Sunday, January 8, 2017

ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ.ಶ್ರೀ  ಲಕ್ಷ್ಮೀಶ್ ಹೆಗ್ಡೆ  ಶಿರಸಿಯಲ್ಲೊಬ್ಬ  ಆಧುನಿಕ  ಬಿ.ಎಲ್. ರೈಸ್   ನನಗೆ   ಒಬ್ಬರನ್ನು ಅನವಶ್ಯಕವಾಗಿ  ಹೊಗಳೋದು  ಆಗಿಬರಲ್ಲಾ,  ಹಾಗಾಗಿ  ಆದಷ್ಟು  ವ್ಯಕ್ತಿಗಳ  ಬಗ್ಗೆ  ನನ್ನ ಬ್ಲಾಗ್ನಲ್ಲಿ  ಬರಹಗಳು ಕಡಿಮೆ ಇರುತ್ತದೆ. ಆದರೂ  ಕೆಲವೊಮ್ಮೆ  ಕೆಲವು ಮಹನೀಯರು  ತಮ್ಮ   ಸಾಧನೆಗಳಿಂದ  ನನ್ನ  ಮನಸಿನಲ್ಲಿ  ನಿಂತುಬಿಡುತ್ತಾರೆ. ಇನ್ನು ಅಂತಹವರ   ಜ್ಞಾನ  ಭಂಡಾರ  ಕಂಡು ನಾನು  ಮೂಕ ವಿಸ್ಮಿತನಾಗಿಬಿಡುತ್ತೇನೆ  . ಅಂತಹ ಒಬ್ಬ   ಅಪರೂಪದ   ವ್ಯಕ್ತಿಯನ್ನು  ನನ್ನ ಬ್ಲಾಗಿನ  ಆವರಣಕ್ಕೆ ಕರೆ   ತಂದು ಅವರ ಪರಿಚಯ   ಮಾಡಿಕೊಡಲು  ನಿಜಕ್ಕೂ   ಸಂತಸ ಪಡುತ್ತೇನೆ.ಆಗಿನ್ನೂ ಶಿರಸಿಗೆ  ಬಹಳ ವರ್ಷಗಳ ನಂತರ  ಹೊರಟ ಸಮಯ ,  ಶಿರಸಿ ಸಮೀಪದ  ಕೊಳಗಿ ಬೀಸ್  ನಲ್ಲಿ   ಶ್ರೀ ಗುರುಮೂರ್ತಿ  ಹೆಗ್ಡೆ  ಅವರ ಸಹೋದರನ  ವಿವಾಹಕ್ಕೆ   ಆಮಂತ್ರಣವಿತ್ತು, ಹೊರಡುವ ಮುಂಚೆ ಆಪ್ತ  ಮಿತ್ರ  ಪ್ರಕಾಶ್   ಹೆಗ್ಡೆ ಯವರಿಗೆ  ಶಿರಸಿ ಇತಿಹಾಸ  ತಿಳಿದವರ   ಬಗ್ಗೆ  ಮಾಹಿತಿ ಕೊಡುವಂತೆ  ಪೀಡಿಸಿದೆ , ಪಾಪ  ಅವರೂ ಸಹ   ತಮಗೆ ತಿಳಿದ  ಹಲವಾರು   ವ್ಯಕ್ತಿಗಳ  ವಿವರ ಕೊಟ್ಟರು ಆದರೆ  ಆ ಸಮಯದಲ್ಲಿ  ಶಿರಸಿ  ಮಾರಿಕಾಂಬೆ ಜಾತ್ರೆ  ಇದ್ದ ಕಾರಣ,  ನನಗೂ ಸಮಯ ಕಡಿಮೆ  ಇದ್ದ  ಕಾರಣ, ಮತ್ತೊಬ್ಬ  ಪ್ರೀತಿಯ ತಮ್ಮ  ಹರ್ಷಹೆಗ್ಡೆ  ಜೊತೆ  ಅಲೆದಾಡಿ  ಶಿರಸಿ  ಸುತ್ತ  ಮುತ್ತ  ಅಲೆದಾಡಿ ಸಾಕಷ್ಟು ಛಾಯಾಚಿತ್ರಗಳು  ಹಾಗು  ಸಿಕ್ಕಷ್ಟು   ಮಾಹಿತಿ   ದೋಚಿಕೊಂಡು  ಬಂದಿದ್ದೆ, ಆಗಿನ್ನೂ  ಶಿರಸಿಯ ಬಗ್ಗೆ ಬ್ಲಾಗ್ ನಲ್ಲಿ ಬರೆಯುವ ಮನಸು ಮಾಡಿರಲಿಲ್ಲ. ಒಂದು ದಿನ ಬ್ಲಾಗ್  ಬರಹಕ್ಕೆ ಏನೂ ವಿಚಾರ ಸಿಗದಿದ್ದಾಗ  ಶಿರಸಿಯ ಛಾಯಾಚಿತ್ರಗಳನ್ನು ನೋಡುತ್ತಾ  ಕುಳಿತೆ. ಸಹಸ್ರಲಿಂಗದ ಛಾಯಾಚಿತ್ರ ನೋಡುತ್ತಾ  ಈ ಪ್ರಾಂತದಲ್ಲಿ  ಏನೋ ವಿಶೇಷ ಇದೆ ಅನ್ನಿಸಿತು. ಅದರಂತೆ ಹುಡುಕಾಟ ನಡೆಸಿ, ಹಳೆ  ಗೆಝೆಟಿಯರ್ ಗಳನ್ನೂ ತಿರುವು ಹಾಕತೊಡಗಿದೆ. ಆಹಾ ಇಷ್ಟೆಲ್ಲಾ ಮಾಹಿತಿ ಇದೆಯಾ ಅನ್ನಿಸಿತು.  ಆದರೂ  ಸ್ಥಳೀಯ ವ್ಯಕ್ತಿಗಳ ಮಾಹಿತಿ ಇದ್ದರೆ ಚೆನ್ನ  ಅನ್ನಿಸಿ  ಹುಡುಕಾಟ ನಡೆಸುತ್ತಿದ್ದಾಗ  ನನಗೆ ಬಹುಮಾನವಾಗಿ ಸಿಕ್ಕವರೇ   ಶ್ರೀ  ಲಕ್ಷ್ಮೀಶ್ ಹೆಗ್ಡೆ  ಅವರು,  ಹೇಗೋ ಸಿಕ್ಕ  ಅವರ  ಮೊಬೈಲ್  ನಂಬರ್ ಗೆ ಕರೆ ಮಾಡಿದಾಗ  ಆತ್ಮೀಯವಾಗಿ ಪರಿಚಯ ಮಾಡಿಕೊಂಡು  ಶಿರಸಿ ಇತಿಹಾಸದ  ಬಗ್ಗೆ ಮೈಸೂರಿನಿಂದ  ಕರೆ  ಮಾಡಿದ್ದಕ್ಕೆ ಹರುಷ  ವ್ಯಕ್ತ ಪಡಿಸಿ.  ಕೆಲವು ಮಾಹಿತಿ ನೀಡಿದರು.  ಅಲ್ಲಿಂದ  ನಮ್ಮಿಬ್ಬರ  ಪರಿಚಯ ಆರಂಭವಾಯಿತು. ಹಲವಾರು ಸಾರಿ  ಶಿರಸಿಗೆ ಬಂದ್ರೂ  ಅವರ ಭೇಟಿಮಾಡಲು ಆಗಿರಲಿಲ್ಲ. ಇತಿಹಾಸ   ಜಾತ್ರೆಯ  ಮೆರವಣಿಗೆಗೆ   ಶಿರಸಿ ಮಾರಿಕಾಂಬೆ ಆಶೀರ್ವಾದ 


ಶಿರಸಿಯ  ಹಲವಾರು ವಿಚಾರಗಳ ಬಗ್ಗೆ  ಮಾಹಿತಿ  ತಿಳಿಯಲು ಇವರನ್ನು ಬಹಳಷ್ಟು ಸಾರಿ ಫೋನ್ ಮೂಲಕ ನಾನು ಕಾಡಿಸಿದ್ದರೂ  ಬೇಸರ ಮಾಡಿಕೊಳ್ಳದೆ, ಇತಿಹಾಸದ  ಮಾಹಿತಿ ನೀಡುತ್ತಿದ್ದ ಇವರನ್ನು ಭೇಟಿಯಾಗುವ ಹಂಬಲ  ಶುರುವಾಯ್ತು. ಅದಕ್ಕೆ ಕಾಲ ಕೂಡಿಬಂದಿದ್ದೆ  ಶಿರಸಿಯಲ್ಲಿ  ಜರುಗಿದ  ರಾಜ್ಯಮಟ್ಟದ  ಇತಿಹಾಸ ಸಮ್ಮೇಳನದಲ್ಲಿ. ನಿಜಕ್ಕೂ ಶಿರಸಿಯಂತಹ  ಒಂದು ತಾಲೂಕು ಕೇಂದ್ರದಲ್ಲಿ  ಒಂದು  ರಾಜ್ಯಮಟ್ಟದಲ್ಲಿ   ಜರುಗುವ  ಕಾರ್ಯಕ್ರಮಕ್ಕಿಂತ  ಶಿಸ್ತು ಬದ್ದವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ  ಆಯೋಜಿಸಿ  ನಿರ್ವಹಣೆ ಮಾಡಿದ್ದು  ಲಕ್ಷ್ಮೀಶ್ ಹೆಗ್ಡೆಯವರ  ಸಾಹಸಕ್ಕೆ ಸಾಕ್ಷಿ,


ನನಗೂ ಇಷ್ಟಾ  ಶಿರಸಿಯ  ಇತಿಹಾಸ  ಅಂದ್ರೂ ಕಮಲಾ ಹಂ  ಪ. ನಾ . 


ಶಿರಸಿಯ ಸುತ್ತಮುತ್ತ  ಬಹಳಷ್ಟು ಐತಿಹಾಸಿಕ ತಾಣಗಳಿವೆ, ಪ್ರಕೃತಿಯ ಮಡಿಲಲ್ಲಿ   ಅನೇಕ  ಇತಿಹಾಸದ  ಕುರುಹುಗಳನ್ನು ಬಚ್ಚಿಟ್ಟುಕೊಂಡು  ಶಿರಸಿ  ಇತಿಹಾಸಕಾರರಿಗೆ  ಸವಾಲಾಗಿ ನಿಂತಿದೆ. ಇಂತಹ ಇತಿಹಾಸದ ಚಕ್ರವ್ಯೂಹ ಭೇದಿಸುತ್ತ , ರಾಜ್ಯಮಟ್ಟದ ಇತಿಹಾಸ  ಜಾತ್ರೆ  ಏರ್ಪಡಿಸುತ್ತ   ಹಲವಾರು  ದಿಗ್ಗಜರ  ಸಮಕ್ಷಮದಲ್ಲಿ   ನೋಡ್ರಪ್ಪ  ನಮ್ಮೂರ ಇತಿಹಾಸದ ತಾಕತ್ತು ಇದು ಅಂತಾ ತೋರಿಸುವ  ಶ್ರೀ ಲಕ್ಷ್ಮೀಶ್ ಹೆಗ್ಡೆ  ರ    ಛಲಕ್ಕೆ  ಯಾರಾದ್ರೂ ಸೈ  ಅನ್ನಲೇಬೇಕು.  ಶಿರಸಿಯ ಇತಿಹಾಸ  ಹೇಳುವ  ಇವರ ಇತಿಹಾಸ   ಏನೂ ಅಂತಾ  ಕೆದಕಿದಾಗ   ಸಿಕ್ಕಿದ್ದು  ಮತ್ತೊಂದು ಇತಿಹಾಸ .

ಇತಿಹಾಸಕಾರ  ಹಾಗು ಅವರ ಅಂತರಂಗ      {ಚಿತ್ರ ಕೃಪೆ ಲಕ್ಷ್ಮೀಶ್ ಹೆಗ್ಡೆ. } 
ಹೌದ್ರೀ  ಇತಿಹಾಸಕಾರನಿಗೂ ಒಂದು ಇತಿಹಾಸ  ಇರುತ್ತೆ,   ಬನ್ನಿ ಬನ್ನಿ ಹೀಗೆ ...! ಅದೊಂದು ದಿನ   ದಿನಾಂಖ  18 ಫೆಬ್ರವರಿ  1984  ರಂದು ಶಿರಸಿಯ  ಸೋಂದೆ ಸಮೀಪದ  ಬಾಡ್ಲಾ ಕೊಪ್ಪದ    ಶ್ರೀ ರಾಮಚಂದ್ರ ಹೆಗ್ಡೆ  ಹಾಗು ಮಮತಾ ಹೆಗ್ಡೆ ಯವರ ಮನೆಯಲ್ಲಿ  ಸಂಭ್ರಮವೋ ಸಂಭ್ರಮ.  ಅಂದು  ಒಂದು ಗಂಡು ಮಗು  ಅಳುತ್ತಾ  ಅಳುತ್ತಾ  ಐತಿಹಾಸಿಕ  ಸೋಂದಾ  ಪ್ರದೇಶದಲ್ಲಿ  ತನ್ನ ಜನ್ಮ ಪಡೆದಿತ್ತು. ಮನೆಯಲ್ಲಿನ ಹಿರಿಯರ ಪ್ರಭಾವವೋ ಅಥವಾ ಆ ಮಗು ಜನಿಸಿದ  ಮಣ್ಣಿನ  ಗುಣವೋ ಕಾಣೆ  ಆ ಮಗು ಬೆಳೆಯುತ್ತಾ  ಬೆಳೆಯುತ್ತಾ   ಇತಿಹಾಸದ ಕಡೆ  ಆಕರ್ಷಿತನಾಗಿ  ಶಿರಸಿ ಸುತ್ತ ಮುತ್ತಲಿನ    ದೇವಾಲಯ, ವೀರಗಲ್ಲು, ಮಾಸ್ತಿ ಕಲ್ಲು,  ಶಾಸನಗಳು,  ಸ್ಮಾರಕಗಳನ್ನು  ಪ್ರೀತಿಸತೊಡಗಿತು.ಆ ಮಗುವೇ  ಇಂದಿನ ಶ್ರೀಯುತರಾದ  ಲಕ್ಷ್ಮೀಶ್ ಹೆಗ್ಡೆಯವರು.      ಬಿ. ಎ . ಮುಗಿಸಿದ  ನಂತರ ಪುರಾತತ್ವ ಶಾಸ್ತ್ರ , ಇತಿಹಾಸದಲ್ಲಿ ಎಂ. ಎ . ಮಾಡಿ ನಂತರ ಎಂ. ಫಿಲ್.  ಮಾಡಿದರು, ನಂತರ ಇತಿಹಾಸಕ್ಕೆ ಶಾಸನಗಳೇ ಭದ್ರ ಬುನಾದಿ ಎಂದು ತಿಳಿದು  ಶಾಸನ ಶಾಸ್ತ್ರದಲ್ಲಿ ಡಿಪ್ಲಮೋ[ Diplama in  epigraphy] ಮಾಡಿ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ. ಇನ್ನೇನು ಇಷ್ಟೆಲ್ಲಾ ಮಾಡಿದ ಮೇಲೆ ಕೆಲ್ಸಾ ಸಿಗೋಲ್ವೆ  ಅನ್ನೋಹಾಗೆ   ಸೋಂದೆ  ಸ್ವರ್ಣವಲ್ಲಿ  ಸಂಸ್ಥಾನ ಮಠ ಕ್ಕೆ ಸೇರಿದ  ಶ್ರೀನಿಕೇತನ  ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ  ಜೊತೆಗೆ   ಆಡಳಿತಾಧಿಕಾರಿ  ಹುದ್ದೆ  ಲಭಿಸುತ್ತದೆ. ವೃತ್ತಿ ಯಾವುದಾದ್ರೇನು ಪ್ರವೃತ್ತಿ ಗೆ ನ್ಯಾಯ ದೊರಕಬೇಕಲ್ಲ.  ಶಿರಸಿ  ಸುತ್ತಮುತ್ತಲಿನ  ಇತಿಹಾಸದ   ಸೆಳೆತ  ಇವರನ್ನು ಆವರಿಸಿದ ಕಾರಣ,  ಪ್ರವೃತ್ತಿಯನ್ನೇ  ವೃತ್ತಿ ಮಾಡಿಕೊಳ್ಳುತ್ತಾರೆ  ಶಿರಸಿಯ  ಇತಿಹಾಸಕ್ಕೆ ಏನಾದರೂ ಕೊಡುಗೆ ನೀಡುವ  ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ..ಸೋಂದಾ ಅರಸರ ಕಾಲ್ಪನಿಕ  ಚಿತ್ರ. 


  2007 ರಲ್ಲಿ ಉತ್ತರ ಕನ್ನಡ  ಜಿಲ್ಲೆ ಅದರಲ್ಲೂ ವಿಶೇಷವಾಗಿ  ಶಿರಸಿಯ ಸುತ್ತ ಮುತ್ತ ಐತಿಹಾಸಿಕ  ಬನವಾಸಿ, ಸುಧಾಪುರ ಅಥವಾ ಸೋಂದೆಯ  ಅರಸು ಮನೆತನ , ಒಂದೇ ಎರಡೇ  ಬಗೆದಷ್ಟು  ಇತಿಹಾಸದ  ಅಚ್ಚರಿಗಳು, ಮಾಹಿತಿ ಸಿಗುತ್ತವೆ, ಲಕ್ಷ್ಮೀಶ್ ಹೆಗ್ಡೆ  ಅವರು ಶಿರಸಿ ಸುತ್ತ ಮುತ್ತ ಶಾಸನ, ವೀರಗಲ್ಲುಗಳ   ಅಧ್ಯಯನ,       ಐತಿಹಾಸಿಕ   ಸೋಂದೆ ಅರಸರುಗಳ  ಬಗ್ಗೆ ಅವರ  ಕೋಟೆಗಳ , ಬಗ್ಗೆ ಸಂಶೋಧನೆ , ಬನವಾಸಿಯ  ಚಾಲುಕ್ಯರ  ಬಗ್ಗೆ  ಸಂಶೋಧನೆ  ಮಾಡುತ್ತಾ ಮಾಡುತ್ತಾ   ಹಳೆ ಮೈಸೂರು ಸಂಸ್ಥಾನದಲ್ಲಿ   ಬೆಂಜಮಿನ್  ಲೆವಿಸ್  ರೈಸ್  ಅವರು ಮಾಡಿದ  ಐತಿಹಾಸಿಕ  ಸಂಶೋಧನೆಗಳಿಗೆ ಸರಿ ಸಮಾನವಾಗಿ  ಇತಿಹಾಸದ ವಿಚಾರಗಳನ್ನು ಹೆಕ್ಕಿ ತೆಗೆದು  ಜನರ ಮುಂದಿಡುತ್ತಾರೆ.  ನಂತರ ಅಮೇರಿಕಾದ ಮಿಚಿಗನ್  ವಿಶ್ವವಿದ್ಯಾಲಯದ   ಸಂಶೋಧಕರಾದ "ಎಲಿಜಬತ್ ಬ್ರಡ್ಜಸ್ "  ರವರ  ಜೊತೆಯಲ್ಲಿ  ಇಕ್ಕೇರಿ ಹಾಗು ಕೆಳದಿ   ಸಂಶೋಧನೆಯಲ್ಲಿ  ಕಾರ್ಯನಿರ್ವಹಿಸಿ, ವಿದೇಶಿಯರು  ಹೇಗೆ  ಐತಿಹಾಸಿಕ  ವಿಚಾರಗಳನ್ನು ಸಂಶೋಧನೆ ಮಾಡುತ್ತಾರೆ ಎಂಬುದನ್ನು  ತಿಳಿದುಕೊಳ್ಳುತ್ತಾರೆ. ಅನುಭವ  ಮಾಗಿದಂತೆ  ಬರೆಯುವ ಕೈಗಳು  ಬರೆಯುತೊಡಗುತ್ತವೆ.  ಈ ಬರವಣಿಗೆಯಿಂದ  ಒಂಬತ್ತು  ಐತಿಹಾಸಿಕ ಕೃತಿಗಳು, ಹತ್ತು  ಐತಿಹಾಸಿಕ  ನಾಟಕಗಳು  ಉದಯವಾಗುತ್ತವೆ. ಐತಿಹಾಸಿಕ ನಾಟಕಗಳ  ಪಾತ್ರಗಳಿಗೆ  ಜೀವಕೊಡಲು  "ರಂಗ ಚರಿತ " ಎಂಬ  ರಂಗ ಸಂಘಟನೆಯನ್ನು  ಹುಟ್ಟುಹಾಕುತ್ತಾರೆ. ಈ ಮೂಲಕ  ಸಮಾಜಕ್ಕೆ ಇತಿಹಾಸದ  ಬಗ್ಗೆ ತಿಳುವಳಿಕೆ  ನೀಡಲು  ಹಾದಿ ಕಂಡುಕೊಳ್ಳುತ್ತಾರೆ.

ಬನ್ನಿ ಇತಿಹಾಸ  ತಿಳಿಯೋಣ

ಇತಿಹಾಸದೆಡೆಗೆ  ತುಡಿಯುತ್ತಿದ್ದ  ಶ್ರೀ ಲಕ್ಷ್ಮೀಶ್ ಹೆಗ್ಡೆ  ಸುಮ್ಮನೆ ಕೂರುವ  ವ್ಯಕ್ತಿಯಲ್ಲ  ಜನರಲ್ಲಿ ಇತಿಹಾಸ ಪ್ರೀತಿ  ಬೆಳಸಲು, ರಾಜ್ಯ ಮಟ್ಟದ ಇತಿಹಾಸದ   ಜಾತ್ರೆಯನ್ನು  ಕಳೆದ ಎರಡು ವರ್ಷಗಳಿಂದ  "ಉತ್ತರ ಕನ್ನಡ  ಜಿಲ್ಲಾ ಚರಿತ್ರಾ  ಅಭಿಯಾನ" ಎಂಬ   ಹೆಸರಿನಲ್ಲಿ  ಕಾರ್ಯಕ್ರಮ  ಮಾಡುತ್ತಿದ್ದಾರೆ  , ಸುಮಾರು ಒಂದೂವರೆ ತಾಸು  ಇತಿಹಾಸದ ಹಲವು ವಿಚಾರಗಳ ಬಗ್ಗೆ  ವಿದ್ವಾಂಸರಿಂದ   ವಿಚಾರ ಮಂಡನೆ  , ಉಪನ್ಯಾಸ, ನಂತರ  ದೃಶ್ಯ ಮಾಧ್ಯಮದ ಮೂಲಕ,  ಪ್ರಹಸನಗಳ ಮೂಲಕ  , ಉತ್ತರ ಕನ್ನಡ ಜಿಲ್ಲೆಯ,   ಇತಿಹಾಸದ ವಿಚಾರಗಳನ್ನು    ಜನರಿಗೆ  ಮನಮುಟ್ಟುವಂತೆ   ತಿಳಿಸಿಕೊಡುತ್ತಿದ್ದಾರೆ.  

 
ಇತಿಹಾಸ ತಿಳಿಯಲು ಬಂದ  ಮನಸುಗಳು 


ಹರಿಯುವ ನದಿಯನ್ನು ನಿಲ್ಲಿಸಲು ಸಾಧ್ಯವೇ,   ಹರಿಯುತ್ತಲೇ ಇರುತ್ತದೆ  ಹಾಗೆಯೇ  ಇವರ ಇತಿಹಾಸದ ಅಭಿಯಾನ  ಮುಂದುವರೆದು ಕಳೆದ ನಾಲ್ಕು  ವರ್ಷಗಳಿಂದ   " ನಮ್ಮ ನೆಲದ ಕಥೆ " ಎನ್ನುವ ಅಂಕಣದ ಮೂಲಕ  ಜನರಿಗೆ ಇತಿಹಾಸದ ಕೌತುಕಮಯ ವಿಚಾರಗಳನ್ನು  ತಿಳಿಸಿಕೊಡುತ್ತಿದ್ದಾರೆ.   ಇದನ್ನು ಓದಿದ ಯಾರಾದ್ರೂ   ಅಚ್ಚರಿಯಿಂದ   "ಆಹಾ  ನಮ್ಮೂರಿನಲ್ಲಿ ಹೀಗೂ ಉಂಟಾ.....?  "   ಅನ್ನಲೇಬೇಕು ಹಾಗಿರುತ್ತವೆ    ಮಾಹಿತಿ.  ಯಾರಿಗೆ ತಾನೇ  ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇರೋಲ್ಲಾ   ಹೇಳಿ,  ಹಾಗಾಗೇ   ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರು  ತಮ್ಮ ಸುತ್ತಮುತ್ತಲಿನ ಸ್ಥಳೀಯ ಇತಿಹಾಸ   ಕುರಿತು ಗಂಭೀರ  ಚಿಂತನೆ ನಡೆಯುವಂತಾಗಲು    ರಾಜ್ಯ ಮಟ್ಟದ  ಇತಿಹಾಸ ಸಮ್ಮೇಳನ   ಆಯೋಜನೆಗೆ ಮುಂದಾಗುತ್ತಾರೆ.  ಜೊತೆಗೆ   ಇತಿಹಾಸದ  ಪಯಣದಲ್ಲಿ ಕಾಣಸಿಗುವ ಸಾಧಕರನ್ನು ಗೌರವಿಸಲು ಸೋದೆ ಸದಾಶಿವರಾಯ  ಪ್ರಶಸ್ತಿಯನ್ನು   ಪ್ರತಿಷ್ಠಾಪಿಸುತ್ತಾರೆ  . ಕಳೆದ ಎರಡು ವರ್ಷಗಳಿಂದ   ಅದ್ಭುತವಾದ  ಯಶಸ್ಸನ್ನು   ಈ  ಇತಿಹಾಸ ಸಮ್ಮೇಳನ  ಗಳಿಸಿ ಶಿರಸಿ  ಊರಿನ   ಗೌರವಕ್ಕೆ  ಇತಿಹಾಸದ  ಹೆಮ್ಮೆಯ ಕಿರೀಟ  ತೊಡಿಸಿದೆ.  ನಾಡಿನ ಹಲವಾರು  ಪ್ರಖ್ಯಾತ  ಇತಿಹಾಸಕಾರರು   ಇದರಲ್ಲಿ ಭಾಗವಹಿಸಿ   ಶಿರಸಿಯ  ಇತಿಹಾಸದ  ಗೌರವವನ್ನು ಹೆಚ್ಚಿಸಿದ್ದಾರೆ.
ಅರೆ ಇತಿಹಾಸದ  ಸಮ್ಮೇಳನಕ್ಕೆ  ಇಷ್ಟು ಜನ ಬರ್ತಾರಾ...?


ಇತಿಹಾಸದ ಹುಚ್ಚನ್ನು ಹತ್ತಿಸಿಕೊಂಡವರು ಸುಮ್ಮನಿರಲು ಸಾಧ್ಯವೇ ...? ಮುಂದಿನ ಪೀಳಿಗೆಯವರು  ಇತಿಹಾಸದ ತೇರನ್ನು ಎಳೆಯ ಬೇಕಲ್ಲವೇ ...? ಅದಕ್ಕಾಗಿ  ತಮ್ಮ ಸಂಸ್ಥೆ   ಶ್ರೀ ನಿಕೇತನದ   ಮಕ್ಕಳಿಗೆ   ಇತಿಹಾಸದ ರುಚಿ ಹತ್ತಿಸಲು  ಶ್ರಮಿಸುತ್ತಿದ್ದಾರೆ, ಹಾಗಾಗಿ ಮಕ್ಕಳಿಂದಲೇ  ಇತಿಹಾಸದ ವಿಚಾರಗಳನ್ನು  ಅಧ್ಯಯನ  ಹಾಗು ಸಂಶೋಧನೆ ಮಾಡಿಸಿ  ನಾಡಿನ  ಐತಿಹಾಸಿಕ  ಸ್ಥಳ ಬನವಾಸಿಯ ಬಗ್ಗೆ  ಮಕ್ಕಳಿಂದಲೇ ಗ್ರಂಥ ರಚನೆ  ಮಾಡಿಸಿದ್ದು   ನಿಜಕ್ಕೂ ಹೆಮ್ಮೆ ಪಡುವ   ವಿಚಾರ.  ೨೦೧೩ ರಲ್ಲಿ  ಆ ಇತಿಹಾಸ ಕಾರರ  ಬಗ್ಗೆ ವಿಚಾರ ತಿಳಿದು ಇವರ ಸಂಶೋಧನಾ ಸಾಹಿತ್ಯಕ್ಕಾಗಿ   ಡಾಕ್ಟರ್ ಎಂ.ಎಂ. ಕಲಬುರ್ಗಿಯವರಿಂದ  " ಬಸವರಾಜ ಕಟ್ಟೇಮನಿ  ರಾಜ್ಯ ಪ್ರಶಸ್ತಿ"  ನೀಡಿ  ಗೌರವಿಸಲಾಗಿದೆ.


ಬನವಾಸಿಯ ಮೂಲ ಮಧುಕೇಶ್ವರ ದೇವಾಲಯ. 


ಇತಿಹಾಸವನ್ನೇ  ಉಸಿರಾಡುತ್ತಿರುವ  ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರ ಸಾಧನೆಯನ್ನು ಯಾರೂ ಗುರುತಿಸಲಿಲ್ವೇ  ಅಂತಾ  ಅಂದುಕೊಂಡಿರಾ ...?  ನಿಜ   ಇಂತಹ ಸಾಧನೆಗಳನ್ನು  ಗುರುತಿಸುವವರು ಬಹಳ ಕಡಿಮೆ, ಜೊತೆಗೆ  ಇಂತಹ  ಅದ್ಭುತ  ವ್ಯಕ್ತಿಗಳು  ಪ್ರಚಾರ ಪ್ರಿಯರಲ್ಲಾ, ಸದ್ದಿಲ್ಲದೇ  ತಮ್ಮ ಪಾಡಿಗೆ   ತಾವು  ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ.  "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ  " ಎನ್ನುವ ಕವಿತೆಗೆ   ಅನ್ವರ್ಥವಾಗಿ  ಬದುಕುವ  ಈ ಇತಿಹಾಸಕಾರನನ್ನು  ಕನ್ನಡ ನಾಡಿಗೆ ಕೊಡುಗೆ ನೀಡಿದ "ಶಿರಸಿ"  ಗೆ  ಅಲ್ಲಿನ ಇತಿಹಾಸಕ್ಕೆ  ಒಮ್ಮೆ ಜೈ ಅಂದುಬಿಡೋಣ.Sunday, January 1, 2017

ಹೋಗಿಬಾ ..... 2016 ನಿನಗೆ ಶುಭವಾಗಲಿ, ನಿನಗೆ ಬಯ್ಯಬೇಕೋ ಹೊಗಳಬೇಕೋ ತಿಳಿಯುತ್ತಿಲ್ಲ

ಚಿತ್ರ ಕೃಪೆ ಅಂತರ್ಜಾಲ . 


ನಮಸ್ತೆ  ಬಹಳ ತಿಂಗಳ ನಂತರ  ನಿಮ್ಮ  ಮುಂದೆ  ಹಾಜರಾಗಿದ್ದೇನೆ, ಎಲ್ಲರೂ  ಹೊಸ ಕ್ಯಾಲಂಡರ್ ವರ್ಷವನ್ನು ಸ್ವಾಗತಿಸಿ ಖುಷಿಯಿಂದ ಮೆರೆದಾಡುತ್ತಾರೆ. ಆದರೆ  ತಾವು ಕಳೆದ ವರ್ಷದಲ್ಲಿ  ನಡೆದ  ಘಟನೆಗಳನ್ನು ಮೆಲುಕುಹಾಕಿದಾಗ   ಜೀವನ ದರ್ಶನ ಆಗುತ್ತದೆ.  ನನ್ನ    2016  ರ  ವರ್ಷದ  ಪಯಣದ ಮೆಲುಕು  ನಿಜಕ್ಕೂ  ಏನೋ ಹೊಸ  ಸಂದೇಶ ನೀಡಿ , ಜೀವನ ದರ್ಶನ ಮಾಡಿಸಿ  ಹೊರಟು  ಬಿಟ್ಟಿತು. ನಿನ್ನೆ ಹೊಸ ಕ್ಯಾಲಂಡರ್  ವರ್ಷ  ಬರಮಾಡಿಕೊಳ್ಳುವ  ಯಾವುದೇ ಅವಕಾಶ ನೀಡದೆ  ನಿದ್ರಾದೇವಿ  ನನ್ನನ್ನು  ತನ್ನ  ಮಡಿಲಿಗೆ  ಸೇರಿಸಿಕೊಂಡು ಬಿಟ್ಟಳು , ಯಾವುದೋ ಒಂದು ಹೊತ್ತಿನಲ್ಲಿ  ೨೦೧೬ ರ ವರ್ಷ  ನನ್ನ ಮುಂದೆ ಕುಳಿತು  ಅಣಕಿಸಿ ನಗುತ್ತಾ  ಇತ್ತು.  ನಾನು ಬಹಳ ಸಿಟ್ಟಿನಿಂದಾ   "ಅಂತೂ ಕೊನೆಗೂ ತೊಲಗುತ್ತಿದ್ದೀಯಲ್ಲಾ  ..... .......  ತೊಲಗಪ್ಪಾ..... ಸಾಕು ನಿನ್ನ ಸಹವಾಸ " ಅಂದೇ  .  ನಸುನಕ್ಕ   ೨೦೧೬ "ಯಾಕಯ್ಯ  ಅಷ್ಟೊಂದು ಕೋಪಾನಾ ನನ್ನ ಮೇಲೆ......?"  , "ಒಮ್ಮೆ  ಜನವರಿಯಿಂದ  ಡಿಸೆಂಬರ್  ವರೆಗೆ ನಿನ್ನ  ಜೀವನದ  ಘಟನೆಗಳನ್ನು ನೆನಪು ಮಾಡಿಕೊ  ನಂತರ  ಹೇಳು ನಿನ್ನ  ಮಾತನ್ನು"   ಅಂದಿತು, ನಾನು ನೆನಪಿನ ಲೋಕ ಹೊಕ್ಕಿದೆ .

ಜನವರಿ ೨೦೧೬  ಹೊಸ ಕ್ಯಾಲಂಡರ್ ವರ್ಷದ  ಶುಭಾಶಯಗಳ  ಮಹಾಪೂರ ಹರಿದು ಬಂತು , ಹೊಸ ವರ್ಷದ ಮುಂದಿನ ದಿನಗಳನ್ನು  ಸಂತಸವಾಗಿ ಕಳೆಯುವ   ಬಗ್ಗೆ  ಯೋಜನೆ ಹಾಕಿಕೊಳ್ಳಲು  ಮನಸು ಮಾಡಿದ್ದೆ, ಜನವರಿ ೪ ರಂದು  ಅಪ್ಪಳಿಸಿತು    ಹರಿಣಿ ಅಮ್ಮನ   ಮರಣದ  ಸುದ್ಧಿ,  ನಿಜಕ್ಕೂ  ಅಲುಗಾಡಿ ಹೋದೆ, ನಾನು ಬಹಳ ಗೌರವಿಸಿದ್ದ , ನನ್ನ ಬಗ್ಗೆ ಬಹಳ ಪ್ರೀತಿ ತೋರಿದ್ದ  ಒಂದು ಹಿರಿಯ ಜೀವ  ತನ್ನ  ಇಹಯಾತ್ರೆ   ಮುಗಿಸಿತ್ತು, ಬೆಂಗಳೂರಿಗೆ  ಓಡಿಬಂದೆ   ಅಂತಿಮ ದರ್ಶನ ಮಾಡಿದೆ , ಆದರೆ  ಈ ಒಂದು  ಹಿರಿಯ ಜೀವದ  ಸಾವು   ಮನಸಿನ ಮೇಲೆ ಪರಿಣಾಮ  ಬೀರಿತ್ತು, ನೋವನ್ನು ಮರೆಯಲು ಬಹಳ  ದಿನಗಳೇ ಬೇಕಾದವು, ೨೦೧೬  ರ ವರ್ಷದ  ಪಯಣದ ಪ್ರಾರಂಭದಲ್ಲಿ  ಈ ಘಟನೆ  ನೋವಿನ,  ಮುನ್ನುಡಿ  ಬರೆಯಿತು.  ಜನವರಿ ೧೫ ರಂದು   ನನ್ನ ತಂದೆಯವರ ವಾರ್ಷಿಕ  ಕಾರ್ಯಕ್ರಮ ನನ್ನ ಬದುಕಿಗೆ ದಾರಿದೀಪವಾದ  ತಂದೆಯವರ ಸ್ಮರಣೆಗೆ  ಕಾರಣವಾಯ್ತು .  ಜನವರಿ  ೧೭ ರಂದು ಪದ ಕಮ್ಮಟದ  ಕಾರ್ಯಕ್ರಮ ನನ್ನ ಮುಖದಲ್ಲಿ  ಸ್ವಲ್ಪ ನಗು ಬರಲು ಕಾರಣ ಆಯ್ತು.   ಈ ನಡುವೆ ಶ್ರೀಕಾಂತ್ ಮಂಜುನಾಥ್  ಜೊತೆಯಲ್ಲಿ   ಬಿಳಿಗಿರಿಗೆ  ಭೇಟಿ  ಸ್ವಲ್ಪ ಮನಸಿಗೆ ಮುದ ನೀಡಿತ್ತು.
   ಫೆಬ್ರವರಿ ೨೦೧೬  ನನ್ನ ಬದುಕಿನ  ಹಾದಿಯನ್ನು  ಬದಲಿಸಿದ ತಿಂಗಳು . ದಿನಾಂಖ ೧೩ , ಎರಡನೇ ಶನಿವಾರ  ಮಾಡದ  ತಪ್ಪಿಗೆ ಬೆಲೆತೆತ್ತ  ದಿನ,  ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಬೈಕ್ ನಲ್ಲಿ ಅಪರಿಚಿತ  ಗುದ್ದಿ ಮಾಯವಾದ ದಿನ,  ನಾನು  ಸಾವಿನ  ಬಾಗಿಲನ್ನು   ತಟ್ಟಿದ್ದ  ದಿನ,      ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು, ಕಣ್ಣು  ಮಸುಕು   ಮಸುಕಾಗಿತ್ತು, ಕೊನೆಗೆ ಏನೂ ಕಾಣದಾಗಿತ್ತು .    ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,    ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,     ಒಣಗಿದ  ಬಾಯಿಯಲ್ಲಿ  ಮಾತನಾಡಲು   ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................!  ದೇಹದಲ್ಲಿನ ಚೇತನ   ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "ನಿಜಾ ನನಗೆ ಫೆಬ್ರವರಿ ೨೦೧೬  ನೋವಿನ ದಿನಗಳಿಗೆ ಹೆಬ್ಬಾಗಿಲು ತೆರೆದು ಸ್ವಾಗತಿಸಿತ್ತು. ನನ್ನದೇ ಕಲ್ಪನೆಯಲ್ಲಿ, ಪರಿಸರ  ನೋಡುತ್ತಾ, ನಗುನಗುತ್ತಾ    ಎಲ್ಲೆಡೆ  ಓಡಾಡುತ್ತಿದ್ದ  ನನಗೆ  ಸಾಕು ನಿನ್ನ ಮೆರೆದಾಟ  ಅಂತಾ  ಹಾಸಿಗೆಗೆ ಎತ್ತಿ ಬಿಸಾಕಿದ  ತಿಂಗಳು ಫೆಬ್ರವರಿ ೨೦೧೬ . ಜೀವ ಉಳಿಸಿದ   ಜಗದೀಶ್  ನನ್ನ ಬಾಳಿಗೆ ಬೆಳಕಾಗಿ  ಬಂದ ತಿಂಗಳು  ಸಹ ಹೌದು.
ಮಾರ್ಚಿ ೨೦೧೬ ರಿಂದ ಆಗಸ್ಟ್ ೨೦೧೬ ವರೆಗೆ ಹಾಸಿಗೆಯಲ್ಲಿ  ಮಲಗಿ  ಸಾವು ಬದುಕಿನ ನಡುವೆ ನನ್ನ ಹೋರಾಟ , ಮನೆಯವರೆಲ್ಲಾ  ಅಂದ್ರೆ  ನನ್ನ ಪತ್ನಿ, ತಾಯಿ, ಮಗ  ಇವರೆಲ್ಲರೂ ಆತಂಕದಲ್ಲಿ ಕಳೆದ ದಿನಗಳು, ಆಸ್ಪತ್ರೆ, ಮನೆ, ಹಾಸಿಗೆ, ಅಷ್ಟೇ ನನ್ನ ಪ್ರಪಂಚ,  ಓದುವ ಹಾಗಿಲ್ಲ, ಟಿ .ವಿ . ನೋಡುವ ಹಾಗಿಲ್ಲ, ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ,  ದೇಹ ದಲ್ಲಿ ಚೈತನ್ಯ ವಿಲ್ಲದೆ ಕುಟುಕು ಜೀವ ಇಟ್ಟುಕೊಂಡು  ಬದುಕು ಸವೆಸಿದ ದಿನಗಳವು,  ಗೆಳೆಯರು  ನೆಂಟರು, ಆಗಮಿಸಿದರು  ಪ್ರೀತಿಯ  ಹೊನಲು ಹರಿಸಿದರು , ನಾನು ಬದುಕಲೇ ಬೇಕೆಂಬ  ಆಸೆ ಹುಟ್ಟಿಸಿ ಚೈತನ್ಯ ನೀಡಿದರು. ಆಗಸ್ಟ್ ೨೦೧೬ ರ ಅಂತ್ಯಕ್ಕೆ   ಸ್ವಲ್ಪ ಚೇತರಿಕೆ ಕಾಣಿಸಿತು, ಬದುಕಿನಲ್ಲಿ ಭರವಸೆ ಹುಟ್ಟಿತ್ತು, ಆದರೆ ಕೆಲವೇ ದಿನಗಳು ಅಷ್ಟೇ .

ಆಗಸ್ಟ್ ೨೦೧೬ ರಿಂದ ನವೆಂಬರ್  ೨೦೧೬ ಮತ್ತೆ ಕೈಕೊಟ್ಟ  ಆರೋಗ್ಯ  , ನನ್ನ  ಕುತ್ತಿಗೆಯ ನರಗಳು, ಎಡಗಾಲಿನ ನರಗಳು ತೊಂದರೆ ಕೊಡಲು ಶುರುಮಾಡಿದವು, ಅಸಾಧ್ಯ ನೋವು, ದೇಹದಲ್ಲಿ  ಸರಿಯಾದ ಚಾಲನೆ ಇಲ್ಲಾ, ನೋವನ್ನು ತಡೆದುಕೊಂಡೆ,  ನೋವಿನಲ್ಲಿ ಜೋರಾಗಿ  ಅತ್ತುಬಿಡೋಣ  ಅಂದ್ರೆ  ಮನೆಯಲ್ಲಿನ  ಎಲ್ಲರೂ  ಹೆದರಿಕೊಳ್ಳುತ್ತಾರೆ,  ಯಾರಿಗೂ ಹೇಳಲಾಗದ ಸಂಕಟ,  ವೈದ್ಯರು  ನೀಡಿದ   ನೋವು  ನಿವಾರಕ ಮಾತ್ರೆಗಳು , ಔಷದಿ , ಚುಚ್ಚುಮದ್ದು  ಪಡೆದು  ದಿನ ದೂಡುತ್ತಿದ್ದೆ,   ಒಮ್ಮೊಮ್ಮೆ ನೋವಿನಿಂದ   ಬೇಸರವಾಗಿ  ಆತ್ಮಹತ್ಯೆ ಮಾಡಿಕೊಳ್ಳುವ ಮನಸಾಗುತ್ತಿತ್ತು, ಆದರೆ   ನನ್ನ ನೋವನ್ನು ನಾನೇ ಅನುಭವಿಸುವ ಅನಿವಾರ್ಯ ನನ್ನದಾಯಿತು. ನೋವು, ಹತಾಶೆ, ನಿರಾಸೆ, ನನ್ನ ಮನದ  ನಗುವನ್ನು ಹತ್ಯೆಮಾಡಿ ಸಮಾಧಿ ಮಾಡಿದ್ದವು. ಆದರೆ ನನ್ನ ಕುಟುಂಬದಲ್ಲಿ  ಎಲ್ಲರೂ  ಮಗುವಿನಂತೆ ನನ್ನನ್ನು ಪೋಷಣೆ ಮಾಡಿದರು . ಬದುಕುವ ಭರವಸೆ ಕಳೆದುಕೊಂಡ ನನಗೆ ಅಮ್ಮನ  ಮಾತುಗಳು ಸಂಜೀವಿನಿ ಆಗಿದ್ದವು. ಹಾಗು ಹೀಗೂ  ನರಳುತ್ತಾ  ಡಿಸೆಂಬರ್ ೨೦೧೬ ಬಂದಿತು.
ಡಿಸೆಂಬರ್ ೨೦೧೬  ರಲ್ಲಿ  ನನ್ನ ದೇಹ ನನ್ನ ಮಾತು ಕೇಳುವ ಹಂತಕ್ಕೆ ಬಂದಿತು, ನರಗಳ ನೋವು ಕಾಲಿನದು ಕಡಿಮೆಯಾಗಿ, ಕುತ್ತಿಗೆಯದು  ಸಹ ನೋವು ತಹಬದಿಗೆ   ಬರಲು ಶುರು ಆಯ್ತು,  ಆದರೂ  ಒಮ್ಮೆ ತಲೆ ನೋವು ಬಂದರೆ  ಕನಿಷ್ಠ  ಮೂರು ನಾಲ್ಕು ದಿನ, ಇರುತ್ತಿತ್ತು,  ಜೀವನ ಸಾಕು ಅನ್ನುವ ಹಂತಕ್ಕೆ  ತಲುಪಿ ಬಿಟ್ಟೆ, ಅಪಘಾತದಲ್ಲಿ  ಬದುಕಲೇ ಬಾರದಿತ್ತು  ಅನ್ನಿಸಿತ್ತು, ಆದರೆ  ಆತ್ಮೀಯ ಕುಟುಂಬ , ಗೆಳೆಯರು , ಪ್ರೀತಿಯಿಂದ  ಸಹಾಯಮಾಡಿ , ಪೋಷಿಸಿ , ಶುಭ ಹಾರೈಸಿ  ೨೦೧೭ ರಲ್ಲಿ  ನನ್ನ ನೋವನ್ನು ಗೆದ್ದು   ಮತ್ತೊಮ್ಮೆ  ನಗು ನಗುತ್ತಾ  ಹಕ್ಕಿಯಂತೆ ಹಾರುವ  ಭರವಸೆ   ಮೂಡಲು ಕಾರಣರಾಗಿದ್ದಾರೆ.

೨೦೧೬ ರ ಕ್ಯಾಲಂಡರ್ ವರ್ಷ  ಜೀವನದಲ್ಲಿ  ಅನುಭವದ  ಸತ್ಯ ದರ್ಶನ ಮಾಡಿಸಿತು. ಅದರ  ವಿವರ ಇಲ್ಲಿದೆ ನೋಡಿ.
 ೧] ಸಾಯುತ್ತಿದ್ದವನನ್ನು  ಅಪರಿಚಿತ  ರಕ್ಷಿಸುತ್ತಾನೆ ಅಂದ್ರೆ  ಅವನು ಖಂಡಿತಾ ನನಗೆ  ಮರುಜನ್ಮ  ನೀಡಿದ  ದೇವರು.ಅನ್ನಿಸಿದ್ದು ನಿಜ. 
೨] ಎಲ್ಲಾ  ವೈದ್ಯರೂ ಕೆಟ್ಟವರಲ್ಲಾ  ಅವರಲ್ಲೂ ಮಾನವೀಯತೆ ಇದೆ, ಕೆಲವು ವೈದ್ಯರು   ಮನೆಗೆ ಬಂದು ನನಗೆ ಚಿಕಿತ್ಸೆ ನೀಡಿ        ಹಣ ನಿರಾಕರಣೆ ಮಾಡಿದ್ದು  ನಿಜಕ್ಕೂ  ಮನತುಂಬಿ ಬಂತು.
೩] ಸಾಮಾಜಿಕ ತಾಣದ ಗೆಳೆತನ  ಅಂದ್ರೆ ಬರೀ  ಓಳು ಗುರು ಅನ್ನೋಮಾತಿಗೆ  ಅಪವಾದವಾಗಿ, ನೂರಾರು ಸಂಖ್ಯೆಯಲ್ಲಿ  ಗೆಳೆಯರು  ಖುದ್ದುಬಂದು ಮಾನಸಿಕ ಸ್ಥೈರ್ಯ ತುಂಬಿದ್ದು, ಜೊತೆಗೆ ನನ್ನ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು  ನನ್ನ ಬಗ್ಗೆ ಕಾಳಜಿ ವಹಿಸಿದ್ದು  ಮರೆಯಲಾಗದ ವಿಚಾರ.
೪] ನನ್ನಿಂದ  ಸಹಾಯ ಪಡೆದಿದ್ದ  ಕೆಲವು ಗೆಳೆಯರು   , ನನ್ನ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡುತ್ತಾ , ಏನೂ ಆಗಿಲ್ಲಾ   ರೀ  ಇವನದು ನಾಟಕ  ಅಂದಿದ್ದು  ಗೆಳೆತನದ ಅರ್ಥಕ್ಕೆ ಹೊಸ ಅನರ್ಥ ಬರೆದಿತ್ತು,
೫] ಹತ್ತಿರ ಹೋದರೆ  ನಾವೆಲ್ಲಿ  ಹಣ ಖರ್ಚು ಮಾಡಬೇಕಾಗುತ್ತೋ  ಅಂತಾ  ದೂರದಲ್ಲೇ ಉಳಿದ ಕೆಲವು ನೆಂಟರು. ಹಾಗು ಗೆಳೆಯರು.
೬] ಬೇಡವೆಂದರೂ ಕೇಳದೆ ನೀನು ನಮಗಾಗಿ ಬದುಕ ಬೇಕು  ಅಂತಾ ಹಠ ತೊಟ್ಟು  ಹಲವಾರು ರೀತಿಯ  ಸಹಾಯ ಮಾಡಿದ     ಆತ್ಮೀಯ ಗೆಳೆಯರು .
೭] ನನ್ನ  ಶತ್ರು ಎಂದು ಭಾವಿಸಿದ್ದ ವ್ಯಕ್ತಿ  ಮನೆಗೆ ಬಂದು ನನ್ನನ್ನು ಆಲಂಗಿಸಿ  ನನ್ನ ಬೆನ್ನಿಗೆ ನಿಂತದ್ದು  ಒಂದು ಅಚ್ಚರಿ.
೮] ಅಯ್ಯೋ ಅವನು ಇನ್ನೂ ಸತ್ತಿಲ್ವಾ  , ಹಾಳಾದವನು ಸತ್ತಿದ್ರೆ ಹಾರ ಹಾಕಿ ಮರೆಯಬಹುದಿತ್ತು  ಅಂದಾ  ಕೆಲವು ಹಿತೈಷಿಗಳು, ಹಾಗು ಮಿತ್ರರು , ಬಡ್ಡಿಮಗ  ಮೆರೀತಿದ್ದ ಕಣ್ರೀ   ಹಾಗೆ ಆಗಬೇಕೋ ಅವನಿಗೆ  ಅಂದಾ ಮತ್ತಷ್ಟು ಗೆಳೆಯರು ಹಾಗಿ ಹಿತೈಷಿಗಳು. "ದಿನಾ ಸಾಯೋವ್ರ್ಗೆ ಅಳೋವ್ರ್ಯಾರು  ನಡೀರಿ ಇವೆಂದು ಇದ್ದದ್ದೇ" ಅಂದುಕೊಂಡ ಮಹನೀಯರುಗಳು . ನನ್ನ ಮುಂದೆ  ಅನುಕಂಪದ ನಾಟಕ ಮಾಡಿ  ತಮ್ಮ  ನಿಜ ಬಣ್ಣದ ದರ್ಶನ ಮಾಡಿಸಿದ್ದರು .

೯] ಎಷ್ಟು ಹಣ ಸುರಿದರೂ  ಆಯಸ್ಸು ಇಲ್ಲದಿದ್ರೆ  ಸಾವನ್ನು ಗೆಲ್ಲಲು  ಆಗೋಲ್ಲ  ಅನ್ನುವ ಸತ್ಯ .
೧೦] ಸತ್ತ ಮೇಲೆ ಮನುಷ್ಯ ನಿಗೆ ಆಗುವ ಅನುಭವದ ದರ್ಶನ [ ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .}

೧೧]  ನನ್ನ ಒಳಿತಿಗಾಗಿ  ಯಾವ ಯಾವುದೋ ದೇವಾಲಯಗಳಿಗೆ  ತೆರಳಿ ನನ್ನ ಹೆಸರಿನಲ್ಲಿ ಪೂಜೆ ಮಾಡಿಸಿ , ಪ್ರಾರ್ಥನೆ ಮಾಡಿ  ಪ್ರಸಾದ ನೀಡಿದ ಸಾಮಾಜಿಕ ತಾಣದ  ಹಲವಾರು ಗೆಳೆಯರು.  ಗೆಳೆತನಕ್ಕೆ ಹೊಸ ಭಾಷ್ಯ ಬರೆದರು . 

೧೨] ನಗುವನ್ನು, ಸಂತೋಷವನ್ನು   ಬೇರೆಯವರಿಗೆ ಹಂಚಿಕೊಳ್ಳ ಬಹುದು,  ಆದರೆ  ಸಂಕಟ, ನೋವು, ನರಳಾಟ  ಇವಿಗಳನ್ನು ಯಾರಿಗೂ  ವರ್ಗಾಯಿಸಲು  ಆಗೋಲ್ಲ ಎನ್ನುವ ಸತ್ಯ ದರ್ಶನ . ಹಾಗು  ಅಪರಿಚಿತನಾದ  ನನ್ನನ್ನು ಬದುಕಿಸಿದ  ಚನ್ನರಾಯಪಟ್ಟಣದ  ಜಗದೀಶ್ ಹಾಗು ಅಲ್ಲಿನ ಸರ್ಕಾರಿ ಆಸ್ಪತ್ರೆಯ  ವೈದ್ಯರಾದ  ಶ್ರೀನಿವಾಸ್ ಅವರುಗಳು  ನನ್ನ ಜೀವನದ ಪವಾಡಕ್ಕೆ ಕಾರಣ ಕರ್ತರು . 


ಜೀವನದ  ನೋವಿನ  ಸುಳಿಯ ಬಲೆ  ಹೀಗೆ ಇರುತ್ತದೆ. 


ಎಷ್ಟೆಲ್ಲಾ   ವಿವಿಧ  ಮುಖಗಳ ದರ್ಶನ  ಮಾಡಿದ್ದಾಯ್ತು  ಈ ವರ್ಷದಲ್ಲಿ  ನಿಜಕ್ಕೂ  ನಾನು  ಏನೂ ಅಂತಾ   ನನ್ನಲ್ಲೇ ವಿಮರ್ಶೆ ಮಾಡಿಕೊಳ್ಳೋ  ಒಂದು ಅವಕಾಶ ಸಿಕ್ಕಿದ್ದು ಸುಳ್ಳಲ್ಲ. ಆ ನಿಟ್ಟಿನಲ್ಲಿ  ನಾನು ೨೦೧೬ ರಲ್ಲಿ ಕಳೆದ ಈ ದಿನಗಳು ಒಂದು ವಿಶ್ವವಿದ್ಯಾಲಯದಲ್ಲಿ  ಕಲಿಸಲಾರದ್ದನ್ನು ಕಲಿಸಿತು .೨೦೧೬ ರ ಬಗ್ಗೆ ಈಗ ಬರೆಯುತ್ತಿದ್ದರೂ ಮನಸಿಗೆ ಆಗಿರುವ ಆಘಾತದಿಂದ ಹೊರಬರಲು  ೨೦೧೭ ರ ಹೊಸ ಬೆಳಕು ಕಾಣುತ್ತಿದೆ, ಸುಮಾರು ಹನ್ನೊಂದು ತಿಂಗಳು  ನಾಲ್ಕು ಗೋಡೆಗಳ ನಡುವೆ  ಹಾಸಿಗೆಯಲ್ಲಿನ  ಬದುಕು, ಹಲವಾರು  ವಿಚಾರಗಳನ್ನು  ದರ್ಶನ ಮಾಡಿಸಿದೆ.  ನೋವು ಹತಾಶೆ ಯನ್ನು ಗೆಲ್ಲುವ   ಛಲ  ಮೂಡಿಸಿದೆ. ೨೦೧೬ ಜೀವನದ ಮರೆಯಲಾರದ ಒಂದು ಘಟ್ಟವಾಗಿ ನನ್ನ ಬಾಳಿನ  ಇತಿಹಾಸ ರಚಿಸಿದೆ. ಚಿತ್ರ ಕೃಪೆ ಅಂತರ್ಜಾಲ 
                                                 
೨೦೧೭ ಬಾರಯ್ಯ  ಮುಂದೆ ಸಾಗೂ ಅಂತಾ  ನಗು ನಗುತ್ತಾ  ಕರೆಯುತ್ತಿದೆ . ನಾನೂ ಆಸೆಗಣ್ಣಿನಿಂದ ನೋವಿನ  ಮುಖದಲ್ಲಿ ನಗುವ  ಮೂಡಿಸಿಕೊಂಡು  ೨೦೧೭ ಎಂಬ  ಗೆಳೆಯನ ಕೈಹಿಡಿದು ಸಾಗಲು  ಹೆಜ್ಜೆ ಹಾಕುತ್ತಿದ್ದೇನೆ. ಮುಂದಿನದು  ಏನೋ ಗೊತ್ತಿಲ್ಲ.
ಚಿತ್ರ ಕೃಪೆ ಅಂತರ್ಜಾಲ ಅಂದ ಹಾಗೆ ನನ್ನ ಬ್ಲಾಗಿಗೆ ೯ ವರ್ಷ ಆಯ್ತು , ಅದಕ್ಕಾಗಿ ಸ್ವಲ್ಪ ಸಂಭ್ರಮ ಪಡುತ್ತೇನೆ. ನಿಮಗೆಲ್ಲಾ  ಹೊಸ ಕ್ಯಾಲಂಡರ್ ವರ್ಷದ   ಶುಭಾಶಯಗಳು , ನಿಮ್ಮ ಎಲ್ಲಾ  ಸುಂದರ ಕನಸುಗಳು ನನಸಾಗಲಿ,  ನಿಮ್ಮೆಲ್ಲರಿಗೆ ಶುಭವಾಗಲಿ.  ಮತ್ತೆ ಸಿಗೋಣ ನಮಸ್ಕಾರ .