|
ಬೆಳವಾಡಿಯ ಶ್ರೀ ವೀರ ನಾರಾಯಣ ಸ್ವಾಮಿ |
ಕಳೆದ ಸಂಚಿಕೆಯಲ್ಲಿ ಬೆಳವಾಡಿ ದರ್ಶನ ಮಾಡಿದ ನಂತರ ಈ ಸಂಚಿಕೆಯಲ್ಲಿ ಮುಂದೆ ತೆರಳೋಣ ಬನ್ನಿ, ಬೆಳವಾಡಿ ದೇಗುಲದ ಸುಂದರ ನೆನಪನ್ನು ಹೊತ್ತು ಮುಂದೆ ಹೊರಟಿತು , ನಮ್ಮ ತಂಡ . ಬೆಳವಾಡಿಯ ಸುಂದರ ಶ್ರೀ ವೀರ ನಾರಾಯಣ ಸ್ವಾಮಿ ಮೂರ್ತಿ ಮನದಲ್ಲಿ ತುಂಬಿಹೋಗಿತ್ತು ..... ! ನಮ್ಮ ತಂಡ ಹಿರೇಮಗಳೂರಿನ ಕಡೆಗೆ
ಹೊರಟಿತು ..... ಅಲ್ಲಿ ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರ
ದರ್ಶನಕ್ಕಾಗಿ ಮನ ಹಾತೊರೆಯುತ್ತಿತ್ತು. ....... !!!
|
ಯಾರ ಕಲ್ಪನೆಯ ಚಿತ್ರ ಇದು |
|
ನಿಸರ್ಗ ಚಿತ್ತಾರ |
ಬೆಳವಾಡಿ ಇಂದ ಹಿರೇಮಗಳೂರಿಗೆ ತೆರಳುವ ಹಾದಿಯಲ್ಲಿ ಬೆಳವಾಡಿಯ ಕೆರೆಯ ದಂಡೆಯ ಮೇಲೆ ಕಾರು ತೆರಳುತ್ತಿತ್ತು, ಬೆಳವಾಡಿಯ ಕೆರೆಯಲ್ಲಿ ಕಾಣ ಸಿಕ್ಕ ದೃಶ್ಯಗಳು ಮನಸೆಳೆದವು , ಅಲ್ಲಿನ ಕೆರೆಯಲ್ಲಿ ಆಹಾರಕ್ಕಾಗಿ ನೆಲೆಸಿದ್ದ ಪಕ್ಷಿಗಳು , ಅಲ್ಲಿದ್ದ ಗಿಡಗಳು ಸೃಷ್ಟಿಸಿದ್ದ ಚಿತ್ತಾರ , ರೇಖಾಗಣಿತದ ಹಲವು ಕೋನಗಳ ದರ್ಶನ ಮಾಡಿಸಿತ್ತು . ಶಿಲ್ಪ ಲೋಕದಿಂದ ನಿಸರ್ಗ ಲೋಕದೊಳಗೆ ವಿಹರಿಸಿದ ಮನ ಹಸಿರಾಯಿತು . ದಾರಿಯಲ್ಲಿ "ಕಳಸಾಪುರ " ಗ್ರಾಮ ಸಿಕ್ಕಿತು, ಅ ಊರಿನ ಸಣ್ಣ ಪರಿಚಯ ಗಿರೀಶ್ ಮಾಡಿ ಕೊಟ್ಟರು, ಈ ಊರಿನಲ್ಲಿ "ಬಂಗಾರದ ಮನುಷ್ಯ" "ಭೂತಯ್ಯನ ಮಗ ಅಯ್ಯು " ಚಲನ ಚಿತ್ರಗಳ ಚಿತ್ರೀಕರಣ ಆಗಿತ್ತೆಂದು ತಿಳಿದು ಬಂತು ,ಹಾಗು ಕಳಸಾ ಪುರದ ಹುಡುಗರು ಚಿತ್ರದ ಚಿತ್ರ ಕಥೆ ಬರೆದವರು ಈ ಊರಿನ್ವ್ರೆಂದು ತಿಳಿದು ಬಂತು [ ಮಾಹಿತಿ ನೀಡಿದ ಶ್ರೀಕಾಂತ್ ಮಂಜುನಾಥ್ ರವರಿಗೆ ಧನ್ಯವಾದಗಳು ] ಹೌದು ಈ ಊರಿನ ಪರಿಸರ ಚಿತ್ರೀಕರಣಕ್ಕೆ ಒಳ್ಳೆಯ ತಾಣವಾಗಿದೆ . ಅದೂ ಇದು ಮಾತನಾಡುತ್ತಾ ಹಿರೆಮಗಳೂರಿಗೆ ಬಂದೆ ಬಿಟ್ವಿ .
|
ಇಲ್ಲಿ ಶ್ರೀ ರಾಮನಿಗೆ ಪರಶುರಾಮ ಶರಣಾಗಿದ್ದಾನೆ |
ಸಾರ್ ಹಿರೇಮಗಳೂರು ಬಂತು ಅಂದರು ಗಿರೀಶ್ , ಹಿರೆಮಗಳೂರಿಗೆ ಬರಬೇಕೆಂಬ ಬಹಳ ವರ್ಷಗಳ ಆಸೆ ಇಂದು ಕೈಗೂಡಿತ್ತು, ಹಿರೇಮಗಳೂರು ಚಿಕ್ಕಮಗಳೂರು ಪಟ್ಟಣದ ಒಂದು ಭಾಗವಾಗಿದೆ, ಈ ಊರಿಗೆ ಚಿಕ್ಕಮಗಳೂರಿನ ಇತಿಹಾಸವೇ ಅನ್ವಯವಾಗುತ್ತದೆ , ಮೊದಲು ಈ ಊರು ಕಡೂರು ಜಿಲ್ಲೆಗೆ ಸೇರಿತ್ತು, ೧೮೬೫ ರಲ್ಲಿ ಕಡೂರು ಜಿಲ್ಲಾ ಕೇಂದ್ರವನ್ನು ಚಿಕ್ಕಮಗಳೂರಿಗೆ ಸ್ಥಳಾಂತರಿಸಲಾಯಿತು ."ಪರಶುರಾಮ" ಇಲ್ಲಿ ವಾಸವಿದ್ದ ಕಾರಣ "ಭಾರ್ಗವ ಪುರಿ"ಎಂದು ಕರೆಯಲಾಗುತ್ತಿತ್ತೆಂದು ಹೇಳುತ್ತಾರೆ, ದಂತ ಕಥೆ ಗಳು ಹೇಳುವ ರೀತಿ ಚಿಕ್ಕಮಗಳೂರು ಹಾಗು ಹಿರೇಮಗಳೂರು ಪರಿಸರದಲ್ಲಿ ಒಂಭತ್ತು ಸಿದ್ದರು ನೆಲೆಸಿ ತಪಸ್ಸು ಮಾಡಿದ್ದರೆಂದೂ ಸಹ ಹೇಳುತ್ತಾರೆ .
|
ಕಾಳಿಂಗ ಮರ್ಧನ , ನಾರಸಿಂಹ , ಮಹಾಲಕ್ಷ್ಮಿ ದೇವಾಲಯ |
ಹಿರೇಮಗಳೂರು ಹಾಗು ಚಿಕ್ಕ ಮಗಳೂರು ಎಂಬ ಹೆಸರು ಬರಲು ಇರುವ ಕಾರಣ ಹುಡುಕಿದರೆ ನಿಮಗೆ ಒಂದು ಕಥೆ ಇಲ್ಲಿ ತಿಳಿದುಬರುತ್ತದೆ .ಚಿಕ್ಕಮಗಳೂರು ಮೊದಲು ಹೊಯ್ಸಳ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು.ಮೊದಲು ಈ ಊರು
ಕಿರಿಯ ಮುಗಳಿ ಎಂಬ ಅಗ್ರಹಾರ ಹಾಗು ಇದರ ಪಕ್ಕದಲ್ಲಿ ಮತ್ತೊಂದು ಪಿರಿಯ ಮುಗಳಿ ಎಂಬ
ಅಗ್ರಹಾರ ವಿತ್ತು ಎರಡೂ ಅಗ್ರಹಾರವನ್ನು ಮದುವೆಯ ಉಡುಗೊರೆಯಾಗಿ ಮಕ್ಕಳಿಗೆ
ನೀಡಲಾಯಿತೆಂದು ಹೇಳುತ್ತಾರೆ.ಹೆಚ್ಚಿಗೆ ವಿಚಾರ ತಿಳಿದುಬರುವುದಿಲ್ಲ .ನಂತರ ಕಿರಿಯ
ಮುಗಳಿ ಚಿಕ್ಕ ಮುಗಳಿ ಯಾಗಿ,ಪೆರಿಯ ಮುಗಳಿ ಹಿರೆ ಮುಗಳಿ ಯಾಗಿ ಕರೆಯಲಾಗಿದೆ.ಕಾಲಾನಂತರ
ಇಂದು ಚಿಕ್ಕ ಮುಗಳಿ ಚಿಕ್ಕಮಗಳೂರು, ಹಿರೆ ಮುಗಳಿ ಹಿರೇಮಗಳೂರು ಎಂದೂ ಚಾಲ್ತಿಗೆ ಬಂದು
ಇಂದು ಎರಡೂ ಊರುಗಳು ಸೇರಿ ಜಿಲ್ಲಾ ಕೇಂದ್ರವಾಗಿದೆ.
|
ಹಿರೇಮಗಳೂರಿನ ಶ್ರೀ ಕೋದಂಡ ರಾಮ[ ಚಿತ್ರ ಕೃಪೆ ವಿಕಿ ಪಿಡಿಯ ] |
ಹಿರೇಮಗಳೂರಿನ ಶ್ರೀ ಕೋದಂಡ ರಾಮನ ದರುಶನ ಮಾಡೋಣ ಬನ್ನಿ ಈ ದೇವಾಲಯ ಮೂರು ಹಂತಗಳಲ್ಲಿ ರಚಿತವಾಗಿದ್ದು, ಹೊಯ್ಸಳ ಹಾಗು ದ್ರಾವಿಡ ಶೈಲಿಯ ರಚನೆಗಳನ್ನು ಗಮನಿಸ ಬಹುದು , ಮೂಲ ದೇವಾಲಯದಲ್ಲಿ ಶ್ರೀ ರಾಮನ ಬಲಭಾಗದಲ್ಲಿ ಸೀತೆ, ಎಡಭಾಗದಲ್ಲಿ ಲಕ್ಷ್ಮಣ ವಿಗ್ರಹ ಗಳ ರಚನೆ ಇದೆ , ಪರಶುರಾಮರ ಕೋರಿಕೆಯಂತೆ ಶ್ರೀ ರಾಮನು ಬಲಭಾಗದಲ್ಲಿ, ಸೀತೆ ಹಾಗು ಎಡಭಾಗದಲ್ಲಿ ಲಕ್ಷ್ಮಣ ಇರುವಂತೆ ದರ್ಶನ ನೀಡಿದ್ದಾಗಿ , ತಿಳಿದು ಬರುತ್ತದೆ, ಸ್ಥಳ ಮಹಿಮೆ ತಿಳಿದು ಬಂದಿದ್ದು ಹೀಗೆ, .
|
ಸನ್ಮಾನ್ಯ ಹಿರೇಮಗಳೂರು ಕಣ್ಣನ್ ಅವರು ನಡೆಸಿದ್ದ ಪೂಜಾ ನೋಟ |
|
ಶ್ರೀ ಸತ್ಯನಾರಾಯಣ ಸ್ವಾಮಿಗೆ ಬೆಳಗಿದ ಮಂಗಳಾರತಿ ಸಾಲು |
ನಾವುಗಳು ದೇವಾಲಯ ಆವರಣ ಪ್ರವೇಶ ಮಾಡಿದಾಗ ಸನ್ಮಾನ್ಯ ಹಿರೇಮಗಳೂರು ಕಣ್ಣನ್ ರವರು ಭಕ್ತರ ಜೊತೆಯಲ್ಲಿ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುತ್ತಿದ್ದರು, ಕನ್ನಡ ಪದಗಳ ಅರ್ಚನೆ ನೋಡಲು ಸುಂದರ ಹಾಗೂ ಕೇಳಲು ಸುಶ್ರಾವ್ಯ ವಾಗಿತ್ತು. ಕನ್ನಡದಲ್ಲಿ ಪೂಜೆ ಮಾಡುವ ವಿಧಾನ ನೋಡುವ ಸೌಭಾಗ್ಯ ನಮ್ಮದಾಗಿತ್ತು, ಅವರು ಹೇಳುವ ಪ್ರತಿ ಪದಗಳೂ ನಾವೇ ದೇವರಿಗೆ ಹೇಳುತ್ತಾ ಪ್ರಾರ್ಥನೆ ಸಲ್ಲಿಸಿದಂತೆ ಭಾಸವಾಗುತ್ತಿತ್ತು . ಬೇರೆಲ್ಲೂ ಸಿಗದ ಅಪೂರ್ವ ಅನುಭವ ನಮ್ಮದಾಗಿತ್ತು, ಕನ್ನಡ ಜಯ ಘೋಶದೊಡನೆ ಮಂಗಳಾರತಿ ಬೆಳಗಿದ್ದು ವಿಶೇಷವಾಗಿತ್ತು ಅರ್ಥವಾಗುವ ಭಾಷೆಯಲ್ಲಿ ಪೂಜಿಸಿದರೆ ಸಿಗುವ ಅನುಭವ ವರ್ಣಿಸಲು ಅಸಾಧ್ಯ ಅಂತೂ ಹೌದು, ಅಪರೂಪದ ಘಟನೆ ನಮ್ಮೆದುರು ಅನಾವರಣವಾಗಿ ಮನಸು ಪ್ರಸನ್ನವಾಯಿತು.
|
ಮಂಗಳಾರತಿ ಹಾಗು ಪ್ರಾರ್ಥನೆ ಹೀಗಿದ್ದರೆ ಚೆನ್ನ |
|
ಕನ್ನಡದಲ್ಲಿ ಪೂಜೆ ಮಾಡೋಣ ಬನ್ನಿ |
|
ನಮಸ್ಕಾರ ಮಾಡುವಾಗ ಹೀಗೆ ಹೇಳಿ |
|
ಕನ್ನಡದಲ್ಲಿ ನೈವೇಧ್ಯ ಹಾಗು ತಾಂಬೂಲ ಸಮರ್ಪಿಸಿ |
|
ನಮ್ಮ ಮನದಲ್ಲಿ ಇದು ಇರುವುದು ಸುಳ್ಳಲ್ಲ |
|
ಪ್ರವಾಸಿಗರಿಗೆ ಮಾಹಿತಿ ಇಲ್ಲಿದೆ |
ದೇವಾಲಯದಲ್ಲಿ ವಿಶೇಷ ನೋಡುವ ಆಸೆಯಿಂದ ಆವರಣದಲ್ಲಿ ಪ್ರದಕ್ಷಿಣೆ ಹಾಕುತ್ತ ಬರಲು ಕಣ್ಣಿಗೆ ಕಂಡ ಫಲಕಗಳು ಅಚ್ಚರಿ ಮೂಡಿಸಿದವು, ಇತರೆ ದೇವಾಲಯಗಳಲ್ಲಿ ಕಾಣುವ ಫಲಕಗಳಿಗಿಂತ ಬಿನ್ನವಾಗಿ ಮನಸೆಳೆದವು, ದೇವರಿಗೆ ಕನ್ನಡದಲ್ಲಿ ಪೂಜೆ ಮಾಡಲು ಪ್ರೇರಣೆ ನೀಡುವ ಸಂದೇಶ ಅವುಗಳು ಸಾರುತ್ತಿದ್ದವು, ಪ್ರತಿಯೊಂದು ಫಲಕವನ್ನು ಓದುತ್ತ ಮುನ್ನಡೆದೆ , ಇದೊಂದು ಜನಪರ ದೇಗುಲ ಎಂಬ ಭಾವನೆ ಮೂಡಿತು, ಸ್ವಲ್ಪ ಮುಂದೆ ಬಂದು ಇವುಗಳ ಚಿತ್ರ ತೆಗೆಯುತ್ತ ಸಾಗಿದೆ. ಅಲ್ಲೇ ಇದ್ದ ಒಂದು ಸಂದೇಶ ಮನ ಸೆಳೆಯಿತು " ದೇಗುಲಕೆ ಬರುವುದು ತಪ್ಪು ಹುಡುಕುವುದಕ್ಕಲ್ಲ ದೇವರಿಗೆ ತಪ್ಪು ಒಪ್ಪಿಸುವುದಕ್ಕೆ" ಎಂಬ ವಾಕ್ಯ ಮನಸೆಳೆಯಿತು ಇಂತಹ ತಪ್ಪನ್ನು ನಾವು ಮಾಡುವುದು ನಿಜ ಎಂಬ ಸತ್ಯದ ದರ್ಶನ ವಾಯಿತು. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಹೇಗೆ ತಮ್ಮ ಪ್ರವಾಸದ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎಂಬ ಬಗ್ಗೆ ಒಳ್ಳೆಯ ಮಾರ್ಗ ಸೂಚಿ ಹಾಕಿ ಪ್ರವಾಸಿಗರ ಪಯಣದ ದಾರಿ ದೀಪವಾಗಿದ್ದಾರೆ ಇಲ್ಲಿನ ದೇಗುಲದ ಆಡಳಿತಗಾರರು
|
ಚಿನ್ಮೈ ಭಟ್ ಪ್ರಥಮ ಭೇಟಿ |
ಹಾಗೆ ಕನ್ನಡ ದೇಗುಲದ ವಿವರಗಳನ್ನು ನೋಡುತ್ತಾ ಬರುತ್ತಿದ್ದೆ, ನಮ್ಮ ಗಿರೀಶ್ ಬಾಲೂ ಸರ್ ಇವ್ರು "ಚಿನ್ಮೈ ಭಟ್ " ಅಂತಾ ಎಂದು ಒಬ್ಬರನ್ನು ಪರಿಚಯ ಮಾಡಿಸಿದರು , ಅಚ್ಚರಿಯಾಯಿತು ನನ್ನ ಬ್ಲಾಗ್ ಓದುತ್ತ ತಮ್ಮ ಅನಿಸಿಕೆ ತಿಳಿಸುತ್ತ ಇದ್ದ " ಚಿನ್ಮೈ ಭಟ್ " ಇಲ್ಲಿ ಪ್ರತ್ಯಕ್ಷ ಆಗಿದ್ದರು, ಸಂತಸದಿಂದ ಪರಸ್ಪರ ಖುಷಿಯಿಂದ ಪರಿಚಯ ಮಾಡಿಕೊಂಡು ಮುಂದಿನ ಪಯಣಕ್ಕೆ ನಮ್ಮ ಜೊತೆ ಬರುವಂತೆ ಕೇಳಿದ್ದಕ್ಕೆ , ಖುಷಿ ಯಾಗಿ ಜೊತೆಗೂಡಿ ಬಂದರು , ಇಲ್ಲಿಂದ ಮುಂದೆ ನಮ್ಮ ನೆಚ್ಚಿನ ತಮ್ಮ ಚಿನ್ಮೈ ಭಟ್ ಜೊತೆಯಲ್ಲಿ ಪ್ರವಾಸ ಮತ್ತಷ್ಟು ಮೆರುಗು ಪಡೆಯಿತು, ಮುಂದುವರೆದ ನಮ್ಮ ತಂಡ ಚಿಕ್ಕ ಮಗಳೂರಿನ ಟೌನ್ ಕ್ಯಾಂಟೀನ್ ತಲುಪಿತು.
|
ಟೌನ್ ಕ್ಯಾಂಟೀನ್ |
ಚಿಕ್ಕಮಗಳೂರಿನಲ್ಲಿ ಈ ಟೌನ್ ಕ್ಯಾಂಟೀನ್ ತನ್ನದೇ ಆದ ಹೆಗ್ಗಳಿಕೆ ಹೊಂದಿದೆ , ಇಲ್ಲಿನ ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ ಬರೆದಿದ್ದಾರೆ , ಇಲ್ಲಿನ ವಿವಿಧ ಬಗೆಯ ದೊಸೆಗಳಿಗೆ ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್ ಕ್ಯಾಂಟೀನ್ ತನ್ನದೇ ರೀತಿಯಲ್ಲಿ ಸದ್ದಿಲ್ಲದೇ ಇಲ್ಲಿಗೆ ಬರುವ ಪ್ರವಾಸಿಗಳಿಗೆ ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ ಇಲ್ಲಿಗೆ ಬರದೆ ಹೋಗೋದಿಲ್ಲ, ಇಲ್ಲಿ ಗೆ ಬಂದ ನಾವು ಹೊಟ್ಟೆ ತುಂಬಾ ಉಪಹಾರ ಮೈಯ್ದು , ಪಾರ್ಸೆಲ್ ಮಾಡಿಸಿಕೊಂಡು ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ ಪಯಣ ಸಾಗಿತು 'ಮುಳ್ಳಯ್ಯನ ಗಿರಿ'' ಕಡೆಗೆ . ....!!!
|
ಗಿರಿ ಶಿಖರಗಳ ಒಡಲಿಗೆ ತೆರಳಿದ ಹಾದಿ |
ಗೆಳೆಯರೇ ಈ ಬ್ಲಾಗ್ 30 -12 - 2007 ರಂದು ಜನಿಸಿ ಐದು ವರ್ಷ ಪೂರೈಸಿದೆ ಆರನೇ ವರ್ಷಕ್ಕೆ ಕಾಲಿಟ್ಟ ಈ ಕಂದಮ್ಮನಿಗೆ ನಿಮ್ಮ ಶುಭ ಹಾರೈಕೆ ಇರಲಿ , ನಿಮ್ಮ ಪ್ರೀತಿಯ ಅನಿಸಿಕೆ ಹರಿಯುತ್ತಾ ಏನೇ ತಪ್ಪು ಒಪ್ಪು ಇದ್ದರೂ ಅದನ್ನು ಸರಿಪಡಿಸಿ ಈ ಅಜ್ಞಾನಿಯ ಜ್ಞಾನವನ್ನು ಹೆಚ್ಚಿಸಲು ಪ್ರೇರಣೆ ನೀಡುತ್ತಾ ಸದಾ ನನ್ನೊಂದಿಗೆ ನಿಮ್ಮ ಗೆಳೆತನ ಇರಲಿ ಎಂಬ ಆಸೆ ನನ್ನದು, ನನ್ನ ಆಸೆಯ ಗಿಡಕ್ಕೆ ನೀರೆರೆದು ಪೋಷಿಸುವ ಹೊಣೆ ನಿಮ್ಮದು . ಧನ್ಯವಾದಗಳು
No comments:
Post a Comment