![](https://blogger.googleusercontent.com/img/b/R29vZ2xl/AVvXsEhyUGQ9ApHRRvIPZrN9eESOZc_36y7Ej4-HyJek2AyIMDgv-0pPbonnwbIA972QXW7dN7y46DyoMnnhPrpsDZSLkzjgvKMwwDQszF4u5sv4yC5bjULPFLkc8cHb2O3mTPDj0qQ5PsfGkzth/s640/IMG_0036-003.JPG) |
ತೆರೆದಿದೆ ಮನೆ ಓ ಬಾ ಅತಿಥಿ |
ಕಳೆದ ಮೂರು ಸಂಚಿಕೆಗಳಲ್ಲಿ ಮಂಜರಬಾದ್ ಕೋಟೆ , ಬೇಲೂರು , ಹಳೇಬೀಡು , ದರ್ಶನ ಮಾಡಿ ನನ್ನ ಮೊದಲನೇ ದಿನ ಪೂರ್ಣಗೊಂಡಿತು , ಹಳೆಬೀಡಿನ ಸುತ್ತು ಹಾಕಿ ಬರುವಷ್ಟರಲ್ಲಿ ಕತ್ತಲಾಗಿತ್ತು, ಅಷ್ಟರಲ್ಲಿ ಗಿರೀಶ್ ಬನ್ನಿ ನಮ್ಮ ಮನೆಗೆ ಹೋಗೋಣ, ಅಮ್ಮಾ ಕಾಯ್ತಿರ್ತಾರೆ ಅಂದ್ರು ....... ನಮ್ಮ ಕಾರು ಗಿರೀಶ್ ಮನೆಕಡೆಗೆ ತಿರುಗಿತು. ...............!! ಹಳೆಬೀಡಿನ ಸಮೀಪದಲ್ಲಿ ಎರಡು ಕಿ.ಮಿ . ದೂರದಲ್ಲಿರುವ ಸಿದ್ದಾಪುರ ಎಂಬ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿದೆ ನಮ್ಮ ಗಿರೀಶ್ ಮನೆ , ಅವರ ಮಗನ ಜೊತೆ ಮನೆಗೆ ಆಗಮಿಸಿದ ನನ್ನನ್ನು ನಗು ಮುಖದಿಂದ ಸ್ವಾಗತಿಸಿದರು, ಗಿರೀಶ್ ತಾಯಿ.ಅಂದು ರಾತ್ರಿ ಗಿರೀಶ್ ಮನೆಯಲ್ಲಿ ವಾಸ್ತವ್ಯ .ಆತ್ಮೀಯವಾದ ವಾತಾವರಣದಲ್ಲಿ ರಸಕವಳ ತಯಾರಿಸಿ ಸತ್ಕರಿಸಿದರು ಗಿರೀಶ್ ತಾಯಿ.ಶ್ರೀಮತಿ : ಮೀನಾಕ್ಷಿ ಯವರು. ಬಹಳಷ್ಟು ವಿಚಾರಗಳ ಮಾತು ಕಥೆ ನಡೆಯಿತು, ಗಿರೀಶ್ ತೋರಿದ ಕೋಣೆಯಲ್ಲಿ ಧಣಿದ ದೇಹ ನಿದ್ರಾದೇವಿಯ ಲೋಕಕ್ಕೆ ತೆರಳಿತು
![](https://blogger.googleusercontent.com/img/b/R29vZ2xl/AVvXsEis7X2snn_AuZQTC_AXhXlSRUC8NpSzXY1hqDfJP15Rd92PfDrEJbKkkGeCHzKsTCyOrbAnB93x7ilbcUi9teS-A2VFGyNpGRv6X6Aw1Hpwz65EA48t2e8Wl_tsS5XPqxgbeyZFjrB8FyOw/s640/IMG_0335-001.JPG) |
ಸೌದೆ ಒಲೆಯ ಬಿಸಿನೀರು ದೇಹಕ್ಕೆ ಮುದನೀಡಿತ್ತು |
ಮುಂಜಾನೆ ಹಕ್ಕಿಗಳ ಹಾಡಿಗೆ ಎಚ್ಚರವಾಯಿತು, ನಿಗದಿತ ಕಾರ್ಯಕ್ರಮದಂತೆ ಮುಂಜಾನೆಯೇ ಎದ್ದು ಪುಷ್ಪಗಿರಿ , ಹಾಗು ಹುಲಿಕೆರೆ ಕೊಳಕ್ಕೆ ತೆರಳಬೇಕಾಗಿದ್ದ ಕಾರಣ , ಗಿರೀಶ್ ಮುಂಜಾನೆಯೇ ಎದ್ದು ಸೌದೆಯ ಒಲೆಯಲ್ಲಿ ಬಿಸಿನೀರು ಕಾಸಿದರು, ಚುಮು, ಚುಮು ಚಳಿಯಲ್ಲಿ ಸೌದೆ ಒಲೆಯ ಬಿಸಿನೀರ ಸ್ನಾನ ದೇಹಕ್ಕೆ ನವ ಚೈತನ್ಯ ನೀಡಿತ್ತು, "ಪುಷ್ಪಗಿರಿ ಹಾಗು ಹುಲಿಕೆರೆ ಕಲ್ಯಾಣಿ " ಭೇಟಿಗೆ ಹೊರಟೆವು . [ ಈ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ ] ವಾಪಸ್ಸು ಬಂದ ನಮಗೆ ಅಡಿಗೆ ಮನೆಯಿಂದ ಚರ್ ಚುರ್ ಅಂತಾ ಶಬ್ದ ಕೇಳಿತ್ತು, ಬೇಗ ಬನ್ನಿ ತಿಂಡಿ ತಿನ್ನೋಕೆ ಅಂತಾ ಗಿರೀಶ್ ತಾಯಿಯವರ ಕರೆ.
![](https://blogger.googleusercontent.com/img/b/R29vZ2xl/AVvXsEhtr-0bC-o5-MMa8a3llfIToW6bwcyWxiM-1FS3nkpyLHItAF0Ir9z6lkE4-I_k9Algfs-Ht4Yw9pqTd2lSabP9CHttd271WSMeAowLBiBaJhVtdtXSP0NwkoAeyMLnVNvzcVIhG2uWrbUa/s640/IMG_0345-001.JPG) |
ಬಿಸಿ ಬಿಸಿ ದೋಸೆಗೆ ಪ್ರೀತಿಯ ಸ್ಪರ್ಶ |
ಬಿಸಿ ಬಿಸಿ ದೊಸೆ ಗಳಿಗೆ ಪ್ರೀತಿಯ ಸ್ಪರ್ಶ ನೀಡಿ ನಮ್ಮ ಪ್ಲೇಟ್ ಗಳಿಗೆ ಹೊಗೆಯಾಡುತ್ತಿದ್ದ ಬಿಸಿ ಬಿಸಿ ದೋಸೆಗಳನ್ನು ರವಾನೆ ಮಾಡುತ್ತಿದ್ದರು ಗಿರೀಶ್ ತಾಯಿಯವರು, ನಮಗರಿವಿಲ್ಲದೆ ಐದಾರು ಬಿಸಿ ಬಿಸಿ ದೋಸೆಗಳನ್ನು ಚಟ್ನಿ ಹಾಗು ಪಲ್ಯದೊಡನೆ ಖತಂ ಗೊಳಿಸಿದೆವು . ನಂತರ ಕಾಫಿ ಕುಡಿದು, ಹೊರಗೆ ಬಂದ ನನಗೆ ಅಚ್ಚರಿ ನನ್ನ ಬಾಲ್ಯದ ಹಳ್ಳಿಯ ಮನೆಯ ವಾತಾವರಣ ನೆನಪಿಸುವ ಹಿತ್ತಲು ಕಾಣಿಸಿತು .
![](https://blogger.googleusercontent.com/img/b/R29vZ2xl/AVvXsEhZRORDv2IV3zcRd9Skio708LqoIH2u72SnlehA8wGztyllLQNdMdBgx5TzFx_f5U1K1wEh0-qZK_Y5v84D8R6cGctlZPUv1fzSmx7kotZJeDpqpKo-pOKj4KXwpYoce8JL0RZXDu9Xpwv8/s640/IMG_0330-001.JPG) |
ಚಪ್ಪರದ ಅವರೆಕಾಯಿ |
ಮೊದಲು ನನ್ನ ಗಮನ ಸೆಳೆದದ್ದು ಚಪ್ಪರದ ಅವರೆಕಾಯಿ ಅಂಬು ಸನಿಹದ ಮರವನ್ನು ತಬ್ಬಿ ಹಸಿರು ಚಪ್ಪರವಾಗಿತ್ತು, ಚಪ್ಪರದ ಅವರೆಕಾಯಿ ಗಿದದಲ್ಲಿನ ಹೂ ಹಾಗು ಕಾಯಿ ನೋಡಿ ನನ್ನ ಬಾಲ್ಯಕ್ಕೆ ಜಾರಿ ಹೋದೆ, ಚಿಕ್ಕ ವಯಸ್ಸ್ನಲ್ಲಿ ನಾನು ಬೆಳೆದದ್ದು ಹಳ್ಳಿಯಲ್ಲಿ, ನಮ್ಮ ಮನೆಯ ಹಿಂದೆ ದೊಡ್ಡ ಹಿತ್ತಲು ಇತ್ತು, ಅದರಲ್ಲಿ ನಮ್ಮದೇ ಕೈತೋಟ ಮಾಡಿ ಕೊಂಡಿದ್ದೆವು , ಚಪ್ಪರದ ಅವರೆಕಾಯಿ ಅಂಬು ಮರವನ್ನು ತಬ್ಬಿ ಬೆಳೆದು ಹಸಿರ ಚಪ್ಪರ ಆಗುತ್ತಿತ್ತು, ಅವರೆಕಾಯಿ ಕೀಳಲು ಮರ ಹತ್ತಿ ಅವರೆಕಾಯಿ ಕೀಳುವಾಗ ಅದರಲ್ಲಿನ ಸೋನೆ ವಾಸನೆ ಘಂ ಅಂತಾ ಮಜಾ ಕೊಡುತ್ತಿತ್ತು, ಕೆಲವೊಮ್ಮೆ ದಪ್ಪ ದಪ್ಪ ಹಸಿರು ಹುಳುಗಳನ್ನು, ಕಂಡು, ದೊಪ್ ಅಂತಾ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡದ್ದೂ ಉಂಟು . ಈ ಅಂಬಿನ ಹೂಗಳನ್ನು ಕಂಡರೆ ಚಿಟ್ಟೆಗಳಿಗೆ ಬಹಳ ಪ್ರೀತಿ . ಇಲ್ಲಿನ ಈ ಚಪ್ಪರದ ಅವರೆಕಾಯಿ ಅಂಬು ನನ್ನನ್ನು ಬಾಲ್ಯದ ದಿನಕ್ಕೆ ಕರೆದುಕೊಂಡು ಹೊಗಿತ್ತು.
![](https://blogger.googleusercontent.com/img/b/R29vZ2xl/AVvXsEgDQurRw-oGZ6qW9-29TYFmQlAVQirv2HgIsUpto7W2UTvLNtYD6AE-RMI8zNM7ndqUQtHhwUCCJ1wfWXDwFXa7KkOCks_y3kQgC8pA7-KNgOHdF1MwBE9cwXw45TtJGzZJfgebI_Qi3VOb/s640/IMG_0338-001.JPG) |
ವ್ಯವಸಾಯ ಗಾರರ ಮನೆಯ ಆಭರಣ |
ಮನೆಯ ಹಿತ್ತಲಿನಲ್ಲಿ ನನ್ನ ಅಲೆದಾಟ ನಡೆದಿತ್ತು,ಬದನೆ ಗಿಡ, ಬೆಂಡೆ ಕಾಯಿ ಗಿಡ, ಮಲ್ಲಿಗೆ ಅಂಬು ಮುಂತಾದ ತರಕಾರಿ, ಹಾಗು ಹೂವಿನ ಗಿಡಗಳ ನಡುವೆ ಮಗುವಂತೆ ಅಲೆದಾಡಿದೆ , ಅಷ್ಟರಲ್ಲಿ ಗಿರೀಶ್ ಹಾಗು ಅವರ ತಾಯಿ ಬಂದು, ಮನೆಯ ಸುತ್ತಾ ಬೆಳದಿದ್ದ ಗಿಡಗಳ ಬಗ್ಗೆ ಅಕ್ಕರೆಯಿಂದ ಮಾಹಿತಿ ಕೊಟ್ಟರು, ಸನಿಹದಲ್ಲೇ ಎರಡು ಎತ್ತುಗಳು ಹಾಗು ಟೈರ್ ಗಾಡಿ ಕಾಣಿಸಿತು, ನಾನು ಮೂರು, ನಾಲ್ಕನೇ ತರಗತಿಯಲ್ಲಿರುವಾಗ , ನಮ್ಮ ಮನೆಯ ತಿಪ್ಪೆಯಿಂದ ಗದ್ದೆಗೆ ಗೊಬ್ಬರ ಸಾಗಿಸಲು ಇಂತಹ ಎತ್ತಿನ ಗಾಡಿ ಹೊಡೆಯುತ್ತಿದ್ದ ಬಗ್ಗೆ , ಗಾಡಿ ಹೊಡೆಯುವಾಗ ರಾಜನಂತೆ ಜಂಭ ದಿಂದ ಪೋಸ್ ಕೊಡುತಿದ್ದ ದಿನಗಳ ನೆನಪಾಯಿತು, ಹೌದು ಪ್ರತೀ ವ್ಯವಸಾಯ ಮಾಡುವ ಮನೆಗಳ ಆಭರಣಗಳು ಎತ್ತು, ಗಾಡಿ, ನೇಗಿಲು, ಮುಂತಾದವು . ಆದರೆ ಇಂದಿನವರಿಗೆ ಇದರ ಬಗ್ಗೆ ಇದರ ಮಹತ್ವ ತಿಳಿಯದ ಬಗ್ಗೆ ನೋವಾಯಿತು .
![](https://blogger.googleusercontent.com/img/b/R29vZ2xl/AVvXsEgYArZc6_SLHWlmNtMiP2pRQhpM7FWJQ93crPqTUspQDEwkTMhO3lpdrzOmYRlQNGfJTJFKoNe8w9S_1mPcOn1q_YaAnjIMRe8pOnPPhMUatGGfPNYN5V_3c-NCGvq9nzzoEqjwqV9Qxh5B/s640/IMG_0342-001.JPG) |
ನಮ್ ಮನೆ ಅಡಿಗೆ ಮನೆ ಹೀಗಿದೆ ನೋಡಿ |
ಗಿರೀಶ್ ತಾಯಿಯವರ ಜೊತೆ ಮಾತನಾಡುತ್ತ ಇರಲು ಬಹಳಷ್ಟು ವಿಚಾರಗಳು ವ್ಯವಸಾಯದ ಬಗ್ಗೆ ಬಂತು, ಅದರಲ್ಲೂ ಅವರಿಗಿರುವ ಸಾವಯವ ಕೃಷಿಯ ಕಲ್ಪನೆ ಅದ್ಭುತ , ಇವರು ಮನೆಯಲ್ಲಿ ಗೋಬರ್ ಗ್ಯಾಸ್ ಬಳಸಿ ಇಂದನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ , ಆದರೆ ಗೋಬರ್ ಗ್ಯಾಸ್ ತಯಾರಿಸಲು ಅಗತ್ಯವಾದ ಸಲಕರಣೆಗಳನ್ನು ಸ್ಥಳೀಯ ಸಾಮಗ್ರಿ ಬಳಸಿ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಿದ್ದಾರೆ , ಇವರ ಸಾಧನೆ ಕಂಡು ಇವರನ್ನು ಹಲವು ಕೃಷಿ ಮೇಳಕ್ಕೆ ಇವರನ್ನು ಆಹ್ವಾನಿಸಿ ಇವರಿಂದ ಮಾಹಿತಿಯನ್ನು ಪಡೆದಿರುವುದು ತಿಳಿದು ಬಂತು , ಇವರ ಕೃಷಿ ತಾಂತ್ರಿಕತೆಯ ಜ್ಞಾನ ನೋಡಿ ಬೆರಗಾದೆ . ನನಗೂ ಬಹಳಷ್ಟು ಮಾಹಿತಿ ತಿಳಿದು ಬಂತು .
![](https://blogger.googleusercontent.com/img/b/R29vZ2xl/AVvXsEi0yEn-xDWzPzD8KlFpsyJDc1nTpTMyKUPCtDs5bEKr1F6yDnF-wygm1DuLuXNBJCirftQFfgYFF2fOpw5w-l1M0OxWYrFlLEjFxOU5Lx1colCs9ox5n-5qqBhfrJdvxo8M1ioKGuNUFUPq/s640/IMG_0349-001.JPG) |
ಪುಟ್ಟ ಗಿರೀಶ |
ಅಷ್ಟರಲ್ಲಿ ಗಿರೀಶ್ ತಂದೆಯವರು ಶ್ರೀ ಸೋಮಶೇಖರ್ ಅವರು ನಮ್ಮನ್ನು ಸೇರಿ ಕೊಂಡರು ಮತ್ತಷ್ಟು ಮಾತು ಕಥೆ ನಮ್ಮೆಲ್ಲರ ಪರಿಚಯ ಅಯಿತು. ಮನೆಯಲ್ಲಿ ಹಾಗೆ ಕಣ್ಣು ಹಾಯಿಸಿದೆ ಅಲ್ಲೊಂದು ಮಗುವಿನ ಚಿತ್ರ ಕಂಡು ಹತ್ತಿರ ಹೋದೆ, ಅಷ್ಟರಲ್ಲಿ ಗಿರೀಶ್ ಅಪ್ಪ "ಸಾರ್ ಅದು ನಮ್ಮ ಗಿರೀಶ್ ದು" ಅಂದ್ರು, ಮುದಾಗಿದ್ದ ಆ ಮಗುವಿನ ಫೋಟೋ ನಮ್ಮ ಗಿರೀಶ್ ಸೋಮಶೇಖರ್ ರ ಬಾಲ್ಯದ ಚಿತ್ರ ನೀಡಿತ್ತು . ಹಾಗೆ ಮುಂದಿನ ಕಾರ್ಯಕ್ರಮದ ಬಗ್ಗೆ ನಮ್ಮ ಲಗ್ಗೇಜ್ ಪ್ಯಾಕ್ ಮಾದತೊದಗಿದೆ. ಅಷ್ಟರಲ್ಲಿ "ಬಾಲೂ ಸಾರ್ ಬನ್ನಿ ನಮ್ಮ ತೋಟಕ್ಕೆ ಹೋಗೋಣ" ಅಂತಾ ಆತ್ಮೀಯ ಕರೆ ಗಿರೀಶ್ ಸೋಮಶೇಖರ್ ಕಡೆಯಿಂದ ,
![](https://blogger.googleusercontent.com/img/b/R29vZ2xl/AVvXsEgR5bjEmk_ysY0JXycVvg51MXqpHJv36cIvuhR0q276cfu310AgshSTWxzcvcaB1hZQfCQ4xDhrhB-4AANbBxGLMQZmITz_9se6Hk0asHWyHcF4wKojT62IqZ2qQkXZaAFeW8CTMTabEjqr/s640/IMG_0390-001.JPG) |
ತೆಂಗಿನ ತೋಟದ ನೋಟ |
ಸೀನ್ ಕಟ್ ಮಾಡಿದ್ರೆ ಗಿರೀಶ್ ತೋಟದೊಳಗೆ ಹೆಜ್ಜೆ ಹಾಕುತ್ತಿದ್ದೆ, ಗಿರೀಶ್, ಹಾಗು ಅವ್ರ ತಂದೆ ತಾಯಿ ತಮ್ಮ ತೋಟದ ಪರಿಚಯ ಮಾಡಿ ಕೊಡುತ್ತಿದ್ದರು , ಮಣ್ಣಿನ ಫಲವತ್ತತೆ, ಬೆಳೆಗಳ ಬದಲಾವಣೆ, ಮಾರುಕಟ್ಟೆ , ಮುಂತಾದ ವಿಚಾರಗಳ ಬಗ್ಗೆ ಒಳ್ಳೆಯ ಮಾಹಿತಿ ಸಿಕ್ಕಿತು, ತೋಟದ ಸುತ್ತಾಟ ಮನಕೆ ಮುದ ನೀಡಿತ್ತು,
![](https://blogger.googleusercontent.com/img/b/R29vZ2xl/AVvXsEgaxwDnVWfdFp7nbLW9UUnhBtp5EdhECYQsBgvPjt9c6siXz_vATl_Vz9G5nRUje8rBYYKo7VXLYwbef7O7c82SoG9sft0dk887UZKoXiz3CaiZphyxorWiiMR9-MfDORpMZVZ95s0xV8Nk/s640/IMG_0360-001.JPG) |
ಮನೆಗೆ ಬಂದ ಅತಿಥಿ ಗಿಡ ನೆಡಲು ಪ್ರೇರಣೆ |
![](https://blogger.googleusercontent.com/img/b/R29vZ2xl/AVvXsEj3Io2WUDSwVPEmfyZYN20gi-aGFdoNar2M7F2QeeU2k5dmvNX5koPgyOGgjdDktK0HtWeH-DLxoXFS0P1470EhY_xtenpgiVxroQ3Mqd9yIVIDWaKKdpcMQli0OS10OfOLAKzbi1H4HkNz/s640/IMG_0364-001.JPG) |
ಪ್ರೀತಿಯ ಸಪೋಟ ಗಿಡವೇ ಚೆನ್ನಾಗಿ ಬಾಳು |
ಅಷ್ಟರಲ್ಲಿ "ಬನ್ನಿ ಸರ್ ನಮ್ಮ ತೋಟದಲ್ಲಿ ಒಂದು ಗಿಡ ನೆಡೋರಂತೆ ", ಅಂತಾ ಗಿರೀಶ್ ಮನೆಯವರ ಪ್ರೀತಿಯ ಆಗ್ರಹ , ಮನಕೆ ಒಂದು ತರಹ ಸಂತಸ , ಇವರಿಗ್ಯಾಕೆ ನನ್ನ ಬಗ್ಗೆ ಇಷ್ಟು ಪ್ರೀತಿ ಎಂದು ಒಂದು ಕ್ಷಣ ಅಚ್ಚರಿಗೊಂಡೆ , ಅಷ್ಟರಲ್ಲಿ ಸಪೋಟ ಗಿಡ ಬಂತು, ಗಿರೀಶ್ ತಂದೆಯವರ ಸಹಾಯದಿಂದ ನನ್ನ ಭೇಟಿಯ ನೆನಪಿಗಾಗಿ ಸಪೋಟ ಗಿಡ ನೆಟ್ಟೆ , ಹಾಗು ಪ್ರೀತಿಯಿಂದ ಗಿಡವನ್ನು ಪ್ರಾರ್ಥಿಸುತ್ತಾ ಕೊಡದಲ್ಲಿ ತಂದಿದ್ದ ನೀರನ್ನು ಹನಿಸಿದೆ . ಮನದಲ್ಲಿ ಒಹ್ ದೇವರೇ ದಯವಿಟ್ಟು ಈ ಗಿಡ ಚೆನ್ನಾಗಿ ಬೆಳೆದು ಫಲ ಕೊಡುವಂತೆ ಮಾಡಪ್ಪಾ ಅಂತಾ ಮನದಲ್ಲಿ ಪ್ರಾರ್ಥಿಸಿದೆ . ಬಹಳ ಖುಷಿಯಿಂದ ಮನ ನಲಿದಾಡಿತು .[ ಇತ್ತೀಚಿಗೆ ಗಿರೀಶ್ ಭೇಟಿಯಾದಾಗ ಸಾರ್ ನೀವು ನೆಟ್ಟ ಸಪೋಟ ಗಿಡ ಕಾಯಿ ಬಿಟ್ಟಿದೆ ಎಂಬ ಸಿಹಿ ಸುದ್ದಿ ನೀಡಿದ್ದರು ]
![](https://blogger.googleusercontent.com/img/b/R29vZ2xl/AVvXsEjlWeFmACqZbiXgLyBPtloMIT9HuA8c2LtHAfyYi2QcbNzGy82PsueM4kIg86r6NNu3HH3EGm87TLOSdDaZ7V5-hq6iS5BUTOto5rAYph6_0ieu7-yBspd4LYER8RUvVoRlLOveOxrnY9YI/s640/IMG_0381-001.JPG) |
ಶೀರ್ಷಿಕೆ ಸೇರಿಸಿ |
ಗಿರೀಶ್ ಊರಿನ ಅನುಭವ ಬಹಳ ಕಾಲ ಅಚ್ಚಳಿಯದೆ ಮನದಲ್ಲಿ ಉಳಿಯುವ ಎಲ್ಲ ಘಟನೆಗಳು ನಡೆದಿದ್ದವು , ಗಿರೀಶ್ ತಂದೆ ತಾಯಿಯವರ ಜೊತೆ ಒಂದು ಫೋಟೋ ತೆಗೆಸಿಕೊಂಡ ನಾನು ಧನ್ಯನಾದೆ, ಅವರ ಪ್ರೀತಿಯ ಶರಧಿಯಲ್ಲಿ ಮಿಂದು ಪಾವನನಾದೆ , ಇವರ ಪ್ರೀತಿಗೆ ಎಷ್ಟು ಬೆಲೆ ...?? ಊ ಹು ಬೆಲೆಕಟ್ಟಲಾರೆ . ಬ್ಲಾಗ್ ಮೂಲಕ ಇಂತಹ ಹಲವು ಗೆಳೆಯರನ್ನು ಪಡೆದ ನಾನು ಧನ್ಯ ಧನ್ಯ ಅಂತ ಮನ ಉಲ್ಲಾಸದಿಂದ ಕುಣಿದಾಡಿತ್ತು , ದೂರದಲ್ಲಿ ಅಡಿಕೆ ತೆಂಗಿನ ಮರಗಳು ಜೋಲಾಡುತ್ತಾ ನಿಂತಿದ್ದವು . ಗಿರೀಶ್ ಮನೆಯವರ ಅನುಮತಿ ಪಡೆದು ಮುಂದೆ ಸಾಗಿದೆವು .... !! ಅಪರೂಪದ ಕ್ಷಣಗಳನ್ನು ಸೆರೆ ಹಿಡಿದ ನನ್ನ ಕ್ಯಾಮರ ನನ್ನತ್ತ ಕಣ್ ಹೊಡೆದು ನಕ್ಕಿತ್ತು.
8 comments:
ಪ್ರೀತಿಯ ಇಟ್ಟಿಗೆಯಿಂದ ಕಟ್ಟಿದ ಸೌಧ ಎಂದೂ ಬೆಳದಿಂಗಳನ್ನು ಚೆಲ್ಲುವ ಮಹಲು. ಈ ಮಹಲನ್ನು ಹೊಕ್ಕು ಒಂದು ಬಾರಿ
ಅದರ ಸವಿದ ಭಾಗ್ಯ ನನ್ನದು ಕೂಡ. ಇವರ ಪರಿವಾರ ಒಂದು ಸುಮಧುರ ಜೇನುಗೂಡಿನಂತೆ. ನಿಮ್ಮ ಪ್ರತಿ ಪದಗಳಲ್ಲೂ ನಿಮ್ಮ ಪ್ರೀತಿ ಸಹೃದಯತೆ ಕಾಣ ಸಿಗುತ್ತದೆ. ನಿಜಕ್ಕೂ ಒಂದು ಅದ್ಭುತ ಸಂಸ್ಕಾರ ಪಡೆದ ಸಂಸಾರ ನಮ್ಮ ಗಿರೀಶ್ ಅವರ ಕುಟುಂಬ. ನಿಮ್ಮ ಬರಹ ಆ ಸಂಸಾರಕ್ಕೆ ಒಂದು ಸುವರ್ಣ ಚೌಕಟ್ಟನ್ನು ನೀಡಿದೆ. ಸೂಪರ್ ಬಾಲೂ ಸರ್. ನಿಮ್ಮ ಕಣ್ಣಲ್ಲಿ ಕಾಣುವ ಪ್ರತಿಯೊಂದು ದೃಶ್ಯವು ಒಂದು ಅದ್ಭುತ ಚಿತ್ರಕತೆಯಾಗುತ್ತದೆ ಇದಕ್ಕೆ ಸಂಶಯವೇ ಇಲ್ಲ..ಬಾಲೂ ಸರ್ ಅಟ್ ದಿ ಬುಲ್ಸ್ ಐ ಅಗೈನ್ ...
aahaa... nimma jote namagu dose sikka haagaayitu....
nirupaNe super...
ದೋಸೆ ನೋಡಿದಾಗ ನನಗೆ ಬಾಯಿಯಲ್ಲಿ ನೀರು ಬಂತು ...ಒಮ್ಮೆ ನನ್ನ ಬಾಲ್ಯಕ್ಕೆ ಹೋದ ಹಾಗಾಯ್ತು ..ಸುಂದರ ಬರಹ ಸುಂದರ ಛಾಯಾಚಿತ್ರ ಬಾಲಣ್ಣ :)
Girish Somashekar ಅವರ ಮನೆ ಮತ್ತು. ವಾತಾವರಣ ಬಹಳ ಆತ್ಮೀಯ. ಗಿಡ ನೆಡೆಸುವ ಅವರ ಹಸಿರು ಪ್ರೀತಿಗೆ ನಾನು ಶರಣಾದೆ.
ಸರ್.. ಆ ಮನೆಯೇ ಒಂದು ಆತ್ಮೀಯ ವಾತಾವರಣ. ಅಮ್ಮನ ಕೈರುಚಿ ಸವಿದಿದ್ದೇನೆ. ಒಮ್ಮೆ ನೋಡಿದ ಕೂಡಲೇ ಆಪ್ತವಾಗುವ ಕುಟುಂಬ
ಚಂದದ ಭಾವ ಬಾಲಣ್ಣ ..
ಗಿರೀಶ್ ಮನೆಗೆ ನಾನೂ ಹೋಗಿದ್ದೆ ..ಪ್ರೀತಿ ,ಆತ್ಮೀಯತೆಯಿಂದ ಕಟ್ಟಿಹಾಕಿಬಿಡೋ ಆಂಟಿ ,ಗಿರೀಶ್ ,ಅವರ ಮನೆಯ ಮುದ್ದು ಕರು ಎಲ್ಲವೂ ನಂಗೂ ಇಷ್ಟ ಆಯ್ತು.
ಅಂದ ಹಾಗೆ ಆವತ್ತು ಹೇಳಿದ್ರು ಅವರು ಬಾಲಣ್ಣ ಒಂದು ಗಿಡ ಗಿಡ ನೆಟ್ಟಿದ್ದಾರೆಂದು ...ಅವತ್ತು ನೋಡೋಕೆ ಆಗಿರಲಿಲ್ಲ ಇವತ್ತು ನೀವೇ ತೋರಿಸಿಬಿಟ್ರಿ :)
ಇಂತಹದ್ದೊಂದು ಆತ್ಮೀಯ ,ಪ್ರೀತಿಗೆ ಏನೆನ್ನಬೇಕು ತಿಳಿಯಲ್ಲ...ಸುಮ್ಮನೆ ಈ ಭಾವವ ಅನುಭವಿಸಬೇಕಷ್ಟೇ
ಖುಷಿ ಆಯ್ತು ಆ ಭಾವವ ಅನುಭವಿಸಿ ನೀವಿಲ್ಲಿ ಹೀಗೆ ಹೇಳಿದ್ದು.
ಇಷ್ಟ ಆಯ್ತು
nanagu kooda nimmanege baruva aashe sir.
sundara.. :) )
Post a Comment