Sunday, April 28, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .೦೧ . ಬನ್ನಿ ಹೊರಡೋಣ ದಾಂಡೇಲಿ ಗೆ.





ದಾಂಡೇಲಿ ಗೆ ಸ್ವಾಗತ.


ಕಳೆದ ವರ್ಷ  ದೆಹಲಿಯ ಪ್ರವಾಸದ ಬಗ್ಗೆ ಬರೆದದ್ದು ನಿಮಗೆ ನೆನಪಿದೆ, ಆ ಸಮಯದಲ್ಲಿ  ದೆಹಲಿಯಲ್ಲಿ ನನ್ನ ಕೆಲಸ ಮುಗಿಸಿ ಹೊರಡುವ ಹಿಂದಿನ ದಿನ ನನ್ನ ಪತ್ನಿ  ಫೋನ್ ಮಾಡಿ  " ರೀ  ಏನ್ ಸಮಾಚಾರ , ಮನೆಗೆ ಬರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!!"  ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ  ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ.



ವೇಣು ಗೋಪಾಲ್ 

ಶ್ರೀಧರ್ ನಾಗಭೂಷಣ್  


ಅರೆ ಇದೇನಿದು ಅಂತಾ ಅಚ್ಚರಿಯಾದರೂ  ಒಮ್ಮೊಮ್ಮೆ ನಮಗೆ ಅರಿವಿಲ್ಲದಂತೆ ಇಂತಹ ಪ್ರವಾಸ ಬರುತ್ತವೆ.  ಸರಿ ದೆಹಲಿಯ ಬೇಸಿಗೆಯ  ಬಿಸಿಯಲ್ಲಿ ಬಸವಳಿದ ನನಗೆ ಅನಿವಾರ್ಯವಾಗಿ ಇಂತಹ ಪ್ರವಾಸ ಅಗತ್ಯವಿತ್ತು, ಬೆಂಗಳೂರಿಗೆ ದೌಡಾಯಿಸಿದೆ.   ಕಟ್ ಮಾಡಿದ್ರೆ  ನಮ್ಮ ಪಯಣ ದಾಂಡೇಲಿಯ ಕಡೆ ಹೊರಟಿತ್ತು. ,  ಮತ್ತೆ ದಿಬ್ಬಣ ಹೊರಟಿತ್ತು, ಮೂವರು ಅಳಿಯಂದಿರ  ಕುಟುಂಬಗಳು.  ಮೊದಲನೆಯ ಅಳಿಯ ನಾನು ಎರಡನೆಯ ಅಳಿಯ ಶ್ರೀಧರ್ , ಮೂರನೆಯ ಅಳಿಯ ವೇಣುಗೋಪಾಲ್ ,  ಮೂವರು  ಸಹ ಸಮಾನ  ಹವ್ಯಾಸಗಳು  ಇರುವ ಕಾರಣ ಯಾವುದೇ ಗೊಂದಲ ವಿಲ್ಲದೆ ಹೊರಟೆವು, ಎರಡು ಕಾರುಗಳು ಬೆಂಗಳೂರಿನಿಂದ  ಹೊರಟು  ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ   ಸಾಗಿದವು.ಬೆಂಗಳೂರು, ನೆಲಮಂಗಲ, ತುಮಕೂರು, ಶಿರ, ಹಿರಿಯೂರು ,  ಚಿತ್ರದುರ್ಗ, ದಾವಣಗೆರೆ, ಹರಿಹರ ,ರಾಣಿಬೆನ್ನೂರು , ಹಾವೇರಿ, ಧಾರವಾಡ , ಹಳಿಯಾಳ, ದಾಂಡೇಲಿ  ೪೭೭ ಕಿ.ಮಿ. ಪ್ರಯಾಣ, ಸುಮಾರು ೭.ರಿಂದ ೮ ಘಂಟೆ  ಅವಧಿಯ ಪ್ರಯಾಣ,  ಆದರೆ  ಬೆಳಿಗ್ಗೆ ಏಳು ಘಂಟೆಗೆ ಹೊರಟ ನಾವು  ಮಧ್ಯಾಹ್ನ  ಒಂದುವರೆಗೆ  ದಾಂಡೇಲಿ ಜಂಗಲ್ ರೆಸಾರ್ಟ್ ತಲುಪಬೇಕಾಗಿತ್ತು.   ಮಿಂಚಿನಂತೆ ಎರಡೂ ಕಾರುಗಳು ಹೊರಟವು.   ಪಯಣದ ಅವಧಿಯಲ್ಲಿ ನನ್ನ ಕ್ಯಾಮರಾ ಕೈಗೆ ಬಂತು ದಾರಿಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಅಂತಹ ವಿಶೇಷವೇನೂ ಕಾಣಲಿಲ್ಲ ಆದರೆ  ಚಿತ್ರದುರ್ಗ ಹತ್ತಿರ ಬಂದಂತೆ  ನಮ್ಮನ್ನು ಸ್ವಾಗತ ಮಾಡಿದ್ದು, ಗಾಳಿಯಂತ್ರ .



ಗಾಳಿಯಂತ್ರ 

ಹೌದು ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿನಾಲ್ಕರಲ್ಲಿ  ಪಯಣಿಸುವಾಗ ಚಿತ್ರದುರ್ಗಕ್ಕೆ ಮೊದಲು ನಿಮ್ಮನ್ನು ಸ್ವಾಗತಿಸಲು ಈ ಗಾಳಿಯಂತ್ರಗಳ  ಸಮೂಹವೇ ನಿಮಗೆ ಕಾಣ ಸಿಗುತ್ತವೆ, ಐತಿಹಾಸಿಕ ಕೋಟೆಯ ಈ ನೆಲದಲ್ಲಿ ಇಂದು  ಚಿತ್ರದುರ್ಗದ ಸುತ್ತಮುತ್ತ  ಇರುವ ಗುಡ್ಡ  ಬೆಟ್ಟಗಳ ಮೇಲೆ ಗಾಳಿ ಯಂತ್ರಗಳದ್ದೆ  ಕಾರು ಬಾರು.  ಹಾಗೆ ಮುಂದೆ ಚಲಿಸುತ್ತಾ  , ಸಾಗಿದ ನನಗೆ ಮುಂದೆ ದಾವಣಗೆರೆ  ಕ್ರಮಿಸಿದಾಗ ಜ್ಞಾಪಕಕ್ಕೆ ಬಂದಿದ್ದು , ಇಲ್ಲಿನ ಹತ್ತಿ ಗಿರಣಿಗಳ ನೆನಪು "ಕರ್ನಾಟಕದ  ಮ್ಯಾಂಚೆಸ್ಟರ್ " ಎಂದು ಕರೆಯುತ್ತಿದ್ದ ದಿನಗಳು, ಇಂದು ಆ ಊರು  "ಕರ್ನಾಟಕದ  ಮ್ಯಾಂಚೆಸ್ಟರ್ "    ಎಂಬ ಅರ್ಥವನ್ನು ಕಳೆದುಕೊಂಡು  ಇತಿಹಾಸ ಸೇರುವ ಹಾದಿಯಲ್ಲಿರುವುದಾಗಿ ತಿಳಿದು  ನೋವಾಯಿತು. ಇಲ್ಲಿನ  ಡಿ .ಸಿ . ಎಂ.  ಸೂಟಿಂಗ್    ಆ ದಿನಗಳಲ್ಲಿ ಬಹಳ ಪ್ರಸಿದ್ದಿ ಹೊಂದಿದ್ದು   ಇಂದು  ಹೇಳಹೆಸರಿಲ್ಲದಂತೆ ಆಗಿದೆ.  


ಯಂತ್ರಗಳ ಚಿತ್ತಾರ 

ನೆನಪಿನ ವಾಸ್ತವತೆಗೆ  ಹಿಂತಿರುಗಿ ಬಂದ ನನಗೆ  ನಮ್ಮ ಕಾರಿನ ಮುಂದೆ ಚಲಿಸುತ್ತಿದ್ದ ಎರಡು ದೊಡ್ಡ ಲಾರಿಗಳಲ್ಲಿ  ಟ್ರಾಕ್ಟರ್ ಗಳನ್ನೂ ಕೊಂದೊಯ್ಯುತ್ತಿರುವುದು ಕಣ್ಣಿಗೆ ಬಿತ್ತು , ಪ್ರತೀ ಲಾರಿಯಲ್ಲೂ  ಐದೈದು  ಟ್ರ್ಯಾಕ್ಟರ್ ಗಳನ್ನೂ ವ್ಯವಸ್ತಿತವಾಗಿ ನಿಲ್ಲಿಸಲಾಗಿತ್ತು, ನೋಡಲು  ಅಂದವಾಗಿ ಕಾಣುತ್ತಿತ್ತು,  ಚಲಿಸುತ್ತಿದ್ದ ವಾಹನಗಳ ನಡುವೆ ಇದೊಂದು ವಿಶೇಷವಾಗಿ ಗಮನ ಸೆಳೆಯುತ್ತಿತ್ತು.   ಜೊತೆಗೆ ಟ್ರಾಕ್ಟರ್  ಭಾರವನ್ನು ಹೊತ್ತ ಲಾರಿಗಳು ಬುಸುಗುಡುತ್ತಾ  ಸಾಗಿ ಹೊಗೆಯನ್ನು ಉಗುಳುತ್ತಿದ್ದವು. 


ವಾಹನಗಳ  ನಡುವೆ 


ಹಾಗೂ ಹೀಗೂ  ಹರಿಹರ  ದಾಟಿ  ಹೋರಟ ನನಗೆ  ಹೆದ್ದಾರಿಯಲ್ಲಿ ಲಾರಿಗಳ ಕಾರುಬಾರು ಗೋಚರಿಸಿತು, ಯಾವುದೇ ಶಿಸ್ತಿಲ್ಲದೆ  ತಮಗಿಷ್ಟಬಂದಂತೆ ಚಾಲಕರು  ಲಾರಿಗಳನ್ನು ಚಲಿಸುತ್ತಿದ್ದುದು  ಕಂಡು ಬಂತು, ಈ ನಡುವೆ ಹರ ಸಾಹಸ ಪಟ್ಟು  ಲಾರಿಗಳ ನಡುವೆ  ನುಸುಳಿ ದಾರಿ ಮಾಡಿಕೊಂಡು ಸಾಗಬೇಕಾದ  ಅನಿವಾರ್ಯ  ಕಾರುಗಳದ್ದಾಗಿತ್ತು ಇಲ್ಲಿ ಕಾರು ಚಾಲನೆ ಮಾಡುವ ಚಾಲಕ ಬಹಳ  ಜಾಗರೂಕನಾಗಿ ಕಾರ್ ಚಾಲನೆ ಮಾಡಬೇಕಾಗುತ್ತದೆ, ಅದೇರೀತಿ ಈ ಲಾರಿಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ   ಸಾಗಿದ್ದವು ಕಾರುಗಳು. 



 ಕನ್ಮಿಣಿಕೆ  ನೋಟ 


ರಾಣಿಬೆನ್ನೂರ್ ಹೊರವಲಯ ದಾಟಿ ಮುಂದೆ ಹೊರಟ  ನಮಗೆ ದಾರಿಯಲ್ಲಿ  ಹಟಕ್ಕೆ ಬಿದ್ದಂತೆ  ವೇಗವಾಗಿ  ಅಕ್ಕ ಪಕ್ಕ ದಲ್ಲಿ  ಸಾಗುತ್ತಿದ್ದ  ಎರಡು ಬಸ್ಸುಗಳು ಕಂಡವು, ಇವರಿಬ್ಬರ  ಜೂಟಾಟ ದ ಪರಿಣಾಮ ಸುಮಾರು ಕಿ.ಮಿ.ಗಳ ದೂರ ಯಾವ ವಾಹನಕ್ಕೂ ಇವುಗಳನ್ನು ದಾಟಿ   ಮುಂದೆ ಚಲಿಸಲು ಸಾಧ್ಯವಾಗಲಿಲ್ಲ  , ಇದೆ ನೋಟವನ್ನು ನೋಡುತ್ತಿದ್ದ ನನಗೆ ಕೆಲವು ಜಾಗಗಳಲ್ಲಿ  "ಕನ್ಮಿಣಿಕೆ" [mirage ] ಗೋಚರಿಸಿತು  ಇವು ವಾಹನ ಚಾಲಕರನ್ನು ಕೆಲವೊಮ್ಮೆ ಗೊಂದಲಕ್ಕೆ ದೂಡುತ್ತವೆ, ಹೀಗೆ ಸಾಗಿತ್ತು, ನಮ್ಮ ಪಯಣ. 


ರಸ್ತೆಯಲ್ಲಿ ಚಿತ್ತಾರ ಮೂಡಿಸಿದ  ವಾಹನಗಳ ಸಾಲು.

 ಅಕ್ಕ ಪಕ್ಕದ ನೋಟ ಕಾರಿನ  ವೇಗಕ್ಕೆ ತಕ್ಕಂತೆ  ಚಲಿಸುತ್ತಿದ್ದ ಕಾರಣ ಅಷ್ಟಾಗಿ  ಚಿತ್ರಗಳನ್ನು ತೆಗೆಯಲು ಕಷ್ಟವಾಗಿತ್ತು, ಹಾಗಾಗಿ ಮುಂದಿನ ನೋಟಗಳು ಮಾತ್ರ ನನ್ನ ಕ್ಯಾಮರದಲ್ಲಿ ಸೇರೆಯಾಗುತ್ತಿದ್ದವು. ಧಾರವಾಡ  ಸಮೀಪ ಒಂದು ಜಂಕ್ಷನ್ ನಲ್ಲಿ  ಹಲವು ವಾಹನಗಳು  ಹೆದ್ದಾರಿಯಲ್ಲಿ  ಚಕ್ರವ್ಯೂಹದ ಚಿತ್ತಾರ ಮೂಡಿಸಿದ್ದವು. ಈ ವ್ಯೂಹವನ್ನು ಭೇದಿಸಿ  ಮುನ್ನಡೆದ ನಾವು, ಧಾರವಾಡ ತಲುಪಿದೆವು, ಇಲ್ಲಿಗೆ ರಾಷ್ಟ್ರೀಯ  ಹೆದ್ದಾರಿ ೪ ರ ಒಂದು ಹಂತದ ಪಯಣ ಮುಗಿದಿತ್ತು, 



ಹೆದ್ದಾರಿಯಲ್ಲಿ ಹೀಗೂ   ಆಗುತ್ತೆ.


ಧಾರವಾಡ ಬಂದೊಡನೆ ನೆನಪಾದದ್ದು ಬೇಂದ್ರೆ ಅಜ್ಜ, ಸಾದನ ಕೇರಿ,  ಮಿಶ್ರ  ಪೇಡ , ಇತ್ಯಾದಿ  ಆದರೆ ನಮಗೆ ವೇಳೆಯೇ ಇಲ್ಲದ ಕಾರಣ, ಹಳಿಯಾಳ ರಸ್ತೆಯಲ್ಲಿ ಚಲಿಸಿದೆವು,  ಧಾರವಾಡ ಬಿಟ್ಟು ಸ್ವಲ್ಪ ದೂರ ಬಂದೊಡನೆ,  ರಾಷ್ಟ್ರೀಯ ಹೆದ್ದಾರಿಯಿಂದ  ಉರುಳಿಬಿದ್ದ  ಲಾರಿಯ ದರ್ಶನ ವಾಯಿತು, ನಾವು ಅಲ್ಲಿಗೆ ತೆರಳುವ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿತ್ತು, ಯಾರಿಗೂ ಅಪಾಯ ಆಗಿರುವ ಬಗ್ಗೆ ಅಲ್ಲಿ ಯಾವುದೇ  ಸನ್ನಿವೇಶ ಕಂಡುಬರಲಿಲ್ಲ , ಆದರೆ ಲಾರಿಗೆ  ಬಹಳಷ್ಟು ಜಖಂ ಆಗಿತ್ತು. 




ಹಸಿರ ಕಮಾನು ನಡುವೆ ಸಾಗಿದ ರಸ್ತೆ.



ಸ್ವಲ್ಪ ಮುಂದೆ ಬಂದೊಡನೆ ಹಳಿಯಾಳ ರಸ್ತೆಯಲ್ಲಿ ಹಸಿರ  ಕಮಾನು ಧರಿಸಿದ   ರಸ್ತೆ ಗೋಚರಿಸಿತು,  ತಂಪಾದ ವಾತಾವರಣ , ಬೀಸಿದ್ದ ತಂಗಾಳಿ ಪಯಣಕ್ಕೆ ಮುದ  ನೀಡಿತ್ತು. ಹಸಿರ ತಬ್ಬಿದ ರಸ್ತೆಯಲ್ಲಿ  ಸಾಗಿದ ನಾವು ದಾಂಡೇಲಿ ಅರಣ್ಯದ ಹೆಬ್ಬಾಗಿಲು   ಹಳಿಯಾಳ ತಲುಪಿದೆವು, 





ಹಳಿಯಾಳದಿಂದ  ದಾಂಡೇಲಿ  ರಸ್ತೆಯ ನೋಟ.

ಹಳಿಯಾಳದಿಂದ   ದಾಂಡೇಲಿ ಗೆ ತೆರಳುವ  ರಸ್ತೆಯ ಎರಡೂ ಬದಿಯಲ್ಲಿ ಕಾಡಿನ ನೋಟ ಸಾಮಾನ್ಯ , ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನಗಳ   ದಟ್ಟಣಿ ನೋಟ ಸಾಮಾನ್ಯವಾದರೆ  ಈ ರಸ್ತೆಯಲ್ಲಿ  ಸ್ವಲ್ಪ ಕಡಿಮೆ ದಟ್ಟಣಿ  ಇತ್ತು.  ಕಾಡನ್ನು ಕಂಡೊಡನೆ  ಮನದಲ್ಲಿ  ಆಸೆ ಜಾಸ್ತಿಯಾಗಿ   ಯಾವುದಾದರೂ ವನ್ಯ ಜೀವಿ  ದಾರಿಯಲ್ಲಿ ಕಾಣಬಹುದೇ ಎಂಬ ನಿರೀಕ್ಷೆ ಇತ್ತು, ಆದರೆ ಉ  ಹೂ  ಯಾವ ವನ್ಯ ಜೀವಿಯ  ಪದರ್ಶನ ಆಗಲಿಲ್ಲ. ಹಕ್ಕಿಗಳ ಕಲರವ ಕೇಳಲಿಲ್ಲ ,


 
ಹಳಿಯಾಳ  ತಪಾಸಣ ಕೇಂದ್ರ 



ಬರೀ  ಬೋರ್ಡುಗಳಲ್ಲಿ  ಅಲ್ಲಿನ ಜೀವ  ವೈವಿಧ್ಯತೆಯ ದರ್ಶನ ಮಾಡಿದ ನಾವು, ಹಸಿರ ಕಾಡಿನಿಂದ ತೂರಿಬಂದ ತಂಗಾಳಿಯನ್ನು  ಆಸ್ವಾದಿಸುತ್ತಾ   ಚಲಿಸಿದೆವು. ಹಸಿರ ದೃಶ್ಯ ವೈಭವ ನೋಡುತ್ತಾ   ಬಂದೆ ಬಿಟ್ಟೆವು  ದಾಂಡೇಲಿ ಗೆ  , ಆಗ ಸಮಯ ಎರಡು ಘಂಟೆ ಆಗಿತ್ತು. 





ದಾಂಡೇಲಿ ಗೆ  ಸ್ವಾಗತ.

ಅಲ್ಲಿ ಕಾಣಿಸಿದ್ದು "ವೆಲ್ಕಂ ಟು ದಾಂಡೇಲಿ"  ಎನ್ನುವ ಕಮಾನು.............................................ಸ್ವಾಗತ ಕೋರಿತು,  ಆಗಲೇ ಮನಕ್ಕೆ ಬಂತು  ದಾಂಡೇಲಿ ಗೆ  ಅದರ ಹೆಸರು ಹೇಗೆ ಬಂತು .....??? ಎನ್ನುವ   ಪ್ರಶ್ನೆ....!!     

  

Sunday, April 21, 2013

ಕಬಿನಿ ಕಾಡಿನಲ್ಲಿ ನಾನು. ......೦೨ ಟೈಗರ್ ಕಾಲಿಂಗ್

ನಮಗೆ ಉಗಿದು ಕಾನನದತ್ತ  ತೆರಳಿದ  ಅಮ್ಮ ಮಗು 


ಕಣ್ಣಾಮುಚ್ಚಾಲೆ  ಆಟ ನೋಡುತ್ತಿದ್ದ ತಾಯಿ ಆನೆ  "ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ  ಮರಿಯಾನೆ ಜೊತೆ  ಕಾಡಿನೊಳಗೆ ತೆರಳಿತು. .ಆನೆಯಿಂದ ಉಗಿಸಿಕೊಂಡ  ನಾವು ಮುಂದೆ ಹೊರಟೆವು, ಕಾಡಿನಲ್ಲಿ  ನಮ್ಮ ಕಣ್ಣುಗಳು ವನ್ಯ ಜೀವಿಗಳ ಹುಡುಕಾಟ ನಡೆಸಿದ್ದವು, ಆದರೆ ಯಾವುದೇ ಕಾಡಿನಲ್ಲಿ ವನ್ಯಜೀವಿಗಳು ಮನುಷ್ಯರನ್ನು ಸ್ವಾಗತಿಸಲು  ಹಲ್ಲು ಕಿರಿಯುತ್ತಾ ನಿಂತಿರುವುದಿಲ್ಲ , ನಮ್ಮ ಅದೃಷ್ಟದ  ಮೇಲೆ ಅವು ಕಾಣಲು ಸಿಗುತ್ತವೆ.ಅದೃಷ್ಟವಿಲ್ಲದಿದ್ದರೆ , ನೀವು ದಿನಗಟ್ಟಲೆ  ಕಾಡಿನಲ್ಲಿ ಅಲೆದರೂ  ಏನೂ ಸಿಗದೇ ನಿರಾಸೆ ಆಗುವ ಸಂಭವ ಇರುತ್ತದೆ. ನಮಗೆ ಸ್ವಲ್ಪ ಅಲ್ಲಲ್ಲಾ ಜಾಸ್ತಿ ಅದೃಷ್ಟ ಇತ್ತು  ಬಹಳಷ್ಟು ಕಡೆ ನಮಗೆ ವನ್ಯ ಜೀವಿಗಳ ನಿರಂತರ ನೋಟ ಸಿಗುತ್ತಿತ್ತು.


ಕಾಡೆಮ್ಮೆಗಳ  [ಕಾಟಿ ಗಳ ]ಬಳಗ 







 ಕಾಡಿನಲ್ಲಿ ನಮ್ಮ ಪಯಣ ಸಾಗಿತ್ತು, ಕೆಲವೆಡೆ ಸಾರಂಗ, ಜಿಂಕೆ , ನವಿಲು ಮುಂತಾದ ಜೀವಿಗಳ ದರ್ಶನ ಆಯಿತು, ಆದರೆ ಮನದಲ್ಲಿನ ಬಯಕೆ   ಬೇರೆಯೇ  ಇತ್ತು, ಹೌದು ಬಹಷ್ಟು ಸಾರಿ ಇಲ್ಲಿ ಬಂದಿದ್ದರು ಮೊದಲ ಸಲ ಮಾತ್ರ ನಮಗೆ ಹುಲಿ ಸಿಕ್ಕಿತ್ತು, ಆ ನಂತರ ನಮಗೆ ಅದರ ದರ್ಶನ ಸಿಕ್ಕಿರಲಿಲ್ಲ. ಆದರೆ ಈ ಸಾರಿಯಾದರೂ ದರ್ಶನ ಸಿಗಲಿ ಎಂಬ ಆಸೆಯಿತ್ತು. ನಮ್ಮ ಜೊತೆಯಲ್ಲಿದ್ದವರು  ವಾಹನ ಚಾಲಕ ರಾಜು ಅವರನ್ನು  ಟೈಗರ್ ಟ್ಯಾಂಕ್ ಹತ್ತಿರ ವಾಹನ ಕೊಂಡೊಯ್ಯಲು ಕೋರಿದರು. ಅದರಂತೆ ಅಲ್ಲಿಗೆ ನಮ್ಮ ವಾಹನ ತೆರಳಿತು. ಅಲ್ಲಿ ಹೋದಾಗ ನಮಗೆ ಕಂಡಿದ್ದು ಒಂದು ಹಿಂಡು ಕಾಡೆಮ್ಮೆಗಳ ಬಳಗ ಇವುಗಳನ್ನು ಕಾಟಿ ಅಂತಾನೂ ಕರೆಯಲಾಗುತ್ತದೆ.  ಹುಲಿ  ಕೆರೆಯ[ ಟೈಗರ್ ಟ್ಯಾಂಕ್ ] ಸಮೀಪದಲ್ಲಿ ಬೀಡು ಬಿಟ್ಟಿದ್ದವು.ಕ್ಯಾಮರ ಜೂಮ್ ಮಾಡಿನೋಡಿದಾಗ ಪಕ್ಕದಲ್ಲಿ ಒಂಟಿ  ಕಾಟಿ ಎತ್ತಲೋ ನೋಡುತ್ತಾ ಕಾವಲು ಕಾಯುತ್ತಿತ್ತು.




ಗುಂಪನ್ನು ಕಾಯುತ್ತಿರುವ ಸೈನಿಕ 
 
ನಿಶ್ಯಬ್ದದ ಕಾಡು,  ಬಿಸಿಲ ತಾಪ ಕಡಿಮೆಯಾಗಿ ಸಂಜೆಯ ತಣ್ಣನೆ ಗಾಳಿ, ಬೀಸುತ್ತಿತ್ತು, ಸನಿಹದಲ್ಲಿ ಕಾಟಿ  ಗುಂಪಿನಲ್ಲಿ ಚಟುವಟಿಕೆ  ಗರಿಕೆದರಿತ್ತು. ಸನಿಹದ ಮರದ ನೆರಳಲ್ಲಿ ತಾಯಿ ಮಗುವಿನ ಅಕ್ಕರೆಯ  ಪ್ರೀತಿಯ ವಿನಿಮಯ ನಡೆದರೆ, ಮತ್ತೊಂದೆಡೆ  ಎರಡು ಜೀವಿಗಳು ಮಿಲನ ಮಹೋತ್ಸವಕ್ಕೆ ಅಣಿಯಾಗುತ್ತಿದ್ದವು . ಆದರೆ ........................ಅಷ್ಟರಲ್ಲಿ  ತೋರಿ ಬಂತು  .................. ಆ ದ್ವನಿ. ಎಲ್ಲೆಡೆ ಸ್ಥಬ್ಧ ,............. ನಿಶ್ಯಬ್ಧ .



ಅಮ್ಮನ ಅಕ್ಕರೆ ಬಲು ಚಂದ 




ಮಿಲನ ಮಹೋತ್ಸವಕ್ಕೆ ರೆಡಿ 



 ಹೌದು ಆ ದ್ವನಿಯೇ ಹಾಗೆ ಯಾವುದೇ ಚಟುವಟಿಕೆಯನ್ನು ಕಾಡಿನಲ್ಲಿ   ಸ್ಥಬ್ಧ ಗೊಳಿಸುವ ತಾಕತ್ತು ಅದಕ್ಕಿದೆ. ಮತ್ತೊಮ್ಮೆ ಅದೇ ದ್ವನಿ  ವ್ರೂಂ...............  ವ್ರೂಂ  , ನನ್ನ ಪಕ್ಕದಲ್ಲಿದ್ದ  ರಾಜು"ಸಾ ಟೈಗರ್ ಕಾಲ್ ಆಯ್ತಾ ಅದೇ , ಇಲ್ಲೇ ಇರುಮಾ  ಗ್ಯಾರಂಟೀ ಹುಲಿ ಇಲ್ಲೇ ಎಲ್ಲೋ ಅದೇ  ಸೈಟ್  ಆಯ್ತುದೆ" ಅಂದಾ, ಅಲ್ಲಿನ ಪ್ರದೇಶದಲ್ಲಿ ವಿಚಿತ್ರ ಬದಲಾವಣೆ ಮೇಯುತ್ತಿದ್ದ ಕಾಟಿಗಳ ಗುಂಪಿನಲ್ಲಿ ಎಲ್ಲಾ ಕಾಟಿಗಳು ಎಚ್ಚರಗೊಂಡವು  ತಮ್ಮ ಕ್ರಿಯೆಗಳನ್ನೆಲ್ಲ ನಿಲ್ಲಿಸಿ,  ಶಬ್ದ ಬಂದ ದಿಕ್ಕಿಗೆ  ಗಮನ  ಹರಿಸಿದವು . ಹುಲಿರಾಯ ಅಲ್ಲಿರುವ ಸೂಚನೆ ದೊರಕಿತ್ತು, ಹುಲಿಯ ಗರ್ಜನೆಗೆ ಕೆರೆಯ ಸಮೀಪ ಕುಳಿತಿದ್ದ  ಹಕ್ಕಿಗಳು ಪುರ್ ಪುರ್  ಅಂತಾ ಹಾರಿ ಹೋದವು, , ಆದರೆ ಪುಣ್ಯಕ್ಕೆ  "ಕಾಡು ಕೋಳಿ" ಹಾಗು "ಲಾಂಗೂರ್ ಕೋತಿಗಳು"  ಇರಲಿಲ್ಲ ಅವುಗಳೇನಾದರೂ ಇದ್ದಿದ್ದರೆ  ಬಹಳ ಗಲಾಟೆ ಎಬ್ಬಿಸಿ ಇಡೀ  ಕಾಡಿನಲ್ಲಿ ಮತ್ತಷ್ಟು ಗಲಬೆ ಆಗುತ್ತಿತ್ತು. ಕಾಡೆಮ್ಮೆಗಳು ಮತ್ತಷ್ಟು ಜಾಗರೂಕತೆ ಯಿಂದ  ನಿಂತಿದ್ದವು ಹುಲಿರಾಯನ ಚಲನವಲನ ಅರಿಯಲು. 
 


ಎಲ್ಲಿಹನು ಹುಲಿರಾಯ 


 ಸುಮಾರು ಹೊತ್ತು ನಿಂತರೂ ಪ್ರಯೋಜನ ಆಗಲಿಲ್ಲ, ನಮ್ಮ ಜೊತೆಯಲ್ಲಿದ್ದವರು ಸಲಹೆ ನೀಡಿದರು, ರಾಜು ಮೊದಲು ಇಲ್ಲಿಂದ ಜಾಗ ಖಾಲಿಮಾಡಿ ಕಬಿನಿ ಹಿನ್ನೀರಿಗೆ ಹೋಗೋಣ  ಆಮೇಲೆ ಇಲ್ಲ್ಗೆ ಮತ್ತೆ ಬರೋಣ ನಡೀರಿ ಅಂತಾ ಬಲವಂತ ಮಾಡಿ ಹೊರಡಿಸಿದರು ಕೊಪಬಂದರೂ ತೋರಿಸಿಕೊಳ್ಳದೆ ಚಾಲಕ ರಾಜು  ಯಾಂತ್ರಿಕವಾಗಿ ವಾಹನವನ್ನು ಕಬಿನಿ ಹಿನ್ನೀರಿಗೆ     ತೆಗೆದುಕೊಂಡು  ಹೋದರು.  ಅಲ್ಲಿ ಮತ್ತಷ್ಟು ನೋಟ ಸಿಕ್ಕಿತು,  ಹೌದು ನಾವು  ಮೊದಲು ಇಲ್ಲಿಗೆ  ಬಂದು ಬೋಟಿನಲ್ಲಿ  ತೇಲಾಡುತ್ತಿದ್ದ ಪ್ರದೇಶದಲ್ಲಿ ನೀರು ಒಣಗಿ ಬರಡಾಗಿತ್ತು. ವಿಶಾಲವಾದ ಕಬಿನಿ ನದಿ ಇಂದು ನೀರಿಲ್ಲದೆ ಒಣಗಿ ವೈಜ್ಞಾನಿಕ ಜಗತ್ತಿನ ಅಟ್ಟಹಾಸಕ್ಕೆ ಬಲಿಯಾಗಿ ಅವಮಾನದಿಂದ  ತತ್ತರಿಸಿತ್ತು.ಜೀವ ಜಲ ಇಲ್ಲದೆ ವನ್ಯ ಜೀವಿಗಳು ಸಂಕಟದಿಂದ ನರಳುತ್ತಿರುವ ದೃಶ್ಯ ಕಾಣಸಿಕ್ಕಿತು. ನೀರಿಗಾಗಿ ಮಾನವರ ಹೊಡೆದಾಟದಿಂದ  ಏನೂ ಅರಿಯದ ಈ ವನ್ಯಜೀವಿಗಳಿಗೆ ಜೀವ ಜಲ ಇಲ್ಲದಂತಾಗಿದೆ.





ಮಾನವರ  ಅವೈಜ್ಞಾನಿಕ  ಸಿದ್ದಾಂತಕ್ಕೆ  ಬಲಿಯಾಗುತ್ತಿರುವ ಪರಿಸರದ ನೋಟ.


ಒಣಗಿದ ಕಬಿನಿಯ ಅಂಗಳದಲ್ಲಿ  ಕೆಲವು ಆನೆಗಳು, ಹಾಗು ಕಾಡೆಮ್ಮೆಗಳ ಗುಂಪು ಒಟ್ಟಿಗೆ ಕಾಣಲು ಸಿಕ್ಕಿತು,  ಆಹಾರವಿಲ್ಲದೆ, ನೀರಿಲ್ಲದೆ   ಅಲ್ಲಿನ  ಜೀವಿಗಳು  ಸೊರಗಿದ್ದವು, ಆನೆಗಳ ಹಾಗು ಕಾಡೆಮ್ಮೆಗಳ ಮೂಳೆಗಳನ್ನು ಎಣಿಕೆ ಮಾಡಬಹುದಾಗಿತ್ತು. ವನ್ಯ ಜೀವಿಗಳ ದರ್ಶನ ಮುಗಿಸಿ ಮತ್ತೊಮ್ಮೆ ಟೈಗರ್ ಟ್ಯಾಂಕ್ ಬಳಿ  ಬಂದೆವು,  ಸುಮಾರು ಮುಕ್ಕಾಲು  ಘಂಟೆ ಕಳೆದು ಮತ್ತೆ ಅಲ್ಲಿಗೆ ಬಂದಿದ್ದ ನಮಗೆ ಅಲ್ಲಿನ ಪರಿಸರ ಸಂಪೂರ್ಣ ಬದಲಾಗಿತ್ತು, ಮೊದಲಿದ್ದ ಕಾಡೆಮ್ಮೆಗಳ ಗುಂಪು ಮಾಯವಾಗಿತ್ತು, ಅಲ್ಲಿದ್ದ ಕೆರೆಯಲ್ಲಿ   ಹುಲಿರಾಯ ನೀರಿನಲ್ಲಿ ವಿಶ್ರಮಿಸುತ್ತಾ  ವಿಹರಿಸಿದ್ದ.


ನನ್ನ ಮಗ ಕ್ಲಿಕ್ಕಿಸಿದ   ಚಿತ್ರ 


ನಾನು ಕ್ಲಿಕ್ಕಿಸಿದ ಚಿತ್ರ.

ಹುಲಿಯ ದರ್ಶನ ಮಾಡಿದ ಮನಸು  ಆನಂದದಿಂದ ಕುಣಿಯಿತು, ಅತ್ತ ನನ್ನ ಮಗ  ಗೌತಂ ಸದ್ದಿಲ್ಲದೇ  ಹುಲಿಯ ಚಿತ್ರ ತೆಗೆಯುತ್ತಿದ್ದ, ಹುಲಿಯ ದರ್ಶನ ಮಾಡಿದ ಖುಷಿಯಲ್ಲಿ ನನ್ನ ಕ್ಯಾಮರದಿಂದ ಫೋಟೋ ತೆಗೆಯೋದನ್ನು ಮರೆತು ಹಾಗೆ ಹುಲಿರಾಯನನ್ನು ಕಣ್ತುಂಬಾ ನೋಡುತ್ತಾ ಮೈಮರೆತಿದ್ದೆ , ನಂತರ  ವಾಸ್ತವತೆಗೆ ಬಂದು ಕ್ಯಾಮರ ಕ್ಲಿಕ್ಕಿಸಿದಾಗ  ನನಗೆ ಅಗತ್ಯವಾದ ಬೆಳಕು ಸಿಗಲಿಲ್ಲ ಸುಮಾರಾದ ಚಿತ್ರ ಕ್ಯಾಮರಾದಲ್ಲಿ ಮೂಡಿಬಂತು.  ಅಷ್ಟರಲ್ಲಿ  ಕಾಡಿನಲ್ಲಿನ ಮರಗಳ ಸಂದಿಯಿಂದ ಸೂರ್ಯನ  ಕಿರಣ ಮಂಕಾಗತೊಡಗಿತು,  ಹುಲಿರಾಯ ನಮ್ಮ ಇರುವನ್ನು ಲೆಕ್ಕಿಸದೆ  ಆರಾಮವಾಗಿ ತನ್ನ ಲೋಕದಲ್ಲಿ ಮುಳುಗಿದ್ದ.  ಹೆಚ್ಚು ಹೊತ್ತು ನಿಲ್ಲದೆ ಸುಮಾರು ಹದಿನೈದು ನಿಮಿಷಗಳ ದರ್ಶನ ಮುಗಿಸಿ  ವಾಪಸ್ಸು ಹೊರಟೆವು,  ನನ್ನ ಮಗ ಪ್ರಥಮ ಭೇಟಿಯಲ್ಲೇ ಹುಲಿ ನೋಡಿದ ಖುಷಿಯಲ್ಲಿದ್ದ, ನಾನು ಹುಲಿಯ ಚಿತ್ರ ಸರಿಯಾಗಿ ತೆಗೆಯಲಿಲ್ಲ ಎನ್ನುವ ನಿರಾಸೆಯಲ್ಲಿದ್ದೆ, ನಮ್ಮೊಡನಿದ್ದ ಕೆಲವರು  ಹೆದರಿಕೆಯಿಂದ ಮೌನವಾಗಿದ್ದರು, ಇವನ್ನೆಲ್ಲಾ  ನೋಡಿದ ಸೂರ್ಯ ತನ್ನ ಪಯಣವನ್ನು ಭೂಮಿಯ ಇನ್ನೊಂದು  ಕಡೆಗೆ ಮುಂದುವರೆಸಿದ್ದ, ಈ ಭಾಗಕ್ಕೆ ವಿಧಾಯ ಹೇಳಿದ್ದ , ವನ್ಯ ತಾಣ ವೀಕ್ಷಣೆ ಮುಗಿಸಿದ ನಮ್ಮನ್ನು ಚಾಲಕ ರಾಜು  ಸುರಕ್ಷಿತವಾಗಿ  ವಾಪಸ್ಸು ತಂದು ಬಿಟ್ಟು ನಕ್ಕಿದ್ದ.


ತನ್ನದೇ ಲೋಕದಲ್ಲಿದ್ದ ಹುಲಿರಾಯ 

ನಮ್ಮ ಕಬಿನಿ ವನ್ಯಜೀವಿ  ತಾಣದ ಪ್ರವಾಸ ಇಲ್ಲಿಗೆ ಮುಗಿದಿತ್ತು. ಅಮೂಲ್ಯ ತಾಣದ ನೂರಾರು ಚಿತ್ರಗಳು ನನ್ನ ಕ್ಯಾಮರಾದಲ್ಲಿ ಭದ್ರವಾಗಿ ಸೇರಿದ್ದವು. ವಾಪಸ್ಸು ಕಾರಿನಲ್ಲಿ ಬರುವಾಗ  "ಟೈಗರ್ ಕಾಲ್"  ನ  ಗರ್ಜನೆ ಕಿವಿಯಲ್ಲಿ  ಮಾರ್ಧನಿಸುತ್ತಿತ್ತು . .....!!

{ಮುಂದಿನ ಸಂಚಿಕೆಯಲ್ಲಿ ದಾಂಡೇಲಿ ಪ್ರವಾಸದ ಅನುಭವಗಳು ಬರಲಿವೆ } 

Thursday, April 18, 2013

ಕಬಿನಿ ಕಾಡಿನಲ್ಲಿ ನಾನು. ......೦೧ ಸಾ ಉಸಾರು ಅಲ್ನೋಡಿ ...!!


ಕನ್ನಡ ನಾಡಿನ ಹೆಮ್ಮೆಯ ಪಕ್ಷಿ 
ಬ್ಲಾಗ್ ಬರಹ ಬರೆದು ಬಹಳ ದಿನ ಆಯ್ತು, ಬಿಡುವಿಲ್ಲದ ದಿನಗಳು ,  ದಿನವೆಲ್ಲಾ ತಲೆಯಮೇಲೆ ಉರಿವ ಬಿಸಿಲು , ಮನೆಗೆ ಬಂದೊಡನೆ ಧಣಿದ ದೇಹ ಸೋಮಾರಿಯಾಗಿ ಬಿಡುತ್ತೆ, ಬರೆಯಲು ಕುಳಿತರೆ ಮನಸಿನಲ್ಲಿ ಬರೆಯುವ ಉತ್ಸಾಹ ಬೇಸಿಗೆಯ ಬಿಸಿಯಲ್ಲಿ ಆವಿಯಾಗಿ ಬಿಡುತ್ತದೆ,ಹಾಗಾಗಿ  ಬರೆಯಲಿಲ್ಲ ಎನ್ನುವ ಕಾರಣ. ಮೊನ್ನೆ ತಾನೇ ಫೆಸ್ ಬುಕ್ ನಲ್ಲಿ ಶನಿವಾರ ನನ್ನ  ದಾಂಡೇಲಿ , ಗಣೇಶ್ ಗುಡಿ , ಸಿನ್ಥೆರಿ ರಾಕ್ಸ್  ಪ್ರವಾಸದ ಹಳೆಯ  ನೆನಪುಗಳ ಮಾಲಿಕೆ ಬರೆಯುವುದಾಗಿ ಜಂಭ ಕೊಚ್ಚಿಕೊಂಡಿದ್ದೆ. ಆದರೆ ಯಾವುದೋ ವಿಚಾರ  ಗೊಂದಲದಿಂದ ಅದರ ಮಾಲಿಕೆ ಮತ್ತಷ್ಟು ವಿಳಂಭ ವಾಗುತ್ತಿದೆ. ಕೆಲವು ಆತ್ಮೀಯ ಗೆಳೆಯರ ಒತ್ತಾಯದ ಮೇರೆಗೆ ಈ ಲೇಖನ ನಿಮ್ಮ ಮುಂದೆ ಹಾಜರ್ ಆಗಿದೆ.



ಕಾಡೆಂದರೆ  ಹೀಗೆ  ಒಳಗೆ ಇರೋದು ಗೊತ್ತಾಗೊಲ್ಲ.



ಕಳೆದ ಭಾನುವಾರ ನನ್ನ ಗೆಳಯ ಸತ್ಯ ಅವರು ಫೋನ್ ಮಾಡಿ  ಬಾಲಣ್ಣ  ಎಷ್ಟೊತ್ತಿಗೆ ಹೊರಡೋದು ಎಂದಾಗಲೇ ಅರಿವಾಗಿದ್ದು, ನಾವು ಆ ದಿನ ಕಬಿನಿ ಕಾಡಿಗೆ ಹೋಗಬೇಕಾಗಿತ್ತೆಂದು , ಸರಿ ಅಂತಾ ಸಾರ್ ನಾನು ರೆಡಿ ನಿಮ್ಮ ಆಗಮನ ಎಷ್ಟು ಘಂಟೆಗೆ ಸಾರ್ ಅಂದೇ. ಸೀನ್  ಕಟ್  ಮಾಡಿದ್ರೆ , ಮಧ್ಯಾಹ್ನ ೧.೦೦ ಘಂಟೆಗೆ ನಮ್ಮ ಮನೆಯ ಮುಂದೆ ಅವರ  ನ್ಯಾನೋ ಕಾರ್ ನಿಂತಿತ್ತು,  ನಾನೂ , ನನ್ನ ಮಗ  ಜೊತೆಯಾಗಿ  ಕಬಿನಿ ಕಾಡು  ನೋಡಲು  ಹೊಂಟೆವು .ಪ್ರಯಾಣ, ಊಟ ಇತ್ಯಾದಿ ಮಾಡಿ   ಕಾಡಿನ ಒಳಗೆ  ನಮ್ಮ ಪ್ರವೇಶ ಮಧ್ಯಾಹ್ನ ೪.೦೦ ಘಂಟೆಗೆ ಆರಂಭ ಆಯಿತು. ವಾಹನ ಚಾಲಕ  ರಾಜು  ಕಾಡಿನ ಒಳಗೆ ನಮ್ಮ ಕಾನನ ದರ್ಶಕನಾಗಿ  ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ. ಒಣಗಿದ ಕಾಡು,  ಬಿಸಲಿಗೆ ಬಾಡಿದ  ಪೊದೆಗಳು, ನೀರಿಲ್ಲದ ಹೊಂಡಗಳ ದರ್ಶನ  , ಮಳೆ ಬಂದರೆ  ಹಸಿರ ಉಡುಗೆ ಧರಿಸುವ  ಕಾನನ ಸುಂದರಿ  ಬೇಸಿಗೆಯಲ್ಲಿ ಹಸಿರು ಕಳೆದುಕೊಂಡು   ಸೊರಗುತ್ತಾಳೆ.  ದಾರಿಯುದ್ದಕ್ಕೂ ಕಾಣ ಸಿಕ್ಕ ಜಿಂಕೆಗಳು  ಉತ್ಸಾಹ ಕಳೆದುಕೊಂಡು  ನೀರಿಗಾಗಿ ಹಪಹಪಿಸುತ್ತಿದ್ದವು .  ಕಾಡಿನ ಹಾದಿಯಲ್ಲಿ ಬಹಳ ದೂರದ ವರೆಗೆ ಚಟುವಟಿಕೆಗಳನ್ನು ನೋಡಬಹುದಿತ್ತು,  ಹೀಗೆ ಸಾಗಿತ್ತು, ನಮ್ಮ ಪಯಣ .


ಪೋದೆವಳಗೆ ನೋಡಿ ಸಾ 


ಒಮ್ಮೆಲೇ ವಾಹನ ಆಫ್ ಮಾಡಿ  ನಿಲ್ಲಿಸಿದ ಚಾಲಕ  ರಾಜು  "ಸಾ ಉಸಾರಾಗಿ  ಆ ಕಡೆ ನೋಡಿ" ಅಂದಾ....! ಅಲ್ಲೇನಿದೆ ಬರಿ ಒಣಗಿದ  ಪೊದೆ  , "ಇಲ್ಲಾ  ರಾಜು  ಏನೂ ಕಾಣುತ್ತಿಲ್ಲ, "  " ಸಾ ಸರಿಯಾಗಿ ನೋಡಿ ಸಾ ಅಲ್ಲೇ ಅವೇ "ಅಂದಾ  ...!! ಆ  ಪೋದೆಗಳು  ನಮ್ಮಿಂದ ಕೇವಲ ಅಂದಾಜು ಇಪ್ಪತ್ತು ಅಡಿ ದೂರದಲ್ಲಿದ್ದವು.  "ಇಲ್ಲಾ  ರಾಜು  ಏನೂ ಕಾಣುತ್ತಿಲ್ಲ"  ಅಂತಾ ಪಿಸುಗುಟ್ಟಿದೆ.


 ಏ ಸರ್ಯಾಗಿ  ನೋಡಿ ಸಾ 

"ಏ  ಸರ್ಯಾಗಿ ನೋಡಿ ಸಾ  ಅಲ್ಲೇ ಅವೇ  , ಅಂಗೆ ಇರಿ ಬತ್ತವೆ  ಆಚೆಗೆ ", ಅಂತಾ  ಹೇಳಿ ಸುಮ್ಮನಾದ .  ಪಟ್ಟಣದ ವಾಸಿಯಾದ ನನ್ನ ಕಣ್ಣು  ಕಾನನದ ಪರಿಸರಕ್ಕೆ ಹೊಂದಿಕೊಂಡಿರದ ಕಾರಣ  ಪಕ್ಕದಲ್ಲೇ ನಡೆಯುತ್ತಿರುವ  ಚಟುವಟಿಕೆ ಗೊತ್ತಾಗಲಿಲ್ಲ  ಜೊತೆಗೆ ಯಾವುದೇ ಶಬ್ಧ ಆ ಪೊದೆಯಿಂದ ಬರುತ್ತಿರಲಿಲ್ಲ  , ಹಾಗೆ ಸಹನೆಯಿಂದ ಕಾಯುವುದಷ್ಟೇ ನನಗಿದ್ದ  ಅವಕಾಶ . ಹಾಗೆ ಕಾಯುತ್ತಿದ್ದೆ, ಕೇವಲ ಎರಡು ಮೂರು ನಿಮಿಷಗಳ ಕಾಯುವಿಕೆ ಅಷ್ಟೇ ........!!!!! ಪೊದೆಯಿಂದ ಹೊರಬಂದವು   ... ಅವು.



ಪೊದೆಯಿಂದ  ಬಂದಿದ್ದು ಇವುಗಳೇ 




 ಒಂದಲ್ಲಾ ಎರಡು 
ಒಂದಲ್ಲಾ  ಎರಡಲ್ಲಾ , ಮೂರಲ್ಲಾ  ನಾಲ್ಕು 

ಹೌದು  ಆ ಪೊದೆಗಳ ಹಿಂದೆ  ನಾಲ್ಕು ಆನೆಗಳ ಒಂದು ಗುಂಪಿತ್ತು, ಒಣಗಿದ ಕಾಡಿನಲ್ಲಿ ಒಣಗಿದ ಪೊದೆಯ ಹಿಂದೆ ಇಷ್ಟು ಆನೆಗಳು  ನಮ್ಮ ಸನಿಹದಲ್ಲೇ ಇದ್ದರೂ  ನಮಗೆ ಅರಿವಾಗಲಿಲ್ಲ  ಜೊತೆಗೆ ಒಣಗಿದ ಪರಿಸರದಲ್ಲಿ ನಾವು ನಡೆದರೆ  ಹೆಜ್ಜೆಯ ಸಪ್ಪಳವಾದರೂ  ಕೇಳುತ್ತದೆ, ಆದರೆ  ಊ ಹು  ಈ ಆನೆಗಳ ಗುಂಪು ನಡೆದು ಬರುತ್ತಿದ್ದರು  ಒಂದು ಚೂರು ಸಪ್ಪಳ ಕೇಳಲಿಲ್ಲ . ಇದು ನಮಗೆ  ಅಚ್ಚರಿಯ ವಿಚಾರ,  ನಮ್ಮ ವಾಹನದ ಸಮೀಪದಲ್ಲೇ  ಈ ಆನೆಗಳ ಮೆರವಣಿಗೆ ಸಾಗಿತ್ತು, ಕ್ಯಾಮರ ತನ್ನ ಕಾಯಕ ನಡೆಸಿತ್ತು,

ಏ  ಹುಷಾರು  ಹತ್ರ ಬಂದ್ರೆ  ಅಷ್ಟೇ....!


 ಸಾಗುತ್ತಿದ್ದ ಆನೆಗಳ ಗುಂಪಿನ ಕೊನೆಯಲ್ಲಿದ್ದ ಒಂದು ಆನೆ  ರಕ್ಷಣೆಯ ಜವಾಬ್ಧಾರಿ ಹೊತ್ತಿತ್ತು, ನಮ್ಮ ವಾಹನ ನೋಡಿ  ಸ್ವಲ್ಪ  ಅವಾಜ್ ಹಾಕಿ ಹೆದರಿಸಿತು, ಹಲವು ಸಾರಿ ಇಂತಹ ಸನ್ನಿವೇಶ ಎದುರಿಸಿರುವ ನಮಗೆ  ಇದೇನು ಹೊಸತಲ್ಲ. ಅದರಿಂದ  ನಿಶ್ಯಬ್ಧ ವಾಗಿ  ವಾಹನದಲ್ಲಿ ಕಲ್ಲಿನಂತೆ ಕುಳಿತೆ ಇದ್ದವು  , ಅದು ಬಹಳಷ್ಟು  ಹೆದರಿಸುವ ಆಟ ನಡೆಸಿತ್ತು, ಸುಮಾರು  ಹತ್ತು ನಿಮಿಷ ಈ ಆಟ ನಡೆಯಿತು,  ಆ ಆನೆ  ಅಲ್ಲಿಂದ ರಸ್ತೆ ದಾಟಿ ಕಾಡು ಹೊಕ್ಕಿತು.

ಬಾ ಕಂದಾ ಹೋಗೋಣ ಮರ್ಯಾದೆ ಇಲ್ಲದ ಜನ ಇವರು 

 ಸನಿಹದಲ್ಲಿ ಈ ಕಣ್ಣಾಮುಚ್ಚಾಲೆ  ಆಟ ನೋಡುತ್ತಿದ್ದ ತಾಯಿ ಆನೆ  "ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ  ಮರಿಯಾನೆ ಜೊತೆ  ಕಾಡಿನೊಳಗೆ ತೆರಳಿತು. . [ ಮುಂದಿನ ಸಂಚಿಕೆ ಟೈಗರ್ ಕಾಲಿಂಗ್ ]

Tuesday, March 12, 2013

ಇಂಗಾದ್ರೆ ಎಂಗೆ ಸಾ ......?

ಸಾಂದರ್ಬಿಕ ಚಿತ್ರ [ ಕೃಪೆ ಅಂತರ್ಜಾಲ]

ಇದೊಂದು ಕಾಡುತ್ತಿರುವ ಪ್ರಶ್ನೆ , ನನಗೂ ಯೋಚಿಸಿ ಯೋಚಿಸಿ ಸಾಕಾಯ್ತು. ನೀವಾದ್ರೂ ಉತ್ತರ ಕೊಡಿ ಬಾಲೂ ಅಂದ್ರು  ಮಲ್ಲಿಕಾರ್ಜುನ್  ಮೇಷ್ಟ್ರು. ಯಾಕೆ ಸಾರ್ ಏನಾಯ್ತು?. ಏನ್ ಸಮಾಚಾರ?  ಅಂದೇ ,

ಅಯ್ಯೋ    ಬಾಲೂ  ಯಾಕೆಳ್ತೀರ ನನ್ನ ಕಥೆ  ಈ ಹಳ್ಳಿ ಹೈಕಳ ಸಾವಾಸ ಬಲು ಕಷ್ಟಾ ಕಣ್ರೀ , ಬನ್ನಿ ವಿಚಾರ ಹೇಳ್ತೀನಿ ಅಂತಾ ವಿಚಾರ ಹೇಳಿದ್ರೂ  ಬನ್ನಿ ಈ ಕಥೆ ಓದಿ.

ನಮ್ಮ ಮಲ್ಲಿಕಾರ್ಜುನ್ ಒಳ್ಳೆಯ ಉತ್ಸಾಹಿ ಮೇಷ್ಟ್ರು , ಒಂದು ಹಳ್ಳಿಯಲ್ಲಿ ಪ್ರೌಡ ಶಾಲೆ ಮಕ್ಕಳಿಗೆ  ವಿಜ್ಞಾನ ಭೋದನೆ ಮಾಡುತ್ತಾರೆ. ಹಳ್ಳಿಯ ಮಕ್ಕಳಿಗೆ ಅಂತರ್ಜಾಲ  ಸೌಲಭ್ಯ ಇಲ್ಲಾ  , ಮಾಹಿತಿ ಸಿಗೋಲ್ಲಾ ಎನ್ನುವ  ಕಾರಣಕ್ಕೆ ತಾವೇ ಅಂತರ್ಜಾಲ ಹುಡುಕಾಡಿ ವೈಜ್ಞಾನಿಕ  ವಿಷಯಗಳಿಗೆ   ಸಂಬಂಧಿಸಿದ ವಿಚಾರಗಳನ್ನು ಶಾಲೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಹೆಚ್ಚು ವಿಚಾರ ತಿಳಿದು, ಹೆಚ್ಚಾಗಿ  ಪ್ರಶ್ನೆ ಕೇಳಿ  ಹೊಸ ವಿಚಾರಗಳನ್ನು ತಿಳಿದು ಪಟ್ಟಣದ ಮಕ್ಕಳಿಗೆ ಸರಿಸಮನಾಗಿ  ಜ್ಞಾನ ಪಡೆಯಲಿ ಎನ್ನುವ ಸದುದ್ದೇಶ ಅವರದು, ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ, ಮಕ್ಕಳಿಗೂ ಸಹ  ಇವರಂದ್ರೆ  ಬಹಳ ಪ್ರೀತಿ ಹಾಗು ಸಲಿಗೆ ಜಾಸ್ತಿ.ಇವರ ಕ್ಲಾಸು ಅಂದ್ರೆ ಅದೊಂದು ವಿಚಾರ ಘೋಷ್ಠಿ  ಇದ್ದಂತೆ , ಪ್ರಶ್ನೆ ಕೇಳುವ ಅಧಿಕಾರ ಮಕ್ಕಳಿಗೂ ಇರುತ್ತದೆ. ಆದರೆ ಇವರ ಓರಿಗೆಯ ಸಹೋದ್ಯೋಗಿ ಮೇಷ್ಟರುಗಳಿಗೆ ಇವರೊಬ್ಬ ವಿಚಿತ್ರ ವ್ಯಕ್ತಿ.  ಇರಲಿ ಬನ್ನಿ  ಮುಖ್ಯ ವಿಚಾರಕ್ಕೆ ಸಾಗೋಣ.

ಒಮ್ಮೆ ಹೀಗಾಯ್ತು ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರು ಕ್ಲಾಸಿನಲ್ಲಿ ಪಾಠ  ಮಾಡುತ್ತಿದ್ದರು, ಅವರ ತರಗತಿಯಲ್ಲಿ ವಿಷಯ  ಮಂಡನೆ ಆಗುತ್ತಿತ್ತು, ವಿಜ್ಞಾನದ ಕೌತುಕಗಳ ಬಗ್ಗೆ ಪ್ರಶ್ನೋತ್ತರಗಳ  ನಡೆದಿತ್ತು,

ಮಲ್ಲಿಕ್ :-  ಲೇ ಪರಮೇಶ   ಪ್ಲಾನೆಟ್ [ಗ್ರಹ ]ಎಂಬ ಪದ ಯಾವ ಭಾಷೆ ಯಿಂದ ಉದ್ಭವಿಸಿದೆ ? ಹೇಳೋ

ಪರಮೇಶ :- ಸಾ ಅದು ಗಿರೀಕ್[ ಗ್ರೀಕ್]  ಭಾಸೆ ಯಿಂದ ಆಲ್ವಾ ಸಾ ............ .?

ಮಲ್ಲಿಕ್ :- ಲೇ ಅದು ಗಿರೀಕ್  ಅಲ್ವೋ ಗ್ರೀಕ್ ಭಾಷೆ  ಉತ್ತರ ಸರಿ ಕೂತ್ಕೋ

ಪರಮೇಶ :- ಊ  ಕ ಸಾ , ಅಂತಾ ಕುಳಿತ.

ಮಲ್ಲಿಕ್ :-ಲೇ ಬಸವ  ನೀ ಹೇಳೋ  ಟೈರ್ ಕಂಡು ಹಿಡಿದವರು  ಯಾರೋ ??

 ಪರಮೇಶ :- ಅದೇ ಅದೇ  ಟೈರು  ..... ಕಂಡು  ಹಿಡಿದವರು  ........ ಅದೇಯ  ಊ     ಅಂತಾ ತಡಕಾಡಿ ತಲೆ ಕೆರೆಯುತ್ತಾ ನಿಂತ.

ಮಲ್ಲಿಕ್ :- ಲೇ ಲೇ ಮೊನ್ನೆ ತಾನೇ  ಅವನ ಚಿತ್ರ ತೋರ್ಸಿ   ಹೇಳಿರ್ಲಿಲ್ವ ..... ಬರೀ...... ಊ .ಮ. ಹೇ. ಗೆ ಲಾಯಕ್ಕೋ ನೀನು                ಲೇ  ಕೆಂಪ ನೀನೆಳ್  ಲೇ  ಅಂದ್ರೂ

ಕೆಂಪ :- ಸಾ ಸಾ   ಅದೇಯಾ , ಅದೇಯಾ  ಬೆಂಡ್ಲಪ್ ........ಸಾ , ಅಂದಾ ಲೇ ಲೇ ಅದು  "ಡನ್ಲಪ್" ಕಣೋ   ಓ   ಕೂತ್ಕೋ                         ಅಂದ್ರು,

ಮಲ್ಲಿಕ್ :- ಏಳಮ್ಮಾ  ಸರೋಜಾ   ಜಗತ್ತಿನ ಅತ್ಯಂತ  ಶೀತ ಪ್ರದೇಶ ಯಾವುದು ....??

ಸರೋಜಾ :- ಹಿಮಾಲಯ ಸಾ

ಮಲ್ಲಿಕ್ : - ಏನಮ್ಮ  ನೀನೂ  ಹಿಂಗೆ ಹೇಳ್ತಿಯಾ , ಉತ್ತರ ತಪ್ಪು,  ನೋಡು ಮರಿ  ಭಾಗ್ಯ  ನೀನು ಹೇಳಮ್ಮ .

ಭಾಗ್ಯ :- ಸಾ ಅದು  ಅಂಟಾರ್ಟಿಕಾ  ಸಾ,

ಮಲ್ಲಿಕ್ :-ಭೇಷ್ ಭೇಷ್  ಒಳ್ಳೆಯ ಮಗು ನೀನು ಗುಡ್, ಕೂತ್ಕೋ ಮರಿ , ಲೇ  ಶಂಭೂ  ಅವುತ್ಕೊತೀಯ  ಎದ್ದೇಳು

ಶಂಭು  :- ಇಲ್ಲಾ ಸಾ  ಅಂಗೆನಿಲ್ಲ  ಸಾ,  ಅಂತಾ ನಿಂತು ಕೊಂಡಾ

ಮಲ್ಲಿಕ್ :- ಲೇ ಶಂಭೂ ತರ್ಲೆ ಮಾಡ ಬ್ಯಾಡ  ಹೇಳೋ  ನ್ಯೂಟನ್  ನಿಯಮಾವಳಿ  ಯಾವ ವಿಚಾರದ ಬಗ್ಗೆ  ಹೇಳೋ

ಶಂಭು:-   ನ್ಯೂಟನ್  ಗುರ್ತ್ವಾ ಕರ್ಸಣೆ   ನಿಯಮ ಆಲ್ವಾ  ಸಾ.?

ಮಲ್ಲಿಕ್ :- ಲೇ ನನ್ನೇ ಪ್ರಶ್ನೆ ಕೇಳ್ತೀಯ , ಅದು ಗುರುತ್ವಾಕರ್ಷಣೆ  ಕಣಯ್ಯ   ಗುರ್ತ್ವಾ ಕರ್ಸಣೆ ಅಲ್ಲಾ ತಿಳೀತ

ಶಂಭು :- ಸಾ ಒಂದು ಪಸ್ನೆ  ಕೇಳ ಬೇಕೂ ಅಂತೀವ್ನಿ  ತಪ್ಪು ತಿಳಕಾ ಬ್ಯಾಡಿ?? ಅಂದಾ

ಮಲ್ಲಿಕ್ :- ಅಯ್ಯೋ ದಡ್ಡ.... ಅದಕ್ಕೆ ಯಾಕೆ  ಸಂಕೋಚ? ಕೇಳೋ ಪ್ರಶ್ನೆ , ಮಕ್ಕಳು ಹೊಸ ವಿಚಾರ ತಿಳಿದು ಕೊಳ್ಳ ಬೇಕು,               ಕೇಳು ಕೇಳು ನಿನ್ನ ಪ್ರಶ್ನೆ ...ಅಂದ್ರೂ

ಶಂಭು :- ಪ್ರಶ್ನೆ ಕೆಲಿದ್ಮ್ಯಾಲೆ  ನನ್ನ ಬೋಯ್ಯಕಿಲ್ಲ ,  ಒಡಿಯಾಕಿಲ್ಲ  ಅಂತಾ ಯೋಳಿ , ಆಮೇಕೆ ಪಶ್ನೆ  ಕೇಳ್ತೀನಿ ಅಂದಾ

ಮಲ್ಲಿಕ್ :- ಲೇ ಪ್ರಶ್ನೆ ಕೇಳೋ  ನಿನಗೆ  ಏನೂ ಮಾಡೋಲ್ಲ  ಹೆದರ ಬೇಡ ಪ್ರಶ್ನೆ ಕೇಳೂ  ಅಂದ್ರು.
                                                                                                                                                          

ಶಂಭು :- ನಮ್ಮ  ಹಟ್ಟಿ [ ಮನೆ]  ಪಕ್ಕ ಇರೋ  ಲಾರೀ ತೂಕ ಮಾಡೋ ಮಿಶಿನಿನಲ್ಲಿ ನಮ್ಮ ಎಮ್ಮೆ ಯ ಹತ್ಸಿ  ತೂಕ  ಮಾಡ್ದೆ       ಸಾ                ೩೦೦      ಕೆ.ಜಿ.ಅದೇ[ ಆಹಾರ ಸೇವಿಸುವ ಮೊದಲು ]   , ಅದು  ಹುಲ್ಲು, ಹೊಟ್ಟು , ಭೂಸ  ಎಲ್ಲಾ                ಸೇರಿ           ಸುಮಾರು  ಹತ್ತು ಕೆ.ಜಿ. ಆಹಾರ  ತಿನ್ನುತ್ತೆ , ಆದ್ರೆ ಅದರ ತೂಕ   ಆಹಾರ ತಿಂದ ಮ್ಯಾಲೆ  ೩೧೦ ಕೆ.ಜಿ.  ಆಗಬೇಕು ಆದರೆ  ತೂಕ  ಹಾಕುದ್ರೆ  ೩೦೦ ಕೆ.ಜಿ. ನೆ ತೂಗ್ತು  ಸಾ,

ಆಮ್ಯಾಕೆ ಬೆಳಿಗ್ಗೆ  ನಮ್ಮ ಎಮ್ಮೆನ  ಮತ್ತೆ  ತೂಕ ಮಾಡ್ದೆ  ಆಗಲೂ ೩೦೦ ಕೆ.ಜಿ. ಬತ್ತು,  ಆಮ್ಯಾಕೆ  ಒಸಿ ಒತ್ತಾದ್ಮ್ಯಾಕೆ  ಎಮ್ಮೆ    ಗಂಜ್ಲಾ  ಸುರಿಸಿ , ತೊಪ್ಪೆ ಹಾಕ್ತು  ಎಲ್ಲಾ ಅಂದಾಜು ಒಂದು ಐದು ಕೆ.ಜಿ ಇರ್ಬೈದು   , ತಾಳು ಈಗಲಾದರೂ ತೂಕ ಕಡಿಮೆ ಇದ್ದಾತಾ ಅಂತಾ ತೂಕ ಮಾಡ್ದೆ  ಆಗಲೂ  ೩೦೦ ಕೆ.ಜಿ.ನೆ ಬತ್ತು ಸಾ  ಇದ್ಯಂಗೆ ಅಂತಾ  ಗೊತ್ತಾಯ್ತಿಲ್ಲ  ಒಸಿ ನೀವೇ  ಯೋಳ್ಕೊಡೀ  ಸಾ , ಅಂದಾ

ಮುಂದುವರೆದು  ಸಾ  ನಮ್ಮ ಎಮ್ಮೆ ಅಂಗೆ ಮನ್ಸುರ್ದೂ ಅದೇ ಕಥೆ ಆಲ್ವಾ ಸಾ ಅಂದಾ ............!!! ಯಾಕೋ ಅಂದೇ  ನಮ್ಮ ಎಮ್ಮೆ  ತೂಕ ಮಾಡಿದಂಗೆ  ನನ್ನ ಮ್ಯಾಲೋ ಪ್ರಯೋಗ ಮಾಡ್ಕಂಡೆ   ಆಗಲೂ ಎತ್ವಾಸ ಕಾಣಲಿಲ್ಲ ಸಾ, ಮನ್ಸರು  ಊಟ ಮಾಡಾಕೆ ಮೊದ್ಲು  ಎಷ್ಟು ತೂಕ ಇರ್ತಾರೋ  ಹೊಟ್ಟೆ ಒಳಗಿನ  ಕಸ ಆಚೆಗೆ ಹೊದ್ಮ್ಯಾಕೆ  ತೂಕ ಅಷ್ಟೇ ಯಾಕೆ ಇರ್ತದೆ  ಅಂತಾ  ಗೊತ್ತಾಯ್ತಿಲ್ಲ  ಅಂದಾ .
  ಕ್ಲಾಸಿನ ಮಕ್ಕಳು  ಗೊಳ್  ಅಂತಾ ನಕ್ಕರು.

ಮಲ್ಲಿಕ್ :- ಲೇ  ತಲೆ ಹರಟೆ   ಕೂತ್ಕೋ ಸುಮ್ನೆ , ಅಂದವನೇ   ಗದರಿದೆ

             ಪಾಪದ ಹುಡುಗ ಹೆದರಿಕೊಂಡು ಕುಳಿತ. ಲೇ ಇವತ್ತಿಗೆ ಇಷ್ಟೇ ಸಾಕು,   ನಾಳೆಗೆ   ಹೋಂ ವರ್ಕ್ ತಗೊಳ್ಳಿ ಅಂತಾ  ಸಿಟ್ಟಿನಲ್ಲಿ  ಹೊರಲಾರದಷ್ಟು  ಹೋಂ ವರ್ಕ್ ನೀಡಿದೆ.  ಶಾಲೆ ಮುಗಿಸಿ ಬಸ್ಸಿನಲ್ಲಿ ಕುಳಿತು ಯೋಚಿಸಿದಾಗ  ಶಂಭು  ಪ್ರಶ್ನೆ  ಕಾಡತೊಡಗಿತು.  ಹೌದಲ್ವಾ  ಆ ಹುಡುಗ ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ?  ಈ ಪ್ರಶ್ನೆಯ ಉತ್ತರ ನನಗೂ ಗೊತ್ತಿಲ್ಲ , ಅಂದವನೇ  ಅಂತರ್ಜಾಲ ಹುಡುಕಿದೆ ಈ ಪ್ರಶ್ನೆಗೆ   ಉತ್ತರ ಸಿಕ್ಕಲಿಲ್ಲ  ಅದಕ್ಕೆ ನೀವಾದ್ರೂ ಏನಾದರೂ ಮಾಡ್ರೀ ಅಂದ್ರು.



ಹಳ್ಳಿ ಹೈದ 



ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರ  ಪ್ರಶ್ನೆ  ನನ್ನನ್ನೂ ಕಾಡತೊಡಗಿತು , ನನ್ನಲ್ಲೂ ಉತ್ತರ ವಿಲ್ಲಾ, ಉತ್ತರ ಸಿಗದೇ ನಾನೂ ಅವರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ದಯವಿಟ್ಟು ಈ ಲೇಖನ ಓದಿದ ನೀವಾದ್ರೂ ಉತ್ತರ ಹೇಳ್ತೀರಾ ಪ್ಲೀಸ್ .







Saturday, March 2, 2013

ದೊಡ್ಡವರೆಲ್ಲಾ ಜಾಣರಲ್ಲಾ ...............!!! ಮಗ ಕಲಿಸಿದ ಜೀವನ ಪಾಠ


ಜ್ಞಾನದ ಹಣತೆ  ಬೆಳಗಿಸಲು ಕಿರಿಯರಾದರೇನು  ??


ನಮಸ್ತೆ ಬಹಳ ದಿನಗಳ ನಂತರ ಮತ್ತೆ ಬರೆಯಲು ಕುಳಿತೆ. ಹೌದು ಎರಡು ವಾರಗಳ ಹಿಂದೆ  ಪ್ರೀತಿಯ ಗೆಳೆಯ ಮಣಿಕಾಂತ್ ರವರ ಪುಸ್ತಕ ಬಿಡುಗಡೆ  ಕಾರ್ಯಕ್ರಮ ಮುಗಿಸಿ ಬೆಂಗಳೂರಿನಿಂದ ಬ್ಲಾಗ್ ಮಿತ್ರರ ಸ್ನೇಹದಲ್ಲಿ ಮಿಂದು ಹೊಸ ಹುರುಪಿನಿಂದ ಮೈಸೂರಿಗೆ ಬಂದೆ. ಮನೆ ಪ್ರವೇಶಿಸುತ್ತಿದ್ದಂತೆ ನನ್ನ ಸಹೋದರ ಭಾನು ಪ್ರಸಾದ್ ಕಾಣಿಸಿದ. ಉಭಯ  ಕುಶಲೋಪರಿ ಮುಗಿಸಿ , ಮಾತಾಡುತ್ತಾ ಕುಳಿತೆವು. ಆ ಮಾತಿನ ನಡುವೆ ಅವನು ಒಂದು ಸನ್ನಿವೇಶವನ್ನು  ಬಿಚ್ಚಿಟ್ಟ. ಮನಸಿಗೆ ಹೌದಲ್ವಾ ಅನ್ನಿಸಿತು, ಹಾಗಾಗಿ ಇದಕ್ಕೆ ಒಂದು ಕಥಾ ರೂಪ ಕೊಟ್ಟಿದ್ದೇನೆ , ಒಮ್ಮೆ ಓದಿ ನಿಮಗೆ ಇಷ್ಟವಾಗಬಹುದು.


ಆಗತಾನೆ ಕಂಪನಿಯ ಕೆಲಸ ಮುಗಿಸಿ ಮನೆಗೆ ಬಂದು ಕುಳಿತೆ, ಬೆಳಗ್ಗಿನಿಂದಾ ಒಂದೇ ಸಮಾ ಕೆಲಸ  ಒತ್ತಡ ಒತ್ತಡ  ಒತ್ತಡ , ಹೌದು ನನ್ನ ಕೆಲಸವೇ ಹಾಗೆ ನನ್ನ ಕಂಪನಿಯವರು ಹೆಚ್ಚಿನ ಹೊರೆ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಮೊದಲೇ ನಮ್ಮ ಕಂಪನಿ  ಒಂದು. ಎಂ. ಏನ್. ಸಿ.  ನನ್ನ ಒಡನಾಟ ಹಲವಾರು ವಿದೇಶಿ ಕಂಪನಿಗಳೊಂದಿಗೆ ,  ಗ್ರಾಹಕರ ಬೇಡಿಕೆ ಪೂರೈಸುವ , ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜವಾಬ್ದಾರಿ ನನ್ನದು. ನನ್ನ ಕೆಲಸದ ಬಗ್ಗೆ ನನ್ನ ಕಂಪನಿಯವರಿಗೆ ಅತೀವ ನಂಬಿಕೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತೇನೆ ಎಂಬ ಭರವಸೆ ಹಾಗಾಗಿ  ನನಗೆ ಹೆಚ್ಚಿನ ಹೊರೆ ಹೊರಿಸಿದ್ದಾರೆ. ನಾನೂ ಸಹ ನನ್ನ ಕೆಲಸದ ಬಗ್ಗೆ ಅತೀವ ಕಾಳಜಿ ವಹಿಸುತ್ತೇನೆ, ನನ್ನ ಕೆಲಸದಲ್ಲಿ ನನ್ನನ್ನೇ ಮರೆಯುತ್ತೇನೆ. ಇಂತಹ ಸನ್ನಿವೇಶದಲ್ಲಿ ಮನೆಗೆ ಬರುವ ವೇಳೆ ನಿರ್ದಿಷ್ಟ ವಾಗಿರುವುದಿಲ್ಲ .ಈ ಎಲ್ಲಾ ವರ್ತುಲದಲ್ಲಿ ಜೀವಿಸುತ್ತಿರುವ ಇರುವ ನನ್ನ ಹೆಸರು "ಆನಂದ"  .


ಮನೆಗೆ  ಸುಸ್ತಾಗಿ ಬಂದ  ನಾನು  ಲ್ಯಾಪ್ ಟಾಪ್  ಕಿಟ್ಟನ್ನು ಒಂದೆಡೆ  ಬಿಟ್ಟು , ಅಲ್ಲೇ ಇದ್ದ ಸೋಫಾದ ಮೇಲೆ ಒರಗಿದೆ. ಒಳಗಿಂದ ಬಂದ  ನನ್ನ ಪ್ರಿಯ ಪತ್ನಿ     ಅನುರೂಪ   ನಗು ನಗುತ್ತಾ ಬಂದು ಪಕ್ಕದಲ್ಲಿ ಕುಳಿತು  ರಮಿಸಿ , "ಆನಂದ್ ಫ್ರೆಶ್ ಆಗಿಬನ್ನಿ  ಕಾಫಿ ಕೊಡ್ತೀನಿ'  ಅಂದಳು . ನಾನೂ ಸಹ ಯಾಂತ್ರಿಕವಾಗಿ  ಬಾತ್ ರೂಂ ಗೆ ಹೋಗಿ ಫ್ರೆಶ್ ಆಗಿ ಬಂದೆ ,

ಡೈನಿಂಗ್ ಟೇಬಲ್ ಮೇಲೆ ಬಿಸಿ ಬಿಸಿ ಪಕೋಡ  ಜೊತೆ ನಮ್ಮ ಹರಟೆ ನಡೆದಿತ್ತು. ಬಿಸಿ ಬಿಸಿ ಪಕೋಡದ ಜೊತೆ ಕಾಫಿಹೀರುತ್ತಿದಂತೆ  ಕಂಪನಿಯ ಕೆಲಸದ ಆಯಾಸ  ಆವಿಯಾಗಿ ಮಾಯವಾಗಿತ್ತು. ಅಷ್ಟರಲ್ಲಿ ನನ್ನ ಒಬ್ಬನೇ ಮಗ "ಅನೂಪ್ " ಒಳಗೆ ಬಂದವನೇ  ಪಪ್ಪಾ ಅಂತಾ ಬಂದು ಅಪ್ಪಿ ಕೊಂಡ ,


          ಅನೂಪ್ :-) "ಏನ್ ಪಪ್ಪಾ ಎಷ್ಟು ದಿನ ಆಯ್ತು ನಿಮ್ಮನ್ನ ನೋಡಿ   , ಕಳೆದ ಒಂದು ವಾರದಿಂದ    ನೀವು                   ನನಗೆ       ಸಿಕ್ತಾ ಇಲ್ಲ.                           ನಿಮ್ಮಬಳಿ  ಅರ್ಜೆಂಟ್  ಮಾತಾಡ್  ಬೇಕಾಗಿತ್ತು , ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದೆ ನೀವು ಸಿಗಲಿಲ್ಲ ಅದಕ್ಕೆ                    ಮೇಲ್  ನಲ್ಲಿ ಮೆಸೇಜ್ ಇಟ್ಟೆ"        

ನಾನು :-)  
                "ಸಾರಿ ಮಗನೆ , ಬಹಳ ಬ್ಯುಸಿ ಕಣೋ  , ಟೈಮ್ ಸಿಕ್ತಾಇಲ್ಲ , ಕಂಪನಿ  ಮ್ಯಾನೇಜ್ಮೆಂಟ್  ಬಹಳ ಕಷ್ಟ ಆಗಿದೆ.                         ಅದಕ್ಕೆ ನೋಡು ಮನೆ ಕಡೆ ಬರೋಕೆ ಆಗ್ತಾ ಇಲ್ಲ. " ಮತ್ತೆ ಏನ್ ಸಮಾಚಾರ ?


ಅನೂಪ್ :-) 
                 "ಪಪ್ಪಾ  ನಮ್ಮ ಶಾಲೆಯಲ್ಲಿ  ಸ್ಟೂಡೆಂಟ್ಸ್ ಅಪ್ಪಂದಿರ  ಒಂದು ಮೀಟಿಂಗ್ ಕರೆದಿದ್ದಾರೆ , ಅಪ್ಪಂದಿರು ಮಾತ್ರಾ                         ಬರಬೇಕಂತೆ"  
                 
ನಾನು:-)  
              "ನಿಮ್ಮ ಸ್ಕೂಲ್ ನವರಿಗೆ ಬೇರೆ ಕೆಲಸ ಇಲ್ವಂತಾ  , ಮನೆಯಲ್ಲಿ  ಇರುವ ಪೇರೆಂಟ್ಸ್ ಪೈಕಿ  ಅಪ್ಪ ಅಥವಾ ಅಮ್ಮ                 ಇಬ್ಬರಲ್ಲಿ  ಒಬ್ಬರು ಬಂದ್ರೆ  ಸಾಲದಂತಾ ?? "

ಅನೂಪ್ :-) 
               "ಇಲ್ಲಾ ಪಪ್ಪಾ  ಅಪ್ಪಂದಿರು ಮಾತ್ರ ಬರಬೇಕಂತೆ , ಮುಂದಿನ ಶುಕ್ರವಾರ, ಪ್ಲೀಸ್ ಪಪ್ಪಾ ಇಲ್ಲಾ ಅಂತ  ಅನ್ನ                           ಬೇಡಿ  , ನೀವು ಬರಲೇ ಬೇಕು" 

ನಾನು :-)              
                "ಇಲ್ಲಾ ಅನೂಪ್  ನನಗೆ ಸಾಧ್ಯವಿಲ್ಲ  ನಿಮ್ಮ ಸ್ಕೂಲ್ ನವರಿಗೆ ಒಂದು ಲೆಟರ್ ಕೊಡ್ತೀನಿ  ಅದನ್ನು ಅವರಿಗೆ ಕೊಡು                  , ನನಗೆ ಕಂಪನಿಯ ಕೆಲಸ ಜಾಸ್ತಿ  ಬಿಡುವು ಸಿಗೋಲ್ಲ. ಕಂಪನಿ ಮ್ಯಾನೇಜ್ಮೆಂಟ್ ಬಗ್ಗೆ  ನಾನು                                            ಒಂದುಟ್ರೇನಿಂಗ        ಕೊಡಬೇಕಾಗಿದೆ,  ವಿದೇಶಿ ಕಂಪನಿಯ ಹಲವರು ಬರುತ್ತಾರೆ. ಮುಂದೊಮ್ಮೆ ನೋಡೋಣ ಸಾಧ್ಯಾ ಆದಾಗ. " ಅಂದೆ .

ಅನೂಪ್ :-)  
               ಇಲ್ಲಾ ಪಪ್ಪಾ ನೀವು ಬರದಿದ್ದರೆ , ನನಗೆ ಕಷ್ಟಾ ಆಗುತ್ತೆ, 

ನಾನು:-)
            " ಯಾಕೋ ಸ್ಕೂಲಿನಲ್ಲಿ ಏನಾದ್ರು ಯಡವಟ್ಟು ಮಾಡಿಕೊಂಡ್ಯ ?? ಏನ್ ಸಮಾಚಾರ ,                                          ಸ್ಕೂಲಿನವರು ಯಾಕೆ     ನನ್ನನ್ನು ಕರೆಯುತ್ತಿದ್ದಾರೆ"?  ಅಂದೇ ,
                ಮಗ ರಾಯ ಕೋಪ ಮಾಡಿಕೊಂಡು ಅಳುತ್ತಾ ತನ್ನ ರೂಮಿಗೆ ಹೋಗಿ  ಬಾಗಿಲನ್ನು  ರಪ್                                                 ಅಂತಾ ಬಾಗಿಲು ಮುಚ್ಚಿಕೊಂಡಾ 

ಇದನ್ನು ಗಮನಿಸಿದ ಪತ್ನಿ " ರೀ ನಿಮಗೆ ಮಗನಿಗಿಂತಾ  ನಿಮ್ಮ ಕಂಪನಿಯೇ ಜಾಸ್ತಿಯಾಯ್ತಾ ?"
ಅಂತಾ ನನ್ನನ್ನು  ಗದರಿ ಪಾಪ ಅನೂಪ್  ಇನ್ನೂ ಏನೂ ತಿಂದಿಲ್ಲ  ಅದೇನ್ ಮಾಡ್ತೀರೋ ಗೊತ್ತಿಲ್ಲಾ  ನೀವು ಶುಕ್ರವಾರ ಅನೂಪ್ ಸ್ಕೂಲಿಗೆ ಹೋಗ್ತೀರಾ ಅಷ್ಟೇ  ಅನ್ನುತ್ತಾ  ಮಗನನ್ನು  ಸಂತೈಸಲು  ನಡೆದಳು.  ನಾನೂ ಸಹ ಅವಳ ಹಿಂದೆ ನಡೆದೇ. 

ಮಗನನ್ನು ಸಂತೈಸಿ  ಊಟ ಮಾಡಿಸಿ ಸ್ಕೂಲಿಗೆ ಬರುವುದಾಗಿ ಮಾತುಕೊಟ್ಟೇ .ಮಾರನೆಯ ದಿನ  ಮಗನ ಸ್ಕೂಲಿಗೆ  ಫೋನ್ ಮಾಡಿ  ಅಪ್ಪಂದಿರ ಭೇಟಿ ಕಾರ್ಯಕ್ರಮದ ವಿವರ ಪಡೆದೆ. ಮಧ್ಯಾಹ್ನ  ಹನ್ನೆರಡಕ್ಕೆ  ಕಾರ್ಯಕ್ರಮ ಇರುವುದಾಗಿ ತಿಳಿಸಿದರು.   ಮುಂದಿನ ಶುಕ್ರವಾರ  ಬೆಳಿಗ್ಗೆ  ಇದ್ದ  ಮೀಟಿಂಗ್ ಗಳನ್ನೂ  ಮೂರು ಘಂಟೆಗೆ  ಮುಂದೂಡಲು ಕಂಪನಿಯ ನಿರ್ವಾಹಕರಿಗೆ ಹೇಳಿದೆ. ಆದರೆ ಮನದಲ್ಲಿ ಮಗನ ಶಾಲೆಯಲ್ಲಿ  ಸ್ಟೂಡೆಂಟ್ ಅಪ್ಪಂದಿರನ್ನು  ಯಾಕೆ  ಕರೆದಿದ್ದಾರೆ ? ಎಂಬ ಬಗ್ಗೆ ಅಚ್ಚರಿಯಾಗಿತ್ತು.

ಹಾಗು ಹೀಗೂ ದಿನಗಳು ಸರಿದವು, ಶುಕ್ರವಾರ ಬಂದಿತು  ಮಗನ ಸ್ಕೂಲಿಗೆ ತೆರಳುವ ಸಮಯ ಬಂತು. ಮಗನೂ ಸಹ   ಬಹಳ  ಖುಷಿಯಿಂದ  ಸಿದ್ಧನಾದ , ಸರಿ ನಾನೂ ಮತ್ತು ಅನೂಪ್  ನನ್ನವಳಿಗೆ ವಿಶ್ ಮಾಡಿ ಕಾರಿನಲ್ಲಿ ಹೊರಟೆವು.  ದಾರಿಯಲ್ಲಿ  ಸಾಗುತ್ತಿದ್ದ ಒಂದು ಕಡೆ  ಅನೂಪ್ ಕಾರನ್ನು ನಿಲ್ಲಿಸಲು  ಹೇಳಿದ.  ನನಗೆ ಅಚ್ಚರಿ!   "ಯಾಕೆ ಅನೂಪ್  ಅಂದೇ'.

ಅನೂಪ್ :-) 
                  "ಪಪ್ಪಾ  ಬನ್ನಿ ಪಪ್ಪಾ ಇನ್ನೂ ಟೈಮಿದೆ  , ನಿಮ್ಮ ಹತ್ತಿರ ಸ್ವಲ್ಪ ಮಾತಾಡ ಬೇಕೂ "                                          ಅಂದಾ ಇಬ್ಬರೂ  ಅಲ್ಲೇ ಇದ್ದ ಒಂದು ಪಾರ್ಕಿನಲ್ಲಿ ಕುಳಿತೆವು  ನನಗೆ ಇದೆಲ್ಲಾ  ವಿಚಿತ್ರವಾಗಿತ್ತು. 


ನಾನು  :-) 
                "ಅಲ್ಲಾ ಕಣೋ  ಅನೂಪ್  ಇದೇನು ಇವತ್ತು ನಿನ್ನ ವರ್ತನೆ  ವಿಚಿತ್ರವಾಗಿದೆ, ನೀನಿನ್ನೂ ಹೈಸ್ಕೂಲು ಹುಡುಗ                           ಒಂಬತ್ತನೇ  ಕ್ಲಾಸು , ಏನ್ ವಿಚಾರ  ಹೇಳಪ್ಪ ಅಂದೇ "

ಅನೂಪ್ :-) 
                  ಪಪ್ಪಾ   ನನ್ನ ಸ್ಕೂಲಿನಲ್ಲಿ  ಅಪ್ಪಂದಿರನ್ನು  ಯಾಕೆ ಕರೆಸುತ್ತಿದ್ದಾರೆ ? ಅಂತಾ ತಿಳಿದು ಕೊಳ್ಳುವ ಆಸಕ್ತಿ ಇಲ್ಲವ                         ಪಪ್ಪಾ  ?              ಅಂದಾ 

ನಾನು:-) 
                ಯಾಕೆ ಕರೆಸುತ್ತಾರೆ ಎಲ್ಲೋ  ಫೀಸ್ , ಅಥವಾ ಡೊನೆಶನ್  ಕೇಳೋಕೆ ಇರಬೇಕೂ, ಇನ್ಯಾಕೆ ? ಕರೆಸುತ್ತಾರೆ .

Sunday, January 27, 2013

ನಾವೂ ಭಾರತೀಯರೇ .............???ನೀವೇನು ಹೇಳುತ್ತೀರಾ ??

ಚಿತ್ರ ಕೃಪೆ ಅಂತರ್ಜಾಲ 
ನಿನ್ನೆ ತಾನೇ ಭಾರತ ಗಣರಾಜ್ಯೋತ್ಸವ  ಆಚರಿಸಿಕೊಂಡಿದೆ, ಇವತ್ತಿನ ಪತ್ರಿಕೆಗಳಲ್ಲಿ  ರಾಷ್ಟ್ರ ದ್ವಜ ಹಲವೆಡೆ ಅಪಮಾನಕ್ಕೆ ಈಡಾದ ಬಗ್ಗೆ ವರದಿ ಬಂದಿದೆ.  ಗಣರಾಜ್ಯೋತ್ಸವ ಬಂತು ಕಾಟಾಚಾರಕ್ಕೆ ಆಚರಣೆ ಮಾಡಿದ ನಾವು ಮುಂದಿನ ರಾಷ್ಟ್ರೀಯ ಹಬ್ಬಗಳ ವರೆಗೆ ಸುಮ್ಮನಾಗುತ್ತೇವೆ. ನಿನ್ನೆ ನಡೆದ ಗಣರಾಜ್ಯೋತ್ಸವ ದಿನಾಚರಣೆ ಯಲ್ಲಿ ಮೂರು ಕಾರ್ಯಕ್ರಮ ನೋಡುವ ಅವಕಾಶ ನನಗೆ ಸಿಕ್ಕಿತು.

ದೃಶ್ಯ ..೦೧ } ಅದೊಂದು ಶಾಲೆ ಅಲ್ಲಿ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ  ಶಾಲೆಯ ಮುಂದೆ ಗಣರಾಜ್ಯೋತ್ಸವ ಆಚರಿಸಲು ನಿಂತಿದ್ದವು., ಕಾರ್ಯಕ್ರಮದಲ್ಲಿ  ಭಾಗವಹಿಸ ಬೇಕಾದ ಮುಖ್ಯ ಅತಿಥಿಗಳು ಸುಮಾರು ಒಂದು ಘಂಟೆ ಕಾಲ ವಿಳಂಭವಾಗಿ ಆಗಮಿಸಿದರು, ಬಂದವರೇ , ಆತುರ ಆತುರವಾಗಿ ರಾಷ್ಟ್ರ ದ್ವಜಆರೋಹಣ  ಮಾಡಿದರು,  ನಂತರ  ರಾಷ್ಟ್ರ ಗೀತೆ ಹಾಡಲು ಶಾಲಾ ಶಿಕ್ಷಕರಿಗಾಗಲೀ , ಅತಿಥಿ ಗಳಿಗಾಗಲಿ  , ಸರಿಯಾದ ಕ್ರಮವೇ ಗೊತ್ತಿರಲಿಲ್ಲ  ಎದೆ ಯುಬ್ಬಿಸಿ ,  ಹೆಮ್ಮೆಯಿಂದ  ಜೋರಾಗಿ ಹಾಡಬೇಕಾದ ರಾಷ್ಟ್ರ ಗೀತೆ ಯನ್ನು  ಅತೀ ಸಣ್ಣ ಶಬ್ಧದಲ್ಲಿ  ಹಾಡಿ  ಮುಗಿಸಿದರು,   ಹಾಡುವಾಗ ರಾಷ್ಟ್ರ ಗೀತೆಯ ಪದಗಳ ತಪ್ಪು ಉಚ್ಚಾರಣೆ ಕೂಡ ನಡೆದಿತ್ತು, ಗಣ್ಯರ  ಗಣರಾಜ್ಯೋತ್ಸವ ಸಂದೇಶ ದೇವರಿಗೆ ಪ್ರೀತಿ,  ಸಂದೇಶದಲ್ಲಿ ದೇಶದ  ಗಣರಾಜ್ಯೋತ್ಸವದ  ಬಗ್ಗೆ  ಏನೂ ಇರಲಿಲ್ಲ.  ಇನ್ನು ಮಕ್ಕಳು ಮೊದಲೇ ಬಿಸಿಲಿನಲ್ಲಿ ಬಳಲಿ  ರಾಷ್ಟ್ರ ಗೀತೆ ಹಾಡಿ  ಶಾಲೆಯವರು ನೀಡಿದ ಚಾಕ್ಲೆಟ್  ತಿಂದು ಮನೆಗೆ ತೆರಳಿದವು.

ದೃಶ್ಯ ೨} ಮತ್ತೊಂದು  ಕಚೇರಿ ಯಲ್ಲಿ ಸಿಬ್ಬಂದಿ  ಹಾಗು ಅಧಿಕಾರಿಗಳು  ಗಣರಾಜ್ಯೋತ್ಸವ ಆಚರಣೆ ಮಾಡಲು ಸೇರಿದ್ದರು, ಕಾರ್ಯಕ್ರಮ ಶುರುವಾಯಿತು,  ರಾಷ್ಟ್ರ ದ್ವಜ  ಆರೋಹಣ ಮಾಡುವಾಗ ದ್ವಜ ಹಾರಲೇ ಇಲ್ಲ, ಹಾರಿಸುವಾಗ ದಾರ ಎಳೆದರೆ ದ್ವಜ  ಸಿಕ್ಕಿಕೊಂಡು ಪರದಾಡ  ಬೇಕಾಯಿತು,  ಇನ್ನು ರಾಷ್ಟ್ರ ಗೀತೆ ಹಾಡುವಾಗ ಯಾರ ದ್ವನಿಯೂ ಜೋರಾಗಿ ಹೊರಡಲಿಲ್ಲ, ಬೇರೆ ದಿನಗಳಲ್ಲಿ ಜೋರಾಗಿ ದ್ವನಿ ಎತ್ತುವ ಜನ ರಾಷ್ಟ್ರ ಗೀತೆ ಹಾಡಲು ದ್ವನಿ ಹೊರಡಿಸಲೇ ಇಲ್ಲ. ಜೊತೆಗೆ ಹಾಡಿದ್ದು ತಪ್ಪು ತಪ್ಪು, ಪದಗಳ ರಾಷ್ಟ್ರ ಗೀತೆ,  ಇನ್ನು  ಗಣ್ಯರು ಸಂದೇಶ ನೀಡುವ ಮನಸ್ಥಿತಿಯಲ್ಲಿ  ಇರಲಿಲ್ಲ. ಕೂಡಲೇ ತರಾತುರಿಯಲ್ಲಿ ಹೊರಟೆ ಬಿಟ್ಟರು, ಉಳಿದವರು ಹೋಟೆಲ್ ನಿಂದ ತರಿಸಿದ್ದ  ಉಪಹಾರ ಸೇವಿಸಿ  ಹೊರಟರು.

ದೃಶ್ಯ ೩} ಮತ್ತೊಂದು ಸಂಸ್ಥೆ ಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆದಿತ್ತು, ಎಲ್ಲರೂ ಕೋಟು, ಧರಿಸಿ, ಟೈ ಕಟ್ಟಿ ಕೊಂಡು  ಟಾಕೂ ಟೀಕಾಗಿ  ಬಂದಿದ್ದರು,  ಕಾರ್ಯಕ್ರಮ ಶುರು ಆಯಿತು, ಗಣ್ಯರಾಗಿ  ಆ ಸಂಸ್ಥೆಯ ಹಿರಿಯರು ಬಂದಿದ್ದರು,  ರಾಷ್ಟ್ರ ದ್ವಜ ವನ್ನು ಕಟ್ಟಲು,  ನಿವೃತ್ತ ಶಿಕ್ಷಕರನ್ನು  ಕರೆದುಕೊಂಡು  ಬಂದಿದ್ದರು, ಗಣ್ಯರು ರಾಷ್ಟ್ರ ದ್ವಜ ಹಾರಿಸಿದರು, ಆದರೆ ರಾಷ್ಟ್ರ ದ್ವಜ  ಉಲ್ಟಾ ಕಟ್ಟಲಾಗಿತ್ತು, ಅದನ್ನು ತಕ್ಷಣವೇ ಕೆಳಗಿಳಿಸಿ  ಮತ್ತೊಮ್ಮೆ ಸರಿಪಡಿಸಿ ರಾಷ್ಟ್ರ ದ್ವಜ  ಹಾರಿಸಲಾಯಿತು,  ಇನ್ನು ರಾಷ್ಟ್ರ ಗೀತೆ ಹಾಡಲು ಪಾಪ ಇವರಿಗೂ ಧ್ವನಿಯೇ  ಹೊರಡಲಿಲ್ಲ. ನಂತರ ಭಾಷಣ ಮಾಡಲು ತಾ ಮುಂದು ತಾ ಮುಂದು ಎಂಬಂತೆ ಬಂದ. ಯಾರ ಭಾಷಣದಲ್ಲೂ ಗಣರಾಜ್ಯೋತ್ಸವದ ಬಗ್ಗೆ ಮಾತಿಲ್ಲ. ತಮ್ಮ ಸಂಸ್ಥೆಯ ಸಾಧನೆ ಬಗ್ಗೆ  ಮಾತೂ ಮಾತೂ ಮಾತು.


ಇದು ಈ ಭಾರಿ ನಾನು ನೋಡಿದ ಗಣರಾಜ್ಯೋತ್ಸವ ಸಂಭ್ರಮ , ಇದನ್ನು ನೋಡಿ ರಾಷ್ಟ್ರೀಯ ಹಬ್ಬಗಳು ನಮ್ಮೆಲ್ಲರ ಮನಸ್ಸಿನಿಂದ  ಮರೆಯಾಗುತ್ತಿರುವುದೇನೋ ಎಂದು ಅನ್ನಿಸಿ  ನೋವಾಯಿತು.ಯಾಕೆ ಹೀಗೆ ಎಂಬ ಪ್ರಶ್ನೆಗೆ  ಉತ್ತರ ಸಿಗದೇ ನಿರಾಶೆಯಾಗಿದೆ.  ಅದ್ಸರಿ ನಾವ್ಯಾಕೆ ಹೀಗೆ?? ದೇಶದ ಬಗ್ಗೆ ಉದ್ದ ಉದ್ದ ಭಾಷಣ ಬಿಗಿಯುವ ನಾವು,  ಕನಿಷ್ಠ ನಮ್ಮ ದೇಶದ ರಾಷ್ಟ್ರೀಯ  ಹಬ್ಬಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ಯಾಕೆ. ಇದನ್ನೂ ವಿದೇಶಿಯರಿಂದ  ಹೇಳಿಸಿ ಕೊಳ್ಳಬೇಕೆ ??? ಅಥವಾ ನನಗೆ  ದೇಶದ ಬಗ್ಗೆ ಏನೂ ಗೊತ್ತಿಲ್ಲಾ  ಎಂಬುದೇ ನಮ್ಮ  ಹೆಗ್ಗಳಿಕೆಯೇ ?? ಉತ್ತರ ಸಿಗುತ್ತಿಲ್ಲ 



ದೆಹಲಿಯ ಕೆಂಪು ಕೋಟೆ 

ಒಮ್ಮೆ ಹೀಗಾಯ್ತು ಬಹಳ ವರ್ಷಗಳ ಹಿಂದೆ ಶ್ರೀ ರಂಗ ಪಟ್ಟಣದಲ್ಲಿ  ಒಂದು ಸರ್ಕಾರಿ ಕಚೇರಿಯ ಮುಂದೆ  ರಾಷ್ಟ್ರೀಯ ಹಬ್ಬದ ಆಚರಣೆ  ನಡೆಯುತ್ತಿತ್ತು, ಇದನ್ನು ನೋಡಿದ ಇಬ್ಬರು ವಿದೇಶಿಯರು  ಆ ಕಚೇರಿಯ ಆವರಣದೊಳಗೆ ಬಂದು ತಾವೂ ಸಹ  ನಮ್ಮ ರಾಷ್ಟ್ರ ದ್ವಜಕ್ಕೆ ವಂದಿಸಿ  , ರಾಷ್ಟ್ರ ಗೀತೆ ಹಾಡುವಾಗ ಮುಗಿಯುವವರೆಗೆ  ಅಲ್ಲಾಡದೆ  ಗೌರವದಿಂದ ನಿಂತು ವಂದಿಸಿದರು.  ನನಗೂ ಕುತೂಹಲ ತಡೆಯದೆ ಅವರನ್ನು ಕೇಳಿದೆ  "ಇದು ನಿಮ್ಮ ರಾಷ್ಟ್ರದ ಹಬ್ಬ ಅಲ್ಲಾ ಅದರೂ ನೀವು ನಮ್ಮೊಡನೆ ಬಂದು  ಪಾಲ್ಗೊಂಡಿರಿ  ಯಾಕೆ ??"  ಅಂದೇ ಅದಕ್ಕೆ  ಅವರು ಹೇಳಿದ್ದು ಹೀಗೆ "ನಾವು  ಬಹಳಷ್ಟು ದೇಶಗಳಿಗೆ ಪ್ರವಾಸ ಹೋಗುತ್ತೇವೆ  ಹೀಗೆ ಹೋದಾಗ  ಆ ದೇಶದ ಭಾವನೆಗಳಿಗೆ ಅಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸ ಬೇಕಾದದ್ದು  ನಮ್ಮ ಕರ್ತವ್ಯ, ಇಲ್ಲಿಯೂ  ಸಹ ನಿಮ್ಮ ದೇಶದ ಅತಿಥಿಗಳು ನಾವು, ನಿಮ್ಮ ದೇಶದ  ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವುದು, ನಿಮ್ಮ ರಾಷ್ಟ್ರ ದ್ವಜಕ್ಕೆ, ರಾಷ್ಟ್ರ ಗೀತೆಗೆ  ಗೌರವ ನೀಡುವುದು  ನಮ್ಮ ಕರ್ತವ್ಯ" ಹಾಗು ನಮ್ಮ ದೇಶದಲ್ಲಿ  ಇದನ್ನು ಖಡ್ಡಾಯವಾಗಿ ಪ್ರತೀ ಪ್ರಜೆಗೂ ತಿಳಿ ಹೇಳಲಾಗುತ್ತದೆ.ಎಂದರು. ನನಗೆ ಒಮ್ಮೆಲೇ ತಲೆ ತಿರುಗಿತು.

 ಹೌದಲ್ವಾ ನಮಗೆ ಇದನ್ನು ಯಾರು ಹೇಳಿ ಕೊಡಲಿಲ್ಲ. ಯಾವ ಶಾಲೆಯಲ್ಲೂ ಸಹ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುತ್ತಿಲ್ಲ. ಬರಿ ಪರೀಕ್ಷೆ ಬರೆಯಲು ಇರುವ ಪಾಠವಾಗಿ  ಸಂವಿಧಾನದ ವಿಚಾರಗಳು ಇವೆ. ಇನ್ನು ನಮ್ಮ ಹಿರಿಯರು ಮಕ್ಕಳಿಗೆ ದೇಶದ ಬಗ್ಗೆ ಇಂತಹ ವಿಚಾರ ತಿಳಿಸುವುದಿಲ್ಲ, ಇವನ್ನು ಪಾಲನೆ ಮಾಡದೆ ಇದ್ದರೂ ಯಾವುದೇ ಶಿಕ್ಷೆ ಇಲ್ಲ. , ಇವೆಲ್ಲದರ ನಡುವೆ ನಾವು ಭಾರತೀಯರೆಂಬ ಬಗ್ಗೆ ನಮ್ಮ ಜಂಭದ  ಮಾತುಗಳು  ಲೆಕ್ಕವಿಲ್ಲ ,



ನಮ್ಮ ಬಾವುಟದ ಹಿರಿಮೆ ಇಲ್ಲಿದೆ 

ನಿಜಾ ಹೇಳಿ  ೧} ರಾಷ್ಟ್ರ ಗೀತೆಗೆ ಗೌರವ ನೀಡದ ನಾವು, ರಾಷ್ಟ್ರ ಗೀತೆ ಹಾಡಲು ನಾಚಿಕೆ ಪಡುವ ನಾವು,  ಯಾವ ರಾಷ್ಟ್ರಕ್ಕೆ        ಸೇರಿದವರು ??

೨} ರಾಷ್ಟ್ರ ದ್ವಜ ಹಾರಿಸಲು ತಿಳಿಯದ , ರಾಷ್ಟ್ರ ದ್ವಜ ದ ಬಗ್ಗೆ ಅರಿಯಲು ಇಷ್ಟ ಪಡದ  ನಾವು ಯಾವ ದೇಶದವರು ??

೩} ರಾಷ್ಟ್ರ ಲಾಂಛನದ  ಬಗ್ಗೆ   ಅರಿಯದೆ , ಅದರ ಮಹತ್ವ ತಿಳಿಯದ ನಾವು  ಯಾರು ??


 ಮುಂದೊಮ್ಮೆ ರಾಷ್ಟ್ರ ದ್ವಜ ಕಟ್ಟಲು, ರಾಷ್ಟ್ರ ಗೀತೆ ಹಾಡುವುದನ್ನು ಹೇಳಿ ಕೊಡಲು  ವಿದೇಶಿಯರನ್ನು ಕರೆಸ ಬೇಕಾಗ ಬಹುದು  ಒಮ್ಮೊಮ್ಮೆ ಅನ್ನಿಸುತ್ತದೆ. ಇವೆಲ್ಲಾ ದಿನ ನಿತ್ಯ ನೋಡುತ್ತಿದ್ದರು ತಿದ್ದಿಕೊಳ್ಳದ ನಾವು ನಿಜವಾಗಿಯೂ  ಈ ದೇಶದ ಹೆಮ್ಮೆಯ ಭಾರತೀಯರೇ  ನೀವೇ ಹೇಳಿ.ಅಂದ ಹಾಗೆ ನಿಮಗೆ ರಾಷ್ಟ್ರ ದ್ವಜ ಕಟ್ಟಲು, ರಾಷ್ಟ್ರ ಗೀತೆ ಹಾಡಲು ಬರುತ್ತದೆಯೇ ??  ಬರದಿದ್ದರೆ ಮುಂದಿನ ರಾಷ್ಟ್ರೀಯ ಹಬ್ಬದ ವೇಳೆಗೆ  ದಯವಿಟ್ಟು ಕಲಿತು , ಈ ದೇಶದ ಹೆಮ್ಮೆಯ ಭಾರತೀಯರಾಗಿ. ಏನಂತೀರ??



Tuesday, January 22, 2013

ಹೀಗೊಂದು ಎಡವಟ್ಟು ಪರಸಂಗ .............!!!

ಇವರದೇ ಒಂದು ಪರ್ಪಂಚ  [ ಚಿತ್ರ ಕೃಪೆ ಅಂತರ್ಜಾಲ ]

ಒಮ್ಮೊಮ್ಮೆ ನಾವು ಅಂದುಕೊಳ್ಳದ ರೀತಿಯಲ್ಲಿ ನಮಗೆ ಕೆಲವು ವಿಚಿತ್ರ  ಸನ್ನಿವೇಶಗಳು ಸೃಷ್ಟಿಯಾಗಿ ನಮ್ಮ ಜೀವನದಲ್ಲಿ ನಗೆ ಹುಟ್ಟಿಸುತ್ತವೆ. ಈ ಸನ್ನಿವೇಶವೂ ಸಹ ಅಂತಹುದೇ ಒಂದು.

ಒಮ್ಮೆ ಬಸ್ಸಿನಲ್ಲಿ ಪ್ರಯಾಣ ಹೊರಟಿದ್ದೆ. ಬಸ್ ಅಂದಮೇಲೆ ಗೊತ್ತಲ್ಲಾ , ಪ್ರತಿಯೊಬ್ಬ ಪ್ರಯಾಣಿಕನೂ ಅವರದೇ ಒಂದು ಪರ್ಪಂಚ ದಲ್ಲಿ ವಿಹರಿಸುತ್ತಿರುತ್ತಾನೆ. ಎಷ್ಟು ಹೊತ್ತಾದರೂ ಆ ಬಸ್ಸು ಹೊರಟಿರಲಿಲ್ಲ ಪ್ರಯಾಣಿಕರಿಂದ ಚಾಲಕ ನಿರ್ವಾಹಕರಿಗೆ  ಹಿಡಿ ಶಾಪ. ಅವರನ್ನು ಬಯ್ಯಲು ಪ್ರತಿಯೊಬ್ಬರಿಗೂ  ಏನೋ  ಮಜಾ ಉತ್ಸಾಹ. ಹಾಗೂ ಹೀಗೂ ಈ ಮನರಂಜನೆ ನಡುವೆ ಬಸ್ ಹೊರಟಿತು,

ಇನ್ನು ಬಸ್ ಚಾಲಕ ನಿರ್ವಾಹಕರಿಗೆ ಪ್ರಯಾಣಿಕರನ್ನು ಸಂಬಾಳಿಸುವಲ್ಲಿ  ಸುಸ್ತೋ ಸುಸ್ತು . ಹೀಗಿರುವಲ್ಲಿ ಚಾಲಕ ಮಹಾಶಯ  ಬಸ್ಸನ್ನು ಚಾಲನೆ ಮಾಡುತ್ತಾ ಎದುರಿಗೆ ಬರುವ ವಾಹನಗಳ ಚಾಲಕರಿಗೆ  ಬೈಗುಳದ ಅರ್ಚನೆ ಮಾಡುತ್ತಾ , ತಾನೊಬ್ಬನೇ ಸರಿಯಾದ ಚಾಲಕ ಬೇರೆಯವರು  ಚಾಲಕರೇ ಅಲ್ಲಾ ಎನ್ನುವ ಹಾಗೆ ವರ್ತಿಸುತ್ತಿದ್ದ. ಇನ್ನು ನಿರ್ವಾಹಕ  ಮಹಾಶಯ ಸ್ವಲ್ಪ ಹಾಸ್ಯ ಪ್ರಿಯ , ನಗೆ ಚಟಾಕಿ ಹಾರಿಸುತ್ತಾ  , ಉಪಾಯವಾಗಿ ಟಿಕೆಟುಗಳನ್ನು ಪ್ರಯಾಣಿಕರಿಗೆನೀಡುತ್ತಿದ್ದ. "ಬನ್ನಿ ಸಾರ್ ಬನ್ನಿ ನೀವು ಒಳ್ಳೆಯವರು  ಮುಂದೆ ಬನ್ನಿ  ಇಲ್ಲಿ ಹಾಗೆ ಹಾಗೆ ನಿಲ್ಲಿ ಸಾರ್ ಪರವಾಗಿಲ್ಲ ನಿಮ್ ಊರು ಬಂದಾಗ ಖಂಡಿತಾ ನಿಮ್ಮನ್ನು ಜೋಪಾನವಾಗಿ ಇಳಿಸುತ್ತೇನೆ", ಅಂತ ಒಬ್ಬರಿಗೆ ಹೇಳಿದರೆ,  ಮತ್ತೊಬ್ಬ ಹುಡುಗನಿಗೆ  "ಓ ಅಣ್ಣಾ ಇದೇನು ಅತ್ತೆ ಮನೆಗೆ ಅಳಿಯ  ಬಂದು ಬಾಗಿಲು ಮುಂದೆ ನಿಂತ ಹಾಗೆ ಬಾಗಿಲು ಕಾಯ್ತಿಯಾ ಬಾ ಅಣ್ಣಾ ಒಳಗೆ , ಕಾಲೇಜು ಪರೀಕ್ಸೆ ಬ್ಯಾರೆ ಹತ್ತಿರಾ ಬಂತು ಹೆಚ್ಚು ಕಡಿಮೆ ಆದೀತು"  ಅಂದಿದ್ದ. ಮತ್ತೊಬ್ಬ ಹೆಂಗಸಿಗೆ  "ಅಕ್ಕೋ ಬಾ ಇಲ್ಲಿ ಒಳಕೆ  ನೀ ಬಸ್ಸಿಂದ ಬಿದ್ದು ಹೆಚ್ಚು ಕಡಿಮೆ ಆದ್ರೆ  ನಿಮ್ ಯಜಮಾನ ನನ್ನ ಸುಮ್ನೆ ಬುಟ್ಟಾನೆ" ಅಂತಾ ಅಂದ ಮಾತಿಗೆ ಬಸ್ಸಿನಲ್ಲಿ ಎಲ್ಲರು ನಕ್ಕರು.ಹೀಗೆ ಸಾಗಿತ್ತು ಪಯಣ.


ಹಳ್ಳಿ ಬಸ್ಸಿನ ಒಂದು  ನೋಟ [ ಚಿತ್ರ ಕೃಪೆ ಅಂತರ್ಜಾಲ ]


 ನಿರ್ವಾಹಕ ಟಿಕೆಟ್ ಕೊಡುತ್ತಾ  ಒಬ್ಬ ಹೆಂಗಸಿನ ಹತ್ತಿರ ಬಂದಾ  "ಯಾವ್ ಕಡೀಕೆ ತಾಯಿ  ಬಿರ್ ಬಿರ್ ನೆ [ ಬೇಗ ಬೇಗ ] ತತ್ತಾ [ ಕೊಡು]  ದುಡ್ಡಾ"  ಅಂದಾ  "ಯೋ ಒಸಿ ತಾಳು"  ಅಂದವಳೇ  ವಿಳ್ಳೆದೆಲೆ  ಅಡಿಕೆಯನ್ನು ಬಾಯಿಯೊಳಗೆ ಹಾಕಿ ಕೊಂಡು "ಜಕ್ಕನಹಳ್ಳಿ ಒಂದು ಸೀಟು"  ಅಂದಳು  ನಿರ್ವಾಹಕ  ಪರ್ ಅಂತಾ ಟಿಕೇಟು ಹರಿದು "ಹತ್ತು ರುಪಾಯಿ ಕೊಡವ್ವ" ಅಂದಾ . ಎಲೆ ಅಡಿಕೆ ಜಗಿಯುತ್ತಾ ತನ್ನ ಸಂಚಿಯನ್ನು [ ಹಳ್ಳಿ ಹೆಂಗಸರು ಬಳಸುವ ಬಟ್ಟೆಯ ಪಾಕೆಟು ]  ತೆಗೆದು ದುಡ್ಡು  ಹುಡುಕಿದಳು , ಉ ಹು ಅದರಲ್ಲಿ ದುಡ್ಡು ಇರಲಿಲ್ಲ , ತನ್ನ ಬ್ಯಾಗನ್ನು ತದಕಿದರೂ ದುಡ್ಡು ಪತ್ತೆ ಇಲ್ಲ , ಒಸಿ ತಡಿಯಪ್ಪ , ಹತ್ತು ರುಪಾಯಿ ಮಡಗಿದ್ದೆ ಕಾಣಿಸ್ತಾ ಇಲ್ಲಾ ಅಂತಾ  ಬಾಯಲ್ಲಿ ತುಂಬಿದ ಎಲೆ ಅಡಿಕೆ ಜಗಿಯುತ್ತಾ ಹೇಳಿದಳು.  ಚಾಲಕನಿಗೋ ಇವಳಿಂದ ಹಣ ಪಡೆದು ಎಂಟ್ರಿ  ಕ್ಲೋಸ್ ಮಾಡಿ ಮುಂದಿನ ಸ್ಟೇಜ್ ತಲುಪುವ ಆತುರ. ಒಳ್ದೆನ್ ಅಂತಾ ಜೋರಾಗಿ ಹೇಳಿ " ಅಮ್ಮೋ  ಕಾಸು ಕೊಡು ಇಲ್ಲಾಂದ್ರೆ ಬಸ್ಸಿಂದಾ ಇಳಿ"  ಅಂತಾ  ಅನ್ನುವ ಹಂತಾ ತಲುಪಿದ, ಇದನ್ನೆಲ್ಲಾ ನೋಡುತ್ತಿದ್ದಾ, ಒಬ್ಬ ಪ್ರಯಾಣಿಕ  "ಅಮ್ಮೋ ತಾಯಿ ಎಲೆ ಜೊತೆ ಏನಾದ್ರೂ  ರುಪಾಯಿ ಬಾಯಿಗೆ ಹಾಕಂಡಿದ್ದೀಯ  ನೋಡವ್ವಾ"   ಅಂದಾ  ಆ ಯಮ್ಮಾ ತನ್ನ ಬಾಯಿ ಯಿಂದ  ಎಲೆ ತೆಗದು ಕೈಗೆ ಹಾಕಿ ಕೊಂಡಳು  ನೋಡಿದ್ರೆ  ಹತ್ತು ರುಪಾಯಿ ವಿಳ್ಳೆದೆಲೆ ಜೊತೆಗೆ ಸೇರಿ ಕೊಂಡು   ಬಾಯಿಯಲ್ಲಿ  ಸೇರಿ ಹೋಗಿತ್ತು. ಪಾಪ ಆ ಹತ್ತು ರುಪಾಯಿ ಬಿಟ್ಟು ಬೇರೆ ಹಣವಿಲ್ಲದ ಆಕೆ  ಕಣ್ಣೀರು ಹಾಕುತ್ತಾ ನಿಂತಳು. ಕಡೆಗೆ ಬಸ್ಸಿನ ನಿರ್ವಾಹಕ  ಆಕೆಯನ್ನು  ಸಮಾಧಾನ  ಮಾಡಿ  , ಟಿಕೆಟ್ ನೀಡಿ  , ಹೇಳಿದ  "ನೋಡವ್ವಾ ತಿನ್ನೋ ಪದಾರ್ಥದ  ಜೊತೆಗೆ  ಹಣ  ಇಡ ಬ್ಯಾಡ  ಇಟ್ಟರೆ  ನೋಡು ಇಂಗಾಯ್ತದೆ ಗೊತ್ತಾಯ್ತಾ ಇನ್ಯಾಕೆ ನಗು ಮತ್ತೆ"  ಅಂದಾ  ಆ ಹೆಂಗಸು  ಬಂದಿದ್ದ ಸಮಸ್ಯೆ ಪರಿಹಾರ ವಾದ ಖುಷಿಯಲ್ಲಿ  ನಕ್ಕಳು      " ಆ  ಹ ಹ   ನೋಡವ್ವಾ    ನಕ್ಕರೆ ಹತ್ತುವರ್ಷ ಚಿಕ್ಕವಳಂಗೆ  ಕಾಣ್ತೀಯೆ ನಮ್ಮ ಅಮ್ಮ ನೆನಪಾದಳು  ಹಿಂಗೆ ನಗ್ತಾ ನಗ್ತಾ  ಚಂದಾಗಿ  ಇರವ್ವಾ"  ಅಂದ   ಪುಣ್ಯಾತ್ಮ.   ಮತ್ತೆ ಮುಂದು ವರೆದು   ಯಾರ್ರೀ ಟಿಕೇಟು . ಟಿಕೇಟು ,  ಬಾಯಲ್ಲಿ ದುಡ್ಡು ಹಾಕೊಳೋ ಮೊದಲು ಜಲ್ದಿ  ಟಿಕೆಟ್  ಕಾಸುಕೊಡಿ ಅಂತಾ ನಗೆ ಚಟಾಕಿ ಹಾರಿಸುತ್ತಾ  ಮುಂದೆ ಹೋದ. ಬಸ್ಸಿನಲ್ಲಿ ಮತ್ತೊಮ್ಮೆ ನಗೆಯ ಕಲರವ ಕೇಳಿತು.

ಈ ಘಟನೆ ನಡೆದು ಬಹಳ ವರ್ಷ ಆದರೂ ಮನದಲ್ಲಿ ಆಗಾಗ  ನೆನಪಾಗುತ್ತಾ  ಇರುತ್ತೆ. ಮಾನವೀಯತೆ ಮೆರೆದ ಆ ನಿರ್ವಾಹಕನ ಗುಣ, ಅವನ ಕೆಲಸದಲ್ಲಿ ಮೂಡಿಸುವ  ಹಾಸ್ಯ ನಡವಳಿಕೆ ಇತ್ಯಾದಿ ನೆನಪಾಗುತ್ತದೆ. ಬಹಳ ದಿನಗಳಿಂದ ಕೊರೆಯುತ್ತಿದ್ದ ಈ ನೈಜ ಕಥೆ ಇವತ್ತು  ಇಲ್ಲಿ ಬಂದಿದೆ. ಓದಿ ಒಮ್ಮೆ ನಕ್ಕು ಬಿಡಿ.