ಚಿತ್ರ ಕೃಪೆ ಅಂತರ್ಜಾಲ |
ದೃಶ್ಯ ..೦೧ } ಅದೊಂದು ಶಾಲೆ ಅಲ್ಲಿ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಶಾಲೆಯ ಮುಂದೆ ಗಣರಾಜ್ಯೋತ್ಸವ ಆಚರಿಸಲು ನಿಂತಿದ್ದವು., ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾದ ಮುಖ್ಯ ಅತಿಥಿಗಳು ಸುಮಾರು ಒಂದು ಘಂಟೆ ಕಾಲ ವಿಳಂಭವಾಗಿ ಆಗಮಿಸಿದರು, ಬಂದವರೇ , ಆತುರ ಆತುರವಾಗಿ ರಾಷ್ಟ್ರ ದ್ವಜಆರೋಹಣ ಮಾಡಿದರು, ನಂತರ ರಾಷ್ಟ್ರ ಗೀತೆ ಹಾಡಲು ಶಾಲಾ ಶಿಕ್ಷಕರಿಗಾಗಲೀ , ಅತಿಥಿ ಗಳಿಗಾಗಲಿ , ಸರಿಯಾದ ಕ್ರಮವೇ ಗೊತ್ತಿರಲಿಲ್ಲ ಎದೆ ಯುಬ್ಬಿಸಿ , ಹೆಮ್ಮೆಯಿಂದ ಜೋರಾಗಿ ಹಾಡಬೇಕಾದ ರಾಷ್ಟ್ರ ಗೀತೆ ಯನ್ನು ಅತೀ ಸಣ್ಣ ಶಬ್ಧದಲ್ಲಿ ಹಾಡಿ ಮುಗಿಸಿದರು, ಹಾಡುವಾಗ ರಾಷ್ಟ್ರ ಗೀತೆಯ ಪದಗಳ ತಪ್ಪು ಉಚ್ಚಾರಣೆ ಕೂಡ ನಡೆದಿತ್ತು, ಗಣ್ಯರ ಗಣರಾಜ್ಯೋತ್ಸವ ಸಂದೇಶ ದೇವರಿಗೆ ಪ್ರೀತಿ, ಸಂದೇಶದಲ್ಲಿ ದೇಶದ ಗಣರಾಜ್ಯೋತ್ಸವದ ಬಗ್ಗೆ ಏನೂ ಇರಲಿಲ್ಲ. ಇನ್ನು ಮಕ್ಕಳು ಮೊದಲೇ ಬಿಸಿಲಿನಲ್ಲಿ ಬಳಲಿ ರಾಷ್ಟ್ರ ಗೀತೆ ಹಾಡಿ ಶಾಲೆಯವರು ನೀಡಿದ ಚಾಕ್ಲೆಟ್ ತಿಂದು ಮನೆಗೆ ತೆರಳಿದವು.
ದೃಶ್ಯ ೨} ಮತ್ತೊಂದು ಕಚೇರಿ ಯಲ್ಲಿ ಸಿಬ್ಬಂದಿ ಹಾಗು ಅಧಿಕಾರಿಗಳು ಗಣರಾಜ್ಯೋತ್ಸವ ಆಚರಣೆ ಮಾಡಲು ಸೇರಿದ್ದರು, ಕಾರ್ಯಕ್ರಮ ಶುರುವಾಯಿತು, ರಾಷ್ಟ್ರ ದ್ವಜ ಆರೋಹಣ ಮಾಡುವಾಗ ದ್ವಜ ಹಾರಲೇ ಇಲ್ಲ, ಹಾರಿಸುವಾಗ ದಾರ ಎಳೆದರೆ ದ್ವಜ ಸಿಕ್ಕಿಕೊಂಡು ಪರದಾಡ ಬೇಕಾಯಿತು, ಇನ್ನು ರಾಷ್ಟ್ರ ಗೀತೆ ಹಾಡುವಾಗ ಯಾರ ದ್ವನಿಯೂ ಜೋರಾಗಿ ಹೊರಡಲಿಲ್ಲ, ಬೇರೆ ದಿನಗಳಲ್ಲಿ ಜೋರಾಗಿ ದ್ವನಿ ಎತ್ತುವ ಜನ ರಾಷ್ಟ್ರ ಗೀತೆ ಹಾಡಲು ದ್ವನಿ ಹೊರಡಿಸಲೇ ಇಲ್ಲ. ಜೊತೆಗೆ ಹಾಡಿದ್ದು ತಪ್ಪು ತಪ್ಪು, ಪದಗಳ ರಾಷ್ಟ್ರ ಗೀತೆ, ಇನ್ನು ಗಣ್ಯರು ಸಂದೇಶ ನೀಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ತರಾತುರಿಯಲ್ಲಿ ಹೊರಟೆ ಬಿಟ್ಟರು, ಉಳಿದವರು ಹೋಟೆಲ್ ನಿಂದ ತರಿಸಿದ್ದ ಉಪಹಾರ ಸೇವಿಸಿ ಹೊರಟರು.
ದೃಶ್ಯ ೩} ಮತ್ತೊಂದು ಸಂಸ್ಥೆ ಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆದಿತ್ತು, ಎಲ್ಲರೂ ಕೋಟು, ಧರಿಸಿ, ಟೈ ಕಟ್ಟಿ ಕೊಂಡು ಟಾಕೂ ಟೀಕಾಗಿ ಬಂದಿದ್ದರು, ಕಾರ್ಯಕ್ರಮ ಶುರು ಆಯಿತು, ಗಣ್ಯರಾಗಿ ಆ ಸಂಸ್ಥೆಯ ಹಿರಿಯರು ಬಂದಿದ್ದರು, ರಾಷ್ಟ್ರ ದ್ವಜ ವನ್ನು ಕಟ್ಟಲು, ನಿವೃತ್ತ ಶಿಕ್ಷಕರನ್ನು ಕರೆದುಕೊಂಡು ಬಂದಿದ್ದರು, ಗಣ್ಯರು ರಾಷ್ಟ್ರ ದ್ವಜ ಹಾರಿಸಿದರು, ಆದರೆ ರಾಷ್ಟ್ರ ದ್ವಜ ಉಲ್ಟಾ ಕಟ್ಟಲಾಗಿತ್ತು, ಅದನ್ನು ತಕ್ಷಣವೇ ಕೆಳಗಿಳಿಸಿ ಮತ್ತೊಮ್ಮೆ ಸರಿಪಡಿಸಿ ರಾಷ್ಟ್ರ ದ್ವಜ ಹಾರಿಸಲಾಯಿತು, ಇನ್ನು ರಾಷ್ಟ್ರ ಗೀತೆ ಹಾಡಲು ಪಾಪ ಇವರಿಗೂ ಧ್ವನಿಯೇ ಹೊರಡಲಿಲ್ಲ. ನಂತರ ಭಾಷಣ ಮಾಡಲು ತಾ ಮುಂದು ತಾ ಮುಂದು ಎಂಬಂತೆ ಬಂದ. ಯಾರ ಭಾಷಣದಲ್ಲೂ ಗಣರಾಜ್ಯೋತ್ಸವದ ಬಗ್ಗೆ ಮಾತಿಲ್ಲ. ತಮ್ಮ ಸಂಸ್ಥೆಯ ಸಾಧನೆ ಬಗ್ಗೆ ಮಾತೂ ಮಾತೂ ಮಾತು.
ಇದು ಈ ಭಾರಿ ನಾನು ನೋಡಿದ ಗಣರಾಜ್ಯೋತ್ಸವ ಸಂಭ್ರಮ , ಇದನ್ನು ನೋಡಿ ರಾಷ್ಟ್ರೀಯ ಹಬ್ಬಗಳು ನಮ್ಮೆಲ್ಲರ ಮನಸ್ಸಿನಿಂದ ಮರೆಯಾಗುತ್ತಿರುವುದೇನೋ ಎಂದು ಅನ್ನಿಸಿ ನೋವಾಯಿತು.ಯಾಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಿರಾಶೆಯಾಗಿದೆ. ಅದ್ಸರಿ ನಾವ್ಯಾಕೆ ಹೀಗೆ?? ದೇಶದ ಬಗ್ಗೆ ಉದ್ದ ಉದ್ದ ಭಾಷಣ ಬಿಗಿಯುವ ನಾವು, ಕನಿಷ್ಠ ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ಯಾಕೆ. ಇದನ್ನೂ ವಿದೇಶಿಯರಿಂದ ಹೇಳಿಸಿ ಕೊಳ್ಳಬೇಕೆ ??? ಅಥವಾ ನನಗೆ ದೇಶದ ಬಗ್ಗೆ ಏನೂ ಗೊತ್ತಿಲ್ಲಾ ಎಂಬುದೇ ನಮ್ಮ ಹೆಗ್ಗಳಿಕೆಯೇ ?? ಉತ್ತರ ಸಿಗುತ್ತಿಲ್ಲ
ದೆಹಲಿಯ ಕೆಂಪು ಕೋಟೆ |
ಒಮ್ಮೆ ಹೀಗಾಯ್ತು ಬಹಳ ವರ್ಷಗಳ ಹಿಂದೆ ಶ್ರೀ ರಂಗ ಪಟ್ಟಣದಲ್ಲಿ ಒಂದು ಸರ್ಕಾರಿ ಕಚೇರಿಯ ಮುಂದೆ ರಾಷ್ಟ್ರೀಯ ಹಬ್ಬದ ಆಚರಣೆ ನಡೆಯುತ್ತಿತ್ತು, ಇದನ್ನು ನೋಡಿದ ಇಬ್ಬರು ವಿದೇಶಿಯರು ಆ ಕಚೇರಿಯ ಆವರಣದೊಳಗೆ ಬಂದು ತಾವೂ ಸಹ ನಮ್ಮ ರಾಷ್ಟ್ರ ದ್ವಜಕ್ಕೆ ವಂದಿಸಿ , ರಾಷ್ಟ್ರ ಗೀತೆ ಹಾಡುವಾಗ ಮುಗಿಯುವವರೆಗೆ ಅಲ್ಲಾಡದೆ ಗೌರವದಿಂದ ನಿಂತು ವಂದಿಸಿದರು. ನನಗೂ ಕುತೂಹಲ ತಡೆಯದೆ ಅವರನ್ನು ಕೇಳಿದೆ "ಇದು ನಿಮ್ಮ ರಾಷ್ಟ್ರದ ಹಬ್ಬ ಅಲ್ಲಾ ಅದರೂ ನೀವು ನಮ್ಮೊಡನೆ ಬಂದು ಪಾಲ್ಗೊಂಡಿರಿ ಯಾಕೆ ??" ಅಂದೇ ಅದಕ್ಕೆ ಅವರು ಹೇಳಿದ್ದು ಹೀಗೆ "ನಾವು ಬಹಳಷ್ಟು ದೇಶಗಳಿಗೆ ಪ್ರವಾಸ ಹೋಗುತ್ತೇವೆ ಹೀಗೆ ಹೋದಾಗ ಆ ದೇಶದ ಭಾವನೆಗಳಿಗೆ ಅಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸ ಬೇಕಾದದ್ದು ನಮ್ಮ ಕರ್ತವ್ಯ, ಇಲ್ಲಿಯೂ ಸಹ ನಿಮ್ಮ ದೇಶದ ಅತಿಥಿಗಳು ನಾವು, ನಿಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವುದು, ನಿಮ್ಮ ರಾಷ್ಟ್ರ ದ್ವಜಕ್ಕೆ, ರಾಷ್ಟ್ರ ಗೀತೆಗೆ ಗೌರವ ನೀಡುವುದು ನಮ್ಮ ಕರ್ತವ್ಯ" ಹಾಗು ನಮ್ಮ ದೇಶದಲ್ಲಿ ಇದನ್ನು ಖಡ್ಡಾಯವಾಗಿ ಪ್ರತೀ ಪ್ರಜೆಗೂ ತಿಳಿ ಹೇಳಲಾಗುತ್ತದೆ.ಎಂದರು. ನನಗೆ ಒಮ್ಮೆಲೇ ತಲೆ ತಿರುಗಿತು.
ಹೌದಲ್ವಾ ನಮಗೆ ಇದನ್ನು ಯಾರು ಹೇಳಿ ಕೊಡಲಿಲ್ಲ. ಯಾವ ಶಾಲೆಯಲ್ಲೂ ಸಹ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುತ್ತಿಲ್ಲ. ಬರಿ ಪರೀಕ್ಷೆ ಬರೆಯಲು ಇರುವ ಪಾಠವಾಗಿ ಸಂವಿಧಾನದ ವಿಚಾರಗಳು ಇವೆ. ಇನ್ನು ನಮ್ಮ ಹಿರಿಯರು ಮಕ್ಕಳಿಗೆ ದೇಶದ ಬಗ್ಗೆ ಇಂತಹ ವಿಚಾರ ತಿಳಿಸುವುದಿಲ್ಲ, ಇವನ್ನು ಪಾಲನೆ ಮಾಡದೆ ಇದ್ದರೂ ಯಾವುದೇ ಶಿಕ್ಷೆ ಇಲ್ಲ. , ಇವೆಲ್ಲದರ ನಡುವೆ ನಾವು ಭಾರತೀಯರೆಂಬ ಬಗ್ಗೆ ನಮ್ಮ ಜಂಭದ ಮಾತುಗಳು ಲೆಕ್ಕವಿಲ್ಲ ,
ನಮ್ಮ ಬಾವುಟದ ಹಿರಿಮೆ ಇಲ್ಲಿದೆ |
ನಿಜಾ ಹೇಳಿ ೧} ರಾಷ್ಟ್ರ ಗೀತೆಗೆ ಗೌರವ ನೀಡದ ನಾವು, ರಾಷ್ಟ್ರ ಗೀತೆ ಹಾಡಲು ನಾಚಿಕೆ ಪಡುವ ನಾವು, ಯಾವ ರಾಷ್ಟ್ರಕ್ಕೆ ಸೇರಿದವರು ??
೨} ರಾಷ್ಟ್ರ ದ್ವಜ ಹಾರಿಸಲು ತಿಳಿಯದ , ರಾಷ್ಟ್ರ ದ್ವಜ ದ ಬಗ್ಗೆ ಅರಿಯಲು ಇಷ್ಟ ಪಡದ ನಾವು ಯಾವ ದೇಶದವರು ??
೩} ರಾಷ್ಟ್ರ ಲಾಂಛನದ ಬಗ್ಗೆ ಅರಿಯದೆ , ಅದರ ಮಹತ್ವ ತಿಳಿಯದ ನಾವು ಯಾರು ??
ಮುಂದೊಮ್ಮೆ ರಾಷ್ಟ್ರ ದ್ವಜ ಕಟ್ಟಲು, ರಾಷ್ಟ್ರ ಗೀತೆ ಹಾಡುವುದನ್ನು ಹೇಳಿ ಕೊಡಲು ವಿದೇಶಿಯರನ್ನು ಕರೆಸ ಬೇಕಾಗ ಬಹುದು ಒಮ್ಮೊಮ್ಮೆ ಅನ್ನಿಸುತ್ತದೆ. ಇವೆಲ್ಲಾ ದಿನ ನಿತ್ಯ ನೋಡುತ್ತಿದ್ದರು ತಿದ್ದಿಕೊಳ್ಳದ ನಾವು ನಿಜವಾಗಿಯೂ ಈ ದೇಶದ ಹೆಮ್ಮೆಯ ಭಾರತೀಯರೇ ನೀವೇ ಹೇಳಿ.ಅಂದ ಹಾಗೆ ನಿಮಗೆ ರಾಷ್ಟ್ರ ದ್ವಜ ಕಟ್ಟಲು, ರಾಷ್ಟ್ರ ಗೀತೆ ಹಾಡಲು ಬರುತ್ತದೆಯೇ ?? ಬರದಿದ್ದರೆ ಮುಂದಿನ ರಾಷ್ಟ್ರೀಯ ಹಬ್ಬದ ವೇಳೆಗೆ ದಯವಿಟ್ಟು ಕಲಿತು , ಈ ದೇಶದ ಹೆಮ್ಮೆಯ ಭಾರತೀಯರಾಗಿ. ಏನಂತೀರ??
4 comments:
ಬಾಲು ಸಾರ್ ಸಮಯಕ್ಕೊಂದು ಸೂಕ್ತ ಲೇಖನ.
ತಪ್ಪಿಲ್ಲದೆ ಅವನಿಷ್ಟದ ಸುದೀಪ್ ಚಿತ್ರಗಳ ಅಷ್ಟೂ ಹಾಡುಗಳನ್ನ ಹಾಡೋ ನನ್ ಫ್ರೆಂಡ್ ಒಬ್ಬನಿಗೆ ನಮ್ಮ ನಾಡಗೀತೆ ಪೂರ್ತಿ ಬರೋದಿಲ್ಲ. ರಾಷ್ಟ್ರಗೀತೆಯೋ..?? ಅದನ್ನ ಅವನು ಹಾಡದೆ ಇರೋದೇ ಒಳ್ಳೆಯದು ಅನ್ನೋಷ್ಟು ತಪ್ಪುಗಳ ಉಚ್ಚಾರಣೆ ಇರತ್ತೆ.
ಇನ್ನು ರಾಷ್ಟ್ರಗೀತೆ.. ನಾವು ಕೂಡ ನಮ್ಮ ಶಾಲೆಗಳಲ್ಲಿ ಹಾಡಿದ್ದೆ ಕೊನೆ. ಅದರ ನಂತರ ಮುಕ್ತವಾಗಿ ಹಾಡಿದ್ದೆ ಇಲ್ಲ. ನಮ್ಮ ರಾಷ್ಟ್ರಗೀತೆ ಹಾಡಿ ಕೊಳ್ಳೋಕೂ ಇಂಥ ಕೆಲವು ಆಚರಣೆಗಳ ಅಗತ್ಯವಿರೋದು ನಮ್ಮ ಪಾಲಿನ ದುರ್ದೈವವೇ ಸರಿ.
ಸ್ವಾತಂತ್ರ್ಯ ಸಿಕ್ಕು ಅರವತ್ತಾರು ವರ್ಷ ಆಗ್ತಾ ಬಂದರೂ ಇನ್ನೂ ನಮ್ಮ ಬಾವುಟಗಳನ್ನ ನೆಟ್ಟಗೆ ಕಟ್ಟಲು ಬಾರದ.. ಹಾರಿಸಲು ಬಾರದ ಸಾಧಕರೊಡನೆ ಇಂದು ಭಾರತ ಪ್ರಗತಿಯತ್ತ ನಡೆಯುತ್ತಿರೋದು ಪವಾಡವೇ ಸರಿ.
unesco ಇಂದ ಅತ್ತ್ಯುತ್ತಮ ರಾಷ್ಟ್ರಗೀತೆ ಅಂತ ಕರೆಸಿಕೊಂಡ ನಮ್ಮ ರಾಷ್ಟ್ರಗೀತೆಗೆ ನಮ್ಮ ದೇಶದಲ್ಲಿ ನಾವು ಕೊಡುವ ಮರ್ಯಾದೆಗಿಂತ ವಿದೇಶಿಗಳು ಕೊಡುವ ಮರ್ಯಾದೆಯ ತೂಕವೇ ಸ್ವಲ್ಪ ಜಾಸ್ತಿ ಇರ್ತದೆ ಅಂದ್ರೆ ತಪ್ಪಿಲ್ಲ ಬಿಡಿ.
ಲೇಖನ ಇಷ್ಟ ಆಯಿತು. ನನ್ನಲ್ಲೂ ಕೆಲ ತಪ್ಪುಗಳಿವೆ ತಿದ್ದಿಕೊಳ್ಳಲು ಪೂರಕವಾಯ್ತು. ಧನ್ಯವಾದಗಳು.
ರಾಷ್ಟ್ರ ಗೀತೆ ಹಾಡಿ .. ರಾಷ್ಟ್ರ ದ್ವಜ ಕಟ್ಟಿ.. ರಾಷ್ಟ್ರ ದ್ವಜ ಹಾರಿಸಬೇಕು ... ಎಲ್ಲಕ್ಕಿಂತ ಮುಖ್ಯವಾಗಿ ಗೌರವ ಬೆಳಿಸಿ ಕೊಳ್ಳ ಬೇಕು .. ಅನು ದಿನವು....
ಒಳ್ಳೆಯ ಸಂದೇಶ ಕೊಟ್ಟಿರುವಿರಿ
idu indina samaajkke hidida kannadi agide
ಒಯೆ ಗುರು...ವೀಕೆಂಡ್ ಏನು ಪ್ರೊಗ್ರಾಮ್?..
ಏನಿಲ್ಲ ಗುರು!...
"ಜನವರಿ 26 ಶನಿವಾರ ಬಂದು ಒಂದು ರಜೆ ಹಾಳಾಗಿ ಹೋಯ್ತು...ಇಲ್ಲ ಅಂದಿದ್ರೆ..ತಣ್ಣಗೆ ಬಾಟಲ್ ತಗೊಂಡು ಎಲ್ಲಾದರೂ ಹೋಗಬಹುದಿತ್ತು...ಇಲ್ಲವೇ ಎಲ್ಲಾದರೂ ಕೂರಬಹುದಿತ್ತು"
ಇದು ಸಾಮಾನ್ಯವಾಗಿ ನಡೆಯುವ ಸಂಭಾಷಣೆ...
ಲೇಖನ ಸಾಂಧರ್ಭಿಕವಾಗಿದೆ....ಇತ್ತೀಚಿಗೆ ಸುಮಾರು ಎಲ್ಲ ಶಾಲಾ ಕಾಲೇಜುಗಳು ರಾಷ್ಟ್ರೀಯ ಹಬ್ಬಗಳಲ್ಲಿ ರಜೆ ಕೊಟ್ಟು ಬಿಡುತ್ತಾರೆ.ಮಕ್ಕಳಿಗೆ ಸಿಗುವ ರಾಷ್ಟ್ರೀಯ ಲಾಂಛನಗಳ ಬಗ್ಗೆ ಪಾಠ ಬರಿ ಪುಸ್ತಕದ ಬದನೇಕಾಯಿ ಆಗಿ ಬಿಡುತ್ತೆ..ಇನ್ನು ಮಾಧ್ಯಮಗಳು ಬರಿ ವೈಭವಿಕರಣದಲ್ಲೇ ಕಾಲ ಕಳೆಯುತ್ತವೆ...ಅದನ್ನು ಬೆಳೆಸುವ ಜವಾಬ್ಧಾರಿ ನನ್ನದು ಎನ್ನುವ ಭಾವ ಎಲ್ಲರಲ್ಲೂ ಬಂದಾಗ ಮಾತ್ರ ಇಂತಹ ಕಾಟಾಚಾರದ ಸಮಾರಂಭಗಳಿಗೆ ಕೊನೆ!
Post a Comment