ವರದ ಮೂಲ ಕ್ಷೇತ್ರ |
ಇಕ್ಕೆರಿಯ ಇತಿಹಾಸದ ಮಡಿಲಿಂದ ನಮ್ಮ ಪಯಣ ಮುಂದುವರೆಯಿತು, ಇನ್ನೇನು ಮುಖ್ಯ ರಸ್ತೆಯಲ್ಲಿ ಸಾಗರಕ್ಕೆ ತೆರಳಲು ಎಡಕ್ಕೆ ತಿರುಗಬೇಕು ಅಷ್ಟರಲ್ಲಿ "ವರದಾಮೂಲ" ಆರು ಕಿ. ಮಿ . ಅಂತಾ ಬೋರ್ಡ್ ಕಾಣಿಸಿತು, ಪ್ರಕಾಶಣ್ಣ ಅಂದೇ , ಅವರು ಬಾಲಣ್ಣ ಆಗ್ಲಿ ಅಣ್ಣಾ ಅಲ್ಲಿಗೆ ಹೋಗೋಣ ಅಂದ್ರೂ ಪಯಣಕ್ಕೆ ಅನಿರೀಕ್ಷಿತ ತಿರುವು, ನಮ್ಮ ಕಾರು ವರದಾ ಮೂಲಕ್ಕೆ ಹೋಗುತ್ತಿತ್ತು,
ಕೆಲವೊಮ್ಮೆ ಹಾಗೆ ಅದೃಷ್ಟ ಇದ್ದರೆ ಅನಿರೀಕ್ಷಿತ ಸ್ಥಳಗಳು ಪರಿಚಯವಾಗುತ್ತವೆ , ಈ ಪ್ರದೇಶದ ಬಗ್ಗೆ ಕೇಳಿದ್ದೆನಾದರೂ ಒಮ್ಮೆಯೂ ನೋಡಿರಲಿಲ್ಲ, ಕಾವೇರಿ ಉಗಮ ಸ್ಥಾನ ಕೊಡಗಿನ ತಲಕಾವೇರಿ , ಹೇಮಾವತಿ ಉಗಮ ಸ್ಥಳ ಚಿಕ್ಕಮಗಳೂರಿನ ಜಾವಳಿ ಇವಿಗಳನ್ನು ನೋಡಿದ್ದ ನನಗೆ ಮತ್ತೊಂದು ನದಿಯ ಉಗಮ ಸ್ಥಾನ ನೋಡುವ ಅವಕಾಶ ಸಿಕ್ಕಿತು. ಪ್ರಕಾಶಣ್ಣ ಈ ಪ್ರದೇಶದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು,
ವರದಾ ನದಿ ಇಲ್ಲಿನ ಭಾಗದ ಜನರ ಜೀವನಧಿ , ಹಲವು ಪವಿತ್ರ ಕಾರ್ಯಗಳನ್ನು ಇಲ್ಲಿನ ಜನ ವರದ ಮೂಲದಲ್ಲಿ ಮಾಡುತ್ತಾರೆ, ವರದಾಮೂಲ ಸಾಗರ ಪಟ್ಟಣದಿಂದ ಆರು ಕಿಲೋಮೀಟರ್ ಇದೆ , ವರದ ನದಿಯ ಹರಿವಿನ ಬಗ್ಗೆ ಆಸಕ್ತಿ ಬಂದು ಹುಡುಕುತ್ತಾ ಹೋದರೆ ನಿಮಗೆ ಹಲವು ಆಸಕ್ತಿದಾಯಕ ವಿಚಾರಗಳು ತಿಳಿಯುತ್ತವೆ ,
ವರದಾಮೂಲದ ಸೊಬಗು |
ವರದಾಮೂಲದ ಒಂದು ನೋಟ |
ಬನ್ನಿ ವರದೆಯ ಜೊತೆ ತೆರಳೋಣ ಅವಳು ಸಾಗುವ ಹಾದಿಯಲ್ಲಿ , ವರದ ನದಿಯು ವರದ ಮೂಲದಲ್ಲಿ ಜನಿಸಿ , ಸಾಗರ ಪಟ್ಟಣ , ದಾಟಿ ಬಸವನ ಹೊಳೆ ಆಣೆಕಟ್ಟು ತಲುಪುತ್ತದೆ, ನೆನಪಿರಲಿ ಸಾಗರ ಪಟ್ಟಣದ ಜನ ಕುಡಿಯುವುದು ವರದಾ ನದಿಯ ನೀರನ್ನು , ಮುಂದೆ ಪಯಣ ಬೆಳಸುವ ವರದ ನದಿ ಕೆಳದಿಯ ಸಮೀಪ ಸಾಗುತ್ತದೆ ಅಲ್ಲಿ ವರದಾ ನದಿಗೆ ಮತ್ತೊಂದು ಉಪನದಿ ಸೇರಿಕೊಳ್ಳುತ್ತದೆ [ ಹೆಸರು ತಿಳಿದಿಲ್ಲ ] ನಂತರ ಸಾಗರ ತಾಲೂಕಿನ ಬಾಳೆಕೊಪ್ಪ ಸಮೀಪ ಮತ್ತೊಂದು ಉಪನದಿ [ ಹೆಸರು ಗೊತ್ತಿಲ್ಲ ] ವರದಾನದಿಯ ಒಡಲನ್ನು ಸೇರುತ್ತದೆ . ನಂತರ ಸಿದ್ದಾಪುರ ಸೊರಬ ರಸ್ತೆಯಲ್ಲಿ ದರುಶನ ನೀಡುವ ವರದಾ ನದಿ ಚಿಕ್ಕಮಕೊಪ್ಪ ಬಳಿ ಸೊರಬ ಚಂದ್ರಗುತ್ತಿ ರಸ್ತೆಯಲ್ಲಿ ಕಾಣಸಿಗುತ್ತದೆ . ಮುಂದೆ ನಮಗೆ ಕಾಣ ಸಿಗುವುದು ಚಿಕ್ಕದುಗಲಿ ಎಂಬ ಹಳ್ಳಿಯ ಬಳಿ ಚಂದ್ರಗುತ್ತಿ ಬನವಾಸಿ ರಸ್ತೆಯಲ್ಲಿ . ನಂತರ ಹಿರೆಕಲಗೋಡು ಎಂಬ ಹಳ್ಳಿಯ ಸಮೀಪ ಕಬ್ಬೆ ಎಂಬಲ್ಲಿ ಹುಟ್ಟಿಬಂದ ಮತ್ತೊಂದು ಉಪನದಿ ವರದಾ ನದಿಯನ್ನು ಸೇರುತ್ತದೆ , ಇಲ್ಲಿಂದ ಉತ್ತರ ಕರ್ನಾಟಕ ಜಿಲ್ಲೆ ಪ್ರವೇಶ ಪಡೆದ ವರದಾ ನದಿ, ಬನವಾಸಿಯ ಇತಿಹಾಸದಲ್ಲಿ ಸ್ಥಾನ ಪಡೆದಿದೆ . ಬನವಾಸಿಯನ್ನು ಜಲದುರ್ಗ ಎಂದು ಕರೆಯುತ್ತಿದ್ದ ಕೀರ್ತಿಯಲ್ಲಿ ವರದಾ ನದಿಯ ಪಾತ್ರವಿದೆ . ಬನವಾಸಿಯನ್ನು ಪ್ರೀತಿಯಿಂದ ಮೂರು ದಿಕ್ಕಿನಲ್ಲಿ ಅಪ್ಪಿಕೊಂಡು ಮುದ್ದುಮಾಡಿ ಮಧುಕೆಶ್ವರನ ದರುಶನ ಪಡೆದು ಪಾವನ ಹೊಂದಿ ಜಡೆಮಾದಾಪುರ , ಉತ್ತರ ಕನ್ನಡ ಜಿಲ್ಲೆಯ ಚಾಗತ್ತೂರು ಗ್ರಾಮದ ಹತ್ತಿರ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಪ್ರವೇಶ ಪಡೆಯುತ್ತಾಳೆ , ನಂತರ ವರದಿಕೊಪ್ಪ , ದಾಟಿ ಲಕ್ಕವಳ್ಳಿ ಸಮೀಪ ದಂಡಾವತಿ ನದಿಯನ್ನು ತನ್ನ ಒಡಲೊಳಗೆ ಸೆಳೆದುಕೊಳ್ಳುತ್ತಾಳೆ. ಇಲ್ಲಿಂದ ಹಾವೇರಿ ಜಿಲ್ಲೆ ಪ್ರವೇಶ ಮಾಡಿ ಹಾನಗಲ್ ತಾಲೂಕಿನ ಮಾಕರವಳ್ಳಿ ಗ್ರಾಮ , ಇಲ್ಲಿ ವರದನನದಿ ಶಿವಮೊಗ್ಗ ಹಾಗು ಹಾವೇರಿ ಜಿಲ್ಲೆಯ ಗಡಿಯಂತೆ ಸಾಗುತ್ತದೆ , ಈ ನದಿಯ ಪಥವನ್ನೇ ಎರಡೂ ಜಿಲ್ಲೆಗಳಿಗೆ ಗಡಿಯನ್ನಾಗಿ ಗುರುತಿಸಲಾಗುತ್ತದೆ . ಶಿವಮೊಗ್ಗ ಜಿಲ್ಲೆಯ ಮುಡಿದೋಕೊಪ್ಪ ಗಡಿಯಲ್ಲಿ ಸಾಗಿ, ನಂತರ ಮತ್ತೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಲಕ್ಮಾಪುರ . ಬೈತನಾಳ್ , ಬಲಂಬೀಡು , ಶಿಂಗಾಪುರ , ದಲ್ಲಿ ಹರಿದು ಹಾವೇರಿ ಸಮೀಪದ ಸಂಗೂರು ಗ್ರಾಮದಲ್ಲಿ ನಿಮಗೆ ಸಿರಸಿ ಹಾವೇರಿ ರಸ್ತೆಯಲ್ಲಿ ದರ್ಶನ ನೀಡುತ್ತಾಳೆ ,ವಾರ್ದಿ , ನಾಗನೂರು , ಹಾವೇರಿ ಪಟ್ಟಣದ ಬಳಿ ಇರುವ ಕುಣಿಮೆಲ್ಲಿ ಹಳ್ಳಿ ಮೂಲಕ ಸಾಗುತ್ತಾಳೆ .ನಂತರ ಸಿಗುತ್ತದೆ ಹಾವೇರಿ ಜಿಲ್ಲೆಯ ವರದ ಹಳ್ಳಿ , ದಾಟಿ, ನಂತರ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಲ್ಲಿಗಟ್ಟಿ , ಕಲಸೂರು , ಕೊಲೂರು , ಮಂಟಗಣಿ , ಹಿರೇ ಮುಗದೂರು , ಕಾರ್ಜಗಿ , ಗ್ರಾಮಗಳಲ್ಲಿ ನಡೆದು, ಮತ್ತೆ ಹಾವೇರಿ ತಾಲೂಕಿನ ಕೋಣನ ತಂಬಿಗಿ ಪಟ್ಟಣದಲ್ಲಿ ಕಾಣ ಸಿಗುತ್ತಾಳೆ, ನಂತರ ಸವಣೂರು ತಾಲೂಕಿನ ದೊಂಬರಮತ್ತೂರು ಗ್ರಾಮ, ಹಿರೇಮರಳಿ ಹಳ್ಳಿ, ಮಣ್ಣೂರು , ಹಂದಿಗನೂರು, ಹೊಸರಿಟ್ಟಿ , ಮರದೂರ್ , ಮರೋಲ್ ಹಾಗು ಹಲಗಿ ಹಳ್ಳಿಗಳ ನಡುವೆ ಸಾಗುತ್ತಾಳೆ , ನಂತರ ಹಾವೇರಿ ಜಿಲ್ಲೆಯ ಗುಡೂರ್ , ನೆರಳಗಿ -ಎಂ- ಗುತ್ತಲ್ , ಬೆಳವಿಗಿ , ಗುಲ್ಲಗುಂಡಿ , ಹಳ್ಳಿಯಲ್ಲಿ ಹರಿದು ಗುಳಗನಾಥ ಎಂಬ ಸುಂದರ ಪ್ರದೇಶದಲ್ಲಿ ತುಂಗಭದ್ರ ನದಿಯನ್ನು ಸೇರುತ್ತಾಳೆ .
ವರದಾಮೂಲ ಪರಿಸರ |
ವರದಾ ನದಿಯು ಶಿವಮೊಗ್ಗ, ಉತ್ತರ ಕನ್ನಡ , ಹಾಗು ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತದೆ , ಆದರೆ ಈ ನದಿಯು ಹರಿಯುವ ಒಟ್ಟು ದೂರವನ್ನು ಯಾರು ಇನ್ನೂ ಕಂಡು ಹಿಡಿದಿಲ್ಲಾ , ಹಾಗಾಗಿ ವರದಾ ನಧಿ ಎಷ್ಟುದೂರ ಕ್ರಮಿಸುತ್ತದೆ ಎಂಬ ಮಾಹಿತಿ ಲಭ್ಯವಿಲ್ಲ, ಆದರೆ ಸುಮಾರು ಇನ್ನೂರು ಕಿಲೋಮೀಟರ್ ಗೂ ಹೆಚ್ಚು ದೂರ ಹರಿಯ ಬಹುದು ಎಂದು ಅನ್ನಿಸುತ್ತದೆ .
ವರದಾ ನದಿಯ ಬಗ್ಗೆ ಪೌರಾಣಿಕವಾಗಿ ಒಂದು ಕಥೆಯನ್ನು ಹೇಳುತ್ತಾರೆ , ವಿಷ್ಣುವು ಶಿವನ ರೌದ್ರ ತಾಪವನ್ನು ಕಡಿಮೆಮಾಡಲು ಭಾಗೀರತಿ ಜಲವನ್ನು ತನ್ನ ಶಂಖದಿಂದ ಶಿವನ ತಲೆಯಮೇಲೆ ಅಭಿಶೇಖ ಮಾಡಿದಾಗ ವರದಾ ನದಿಯ ಜನನವಾಯಿತೆಂದು ಹೇಳಲಾಗುತ್ತದೆ . ವರದಾ ಮೂಲ ಬಹಳ ಸುಂದರ ಸ್ಥಳವಾಗಿದ್ದು, ಅಲ್ಲಿನ ಪರಿಸರ, ನಿಶ್ಯಬ್ಧ ಮನಸಿಗೆ ಬಹಳ ಖುಷಿಕೊಡುತ್ತದೆ . ವರದಾ ನದಿಯ ಕುಂಡದ ದಡದಲ್ಲಿ ಕುಳಿತು, ಕಾಲನ್ನು ನೀರಲ್ಲಿ ಬಿಟ್ಟು,ಕುಳಿತರೆ ಮನಸು ಪ್ರಶಾಂತ ಗೊಳ್ಳುತ್ತದೆ . ಈ ಸ್ಥಳದಲ್ಲಿ ಎರಡು ಪ್ರಮುಖ ದೇವಾಲಯಗಳಿದ್ದು, ವರದಾಂಬ ಎಂಬ ಶಕ್ತಿ ದೇವತೆ ಹಾಗು ಸೂರ್ಯ ನಾರಾಯಣ ರಿಗೆ ಸಮರ್ಪಣೆ ಮಾಡಲಾಗಿದೆ .
ಸೂರ್ಯ ನಾರಾಯಣ ದೇಗುಲ |
ವರದಾಂಬ ದೇಗುಲ |
ವರದಾಮೂಲ ನೋಡಿ ಮನಸಿಗೆ ಬಹಳ ಉತ್ಸಾಹ ಮೂಡಿತು, ನಂತರ ಅಲ್ಲಿನ ದೇವಾಲಯಗಳಲ್ಲಿ ದರ್ಶನ ಮಾಡಿ, ಹೊರಗೆ ಬಂದು ಕೊಳದ ಸಮೀಪ ಮತ್ತೊಮ್ಮೆ ನೋಡಿದರೆ ಅಲ್ಲಿ ಒಬ್ಬ ವೃದ್ದರು ಸಾಯಂ ಸಂಧ್ಯಾವಂದನೆಯನ್ನು ಕೊಳದಲ್ಲಿ ಮಾಡುತ್ತಿದ್ದ ಸೃಷ್ಯ ಕಂಡಿತು, ಅವರ ಧ್ಯಾನಕ್ಕೆ ತೊಂದರೆ ಮಾಡದೆ ಕೆಲವು ಚಿತ್ರಗಳನ್ನು ತೆಗೆದೇ , ಅಷ್ಟರಲ್ಲಿ ಸಾಗರದಿಂದ ನಮ್ಮ ಬ್ಲಾಗ್ ಮಿತ್ರರಾದ ಜಿತೇಂದ್ರ ಹಿಂಡುಮನಿ ಯವರ ಕರೆ ಬಂತು, ಹರುಷ ಚಿತ್ತದಿಂದ ವರದಾಮೂಲ ದಿಂದ ಜಿತೇಂದ್ರ ಅವರ ಭೇಟಿಗೆ ಸಾಗರಕ್ಕೆ ದೌಡಾಯಿಸಿದೆವು .
ಜಿತೇಂದ್ರ ಹಿಂಡುಮನಿ ಅವರ ಚಂದದ ಕುಟುಂಬ |
ಹಿಂಡುಮನಿ ಕುಟುಂಬದ ಹಿರಿಯರು |
ಜಿತೇಂದ್ರ ಹಿಂಡು ಮಣಿ ಪ್ರಕಾಶ್ ಹಾಗು ನನಗೆ ಬ್ಲಾಗ್ ಮಿತ್ರರು, ಸಾಗರದಲ್ಲಿ ಅವರ ವ್ಯವಹಾರ ಇದೆ, ಬಹಳ ಆತ್ಮೀಯ ಎನ್ನಿಸುವ ನಡವಳಿಕೆ, ಅವರನ್ನು ಭೇಟಿ ಮಾಡಿದ ತಕ್ಷಣ ಬಹಳ ಖುಷಿಯಿಂದ ನಮ್ಮನ್ನು ಬಲವಂತಾ ಮಾಡಿ ಅವರ ಊರು ಹಿಂಡುಮನಿ ಗೆ ಕರೆದುಕೊಂಡು ಹೋದರು, ಅವರ ಮನೆಯ ಎಲ್ಲರೂ ನಮ್ಮನ್ನು ಪ್ರೀತಿಯಿಂದ ಕ್ವಾಗತಿಸಿ, ಉಪಚಾರ ಮಾಡಿದರು, ಹೆಚ್ಚು ಹೊತ್ತು ಇರಲಾರದೆ , ಇದ್ದ ಸಮಯದಲ್ಲೇ ಮನೆಯ ಎಲ್ಲರ ಪರಿಚಯ ಮಾಡಿಕೊಂಡು ಸಂತಸ ಪಟ್ಟೆವು , ಮನೆಯ ವಿಶೇಷತೆ ಎಂದರೆ ಎಲ್ಲರೂ ಉತ್ಸಾಹದಿಂದ ಇದ್ದದ್ದು, ಮನೆಯ ಹಿರಿಯರೂ ಸಹ ಓದಿನಲ್ಲಿ ಆಸಕ್ತಿ ಹೊಂದಿದ್ದುದು ಖುಷಿಕೊಟ್ಟಿತು, ಮನೆಯ ಎಲ್ಲರಿಗೂ ವಂದನೆ ತಿಳಿಸಿ , ಅಲ್ಲಿಂದ ಹೊರಟೆವು, ದೇಹವು ಬೆಳಗ್ಗಿನಿಂತ ಧಣಿದು ಇನ್ನು ಸಾಧ್ಯವಿಲ್ಲಾ ಎನ್ನುವ ಹಂತಕ್ಕೆ ಬಂದಿತ್ತು, ನಮ್ಮ ಪಯಣ ಪ್ರಕಾಶಣ್ಣ ಹುಟ್ಟೂರು ಕಾನಸೂರು ಕಡೆಗೆ ಸಾಗಿತ್ತು, ಮನೆ ಸೇರಿ ಬಹಳ ಬೇಗ ಹಾಸಿಗೆ ಸೇರಿ ನಿದ್ದೆ ಹೊಡೆಯುವ ಪ್ಲಾನ್ ಹಾಕುತ್ತಿದ್ದೆ ಮನದಲ್ಲಿ ..... ! ಅರೆ ಊರು ಬಂದೆ ಬಿಟ್ಟಿತು . ........... ! ಮುಂದೆ ... !
3 comments:
ಹಲವು ನದಿಗಳ ಉಗಮ ಸ್ಥಾನ ಸಂದರ್ಶಿಸಿದ ತಾವಲ್ಲವೇ ನಮಗೆ ಪೂಜ್ಯರು.
ತಾವು ಯೂಪಿಏ ನದಿಗಳ ಬಗ್ಗೆ ಬರೆದಾಗ ನನಗೆ ಅನಿಸಿದ್ದು:
"ಪುಟ್ಟ ನದಿಗೂ ಇಹುದು
ಪುಟ್ಟ ನದಿಗಳ ಸಂಗಮ ಭಾಗ್ಯ,
ನಾನೇಷ್ಟರವನು ಸಮಷ್ಟಿಯೊಳು
ಎಂದು ಹಲಬೋ ನಮಗೆ
ಇದಲ್ಲವೇ ಮೊದಲ ಪಾಠ!"
ಈ ಜಲದುರ್ಗಗಳು ಇತಿಹಾಸದಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ ಅಲ್ಲವೇ ಸಾರ್?
ಗಳಗನಾಥದಲ್ಲಿ ವರದಾ ತುಂಗೆಯನ್ನು ಸೇರುವವರೆಗೂ ತಾವಿತ್ತ ಹರೆವಿನ ಪಟ್ಟಿ ಮಾಹಿತಿಪೂರ್ಣ.
ವರದಾ ನದಿಯ ಪೌರಾಣಿಕ ಕತನಕ್ಕೂ ಧನ್ಯವಾದಗಳು.
ಬ್ಲಾಗಿನ ಮಾಣಿಕ್ಯಗಳಾದ ತಾವೂ ಪ್ರಕಾಶಣ್ಣ ಮತ್ತಷ್ಟು ಬ್ಲಾಗಿಗರನ್ನು ಭೇಟಿಯಾದದ್ದು ಖುಷಿಯ ವಿಚಾರ.
ಮೂಮದುವರೆಯಲಿ....
ಬಾಲೂ ಸರ್, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಮನೆಗೆ ಭೇಟಿ ಕೊಟ್ಟಿದ್ದನ್ನೂ ಸ್ಮರಿಸಿಕೊಂಡಿದ್ದಕ್ಕೆ ಧನ್ಯವಾದಗಳು.
ಮತ್ತೊಮ್ಮೆ ನಮ್ಮ ಮನೆಗೆ ಬಿಡುವು ಮಾಡಿಕೊಂಡು ಬನ್ನಿರಿ
ತಲೆಯನ್ನು ಮುಟ್ಟಿ ನೋಡಿಕೊಂಡೆ.. ಮಂಜುನಾಥ ಎನ್ನುವ ಹೆಸರು ಇದ್ದರೂ.. ಜಟೆ ಇರಲಿಲ್ಲ.. ಇದ್ದಿದ್ದರೆ ಶಿವನೂ ಕೂಡ ವರದ ಮೂಲದ ವಿಸ್ತಾರವನ್ನು ಕಂಡು ಅಚ್ಚರಿ ಪಡುತ್ತಾ ನನ್ನ ಜತೆಯಷ್ಟೇ ಜಟಿಲವಾಗಿದೆ ಅನ್ನುತ್ತಿದ್ದ..
ಇಂತಹ ಜಟಿಲ ನದಿಯ ಹರಿವನ್ನು ಎಷ್ಟು ಸುಲಭವಾಗಿ ವಿವರಿಸಿದ್ದೀರ ಸೂಪರ್ ಬಾಲೂ ಸರ್.. ವಿವರಗಳು ಅಂದ್ರೆ ನಿಮ್ಮ ಬರಹವೇ ಸಾಕ್ಷಿ
ಸೂಪರ್ ಇಷ್ಟವಾಯಿತು.. ಜೊತೆಯಲ್ಲಿ ಜಿತೇಂದ್ರ ಸರ್ ಅವರ ಸುಂದರ ಮನೆ ಮನದ ಪರಿಚಯ ಕೂಡ.. ಹಾಟ್ಸ್ ಆಫ್
Post a Comment