Sunday, December 11, 2011

ಕನ್ನಡ ಚಿತ್ರರಂಗದ ಪ್ರಯೋಗ ಶೀಲ ಸಂಗೀತ ನಿರ್ದೇಶಕ ಜಿ.ಕೆ.ವಿ.ನಿಮಗೆ ಗೊತ್ತೇ ???




ಜಿ . ಕೆ .ವಿ .

ಮೊನ್ನೆ ಹಾಗೆ ಹಳೆಯ ಚಿತ್ರಗೀತೆ ಕೇಳುತ್ತಿದ್ದೆ , "ಆಗದು ಎಂದು ಕೈಲಾಗದು ಎಂದೂ ಕೈಕಟ್ಟಿ ಕುಳಿತರೆ" ಹಾಡು ಬರುತ್ತಿತ್ತು , ಪಕ್ಕದಲ್ಲಿ ಕುಳಿತಿದ್ದ ನನ್ನ ಮಗ [ ಆಧುನಿಕ ಸಂಗೀತ ಪ್ರಿಯ ] ಕೇಳಿದ, ಅಪ್ಪ... ಹಾಡಿನ ಸಂಗೀತ ಚೆನ್ನಾಗಿದೆ ಮ್ಯೂಸಿಕ್ ಕಂಪೋಸರ್ ಯಾರು ಅಂತಾ ಕೇಳಿದ. ನನಗೂ ಅಚ್ಚರಿಯಾಗಿ ಸಂಗೀತ ನಿರ್ದೇಶಕರ ಹೆಸರು ಹೇಳಿ ಹಾಡಿನ ಸಂಗೀತ ಯಾಕೆ ಇಷ್ಟ ಆಯ್ತು? ಎಂದೇ , ಅದಕ್ಕೆ ಅವನು ಹಾಡನ್ನು ಟಿ.ವಿ.ಯಲ್ಲಿ ನೋಡಿದ್ದೇ ಅಲ್ಲಿನ ದೃಶ್ಯಗಳಲ್ಲಿ ಬರುವ ಮೆಷಿನ್ ಶಬ್ಧಗಳನ್ನೂ ಹಾಡಿಗೆ ಪೂರಕವಾಗುವಂತೆ ಸಂಗೀತದಲ್ಲಿ ನುಡಿಸಿ ಹಾಡಿನಲ್ಲಿ ತಂದಿದ್ದಾರೆ , ಹಾಡಿನ ದೃಶ್ಯಕ್ಕೂ ಸಂಗೀತಕ್ಕೂ ಬಹಳ ಹೊಂದಾಣಿಕೆ ಇದೆ ಅದಕ್ಕೆ ಅವತ್ತಿನಿಂದ ಹಾಡಿನ ಸಂಗೀತಗಾರ ಯಾರು ಎಂಬ ಬಗ್ಗೆ ಕುತೂಹಲ ಇತ್ತು ಅದಕ್ಕೆ ಕೇಳಿದೆ ಅಂದಾ ....!
ಇವತ್ತಿನ ಪೀಳಿಗೆಗೆ ಆ ಅದ್ಭುತ  ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಾರದು ,ಆದರೆ ಹಾಡಿನ ಪರಿಚಯವಂತೂ ಇದ್ದೆ ಇರುತ್ತದೆ . ಆದರೆ ನಿಮಗೆ ತಿಳಿದಿರಬಹುದು ಈ ವ್ಯಕ್ತಿಯ ಬಗ್ಗೆ  ಸ್ವಲ್ಪ ಕ್ಲೂ ಬೇಕಾ ???  ೧] ಕನ್ನಡ ಚಿತ್ರ ರಂಗದಲ್ಲಿ  ಭೀಮ್ ಸೇನ್ ಜೋಷಿ , ಬಾಲ ಮುರಳಿ ಕೃಷ್ಣ , ಮನ್ನಾಡೆ, ಜೇಸುದಾಸ್, ಸುಮನ್ ಕಲ್ಯಾಣ್ ಪುರ್  ರಂತಹ ದಿಗ್ಗಜಗಳಿಂದ     ಕನ್ನಡ  ಚಿತ್ರಗಳಲ್ಲಿ ಹಾಡು ಹೇಳಿಸಿದ   ಸಾಹಸಿ,
೨] ಡಾ./.ರಾಜ್ ಕುಮಾರ್ ಸಾಮಾನ್ಯ ನಟ ಆಗಿದ್ದ ಕಾಲದಲ್ಲಿ ಅವರ ಪ್ರತಿಭೆಗೆ ಮಾರುಹೋಗಿ  "ಸಂಪತ್ತಿಗೆ ಸವಾಲ್ ", "ಮಹಿಷಾಸುರ ಮರ್ಧಿನಿ" ಚಿತ್ರಗಳಿಗಿಂತ ಮೊದಲೇ ಹಾಡನ್ನು ಹಾಡಿಸಿದ ಪ್ರಯೋಗ ಶೀಲ,
೩} ಸಂಗೀತ ನಿರ್ದೇಶನದ ಜೊತೆಗೆ  ಕನ್ನಡ ಭಾಷೆಯ ಚೆಲುವಿಗೆ ಸೋತು ತಾನು ಕನ್ನಡ ಹಾಡನ್ನು ಹಾಡಿ, ಆ ಸುಂದರ ಹಾಡುಗಳು ಇಂದಿಗೂ ಜನಮನದಲ್ಲಿ ನಿಲ್ಲುವಂತೆ ಮಾಡಿದ  ಛಲವಾದಿ ವ್ಯಕ್ತಿ.
 ೪] ಕನ್ನಡ ದಲ್ಲಿ ನಿರ್ಮಾಣವಾದ ಬಾಂಡ್ ಚಿತ್ರಗಳಿಗೆ  ವಿದೇಶಿ  ಸಂಗೀತ ಸಾಧನಗಳ ಮೂಲಕ ಸಂಗೀತ ನೀಡಿದ ಸಂಗೀತ ನಿರ್ದೇಶಕ.
ಈಗ ಗೊತ್ತಾಗಿರಬೇಕು ???  ಆಲ್ವಾ  !!!!  ಅಯ್ಯೋ ಗೊತಾಗ್ಲಿಲ್ವಾ ???ಹೋಗ್ಲಿ ಬಿಡಿ  ಕೊನೆಯದಾಗಿ  ಒಂದು ಕ್ಲೂ ........................................!!
೪]ಕನ್ನಡ ಚಿತ್ರ ಒಂದಕ್ಕೆ ಅಗತ್ಯ ವಿದ್ದ ಶಹನಾಯಿ ವಾದನಕ್ಕೆಈ ದೇಶದ  ಖ್ಯಾತ ಶಹನಾಯಿ ವಾದಕರಾದ  ಉಸ್ತಾದ್ ಬಿಸ್ಮಿಲ್ಲಾ ಖಾನ್ ರವರನ್ನು ಕರೆತಂದು  ಅವರ ಸಂಗೀತ ಮಾಂತ್ರಿಕತೆಯನ್ನು ಕನ್ನಡಿಗರಿಗೆ ಪರಿಚಯಿಸಿದ ಮಾಂತ್ರಿಕ.

ಜಿ.ಕೆ ವೆಂಕಟೇಶ್

 ಅದ್ಭತ ಗಾಯಕಿ ಸುಮನ್ ಕಲ್ಯಾಣ್ ಪೂರ್

ಅದ್ಭುತ ಗಾಯಕ ಮನ್ನಾ ಡೇ

ಪಂಡಿತ್ ಭೀಮ್ ಸೇನ್ ಜೋಷಿ 
ಕರ್ನಾಟಕ ಸಂಗೀತ ದಿಗ್ಗಜ  ಬಾಲ ಮುರಳಿ ಕೃಷ್ಣ  
ಉಸ್ತಾದ್ ಬಿಸ್ಮಿಲ್ಲಾ ಖಾನ್
ಈಗ ಗೊತ್ತಾಗಿರುತ್ತೆ ಬಿಡಿ !! ಹೌದು  ನಿಮ್ಮ ಅನಿಸಿಕೆ ಸರಿ  ನಾನು ಈಗ ಬರೆಯಲು ಹೊರಟಿರುವುದು ಕನ್ನಡ ಚಿತ್ರ ರಂಗದ ಒಬ್ಬ  ಮಹಾನ್  ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಬಗ್ಗೆ . ಹೌದು ನಾನು ಬಾಲ್ಯ ದಿಂದಲೂ ಕನ್ನಡ ಚಿತ್ರ ರಂಗದ ಬಹಳಷ್ಟು ಹಾಡುಗಳನ್ನು ರೇಡಿಯೋ ದಲ್ಲಿ ಕೇಳುತ್ತಾ ಬೆಳೆದವನು.ಚಿಕ್ಕವನಿದ್ದಾಗಿನಿಂದಲೂ  ಇವರ ಸಂಗೀತದ ಹಾಡುಗಳು ನನ್ನ ಗಮನ ಸೆಳೆಯುತ್ತಿದ್ದವು. "ಸಂಧ್ಯಾ ರಾಗದ  ಈ ಪರಿಯ ಸೊಬಗು " " ದೂರದ ಬೆಟ್ಟದ ಪ್ರೀತಿನೆ ಆ ದ್ಯಾವ್ರು ತಂದಾ " "ಬಂಗಾರದ ಮನುಷ್ಯದ  ಎಲ್ಲಾ ಹಾಡುಗಳು  " ಭೂತಯ್ಯನ ಮಗ ಅಯ್ಯು , ಕಸ್ತೂರಿ ನಿವಾಸ, ಹಾಲು ಜೇನು, ಸನಾದಿ  ಅಪ್ಪಣ್ಣ  ,ಸಂಪತ್ತಿಗೆ ಸವಾಲು,  ಚಿತ್ರದ  ಎಲ್ಲಾ ಹಾಡುಗಳು   ಇನ್ನೂ ಬಹಳಷ್ಟು    ನನ್ನ ಅಚ್ಚುಮೆಚ್ಚಿನ ಹಾಡುಗಳಾಗಿ ಉಳಿದವು ಹಾಗು ಇಂದಿಗೂ ಉಳಿದಿವೆ.   ಬನ್ನಿ ಜಿ.ಕೆ.ವೆಂಕಟೇಶ್ ಬಗ್ಗೆ ತಿಳಿಯೋಣ.                                                                                                                    ಗುರ್ಜದ ಕೃಷ್ಣದಾಸ ವೆಂಕಟೇಶ [ ಜಿ.ಕೆ.ವೆಂಕಟೇಶ್ ಮೂಲ ಹೆಸರು ] ಮೂಲತಃ  ತೆಲುಗಿನವರು, ೨೧-೦೯-೧೯೨೭ ರಲ್ಲಿ ಜನನ , ಚಿಕ್ಕ ವಯಸ್ಸಿನಲ್ಲಿ ತನ್ನ ಅಣ್ಣ ಜಿ.ಕೆ.ಎಸ.ಪತಿ ಅವರಿಂದ ವೀಣಾ ವಾದನ ಕಲಿಕೆ , ನಂತರ  ಮುಂದಿನ ವರ್ಷಗಳಲ್ಲಿ ಸಹ ವೀಣಾ ವಾದಕರಾಗಿ S. V. ವೆಂಕಟರಮನ್ , S. M. ಸುಬ್ಬಯ್ಯ  ನಾಯ್ಡು and C. R. ಸುಬ್ಬುರಾಮನ್ .     ಮುಂತಾದವರಿಗೆ  ಸಾಥ್ ನೀಡಿ ಸಂಗೀತದ ಗರಡಿಯಲ್ಲಿ ಪಳಗಿದರು. ನಂತರ ಒಳ್ಳೆಯ ಹಾಡುಗಾರರೂ ಆಗಿ ತಯಾರಾದ ಕಾರಣ  ಆಕಾಶವಾಣಿ ಯಲ್ಲೂ        ಸಹ ಇವರು ಗಾಯಕರಾಗಿ ಹಾಡಿದ್ದರು . ಆ ನಂತರದ ದಿನಗಳಲ್ಲಿ ಎಂ.ಎಸ.ವಿಶ್ವನಾಥನ್ ,  ಎಸ.ಎಂ ಸುಬ್ಬಯ್ಯ ನಾಯ್ಡು  ಮುಂತಾದ ಗೆಳೆಯರ ಗರಡಿಯಲ್ಲಿ ಸಿನಿಮಾಗಳಿಗೆ ರಾಗ ಸಂಯೋಜನೆ ಕೆಲಸ ಕಲಿತರು . ನಂತರ ತಾವೇ ಸಂಗೀತ ನಿರ್ದೇಶನಕ್ಕಿಳಿದು  ೧೯೫೨ ರಲ್ಲಿ ಮಲಯಾಳಂ ಭಾಷೆಯಲ್ಲಿ ತಯಾರಾಗಿ ತಮಿಳಿಗೆ ಡಬ್ ಆದ   "ನಡಿಗೈ"    ಚಿತ್ರಕ್ಕೆ ಮೊದಲ ಸಂಗೀತ ನಿರ್ದೇಶಿಸಿದರು  , ಮುಂದೆ ೧೯೫೫ ರಲ್ಲಿ  ಡಾ// ರಾಜ್ ಕುಮಾರ್ ಅಭಿನಯದ   "ಸೋದರಿ"      ಚಿತ್ರಕ್ಕೆ ಸ್ವರ ಸಂಯೋಜನೆ ಮಾಡಿದರು  ಎರಡನೇ ಪ್ರಯತ್ನ ಯಶಸ್ವಿಯಾಗಿ ಕನ್ನಡ ಜನರ ಮನಸ್ಸಿಗೆ ಹತ್ತಿರವಾದರು. ಮುಂದೆ ಅದೇ ವರ್ಷ " ಓಹಿಲೇಶ್ವರ  '' ಎಂಬ ಚಿತ್ರದ ಸಂಗೀತ ನೀಡುವ ಅವಕಾಶ ಸಿಕ್ಕಿತು  ಆ ಚಿತ್ರದಲ್ಲಿ ಅಂದರೆ ೧೯೫೫ ರಲ್ಲೇ  ರಾಜಕುಮಾರ್   ಕಂಪನಿ ನಾಟಕದ  ಕಲಾವಿದರಾದ ಕಾರಣ ಹಾಡುಗಾರಿಕೆ   ಇದ್ದೆ ಇರುತ್ತದೆ ಎಂಬ  ಉತ್ಸಾಹದಿಂದ ರಾಜಕುಮಾರ್ ರವರ  ದ್ವನಿಯಲ್ಲಿ "   ಶರಣು "    ಎಂಬ ಭಕ್ತಿ ಪ್ರಧಾನ  ಗೀತೆಯನ್ನು ಹಾಡಿಸಿದರು. ಇದು ರಾಜಕುಮಾರ  ಬದುಕಿನಲ್ಲಿ ಪ್ರಥಮವಾಗಿ ಕನ್ನಡ ಚಿತ್ರರಂಗದ ಲ್ಲಿ  ಚಿತ್ರದಲ್ಲಿ ನಟಿಸಿದ ಜೊತೆಗೆ ಹಾಡಿದ  ಗಾಯಕ  ಎಂಬ ಇತಿಹಾಸಕ್ಕೆ ನಾಂದಿಯಾಯಿತು.                                                                                                                                     [ http://www.raaga.com/player4/?id=170399&mode=100&rand=0.5298554935387211 ]  ರಲ್ಲಿ ಈ ಹಾಡನ್ನು ಕೇಳಬಹುದು. 


 ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿ  ತನ್ನ ಪ್ರತಿಭೆ  ಮೆರೆದ  ಜಿ.ಕೆ.ವೆಂಕಟೇಶ್  , ಟಿ. ಜಿ.ಲಿಂಗಪ್ಪ, ವಿಜಯ ಭಾಸ್ಕರ್  ರವರೊಂದಿಗೆ  ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಅಂದಿನ ದಿನಗಳಲ್ಲಿ  ಪಿ.ಬಿ. ಶ್ರೀನಿವಾಸ್  ರಂತ  ಹೊಸ ಗಾಯಕರನ್ನು  ಹೆಚ್ಚು ಅವಕಾಶ ನೀಡಿ  ಬೆಳಸಿದ ಜಿ.ಕೆ.ವೆಂಕಟೇಶ್  , ಕನ್ನಡದಲ್ಲಿ ತಯಾರಾದ   ಜೇಮ್ಸ್ ಬಾಂಡ್ ಶೈಲಿಯ           ಚಿತ್ರಗಳಿಗೆ   ಆಧುನಿಕ ವಾಧ್ಯಗಳೊಂದಿಗೆ  ಸಂಗೀತ ನೀಡಿ ದರು.  ಇಂತಹ ಪ್ರಯೋಗಕ್ಕೆ ಕನ್ನದಲ್ಲಿ ಬಹಳ ಪ್ರೋತ್ಸಾಹ ಸಿಕ್ಕಿತು.  ಆ ದಿನಗಳಲಿ  ವಿಶ್ವಾದ್ಯಂತ  ಪ್ರಸಿದ್ದಿ ಹೊಂದಿದ್ದ "ಬೀಟಲ್ಸ್ "     ಹಾಡಿನ ಕಡೆ  ಯುವಕರು ಮುಖ ಮಾಡಿದ್ದನ್ನು ಕಂಡು ಕನ್ನಡ ದಲ್ಲಿ ತಾವೂ ಸಹ ಪ್ರಯೋಗ ಮಾಡಿ   ಡಾ// ರಾಜಕುಮಾರ್ ಅಭಿನಯಿಸಿದ  ಲಗ್ನ ಪತ್ರಿಕೆ ಎಂಬ  ಹಾಸ್ಯ ಚಿತ್ರದಲ್ಲಿ ಸೀನು ಸುಬ್ಬು  ಹಾಡನ್ನು  ವೇಗವಾಗಿ ಹಾಡಿಸಿ ಕೇಳಲು ಇಂಗ್ಲೀಷಿನ  ಬೀಟಲ್ಸ್  ತಂಡದ ಹಾಡಿನಂತೆ  ತಯಾರುಮಾಡಿ ಕೊಟ್ಟು ಗೆದ್ದರು ಇವತ್ತಿಗೂ ಈ ಹಾಡು ವೇಗವಾಗಿ   ಹಾಡಲಾದ  ಕನ್ನಡ ಪಾಪ್   ಹಾಡು , ಹೀಗೆ ಪ್ರಯೋಗ ಮಾಡುತ್ತಾ ಜಿ.ಕೆ.ವೆಂಕಟೇಶ್   ಬಹಳಷ್ಟು ಹಿಟ್  ಗೀತೆಗಳನ್ನು ನೀಡಿದ್ದಾರೆ. ೧೯೫೫ ರ ವರ್ಷದಲ್ಲಿ   ಸಂಗೀತ ನೀಡಿದ ಕನ್ನಡ ದ  ಸೋದರಿ  ಚಿತ್ರದಿಂದ ೧೯೮೫  ರಲ್ಲಿ  ಅಂತಿಮವಾಗಿ  ಸಂಗೀತ ನೀಡಿದ  ಅದೇ ಕಣ್ಣು  ಚಿತ್ರದ ವರೆಗೆ   ಕನ್ನಡ ಚಿತ್ರ ರಂಗದಲ್ಲಿ ಸಂಗೀತ  ದಿಗ್ಗಜರಾಗಿ ಮೆರೆದು  ಅರವತ್ತೊಂದು  ಕನ್ನಡ ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿ  ಕನ್ನಡಕ್ಕೆ ಮಧುರ ಹಾಡುಗಳ ಕೊಡುಗೆ ನೀಡಿದ್ದಾರೆ.

ಮತ್ತೊಂದು ವಿಶೇಷ ಅಂದರೆ  ಕನ್ನಡದಲ್ಲಿ ಸಂಗೀತ ನೀಡಿದ ಮೊದಲ ಚಿತ್ರ ಹಾಗು ಕೊನೆಯ ಚಿತ್ರ ಎರಡೂ ಡಾ// ರಾಜಕುಮಾರ್  ರವರ ಚಿತ್ರಗಳೇ ಆಗಿದ್ದು  ಇತಿಹಾಸ, ಮತ್ತೊಂದು  ವಿಚಾರ ಡಾ// ರಾಜಕುಮಾರ್ ರವರಲ್ಲಿನ ಗಾಯಕನನ್ನು  ಪ್ರಥಮವಾಗಿ , ಓಹಿಲೇಶ್ವರ  ಚಿತ್ರದಲ್ಲಿ, ನಂತರ  ಎಸ. ಜಾನಕಿಯವರ ಜೊತೆ  ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ  "ತುಂಬಿತು ಮಾನವ " ' ಹಾಡಿನಲ್ಲಿ,
ಯಾರೇ ಕೂಗಾಡಲಿ ಅಂತಾ ಹಾಡಿದರು ರಾಜಕುಮಾರ್

ಮೂರನೆಯದಾಗಿ ಸಂಪತ್ತಿಗೆ ಸವಾಲ್  ಚಿತ್ರದ ಯಾರೇ ಕೂಗಾಡಲಿ ಹಾಡಿನ ಮೂಲಕ [ ಈ ಹಾಡನ್ನು ಹಾಡಲು  ಪಿ.ಬಿ.ಶ್ರೀನಿವಾಸ  ರವರು ನಿರಾಕರಿಸಿದ ಕಾರಣ  , ಈ ಹಾಡಿನಲ್ಲಿ  ನಾಯಕ ನಟ ರಾಜ್ ಕುಮಾರ್  ರವರಿಗೆ  ಈ ಹಾಡಿನಿಂದ  ಅವಮಾನವಾಗಬಾರದು  ಎಂಬ ಕಾರಣವೆಂದು ಹೇಳುತ್ತಾರೆ ] ಗಾಯಕನ ಪಟ್ಟ ಒದಗಿಸಿದರು. ಕನ್ನಡ ಚಿತ್ರಗಳಲ್ಲಿ ಹಲವು ಬಗೆಯ ಪ್ರಯೋಗ ಮಾಡಿ ಯಶಸ್ವಿಯಾದರು . ಸಂಧ್ಯಾ ರಾಗದಲ್ಲಿ "ಪಂಡಿತ್ ಭೀಮಸೇನ್ ಜೋಷಿ,"        " ಗಾನ ಗಾರುಡಿಗ  ಬಾಲಮುರಳಿ ಕೃಷ್ಣ "  , ಸನಾದಿ ಅಪ್ಪಣ್ಣ ಚಿತ್ರದಲ್ಲಿ  ಚಿತ್ರದ ನಾಯಕ ನಟನ  ಅಭಿನಯಕ್ಕೆ ಪೂರಕವಾಗ ಬೇಕೆಂಬ ಕಾರಣದಿಂದ  "ಉಸ್ತಾದ್ ಬಿಸ್ಮಿಲ್ಲಾ ಖಾನ್ "     ಕಲಾವತಿ ಚಿತ್ರದಲ್ಲಿ  ಪ್ರಸಿದ್ದ ಗಾಯಕರಾದ  " ಮನ್ನಾಡೆ "   , ಸುಮನ್ ಕಲ್ಯಾಣ್ ಪೂರ್ ,  ಶಂಕರ್ ಸುಂದರ್ ಚಿತ್ರಕ್ಕೆ ಯೇಸುದಾಸ್  ರಂತಹ ಮಹಾನ್ ಗಾಯಕರನ್ನು ಕರೆಸಿ ಕನ್ನಡ ಚಿತ್ರಗಳಲ್ಲಿ ಹಾಡಿಸಿದ  ಪ್ರಯೋಗ ಶೀಲ ಸಂಗೀತ ನಿರ್ದೇಶಕ ಇವರಾದರು.   ಬನ್ನಿ ಇವರ  ಕೆಲವು ಹಿಟ್ ಹಾಡುಗಳ ಪರಿಚ ಮಾಡಿಕೊಳ್ಳೋಣ
  
ಜಿ.ಕೆ.ವೆಂಕಟೇಶ್ 

  • ಆಹಾ  ಮೈಸೂರು  ಮಲ್ಲಿಗೆ  , [ಬಂಗಾರದ  ಮನುಷ್ಯ ]
  • ಆಡಿಸಿ  ನೋಡು , ಬೀಳಿಸಿ  ನೋಡು  [ಕಸ್ತೂರಿ ನಿವಾಸ]
  • ಎಲ್ಲಿ  ಮರೆಯಾದೆ  ,[ಭಕ್ತ  ಕುಂಬಾರ]  
  • ಪ್ರೀತಿನೆ  ಆ  ದ್ಯಾವ್ರು  ತಂದ  ಆಸ್ತಿ  ನಮ್ಮ  ಬಾಳಿಗೆ  ,[ ದೂರದ ಬೆಟ್ಟ] [ ಈ ಹಾಡಿನಲ್ಲಿ  ಕುಲುಮೆಯಲ್ಲಿ ಕಬ್ಬಿಣ ಕುಟ್ಟುವ ಶಬ್ದವನ್ನು ಹಾಡಿಗೆ ಪೂರಕವಾಗಿ ಬಳಸಲಾಗಿದೆ ]
  • ಕನ್ನಡದಾ  ಮಕ್ಕಳೆಲ್ಲ  ಒಂದಾಗಿ  ಬನ್ನಿ  , [ಕಣ್ತೆರೆದು ನೋಡು,]
  • ಇಳಿದು  ಬಾ  ತಾಯಿ , [ಅರಿಸಿನ  ಕುಂಕುಮ]  
  • ರವಿವರ್ಮನ  ಕುಂಚದ   ಕಲೆ ,  [ಸೊಸೆ  ತಂದ  ಸೌಭಾಗ್ಯ]  
  • If you come today, it's too early ,  [ಆಪರೇಷನ್  ಡೈಮಂಡ್ ರಾಕೆಟ್]
  • ಬಾಳು  ಬೆಳಕಾಯಿತು  ,  [ಹಾಲು  ಜೇನು]
  • ನಿನದೆ  ನೆನಪು  ದಿನವು  ಮನದಲ್ಲಿ  , [ರಾಜ  ನನ್ನ  ರಾಜ] 
  • ರಾಧಿಕೆ ನಿನ್ನ ಸರಸ ಇದೇನೇ [ತಂದೆ ಮಕ್ಕಳು ]  [ ಈ ಹಾಡು ಮೂಲತಃ ಹಿಂದಿಯ ಬೇಟಿ ಬೀಟಾ ಚಿತ್ರದದ್ದಾದರೂ  ಅಲ್ಲಿನ ಹಾಡು ರಾಧೀಕೆ ತೆರೆ ಬಾನ್ಸುರಿ  ಹಾಡನ್ನು ಮಹಮದ್ ರಫಿ ಹಾಡಿದ್ದರು ಅದರಿಂದ ಸ್ಪೂರ್ತಿಗೊಂಡು ಅದೇ ಶೈಲಿಯಲ್ಲಿ  ಎ.ಪಿ.ಬಾಲಸುಬ್ರಮಣ್ಯಂ ರವರಿಂದ  ಹಾಡಿಸಿ ಆ ಹಾಡು ಕೂಡ ಕನ್ನಡದಲ್ಲಿ ಹಿಟ್ ಆಯಿತು ಇಂದಿಗೂ  ಕೂಡ ಜನಪ್ರೀಯ ಹಾಡುಗಳಲ್ಲಿ ಒಂದಾಗಿದೆ.]   
  • ನೀ ಬಂದು ನಿಂತಾಗ  [ ಕಸ್ತೂರಿ ನಿವಾಸ ][  ಆ ಕಾಲದಲ್ಲಿಯೇ ಈ ಹಾಡಿನಲ್ಲಿ  ಸ್ಟೀರಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಇದರಲ್ಲಿನ ಗಿಟಾರ್ ವಾದನ , ಪಿ.ಬಿ.ಶ್ರೀನಿವಾಸ್, ಎಸ.ಜಾನಕಿ ಅವರುಗಳ ಹಾಡಿಗೆ ಪೂರಕವಾಗಿ ನುಡಿಸಲಾಗಿದ್ದು ಅದು   ಈ ಗೀತೆಯ ಹೈ ಲೈಟ್ ಆಗಿ   ಅಂದಿನ ಕಾಲಕ್ಕೆ ಕನ್ನಡ ಚಿತ್ರಗಳಲ್ಲಿ ಪ್ರಥಮ ಸ್ಟೀರಿಯೋ  ರೆಕಾರ್ಡಿಂಗ್ ಹಾಡಾಗಿ  ಈ ಹಾಡು ಉತ್ತಮ ಸ್ಟೀರಿಯೋ ಸಂಗೀತದ ಸ್ಪಷ್ಟ  ಅನುಭವ ನೀಡಿ ಹಿಟ್ ಆಯಿತು.                                                                                                                            *ನಾರಿಯ  ಸೀರೆ  ಕದ್ದ , ರಾಧೆಯ  ಮಾನವ  ಗೆದ್ದ  , [ದಾರಿ  ತಪ್ಪಿದ  ಮಗ]
  • ಮೇಲೆ    ಹೇಳಿದ್ದು   ಕೆಲವು ಹಾಡುಗಳು ಮಾತ್ರ ಬಹಳಷ್ಟು ಹಾಡುಗಳು ಬಾಕಿ ಇವೆ,  ಈ ಲೇಖನ ಓದಿದ ನಿಮಗೆ ಹಲವು ಹಾಡುಗಳ ನೆನಪು ಖಂಡಿತಾ ಬರುತ್ತದೆ. ಈ ಸಂಗೀತ ನಿರ್ದೇಶಕ ಕನ್ನಡದ ಹಲವು ಗಾಯಕರನ್ನೂ ಅಂದು ಪರಿಚಯಿಸಿದ್ದು  ಅವರಲ್ಲಿ  ಬಿ.ಕೆ.ಸುಮಿತ್ರ, ಬೆಂಗಳೂರು ಲತಾ , ಸಿ.ಅಶ್ವಥ್ ,ಸುಲೋಚನ ಪ್ರಮುಖರು .ಕನ್ನಡ ಚಿತ್ರ ರಂಗಕ್ಕೆ ಕನ್ನಡ ಕವಿಗಳ ಅದ್ಭುತ ಕವಿತೆಗಳನ್ನು ಚಿತ್ರಕ್ಕೆ ಪೂರಕವಾಗಿ ಬಳಸಿಕೊಂಡ ಕನ್ನಡದ ಮೊದಲ ಸಂಗೀತ ನಿರ್ದೇಶಕ ಇವರು. ೧೯೬೩ ರಲ್ಲಿಯೇ    ತಮ್ಮ ಚಿತ್ರಗಳಲ್ಲಿ  ಕು.ವೆಂ.ಪು.ರವರ "ಯಾವ ಜನ್ಮದ ಮೈತ್ರಿ", ಹಾಗು ಕೆ.ಎಸ.ನರಸಿಂಹ ಸ್ವಾಮಿಯವರ "ಇವಳು ಯಾರು ಬಲ್ಲೆ ಏನೂ" ಎಂಬ ಹಾಡುಗಳನ್ನು ಬಳಸಿಕೊಂಡು ಯಶಸ್ವಿಯಾದರು . ಈ ಸಾಧಕನ  ಸಹಾಯಕರಾಗಿ ಇಂದಿನ ಬಹಳಷ್ಟು ಪ್ರಖ್ಯಾತ   ಸಂಗೀತ  ನಿರ್ದೇಶಕರು  ಕಾರ್ಯನಿರ್ವಹಿಸಿದ್ದರು. ಇಳಯ ರಾಜ , ಎಲ್.ವೈಧ್ಯನಾಥನ್,ಶಂಕರ್ ಗಣೇಶ್ ಮುಂತಾದವರು.
    ಇಳಯ ರಾಜ 
    ಅವರಲ್ಲಿ   ತಮಿಳಿನ ಅದ್ಭುತ ಸಂಗೀತ ನಿರ್ದೇಶಕ  ಇಳಯರಾಜ ಸಹ  ಒಬ್ಬರು,    ಜಿ.ಕೆ.ವೆಂಕಟೇಶ್ ೧೯೮೫ ರ   ನಂತರ  ಸಂಗೀತ ನಿರ್ದೇಶನ ಮಾಡಲಾಗದೆ ತಾವು ನಿರ್ಮಿಸಿದ ಕೆಲವು ತಮಿಳು ಚಿತ್ರಗಳ ಸೋಲಿನಿಂದ  ಕಂಗೆಟ್ಟರು. ಇತ್ತೀಚಿನ  ಕೆಲವು ವರ್ಷಗಳಿಂದ   ಇಳಯ ರಾಜಾ ರವರು ಇವರ ಸ್ಥಿತಿಯನ್ನು ಅರಿತು, ಇವರನ್ನು ತನ್ನ ಸಂಗೀತ ನಿರ್ಮಾಣದ ಚಿತ್ರಗಳ  ಮ್ಯೂಸಿಕ್ ಅರೆಂಜರ್ ಆಗಿ  ಮಾಡಿ ಸಹಾಯ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹಲವಾರು  ಒಳ್ಳೆಯ ಗೀತೆಗಳ ಸಂಗೀತಗಾರನಾಗಿ ,  ಕನ್ನಡದಲ್ಲಿ "ರಣಧೀರ ಕಂಟೀರವ" "ಇಮ್ಮಡಿ ಪುಲಿಕೇಶೀ" ಚಿತ್ರಗಳ ನಿರ್ಮಾಪಕರ ತಂಡದ ಒಬ್ಬರಾಗಿ  ಕನ್ನಡಕ್ಕೆ ದುಡಿದ ಈ ಪ್ರತಿಭೆ ಇಂದು  ಕನ್ನಡಿಗರ ಮನಸ್ಸಿನಿಂದ ನಿಧಾನವಾಗಿ ಮರೆಯಾಗುತ್ತಿರುವುದು ದುರಂತವೇ ಸರಿ . ಮುಂದಿನ ಪೀಳಿಗೆಗೆ ಇವರ ಪರಿಚಯದ ಅಗತ್ಯವಿದೆ  ಅದಕಾಗಿ ಈ ಲೇಖನ ಬರೆದಿದ್ದೇನೆ ಒಪ್ಪಿಸಿ ಕೊಳ್ಳುವುದು   ನಿಮಗೆ ಸೇರಿದ್ದು.                                                                                                                                       [ಈ ಲೇಖನಕ್ಕೆ ಮಾಹಿತಿ ಹಾಗು  ಚಿತ್ರಗಳನ್ನು ಕಲೆಹಾಕಲು  ಅಂತರ್ಜಾಲದ  ಸಹಾಯ,  ಎಲ್ಲಾ ಸಿನಿಮಾ ಪತ್ರಿಕೆಗಳ ಸಹಾಯ , ವಿಕಿಪೀಡಿಯ , ರಾಗಂ .ಡಾಟ್ ಕಾಂ   ಗಳಿಂದ ಮಾಹಿತಿ ಹೆಕ್ಕಿ ತೆಗೆದಿದ್ದೇನೆ ಈ ಎಲ್ಲಾ ಮಾಹಿತಿ ಮೂಲಗಳಿಗೂ ನನ್ನ ಕೃತಜ್ಞತೆಗಳು ]
    -----------------------------------------------------------------------------------------------------












































































































































































































































































16 comments:

Dr.D.T.Krishna Murthy. said...

ಒಳ್ಳೆಯ ಮಾಹಿತಿಪೂರ್ಣ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು ಬಾಲೂ ಸರ್.

Rajesh said...

ಕನ್ನಡದ ಮಹಾನ್ ಸಂಗೀತಗಾರ,ಸಂಗೀತ - ಸಾಮ್ರಾಟ್ ಜಿಕೆವಿ ಅವರ ಬಗ್ಗೆ ಬರೆದ ಲೇಖನ ಓದಿ ತುಂಬಾ ಸಂತಸವಾಯ್ತು ಬಾಲು ಸರ್...ಇಲ್ಲಿ ಲಗತ್ತಿಸಿರುವ ಚಿತ್ರವೊಂದರ ಅಡಿ ಶೀರ್ಷಿಕೆ" ಜಿ ಕೆ ವೆಂಕಟೇಶ್ ರೊಂದಿಗೆ ವರನಟ ರಾಜ್ ಕುಮಾರ್ ಮತ್ತು ಎಸ ಜಾನಕಿ" ಬರೆಯಲಾಗಿದೆ ..ಆದರೆ ಚಿತ್ರದಲ್ಲಿ ಜಿ ಕೆ ವೆಂಕಟೇಶ್ ಅವರಿಲ್ಲ ..ಇರುವುದು ಜಯಪ್ರದ, ರಾಜ್,ಬಿಸ್ಮಿಲ್ಲಾ ಖಾನ್ ಮತ್ತು ಜಾನಕಿ ಅಮ್ಮ ಮಾತ್ರ .
once again thank u sir.

balasubramanya said...

@ ಡಿ.ಟಿ.ಕೆ.ಸರ್ :- ಧನ್ಯವಾದಗಳು.

balasubramanya said...

@ ರಾಜೇಶ್ :- ವಾಹ್ ಎಂತಹ ಗಮನಿಸುವಿಕೆ ನಿಮ್ಮದು , ನಿಮ್ಮ ಮಾತು ನಿಜ ,ಜಿ.ಕೆ.ವೆಂಕಟೇಶ್ ಇಲ್ಲದ ಕಾರಣ ಆ ಚಿತ್ರವನ್ನು ತೆಗೆದಿದ್ದೇನೆ .ಉಳಿದಂತೆ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

Badarinath Palavalli said...

ಅಪರೂಪದ ಮಾಹಿತಿಯುಕ್ತ ಚಿತ್ರ ಲೇಖನ.

ಚಿತ್ರ ಸಂಗೀತವು ತಾಂತ್ರಿಕ ಪರಿಣಿತಿ ಮತ್ತು ಜನಪ್ರೀಯತೆಯ ನಾಡಿಯನ್ನು ಮುಂದೇ ಅರಿತು ರೂಪಿಸಬೇಕಾದ ಪ್ರಕಾರ. ಜಿಕೆವಿ ಒಬ್ಬ ಅಪರೂಪದ treand setter.

ಯಾವುದೇ ರಸದ ಗೀತೆಯನ್ನಾಗಲಿ ಅವರು ಚಿರಕಾಲ ನೆನಪಿನಲ್ಲಿ ಉಳಿಯುವಂತೆ ರೆಕಾರ್ಡ್ ಮಾಡಿಟ್ಟಿದ್ದಾರೆ.

ಅಂದು analog 2 track recording ಪದ್ಧತಿಯಲ್ಲಿ ಅವರು ಸಾಧಿಸಿದ quality, clarity ಮತ್ತು durablity ಅಸದಳ.

ಚರಿತ್ರೆ ಬರೆದ ದಿಗ್ಗಜರನ್ನು ಕಾಲಾಂತರದಲ್ಲಿ ಮರೆತಂತೆ ನಟಿಸಿ, ಮೂಲೆ ಗುಂಪು ಮಾಡಿಬಿಡುವ ಚಿತ್ರ ರಂಗದ ಕ್ರೌರ್ಯತೆಗೆ ಇದು ಸಜೀವ ಉದಾಹರಣೆ.

balasubramanya said...

@ ಬದರಿನಾಥ್ ಪಳವಲ್ಲಿ:-)ಹೌದು ನಿಮ್ಮ ಅನಿಸಿಕೆ ನಿಜ , ಅಂದಿನ ದಿನಗಳಲ್ಲಿ ಲಭ್ಯವಿದ್ದ ಸೀಮಿತ ರೆಕಾರ್ಡಿಂಗ್ ತಂತ್ರಜ್ಞಾನದಲ್ಲೇ ಉತ್ಕೃಷ್ಟ ರೀತಿಯಲ್ಲಿ ಸಂಗೀತ ನಿರ್ದೇಶನ ಮಾಡಿ , ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಂಗೀತದ ಕೊಡುಗೆ ನೀಡಿದರು.ಇಂತಹ ಪ್ರತಿಭೆ ಯಿಂದು ಕನ್ನಡಿಗರ ಮನಸ್ಸಿನಿಂದ ಮರೆಯಾಗುತ್ತಿರುವುದು ವಿಷಾದನೀಯ.ಮುಂದಿನ ಪೀಳಿಗೆಗೆ ಇಂತಹವರ ಬಗ್ಗೆ ಮಾಹಿತಿ ನೀಡಬೇಕಾಗಿದೆ. ನಿಮ್ಮ ಅನುಭವದ ಮಾತುಗಳಿಗೆ ಧನ್ಯವಾದಗಳು.

umesh desai said...

ನಿಜ ವೆಂಕಟೇಶ್ ಪ್ರಯೋಗಶೀಲರು. ಅವರು ಬಾಂಡ್ ಚಿತ್ರಗಳಿಗೆ ಸಂಗೀತ ಎಷ್ಟು ಸಲೀಸಾಗಿ ನೀಡುತ್ತಿದ್ದರೋ ಆಷ್ಟೇ ಸುಲಭವಾಗಿ "ಭುತಯ್ಯ..." ಚಿತ್ರದ ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು..ಎಂದು ತಾಳ
ಕೂಡಿಸುತ್ತಿದ್ದರು.

balasubramanya said...

@ಉಮೇಶ್ ದೇಸಾಯಿ :-) ನಿಮ್ಮ ಮಾಗ್ತುಗಳು ನಿಜ ಕ್ರಿಯಾಶೀಲ ಸಂಗೀತ ನಿರ್ದೇಶಕಜಿ.ಕೆ.ವೆಂಕಟೇಶ್ ಬಹಳಷ್ಟು ಪ್ರಯೋಗಗಳನ್ನು ಕನ್ನಡ ಚಿತ್ರ ರಂಗದ ಸಂಗೀತ ಕ್ಷೇತ್ರದಲ್ಲಿ ಮಾಡಿ ಯಶಸ್ಸುಕಂಡರು ನಿಮ್ಮ ಅನಿಸಿಕೆಗೆಗಳಿಗೆ ವಂದನೆಗಳು.

Srikanth Manjunath said...

ಜಿ.ಕೆ.ವಿ.ಬರಿ ವ್ಯಕ್ತಿ ಅಲ್ಲ ಅವರು ಆಲದ ಮರದ ಹಾಗೆ...ತಾನು ಬೇರು ಬಿಟ್ಟು..ಉಳಿದ ಬೇರುಗಳಿಗೂ ಸ್ಥಾನ ಕೊಡಿಸುವ ಶಕ್ತಿ..
ಅವರು ತನ್ನ ಮಿತಿಯನ್ನು ಮೀರಿ ಸಂಗೀತದ ಲೋಕದಲ್ಲಿ ಸ್ಥಾನಗಳಿಸಿಕೊಂಡಿದ್ದಾರೆ..
ಅವರ ಸಮಕಾಲೀನರಲ್ಲಿ ವಿಜಯಭಾಸ್ಕರ್ ಒಬ್ಬರೇ ಅವರ ಕ್ರಿಯಾಶೀಲತೆಗೆ ಸಾಟಿಯಾಗಬಲ್ಲರು.
ದಾರಿ ತಪ್ಪಿದ ಮಗ ಸಿನಿಮಾದಲ್ಲಿ ಹಡಗಿನ ಬಂದರಲ್ಲಿ ನಡೆಯುವ ಹೊಡೆದಾಟಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿದ್ದರಲ್ಲ ಅದು ದೇಶದಲ್ಲೇ ಮೊದಲು ಅನ್ನಬಹುದು..
ಅವರ ಮೊದಲ ಸಿನೆಮಾದಿಂದ ಹಿಡಿದು ಕಡೆ ಸಿನೆಮತನಕ ಪ್ರಯೋಗಶೀಲತೆ ಇದ್ದೆ ಇತ್ತು...
ಅವರು ನಿಂತ ನೀರಲ್ಲ..ಬದಲಿಗೆ ಸಮುದ್ರವನ್ನು ಸೇರುವ ತವಕ ತೋರಿಸುವ ನದಿಯ ಹಾಗೆ...ದಾರಿಯಲ್ಲಿ ಎಷ್ಟೋ ಜೀವಿಗಳಿಗೆ ಬಾಳು ಕೊಟ್ಟಂಥ ಮಹನೀಯ..
ಇನ್ನೊಬ್ಬ ರಾಜಣ್ಣ, ಇನ್ನೊಬ್ಬ ಬಾಲಣ್ಣ, ಇನ್ನೊಬ್ಬ ಅಶ್ವಥ್ ಹಾಗೆ ಇನ್ನೊಬ್ಬ ಜಿ.ಕೆ.ವಿ ಬರೋಲ್ಲ...
ನಿಮ್ಮ ಲೇಖನ ಕಣ್ಣು, ಹಾಗು ಮನಸು ತುಂಬಿಸುತ್ತೆ...ಧನ್ಯವಾದಗಳು

balasubramanya said...

@Srikanth Manjunath:-) ವಾಹ್ ನಿಮ್ಮ ಗಮನಿಸುವಿಕೆ ಎಷ್ಟು ಚೆನ್ನಾಗಿದೆ.ಜಿ.ಕೆ.ವಿ.ಬಗ್ಗೆ ಸಾಕಷ್ಟು ವಿಚಾರ ನಿಮ್ಮ ಅಭಿಪ್ರಾಯದಲ್ಲಿ ಮೂಡಿಬಂದಿದೆ. ಧನ್ಯವಾದಗಳು ಸರ್.

Srikanth Manjunath said...

ಇನ್ನೊಂದು ವಿಷಯ ಹೇಳೋದು ಬಿಟ್ಟಿದ್ದೆ...
ಇಡಿ ಕನ್ನಡ ಚಿತ್ರರಂಗ ರಾಜಕುಮಾರ್ ರವರನ್ನು ಅಣ್ಣಾವ್ರು ಅಂದ್ರೆ..ಜಿ.ಕೆ.ವಿ ಮಾತ್ರ ತಮ್ಮಯ್ಯ ಅಂತ ಕರೆಯುತ್ತಿದ್ದರು..
ಅವರು ಬದುಕಿದ್ದಾಗ ಕನ್ನಡ ದೂರದರ್ಶನದಲ್ಲಿ ಚಿತ್ರವಳಿಯ ಕಾರ್ಯಕ್ರಮದಲ್ಲಿ ಅವರು ಹೇಳಿದ ಮಾತು
ನಾನು ಕನ್ನಡಿಗರ ಹೃದಯದಲ್ಲಿ ಯಾವಾಗಲು ಇರುತ್ತೇನೆ ಕಾರಣ..
ಕುಲವಧು ಸಿನಿಮಾದಲ್ಲಿ "ಯುಗ ಯುಗಾದಿ ಕಳೆದರೂ" ಹಾಡು ಪ್ರತಿ ವರುಷ ಕೇಳುತ್ತೀರಾ..
ಕಣ್ತೆರೆದು ನೋಡು ಸಿನಿಮಾದಲ್ಲಿ ನಾನೇ ಹಾಡಿರುವ "ಕನ್ನಡ ಮಕ್ಕಳೆಲ್ಲ ಒಂದಾಗಿ ಬನ್ನಿ" ಪ್ರತಿ ರಾಜ್ಯೋತ್ಸವಕ್ಕೆ ಇದ್ದೆ ಇರುತ್ತೆ..
ಎಂತಹ ಮಾತುಗಳು...ಇಂತಹ ಅಮರ ಗೀತೆಗಳನ್ನ ಕೇಳುವ ಭಾಗ್ಯಕೊಟ್ಟ ಮಹಾ ಮಹಿಮಾ ಜಿ.ಕೆ.ವಿ..ಯಾವಾಗಲು ನಮ್ಮ ಜೊತೆ ಇದ್ದೆ ಇರುತ್ತಾರೆ..

Ashok.V.Shetty, Kodlady said...

ಬಾಲು ಸರ್.....

ಲೇಖನ ಓದಿ ಜಿ.ಕೆ.ವಿ ರವರ ಸುಂದರ ಗೀತೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡೆ...ನಾನು ಸಣ್ಣವನಿರುವಾಗ ಜಿ.ಕೆ.ವಿ. ರವರ ಕೆಲವು ಗೀತೆಗಳನ್ಬ್ನು ಕೋರಿ ಮಂಗಳೂರು ಆಕಾಶವಾಣಿಗೆ ಪತ್ರ ಬರೆಯುತಿದ್ದೆ...ಅದರಲ್ಲೂ 'ರವಿವರ್ಮನ ಕುಂಚದ ಕಲೆ' ಯನ್ನು ಕೋರಿ ಅದೆಷ್ಟೋ ಪೋಸ್ಟ್ ಕಾರ್ಡ್ ಗಳನ್ನು ಆಕಾಶವಾಣಿ ನಿಲಯಕ್ಕೆ ಕಳುಹಿಸಿದ್ದೆ......ಅವರ ಎಲ್ಲಾ ಗೀತೆಗಳು ನನ್ನ ಫೇವರೀಟ್ ಸರ್.....ಧನ್ಯವಾದಗಳು....

balasubramanya said...

Srikanth Manjunath :-) ಮತ್ತಷ್ಟು ಆಸಕ್ತಿ ಪೂರ್ಣ ಮಾಹಿತಿಗೆ ಧನ್ಯವಾದಗಳು. ಹೌದು ಉಗಾದಿ ಬಂದರೆ ಅವರು ಸಂಗೀತ ನಿರ್ದೇಶಿಸಿರುವ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ " ಹಾಗು ಕನ್ನಡ ರಾಜ್ಯೋತ್ಸವದಲ್ಲಿ ಅವರೇ ಹಾಡಿರುವ "ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ " ಹಾಡು ಖಂಡಿತಾ ಜ್ಞಾಪಕಕ್ಕೆ ಬರುತ್ತದೆ. ಇದನ್ನು ನೆನಪಿಸಿದ ನಿಮಗೆ ಧನ್ಯವಾದಗಳು.

balasubramanya said...

ashokkodlady ;-) ಹ ಹ ಹ ನಿಮ್ಮ ಅನಿಸಿಕೆ ನನ್ನ ಬಾಲ್ಯದ ದಿನಗಳನ್ನು ಜ್ಞಾಪಿಸಿತು. ಹೌದಲ್ವಾ ಟಿ.ವಿ.ಇಲ್ಲದ ಆ ದಿನಗಳಲ್ಲಿ ರೇಡಿಯೋ ದಲ್ಲಿ ನಮ್ಮ ಮೆಚ್ಚಿನ ಹಾಡಿಗೆ ಪತ್ರ ಬರೆದು ಕಾಯುತ್ತಾ ಕುಳಿತಿರುತ್ತಿದ್ದ ಆ ದಿನಗಳು ಒಂತರಾ ಮಜಾ ಕೊಡುತಿದ್ದ ದ ದಿನಗಳು ಆಲ್ವಾ.ಅನಿಸಿಕೆಗಳಿಗೆ ವಂದನೆಗಳು.


































0
)

ಸೀತಾರಾಮ. ಕೆ. / SITARAM.K said...

ಒಳ್ಳೆಯ ಮಾಹಿತಿಪೂರ್ಣ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು ಬಾಲಣ್ಣ

balasubramanya said...

@ ಸೀತಾರಾಮ್ :-) ತಮ್ಮ ಅನಿಸಿಕೆಗೆ ಥ್ಯಾಂಕ್ಸ್ ಸರ್.