Tuesday, March 12, 2013

ಇಂಗಾದ್ರೆ ಎಂಗೆ ಸಾ ......?

ಸಾಂದರ್ಬಿಕ ಚಿತ್ರ [ ಕೃಪೆ ಅಂತರ್ಜಾಲ]

ಇದೊಂದು ಕಾಡುತ್ತಿರುವ ಪ್ರಶ್ನೆ , ನನಗೂ ಯೋಚಿಸಿ ಯೋಚಿಸಿ ಸಾಕಾಯ್ತು. ನೀವಾದ್ರೂ ಉತ್ತರ ಕೊಡಿ ಬಾಲೂ ಅಂದ್ರು  ಮಲ್ಲಿಕಾರ್ಜುನ್  ಮೇಷ್ಟ್ರು. ಯಾಕೆ ಸಾರ್ ಏನಾಯ್ತು?. ಏನ್ ಸಮಾಚಾರ?  ಅಂದೇ ,

ಅಯ್ಯೋ    ಬಾಲೂ  ಯಾಕೆಳ್ತೀರ ನನ್ನ ಕಥೆ  ಈ ಹಳ್ಳಿ ಹೈಕಳ ಸಾವಾಸ ಬಲು ಕಷ್ಟಾ ಕಣ್ರೀ , ಬನ್ನಿ ವಿಚಾರ ಹೇಳ್ತೀನಿ ಅಂತಾ ವಿಚಾರ ಹೇಳಿದ್ರೂ  ಬನ್ನಿ ಈ ಕಥೆ ಓದಿ.

ನಮ್ಮ ಮಲ್ಲಿಕಾರ್ಜುನ್ ಒಳ್ಳೆಯ ಉತ್ಸಾಹಿ ಮೇಷ್ಟ್ರು , ಒಂದು ಹಳ್ಳಿಯಲ್ಲಿ ಪ್ರೌಡ ಶಾಲೆ ಮಕ್ಕಳಿಗೆ  ವಿಜ್ಞಾನ ಭೋದನೆ ಮಾಡುತ್ತಾರೆ. ಹಳ್ಳಿಯ ಮಕ್ಕಳಿಗೆ ಅಂತರ್ಜಾಲ  ಸೌಲಭ್ಯ ಇಲ್ಲಾ  , ಮಾಹಿತಿ ಸಿಗೋಲ್ಲಾ ಎನ್ನುವ  ಕಾರಣಕ್ಕೆ ತಾವೇ ಅಂತರ್ಜಾಲ ಹುಡುಕಾಡಿ ವೈಜ್ಞಾನಿಕ  ವಿಷಯಗಳಿಗೆ   ಸಂಬಂಧಿಸಿದ ವಿಚಾರಗಳನ್ನು ಶಾಲೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಹೆಚ್ಚು ವಿಚಾರ ತಿಳಿದು, ಹೆಚ್ಚಾಗಿ  ಪ್ರಶ್ನೆ ಕೇಳಿ  ಹೊಸ ವಿಚಾರಗಳನ್ನು ತಿಳಿದು ಪಟ್ಟಣದ ಮಕ್ಕಳಿಗೆ ಸರಿಸಮನಾಗಿ  ಜ್ಞಾನ ಪಡೆಯಲಿ ಎನ್ನುವ ಸದುದ್ದೇಶ ಅವರದು, ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ, ಮಕ್ಕಳಿಗೂ ಸಹ  ಇವರಂದ್ರೆ  ಬಹಳ ಪ್ರೀತಿ ಹಾಗು ಸಲಿಗೆ ಜಾಸ್ತಿ.ಇವರ ಕ್ಲಾಸು ಅಂದ್ರೆ ಅದೊಂದು ವಿಚಾರ ಘೋಷ್ಠಿ  ಇದ್ದಂತೆ , ಪ್ರಶ್ನೆ ಕೇಳುವ ಅಧಿಕಾರ ಮಕ್ಕಳಿಗೂ ಇರುತ್ತದೆ. ಆದರೆ ಇವರ ಓರಿಗೆಯ ಸಹೋದ್ಯೋಗಿ ಮೇಷ್ಟರುಗಳಿಗೆ ಇವರೊಬ್ಬ ವಿಚಿತ್ರ ವ್ಯಕ್ತಿ.  ಇರಲಿ ಬನ್ನಿ  ಮುಖ್ಯ ವಿಚಾರಕ್ಕೆ ಸಾಗೋಣ.

ಒಮ್ಮೆ ಹೀಗಾಯ್ತು ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರು ಕ್ಲಾಸಿನಲ್ಲಿ ಪಾಠ  ಮಾಡುತ್ತಿದ್ದರು, ಅವರ ತರಗತಿಯಲ್ಲಿ ವಿಷಯ  ಮಂಡನೆ ಆಗುತ್ತಿತ್ತು, ವಿಜ್ಞಾನದ ಕೌತುಕಗಳ ಬಗ್ಗೆ ಪ್ರಶ್ನೋತ್ತರಗಳ  ನಡೆದಿತ್ತು,

ಮಲ್ಲಿಕ್ :-  ಲೇ ಪರಮೇಶ   ಪ್ಲಾನೆಟ್ [ಗ್ರಹ ]ಎಂಬ ಪದ ಯಾವ ಭಾಷೆ ಯಿಂದ ಉದ್ಭವಿಸಿದೆ ? ಹೇಳೋ

ಪರಮೇಶ :- ಸಾ ಅದು ಗಿರೀಕ್[ ಗ್ರೀಕ್]  ಭಾಸೆ ಯಿಂದ ಆಲ್ವಾ ಸಾ ............ .?

ಮಲ್ಲಿಕ್ :- ಲೇ ಅದು ಗಿರೀಕ್  ಅಲ್ವೋ ಗ್ರೀಕ್ ಭಾಷೆ  ಉತ್ತರ ಸರಿ ಕೂತ್ಕೋ

ಪರಮೇಶ :- ಊ  ಕ ಸಾ , ಅಂತಾ ಕುಳಿತ.

ಮಲ್ಲಿಕ್ :-ಲೇ ಬಸವ  ನೀ ಹೇಳೋ  ಟೈರ್ ಕಂಡು ಹಿಡಿದವರು  ಯಾರೋ ??

 ಪರಮೇಶ :- ಅದೇ ಅದೇ  ಟೈರು  ..... ಕಂಡು  ಹಿಡಿದವರು  ........ ಅದೇಯ  ಊ     ಅಂತಾ ತಡಕಾಡಿ ತಲೆ ಕೆರೆಯುತ್ತಾ ನಿಂತ.

ಮಲ್ಲಿಕ್ :- ಲೇ ಲೇ ಮೊನ್ನೆ ತಾನೇ  ಅವನ ಚಿತ್ರ ತೋರ್ಸಿ   ಹೇಳಿರ್ಲಿಲ್ವ ..... ಬರೀ...... ಊ .ಮ. ಹೇ. ಗೆ ಲಾಯಕ್ಕೋ ನೀನು                ಲೇ  ಕೆಂಪ ನೀನೆಳ್  ಲೇ  ಅಂದ್ರೂ

ಕೆಂಪ :- ಸಾ ಸಾ   ಅದೇಯಾ , ಅದೇಯಾ  ಬೆಂಡ್ಲಪ್ ........ಸಾ , ಅಂದಾ ಲೇ ಲೇ ಅದು  "ಡನ್ಲಪ್" ಕಣೋ   ಓ   ಕೂತ್ಕೋ                         ಅಂದ್ರು,

ಮಲ್ಲಿಕ್ :- ಏಳಮ್ಮಾ  ಸರೋಜಾ   ಜಗತ್ತಿನ ಅತ್ಯಂತ  ಶೀತ ಪ್ರದೇಶ ಯಾವುದು ....??

ಸರೋಜಾ :- ಹಿಮಾಲಯ ಸಾ

ಮಲ್ಲಿಕ್ : - ಏನಮ್ಮ  ನೀನೂ  ಹಿಂಗೆ ಹೇಳ್ತಿಯಾ , ಉತ್ತರ ತಪ್ಪು,  ನೋಡು ಮರಿ  ಭಾಗ್ಯ  ನೀನು ಹೇಳಮ್ಮ .

ಭಾಗ್ಯ :- ಸಾ ಅದು  ಅಂಟಾರ್ಟಿಕಾ  ಸಾ,

ಮಲ್ಲಿಕ್ :-ಭೇಷ್ ಭೇಷ್  ಒಳ್ಳೆಯ ಮಗು ನೀನು ಗುಡ್, ಕೂತ್ಕೋ ಮರಿ , ಲೇ  ಶಂಭೂ  ಅವುತ್ಕೊತೀಯ  ಎದ್ದೇಳು

ಶಂಭು  :- ಇಲ್ಲಾ ಸಾ  ಅಂಗೆನಿಲ್ಲ  ಸಾ,  ಅಂತಾ ನಿಂತು ಕೊಂಡಾ

ಮಲ್ಲಿಕ್ :- ಲೇ ಶಂಭೂ ತರ್ಲೆ ಮಾಡ ಬ್ಯಾಡ  ಹೇಳೋ  ನ್ಯೂಟನ್  ನಿಯಮಾವಳಿ  ಯಾವ ವಿಚಾರದ ಬಗ್ಗೆ  ಹೇಳೋ

ಶಂಭು:-   ನ್ಯೂಟನ್  ಗುರ್ತ್ವಾ ಕರ್ಸಣೆ   ನಿಯಮ ಆಲ್ವಾ  ಸಾ.?

ಮಲ್ಲಿಕ್ :- ಲೇ ನನ್ನೇ ಪ್ರಶ್ನೆ ಕೇಳ್ತೀಯ , ಅದು ಗುರುತ್ವಾಕರ್ಷಣೆ  ಕಣಯ್ಯ   ಗುರ್ತ್ವಾ ಕರ್ಸಣೆ ಅಲ್ಲಾ ತಿಳೀತ

ಶಂಭು :- ಸಾ ಒಂದು ಪಸ್ನೆ  ಕೇಳ ಬೇಕೂ ಅಂತೀವ್ನಿ  ತಪ್ಪು ತಿಳಕಾ ಬ್ಯಾಡಿ?? ಅಂದಾ

ಮಲ್ಲಿಕ್ :- ಅಯ್ಯೋ ದಡ್ಡ.... ಅದಕ್ಕೆ ಯಾಕೆ  ಸಂಕೋಚ? ಕೇಳೋ ಪ್ರಶ್ನೆ , ಮಕ್ಕಳು ಹೊಸ ವಿಚಾರ ತಿಳಿದು ಕೊಳ್ಳ ಬೇಕು,               ಕೇಳು ಕೇಳು ನಿನ್ನ ಪ್ರಶ್ನೆ ...ಅಂದ್ರೂ

ಶಂಭು :- ಪ್ರಶ್ನೆ ಕೆಲಿದ್ಮ್ಯಾಲೆ  ನನ್ನ ಬೋಯ್ಯಕಿಲ್ಲ ,  ಒಡಿಯಾಕಿಲ್ಲ  ಅಂತಾ ಯೋಳಿ , ಆಮೇಕೆ ಪಶ್ನೆ  ಕೇಳ್ತೀನಿ ಅಂದಾ

ಮಲ್ಲಿಕ್ :- ಲೇ ಪ್ರಶ್ನೆ ಕೇಳೋ  ನಿನಗೆ  ಏನೂ ಮಾಡೋಲ್ಲ  ಹೆದರ ಬೇಡ ಪ್ರಶ್ನೆ ಕೇಳೂ  ಅಂದ್ರು.
                                                                                                                                                          

ಶಂಭು :- ನಮ್ಮ  ಹಟ್ಟಿ [ ಮನೆ]  ಪಕ್ಕ ಇರೋ  ಲಾರೀ ತೂಕ ಮಾಡೋ ಮಿಶಿನಿನಲ್ಲಿ ನಮ್ಮ ಎಮ್ಮೆ ಯ ಹತ್ಸಿ  ತೂಕ  ಮಾಡ್ದೆ       ಸಾ                ೩೦೦      ಕೆ.ಜಿ.ಅದೇ[ ಆಹಾರ ಸೇವಿಸುವ ಮೊದಲು ]   , ಅದು  ಹುಲ್ಲು, ಹೊಟ್ಟು , ಭೂಸ  ಎಲ್ಲಾ                ಸೇರಿ           ಸುಮಾರು  ಹತ್ತು ಕೆ.ಜಿ. ಆಹಾರ  ತಿನ್ನುತ್ತೆ , ಆದ್ರೆ ಅದರ ತೂಕ   ಆಹಾರ ತಿಂದ ಮ್ಯಾಲೆ  ೩೧೦ ಕೆ.ಜಿ.  ಆಗಬೇಕು ಆದರೆ  ತೂಕ  ಹಾಕುದ್ರೆ  ೩೦೦ ಕೆ.ಜಿ. ನೆ ತೂಗ್ತು  ಸಾ,

ಆಮ್ಯಾಕೆ ಬೆಳಿಗ್ಗೆ  ನಮ್ಮ ಎಮ್ಮೆನ  ಮತ್ತೆ  ತೂಕ ಮಾಡ್ದೆ  ಆಗಲೂ ೩೦೦ ಕೆ.ಜಿ. ಬತ್ತು,  ಆಮ್ಯಾಕೆ  ಒಸಿ ಒತ್ತಾದ್ಮ್ಯಾಕೆ  ಎಮ್ಮೆ    ಗಂಜ್ಲಾ  ಸುರಿಸಿ , ತೊಪ್ಪೆ ಹಾಕ್ತು  ಎಲ್ಲಾ ಅಂದಾಜು ಒಂದು ಐದು ಕೆ.ಜಿ ಇರ್ಬೈದು   , ತಾಳು ಈಗಲಾದರೂ ತೂಕ ಕಡಿಮೆ ಇದ್ದಾತಾ ಅಂತಾ ತೂಕ ಮಾಡ್ದೆ  ಆಗಲೂ  ೩೦೦ ಕೆ.ಜಿ.ನೆ ಬತ್ತು ಸಾ  ಇದ್ಯಂಗೆ ಅಂತಾ  ಗೊತ್ತಾಯ್ತಿಲ್ಲ  ಒಸಿ ನೀವೇ  ಯೋಳ್ಕೊಡೀ  ಸಾ , ಅಂದಾ

ಮುಂದುವರೆದು  ಸಾ  ನಮ್ಮ ಎಮ್ಮೆ ಅಂಗೆ ಮನ್ಸುರ್ದೂ ಅದೇ ಕಥೆ ಆಲ್ವಾ ಸಾ ಅಂದಾ ............!!! ಯಾಕೋ ಅಂದೇ  ನಮ್ಮ ಎಮ್ಮೆ  ತೂಕ ಮಾಡಿದಂಗೆ  ನನ್ನ ಮ್ಯಾಲೋ ಪ್ರಯೋಗ ಮಾಡ್ಕಂಡೆ   ಆಗಲೂ ಎತ್ವಾಸ ಕಾಣಲಿಲ್ಲ ಸಾ, ಮನ್ಸರು  ಊಟ ಮಾಡಾಕೆ ಮೊದ್ಲು  ಎಷ್ಟು ತೂಕ ಇರ್ತಾರೋ  ಹೊಟ್ಟೆ ಒಳಗಿನ  ಕಸ ಆಚೆಗೆ ಹೊದ್ಮ್ಯಾಕೆ  ತೂಕ ಅಷ್ಟೇ ಯಾಕೆ ಇರ್ತದೆ  ಅಂತಾ  ಗೊತ್ತಾಯ್ತಿಲ್ಲ  ಅಂದಾ .
  ಕ್ಲಾಸಿನ ಮಕ್ಕಳು  ಗೊಳ್  ಅಂತಾ ನಕ್ಕರು.

ಮಲ್ಲಿಕ್ :- ಲೇ  ತಲೆ ಹರಟೆ   ಕೂತ್ಕೋ ಸುಮ್ನೆ , ಅಂದವನೇ   ಗದರಿದೆ

             ಪಾಪದ ಹುಡುಗ ಹೆದರಿಕೊಂಡು ಕುಳಿತ. ಲೇ ಇವತ್ತಿಗೆ ಇಷ್ಟೇ ಸಾಕು,   ನಾಳೆಗೆ   ಹೋಂ ವರ್ಕ್ ತಗೊಳ್ಳಿ ಅಂತಾ  ಸಿಟ್ಟಿನಲ್ಲಿ  ಹೊರಲಾರದಷ್ಟು  ಹೋಂ ವರ್ಕ್ ನೀಡಿದೆ.  ಶಾಲೆ ಮುಗಿಸಿ ಬಸ್ಸಿನಲ್ಲಿ ಕುಳಿತು ಯೋಚಿಸಿದಾಗ  ಶಂಭು  ಪ್ರಶ್ನೆ  ಕಾಡತೊಡಗಿತು.  ಹೌದಲ್ವಾ  ಆ ಹುಡುಗ ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ?  ಈ ಪ್ರಶ್ನೆಯ ಉತ್ತರ ನನಗೂ ಗೊತ್ತಿಲ್ಲ , ಅಂದವನೇ  ಅಂತರ್ಜಾಲ ಹುಡುಕಿದೆ ಈ ಪ್ರಶ್ನೆಗೆ   ಉತ್ತರ ಸಿಕ್ಕಲಿಲ್ಲ  ಅದಕ್ಕೆ ನೀವಾದ್ರೂ ಏನಾದರೂ ಮಾಡ್ರೀ ಅಂದ್ರು.ಹಳ್ಳಿ ಹೈದ ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರ  ಪ್ರಶ್ನೆ  ನನ್ನನ್ನೂ ಕಾಡತೊಡಗಿತು , ನನ್ನಲ್ಲೂ ಉತ್ತರ ವಿಲ್ಲಾ, ಉತ್ತರ ಸಿಗದೇ ನಾನೂ ಅವರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ದಯವಿಟ್ಟು ಈ ಲೇಖನ ಓದಿದ ನೀವಾದ್ರೂ ಉತ್ತರ ಹೇಳ್ತೀರಾ ಪ್ಲೀಸ್ .18 comments:

Badarinath Palavalli said...

ತಲೆ ಉಪಯೋಗಿಸಲು ಸುರು ಮಾಡೀನಿ, ವಸೀ ಟ್ಹೇಂ ಕೊಡಣ್ಣೋ

Srikanth Manjunath said...

ಶಾಲಾ ದಿನಗಳಲ್ಲಿ ಓದಿದ ನೆನಪು. ಭಾರ ಗುರುತ್ವಾಕರ್ಷಣೆಯನ್ನು ಅವಲಂಬಿಸಿರುತ್ತೆ (ತಪ್ಪಿದ್ದರೆ ತಿದ್ದಿ). ದೇಹದಲ್ಲಿ ಸೇರಿದ ಪದಾರ್ಥಗಳು ದೇಹದ ತೂಕವನ್ನು ಹೆಚ್ಚಿಸುವುದು ಖಾತ್ರಿ. ಕೆಲವು ಸಿದ್ಧ ಪರೀಕ್ಷೆಗಳಿಗೆ ಹೋಗುವಾಗ ದೇಹದ ತೂಕ ಇಷ್ಟೇ ಎನ್ನುವ ಮಿತಿ ಇದ್ದಾಗ, ಹಿರಿಯರು ಹೇಳುವುದು ಬಾಳೆಹಣ್ಣು ತಿಂದು ಹೋಗು ತೂಕ ಜಾಸ್ತಿ ಆಗುತ್ತೆ ಅಂತ. ಹಾಗಾಗಿ ತಿಂದ ಮೇಲೆ ಅಥವಾ ದೇಹದ ತ್ಯಾಜ್ಯ ಹೊರಗೆ ಹೋದಮೇಲೆ ದೇಹದ ತೂಕ ಏರು ಪೆರಾಗಲೇಬೇಕು. ಅಜಾದ್ ಸರ್ ಮತ್ತು ಡಾಕ್ಟರ್ ಕೃಷ್ಣಮೂರ್ತಿ ಅವರ ಉತ್ತರಕ್ಕೆ ಕಾಯುತ್ತಿದ್ದೇನೆ!

ಸುಂದರ ಲೇಖನ, ಭಾಷೆ, ಹಾಸ್ಯ, ಹುಡುಗರ ಜ್ಞಾನ, ಮೇಷ್ಟರಿಗೆ ಇರುವ ಹುಡುಗರ ಕಳಕಳಿ ಇವೆಲ್ಲ ಬಹಳ ಖುಷಿಕೊಟ್ಟಿತು. ಸುಂದರ ಸರ್

ಜಲನಯನ said...

ಬಾಲು ವೈಜ್ಞಾನಿಕವಾಗಿ ಮತ್ತು ವಾಸ್ತವವಾಗಿ ಇದು ಸತ್ಯ ಅಲ್ಲ. ಉದಾಹರಣೆ..ಒಂದು ತೂಕದ ಯಂತ್ರದ ಮೇಲೆ ನಿಲ್ಲಿ,,ತೂಕ ನೋಡಿಕೊಳ್ಳಿ, ಒಬ್ಬರು ನಿಮಗೆ ಬ್ರೆಡ್ ಜಾಮ್ (ಸುಮಾರು ೨೦೦ ಎಂದುಕೊಳ್ಳಿ) ಕೊಡಲಿ. ಅದನ್ನು ಹಿಡಿದಾಗ ಮತ್ತು ನೀವು ತಿಂದಾಗ ನಿಮ್ಮ ತೂಕ ಮೂಲ ತೂಕ+ಬ್ರೆಡ್ ಜಾಮ್ ತೂಕ ಬರುತ್ತೆ ಅಂದರೆ ೨೦೦ ಗ್ರಾಂ ಹೆಚ್ಚಿರುತ್ತೆ. ಒಂದು ಲೀಟರ್ ನೀರು ಕುಡಿಯಿರಿ, ಆಗ ಒಂದು ಕಿಲೋ ೨೦೦ ಗ್ರಾಂ ಹೆಚ್ಚುತ್ತೆ. ಆದರೆ ಇದು ಸ್ವಲ್ಪ ಸಮಯದ ನಂತರ ಕಡಿಮೆಯಾಗುತ್ತೆ ಕಾರಣ ಶರೀರಕ್ರಿಯೆ, ಪಾಚನ ಎಲ್ಲದಕ್ಕೂ ಶಕ್ತಿ ವ್ಯಯವಾಗಿ ತೂಕ ಹೆಚ್ಚುವರಿಗಿಂತಾ ಕಡಿಮೆಯಿರುತ್ತೆ. ಹಾಗೆಯೇ ಮೂತ್ರ-ಮಲ ವಿಸರ್ಜನೆಯಾದರೂ ತಕ್ಷಣ ತೂಕ ಕಡಿಮೆ ಆಗುತ್ತೆ...ಆದರೆ ಸ್ವಲ್ಪ ಸ್ಮಯದ ನಂತರ ಹೆಚ್ಚುತ್ತೆ ...ಹೀಗೆ...

Ashok.V.Shetty, Kodlady said...

ಹಹಹ.....ಸರ್ ...ನಗು ತಡೆಯೋಕೆ ಆಗಿಲ್ಲ ... ನೀವು ಮಲಗ್ತಾ ಇದ್ದೀನಿ ಅಂದ್ರಲ್ಲ ..... ಇಲ್ಲ ಅಂದ್ರೆ ಫೋನ್ ಮಾಡ್ಬೇಕು ಅನ್ಕೊಂಡಿದ್ದೆ ....


ನಿನ್ನೆ ರಾತ್ರಿ ನಾನು ಮತ್ತೆ ನನ್ನ ಪತ್ನಿ ಹೀಗೆ ನಮ್ಮ ಶಾಲಾ ದಿನಗಳ ನೆನಪು ಮಾಡ್ಕೊಂಡು ಮಾತಾಡ್ತಾ ಇದ್ವಿ .... ಅವಳ ಮೇಷ್ಟ್ರು ಸಕ್ಕರೆ ಯಾವುದರಿಂದ ತಯಾರಿಸುತ್ತಾರೆ ಅಂತ ಕೇಳಿದ್ರಂತೆ .. ಇವಳು ತುಂಬಾ ತುಂಬಾ ಕಾನ್ಫಿಡೆಂಟ್ ಆಗಿ ಎಲ್ಲರಿಗಿಂತ ಮೊದಲು ಎದ್ದು ನಿಂತು ದನದ ಮೂಳೆಯಿಂದ ಎಂದು ಹೇಳಿದಳಂತೆ....... ನಿನ್ ತಲೇಲಿ ದನದ ಸಗಣಿ ತುಂಬಿದೆ ಅಂತ ಹೇಳಿ ಮೇಷ್ಟ್ರು ಬೈದು ಕೂರಿಸಿದರಂತೆ ..... ನಮ್ಮತ್ತೆ ಇವಳು ತುಂಬಾ ಸಕ್ಕರೆ ತಿನ್ನುತ್ತಾ ಇದ್ದಳು ಅಂತಾ ಅದನ್ನು ಬಿಡಿಸುವ ಉದ್ದೇಶದಿಂದ ಸಕ್ಕರೆಯನ್ನು ದನದ ಮೂಳೆಯನ್ನು ಪುಡಿಮಾಡಿ ಮಾಡೋದು ಅಂತ ಹೇಳಿದ್ದರು ..... ನನ್ನ ಪತ್ನಿ ಅದೇ ನಿಜ ಎಂದು ತಿಳಿದು ಅದೇ ಉತ್ತರವನ್ನು ಕೊಟ್ಟಿದ್ದಳು ....

ನಿಮ್ ಪ್ರಶ್ನೆಗೆ ಆಜಾದ್ ಸರ್ ಉತ್ತರ ಕೊಟ್ಟಿದ್ದಾರೆ ...ಇದಕ್ಕಿಂತ ಜಾಸ್ತಿ ನಂಗೂ ಗೊತ್ತಿಲ್ಲ ಸಾ ...... ಸುಂದರ ಬರಹ ಸಾ ... ಇಷ್ಟ ಐತು..

ನಿಮ್ಮೊಳಗೊಬ್ಬ ಬಾಲು said...

@ ಜಲನಯನ [ ಅಜಾದ್ ಸರ್ ]:-) ನಿಮ್ಮ ಉತ್ತರ ಸ್ವಲ್ಪ ಮಟ್ಟಿಗೆ ಸರಿ ಅನ್ನಿಸಿತು, ಆದರೆ ನೀವು ಹೇಳಿರುವಂತೆ ಪ್ರಯೋಗ ಮಾಡಲಾಗಿದೆ ,ಅದರಲ್ಲಿ ಲೇಖನದಲ್ಲಿ ಚರ್ಚಿಸಿರುವಂತೆ ಫಲಿತಾಂಶ ಬಂದಿದೆಯೇ ಹೊರತು ನಿಮ್ಮ ಉತ್ತರದಂತೆ ಅಲ್ಲ . ನಿಮ್ಮ ಉತ್ತರದ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯ ಇದೆ ಅನ್ಸುತ್ತೆ ಅಜಾದ್ ಸರ್. ನಿಮ್ಮ ಉತ್ತರದ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನ ಸಾಗಲಿದೆ.ತಾವೂ ಪ್ರಯತ್ನಿಸಿ ಒಳ್ಳೆಯ ಅಂತ್ಯಾ ಹಾಡಲು ಪ್ರಯತ್ನಿಸೋಣ. ನಿಮ್ಮ ಉತ್ತರಕ್ಕೆ ಕೃತಜ್ಞ.

Swarna said...

ನಿಮ್ಮೆಲ್ಲರ ಚರ್ಚೆ ಮತ್ತು ಉತ್ತರಕ್ಕೆ ಕಾಯ್ತೇನೆ.ಮಲ್ಲಿಕಾರ್ಜುನ ಮೇಷ್ಟರುಗಳ ಸಂಖ್ಯೆ ಹೆಚ್ಚಲಿ

ಸಿಮೆಂಟು ಮರಳಿನ ಮಧ್ಯೆ said...

ಬಾಲಣ್ಣಾ...

ನಿಮ್ಮ ಹೆಸರು ಬದಲಾಯಿಸಲಾಗಿದೆ..

ಕ್ಯಾಪ್ಷನ್ ಬಾಲಣ್ಣ ಅಲ್ಲ..

"ತಲೆಗೆ ಹುಳ ಬಿಡುವ ಬಾಲಣ್ಣ..

"ತ.ಹು.ಬಾಲಣ್ಣ"..

ನನಗಂತೂ ಆಜಾದನ ಉತ್ತರ ಸರಿ ಅನ್ನಿಸಿತು...

ನಾಳೆಯ ಒಳಗೆ ಉತ್ತರ ಕೊಡದಿದ್ದಲ್ಲಿ.
ನಾವೆಲ್ಲ ನಿಮ್ಮ ಮನೆಯ ಮೂಂದೆ ...
ಕನ್ನಡ ನ್ಯೂಸ್ ಚಾನೆಲ್ಲ ಎಲ್ಲವನ್ನೂ ಕರೆತಂದು ..
ಸಮಸ್ತ ಕರ್ನಾಟಕದ ಜನರ ತಲೆ ತಿನ್ನುತ್ತೇವೆ.. ಹುಷಾರ್ !

Dr.D.T.Krishna Murthy. said...

ಬಾಲೂ ಸರ್;ಅಜಾದ್ ಸರ್ ಅವರ ಉತ್ತರ ಸರಿ ಇದೆ.ಅದು ತೂಕದ ಮಶೀನಿನ ಸೂಕ್ಷ್ಮತೆಯ ಮೇಲೆ ಅವಲಂಬಿತವಾಗಿದೆ.ನಮ್ಮಲ್ಲಿನ ಎಲೆಕ್ಟ್ರಾನಿಕ್ ತೂಕದ ಮಶೀನಿನಲ್ಲಿ ಇನ್ನೂರು ಗ್ರಾಮಿನಷ್ಟು ನೀರು ಕುಡಿದು ನಂತರ ತೂಕ ನೋಡಿದರೆ ಇನ್ನೂರು ಗ್ರಾಮು ತೂಕ ಹೆಚ್ಚು ತೋರಿಸುತ್ತೆ.ಫೋನಿನಲ್ಲಿ ಸರಿಯಾಗಿ ಉತ್ತರ ಕೊಡಲಾಗಲಿಲ್ಲ.ಕ್ಷಮೆ ಇರಲಿ.

ನಿಮ್ಮೊಳಗೊಬ್ಬ ಬಾಲು said...

@ಪ್ರಕಾಶ್ ಹೆಗ್ಡೆ , ಡಿ .ಟಿ .ಕೆ.ಸಾರ್ :- ದಯಮಾಡಿ ತಪ್ಪು ತಿಳಿಯ ಬೇಡಿ.ಅಜಾದ್ ಸರ್ ಅವರ ಉತ್ತರದ ಬಗ್ಗೆ ಯೋಚನೆ ಮಾಡಲಾಗಿದೆ ಆದರೆ ಅದನ್ನು ಸ್ಪಷ್ಟವಾಗಿ ಮಕ್ಕಳ ಮುಂದೆ ನಿರೂಪಿಸಲು ಸರಿಯಾದ ಕ್ರಮ ಬೇಕು ಒಂದು ವೇಳೆ ತೂಕದ ಯಂತ್ರದ ಸೂಕ್ಷ್ಮತೆ ಬಗ್ಗೆ ತಿಳಿಯದೆ ಸಾಮಾನ್ಯ ತೂಕದ ಯಂತ್ರದಲ್ಲಿ ತೂಕ ಮಾಡಿದರೆ ವೆತ್ಯಾಸ ತಿಳಿಯದು ಎಂಬ ವಾದ ಅಷ್ಟಾಗಿ ಪರಿಣಾಮ ಮಕ್ಕಳಿಗೆ ಬೀರದು. ಅದಕ್ಕಾಗಿ ವೈದ್ಯಕೀಯ ಬಳಕೆಯ ತೂಕದ ಯಂತ್ರವನ್ನು ಬಳಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅದಕ್ಕಾಗಿನಮಗೆ ಗೊತ್ತಿರುವ ಹಲವು ವೈಧ್ಯರುಗಳನ್ನು ಸಂಪರ್ಕಿಸುತ್ತಿದ್ದೇವೆ, ಅಚ್ಚರಿಯೆಂದರೆ ಕೆಲವು ವೈಧ್ಯರು ಈ ಲೇಖನದ ಅಂಶಗಳ ಬಗ್ಗೆ ಇನ್ನೂ ಸ್ಪಷ್ಟವಾದ ಸಂಶೋಧನೆ ಆಗಬೇಕೆಂದು ಹೇಳುತ್ತಿದ್ದಾರೆ. ವಿಚಾರದ ಬಗ್ಗೆ ಎದ್ದಿರುವ ಪ್ರಶ್ನೆ ಸರಿಯಾಗಿದೆ ಎಂಬುದು ನನ್ನ ಭಾವನೆ, ಅನ್ಯತಾ ಭಾವಿಸ ಬೇಡಿ ಮತ್ತಷ್ಟು ಈ ವಿಚಾರದಲ್ಲಿ ಮತ್ತಷ್ಟು ಮಂಥನ ಮಾಡೋಣ ಅಲ್ಲವೇ.

Srikanth Manjunath said...

ಎಲ್ಲಾ ಉತ್ತರವೂ ಸರಿ. ಎಮ್ಮೆ ತೂಕ ಹಾಕಿದ ಯಂತ್ರ ಲಾರಿಗಳನ್ನು ತೂಕ ಹಾಕುವ ಯಂತ್ರದಲ್ಲಿ ನಾನು ಕುದ್ದಾಗಿ ನೋಡಿರುವ ಪ್ರಕಾರ ಲಾರಿಗಳ ತೂಕ ಹಲವಾರು ಟನ್ ಗಳಲ್ಲಿ ತೂಕ ತೂಗುವಾಗ ಈ ಯಂತ್ರಗಳಲ್ಲಿ ಐದು ಹತ್ತು ಕೆಜಿಗಳು ಅಷ್ಟಾಗಿ ವ್ಯತ್ಯಾಸ ಆಗುವುದಿಲ್ಲ. ಅದೇ ಮಾದರಿಯಲ್ಲಿ ಮನುಷ್ಯರು ತೂಗಿ ನೋಡುವ ಯಂತ್ರಗಳಲ್ಲಿ ಗ್ರಾಂ ಗಳು ಅಷ್ಟಾಗಿ ವ್ಯತ್ಯಾಸ ಕಾಣೋಲ್ಲ. ಉದಾಹರಣೆಗೆ ಮಾನವರು ತೂಕ ನೋಡುವಾಗ ಜೇಬಿನಲ್ಲಿರುವ ಮೊಬೈಲ್, ಪರ್ಸ್, ಹಾಕಿಂದ ಶೂ ಅಥವಾ ಚಪ್ಪಲಿಗಳ ತೂಕ ಒಟ್ಟಾರೆ ನೋಡಿದಾಗ ಅಷ್ಟು ಪರಿಣಾಮ ಬೀರೋಲ್ಲ.

ಹುಡುಗನ ಪ್ರಶ್ನೆ ಹಾಗೂ ಆತ ತಾಳೆ ನೋಡಿದ ರೀತಿಯ ಬಗ್ಗೆ ಅನುಮಾನವಿಲ್ಲ, ಯಂತ್ರಗಳ ಮಿತಿ ಅಥವಾ ಅದರ ಒಟ್ಟು ಮಿತಿಯನ್ನು ಹೋಲಿಸಿದಾಗ ಅಂಥಹ ವ್ಯತ್ಯಾಸ ಅಥವಾ ಏರು ಪೇರು ಕಂಡಿಲ್ಲದೆ ಇರಬಹುದು. ಉದಾಹರಣೆಗೆ ಬಂಗಾರದ ಆಭರಣವನ್ನು ತೂಗಿ ನೋಡುವಾಗ ಮಿಲಿ ಗ್ರಾಂ ತನಕ ತೋರಬಲ್ಲ ತಕ್ಕಡಿ ನ್ಯಾಯ ಒದಗಿಸುತ್ತದೆ ಹಾಗೆಯೆ ಅದೇ ಆಭರಣವನ್ನು ದಿನಸಿ ಅಂಗಡಿಯಲ್ಲಿರುವ ತಕ್ಕಡಿಯಲ್ಲಿ ತೂಗಿದರೆ..... ನಿಖರ ಮಾಹಿತಿ ಸಿಗುವುದಿಲ್ಲ. ಇದು ನನ್ನ ಅನಿಸಿಕೆ

ಚಿನ್ಮಯ ಭಟ್ said...

ನಿಜಾ ಹೇಳಿ ಸಾರ್....
ಆ ತೂಕ ಮಾಡೋ ಮಶಿನ್ನು ಸರಿ ಇತ್ತಾ :)P
ಮುಂದಿನ ಪ್ರಶ್ನೆ ಆಮೇಲೆ!!!!

ಜಲನಯನ said...

ಬಾಲುಜಿ...ಇದರಲ್ಲಿ ಸಮ್ಶೋಧನೆ ಅಂಶ ಇಲ್ಲ...
ವೈಜ್ಞಾನಿಕವಾಗಿ ಇದರ ವಿವರಣೆ ಕೊಟ್ಟಿದ್ದೇನೆ, ಶ್ರೀಕಾಂತ್, ಡಾಕ್ಟರ್ ಡಿ.ಟಿ.ಕೆ ಮತ್ತು ಚಿನ್ಮಯ ಇವರ ಮಾತನ್ನು ಅನುಮೋದಿಸಲು ಇನ್ನಷ್ಟು ವಿವರಣೆ ಹಾಕುತ್ತಿದ್ದೇನೆ ಮತ್ತು ಲಿಂಕ್ ಸಹಾ...ನಿಮ್ಮ ಸಮಾಧಾನಕ್ಕೆ.
How_soon_do_you_gain_weight_after_eating
Immediately. As soon as you put a bite of food in your mouth, your weight equals however much you used to weigh plus the weight of that bite. In fact, gasp, you could say you gain weight just by holding the food you're going to eat. Here's an experiment:
Stand on a scale (ideally an accurate one that continuously adjusts to weight and doesn't freeze).
Grab an unwrapped piece of food that you can eat whole (a sandwich) and hold it while on the scale. The scale will now register your weight plus the weight of the sandwich.
Eat the sandwich. Your weight on the scale will not change- your new body weight now equals your old weight plus the weight of the sandwich! Omg, you've just gained weight! Drink a liter of water, and you'll gain 2.2 pounds!!
Clearly this change is not entirely permanent. Your body processes the food and burns the calories to keep everything running smoothly. You'll soon excrete much of what's left of the food, and expel the moisture through sweating or urination. The point is that body weight is constantly fluctuating throughout the day. There isn't some magic time at which you instantly find yourself a pound heavier or lighter. When people are concerned with weight gain or loss, they're talking about large, sustained changes over time.

http://wiki.answers.com/Q/How_soon_do_you_gain_weight_after_eating
http://www.fitsugar.com/How-Long-Does-Take-Gain-Weight-388190
ಇದು ಬಾಲು ರವರ ಮಾಹಿತಿಗೆ.
ಇನ್ನೊಂದು ವಿಷಯ ಕೋಳಿ ಕೊಳ್ಳಲು ಹೋಗಿರುವ ಎಲ್ಲಾ ಕೋಳಿ ತಿನ್ನೋರಿಗೆ ಅನುಭವಕ್ಕೆ ಬಂದಿರುವ ವಿಷಯ.
ಕೋಳಿ ಮಾರಾಟಕ್ಕೆ ಇಡುವ ಮುಂಚೆ ಕೋಳಿ ವ್ಯಾಪಾರಿ ಕಾಳು ನೀರು ಚನ್ನಾಗಿ ತಿನ್ನಿಸಿ 100-200 ಗ್ರಾಂ ಹೆಚ್ಚು ತೂಗುವ ಹಾಗೆ ಮಾಡಿ ಲಾಭ ಗಳಿಸುವುದು ಸಾಮಾನ್ಯ.
ಇನ್ನು ಎಮ್ಮೆಯ ವಿಷಯ: ಎಮ್ಮೆಗೆ ನೀವು ಕೊಟ್ಟ ಮೇವಿನ (ಹುಲ್ಲು ಅಥವಾ ಭೂಸಾ-ಹಿಂಡಿ) ತೂಕ ಮಾಡಿ, ಆ ತೂಕ ಎಮ್ಮೆಯನ್ನು ತೂಗುವ ತಕ್ಕಡಿ ಸಮರ್ಥವಾಗಿ ತೂಗುತ್ತದೆಯೋ ನೋಡಿ. ೧-೨ ಕಿಲೋ ವ್ಯತ್ಯಾಸವನ್ನೂ ತೋರಿಸುವ ಹಾಗಿರಬೇಕು. ಮೇವು ಕೊಟ್ಟು ನೀರು ಕುಡಿಸಿ (೧೦-೧೫ ಲೀಟರ್) ನಂತರ ಎಮ್ಮೆಯನ್ನು ತೂಗಿ ನೋಡಿ. ಅದು ಖಂಡಿತಾ ತನ್ನ ಮೊದಲಿನಿ ತೂಕಕ್ಕಿಂತಾ ಕಡೇ ಪಕ್ಷ 9-10 ಕಿಲೋ ಹೆಚ್ಚು ತೂಗುತ್ತದೆ. ಇದು ವಾಸ್ತವ. ಆದರೆ ಈ ಹೆಚ್ಚಳ ಶಾಶ್ವತವಲ್ಲ. ಶರೀರ ಕ್ರಿಯೆ ಮತ್ತು ವರ್ಜ್ಯಗಳ ಕಾರಣ ಹೆಚ್ಚು-ಕಡಿಮೆಯಾಗುತ್ತದೆ.

mshebbar said...

It is a brainstorming question.
Jai Ho AZAD BHAI.
It is to-day's learning part.
You know " Learning curve never bends! "
Thanks to BALU.

ನಿಮ್ಮೊಳಗೊಬ್ಬ ಬಾಲು said...

@ ಅಜಾದ್ ಸರ್ :ನಿಮ್ಮ http://wiki.answers.com/Q/How_soon_do_you_gain_weight_after_eating
http://www.fitsugar.com/How-Long-Does-Take-Gain-Weight-388190 ನಲ್ಲಿರುವ ಮಾಹಿತಿ ಅರ್ಥ ಪೂರ್ಣವಾಗಿದೆ. ಆದರೆ ಅದರಲ್ಲಿ ನನ್ನ ಲೇಖನದಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲ ಅದರಲ್ಲಿನ ಎಲ್ಲಾ ಲೇಖನಗಳನ್ನು ಓದಿದೆ ಅದರಲ್ಲಿ ನ್ಯೂಟ್ರಿಶನ್ ಸಂಬಂಧದ ವಿಚಾರಗಳೇ ಜಾಸ್ತಿ ಇದೆ. ಅದೇ ಲಿಂಕ್ ಗೆ ನನ್ನ ಪ್ರಶ್ನೆ ಹಾಕಿದ್ದೇನೆ ನೋಡೋಣ ಉತ್ತರ ಏನು ಬರುತ್ತೆ ಅಂತಾ ಇವತ್ತು ಸಂಜೆ ಕೆಲವು ದಾಕತರ್ಗಳ ಜೊತೆ [ ಇದರಲ್ಲಿ ಒಬ್ಬರು ಸರ್ಜನ್] ಇದೆ ವಿಚಾರದ ಬಗ್ಗೆ ವಿಚಾರ ವಿನಿಮಯ ಇದೆ. ನೋಡೋಣ ಉತ್ತರ ಏನು ಬರುತ್ತೆ ಅಂತಾ. ಆದರೆ ನಿಮ್ಮ ಉತ್ತರದಿಂದ ಆರೋಗ್ಯಕರ ಸಂವಾದ ಆಗುತ್ತಿರುವುದಂತೂ ನಿಜ ಹೀಗೆ ಮುಂದುವರೆಯಲಿ , ವಾದ ಸಂವಾದ ಆರೋಗ್ಯಕರ ವಿಚಾರದೆಡೆಗೆ.

ನಿಮ್ಮೊಳಗೊಬ್ಬ ಬಾಲು said...

@ hebbaasir :-ನಿಮ್ಮ ಪ್ರೀತಿ ಮಾತಿಗೆ ಥ್ಯಾಂಕ್ಸ್.

ನಿಮ್ಮೊಳಗೊಬ್ಬ ಬಾಲು said...

@ badarinath palavalli, sreekant manjunath, chinmai, ashok shetti, swarna:-)ನಿಮ್ಮೆಲ್ಲರ ಅನಿಸಿಕೆಗೆ ಥ್ಯಾಂಕ್ಸ್.

ಮನಸು said...

ಹಹಹ್ ಚೆನ್ನಾಗಿದೆ ಪ್ರಶ್ನೆ.. ಹಾಸ್ಯ ಭರಿತ ಲೇಖನ...

Prabhu Iynanda said...

ಐದು-ಹತ್ತು ಸಾವಿರ ಕೆ ಜಿ (೫-೧೦ ಟನ್) ತೂಗುವ ಖಾಲಿ ಲಾರಿಗಳು ಪೂರ್ತಿ ಲೋಡ್ ಆದ ಮೇಲೆ ಹತ್ತು-ಇಪ್ಪತ್ತು ಸಾವಿರ ಕೆ ಜಿ ತೂಗಿಯಾವು. ಇವುಗಳನ್ನು ತೂಗುವ ಯಂತ್ರ (weigh bridge)ಗಳನ್ನು ಬಹುಶಃ ೧೦೦ ಕೆ ಜಿ ವ್ಯತ್ಯಾಸವನ್ನು ಗುರುತಿಸುವಂತೆ calibrate ಮಾಡಿರುತ್ತಾರೆ. ಅಂದರೆ ೫೦೦೦ ಕೆ ಜಿ ತೂಗುವ ಖಾಲಿ ಗಾಡಿಯಲ್ಲಿ ೧೦೦ ಕೆ ಜಿ (೧ ಕ್ವಿಂಟಾಲ್) ಭಾರವನ್ನು ಹಾಕಿದರೆ ಅದನ್ನು ತೋರಿಸಬಲ್ಲುದು; ಆದರೆ ಈ ಭಾರದೊಡನೆ ಇನ್ನೊಂದು ೧೦ -೨೦ ಕೆ ಜಿ ತೂಗುವ ವಸ್ತುವನ್ನು ಹಾಕಿದರೆ ಆಗಲೂ ಲಾರಿಯ ಒಟ್ಟು ತೂಕವನ್ನು ೫೧೦೦ ಕೆ ಜಿ ಎಂದೇ ತೋರಿಸುತ್ತದೆ. ಅಷ್ಟೇ ಏಕೆ ೧೦-೨೦ ಕೆ ಜಿ ವಸ್ತುವಿನ ಬದಲು ೯೦ ಕೆ ಜಿ ವಸ್ತುವನ್ನಿಟ್ಟರೂ ೫೧೦೦ ಕೆಜಿ ಎಂದೇ ತೋರಿಸುತ್ತದೆ.

ಒಟ್ಟಿನಲ್ಲಿ ಒಂದು ತೂಕದ ಯಂತ್ರವು ಎಷ್ಟು ಕನಿಷ್ಟ ತೂಕದ ವ್ಯತ್ಯಾಸವನ್ನು ಗುರುತಿಸುವಂತೆ ಅದನ್ನು ಎಡ್ಜಸ್ಟ್ (ಸರಿಯಾದ ಪದವೆಂದರೆ ಕ್ಯಾಲಿಬ್ರೇಟ್) ಮಾಡಿರುತ್ತಾರೋ ಅದನ್ನಷ್ಟೇ ತೋರಿಸುವದರಿಂದ ೩೦೦ ಕೆ ಜಿ ತೂಗುವ ಎಮ್ಮೆ ೯೦ ಕೆ ಜಿ ಹುಲ್ಲು-ನೀರನ್ನು ಸೇವಿಸಿದರೂ (ಇಷ್ಟೊಂದನ್ನು ತಿನ್ನಲು ಅದಕ್ಕೆ ಸಾಧ್ಯವಿಲ್ಲ ತಾನೇ!) ಯಂತ್ರ ಅದರ ತೂಕವನ್ನು ೩೦೦ ಕೆ ಜಿ ಎಂದೇ ತೋರಿಸುತ್ತದೆ.

ಇದು ಮನುಷ್ಯರನ್ನು ತೂಗುವ ಯಂತ್ರಕ್ಕೂ ಅನ್ವಯವಾಗುತ್ತದೆ.

ಬಹುಶಃ ನಿಮ್ಮ ಸಮಸ್ಯೆಯನ್ನು ಪರಿಹರಿಸಿದ್ದೇನೆ ಅಂತ ಅಂದುಕೊಂಡಿದ್ದೇನೆ!