Tuesday, October 7, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......09 ಯಕ್ಷಲೋಕದೊಳಗೆ ಹೊಕ್ಕಿಬಂದೆ ನಾನು....!!

ಬನ್ನಿ ಟಿಕೆಟ್ ಕೊಳ್ಳೋಣ 





   ಹಿಂಡುಮನೆಯಿಂದ  ನಮ್ಮ ಪಯಣ  ಹೊರಟಿದ್ದು   ಸಿದ್ದಾಪುರ ತಾಲೂಕಿನ  ದೇವಿಸರ ಗ್ರಾಮದತ್ತ ...... !  ದೇಹವು ಬೆಳಗ್ಗಿನಿಂದ   ಧಣಿದು  ಇನ್ನು  ಸಾಧ್ಯವಿಲ್ಲಾ  ಎನ್ನುವ ಹಂತಕ್ಕೆ ಬಂದಿತ್ತು,  ನಮ್ಮ ಪಯಣ  ಪ್ರಕಾಶಣ್ಣ  ಹುಟ್ಟೂರ   ಕಡೆಗೆ ಸಾಗಿತ್ತು,  ಮನೆ ತಲುಪಿದ ತಕ್ಷಣ  ಬಹಳ ಬೇಗ ಹಾಸಿಗೆ ಸೇರಿ ನಿದ್ದೆ ಹೊಡೆಯುವ  ಪ್ಲಾನ್ ಹಾಕುತ್ತಿದ್ದೆ ಮನದಲ್ಲಿ ..... ! ಅರೆ ಊರು ಬಂದೆ ಬಿಟ್ಟಿತು . ........... !  




ಮನೆಯಲ್ಲಿ ಎಲ್ಲರ ಪ್ರೀತಿಯ ಸ್ವಾಗತ ಸಿಕ್ಕಿತು , ಊಟ ಆಯಿತು  , ಮಲಗುವ ಸಿದ್ದತೆ  ನಡೆದಿತ್ತು, ಪ್ರಕಾಶಣ್ಣ ನ ಅಣ್ಣ  ನಾಗೇಶಣ್ಣ  ಮಾತಿನ ನಡುವೆ ಶಿರಸಿಯಲ್ಲಿ ಯಕ್ಷಗಾನ ಇರುವುದಾಗಿ ತಿಳಿಸಿದರು , ನನ್ನ ಕಡೆ ನೋಡಿದ  ಪ್ರಕಾಶಣ್ಣ  ..... ಬಾಲಣ್ಣ  ಅಂದ್ರೂ  ಅರ್ಥ ಆಯಿತು,  ಸರಿ ಎಸ ಅಂದೇ , ಯಕ್ಷಗಾನದ  ಗಂಧ ಗಾಳಿ ಇಲ್ಲದ  ನಾನು  ,ಈ ಪ್ರಕಾಶ್ ಹೆಗ್ಡೆ  ನಿದ್ದೆ ಮಾಡಲು ಬಿಡದೆ  ಯಕ್ಷಗಾನ  ನೋಡಲು  ಕರೆದೊಯ್ಯುತ್ತಿರುವ ಬಗ್ಗೆ  ಮನದಲ್ಲಿ  ಬೈದುಕೊಂಡೆ , ಆದ್ರೆ  ನನ್ನ ಕಳ್ಳ  ಮನಸು  ಸರಿ ನಡಿಯಪ್ಪ  ಇದು ಒಂದು ಅನುಭವ ಇರಲಿ ಅಂತಾ  ಆಸೆ ಹುಟ್ಟಿಸಿತ್ತು, ಅದಕ್ಕೆ ನಮ್ಮ ಕಾರಿನ ಸಾರಥಿ  ಸಾಥ್ ನೀಡಿದ . ನಾನು, ಪ್ರಕಾಶ್ ಹೆಗ್ಡೆ, ನಾಗೇಶಣ್ಣ  , ಹಾಗು ನಮ್ಮ ಕಾರಿನ ಸಾರಥಿ  ಯಕ್ಷಗಾನ ನೋಡಲು ಹೊರಟೆವು, 









                                             ಯಕ್ಷಲೋಕ



ಯಕ್ಷಗಾನದ  ನೋಟ 


ಅರೆ  ಯಕ್ಷಗಾನ  ಅಂದ್ರೆ ಏನೂ ಅಂತಾ  ನನಗೆ ಖಂಡಿತಾ  ಗೊತ್ತಿರ್ಲಿಲ್ಲ , ಬಹುಷಃ  ನಾನು ಯಕ್ಷಗಾನ  ಅಂತಾ ಮೊದಲು ಕಂಡಿದ್ದು,  ನಾ ನಿನ್ನ ಮರೆಯಲಾರೆ  ಚಿತ್ರದಲ್ಲಿ ಬರುವ ಒಂದು ಸನ್ನಿವೇಶದಲ್ಲಿ  , ಸರಿಯಾಗಿ ಅರಿವಿಲ್ಲದ ನಾನು  ಅದನ್ನು ಒಂದು  ಹಾಸ್ಯ ದ್ರುಶ್ಯವೆಂದು ಪರಿಗಣಿಸಿದ್ದೆ , ಆದರೆ  ಅರಿವು ಮೂಡುವ ಸಮಯ  ಬಂದಿತ್ತು . ಬನ್ನಿ ಯಕ್ಷಗಾನದ ಬಗ್ಗೆ ತಿಳಿಯೋಣ . 



ಹೌದು ಯಕ್ಷಗಾನದ  ಬಗ್ಗೆ ಅರಿಯುವ ಮನಸಾಗಿ ಮಾಹಿತಿ ಹುಡುಕಲು ತೊಡಗಿದೆ ಹಲವು ಗೆಜೆಟ್ ಗಳನ್ನೂ ಹೊಕ್ಕಾಗ ಯಕ್ಷಗಾನದ ಬಗ್ಗೆ ವಿಶೇಷ ಮಾಹಿತಿ ಸಿಕ್ಕಿತು , ಜೊತೆಗೆ ಯಕ್ಷಗಾನದ ಇತಿಹಾಸ ತೆರೆದುಕೊಂಡಿತು "ಯಕ್ಷಗಾನ " ಕಲೆಯು ಬಹು ಶತಮಾನಗಳಿಂದ ಬೆಳೆದುಬಂದ ಕಲೆಯಾಗಿದೆ , ಹಿಂದೆ ಇದನ್ನು ಬಯಲಾಟ , ಭಾಗವತರ  ಆಟ  ಎಂಬುದಾಗಿ ಕರೆಯಲಾಗುತ್ತಿತ್ತು . ಈ ಆಟಗಳು ಸಂಗೀತ ಪ್ರಧಾನ ಆಗಿದ್ದ ಕಾರಣ , ಹಾಗು ಸಂಗೀತ  ಉಪಕರಣಗಳು  ಬಹು ಮುಖ್ಯವಾಗಿ ಬಳಕೆಯಾಗಿ  ಹಾಡುಗಳಲ್ಲಿ  ಕಥೆಯನ್ನು  ಮುಂದುವರೆಸಲಾಗುತ್ತಿದ್ದ  ಈ ಕಲೆಯು  ಯಕ್ಷರ ಗಾನ ವೆಂದು ಜನರಲ್ಲಿ ಭಾವನೆ ಮೂಡಿ , ಈ ಕಲೆಗೆ ಯಕ್ಷಗಾನ  ಎಂಬ ಹೆಸರು  ಬಂದಿದೆ . ಭಾರತೀಯ  ಶಾಸ್ತ್ರೀಯ ಸಂಗೀತದ  ಜೊತೆಯಲ್ಲಿ  ತೆಲಗು ಸೀಮೆಯಲ್ಲಿ  "ಯಕ್ಕಲಗಾನ " ಎಂಬ  ಸಂಗೀತವೂ ಮಿಳಿತಗೊಂಡು  ಯಕ್ಷಗಾನ  ಕ್ಕೆ ಹೊಸ ರೂಪ ಕೊಟ್ಟಿತು .  ಯಕ್ಷಗಾನದ  ಮೊದಲ ಪ್ರಸ್ತಾಪ ಕನ್ನಡ ಕಾವ್ಯಗಳಾದ  "ಮಲ್ಲಿನಾಥ ಪುರಾಣ" ಹಾಗು "ಚಂದ್ರಪ್ರಭ ಪುರಾಣ" ಇವುಗಳಲ್ಲಿ ಬಂದಿದೆ . ೧೬ ನೆ ಶತಮಾನದಿಂದ ೧೮ ನೆ ಶತಮಾನದ ವರೆಗೆ ಯಕ್ಷಗಾನ  ಸಮೃದ್ಧವಾಗಿ ಬೆಳೆದು ಬಂತು . ಕೂಚಿಪುಡಿ ನೃತ್ಯದ ಸ್ಥಾಪಕನಾದ  ಸಿದ್ದೇಂದ್ರ ಯತಿಗಳ  ಶಿಷ್ಯ  ತೀರ್ಥನಾರಾಯಣ ಯತಿಗಳು  ಈ ಯಕ್ಷಗಾನದ ಆಟಗಳನ್ನು ತಮಿಳು ಸೀಮೆಯ ತಂಜಾವೂರಿಗೆ  ತೆಗೆದುಕೊಂಡು  ಹೋಗುತ್ತಾರೆ . ಇಂದಿಗೂ  ಈ ಕಲೆಯು  ತಮಿಳು ನಾಡಿನ ಕೆಲವು ಭಾಗಗಳಲ್ಲಿ  ಉಳಿದುಕೊಂಡಿದೆ .  ಆದರೆ ಕನ್ನಡ ನಾಡಿನ ಕರಾವಳಿಯ ಭಾಗದ ಜನರ ನೆಚ್ಚಿನ ಕಲೆಯಾಗಿ ಯಕ್ಷಗಾನ  ಅರಳಿದೆ  ಬೆಳೆದಿದೆ . ೩೦೦ ಕ್ಕೂ ಹೆಚ್ಚಿನ ಪ್ರಹಸನಗಳು  ಈ ಭಾಗದಲ್ಲಿ ರಚನೆಗೊಂಡು  ಯಕ್ಷಗಾನದ ಸೊಗಡನ್ನು ಎಲ್ಲೆಡೆ ಪಸರಿಸಿವೆ . 







ತಾಳ ಮೇಳಗಳ  ಸಂಭ್ರಮ 



ಯಕ್ಷಗಾನದಲ್ಲಿ ಭಾಗವತರೇ ನಿರ್ದೇಶಕರು , ಅವರು ವಾಧ್ಯಗಳೊಂದಿಗೆ ಇದ್ದು ಕಥೆಗೆ ತಕ್ಕಂತೆ ಪೂರಕವಾಗಿ  ಸಂಗೀತ ಒದಗಿಸಿ , ಕಥೆಯನ್ನು ಬೆಳಸುತ್ತಾ ಹೋಗುತ್ತಾರೆ  , ಜೊತೆಗೆ ಕಲಾವಿದರ ಜೊತೆ ಮಾತಿನಲ್ಲಿ ಸಾಥ್  ನೀಡುತ್ತಾ  ಸನ್ನಿವೇಶ ಕಳೆ  ಕಟ್ಟಲು  ಅನುವು ಮಾಡಿಕೊಡುತ್ತಾರೆ . ತಾಳ ಮದ್ದಲೆ ಗಳ  ನಾಧ ಯಕ್ಷಗಾನದ   ಕಲಶ ಇದ್ದಂತೆ  ಪ್ರಹಸನದ  ಕಥೆಗೆ ಪೂರಕವಾಗಿ  ಈ ವಾಧ್ಯಗಳನ್ನು  ಬಳಸಿಕೊಳ್ಳಲಾಗುತ್ತದೆ . ಇತಿಹಾಸಕಾರರ  ರೀತ್ಯ  ೧೫೫೦ ರಲ್ಲಿಯೇ ಯಕ್ಷಗಾನ  ಕಲೆ ದೇವಾಲಯಗಳ  ಸಂಪ್ರದಾಯದ  ಒಂದು ಅಂಗವಾಗಿತ್ತೆಂದು ತಿಳಿದು ಬರುತ್ತದೆ . ಹಾಗಾಗಿ  ಕನ್ನಡ ನಾಡಿನ ಕರಾವಳಿ ತೀರದ   ಅನೇಕ ಪ್ರಸಿದ್ದ ದೇವಾಲಯಗಳು ತಮ್ಮದೇ ಆದ ಮೇಳಗಳನ್ನು ಪೋಷಿಸಿವೆ , ಸೌಕೂರು, ಮಾರನಕಟ್ಟೆ , ಮಂದರ್ತಿ , ಮುಲ್ಕಿ, ದರ್ಮಸ್ಥಳ , ಕೂಡ್ಲು  ಮುಂತಾದ ಕಡೆ ಮೇಳಗಳು  ಜನ್ಮ ತಾಳಿ ಪ್ರಸಿದ್ಧಿ ಹೊಂದಿವೆ  . ನಂತರ  ದೇವಾಲಯಗಳು  ಆಟ ನಡೆಸುವ ಹಕ್ಕನ್ನು  ಹಾರಾಜು ಹಾಕುವ ಮೂಲಕ  ಹೊಸ ಸಂಪ್ರದಾಯ ಶುರುವಾಯಿತು.  ಜೊತೆಗೆ ಹೊಸದಾಗಿ  ಹಲವಾರು ಕಂಪನಿ ಗಳು  ಜನ್ಮ ತಾಳಿ ಸಹ ಯಕ್ಷಗಾನ  ನಡೆಸುವತ್ತ  ಹೆಜ್ಜೆ ಇಟ್ಟವು . ಯಕ್ಷಗಾನಕ್ಕೆ  ಆಧುನಿಕ ಆಯಾಮ  ನೀಡಲಾಯಿತು . 


ವಿಕಿ ಪೀಡಿಯಾದಲ್ಲಿ  ಕಂಡು ಬಂಡ ಮಾಹಿತಿ ಯಂತೆ ಯಕ್ಷಗಾನದ ಬೆಳವಣಿಗೆಯಲ್ಲಿ  ಕಾಸರಗೋಡು ಸಮೀಪದ ಕುಂಬ್ಳೆ ಯ  ಶ್ರೀಯುತ ಪಾರ್ಥಿ ಸುಬ್ಬ  ರವರು ಯಕ್ಷಗಾನದಲ್ಲಿ  ರಾಮಾಯಣ ಪ್ರಸಂಗ ವನ್ನು ಬರೆದರೆಂಬ  ಮಾಹಿತಿ ಇದೆ.  ಶ್ರೀ ಪಾರ್ಥಿ ಸುಬ್ಬ ರವರು ೧೯ ನೆ ಶತಮಾನದಲ್ಲಿ  ರಾಮಾಯಣ ಪ್ರಸಂಗ ಗಳನ್ನೂ ಯಕ್ಷಗಾನಕ್ಕೆ ಅಳವಡಿಸಿದರೆಂದು  ಶ್ರೀಯುತರಾದ ಮುಳ್ಳಿಯ  ತಿಮ್ಮಪ್ಪ, ಹಾಗು ಗೋವಿಂದ ಪೈ ಅವರು ತಿಳಿಸುತ್ತಾರಾದರೂ , ಈ ವಾದವನ್ನು ಕಡಲ ತೀರದ ಭಾರ್ಗವ ಶಿವರಾಮ ಕಾರಂತರು ತಳ್ಳಿ ಹಾಕುತ್ತಾರೆ . ಈ ವಿಚಾರದಲ್ಲಿ ಹೆಚ್ಚಿನ ಸಂಶೋದನೆ ಅಗತ್ಯವಿದೆ . ಈ ವಿಚಾರದಲ್ಲಿ ಹೆಚ್ಚು ತಿಳುವಳಿಕೆ ಇದ್ದವರು  ಇಲ್ಲಿ ತಮ್ಮ ಮಾಹಿತಿಯನ್ನು ಹಂಚಿಕೊಂಡರೆ  ನಿಜದ ಸಂಗತಿ ತಿಳಿಯುತ್ತದೆ. 


ಆ ಹಾ  ಯಾರೀ  ಬೆಡಗಿ 



ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಹಾಗು ಯುವ ಪೀಳಿಗೆಗೆ ಆಸಕ್ತಿ ಮೂಡಿಸಲು ಉಡುಪಿಯಲ್ಲಿ ಎಮ್. ಜಿ. ಎಮ್. ಕಾಲೇಜು, ಕೋಟ ಹಾಗು ದರ್ಮಸ್ಥಳ ದಲ್ಲಿ   ,  ಯಕ್ಷಗಾನ ತರಬೇತಿ ಶಾಲೆಗಳನ್ನು ತೆರೆಯಲಾಗಿದೆ . ಯಕ್ಷಗಾನ ಕಲೆಯನ್ನು  ಹಲವಾರು ಕಲಾವಿದರು  ಪೋಷಿಸಿ   ಪ್ರಸಿದ್ಧಿ  ಹೊಂದಿದ್ದಾರೆ   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರಭದ್ರ ನಾಯಕ್ , ಉಪ್ಪೂರು ನಾರಾಯಣ ಭಾಗವತ , ಐರೊಡಿ ಸದಾನಂದ ಹೆಬ್ಬಾರ್ , ಪೊಳಲಿ ಶಂಕರ ನಾರಾಯಣ ಶಾಸ್ತ್ರಿ , ಮಲ್ಪೆ ಶಂಕರ ನಾರಾಯಣ ಸಾಮಗ , ಮೊವ್ವಾರು ಕಿಟ್ಟಣ್ಣ ಭಾಗವತ ,   ಅಳಿಕೆ ರಾಮಯ್ಯ ರೈ , ಹಾರಾಡಿ ಕೃಷ್ಣಯ್ಯ ಗಾಣಿಗ, ಹಾರಾಡಿ ರಾಮ ಗಾಣಿಗ , ದಾಮೋದರ  ಮಂಡೆಚ್ಹ ,ಬಸವನಾಯ್ಕ್ , ಬಲಿಪ ನಾರಾಯಣ ಭಾಗವತ , ಶೇಣಿ ಗೋಪಾಲಕೃಷ್ಣ ಭಟ್ , ಕುಂಬಳೆ ಸುಬ್ಬರಾಯ , ಹಿರಿಯಡ್ಕ ಗೋಪಾಲರಾವ್ , ಅಳಿಕೆ ಮೋನಪ್ಪ ರೈ , ಅಗರಿ ಶ್ರೀನಿವಾಸ ಭಾಗವತ , ಕುರಿಯ ವಿಟ್ಟಲ ಶಾಸ್ತ್ರಿ,  ಉತ್ತರ ಕನ್ನಡ ಜಿಲ್ಲೆಯಲ್ಲಿ  ಕೆರೆಮನೆ ಶಿವರಾಮ ಹೆಗ್ಗಡೆ, ಮಹಾಬಲ ಹೆಗ್ಡೆ , ಶಂಭು ಹೆಗ್ಡೆ , ಕೆ. ಸದಾನಂದ ಹೆಗ್ಗಡೆ  , ಮೂಡಕಣಿ  ನಾರಾಯಣ ಹೆಗ್ಗಡೆ  , ಚಿಟ್ಟಾಣಿ ರಾಮಚಂದ್ರ  ಹೆಗ್ಡೆ , ಹೊಸ ತೋಟ ಮಂಜುನಾಥ  ಭಾಗವತ, ಕರ್ಕಿಯ ಹಾಸ್ಯಗಾರ  ಮನೆತನದ ಕಲಾವಿದರು ಇವರೆಲ್ಲರೂ ಯಕ್ಷಗಾನದ  ನಕ್ಷತ್ರಗಳಾಗಿ  ಮಿಂಚಿದ್ದಾರೆ . 


ಯಕ್ಷಗಾನದ  ತವರಾಗಿ ಕನ್ನಡ ನಾಡು ವಿಶ್ವಕ್ಕೆ ತನ್ನದೇ ಆದ  ಕೊಡುಗೆ ನೀಡಿದೆ .  





ಯಕ್ಷಗಾನದ  ಕಲಾವಿದರ ಗತ್ತು 



ಶಿರಸಿಯಲ್ಲಿ ನಮಗೆ ನೋಡಲು ಸಿಕ್ಕಿದ್ದು ಪೆರ್ಡೂರು ಮೇಳ,          ಅಂದಿನ  ಪ್ರಹಸನದ ಆಟಾ  ನೋಡುತ್ತಾ ನನ್ನ ನಿದ್ದೆ ಹಾರಿಹೋಗಿ, ಹೊಸ ಉತ್ಸಾಹ ಮೂಡಿತು,  ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರ ಮುಖದ ಭಾವನೆ   ನೋಡುತ್ತಾ, ಅವರ ನೃತ್ಯ, ಅಭಿನಯ, ಭಾವ ನೋಡುತ್ತಾ , ಭಾಗವತರ  ಹಾಡು ಕೇಳುತ್ತಾ  ಚಂಡೆ ಮದ್ದಲೆ ವಾಧ್ಯಗಳ  ಜೊತೆ ಸೇರಿಹೋಗಿ  ಯಕ್ಷಲೋಕದಲ್ಲಿ ವಿಹರಿಸಿದೆ.  ಬಹಳ ಹೊತ್ತು ಕಲಾವಿಧರ ಅದ್ಭುತ  ಅಭಿನಯ ನೋಡುತ್ತಾ  ಮೈಮರೆತೆ  , ನನ್ನ ಜೀವನಕ್ಕೆ ಹೊಸ ಚಟ  ಅಂಟಿಕೊಂಡಿತು  , ಅದು ಯಕ್ಷಗಾನ ಮೇಳಗಳ  ಆಟಾ ನೋಡುವ ಹುಚ್ಚಿಗೆ  ನಾನೂ ಸೇರಿಹೋದೆ  . 





ಯಕ್ಷಗಾನ ನೋಡಲು  ಬಿಸಿ ಬಿಸಿ  ಕಡಲೇಕಾಯಿ ಇದ್ದರೆ ಮಜಾ ಇರುತ್ತೆ 



ಬಹಳ ಹೊತ್ತು ಯಕ್ಷಗಾನದಲ್ಲಿನ  ಆಟಾ   ನೋಡುತ್ತಾ  ಮೈಮರೆತು , ಅಲ್ಲಿನ ಸನ್ನಿವೇಶಗಳನ್ನು  ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾ ಸಾಗಿದೆ.  ಅಲ್ಲಿನ ಪ್ರೇಕ್ಷಕರಂತೂ  ಯಕ್ಷಗಾನದ ಪ್ರತೀ ಸನ್ನಿವೇಶವನ್ನೂ  ಅನುಭವಿಸುತ್ತಿದ್ದರು , ಆದರೆ  ಮಾರನೆಯದಿನದ  ಕಾರ್ಯಕ್ರಮಕ್ಕೆ ಸಿದ್ದವಾಗಬೇಕಾಗಿತ್ತು, ಪೆರ್ಡೂರು ಮೇಳದ  ಆಟದ  ಬಿಡಾರದಿಂದ ಹೊರಬಂದೆವು , ನಡು ರಾತ್ರಿಯಲ್ಲೂ  ಚಹಾ ಅಂಗಡಿ, ಹಾಗು ಕಳ್ಳೆ ಕಾಯಿ  ಮಾರಾಟ  ಸಾಗಿತ್ತು,  ಅಯ್ಯೋ  ಮೊದಲೇ ಕಂಡಿದ್ದರೆ  ಕಡಲೆ ಕಾಯಿ ತಿನ್ನುತ್ತಾ  ಯಕ್ಷಗಾನ  ನೋಡಬಹುದಾಗಿತ್ತು  ಅನ್ನಿಸಿತು. ಚುಮು ಚುಮು ಚಳಿಗೆ ಬಿಸಿ ಬಿಸಿ  ಕಡಲೇಕಾಯಿ ಒಳ್ಳೆಯ   ಮಜಾ ಕೊಡುತಿತ್ತು. ಆದರೆ  ನಿದ್ದೆ ಬಯಸ್ತಿದ್ದ  ದೇಹ ಕಡಲೇಕಾಯಿ ಬಯಸಲಿಲ್ಲ. 



 ಯಕ್ಷಗಾನದ ಪ್ರಹಸನ ಪೂರ್ತಿ ನೋಡಲಾಗದೆ  ಪ್ರಕಾಶಣ್ಣನ  ಊರಿಗೆ  ವಾಪಸ್ಸು ಬಂದೆವು . ಮನೆಗೆ ಬಂದು ಹಾಸಿಗೆಯಲ್ಲಿ  ಪವಡಿಸಿದಷ್ಟೇ ಗೊತ್ತು  , ನಿದ್ರಾದೇವಿ  ಆವರಿಸಿಕೊಂಡಳು . ಎಚ್ಚರವಾದಾಗ  ಹಕ್ಕಿಗಳ ಚಿಲಿಪಿಲಿ  ಗಾನ ಕೇಳುತ್ತಿತ್ತು . ಕೊಟ್ಟಿಗೆಯಲ್ಲಿದ್ದ  ಹಸು ಹಾಗು ಕರು  ಅಂಬಾ ಎಂದು ಕರೆಯುತ್ತಿತ್ತು .  ಶುಭದ ಮುಂಜಾನೆಗೆ ಮುನ್ನುಡಿ ಶುರುವಾಗಿತ್ತು . ..... !!


5 comments:

Ittigecement said...

ಬಾಲಣ್ಣಾ...

ಯಕ್ಷಗಾನವೆಂದರೆ ಕುಣಿಯುವದೆಮ್ಮೆದೆ..
ಯಕ್ಷಗಾನವೆಂದರೆ ಕಿವಿ ನಿಮಿರುವದು..."

ಯಕ್ಷಾಗಾನವೆಂದರೆ ಅಷ್ಟು ಹುಚ್ಚು....

ತುಂಬಾ ಶ್ರೀಮಂತವಾದ ಕಲೆ..
ಅದರಲ್ಲಿ ಏನುಂಟು.. ಏನಿಲ್ಲ..

ಶಾಸ್ತ್ರೀಯ ನೃತ್ಯವಿದೆ.. ಶಾಸ್ತ್ರೀಯ ಗಾನವಿದೆ...
ಶಾಸ್ತ್ರೀಯವಾದ ತಾಳ.. ಲಯ.. ಮಟ್ಟುಗಳಿವೆ...
ತರ್ಕಬದ್ಧವಾದ.. ಅಧ್ಯಯನಶೀಲ ಮಾತುಗಳು...

ಮೊದಲೆಲ್ಲ
ಯಕ್ಷಗಾನವೆಂದರೆ ರಾತ್ರಿ ಒಂಬತ್ತುಗಂಟೆಯಿಂದ.. ಬೆಳಿಗ್ಗೆ ಆರುಗಂಟೆಯವರೆಗೆ ನಡೆಯುತ್ತಿತ್ತು...

ಒಂದು ದಿನ ಯಕ್ಷಗಾನ ನೋಡಿ ಬಂದರೆ
ಒಂದು ವಾರವಿಡೀ ಕಿವಿಯಲ್ಲಿ ಯಕ್ಷಗಾನದ ಚಂಡೆ ಮದ್ದಲೆಗಳ ಮೊರೆತ.. !

ನಮ್ಮ ಕಾರಂತಜ್ಜನಿದ್ದಾಗ
"ಜಾಗತಿಕ ಜಾನಪದ ಕಲೆಗಳ ಸ್ಪರ್ಧೆಗೆ" ಯಕ್ಷಗಾನವನ್ನೂ ಕರೆದೊಯ್ದು...
ಅವರಿಗೆಲ್ಲ ಯಕ್ಷಗಾನವನ್ನು ತೋರಿಸಿದ್ದರು..
ನಮ್ಮ "ಯಕ್ಷಗಾನಕ್ಕೆ" ಸಮನಾದ ಜಾನಪದ ಕಲೆ ಮತ್ತೊಂದಿಲ್ಲ ಅಂತ ಖ್ಯಾತಿ ಪಡೆಯಿತು..

ಇಂಥಹ ಕಲೆಯಿರುವ ನಾಡಿನಲ್ಲಿ ನಾವಿದ್ದೆವಲ್ಲ.. ಅದು ನಮ್ಮ ಪುಣ್ಯ....

ಯಕ್ಷಗಾನ ಕುರಿತು
ನಿಮ್ಮ ಪ್ರೀತಿಗೆ ನಮ್ಮ ಯಕ್ಷಗಾನ ಪ್ರೇಮಿಗಳ ಪ್ರೀತಿಯ ನಮನ...

Vinayak Bhagwat said...

ಗಂಡು ಮೆಟ್ಟಿನ ಕಲೆಯೆಂದೆ ಪ್ರಖ್ಯಾತವಾಗಿರುವ ಜಾನಪದ ಕಲೆಯೆಂದರೆ ಅದು ಯಕ್ಷಗಾನ. ನವರಸಗಳನ್ನು ಅಭಿವ್ಯಕ್ತ ಪಡಿಸುವ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ ಮನರಂಜಿಸುವ ಕಲೆ. ಯಕ್ಷಗಾನದಲ್ಲಿ ೨ ವಿಧಗಳಿವೆ. ಅದರಲ್ಲಿ ಒಂದು ತೆಂಕು ತಿಟ್ಟು, ಎರಡನೆಯದು ಬಡಗು ತಿಟ್ಟು.

ತೆಂಕು ತಿಟ್ಟು ಇದು ದಕ್ಷಿಣ ಕನ್ನಡದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದೆ. ಮತ್ತೆ ಅಲ್ಲಿಯ ಜನಗಳು ಸಹ ತೆಂಕು ತಿಟ್ಟು ಬಗೆಯ ಕಲೆಯನ್ನು ಹೆಚ್ಚು ಮೆಚ್ಚಿ ಅದನ್ನು ಗೌರವಿಸುತ್ತಾರೆ ಇನ್ನು ಕೆಲವರು ಅದನ್ನೆ ಆರಾಧಿಸುತ್ತಾರೆ. ಇದು ಮಂಗಳೂರು, ಪುತ್ತುರು, ಕುಂಬಳ ಕಾಸರಗೋಡು, ಉಡುಪಿ, ಧರ್ಮಸ್ಥಳಗಳಲ್ಲಿ ಅತಿ ಹೆಚ್ಚಿನ ಜನರು ಆಸ್ವಾಧಿಸುವ ಯಕ್ಷಗಾನ ಕಲೆಯ ಬಗೆ.

ಬಡಗು ತಿಟ್ಟು ಇದು ಹೆಚ್ಚಿನದಾಗಿ ಉತ್ತರ ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆ ಈ ಕಡೆಯ ಜನರು ಇದನ್ನೆ ಅತಿಯಾಗಿ ಮೆಚ್ಚಿ ಗೌರವಿಸುತ್ತ ಆರಾಧಿಸುತ್ತಾರೆ. ಇದು ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟಾ, ಸಿರಸಿ, ಸಿದ್ಧಾಪುರ, ಸಾಗರ ಇತ್ತ ಕಡೆಗಳಲ್ಲಿ ಬಹು ನಿರೀಕ್ಷೆಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಯ ಬಗೆ.

ತೆಂಕು ತಿಟ್ಟು ಯಕ್ಷಗಾನ ಕಲೆಯಲ್ಲಿ ಮಾತಿನ ಅರ್ಥಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರೆ ಬಡಗು ತಿಟ್ಟು ಯಕ್ಷಗಾನ ಕಲೆಯಲ್ಲಿ ನೃತ್ಯಕ್ಕೆ ಮತ್ತು ಸ್ವಲ್ಪ ಕಡಿಮೆಯಾಗಿ ಮಾತಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಕ್ಷಗಾನದಲ್ಲಿ ಪೌರಾಣಿಕ ಕಥಾಪ್ರಸಂಗಗಳಿಗೆ ಹೆಚ್ಚು ಒತ್ತನ್ನು ನೀಡಿ ರಾಮಾಯಣ, ಮಹಾಭಾರತ ಹೀಗೆ ನಾನಾ ಬಗೆಯ ಪೌರಾಣಿಕ ಕಥೆಯನ್ನಾಧರಿಸಿ ಯಕ್ಷಗಾನವನ್ನು ಪ್ರಸ್ತುತ ಪಡಿಸುತ್ತಾರೆ. ಹಾಗೆ ಸಾಮಾಜಿಕ ಮತ್ತು ಸಂದೇಶ ನೀಡುವ ಕಥೆಗಳನ್ನು ಸಹ ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸುತ್ತಾರೆ. ನಟಸಾರ್ವಭೌಮ, ಹಿರಿಯ ಯಕ್ಷಪ್ರವೀಣ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಲಭಿಸಿರುವುದು ಯಕ್ಷಗಾನ ಕಲೆಗೆ ದೊರೆತಂತಹ ಮೌಲ್ಯಯುತ ಬೆಲೆ.

ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ.

ಯಕ್ಷಗಾನದ ಕುರಿತಾದ ನಿಮ್ಮ ಲೇಖನ ಅತ್ಯಂತ ಸ್ವಾಗತಾರ್ಹ. ನಿಮಗೊಂದು ನಮನಗಳು. ಚನ್ನಿದೆ... ಯಕ್ಷಗಾನ ಪ್ರಸಂಗಗಳು ನಡೆಯುವಾಗ ಹೆಚ್ಚಿನದಾಗಿ ಬೆಂಗಳೂರಿನಂತಹ ಮಹಾನಗರಿಯಲ್ಲಿ ತಮ್ಮಂತಹ ಯಕ್ಷಪ್ರೀಯರು ಬಂದು ಯಕ್ಷಗಾನದ ಯಶಸ್ಸಿಗೆ ಕಾರಣರಾಗಬೇಕು. ಧನ್ಯವಾದಗಳು.

Vinayak Bhagwat said...

ಗಂಡು ಮೆಟ್ಟಿನ ಕಲೆಯೆಂದೆ ಪ್ರಖ್ಯಾತವಾಗಿರುವ ಜಾನಪದ ಕಲೆಯೆಂದರೆ ಅದು ಯಕ್ಷಗಾನ. ನವರಸಗಳನ್ನು ಅಭಿವ್ಯಕ್ತ ಪಡಿಸುವ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ ಮನರಂಜಿಸುವ ಕಲೆ. ಯಕ್ಷಗಾನದಲ್ಲಿ ೨ ವಿಧಗಳಿವೆ. ಅದರಲ್ಲಿ ಒಂದು ತೆಂಕು ತಿಟ್ಟು, ಎರಡನೆಯದು ಬಡಗು ತಿಟ್ಟು.

ತೆಂಕು ತಿಟ್ಟು ಇದು ದಕ್ಷಿಣ ಕನ್ನಡದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದೆ. ಮತ್ತೆ ಅಲ್ಲಿಯ ಜನಗಳು ಸಹ ತೆಂಕು ತಿಟ್ಟು ಬಗೆಯ ಕಲೆಯನ್ನು ಹೆಚ್ಚು ಮೆಚ್ಚಿ ಅದನ್ನು ಗೌರವಿಸುತ್ತಾರೆ ಇನ್ನು ಕೆಲವರು ಅದನ್ನೆ ಆರಾಧಿಸುತ್ತಾರೆ. ಇದು ಮಂಗಳೂರು, ಪುತ್ತುರು, ಕುಂಬಳ ಕಾಸರಗೋಡು, ಉಡುಪಿ, ಧರ್ಮಸ್ಥಳಗಳಲ್ಲಿ ಅತಿ ಹೆಚ್ಚಿನ ಜನರು ಆಸ್ವಾಧಿಸುವ ಯಕ್ಷಗಾನ ಕಲೆಯ ಬಗೆ.

ಬಡಗು ತಿಟ್ಟು ಇದು ಹೆಚ್ಚಿನದಾಗಿ ಉತ್ತರ ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆ ಈ ಕಡೆಯ ಜನರು ಇದನ್ನೆ ಅತಿಯಾಗಿ ಮೆಚ್ಚಿ ಗೌರವಿಸುತ್ತ ಆರಾಧಿಸುತ್ತಾರೆ. ಇದು ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟಾ, ಸಿರಸಿ, ಸಿದ್ಧಾಪುರ, ಸಾಗರ ಇತ್ತ ಕಡೆಗಳಲ್ಲಿ ಬಹು ನಿರೀಕ್ಷೆಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಯ ಬಗೆ.

ತೆಂಕು ತಿಟ್ಟು ಯಕ್ಷಗಾನ ಕಲೆಯಲ್ಲಿ ಮಾತಿನ ಅರ್ಥಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರೆ ಬಡಗು ತಿಟ್ಟು ಯಕ್ಷಗಾನ ಕಲೆಯಲ್ಲಿ ನೃತ್ಯಕ್ಕೆ ಮತ್ತು ಸ್ವಲ್ಪ ಕಡಿಮೆಯಾಗಿ ಮಾತಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಕ್ಷಗಾನದಲ್ಲಿ ಪೌರಾಣಿಕ ಕಥಾಪ್ರಸಂಗಗಳಿಗೆ ಹೆಚ್ಚು ಒತ್ತನ್ನು ನೀಡಿ ರಾಮಾಯಣ, ಮಹಾಭಾರತ ಹೀಗೆ ನಾನಾ ಬಗೆಯ ಪೌರಾಣಿಕ ಕಥೆಯನ್ನಾಧರಿಸಿ ಯಕ್ಷಗಾನವನ್ನು ಪ್ರಸ್ತುತ ಪಡಿಸುತ್ತಾರೆ. ಹಾಗೆ ಸಾಮಾಜಿಕ ಮತ್ತು ಸಂದೇಶ ನೀಡುವ ಕಥೆಗಳನ್ನು ಸಹ ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸುತ್ತಾರೆ. ನಟಸಾರ್ವಭೌಮ, ಹಿರಿಯ ಯಕ್ಷಪ್ರವೀಣ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಲಭಿಸಿರುವುದು ಯಕ್ಷಗಾನ ಕಲೆಗೆ ದೊರೆತಂತಹ ಮೌಲ್ಯಯುತ ಬೆಲೆ.

ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ.

ಯಕ್ಷಗಾನದ ಕುರಿತಾದ ನಿಮ್ಮ ಲೇಖನ ಅತ್ಯಂತ ಸ್ವಾಗತಾರ್ಹ. ನಿಮಗೊಂದು ನಮನಗಳು. ಚನ್ನಿದೆ... ಯಕ್ಷಗಾನ ಪ್ರಸಂಗಗಳು ನಡೆಯುವಾಗ ಹೆಚ್ಚಿನದಾಗಿ ಬೆಂಗಳೂರಿನಂತಹ ಮಹಾನಗರಿಯಲ್ಲಿ ತಮ್ಮಂತಹ ಯಕ್ಷಪ್ರೀಯರು ಬಂದು ಯಕ್ಷಗಾನದ ಯಶಸ್ಸಿಗೆ ಕಾರಣರಾಗಬೇಕು. ಧನ್ಯವಾದಗಳು.

Srikanth Manjunath said...

ಯಕ್ಷಗಾನ ಎನ್ನುವ ಪದ ನನ್ನ ಕಿವಿಗೆ ಬಿದ್ದದ್ದು ಮಸಣದ ಹೂವು ಚಿತ್ರದ ಕನ್ನಡ ನಾಡಿನ ಕರಾವಳಿ ಹಾಡಿನಲ್ಲಿ ಕರುನಾಡಿನ ಹಲವು ಮಗ್ಗುಲುಗಳನ್ನು ತೆರೆಯ ಮೇಲೆ ತಂದ ಪುಟ್ಟಣ್ಣ ಅವರ ಚಿತ್ರದಿಂದ..

"ಯಕ್ಷಗಾನ ಮೇಳದ ನಾಟ್ಯ ತರಂಗ ಧೀಂ ಧೀಂ ನುಡಿಯುವ ಚಂಡೆ ಮೃದಂಗ" ಈ ಸಾಲುಗಳು ಯಾವತ್ತೂ ಕಾಡುತ್ತವೆ..

ನನಗೂ ಈ ಕಲೆಯ ಬಗ್ಗೆ ನೋಡಿದ ಕೇಳಿದ ಅನುಭವ ಇಲ್ಲ.. ಆದರೆ ಪ್ರಕಾಶಣ್ಣ ಹಾಕುವ ಚಿತ್ರಗಳು.. ಬೆಂಗಳೂರಿನಲ್ಲಿ ಯಕ್ಷಗಾನನೆಡೆಯುವಾಗ ಪ್ರತಿ ಬಾರಿಯೂ ಕರೆಯುವ ಕಡಕೋಟ ಸರ್ ಇವರ ಅವಿರತ ಒತ್ತಾಯದಿಂದ ನನಗೂ ಅದನ್ನು ನೋಡುವ ಮನಸ್ಸು ಹೆಚ್ಚಾಗುತ್ತಿದೆ..

ಈ ಗಂಡು ಕಳೆಯ ಬಗ್ಗೆ ಸವಿಸ್ತಾರ ವಿವರ ಓದಿ ಹಾಗೆ ತಲ್ಲೀನನಾದೇ... ಇತಿಹಾಸ ಹೆಕ್ಕಿ ತೆಗೆಯಲು ಗುದ್ದಲಿ ಪಿಕಾಸಿ ಸದಾ ಹೊತ್ತು ತಿರುವ ನಿಮ್ಮ ಉತ್ಸಾಹದ ಬತ್ತಳಿಕೆ ಸದಾ ತುಂಬಿರಲಿ

ತುಂಬಾ ತುಂಬಾ ಸುಂದರ ಮಾಹಿತಿ.. ನೀವು ಅದನ್ನು ಪ್ರಸ್ತುತ ಪಡಿಸುವ ರೀತಿಗೆ ಹಾಟ್ಸ್ ಆಫ್ ಬಾಲೂ ಸರ್

Badarinath Palavalli said...

ಅದೊಂದು ನಿಜವಾದ ಕಲೆಯ ಅನಾವರಣ ಬಾಲಣ್ಣ.
ನಾನು ಮುದ್ದೇನಹಳ್ಳಿಯಲ್ಲಿ ಓದಿದ್ದು. ನಮ್ಮ ಶಾಲೆ ದ.ಕ. ಜಿಲ್ಲೆಯ ಅಳಿಕೆಯ ಶಾಖೆ. ಈಗಲೂ ನಮ್ಮಲ್ಲಿ ಅಲ್ಲಿನ ಶಿಕ್ಖರದೇ ಮೇಲುಗೈ. ಹಾಗಾಗಿ ಯಾವುದೇ ಹಬ್ಬ ಬರಲಿ ಶಾಲೆಯಲ್ಲಿ ಯಕ್ಷಗಾನ ಮಕ್ಕಳ ಕೈಲಿ ಮಾಡಿಸುತ್ತಿದ್ದರು. ಅಹೋ ರಾತ್ರಿ ಪ್ರಯೋಗಗಳು ರಂಗೇರುತ್ತಿದ್ದವು.

ತಮ್ಮ ಈ ಬರಹದ ಮೂಲಕ ಮತ್ತೆ ನನ್ನಲ್ಲಿ ಯಕ್ಷಗಾನದ ಹುಚ್ಚು ಮರು ಜಾಗೃತಗೊಳಿಸಿದಿರಿ.

ಪುರುಷ ಮೇಳದಲ್ಲಿ ಸ್ತ್ರೀ ಪಾತ್ರಧಾರಿಗಳು ಮತ್ತು ಹೆಣ್ಣು ಮಕ್ಕಳ ಮೇಳದಲ್ಲಿ ಪುರುಷ ಪಾತ್ರದೊಳಗೆ ಕಲಾವಿದರು ಪರಕಾಯ ಪ್ರವೇಶ ಮಾಡುವ ಏಕಾಗ್ರತೆಯು ನನಗೆ ಯಾವತ್ತೂ ಸೋಜಿಗ.