Sunday, December 22, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....6 ಬೆಳವಾಡಿಯ ಮಡಿಲಲ್ಲಿ

ಬನ್ನಿ ಹೀಗೆ ಹೋಗೋಣ


ಗೆಳೆಯರೇ   ಈ ಸರಣಿಯ ಬ್ಲಾಗ್  ಬರಹದ ಸಂಚಿಕೆ ಕಳೆದ ವಾರ ಬರೆಯಲು ಆಗಿರಲಿಲ್ಲ,  ಕಳೆದ ಸಂಚಿಕೆಯಲ್ಲಿ  ಪುಷ್ಪಗಿರಿ  ಹಾಗು ಹುಲಿಕೆರೆ ಕೊಳ ದರ್ಶನ  ಮಾಡಿದೆವು , ನಮ್ಮ ಪಯಣ ಮುಂದುವರೆಯಿತು,  ಐತಿಹಾಸಿಕ  ಬೆಳವಾಡಿ ನೋಡುವ ಕನಸು  ನನಸಾಗುವ  ಸಮಯ ಹತ್ತಿರ ಬಂದಿತ್ತು . ಹಾಸನ  ಜಿಲ್ಲೆಯ  ಪ್ರವಾಸ ಮುಗಿಸಿ ಚಿಕ್ಕ ಮಗಳೂರು  ಜಿಲ್ಲೆಗೆ ಪ್ರವೇಶ  ಮಾಡಿದೆವು . ಬೆಳವಾಡಿ  ನಮ್ಮನ್ನು ಕೈಬೀಸಿ  ಕರೆಯುತ್ತಿತ್ತು .


ಹಳ್ಳಿಯ  ಜೀವನದ ಒಂದು ನೋಟ

ನಮ್ಮ ಹಳ್ಳಿಯ  ಕೆರೆಯನ್ನು  ನೆನಪಿಸಿದ ಕೆರೆ
 ಹಳೆಬೀಡು  ಕಡೆಯಿಂದ  ಬೆಳವಾಡಿಗೆ   ತೆರಳುವಾಗ ದಾರಿಯಲ್ಲಿ ಸಿಕ್ಕ  ಒಂದು ಕೆರೆ ನನ್ನ  ಹಳ್ಳಿಯ  ಬಾಲ್ಯದ ನೆನಪನ್ನು ಮೂಡಿಸಿತು,  ಕೆರೆಯಲ್ಲಿ ಒಂದು ಕಡೆ  ದನಗಳನ್ನು  ತೊಳೆಯುತ್ತಿದ್ದರೆ , ಮತ್ತೊಂದೆಡೆ   ಕೆಲವು ಹೆಂಗಸರು  ಅಲ್ಲೇ ಬಟ್ಟೆ   ತೊಳೆಯುತ್ತಿದ್ದರು  ,  ಅವರು ಹಾಕುವ  ಬಟ್ಟೆ  ಸೋಪಿನ   ಡಿಟರ್ಜೆಂಟ್  ಕೊಳೆ ಯ ಜೊತೆಗೆ ನೀರನ್ನು ಸೇರುತ್ತಿತ್ತು,  ಅದನ್ನು ಕುಡಿಯುವ  ಜೀವಿಗಳ  ಗತಿಯೇನು?  ಎಂಬ  ಪ್ರಶ್ನೆ ಬಂದಿತು,  ಅಷ್ಟರಲ್ಲೇ  ನಾನೂ ಬಾಲ್ಯದಲ್ಲಿ  ಇಂತಹ  ಕೆರೆಗಳಲ್ಲಿ  ಈಜು ಹೊಡೆಯಲು ಹೋಗುತ್ತಿದ್ದ  ನೆನಪು ಮೂಡಿ ,  ಅಂದು ಇಂತಹಾ  ನೀರನ್ನೇ  ಬಳಸಿದ್ದ  ಹಾಗು ಅಂದು ಏನೂ ಆಗದೆ  ಇಂದಿಗೂ ಬದುಕಿರುವ ನನ್ನ ಬಗ್ಗೆ ನನಗೆ ನಗು ಬಂತು . ಅಷ್ಟರಲ್ಲಿ ಬೆಳವಾಡಿ  ಬಂದೆ ಬಿಟ್ಟಿತ್ತು. 


ದೇವಾಲಯದ ಪ್ರವೇಶ  ದ್ವಾರ


 ಬೆಳವಾಡಿ  ಚಿಕ್ಕ ಮಗಳೂರು ಜಿಲ್ಲೆಗೆ ಸೇರಿದ ಐತಿಹಾಸಿಕ  ಸ್ಥಳ , ಇದು ಹಳೆಬೀಡುವಿನಿಂದ ಹನ್ನೊಂದು ಕಿ. ಮಿ .  ದೂರದಲ್ಲಿದೆ .ಇದೇ  ಬೆಳವಾಡಿ ಊರು ಮಹಾಭಾರತದ  "ಏಕ ಚಕ್ರ ನಗರ" ಆಗಿತ್ತೆಂಬ  ನಂಬಿಕೆ ಇದೆ, "ಭೀಮಸೇನ " ಏಕಚಕ್ರ  ನಗರದಲ್ಲಿ "ಬಕಾಸುರ" ನನ್ನು  ಸಂಹಾರ ಮಾಡಿದ ಕುರುಹಾಗಿ  ಇಲ್ಲಿನ್ ಜನ  ಇಂದಿಗೂ " ಬಂಡಿ ಬನ " ಎಂಬ ಹಬ್ಬ ಆಚರಣೆ ಮಾಡುತ್ತಾರೆ . ಬೆಳವಾಡಿಯ  ಪಕ್ಕದಲ್ಲಿ  ಒಂದು ದೊಡ್ಡ ಕೆರೆ ಯಿದ್ದು ಅದನ್ನು  "ಥಣಕ ರಾಯ''ನ  ಕೆರೆ ಅಂತ ಕರೆಯುತ್ತಾರೆ, "ಥಣಕ ರಾಯ'' ಹಿಂದೆ ಈ ಊರಿನ ಒಬ್ಬ ಪಾಳೆಯಗಾರ ಆಗಿದ್ದ  ಕಾರಣ  ಆತನ  ಗೌರವಾರ್ಥ  ಇಲ್ಲಿ ಒಂದು ಗುಹೆ ನಿರ್ಮಿಸಿರುವುದಾಗಿ  ಹೇಳುತ್ತಾರೆ . ಆದರೆ ಗುಹೆ ಎಲ್ಲಿದೆ ಎಂದು ತಿಳಿದು ಬರಲಿಲ್ಲ. ಮೊದಲು  ಈ ಊರು ಜೈನ ಕೇಂದ್ರ  ಅಗಿತ್ತೆಂದೂ , ಕಾಲಾನಂತರ  ವೈಷ್ಣವ ಕೇಂದ್ರವಾಗಿ  ಬದಲಾವಣೆ  ಕಂಡಿದೆ ಎಂಬ ಮಾಹಿತಿ ತಿಳಿದು ಬರುತ್ತದೆ . ಮೈಸೂರಿನ ಯದುವಂಶದ ಅರಸ ಮುಮ್ಮಡಿ ಕೃಷ್ಣರಾಜ ವಡೆಯರ್  ಅವರು ಈ ಊರನ್ನು "ಶೃಂಗೇರಿ ಮಠ" ಕ್ಕೆ ದತ್ತಿ  ನೀಡಲಾಯಿತೆಂದು  ಇತಿಹಾಸ ಹೇಳುತ್ತದೆ .


ದೇವಾಲಯದ  ಹೊರ  ಆವರಣ

ಬೆಳವಾಡಿಯ ದೇವಾಲಯ  ವಿಷ್ಣು ದೇವಾಲಯ  ತ್ರಿಕೂಟಾಚಲ ದೇವಾಲಯ  ವೆಂದೂ ಕರೆಯುತ್ತಾರೆ , ಸಾಮಾನ್ಯವಾಗಿ , ಹೊಯ್ಸಳ  ದೇವಾಲಯಗಳಲ್ಲಿ , ತ್ರಿಕೂಟಾಚಲ , ಪಂಚ ಕೂಟಾಚಲ ದೇವಾಲಯ  ಎಂದು ಕರೆಯುವುದು  , ಎಲ್ಲರಿಗೂ ತಿಳಿದಿದೆ ಆದರೆ  ಅದರ ಅರ್ಥ ನಮ್ಮಲ್ಲಿ ಬಹಳ ಜನರಿಗೆ ತಿಳಿದಿಲ್ಲ . ತ್ರಿಕೂಟಾಚಲ  ಅಂದರೆ  ಮೂರು ಪ್ರಧಾನ  ದೇವರನ್ನು ಹೊಂದಿರುವ, ಹಾಗು ಮೂರು ಗರ್ಭಗುಡಿ  ಹಾಗು ಶಿಖರ ಹೊಂದಿರುವ   ದೇವಾಲಯಗಳ  ಸಮುಚ್ಚಯ , ಪಂಚ ಕೂಟ ಎಂದರೆ ಐದು ಪ್ರಧಾನ ದೇವರನ್ನು ಹೊಂದಿರುವ  ಹಾಗು ಐದು ಗರ್ಭಗುಡಿ  ಹಾಗು ಶಿಖರ ಹೊಂದಿರುವ   ದೇವಾಲಯಗಳ ಸಮುಚ್ಚಯ  ಎಂದು ಕರೆಯಬಹುದು . ಬೆಳವಾಡಿ ಯಲ್ಲಿರುವುದು  ತ್ರಿಕೂಟಾಚಲ ದೇವಾಲಯ . 


ಶ್ರೀ ವೀರನಾರಯಣ ಸ್ವಾಮಿ


ಶ್ರೀ ವೀರನಾರನಯಣ  ಮೂರ್ತಿಯ  ಹೊಟ್ಟೆಯ ಭಾಗ  ಹಸುವಿನ ಮುಖ ಹೊಂದಿದೆ

ಈ ದೇವಾಲಯ ಸಮುಚ್ಚಯದಲ್ಲಿ  ಮೂರು ಗರ್ಭಗುಡಿ  ಹಾಗು ಶಿಖರ ಹೊಂದಿರುವುದನ್ನು ಕಾಣ ಬಹುದು , ಈ ದೇವಾಲಯದಲ್ಲಿ  ಪ್ರಧಾನವಾಗಿ  ವೀರನಾರಾಯಣ  ಮೂರ್ತಿ ಇದ್ದು   ಇದರ ಎಡ ಭಾಗದ  ಗುಡಿಯಲ್ಲಿ ಯೋಗಾನರಸಿಂಹ , ಬಲಭಾಗದ ಗುಡಿಯಲ್ಲಿ ವೇಣುಗೋಪಾಲ ಮೂರ್ತಿಗಳಿವೆ .ಬಳಪದ ಕಲ್ಲಿನ  ದೇಗುಲವನ್ನು  ಕ್ರಿಸ್ತ ಶಕ 1200 ರಲ್ಲಿ   ಹೊಯ್ಸಳ  ಅರಸ ವೀರ ಬಲ್ಲಾಳರ ಕಾಲದಲ್ಲಿ   ನಿರ್ಮಿಸಿದರೆಂದು  ತಿಳಿದುಬರುತ್ತದೆ ,  ಸುಂದರ ವೇಣುಗೋಪಾಲ ಮೂರ್ತಿ ಮನ ಮೋಹಕವಾಗಿದೆ , ಹೃದಯ ಭಾಗದಿಂದ ಹೊಟ್ಟೆಯ ಭಾಗದ ವರೆಗೆ ಸೂಕ್ಷ್ಮವಾಗಿ ಗಮನಿಸಿದರೆ  ಹಸುವಿನ ಮುಖದ ಹೋಲಿಕೆ ಕಂಡು ಬರುತ್ತದೆ . ಇದೆ ರೀತಿಯ ಮೂರ್ತಿಗಳು  ಹೊಯ್ಸಳ ಶಿಲ್ಪಿಗಳ ನೈಪುಣ್ಯತೆಯ ದರ್ಶನ  ಮಾಡಿಸಿ ಅಚ್ಚರಿಗೊಳಿಸುತ್ತವೆ. 


ಸುಂದರ  ದೇಗುಲದ  ಕಲಾ  ವೈಭವ

ಹೊಳೆಯುವ   ಕಂಬಗಳ  ಸಾಲು

ಯಾವುದೇ ಯಂತ್ರದ ಹಂಗಿಲ್ಲದೆ  ಹೀಗೆ ಕಡೆದದ್ದು ಹೇಗೆ

ಬೆಳವಾಡಿ  ಯ ಈ ದೇಗುಲವನ್ನು   ಬೆರಗಾಗಿ  ನೋಡುತ್ತಾ ಸಾಗಿದೆ , ದೇವಾಲಯದ  ಕಲಾ  ವೈಭವ ನನ್ನ ಕ್ಯಾಮರ ದಲ್ಲಿ ಸೆರೆಯಾಗುತ್ತಿತ್ತು ,  ದೇವಾಲಯದ ಸುತ್ತ  ಪ್ರದಕ್ಷಿಣೆ ಹಾಕಿ ಅಲ್ಲಿನ  ಚಿತ್ರಗಳನ್ನು  ಕಣ್ ತುಂಬಿಸಿಕೊಂಡು  ಧನ್ಯನಾದೆ , ದೇವಾಲಯದ  ಒಳ ಅವರಣ  ದೊಳಗೆ ಫಳ  ಫಳನೆ  ಹೊಳೆಯುತ್ತಿದ್ದ ನುಣುಪಾದ  ಕಲ್ಲಿನ  ಕಂಬಗಳು  ಸಾಲು ಸಾಲಾಗಿ  ನಿಂತಿದ್ದವು,   ದೂರದಿಂದ  ನೋಡಿದರೆ  ಯಾವುದೊ ಲೋಹದ ಕಂಬಗಳೋ  ಎಂಬಂತೆ  ಕಾಣುತ್ತಿದ್ದವು . ಯಾವುದೇ ಯಂತ್ರದ  ಸಹಾಯ ವಿಲ್ಲದೆ , ಇಷ್ಟು ನುಣುಪಾಗಿ  ಇಂತಹ ಕಂಬಗಳನ್ನು  ಸೃಷ್ಟಿಸಿದ  ಶಿಲ್ಪಿಗೆ  ಮನಸಾರೆ ವಂದಿಸಿದೆ . ದೇವಾಲಯದ  ಚಾವಣಿ

 ದೇಗುಲದ  ಹೊರಗಡೆ ಅಡ್ಡಾಡುವಾಗ  ಅಲ್ಲೇ ಪಕ್ಕದಲ್ಲಿದ್ದ  ಮೆಟ್ಟಿಲುಗಳನ್ನು  ಹತ್ತಿ  ಮೇಲೆ ಬಂದೆವು,  ದೇವಾಲಯದ  ಚಾವಣಿಯ   ದರ್ಶನ ಆಯಿತು,  ಶತ ಶತಮಾನಗಳಿಂದ  ಹವಾಮಾನ  ವೈಪರೀತ್ಯ  ಎದುರಿಸುತ್ತಾ  ಸುಂದರ  ದೇಗುಲದ ರಕ್ಷಣೆ  ಮಾಡುತ್ತಿರುವ  ಚಾವಣಿಯ  ಕಂಡು ಅಚ್ಚರಿ ಗೊಂಡೆ , ಸುಣ್ಣದ ಕಲ್ಲು, ಗಾರೆ  ಗಚ್ಚು  ಇವುಗಳ  ಮಿಶ್ರಣದ ನಿರ್ಮಾಣ ಇದಾಗಿತ್ತು . ಬೆಳವಾಡಿಯ  ಈ ದೇಗುಲ  ತನ್ನೊಳಗೆ ಇನ್ನೆಷ್ಟು  ರಹಸ್ಯ  ಬಚ್ಚಿಟ್ಟು  ಕೊಂಡಿದೆಯೋ  ತಿಳಿಯದಾಯಿತು,  ಸಮಯದ ಅಭಾವ ಇದ್ದ ಕಾರಣ ಅಲ್ಲಿಂದ  ಹೊರಡ ಬೇಕಾಯಿತು . 


ವಿನಾಯಕ  ದೇವಾಲಯ

ಮುಂದೆ ತೆರಳುವಾಗ ಸಿಕ್ಕ ವಿನಾಯಕನ  ದರ್ಶನ ಮಾಡಿ ಪುನೀತರಾದೆವು , ಬೆಳವಾಡಿ ದೇಗುಲದ ಸುಂದರ ನೆನಪನ್ನು ಹೊತ್ತು  ನಮ್ಮ ತಂಡ  ಹಿರೇಮಗಳೂರಿನ  ಕಡೆಗೆ  ಹೊರಟಿತು .....  ಅಲ್ಲಿ ಕನ್ನಡ ಪೂಜಾರಿ  ಶ್ರೀ ಹಿರೇಮಗಳೂರು  ಕಣ್ಣನ್  ಅವರ  ದರ್ಶನಕ್ಕಾಗಿ  ಮನ  ಹಾತೊರೆಯುತ್ತಿತ್ತು. ....... !!! 


4 comments:

Srikanth Manjunath said...

ಈ ದೇವಾಲಯ ತುಂಬಾ ವಿಭಿನ್ನ. ಒಳಗೆ ಕಂಬಗಳ ಜೊತೆಯಲ್ಲಿಯೇ ಸುಂದರ ಮೂರ್ತಿಗಳು ಅನಾವರಣಗೊಂಡರೆ ಸುತ್ತಲಿನ ಪ್ರಾಕಾರಗಳಲ್ಲಿ ಸುಂದರ ಕೆತ್ತನೆಗಳು ನೆಲೆ ನಿಂತಿವೆ. ನಿಮ್ಮ ಕ್ಯಾಮೆರದಲ್ಲಿ ಹೊರಹೊಮ್ಮಿದ ಪ್ರತಿ ಚಿತ್ರವೂ ಸುಂದರ ಮಾಲಿಕೆ. ಪಾಂಡವರು ನೆಡೆದಾಡಿದ್ದರು ಎನ್ನಲಾಗುವ ಪ್ರದೇಶಗಳಲ್ಲಿ ಒಂದು ಸುಂದರ ತಾಣ ಯಾನ ಅನುಭವ ನಿಜಕ್ಕೂ ಮುದ ನೀಡುತ್ತದೆ. ಕಂಬಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.. ಪ್ರಖರ ಬಿಸಿಲಿನ ಕಾಲದಲ್ಲಿ ನಮ್ಮ ಮುಖಾರವಿಂದ ಕಾಣುತ್ತೆನೋ ಅನ್ನುವಷ್ಟು ಹೊಳಪಿದೆ. ಚಿತ್ರಲಹರಿ ಅದಕ್ಕೆ ತೊಡಿಸಿರುವ ಬರಹಗಳ ಪೋಷಾಕು ಸೂಪರ್ ಬಾಲೂ ಸರ್. ಉದ್ಭವ ಗಣಪ ಇಲ್ಲಿನ ಒಂದು ಅಪರೂಪದ ದೃಶ್ಯ. ಕಳೆದ ಇಪ್ಪತ್ತು ವರ್ಷಗಳ ಭೇಟಿಯಲ್ಲಿ ಅದರ ಬದಲಾವಣೆ.. ಮತ್ತು ರೂಪದಲ್ಲಿ ಸ್ಪಷ್ಟತೆ ಗಮನ ಸೆಳೆಯುತ್ತಿದೆ. ಸುಂದರ ಲೇಖನ ಬಾಲೂ ಸರ್

(ಬೆಳವಾಡಿ ನನ್ನ ಜೀವನಕ್ಕೆ ಉತ್ಸಾಹ ತುಂಬುವ ಸ್ಥಳ. ವೀರನಾರಾಯಣ ದೇವಾಲಯ ಒಂದು ಸುಂದರ ಕಲಾಕೃತಿ. ಹಲವಾರು ಬಾರಿ ಭೇಟಿ ನೀಡಿ ಹೊಟ್ಟೆ ತುಂಬುವಷ್ಟು ಚಿತ್ರಗಳನ್ನು ತೆಗೆದರೂ ಪ್ರತಿ ಸಲವೂ ಒಂದು ವಿಭಿನ್ನ ಅನುಭವ ಕೊಡುವ ತಾಣ. ವರುಷಕ್ಕೊಮ್ಮೆ ಇಲ್ಲಿಗೆ ಭೇಟಿ ಕಳೆದ ೨೦ ವರ್ಷಗಳಿಂದ ನಡೆದೆ ಇದೆ)

ಮನಸು said...

ಒಳ್ಳೆಯ ಮಾಹಿತಿ ಸರ್... ಹಳೇಬೀಡಿನ ಅಕ್ಕಪಕ್ಕದ ಊರುಗಳಲ್ಲೂ ಹೊಯ್ಸಳ ವಾಸ್ತುಶಿಲ್ಪ ಮಾದರಿಯ ದೇವಾಲಯಗಳಿವೆ ಎಂದು ಕೇಳಿದ್ದೆ. ಮುಂದಿನ ಸರಿ ಹೋದಾಗ ನೋಡಿಬರಬೇಕು ಎಂದುಕೊಂಡಿದ್ದೇನೆ.

ಚಿನ್ಮಯ ಭಟ್ said...

ಎಂದಿನಂತೆ ಉಪಯುಕ್ತ ಮಾಹಿತಿಗಳು +ಚಂದದ ಚಿತ್ರಗಳು...ಇವೆಲ್ಲಾ ಪುಸ್ತಕರೂಪದಲ್ಲಿ ಅಚ್ಚಾಗೋದನ್ನಾ ನೋಡೋದಕ್ಕೆ ಕಾಯ್ತಿದೀವಿ...
ಧನ್ಯವಾದಗಳು ಸರ್...ನಮಸ್ತೆ :)

Badarinath Palavalli said...

ನೀವು ಚಿತ್ರಿಸಿದ ಕೆರೆ ನಮ್ಮೂರ ಕೆರೆಯನ್ನೇ ಬಿಂಬಿಸಿತು.
ಐತಿಹಾಸಿಕ ಬೆಳವಾಡಿಯನ್ನು ನಮ್ಮ ಮುಂದೆ ತೆರೆದಿಟ್ಟ ನಿಮಗೆ ನಾವು ಕೃತಜ್ಞ.
ತ್ರಿಕೂಟಾಚಲ ದೇಗುಲಗಾಲ ರಚನೆಯನ್ನೂ ಈ ಮೂಲಕ ಅರಿತಂತಾಯಿತು.
'ಯಾವುದೇ ಯಂತ್ರದ ಹಂಗಿಲ್ಲದೆ ಹೀಗೆ ಕಡೆದದ್ದು ಹೇಗೆ' ಶೀರ್ಷಿಕೆಯೊಂದಿಗೆ ಹಾಕಿದ ಚಿತ್ರದಲ್ಲಿರುವ ಕಂಭದ ಶಿಲ್ಪಕಲಾ ಚಾತುರ್ಯ ಅಂದಿನವರ ಬುದ್ಧಿಮತ್ತೆಗೆ ದ್ಯೋತಕ.
ಮುಂದುವರೆಯಲಿ...