|
ಕನ್ನಡ ನಾಡಿನ ಹೆಮ್ಮೆಯ ಪಕ್ಷಿ |
ಬ್ಲಾಗ್ ಬರಹ ಬರೆದು ಬಹಳ ದಿನ ಆಯ್ತು, ಬಿಡುವಿಲ್ಲದ ದಿನಗಳು , ದಿನವೆಲ್ಲಾ ತಲೆಯಮೇಲೆ ಉರಿವ ಬಿಸಿಲು , ಮನೆಗೆ ಬಂದೊಡನೆ ಧಣಿದ ದೇಹ ಸೋಮಾರಿಯಾಗಿ ಬಿಡುತ್ತೆ, ಬರೆಯಲು ಕುಳಿತರೆ ಮನಸಿನಲ್ಲಿ ಬರೆಯುವ ಉತ್ಸಾಹ ಬೇಸಿಗೆಯ ಬಿಸಿಯಲ್ಲಿ ಆವಿಯಾಗಿ ಬಿಡುತ್ತದೆ,ಹಾಗಾಗಿ ಬರೆಯಲಿಲ್ಲ ಎನ್ನುವ ಕಾರಣ. ಮೊನ್ನೆ ತಾನೇ ಫೆಸ್ ಬುಕ್ ನಲ್ಲಿ ಶನಿವಾರ ನನ್ನ ದಾಂಡೇಲಿ , ಗಣೇಶ್ ಗುಡಿ , ಸಿನ್ಥೆರಿ ರಾಕ್ಸ್ ಪ್ರವಾಸದ ಹಳೆಯ ನೆನಪುಗಳ ಮಾಲಿಕೆ ಬರೆಯುವುದಾಗಿ ಜಂಭ ಕೊಚ್ಚಿಕೊಂಡಿದ್ದೆ. ಆದರೆ ಯಾವುದೋ ವಿಚಾರ ಗೊಂದಲದಿಂದ ಅದರ ಮಾಲಿಕೆ ಮತ್ತಷ್ಟು ವಿಳಂಭ ವಾಗುತ್ತಿದೆ. ಕೆಲವು ಆತ್ಮೀಯ ಗೆಳೆಯರ ಒತ್ತಾಯದ ಮೇರೆಗೆ ಈ ಲೇಖನ ನಿಮ್ಮ ಮುಂದೆ ಹಾಜರ್ ಆಗಿದೆ.
|
ಕಾಡೆಂದರೆ ಹೀಗೆ ಒಳಗೆ ಇರೋದು ಗೊತ್ತಾಗೊಲ್ಲ. |
ಕಳೆದ ಭಾನುವಾರ ನನ್ನ ಗೆಳಯ ಸತ್ಯ ಅವರು ಫೋನ್ ಮಾಡಿ
ಬಾಲಣ್ಣ ಎಷ್ಟೊತ್ತಿಗೆ ಹೊರಡೋದು ಎಂದಾಗಲೇ ಅರಿವಾಗಿದ್ದು, ನಾವು ಆ ದಿನ ಕಬಿನಿ ಕಾಡಿಗೆ ಹೋಗಬೇಕಾಗಿತ್ತೆಂದು , ಸರಿ ಅಂತಾ ಸಾರ್
ನಾನು ರೆಡಿ ನಿಮ್ಮ ಆಗಮನ ಎಷ್ಟು ಘಂಟೆಗೆ ಸಾರ್ ಅಂದೇ. ಸೀನ್ ಕಟ್ ಮಾಡಿದ್ರೆ , ಮಧ್ಯಾಹ್ನ ೧.೦೦ ಘಂಟೆಗೆ ನಮ್ಮ ಮನೆಯ ಮುಂದೆ ಅವರ ನ್ಯಾನೋ ಕಾರ್ ನಿಂತಿತ್ತು, ನಾನೂ , ನನ್ನ ಮಗ ಜೊತೆಯಾಗಿ ಕಬಿನಿ ಕಾಡು ನೋಡಲು ಹೊಂಟೆವು .ಪ್ರಯಾಣ, ಊಟ ಇತ್ಯಾದಿ ಮಾಡಿ ಕಾಡಿನ ಒಳಗೆ ನಮ್ಮ ಪ್ರವೇಶ ಮಧ್ಯಾಹ್ನ ೪.೦೦ ಘಂಟೆಗೆ ಆರಂಭ ಆಯಿತು. ವಾಹನ ಚಾಲಕ ರಾಜು ಕಾಡಿನ ಒಳಗೆ ನಮ್ಮ ಕಾನನ ದರ್ಶಕನಾಗಿ ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ. ಒಣಗಿದ ಕಾಡು, ಬಿಸಲಿಗೆ ಬಾಡಿದ ಪೊದೆಗಳು, ನೀರಿಲ್ಲದ ಹೊಂಡಗಳ ದರ್ಶನ , ಮಳೆ ಬಂದರೆ ಹಸಿರ ಉಡುಗೆ ಧರಿಸುವ ಕಾನನ ಸುಂದರಿ ಬೇಸಿಗೆಯಲ್ಲಿ ಹಸಿರು ಕಳೆದುಕೊಂಡು ಸೊರಗುತ್ತಾಳೆ. ದಾರಿಯುದ್ದಕ್ಕೂ ಕಾಣ ಸಿಕ್ಕ ಜಿಂಕೆಗಳು ಉತ್ಸಾಹ ಕಳೆದುಕೊಂಡು ನೀರಿಗಾಗಿ ಹಪಹಪಿಸುತ್ತಿದ್ದವು . ಕಾಡಿನ ಹಾದಿಯಲ್ಲಿ ಬಹಳ ದೂರದ ವರೆಗೆ ಚಟುವಟಿಕೆಗಳನ್ನು ನೋಡಬಹುದಿತ್ತು, ಹೀಗೆ ಸಾಗಿತ್ತು, ನಮ್ಮ ಪಯಣ .
|
ಪೋದೆವಳಗೆ ನೋಡಿ ಸಾ |
ಒಮ್ಮೆಲೇ ವಾಹನ ಆಫ್ ಮಾಡಿ ನಿಲ್ಲಿಸಿದ ಚಾಲಕ ರಾಜು
"ಸಾ ಉಸಾರಾಗಿ ಆ ಕಡೆ ನೋಡಿ" ಅಂದಾ....! ಅಲ್ಲೇನಿದೆ ಬರಿ ಒಣಗಿದ ಪೊದೆ ,
"ಇಲ್ಲಾ ರಾಜು ಏನೂ ಕಾಣುತ್ತಿಲ್ಲ, " " ಸಾ ಸರಿಯಾಗಿ ನೋಡಿ ಸಾ ಅಲ್ಲೇ ಅವೇ "ಅಂದಾ ...!! ಆ ಪೋದೆಗಳು ನಮ್ಮಿಂದ ಕೇವಲ ಅಂದಾಜು ಇಪ್ಪತ್ತು ಅಡಿ ದೂರದಲ್ಲಿದ್ದವು.
"ಇಲ್ಲಾ ರಾಜು ಏನೂ ಕಾಣುತ್ತಿಲ್ಲ" ಅಂತಾ ಪಿಸುಗುಟ್ಟಿದೆ.
|
ಏ ಸರ್ಯಾಗಿ ನೋಡಿ ಸಾ |
"ಏ ಸರ್ಯಾಗಿ ನೋಡಿ ಸಾ ಅಲ್ಲೇ ಅವೇ , ಅಂಗೆ ಇರಿ ಬತ್ತವೆ ಆಚೆಗೆ ", ಅಂತಾ ಹೇಳಿ ಸುಮ್ಮನಾದ . ಪಟ್ಟಣದ ವಾಸಿಯಾದ ನನ್ನ ಕಣ್ಣು ಕಾನನದ ಪರಿಸರಕ್ಕೆ ಹೊಂದಿಕೊಂಡಿರದ ಕಾರಣ ಪಕ್ಕದಲ್ಲೇ ನಡೆಯುತ್ತಿರುವ ಚಟುವಟಿಕೆ ಗೊತ್ತಾಗಲಿಲ್ಲ ಜೊತೆಗೆ ಯಾವುದೇ ಶಬ್ಧ ಆ ಪೊದೆಯಿಂದ ಬರುತ್ತಿರಲಿಲ್ಲ , ಹಾಗೆ ಸಹನೆಯಿಂದ ಕಾಯುವುದಷ್ಟೇ ನನಗಿದ್ದ ಅವಕಾಶ . ಹಾಗೆ ಕಾಯುತ್ತಿದ್ದೆ, ಕೇವಲ ಎರಡು ಮೂರು ನಿಮಿಷಗಳ ಕಾಯುವಿಕೆ ಅಷ್ಟೇ ........!!!!! ಪೊದೆಯಿಂದ ಹೊರಬಂದವು ... ಅವು.
|
ಪೊದೆಯಿಂದ ಬಂದಿದ್ದು ಇವುಗಳೇ |
|
|
|
ಒಂದಲ್ಲಾ ಎರಡು |
|
ಒಂದಲ್ಲಾ ಎರಡಲ್ಲಾ , ಮೂರಲ್ಲಾ ನಾಲ್ಕು |
ಹೌದು ಆ ಪೊದೆಗಳ ಹಿಂದೆ ನಾಲ್ಕು ಆನೆಗಳ ಒಂದು ಗುಂಪಿತ್ತು, ಒಣಗಿದ ಕಾಡಿನಲ್ಲಿ ಒಣಗಿದ ಪೊದೆಯ ಹಿಂದೆ ಇಷ್ಟು ಆನೆಗಳು ನಮ್ಮ ಸನಿಹದಲ್ಲೇ ಇದ್ದರೂ ನಮಗೆ ಅರಿವಾಗಲಿಲ್ಲ ಜೊತೆಗೆ ಒಣಗಿದ ಪರಿಸರದಲ್ಲಿ ನಾವು ನಡೆದರೆ ಹೆಜ್ಜೆಯ ಸಪ್ಪಳವಾದರೂ ಕೇಳುತ್ತದೆ, ಆದರೆ ಊ ಹು ಈ ಆನೆಗಳ ಗುಂಪು ನಡೆದು ಬರುತ್ತಿದ್ದರು ಒಂದು ಚೂರು ಸಪ್ಪಳ ಕೇಳಲಿಲ್ಲ . ಇದು ನಮಗೆ ಅಚ್ಚರಿಯ ವಿಚಾರ, ನಮ್ಮ ವಾಹನದ ಸಮೀಪದಲ್ಲೇ ಈ ಆನೆಗಳ ಮೆರವಣಿಗೆ ಸಾಗಿತ್ತು, ಕ್ಯಾಮರ ತನ್ನ ಕಾಯಕ ನಡೆಸಿತ್ತು,
|
ಏ ಹುಷಾರು ಹತ್ರ ಬಂದ್ರೆ ಅಷ್ಟೇ....! |
ಸಾಗುತ್ತಿದ್ದ ಆನೆಗಳ ಗುಂಪಿನ ಕೊನೆಯಲ್ಲಿದ್ದ ಒಂದು ಆನೆ ರಕ್ಷಣೆಯ ಜವಾಬ್ಧಾರಿ ಹೊತ್ತಿತ್ತು, ನಮ್ಮ ವಾಹನ ನೋಡಿ ಸ್ವಲ್ಪ ಅವಾಜ್ ಹಾಕಿ ಹೆದರಿಸಿತು, ಹಲವು ಸಾರಿ ಇಂತಹ ಸನ್ನಿವೇಶ ಎದುರಿಸಿರುವ ನಮಗೆ ಇದೇನು ಹೊಸತಲ್ಲ. ಅದರಿಂದ ನಿಶ್ಯಬ್ಧ ವಾಗಿ ವಾಹನದಲ್ಲಿ ಕಲ್ಲಿನಂತೆ ಕುಳಿತೆ ಇದ್ದವು , ಅದು ಬಹಳಷ್ಟು ಹೆದರಿಸುವ ಆಟ ನಡೆಸಿತ್ತು, ಸುಮಾರು ಹತ್ತು ನಿಮಿಷ ಈ ಆಟ ನಡೆಯಿತು, ಆ ಆನೆ ಅಲ್ಲಿಂದ ರಸ್ತೆ ದಾಟಿ ಕಾಡು ಹೊಕ್ಕಿತು.
|
ಬಾ ಕಂದಾ ಹೋಗೋಣ ಮರ್ಯಾದೆ ಇಲ್ಲದ ಜನ ಇವರು |
ಸನಿಹದಲ್ಲಿ ಈ ಕಣ್ಣಾಮುಚ್ಚಾಲೆ ಆಟ ನೋಡುತ್ತಿದ್ದ ತಾಯಿ ಆನೆ
"ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ ಮರಿಯಾನೆ ಜೊತೆ ಕಾಡಿನೊಳಗೆ ತೆರಳಿತು. . [ ಮುಂದಿನ ಸಂಚಿಕೆ ಟೈಗರ್ ಕಾಲಿಂಗ್ ]
8 comments:
ಫೋಟೋಗಳು ಹಾಗೂ ಕ್ಯಾಪ್ಶನ್ಗಳು ಸೂಪರ್:)
ಬಹುಷಃ ಕಾಡು ಒಣಗಿದಾಗಲೇ ಪ್ರಾಣಿಗಳು ಹೊರಗೆ ಬರುತ್ತಾ ಏನೋ !
ಬಹಳ ಕಾಲದಿಂದ ಕಾಯುತ್ತಿದ್ದ ರಥ ಕಡೆಗೂ ಹೊರಟಿತು ಸೂಪರ್ ಸರ್. ಆರಂಭ ಸೊಗಸಾಗಿದೆ. ಚಿತ್ರಗಳು ಸೂಪರ್. ಅದರಲ್ಲೂ ಕಡೆಯ ಚಿತ್ರ.. ಅಲ್ಪ ಸ್ವಲ್ಪ ಹಸಿರು, ಮಣ್ಣಿನ ದೂಳು, ಬಣ್ಣ ಎಲ್ಲವು ಮಸ್ತ್.
ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ.
ಬಾಲು ಸರ್,ಫೋಟೋಗಳು ಸೂಪರ್ .. ನಮ್ಮನ್ನು ಒಂದು ಸಲ ಕಾಡಿಗೆ ಕರ್ಕೊಂಡ್ ಹೋಗಿ ... ಮುಂದಿನ ಸಂಚಿಕೆಯಲ್ಲಿ ಹುಲಿಯ ನಿರೀಕ್ಷೆಯಲ್ಲಿ ...
ಶುಭ ಆರಂಭ.....
ಮುಂದೆ ನೋಡುವಾ...
ಮೊದಲ ದಿನ ಗಜ ಗಾಂಭೀರ್ಯದ ದರ್ಶನ....ಮುಂದೇನಿದ್ಯೋ!!!!
ತಮ್ಮ ಬ್ಲಾಗ್ ಖಾಲಿ ಇಟ್ಟಿದ್ದಕ್ಕೆ ನಮ್ಮ ತೀವ್ರ ವಿರೋಧವಿತ್ತು. ಕಬಿನಿ ಧಾರವಾಹಿ ಶುರುಮಾಡಿ, ಮನಗೆದ್ದಿರಿ.
"ಬಾ ಕಂದಾ ಹೋಗೋಣ ಮರ್ಯಾದೆ ಇಲ್ಲದ ಜನ ಇವರು" ಶೀರ್ಷಿಕೆಯ ಆನೆಗಳ ಚಿತ್ರ ಪ್ರಶಸ್ತಿಗಳಿಗೆ ಕಳುಹಿಸಿರಿ.
ಚಿತ್ರಗಳು ಮತ್ತು ಬರಹ ಆಪ್ತವಾಗಿದೆ. ಅದಷ್ಟು ಬೇಗ ನಿಮ್ಮ ಜೊತೆ ನಮಗೂ ಕಾಡಿನ ದರ್ಶನವಾಗಲಿ.
ಟೈಗರ್ ಕಾಲಿಂಗ್ ಕಾಯುತ್ತಿದ್ದೇವೆ ’ರಿಯಲ್ ಟೈಗರ್’...
Super narration sir... cool pics.. visited your blog after long time. pleasant experience! :)
Post a Comment