಿ ಮುಂದಿನ ಸಾಲಿನ ವಿಧ್ಯಾರ್ಥಿಗಳ ಗುಂಪಿನಲ್ಲಿ ಇವನ ಸ್ಥಾನವಿತ್ತು, ಹಳ್ಳಿ ಇಂದ ತರುತ್ತಿದ್ದ  ಇವನ ಸೈಕಲ್  ಹೊಡೆಯಲು ಎಲ್ಲಾ ಗೆಳೆಯರು ಹಾ ತೊರೆಯುತ್ತಿದ್ದರು , ಒಟ್ಟಿನಲ್ಲಿ  ಆ ಶಾಲೆಯಲ್ಲಿ  ಇವನೊಬ್ಬ ಹೀರೋ  ಆಗಿದ್ದ,  ಮೊದಲೇ  ಆ ತರಗತಿ  ಗಂಡು ಹಾಗು ಹೆಣ್ಣು ಮಕ್ಕಳು  ಜೊತೆಯಾಗಿ ಕಲಿಯುತ್ತಿದ್ದ  ತಾಣವಾಗಿತ್ತು,  ಓದದಿದ್ದರೆ ಹೆಣ್ಣುಮಕ್ಕಳ ಮುಂದೆ ಅವಮಾನ ಆಗುತ್ತೆ ಎಂದು ಗಂಡು ಮಕ್ಕಳೂ,  ಗಂಡು ಮಕ್ಕಳ ಮುಂದೆ ಅವಮಾನ ಆಗಬಾರದೆಂದು  ಹೆಣ್ಣುಮಕ್ಕಳು  ಒದುತ್ತಿದ್ದರು. ನಮ್ಮ ಹೀರೋ ಕೂಡ ಅಂದಿನ ದಿನದಲ್ಲಿ  ಇದೆ ಭಾವನೆಯಿಂದ ಓದುತ್ತಿದ್ದ.

ಅದೇ ತರಗತಿಯಲ್ಲಿ  "ಶೋಭಪ್ರಿಯ"  ಎಂಬ ಹುಡುಗಿಯೂ ಸಹ ಈ ಹುಡುಗನಿಗೆ ಸರಿ ಸಾಟಿಯಾಗಿ ಓದುತ್ತಾ ತನ್ನ ಹಿರಿಮೆ ಮೆರೆದಿದ್ದಳು, ಕೆಲವೊಮ್ಮೆ  ನಮ್ಮ ಕುಮಾರ್ ನಿಗೆ ಅರ್ಥ ಆಗದ ವಿಚಾರಗಳನ್ನು  ಆ ಹುಡುಗಿ  ವಿವರಿಸಿ ಸಹಾಯ ಮಾಡುತ್ತಿದ್ದಳು,  ಅದೇ ರೀತಿ ಅವಳಿಗೂ ಇವನ ಸಹಾಯ ಸಿಕ್ಕುತ್ತಿತ್ತು.  ಆದರೆ  ಅಂದಿನ ನಡವಳಿಕೆಗಳಲ್ಲಿ  ಅನುಮಾನ ಪಡುವ ಯಾವುದೇ  ಭಾವನೆಗಳು ಅವರಲ್ಲಿ ಇರಲಿಲ್ಲ . ಇವನೊಂದಿಗೆ ಹುಡುಗಿ ಮಾತಾಡೋದು ನೋಡಿ ಇವನ ಗೆಳೆಯರಿಗೆ  ಅಚ್ಚರಿ, ಅಸೂಯೆ, ಮುಂತಾದ ಭಾವನೆಗಳು ಸಹಜವಾಗಿಯೇ ಇತ್ತು. ಬಹುಷಃ  ಒಂದುರೀತಿಯ ಭಯ ಎನ್ನಬಹುದು.   ಹೊಸ ವರ್ಷದ  ಸಂದರ್ಭದಲ್ಲಿ   ಕೆಲವು ಆತ್ಮೀಯ ಗೆಳೆಯರು  ಈ ಹುಡುಗನಿಗೆ  '' ಹೊಸ ವರ್ಷದ  ಶುಭಾಷಯಗಳು "  ಎಂದು ನಮೂದಿಸಿ ನೋಟ್  ಪುಸ್ತಕಗಳನ್ನು  ನೀಡಿದ್ದರು, ಇವನೂ ಸಹ ಹಾಗೆ ಕೆಲವರಿಗೆ  ನೀಡಿದ್ದ ,  ಹಾಗೆ ನೋಟ್  ಪುಸ್ತಕ  ಪಡೆದವರಲ್ಲಿ ಆ ಹುಡುಗಿಯೂ ಇದ್ದಳು . ಅದೇ ರೀತಿ ಇರುವಾಗ  ಶಾಲಾ ಪ್ರವಾಸದ  ಕಾರ್ಯಕ್ರಮ  ಶಾಲೆಯವರು  ಏರ್ಪಾಡು ಮಾಡಿದರು, ಸರಿ  ನಮ್ಮ ಕುಮಾರ್  ಇಂತಹ ಅವಕಾಶ  ಮಿಸ್ ಮಾಡಿ ಕೊಳ್ಳುತ್ತಾನೆಯೇ  ತಾನೂ ಹೊರಡಲು ಸಿದ್ಧನಾದ,


ಹೀಗಿರಲು  ಪ್ರವಾಸದ ಹಣ ನೀಡುವ ಬಗ್ಗೆ ಒಮ್ಮೆ ಈ ಹುಡುಗ ತರಗತಿಯ ವೇಳೆಯಲ್ಲಿ  ಪ್ರವಾಸದ ಉಸ್ತುವಾರಿ ಹೊತ್ತ ಶಿಕ್ಷಕರ ಬಳಿ  ತೆರಳಿದ , ಹಣ ನೀಡಿದ ಬಗ್ಗೆ ರಸೀದಿ  ಪಡೆದು ಕ್ಲಾಸಿಗೆ ಬಂದು ನೋಡುತ್ತಾನೆ,  ಮೂರ್ನಾಲ್ಕು ಹುಡುಗರ ಗುಂಪು ಇವನ ನೋಟ್  ಪುಸ್ತಕ ಹಿಡಿದು ಚರ್ಚೆ ಮಾಡುತ್ತಿದ್ದಾರೆ. ಹತ್ತಿರ ಹೋದ ಇವನನ್ನು ಕಂಡು  ಜೋರಾಗಿ ನಕ್ಕ  ಆ ಗುಂಪು  "ಲೇ ಕುಮಾರ  ಕ್ಲಾಸ್  ಮುಗಿದ ಮೇಲೆ ಸಿಕ್ಕು  ನಿನ್ನ ಜೊತೆ ಮಾತಾಡಬೇಕು" ಎಂದಿತು . . ಅಷ್ಟರಲ್ಲಿ ಮೇಡಂ ಬಂದ  ಕಾರಣ ತರಗತಿ  ಮುಂದುವರೆಯಿತು . ಅಂದಿನ ಕೊನೆಯ ತರಗತಿ ಮುಗಿದ ಕಾರಣ  ಹೊರಗೆ ಬಂದ  ಇವನನ್ನು ಹಿಂಬಾಲಿಸಿದ ನಾಲ್ಕು  ಹುಡುಗರ ಗುಂಪು ,  ಕುಮಾರನಿಗೆ  ನಿಲ್ಲುವಂತೆ ಹೇಳಿ ಹತ್ತಿರ ಬಂದರು,

ಗುಂಪಿನಲ್ಲಿದ್ದ  ಮೃತ್ಯುಂಜಯ ಹೇಳಿದ  "ಲೋ  ಕುಮಾರ  , ನಿನ್ನ ಬಹಳ  ಒಳ್ಳೆ ಹುಡುಗ ಅಂತಾ ಅಂದುಕೊಂಡಿದ್ವಿ , ಆದ್ರೆ  ನೀನು  ಚಾಲಾಕಿ ಕಣೋ"   ಅಂದ

 ವಿಷಯ ತಿಳಿಯದ  ಕುಮಾರ  "ಏನೋ ಅದು"  ಅಂದಾಗ ,   ನೋಡಿಲ್ಲಿ ನಿನ್ನ ಹಲ್ಕಾ ಕೆಲಸ  ಅಂತಾ   ಒಂದು ನೋಟ್ ಬುಕ್
ಮುಖಕ್ಕೆ ಹಿಡಿದರು .

ಕಣ್ಣು ಬಿಟ್ಟು ನೋಡಿದ  ಕುಮಾರ ............... ! ಅಚ್ಚರಿ  ಅದು ಅವನಿಗೆ  ಹೊಸವರ್ಷದ  ಶುಭಾಶಯಗಳು ಎಂದು ನಮೂದಿಸಿ  ಗೆಳೆಯ  ಆನಂದ ನೀಡಿದ್ದ  ನೋಟ್  ಬುಕ್ .
ಆದರೆ ಅದರಲ್ಲಿ  ಈಗ "ಹೊಸವರ್ಷದ  ಶೋಭಾಶಯಗಳು" ಎಂದು ತಿದ್ದಿ ಬರೆಯಲಾಗಿದೆ. ...... !!!
"ಹೇಳಪ್ಪ ಹೀರೋ ಈಗ  ಇದನ್ನು  ಕ್ಲಾಸ್ ಟೀಚರ್ಗೆ ಕೊಡ್ತೀವಿ,  ಮುಂದೆ ನಿನ್ನ ಇಷ್ಟ"  ಅಂತಾ   ಬೆದರಿಕೆ ಬಂತು ಆ  ಗುಂಪಿನಿಂದ  .

ಒಂದು  ಕ್ಷಣ ದಿಕ್ಕೇ ತೋಚದ ಸ್ಥಿತಿ  ಕುಮಾರ್ ನದಾಯಿತು , ತಾನು ಗಳಿಸಿದ್ದ  ಒಳ್ಳೆಯ ಕೀರ್ತಿ ಹಾಳಾದ ಅನುಭವ,  ಈ ವಿಚಾರ  ಕ್ಲಾಸ್ ಟೀಚರ್  ಗೆ ಗೊತ್ತಾಗಿ  ಅವರು  ಈ ವಿಚಾರವನ್ನು  ಮುಖ್ಯೋಪಾಧ್ಯಾಯರಿಗೆ  ತಿಳಿಸಿ, ತನ್ನನ್ನು ಶಾಲೆ ಯಿಂದ  ಆಚೆ ಹಾಕಿದರೆ, ಒಂದು ವೇಳೆ ಆ ಹುಡುಗಿಗೆ ಈ ವಿಚಾರ ತಿಳಿದು  , ಆ ಹುಡುಗಿಯ ಅಪ್ಪಾ ಅಮ್ಮ  ತನ್ನನ್ನು  ಹೊಡೆದರೆ,  ಇವೆಲ್ಲಾ  ವಿಚಾರ  ಮನೆಯಲ್ಲಿರುವ ದೂರ್ವಾಸ ಮಹರ್ಷಿ ಯಂತಹ ಅಪ್ಪನಿಗೆ ತಿಳಿದರೆ  ಆಗುವ ಘೋರ  ಶಿಕ್ಷೆ ಇವೆಲ್ಲಾ  ಊಹಿಸಿಕೊಂಡು   ಕಣ್ಣಲ್ಲಿ  ನೀರು ತುಂಬಿ ಕೊಂಡು  ದಿಗ್ಭ್ರಾಂತ ನಾದ , ಮನಸು ಪೂರ  ಕತ್ತಲಾಯಿತು.

ಲೋ ಮೃತ್ಯುಂಜಯ , ನಾನು ಈ ಕೆಲಸ ಮಾಡಿಲ್ಲ  ಎನ್ನಲೂ ಶಕ್ತಿ ಸಾಲದಾಯಿತು. , ಆ ದಿನ ಇವನನ್ನು ಆಟಾ  ಆಡಿಸಿ ಮಜಾ ತೆಗೆದು ಕೊಂಡ   ಆ ಹುಡುಗರು   "ಆಯ್ತು ಈಗ ಹೋಗು  ಆಮೇಲೆ ವಿಚಾರಿಸಿಕೊಳ್ಳುತ್ತೇವೆ , ಯಾರಿಗಾದರೂ ಹೇಳಿದ್ರೆ  ಆಮೇಲೆ ಗೊತ್ತಲ್ಲಾ....??"  ಅಂತಾ ಹೆದರಿಸಿ  ಎರಡು ಏಟು ಬಿಟ್ಟು  ಕಳುಹಿಸಿದರು .. ಇದು ಹೀಗೆ ಪ್ರತೀ  ನಿತ್ಯ   ಒಂದಲ್ಲಾ ಒಂದು  ಸಮಯದಲ್ಲಿ ನದೆಯುತ್ತಿತ್ತು.  ತರಗತಿಯ ಹೀರೋ ಆಗಿದ್ದ ಆ ಹುಡುಗ  ಜೋಕರ್ ಆಗಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳತೊಡಗಿದ ,  ಮನೆಯಲ್ಲಿ ಯಾರೊಂದಿಗೂ ಮಾತಿಲ್ಲ, ರಾತ್ರಿ ನಿದ್ದೆಯಲಿ  ಕೂಗಿ ಕೊಳ್ಳುತ್ತಿದ್ದ , ಶಾಲೆಯ ಹೋಂ ವರ್ಕ್  ಮಾಡದೆ  ಶಿಕ್ಷಕರ  ದೃಷ್ಟಿಯಲ್ಲೂ ಇವನ ಸ್ಥಾನ ಕುಸಿಯ ತೊಡಗಿತು . ಪ್ರತಿನಿತ್ಯ  ಶಾಲೆಗೇ ಹೋಗೋದು ನರಕ  ಅನ್ನಿಸಿ   , ತನಗೆ ಅರಿವಿಲ್ಲದೆ  ನರಳಾಡುತ್ತಿದ್ದ , ಇದನ್ನು ನೋಡಿ ಅವನ  ವೈರಿ ಗುಂಪು  ಅಟ್ಟಹಾಸ ಮೆರೆದಿತ್ತು.

ಯಾರಿಗೆ ಹೇಳಿದರೂ  ತನ್ನ ಮಾತು ಕೇಳಲಾರರು ಎಂಬ ಕೊರಗು ಇತ್ತು, ಆದರೆ ಇವನ ಮೂಕ ರೋಧನೆಗೆ ಉತ್ತರವಿಲ್ಲದೆ   ಹಲವು ತಿಂಗಳು  ಕಳೆಯಿತು,  ಈ ಹುಡುಗ ಮೊದಲು ತರಗತಿಯಲ್ಲಿ ಒಂದು ಅಥವಾ ಎರಡು ಗಳಿಸುತ್ತಿದ್ದ   ಸ್ಥಾನ ಪ್ರಥಮ ಪರೀಕ್ಷೆಯಲ್ಲಿ ಮೂವತ್ತಕ್ಕೆ ಇಳಿದಿತ್ತು  ತರಗತಿಯ "ಹೀರೋ ಆಗಿದ್ದ ಇವನನ್ನು  ಜೋಕರ್" ಆಗಿ ಮಾಡಿತ್ತು  ಆ ತುಂಟ ಹುಡುಗರ  ಕಾಟ . ಒಮ್ಮೆಯಂತೂ  ಯಾವೋ ಜ್ಞಾನದಲ್ಲಿ ಸೈಕಲ್ ಓಡಿಸುತ್ತಾ  ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ  ಹೊಡೆಯುವುದರಿಂದ  ಸ್ವಲ್ಪದರಲ್ಲಿ  ಬಚಾವ್  ಆಗಿದ್ದ.

ಹೀಗಿರಲು ಒಂದು ದಿನ  ಯೋಚಿಸುತ್ತಾ ರಾತ್ರಿ ಮಲಗಿರಲು  ಬಹಳ ದಿನಗಳಿಂದ  ಇವನನ್ನು  ಗಮನಿಸಿದ ಅಜ್ಜಿ  ಇವತ್ತು ತನ್ನ ಬಳಿ  ಮಲಗಲು ಹೇಳಿ ದಳು ."ಯಾಕೋ ಮಗು ಬಹಳ ದಿನಗಳಿಂದ  ಸಪ್ಪಗೆ ಇದ್ದೀಯ , ಬಾ ಮಗು ನನ್ನ ಪಕ್ಕ ಮಲಗು" ಎಂದು ಪ್ರೀತಿ ತೋರಿ , ತನ್ನ ಪಕ್ಕ ಮಲಗಿಸಿಕೊಂಡು ತಲೆ ಸವರುತ್ತಾ ಮಹಾಭಾರತದ ''ಕರ್ಣನ '' ಕಥೆ ಹೇಳಿದಳು , ಕಥೆ ಕೇಳುತ್ತಾ  ಕೇಳುತ್ತಾ  ಹಾಗೆ ಮಲಗಿದ , ಬೆಳಿಗ್ಗೆ ಎದ್ದು ಮತ್ತೊಮ್ಮೆ  ಅಜ್ಜಿಯಿಂದ ಆ ಕಥೆಯನ್ನು ಹೇಳಿಸಿಕೊಂಡ , ಅರೆ ಹೌದಲ್ವಾ  ಕರ್ಣನಿಗೂ ಎಷ್ಟೊಂದು ಅವಮಾನ ವಾಗಿದೆ  , ಆದರೆ ಅವನಿಗೆ ಧುರ್ಯೋದನ ನಂತಹ  ಗೆಳೆಯ ಆಸರೆಯಾಗಿ ನಿಂತು ಸಲಹಿದ,  ಆದರೆ ನನಗೆ  ಗೆಳೆಯರಿಲ್ಲವೇ  ................ !!

ಅಂದೇನೋ ಅಜ್ಜಿ ಹೇಳಿದ ಕಥೆಯಿಂದ ಹೊಸ ಹುರುಪು.  ಶಾಲೆಗೇ ಬಂದವನೇ ತನ್ನ   ಆತ್ಮೀಯ ಗೆಳೆಯ  ಶ್ರೀಕರ ನ   ಹತ್ತಿರ ನಡೆದ ಎಲ್ಲಾವಿಚಾರ ತಿಳಿಸಿದ,   ಎಲ್ಲವನ್ನು ಆಲಿಸಿದ  ಶ್ರೀಕರ್  ಬರೆಯದಿದ್ದ ಮೇಲೆ  ನಿನಗ್ಯಾಕೆ ಭಯ ಅಂದವನೇ ತರಗತಿಯ ಮೇಡಂ ಬಳಿ  ಕರೆದೊಯ್ದು  ಎಲ್ಲಾ ವಿಚಾರವನ್ನು  ಅವರಿಗೆ ಹೇಳಿದ . ಅದನ್ನು ಕೇಳಿದ  ಆ ಶಿಕ್ಷಕಿ  ಆಯ್ತು ಈ ವಿಚಾರ ಗುಟ್ಟಾಗಿರಲಿ  ಎಂದು ಹೇಳಿ, ತನ್ನ ಕಾರ್ಯಾಚರಣೆ  ಶುರು ಮಾದಿದರು.

ಅಂದು ಶಾಲೆ  ಬಿಟ್ಟಿತ್ತು, ಮಾಮೂಲಿಯಂತೆ  ಆ ಹುಡುಗರ ಗುಂಪು  ಕುಮಾರ್ ನನ್ನು ಪೀಡಿಸುತ್ತಿತ್ತು,  ದೂರದಿಂದ ಗಮನಿಸಿದ  ಆ ಶಿಕ್ಷಕಿ  ಇತರ ಮೂವರು ಮಕ್ಕಳೊಂದಿಗೆ  ಅಲ್ಲಿಗೆ ಬಂದು  "ಲೋ ಬನ್ರೋ " ಇಲ್ಲಿ  ಅಂತಾ ಕರೆದುಕೊಂಡು  ಕ್ಲಾಸ್ ರೂಮಿಗೆ ಹೋದರು . ಹಿಂಬಾಲಿಸಿದ  ಕುಮಾರ್ ಹಾಗು ಮೃತ್ಯುಂಜಯ ತಂಡವನ್ನು   ತಮ್ಮ ಬ್ಯಾಗಿನಲ್ಲಿರುವ ಎಲ್ಲಾ ಪುಸ್ತಕಗಳನ್ನು  ತನ್ನ ಟೇಬಲ್ ಮೇಲೆ ಇಡಲು ಹೇಳಿದರು,  ಟೇಬಲ್ ಮೇಲೆ ಇಡಲಾದ ಎಲ್ಲಾ ಪುಸ್ತಕಗಳನ್ನು    ತಪಾಸಣೆ  ಮಾಡಲಾಗಿ  ಆ "ಹೊಸ ವರ್ಷದ ಶುಭಾಶಯದ" ನೋಟ್  ಬುಕ್ ಸಿಕ್ಕಿತು,  ಅದನ್ನು ಪರಿಶೀಲಿಸಿದ  ಶಿಕ್ಷಕಿ  ಅದರಲ್ಲಿ "ಶೋಭಾಶಯ"  ಎಂದು ತಿದ್ದಿರುವ  ಅಕ್ಷರಗಳ ಹೋಲಿಕೆ  ಮಾಡಲು ಎಲ್ಲರ  ನೋಟ್ ಬುಕ್  ಗಳಲ್ಲಿ   ಇಣುಕಿ ನೋಡಿದಾಗ ಕಂಡು ಬಂದಿದ್ದೆ ಆ  ಮೃತ್ಯುಂಜಯ ನ ಅಕ್ಷರದ ಹೋಲಿಕೆ .

ಇದನ್ನು ಗಮನಿಸಿದ  ಆ ಶಿಕ್ಷಕಿ  ಮೊದಲು  ಮೃತ್ಯುಂಜಯ ಹಾಗು ಅವನ ಪಟಾಲಂ ಗೆ   ವಿಚಾರಣೆ ಮಾಡಿದರು .  ಅವರುಗಳಿಂದ   ಉತ್ತರ ದೊರೆಯದ ಕಾರಣ   ಶಾಲೆಯಿಂದ  ತೆಗೆದು ಹಾಕುವುದಾಗಿ , ಪೋಲೀಸಿಗೆ  ಒಪ್ಪಿಸುವುದಾಗಿ  ಹೇಳಿದರು, ಇದರಿಂದ ಬೆದರಿದ ಮೃತ್ಯುಂಜಯ  ನಡೆದ ಘಟನೆಯನ್ನೆಲ್ಲಾ ಬಾಯಿಬಿಟ್ಟ ಮೃತ್ಯುಂಜಯ ಹಾಗು ಅವನ ಪಟಾಲಂ ಗೆ  ಚೆನ್ನಾಗಿ  ಬೆತ್ತದ  ಸೇವೆ ಮಾಡಿ ,  ಕುಮಾರನಿಗೆ ಆಗಿರುವ ಮಾನಸಿಕ ಯಾತನೆ ಬಗ್ಗೆ  ತಿಳಿಹೇಳಿದರು, ಇನ್ನು ಮುಂದೆ ಹೀಗೆ ಮಾಡುವುದಿಲ್ಲ ವೆಂಬ  ಪತ್ರವನ್ನು ಆ ಗುಂಪಿನಿಂದ ಪಡೆದರು,  ಆ ಮೇಲೆ  ಕುಮಾರ್ ಹಾಗು ಮೃತ್ಯುಂಜಯ ತಂಡವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ  ಜಾಮೂನು ನೀಡಿ   ಒಳ್ಳೆಯ ಗೆಳೆಯರಾಗಲು  ತಿಳಿಸಿದರು  ಎಂಬಲ್ಲಿಗೆ ಈ ಕಥೆಯು ಸಮಾಪ್ತಿಯಾಯಿತು .ಇಂದು ಅವರೆಲ್ಲಾ  ಒಳ್ಳೆಯ ಗೆಳೆಯರಾಗಿ ಚೆನ್ನಾಗಿ ಬೆಳೆದು ಸಮಾಜದಲ್ಲಿ ನೆಲೆ ನಿಂತಿದ್ದಾರೆ 

ಕಥೆ ಓದಿಯಾಯಿತ ....???ಹಾಗಿದ್ರೆ ಇನ್ನೇಕೆ ತಡ   ಈ ಕಥೆಗೆ ಒಂದು ಚಂದದ ಹೆಸರು ಕೊಡಿ ..!