Wednesday, December 11, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....5 ಬನ್ನಿ ಪುಷ್ಪಗಿರಿ ಹಾಗೂ ಹುಲಿಕೆರೆ ಕೊಳ ನೋಡೋಣ


ಪುಷ್ಪಗಿರಿ  ಬೆಟ್ಟದ ಪಕ್ಷಿನೋಟ

ಕಳೆದ ಸಂಚಿಕೆಯಲ್ಲಿ ಗಿರೀಶ್ ಮನೆಯ ಅತಿಥ್ಯದ ಬಗ್ಗೆ ಬರೆದೆ , ಹಿಂದಿನ ದಿನ  ಹಳೇಬೀಡು ದರ್ಶನ ಮಾಡಿ ಗಿರೀಶ್ ಮನೆಯಲ್ಲಿ ಉಳಿದು  ಮುಂಜಾನೆಯೇ ಸ್ನಾನ ಮಾಡಿ ಪುಷ್ಪಗಿರಿಗೆ ತೆರಳಿದೆವು, ಮುಂಜಾನೆಯ ತಂಗಾಳಿ  ಹಿತವಾದ ಅನುಭವ ನೀಡಿತ್ತು,  ಪುಷ್ಪಗಿರಿ ಸನ್ನಿಧಿಯಲ್ಲಿ  ಕಾಲಿಟ್ಟ  ನಮಗೆ  ಮೊದಲು  ಕಂಡಿದ್ದೆ  ಸುಂದರ ದೇವಾಲಯಪುಷ್ಪಗಿರಿಗೆ ಸ್ವಾಗತ

ಸುಂದರ ಮಂಟಪ
ಬನ್ನಿ ದೇಗುಲ ನೋಡೋಣ

ಮೊದಲು ಕಂಡಿದ್ದು ಹೊಸದಾಗಿ ನಿರ್ಮಾಣ ಆಗುತ್ತಿರುವ ಸ್ವಾಗತ  ಕಮಾನು , ಕಮಾನು ಹಿಂಬಾಗದಲ್ಲಿ ಒಂದು ಮಂಟಪ , ಮಂಟಪದ ನಂತರ  ದೇವಾಲಯ , ಇದಕ್ಕೆ ಹಿನ್ನೆಲೆಯಾಗಿ ಪುಷ್ಪಗಿರಿಯಲ್ಲಿನ  ಕೋಡುಗಲ್ಲಿನ  ಬೆಟ್ಟಶ್ರೇಣಿ . ಮೊದಲು ಸಿಗುವ ಕಮಾನನ್ನು ಇತ್ತೀಚಿಗೆ ನಿರ್ಮಾಣ ಮಾಡಲಾಗುತ್ತಿದ್ದು, ನಂತರ ಸಿಗುವ  ಮಂಟಪ ಕಲಾತ್ಮಕವಾಗಿ ಮೆರೆದಿದೆ , ನಾವಿಲ್ಲಿ ಹೊಯ್ಸಳ ಶೈಲಿಯ ಕೆತ್ತನೆಗಳನ್ನು ಗಮನಿಸ ಬಹುದು, ಮಂಟಪದಲ್ಲಿನ ಕಂಬಗಳು, ಆನೆಗಳ ಮೂರ್ತಿಗಳು, ಮಂಟಪದ ವಿನ್ಯಾಸ  ಬೇಲೂರು , ಹಳೆಬೀಡಿನ ಶಿಲ್ಪಕಲೆಗಳ ನೆನಪನ್ನು  ಮೂಡಿಸುತ್ತವೆ .


ಸುಂದರ ಮಂಟಪ


ಪುಷ್ಪಗಿರಿ ಯಲ್ಲಿನ  ಶ್ರೀ ಭೈರವ / ಮಲ್ಲಿಕಾರ್ಜುನ   ದೇವಾಲಯ ದ  ಇತಿಹಾಸದ ಬಗ್ಗೆ ಅಷ್ಟೇನೂ  ಮಾಹಿತಿ ನಮಗೆ ದೊರಕಲಾರದು, ಇರುವ ಅಸ್ಪಷ್ಟ ಮಾಹಿತಿ ಸರಿಯಾಗಿ ತಾಳೆಯಾಗುತ್ತಿಲ್ಲ , ಹಾಗಾಗಿ ಇಲ್ಲಿ ನ ಇತಿಹಾಸ  ಸ್ಪಷ್ಟತೆ ಕಾಣದು . ೧]  ಮಲ್ಲಿಕಾರ್ಜುನ ದೇವಾಲಯ ಮೊದಲು  ಜೈನ  ಬಸದಿ ಆಗಿತ್ತೆಂದೂ ನಂತರ ಅದು ಮಾರ್ಪಾಡಾಗಿ ಮಲ್ಲಿಕಾರ್ಜುನ ದೇವಾಲಯ ಆಯಿತೆಂದು, ಹಳೇಬೀಡು ಊರಿನ ಸ್ಥಾಪನೆ ಗೆ  ಮೊದಲೇ ಇಲ್ಲಿ ಊರು ಹಾಗು ದೇವಾಲಯವಿತ್ತೆಂದು   ಒಂದು ವಾದವಿದೆ, ೨]   ಎರಡನೆಯ ವಾದ  ಈ ಮಲ್ಲಿಕಾರ್ಜುನ ದೇಗುಲವನ್ನು ರಾಣಿ ಶಾಂತಲೆ   ಕಟ್ಟಿಸಿದಳೆಂದು ಹೇಳಲಾಗುತ್ತದೆ . ಈ ದೇಗುಲದ ಕಾಲದ ಬಗ್ಗೆ  ಗೊಂದಲದ  ಮಾಹಿತಿ ಇದ್ದು  ಸರಿಯಾದ ಸಂಶೋದನೆ ಅಗತ್ಯವಿದೆ .


ಶ್ರೀ ಮಲ್ಲಿಕಾರ್ಜುನ ಸ್ವಾಮಿ

ದೇವಾಲಯ ಒಳಹೊಕ್ಕ ನಾವುಶ್ರೀ ಮಲ್ಲಿಕಾರ್ಜುನ ಸ್ವಾಮೀ  ದರ್ಶನ ಪಡೆದೆವು, ನಿಶ್ಯಬ್ದ ವಾದ ವಾತಾವರಣ  ಒಂದೇ ಮನಸಿನಿಂದ   ಸ್ವಲ್ಪ  ಹೊತ್ತು  ಕಣ್ಣು ಮುಚ್ಚಿ ಕುಳಿತೆ , ಮನಸು ಹಗುರವಾಯಿತು, ನಿರ್ಮಲವಾದ  ಮನಸಿನಿಂದ  ದೇಹಕ್ಕೆ ಮತ್ತಷ್ಟು ಉತ್ಸಾಹ  ಸಿಕ್ಕಿತು, ದೇವಾಲಯದ ಒಳ ಆವರಣ  ನೋಡುತ್ತ  ಸಾಗಿದೆ , ಈ ದೇವಾಲಯದ ವಿಶೇಷ ಅಂದ್ರೆ ಹೊರ ಭಾಗದಲ್ಲಿ  ಅಷ್ಟೊಂದು  ಕೆತ್ತನೆ ಕಾಣದಿದ್ದರೂ  ಒಳ ಭಾಗ, ಹಾಗು ಚಾವಣಿಯಲ್ಲಿ  ಅದ್ಭುತ ಚಿತ್ತಾರಗಳನ್ನು ಕಾಣ ಬಹುದು  ,


ಶ್ರೀ ಮಹಾಲಕ್ಷ್ಮಿ


ಭಗವಾನ್ ಮಹಾವೀರದೇವಾಲಯದ  ಚಂದ ಸವಿಯುತ್ತಾ ಚಾವಣಿಯಲ್ಲಿನ ಅದ್ಭುತ ಚಿತ್ರಗಳನ್ನು ಕ್ಯಾಮರಾದಲ್ಲಿ  ಸೆರೆ ಹಿಡಿಯುತ್ತಾ ಸಾಗಿದೆ , ವಿಷ್ಣು, ಶಿವ, ಮಹಾಲಕ್ಷ್ಮಿ  ಮುಂತಾದ ಚಿತ್ರಗಳನ್ನು  ನೋಡಿ ಕಣ್ತುಂಬಿ ಕೊಂಡೆ , ಹಾಗೆ ಚಿತ್ರ ತೆಗೆದು ಮನೆಗೆ ಬಂದು ಕಂಪ್ಯೂಟರ್ ಗೆ ಇಳಿಸಿದಾಗ ಕಂಡ ಒಂದು ಚಿತ್ರ  ವಿಸ್ಮಯವಾಗಿತ್ತು,  ಹೌದು ಅಂದು ದೇವಾಲಯದ ಚಾವಣಿಯಲ್ಲಿ ತೆಗೆದ ಚಿತ್ರಗಳಲ್ಲಿ  ಜೈನ  ಪಂಥದ  ಮಹಾವೀರರದ್ದೂ  ಒಂದು ಚಿತ್ರವಿತ್ತು , ಮಲ್ಲಿಕಾರ್ಜುನ ದೇವಾಲಯ ಮೊದಲು  ಜೈನ  ಬಸದಿ ಆಗಿತ್ತೆಂದೂ ನಂತರ ಅದು ಮಾರ್ಪಾಡಾಗಿ ಮಲ್ಲಿಕಾರ್ಜುನ ದೇವಾಲಯ ಆಯಿತೆಂದು, ಹೇಳುವ ಮಾತಿಗೆ  ಹತ್ತಿರವಾಗಿತ್ತು ಇಲ್ಲಿನ ನಿದರ್ಶನ , ಆದಾಗ್ಯೂ  ಸರಿಯಾದ ಸಂಶೋಧನೆ ಇಲ್ಲದೆ  ತೀರ್ಮಾನ  ಮಾಡುವುದು ಸರಿಯಲ್ಲಾ  ಎನ್ನಿಸುತ್ತದೆ, ದೇವಾಲಯದ ಹೊರಬಂದ ನಾವು  ಅಲ್ಲೇ  ಸನಿಹದಲ್ಲಿ ಇದ್ದ  ವೀರಶೈವ ಮಠಕ್ಕೆ  ಭೇಟಿ ಕೊಟ್ಟೆವು,

ಪುಷ್ಪಗಿರಿ ಮಠದ ದರ್ಶನ

ಪುಷ್ಪಗಿರಿ ಮಠದ ಬಗ್ಗೆ ತಿಳಿದ ಸ್ವಲ್ಪ ಮಾಹಿತಿ ಇಲ್ಲಿದೆ , ಕ್ರಿ .ಶ ಹನ್ನೊಂದನೇ ಶತಮಾನದಲ್ಲಿ ಈ ಮಠದ ಸ್ಥಾಪನೆ ಆಯಿತೆಂದು ವೀರಶೈವ  ಧರ್ಮದ ಅನುಯಾಯಿಗಳಿಗಾಗಿ ಈ ಧಾರ್ಮಿಕ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ದೇಶ ವಿದೇಶಗಳಲ್ಲಿ ಇಲ್ಲಿನ ಭಕ್ತರು ಇರುವುದಾಗಿ ತಿಳಿದು ಬಂತು . ಈ ಸಂಸ್ಥೆಯನ್ನು  "ಪುಷ್ಪಗಿರಿ  ಮಹಾ ಸಂಸ್ಥಾನ" ವೆಂದು  ಕರೆದಿದ್ದು, ಹಾಲಿ ಇಲ್ಲಿನ  ಅದಿಪತಿ "ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ" ಗಳು .  ಇಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ, ಕೃಷಿ ಚಟುವಟಿಕೆ, ಸಾವಯವ ಕೃಷಿ ಬಗ್ಗೆ , ಪ್ರಾಚ್ಯ ವಸ್ತುಗಳ ಸಂಗ್ರಹದ ಬಗ್ಗೆ ಆಸಕ್ತಿ ತೋರಿರುವುದನ್ನು  ಕಾಣಬಹುದಾಗಿದೆ .  ಗಿರೀಶ್ ಜೊತೆಯಲ್ಲಿ ಸ್ವಾಮೀಜಿಯವರ ಪರಿಚಯ ಮಾಡಿಕೊಂಡು  ದರ್ಶನ ಪಡೆದೆವು


ಅಡಿಗೆ ಶಾಲೆ

ಬಸವಣ್ಣ ನವರ ಸುಂದರ ಪ್ರತಿಮೆ

ಐತಿಹಾಸಿಕ ಶಿಲ್ಪಗಳ ಸಂರಕ್ಷಣೆ
 ಮಠದ  ಅಡಿಗೆ ಶಾಲೆ ನೋಡಿ ಮೆಚ್ಚುಗೆ ಯಾಯಿತು ಅನ್ನ  ದಾಸೋಹ ದ ಬಗ್ಗೆ ತಿಳಿದು ಹೊರನಡೆದ ನಾವು, ಬಯಲು ಸಂಗ್ರಹಾಲಯಕ್ಕೆ ಬಂದೆವು, ಬಹಳ ಹಿತವಾದ ಜಾಗ ಇದು, ಎತ್ತರದ ಸಮತಟ್ಟಾದ ಪ್ರದೇಶದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿ , ಸುತ್ತಲೂ ಅತ್ಯಮೂಲ್ಯವಾದ ಪ್ರಾಚ್ಯ   ಶಿಲ್ಪಗಳನ್ನು ವ್ಯವಸ್ತಿತವಾಗಿ ಸಂರಕ್ಷಣೆ ಮಾಡಲಾಗಿದೆ, ವೈಷ್ಣವ, ಜೈನ, ಶೈವ ಶಿಲ್ಪಗಳನ್ನು ಇಲ್ಲಿ  ಕಾಣಬಹುದು . ಸರ್ವಧರ್ಮಗಳ  ಸಂಗಮ ಇಲ್ಲಿದೆ
ಪುಷ್ಪಗಿರಿ ಯಿಂದ ಕಾಣುವ  ಸುಂದರ ನೋಟ

ಪುಷ್ಪ ಗಿರಿಯಿಂದ ಕಾಣುವ ದ್ವಾರ ಸಮುದ್ರ ಕೆರೆ

ಪುಷ್ಪಗಿರಿಯಲ್ಲಿ    ಉಲ್ಲಾಸದಿಂದ  ಕಾಲ ಕಳೆದ ನಾವು  ಮುಂದಿನ ಸ್ಥಳಕ್ಕೆ ತೆರಳಲು ಸಿದ್ದರಾದೆವು, ಪುಷ್ಪಗಿರಿ ಸುತ್ತ ಮುತ್ತ ಕಾಣುವ ನೋಟದ  ಚಿತ್ರಗಳ ಸೆರೆ ಹಿಡಿದು, ಖುಷಿಪಟ್ಟೆ, ದೂರದಲ್ಲಿ ಕಾಣುತ್ತಿದ್ದ ಹಸಿರು ಗದ್ದೆ, ದ್ವಾರ ಸಮುದ್ರ ಕೆರೆ ಇವುಗಳು ರಮ್ಯವಾದ  ದರ್ಶನ ನೀಡಿದ್ದವು, ಪ್ರಸನ್ನ ಮನಸಿನಿಂದ  ಹುಲಿಕೆರೆ ಕೊಳಕ್ಕೆ ಹೊರಟೆವು .


ಗೂಗಲ್ ನಲ್ಲಿ ಕಂಡಂತೆ ಹುಲಿಕೆರೆ ಕೊಳ


ಹುಲಿಕೆರೆ ಕೊಳದ ದರ್ಶನ  {ಚಿತ್ರ ಕೃಪೆ ಅಂತರ್ಜಾಲ }


ಬನ್ನಿ ಬನ್ನಿ ಇಲ್ಲಿದೆ "ಹುಲಿಕೆರೆ ಕೊಳ"   ಮೇಲ್ನೋಟಕ್ಕೆ  ಪ್ರವಾಸಿಗರ ಕಣ್ಣಿಗೆ ಬೀಳದು, ಹಳೇಬೀಡಿಗೆ  ಬರುವ ಪ್ರವಾಸಿಗಳು ಇಲ್ಲಿಗೆ ಹೆಚ್ಚಾಗಿ ಬರುವುದಿಲ್ಲ , ಆದರೆ "ಹುಲಿಕೆರೆ ಕೊಳ"  ಅದ್ಭುತವಾದ ಇತಿಹಾಸವನ್ನು ತನ್ನೊಳಗೆ ಬಚ್ಚಿಟ್ಟು ಕೊಂಡಿದೆ , ಹೊಯ್ಸಳ  ಅರಸರ ಕಾಲದಲ್ಲಿ ಕಟ್ಟಿಸಿದ ಒಂದೇ ಕಲ್ಯಾಣಿ  ಇದು ಎಂಬ ಅಧಿಕೃತ ದಾಖಲೆ ಇದೆ.  ಈ ಕಲ್ಯಾಣಿ  ಅರವತ್ತು ಅಡಿ ಆಳವಿದ್ದು,  ಚೌಕಾಕೃತಿ ಯಲ್ಲಿದೆ  ಕೊಳದ  ಮೂರುಬದಿಯಲ್ಲಿ  ಹದಿಮೂರು ಮೆಟ್ಟಿಲುಗಳ  ಅಲಂಕಾರವಿದ್ದು  ಹನ್ನೆರಡು ಗೋಪುರಗಳ ಸಣ್ಣ ದೇವಾಲಯಗಳನ್ನು  ಕೊಳದ ಸುತ್ತಲೂ ಸ್ಥಾಪಿಸಲಾಗಿದೆ  , ಈ ಹನ್ನೆರಡು ದೇವಾಲಯಗಳು "ಹನ್ನೆರಡು ರಾಶಿ" ಗಳನ್ನು ಪ್ರತಿನಿಧಿಸುವುದಾಗಿ  ತಿಳಿದು ಬರುತ್ತದೆ. ಇಲ್ಲಿ "ಶಿಲ್ಪ ಶಾಸ್ತ್ರ"ದ ಜೊತೆ "ಖಗೋಳ ಶಾಸ್ತ್ರ"ವೂ ಕೂಡ  ಮಿಳಿತವಾಗಿ  ಅಂದಿನವರ ಜ್ಞಾನ ಮಟ್ಟವನ್ನು  ತೋರಿಸುತ್ತದೆ .


ಹುಲಿಕೆರೆ ಕೊಳದ ನೋಟ

ಕೊಳದ ಸುತ್ತಾ ನಿರ್ಮಿಸಿರುವ ಪುಟ್ಟ ಗುಡಿಗಳು


ಈ ಕೆರೆಯನ್ನು ಎಷ್ಟು ನೋಡಿದರೂ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕಾಡುತ್ತದೆ, ಬಹುಷಃ  ನಾನು ನೋಡಿದ ಯಾವ ಕಲ್ಯಾಣಿಯೂ ನನ್ನನ್ನು ಇಷ್ಟು ಅಚ್ಚರಿಗೊಳಿಸಿರಲಿಲ್ಲ ಹಾಗೆ ನೋಡುತ್ತಾ ನಿಂತೇ ಇದ್ದೆ, ಇತಿಹಾಸದ ಪ್ರಕಾರ ಇಲ್ಲಿನ ಕೊಳದ ನಿರ್ಮಾಣವನ್ನು ವಿಷ್ಣುವರ್ಧನ /ಬಿಟ್ಟಿದೇವನ ಆಳ್ವಿಕೆ ಕಾಲದಲ್ಲಿ ನಿರ್ಮಿಸಿದುದಾಗಿ ತಿಳಿದುಬರುತ್ತದೆ,  ಈ ಕೊಳದಲ್ಲಿ ರಾಣಿ ಶಾಂತಲೆ  ಮೀಯುತ್ತಿದ್ದಳೆಂದು  ಹೇಳಲಾಗಿದೆ , ಈ ಕೊಳದ ನಿರ್ಮಾಣದ  ಶಿಲ್ಪಿಯ ಹೆಸರು  "ಚಟ್ಟಾಯ " ಎಂದು ತಿಳಿಸುತ್ತಾರೆ .


ಸ್ಪಟಿಕ ದಂತ ನೀರನ್ನು ಹೊಂದಿದ ಕೊಳ

ಮತ್ತೊಂದು ವಿಶೇಷ ಈ ಊರಿನ ಬಗ್ಗೆ  , ಅಚ್ಚರಿ ಮೂಡಿಸುತ್ತದೆ, ಈ ಊರಿನಲ್ಲಿ ಹೊಯ್ಸಳ ಸಾಮ್ರಾಜ್ಯ ಸ್ಥಾಪಕ  "ಸಳ " ಬಹಳ ವರ್ಷಗಳ ಕಾಲ ವಾಸವಿದ್ದುದಾಗಿ ಹೇಳುತ್ತಾರೆ , ಬಗೆದಷ್ಟು ಮುಗಿಯದ  ಇತಿಹಾಸ ಹೊಂದಿದ ಈ ಕೊಳ  ತನ್ನ ಸುತ್ತ ಬೇಲಿ ಹಾಕಿಕೊಂಡು ಎಲೆಮರೆಯಲ್ಲಿನ ಕಾಯಿಯಂತೆ ಕುಳಿತಿದೆ, ಇನ್ನು ಪ್ರವಾಸಿಗರು  ಹಳೇಬೀಡು ನೋಡಿ ಇದರಬಗ್ಗೆ ತಿರುಗಿಯೂ ನೋಡದೆ  ಹೋಗುತ್ತಾರೆ, ಐತಿಹಾಸಿಕ ಕೊಳದ ದರ್ಶನ ಮಾಡಿ ಪುನೀತನಾದೆ ,  ಹೊಟ್ಟೆ ತಾಳ  ಹಾಕುತ್ತಿತ್ತು, ಗಿರೀಶ್ ಮನೆಯ ಬಿಸಿ ಬಿಸಿ ದೋಸೆ ಕೈಬೀಸಿ  ಕರೆಯುತ್ತಿತ್ತು .  {ಗಿರೀಶ್ ಮನೆಯ ಅತಿಥ್ಯದ ಬಗ್ಗೆ ಹಾಗು  ಅಲ್ಲಿನ ಕಾರ್ಯಕ್ರಮ ದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರೆದಿದ್ದೇನೆ } ಕಟ್ ಮಾಡಿದ್ರೆ ಬೆಳವಾಡಿಗೆ  ನಮ್ಮ ಪಯಣ ಸಾಗಿತ್ತು. ......!!

8 comments:

bilimugilu said...

ಬಾಲು ಸರ್,
ಅದ್ಭುತ - ನಮ್ಮನ್ನು ನಿಮ್ಮ ಚಿತ್ರಗಳ ಮೂಲಕ, ವಿವರಣೆಗಳ ಮೂಲಕ ವಿಸ್ಮಿತರಾಗಿಸುತ್ತೀರ.
"ಹುಲಿಕೆರೆ ಕೊಳ" ಸೂಪರ್, ಪ್ರಶಾ೦ತತೆ ಎದ್ದು ಕಾಣುತ್ತಿದೆ. ಎಲ್ಲಾ ದೇವರುಗಳ ಮಧ್ಯೆ ಮಹಾವೀರರ ಕೆತ್ತನೆ ವಿಸ್ಮಯ!!

ಚಿನ್ಮಯ ಭಟ್ said...

ಚಂದ ಇದೆ ಸರ್ ಚಿತ್ರಗಳು...ಹೌದು ಹುಲಿಕೆರೆ ಹೊಳದ ಬಗ್ಗೆ ನಾನು ಜಾಸ್ತಿ ಕೇಳಿಲ್ಲ.....ಧನ್ಯವಾದ ಚಂದದ ಚಿತ್ರದೊಂದಿಗೆ ಅಂದದ ಮಾಹಿತಿಗಳಿಗಾಗಿ...

ಮತ್ತೆ ಅಲ್ಲಿ ಅಣ್ಣ ದಾಸೋಹ ಆಗಿದೆ,ಅನ್ನ ದಾಸೋಹ ಆಗ್ಬೇಕು ಅನ್ಸತ್ತೆ ಚೂರ್ ನೋಡಿ...

ವಂದನೆಗಳು..
ನಮಸ್ತೆ :)

ಜಲನಯನ said...

ಹಳೇಬೀಡು ತುಂಬಾ ಹಿಂದೆ ನೋಡಿದ್ದು...ಈಗಿನ ಪರಿಸ್ಥಿತಿಯ ಸಚಿತ್ರ ಅವಲೋಕನ ಆಯ್ತು ನಿಮ್ಮ ಬ್ಲಾಗಲ್ಲೇ ಬಾಲು...ನಿಮ್ಮ ಈ ಪರ್ಯಟನೆ ಮತ್ತು ಚಿತ್ತಾರ ವೀಕ್ಷಕ ವಿವರಣೆ ಸೂಪರು...

Pradeep Rao said...

ಆಹಾ! ಹುಲಿಕೆರೆಕೊಳ ನಿಜಕ್ಕೂ ಗಮನಸೆಳೆಯಿತು! 13 ಮಂಟಪಗಳು ಕೊಳದ ಸೌಂದರ್ಯ ಹೆಚ್ಚಿಸಿದೆ. ಪುಷ್ಪಗಿರಿಯ ದೇವಾಲಯದ ಮುಂದಿನ ಮಂಟಪ ಸಹ ತುಂಬಾ ಇಷ್ಟವಾಯಿತು.. ನೋಡುತ್ತಾ ಫೋಟೋ ಕ್ಲಿಕ್ಕಿಸುತ್ತಾ ನೀವು ಕೊನೆಗೂ ಇತಿಹಾಸದ ಕುರುಹೊಂದನ್ನು ಕಂಡುಹಿಡಿದುಬಿಟ್ಟಿರಿ! ಮಲ್ಲಿಕಾರ್ಜುನ ದೇವಾಲಯದಲ್ಲಿ ಜೈನ ಮೂರ್ತಿ ಆಶ್ಚರ್ಯ ಮೂಡಿಸಿತು... ಮುಂದಿನ ಬೆಳವಾಡಿಯಲ್ಲಿ ಇನ್ನೂ ಏನೇನು ಅಚ್ಚರಿ ವಿಸ್ಮಯಗಳು ಕಾದಿವೆಯೋ ಎಂದು ಆಶ್ಚರ್ಯ ಮೂಡುತ್ತಿದೆ... ಸುಂದರ ಬರಹ!

ಮನಸು said...

ಒಂದು ಸುಂದರ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದೀರಿ ಸರ್ ಅದ್ಭುತ ಚಿತ್ರಗಳು ಧನ್ಯವಾದಗಳು

Srikanth Manjunath said...

ಸಿಕ್ಕಿದ್ದನ್ನು ಸಿಕ್ಕಷ್ಟೇ ಎಂದು ಸುಮ್ಮನಾಗುವ ಮಂದಿಯಲ್ಲಿ ನೀವು ಪೂರ ವಿಭಿನ್ನ. ಪ್ರತಿಯೊಂದು ಊರಿನಲ್ಲೂ ಆ ಊರಿನವರಿಗೆ ಕೆಲವೊಮ್ಮೆ ಅರಿವಿಗೆ ಬಾರದಿರುವ ಪ್ರದೇಶಗಳನ್ನು ಮಾಹಿತಿಗಳನ್ನು ಹೆಕ್ಕಿ ತೆಗೆಯುವ ನಿಮ್ಮ ತಾಳ್ಮೆಗೆ ಒಮ್ಮೆ ತಾಳ ಹಾಕಲೇಬೇಕು. ಚಿಕ್ಕ ಚಿಕ್ಕ ಮಾಹಿತಿಗಳನ್ನು ಪದಗಳ ಸಾಮ್ರಾಜ್ಯದಲ್ಲಿ ಜೋಪಾನವಾಗಿ ಜೋಡಿಸಿ ಇತಿಹಾಸವನ್ನು ಶೋಧಿಸಿ ನಿಖರ ಮಾಹಿತಿ ನೀಡುತ್ತಿದ್ದೀರ. ತುಂಬಾ ಸಂತಸದ ವಿಷಯ. ಹುಲಿಕೆರೆ ಕೊಳ ನಿಜಕ್ಕೂ ಸುಂದರವಾಗಿ ಕಾಣುತ್ತಿದೆ. ಮುಂದಿನ ನನ್ನ ಭೇಟಿಯಲ್ಲಿ ಈ ಪ್ರದೇಶವನ್ನು ಖಂಡಿತ ಗುರುತು ಮಾಡಿಕೊಳ್ಳುತ್ತೇನೆ. ಮಠದ ವೈಶಿಷ್ಟತೆ, ಸದ್ದಿಲ್ಲದೇ ತಮ್ಮ ಸಾಮಾಜಿಕ ಕಾರ್ಯ ಮಾಡುತ್ತಿರುವ ಗುರುಗಳು ಮನಸ್ಸಿಗೆ ಮುದಕೊಡುವ ಸಂಗತಿಗಳು. ಪುಷ್ಪಗಿರಿಯ ದೇವಾಲಯದ ಇತಿಹಾಸ, ಅದರ ಚಿತ್ರಗಳು ಎಲ್ಲವು ಸುಂದರ. ಧನ್ಯವಾದಗಳು ಬಾಲೂ ಇನ್ನೊಂದು ನೋಡದ ಲೋಕಕ್ಕೆ ನಮ್ಮನ್ನು ಕೊಂಡೊಯ್ದದ್ದಕ್ಕೆ.

Dr. B.R. Satyanarayana said...

ಪುಷ್ಪಗಿರಿಯಲ್ಲೇ ಹೊಯ್ಸಳ ಅರಸರ ಅರಮನೆ ಮೊದಲಾದುವುಗಳಿದ್ದವು. ಅಲ್ಲಿ ಉತ್ಖನನ ನಡೆದಾಗ ಕೆಲವು ಆಭರಣಗಳು ಆಯುಧಗಳು ಸಿಕ್ಕಿದ್ದುವು. ಇನ್ನು ಪುಷ್ಒಗಿರಿಯ ಮಲ್ಲಿಕಾರ್ಜುನ ದೇವಾಯಲ ಮೊದಲು ಜೈನ ದೇವಾಲಯವಾಗಿತ್ತು ಎಂಬುದು ನಿಜ. ನೀವು ಆ ದೇವಾಲಯದ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಬಿತ್ತಿಗಳಲ್ಲಿ, ಕೂಡುಗಳಲ್ಲಿ, ಲಲಾಟಗಳಲ್ಲಿ ತೂರ್ಥಂಕರರ ಶಿಲ್ಗಳಿರುವುದನ್ನು ನೋಡಬಹುದಾಗಿತ್ತು. ಸಾಮಾನ್ಯವಾಗಿ ಯಾವುದೇ ದೇವಾಯಲದ/ಬಸದಿಯ ಗರ್ಭಗುಡಿಯ ಲಲಾಟದಲ್ಲಿ, ಗರ್ಭಗುಡಿಯಲ್ಲಿ ಯಾವ ದೇವತಾ ಮೂರ್ತಿಯಿರುತ್ತದೊ ಅದೇ ಮೂರ್ತಿ ಇರುತ್ತದೆ. ಪುಷ್ಪಗಿರಿಯ ದೇವಾಲಯ ಲಲಾಟದಲ್ಲಿ ಇದ್ದ ತೀರ್ಥಂಕರ ಮೂರ್ತಿಯ ಕೈಗಳಲ್ಲಿ ಕೆತ್ತಿ ತೆಗೆದು ಲಿಂಗತೂಪಕ್ಕೆ ತರಲಾಗಿದೆ. ಪದ್ಮಾಸನ ಹಾಕಿ ಕುಳಿತಿರುವ ತೀರ್ಥಂಕರನ ಮುಖದ ಮಂದಹಾಸ ಹಾಗೇ ಉಳಿದಿದೆ. ದೇವಾಲಯದ ಹೊರಗೆ ಕೂಡುಗಳಲ್ಲಿ ಇರುವ ತೀರ್ಥಂಕರ ಮೂರ್ತಿಗಳು ಹಾಗೇ ಇವೆ.

Badarinath Palavalli said...

ಮನೆಯಲ್ಲಿನ net slow ಅದಕ್ಕಾಗಿ ಓದುವುದು ತುಸು ತಡವಾಯಿತು. ಕ್ಷಮಿಸಿಕೊಳ್ಳಿ.

ಪುಷ್ಪಗಿರಿ ಯಲ್ಲಿನ ಶ್ರೀ ಭೈರವ / ಮಲ್ಲಿಕಾರ್ಜುನ ದೇವಾಲಯವೂ ಸೇರಿದಂತೆ ಭಾರತದ ಉದ್ದಗಲದ ಬಹುಪಾಲು ದೇಗುಲಗಳ ಇತಿಹಾಸವನ್ನು ಸಂಶೋಧಿಸಿ ಸಂರಕ್ಷಿಸುವ ಬಹು ದೊಡ್ಡ ಜವಾಬ್ದಾರಿಯಿದೆ.

ಹುಳಿ ಕೆರೆಯ ವಿನ್ಯಾಸ ಅಮೋಘವಾಗಿದೆ.