Friday, December 30, 2011

ಅಜ್ಞಾನಿ ಯೊಬ್ಬ ಪ್ರಾರಂಭಿಸಿದ ಬ್ಲಾಗ್ ಗೆ ನಾಲ್ಕು ವರ್ಷವಂತೆ !!!! ಹಾಗೂ ನಿಮಗೆ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳಂತೆ!!!ಬ್ಲಾಗ್ ಗೆಳೆಯರ ಬಳಗ.


ನಮಸ್ಕಾರ ಕೇವಲ ನಾಲ್ಕು ವರ್ಷದ ಹಿಂದಿನ ಮಾತು  , ಮೂರುಜನ  ಸ್ನೇಹಿತರ ಗುಂಪೊಂದು   ಟೀ ಕುಡಿಯಲು ಮೈಸೂರಿನ ಇರ್ವಿನ್ ರಸ್ತೆಯ ಒಂದು ಹೋಟೆಲಿನಲ್ಲಿ ಸೇರಿತ್ತು. ಸೇರಿದ್ದ ಮೂರುಜನರಲ್ಲಿ ಒಬ್ಬರು ಶರತ್  ಮಾತಾಡುತ್ತಾ  [ಅವರು ಆಗಲೇ ಸ್ಥಳೀಯ ಆಂಗ್ಲ ಪತ್ರಿಕೆಗೆ  ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು ] ನಿಮಗೆ ಗೊತ್ತಾ ಬಾಲು, ಇತ್ತೀಚೆಗಂತೂ ವಿಜ್ಞಾನ  ಬಹಳ ಮುಂದುವರೆದಿದೆ , ನಿಮಗೆ ಅಚ್ಚರಿ ಆಗುತ್ತೆ ನಾನು ಈಗ ಅಂತರ್ಜಾಲದಲ್ಲಿ  ಬ್ಲಾಗ್ ಅಂತಾ ಪುಟ ಮಾಡಿದ್ದೇನೆ ಹಾಗು ಅದರಲ್ಲಿ  ಇಂಗ್ಲೀಶ್ ನಲ್ಲಿ  ಬರೆಯುತ್ತಿದ್ದೇನೆ , ನಾನು ಬರೆದ ತಕ್ಷಣ ಪ್ರಪಂಚದ ಯಾವುದೋ ದೇಶದಿಂದ ಫೀಡ್ ಬ್ಯಾಕ್ ಸಿಗುತ್ತೆ ಸಾರ್ ಅಂದ್ರೂ ,  ಮತ್ತೊಬ್ಬ ಗೆಳೆಯ ಸಾಫ್ಟ್ ವೇರ್  ಟೆಕ್ಕಿ  ಗುರುದತ್ ಸಹ ಅದಕ್ಕೆ ದನಿ ಗೂಡಿಸಿದರು, ಮೊದಲು ಈ ಮಾತನ್ನು ಕೇಳಿ ಬ್ಲಾಗಿನ ಗಂಧ ಗಾಳಿ ಇಲ್ಲದ ನಾನು ಬಿಟ್ಟ ಬಾಯಿ ಬಿಟ್ಟಂತೆ ಹೌದಾ  ಅಂದಿದ್ದೆ. ಮನದಲ್ಲಿ ಅರೆ ನಾನೂ ಬ್ಲಾಗ್ ಮಾಡ ಬಹುದಾ ಅನ್ನಿಸಿದ್ದು ನಿಜ  ಆದರೆ ಈ ಅಜ್ಞಾನಿಗೆ  ಮನೆಯಲ್ಲಿ  ಕಂಪ್ಯೂಟರ್ , ಇಂಟರ್ನೆಟ್ ಇದ್ದರೂ ಬ್ಲಾಗ್ ಬಗ್ಗೆ ಏನೂ  ತಿಳುವಳಿಕೆ ಇರಲಿಲ್ಲ.  ಸರಿ ಆತ್ಮೀಯ ಗೆಳೆಯ ಗುರುದತ್ ನನ್ನು ಕಾಡಿ ಹೇಗೆ ಸಾರ್ ಬ್ಲಾಗ್ ಮಾಡೋದು ಅಂದೇ , ಬಾಲು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ , ಗೂಗಲ್ ಸರ್ಚ್ ಗೆ ಹೋಗಿ ಅಲ್ಲಿ ಜಾಲಾಡಿ ಅಲ್ಲಿ ಸಿಗುತ್ತೆ ಮಾಹಿತಿ ಅಂದ್ರೂ .
ಬ್ಲಾಗ್ ಗೆಳೆಯರು ಹೀಗೂ ಉಂಟು

ಮನದಲ್ಲಿ ಬ್ಲಾಗ್ ಸೆಳೆತ ಕಾಡಲು ಆರಂಭಿಸಿತ್ತು. ಮನೆಗೆ ಬಂದವನು  ಗೂಗಲ್ ಸರ್ಚ್ ಜಾಲಾಡಿದೆ  ಬ್ಲಾಗ್ ಬಗ್ಗೆ ಊ ಹೂ  ಏನೂ ಹೋಗಲಿಲ್ಲ ಈ ಬಡಪಾಯಿ ತಲೆಗೆ , ಮರಳಿ ಯತ್ನವ ಮಾಡು , ಮರಳಿ ಯತ್ನವ ಮಾಡು ಅಂತಾ ಹಲವು ತಿಂಗಳು ಜಾಲಾಡಿದ ನನಗೆ ಮೊದಲು ಸಿಕ್ಕಿದ್ದು"ಬ್ಲಾಗ್ ಸ್ಪಾಟ್  " ಹಾಗು ಹೀಗೂ ಹಲವು ತಪ್ಪುಗಳ ನಡುವೆ ನನ್ನದೇ ಒಂದು ಪುಟ  ಮಾಡಿಕೊಂಡೆ ಹೆಸರು '' ನಿಮ್ಮೊಳಗೊಬ್ಬ ಬಾಲು "  ಅದ್ಯಾಕೋ ಗೊತ್ತಿಲ್ಲಾ ಈ ಹೆಸರು ಆ ಕ್ಷಣದಲ್ಲಿ ಹೊಳೆದು  ಬ್ಲಾಗಿಗೆ ಸೇರಿಕೊಂಡಿತು. ಬ್ಲಾಗ್ ಪುಟ ಆಯಿತು ಬರೆಯೋದು ಹೇಗೆ ಅದೂ ಕನ್ನಡದಲ್ಲಿ ಬರೆಯೋದು ಹೇಗೆ  ......???? ಗೊತ್ತಿಲ್ಲಾ , .... ಸರಿ  ಗೊತ್ತಿದ್ದ ಹರಕು ಮುರುಕು ಇಂಗ್ಲೀಶ್ ನಲ್ಲೆ ಬರ್ದೇ ಬಿಟ್ಟೆ ದಿನಾಂಕ  30 -12 - 2007   ರಂದು " hello this is my first blog ,  ellarigoo hosa varshada shubhaashayagalu "        ಅಂತಾ ಎರಡು ಸಾಲಿನ ಬರಹ . ಆದ್ರೆ ನಾನೊಬ್ಬ ಭೂಮಿಮೇಲೆ ಇದ್ದೀನಿ ಅಂತಾ ಗೊತ್ತಿಲ್ಲದ ಬ್ಲಾಗ್ ಲೋಕದಿಂದ ...ಊ ಹೂ ಯಾರೂ ಕ್ಯಾರೆ ಅನ್ನಲಿಲ್ಲ. ಆದ್ರೆ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋಹಾಗೆ  ಮೊದಲ ಬರಹದ ಖುಷಿ ಮಜಾ ಇತ್ತು.ಆದ್ರೆ ಕನ್ನಡ ಬರೆಯೋಕೆ ಬರೋಲ್ಲಾ ಅನ್ನೋ ಚಿಂತೆ  ....ಮತ್ತೆ  ಪ್ರಯತ್ನ ಸಾಗಿತ್ತು.ಸುಮಾರು ಒಂದೂ ವರೆ ವರ್ಷ ಕನ್ನಡ ಬರಹ ಕಲಿಯಲು  ಹುಡುಕಾಟ ಬ್ಲಾಗ್ ಬಗ್ಗೆ ಹುಡುಕಾಟ , ಇತ್ಯಾದಿ ಸರ್ಕಸ್ ನಡೆದಿತ್ತು. ೧೧- ೧೦ ೨೦೦೯ ರಲ್ಲಿ ಪ್ರಕಟವಾದ ನನ್ನ ವರಾಹ ನಾಥ ಕಲ್ಲಹಳ್ಳಿ ಸಣ್ಣ ಲೇಖನಕ್ಕೆ ಗೆಳೆಯ ದೀಪು  ಕಾಮೆಂಟ್ ಹಾಕಿ ಮೊದಲ ಓದುಗರಾದರು. ನಂತರ ಮತ್ತೊಂದು ಲೇಖನಕ್ಕೆ ವಿ.ಆರ್.ಭಟ್ಟರ ಮೆಚ್ಚುಗೆ ಸಿಕ್ಕಿತು.,ನಂತರ ಶಿವೂ , ಹಾಗೆ ಅಜಾದ್ ಸರ್ ಬಾಲು ನಿಮ್ಮನ್ನು ಹಿಂಬಾಲಿಸುತ್ತಿದ್ದೇನೆ!!!! ಅಂದಾಗ  ತಲೆಕೆರೆದು ಕೊಂಡೆ , ಯಾವ ರೀತಿ  ಗೆಳೆಯರ ಬ್ಲಾಗ್ ಗಳನ್ನೂ ಹೇಗೆ ಹಿಂಬಾಲಿಸುವುದು  ತಿಳಿಯಲಿಲ್ಲ. ನಂತರ ಅದನ್ನೂ ಕಲಿತು ನಾನೂ ಬೇರೆ ಬ್ಲಾಗ್ ಗಳ  ಹಿಂಬಾಲಿಸಲು ಆರಂಭಿಸಿದೆ. ಕುಂಟುತ್ತಾ ತೆವಳುತ್ತಾ ಸಾಗಿದ್ದ ಬ್ಲಾಗಿಗೆ    22 -07 -2010     ರಲ್ಲಿ ಬರೆದ ಚಿಕ್ಕ ಮಗಳೂರಿನ ಅನುಭವದ  ಮೊದಲ ಕಂತು  ಇಷ್ಟ  ಆಗಿ  ಹಲವರು ಬೆನ್ನು ತಟ್ಟಿದರು . ನಂತರದ ಎರಡು ಕಂತು ಗಳಿಗೂ ಅದೇ ರೀತಿಯ ಪ್ರತಿಕ್ರಿಯೆ ಬಂತು .ಇದೆ ವೇಳೆಯಲ್ಲಿ ಶಿವೂ ಅವರಿಂದ ಮೇಲ್ ಬಂದು 22 -08 -2010 ರಂದೂ ತಮ್ಮ ಹಾಗೂ ಅಜಾದ್ ಸರ್ ರವರ " ಗುಬ್ಬಿ ಎಂಜಲು" , ಹಾಗು "ಜಲನಯನ" ಪುಸ್ತಕಗಳನ್ನು ಬೆಂಗಳೂರಿನ  ಜೆ.ಸಿ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ  ಬಿಡುಗಡೆ ಮಾಡಲಿದ್ದು ಬರುವಂತೆ  ಆತ್ಮೀಯ ಕರೆ , ಅಚ್ಚರಿ ಎಂದರೆ  ಈ ಕಾರ್ಯಕ್ರಮಕ್ಕೆ ಬಂದಿದ್ದು  ಸುಮ್ಮನೆ ನೋಡೋಣ ಅಂತಾ!!! ಯಾಕೆಂದ್ರೆ ಯಾರೂ ಪರಿಚಯ ವಿರಲಿಲ್ಲ , ನಾನ್ಯಾವ ದೊಡ್ಡ ವಿ.ಐ.ಪಿ. ಅಂತಾ ಗುರುತಿಸುತ್ತಾರೆ ಅಂತಾ ಅನ್ನಿಸಿತ್ತು. ಸುಮ್ಮನೆ ಹಾಗೆ ಹೋಗಿ ಒಂದು  ಐದು  ನಿಮಿಷ ಇದ್ದು ಜಾಗ ಖಾಲಿ ಮಾಡಿದ್ರಾಯ್ತು ಅಂತಾ ಬಂದಿದ್ದೆ. ಆದ್ರೆ ಕನ್ನಡ ಭವನಕ್ಕೆ  ಬಂದತಕ್ಷಣ  ಎದುರು ಸಿಕ್ಕವರೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಗಡೆ......, ಅವರೇ ಪರಿಚಯ ಮಾಡಿ ಕೊಂಡರು,
ಜೊತೆಯಾಗಿ  ಸಾಗೋಣ  ಬನ್ನಿ   ಬ್ಲಾಗಿಗರೇ .
ಬ್ಲಾಗಿಗರ ಬಿಡಿಸಲಾರದ ಸ್ನೇಹಬಂಧ 
ನಂತರ ಹಲವರಿಗೆ ನನ್ನ ಪರಿಚಯ ಮಾಡಿಕೊಟ್ಟರು , ಅಲ್ಲಿ  ಅವತ್ತು  ತೆರೆದು  ಕೊಂಡಿದ್ದು ನಾನರಿಯದ ಸುಂದರ ಬ್ಲಾಗ್ ಲೋಕ. ಪ್ರೀತಿ ವಿಶ್ವಾಸಗಳ ಹೊನಲಿನ  ನಡುವೆ ತೇಲಿಹೊಗಿದ್ದೆ.  ಸರಿ ಅಂತಾ ನಾನೂ ನನ್ನ ಕ್ಯಾಮರದಲ್ಲಿ ನನಗೆ ಇಷ್ಟಾ ಬಂದಂತೆ ಕ್ಲಿಕ್ಕಿಸಲು ಶುರುಮಾಡಿದೆ ಕಾರ್ಯಕ್ರಮ ಪೂರ್ತ ನನ್ನ ಕ್ಯಾಮರದಲ್ಲಿ ಸೆರೆಯಾಗಿತ್ತು. ಎಲ್ಲರ ಒಡನಾಟ ಮನಸ್ಸಿಗೆ ಮುದ ನೀಡಿತ್ತು  ಮನೆಗೆ ಬಂದವನೇ ಅಳುಕಿನಿಂದಲೇ ಕಾರ್ಯಕ್ರಮದ ಫೋಟೋಗಳನ್ನು ಬ್ಲಾಗ್ ನಲ್ಲಿ ಹಾಕಿ ಹಾಸ್ಯದ ಅಡಿಬರಹ ನೀಡಿದೆ. { ಹೊಸ ಪರಿಚಯದ ಜನರ  ಛಾಯಾಚಿತ್ರಗಳಿಗೆ ಹಾಸ್ಯ ಅಡಿಬರಹ ನೀಡುವಾಗ ಯಾರು ಎಲ್ಲಿ ತಪು ತಿಳಿಯುತ್ತಾರೋ ಎನ್ನುವ ಭಯವಿತ್ತು.}   ಆದರೆ ಶುರು ಆಯ್ತು ನೋಡಿ ಪ್ರೀತಿಯ ಅನಿಸಿಕೆಗಳ ಪ್ರವಾಹ , ಅವತ್ತು "ನಿಮ್ಮೊಳಗೊಬ್ಬ  ಬಾಲು"   ಅನ್ನುವ ಒಂದು ಬ್ಲಾಗ್ ಹಲವರ ಪ್ರೀತಿಯ ಬ್ಲಾಗ್ ಆಯಿತು. ನಂತರ ಬಿಡಿ ನಿಮ್ಮೆಲ್ಲರ ಪ್ರೋತ್ಸಾಹದೊಂದಿಗೆ  ಬ್ಲಾಗ್ ತನ್ನದೇ ರೀತಿಯಲ್ಲಿ ಸಾಗುತ್ತಿದೆ. ಪ್ರಕಟಿಸಿರುವ 173  ಲೇಖನದಲ್ಲಿ ಕನಿಷ್ಠ 150 ಲೇಖನಗಳು ಹಲವರ ಮನಗೆದ್ದಿವೆ. ಈ ಬ್ಲಾಗಿನ ಉದ್ದೇಶ ಉತ್ತಮ ಸಂದೇಶದ ಲೇಖನಗಳನ್ನು  ,ನೀಡುವುದೇ ಆಗಿದೆ. ಇನ್ನು  ಬ್ಲಾಗ್ ಲೋಕದಲ್ಲಿ ಸಿಕ್ಕ ಬಹಳಷ್ಟು ಜನ ಸ್ನೇಹಿತರು  ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜ್ಞಾನಿಗಳೇ , ಪ್ರಕಾಶ್ ಹೆಗ್ಗಡೆ, ಶಿವೂ, ಅಜಾದ್, ಸುಗುಣ, ಸುನಾಥ್ ಸರ್,ಮಹೇಶ್, ಡಾಕ್ಟರ್ ಕೃಷ್ಣಮೂರ್ತಿ , ಶಶಿ ಜೋಯಿಸ್, ಗುರು ಮೂರ್ತಿ ಹೆಗ್ಗಡೆ, ಪ್ರವೀಣ್ ಗೌಡ,  ಎಂ.ಎಸ. ಹೆಬ್ಬಾರ್ , ವಿ.ಆರ್. ಭಟ್, ಉಮೇಶ್ ದೇಸಾಯಿ, ಕ್ಷಣ ಚಿಂತನೆ  ಚಂದ್ರು, ಅನಿಲ್ ಬೆಡಗಿ, ನಾಗು,ಚೇತನಭಟ್ ದಂಪತಿಗಳು, ಶಿವಪ್ರಕಾಶ್ , ರಾಘು,  ಹಳ್ಳಿ ಹುಡುಗ ತರುಣ್, ನವೀನ , ದಿನಕರ್ ಮೊಗೆರ ,  ಬದರಿ ನಾಥ್ ಪಳವಲ್ಲಿ , ಸುಬ್ರಹ್ಮಣ್ಯ ಮಾಚಿಕೊಪ್ಪ, ಪ್ರಭಾಮಣಿ ನಾಗರಾಜ, ಮಾನಸ ಜಕ್ಕಹಳ್ಳಿ , ಸೀತಾರಾಂ ಕೆಮ್ಮಣ್ಣು, ದಿಗ್ವಾಸ್ ಹೆಗ್ಗಡೆ ,ಡಾಕ್ಟರ್  ಸಂತೋಷ್, ಪರಾಂಜಪೆ, ಎಸ. ಗಿರೀಶ್,,ಪ್ರದೀಪ್  ರಾವ್ , ಡಾ.ಬಿ.ಆರ್.ಸತ್ಯನಾರಾಯಣ್ , ಉಮೇಶ್ ವಸಿಸ್ಟ್
      ಶಿವಶಂಕರ್ ಯೆಳವತ್ತಿ .....ಇನ್ನೂ ಬಹಳ ಬಹಳ ಉತ್ತಮ ಗೆಳೆಯರುಸಿಕ್ಕಿದರು. [ಇನ್ನೂ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ,] [ ಮರೆತು ಬಿಟ್ಟಿರುವ ಹೆಸರಿನ ಗೆಳೆಯರಲ್ಲಿ ಕ್ಷಮೆ ಬೇಡುವೆ]  ನನ್ನ ಜ್ಞಾನ ಭಂಡಾರ ಬೆಳೆಯಿತು. ಬ್ಲಾಗ್ ಲೋಕದಲ್ಲಿ  ನಿಮ್ಮೊಳಗೆ ನಾನೂ ಒಬ್ಬನಾಗಿ  ಬೆಳೆಯುತ್ತಿದ್ದೇನೆ . ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ಅಂದಹಾಗೆ ಈ ಅಜ್ಞಾನಿ ಅಂದು ಆರಂಭಿಸಿದ ಬ್ಲಾಗಿಗೆ  ನಾಲ್ಕು ವರ್ಷ ತುಂಬಿದೆ. ಸಂತಸದ ವಿಚಾರ ನಿಮ್ಮೊಡನೆ ಹಂಚಿಕೊಂಡಾಗ ಮನಸ್ಸಿಗೆ ಖುಷಿಯಾಗುತ್ತದೆ.
ಸಾಗುವ ಹಾದಿಯಲ್ಲಿ ನಿಮ್ಮ ಪ್ರೀತಿಯ  ಹಾರೈಕೆ  ಇರಲಿ.
ಎಲ್ಲರಿಗೂ 2012  ರ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು . ಸಾಗುವ ಹಾದಿಯಲ್ಲಿ ನಿಮ್ಮ ಗೆಳೆತನದ ಪ್ರೀತಿಯ ಹಾರೈಕೆ ಇರಲಿ.

38 comments:

ವಿ.ಆರ್.ಭಟ್ said...

ಬಾಲು ಸರ್, ಶಿಶುವೊಂದು ಭೂಮಿಗೆ ಬರುವುದು ಬಟ್ಟೆ ರಹಿತವಾಗಿ, ತೆರಳುವುದೂ [ನಮ್ಮ ಕಣ್ಣಿಗೆ ಕಾಣದಿದ್ದರೂ]ಬಟ್ಟೆರಹಿತವಾಗಿಯೇ! ಹುಟ್ಟಾ ಯಾರೂ ವಿಶ್ವವಿದ್ಯಾನಿಲಯದ ಕುಲಸಚಿವರಲ್ಲ! ಬೆಳೆಯುತ್ತಾ ಅಂಬೆ ಹರೆಯುತ್ತೇವೆ, ನಡಿಗೆ ಕಲಿಯುತ್ತೇವೆ, ಯಾವುದು ಬೇಕು ಯಾವುದು ಬೇಡ ಎನ್ನಲು ಆರಂಭಿಸುತ್ತೇವೆ. ಅದೇ ಮಾದರಿಯಲ್ಲಿ ತಂತ್ರಜ್ಞಾನದಲ್ಲಿ ಮುಂದುವರಿದ ಜನಾಂಗ ಪರಸ್ಪರ ಸಂವಹಿಸಲು ಬಳಸುವ ಮಾರ್ಗ ಅಂತರ್ಜಾಲ, ನನ್ನ ಇಬ್ಬರು ಬಾಲ್ಯದ ಸಹಪಾಠಿಗಳು ಡಾಕ್ಟರೇಟ್ ಪಡೆದವರು, ಮೊನ್ನೆ ಊರಲ್ಲಿ ಭೇಟಿಯಾಗಿ ಮಾತುಕತೆ ನಡೆಯಿತು-ನಂಬಿ: ಅವರಿಗೆ ಬ್ಲಾಗ್ ಎಂದರೇನು ತಿಳಿಯದು, ವರ್ಷಕ್ಕೊಮ್ಮೆ ಈಮೇಲ್ ನೋಡಿದರೆ ದೊಡ್ಡದು! ಆಲೋಕವೇ ಬೇರೆ- ಈ ನಮ್ಮ ಲೋಕವೇ ಬೇರೆ. ನಾನು ಬ್ಲಾಗ್ ಬರೆಯುತ್ತೇನೆಂಬ ಸುದ್ದಿ ಕೇಳಿ ಸಂತಸಗೊಂಡರು, ಕ್ಷಣಕಾಲ ಓದುವುದಕ್ಕೆ ಸಿಗುತ್ತದೋ ಎಂದು ಚಡಪಡಿಸಿದರು, ಆಗ ಹೇಳಿದೆ--ಬರಹಗಳನ್ನು ಪುಸ್ತಕಗಳನ್ನಾಗಿಸಿ ನಿಮಗೆ ಒದಗಿಸಲು ಪ್ರಯತ್ನಿಸುತ್ತೇನೆ ಎಂದು.

ಅಜ್ಞಾನಿ ಯಾರೂ ಕೂಡ ಇಲ್ಲ, ಈ ಜಗದ ಪ್ರತೀ ಜೀವಿಯೂ ಒಂದಲ್ಲಾ ಒಂದು ರಂಗದಲ್ಲಿ ಜ್ಞಾನಿಯೇ. ಹುಟ್ಟಿದ ಕರುವಿಗೆ ಹಾಲೂಡುವುದನ್ನು ಯಾರೂ ಹೇಳಿಕೊಡುವುದಿಲ್ಲ, ಹಾರುವ ದುಂಬಿಗೆ ಮಕರಂದ ಇಲ್ಲಿದೆ ಎಂದು ಯಾರೂ ತೋರಿಸುವುದಿಲ್ಲ, ಈಜುವ ಮೀನಿಗೆ ನೀರಲ್ಲಿ ಹೀಗೆ ಬಾ ಎಂದು ಯಾರೂ ಮಾರ್ಗದರ್ಶಸುವುದಿಲ್ಲ! ಅದರಂತೇ ಯಾವುದೇ ಕೆಲಸಕ್ಕೂ ಸಮಯಾನುಸಾರ ಕೆಲವರು ನಿಮಿತ್ತಮಾತ್ರಕ್ಕೆ ಗುರುವಾಗುತ್ತಾರೆ, ಮಾರ್ಗದರ್ಶಕರಾಗುತ್ತಾರೆ. ಈ ದಿಸೆಯಲ್ಲಿ ಸ್ನೇಹಿತರಿಂದ ತಿಳಿದು ಅಲ್ಲೊಂಚೂರು ಇಲ್ಲೊಂಚೂರು ಕಲಿತು ಬ್ಲಾಗ್ ಬರೆದ, ಬರೆದು ನಮ್ಮೆಲ್ಲರೊಡನೆ ಬೆರೆತ, ಬೆರೆತು ಸಾಕು ವರ್ಷಗಳಲ್ಲಿ ಇಷ್ಟೆಲ್ಲಾ ಬೆಳೆದ ನಿಮ್ಮ ಸಾಧನೆ ಕಮ್ಮಿಯೇನಲ್ಲ, ನಿಮ್ಮ ಬರಹಗಳಲ್ಲಿ ’ಕಾವೇರಿರಂಗ’ದ ಕಥನಗಳು ನನಗೆ ಬಹಳ ಹಿಡಿಸಿದವು. ನಿಮ್ಮ ಬರಹಕಾರ್ಯ ಸಖತ್ತಾಗಿ ಸಾಗಲಿ ಪೊಗದಸ್ತಾದ ಪುಷ್ಕಳ ಭೋಜನ ನಮ್ಮ ಮನದ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುವಲ್ಲಿ ಸಹಕಾರಿಯಾಗಲಿ ಎಂದು ಮನದುಂಬಿ ನಿಮಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳನ್ನೂ ಈ ಸಂದಿಯಲ್ಲೇ ಜೊತೆಗೆ ಪೇರಿಸಿ ಶುಭಾಶಂಸನೆಗೈಯ್ಯುತ್ತಿದ್ದೇನೆ, ನಮಸ್ಕಾರ.

ಜಲನಯನ said...

ನಿಜಕ್ಕೂ ನಮ್ಮೊಳಗೊಬ್ಬ ಆಗುರುವ ಪ್ರೀತಿಯ ಬಾಲು ಬ್ಲಾಗಿಗೆ ಶುಭಾಶಯಗಳು. ನಾಲ್ಕು ತುಂಬಿದ ಕಿಶೋರನ ’ಶೋರ್’ ಹೆಚ್ಚಾಗಿ ಮನೆ ಮಂದಿಗೆಲ್ಲಾ ಆತ್ಮೀಯ ಪ್ರಿಯ ಆಗಿರುವ ನಮ್ಮೊಳಗೊಬ್ಬ ಬಾಲು ಇನ್ನೂ ಬಲಿಯಲಿ ಎಂದು ಮನಸಾರೆ ಹಾರೈಸುತ್ತೇನೆ. ಹೊಸವರ್ಷದ ಹಾರ್ದಿಕ ಶುಭಾಶಯಗಳು.

sunaath said...

ನಮ್ಮೊಳಗೊಬ್ಬ ಬಾಲು,
ನಿಮಗೆ ಹೊಸ ವರ್ಷದ ಶುಭಾಶಯಗಳು!

shivu.k said...

ಬಾಲು ಸರ್,

ನಿಮ್ಮ ಬ್ಲಾಗ್ ಬೆಳೆದು ಬಂದ ಬಗೆಯನ್ನು ಓದುತ್ತಿದ್ದಂತೆ ಹಳೆಯದೆಲ್ಲಾ ನೆನಪಾಯಿತು. ಈ ಬ್ಲಾಗ್ ಬದುಕಿನ ನದಿ ಯಾವ ದಿಕ್ಕಿಗೆ ಎಷ್ಟು ಆಳಕ್ಕೆ ಎಲ್ಲಿ ತಿರುವು ಪಡೆಯುತ್ತದೋ ತಿಳಿದವರಾರು? ಅದರೊಟ್ಟಿಗೆ ಸಾಗುವುದೇ ಸದ್ಯದ ಸ್ಥಿತಿ ಅಲ್ಲವೇ...ಅಭಿನಂದನೆಗಳು ಮತ್ತು ಹೊಸ ವರ್ಷದ ಶುಭಾಶಯಗಳು.

M.D.subramanya Machikoppa said...

ನನ್ನ ಬ್ಲಾಗ್ ಆರಂಬಿಸಿದಾಗ ನೀವು ಕೊಟ್ಟ ಪ್ರೋತ್ಸಾಹ ಸದಾ ಸ್ಮರಣೀಯ. ನಿಮ್ಮ ಬ್ಲಾಗ್ ಹೀಗೇ ಮುಂದುವರಿಯಲಿ.

Pradeep Rao said...

ಶುಭಾಶಯಗಳು ಬಾಲು ಸಾರ್... ನನ್ನನ್ನು ಮರತೇ ಬಿಟ್ರಲ್ಲ? ಹ್ಹ ಹ್ಹ ಹ್ಹಾ... ತೊಂದರೆಯಿಲ್ಲಾ.. ನಾನು ನಿಮ್ಮ ಈ ಬ್ಲಾಗ್ ನೆಲೆಗೆ ಆಗಾಗ ಸದ್ದಿಲ್ಲದೆ ಬಂದು ಹೋಗುತ್ತಿರುತ್ತೇನೆ... ಪ್ರವಾಸ ಲೇಖನಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ.. ಹೀಗೆ ನಿಮ್ಮ ಬರಹಗಳು ಮೂಡಿ ಬರುತ್ತಿರಲಿ ಎಂದು ಹಾರೈಸುವೆ.

ವಿಚಲಿತ... said...

ನಾನು ಕೂಡ ಬ್ಲಾಗ್ ಆರಂಭಿಸಿ ಕಲಿಯುತ್ತಲೇ ಇದೀನಿ,
ಸರ್ವರಿಗೂ ೨೦೧೨ಕ್ಕೆ ಸ್ವಾಗತ

ಮಂಜುಳಾದೇವಿ said...

ನಾಲ್ಕು ವರುಷಗಳನ್ನು ಯಶಸ್ವಿಯಾಗಿ ಪೂರೈಸಿದ ನಿಮಗೆ ಮತ್ತು ನಿಮ್ಮ ಬ್ಲಾಗಿಗೆ ಶುಭಾಶಯಗಳು.ನಿಮ್ಮ ಈ ಬರಹವನ್ನು ಓದುತ್ತಿದ್ದರೆ ನಾನೂ ನನ್ನ ಬ್ಲಾಗನ್ನು ಶುರು ಮಾಡಿದಾಗಿನ ದಿನಗಳು ನೆನಪಿಗೆ ಬಂದವು. ದಿನದಿನವು ಹೊಸತನ್ನು ಕಲಿತಾಗಿನ ಸಂಭ್ರಮ ನೆನಪಾಯಿತು.ಧನ್ಯವಾದಗಳು.

nimmolagobba said...

@ವಿ.ಆರ್.ಭಟ್ :-) ನಿಮ್ಮ ಅನುಭವದ ಪ್ರೋತ್ಸಾಹದ ಮಾತುಗಳು, ಹೃದಯ ಸೇರಿವೆ. ತಮಗೆ ಹಾರ್ದಿಕ ಶುಭಾಶಯಗಳು.

nimmolagobba said...

@ ಜಲನಯನ :-) ಅಜಾದ್ ಸರ್ ನಿಮ್ಮ ಪ್ರೀತಿ ಮಾತುಗಳಿಗೆ ಕೃತಜ್ಞ. ಶುಭಾಶಯಗಳು.

nimmolagobba said...

@ ಸುನಾಥ್ :-) ನಿಮ್ಮ ಪ್ರೀತಿ ಮಾತಿಗೆ ಜೈ ಹೋ ಸರ್ , ಹಿರಿಯರ ಆಶೀರ್ವಾದ ಹೀಗೆ ಇರಲಿ.

nimmolagobba said...

ಶಿವೂ .ಕೆ.:-) ನಿಮ್ಮ ಅನಿಸಿಕೆಯನ್ನು ಹಂಚಿಕೊಂಡು ಹಾರೈಸಿದ್ದೀರ ನಿಮಗೆ ಧನ್ಯವಾದಗಳು. ಹಾಗು ಶುಭಾಶಯಗಳು.

nimmolagobba said...

@ ಸುಬ್ರಮಣ್ಯ ಮಾಚಿಕೊಪ್ಪ :-) ಪ್ರೀತಿಯ ಸಹೋದರ ಆತ್ಮೀಯ ಮಾತುಗಳಿಗೆ ಮಾರುಹೋದೆ.ಶುಭಾಶಯಗಳು.

nimmolagobba said...

ಪ್ರದೀಪ್ ರಾವ್ :-) ಪ್ರೀತಿಯ ಮಾತುಗಳಿಗೆ ಶರಣು , ನಿಮ್ಮ ಹೆಸರನ್ನು ಬಿಟ್ಟಿದ್ದಕೆ ಕ್ಷಮೆಯಿರಲಿ.ಈಗ ನಿಮ್ಮ ಹೆಸರನ್ನು ಬ್ಲಾಗ್ ನಲ್ಲಿ ಸೇರಿಸಿದ್ದೇನೆ. ನಿಮ್ಮ ಮೆಚ್ಚಿನ ಮಾತುಗಳಿಗೆ ಧನ್ಯವಾದಗಳು.

nimmolagobba said...

@ ವಿಚಲಿತ :-) ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

nimmolagobba said...

ಮಂಜುಳಾ ದೇವಿ :-) ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಪ್ರೋತ್ಸಾಹ ಹೀಗೆ ಇರಲಿ ನಿಮಗೆ ೨೦೧೨ ರ ಶುಭಾಶಯಗಳು .

ಗಿರೀಶ್.ಎಸ್ said...

ಸರ್ ಹೊಸ ವರ್ಷದ ಶುಭಾಶಯಗಳು... ನಿಮ್ಮ ಪ್ರವಾಸ ಕಥನಗಳು ,ಎಷ್ಟೋ ಕಂಡಿರದ ಸ್ಥಳಗಳ ಪರಿಚಯ ಮಾಡಿಕೊಟ್ಟಿವೆ... ಅದು ಹೀಗೆ ಸಾಗಲಿ ಎಂಬ ಅಪೇಕ್ಷೆ...

nimmolagobba said...

@ಗಿರೀಶ್ ಎಸ :-) ನಿಮ್ಮ ಪ್ರೀತಿಯ ಶುಭಾಶಯಗಳಿಗೆ ನನ್ನ ನಮನ , ನಿಮ್ಮ ಸಲಹೆ ಮನಸ್ಸಿನಲ್ಲಿದೆ ಅದರಂತೆ ಮುಂದುವರೆಯುವೆ.ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಬಾಲಣ್ಣ...

ನಮ್ಮಮ್ಮ ನಿನ್ನೆ ಕೇಳ್ತಾ ಇದ್ರು...
"ಮೈಸೂರಿನ ಹುಡುಗ ಹೇಗಿದ್ದಾನೆ?" ಅಂತ..
ಅದಕ್ಕೆ ನನ್ನ ಮಗ ಉತ್ತರ ಕೊಡ್ತಾ ಇದ್ದ...

ವಿಷಯ ಏನು ಗೊತ್ತಾ?

ನೀವು ನಮ್ಮ ಮನದೊಳಗೊಂದಾಗಿ ಬಿಟ್ಟಿದ್ದೀರಿ...
ನಿಮ್ಮ ಸ್ನೇಹ.. ಪ್ರೀತಿ.. ವಿಶ್ವಾಸಕ್ಕೆ ನಾನಂತೂ ಬೋಲ್ಡ್ ಔಟ್ ಆಗಿದ್ದೇನೆ...

ಈ ಬ್ಲಾಗ್ ಲೋಕ ಇಲ್ಲದಿದ್ದಲ್ಲಿ ನಿಮ್ಮಂಥಹ ಗೆಳೆಯರನ್ನು ಪಡೆಯಲು ಸಾಧ್ಯವಿತ್ತೇ?

ಹಲವು ಬಾರಿ ಅನ್ನಿಸಿದೆ..
ನಿಮಗೆ ಗೆಳೆಯ ಎನ್ನಲೆ..?
ಸಹೋದರ ಎನ್ನಲೆ?..
ಅಂಥಹ ಬಾಂಧವ್ಯವನ್ನು ಕೊಟ್ಟಿದ್ದು ನಿಮ್ಮ ಹೂವಿನಂಥಹ ಮನಸ್ಸು...

ನೀವು ಇನ್ನಷ್ಟು ಬರೆಯಿರಿ.. ಬರೆಯುತ್ತಲೇ ಇರಿ...

ಜೈ ಹೋ ಬಾಲಣ್ಣಾ... ಜೈ ಹೋ ಬಾಲಣ್ಣಾ...

ಮನದಾಳದಿಂದ............ said...

ಪ್ರೀತಿಯ ಕ್ಯಾಪ್ಟನ್ ಬಾಲಣ್ಣ ,
ಸುಂದರ ರೋಚಕ ಪ್ರವಾಸಿ ಅನುಭವಗಳ ಲೇಖನಗಳು ಮೂಡಿ ಬರುವ ನಿಮ್ಮ ಬ್ಲಾಗ್ ನಾಲ್ಕನೇ ಹುಟ್ಟಿದ ದಿನ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾನು ಶುಭಾಶಯಗಳನ್ನು ತಿಳಿಸುತ್ತೇನೆ.
ಇತ್ತೀಚಿಗೆ ಸಮಯದ ಅಭಾವದಿಂದಾಗಿ ಎಲ್ಲಾ ಲೇಖನಗಳಿಗೂ ಪ್ರತಿಕ್ರಿಯೆ ನೀಡಲಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ.........
ಲೇಖನಗಳು ಹೀಗೆ ಬರುತ್ತಿರಲಿ, ನಿಮ್ಮಿಂದ ನಮ್ಮ ಜ್ಞಾನ ಭಂಡಾರ ಬೆಳೆಯುತ್ತಿರಲಿ.
ಜೈ ಹೋ........

nimmolagobba said...

@ ಪ್ರಕಾಶ್ ಹೆಗ್ಡೆ :-) ಮೊದಲು ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿಬಿಡಿ. ಮಗನಿಗೆ ನನ್ನ ಪ್ರೀತಿಯ ಹಾರೈಕೆ ತಿಳಿಸಿ.ಇನ್ನು ನಮ್ಮಿಬ್ಬರದು ಏನು ಹೇಳಲಿ ??? ನನಗೆ ಒಳ್ಳೆಯ ಸಹೋದರ ಹಾಗು ಅತ್ತಿಗೆ ದೊರೆತ ಖುಷಿ ಇದೆ. ನಿಮ್ಮ ಪ್ರೀತಿಯ ಮಾತಿಗೆ ಬೆಲೆ ಕಟ್ಟಲಾರೆ. ಹೃದಯ ತುಂಬಿಬಂದಿದೆ ನಿಮಗಿಷ್ಟ ಬಂದಂತೆ ಕರೆಯಿರಿ ಜೀವನ ಪಯಣದಲ್ಲಿ ನಿಮ್ಮಂತಹ ಹೃದಯವಂತರ ಪ್ರೀತಿಯ ಹಾರೈಕೆ ನಿರಂತರ ಇರಲು ಇದಕ್ಕಿಂತ ಹೆಮ್ಮೆಯ ಸಂಗತಿ ಯಾವುದು ಆಲ್ವಾ. ನಿಮ್ಮ ಮನದಾಳದ ಮಾತಿಗೆ ಶರಣು.

nimmolagobba said...

@ ಮನದಾಳದಿಂದ :-) ಪ್ರವೀಣ್ ಹೊಸ ಬಾಳಿನ ಜೋಡಿ ಪಯಣಕ್ಕೆ ಸಿದ್ದವಾಗುತ್ತಿರುವ ನಿಮಗೆ ಶುಭಾಶಯಗಳು. ನಿಮ್ಮ ಪ್ರೀತಿಯ ಮಾತುಗಳು ಮನದಲ್ಲಿ ನೆಲೆಸಿವೆ. ಮನದಾಳದ ಹಾರೈಕೆಗೆ ವಂದನೆಗಳು.

ashokkodlady said...

ಬಾಲು ಸರ್........

ನನ್ನನ್ನು ಮರೆತು ಬಿಟ್ರಿ ನೀವು......ನಂಗೆ ಕೋಪ ಬಂತು............ನಾನು ನನ್ ಬ್ಲಾಗ್ ಗೆ ೪ ವರ್ಷ ಆದಾಗ ನಿಮ್ ಹೆಸರು ಹೇಳೋದೇ ಇಲ್ಲ....ಹಹಹ...

ಅಭಿನಂದನೆಗಳು.....ಹೊಸವರ್ಷದ ಹಾರ್ಧಿಕ ಶುಭಾಶಯಗಳು ಸರ್......ಇನ್ನೂ ಉತ್ತಮ , ಹೊಸ ಹೊಸ ಬರಹಗಳು ನಿಮ್ಮ ಬ್ಲಾಗ್ ನಲ್ಲಿ ಮೂಡಿ ಬರಲಿ...

nimmolagobba said...

ಅಶೋಕ್ ಕೊಡ್ಲಾಡಿ :-) ಪ್ರೀತಿಯ ಚಾಟಿ ಏಟು ಜೋರಾಗಿ ಬೀಸಿದ್ದೀರ ...........!!! ನಿಮ್ಮ ಹೃದಯಾಂತರಾಳದ ಮಾತುಗಳಿಗೆ ಶರಣು.

umesh desai said...

ಬಾಲು ಸರ್ ಶುಭಾಶಯಗಳು.. ನಿಮ್ಮ ಬರವಣಿಗೆ ಹೀಗೆಯೇ ಮುಂದುವರೆಯಲಿ ನಮಗೆಲ್ಲ ಹೊಸ ಹೊಸ ಅರಿವು ಮೂಡಿಸಲಿ

ಶಿವಪ್ರಕಾಶ್ said...

Happy Birthday to your blog sir..

Happy New Year :)

nimmolagobba said...

ಉಮೇಶ್ ದೇಸಾಯಿ :-) ಸರ್ ತಮ್ಮ ಪ್ರೀತಿ ಮಾತುಗಳಿಗೆ ವಂದನೆಗಳು.

nimmolagobba said...

@ ಶಿವಪ್ರಕಾಶ್ :-) ವೈವಾಹಿಕ ಜೀವನದ ಹೊಸ್ತಿಲಿನಲ್ಲಿ ನಿಂತ ಗೆಳೆಯನ ಪ್ರೀತಿ ಮಾತುಗಳು ತಲುಪಿವೆ.ವಂದನೆಗಳು. ತಮಗೂ ಹೊಸ ವರ್ಷದ ವಿಶೇಷ ಶುಭಾಶಯಗಳು .

jithendra hindumane said...

ಬಾಲೂ ಸರ್‍, ಎಲ್ಲಾರೂ ಅಂಬೆಗಾಲಿಟ್ಟು ಆಮೇಲೆ ಓಡಾಡುವುದು....! ನಿಮ್ಮ ಚಿತ್ರ ಸಹಿತ ಬರಹಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ.೪ ವರ್ಷ ಪೂರೈಸಿದ ಸಂದರ್ಭದಲ್ಲಿ ನನ್ನ ಹಾರ್ದಿಕ ಶುಭಾಶಯಗಳು.

nimmolagobba said...

ಜಿತೇಂದ್ರ ಹಿಂಡುಮನೆ:-) ನಮಸ್ಕಾರ ಸರ್ ಹೊಸ ವರ್ಷದ ಶುಭಾಶಯಗಳು. ತಮ್ಮ ಮೆಚ್ಚುಗೆಯ ಮಾತುಗಳಿಗೆ ಶರಣು. ಪ್ರೋತ್ಸಾಹ ಹಾಗೆ ಇರಲಿ.

mshebbar said...

ಭೇಷ್

nimmolagobba said...

@ ಎಂ.ಎಸ.ಹೆಬ್ಬಾರ್ :-) ವಂದನೆಗಳು ಸರ್

ಸೀತಾರಾಮ. ಕೆ. / SITARAM.K said...

ಶುಭಾಶಯಗಳು ಬಾಲಣ್ಣ. ತಮ್ಮ ಬ್ಲಾಗ್ ವಿಶಿಷ್ಟವಾದದ್ದು...
ಅಂದ ಹಾಗೆ ನೀವು ಹಾಕಿದ ಬ್ಲಾಗ್ ಗೆಳೆಯರ ಬಳಗದಲ್ಲಿ ನನ್ನ ಫೋಟೋ ಇಲ್ಲ :-((

nimmolagobba said...

@ ಸೀತಾರಾಂ :-) ತಮಗೆ ಹೊಸ ವರ್ಷದ ಶುಭಾಶಯಗಳು. ಈಗ ತಮ್ಮ ಚಿತ್ರ ಹಾಕಿದ್ದೇನೆ ಸರ್ ನೀವೂ ಸಹ ಬ್ಲಾಗ್ ಗೆಳೆಯರ ಹೃದಯಗೆದ್ದವರು ನಿಮ್ಮನ್ನು ಬಿಡಲು ಹೇಗೆ ಸಾಧ್ಯ , ತಮ್ಮ ಪ್ರೀತಿಯ ಹಾರೈಕೆಗೆ ಹಾಗು ಮೆಚ್ಚುಗೆಗೆ ಶರಣು ಸಾರ್.

Badarinath Palavalli said...

ಪ್ರೀತಿಯ ಬಾಲು ಸರ್,

ತಡವಾಗಿ ಪ್ರತಿಕ್ರಯಿಸಿದ್ದಕ್ಕೆ ಬಿಳಿಗಿರಿ ರಂಗನಾಥ ಸ್ವಾಮಿಯಷ್ಟೇ ಮೃದು ಮನಸಿನವರಾದ ನೀವು ಕ್ಷಮಿಸುತ್ತೀರೆಂದು ಭಾವಿಸಿದ್ದೇನೆ.

ಬ್ಲಾಗ್ ಆರಂಭಿಸಿ ೪ ವರ್ಷ ಪೂರೈಸಿದ್ದಕ್ಕಾಗಿ ಮೊದಲು ಅಭಿನಂದನೆಗಳು. ನಿಮ್ಮ ಈ ಸುದೀರ್ಘ ಯಾನದಲ್ಲಿ ಬರೆದು ಕೊಟ್ಟ ಪ್ರತಿ ಲೇಖನವೂ ಸಂಗ್ರಹಾರ್ಹ ಮತ್ತು ಅಧಿಕೃತ.

ನಿಮ್ಮ ಇನ್ನೊಂದು ಕೊಡುಗೆ ಎಂದರೆ ನಿಮ್ಮ ಛಾಯಾಗ್ರಹಣ ಕಲೆ. ನೀವೊಬ್ಬ ನುರಿತ ಛಾಯಾಚಿತ್ರ ಕಲಾವಿದ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನೀವು ಅದ್ಭುತ ಸಂಯೋಜನೆಯ, ಆಳ, ಬೆಳಕು ನಿರ್ವಹಣೆಯ, ವೇಗ ನಿಯಂತ್ರಣದ ಹಾಗೂ ಸ್ಪಷ್ಟ ಛಾಯಾ ಚಿತ್ರಗಳನ್ನು ಚೊತೆ ಮಾಡಿಕೊಟ್ಟಿದ್ದೀರಿ. ಇವು ತಟ್ಟನೆ ವಿಷಯ ಮಂಡನೆ ಮಾಡಿಬಿಡುತ್ತವೆ.

ನಿಮ್ಮ ೪ ಬ್ಲಾಗುಗಳ ಬರಹಗಳ ವಿಷಯ ಆಯ್ಕೆ, ನಿರ್ವಹಣೆ, ನಿರೂಪಣೆ ಮತ್ತು ಅವು ಓದಿದ ನಂತರವೂ ರಿಂಗಣಿಸುವ ಪರಿ ಬಹು ಪ್ರಶಂಸನೀಯ.

ನಿಮ್ಮ ಬ್ಲಾಗು ಸಾವಿರಾರು ಬರಹಗಳನ್ನು ನಮ್ಮ ಓದಿಗೆ ದಕ್ಕಿಸಲಿ ಎಂದು ಹಾರೈಸುತ್ತೇವೆ.

೨೦೧೨ ಹೊಸ ವರ್ಷ ನಿಮಗೂ ನಿಮ್ಮ ಕುಟುಂಬಕ್ಕೂ ಮತ್ತು ಬ್ಲಾಗುಗಳಿಗೂ ಸಿಹಿಯಷ್ಟೇ ಹೊತ್ತು ತರಲಿ.

nimmolagobba said...

@ ಬದರಿನಾಥ್ ಪಳವಲ್ಲಿ :-) ತಮ್ಮ ಪ್ರೀತಿ ಪೂರ್ವಕ ಮಾತುಗಳಿಗೆ ಹಾಗು .ನಿರಂತರ ಪ್ರೋತ್ಸಾಹಕ ನುಡಿಗಳಿಗೆ ಶರಣು. ನಿಮ್ಮ ಹಾರೈಕೆ ಯಂತೆ ಮುಂದಿನ ದಿನಗಳಲ್ಲಿ ನಿಮ್ಮೊಳಗೊಬ್ಬನ ಯಾನ ಮುಂದುವರೆಯುತ್ತದೆ. ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸರ್,
ಸಾಧನೆಯ ೪ ವರುಷಕ್ಕೆ ಅಭಿನಂದನೆಗಳು
ನಿಮ್ಮಂತ ಸುಜ್ನಾನಿಗಳ ಸ್ನೇಹ ನನ್ನ ಅದೃಷ್ಟವೇ ಸರಿ
ಆ ದಿನ ಕಾಮತ್ ನಂದನವನದಲ್ಲಿ ನಿಮ್ಮ ಭೆಟ್ಟಿಯಾಗಿದ್ದು ಮರೆಯಲಾರದ ಕ್ಷಣಗಳಲ್ಲಿ ಒಂದು
ನಿಮ್ಮ ಬ್ಲಾಗ್ ಇನ್ನು ಬೆಳೆಯುತ್ತಿರಲಿ
ಸ್ನೇಹ ಸದಾ ನಳ ನಲಿಸುತ್ತಿರಲಿ
ನಿಮ್ಮ ಪ್ರೀತಿಯ
ಗುರು

nimmolagobba said...

@ ಗುರು ಮೂರ್ತಿ ಹೆಗ್ಡೆ :-) ನಿಮ್ಮ ಹೃದಯ ವೈಶಾಲ್ಯತೆಗೆ ಮೂಕನಾಗಿದ್ದೇನೆ. ಸಜ್ಜನಿಕೆಯ ನಿಮಗೆ ನನ್ನ ನಮನಗಳು ಸರ್.