ಇವರದೇ ಒಂದು ಪರ್ಪಂಚ [ ಚಿತ್ರ ಕೃಪೆ ಅಂತರ್ಜಾಲ ] |
ಒಮ್ಮೊಮ್ಮೆ ನಾವು ಅಂದುಕೊಳ್ಳದ ರೀತಿಯಲ್ಲಿ ನಮಗೆ ಕೆಲವು ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗಿ ನಮ್ಮ ಜೀವನದಲ್ಲಿ ನಗೆ ಹುಟ್ಟಿಸುತ್ತವೆ. ಈ ಸನ್ನಿವೇಶವೂ ಸಹ ಅಂತಹುದೇ ಒಂದು.
ಒಮ್ಮೆ ಬಸ್ಸಿನಲ್ಲಿ ಪ್ರಯಾಣ ಹೊರಟಿದ್ದೆ. ಬಸ್ ಅಂದಮೇಲೆ ಗೊತ್ತಲ್ಲಾ , ಪ್ರತಿಯೊಬ್ಬ ಪ್ರಯಾಣಿಕನೂ ಅವರದೇ ಒಂದು ಪರ್ಪಂಚ ದಲ್ಲಿ ವಿಹರಿಸುತ್ತಿರುತ್ತಾನೆ. ಎಷ್ಟು ಹೊತ್ತಾದರೂ ಆ ಬಸ್ಸು ಹೊರಟಿರಲಿಲ್ಲ ಪ್ರಯಾಣಿಕರಿಂದ ಚಾಲಕ ನಿರ್ವಾಹಕರಿಗೆ ಹಿಡಿ ಶಾಪ. ಅವರನ್ನು ಬಯ್ಯಲು ಪ್ರತಿಯೊಬ್ಬರಿಗೂ ಏನೋ ಮಜಾ ಉತ್ಸಾಹ. ಹಾಗೂ ಹೀಗೂ ಈ ಮನರಂಜನೆ ನಡುವೆ ಬಸ್ ಹೊರಟಿತು,
ಇನ್ನು ಬಸ್ ಚಾಲಕ ನಿರ್ವಾಹಕರಿಗೆ ಪ್ರಯಾಣಿಕರನ್ನು ಸಂಬಾಳಿಸುವಲ್ಲಿ ಸುಸ್ತೋ ಸುಸ್ತು . ಹೀಗಿರುವಲ್ಲಿ ಚಾಲಕ ಮಹಾಶಯ ಬಸ್ಸನ್ನು ಚಾಲನೆ ಮಾಡುತ್ತಾ ಎದುರಿಗೆ ಬರುವ ವಾಹನಗಳ ಚಾಲಕರಿಗೆ ಬೈಗುಳದ ಅರ್ಚನೆ ಮಾಡುತ್ತಾ , ತಾನೊಬ್ಬನೇ ಸರಿಯಾದ ಚಾಲಕ ಬೇರೆಯವರು ಚಾಲಕರೇ ಅಲ್ಲಾ ಎನ್ನುವ ಹಾಗೆ ವರ್ತಿಸುತ್ತಿದ್ದ. ಇನ್ನು ನಿರ್ವಾಹಕ ಮಹಾಶಯ ಸ್ವಲ್ಪ ಹಾಸ್ಯ ಪ್ರಿಯ , ನಗೆ ಚಟಾಕಿ ಹಾರಿಸುತ್ತಾ , ಉಪಾಯವಾಗಿ ಟಿಕೆಟುಗಳನ್ನು ಪ್ರಯಾಣಿಕರಿಗೆನೀಡುತ್ತಿದ್ದ. "ಬನ್ನಿ ಸಾರ್ ಬನ್ನಿ ನೀವು ಒಳ್ಳೆಯವರು ಮುಂದೆ ಬನ್ನಿ ಇಲ್ಲಿ ಹಾಗೆ ಹಾಗೆ ನಿಲ್ಲಿ ಸಾರ್ ಪರವಾಗಿಲ್ಲ ನಿಮ್ ಊರು ಬಂದಾಗ ಖಂಡಿತಾ ನಿಮ್ಮನ್ನು ಜೋಪಾನವಾಗಿ ಇಳಿಸುತ್ತೇನೆ", ಅಂತ ಒಬ್ಬರಿಗೆ ಹೇಳಿದರೆ, ಮತ್ತೊಬ್ಬ ಹುಡುಗನಿಗೆ "ಓ ಅಣ್ಣಾ ಇದೇನು ಅತ್ತೆ ಮನೆಗೆ ಅಳಿಯ ಬಂದು ಬಾಗಿಲು ಮುಂದೆ ನಿಂತ ಹಾಗೆ ಬಾಗಿಲು ಕಾಯ್ತಿಯಾ ಬಾ ಅಣ್ಣಾ ಒಳಗೆ , ಕಾಲೇಜು ಪರೀಕ್ಸೆ ಬ್ಯಾರೆ ಹತ್ತಿರಾ ಬಂತು ಹೆಚ್ಚು ಕಡಿಮೆ ಆದೀತು" ಅಂದಿದ್ದ. ಮತ್ತೊಬ್ಬ ಹೆಂಗಸಿಗೆ "ಅಕ್ಕೋ ಬಾ ಇಲ್ಲಿ ಒಳಕೆ ನೀ ಬಸ್ಸಿಂದ ಬಿದ್ದು ಹೆಚ್ಚು ಕಡಿಮೆ ಆದ್ರೆ ನಿಮ್ ಯಜಮಾನ ನನ್ನ ಸುಮ್ನೆ ಬುಟ್ಟಾನೆ" ಅಂತಾ ಅಂದ ಮಾತಿಗೆ ಬಸ್ಸಿನಲ್ಲಿ ಎಲ್ಲರು ನಕ್ಕರು.ಹೀಗೆ ಸಾಗಿತ್ತು ಪಯಣ.
ಹಳ್ಳಿ ಬಸ್ಸಿನ ಒಂದು ನೋಟ [ ಚಿತ್ರ ಕೃಪೆ ಅಂತರ್ಜಾಲ ] |
ನಿರ್ವಾಹಕ ಟಿಕೆಟ್ ಕೊಡುತ್ತಾ ಒಬ್ಬ ಹೆಂಗಸಿನ ಹತ್ತಿರ ಬಂದಾ "ಯಾವ್ ಕಡೀಕೆ ತಾಯಿ ಬಿರ್ ಬಿರ್ ನೆ [ ಬೇಗ ಬೇಗ ] ತತ್ತಾ [ ಕೊಡು] ದುಡ್ಡಾ" ಅಂದಾ "ಯೋ ಒಸಿ ತಾಳು" ಅಂದವಳೇ ವಿಳ್ಳೆದೆಲೆ ಅಡಿಕೆಯನ್ನು ಬಾಯಿಯೊಳಗೆ ಹಾಕಿ ಕೊಂಡು "ಜಕ್ಕನಹಳ್ಳಿ ಒಂದು ಸೀಟು" ಅಂದಳು ನಿರ್ವಾಹಕ ಪರ್ ಅಂತಾ ಟಿಕೇಟು ಹರಿದು "ಹತ್ತು ರುಪಾಯಿ ಕೊಡವ್ವ" ಅಂದಾ . ಎಲೆ ಅಡಿಕೆ ಜಗಿಯುತ್ತಾ ತನ್ನ ಸಂಚಿಯನ್ನು [ ಹಳ್ಳಿ ಹೆಂಗಸರು ಬಳಸುವ ಬಟ್ಟೆಯ ಪಾಕೆಟು ] ತೆಗೆದು ದುಡ್ಡು ಹುಡುಕಿದಳು , ಉ ಹು ಅದರಲ್ಲಿ ದುಡ್ಡು ಇರಲಿಲ್ಲ , ತನ್ನ ಬ್ಯಾಗನ್ನು ತದಕಿದರೂ ದುಡ್ಡು ಪತ್ತೆ ಇಲ್ಲ , ಒಸಿ ತಡಿಯಪ್ಪ , ಹತ್ತು ರುಪಾಯಿ ಮಡಗಿದ್ದೆ ಕಾಣಿಸ್ತಾ ಇಲ್ಲಾ ಅಂತಾ ಬಾಯಲ್ಲಿ ತುಂಬಿದ ಎಲೆ ಅಡಿಕೆ ಜಗಿಯುತ್ತಾ ಹೇಳಿದಳು. ಚಾಲಕನಿಗೋ ಇವಳಿಂದ ಹಣ ಪಡೆದು ಎಂಟ್ರಿ ಕ್ಲೋಸ್ ಮಾಡಿ ಮುಂದಿನ ಸ್ಟೇಜ್ ತಲುಪುವ ಆತುರ. ಒಳ್ದೆನ್ ಅಂತಾ ಜೋರಾಗಿ ಹೇಳಿ " ಅಮ್ಮೋ ಕಾಸು ಕೊಡು ಇಲ್ಲಾಂದ್ರೆ ಬಸ್ಸಿಂದಾ ಇಳಿ" ಅಂತಾ ಅನ್ನುವ ಹಂತಾ ತಲುಪಿದ, ಇದನ್ನೆಲ್ಲಾ ನೋಡುತ್ತಿದ್ದಾ, ಒಬ್ಬ ಪ್ರಯಾಣಿಕ "ಅಮ್ಮೋ ತಾಯಿ ಎಲೆ ಜೊತೆ ಏನಾದ್ರೂ ರುಪಾಯಿ ಬಾಯಿಗೆ ಹಾಕಂಡಿದ್ದೀಯ ನೋಡವ್ವಾ" ಅಂದಾ ಆ ಯಮ್ಮಾ ತನ್ನ ಬಾಯಿ ಯಿಂದ ಎಲೆ ತೆಗದು ಕೈಗೆ ಹಾಕಿ ಕೊಂಡಳು ನೋಡಿದ್ರೆ ಹತ್ತು ರುಪಾಯಿ ವಿಳ್ಳೆದೆಲೆ ಜೊತೆಗೆ ಸೇರಿ ಕೊಂಡು ಬಾಯಿಯಲ್ಲಿ ಸೇರಿ ಹೋಗಿತ್ತು. ಪಾಪ ಆ ಹತ್ತು ರುಪಾಯಿ ಬಿಟ್ಟು ಬೇರೆ ಹಣವಿಲ್ಲದ ಆಕೆ ಕಣ್ಣೀರು ಹಾಕುತ್ತಾ ನಿಂತಳು. ಕಡೆಗೆ ಬಸ್ಸಿನ ನಿರ್ವಾಹಕ ಆಕೆಯನ್ನು ಸಮಾಧಾನ ಮಾಡಿ , ಟಿಕೆಟ್ ನೀಡಿ , ಹೇಳಿದ "ನೋಡವ್ವಾ ತಿನ್ನೋ ಪದಾರ್ಥದ ಜೊತೆಗೆ ಹಣ ಇಡ ಬ್ಯಾಡ ಇಟ್ಟರೆ ನೋಡು ಇಂಗಾಯ್ತದೆ ಗೊತ್ತಾಯ್ತಾ ಇನ್ಯಾಕೆ ನಗು ಮತ್ತೆ" ಅಂದಾ ಆ ಹೆಂಗಸು ಬಂದಿದ್ದ ಸಮಸ್ಯೆ ಪರಿಹಾರ ವಾದ ಖುಷಿಯಲ್ಲಿ ನಕ್ಕಳು " ಆ ಹ ಹ ನೋಡವ್ವಾ ನಕ್ಕರೆ ಹತ್ತುವರ್ಷ ಚಿಕ್ಕವಳಂಗೆ ಕಾಣ್ತೀಯೆ ನಮ್ಮ ಅಮ್ಮ ನೆನಪಾದಳು ಹಿಂಗೆ ನಗ್ತಾ ನಗ್ತಾ ಚಂದಾಗಿ ಇರವ್ವಾ" ಅಂದ ಪುಣ್ಯಾತ್ಮ. ಮತ್ತೆ ಮುಂದು ವರೆದು ಯಾರ್ರೀ ಟಿಕೇಟು . ಟಿಕೇಟು , ಬಾಯಲ್ಲಿ ದುಡ್ಡು ಹಾಕೊಳೋ ಮೊದಲು ಜಲ್ದಿ ಟಿಕೆಟ್ ಕಾಸುಕೊಡಿ ಅಂತಾ ನಗೆ ಚಟಾಕಿ ಹಾರಿಸುತ್ತಾ ಮುಂದೆ ಹೋದ. ಬಸ್ಸಿನಲ್ಲಿ ಮತ್ತೊಮ್ಮೆ ನಗೆಯ ಕಲರವ ಕೇಳಿತು.
ಈ ಘಟನೆ ನಡೆದು ಬಹಳ ವರ್ಷ ಆದರೂ ಮನದಲ್ಲಿ ಆಗಾಗ ನೆನಪಾಗುತ್ತಾ ಇರುತ್ತೆ. ಮಾನವೀಯತೆ ಮೆರೆದ ಆ ನಿರ್ವಾಹಕನ ಗುಣ, ಅವನ ಕೆಲಸದಲ್ಲಿ ಮೂಡಿಸುವ ಹಾಸ್ಯ ನಡವಳಿಕೆ ಇತ್ಯಾದಿ ನೆನಪಾಗುತ್ತದೆ. ಬಹಳ ದಿನಗಳಿಂದ ಕೊರೆಯುತ್ತಿದ್ದ ಈ ನೈಜ ಕಥೆ ಇವತ್ತು ಇಲ್ಲಿ ಬಂದಿದೆ. ಓದಿ ಒಮ್ಮೆ ನಕ್ಕು ಬಿಡಿ.
5 comments:
ಸುಂದರವಾದ ಬರಹ. ನಮ್ಮನಿಮ್ಮೊಳಗೆ ಯಾವತ್ತೂ ನೋಡಿ ಮರೆತುಬಿಡಬಹುದಾದ ಘಟನೆಗೆ ಚಿನ್ನದ ಚೌಕಟ್ಟು ಹಾಕಿ ತೋರಿಸಿದ್ದೀರಿ.
balu sir,
chennaagide baraha....bus olage kulitu anubhavisidantide baraha
- roopa
ಕುರುಕ್ಷೇತ್ರದಲ್ಲಿ ಕೃಷ ಭಗವದ್ಗೀತೆ ಹೇಳಿದರೆ...ಬಸ್ಸಿನೊಳಗೆ ಸಿಗುವ ಕಥೆ ಇನ್ನಷ್ಟು ಸಂದೇಶಗಳನ್ನು ಕೊಡುತ್ತೆ..ಒಳ್ಳೆಯ ಸಂಗತಿಯನ್ನು ಅಷ್ಟೇ ನವಿರಾಗಿ ಎಲೆಗೆ ಅಡಿಕೆ ಸೇರಿಸಿ...ಸುಣ್ಣ ಹಚ್ಚಿ..ರಸಭರಿತವಾಗಿ ಹೇಳಿದ ನಿಮಗೆ ಶರಣು...ಸುಂದರವಾದ ಬರಹ
ಚೆನ್ನಾಗಿದೆ ಸರ್, ನಾನು ಓಡಾಡುತ್ತಿದ್ದ ಬಿ.ಎಂ.ಟಿ.ಸಿ. ನಿರ್ವಾಹಕರೊಬ್ಬರು ಪಾಸ್ ಇದ್ದೀಯ ಅಂತ ಕೇಳೋಕೆ "ಏನಮ್ಮ ನೀನು ಪಾಸೋ ಫೇಲೋ " ಅನ್ನೋರು :)
he he he... beshtiddo baalanna... thanks for your blog <3
Post a Comment