ದೇವಿಸರ ಗ್ರಾಮದ ಒಂದು ನೋಟ |
ಕಳೆದ ಸಂಚಿಕೆಯಲ್ಲಿ ಯಕ್ಷಗಾನದ ಯಕ್ಷಲೋಕದಲ್ಲಿ ನೀವೆಲ್ಲಾ ವಿಹಾರ ಮಾಡಿದ್ದು ನನಗೆ ಖುಷಿಕೊಟ್ಟಿತು, ಬನ್ನಿ ನಂತರ ನಮ್ಮ ಪಯಣ ಮುಂದುವರೆಸೋಣ , ಯಕ್ಷಗಾನ ನೋಟ ನೋಡಿ, ದೇವಿಸರಕ್ಕೆ ಬಂದು ನಿದ್ರಾದೇವಿಗೆ ಶರಣಾದೆ, ಎಚ್ಚರವಾದಾಗ ಹೊರಗಡೆ ಹಕ್ಕಿಗಳು ಸುಪ್ರಭಾತ ಹಾಡುತ್ತಿದ್ದವು, ಹಾಗೆ ಮನೆಯ ಹೊರಗೆ ಬಂದು ಶುದ್ಧ ಗಾಳಿಯನ್ನು ಒಮ್ಮೆ ಉಸಿರ ಒಳಗೆ ಎಳೆದುಕೊಂಡೆ , ಮನಸು ಉತ್ಸಾಹ ಗೊಂಡಿತು, ಕಣ್ಣುಗಳು ಸುತ್ತಲ ಪರಿಸರವನ್ನು ಕಂಡು ಬೆರಗಾದವು. ಮನೆಯ ಹೊರಗೆ ಬಂದ ತಕ್ಷಣ ಮನೆಯ ಮುಂದೆ ನಗುತ್ತಿದ್ದ ಹೂ ಗಿಡಗಳು, ಎತ್ತರಕ್ಕೆ ಬೆಳೆದು ತಂಗಾಳಿಗೆ ಓಲಾಡುತ್ತಿದ್ದ ಅಡಿಕೆ ಹಾಗು ತೆಂಗಿನ ಮರಗಳು . ಎದುರುಗಡೆ ಕೊಟ್ಟಿಗೆ ಮನೆಯಲ್ಲಿ ಹಾಲು ಕರೆಯುತ್ತಿರುವ ಶಬ್ದ ಬಂದು ಅಲ್ಲಿಗೆ ನಡೆದೇ ,
ಹಾಲು ಕರೆಯೋಣ ಬನ್ನಿ |
ಚುರ್ ಚುರ್ ಎಂದು ಹಾಲು ಕರೆಯುವ ಶಬ್ದ ಕೇಳಿ ಎಷ್ಟೋ ವರ್ಷ ಆಗಿದ್ದವು , ಕುತೂಹಲದಿಂದ ಒಳಹೊಕ್ಕೆ , ಪ್ರೀತಿಯ ನಾಗೇಶಣ್ಣ ಒಂದು ಕೆಂದ ಹಸುವಿನಿಂದ ಹಾಲು ಕರೆಯುತ್ತಾ ಇದ್ದರು, ಬಾಲ್ಯದ ನೆನಪು ಮೂಡಿಬಂತು , ಚಿಕ್ಕವಯಸ್ಸಿನಲ್ಲಿ ನಮ್ಮ ಹಳ್ಳಿಯ ಮನೆಯ ಕೊಟ್ಟಿಗೆಯಲ್ಲಿ ಹಸುವಿನ ಹಾಲನ್ನು ನಾನೇ ಕರೆದು ಎರಡು ಲೋಟ ನೊರೆ ಹಾಲನ್ನು ಹಾಗೆ ಕುಡಿಯುತ್ತಿದ್ದ ದಿನಗಳು ನೆನಪಿಗೆ ಬಂದು ಖುಶಿಯಾಯಿತು. ಈ ಅಣ್ಣ ನಮ್ಮೊಡನೆ ಮಾತನಾಡುತ್ತಾ ತುಂಟತನ ಮಾಡುತ್ತಾ ಹಾಲು ಕರೆಯುತ್ತಿದ್ದಾರೆ , ಆ ಮಾತಿಗೆ ಹಸುವೂ ಸಹ ಉಲ್ಲಾಸ ಗೊಂಡು ಆಸಕ್ತಿಯಿಂದ ಕೇಳುತ್ತಾ ಹಾಲು ಕೊಡುತ್ತಿತ್ತು . ಸಾಮಾನ್ಯವಾಗಿ ಹಸು ಹಾಲನ್ನು ಕರೆಯುವಾಗ ಅಪರಿಚಿತರು ಬಂದರೆ ಹಾಲು ಕೊಡಲು ತಂಟೆ ಮಾಡುತ್ತವೆ , ಆದರೆ ಈ ಹಸು ಮಾತ್ರ ಅಂತಹ ತಂಟೆ ಮಾಡದೆ ನೆಮ್ಮದಿಯಿಂದ ಕ್ಯಾಮಾರಾಗೆ ಪೋಸ್ ಕೊಟ್ಟಿತು .
ಕೊಟ್ಟಿಗೆಯಲ್ಲಿ ಅಣ್ಣಾ ತಮ್ಮಂದಿರ ಜುಗಲ್ ಬಂದಿ |
ಮುಂದೆ ನಮ್ಮ ಜೊತೆ ಪ್ರಕಾಶಣ್ಣನ ಮಾತಿನ ಜುಗಲ್ ಬಂದಿ ಸಹ ಇತ್ತು, ಅಣ್ಣಾ ತಮ್ಮಂದಿರು ಗೆಳೆಯರಂತೆ ಮಾತು ಕಥೆ ನಡೆಸುತ್ತಾ , ನಗುತ್ತಾ, ತುಂಟಾಟ ಮಾಡುತ್ತಾ , ಇರಲು ಕೊಟ್ಟಿಗೆಯಲ್ಲಿ ಮಾತಿನ ಜುಗಲ್ಬಂದಿ ನಡೆದಿತ್ತು, , ಬಾಲಣ್ಣ ಅಣ್ಣನ ಹೊಸ ಅನ್ವೇಷಣೆ ನೋಡೋಣ ಬನ್ನಿ ಅಂತಾ ಪ್ರಕಾಶ್ ಹೆಗ್ಡೆ ಹೇಳಿದರು , ನನಗೂ ನೋಡುವ ಆಸೆ ಸರಿ ನಾಗೇಶಣ್ಣ ಬನ್ನಿ ತೋರಿಸಿ ಅಂತಾ ಕೋರಿದೆ . ಹಾಲು ಕರೆದು ಮುಗಿಸಿ ತಮ್ಮ ಹೊಸ ಅನ್ವೇಷಣೆ ತೋರಿಸಲು ನಮ್ಮ ಜೊತೆ ಬಂದರು .
ನಾಗೇಶಣ್ಣ ನ ಅನ್ವೇಷಣೆ |
ಸಾಮಾನ್ಯವಾಗಿ ಅಡಿಕೆತೋಟಕ್ಕೆ ಕೋತಿಗಳ ಹಾವಳಿ ಬಹಳ ಇರುತ್ತೆ, ಹಿಂಡು ಹಿಂಡಾಗಿ ಬರುವ ಈ ಗುಂಪು ಅಡಿಕೆ ಮರಕ್ಕೆ ದಾಳಿ ಮಾಡಿ ಅಡಿಕೆ ಫಸಲನ್ನು ನಾಶ ಮಾಡುತ್ತವೆ . ಅವನ್ನು ದೂರ ಇಡಲು ಕವಣೆಯಲ್ಲಿ ಕಲ್ಲು ಹೊಡೆಯುವುದು ವಾಡಿಕೆ . ಆದರೆ ಅಡಿಕೆ ಮರ ಬಹಳ ಎತ್ತರ ಬೆಳೆಯುವ ಕಾರಣ , ಕವಣೆಯ ಕಲ್ಲು ಕೋತಿಗಳಿಗೆ ತಾಗದೆ ಅವುಗಳ ಹಾವಳಿ ನಿಯಂತ್ರಣ ಮಾಡಲು ಅವಕಾಶ ಆಗುವುದಿಲ್ಲ , ಈ ಎಲ್ಲಾ ಅಂಶಗಳನ್ನು ನೆನಪಿಟ್ಟು ಕೊಂಡು , ರೂಪಿಸಿದ ಒಂದು ಹೊಸ ಅನ್ವೇಷಣೆ ಈ ಹೊಸ ಗನ್ನು . ಮೊದಲು ಇದನ್ನು ನೋಡಿದಾಗ ನನ್ನ ಮನಸಿನಲ್ಲಿ ಇದರ ಬಗ್ಗೆ ಅಂತಹ ಅಚ್ಚರಿ ಮೂಡಲಿಲ್ಲ, ಎರಡು ರಿಪೀಸ್ ಪಟ್ಟಿ , ಕವಣೆ ತರಹ ಕಲ್ಲು ಹೊಡೆಯಲು ಒಂದು ರಬ್ಬರ್ ಟ್ಯೂಬು , ಜೊತೆಗೆ ಒಂದು ಮರದ ಟ್ರಿಗ್ಗರ್ರು ಇವನ್ನು ನೋಡಿ ಇದೇನು ಮಾಡಬಲ್ಲದು ಸುಮ್ನೆ ಬೊಗಳೆ ಅಂದು ಕೊಂಡೆ .
ನಾಗೇಶಣ್ಣ ನ ಗನ್ನಿನ ಪರೀಕ್ಷೆ |
ಬನ್ನಿ ಬಾಲಣ್ಣ ಒಮ್ಮೆ ಇದರಲ್ಲಿ ಹೊಡೆಯೋರಂತೆ ಅಂದ್ರೂ ಆದರೆ ಅಣ್ಣಾ ಇದರ ಬಗೆ ನನಗೆ ಗೊತ್ತಿಲ್ಲಾ, ಒಮ್ಮೆ ನೀವು ತೋರಿಸಿ ಅಂದೇ , ಒಮ್ಮೆ ಗುರಿ ಇಟ್ಟು ತಮ್ಮ ಗನ್ನಿನಲ್ಲಿ ಒಂದು ಕಲ್ಲನ್ನು ಒಗೆದರು , ರೊಯ್ ಅಂತಾ ಬಿರುಸಾಗಿ ಹೋರಟ ಆ ಕಲ್ಲು ಅಡಿಕೆ ಮರದ ತುದಿಯನ್ನು ತಲುಪಿ ಪಟಾರ್ ಅಂತ ಶಬ್ಧ ಮಾಡಿತು , ನನಗೂ ಇದರಲ್ಲಿ ಏನೋ ವಿಶೇಷ ಇದೆ ಅಂತಾ ಅನ್ನಿಸಿ , ಅಣ್ಣಾ ಕೊಡಿ ನಾನೂ ಒಮ್ಮೆ ಪ್ರಯತ್ನಿಸುವೆ ಅಂದೇ , ನಾಗೇಶಣ್ಣ ನನಗೆ ಹೆಮ್ಮಯಿಂದ ತಮ್ಮ ಗನ್ನನ್ನು ನೀಡಿ ಉಪಯೋಗಿಸುವ ವಿಧಾನ ಹೇಳಿಕೊಟ್ರು . ಟ್ರಿಗ್ಗರ್ ಎಳೆದೆ ಅಬ್ಬಬ್ಬ ಅಚ್ಚರಿ ಬಹಳ ಎತ್ತರ ಚಿಮ್ಮಿತು ಸುಮಾರು ೫೦ ಗ್ರಾಂ ತೂಕದ ಕಲ್ಲು, ಇವರ ಅನ್ವೇಷಣೆ ಬಗ್ಗೆ ಹೆಮ್ಮೆ ಮೂಡಿತು .
ನಾಗೇಶಣ್ಣ ನ ಗನ್ನು ಭಾರಿ ಫೇಮಸ್ಸು ಸಾರ್ |
ಅಣ್ಣಾ ಇದರ ತಯಾರಿಕೆ ಹೇಗೆ ಅಂದೇ , ಅಯ್ಯೋ ಬಾಲಣ್ಣ , ಅದೊಂದು ಕಥೆ, ನಮ್ಮ ಅಡಿಕೆ ತೋಟಕ್ಕೆ ಕೋತಿಗಳ ಹಾವಳಿ ಜಾಸ್ತಿ , ಅವುಗಳನ್ನು ಮೊದಲು ಕೈಯಲ್ಲಿ ಕಲ್ಲು ಹೊಡೆದು ಓಡಿಸುತ್ತಿದ್ದೆವು , ನಂತರ ಕ್ಯಾಟರ್ ಬಿಲ್ಲು ನಿಂದ ಕಲ್ಲು ಹೊಡೆಯುತ್ತಿದ್ದೆವು , ಊ ಹೂ ಕೆಲವೊಮ್ಮೆ ಕ್ಯಾಟರ್ ಬಿಲ್ಲಿನ ರಬ್ಬರ್ ಕಿತ್ತು ಹೋಗಿ ಅದು ಅಷ್ಟಾಗಿ ಬಾಳಿಕೆ ಬರುತ್ತಿರಲಿಲ್ಲ , ನಂತರ ಕವಣೆ ಬೀಸುತ್ತಿದ್ದೆವು , ಅದರಲ್ಲೂ ಮಂಗಗಳ ಹಾವಳಿ ನಿಯಂತ್ರಣ ಕಷ್ಟಾ ಆಯ್ತು, ಹಾಗಾಗಿ ಮನೆಯಲ್ಲಿ ಸುಮ್ನೆ ಕೂರೋ ಬದಲಾಗಿ ಏನಾದರೂ ಮಾಡುವ ಯೋಚನೆ ಬಂತು, ಮರದ ಪಟ್ಟಿ ಏನೋ ನಮ್ಮಲ್ಲೇ ಸಿದ್ದ ಆಗುತ್ತೆ, ಆದರೆ ಕಲ್ಲು ಬೀಸಲು ಹಾಗು ಅದಕ್ಕೆ ವೇಗ ನೀಡಲು ಬಳಸುವ ರಬ್ಬರ್ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಂಡೆ , ಮೊದಲು ಸೈಕಲ್ ರಬ್ಬರ್ ಟ್ಯೂಬ್ ಬಳಸಿದೆ , ಬಾಳಿಕೆ ಬರಲಿಲ್ಲ, ಸ್ಕೂಟರ್ ಮುಂತಾದ ಟ್ಯೂಬ್ ರಬ್ಬರ್ ಬಳಸಿದೆ ಉಪಯೋಗ ಆಗಲಿಲ್ಲ, ಒಮ್ಮೆ ಯಾವುದೋ ಶಿರಸಿಯಲ್ಲಿ ಕೆ .ಎಸ್ . ಹೆಗ್ಡೆ ಅವರ ದವಾಖಾನೆಗೆ ಹೋಗಿದ್ದಾಗ ಡಾಕ್ಟರ ಕುತ್ತಿಗೆಯಲ್ಲಿದ್ದ ಸ್ಟೆಥಾಸ್ಕೊಪ್ ಕಣ್ಣಿಗೆ ಬಿತ್ತು , ಅದರಲ್ಲಿ ಬಳಸಿರುವ ರಬ್ಬರ್ ಟ್ಯೂಬ್ ಬಳಸಿದರೆ ಹೇಗೆ ಎಂಬ ಆಲೋಚನೆ ಬಂತು, ಅದು ಎಲ್ಲಿ ಸಿಗುತ್ತೆ ಅಂತಾ ಗೊತ್ತಿರಲಿಲ್ಲ, ಡಾಕ್ಟರ್ ಅವರಲ್ಲಿ ವಿಚಾರಿಸಿದೇ , ಅವರು ನನ್ನನ್ನು ವಿಚಿತ್ರವಾಗಿ ನೋಡಿದರು , ಬಹುಷಃ ತಮ್ಮ ಘನತೆಯ ಈ ಸ್ಟೆತಾಸ್ಕೊಪಿನ ರಬ್ಬರ್ ಟ್ಯೂಬನ್ನು ಯಾವುದಕ್ಕೆ ಉಪಯೋಗಿಸಿ ಮಾನ ಕಳೆಯುವರೋ ಅಂದುಕೊಂಡಿರಬೇಕು
,ಆದರೆ ನಾನು ಆದರೆ ಅದು ಸಿಗುವ ಜಾಗಕ್ಕೆ ಹೋಗಿ ಹಲವು ಕಡೆ ವಿಚಾರಿಸಿ ತಂದಿದ್ದಾಯ್ತು, ಹಾಗೂ ಹೀಗೂ ನನ್ನ ತಯಾರಿಕೆ ಮೊದಲ ಪ್ರಯತ್ನ ಸಿದ್ದವಾಯ್ತು , ನಂತರ ಇದರ ಪ್ರಯೋಗ , ಮೊದಲ ಅಡೆತಡೆ ನಿವಾರಣೆ ಹೀಗೆ ನಡೆದು ಅಂತಿಮವಾಗಿ ಈ ರೂಪ ಪಡೆದ ಗನ್ನು ಸಿದ್ದ ಆಗಿದೆ ಬಾಲಣ್ಣ ಅಂದ್ರೂ .
ಡಾಕ್ಟರ ಸ್ಟೆತಾಸ್ಕೊಪಿಗೂ ನಮ್ ನಾಗೇಶಣ್ಣ ನ ಗನ್ನಿಗೂ ಕನೆಕ್ಸನ್ ಐತೇ |
ಅಲ್ಲಾ ನಾಗೇಶಣ್ಣ , ಡಾಕ್ಟರ ಸ್ಟೆತಾಸ್ಕೊಪಿಗೂ ನಿಮ್ಮ ಗನ್ನಿನ ತಯಾರಿಕೆಗೂ ಒಂಥರಾ ವಿಚಿತ್ರ ಕನೆಕ್ಸನ್ ಆಲ್ವಾ , ಅಂತಾ ಚುಡಾಯಿಸಿದೆ , ನಗು ನಗುತ್ತಾ , ಬಾಲಣ್ಣ ಈ ರಬ್ಬರ್ ಟ್ಯೂಬ್ ನೋಡಿ ಎಷ್ಟು ಎಳೆದರೂ ಇದರ ಶಕ್ತಿ ಕುಂದೊದಿಲ್ಲಾ , ಆದರೆ ಬೇರೆಯವದರಲ್ಲಿ ಇಂತಹ ಶಕ್ತಿ ಇರೋದಿಲ್ಲಾ, ಮೊದ ಮೊದಲು ನಾನು ಇಂತಹ ಟ್ಯೂಬ್ ಗಳನ್ನೂ ಹುಡುಕುತ್ತಾ ಶಿರಸಿಯ ಪೇಟೆಯಲ್ಲಿ ಅಲೆದಿದ್ದೇನೆ , ಯಾವುದೋ ಅಂಗಡಿಯಲ್ಲಿ ಇಂತಹ ರಬ್ಬರ್ ಟ್ಯೂಬನ್ನು ಖರೀದಿ ಮಾಡಿ ತಂದು ನಡೆಸಿದ ಪ್ರಯೋಗ ಇದು ಎಂದು ನನ್ನ ನೋಡಿ ನಕ್ಕರು. ಈ ಮನುಷ್ಯಾ ಸಾಮಾನ್ಯಾ ಅಲ್ಲಾ ಅಂತಾ ಹೆಮ್ಮೆ ಮೂಡಿತು, ಮೊದಲು ಸ್ವಂತಕ್ಕೆ ಉಪಯೋಗಿಸುತ್ತಿದ್ದ ಈ ಗನ್ನಿನ ಮಹಿಮೆ ಹರಡಲು ಹೆಚ್ಚು ಕಾಲ ಬೇಕಾಗಲಿಲ್ಲ , ನಮ್ಮ ತೋಟದಲ್ಲಿ ಮಂಗಗಳ ಹಾವಳಿ ಕಡಿಮೆ ಆಯ್ತು , ಸುಮಾರು ೫೦ ರಿಂದ ೧೦೦ ಗ್ರಾಂ ಕಲ್ಲುಗಳು ಮಂಗ ಗಳಿಗೆ ತಗುಲಿ ಪೆಟ್ಟು ಬಿದ್ದು ಅವು ಈ ಕಡೆ ತಲೆ ಹಾಕೋದೆ ಬಿಟ್ಟವು , ನಂತರ ಇದನ್ನು ತಿಳಿದ ಕೆಲವರು ಕುತೂಹಲಕ್ಕೆ ಬಂದು ನೋಡಿ ಇದರ ಮಹತ್ವ ಅರಿತು, ತಮಗೂ ಮಾಡಿಕೊಡಲು ಇವರಿಗೆ ದಂಬಾಲು ಬಿದ್ದರು , ಹೀಗೆ ನಾಗೇಶಣ್ಣ ನ ಗನ್ನಿಗೆ ಬೇಡಿಕೆ ಹೆಚ್ಚಾಯ್ತು . ಬಾಯಿಂದ ಬಾಯಿಗೆ ಹರಡಿ, ಕೆಲವು ಮಾಧ್ಯಮದವರು ಇದನ್ನು ಗುರುತಿಸಿ ವರದಿ ಮಾಡಿದರು , ಈ ಗನ್ನಿನ ಮಹಿಮೆ ತಿಳಿದ ಜನ ಕರ್ನಾಟಕದ ಮೂಲೆ ಮೂಲೆಯಿಂದ ನಾಗೇಶಣ್ಣನ ಗನ್ನಿಗೆ ಬೇಡಿಕೆ ಇಡಲು ಶುರು ಮಾಡಿದ್ದಾರೆ . ಇದನ್ನು ಉಪಯೋಗಿಸಿದವರೆಲ್ಲರೂ ಇದರಿಂದ ಮಂಗನ ಹಾವಳಿ ಕಡಿಮೆ ಆದ ಬಗ್ಗೆ ಹೇಳುತ್ತಾರೆ, ಮಂಗನನ್ನು ಸಾಯಿಸದೇ ಹೆದರಿಸಿ ಓಡಿಸುವುದು ಒಳ್ಳೆಯದಲ್ವೆ...., ಹಾಗಾಗಿ ಈಗ ನಮ್ಮ ನಾಗೇಶಣ್ಣ ತಿಂಗಳಿಗೆ ಕನಿಷ್ಠ ಐವತ್ತು ಗನ್ನು ತಯಾರಿಸುವ ಹಂತ ತಲುಪಿದ್ದಾರೆ . ನಾಗೇಶಣ್ಣ ಮೊದಲು ನಿಮ್ಮ ಗನ್ನಿಗೆ ಪೇಟೆಂಟ್ ಮಾಡಿಸಿಬಿಡಿ , ಇಲ್ಲದಿದ್ರೆ ಮುಂದೆ ಯಾರಾದ್ರೂ ಈ ಗನ್ನು ನಮ್ಮದೂ ಅಂತಾ ಪೇಟೆಂಟ್ ಮಾಡಿಸಿ ನಿಮ್ಮ ಶ್ರಮಕ್ಕೆ ಕುತ್ತು ತಂದಾರೂ ಅಂದೇ . ಆದ್ರೆ ಕಪಟ ಅರಿಯದ ನಾಗೇಶಣ್ಣ ಸುಮ್ನೇ ನಕ್ಕೂ , ಬನ್ನಿ ಬಾಲಣ್ಣ ತಿಂಡಿ ತಿನ್ನುವ ಅಂತಾ ಕರೆದೊಯ್ದರು .
ಆಹಾ ಅತ್ತಿಗೆ ಮಾಡಿದ ಇಡ್ಲೀ ಬಹಳ ರುಚೀರಿ |
ಅಡಿಗೆ ಕೋಣೆಯಲ್ಲಿ ವನಿತಾ ಅತ್ತಿಗೆ ಮಾಡಿದ ಬಿಸಿ ಬಿಸಿ ಇಡ್ಲೀ ಕೈ ಬೀಸಿ ಕರೆಯುತ್ತಿತ್ತು. ನಾಗೇಶಣ್ಣ ಹಾಸ್ಯ , ವನಿತಾ ಅತ್ತಿಗೆಯ ಪ್ರೀತಿ , ಪ್ರಕಾಶಣ್ಣನ ತುಂಟತನ ಎಲ್ಲಾ ಸೇರಿ ರುಚಿಯಾದ ಇಡ್ಲಿಗಳು ಸಲೀಸಾಗಿ ಹೊಟ್ಟೆ ಸೇರಿ ಸದ್ಗತಿ ಪದೆಯುತ್ತಿದ್ದವು. ....!
9 comments:
ನಮಸ್ತೆ ಸರ್..ಚಂದದ ಲೇಖನ..
ಈ ಗನ್ನಿನ ಬಗ್ಗೆ ಗೊತ್ತಿರಲಿಲ್ಲ...ನಮ್ಮದೇನಿದ್ದರೂ ಚಿಟಿಬಿಲ್ಲು,ಜವಟೆ...ಧನ್ಯವಾದಗಳು :) :)..ಕೇಳಿ ನೋಡ್ತೀನಿ ..
ಬಾಲಣ್ಣಾ...
ಮೊನ್ನೆ ನಾನೂ ಊರಿಗೆ ಹೋಗಿದ್ದೆ ..
ನೀವು ಅಲ್ಲಿಂದ ಬಂದ ಮೇಲೆ...
ನನ್ನಣ್ಣ.. ಅತ್ತಿಗೆ.. ನನ್ನ ಅಮ್ಮನವರಿಗೆಲ್ಲ ನಿಮ್ಮದೇ ಸುದ್ಧಿ...
ಅಮ್ಮ ನಿಮಗೆ ತಮ್ಮ ಆಶೀರ್ವಾದ ತಿಳಿಸಿದ್ದಾರೆ...
ಬಾಲಣ್ಣಾ.. ನಿಮಗೆ ಪ್ರೀತಿಯ ನಮನಗಳು...
Sooper balu Sir :) en chenda bardiddeeri....
ಆಪ್ತವಾದ ಬರಹ. ಖುಷಿ ಕೊಟ್ಟಿತು
ತುಂಬಾ ತುಂಬಾ ತುಂಬಾ ಉಪಯುಕ್ತ ಮಾಹಿತಿ. ನಿಮ್ಮ ಈ ಲೇಖನದ ಉಪಯುಕ್ತತೆ ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ!!!!
ಈ ನಡುವೆ ಬ್ಲಾಗಿಂದ ಮರೆಯಾದಿರಲ್ಲ ಎನ್ನುವ ಬೇಸರವಿತ್ತು. welcome back.
Titleಗೆ ಮೊದಲ ಬಹುಮಾನ!
ಹಸುವಿನ ಪಕ್ಕದಲ್ಲಿ ಗೋ ಹೃದಯದ Prakash Hegde :)
ನಾಗೇಶಣ್ಣನ ಅನ್ವೇಷಣೆ ಗಮ್ಮತ್ತಾಗಿದೆ. ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.
" ಡಾಕ್ಟರ ಸ್ಟೆತಾಸ್ಕೊಪಿಗೂ ನಮ್ ನಾಗೇಶಣ್ಣ ನ ಗನ್ನಿಗೂ ಕನೆಕ್ಸನ್ ಐತೇ " good caption.
shared at:
https://www.facebook.com/photo.php?fbid=602047969839656&set=gm.483794418371780&type=1&theater
ಎಲ್ಲರೂ ನಾಗೇಶಣ್ಣ ನಂತೆ ಯೋಚಿಸಿದರೆ ಏನೆಲ್ಲಾ ಆವಿಷ್ಕಾರ ಮಾಡಬಹುದು.. ಉಪಯುಕ್ತ ಕುತೂಹಲಕಾರಿ ಲೇಖನ
ಆರಂಭಿಕ ಶಾಲಾದಿನಗಳಲ್ಲಿ ಹಿಂದಿ ಭಾಷೆ ಕಬ್ಬಿಣದ ಕಡಲೆಯಾಗಿದ್ದಾಗ.. ನಮ್ಮ ಮಾಸ್ತರು ಹೇಳಿಕೊಟ್ಟ ಪಾಠ.. ಪ್ರಶ್ನೆಯಲ್ಲಿಯೇ ಅರ್ಧ ಉತ್ತರ ಅಡಗಿರುತ್ತದೆ.. ಎಂದು
ನಮ್ಮೆಲ್ಲರ ಪ್ರೀತಿಯ ನಾಗೇಶಣ್ಣ ಅವರ ಅನ್ವೇಷಣೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದಾಗಲೇ, ಹಾಗೆ ಪ್ರಕಾಶಣ್ಣನ ಮೂಲಕ ತಿಳಿದಾಗಲೇ ಅದರ ಬಗ್ಗೆ ಕುತೂಹಲವಿತ್ತು.
ಎಂಥಹ ಇತಿಹಾಸವನ್ನು ಬಗೆದು ತೆಗೆಯುವ ನೀವು.. ಈ ಹೊಸಮಾದರಿ ಗನ್ನಿನ ಬಗ್ಗೆ ಬರೆದಾಗ ಅದನ್ನು ಓದಿದಾಗ ಅಬ್ಬಾ ಎಷ್ಟು ಕ್ಲಿಷ್ಣ ಅನ್ನಿಸುವ ಸಮಸ್ಯೆಗೆ ಅಷ್ಟೇ ಸುಲಭವಾದ ಆದರೆ ಸಾಧನೆ ಎನಿಸುವ ಪರಿಕರರಗಳನ್ನು ಸಿದ್ಧಮಾಡಿಕೊಂಡು ತೊಂದರೆಯನ್ನು ಕೂಡ ಸಾಧನೆಗೆ ಮೆಟ್ಟಿಲು ಮಾಡಿಕೊಂಡ ಈ ಸಾಧಕರ ಪರಿಚಯ ನಿಮ್ಮಿಂದ ಬಂದಿದ್ದು ಸೊಗಸಾಗಿದೆ.
ಅವರ ಸಾಧನೆಯ ಪ್ರತಿ ಮೆಟ್ಟಿಲುಗಳನ್ನು ಹತ್ತಿಸಿ ತೋರಿಸಿದ ನಿಮ್ಮ ಬರವಣಿಗೆ ಅಡಿಕೆ ಮರಕ್ಕಿಂತ ಎತ್ತರ.. ನಾಗೇಶಣ್ಣ ಅವರ ಸಾಧನೆ ಮುಗಿಲಿಗೂ ಮಿಗಿಲು..
ನಾಗೇಶಣ್ಣ ಅವರಿಗೆ ಈ ಬರಹದ ಮೂಲಕ ಅಭಿನಂದನೆಗಳು
ಸೂಪರ್ ಬರಹ ಸರ್ಜಿ
ನಾಗೇಶಣ್ಣನ ಆವಿಷ್ಕಾರದ ಬಗ್ಗೆ ಓದಿದ್ದೆ.. ಅವರ ವ್ಯಕ್ತಿತ್ವವೇ ಅಂತದ್ದು... ಸುಮ್ಮನೇ ಕೂರುವ ಜಾಯಮಾನವೇ ಅವರದಲ್ಲ.. ಉತ್ತಮ ಬರಹ ಸರ್..
Post a Comment