ನಮಗೆ ಉಗಿದು ಕಾನನದತ್ತ ತೆರಳಿದ ಅಮ್ಮ ಮಗು |
ಕಣ್ಣಾಮುಚ್ಚಾಲೆ ಆಟ ನೋಡುತ್ತಿದ್ದ ತಾಯಿ ಆನೆ "ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ ಮರಿಯಾನೆ ಜೊತೆ ಕಾಡಿನೊಳಗೆ ತೆರಳಿತು. .ಆನೆಯಿಂದ ಉಗಿಸಿಕೊಂಡ ನಾವು ಮುಂದೆ ಹೊರಟೆವು, ಕಾಡಿನಲ್ಲಿ ನಮ್ಮ ಕಣ್ಣುಗಳು ವನ್ಯ ಜೀವಿಗಳ ಹುಡುಕಾಟ ನಡೆಸಿದ್ದವು, ಆದರೆ ಯಾವುದೇ ಕಾಡಿನಲ್ಲಿ ವನ್ಯಜೀವಿಗಳು ಮನುಷ್ಯರನ್ನು ಸ್ವಾಗತಿಸಲು ಹಲ್ಲು ಕಿರಿಯುತ್ತಾ ನಿಂತಿರುವುದಿಲ್ಲ , ನಮ್ಮ ಅದೃಷ್ಟದ ಮೇಲೆ ಅವು ಕಾಣಲು ಸಿಗುತ್ತವೆ.ಅದೃಷ್ಟವಿಲ್ಲದಿದ್ದರೆ , ನೀವು ದಿನಗಟ್ಟಲೆ ಕಾಡಿನಲ್ಲಿ ಅಲೆದರೂ ಏನೂ ಸಿಗದೇ ನಿರಾಸೆ ಆಗುವ ಸಂಭವ ಇರುತ್ತದೆ. ನಮಗೆ ಸ್ವಲ್ಪ ಅಲ್ಲಲ್ಲಾ ಜಾಸ್ತಿ ಅದೃಷ್ಟ ಇತ್ತು ಬಹಳಷ್ಟು ಕಡೆ ನಮಗೆ ವನ್ಯ ಜೀವಿಗಳ ನಿರಂತರ ನೋಟ ಸಿಗುತ್ತಿತ್ತು.
ಕಾಡೆಮ್ಮೆಗಳ [ಕಾಟಿ ಗಳ ]ಬಳಗ |
ಕಾಡಿನಲ್ಲಿ ನಮ್ಮ ಪಯಣ ಸಾಗಿತ್ತು, ಕೆಲವೆಡೆ ಸಾರಂಗ, ಜಿಂಕೆ , ನವಿಲು ಮುಂತಾದ ಜೀವಿಗಳ ದರ್ಶನ ಆಯಿತು, ಆದರೆ ಮನದಲ್ಲಿನ ಬಯಕೆ ಬೇರೆಯೇ ಇತ್ತು, ಹೌದು ಬಹಷ್ಟು ಸಾರಿ ಇಲ್ಲಿ ಬಂದಿದ್ದರು ಮೊದಲ ಸಲ ಮಾತ್ರ ನಮಗೆ ಹುಲಿ ಸಿಕ್ಕಿತ್ತು, ಆ ನಂತರ ನಮಗೆ ಅದರ ದರ್ಶನ ಸಿಕ್ಕಿರಲಿಲ್ಲ. ಆದರೆ ಈ ಸಾರಿಯಾದರೂ ದರ್ಶನ ಸಿಗಲಿ ಎಂಬ ಆಸೆಯಿತ್ತು. ನಮ್ಮ ಜೊತೆಯಲ್ಲಿದ್ದವರು ವಾಹನ ಚಾಲಕ ರಾಜು ಅವರನ್ನು ಟೈಗರ್ ಟ್ಯಾಂಕ್ ಹತ್ತಿರ ವಾಹನ ಕೊಂಡೊಯ್ಯಲು ಕೋರಿದರು. ಅದರಂತೆ ಅಲ್ಲಿಗೆ ನಮ್ಮ ವಾಹನ ತೆರಳಿತು. ಅಲ್ಲಿ ಹೋದಾಗ ನಮಗೆ ಕಂಡಿದ್ದು ಒಂದು ಹಿಂಡು ಕಾಡೆಮ್ಮೆಗಳ ಬಳಗ ಇವುಗಳನ್ನು ಕಾಟಿ ಅಂತಾನೂ ಕರೆಯಲಾಗುತ್ತದೆ. ಹುಲಿ ಕೆರೆಯ[ ಟೈಗರ್ ಟ್ಯಾಂಕ್ ] ಸಮೀಪದಲ್ಲಿ ಬೀಡು ಬಿಟ್ಟಿದ್ದವು.ಕ್ಯಾಮರ ಜೂಮ್ ಮಾಡಿನೋಡಿದಾಗ ಪಕ್ಕದಲ್ಲಿ ಒಂಟಿ ಕಾಟಿ ಎತ್ತಲೋ ನೋಡುತ್ತಾ ಕಾವಲು ಕಾಯುತ್ತಿತ್ತು.
ಗುಂಪನ್ನು ಕಾಯುತ್ತಿರುವ ಸೈನಿಕ |
ನಿಶ್ಯಬ್ದದ ಕಾಡು, ಬಿಸಿಲ ತಾಪ ಕಡಿಮೆಯಾಗಿ ಸಂಜೆಯ ತಣ್ಣನೆ ಗಾಳಿ, ಬೀಸುತ್ತಿತ್ತು, ಸನಿಹದಲ್ಲಿ ಕಾಟಿ ಗುಂಪಿನಲ್ಲಿ ಚಟುವಟಿಕೆ ಗರಿಕೆದರಿತ್ತು. ಸನಿಹದ ಮರದ ನೆರಳಲ್ಲಿ ತಾಯಿ ಮಗುವಿನ ಅಕ್ಕರೆಯ ಪ್ರೀತಿಯ ವಿನಿಮಯ ನಡೆದರೆ, ಮತ್ತೊಂದೆಡೆ ಎರಡು ಜೀವಿಗಳು ಮಿಲನ ಮಹೋತ್ಸವಕ್ಕೆ ಅಣಿಯಾಗುತ್ತಿದ್ದವು . ಆದರೆ ........................ಅಷ್ಟರಲ್ಲಿ ತೋರಿ ಬಂತು .................. ಆ ದ್ವನಿ. ಎಲ್ಲೆಡೆ ಸ್ಥಬ್ಧ ,............. ನಿಶ್ಯಬ್ಧ .
ಅಮ್ಮನ ಅಕ್ಕರೆ ಬಲು ಚಂದ |
ಮಿಲನ ಮಹೋತ್ಸವಕ್ಕೆ ರೆಡಿ |
ಹೌದು ಆ ದ್ವನಿಯೇ ಹಾಗೆ ಯಾವುದೇ ಚಟುವಟಿಕೆಯನ್ನು ಕಾಡಿನಲ್ಲಿ ಸ್ಥಬ್ಧ ಗೊಳಿಸುವ ತಾಕತ್ತು ಅದಕ್ಕಿದೆ. ಮತ್ತೊಮ್ಮೆ ಅದೇ ದ್ವನಿ ವ್ರೂಂ............... ವ್ರೂಂ , ನನ್ನ ಪಕ್ಕದಲ್ಲಿದ್ದ ರಾಜು"ಸಾ ಟೈಗರ್ ಕಾಲ್ ಆಯ್ತಾ ಅದೇ , ಇಲ್ಲೇ ಇರುಮಾ ಗ್ಯಾರಂಟೀ ಹುಲಿ ಇಲ್ಲೇ ಎಲ್ಲೋ ಅದೇ ಸೈಟ್ ಆಯ್ತುದೆ" ಅಂದಾ, ಅಲ್ಲಿನ ಪ್ರದೇಶದಲ್ಲಿ ವಿಚಿತ್ರ ಬದಲಾವಣೆ ಮೇಯುತ್ತಿದ್ದ ಕಾಟಿಗಳ ಗುಂಪಿನಲ್ಲಿ ಎಲ್ಲಾ ಕಾಟಿಗಳು ಎಚ್ಚರಗೊಂಡವು ತಮ್ಮ ಕ್ರಿಯೆಗಳನ್ನೆಲ್ಲ ನಿಲ್ಲಿಸಿ, ಶಬ್ದ ಬಂದ ದಿಕ್ಕಿಗೆ ಗಮನ ಹರಿಸಿದವು . ಹುಲಿರಾಯ ಅಲ್ಲಿರುವ ಸೂಚನೆ ದೊರಕಿತ್ತು, ಹುಲಿಯ ಗರ್ಜನೆಗೆ ಕೆರೆಯ ಸಮೀಪ ಕುಳಿತಿದ್ದ ಹಕ್ಕಿಗಳು ಪುರ್ ಪುರ್ ಅಂತಾ ಹಾರಿ ಹೋದವು, , ಆದರೆ ಪುಣ್ಯಕ್ಕೆ "ಕಾಡು ಕೋಳಿ" ಹಾಗು "ಲಾಂಗೂರ್ ಕೋತಿಗಳು" ಇರಲಿಲ್ಲ ಅವುಗಳೇನಾದರೂ ಇದ್ದಿದ್ದರೆ ಬಹಳ ಗಲಾಟೆ ಎಬ್ಬಿಸಿ ಇಡೀ ಕಾಡಿನಲ್ಲಿ ಮತ್ತಷ್ಟು ಗಲಬೆ ಆಗುತ್ತಿತ್ತು. ಕಾಡೆಮ್ಮೆಗಳು ಮತ್ತಷ್ಟು ಜಾಗರೂಕತೆ ಯಿಂದ ನಿಂತಿದ್ದವು ಹುಲಿರಾಯನ ಚಲನವಲನ ಅರಿಯಲು.
ಎಲ್ಲಿಹನು ಹುಲಿರಾಯ |
ಸುಮಾರು ಹೊತ್ತು ನಿಂತರೂ ಪ್ರಯೋಜನ ಆಗಲಿಲ್ಲ, ನಮ್ಮ ಜೊತೆಯಲ್ಲಿದ್ದವರು ಸಲಹೆ ನೀಡಿದರು, ರಾಜು ಮೊದಲು ಇಲ್ಲಿಂದ ಜಾಗ ಖಾಲಿಮಾಡಿ ಕಬಿನಿ ಹಿನ್ನೀರಿಗೆ ಹೋಗೋಣ ಆಮೇಲೆ ಇಲ್ಲ್ಗೆ ಮತ್ತೆ ಬರೋಣ ನಡೀರಿ ಅಂತಾ ಬಲವಂತ ಮಾಡಿ ಹೊರಡಿಸಿದರು ಕೊಪಬಂದರೂ ತೋರಿಸಿಕೊಳ್ಳದೆ ಚಾಲಕ ರಾಜು ಯಾಂತ್ರಿಕವಾಗಿ ವಾಹನವನ್ನು ಕಬಿನಿ ಹಿನ್ನೀರಿಗೆ ತೆಗೆದುಕೊಂಡು ಹೋದರು. ಅಲ್ಲಿ ಮತ್ತಷ್ಟು ನೋಟ ಸಿಕ್ಕಿತು, ಹೌದು ನಾವು ಮೊದಲು ಇಲ್ಲಿಗೆ ಬಂದು ಬೋಟಿನಲ್ಲಿ ತೇಲಾಡುತ್ತಿದ್ದ ಪ್ರದೇಶದಲ್ಲಿ ನೀರು ಒಣಗಿ ಬರಡಾಗಿತ್ತು. ವಿಶಾಲವಾದ ಕಬಿನಿ ನದಿ ಇಂದು ನೀರಿಲ್ಲದೆ ಒಣಗಿ ವೈಜ್ಞಾನಿಕ ಜಗತ್ತಿನ ಅಟ್ಟಹಾಸಕ್ಕೆ ಬಲಿಯಾಗಿ ಅವಮಾನದಿಂದ ತತ್ತರಿಸಿತ್ತು.ಜೀವ ಜಲ ಇಲ್ಲದೆ ವನ್ಯ ಜೀವಿಗಳು ಸಂಕಟದಿಂದ ನರಳುತ್ತಿರುವ ದೃಶ್ಯ ಕಾಣಸಿಕ್ಕಿತು. ನೀರಿಗಾಗಿ ಮಾನವರ ಹೊಡೆದಾಟದಿಂದ ಏನೂ ಅರಿಯದ ಈ ವನ್ಯಜೀವಿಗಳಿಗೆ ಜೀವ ಜಲ ಇಲ್ಲದಂತಾಗಿದೆ.
ಮಾನವರ ಅವೈಜ್ಞಾನಿಕ ಸಿದ್ದಾಂತಕ್ಕೆ ಬಲಿಯಾಗುತ್ತಿರುವ ಪರಿಸರದ ನೋಟ. |
ಒಣಗಿದ ಕಬಿನಿಯ ಅಂಗಳದಲ್ಲಿ ಕೆಲವು ಆನೆಗಳು, ಹಾಗು ಕಾಡೆಮ್ಮೆಗಳ ಗುಂಪು ಒಟ್ಟಿಗೆ ಕಾಣಲು ಸಿಕ್ಕಿತು, ಆಹಾರವಿಲ್ಲದೆ, ನೀರಿಲ್ಲದೆ ಅಲ್ಲಿನ ಜೀವಿಗಳು ಸೊರಗಿದ್ದವು, ಆನೆಗಳ ಹಾಗು ಕಾಡೆಮ್ಮೆಗಳ ಮೂಳೆಗಳನ್ನು ಎಣಿಕೆ ಮಾಡಬಹುದಾಗಿತ್ತು. ವನ್ಯ ಜೀವಿಗಳ ದರ್ಶನ ಮುಗಿಸಿ ಮತ್ತೊಮ್ಮೆ ಟೈಗರ್ ಟ್ಯಾಂಕ್ ಬಳಿ ಬಂದೆವು, ಸುಮಾರು ಮುಕ್ಕಾಲು ಘಂಟೆ ಕಳೆದು ಮತ್ತೆ ಅಲ್ಲಿಗೆ ಬಂದಿದ್ದ ನಮಗೆ ಅಲ್ಲಿನ ಪರಿಸರ ಸಂಪೂರ್ಣ ಬದಲಾಗಿತ್ತು, ಮೊದಲಿದ್ದ ಕಾಡೆಮ್ಮೆಗಳ ಗುಂಪು ಮಾಯವಾಗಿತ್ತು, ಅಲ್ಲಿದ್ದ ಕೆರೆಯಲ್ಲಿ ಹುಲಿರಾಯ ನೀರಿನಲ್ಲಿ ವಿಶ್ರಮಿಸುತ್ತಾ ವಿಹರಿಸಿದ್ದ.
ನನ್ನ ಮಗ ಕ್ಲಿಕ್ಕಿಸಿದ ಚಿತ್ರ |
ನಾನು ಕ್ಲಿಕ್ಕಿಸಿದ ಚಿತ್ರ. |
ಹುಲಿಯ ದರ್ಶನ ಮಾಡಿದ ಮನಸು ಆನಂದದಿಂದ ಕುಣಿಯಿತು, ಅತ್ತ ನನ್ನ ಮಗ ಗೌತಂ ಸದ್ದಿಲ್ಲದೇ ಹುಲಿಯ ಚಿತ್ರ ತೆಗೆಯುತ್ತಿದ್ದ, ಹುಲಿಯ ದರ್ಶನ ಮಾಡಿದ ಖುಷಿಯಲ್ಲಿ ನನ್ನ ಕ್ಯಾಮರದಿಂದ ಫೋಟೋ ತೆಗೆಯೋದನ್ನು ಮರೆತು ಹಾಗೆ ಹುಲಿರಾಯನನ್ನು ಕಣ್ತುಂಬಾ ನೋಡುತ್ತಾ ಮೈಮರೆತಿದ್ದೆ , ನಂತರ ವಾಸ್ತವತೆಗೆ ಬಂದು ಕ್ಯಾಮರ ಕ್ಲಿಕ್ಕಿಸಿದಾಗ ನನಗೆ ಅಗತ್ಯವಾದ ಬೆಳಕು ಸಿಗಲಿಲ್ಲ ಸುಮಾರಾದ ಚಿತ್ರ ಕ್ಯಾಮರಾದಲ್ಲಿ ಮೂಡಿಬಂತು. ಅಷ್ಟರಲ್ಲಿ ಕಾಡಿನಲ್ಲಿನ ಮರಗಳ ಸಂದಿಯಿಂದ ಸೂರ್ಯನ ಕಿರಣ ಮಂಕಾಗತೊಡಗಿತು, ಹುಲಿರಾಯ ನಮ್ಮ ಇರುವನ್ನು ಲೆಕ್ಕಿಸದೆ ಆರಾಮವಾಗಿ ತನ್ನ ಲೋಕದಲ್ಲಿ ಮುಳುಗಿದ್ದ. ಹೆಚ್ಚು ಹೊತ್ತು ನಿಲ್ಲದೆ ಸುಮಾರು ಹದಿನೈದು ನಿಮಿಷಗಳ ದರ್ಶನ ಮುಗಿಸಿ ವಾಪಸ್ಸು ಹೊರಟೆವು, ನನ್ನ ಮಗ ಪ್ರಥಮ ಭೇಟಿಯಲ್ಲೇ ಹುಲಿ ನೋಡಿದ ಖುಷಿಯಲ್ಲಿದ್ದ, ನಾನು ಹುಲಿಯ ಚಿತ್ರ ಸರಿಯಾಗಿ ತೆಗೆಯಲಿಲ್ಲ ಎನ್ನುವ ನಿರಾಸೆಯಲ್ಲಿದ್ದೆ, ನಮ್ಮೊಡನಿದ್ದ ಕೆಲವರು ಹೆದರಿಕೆಯಿಂದ ಮೌನವಾಗಿದ್ದರು, ಇವನ್ನೆಲ್ಲಾ ನೋಡಿದ ಸೂರ್ಯ ತನ್ನ ಪಯಣವನ್ನು ಭೂಮಿಯ ಇನ್ನೊಂದು ಕಡೆಗೆ ಮುಂದುವರೆಸಿದ್ದ, ಈ ಭಾಗಕ್ಕೆ ವಿಧಾಯ ಹೇಳಿದ್ದ , ವನ್ಯ ತಾಣ ವೀಕ್ಷಣೆ ಮುಗಿಸಿದ ನಮ್ಮನ್ನು ಚಾಲಕ ರಾಜು ಸುರಕ್ಷಿತವಾಗಿ ವಾಪಸ್ಸು ತಂದು ಬಿಟ್ಟು ನಕ್ಕಿದ್ದ.
ತನ್ನದೇ ಲೋಕದಲ್ಲಿದ್ದ ಹುಲಿರಾಯ |
ನಮ್ಮ ಕಬಿನಿ ವನ್ಯಜೀವಿ ತಾಣದ ಪ್ರವಾಸ ಇಲ್ಲಿಗೆ ಮುಗಿದಿತ್ತು. ಅಮೂಲ್ಯ ತಾಣದ ನೂರಾರು ಚಿತ್ರಗಳು ನನ್ನ ಕ್ಯಾಮರಾದಲ್ಲಿ ಭದ್ರವಾಗಿ ಸೇರಿದ್ದವು. ವಾಪಸ್ಸು ಕಾರಿನಲ್ಲಿ ಬರುವಾಗ "ಟೈಗರ್ ಕಾಲ್" ನ ಗರ್ಜನೆ ಕಿವಿಯಲ್ಲಿ ಮಾರ್ಧನಿಸುತ್ತಿತ್ತು . .....!!
{ಮುಂದಿನ ಸಂಚಿಕೆಯಲ್ಲಿ ದಾಂಡೇಲಿ ಪ್ರವಾಸದ ಅನುಭವಗಳು ಬರಲಿವೆ }
7 comments:
ನಿಮ್ಮ ಚಿತ್ರಗಳೇ ಎಲ್ಲವನ್ನೂ ಹೇಳುತ್ತವೆ. ನೀವು ಬರೆದಿರುವ ವಿವರಗಳು ಹಲಸಿನ ಜೊತೆಯ ಜೇನಿನ ಹಾಗೆ. ವೈಲ್ಡ್ ಲೈಫ್ ಫೋಟೋಗ್ರಫಿಯ ನಿಮ್ಮ ಅನುಭವಗಳು ಇನ್ನಷ್ಟು ಮೂಡಿ ಬರಲಿ. ದಯವಿಟ್ಟು ಇವನ್ನೆಲ್ಲ ಒಂದು ಪುಸ್ತಕ ರೂಪದಲ್ಲಿ ಹೊರ ತನ್ನಿ ಬಾಲು ಅವರೇ...
ಕಾಡಿನ ಚಿತ್ರಗಳು ಇಷ್ಟವಾಯ್ತು ಬಾಲು ಸರ್....
ಕಬಿನಿಯ ಕಾಡಲ್ಲಿ ನಾವೂ ಓಡಾಡಿದ ಅನುಭವವಾಯ್ತು ಬಾಲು ಸರ್ :)
ತುಂಬಾ ಚೆನ್ನಾಗಿದೆ ..ಇಷ್ಟವಾಯ್ತು
ಕಬಿನಿಯಿಂದ ಸೀದಾ ದಾಂಡೇಲಿ ಕಾಡನ್ನು ನೋಡಲು ನಾವಂತೂ ರೆಡಿ ಇದ್ದೇವೆ ... ಹುಲಿಯನ್ನು ಅಷ್ಟು ಹತ್ತಿರದಿಂದ ನೋಡಿದ ನೀವೇ ಭಾಗ್ಯವಂತರು ... ಎಂದಿನಂತೆ ಫೋಟೋಗಳು ಚೆನ್ನಾಗಿವೆ
ತಮ್ಮ ಮಾತು ನಿಜ ಸಾರ್, ಸಫಾರಿಯಲ್ಲಿ ಕಾಡು ಪ್ರಾಣಿಗಳನ್ನು ನೋಡಲೂ ಲಕ್ಕು ಬೇಕು. ನಿಮ್ಮ ಲಕ್ಕಿಗೆ ನಮಗೆ ಹೊಟ್ಟೆ ಉರಿಯುತ್ತಿದೆ. ಕಾಡಿನ ಹಲವು ಪ್ರಾಣಿಗಳನ್ನು ನೋಡುವ ಮತ್ತು ಒಳ್ಳೆಯ ಛಾಯಾಚಿತ್ರ ತೆಗೆಯುವ ಅದೃಷ್ಟ ನಿಮ್ಮದು.
ತಾವು ಕೊಟ್ಟಿರುವ ಎಲ್ಲಿಹನು ಹುಲಿರಾಯ ಶೀರ್ಷಿಕೆ ಮತ್ತು ಚಿತ್ರ ಧರಣಿ ಮಡಳ ಹಾಡು ನೆನಪಿಸಿತು.
ಕಾಡಿನ ನಿರ್ವಹಣೆ ಮತ್ತು ನೀರಿನ ಕೊರತೆ ಎದ್ದು ಕಾಣುತ್ತದೆ.
ತಮ್ಮ ಸುಪುತ್ರನೂ ಒಳ್ಳೆಯ ಛಾಯಾಗ್ರಾಹಕ. ಅಭಿನಂದನೆ ತಿಳಿಸಿರಿ.
ಭಾಗ ೨ಊ ಅತಿ ರೋಚಕ.
ಕಾಡು ಯಾವ ಕಾಲದಲ್ಲೂ ಸುಂದರವಾಗಿ ಕಾಣುತ್ತದೆ ಎನ್ನುವುದಕ್ಕೆ ನೀವು ತೆಗೆದಿರುವ ಚಿತ್ರಗಳು ಸಾಕ್ಷಿ. ಮಾನವನ ದೌರ್ಜನ್ಯಕ್ಕೆ ಬಲಿಯಾಗಿರುವ ಕೆರೆ ಕಂಟೆ ಬಾವಿಗಳು ಮನಕಲಕುತ್ತವೆ. ಒಂದು ಸುಂದರ ಪಯಣಕ್ಕೆ ರೋಮಾಂಚಕಾರಿ ಅನುಭವ ಕೊಟ್ಟ ಹುಲಿಯ ಚಿತ್ರ, ಹಾಗು ಕ್ರೂರ ಪ್ರಾಣಿಯಾದರೂ ತನ್ನ ತಂಟೆಗೆ ಬರದವರನ್ನು ಅವರ ಪಾಡಿಗೆ ಬಿಟ್ಟು ಬಿಡುವ ಸುಂದರ ಹೊಂದಿರುವ ಕಾಡು ಪ್ರಾಣಿಗಳೇ ಮೇಲು ಅಲ್ಲವೇ. ಸೂಪರ್ ಕಬಿನಿ.. ನಮ್ಮನ್ನು ಕರೆದೊಯ್ಯಿರಿ ಸರ್ ಆದಷ್ಟು ಬೇಗ!
Great! will be waiting for your Dandeli trip post
Post a Comment