Thursday, September 20, 2012

ನಮ್ಮನ್ಯಾಕ್ ಹಿಂಗ್ ಕರೀತೀರಿ ......????

ಶ್ರೀ ಕೃಷ್ಣ ದೇವರಾಯರು  [ ಚಿತ್ರ ಕೃಪೆ ಅಂತರ್ಜಾಲ]
ಮಹಾ ಕವಿ ಕಾಳಿದಾಸ [ಚಿತ್ರ ಕೃಪೆ ಅಂತರ್ಜಾಲ.]


ಗಣೇಶನ ಹಬ್ಬ ಆಚರಿಸಿ  ಮಾಡಿದ ಹಬ್ಬದ ಅಡಿಗೆ ಗಡದ್ದಾಗಿ  ಹೊಟ್ಟೆ ಸೇರಿತ್ತು,  ದೂರದಲ್ಲಿ  ಯಾವುದೋ ಗಣಪತಿ ಪೆಂಡಾಲ್ ನಿಂದಾ   "ಕರಿಯಾ ಐ  ಲವ್ ಯೂ"         ಅಂತಾ ಹಾಡು ಬರುತ್ತಿತ್ತು, ಹಾಗೆ  ಕುಳಿತಲ್ಲಿಯೇ  ಯಾವುದೋ ಲೋಕ ಹೊಕ್ಕೆ.

ದಾರಿ ದಾರಿ ಬಿಡಿ  ವಿಜಯ ನಗರ  ಸಾಮ್ರಾಟ ಶ್ರೀ ಕೃಷ್ಣ ದೇವರಾಯರು  ಬಿಜಂಗೈಯ್ಯುತ್ತಿದ್ದಾರೆ  ಅಂತಾ ಬೋಪರಾಕ್ ಹಾಕುತ್ತಿದ್ದರು , ನನ್ನ ಕಣ್ಣನ್ನು ನಾನೇ ನಂಬಲು ಆಗುತ್ತಿಲ್ಲಾ, ಅರೆ ಹೌದು  ಸಾಕ್ಷಾತ್   ಶ್ರೀ  ಕೃಷ್ಣ ದೇವರಾಯರ  ಆಗಮನವಾಗುತ್ತಿತ್ತು.  ನಾನೂ ಸಹ ಬರುತ್ತಿದ್ದ ಹಾದಿಯಲ್ಲಿ  ಸಾಷ್ಟಾಂಗ  ಪ್ರಣಾಮ ಮಾಡಿ  ನಿಂತೇ.

 ಆ ದಂಡಿನ ಜೊತೆಯಲ್ಲೇ  ಇನ್ನೊಂದು  ಪಲ್ಲಕ್ಕಿಯಲ್ಲಿ  ಮತ್ತೊಬ್ಬರು ಕುಳಿತಿದ್ದರು  ,  ಮಹಾ ಕವಿ  , ಕಾಳಿಯ ವರ ಪಡೆದ ಮಹಾ ಭಕ್ತ , "ಅಬಿಜ್ಞಾನ ಶಾಕುಂತಲಾ " , "ಮೇಘ ಸಂದೇಶ " "ಕುಮಾರ ಸಂಭವ" ರಚಿಸಿದ "ಮಹಾ ಕವಿ ಕಾಳಿ ದಾಸರು" ಬರುತ್ತಿದ್ದಾರೆ  ಅಂತಾ ಮತ್ತೊಂದು ಪಲ್ಲಕ್ಕಿ ಬಂತು. ಅವರಿಗೂ ಪ್ರಣಾಮ ಸಲ್ಲಿಸಿ ನಿಂತೇ.

ನನ್ನನ್ನು  ಕಂಡ ಇಬ್ಬರೂ  .......  ಯಾರೀ ಮಾನವ , ಎಲ್ಲಿಂದ ಬಂದಾ , ಎಂದು ಅಚ್ಚರಿಪಟ್ಟು,
"ಅಯ್ಯಾ  ನಿನ್ನ  ನಾಮಧೇಯವೇನು, ಎಲ್ಲಿಂದ ಬಂದೆ?"
 ಕೃಷ್ಣ ದೇವರಾಯರು, ಕಾಳಿ ದಾಸರು, ಜೊತೆಯಾಗಿ  ಕೇಳಲಾಗಿ ,

ನಾನು ಇಬ್ಬರನ್ನು ಗೌರವದಿಂದ ಮತ್ತೊಮ್ಮೆ ನಮಿಸಿ
," ಸ್ವಾಮೀ  ನಾನು "ನಿಮ್ಮೊಳಗೊಬ್ಬ "  ಎಂಬ ಹೆಸರಿನವ. ಭಾರತ ದೇಶದ  ಕನ್ನಡನಾಡಿನ  ಮೈಸೂರಿನವ " ಎಂದೇ.
 ಮೈಸೂರು ಎಂಬ ಪದ ಕಿವಿಗೆ ಬಿದ್ದ ತಕ್ಷಣ  ಇಬ್ಬರ ಮುಖದಲ್ಲೂ ನೋವಿನ ಗೆರೆ ಹಾದುಹೋಗಿ. , ಬೇಸರದ ಛಾಯೆಯಿಂದ

"ಅಯ್ಯಾ ಮೈಸೂರಿನವನೇ  ಯಾಕಪ್ಪಾ ಇಲ್ಲಿಗೆ ಬಂದೆ ? , ನಮ್ಮನ್ನು ಇಲ್ಲಿಯೂ  ನೆಮ್ಮದಿಯಾಗಿ ಇಡಲು ಇಷ್ಟವಿಲ್ಲವೇ ? ದಯಮಾಡಿ  ಮೊದಲು  ಇಲ್ಲಿಂದ ತೆರಳು , ಇಲ್ಲದಿದ್ದರೆ   ನಮಗೆ ಬರುವ ಕೋಪದಲ್ಲಿ....... ನಿನಗೆ ಶಿಕ್ಷೆ ನೀಡ ಬೇಕಾದೀತು ಎಂದರು."

ನನಗೂ ಕೋಪ ಬಂದು
''ಅಲ್ಲಾ ಪ್ರಭು  ನಾನು ತಮ್ಮ ಬಗ್ಗೆ ಗೌರವ ದಿಂದ ನಮಿಸಿ  ನಿಂತು , ತಮ್ಮ ಪ್ರಶ್ನೆಗೆ ಉತ್ತರಿಸಿದೇ , ಮೈಸೂರು ಹೆಸರು ಹೇಳಿದ ತಕ್ಷಣ  ತಮಗೇಕೆ ಇಷ್ಟೊಂದು ಸಿಟ್ಟು?, ನಾವೇನು ಮಾಡಿದ್ದೇವೆ''        ಎಂದು ಕೇಳಿದೆ.

ಆಗ ಮತ್ತಷ್ಟು ಬೇಸರದಿಂದ  "ನೀವು ಆಧುನಿಕ ಜನಗಳಪ್ಪಾ  ಯಾರ ಮಾನವನ್ನಾದರೂ ಸುಲಭವಾಗಿ ಕಳೆಯುತ್ತೀರಿ  , ನಮ್ಮದನ್ನು ಕಳೆದಿರುವ ಹಾಗೆ "   ಅಂದರು.

ನನಗೋ ಅಚ್ಚರಿ

   "ಏನು ಸ್ವಾಮೀ  ನಾವು ನಿಮ್ಮ ಮಾನವನ್ನು  ಕಳೆದೆವೆ ? ತಮ್ಮ ಬಗ್ಗೆ ಕನ್ನಡಿಗರು  ಎಷ್ಟೊಂದು ಅಭಿಮಾನ ಇಟ್ಟುಕೊಂಡು  ತಮ್ಮ ಊರಿನ ರಸ್ತೆಗಳಿಗೆ,  ವೃತ್ತಗಳಿಗೆ  , ತಮ್ಮ ಹೆಸರನ್ನು ನಾಮಕರಣ ಮಾಡಿ ತಮ್ಮ ಹೆಸರನ್ನು ಅಜರಾಮರ ಗೊಳಿಸುತ್ತಿದ್ದೇವೆ ,   ಅಂತದ್ದರಲ್ಲಿ  ಸುಮ್ಮನೆ  ಕೋಪಾವೇಶದಿಂದ  ಅಪಾದನೆ ಮಾಡುತ್ತಿದ್ದೀರಿ."  ಎಂದೇ.

ನನ್ನನ್ನು ನೋಡಿ ವಿಷಾದದ  ನಗೆ ನಕ್ಕ ಇಬ್ಬರು

  "ಅಯ್ಯಾ  ಕನ್ನಡಿಗ  ಮೊದಲು ನಮ್ಮ ಹೆಸರನ್ನು  ನಿಮ್ಮ ಪಟ್ಟಣಗಳಲ್ಲಿ  ರಸ್ತೆಗಳಿಗೆ, ವೃತ್ತಗಳಿಗೆ , ಕಟ್ಟಡಗಳಿಗೆ, ಬಸ್ ನಿಲ್ದಾಣಗಳಿಗೆ  ನಾಮಕರಣ ಮಾಡುವುದನ್ನು  ನಿಲ್ಲಿಸಿ ನಮಗೆ ನೆಮ್ಮದಿ ಕೊಡಿ. ನಾವು ಬದುಕಿದ್ದಾಗ  ಕನ್ನಡಿಗರಿಗೆ,ಭಾರತೀಯರಿಗೆ ಯಾವ ಅನ್ಯಾಯವನ್ನೂ ಮಾಡಿಲ್ಲಾ , ಆದರೆ  ನೀವುಗಳು ಮಾತ್ರ ನಾವು  ಬದುಕಿಲ್ಲದಿದ್ದರು  ನಮ್ಮ ಹೆಸರನ್ನು  ನಿಮ್ಮ ಪಟ್ಟಣಗಳಲ್ಲಿ  ರಸ್ತೆಗಳಿಗೆ, ವ್ರುತ್ತಗಳಿಗೆ, ಕಟ್ಟಡಗಳಿಗೆ, ಬಸ್ ನಿಲ್ದಾಣಗಳಿಗೆ  ನಾಮಕರಣ ಮಾಡಿ  ಪ್ರತಿಕ್ಷಣಕ್ಕೂ  ನಿಮ್ಮಿಷ್ಟದಂತೆ ಕರೆದು   ನಮ್ಮ ಮಾನ ಕಳೆಯುತ್ತಾ ನಿತ್ಯವೂ   ಶಿಕ್ಷೆ ನೀಡುತ್ತಿದ್ದೀರ  ,ನಾವೇನು ನಿಮ್ಮ ಬಳಿ ಬಂದು ನಮ್ಮ ಹೆಸರನ್ನು ಇಡಲು  ಬೇಡಿದ್ದೆವೆ  ??   ದಯವಿಟ್ಟು ಅವುಗಳನ್ನು ಅಳಿಸಿ ಹಾಕಿ ನಮಗೆ ನೆಮ್ಮದಿ ನೀಡಿ ಎಂದು  ಕೈ ಮುಗಿದು ಬೇಡುತ್ತೇವೆ" ಎಂದರು.

ನನಗೆ ಏನೂ ಅರ್ಥವಾಗದ  ಮನಸ್ಥಿತಿ  ,

 "ದಯಮಾಡಿ ಸ್ವಾಮೀ  ನಿಮ್ಮ ಹೆಸರನ್ನು ನಾಮಕರಣ ಮಾಡಿದ್ದರ ನಮ್ಮ ಆಪರಾಧ  ಏನೂ ಎಂದು ಅರ್ಥ ಆಗುತ್ತಿಲ್ಲಾ??"  ಎನ್ನಲು.

"ಅಯ್ಯಾ ಮಂಕೆ , ನೋಡು ನಮ್ಮ ಹೆಸರನ್ನು  ಇಟ್ಟಿರುವ  ರಸ್ತೆಗಳಿಗೆ, ವೃತ್ತಗಳಿಗೆ   ನೀವು ಎಲ್ಲರೂ  ದಿನವೂ ಬಳಕೆಯಲ್ಲಿ   ಪ್ರತಿ ಕ್ಷಣ ದಲ್ಲೂ   ಕರೆಯುವ ಹೆಸರು  "ಕೃಷ್ಣ ದೇವರಾಯ ವೃತ್ತಕ್ಕೆ ಕೇಡಿ ಸರ್ಕಲ್ "  ಎಂದೂ, "ಕಾಳಿದಾಸ ರಸ್ತೆಗೆ  ಕೇಡಿ ರಸ್ತೆ"   ಹಾಗಾಗಿ ನಮ್ಮ ಹೆಸರನ್ನು  ನಾವು  ಬದುಕಿದ್ದಾಗ ಯಾವುದೇ ಅಪರಾಧ ಮಾಡದೆ ಇದ್ದರೂ  ನಮ್ಮನ್ನು  ಕೇಡಿ  ಗಳನ್ನಾಗಿ ಗುರ್ತಿಸಿ,  ನಮ್ಮ ಮರ್ಯಾದೆ ತೆಗೆಯುತ್ತಿದ್ದೀರಿ  , ನಿಮಗೆ ಯಾವ ಜನ್ಮದ ಸಿಟ್ಟು ನಮ್ಮಿಬ್ಬರ ಮೇಲೆ"  ಎಂದು  ಅಬ್ಬರಿಸಿದರು.  
ನಾನೂ ಅಚ್ಚರಿಯಿಂದ  ಬೆಪ್ಪಾಗಿ ನಿಂತೇ , 
ಅಷ್ಟರಲ್ಲಿ ನನ್ನ ಹೆಂಡತಿ " ರೀ  ಏಳ್ರೀ , ಇನ್ನೂ ಮಲಗೆ ಇದ್ದೀರಲ್ಲಾ , " ಎಂದು ಎಬ್ಬಿಸಿದಳು, ನಾನೆಲ್ಲಿದ್ದೇನೆ ಎಂದು  ವಾಸ್ತವಕ್ಕೆ ಬರುವಷ್ಟರಲ್ಲಿ ನನ್ನ ಮಗಾ  ಬಂದು "
 "ಅಪ್ಪಾ   ಕೇಡಿ  .ರೋಡಲ್ಲಿ  ಸ್ವಲ್ಪ ಕೆಲ್ಸಾ ಇದೆ  ನಿಮ್ಮ ಗಾಡಿ ತಗೊಂಡು  ಹೋಗ್ತೀನಿ ಅಂದಾ  ............!!!! "ನಾನು ಮತ್ತೆ ಬೆಪ್ಪನಾಗಿ ಶ್ರೀ ಕೃಷ್ಣ ದೇವರಾಯ ರಿಗೂ,  ಕಾಳಿದಾಸರಿಗೂ  ಮನದಲ್ಲೇ  ನೋವಿನಿಂದಾ ಕ್ಷಮೆ ಕೋರಿದೆ.    

"ನಾವು ಹೀಗೆ ನಾಯಿ ಬಾಲ ಡೊಂಕು ಆಲ್ವಾ " ನೀವೇನಂತೀರಿ ??

12 comments:

ಸಿಮೆಂಟು ಮರಳಿನ ಮಧ್ಯೆ said...

ನಿಜ ಬಾಲಣ್ಣಾ...

ಚಂದದ ಮಲ್ಲಿಗೆಯಂಥಹ ಕನ್ನಡ ಇರುವಾಗ...
ಮಧ್ಯ ಮಂಧ್ಯ ಇಂಗ್ಲೀಷ್ ಭಾಷೆಯೇಕೆ ಬೇಕು ?

ನಮ್ಮ ಎಫ್ ಎಂ ಕೇಳಿಬಿಟ್ಟರಂತೂ ನಮ್ಮ ಜೀವನವೇ ಸಾರ್ಥಕವಾಗಿಬಿಡುತ್ತದೆ..!

’ಎಚ್ ಡಿ" ಕೋಟೆ ಅಂತ ಟಿವಿ ವಾಹಿನಿಯಲ್ಲಿ ಬರ್ತಿತ್ತು...

ಇದು ದೇವೆ ಗೌಡ್ರಿಗೆ ಸಂಬಂಧಿಸಿದ್ದು ಅಂತ ಅನ್ನಿಸಿತು
ಬಹಳ ತಲೆ ಕೆಡಿಸಿಕೊಂಡ ಮೇಲೆ ಗೊತ್ತಾಯ್ತು ಅದು "ಹೆಗ್ಗಡ ದೇವನ ಕೋಟೆ" ಅಂತ....

ಇನ್ನು ಕೇಬಿ ಕ್ರಾಸ್ ಅಂತ ಇದೆ... ಏನು ಅಂತ ಗೊತ್ತಿಲ್ಲ...

ನಿಮ್ಮ ವಿಡಂಬನಾ ಬರಹ ನಮ್ಮ ಹುಳುಕನ್ನು ಎತ್ತಿ ತೋರಿಸಿದೆ...

ಗುಬ್ಬಚ್ಚಿ ಸತೀಶ್ said...

ಬಾಲು ಜೀ... ಚೆನ್ನಾಗಿದೆ. ನೆನ್ನೆ ನಮ್ಮಣ್ಣನ ಮನೆಗೆ ಹೋಗಿದ್ವಿ. ಅದು ಬೆಂಗಳೂರಿನ ಎಂಟಿಸ್ ನಗರ. ನಾನು ಇತ್ತೀಚೆಗೆ ಮೊಬೈಲ್ ಬಂದಿದೆಯಲ್ಲ ಅದರ ಹೆಸರಲ್ಲಿ ಆಗಾಲೇ ಬೀದಿ ಹೆಸರಾ? ಎಂದುಕೊಂಡೆ. ಆಮೇಲೆ ಗೊತ್ತಾಯ್ತು ಅದು ಮುತ್ತುರಾಯ ಟೆಂಪಲ್ ಸ್ತ್ರೀಟ್ ಅಂತಾ...

ಕೆಬಿ ಕ್ರಾಸ್ ಅಂದ್ರೆ ಕಿಬ್ಬನಹಳ್ಳಿ ಕ್ರಾಸ್... ಅಂತಾ ಪ್ರಕಾಶಣ್ಣ.

Srikanth Manjunath said...


"ನೀನು ಯಾರು ಅಂದ್ರೆ ಕಾಶ್ಮೀರದ ರಾಜಕುಮಾರ ಅಂತ ಹೇಳಬೇಕು"
"ಆಟೊಂದು ಉದ್ದಕ್ಕೆ ಹೇಳಿದ್ರೆ ಆಗೋಲ್ಲ ಒಸಿ ತುಂಡಾಕು.." ಚಿತ್ರ ಕೆ.ಅರ್. ಕೆ. ದಾಸದಲ್ಲಿ (ಕ್ಷಮಿಸಿ ಕ್ಷಮಿಸಿ ಕವಿರತ್ನ ಕಾಳಿದಾಸದಲ್ಲಿ) ಇರುವ ಸಂಭಾಷಣೆ...
ಹೀಗೆ ಎಲ್ಲದರಲ್ಲೂ ತುಂಡಾಕಿ ತುಂಡಾಕಿ..ಕೆಟ್ಟ ಅರ್ಥಗಳನ್ನೂ ಕೊಟ್ಟು ಬಿಟ್ಟಿದೀವಿ..ನಿಮ್ಮ ಲೇಖನ ಸಕಾಲಿಕವಾಗಿದೆ..ತುಂಡು ಪದ ಉಪಯೋಗಿಸಿ ಕಡೆಗೆ ಅದಕ್ಕೆ ಪೂರ್ತ ಅರ್ಥ ಹುಡುಕಲು ಶಬ್ಧಕೊಶವನ್ನೇ ನೋಡಬೇಕು..ಹಾಗಾಗಿದೆ ಪರಿಸ್ಥಿತಿ..
ನಿಮ್ಮ ಕಲ್ಪನಾ ಲೋಕದ ವಿಹಾರ ಸೊಗಸಾಗಿದೆ ಬಾಲು ಸರ್..ಹಾಗು ತುಂಡುಪದ ಪ್ರಯೋಗದ ಅಪಾಯ ಕೂಡ

ದಿನಕರ ಮೊಗೇರ said...

tumbaa tumbaa urina hesaranna BRITISHARU keDisidaru....
uLidaddanna keDisoke ...naaviddivalla...

eccharikeya lekhana sir...

ಪುಷ್ಪರಾಜ್ ಚೌಟ said...

ಮುಜುಗರದಿಂದಲೇ ಟಿಪ್ಪಣಿ ಮಾಡುತ್ತಿದ್ದೇನೆ. ಬೆಂಗಳೂರಿನ ಇಮ್ಮಡಿಹಳ್ಳಿ ಎನ್ನುವ ಊರಿನಲ್ಲಿ ಕೂತು. ಈ ಊರಿನ ಹೆಸರು ಯಾವ ಕ್ಷಣದಲ್ಲಾದರೂ ಬದಲಾಗಬಹುದು - ಐಡಿ ಹಳ್ಳಿಯಾಗಿ! ತನ್ನ 'ಐಡಿ'ಯನೇ ಕಳಕೊಳ್ಳುವ ಲಕ್ಷಣ ಕಂಡುಬರುತ್ತಿದೆ!

Badarinath Palavalli said...

ನಿಜವಾಗಲು ಇದು ಈವತ್ತು ನಾನು ಓದಿದ ಅತ್ಯುತ್ತಮ ಲೇಖನ.

ದೊಡ್ಡವರ ಹೆಸರು ನಾಮಕರಣ ಮಾಡಿ ಆನಂತರ ಅದನ್ನು ನಾವು ಕರೆಯುವ ರೀತಿಯೇ ಅಸಹ್ಯಕರ.

ಇನ್ನು ಮಹಾತ್ಮ ಹೆಸರಿನ ರಸ್ತೆಗಳು ಪ್ರತಿ ಪಟ್ಟಣದಲ್ಲೂ ಇವೆ. ಅಲ್ಲಿ ವೈನ್ ಸ್ಟೋರ್ಸ್ ಮಸ್ತ ಇರುತ್ತವೆ.

ಯಾವುದೇ ಊರಿನ ಕಥೆಯನ್ನು ಹೀಗೆ ಬರೆದುಕೊಟ್ಟ ನಿಮಗೆ ಶರಣು.

ಗಿರೀಶ್.ಎಸ್ said...

ಆಹಾ.. ಸರ್ ಇದೆ ರೀತಿ ಕನ್ನಡ ಹೆಸರುಗಳನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡಿರುವ ಪುರಾಣಗಳು ಸಾಕಷ್ಟಿವೆ... ಬಸವನಗುಡಿ ರಸ್ತೆಯನ್ನು ಬುಲ್ ಟೆಂಪಲ್ ರೋಡ್ ಎಂದು ಕರೆದಿರುವ ಹಾಗೆ,ಕೆಂಗಲ್ ಹನುಮಂತಯ್ಯ ರಸ್ತೆಯನ್ನು ರೆಡ್ ಸ್ಟೋನ್ ಮಂಕಿ ಫಾತ್ಹರ್ ರೋಡ್ ಅಂದ್ರೆ ಕಷ್ಟ.. ಎಚ್ಚರಿಸುವ ಲೇಖನ...

Anonymous said...

Awaiting more posts!
Welcome to my blog [url=http://www.about-dogs.zoomshare.com/]www.about-dogs.zoomshare.com[/url].

ಜಲನಯನ said...

ಬಾಲು ನಿಜ ನಿಮ್ಮ ಮಾತು, ನಮ್ಮಲ್ಲಿ ಎಲ್ಲದಕ್ಕೂ ಕಿರುನಾಮ ಮಾಡುವ ತೆವಲು ಹತ್ತಿಬಿಟ್ಟಿದೆ... ಎಮ್ಮೆಮ್ ಹಿಲ್ಸ್ ..ಎಮ್ಮೆಯ ಬೆಟ್ತವೇ ಅನ್ನೋಹಾಗಾಗಿ...ಮಲೆ ಮಹದೇಶ್ವರ ಎನ್ನುವುದು ಮರೆತೇ ಹೋಗುತ್ತೆ ಅಲ್ವಾ...
ಎಸ್ ಜೆ ಪಿ ಪಾಲಿಟೆಕ್ನಿಕ್...?? ಇಂದಿನ ಹಲವು ಯುವಕರಿಗೆ ಇದರ ಪೂರ್ಣನಾಮ ಗೊತ್ತಿರ್ಲಿಕ್ಕ...

ಸೀತಾರಾಮ. ಕೆ. / SITARAM.K said...

Dhaawadada aluru venkataraya vruttavu jubilee circle aagide.

Chennabasavaraj said...

ಇನ್ನಾದರೂ ... ಈ ನಮ್ಮ ಜನ ಎಚ್ಚೆತ್ತು, ಬದಲಾಗಬೇಕಿದೆ. ಊರ ಹೆಸರುಗಳಿಗೆ ರಂ ಕುಡಿಸುವ ಮಂದಿ ಅರೆ ಬರೆ ಹೆಸರುಗಳಿಂದ ಕರೆದು ಗೊಂದಲದ ಗೂಡಾಗಿಸಿದ್ದಾರೆ ಬಾಲು ಸರ್.
ಮಲ್ಲೇಶ್ವರಂ, ಶೇಷಾಧ್ರಿಪುರಂ, ಕೃಷ್ಣರಾಜಪುರಂ, ಓಕಳೀಪುರಂ.... ಒಂದೇ ಎರಡೆ.

manjunath said...

ಚೆನ್ನಾಗಿದೆ ಬಾಲು