Sunday, April 25, 2010

ಮೈಸೂರು ಬೆಂಗಳೂರು ಪಯಣದ ಹಾದಿಯಲ್ಲಿ !!!ನೋಡಿಸ್ವಾಮಿ ನಾವಿರೋದೆ ಹೀಗೆ!!!ಭಾಗ -೦೧ಬ್ಲಾಗಿನ ಬರಹಗಳ ಹುಚ್ಚು ಹತ್ತಿದ ನನಗೆ ನನ್ನ ಸುತ್ತಲಿನ ಪ್ರಪಂಚ ನೋಡುವ ರೀತಿಯೇ ಬದಲಾಗಿ ಹೋಗಿದೆ. ನೋಡಿದ್ದನ್ನು ನಿಮಗೆ ತಲುಪಿಸಬೇಕೆಂಬ ಹಂಬಲ ಹೆಚ್ಚಾಗಿ ನನ್ನ ತಲೆಗೆ ಹಾಗು ಕ್ಯಾಮರಾಗೆ ಬಿಡುವಿಲ್ಲದ ಕೆಲಸ!!! ಬಹಳ ದಿನಗಳಿಂದ ನಾವು ಓಡಾಡುವ ಹೆದ್ದಾರಿಯಲ್ಲಿನ ವಾಹನ ಚಾಲಕರ ಬವಣೆ ,ಅಡಿಗಡಿಗೆ ಚಾಲನೆ ಮಾಡುವ ವಾಹನ ಚಾಲಕರು ಎದುರಿಸುವ ಸಮಸ್ಯೆ ಗಳು, ಹೆದ್ದಾರಿಯಲ್ಲಿನ ಅನಿರೀಕ್ಷಿತ ಘಟನೆಗಳು , ಇವುಗಳಬಗ್ಗೆ ಲೇಖನ ಬರೆಯಬೇಕೆಂಬ ಹಂಬಲ ಹಲವುಭಾರಿ ಅನ್ನಿಸಿತ್ತು.ಅದಕ್ಕೆ ಕಾಲ ಕೂದಿಬಂದು ಈ ಲೇಖನ ರೂಪುಗೊಂಡಿದೆ.ಮೊನ್ನೆ ಶನಿವಾರ ೨೪/೦೪/೨೦೧೦ ರಂದು ಕಾರ್ಯನಿಮಿತ್ತ  ಕುಟುಂಬ ದೊಡನೆ ಕಾರಿನಲ್ಲಿ  ಮೈಸೂರಿನಿಂದ ಬೆಂಗಳೂರಿಗೆ  ಪಯಣಶುರುವಾಯಿತು ,ಕಾರಿನ ಚಾಲಕ ಮಿತ ಭಾಷಿ !! ಸುಮ್ಮನೆ ಎಫ್.ಎಂ ನಲ್ಲಿ  ಹಾಡು ಹಾಕಿಕೊಂಡು ಚಾಲನೆ ಶುರುಮಾಡಿದ ,  ಹಾಗೆ  ಮನೆಯವರಜೊತೆ  ಮಾತಾಡುತ್ತಾ  ಮುಂದೆಸಾಗಿದ್ದ ನಾನು ಸ್ವಲ್ಪ ಸಮಯ ಕಳೆದು ಹಿಂದೆ ತಿರುಗಿ ನೋಡಿದರೆ ಎಲ್ಲ ನಿದ್ರಾದೇವಿಯ ವಶವಾಗಿದ್ದರು!!.ಇನ್ನೇನು ಮಾಡ್ಲಿ ಅಂತ ಕ್ಯಾಮರ ತೆಗೆದು ಕ್ಲಿಕ್ಕಿಸಲು ಸಿದ್ದತೆ ಮಾಡಿದೆ ,ಇಲ್ಲೇನು ಸಿಗ್ತದೆ ಅಂತ ಕ್ಯಾಮರ ತೆಗಿತೀರಿ ಸಾರ್ !!ಬರಿ ದರಿದ್ರ ಬಸ್ಸು,ಲಾರಿ  ಕಾರೆ ಸಿಗ್ತವೆ !!!ಅಂತ ಡ್ರೈವರ್ ಹೇಳಿ ನನ್ನನ್ನು ಚಕಿತ ಗೊಳಿಸಿದ .ನೋಡೋಣ ತಡೀರಿ ಅಂತ ಹೇಳಿ ಅಂತ ನನ್ನ ಕ್ಯಾಮರ ಕ್ಲಿಕ್ಕಿಸಲು  ತಯಾರಿ ಮಾಡಿದೆ.ಏನೆ ಹೇಳಿ , ಚಲಿಸುವ ಕಾರಿನಲ್ಲಿ  ಸುಮಾರು ಅರವತ್ತರಿಂದ ಎಂಭತ್ತು ಕಿ.ಮಿ. ವೇಗದಲ್ಲಿ ಕ್ಯಾಮರ ಕ್ಲಿಕ್ಕಿಸುವುದು ಸವಾಲೇ ಸರಿ.!!!! ನಿಮಗೆ ಏನೂ ಸ್ವಾತಂತ್ರ ಇರಲ್ಲ ಕ್ಲಿಕ್ಕಿಸಿದ ಎಲ್ಲ ಚಿತ್ರಗಳೂ ಚೆನ್ನಾಗಿಬರಲ್ಲಾ!!! ಆದರೂ ನನ್ನ ಹಠ ಬಿಡದೆ ಮುಂದುವರೆಸಿದೆ.ನಂತರ ನೋಡಿದ್ರೆ ಆಶ್ಚರ್ಯಕರ ಸಂಗತಿಗಳು ಸೆರೆಯಾಗಿ ಹರಡಿಕೊಂಡವು!!!.
ಮುಂಜಾನೆ  ನಿರ್ಜನ ವಾಗಿದ್ದ ರಸ್ತೆಯಲ್ಲಿ ಜನಜೀವನ ನಿಧಾನವಾಗಿ ತೆರೆದುಕೊಳ್ಳುತಿತ್ತು!!.ರಸ್ತೆಯ ಅಕ್ಕಪಕ್ಕದ ಹಳ್ಳಿಯ ಜನ ರಸ್ತೆಯಲ್ಲಿ ಅಡ್ಡಾಡಿ ದಿನದ ಪ್ರಾರಂಭ ಮಾಡುತ್ತಿದ್ದರು.[ಚಿತ್ರ -೦೨].ಬಸ್ಸೂ, ಲಾರಿ,ಬೈಕು ಇತ್ಯಾದಿ ಬೆಳಗಿನ ಹುಮ್ಮಸ್ಸಿನಲ್ಲಿ ಸಾಗಿದ್ದವು.ಜನಗಳು ಇದಕ್ಕೂ ನಮಗೂ ಸಂಭಂದ ಇಲ್ಲವೆಂದು ತಮ್ಮ ಲೋಕದಲ್ಲಿ ಜೀವನ ಶುರುಮಾಡಿದ್ದರು.ಮುಂಜಾವಿನ ಭರಾಟೆಯಲ್ಲಿ ಹಕ್ಕಿಗಳ ಕಲರವ  ಮರೆಯಾಗಿ ದಿನ ಪ್ರಾರಂಭವಾಗಿತ್ತು.ರೈತರು  ತಮ್ಮ ಎತ್ತಿನ ಗಾಡಿ ಹಾಗುಎತ್ತು ಗಳೊಡನೆ  ಹೆದ್ದಾರಿಯಲ್ಲಿ ಸಾಗುತ್ತ ತಮ್ಮ ಹೊಲಗಳ ಕಡೆಗೆ ಸಾಗಿದ್ದರು.[ಚಿತ್ರ-೦೩]. !....ಹಾಗೆ ಸಾಗಿದ್ದ ನಮಗೆ ಮದ್ದೂರು ಬಂದಿದ್ದೆ ಗೊತ್ತಾಗಲಿಲ್ಲ !ಮದ್ದೂರಿನಲ್ಲಿ ದನಗಳ ಜಾತ್ರೆ ಇತ್ತೂ ಅಂತ ಕಾಣುತ್ತೆ ರಸ್ತೆಯ ಅಕ್ಕ ಪಕ್ಕದಲ್ಲಿ ದನಗಳನ್ನು ಸಾಲಾಗಿ ಕಟ್ಟಿಹಾಕಿದ್ದರು.ದನಗಳ ಮಾರುವವರ ಹಾಗು ಕೊಳ್ಳುವವರ ಮಧ್ಯೆ ವ್ಯವಹಾರ ಜಾರಿಯಲ್ಲಿತ್ತು.ಮಾರಾಟವಾದ ಕೆಲವು ದನಗಳು ಮಿನಿ ಲಾರಿಯೇರಿ ಪಯಣ ಬೆಳೆಸಲು ಸಿದ್ದವಾಗಿದ್ದವು.[ಚಿತ್ರ-೦೪]ದನಗಳಿಗೆ ತಂದಿದ್ದ ಒಣ ಹುಲ್ಲು ರಸ್ತೆಯಲ್ಲಿ ಚೆಲ್ಲಾಡಿತ್ತು.ರೈತನ ಬಾಳಿನ
ಒಂದು ಅಧ್ಯಾಯ ರಸ್ತೆಯಲ್ಲಿ ಅನಾವರಣ ಗೊಂಡು, ರಸ್ತೆಗಳುಮನುಷ್ಯನ ಜೀವನದಲ್ಲಿ ಯಾವ ಪಾತ್ರ  ವಹಿಸುತ್ತಿವೆ ಎಂಬ ವಿಚಾರ ಗೋಚರವಾಗಿ ಅಚ್ಚರಿಯಾಯಿತು.
ಮುಂದೆ ಸಾಗಿದ ನಮಗೆ ದನಗಳ ಸಾಲು ಕಾಣಿಸಿ ಹಳ್ಳಿಯ ದಿನಗಳ ನೆನಪು ಮೂಡಿಸಿ ಮನಸ್ಸು ಹಿಂದಿನ ದಿನಗಳಿಗೆ ಜಾರಿತ್ತು. ದನಗಳ ಮಾರಾಟದಲ್ಲಿ ಒಂದು ವಿಶೇಷ ವಿದೆ  ದನಗಳ ಮಾರುವವರು ಕೊಳ್ಳುವವರು ಮಾರಾಟದ ವ್ಯವಹಾರ ಖುದುರಿಸಲು ಮಾತಿನಮೂಲಕ ವ್ಯವಹರಿಸದೆ ಪರಸ್ಪರ ಹಸ್ತ ಲಾಘವ ನೀಡಿ ಪರಸ್ಪರರ ಕೈಗಳನ್ನು ಬಟ್ಟೆಯಿಂದ ಮುಚ್ಚಿಕೊಂಡು ಬೆರಳುಗಳ ಸ್ಪರ್ಶದ ಸನ್ನೆಯಿಂದ ದನಗಳ ಮಾರುವ ಬೆಲೆ ನಿರ್ಧರಿಸುತ್ತಾರೆ.ನೀವು  ಪಕ್ಕದಲ್ಲೇ ನಿಂತಿದ್ದರೂ ಕೂಡ ಅಲ್ಲಿ ನಡೆಯುವ ಈ ವ್ಯವಹಾರ
ಗೊತ್ತಾಗುವುದಿಲ್ಲ!!ಕೊನೆಗೆ ಒಪ್ಪಿಗೆ ಯಾದ ಬೆಲೆ ನಿರ್ಧಾರ ವಾದ ನಂತರ ಅಲ್ಲಿ ನಡೆದ ಈ ಮಾರಾಟ ಅರಿವಾಗುತ್ತದೆ.ರಾಸುಗಳ[ದನಗಳ] ಬೆಲೆ ಅವುಗಳ ವಯಸ್ಸು ,ಎಷ್ಟು ಹಲ್ಲುಗಳಿವೆ ,ಯಾವ ತಳಿ,ಯಾವ ಕಡೆಯ [ಊರಿನ]ಯದು ,ಕೊಂಬಿನ ಆಕಾರ ಎಲ್ಲವು ಬೆಲೆನಿಗದಿಯಲ್ಲಿ ಗಣನೆಗೆ ಬರುತ್ತವೆ,ಇಂದು ಒಂದು ಜೊತೆಯ ದನಗಳ ಬೆಲೆ ಸುಮಾರು ೧೦,೦೦೦ ದಿಂದ ಉತ್ತಮ ತಳಿಗೆ ಸುಮಾರು ೨೦೦೦೦೦ [ಎರಡು ಲಕ್ಷ ]ದವರೆಗೆ  ಇರುವುದಾಗಿ ತಿಳಿದು ಬಂತು.ಕೊಂಡ ರೈತರು ತಮ್ಮ ಹೊಸ ರಾಸುಗಳೊಂದಿಗೆ ತಮ್ಮ ಊರಿನೆಡೆಗೆ ಪಯಣ ಬೆಳೆಸಿದ್ದರು[.ಚಿತ್ರ ..೦೫ ]
ಹಾಗೆ ಮುಂದೆ ಬಂದ ನಮಗೆ ಎಲ್ಲಿಂದಲೋ ಒಂದು ಖಾಸಗಿ ಬಸ್ಸು ಅಡ್ಡಬಂದು ನಮ್ಮ ಡ್ರೈವರ್ ತಕ್ಷಣ ಬ್ರೇಕ್ ಹಾಕಿದ ![ಚಿತ್ರ ೦೬]ನೋಡಿಸಾರ್ ಹೆಂಗೆ ನುಗ್ಗಿದ ಸ್ವಲ್ಪ ಎಡವಟ್ಟು ಆದರೂ ಗೊತ್ತಲ್ಲಾ ಸಾರ್ ಅಂದಿದ್ದ !! ಹೌದು ಸಣ್ಣ ರಸ್ತೆಯಿಂದ ಹೆದ್ದಾರಿಗೆ ಬರುವ ಮೊದಲು ಈ ಪುಣ್ಯಾತ್ಮ ನಿಂತು ನೋಡಿ ಬರಬೇಕಾಗಿತ್ತು  ಆದ್ರೆ ಅದಕ್ಕೆ ತಾಳ್ಮೆ ಇಲ್ಲದೆ ನುಗ್ಗಿ ಅಡ್ಡಾದಿಡ್ಡಿ ಚಲಿಸಿದ್ದ ಹಾಗೆ ಅತ್ತ ಕಡೆ ಇಂದ ಮಿನಿಲಾರಿ ಸಹ ಹೀಗೆ ನುಗ್ಗಿತ್ತು ಯಾರಿಗೂ ಸಂಚಾರಿ ನಿಯಮಗಳ ಪಾಲನೆಗೆ ವೇಳೆ ಇರಲಿಲ್ಲ .ಹಾಗು ಇರಬೇಕಿದ್ದ ಸಂಚಾರಿ ಪೋಲಿಸಿನವರು ಕಾಣೆ ಯಾಗಿದ್ದರು.ಮದ್ದೂರು ನಗರ ಬಿಟ್ಟು  ಮುಂದೆ ಬಂದ ನನಗೆ ದಾರಿಯ ತಿರುವಿನಲ್ಲಿ ಒಂದು ಹೋರ್ಡಿಂಗ್ ಕಾಣಿಸಿತು ಅರೆಬೆತ್ತಲ ರೂಪದರ್ಶಿ ಬೆಡಗಿಂದ ಗಮನ ಸೆಳೆದಳು[ಚಿತ್ರ-೦೭]
.ಅಲ್ಲ ಈ ತಿರುವಿನಲ್ಲಿ ಈ ಹೋರ್ಡಿಂಗ್ ವಾಹನ ಚಾಲಕರ ಗಮನ ಸೆಳೆದು ಅಪಘಾತ ಆಗಲ್ವ!!! ಅನ್ನಿಸಿತು.ಪಕ್ಕದಲ್ಲಿ ನಧಿ  ಮುಂದೆ ತಿರುವು ಅದರಲ್ಲಿ ಈ ಹೋರ್ಡಿಂಗ್ ಬೇರೆ , ಯಾವ ಪುಣ್ಯಾತ್ಮ ಇದಕ್ಕೆ ಅವಕಾಶ ಕೊಟ್ಟನೋ ಕಾಣೆ.ಒಟ್ಟಿನಲ್ಲಿ ಈಹೋರ್ಡಿಂಗ್ ನಲ್ಲಿನ ಬಾಲೆ ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದು ಸುಳ್ಳಲ್ಲ
.ಹಾಗು ಹೀಗೂ ಗೊಂಬೆಗಳ ನಗರ ಚೆನ್ನಪಟ್ಟಣಕ್ಕೆ ಬಂದು ತಲುಪಿದ ನಮಗೆ ಸ್ವಾಗತ ನೀಡಿದ್ದು ಅದೇ ಅಡ್ಡ ದಿಡ್ಡಿ ಟ್ರಾಫಿಕ್ ಊರು ಪ್ರಾರಂಭ ವಾಗುತ್ತಿದಂತೆ ಎದುರಿನಿಂದ  ಜೋರಾಗಿ ಬಂತು ಒಂದು ಟ್ರಾಕ್ಟರ್!!! ಅದರಪಕ್ಕದಲ್ಲಿ ಸಾಗಿತ್ತು [ಚಿತ್ರ-೦೮]ರೇಷ್ಮೆಗೂಡಿನ ಮೂಟೆಗಳು ಹಾಗು ನಾಲ್ಕು ಜನರು ಕೂತಿದ್ದ ಸಣ್ಣ ಆಪೆ ಕಾರ್ಗೋ ಆಟೋ !!!ಇಲ್ಲೂಸಹ  ಯಾರಿಗೂ ನಿಯಮದ ಅರಿವಿಲ್ಲ ಹೇಗೋ ಹಾಗೆ ಅಡ್ಡಾ ದಿಡ್ಡಿ ಚಾಲನೆ ನಮಗೂ ಇದಕ್ಕೊ ಸಂಭಂದ ವಿಲ್ಲ ಎನ್ನುವ ಸಂಚಾರಿ ಪೋಲಿಸು,ತಾನು ತಂದ ರೆಷ್ಮೆಗೂದಿಗೆ ಎಷ್ಟು ಲಾಭ ಬಂದೀತುಎನ್ನುವ ಲೆಕ್ಕಾಚಾರದಲ್ಲಿ ಆಟೋದಲ್ಲಿನ ರೈತ !!ಹಾಗಾಗಿ ಯಾರಿಗೂ ಯಾರೂ ಉತ್ತರ ಹೇಳಬೇಕಾಗಿಲ್ಲ  ಅವರ ಜೀವನ ಅವರಿಗೆ ಜೀವನದ ಪಯಣವೂ ಸಹ ಹಾಗೆ ಅಲ್ವೇ ನಾವು ನಡೆದದ್ದೇ ಹಾದಿ ಅನ್ನಿಸಿತ್ತು.
ಮುಂದೆ ಬಸ್ಸಿನ ಹಂಗಿಲ್ಲದೆ ಹಳ್ಳಿಯಿಂದ ಪಟ್ಟಣಕ್ಕೆ ಯಾವ ವಾಹನ ಸಿಕ್ಕರೂ ಸರಿಯೇ ನಾವು ಪಯಣಿಸಲು ಸಿದ್ದ ಅಂತ ಮಿನಿ ಲಾರಿಯ ಹಿಂಭಾಗ ಹೋರಾಟ ಜನರ ಗುಂಪು ಕಾಣಿಸಿತು[ಚಿತ್ರ -೦೯].ನಾವೆನ್ಮಾಡೋದು ನಮ್ಮೂರಿಗೆ ಬಸ್ಸಿಲ್ಲ ,ಇದ್ರೂ ನಿಲ್ಲಿಸೋದಿಲ್ಲ ,ಇತ್ಯಾದಿ ಕಾರಣಗಳು ಕೇಳಿ ಬಂದರೂ ಹಳ್ಳಿ ಜನಕ್ಕೆ ಇವತ್ತಿಗೂ ಕಡಿಮೆಬೆಲೆಯಲ್ಲಿ ಊರು ತಲುಪಿಸಲು ಇಂತಹ ವಾಹನಗಳ  ಸೇವೆ ನಡೆದೇ ಇದೆ.ತನ್ನ ಜೊತೆ ತನ್ನ ವಸ್ತುಗಳನ್ನು  ಪಟ್ಟಣಕ್ಕೆ ತರಲು ಇದು ತುಂಬಾ ಸಹಾಯಕ ಅನ್ನುವ ವಾದ ಇವರದು!!.ಹಳ್ಳಿಯ ಮದುವೆಗಳಲ್ಲಿ  ಇಂಥಹ ವಾಹನಗಳ ಉಪಯೋಗ ಹೆಚ್ಚು ,ಕರ್ನರೆ [ಹಳ್ಳಿಗಳ ಕಡೆ ಮದುವೆನಂತರ ಬಂಧು ಮಿತ್ರರಿಗೆ ಏರ್ಪಡಿಸುವ  ಮಾಂಸಹಾರಿ ಭೋಜನ ]ಊಟಕ್ಕೆ ಇಂತಹ  ಲಾರಿಗಳಲ್ಲಿ ಜನರನ್ನು ತುಂಬಿಕೊಂಡು ಹೋಗಿ ಮಾಂಸದ ಊಟ ಹಾಕುವುದು ಹಳ್ಳಿ ಮದುವೆಗಳ  ವಿಶೇಷ .
ಸ್ವಲ್ಪ ದೂರದಲ್ಲಿ ನಮಗೆ ಇಂತಹದೆ ಮತ್ತೊಂದು ವಾಹನ ಸಿಕ್ಕಿತು[ ಚಿತ್ರ -೧೦] ಸ್ಪೀಡಾಗಿ  ಚಲಿಸುತ್ತಿದ್ದ ವಾಹನದಲ್ಲಿ ನಿಂತು ಪಯಣಿಸುತ್ತಿದ್ದ ಈ ಗುಂಪು ವಾಹನದ ರಭಸಕ್ಕೆ ಜೋಲಿ ಹೊಡೆಯುತ್ತಿದ್ದರು.ಹೀಗೆ ಓಡಾಡುವುದು ಸಾಮಾನ್ಯ ವಾಗಿ ಕಂಡುಬಂದರೂ ಯಾರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ .ಅಪಘಾತವಾದಾಗ ಮಾತ್ರ  ದೊಡ್ಡ  ಸುದ್ದಿಯಾಗಿ ಬ್ರೆಕಿಂಗ್ ನ್ಯೂಸ್ ಅಂತ ಟಿ.ವಿ.ಗಳಲ್ಲಿ ಮಿನುಗಿ ಮರೆಯಾಗುತ್ತದೆ. ನಮ್ಮ ಪಯಣ ಇನ್ನೂ ಇದೆ  ಹಲವಾರು ವಿಚಾರಗಲಿದೆ ಏನ್ಮಾಡ್ಲಿ ಈಗ ನಿದ್ದೆ ಬರ್ತಾ ಇದೆ ಮುಂದಿನ ಕಂತಿನಲ್ಲಿ ಇನ್ನೂ ಸ್ವಲ್ಪ ಹೇಳ್ತೀನಿ ಅಲ್ಲಿವರ್ಗೆ ಒಂದು ಬ್ರೇಕ್ !!!!!!!!!ಸ್ವಲ್ಪ ಕಾಯ್ರೀ ಪ್ಲೀಸ್ !!!

2 comments:

ಸೀತಾರಾಮ. ಕೆ. said...

nice experience & photos too.

ಜಲನಯನ said...

Balu bahala chennagide chitra mattu Bangalore-Mysore na NICE kathe...