Sunday, November 24, 2013

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....3 ದ್ವಾರ ಸಮುದ್ರ ಕ್ಕೆ ಸಮುದ್ರದಷ್ಟು ಇತಿಹಾಸ

ದ್ವಾರ ಸಮುದ್ರದ ಪಕ್ಷಿನೋಟ {ಗೂಗಲ್ ಮ್ಯಾಪ್ ಕೃಪೆ }

ನಮಸ್ಕಾರ  , ಕಳೆದ ಸಂಚಿಕೆಯಲ್ಲಿ ವೆಲಾಪುರದ [ ಬೇಲೂರಿನ ] ವೈಜ್ಞಾನಿಕ  ವೈಭವವನ್ನು ಸ್ವಲ್ಪ ಇತಿಹಾಸದೊಡನೆ ಕಂಡೆವು, ಬನ್ನಿ ಇಂದು ಹೊಯ್ಸಳರ  ಮೊದಲ ರಾಜಧಾನಿ  ಹಳೇಬೀಡು ಅಲಿಯಾಸ್ ದ್ವಾರಸಮುದ್ರ ಅಥವಾ ದೊರಸಮುದ್ರ. ದಲ್ಲಿ ಅಲೆದಾಡೋಣ . ಹೊಯ್ಸಳ ಅರಸರ  ಮೊದಲ ರಾಜಧಾನಿ  ಈ ದ್ವಾರ ಸಮುದ್ರ . ದ್ವಾರ ಸಮುದ್ರ  ಎಂಬ ಹೆಸರು ಬರಲು   ಪಟ್ಟಣದ  ಪಕ್ಕದಲ್ಲೇ ಇರುವ  ವಿಶಾಲವಾದ ಕೆರೆ ಕಾರಣವೆಂದು ಕೆಲವು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ, ಅದು ಸ್ವಲ್ಪ ವಾಸ್ತವಕ್ಕೆ ಹತ್ತಿರ ಅನ್ನಿಸುತ್ತದೆ, ಗೂಗಲ್ ಮ್ಯಾಪ್ ನೋಡಿದಾಗ  ವಿಶಾಲವಾದ ಕೆರೆ ದ್ವಾರ ಸಮುದ್ರ ನಗರಕ್ಕೆ ಪೂರ್ವ ಭಾಗದಲ್ಲಿ ಕಾಣುತ್ತದೆ . ಹಳೇಬೀಡು  ಹೆಸರು ಬರಲು  ಮತ್ತೊಂದು ಕಾರಣ ಇಲ್ಲಿದೆ ನೋಡಿ, ಹೊಯ್ಸಳ ಸಾಮ್ರಾಜ್ಯದಲ್ಲಿ ಮೊದಲ ರಾಜಧಾನಿ  ಹಳೇಬೀಡು/ ದ್ವಾರಸಮುದ್ರ , "ದ್ವಾರ ಸಮುದ್ರ"  ಪತನಗೊಂಡು  ಹಾಳು ಬೀಡಾಯಿತು ನಂತರ ವೇಲಾಪುರಿ/ ಬೇಲೂರು ,ರಾಜಧಾನಿ ಆಯಿತು.   ಅಲ್ಲಿನ ಪ್ರಜೆಗಳ ಬಾಯಲ್ಲಿ ಮೊದಲ ಬೀಡು  "ಹಳೇಬೀಡು /ದ್ವಾರ ಸಮುದ್ರ" ನಂತರದ್ದು  ಹೊಸ ಬೀಡು  ''ವೇಲಾಪುರಿ / ಬೇಲೂರು . ಹಾಳಾದ ಬೀಡು , ಹಳೆಯ ಬೀಡು  ನಂತರ ಹಳೇಬೀಡು ಎಂದು ಹೆಸರು ಹೊಂದಿತು .


ಹಳೇ ಬೀಡಿನ ದರ್ಶನ


ಹಳೆಬೀಡು  ನಾಶಕ್ಕೆ ಹೊಯ್ಸಳ ರಾಜ ವಿರೂಪಾಕ್ಷ ಬಲ್ಲಾಳನ ಸಹೋದರಿ ಹರಿಯಾಳ ದೇವಿಯ  ಶಾಪ ಕಾರಣವೆಂದು ಕೆಲವು ಸ್ಥಳೀಯರು ಹೇಳುತ್ತಾರೆ , ಹರಿಯಾಳ  ದೇವಿಯ ಮಕ್ಕಳಾದ  ಲಕ್ಷ್ಮೇಶ , ವೀರೇಶ  ರನ್ನು  ತಪ್ಪು ಮಾಹಿತಿಯಿಂದ ರಾಜ ವಿರೂಪಾಕ್ಷ  ಶೂಲಕ್ಕೆ ಹಾಕಿಸಿರುತ್ತಾನೆ, ಅದನ್ನು ಕೇಳಲು ಬಂದ  ಹರಿಯಾಳ ದೇವಿಯನ್ನು ಅವಮಾನಿಸಿ , ತನ್ನ ರಾಜ್ಯದ ಯಾವ ಪ್ರಜೆಯೂ ಅವಳಿಗೆ  ಅನ್ನ ನೀರು ಕೊಡದಂತೆ ಆಜ್ಞೆ  ಮಾಡುತ್ತಾನೆ , ಮಕ್ಕಳ ಅಂತ್ಯ ಸಂಸ್ಕಾರ ಮಾಡಿ ಬಳಲಿದ್ದ ಹಾಗು ರಾಜ ಬೀದಿಯಲ್ಲಿ  ಬರುತ್ತಿದ್ದ ರಾಣಿ ಗೆ ಯಾರೂ ಸಹಾಯ ಮಾಡುವುದಿಲ್ಲ,  ರಾಣಿಯು ಅಲೆಯುತ್ತ  ಅಲೆಯುತ್ತಾ "ಬಸ್ತಿ ಹಳ್ಳಿ  " ಕುಂಬಾರ ಕೇರಿ ಯಲ್ಲಿ ರಾಜಯ್ಯ  ಎಂಬುವರ ಮನೆಯ  ಸಮೀಪ ಅನಾಥಳಾಗಿ ಬಿದ್ದುಬಿಡುತ್ತಾಳೆ , ರಾಜಯ್ಯ  ನು ಇವಳನ್ನು ಗುರುತು ಹಿಡಿದು  ಆದರಿಸುತ್ತಾನೆ, ಆಗ ರಾಣಿ ತನಗೆ ರಾಜ ನೀಡಿದ ಶಿಕ್ಷೆಯನ್ನು ತಿಳಿಸಿ, ತನಗೆ ಅನ್ನ ,ನೀರು ಕೊಟ್ಟರೆ  ನಿನಗೆ ತೊಂದರೆ ಆಗುತ್ತೆ ಎನ್ನುತ್ತಾಳೆ, ಆದರು ಲೆಕ್ಕಿಸದ  ಕುಂಬಾರ ರಾಜಯ್ಯ  ಅವಳನ್ನು ಸತ್ಕರಿಸಿ  ಆಹಾರ ನೀಡುತ್ತಾನೆ , ರಾಣಿಯು ಕುಂಬಾರ ರಾಜಯ್ಯ ನ  ತೊಡೆಯ ಮೇಲೆ ತಲೆ ಇಟ್ಟು , ಇಹ ಲೋಕ ತ್ಯಜಿಸಿದಳೆಂದೂ , ಅದಕ್ಕೆ  ಮೊದಲು ರಾಣಿ ಕೋಪದಿಂದ   "ದ್ವಾರ ಸಮುದ್ರ ಹಾಳು ಬೀಡಾಗಲಿ , ಈ ಕುಂಬಾರ ಕೇರಿ ಊರ್ಜಿತ ವಾಗಿ ಇಲ್ಲಿನವರು ಚೆನ್ನಾಗಿ ಬಾಳಲಿ "  ಎಂದು ಶಾಪ  ಕೊಟ್ಟಳೆಂದು ಹೇಳುತ್ತಾರೆ .


ಹಳೇಬೀಡು  ಪಕ್ಷಿನೋಟ {ಗೂಗಲ್ ಮ್ಯಾಪ್ ಕೃಪೆ }
 
ಹಳೆಬೀಡು  ನಮಗೆಲ್ಲಾ  ತಿಳಿದಂತೆ ಹೊಯ್ಸಳರ ಪ್ರಥಮ ರಾಜಧಾನಿ,ಹೊಯ್ಸಳ ದೊರೆಗಳ  ರಾಜ್ಯಭಾರ  1026–1343 ಎಂದು ದಾಖಲಿಸಲಾಗಿದೆ.  ಈ ಸಮಯದಲ್ಲಿ   ೧] ಎರಡನೇ  ನ್ರಿಪಕರ್ಮ 1026–1047  ೨] ಹೊಯ್ಸಳ ವಿನಯಾದಿತ್ಯ 1047–1098, ೩] ಎರೆಯಂಗ 1098–1102, ೪]  ಒಂದನೇ ವೀರ ಬಲ್ಲಾಳ 1102–1108 ೫]  ವಿಷ್ಣುವರ್ಧನ [ ಬಿಟ್ಟಿದೇವ ] 1108–1152, ೬] ಒಂದನೇ  ನರಸಿಂಹ 1152–1173  ೭]  ಎರಡನೆ ವೀರ ಬಲ್ಲಾಳ 1173–1220 ೮] ಎರಡನೆ ವೀರ ನರಸಿಂಹ 1220–1235  ೯] ವೀರ ಸೋಮೇಶ್ವರ 1235–1254  ೧೦] ಮೂರನೇ ನರಸಿಂಹ 1254–1291 ೧೧] ಮೂರನೇ ಬಲ್ಲಾಳ 1292–1343 .  ಸುಮಾರು ಮುನ್ನೂರ ಹದಿನೇಳು  ವರ್ಷಗಳ ಕಾಲ  ವೈಭವಯುತವಾಗಿ ಹೊಯ್ಸಳ ಸಾಮ್ರಾಜ್ಯ ಮೆರೆದಿದೆ.  ಆ ನಂತರವಷ್ಟೇ  ವಿಜಯನಗರ  ಸಾಮ್ರಾಜ್ಯದ ಉದಯವಾಗುತ್ತದೆ. ಉತ್ತರದಲ್ಲಿ ಬಾದಾಮಿಯ ಚಾಲುಕ್ಯರು ದಕ್ಷಿಣದಲ್ಲಿ ತಲಕಾಡಿನ  ಚೋಳರು  ಇವರಿಬ್ಬರ ಮಧ್ಯದಲ್ಲಿ  ಶೂರತನದಿಂದ ಹೊಯ್ಸಳ ಸಾಮ್ರಾಜ್ಯ  ಮೆರೆದಿತ್ತು. ಇನ್ನು ಹಳೇಬೀಡಿನಲ್ಲಿ  ನೋಡ ಬಹುದಾದ ಮಾಹಿತಿ ಯನ್ನು ಗೂಗಲ್ ನಕ್ಷೆಯಲ್ಲಿ ಗುರುತಿಸಲಾಗಿದೆ. [ ಇದಕ್ಕೆ ಸಹಕಾರ ನೀಡಿದ  ಗೆಳೆಯ ಗಿರೀಶ್ ಸೋಮಶೇಖರ್ , ಹಾಗು ಹಳೆಬೀಡಿನ ಸುಬ್ರಮಣ್ಯ ಇವರನ್ನು  ಕೃತಜ್ಞತೆ ಯಿಂದ ನೆನೆಯುತ್ತೇನೆ ] ೧} ಹಳೆಬೀಡಿನ ಪೂರ್ವಕ್ಕೆ ದ್ವಾರ ಸಮುದ್ರ ಕೆರೆ ಇದೆ ಐತಿಹಾಸಿಕ ವಾಗಿ ಮಹತ್ವ ಪಡೆದ  ಈ ಕೆರೆ ಒಳ್ಳೆಯ  ನೋಟ  ಒದಗಿಸುತ್ತದೆ, ೨ } ಹೊಯ್ಸಳೇಶ್ವರ  ದೇವಾಲಯ  ೩} ಬೆಣ್ಣೆ ಗುಡ್ಡ  ೪} ಜೈನ  ಬಸದಿಗಳು  ೫] ಕೇದಾರೇಶ್ವರ  ದೇವಾಲಯ ೬ } ದೊಡ್ಡ ಆಲದಮರ  ಇವುಗಳನ್ನು ನೋಡದಿದ್ದರೆ ಹಳೆಬೀಡಿನ ಇತಿಹಾಸ ಅರ್ಥವಾಗದು.

ಹೊಯ್ಸಳೇಶ್ವರ  ದೇವಾಲಯ


ಈ ಊರಿನ  ವಿಶೇಷ ಅಂದ್ರೆ  ೧} ಹೊಯ್ಸಳ ಸಾಮ್ರಾಜ್ಯದ ಮೊದಲ ರಾಜಧಾನಿ, ೨} ಮೂರು ಧರ್ಮಗಳ ತ್ರಿವೇಣಿ ಸಂಗಮ, ಜೈನ ಧರ್ಮ, ವೈಷ್ಣವ ಧರ್ಮ, ಶೈವ ಧರ್ಮಗಳ ಸಂಗಮ ಸ್ಥಳ ಇದು, ಹಾಗಾಗಿ ಇಲ್ಲಿ  ಮೂರೂ ಧರ್ಮಗಳಿಗೆ ಸಂಬಂಧಪಟ್ಟಂತೆ   ದೇವರ ಮೂರ್ತಿಗಳ ದರ್ಶನ ಆಗುತ್ತದೆ. ೩} ಹಳೆಬೀಡಿನ ದೇವಾಲಯದ ರೂವಾರಿ ಶಿಲ್ಪಿಗಳು ಮಾಬಲ , ಬಲ್ಲಣ್ಣ ,ಮಾಣಿಕ , ನಾಗೋಜ , ಬೋಚಣ್ಣ , ಸರಸ್ವತಿ ದಾಸ, ಬಾಚಿ, ಲಾಕಪ, ಹರಿಪ , ನಾಗೊಜಾ ಚಾರ್ಯ [ ಮಾಹಿತಿ ಕೃಪೆ ಶ್ರೀ ಕೆ.ಎನ್. ವೆಂಕಟ ಕೃಷ್ಣ [ ಸ್ವಾಮಿ]  ಹಾಸನ, ಇವರ ಹೊಯ್ಸಳ  ಸಾಮ್ರಾಜ್ಯದ ಬಗ್ಗೆ ಇರುವ ಕಥಾ ಪುಸ್ತಕ ] ಎಂದು ತಿಳಿದು ಬರುತ್ತದೆ.



ಹೊಯ್ಸಳೇಶ್ವರ ದೇವಾಲಯದ ಹೆಬ್ಬಾಗಿಲ ದರ್ಶನ


 ನಮ್ಮ ಗಿರೀಶ್ ಸೋಮಶೇಖರ್  ಅವರ  ಮಾರ್ಗದರ್ಶನ ದಲ್ಲಿ  ಮೊದಲು  ದರ್ಶಿಸಿದ್ದು  ಹೊಯ್ಸಳೇಶ್ವರ ದೇವಾಲಯವನ್ನು, ಈ ದೇವಾಲಯ ನಿರ್ಮಾಣ ಕಾರ್ಯ ಭವ್ಯವಾದ ದೇವಾಲಯಕ್ಕೆ  ನಾಲ್ಕು ಬಾಗಿಲುಗಳಿವೆ ಉತ್ತರ ಭಾಗದಲ್ಲಿ ಒಂದು, ಪೂರ್ವ ಭಾಗದಲ್ಲಿ ಎರಡು , ದಕ್ಷಿಣ ಭಾಗದಲ್ಲಿ ಒಂದು  ಬಾಗಿಲುಗಳಿವೆ .. ಉತ್ತರಭಾಗದ  ಬಾಗಿಲಿನಿಂದ ಪ್ರವೇಶ ಪಡೆದು ಹೊಯ್ಸಳೇಶ್ವರ , ಶಾಂತಲೆಶ್ವರ ಸನ್ನಿಧಿ ಯ  ದರ್ಶನ ಮಾಡ ಬಹುದು . ದೇವಾಲಯದಲ್ಲಿ ಪ್ರಮುಖವಾಗಿ ಒಟ್ಟು ೨೮೧ ಅದ್ಭುತ ಶಿಲ್ಪಗಳಿದ್ದು, ಅದರಲ್ಲಿ ೧]  ಗಣಪತಿ- ೪, ೨] ಸುಬ್ರಮಣ್ಯ -೩ , ೩] ಶಿವ -೩೩ ೪] ವಿಷ್ಣು  ವಿವಿಧ ಅವತಾರಗಳಲ್ಲಿ -೨೦,  ೫] ಬ್ರಹ್ಮ-೪, ೬]  ಹರಿಹರ -೧, ೭] ದಕ್ಷಿಣ ಮೂರ್ತಿ -೧,  ೮]  ಭೈರವ -೧,೯ ]  ದುರ್ಗಾವಿವಿಧ ಅವತಾರಗಳಲ್ಲಿ - ೧೮, ೧೦] ಸರಸ್ವತಿ -೯, ೧೧] ಇಂದ್ರ, ಅರ್ಜುನ, ರಾವಣ  ತಲಾ ಒಂದು  ಹೀಗೆ  ಸುಂದರವಾಗಿ ಅನಾವರಣಗೊಂಡಿವೆ .


ನಂದಿ  ಮಂಟಪಗಳು

ಸುಂದರ  ನಂದಿ


ದೇವಾಲಯದ ಹೊರಗೆ ನಿಮಗೆ ಕಾಣುವುದು  ನಂದಿ ಮಂಟಪಗಳ  ದರ್ಶನ , ಅದರೊಳಗೆ  ಹೊಯ್ಸಳೇಶ್ವರ, ಶಾಂತಲೆಶ್ವರ  ಸನ್ನಿಧಿ ಗೆ ಪ್ರತ್ಯೇಕವಾಗಿ ಸುಂದರ  ನಂದಿಗಳನ್ನು ಸ್ಥಾಪಿಸಲಾಗಿದೆ .ದೇವಾಲಯಗಳನ್ನು ನಿಧಾನವಾಗಿ ದರ್ಶಿಸುತ್ತಾ ನಡೆದರೆ  ನಮಗೆ ಅದ್ಭತ ಶಿಲ್ಪ ಕಲಾ ವೈಭವ  ತೆರೆದುಕೊಳ್ಳುತ್ತದೆ . ಅಂದಿನ ಕಲಾ ನೈಪುಣ್ಯತೆಗೆ ನಮಗರಿವಿಲ್ಲದಂತೆ ಮಾರುಹೋಗಿ  ಬೆರಗಾಗುತ್ತೇವೆ .


ಚಕ್ರವ್ಯೂಹ ದ ರಚನೆ


ಮಹಾಭಾರತದ ಯುದ್ಧದಲ್ಲಿ  ಅಭಿಮನ್ಯು ಚಕ್ರವ್ಯೂಹ ಭೇದಿಸಲಾಗದೆ  ಮರಣ ಹೊಂದಿದ್ದು ನಮ್ಮೆಲ್ಲರಿಗೂ ತಿಳಿದಿದೆ, ಅಂತಹ ಒಂದು ಕಲ್ಪನೆಯ  ಅದ್ಭುತ ನೋಟವನ್ನು ಕಲ್ಲಿನಲ್ಲಿ  ಚಕ್ರವ್ಯೂಹದ  ಚಿತ್ರ ಬಿಡಿಸಲಾಗಿದೆ , ಇದನ್ನು ಅರ್ಥ ಮಾಡಿಕೊಂಡರೆ  ಮಹಾಭಾರತದ ಯುದ್ದದಲ್ಲಿ  ಪ್ರತಿನಿತ್ಯ ಒಂದೊಂದು ವ್ಯೂಹ ರಚನೆಮಾಡಿ  ತಂತ್ರ ರೂಪಿಸಿ  ಯುದ್ದ  ಮಾಡುತ್ತಿದ್ದ  ಬಗ್ಗೆ ಅಚ್ಚರಿ ಮೂಡಿಸುತ್ತದೆ . ಇದನ್ನು ನನ್ನ ಕ್ಯಾಮರದಲ್ಲಿ ನೋಡುತ್ತಾ ಮೈಮರೆತು ಹೋಗಿದ್ದೆ ನಾನು.

 
ಅಪರೂಪದ  ವಿಷ್ಣುವಿನ  ಚಿತ್ರ
 
 ಮುಂದೆ ಬಂದು   ಮೂರ್ತಿಗಳನ್ನು  ವಿವರವಾಗಿ  ನೋಡುತ್ತಾ ಸಾಗಿದೆ  ಅಲ್ಲೊಂದು ವಿಷ್ಣು ವಿನ ಮೂರ್ತಿ ಗೋಚರಿಸಿತ್ತು ಕಿರೀಟ ಧಾರಿ ವಿಷ್ಣು  ಪಾದದ   ಬಳಿ  ವಾಹನ ಗರುಡ  ಕಾಣುತ್ತದೆ, ಬಲ ಕಾಲನ್ನು ಮೇಲೆತ್ತಿರುವ  ಬಂಗಿಯಲ್ಲಿದ್ದು , ಬಲ ಕಾಲಿನ ಮೇಲೆ ಬ್ರಹ್ಮನ  ಮೂರ್ತಿ ಇದೆ, ನಾನು ಓದಿರುವ ಯಾವುದೇ ಪೌರಾಣಿಕ ಕಥೆಗಳಲ್ಲಿ ಇಂತಹ ಸನ್ನಿವೇಶ  ಬಂದಿರಲಿಲ್ಲ,ಇದರಬಗ್ಗೆ  ಯಾವುದೇ ವಿವರಣೆ ಇಲ್ಲಿ ದೊರೆಯಲಿಲ್ಲ, ಆದರೆ ಅಪರೂಪದ ಶಿಲ್ಪ ಇದು ಅನ್ನಿಸಿತು.

 
ಇದ್ಯಾರು ಇಲ್ಲಿ ವಿದೇಶೀಯ

ಮತ್ತೊಂದು   ಮೂರ್ತಿ ನನ್ನ ಗಮನ ಸೆಳೆದು ಹತ್ತಿರ ಹೋದರೆ , ವಿಸ್ಮಯ ಮೂಡಿತು, ಇಡೀ ದೇವಾಲಯದಲ್ಲಿ ಕಂಡು ಬಂದ ಯಾವುದೇ ಮೂರ್ತಿಗೂ ಇಂತಹ  ಉಡುಪು ಕೆತ್ತನೆ ಆಗಿರಲಿಲ್ಲ , ದೇಹದಲ್ಲಿ ಕಾಲಿನ ವರೆಗೆ ವಿದೇಶಿಯರ  ಉಡುಪಿನಂತೆ  ಇದ್ದು, ತಲೆಯ ಕೂದಲು ಭುಜದ ವರೆಗೆ ಇಳಿ ಬಿದ್ದಿದೆ , ಇಲ್ಲಿನ ಸನ್ನಿವೇಶ ಗಮನಿಸಿದರೆ ಯಾವುದೋ ವಿದೇಶಿ ವ್ಯಕ್ತಿಯ  ಚಿತ್ರದಂತೆ ಕಾಣುತ್ತದೆ, ಆಕಾಲದಲ್ಲಿ  ಇದಕ್ಕೆ ರೂಪದರ್ಶಿಯಾದ ವಿದೇಶಿ ವ್ಯಕ್ತಿ ಯಾವ ದೇಶದವನು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಲಾರದು.

ಅಂದಿನ ಯುದ್ದದಲ್ಲಿ ಮಿಸೈಲ್ ಬಳಸಿದ್ದರೆ ..?

ಮತ್ತೊಂದು ಚಿತ್ರ ಅಚ್ಚರಿ ಮಾಡಿದ್ದು ಇಲ್ಲಿದೆ, ಯುದ್ಧದ ಚಿತ್ರಗಳ ಸಾಲಿನಲ್ಲಿದ್ದ  ಚಿತ್ರವೊಂದನ್ನು ತೋರಿದ ಗಿರೀಶ್ ಸರ್ ನೋಡಿ ಇದು  ಬ್ರಹ್ಮಾಸ್ತ್ರದ  ಚಿತ್ರ ಆಲ್ವಾ ಅಂದರು ಹತ್ತಿರ ಹೋಗಿ ನೋಡಿದಾಗ,  ಅಲ್ಲಿನ ವಿಗ್ರಹದ ಜೊತೆಯಲ್ಲಿ ಕೆತ್ತಲಾಗಿದ್ದ  ಅಸ್ತ್ರ ಇಂದಿನ ಯುದ್ಧದಲ್ಲಿ ಬಳಸುವ " ರಾಕೆಟ್  ಮಿಸೈಲ್ " ನಂತೆ ಗೋಚರಿಸುತ್ತದೆ,  ಇಂದಿನ ಯುದ್ಧಗಳಲ್ಲಿ  ರಾಕೆಟ್ ಮಿಸೈಲ್ ಗಳನ್ನ ಬಳಸದಿದ್ದರೆ  ಅದು ಯುದ್ಧವೇ ಅಲ್ಲ  ಎನ್ನುವಷ್ಟು ಇದರ ಉಪಯೋಗ ಇದೆ, ಅಂದಿನ ಯುದ್ಧದಲ್ಲಿ ಬಳಸುತ್ತಿದ್ದ ಬ್ರಹ್ಮಾಸ್ತ್ರ ಇದೆ ರೀತಿ ಇತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ,  ಶಿಲ್ಪಿಯ ಕಲ್ಪನೆಗೆ  ಮನದಲ್ಲೇ ನಮಸ್ಕಾರ ಮಾಡಿದೆ, ವೇಳೆ ಯಾಗುತ್ತಿತ್ತು,  ಹಳೇಬೀಡಿನಲ್ಲಿ  ನೋಡಲು ಸಾಧ್ಯವಾದದ್ದು ಇಷ್ಟೇ , ಆದರೆ ಮತ್ತಷ್ಟು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳ  ಬೇಕಾಗಿದೆ,  ಬನ್ನಿ ನಾನು ನೋಡದಿದ್ದರೂ ಮುಂದಿನ ಕೆಲವು ಪ್ರದೇಶಗಳ ಪರಿಚಯ ಮಾಡಿಕೊಡುತ್ತೇನೆ



ಹೊಯ್ಸಳ ಅರಸರ   ಅರಮನೆ ಇದ್ದ ಪ್ರದೇಶ

ಹಳೆಬೀಡಿನ ಸಮೀಪ ದಕ್ಷಿಣ ಭಾಗಕ್ಕೆ  ಒಂದು ಸಣ್ಣ ಗುಡ್ಡ ಕಂಡು ಬರುತ್ತದೆ,  ಆ ಗುಡ್ಡವನ್ನು "ಬೆಣ್ಣೆ ಗುಡ್ಡ" ಎಂದು ಕರೆಯುತ್ತಾರೆ . ಹಾಲಿ ಆ ಗುಡ್ಡದ ಸಮೀಪ ಒಂದು  ಸರ್ಕಾರಿ ಕಾಲೇಜು ಇದೆ. ಬೆಣ್ಣೆ ಗುಡ್ಡದ ಪ್ರದೇಶದಲ್ಲಿ ಹೊಯ್ಸಳ ಅರಸರ ಅರಮನೆ ಇತ್ತೆಂದು ಹೇಳಲಾಗುತ್ತದೆ , ಇಲ್ಲಿ ವಿವಿಧ  ಲಾಯಗಳು ಇದ್ದ ಬಗ್ಗೆ ಸಂಶೋದಕರು ಕಂಡುಹಿಡಿದಿರುವುದಾಗಿ ತಿಳಿದುಬರುತ್ತದೆ,


ಜೈನ ಬಸದಿಗಳು
"ಬೆಣ್ಣೆ ಗುಡ್ಡ" ದಿಂದ ಮುಖ್ಯರಸ್ತೆ ಬಂದು ಸ್ವಲ್ಪ ಪೂರ್ವದ ಕಡೆ ನಡೆದರೆ  ಕಾಣುತ್ತವೆ ಈ ಜೈನ ಬಸದಿಗಳು, ಮೊದಲು  ದ್ವಾರ ಸಮುದ್ರ ದಲ್ಲಿ  ೭೨೦ ಕ್ಕೂ ಹೆಚ್ಚು ಜೈನ ಬಸದಿ ಗಳು ಇದ್ದವೆಂದೂ , ನಂತರ  ಜೈನ ಧರ್ಮದಿಂದ ಬಿಟ್ಟಿದೇವ ವೈಷ್ಣವ ಧರ್ಮ ಸ್ವೀಕರಿಸಿ  ವಿಷ್ಣುವರ್ಧನ ನಾದ ನಂತರ ಆದ ಬದಲಾವಣೆ ಕಾರಣ , ಹಲವು ಜೈನ ಬಸದಿಗಳು  ಪರಿವರ್ತನೆ ಗೊಂಡು  ವಿವಿಧ ಧರ್ಮದ ಕೇಂದ್ರಗಳಾಗಿ ಮಾರ್ಪಾಡು ಆಗಿವೆ,  ಇಂದು ಕೇವಲ ಮೂರು ಬಸದಿಗಳನ್ನು ಮಾತ್ರ  ಕಾಣಬಹುದಾಗಿದೆ, ಇವುಗಳನ್ನು, ಆದಿನಾಥೆಶ್ವರ , ಶಾಂತೇಶ್ವರ ಹಾಗು ಪಾರ್ಶ್ವನಾಥೆಶ್ವರ  ಬಸದಿಗಳೆಂದು  ಗುರುತಿಸಲಾಗಿದೆ.  ಪತಿ ಬಿಟ್ಟಿದೇವ ಜೈನ ಮತ  ದಿಂದ ವೈಷ್ಣವ ಮತ  ಸ್ವೀಕಾರಮಾಡಿದರೂ ರಾಣಿ ಶಾಂತಲೆ  ತಾನು ಮಾತ್ರ ಜೈನ ಮತದಲ್ಲೇ  ಉಳಿಯುತ್ತಾಳೆ . ಆದರೆ ಈ ಮತಗಳ  ವಿಚಾರ ಇಬ್ಬರಿಗೂ ಅಂತಹ ಸಮಸ್ಯೆ ಆಗಿರಲಿಲ್ಲ ಎಂದು ತಿಳಿದು ಬರುತ್ತದೆ.


ಕೇದಾರೇಶ್ವರ  ದೇವಾಲಯ

ಕೇದಾರೇಶ್ವರ ದೇವಾಲಯ [ ಚಿತ್ರ ಕೃಪೆ ವಿಕಿ ಪಿಡಿಯ ] 


ಜೈನ ಬಸದಿಯಿಂದ ಪೂರ್ವಕ್ಕೆ  ಸಾಗಿದರೆ  ಕಾಣ ಸಿಗುವುದೇ ಕೇದಾರೇಶ್ವರ ದೇವಾಲಯ , ಇದು ದ್ವಾರ ಸಮುದ್ರದ ಕೆರೆಯ  ಸಮೀಪವಿದೆ, ಈ ದೇವಾಲಯವನ್ನು ಹದಿಮೂರನೆ ಶತಮಾನದಲ್ಲಿ ಎರಡನೆ ಬಲ್ಲಾಳ ಹಾಗು ಕುಂತಲಾದೇವಿ  ಕಾಲದಲ್ಲಿ ನಿರ್ಮಿಸಲಾಯಿತೆಂದು  ಹೇಳುತ್ತಾರೆ , ಈ ದೇವಾಲಯ  ತ್ರಿಕುಟಾಚಲ  ವಾಗಿದ್ದು, ಸೋಮನಾಥಪುರದ  ದೇವಾಲಯವನ್ನು  ಹೋಲುವುದಾಗಿ  ಕೆಲವರು  ತಿಳಿಸುತ್ತಾರೆ ,  ಇದರ ಬಗ್ಗೆ ಕೆಲವು ವಿದೇಶಿ ವಿದ್ವಾಂಸರು  ಹೇಳುತ್ತಾ  ಈ ದೇವಾಲಯ ಬ್ರಿಟನ್ನಿನ ಲಿಂಕನ್, ಸಲಿಸ್ಬರೀ, ವೇಲ್ಸ್  ಇಂಗ್ಲೀಷ್ ಕ್ಯಾಥೆಡ್ರಲ್ ಗಳ ನಿರ್ಮಾಣ ಕಾಲಕ್ಕೆ ಸಮಕಾಲಿನದೆಂದು     ಗುರುತಿಸುತ್ತಾರೆ,  ಇಲ್ಲಿಗೆ ಸಮೀಪದಲ್ಲಿ ಐತಿಹಾಸಿಕ ದೊಡ್ಡ ಆಲದ  ಮರ ಇದ್ದು, ಹಲವು ನೂರು ವರ್ಷಗಳ  ಇತಿಹಾಸಕ್ಕೆ ಸಾಕ್ಷಿಯಾಗಿರುವುದು  ಕಂಡು ಬರುತ್ತದೆ . 


ಹಳೆಬೀಡಿನ  ಪೇಟೆಯಲ್ಲಿ ನಗೆಯ ಚೆಲ್ಲಾಟ
ಅರೆ ನಿಮ್ಮೊಡನೆ  ಇತಿಹಾಸ ಹಂಚಿಕೊಳ್ಳುತ್ತ  ಸಮಯ ಕಳೆದದ್ದೇ ಗೊತ್ತಾಗಲಿಲ್ಲ .   ಕತ್ತಲಾಗುತ್ತಿದೆ  ನಮ್ಮ ಗಿರೀಶ್  ಕರೆಯುತ್ತಿದ್ದಾರೆ, ಹಳೆಬೀಡಿನ  ಅಂಗಡಿ ಬೀದಿಯಲ್ಲಿ ಸಂಭ್ರಮದ ಓಡಾಟ ಮಾಡಿ ಬಂದು ನಗು ನಗುತ್ತ, ಸಾರ್ ಹಳೇಬೀಡು ಮುಗೀತು ಸಾರ್, ಬನ್ನಿ ನಮ್ಮ ಮನೆಗೆ ಹೋಗೋಣ, ಅಮ್ಮಾ ಕಾಯ್ತಿರ್ತಾರೆ ಅಂದ್ರು .......  ನಮ್ಮ ಕಾರು    ಗಿರೀಶ್ ಮನೆಕಡೆಗೆ  ತಿರುಗಿತು. ...............!!





































13 comments:

Blog said...

ಬಾಲಣ್ಣ ನಮಗೆ ಕುಳಿತ ಕಡೆಯೇ ಸುಂದರವಾದ ಹಳೇಬೀಡನ್ನು ದರ್ಶನ ಮಾಡಿಸಿದಿರಿ.......... ಅದ್ಭುತ ಚಿತ್ರಗಳು ಮತ್ತು ನಿರೂಪಣೆ.......... ಅತ್ಯುತ್ತಮ ಬರಹಕ್ಕಾಗಿ ವಂದನೆಗಳು

ಮನಸು said...

ಮಾಹಿತಿ ಪೂರ್ಣ ಲೇಖನ ಸರ್. ಹಳೇಬೀಡುಗೆ ನೀವು ಹೋಗಿ ಬಂದ ನಂತರ ನಾವು ಹೋಗಿದ್ದೆವು ಒಳ್ಳೆಯ ಅನುಭವ. ಗಿರೀಶ್ ಮತ್ತು ಸುಬ್ರಮಣ್ಯರವರು ಬಹಳಷ್ಟು ಮಾಹಿತಿಯನ್ನು ನೀಡಿದರು. ಗಿರೀಶ್ ಪೋಟೋಗೆ ಟೈಟಲ್ " ಕ್ಯಾಮರಾ... ಕ್ಯಾಮರಾ... ಸೌತೆಕಾಯಿ ಸೌತೆಕಾಯಿ ಯಾರಿಗ್ ಬೇಕು" ಹಹಹ

Srikanth Manjunath said...

ಇತಿಹಾಸ ಶಿವಗಂಗೆ ಬೆಟ್ಟದಲ್ಲಿರುವ ಒಳಕಲ್ ತೀರ್ಥದ ಹಾಗೆ ಸಿಕ್ಕಿದ್ದಷ್ಟು ಮೊಗೆ ಮೊಗೆದು ಉಣಬಡಿಸುವುದು. ಆದರೆ ನೀವು ಸಿಕ್ಕಿದ್ದು, ಹುಡುಕಿದ್ದು, ತಡಕಿದ್ದು, ಕೇಳಿದ್ದು, ಓದಿದ್ದು, ಎಲ್ಲವನ್ನು ಒಪ್ಪವಾಗಿ ಜೋಡಿಸಿ ಅದಕ್ಕೆ ಸರಿಯಾದ ಸೂತ್ರವನ್ನು ಸೇರಿಸಿ ಕರಾರುವಾಕ್ ಶೈಲಿಯಲ್ಲಿ ಬರೆಯುವ ಮತ್ತು ಹಂಚಿಕೊಳ್ಳುವ ನಿಮ್ಮ ತಾಳ್ಮೆಗೆ ಮತ್ತು ನಿಮ್ಮ ಇತಿಹಾಸ ಶೋಧಕ ಇಚ್ಚೆಗೆ ನನ್ನ ನಮನಗಳು. ಹಳೇಬೀಡು ನೋಡಿದಾಗ ಹೊಟ್ಟೆಯೊಳಗೆ ತನಗೆ ತಾನೇ ಸಂಕಟ ಶುರುವಾಗುತ್ತೆ. ಸುಂದರ ಕಲಾಕೃತಿಗಳನ್ನು ಭಗ್ನ ಮಾಡಿರುವುದನ್ನು ಕಂಡಾಗ.. ಮೇಯರ್ ಮುತ್ತಣ್ಣ ಚಿತ್ರದಲ್ಲಿ ಅಣ್ಣಾವ್ರು ಹೇಳುತ್ತಾರೆ ನಮ್ಮಮ್ಮ ಬೇಲೂರು ಹಳೇಬೀಡಿನಲ್ಲಿರುವ ಶಿಲ್ಪಗಳನ್ನು ಕೈಯಲ್ಲಿ ಬರೆಯೋಕೆ ಆಗೋಲ್ಲ ಅಂತದನ್ನು ಕಲ್ಲಲ್ಲಿ ಕೆತ್ತಿ ತೋರಿಸಿದ್ದಾನೆ ಆ ಶಿಲ್ಪಿ ಅಂತ.. ಎಂತಹ ಮಾತುಗಳು.. ಅಂತಹ ಅಮೋಘ ಚೆಲುವ ನಾಡಿನ ಇತಿಹಾಸವನ್ನು ಸುಂದರವಾಗಿ ಬಡಿಸುವ ನಿಮ್ಮ ಈ ಲೇಖನ ಅದ್ಭುತವಾಗಿದೆ ಸರ್ಜಿ.. ಸೂಪರ್ ಲೇಖನ ಸೂಪರ್ ವಿವರ.. ಪ್ರತಿಯೊಂದನ್ನು ಸವಿವರವಾಗಿ ಹೇಳುವ ಶೈಲಿ ಇಷ್ಟವಾಯಿತು

Pradeep Rao said...

ವಾಹ್! ಅದ್ಭುತ ಲೇಖನ... ನಾನು ಎಲ್ಲಾದರೂ ಪ್ರವಾಸ ಹೋದರೆ ಅಲ್ಲಿನ ಸ್ಥಳಗಳಾನ್ನು ನೋಡಿ ಖುಶಿಪಡುತ್ತೇವೆ ಆದರೆ ಅದರ ಇತಿಹಾಸ ನೆನಪಿಟ್ಟುಕೊಳ್ಳುವುದು ಕಷ್ಟದ ಕೆಲಸ ಅಂಥದ್ದರಲ್ಲಿ ನೀವು ರಾಜರುಗಳ ತಲೆಮಾರು ಅವರ ಆಳ್ವಿಕೆ ಕಾಲ ಎಲ್ಲವನ್ನು ಎಷ್ಟು ಕೂಲಂಕುಶವಾಗಿ ಕಲೆ ಹಾಕಿ ಮಾಹಿತಿ ಒದಗಿಸಿದ್ದೀರಿ. ನಿಮ್ಮ ಲೇಖನಗಳು ಒಂದು ಇತಿಹಾಸದ ಬಗ್ಗೆ ಪ್ರಬಂಧಗಳ ಸಂಕಲನ ಆಗುವ ಎಲ್ಲಾ ಅರ್ಹತೆ ಹೊಂದಿವೆ! ಸತೀಶ್ ಹೇಳಿದಂತೆ ಕುಂತಲ್ಲೇ ಹಳೇಬೀಡಿನ ದರ್ಶನವಾಯಿತು! ಸಕ್ಕತ್ ಇಷ್ಟ ಆಯ್ತು... ಮುಂದಿನ ಬಾರಿ ನನ್ನನ್ನೂ ಕರೆಯಿರಿ ಸಾರ್ ಪ್ರವಾಸಕ್ಕೆ...

ಸವಿಗನಸು said...

ಸೊಗಸಾದ ವಿವರಣೆ.....
ಗಿರಿ ಟೈಟಲ್...ಬರೀ ಸವತೆಕಾಯಿ ಸಾಕಾ...ಜೊತೆಗೇನಾದರೂ.........?

mshebbar said...

ಅಪರೂಪದ ವಿಷ್ಣುವಿನ ಕೆತ್ತನೆ " ತ್ರಿವಿಕ್ರಮ". ಶಿಲ್ಪಿಯ ವಾಮನಾವತಾರದ ಕಲ್ಪನೆ. ಎರಡನೇ ಹೆಜ್ಜೆ ಸತ್ಯ ಲೋಕಕ್ಕೆ ( (ಬ್ರಹ್ಮಲೋಕ). ಅದನ್ನು ತೋರಿಸಲುವಾಗಿ ಬ್ರಹ್ಮನ ಶಿಲ್ಪ.

bilimugilu said...

Enthaa chennaagi vivarisi heLideera Balu Sir, adbhutha.... intha jaagavanna nOdale beke annisuvashtu preranaathmakavaagide....

KalavathiMadhusudan said...

baalu sir, bahala varshagala hinde nodiddaru ishtu sogsaada vrnane sikkiralilla,intaha vishesha mahiti haagu namma naadina adbhutavaada sundara kalaakrutiyannu serehididu belagisiddira tumbaa dhanyavaadagalu.

maanasa saarovra said...

ಪ್ರವಾಸ ಕಥನಗಳು ಅದ್ಭುತ ಸರ್. ಮಾಹಿತಿ ಮತ್ತು ಚಿತ್ರಗಳೊಂದಿಗೆ ನಿಮ್ಮಬ್ಲಾಗ್ ಒಂದು ಪ್ರವಾಸ ಕಥನ ಪುಸ್ತಕ ಓದುವ ಅನುಭವ ಕೊಡುತ್ತದೆ. ತುಂಬಾ ಕುಶಿಯಾಯಿತು.

maanasa saarovra said...

ಪ್ರವಾಸ ಕಥನಗಳು ಅದ್ಭುತ ಸರ್. ಮಾಹಿತಿ ಮತ್ತು ಚಿತ್ರಗಳೊಂದಿಗೆ ನಿಮ್ಮಬ್ಲಾಗ್ ಒಂದು ಪ್ರವಾಸ ಕಥನ ಪುಸ್ತಕ ಓದುವ ಅನುಭವ ಕೊಡುತ್ತದೆ. ತುಂಬಾ ಕುಶಿಯಾಯಿತು.

ಜಲನಯನ said...

ಬೇಲೂರು ಹಳೇಬೀಡು ನೋಡಿ 20 ವರ್ಷವೇ ಆಯ್ತು. ನವೀಕರಿಸಿದಿರಿ ನೆನೆಪಿಗಳನ್ನು, ಹೌದು ನಮ್ಮ ಗಿರೀಶ್ ಊರಲ್ವಾ...?? ವಾಹ...

ಸಂಧ್ಯಾ ಶ್ರೀಧರ್ ಭಟ್ said...

Hale beedina maahitige Hats off anna, andange nammannella yaavaga karkondu hogteeraa ?? @Girish neevu decide madidru nadeyutte ,,:) :)

Sachin Bhat said...

ಇಷ್ಟು ಗಭೀರ ಅಧ್ಯಯನದ, ಗ೦ಭೀರ ಬರವಣಿಗೆಯ, ಪ್ರಸನ್ನರಮಣೀಯ ಶೈಲಿಯ ಲೇಖನಗಳು ಬ್ಲಾಗ್ ಲೋಕದಲ್ಲಿ ಅತ್ಯಪರೂಪ. ಮಾಹಿತಿಗಾಗಿ ಧನ್ಯವಾದಗಳು