Monday, September 24, 2012

ಸಿರ್ಸಿ ನೆನಪು ಕಾಡ್ತಾ ಇದೆ.....ಪಯಣ.1 ಬನ್ನಿ ಹೊರಡೋಣ ಸಿರ್ಸಿಗೆ.

ಸಿರ್ಸಿಯಲ್ಲಿ ಸ್ವಾಗತ ನೀಡಿದ ಹೂ 
2012 ರ ಫೆಬ್ರವರಿ  ತಿಂಗಳ ಒಂದು ದಿನ  ಹಾಗೆ ಕಂಪ್ಯೂಟರ್ ಮುಂದೆ ಕುಳಿತಿದ್ದೆ , ನಮ್ಮ "ಸಾಗರದಾಚೆಯ  ಇಂಚರ"  ಬ್ಲಾಗಿನ ಒಡೆಯ ಗುರು ಮೂರ್ತಿ ಹೆಗ್ಡೆ ಚಾಟ್ ಗೆ ಬಂದರೂ , ಅದು ಇದು ಹರಟುತ್ತಾ  ಮಾರ್ಚ್ 11 ರಂದು ತಮ್ಮ ಸಹೋದರನ ವಿವಾಹ ಕಾರ್ಯಕ್ರಮಕ್ಕೆ  ಬರಲು ಪ್ರೀತಿಯ ಆಮಂತ್ರಣ  ನೀಡಿದರು. ಸಿರ್ಸಿಗೆ ಬಂದು ಫೋನ್ ಮಾಡಿ ನಂತರ  ವಿವಾಹ ನಡೆಯುವ "ಕೊಳ್ಗಿ  ಬೀಸ್" ಗೆ  ಬರುವ ದಾರಿ ಹೇಳ್ತೀನಿ, ಅಥವಾ  ಅಲ್ಲಿಂದ ನಿಮ್ಮನ್ನು ಕರೆಸಿ ಕೊಳ್ಳುತ್ತೇನೆ ಅಂತಾ ಬೇರೆ ಹೇಳಿದ್ರೂ. ಬ್ಲಾಗ್ ಲೋಕದಲ್ಲಿ ನಮ್ಮಿಬ್ಬರದು  ಇತ್ತೀಚಿನ ಅಂದರೆ ಒಂದೆರಡು ವರ್ಷಗಳ ಪರಸ್ಪರ ಭೇಟಿ ಆಗಿದ್ರೂ  ಆತ್ಮೀಯತೆ ಬಹಳಷ್ಟಿದೆ.  ಹಿಂದೆ ಅವರು ಕರೆದಿದ್ದ ಒಂದೆರಡು ಕಾರ್ಯಕ್ರಮಗಳಿಗೆ ಕೈಕೊಟ್ಟ ಕೀರ್ತಿ ನನಗಿದ್ದ ಕಾರಣ, ಅವರಿಗೂ  ನಾನು  ಬರುವ ಗ್ಯಾರಂಟೀ ಇರಲಿಲ್ಲ.  ಆದರೆ ಈ ಮಾತನ್ನು ಪ್ರಕಾಶ್ ಹೆಗ್ಡೆ ಗೆ ಹೇಳಿದಾಗ  ನಾನೂ  ಟ್ರೈ ಮಾಡ್ತೀನಿ  ಬಾಲಣ್ಣಾ  ಆದ್ರೆ ನೀವು ಹೋಗಿ ಬನ್ನಿ ಅಂದು ಪ್ರೋತ್ಸಾಹಿಸಿದರು.

ಮನದಲ್ಲಿ ಯೋಚಿಸುತ್ತಾ ನನ್ನ  ಸೋದರತ್ತೆ  ನಾಗಲಕ್ಷ್ಮಿ  ಗೆ ಫೋನ್ ಮಾಡಿ "ನಾಗೂ ಸಿರ್ಸಿಗೆ ಬರ್ತಾ ಇದ್ದೀನಿ ಕಣೆ"  ಅಂದೇ.
 "ಲೋ ದೊಡ್ಡ ಮನ್ಷಾ  ಎಷ್ಟು ವರ್ಷ ನಾನೂ ಕರೆದರೂ ಬರದಿದ್ದವ ಈಗ ಬರ್ತಾ ಇದ್ದೀಯ ಬಾ"  ಅಂತಾ  ಹೇಳಿ ಫೋನ್ ಇಟ್ಟಳು .  ನಾನೂ ಸಹ ಮಾರನೆಯ ದಿನ ಸಿರ್ಸಿ  ಗೆ ಹೋಗಲು  ಬಸ್ಸಿಗೆ ರಿಸರ್ವೇಶನ್   ಮಾಡಿಸಲು ಹೋದೆ.ನಮ್ಮ ಮನೆಯ ಬಳಿ ಇರುವ  ಕೌಂಟರ್ನಲ್ಲಿ  ಹೋಗಿ ವಿಚಾರಿಸಿದೆ, ಸಿರ್ಸಿಗಾ ಸಾರ್  ಇರೋ ಎರಡು ಗಾಡಿನೂ ಲಡಾಸು  , "ನಮ್ಮನ್ನ ಬೈಕೋಬೇಡಿ   ಸಾರ್   ರಾತ್ರಿ ಹತ್ತುವರೆಗೆ  ಮೈಸೂರು ಎಲ್ಲಾಪುರ  ಗಾಡಿಗೆ ಕೊಡ್ತೀನಿ , ಇದ್ದದ್ರಲ್ಲಿ ಸುಮಾರಾಗಿದೆ" , ಅಂತಾ ಹೇಳಿ ಕಿಟಕಿ ಪಕ್ಕದ ಸೀಟ್  ಕಾಯ್ದಿರಿಸಿದ . ಹಾಗು ಹೀಗೂ ದಿನಗಳು ಕಳೆದು  ಹೊರಡುವ ದಿನ ಬಂತು.
ಚಿತ್ರ ಕೃಪೆ  ಕೆ.ಎಸ .ಆರ್.ಟಿ .ಸಿ. ವೆಬ್ 


ರಾತ್ರಿ ಸರಿಯಾಗಿ ಬಸ್ ನಿಲ್ದಾಣದಲ್ಲಿ    ಲಡಾಸ್ ಬಸ್ಸಿನ  ಹುಡುಕಾಟದಲ್ಲಿ ತೊಡಗಿದೆ.  ಬಸ್ ನಿಲ್ದಾಣದ  ಪ್ಲಾಟ್ ಫಾರಮ್ಮಿನ  ಬಳಿ ಬಂದ ನನಗೆ  ಅಚ್ಚರಿ   ಹೊಚ್ಹ ಹೊಸ  ರಾಜ ಹಂಸ ಬಸ್ಸೊಂದು   ಯಲ್ಲಾಪುರ ಬೋರ್ಡ್ ತಗಲಿಸಿಕೊಂಡು  ನಿಂತಿತ್ತು. ಕಂಡಕ್ಟರ್  ಬಳಿ ಹೋಗಿ ನನ್ನ ಟಿಕೆಟ್ ತೋರಿಸಿ ಒಳಗೆ ತೂರಿಕೊಂಡು  ನನ್ನ ಸೀಟ್ ನಲ್ಲಿ  ಲಗೇಜ್ ಇಟ್ಟು . ಕೆಳಗೆ ಇಳಿದು ಕಂಡಕ್ಟರ್ ಬಳಿ ಮಾತಿಗೆ ತೊಡಗಿದೆ. "ಇದೇನ್ರೀ  ಹಳೆ ಬಸ್ಸು ಇಲ್ವಾ?"  ಅಂದೇ "ಇಲ್ಲಾ ಸಾರ್ ಈ ಗಾಡಿ ಲೈನಿಗೆ ಈಗ ಎರಡೂ ಕಡೆ ಹೊಸ ಬಸ್ಸಿದೆ , ನಮಗೂ ಸಾಕಾಗಿ ಹೋಗಿತ್ತು ಜನಗಳ ಕೈಯಲಿ ಬೈಗಳ ಕೇಳಿ , ಪುಣ್ಯಕ್ಕೆ ಹೊಸ ಬಸ್ಸು ಕೊಟ್ಟರು. ಒಂದುವಾರದಿಂದ ಹೊಸ ಬಸ್ಸು   ಶುರುಆಗಿದೆ. ಆರಾಮಿದೆ ನೀವು ಬೇಕಾದ್ರೆ ಮಲಗ ಬಹುದು"  ಅಂದರು. ಹೊಚ್ಹ ಹೊಸ ಬಸ್ಸಿನಲ್ಲಿ  ಪಯಣಿಸುವ ಯೋಗ ನನ್ನದಾಗಿತ್ತು. ರಾತ್ರಿ ಹತ್ತೂವರೆಗೆ  ಹೊರಟ  ಬಸ್ಸು  ತುಂಬಿ ತುಳುಕುತ್ತಿತ್ತು.


ಕತ್ತಲಿನ ಬಸ್ಸು  ನಿದ್ದೆ ಮಾಡಲು ಪ್ರಯತ್ನಿಸಿದೆ. ನನ್ನ ಪಕ್ಕ ಇದ್ದ ಒಬ್ಬ ಟೆಕ್ಕಿ ಮೊಬೈಲಿನಲ್ಲಿ ತನ್ನ ಗೆಳತಿಯೊಡನೆ   ನನಗೆ ಕೇಳಿಸುವಷ್ಟು  ಪಿಸುಮಾತಿನಲ್ಲಿ   ಸಲ್ಲಾಪದಲ್ಲಿ ತೊಡಗಿದ , ಇನ್ನು ನಿದ್ದೆಗೆ ಕಲ್ಲುಬಿತ್ತು.  ಚಲಿಸುತ್ತಿದ್ದ ಬಸ್ಸಿನಲ್ಲಿ  ಊರುಗಳ ದರ್ಶನ  ಮಾಡುತ್ತಾ  ಸಾಗಿದೆ.  ಶ್ರೀ ರಂಗಪಟ್ಟಣ ,  ಪಾಂಡವಪುರ  ರೈಲು ನಿಲ್ದಾಣ, ಕೆ.ಆರ್.ಪೇಟೆ,  ಚನ್ನರಾಯ ಪಟ್ಟಣ,  ಅರಸೀಕೆರೆ, ರಾತ್ರಿ  ಒಂದು ಘಂಟೆಗೆ , ಅಲ್ಲೇ ಸ್ವಲ್ಪ ಹೊತ್ತು ನಿಂತ ಬಸ್ಸಿನಿಂದ ಇಳಿದು ಬಾಯಿ ತೊಳೆದು ಸ್ವಲ್ಪ ಕಾಫಿ ಕುಡಿದೆ. ಮನಸಿಗೆ  ಹಿತವಾಯ್ತು   ನಂತರ    ಕಡೂರು, ಬೀರೂರು, ತರೀಕೆರೆ,  ಭದ್ರಾವತಿ, ಶಿವಮೊಗ್ಗ,ತಲುಪಲು  ಸಹ ಪ್ರಯಾಣಿಕ  ಮೊಬೈಲಿನಲ್ಲಿ ಕಿರಿ ಕಿರಿ ಮಾಡಿ ಶಿವಮೊಗ್ಗ ದಲ್ಲಿ ಇಳಿದು ಹೋಗಿದ್ದ. ಪುಣ್ಯಾತ್ಮ ತನ್ನ ಜನ್ಮದ  ಆಸೆಯನ್ನೆಲ್ಲಾ  ಸುಮಾರು ಘಂಟೆಗಳ ಕಾಲ ಮೊಬೈಲ್ ಫೋನಿನಲ್ಲಿ  ಪೂರೈಸಿಕೊಂಡಿದ್ದ. ಜೊತೆಗೆ  ನನ್ನ ನಿದ್ದೆಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದ . ಶಿವಮೊಗ್ಗದಲ್ಲಿ  ಮತ್ತೆ ಜನಗಳ ದಂಡು  ಬಸ್ಸಿಗೆ ಲಗ್ಗೆ ಹಾಕಿತು, "ಇವರೆಲ್ಲಾ  ಸಿರ್ಸಿ ಜಾತ್ರೆಗೆ ಹೊರಟವರು ಸಾರ್ " ಅಂದರು ಒಬ್ಬರು, ಆ ಗಲಾಟಿ ಯಲ್ಲಿ  ನಿದ್ದೆಗೆ ಮತ್ತೆ ಕತ್ತರಿ ಬಿತ್ತು . ಸರಿ ಮತ್ತೆ   ಊರುಗಳ ಎಣಿಕೆ ಪ್ರಾರಂಭ ಆಯಿತು. ಸಾಗರ ದಾಟಿ  ತಾಳಗುಪ್ಪ ರೈಲು ನಿಲ್ದಾಣ ಕಂಡೊಡನೆ  ಕೊಳಲು ಬ್ಲಾಗಿನ  ಒಡೆಯ ಡಾಕ್ಟರ್ ಕೃಷ್ಣ ಮೂರ್ತಿ  ಯವರ ನೆನಪಾಯಿತು. ಸರೀ ರಾತ್ರಿಯಲ್ಲಿ  ತೊಂದರೆ ಕೊಡುವುದು ಸರಿಯಲ್ಲ ವೆಂದು   ಮುಂದುವರೆದೆ. ಮಬ್ಬಾದ ಬೆಳಕಿನಲ್ಲಿ  ಸಿದ್ದಾಪುರ  ನನ್ನನ್ನು ಸ್ವಾಗತಿಸಿತು.   ಬೆಳಿಗ್ಗೆ ಸರಿಯಾಗಿ ಐದು ಕಾಲಿಗೆ ಸಿರಸಿಯ  ಹೊಕ್ಕ ಬಸ್ಸಿನ ಕಂಡಕ್ಟರ್  " ಯಾರುಸಾರ್   ಜೂ ಸರ್ಕಲ್ ಬೇಗ ಬನ್ನಿ "  "ನೋಡ್ರೀ ಇಲ್ಲಿ ಬಿಟ್ರೆ  ಜಾತ್ರೆ  ಬಸ್ ಸ್ಟ್ಯಾಂಡ್  ಮಾತ್ರಾ"    ಎಂದು ಕೂಗಿ ಕರೆದರು . ನಾನೂ ತಡಬಡಾಯಿಸಿ  ಜೂ ಸರ್ಕಲ್ಲಿನಲ್ಲಿ    ಇಳಿದೆ.  ಇಳಿದ ತಾಣದಲ್ಲಿಯೇ  ಕಣ್ಣಿಗೆ ಬಿದ್ದದ್ದು  ನಾನು ತಲುಪಬೇಕಿದ್ದ  "ಗಂಗಾ ವನ  ಎಸ್ಟೇಟು"   ಸರಿ ಅಂತಾ ಇಳಿದು  ಹೊರಟೆ.
 ಎಸ್ಟೇಟ್ ಗೆ ಸಾಗಿದ್ದ ಹಾದಿ 

 ಕಾಲು ಹಾದಿಯಲ್ಲಿ  ಆಗ ತಾನೇ ಬಿಸಿಲಿನ ಕಿರಣ  ಭೂಮಿಗೆ ಬೀಳುವ ಸಮಯವಾಗಿತ್ತು , ಹಕ್ಕಿಗಳ ಚಿಲಿಪಿಲಿ ಶಬ್ದ  , ತಂಗಾಳಿ   ಮನಸಿಗೆ ಸಂತಸ ತಂದಿತ್ತು.  ಹಾಡನ್ನು ಗುನುಗುತ್ತಾ  ಇಳಿಜಾರಿನಲ್ಲಿ   ಸಾಗಿದೆ. ಹಾದಿಯ ಎರಡೂ  ಬದಿಯಲ್ಲಿ  ಹಸಿರು  ತೋಟಗಳ  ಅಡಿಕೆಮರಗಳು  ಹೊಯ್ದಾಡುತ್ತಿದ್ದವು .  ಸೋದರತ್ತೆ  ಮನೆ  ಸುಮಾರು ಒಂದೂ ವರೆ ಕಿ.ಮೀ ಇತ್ತು.  ., ಮನೆಯ ಬಳಿ ಬಂದು ಬಾಗಿಲ ಬಳಿ ನಿಂತೇ  ಬಾಗಿಲು ಬಡಿಯುವ ಮುಂಚೆ  ಬಾಗಿಲ ತೆಗೆದ ಸೋದರತ್ತೆ   ಬಾರೋ  ಮಹಾರಾಜ ಬಂದ್ಯಾ  !!! ಎಷ್ಟು ವರ್ಷಾ ಆಗಿತ್ತು ನಿನ್ನ ನೋಡಿ? ಅಂತಾ ಉಪಚಾರ ಮಾಡಿ  ಬಿಸಿ ಬಿಸಿ ಕಾಫಿ ಕೊಟ್ಟು. ಸ್ವಲ್ಪ ಹೊತ್ತು ಮಲಗು ಅಂದಳು.  ..............ಆಗ ವೇಳೆ  ಬೆಳಿಗ್ಗೆ ಆರು ಘಂಟೆ ಆಗಿತ್ತು. ..............................!!!!

8 comments:

Srikanth Manjunath said...

ಆಹಾ...ಬಾಯಿ ಚಪ್ಪರಿಸುತ್ತಿದ್ದೇನೆ...
ದಿಲ್ಲಿಯ ಅಮೋಘ ದರ್ಶನ ಮಾಡಿಸಿದ ನೀವು..ಈಗ ಜಲಪಾತಗಳ ರಾಜಧಾನಿ ಸಿರಸಿಯ ಪಯಣ ಉಣಬಡಿಸುತ್ತಿರುವುದು ಆಹಾ..ಸಂತಸ ಪದಗಳಿಗೆ ಎಟುಕೊಲ್ಲ...
ರಸ್ತೆ ಸಾರಿಗೆಯ ಪಯಣ ಮುದ ತಂದಿತ್ತು..
ಆರಂಭ ಸೂಪರ್ ಆಗಿದೆ..ಕಾಯುತ್ತಿದ್ದೇವೆ..ನನ್ನ ಮುಂದಿನ ವರುಷದ ಸಿರ್ಸಿ ಪಯಣಕ್ಕೆ ಒಳ್ಳೆಯ ಮಾರ್ಗದರ್ಶನ ಸಿಗುತ್ತಿದೆ..

ಚಿನ್ಮಯ ಭಟ್ said...

ಬಾಲು ಸರ್...
ನಮ್ಮೂರಿನ ಬಗ್ಗೆಯೇ ಬರೆಯುತ್ತಿದ್ದೀರಿ..ಓದಿ ಖುಷಿಯಾಯ್ತು..ಅಂದು ನೀವಿಳಿದ ಜ್ಯೂ ಸರ್ಕಲ್ ಹತ್ತಿರ ಇಂದು ಸುಂದರ ಉದ್ಯಾನವನವೊಂದು ನಿರ್ಮಾಣವಾಗುತ್ತಿದೆ...ಮುಂದಿನ ಭಾಗಕ್ಕಾಗಿ ಕಾಯ್ತಿರ್ತೇನೆ....ಮದುವೆಯ ಊಟದಲ್ಲಿರ ಬಹುದಾದ ಹೊಸ ಪದಾರ್ಥಗಳ ಪಟ್ಟಿಯನ್ನು ನಿರೀಕ್ಷಿಸುತ್ತಿದ್ದೇನೆ(ಅಪ್ಪೆ ಹುಳಿ,ಮಾವಿನಕಾಯಿ ಗೊಜ್ಜು,ತಂಬುಳಿ ಹೀಗೆ) ...ಹಾ ಹಾ..

Unknown said...

ಹಂ ...ನಮ್ಮ ಊರಿನ ಬಗ್ಗೆ ಬರೆದಿದ್ದೀರಿ !!!..ಇಷ್ಟವಾಯಿತು .

ಅಂದಹಾಗೆ' ಕೊಳಗಿಬೀಸ್ 'ಅಂದಾಗ ನೆನಪಾಗುತ್ತೆ ನೋಡಿ ..ಗೋಳಿಯ ಯಕ್ಷಗಾನ ನಾಟಕದ ಸೊಗಡು ..

ಊರಿನ ಚಿತ್ರಣ ಸೊಗಸಾಗಿದೆ .ಇಷ್ಟವಾಯಿತು

Ittigecement said...

ಬಾಲಣ್ಣಾ...

ನೀವು ಹೋದಾಗ

ಅಲ್ಲಿ ಮದುವೆ ನೋಡಿದಿರಿ.... ಜಾತ್ರೆ ನೋಡಿದಿರಿ...

ಸಂಗಡ ಕ್ಯಾಮರಾ ಬೇರೆ ಜೊತೆಗಿತ್ತು...

ವಾಹ್ !!

ಶ್ರೀಕಾಂತ್ ಹೇಳಿದ ಹಾಗೆ ಬಾಯಿ ಚಪ್ಪರಿಸುತ್ತಿದ್ದೆವೆ...

ಜೈ ಹೋ ಬಾಲಣ್ಣಾ....

Badarinath Palavalli said...

"ಪುಣ್ಯಾತ್ಮ ತನ್ನ ಜನ್ಮದ ಆಸೆಯನ್ನೆಲ್ಲಾ ಸುಮಾರು ಘಂಟೆಗಳ ಕಾಲ ಮೊಬೈಲ್ ಫೋನಿನಲ್ಲಿ ಪೂರೈಸಿಕೊಂಡಿದ್ದ."

ಅಹಹ್ಹಹ್ಹಾ ಎಂತ ಮಾತು ಸಾರ್.

ಮೈಸೂರಿನಿಂದ ಸಿದ್ದಾಪುರದವರೆಗಿನ ಊರುಗಳ ವೈವಿದ್ಯತೆ ಗಮನಿಸಿದರೆ ಸಾರ್, ಅಜಗಜಾಂತರ.

ಯಾಕೋ ಈ ಸರಣಿಯೂ ರೋಚಕವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ, ಜಮಾಯಿಸಿಬಿಡಿ.

ಅಂದ ಹಾಗೆ ಎಸ್ಟೇಟಿಗೆ ತಲುಪೋ ದಾರಿಯ ಚಿತ್ರ ಒಂದು ಕವಿತೆಗೆ ದಾರಿಯಾಯಿತು:
"ಈ ಮಣ್ಣು ಹಾದಿಯ ಕೇಳಿದೆ
ಮರೆತೆಯ ಹೆಜ್ಜೆಗಳನು?
ಹಾದಿ ಉತ್ತರಿಸಿತು ಗೆಳೆಯ
ಇಲ್ಲಿ ಸುರಿಯುತ್ತಲ್ಲ ಮಳೆ
ಅಳಿಸುತ್ತೆ ಅಳಿದುಳಿದ ನೆನಪುಗಳ"

ಗಿರೀಶ್.ಎಸ್ said...

ಮುಂದೆ ಏನಾಯ್ತು ಅಂತ ಆದಷ್ಟು ಬೇಗ ಬರೀರಿ.....ಯಾಕೋ ಫೋಟೋಗಳು ಕಮ್ಮಿ ಆದವು ಅನ್ನಿಸ್ತು ಸರ್...ಮುಂದಿನ ಸಂಚಿಕೆಯಲ್ಲಿ ಬರಬಹುದೇನೂ ಅನ್ನೋ ನಿರೀಕ್ಷೆಯಲ್ಲಿ...

shivu.k said...

ಬಾಲು ಸರ್,
ಸಿರಸಿಯ ಪ್ರಯಾಣದ ನೆನಪುಗಳು ಕುತೂಹಲಕಾರಿಯಾಗಿದೆ...ನಿರೂಪಣೆಯಲ್ಲಿ ಕಣ್ಣ ಮುಂದೆ ಚಿತ್ರಗಳು ತೇಲಿಬರುತ್ತಲಿವೆ..

manu said...

ಅಯ್ಯೋ ಅರ್ದಕ್ಕೆ ನಿಲ್ಲಿಸಿದಹಾಗಿದೆ ಆಮೇಲೆ ಏನಾಯ್ತು ಹೇಳಿ
ಮನೋಹರ್ ಬಿ ಎಸ್ಸ್