ಚಿತ್ರ ಕೃಪೆ ಅಂತರ್ಜಾಲ |
ಸುಮಾರು ಒಂದು ಹತ್ತು ದಿನಗಳ ಹಿಂದೆ ಆಫಿಸ್ ನಿಂದಾ ಮನೆಗೆ ಬರುತ್ತಿದ್ದೆ. ಅಲ್ಲೊಂದು ಸಣ್ಣ ಜಗಳ , ಹೂ ಮಾರುವವನಿಗೂ ಮತ್ತೊಬ್ಬ ನಿಗೂ ......!
ಮತ್ತೊಬ್ಬ :-ಅಲ್ಲಾ ಕಣಯ್ಯ ಅವತ್ತು ಐದು ಸಾವ್ರಾ ಇಸ್ಕಂದಲ್ಲಾ ದೊಡ್ಮನ್ಸಾ , ಎಲ್ಲಯ್ಯ ಕಾಸೂ ಇಲ್ಲಾ ನೀನೂ ಇಲ್ಲಾ
ಹೂಮಾರುವವ :- ಇಲ್ಲಾ ಕಣಣ್ಣಾ ...... ಒಸಿ ಪಿರಾಬ್ಲಾಮ್ಮು , ಗಣಪತಿ ಹಬ್ಬ ಆಗ್ಲಿ ಕೊಡ್ತೀನಿ ಸುಮ್ಕಿರು , ಅವತ್ತು ಹೂ ಕೊಡೂಕೆ ಐದುತವು ಆಡ್ರೂ ತಗಂದೀವ್ನಿ, ಮತ್ತೆ ಇನ್ನೋದಷ್ಟು ಬತ್ತದೆ ಹೆಂಗೋ ಮಾಡಿ ಒಸಿ ಲಾಭಾ ಮಾದ್ಕತೀನಿ ಕಣಣ್ಣಾ , ಒಸಿ ಅವಕಾಸ ಕೊಡು .
ಹೌದಲ್ವಾ ಇಂತಹ ಘಟನೆಗಳು ನಿಮ್ಮ ಕಣ್ಣಿಗೂ ಬಿದ್ದಿರುತ್ತೆ , ಯಾವುದೇ ಹಬ್ಬಕಿಂತಾ ಗಣಪತಿ , ಗೌರಿ ಹಬ್ಬಕ್ಕೆ ಬಹಳಷ್ಟು ಜನ ಕಾಯ್ತಾ ಇರ್ತಾರೆ. ಯಾಕೆ.?? ಉತ್ತರ ಹುಡುಕುತ್ತಾ ಹೋದಂತೆ ಹಲವು ವಿಚಾರಗಳು ಬೆಳಕಿಗೆ ಬಂತು. ಗೌರಿ ಹಬ್ಬಕ್ಕೆ ಮನೆಯ ಮಗಳಿಗೆ ಬಳೆ ತೊಡಲು ಸ್ವಲ್ಪ ಹಣ , ತವರು ಮನೆ ಯಿಂದ ಸೀರೆ ಕಾಣಿಕೆ, ಗೌರಿ ಬಾಗಿನ , ಹೊಸ ಮೊರದ ಖರೀದಿ, ಬಿಚ್ಚಾಲೆ , ಬಳೆಗಳ ಸರ , ಹೂ, ಹಣ್ಣು , ಇವುಗಳ ಬರಾಟೆ , ಗೌರೀ ಬಾಗಿನದ ಪರಸ್ಪರ ವಿನಿಮಯ, ಇವುಗಳ
ಸಂಪ್ರದಾಯ . ಮುಂತಾದ ವಿವಿಧ ಚಟುವಟಿಕೆಗಳು. .
ಇನ್ನು ಗಣಪತಿ ಹಬ್ಬ ಬಂದರೆ , ಕಲಾವಿದರು, ಹೂ, ಹಣ್ಣು, ತರಕಾರಿ, ಹಾಗೂ ಎಲ್ಲ ಬಗೆಯ ವ್ಯಾಪಾರಿಗಳು, ಪುರೋಹಿತರು, ಕ್ಯಾಸೆಟ್ , ಸಿ.ಡಿ ,ವ್ಯಾಪಾರಿಗಳು, ಟಿ .ವಿ . ಚಾನಲುಗಳು ತಮ್ಮ ತಮ್ಮ ಪ್ರತಿಭೆ ತೋರಿ ಸ್ವಲ್ಪ ಲಾಭ ಮಾಡಿ ಕೊಳ್ಳುತ್ತಾರೆ , ಹಬ್ಬಕ್ಕೆ ಮೊದಲು ಬೀದಿ ಬೀದಿಯಲ್ಲಿ ದುಡ್ಡು ಶೇಖರಿಸಿ ಗಣೇಶನನ್ನು ಕೂರಿಸಿ ನಲಿಯುತ್ತಾರೆ. ಹಾಗೂ ಹೀಗೂ ಯಾವುದೋ ಸಡಗರದಲ್ಲಿ ನಮ್ಮದೇ ರೀತಿಯಲ್ಲಿ ಗೌರಿ, ಗಣಪತಿ ಹಬ್ಬ ಆಚರಣೆ ಆಗಿ ಮರೆತು ಹೋಗುತ್ತದೆ . ಯಾವ ಹಬ್ಬಕ್ಕೂ ಇಲ್ಲದ ವಿಶೇಷ ಈ ಹಬ್ಬದಲ್ಲಿ ಕಾಣದೆ ಮರೆಯಾಗುತ್ತದೆ.
ಇನ್ನು ಗಣಪತಿ ಹಬ್ಬಕ್ಕೆ, ಮನೆಯಲ್ಲಿನ ಪುಟ್ಟ ಮಕ್ಕಳಿಗೆ ಬಟ್ಟೆ, ಹತ್ತಿಯಿಂದ ಮಾಡಿದ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರ ತಯಾರಿ , ಬಗೆ ಬಗೆಯ ಅಲಂಕಾರ ಕ್ಕೆ ತಯಾರಿ, ಹೂ, ಹಣ್ಣುಗಳ ಮೆರೆದಾಟ, ವಿವಿಧ ಜಾತಿಯ ಪತ್ರೆಗಳ ಸಂಗ್ರಹಣೆ,
ಗರಿಕೆ ಹುಲ್ಲಿನ ಹುಡುಕಾಟ, ಅಭಿಷೇಕಕ್ಕೆ, ಹಾಲೂ.ಮೊಸರು,, ತುಪ್ಪ, ಜೇನು,ಸಕ್ಕರೆ, ಇವುಗಳ ಸಂಗ್ರಹ,, ಬಗೆ ಬಗೆಯ ಹೂಗಳ ಸಂಗ್ರಹ, ಜೊತೆಗೆ ಗಣಪನಿಗೆ ವಿವಿಧ ಬಗೆಯ ಕಡುಬು, ಭಕ್ಷ್ಯ ಗಳ ಸಮರ್ಪಣೆ ಇತ್ಯಾದಿ .ಇಡೀ ಮನೆಯೇ ಸಂಭ್ರಮದ ಸಾಗರವಾಗಿ ಬಿದುತ್ತದೆ .
ಚಿತ್ರ ಕೃಪೆ ಅಂತರ್ಜಾಲ. |
ಹೌದೂ ನೀವು ಗಮನಿಸಿದ್ದೀರಾ?? ಗಣಪತಿ ಹಬ್ಬದಲ್ಲಿ ನಾವರಿಯದ ಪುಷ್ಪಗಳು, ಪತ್ರೆಗಳ ವಿವರ ಇದೆ!! ಆದರೆ ನಾವು ಅವುಗಳ ಬಗ್ಗೆ ಅರಿಯದೆ ಮಂತ್ರಕ್ಕೆ ತಕ್ಕಂತೆ ಆ ಸಮಯಕ್ಕೆ ಸಿಗುವ ಯಾವುದೋ ಒಂದನ್ನು ಅರ್ಪಿಸುತ್ತೇವೆ. ನಂತರ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ . ಬನ್ನಿ ಮಂತ್ರದಲ್ಲಿ ಬರುವ 21 ಪುಷ್ಪಗಳಹಾಗು 21 ಪತ್ರೆಗಳ ಬಗ್ಗೆ ತಿಳಿಯೋಣ, ಇವುಗಳಲ್ಲಿ ಕೆಲವು ಪುಷ್ಪಗಳ , ಪತ್ರೆಗಳ ಹೆಸರು ಮಾತ್ರ ನನಗೆ ಗೊತ್ತು ಆದರೆ ಕೆಲವು ಹೆಸರುಗಳ ಪುಷ್ಪ, ಪತ್ರೆಗಳನ್ನು ಅಡಿಗೆ , ಮುಂತಾದವುಗಳ ಬಗ್ಗೆ ಅರಿತು ತಿಳಿದುಕೊಳ್ಳಬೇಕಾಗಿದೆ .
ಪತ್ರೆಗಳು :- 1]ಭ್ರುಂಗರಾಜ ಪತ್ರೆ 2] ಬಿಲ್ವಪತ್ರೆ 3] ಶ್ವೇತ ದೂರ್ವಾಪತ್ರ 4] ಬದರೀ ಪತ್ರ, 5] ದತ್ತೂರ ಪತ್ರೆ, 6] ತುಳಸಿ ಪತ್ರೆ 7] ಶಮಿಪತ್ರೆ 8] ಅಪಾಮಾರ್ಗ ಪತ್ರೆ, 9] ಬೃಹತಿ ಪತ್ರೆ, 10] ಕರವೀರ ಪತ್ರೆ 11] ಆರ್ಕ ಪತ್ರೆ, 12] ಅರ್ಜುನ ಪತ್ರೆ 13] ಮಾಲತಿ ಪತ್ರೆ, 14]ವಿಷ್ಣು ಕಾಂತ ಪತ್ರೆ, 15] ದಾಡಿಮೀ ಪತ್ರೆ, 16] ದೇವದಾರು ಪತ್ರೆ, 17] ಮರುವಕ ಪತ್ರೆ 18] ಅಶ್ವತ್ಥ ಪತ್ರೆ, 19] ಜಾಜೀ ಪತ್ರೆ, 20] ಕೇತಕಿ ಪತ್ರೆ, 21] ಅಗಸಿ ಪತ್ರೆ
ಪುಷ್ಪಗಳು :-1} ದತ್ತೂರ ಪುಷ್ಪ, 2] ಕರವೀರ ಪುಷ್ಪ, 3] ಆರ್ಕ ಪುಷ್ಪ ,4] ಮಾಲತಿ ಪುಷ್ಪ 5]ದಾಡಿಮೀ ಪುಷ್ಪ, 6] ಜಾಜೀ ಪುಷ್ಪ, 7] ಮಲ್ಲಿಕಾ ಪುಷ್ಪ, 8] ಸೇವಂತಿಕಾ ಪುಷ್ಪ, 9] ಸುಗಂಧರಾಜ ಪುಷ್ಪ,10] ಚಂಪಕ[ ಸಂಪಿಗೆ] ಪುಷ್ಪ, 11] ಕುರಂಟಕ ಪುಷ್ಪ , 12] ಪೂಗ ಪುಷ್ಪ, 13] ಪುನ್ನಾಗ ಪುಷ್ಪ, 14] ವಕುಳ ಪುಷ್ಪ ,15] ಪದ್ಮ [ ತಾವರೆ] ಪುಷ್ಪ 16] ನೀಲೋತ್ಪಲ ಪುಷ್ಪ, 17] ತಮೂಲ ಪುಷ್ಪ, 18] ಕುಂದ ಪುಷ್ಪ 19] ಗಿರಿಕರ್ಣಿಕಾ ಪುಷ್ಪ,20] ಜಪಾ ಪುಷ್ಪ, 21] ಪಾಟಲಿ ಪುಷ್ಪ,
ಇದರ ಜೊತೆಗೆ ಗರಿಕೆ ಹುಲ್ಲು ಗಳ ಸಮರ್ಪಣೆ , ಇದೇನ್ರೀ ಇದು ಅಂತೀರಾ ಇಪ್ಪತ್ತೊಂದು ಬಗೆಯ ಪತ್ರೆಗಳಲ್ಲಿ ನಮಗೆ ಗೊತ್ತಿರೋದು ಒಂದೋ ಎರಡೋ, ಅಥವಾ ಐದೋ ಇರಬಹುದು ಉಳಿದವು .....??? ಗೊತ್ತಿಲ್ಲಾ , ಇನ್ನುಪುಷ್ಪ ಗಳಿಗೂ ಇದೆ ಅನ್ವಯಿಸುತ್ತೆ 21 ರಲ್ಲಿ ಅತೀ ಹೆಚ್ಚೆಂದರೆ 8 ರಿಂದಾ ಹತ್ತು ಮಾತ್ರ ಉಳಿದವು ಗೊತ್ತಿಲ್ಲಾ .
ಇನ್ನು ಗಣಪತಿಗೆ ಪ್ರಿಯವಾದ ಭಕ್ಷಗಳ ಬಗ್ಗೆ ತಿಳಿಯೋಣ ಬನ್ನಿ:- 1] ಪಾಯಸ, 2] ಪರಮಾನ್ನ , 3] ಮೋದಕ ,4] ಚಕ್ಕುಲಿ, 5] ಫೇಣಿ, 6] ಮಂಡಕಾ , 7] ಲಡ್ಡು, 8] ಪಾನಕಾ , 9] ಮಧು ಪರ್ಕಂ , 10] ಪಂಚ ಕಜ್ಜಾಯ11] ಅತೀರಸ 12] ಮಹಾ ರಸ[ ಇವುಗಳಲ್ಲಿ ಕೆಲವು ಮಾತ್ರ ಗೊತ್ತು ]
ಹಣ್ಣುಗಳು :- 1] ಕದಳೀ ಫಲ , 2] ನಾರಿಕೇಳ 3] ಜಂಬೀರ 4] ಇಕ್ಷುರಸ 5] ಲಾಜಾ 6] ಚಿಪಿಟ 7] ದ್ರಾಕ್ಷಾ ಫಲ, 8] ರಂಭಾ ಫಲ 9] ಬಹು ಬೀಜ ಫಲ, 10] ನಾರಂಗ ಫಲ, 11] ಚಕ್ಕೋತ ಫಲ, 12] ಆಮ್ರ ಫಲ,[ ಇವುಗಳಲ್ಲಿ 5 ಮಾತ್ರಾ ಗೊತ್ತು]
ಮೇಲೆ ಹೇಳಿದ ಎಲ್ಲವನ್ನೂ ಪೂರ್ಣವಾಗಿ ತಿಳಿದು ಕೊಳ್ಳುವ ಗೋಜಿಗೆ ಯಾರೂ ಹೋಗಿಲ್ಲಾ , ಈ ಹಬ್ಬದಲ್ಲಿ 21 ಬಗೆಯ ಪತ್ರೆಗಳು ನಮ್ಮ ನೆಲದಲ್ಲಿ ಬೆಳೆಯುವ ನಮ್ಮ ಪರಿಸರದ ಗಿಡ ಮರಗಳ ಎಲೆಗಳು , 21 ಬಗೆಯ ಹೂಗಳು , ನಮ್ಮದೇ ನೆಲದ ಪ್ರಕೃತಿಯ ಕೊಡುಗೆ, 12 ಬಗೆಯ ಹಣ್ಣುಗಳು ನಮ್ಮ ನೆಲದ ಗಿಡ ಮರಗಳಿಂದ ಹೊಮ್ಮಿದ ಫಲಗಳು, ಇನ್ನು ಅಡಿಗೆಗೆ ಉಪಯೋಗಿಸುವ ಧಾನ್ಯ, ಹಾಗು ಪತ್ರೆ , ಪದಾರ್ಥಗಳು ನಮ್ಮ ರೈತರು ಬೆವರು ಹರಿಸಿ ಬೆಳೆದ ಬೆಳೆಯ ಕೊಡುಗೆಗಳು. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಯಾವುದೋ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡುತ್ತೇವೆ.
ಪ್ರತಿ ನಿತ್ಯ ಆಗಸದಲ್ಲಿ ಚಂದ್ರನನ್ನು ನೋಡದಿದ್ದರೂ ಅಂದು ಮಾತ್ರ ಚೌತಿ ಚಂದ್ರನ ದರ್ಶನ ಹೆದರಿಕೆಯಿಂದಾ ಆಗಸ ನೋಡದಂತೆ ತಲೆಯನ್ನು ಬಲವಂತ ವಾಗಿ ತಗ್ಗಿಸಿ ನಡೆಯುತ್ತೇವೆ. ಇನ್ನು ಅಪ್ಪಿ ತಪ್ಪಿ ನೋಡಿಬಿಟ್ರೆ ಮುಂದೆ ಹೇಳೋದೇ ಬೇಡಾ ..........!!!ಆಲ್ವಾ ನಮ್ಮ ಮನಸನ್ನು ಸಮಾಧಾನ ಗೊಳಿಸಲು ಆ ಗಣಪನೆ ಬರಬೇಕು.
ಬನ್ನಿ ಈ ಸಾರಿಯಾದರೂ ಬಲ್ಲವರಿಂದ ಪೂಜೆಯಲ್ಲಿ ಉಪಯೋಗಿಸುವ ಪತ್ರೆಗಳ ಬಗ್ಗೆ, ಫಲಗಳ ಬಗ್ಗೆ, ಪುಷ್ಪಗಳ ಬಗ್ಗೆ, ಮುಂತಾದ ವಿಚಾರಗಳ ಬಗ್ಗೆ ತಿಳಿದು ಜ್ಞಾನವಂತರಾಗಿ ಸೌಹಾರ್ಧದಿಂದ ಗೌರಿ, ಗಣಪತಿ ಹಬ್ಬ ಆಚರಿಸಿ ಧನ್ಯರಾಗೋಣ. ಪರಿಸರಕ್ಕೆ ಹಾನಿಯಾಗದಂತೆ ಮಣ್ಣಿನ ಗಣಪತಿ ಗೌರಿ ಕೂರಿಸಿ ಪರಿಸರ ರಕ್ಷಿಸಿ ಸಿಹಿ , ಖಾರ ಕಡುಬು ತಿನ್ನುತ್ತಾ ಸಂತಸದ ಹಬ್ಬ ಆಚರಿಸೋಣ. ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸೋಣ
ಚಿತ್ರ ಕೃಪೆ ಅಂತರ್ಜಾಲ |
"ತಮಗೆ ಹಾಗು ತಮ್ಮ ಕುಟುಂಬಕ್ಕೆ ಗೌರಿ ಹಾಗು ಗಣಪತಿ ಹಬ್ಬದ ಶುಭಾಶಯಗಳು."
9 comments:
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ನಿಜ ನಮಗೆ ಇಷ್ಟು ಪತ್ರೆಗಳು, ಹೂ, ಹಣ್ಣು ಕಾಯಿ ಇವುಗಳನ್ನೇಲ್ಲಾ ಉಪಯೋಗಿಸುತ್ತಾರೆ ಎಂದು ತಿಳಿದಿರಲಿಲ್ಲ.. ನಿಮಗೂ ಗೌರಿ ಗಣೇಷ ಹಬ್ಬದ ಶುಭಾಶಯಗಳು
ಬಹಳ ಉಪಯುಕ್ತ ಮಾಹಿತಿ ಸರ್ , ಬರುವ ಮಂಗಳವಾರ ನಮ್ಮ ಕಂಪನಿಯಲ್ಲಿ ಇದನ್ನೇ explain ಮಾಡ್ತೀನಿ
ಬಾಲು ...ಅರೆರೆ...ಓವರ್ ಟೇಕ್ ಮಾಡಿಬಿಟ್ರಿ..ನಾನೂ ಇದೇ ವಿಷಯ ಹಾಕುವ ಅಂತಿದ್ದೆ.. ಪರವಾಗಿಲ್ಲ ಬಿಡಿ ನಿಮ್ಮದು ಕವನವಲ್ಲ ಅನ್ನೋದೇ ಸಮಾಧಾನ...ಚನ್ನಾಗಿದೆ ನಿಮ್ಮ ಲೇಖನ...
super...super.... tumbaa vishayagalanna tiLisiddiri sir...
nimagu habbada subhaashaya...
ಬಾಲು ಸರ್ ಅವರ ಲೇಖನಗಳೆಂದರೆ..ಒಂದು ಅಕ್ಷಯ ಗಣಿಯಿದ್ದಹಾಗೆ ತೆಗೆದಷ್ಟು ಒಳ್ಳೆಯ ವಿಷಯಗಳು ಬರುತ್ತಲೇ ಇರುತ್ತವೆ..ಸುಂದರ ಮಾಹಿತಿ ಆಚಾರಗಳಲ್ಲಿ ಇರುವುದನ್ನು ವಿಚಾರಕ್ಕೂ ತಂದ ರೀತಿ ಸುಂದರ..
ನಿಮಗೆ ನಿಮ್ಮ ಕುಟುಂಬಕ್ಕೆ ಗೌರಿ ಗಣೇಶ ಹಬ್ಬದ ಶುಭಾಶಯಗಳು!!!
ಸರ್ ತುಂಬ ಚೆನ್ನಾಗಿ ವಿವರಿಸಿದ್ದೀರಿ... ನಿಮಗೂ ಹಬ್ಬದ ಶುಭಾಶಯಗಳು...
ನಿಮಗೂ ಮತ್ತು ನಿಮ್ಮ ಮನೆ ಮಂದಿಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಗೌರಿ ಗಣೇಶ ಹಬ್ಬದ ಸವಿವರ ಬರಹಕ್ಕೆ
ಧನ್ಯವಾದಗಳು.
ಪತ್ರೆಗಳು, ಪುಷ್ಪಗಳ, ತಿನಿಸುಗಳು ಮತ್ತು ಹಣ್ಣೂಗಳ ವಿವರ ಇಷ್ಟವಾಯಿತು.
ನಾನು ಕಾಲೇಜ್ ಓದುವಾಗ ಬೆಂಗಳೂರಿನಲ್ಲಿ ಗಲ್ಲಿಗೊಂದು ಸಾರ್ವಜನಿಕ ಗಣೇಶ. ವಾದ್ಯ ಗೋಷ್ಠಿ, ಸುಗಮ ಸಂಗೀತ, ರಾಜ್ಕುಮಾರ್ ಚಲನ ಚಿತ್ರ ಪ್ರದರ್ಶನ ಮತ್ತು ಮಾ|| ಹಿರಣ್ಣಯ್ಯನವರ ನಾಟಕ ಇವು ಕಡ್ಡಾಯ ಕಾರ್ಯಕ್ರಮಗಳು.
ಈಗೆಲ್ಲ ಸಾರ್ವಜನಿಕ ಗಣೇಶೋತ್ಸವ ಎಂದರೆ ಬರೀ ಸುಲಿಗೆ!
ಬಾಲಣ್ಣ...
ತುಂಬಾ ಉಪಯುಕ್ತ ಮಾಹಿತಿ....
ನಮ್ಮ ಮಲೆನಾಡಿನ ಕಡೆ ಗಣೆಶನ ಹಬ್ಬಕ್ಕೆ ದೇವರ ಮುಂದೆ "ಫಲಾವಳಿ" ಅಂತ ಕಟ್ಟುತ್ತಾರೆ..
ಅಲ್ಲಿ ವಿವಿಧ ಬಗೆಯ ಕಾಡಿನಲ್ಲಿ ಸಿಗುವ..
ನಾವು ಉಪಯೋಗಿಸ ಬಹುದಾದ ಫಲಗಳನ್ನು ಕಟ್ಟುತ್ತಾರೆ...
ಚಪ್ಪೆ ಚೋಳು ಗಡ್ಡೆ.. ಜುಮ್ಮಿನ ಹರಳು... ಗಂಗೆ ಹರಳು...
ಬಹಳ ವೈವಿಧ್ಯ ಮಯವಿರುತ್ತದೆ..
ಅವುಗಳಲ್ಲಿ ಕೆಲವೊಂದು ನಶಿಸುತ್ತಿವೆ ಎನ್ನುವದು ವಿಷಾದನೀಯ..
ಹಬ್ಬದ ಆಚರಣೆಗಳು ಪ್ರಕೃತಿಯನ್ನು ಹೇಗೆ ನೆನಪಿಸುತ್ತವೆ ಅಲ್ಲವಾ?
nice info. Haapppppyyy habba....
Post a Comment