Friday, February 28, 2014

ಹೆಣ್ಣುಮಕ್ಕಳೇ ಇವಳನ್ನು ಕ್ಷಮಿಸಿಬಿಡಿ ...... !! ಅನ್ನುತ್ತಿತ್ತು ಆ ಮನಸು .


ಇದೇನಪ್ಪಾ ಇವನು ಏನು ಹೇಳೋಕೆ ಹೊರಟಿದ್ದಾನೆ ಅಂತಾ ನಿಮಗೆ ಅನ್ನಿಸಿದ್ದರೆ ಅದು ನಿಜವೇ ಅನ್ನಿ. ನಮ್ಮ ಬ್ಲಾಗ್ ಪ್ರಪಂಚದಲ್ಲಿ , ನಮ್ಮ  ಪ್ರತಿನಿತ್ಯದ ಜೀವನದ ಸುತ್ತಾ ಎಷ್ಟೋ ಹೆಣ್ಣುಮಕ್ಕಳನ್ನು ಕಾಣುತ್ತೇವೆ, ಕೆಲವು ಹೆಣ್ಣುಮಕ್ಕಳ ಸಾಧನೆ ಕಂಡು ಬೆರಗಾಗುತ್ತೇವೆ , ಅವರಲ್ಲಿನ ಒಳ್ಳೆಯ ಹವ್ಯಾಸ , ಒಳ್ಳೆಯ ವಿಚಾರ , ವ್ಯವಸ್ತಿತವಾಗಿ ಅವರು ಒಳ್ಳೆಯ  ಕಾರ್ಯನಿರ್ವಹಣೆ ಮಾಡುವ  ರೀತಿಗೆ ಮನಸು  ಶಹಬ್ಬಾಸ್   ಎನ್ನುತ್ತದೆ. ಯಾವುದೇ ಹೆಣ್ಣುಮಕ್ಕಳಿಗೆ ತೊಂದರೆ ಆದರೆ ಮನಸು ಕುದಿಯುತ್ತದೆ , ಅದನ್ನು ಖಂಡಿಸಿ  ಬಹಳಷ್ಟು ಜನ  ಮಾತಾಡುವುದನ್ನು  ಕಂಡಿದ್ದೇವೆ , ಬಹಳಷ್ಟು  ಪ್ರಕರಣಗಳಲ್ಲಿ  ಹೆಣ್ಣುಮಕ್ಕಳಿಗೆ ಅನುಕಂಪದ ಅವಕಾಶ ದೊರಕುತ್ತದೆ , ಅದಕ್ಕೆ ಅವರು ಅರ್ಹರೂ ಕೂಡ ಆಗಿರುತ್ತಾರೆ. ಆದರೆ ಅಪವಾದವೆಂಬಂತೆ ಇಲ್ಲೊಂದು ಪ್ರಕರಣವಿದೆ ಈ ನೈಜ ಘಟನೆಯನ್ನು  ಬಹಳ ಹತ್ತಿರದಿಂದ ನೋಡಿದ ನಾನು ಇಲ್ಲಿ ಅದಕ್ಕೆ ಕಥೆಯರೂಪ ನೀಡಿ ನಿಮ್ಮ ಮುಂದಿಟ್ಟಿದ್ದೇನೆ . ಆಧುನಿಕ ಪ್ರಪಂಚದ ಯುವ ಪೀಳಿಗೆಯ ಹೆಣ್ಣುಮಗಳು ಮಾಡಿದ ಎಡವಟ್ಟಿಗೆ  ಒಂದು ಗೌರವಾನ್ವಿತ ಕುಟುಂಬ ನರಳುವ ಹಂತ ತಲುಪಿದ್ದು  ಸುಳ್ಳಲ್ಲ . ಬನ್ನಿ ಕಥೆ ಒಮ್ಮೆ ಒದಿ.


ಸೂರ್ಯ  ಅಂದು ಮಂಕಾಗಿದ್ದ  , ಜೀವನದಲ್ಲಿ ಅವನು ನಿರೀಕ್ಷಿಸದೆ ಇದ್ದ ಘಟನೆ ನಡೆದುಹೋಗಿತ್ತು,  ಯೋಚಿಸಿದಷ್ಟೂ  ನಿಘೂಡ ವಾಗುತ್ತಿದೆ  ವಿಚಾರಗಳು ...... ಯಾಕೆ ಹೀಗಾಯ್ತು ಎನ್ನುವ  ಪ್ರಶ್ನೆಗೆ  ಮನದಲ್ಲಿ ಉತ್ತರ ದೊರಕುತ್ತಿಲ್ಲಾ,   ಕಳೆದ  ಮೂರುವಾರಗಳ ಹಿಂದೆ  ಇದ್ದ ಸಂಭ್ರಮ , ಖುಷಿ,  ಹೊಸದಾಗಿ ಕಟ್ಟುತ್ತಿದ್ದ  ಸುಂದರ ಕನಸುಗಳು ಛಿದ್ರ  ಛಿದ್ರ ವಾಗಿದ್ದವು , ಆಯೋ ದೇವ್ರೇ , ನಾನು ಯಾರಿಗೆ ಮೋಸ  ಮಾಡಿದ್ನಪ್ಪ? ಯಾರ ಭವಿಷ್ಯ ಹಾಳುಮಾಡಿದ್ದೆ ? ದೇವರಂತಹ  ನನ್ನ ತಂದೆ ತಾಯಿ ಯಾರಮನಸನ್ನು ನೋಯಿಸಿದವರಲ್ಲಾ, ಅವರಿಗೆ ಯಾಕೆ ಈ ಶಿಕ್ಷೆ ?  ಅವಳು ಯಾಕೆ  ಈ ಬಗ್ಗೆ ಯೋಚಿಸಲಿಲ್ಲ  ..? ಅಲ್ಲಾ  ವಿಧ್ಯೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ , ಇವಳು ಯಾಕೆ  ಹೀಗೆ  ಅಜ್ಞಾನಿ ಯಂತೆ  ತೀರ್ಮಾನ ತೆಗೆದುಕೊಂಡು  ನನ್ನ ಸಂತೋಷಕ್ಕೆ  ಕಲ್ಲು ಹಾಕಿದಳು ? ಅವಳ ತಂದೆ ತಾಯಿ ಸಹ  ಮಗಳ  ಬಗ್ಗೆ ಮರುಗಿದರೂ  ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲುವಂತೆ ಯಾಕೆ ಮಾಡಿದಳು ? ಹೀಗೆ ಪ್ರಶ್ನೆಗಳ  ಸುನಾಮಿ  ಮನದಲ್ಲಿ ಅಪ್ಪಳಿಸುತ್ತಿತ್ತು , ಆದರೆ  ಆ ಸುನಾಮಿಗೆ ಮನದಲ್ಲಿನ ಸಂತಸ  ನಲುಗಿಹೋಗಿತ್ತು .  ಎದುರುಗಡೆ  ಅವಳ  ನಗುವಿನ ಆ ಫೋಟೋ  ಗಹ ಗಹಿಸುತ್ತಾ ನನ್ನ ಈ ಸ್ಥಿತಿ  ನೋಡಿ ಅಣಕಿಸುತ್ತಿತ್ತು .  .........   ಆ ಘಟನೆ ಸೂರ್ಯನ   ಕಣ್ಮುಂದೆ ಮತ್ತೊಮ್ಮೆ  ಬಿಚ್ಚಿಕೊಳ್ಳತೊಡಗಿತು .

ಅಂದು ಅಪ್ಪಾ  ಬೆಂಗಳೂರಿನ ನನ್ನ ರೂಂ ಗೆ   ಬಂದು  "ಸೂರ್ಯ  ಇಂದು ನಿನ್ನ ಕೆಲಸಕ್ಕೆ ರಜೆ ಹಾಕಪ್ಪಾ , ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಅಂದ್ರು" , ನನ್ನ ಅಪ್ಪನ ಸ್ವಭಾವವೇ ಹಾಗೆ  ತಮ್ಮ ಮನಸಿಗೆ ಯಾವುದಾದರು ವಿಚಾರ ಬಂದ್ರೆ  ಮೊದಲು ಅಮ್ಮನಿಗೆ ತಿಳಿಸಿ ನಂತರ ತಡಮಾಡದೆ  ನನ್ನ ಹತ್ತಿರ  ಹೇಳಿಕೊಳ್ಳುತ್ತಾರೆ . ಅಂದೂ ಸಹ ಹಾಗೆ ಆಯಿತು, ಹೆಚ್ಚಿಗೆ ಕೆಲಸವಿಲ್ಲದ ಕಾರಣ ಕಂಪನಿಗೆ  ಗೆ ರಜೆ ಹಾಕಿ ಅಪ್ಪನ  ಜೊತೆಯಲ್ಲಿ ಇದ್ದೆ, ಮೊದಲು ರೂಂ ಹತ್ತಿರವಿದ್ದ  ದೇವಾಲಯದಲ್ಲಿ ದೇವರ ದರ್ಶನ ಮಾಡಿ , ಅಲ್ಲೇ ಇದ್ದ ಹೋಟೆಲ್ ನಲ್ಲಿ ಬೆಳಗಿನ ಉಪಹಾರ  ಸೇವಿಸುತ್ತಾ  ಬಹಳ ಖುಷಿಯಿಂದಾ  ಮಾತನಾಡಿದರು . ಮಾತಿನ ನಡುವೆ ಸೂರ್ಯ  ನಿನ್ನ ವಯಸ್ಸು ಎಷ್ಟು  ಎಂದರು ?
"ಇದೇನಪ್ಪಾ ನಿಮಗೆ ಗೊತ್ತಲ್ಲಾ  ನನಗೆ ಈಗ ಇಪ್ಪತಾರು ವರ್ಷ ಆಲ್ವಾ ಅಪ್ಪಾ, ಮೊನ್ನೆತಾನೆ ನೀವು ಆಶೀರ್ವಾದ ಮಾಡಿ ಗಿಫ್ಟ್  ಕೊಟ್ರಲ್ಲಾ ...."  ಅಂದೇ ನಾನು
.
"ಹೌದು ಕಣಯ್ಯ  ಹಾಳು  ಮರೆವು  ವಯಸ್ಸು  ಆಯ್ತು ನೋಡು "ಇನ್ನೇನಿಲ್ಲಾ  ನಿನ್ನ ಮದುವೆ ಬಗ್ಗೆ ಯೋಚನೆ ಬಂತು , ಅದಕ್ಕೆ ಕೇಳ್ದೆ , ಏನಪ್ಪಾ  ನೀನು ಯಾರನ್ನಾದರೂ ಇಷ್ಟಾ ಪಟ್ಟಿದ್ದೀಯ ?  ಯಾವುದೇ ಸಂಕೋಚ ಬೇಡ  ಧೈರ್ಯವಾಗಿ ಹೇಳು ...? ಹಾಗೇನಾದ್ರೂ ಇದ್ರೆ ನಾನು ನಿನ್ನಮ್ಮ  ಇಬ್ಬರು ಮುಂದೆ ನಿಂತು  ಸೊಸೆಯನ್ನು ಮನೆ  ತುಂಬಿಸಿ ಕೊಳ್ಳುತ್ತೇವೆ ". ಎಂಬ ಪ್ರಶ್ನೆ ಎಸೆದು ನನ್ನ ಕಡೆ ನೋಡಿದರು ಅಪ್ಪಯ್ಯ .


ನಾನು ಒಮ್ಮೆಲೇ  ಬೆಚ್ಚಿಬಿದ್ದೆ ,   ಹೌದು ನನ್ನ ಅಪ್ಪ ಯಾವಾಗಲೂ ಹಾಗೆ , ಚಿಕ್ಕವಯಸ್ಸಿನಿಂದಲೂ  ಪ್ರತೀಯೊಂದು ವಿಚಾರವನ್ನು  ಯಾವುದೇ ಮುಚ್ಚುಮರೆ ಇಲ್ಲದೆ  ಮಾತನಾಡುತ್ತಿದ್ದರು, ಅಮ್ಮನೂ ಸಹ ಹಾಗೆ ಅಪ್ಪನ  ಜೊತೆಗೆ ಸಾಥ್ ನೀಡುತ್ತಿದ್ದಳು  . ಹಾಗಾಗಿ ನಮ್ಮ ಮನೆಯಲ್ಲಿ ಒಬ್ಬರನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು  ಬದುಕುತ್ತಿದ್ದೆವು, ಅಪ್ಪನ ಪ್ರಶ್ನೆಗೆ ನಗು ಬಂದರೂ  , ಸಾವರಿಸ್ಕೊಂಡು  ಇಲ್ಲಾಪ್ಪಾ  ನನಗೆ ಆ ಬಗ್ಗೆ ಯೋಚನೆ ಮಾಡೋ ಅಷ್ಟು ಪುರುಸೊತ್ತೇ ಇಲ್ಲಾ , ನನ್ನ ಕೆಲಸದ  ಒತ್ತಡ ಹಾಗಿದೆ , ಇನ್ನು ಹುಡುಗಿಯನ್ನು  ಇಷ್ಟಾ ಪಡೋದು ದೂರದ ವಿಚಾರ ಅಷ್ಟೇ , ಅಂದು ನನ್ನೊಂದಿಗೆ ಊರಿಗೆ ಬಂದಿದ್ರಲ್ಲಾ  ಆ ಹೆಣ್ಣುಮಕ್ಕಳು  ನನ್ನ   ತಂಗಿಯರಂತೆ  ಅವರ ಬಗ್ಗೆ ಆ ಭಾವನೆ ಇಲ್ಲಾ , ನನ್ನ ಒಡ ಹುಟ್ಟಿದ ತಂಗಿಯರಂತೆ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ ಅವರೆಲ್ಲಾ , ಅವರಲ್ಲಿ ಎಲ್ಲರಿಗೂ ಮದುವೆ  ನಿಶ್ಚಯವಾಗಿದೆ  , ಇನ್ನೇನು ಹೊಸ ಬಾಳಿಗೆ  ಕಾಲಿಡುತ್ತಾರೆ . ಅಪ್ಪ ನ ಪ್ರಶ್ನೆಗೆ  ಯಾವುದೇ ಹುಡುಗಿ ನನ್ನ ಮನಸಿನಲ್ಲಿ ಇಲ್ಲಾ ಎನ್ನುವ ಉತ್ತರ ನೀಡಿದೆ .


"ಅರೆ ಪರವಾಗಿಲ್ಲಾ ಕಣಯ್ಯ  ಇನ್ನು ಹನುಮಂತನ ಭಕ್ತನಾಗೆ ಉಳಿದಿದ್ದಿ ", "ಇನ್ನು ಮುಂದೆ   ರಾಮನಂತೆ  ಗೃಹಸ್ತಾಶ್ರಮ ಕಡೆ ಪಯಣ ಹೊರಡಲು ಸಿದ್ದನಾಗು"  ,   "ನಿನ್ನ ಮದುವೇ  ವಿಚಾರದಲ್ಲಿ ಹಲವಾರು ಕುಟುಂಬಗಳು  ಆಸಕ್ತಿ ತೋರಿವೆ ನೀನು  ಒಪ್ಪಿದರೆ  ಮುಂದುವರೆಯೋಣ " , ಏನಂತೀಯ ?   ಎಂದರು , ನಾನು ಸಹ ಒಪ್ಪಿಗೆ ರೂಪದಲ್ಲಿ ತಲೆ  ಆಡಿಸಿದೆ . ತಕ್ಷಣವೇ ಅವರ ಸ್ನೇಹಿತನಿಗೆ  ಫೋನ್ ಮಾಡಿ "ನೋಡಯ್ಯ  ಮುಂದಿನ ವಾರ ಎರಡುದಿನ ರಜೆ ಇದೆ ನಿಮ್ಮ ಊರಿಗೆ ಬರುತ್ತೇವೆ ಅಲ್ಲಿಗೆ ಅವರನ್ನೂ ಕರೆಸಿಬಿದು, ಅವರು ನಮ್ಮ ಮನೆಗೆ ಬರೋದೂ ಬೇಡ  , ನಾವು ಅವರಮನೆಗೆ ಹೋಗೋದು ಬೇಡ"  ಅಂದರು .

ಕಟ್ ಮಾಡಿದ್ರೆ  ಅಪ್ಪನ ಗೆಳೆಯರ ಊರು "ಚಂದನಪುರ " ದಲ್ಲಿ   ಹುಡುಗಿಯ  ಕುಟುಂಬದ  ಭೇಟಿಯಾಯಿತು, "ನಿಮ್ಮ ಹುಡುಗನ ಬಗ್ಗೆ ನಿಮ್ಮ ಮನೆತನದ ಬಗ್ಗೆ  ನಿಮ್ಮ ಗೆಳೆಯ ಶೇಖರ್ ಎಲ್ಲಾ ಹೇಳಿದ್ದಾರೆ , ನಿಮ್ಮನ್ನು ಭೇಟಿಮಾಡಿದ್ದು ಖುಷಿ ತಂದಿದೆ ಅಂದ್ರು "  ಹುಡುಗಿಯ  ತಂದೆ   . 

"ಬಹಳ ಸಂತೋಷ ಅಯ್ಯೋ ನಮ್ಮದೇನಿದೆ  ಹುಡುಗ ಹುಡುಗಿ ಒಪ್ಪಿದರೆ  ಮುಂದುವರೆಯಲು  ಅನುಕೂಲ , ಈ ವಿಚಾರದಲ್ಲಿ ನಿಮ್ಮ ಮಗಳನ್ನು ಕೇಳಿದ್ದೀರಾ?" ಅಂದ್ರು ನಮ್ಮಪ್ಪ  

"ಅಯ್ಯೋ ನಮ್ಮ ಹುಡುಗಿ  ಚಿನ್ನದಂತಾ ಹುಡುಗಿ ಸ್ವಾಮೀ ", "ಮನೆಕೆಲಸದಲ್ಲಿ ಜಾಣೇ  ಒಳ್ಳೆ ಅಡಿಗೆ ಎಕ್ಸ್ಪರ್ಟ್"  "ಓದಿನಲ್ಲಿ ಬಹಳ ಜಾಣೆ ,'  'ಓದುವಾಗ ಹಲವಾರು ಚಿನ್ನದ ಮೆಡಲ್ ಗಳಿಸಿದ್ದಾಳೆ ',  'ಇನ್ನು ಕೆಲಸದಲ್ಲೂ ಅಷ್ಟೇ  ಅವಳ ಕೆಲಸ ಮೆಚ್ಚಿ ಹೊರದೇಶಕ್ಕೆ  ಕಳುಹಿಸುತ್ತಲೇ ಇರುತ್ತಾರೆ,'' ಅವಳ ಕಂಪನಿಯವರು . ನಿಮ್ಮ ಮಗನ ಬಗ್ಗೆ ತಿಳಿದು ಕೊಂಡಿದ್ದಾಳೆ , ಫೇಸ್ ಬುಕ್ ನಲ್ಲಿ ನಿಮ್ಮ   ಮಗನ ಬಗ್ಗೆ ಇರುವ ವಿಚಾರಗಳನ್ನು ನಮಗೂ ತೋರಿಸಿದ್ದಾಳೆ , ನಿಮ್ಮ ಮಗನೂ ಸಹ ಕಮ್ಮಿಯಿಲ್ಲಾ  ಬಿಡಿ , ಬಹಳ  ಸಾಧನೆ ಮಾಡಿದ್ದಾರೆ , ಅವಳೂ  ಸಾಫ್ಟ್ ವೇರ್ ಫೀಲ್ಡ್ , ನಿಮ್ಮ ಮಗನೂ ಸಾಫ್ಟ್ ವೇರ್ ಫೀಲ್ದು  ಇಬ್ಬರೂ ಒಳ್ಳೆಯ ಜೋಡಿ ಆಗ್ತಾರೆ  ಬಿಡಿ . ನಮ್ಮ ಮನೆಯವರಿಗೆಲ್ಲಾ  ನಿಮ್ಮ ಮನೆತನ ಹಿಡಿಸಿದೆ , ನಿಮ್ಮ ಮಗನ  ಬಗ್ಗೆ ಬಹಳಒಳ್ಳೆಯ  ಅಭಿಪ್ರಾಯ  ಬಂದಿದೆ  ಈ ಮದುವೆ ಗೆ ನಮ್ಮೆಲ್ಲರ ಒಪ್ಪಿಗೆ ಇದೆ  ಅಂದರು ಹುಡುಗಿಯ ತಂದೆ .

ಹೀಗೆ ಪರಸ್ಪರ ಪರಿಚಯದ  ನಡುವೆ ಕಾಣಿಸಿದಳು ಅವಳು  , ಮೊದಲ ನೋಟದಲ್ಲೇ  ಇಷ್ಟವಾದಳು , ಅಯ್ಯೋ ಇದೇನು ನಾನು ನಾವೇ ಮಾತಾಡಿಕೊಳ್ಳುತ್ತಾ  ಇವರಿಬ್ಬರನ್ನು  ಮರೆತೇ ಬಿಟ್ವಿ ಅಂತಾ  ಹಿರಿಯರು  , ನಾವೇನು ಮಾತನಾಡಿದರೂ  ಮುಂದೆ ಸಂಸಾರ ಮಾಡೋರು  ನೀವು, ಮೊದಲು ನೀವಿಬ್ಬರು  ಮಾತನಾಡಿ  ನಂತರನಿಮ್ಮ ನಿರ್ಧಾರ ತಿಳಿಸಿ ಅಂತಾ  ಮನೆಯಮೇಲಿನ ಮಹಡಿಯ  ಒಂದು  ಕೋಣೆಗೆ   ಕಳುಹಿಸಿದರು .

ನಾನು ಸೂರ್ಯ ಅಂತಾ  ...ಜಿ ಜಿ . ಏಂ. ಎನ್ . ಸಿ . ಕಂಪನಿಯಲ್ಲಿ    ಕೆಲ್ಸಾ ಮಾಡ್ತಿದ್ದೀನಿ,  
ಹ ನಾನು  ರಶ್ಮಿ  ಅಂತಾ   ಬಿ ..ಬಿ . ಏಂ. ಎನ್ . ಸಿ . ಕಂಪನಿಯಲ್ಲಿ    ಕೆಲ್ಸಾ ಮಾಡ್ತಿದ್ದೀನಿ,  ನಿಮ್ಮ ಬಗ್ಗೆ ಎಫ್ . ಬಿ . ನಲ್ಲಿ ನೋಡಿದ್ದೇನೆ , ಬಹಳ ಒಳ್ಳೆ  ಹವ್ಯಾಸ ಇದೆ ನಿಮಗೆ , ನೀವು ತೆಗೆಯುವ ಫೋಟೋಗಳನ್ನು  ಇಷ್ಟಾ ಪಟ್ಟಿದ್ದೇನೆ , ಅಂದ ಹಾಗೆ  ನೀವು ಸ್ಮೋಕ್  ಮಾಡ್ತೀರ ? ಡ್ರಿಂಕ್ಸ್   ತಗೋತೀರ ? ನಾನ್ ವೆಜ್  ತಿನ್ತೀರಾ ?  ಅಂದಳು

"ಅಯ್ಯೋ  ಇಲ್ಲಾ ರಶ್ಮಿ  ಆ ಹವ್ಯಾಸಗಳು ಇಲ್ಲಾ ,"   "ಇದೆಲ್ಲಾ  ಮಾಡದ ನಾನೊಬ್ಬ  ಯೂಸ್ಲೆಸ್ " ಅಂತಾರೆ ನನ್ನ ಕೆಲವು ಗೆಳೆಯರು ಅಂದೇ , ಇಬ್ಬರೂ ನಕ್ಕೆವು. ಬಹಳಷ್ಟು ಮಾತನಾಡಿ  ಪರಸ್ಪರ  ವಿಚಾರ ವಿನಿಮಯ ಮಾಡಿಕೊಂಡೆವು , ಕೊನೆಗೆ ಅವಳೇ  ನಿಮ್ಮನ್ನು ಇಷ್ಟ ಪಟ್ಟಿದ್ದೇನೆ  ಅಂದಳು ಮನಸಿಗೆ ಬಹಳ ಖುಷಿಯಾಯಿತು,  ಇಬ್ಬರೂ  ಮೇಲ್ ಐ.ಡಿ . , ಮೊಬೈಲ್  ನಂಬರ್  ವಿನಿಮಯ  ಮಾಡಿಕೊಂಡೆವು  ಇಬ್ಬರೂ ಕೆಳಗೆ ಬಂದು ಹಿರಿಯರಿಗೆ  ನಮ್ಮಿಬ್ಬರ  ಅಭಿಪ್ರಾಯ ತಿಳಿಸಿದೆವು ,

 ಹಿರಿಯರೆಲ್ಲಾ ಹರುಷ ಪಟ್ಟರು , ಮನೆಯಲ್ಲಿ ಸಂತಸದ ಹೊನಲು ಹರಿಯಿತು, ಮುಂದಿನ ತಿಂಗಳು  ನಿಶ್ಚಿತಾರ್ಥ  ಕಾರ್ಯಕ್ರಮ ಅಂತಾ  ತೀರ್ಮಾನವಾಯಿತು, ಹಾಗಿದ್ರೆ  ಸುವರ್ಣ ಪುರದಲ್ಲಿ  ನಿಶ್ಚಿತಾರ್ಥ  ಕಾರ್ಯಕ್ರಮ ಮಾಡಿ ಬಿಡೋಣ  ಅಂತಾ ಎರಡೂ ಕಡೆಯವರು  ತೀರ್ಮಾನ ಮಾಡಿದರು . ಜೀವನಕ್ಕೆ ಒಂದು ತಿರುವು ಸಿಕ್ಕಿತು ಎಂದು ಖುಶಿಪಟ್ಟೆ , ಅವಳ ಆ ನಗು  ನನ್ನ ಮನಸನ್ನು ಸೂರೆಗೊಂಡಿತ್ತು,  ಕನಸುಗಳಿಗೆ ಬಣ್ಣ  ಹಚ್ಚಿತ್ತು . 


ಹೀಗೆ ಬಹಳ ದಿನಗಳು ಕಳೆದೆವು , ಮೆಸೇಜ್ , ಚಾಟ್, ಹೋಟೆಲ್ ನಲ್ಲಿ ಪರಸ್ಪರ ಭೇಟಿ, ದೇವಾಲಯದಲ್ಲಿ ಪೂಜೆ , ಹೀಗೆ ಸಾಗಿದವು ದಿನಗಳು , ನಾವಿದ್ದ ಊರು "ಕಲ್ಯಾಣ ನಗರ"  ಸ್ವರ್ಗ ವಾಗಿತ್ತು. ನಿಶ್ಚಿತಾರ್ಥದ  ಬಟ್ಟೆ , ಒಡವೆ ತೆಗೆಯುವಾಗ  ಅವಳೂ ಬಂದು ತನಗೆ ಇಷ್ಟವಾದ  ಸೀರೆ , ಒಡವೆ  ಆಯ್ಕೆ ಮಾಡಿಕೊಂಡಳು , [ ಆ ಹುಡುಗಿ  ಎಷ್ಟು ಬೆಲೆಯ ಸೀರೆ , ಒಡವೆಗಳನ್ನು ಬೇಕಾದರೂ  ಆಯ್ಕೆ ಮಾಡಿ ಕೊಳ್ಳಲಿ  ಯಾರೂ ಅಡ್ಡಿ ಪಡಿಸ ಬಾರದೆಂದು ಅಪ್ಪನ ಕಟ್ಟಪ್ಪಣೆ ಆಗಿತ್ತು ] ನನಗೆ ಅವು ಬಹಳ ದುಬಾರಿ ಅನ್ನಿಸಿದರೂ  ಅಪ್ಪನ ಅಪ್ಪಣೆಯಂತೆ ಸುಮ್ಮನಿದ್ದೆ. 

ಸುವರ್ಣ ಪುರ  ದಲ್ಲಿ "ನಿಶ್ಚಿತಾರ್ಥ" ದ ದಿನ ಬಂದೆ ಬಿಟ್ಟಿತು, ಎರಡೂ ಕುಟುಂಬದವರ  ಸಂತೋಷಕ್ಕೆ ಪಾರವೇ ಇರಲಿಲ್ಲ, ಬಹಳಷ್ಟು ಬಂಧು ಮಿತ್ರರು  ಆಗಮಿಸಿ ಶುಭ ಕೋರಿದರು ,  ಫೋಟೋ ಗ್ರಾಫಾರ್  ಗಳಂತೂ  ನಮ್ಮಿಬ್ಬರ  ವಿವಿಧ ಬಂಗಿಯ  ನೂರಾರು ಫೋಟೋ ತೆಗೆದು  ನಮ್ಮಿಬ್ಬರನ್ನು ಹೀರೋ ಹೀರೋಯಿನ್  ಎಂಬಂತೆ  ಆಡಿಸಿದ್ದರು, ಅವಳೂ ಸಹ ಬಹಳ ಖುಷಿಯಿಂದ ನನ್ನೊಡನೆ ಫೋಟೋ ತೆಗೆಸಿಕೊಂಡು  ಸಂಭ್ರಮಿಸಿದ್ದಳು . ಅಂದು ಸಂಜೆಯೇ  ಇಬ್ಬರು   ಅಲ್ಲೇ ಇದ್ದ  ಮಲ್ಟಿ ಪ್ಲೆಕ್ಸ್  ನಲ್ಲಿ  ಸಿನೆಮ ನೋಡಿ ಸಂಭ್ರಮ ಪಟ್ಟೆವು . ಮಾರನೆಯ ದಿನ ಅವಳ ಎಫ಼್. ಬಿ . ನಲ್ಲಿ   ಯಂಗೆಜೆಡ್  ಅಂತಾ  ಸ್ಟೇಟಸ್  ಅಪ್ಡೇಟ್ ಆಗಿತ್ತು,  ಆದರೆ ನನ್ನ  ಎಫ಼್. ಬಿ. . ನಲ್ಲಿ ಸ್ಟೇಟಸ್ ಹಾಕಲು  ಹಿಂಜರಿದೆ .


ಮುಂದಿನ ಒಂದು ವಾರ  ನಮ್ಮಿಬ್ಬರ ನಡುವೆ  ನಿಶ್ಚಿತಾರ್ಥದ  ದಿಂದ ತುಂಟಾಟದ  ಕ್ಷಣಗಳ  ಮೆಲುಕು ಹಾಕುವ  ಕಾರ್ಯ ನಡೆಯಿತು .  ಒಬ್ಬರನ್ನು ಒಬ್ಬರು  ಬಿಟ್ಟಿರಲಾರೆವು  ಎಂಬಂತೆ ಆದೆವು. 


ಅದೊಂದು ದಿನ  ನನಗೆ ಅವಳಿಂದ  ಮೊಬೈಲ್ಗೆ  ಕಾಲ್ ಬಂತು, ಬಹಳ ಅರ್ಜೆಂಟ್ ಆಗಿ  ಅಂದು ಸಂಜೆ  ಕಾಫಿ ಡೆ  ನಲ್ಲಿ ಸಿಗುವಂತೆ  ತಿಳಿಸಿದಳು,  ನಾನೂ ಸಹ  ಅಂದು ಸಂಜೆ ಅಲ್ಲಿಗೆ ಮುಂಚೆ ಹೋಗಿ ಅವಳ ಬರುವಿಗೆ  ಕಾಯುತ್ತಿದ್ದೆ , ದೂರದಲ್ಲಿ ನಡೆದು ಬರುತ್ತಿದ್ದ ಅವಳನ್ನು ನೋಡಿ  ಕನಸುಗಳು  ಅರಳಿದವು .  ಸಾರಿ ಸೂರ್ಯ ನಿಮ್ಮನ್ನು ಕಾಯಿಸಿದ್ದಕ್ಕೆ  ಅಂತಾ  ಬಂದವಳೇ   ಎದರು ಗಡೆ  ಇದ್ದ   ಕುರ್ಚಿಯಲ್ಲಿ  ಕುಳಿತಳು . ಮೌನ , ಮೌನ, ಮೌನ  ಬಹಳ ಹೊತ್ತು  ಮೌನ ,  


ಸೂರ್ಯ ನಿಮ್ಮ  ಹತ್ತಿರ ಒಂದು ಮುಖ್ಯವಾದ  ವಿಚಾರ ತಿಳಿಸಬೇಕಾಗಿತ್ತು,  ಮುಂದಿನ ತಿಂಗಳು  ನಾನು ಯೂ. ಎಸ್. ಗೆ ಹೋಗ್ತಾ ಇದ್ದೀನಿ,  ಈ ಮದುವೆ  ಇನ್ನೆರಡು ವರ್ಷ  ಆಗೋಲ್ಲಾ ,  ನನಗೆ ಕೆರಿಯರ್  ಮುಖ್ಯ  ಅದಕ್ಕೆ ನಮ್ಮ  ಮದುವೆ  ಬೇಡಾ  ಅನ್ನಿಸುತ್ತಿದೆ  , ಸಾರಿ  ಬೇಜಾರು ಮಾಡಿಕೊಳ್ಳಬೇಡಿ ಅಂದಳು, 


ನಾನು ಒಮ್ಮೆಲೇ ಬೆಚ್ಚಿ ಬಿದ್ದೆ,  ತಮಾಷೆ  ಬೇಡ ರಶ್ಮಿ  , ನಾನೂ ಸಹ ಯೂ . ಎಸ್.  ಗೆ ಹೋಗೋ ಪ್ರಾಜೆಕ್ಟ್ ನ ನನ್ನ ಮದುವೇ ಕಾರಣ  ಮುಂದೆ ಹಾಕಿದ್ದೇನೆ , ನೀನೂ ಹಾಗೆ ಮಾಡು ಅಷ್ಟೇ , ಅದಕ್ಯಾಕೆ  ವರಿ   ಮಾಡ್ತೀಯ    ಅಂದೇ,  ಅರೆ ನನ್ನ ಕೆರಿಯರ್ ಪ್ರಶ್ನೆ ಸೂರ್ಯ  ಹಾಗೆಲ್ಲಾ ಮಾಡೋಕೆ ಆಗಲ್ಲ ನಾನು , ಸಧ್ಯಕ್ಕೆ ಎರಡು ವರ್ಷ ಮದುವೇ  ಬೇಡ ಅಷ್ಟೇ  ಎಂದು ನನ್ನ ಪ್ರತಿಕ್ರಿಯೆಗೂ ಕಾಯದೆ  ಹೊರಟೇ  ಹೋದಳು ..... !! ನಾನು  ರಶ್ಮಿ....  ರಶ್ಮಿ ಸ್ವಲ್ಪ ತಾಳು  ಎಂದರೂ  ಮಾತು  ಕೇಳದೆ  ಹೊರಟು ಹೋದಳು,  ಸಂಜೆಯ ಸೂರ್ಯ  ರಶ್ಮಿಯ  ಕಳೆದುಕೊಂಡಿದ್ದ .  ನನಗೋ  ಅವಳ ಬಗ್ಗೆ  ಅಚ್ಚರಿ ನನ್ನದೇನು ತಪ್ಪಿದೆ ಎಂದು ಯೋಚಿಸಿದರೂ ಯಾವ ತಪ್ಪೂ  ಕಾಣಲಿಲ್ಲ, ಅವಳೂ ಹೇಳಲಿಲ್ಲ,  ಮೊಬೈಲ್ ಬೇರೆ ಸ್ವಿಚ್  ಆಫ್ ಆಗಿತ್ತು ಅವಳದು, ನನ್ನ  ಮೇಲ್  ಬಾರದಂತೆ ಬ್ಲಾಕ್ ಮಾಡಿದ್ದಳು,  ಬೇಸರದ ಮುಖ ಹೊತ್ತು, ನನ್ನ ರೂಂ ಗೆ ಬಂದೆ, 

ಅಂದು  ರಾತ್ರಿ  ನಮ್ಮ ಅಪ್ಪ ಅಮ್ಮ,   ಹಾಗು ಅವಳ ಅಪ್ಪಾ , ಅಮ್ಮ ಅವಸರದಲ್ಲಿ  ನನ್ನ ರೂಮಿಗೆ  ಬಂದು  ನಡೆದ ಘಟನೆ ಬಗ್ಗೆ  ಮಾಹಿತಿ ಕೇಳಿದರು , ನಡೆದ ವಿಚಾರ ತಿಳಿಸಿದೆ, ಅವರಿಗೂ ರಶ್ಮಿಯ ಈ ನಿರ್ಧಾರ  ಬೇಸರ ತಂದಿತ್ತು,  ಅವಳ ತಂದೆ ತಾಯಿಯರಿಗೆ ಅವಳ ನಿರ್ಧಾರ  ಆಘಾತ ನೀಡಿತ್ತು, ವಯಸ್ಸಾದ ನಮ್ಮ ಅಪ್ಪನಿಗೆ ಅವರ ಕುಟುಂಬದ ಘನತೆಗೆ  ಬಿದ್ದ ಪೆಟ್ಟು  ನೋವು ತಂದಿತ್ತು, ನಮ್ಮ ಅಮ್ಮನಂತೂ ಹುಚ್ಚಿಯಂತೆ ಅಳುತ್ತಿದ್ದಳು , ಆದರೆ ರಶ್ಮಿ ಯಾರಿಗೂ  ಅರ್ಥವಾಗದಂತಹ  ಒಂದು ನಿರ್ಧಾರ ತೆಗೆದುಕೊಂಡು  ಸೂರ್ಯನಿಂದ  ದೂರವಾಗುತ್ತಿದ್ದಳು, .......  ಅತ್ತಾ ಅಪ್ಪ ಹುಡುಗಿಯ ಮನೆಯವರಿಗೆ  ಬಹಳ ಪ್ರೀತಿಯಿಂದ  ಮಾಡಿಸಿದ್ದೆ ಇವುಗಳನ್ನು  ನನ್ನ ಸೊಸೆ  ಖುಷಿಯಾಗಿರಲಿ ಅಂತಾ , ಆದರೆ ನಮ್ಮ ಸಂತೋಷಕ್ಕೆ ಬೆಂಕಿ ಇಟ್ಟಳು  ಇದನ್ನು ಅವಳಿಗೆ ಕೊಟ್ಟುಬಿಡಿ  , ಈ ಘಟನೆಯ ನೆನಪಿಗೆ  ಅವಳಲ್ಲೇ ಉಳಿಯಲಿ ಇದು   ಎನ್ನುತ್ತಿದ್ದ ಮಾತುಗಳು  ಕೇಳಿ  ಬರುತ್ತಿದ್ದವು.  ನಾನು  ಈ ಜಂಜಾಟ ಗಳಿಂದ ನೊಂದು   ಪಶ್ಚಿಮದ  ಕಡೆ    ರಶ್ಮಿ  ಇಲ್ಲದ  ಸೂರ್ಯನಂತೆ  ನದೆಯುತ್ತಿದ್ದೆ. .......... !!!  ನೊಂದ ಮನಸು  ಓ   ಹೆಣ್ಣುಮಕ್ಕಳೇ  ಇವಳನ್ನು ಕ್ಷಮಿಸಿಬಿಡಿ ...... !!  ಅನ್ನುತ್ತಿತ್ತು ರಶ್ಮಿ ಯಿಲ್ಲದ ಸೂರ್ಯನನ್ನು  ಕಾರ್ಮೋಡಗಳು  ಮುಚ್ಚುತ್ತಿದ್ದವು .
 
ಈ ಕಥೆಯನ್ನು  ಯಾವ ಹೆಣ್ಣುಮಕ್ಕಳನ್ನು ನೋಯಿಸುವ ಉದ್ದೇಶದಿಂದ ಬರೆದಿಲ್ಲ , ಆದರೆ ಒಮ್ಮೊಮ್ಮೆ ಹೀಗೆ ಆದಾಗ  ಗಂಡು ಮಕ್ಕಳಿಗೆ ಆಗುವ ಆಘಾತ ದ ಒಂದು ಚಿತ್ರಣ ನೀಡಿದ್ದೇನೆ . ಇಷ್ಟ ಆದ್ರೆ ನಿಮ್ಮ ಅನಿಸಿಕೆ ಬರಲಿ .

9 comments:

Badarinath Palavalli said...

ಬದುಕಿನ ದಿಕ್ಕು ನಿರ್ಧರಿಸುವುದು ತಪ್ಪಲ್ಲ, ಪ್ರತಿಯೊಬ್ಬರೂ ಸರ್ವ ಸ್ವಾತಂತ್ರ್ಯರೇ. ಆದರೆ ಯಾವ ನಿರ್ಧಾರ ಯಾವ ಹೊತ್ತಿನಲ್ಲಿ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯ ಸಂಗತಿ.

ಇನ್ನೇನು ಜೀವನದ ಅತೀ ಮುಖ್ಯ ಘಟ್ಟಕ್ಕೆ ಕಾಲಿಡಬೇಕಿದ್ದ ರಶ್ಮಿಯು ಹಾಗೆಲ್ಲ ತೊರೆಯಬಾರದಿತ್ತು. ಅದೂ ಸೂರ್ಯನೂ ವಿದೇಶಕ್ಕೆ ಜೋಡಿಯಾಗಿ ಹಾರಬಹುದಲ್ಲ ಎಂದರೂ!

ವರನ ವೃದ್ಧ ತಂದೆ ತಾಯಿಗಳಿಗಾಗುವ ಮಾನಸಿಕ ಅಘಾತವಂತೂ ಕಲ್ಪನೆಗೂ ನಿಲುಕದ ವಿಚಾರ.

ಮನ ಮಿಡಿಯುವ ನಿರೂಪಣೆ.

Anonymous said...

ಇದು ಕಥೆ ಅಂತ ಅನ್ನಿಸಲೇ ಇಲ್ಲ..ನಿಜವೇ ಅನ್ನಿಸಿತು.ನಮ್ಮ ಸುತ್ತು ಮುತ್ತು ಇಂತಹ ಒಂದೆರಡು ಘಟನೆಗಳಿಗೆ ಸಾಕ್ಷಿಯಾಗಿ ನಿಂತ ಮೇಲೆ ಮನಸ್ಸು ಸರಿ ತಪ್ಪುಗಳನ್ನು ಎಣಿಕೆ ಮಾಡುವಲ್ಲಿ ಸೋಲುತ್ತದೆ.

ಅನಿತಾ ನರೇಶ್

Srikanth Manjunath said...

ಶೋ ಕೇಸ್ ನಲ್ಲಿರುವ ಗೊಂಬೆಗಳಿಗೆ ಭಾವನೆಗಳಿರುವುದಿಲ್ಲ. ಅವಕ್ಕೆ ಕಾರಣಗಳು ಇರುವುದಿಲ್ಲ.. ಸುಮ್ಮನೆ ಇರುತ್ತವೆ.. ಸುಮ್ಮನೆ ನಿಲ್ಲುತ್ತವೆ.. ಕಥಾನಾಯಕಿಯ ನಿರ್ಧಾರದ ಹಿಂದೆ ಏನೇ ಬಲವಾದ ಕಾರಣಗಳಿದ್ದರೂ ಅದನ್ನ ವಿವರಿಸದೆ ಆಘಾತಕ್ಕೆ ದೂಡುವ ಪರಿ ಇಷ್ಟವಾಗಲಿಲ್ಲ.

ಕರಿಯರ್ ಮುಖ್ಯ ಅನ್ನುವರು.. ಮದುವೆ ಆಗೋಲ್ಲ ಅಥವಾ ಆಗಬಾರದು ಎನ್ನುವ ಮಾತು ಬಾಲಿಶ ಎನ್ನಿಸುತ್ತದೆ.
ಒಂದು ತಪ್ಪು ನಿರ್ಧಾರದ ಹಿಂದೆ ಒಂದು ವಂಶವಾಹಿನಿಯೇ ಗೋಳಿಟ್ಟರೆ.. ಸರಿಯಾದ ನಿರ್ಧಾರದಿಂದ ಮುಂದಿನ ಪೀಳಿಗೆ ಸಂತಸದ ನಿಟ್ಟುಸಿರು ಬಿಡುತ್ತದೆ ಎನ್ನುವ ಒಂದು ಸಣ್ಣ ಅಭಿಪ್ರಾಯ ಕಥಾನಾಯಕಿಯ ತಲೆಗೆ ಬರಲಿಲ್ಲವೋ ಅಥವಾ ಅದನ್ನು ಬರಲು ಬಿಡದೆ ಇರುವಂತಹ ಮಹತ್ತರವಾದ ಕಾರಣವಿತ್ತೋ ಎನ್ನುವ ಸಣ್ಣ ಸಂಶಯದ ಸೆಲೆ ಎಳೆಯುತ್ತದೆ.

ಕಥೆಯಲ್ಲ ಅನ್ನುವುದು ನಿಜವಾದರೂ ಕಥೆಯಂತೆಯೇ ನಡೆದ ಈ ಘಟನೆ ಹುಡುಗನ ಮನಸ್ಸನ್ನು ಅಲ್ಲಾಡಿಸುತ್ತಿದೆ. ಕಥಾನಾಯಕ.. ಇದನ್ನೇ ಮನಸ್ಸಿಗೆ ಹಚ್ಚಿಕೊಳ್ಳದೆ ಅನ್ನದ ಅಗುಳಿನ ತನ್ನ ಹೆಸರಲ್ಲದೆ ಇರುವುದನ್ನು ಹೇಗೆ ತಿನ್ನಲಾಗದೋ ಹಾಗೆಯೇ ಹಣೆಯಲ್ಲಿ ಬರೆಯದ ಹೆಣ್ಣು ಜೀವನದಲ್ಲಿ ಬಂದು ಮುಂದೆ ಆಗುವ ಅಥವಾ ಆಗಬಹುದಿದ್ದ ಅನಾಹುತವನ್ನು ಈಗಲೇ ತಪ್ಪಿಸಿದ್ದು ಒಳ್ಳೆಯದಾಯ್ತು ಎನ್ನುವ ಧನಾತ್ಮಕ ನಿರ್ಧಾರದ ಕಡೆಗೆ ಸೂರ್ಯನ ರಶ್ಮಿಯನ್ನು ಹೊರಳಿಸಬೇಕು..

ನಿರೂಪಣೆ, ಪಾತ್ರ ವಿವರಿಸಿದ ಪರಿ.. ಭಾವನಾತ್ಮಕ ಪದಗಳಿಂದ ಕೂಡಿದ ಬರಹ ಇಷ್ಟವಾಯಿತು.

ಮೌನರಾಗ said...

ಇಷ್ಟವಾಯಿತು ಬಾಲಣ್ಣ...
ನಾನೂ ಸಹ ಇಂತಹ ಹುಡುಗಿಯರನ್ನು ನೋಡಿದ್ದೇನೆ. ಪರ್ಸನಲ್ ಲೈಫ್ ಗಿಂತ ಪ್ರೊಫೆಶನಲ್ ಲೈಫ್ ಗೆಯೇ ಜಾಸ್ತಿ ಮಹತ್ವ ಕೊಡುವವರನ್ನು ನಾನು ಕಂಡಿದ್ದೇನೆ.ಪ್ರೊಫೆಶನಲ್ ಬದುಕಿನಲ್ಲಿ ಸಿಗುವ ಹಣ, ಹೆಸರಿಗಿಂತ ವೈಯಕ್ತಿಕ ಬದುಕಿನಲ್ಲಿ ಸಿಗುವ ಆತ್ಮತೃಪ್ತಿಯೇ ಮಿಗಿಲು ಎಂಬುದನ್ನು ಇಂತಹ ಹುಡುಗಿಯರಿಗೆ ಮನವರಿಕೆ ಮಾಡಿ ಕೊಡಬೇಕಾದ ಅನಿವಾರ್ಯತೆ ಇದೆ.

ಆದರೆ....!
ಇನ್ನೊಂದು ಸಾಧ್ಯತೆಗಳ ಕುರಿತು ನಾವು ಯೋಚಿಸಬೇಕು.
ಹುಡುಗಿ ಮದುವೆ ಸದ್ಯಕ್ಕೆ ಬೇಡ ಅಂದಿರುವುದು ಅಷ್ಟೇ. ಸಮಯ ಕೇಳಿದ್ದಾಳೆ..
ಹಾಗಾಗಿ ಒಂದು ಅವಕಾಶ ಇತ್ತು ಅಲ್ಲಿ.. ಇಪ್ಪತ್ತಾರು ವರ್ಷದ ಯುವಕ ಇಪ್ಪತ್ತೆಂಟರವರೆಗೆ ಕಾಯಬಹುದಿತ್ತು ಅಲ್ಲವಾ...?

ಸರಿ!
ಆಮೇಲೆ ಹುಡುಗಿ ಮನಸ್ಸು ಬದಲಾಯಿಸಿದರೆ... ?!
ಆ ಪ್ರಶ್ನೆಯೇ ಇಲ್ಲಾ...
ಯಾಕೆಂದರೆ ತನ್ನ ವೃತ್ತಿ ಬದುಕಿನ ಬಗ್ಗೆ ಅಷ್ಟು ಖಡಾಖಂಡಿತವಾಗಿರುವ ಹುಡುಗಿ, ತನ್ನ ನಿರ್ಧಾರಗಳನ್ನು ನೇರಾನೇರ ಹೇಳುವ ಹುಡುಗಿ ಮದುವೆ ಆಗೋಲ್ಲವಾದರೆ ಖಂಡಿತ ಅದನ್ನು ಹೇಳಿರುತ್ತಿದ್ದಳು..
-ಇದು ಸಾಧ್ಯತೆ ಅಷ್ಟೇ.

ಇವೆಲ್ಲವನ್ನೂ ಮೀರಿ ನನಗಿಷ್ಟವಾದ ಚಂದದ ಕಥೆ..

Swarna said...

ಹೌದು ಇದು ಕಥೆ ಅನ್ನಿಸಲೇ ಇಲ್ಲ. ಚಂದದ ನಿರೂಪಣೆ. ಈ ಸ್ಥಿತಿ ಯಾರಿಗೂ ಬಾರದಿರಲಿ

ಸಂಧ್ಯಾ ಶ್ರೀಧರ್ ಭಟ್ said...

ಕಥೆಯಲ್ಲದ ಕಥೆ ತುಂಬಾ ಚೆನ್ನಾಗಿದೆ ..

bhagya bhat said...

ನಿಜ ಅಣ್ಣಾ..
ಕಥೆ ಹತ್ತಿರ ಅನ್ನಿಸ್ತು..ವಾಸ್ತವವಿದೆ..

Anonymous said...

ನನಗನ್ನಿಸಿದ್ದು,,,,, ಹುಡುಗಿ ಚಿಕ್ಕ ವಯಸ್ಸಿನಿಂದಲೂ ಈ ರೀತಿಯ ಪ್ರೊಫೆಶನಲ್ ಲೈಫ್ ಕನಸು ಕಂಡು, ಅದು ನನಸಾಗುವ ಸಮಯ ಬಂದಾಗ ಮದುವೆ ಒಂದು ಬಂದನ ಎನ್ನುವ ಚಿಕ್ಕ ಆಲೋಚನೆಗೆ ಒಳಗಾಗಿರಬಹುದು,,,,ಹಾಗಾಗಿ ಆಕೆ ಎರಡು ವರ್ಷಗಳ ಸಮಯ ಕೇಳಿದ್ದಿರಬಹುದು,,,, ಹುಡುಗನ ಅಪ್ಪ-ಅಮ್ಮನಂತೆ ಹುಡುಗಿಯ ಅಪ್ಪ ಅಮ್ಮ ಕೂಡ ಅಷ್ಟೇ ಆಸ್ಥೆ ಇಂದಾ ಅವಳನ್ನು ಬೆಳೆಸಿರುತ್ತಾರೆ ಹಾಗಾಗಿ ಆ ಕ್ಷಣಕ್ಕೆ ಅದು ಅವರ ಮನಸ್ಸಿಗೂ ಸರಿ ಅನ್ನಿಸಿರಬಹುದು, ನನ್ನ ಮಗಳು ವಿದೇಶದಲ್ಲಿ ಇದ್ದಾಳೆ ಎಂದು ಹೇಳಲು ಯಾವ ಹೆತ್ತವರಿಗೆ ಕನಸಿರುವುದಿಲ್ಲ?? (ಇದು ಒಂದು ಸಾದ್ಯತೆ ಅಷ್ಟೇ)

ನಿಮ್ಮ ಕಥೆಯಲ್ಲಿನ ಹುಡುಗನ ತಂದೆ ತಾಯಿಯಾ ನೋವು ಖಂಡಿತಾ ಕಿವುಚುವಂತದ್ದು,,,,,, ಕೆಲಸ, ಪ್ರೊಫೆಶನಲ್ ಲೈಫ್, ಐಶಾರಾಮ,ಬ್ಯಾಂಕ್ ತುಂಬಾ ಸಂಬಳ, ಇದೇ ಬದುಕು ಎಂದು, ಜೊತೆಗೆ ದೇಶ ಅಂದ್ರೆ ಅಮೇರಿಕಾ ಮಾತ್ರ ನಮ್ಮದು ಬರಿ ಕೊಚ್ಚೆ ಗುಂಡಿ ಎಂದು ಮಕ್ಕಳಿಗೆ ಬೊದಿಸಿದ ಪರಿಣಾಮ, ನಾವು ನಮ್ಮ ಅವಿಭಕ್ತ ಕುಟುಂಬದಿಂದಾ, ಮೂರು ಜನರ ಕುಟುಂಬಕ್ಕೆ ಬಂದು ನಿಂತೆವೂ,,,, ಈಗಿನ ಪೀಳಿಗೆಯವರು ಕುಟುಂಬ ಎನ್ನುವ ಪದವೇ ಜೈಲ್ ಅನ್ನುವ ರೀತಿ ಭಾವಿಸುತ್ತಾರೆ,,,,, ಇದೆಲ್ಲದರ ಪರಿಣಾಮ ಇರಬೇಕು ನಮ್ಮ ಕಥಾ ನಾಯಕಿ ಅಷ್ಟೊಂದು ಭಾವನ ರಹಿತ ಆಗಿದ್ದು,,,

ನಿಜವಾಗಿಯೂ ಮನಸ್ಸು ಕದಡಿದ ಕಥನ,,,, ಧನ್ಯವಾದಗಳು ಸರ್
--ಜೀ ಕೇ ನವೀನ್

Harini Narayan said...

ರಶ್ಮಿಯ ನಿರ್ಧಾರ ತಪ್ಪಲ್ಲ .. ಆಕೆ ನಿರ್ಧಾರ ತೆಗೆದುಕೊಂಡ ಆ ಸಮಯ ತಪ್ಪು. ಅಮೇರಿಕಾದ ಐಶಾರಾಮೀ ಜೀವನದ ಆಕರ್ಷಣೆ, ಹಾಗೆ !! .... ಅಷ್ಟೆಲ್ಲಾ ಮುಂದುವರೆದು ಕಂಕಣ ಕಟ್ಟುವ ಹತ್ತಿರದ ಸಮಯದಲ್ಲಿ ವೃದ್ಧ ಚೇತನರ ಮನನೋಯಿಸಿದ್ದು, ಒಲಿದವನ ಮನವರಳಿಸಿ, ನೋಯಿಸಿದ್ದು ಅಕ್ಷಮ್ಯ ಅಪರಾಧವೇ ಆದರೂ ಸೂರ್ಯನೊಂದಿಗೆ ನಾವೂ ಹೇಳಬೇಕಾಗಿದೆ, ' ಹೆಣ್ಣುಮಕ್ಕಳೇ ಅವಳನ್ನು ಕ್ಷಮಿಸಿಬಿಡಿ ' - ಸುಂದರ ನಿರೂಪಣೆ....ಬಾಲೂ.