Tuesday, March 4, 2014

"ಸುಲೇಖ" ಹೇಳಿದ ಕಥೆ ಇದು ....!! ಹೇಗಿದ್ದ ಜೀವನ ಹೇಗಾಗೊಯ್ತು ....!



ಶೀರ್ಷಿಕೆ ಸೇರಿಸಿ

 ಕಳೆದ ಸಂಚಿಕೆಯಲ್ಲಿ  ಬರೆದ , "ಹೆಣ್ಣು ಮಕ್ಕಳೇ ಇವಳನ್ನು ಕ್ಷಮಿಸಿಬಿಡಿ "  ಲೇಖನಕ್ಕೆ  ಬಹಳ ಒಳ್ಳೆಯ ಪ್ರತಿಕ್ರಿಯೆ ಬಂತು, ಕೆಲವು ಹೆಣ್ಣುಮಕ್ಕಳು  ಕಥೆಯನ್ನು ಮೆಚ್ಚಿ  ಕಾಮೆಂಟ್ ಹಾಕಿದ್ರೆ  ಮತ್ತೆ ಕೆಲವರು ಫೋನ್ ಮಾಡಿ  ತಮ್ಮ ಅನಿಸಿಕೆ  ಹೇಳಿದರು, ಹಾಗಾಗಿ ಮತ್ತೊಂದು  ನೈಜತೆಗೆ ಹತ್ತಿರವಿರುವ  ಸಣ್ಣ ಕಥೆ ಬರೆದಿದ್ದೇನೆ  , ಓದಿ ಇಷ್ಟಾ ಆದ್ರೆ   ನಿಮ್ಮ ಅನಿಸಿಕೆ  ಬರೆಯಿರಿ.

"ಸುಲೇಖ"   ನಮ್ಮ ಕಥೆಯ ನಾಯಕಿ, ಹುಟ್ಟಿದ್ದು  ಹಳ್ಳಿಯಲ್ಲಿ  ಹತ್ತನೇ ತರಗತಿಯ ವರೆಗೆ  ಓದಿ,  ಮಲ್ಲಿಗೆಯ ಪಟ್ಟಣದಲ್ಲಿ  ಕಾಲೇಜು ಕಲಿತು,  ಸಂಸಾರ  ಕಟ್ಟಿಕೊಂಡು  ನರಳಿ ಅವಮಾನ , ಅಪಹಾಸ್ಯ  ಎಲ್ಲವನ್ನೂ ಎದುರಿಸಿ , ಜೀವನ ಗೆದ್ದ  ಸಾಹಸಿ , ಬನ್ನಿ ಅವಳ ಬಾಯಿಂದ  ಕತೆ  ಕೇಳೋಣ .

ನಾನು "ಸುಲೇಖ"  ನನ್ನ ಬಾಲ್ಯ  ಕಳೆದದ್ದು  ನಮ್ಮ ಹಳ್ಳಿ "ಕಾಶಿಪುರ "ದಲ್ಲಿ ಪ್ರೀತಿ ತೋರುವ  ಅಪ್ಪ , ಅಮ್ಮ, ಅಜ್ಜಿ , ಅಣ್ಣ  ಹಾಗು ,ತಮ್ಮ   ಎಲ್ಲರ ಜೊತೆ ಸಾಗಿತ್ತು ನನ್ನ  ಸುಖಮಯ ಜೀವನ . ನನ್ನ ಓದು  ಪಕ್ಕದ  ಪುಟ್ಟ ಪಟ್ಟಣ   "ಸೇವಂತಿಗೆ"   ಪುರದಲ್ಲಿ ಹತ್ತನೇ ತರಗತಿ ಓದಿ ,   "ಶ್ರೀಗಂಧ ಪುರ" ದಲ್ಲಿ  ಕಾಲೇಜು ಸೇರಿ ಪದವಿ ಪಡೆದೆ , ಅಪ್ಪಾ ಇರುವವರೆಗೆ  ಜೀವನ ನಡೆದೇ ಇತ್ತು,  ಯಾವ ಅಡೆತಡೆ  ಇರಲಿಲ್ಲ .  ಅದೊಂದು ದಿನ  ಜೀವನದ ಬರಸಿಡಿಲು ನಮ್ಮ ಕುಟುಂಬಕ್ಕೆ  ಬಡಿಯಿತು,  ಅಪ್ಪಾ ಒಬ್ಬರೇ  ಈ ಲೋಕ ತ್ಯಜಿಸಿ  ಪಯಣ ಬೆಳೆಸಿದ್ದರು.

ಅಪ್ಪನ ಸಾವು  ನಮ್ಮೆಲ್ಲರ ಜೀವನ  ಬದಲಿಸಿ, ಕಷ್ಟ ಎಂದರೇನು   ಎಂದು   ತಿಳಿಯುವಂತೆ ಮಾಡಿತು,   ಅಪ್ಪನ ಸಾವಿನ ನಂತರ ಶುರು ಆಯಿತು , ಅಪ್ಪನ ಆಸ್ತಿಗಾಗಿ   ಬಂಧುಗಳ  ದೊಂಬರಾಟ   , ಬಣ್ಣ ಬಣ್ಣದ ಮಾತನಾಡುತ್ತಾ , ಅಪ್ಪನ ಕನಸನ್ನು  ನನಸು ಮಾಡುವುದಾಗಿ  ಹೇಳಿಕೊಂಡು  ಸವಿಯಾದ ಮಾತನಾಡಿ,  ಅಪ್ಪನ   ಆಸ್ತಿಯನ್ನು  ಕೊಳ್ಳೆ ಹೊಡೆದರು, ಅಸಹಾಯಕ, ಅಮ್ಮಾ , ಪ್ರಪಂಚ ತಿಳಿಯದ  ನಾವು  ಕೊಳ್ಳೆ ಹೊಡೆಯುವ  ಬಂದುಗಳ ಗಾಳಕ್ಕೆ  ಸಿಕ್ಕಿ  ವಿಲ ವಿಲ ಒದ್ದಾಡಿದೆವು , ಕಣ್ಬಿಟ್ಟು ಪ್ರಪಂಚ ತಿಳಿಯುವಷ್ಟರಲ್ಲಿ  ಎಲ್ಲಾ ಆಸ್ತಿ ಖಾಲಿ ಯಾಗಿತ್ತು.  ಇರುವ ಮಗಳ  ಮದುವೆ  ಮಾಡಿ  ಸಂಸಾರದ  ದೊಡ್ಡ ಜವಾಬ್ಧಾರಿಯನ್ನು  ಕಳೆಯಲು, ಅಮ್ಮಾ  ಬಹಳ ಪ್ರಯತ್ನ  ಮಾಡಿದಳು , ಹೌದು  ಬೆಳೆದ ಮಗಳನ್ನು  ಎಷ್ಟು ದಿನ  ಮನೆಯಲ್ಲಿ ಇಟ್ಟು ಕೊಳ್ಳೋದು?  ವಯಸ್ಸಾದ  ಹೆಣ್ಣುಮಕ್ಕಳನ್ನು ನಾಳೆ  ಯಾರು ಮದುವೆ  ಆಗ್ತಾರೆ ? ನನ್ನ ಜೀವ ಗಟ್ಟಿ ಯಾಗಿರುವಾಗಲೇ , ಈ ಕಾರ್ಯ ಮುಗಿಸ ಬೇಕು, ಎಂಬ  ಕಾರಣಕ್ಕೆ   ನನ್ನ ಮದುವೆ  ಮಾಡುವ  ಕಾರ್ಯಕ್ಕೆ ಕೈ ಹಾಕಿ, ಮನೆಯ ಆಪ್ತ  ಬಂದುಗಳ  ಸಹಾಯದಿಂದ  ಮುಂದುವರೆದಳು, ಹಲವು ಗಂಡುಗಳ  ಸಂದರ್ಶನ  , ಗಂಡಿನ ಮನೆಯವರು   ಒಡ್ಡುವ  ಹಲವಾರು ಪರೀಕ್ಷೆಗೆ  ಮೂಕಳಾಗಿ   ಒಳಗಾಗುತ್ತಿದ್ದೆ, ಹಾಗು ಹೀಗೂ  "ಕಲ್ಯಾಣ ಪುರ" ದಲ್ಲಿ   ಒಂದು ಗಂಡು  ನನ್ನ ಮದುವೆಯಾಗಲು  ಮುಂದೆ ಬಂದಿತ್ತು,  ನಿಶ್ಚಿತಾರ್ಥ  ಆಗಿ  ಮದುವೆ  ಛತ್ರಕ್ಕೆ ದುಡ್ಡು ಕೊಟ್ಟು  ಕಾಯ್ದಿರಿಸಿ  , ಲಗ್ನ ಪತ್ರಿಕೆ ಅಚ್ಚು ಮಾಡಿಸಿ ತಯಾರಿ  ಮಾಡಿಕೊಳ್ಳುವ  ವೇಳೆಗೆ  ರಪ್ಪನೆ ಅಪ್ಪಳಿಸಿತ್ತು,  ಹುಡುಗ  ನನ್ನನ್ನು  ಮದುವೆ ಆಗಲು  ಇಷ್ಟಾ ಪಡುತ್ತಿಲ್ಲಾ   ಎಂಬ ಸುದ್ದಿ,  ಕಾರಣ ತಿಳಿಯುವ ಹಂತದಲ್ಲಿ   ನಮ್ಮ  ಮನೆಯ  ಅಪ್ಪನ ಆಸ್ತಿ ತಿಂದ   ಬಂದುಗಳೇ  ಹುಡುಗನ  ಮನೆಗೆ ಹೋಗಿ  ಮದುವೆಗೆ  ಕೊಳ್ಳಿ ಇಟ್ಟು ಬಂದಿದ್ದರು . ಇತ್ತಾ ಅಪ್ಪನ ಗೆಳೆಯ ಹಾಗು ಅವರ ಕುಟುಂಬ  ಅಪ್ಪನ  ಮೇಲಿನ ಗೌರವದಿಂದ  ಒಳ್ಳೆಯ ಕೆಲಸ ಮಾಡುತ್ತಿದ್ದರೆ , ಅತ್ತಾ  ರಕ್ತ  ಹಂಚಿಕೊಂಡು  ಹುಟ್ಟಿದ  ಬಂಧುಗಳು  ಒಳ್ಳೆಯ ಕೆಲಸಗಳಿಗೆ  ಅಡ್ಡಿ ಮಾಡುತ್ತಿದ್ದರು .

ಹೀಗಿರುವ ಸಮಯದಲ್ಲಿ  ನನ್ನ ಜೀವನಕ್ಕೆ  ತಿರುವು ಕೊಡಲು  ಬಂದ ಒಂದು ಹುಡುಗ ,  ಹೌದು ಯಾವುದೋ ಖಾಸಗಿ ಕಂಪನಿಯಲ್ಲಿ  ಉದ್ಯೋಗ ಮಾಡುತ್ತಾ , ತನ್ನದೇ ವಿಚಾರಗಳಿಗೆ  ಹೆತ್ತವರಿಂದ ದೂರವಾಗಿ , ತನ್ನ  ಜೀವನದ ಸಂಗಾತಿ ಯನ್ನು ಅರಸಿಕೊಂಡು  ನನ್ನ  ಬಳಿ  ಬಂದಿದ್ದ,  ನೇರ ಮಾತು, ದಿಟ್ಟ ನಡೆ , ನನಗೆ ಇಷ್ಟವಾಗಿ  ಅವನೊಡನೆ ಸಪ್ತಪದಿ  ತುಳಿದೆ .ಆ ಹುಡುಗನೇ ನನ್ನ ಪತಿ "ಪುರುಷೋತ್ತಮ"  ಹೊಸ ಸಂಸಾರ  , ಆರಂಭ ಗೊಂಡ  ಸ್ವಲ್ಪ ದಿನಕ್ಕೆ   ಈ  ಸಂಸಾರಕ್ಕೂ   ಕೊಳ್ಳಿ ಇಡಲು  ನೋಡಿದ ಬಂಧುಗಳ  ಆಟ ನಡೆಯಲಿಲ್ಲ, ಅಪ್ಪ ಬದುಕಿರುವಾಗ  ಇವರಿಗೆ ವಿಧ್ಯೆ  ಕಳಿಸಿ,  ಕೆಲಸ ಕೊಡಿಸಿ,  ಇವರ  ಮದುವೆ  ಸಹ ಅದ್ದೂರಿಯಾಗಿ  ಮಾಡಿದ  ಅಪ್ಪನ  ಸಹಾಯಕ್ಕೆ   ಇವರುಗಳು  ನೀಡಿದ  ಕೊಡುಗೆ ಇದಾಗಿತ್ತು.  ಜೀವನ ಚಕ್ರ  ಉರುಳಿತು,  ಒಂಟಿಯಾಗಿದ್ದ  ನನ್ನ ಪತಿ  ತನ್ನ ತಂದೆ ತಾಯಿಗಳ  , ಸಹೋದರರ  ಜೊತೆ  ರಾಜಿಯಾಗಿ   ಒಟ್ಟು   ಕುಟುಂಬಕ್ಕೆ ಸೇರಿಕೊಂಡರು .



ತುಂಬಿದ ಮನೆ  ಎಂಟು ಜನ  ಸಹೋದರ  ಒಟ್ಟು ಕುಟುಂಬ , ನನ್ನಂತೆಯೇ ಸೊಸೆಯರಾಗಿ   ಆ ಮನೆಗೆ  ಬಂದಿದ್ದ  ಹೆಣ್ಣುಮಕ್ಕಳು  ನನ್ನೊಡನೆ ಬಹುಬೇಗ ಹೊಂದಿಕೊಂಡರು , ನಾವೆಲ್ಲರೂ ಒಂದೇ ಕಾಲೇಜಿನಲ್ಲಿ ಓದಿದ  ಗೆಳತಿಯರಂತೆ  ಒಬ್ಬರಿಗೊಬ್ಬರು  ಜೋತೆಯಾದೆವು . ಇಷ್ಟು ಹೊತ್ತಿಗೆ  ನಾನು ಇಬ್ಬರು  ಮಕ್ಕಳ ತಾಯಿಯಾಗಿದ್ದೆ.  ನನ್ನ ಪತಿ  ಪುರುಷೋತ್ತಮ  ಅದೇ ಖಾಸಗಿ ಕಂಪನಿಯಲ್ಲಿ  ಉದ್ಯೋಗ ಮಾಡುತ್ತಾ  , ಬೇರೆಡೆ ಒಳ್ಳೆಯ ಅವಕಾಶ  ಸಿಕ್ಕಿದರೂ  ಹೋಗದೆ  ತನಗೆ ಮೊದಲು ಅನ್ನ  ನೀಡಿದ  ಆ ಕಂಪನಿಗೆ ನಿಷ್ಟನಾಗಿ   ಉಳಿದಿದ್ದರು . ಒಟ್ಟು ಕುಟುಂಬದಲ್ಲಿ  ನಡೆದಿದ್ದ  ಜೀವನ ನಾಟಕದಲ್ಲಿ  ನನ್ನದು ಒಂದು  ಪಾತ್ರವಿತ್ತು,  ಅದೇ ನನ್ನ ಪತಿ  "ಪುರುಷೋತ್ತಮ " ರ  ಪತ್ನಿಯಾಗಿ ಆ ಸಂಸಾರಕ್ಕೆ  ಒಳ್ಳೆಯ ಕೊಡುಗೆ ನೀಡುವುದು . ಹೀಗಿರಲು ಒಂದು ದಿನ  ನಾನು  ನನ್ನ ಪತಿ  ಕಂಪನಿಯ ಕೆಲಸ ಮುಗಿಸಿ ಮನೆಗೆ ಬರುವುದನ್ನು  ಕಾಣಲು ನನ್ನ ಪುಟ್ಟ ಮಗನೊಡನೆ ತೆರಳುತ್ತಿದ್ದೆ,  ಆಗ ಒಂದು ಮಾತು ಬಂದು  ಎರಗಿತು, ಪಕ್ಕದ ರೂಂ ನಲ್ಲಿ  ನನ್ನವರ  ಕೊನೆಯ ತಮ್ಮ  ಹಾಗು ಅವನ ಮಡದಿ  ನನ್ನ ಬಗ್ಗೆ ಮಾತನಾಡುತ್ತಾ  ಕುಳಿತಿದ್ದರು ,  ಅಯ್ಯೋ ಅವಳ ಹಳ್ಳಿ ಹುಡುಗಿ  , ಇನ್ನು ಅವಳ ಗಂಡ  ಅವನೋ ಅದೇ ಖಾಸಗಿ  ಕಂಪನಿಯಲ್ಲಿ  ಕೆಲಸ  , ಬೆಳಿಗ್ಗೆ ಹೋದರೆ ರಾತ್ರಿ ಬರ್ತಾನೆ, ಇವರಿಬ್ಬರು ಸಾಕುವ ಮಕ್ಕಳು  ...? ಅವೋ ಈಗಲೇ ಹಿಂಗಿವೆ, ಅವುಗಳು  ಓದುವ ಲಕ್ಷಣ ಅಂತೂ ಗೋಚರಿಸುತ್ತಿಲ್ಲಾ,  ಇನ್ನು ಇವರ ಬದುಕು  ದೇವರೇ ಗತಿ,  ಮಕ್ಕಳನ್ನು  
ಮುಂದೇ  ತರೋದು ಅಷ್ಟು ಸುಲಭ ಅಲ್ಲಾ ....! ಮುಂದೆ ನೋಡ್ತಾ ಇರು  ಇವರ ಜೀವನ ಚಿತ್ರಾನ್ನ ಆಗೋದಂತೂ  ಗ್ಯಾರಂಟೀ , ಎಂಬ ಮಾತುಗಳು  ಬರ ಸಿಡಿಲಿನಂತೆ  ಎರಗಿದವು.  ಮುಂದೆ ಒಳ್ಳೆಯವರಂತೆ  ನಟಿಸುವ ಇವರ ಅಸಲಿ  ಬಣ್ಣ  ಗೋಚರಿಸಿತ್ತು .

 ಈ ಮಾತನ್ನು ಕೇಳಿದ ನನ್ನ ಮಗ , ಅಮ್ಮಾ  ಚಿಕ್ಕಪ್ಪ , ಚಿಕ್ಕಮ್ಮಾ  ಹೇಳಿದ್ದು ಏನಮ್ಮಾ , ಅವರು ಯಾಕೆ ನಮ್ಮ ಬಗ್ಗೆ ಹೀಗೆ ಮಾತನಾಡಿದರು , ಎಂದು ಪ್ರಶ್ನಿಸಿದ , ಅವನನ್ನು ಸಮಾಧಾನ  ಮಾಡಿ, ನೋಡು ಮಗನೆ  ಅವರ ಮಾತಿಗೆ ಪ್ರತೀ ಉತ್ತರ  ಮಾತಿನ ಮೂಲಕ  ನೀಡಬಾರದು, ಅಪ್ಪನಿಗೆ ಕಮ್ಮಿ ಕೆಲಸ, ನಾನು ದುಡಿಯುತ್ತಿಲ್ಲಾ,  ಬರುವ ಸಣ್ಣ ಆದಾಯದಲ್ಲೇ  ನಾವೆಲ್ಲಾ ಬದುಕಬೇಕು ಮಗನೆ  , ನೀನು, ನಿನ್ನ ತಮ್ಮ  ಚೆನ್ನಾಗಿ ಓದಿ ಮುಂದೆ ಬಂದರೆ   ಅದೇ ನೀವು ಅವರಿಗೆ ನೀಡುವ  ಒಳ್ಳೆಯ ಉತ್ತರ , ಹಾಗಾಗಿ ಈಗ  ಕೋಪ ಮಾಡಬೇಡ ಮಗು  ಎಂದು ಹೇಳಿದೆ . ಅಂದು ಸಂಜೆಯೇ  ನಾನು, ನನ್ನ ಪತಿ, ಹಾಗು ಇಬ್ಬರು ಮಕ್ಕಳು ಹೊರಗೆ ಹೋಗಿ  ಪಾರ್ಕಿನಲ್ಲಿ ಕುಳಿತು , ನಮ್ಮ ಸಂಸಾರದ ಬಗ್ಗೆ ಬರುತ್ತಿರುವ  ಮಾತುಗಳ ಬಗ್ಗೆ  ಚರ್ಚೆ ನಡೆಸಿದೆವು . ಯಾವುದೇ ಕಾರಣಕ್ಕೂ  ಯಾವ ಅವಮಾನವಾದರೂ ಸಹ ಎದುರು ಮಾತನಾಡದೆ  ಎಲ್ಲರ ಜೊತೆ  ಹೊಂದಿಕೊಂಡು ಹೋಗಬೇಕು,  ಇಂತಹ  ಮಾತುಗಳಿಗೆ ಸಾಧನೆಯ ಮೂಲಕ  ಉತ್ತರ ನೀಡಲು  ನಿರ್ಧರಿಸಿ,  ನನ್ನ ಕುಟುಂಬದ  ನಾಲ್ಕೂ   ಜನರೂ ಸಹ ಒಬ್ಬರಿಗೊಬ್ಬರು  ಬೆಂಬಲವಾಗಿ ನಿಲ್ಲಲು  ತೀರ್ಮಾನಿಸಿದೆವು .


ಕಾಲಚಕ್ರ  ಉರುಳುತ್ತಿತ್ತು,  ಒಟ್ಟು ಕುಟುಂಬದಲ್ಲಿ   ಎಂಟು  ಜನರ ಸಂಸಾರ  ಬೇರೆ ಬೇರೆ ಯಾಗಿ ವಾಸ ಮಾಡುತ್ತಿದ್ದೆವು . ನನ್ನ ಮಕ್ಕಳು ದೊಡ್ಡವರಾಗಿ  ಕಷ್ಟ ಪಟ್ಟು  ವಿಧ್ಯೆ ಕಲಿತು   ಸಾಧನೆಯ  ಮೆಟ್ಟಿಲು ಏರಿದ್ದರು, ಇವರಿಗಾಗಿ  ಹಗಲೂ ರಾತ್ರಿ  ಬೆಂಬಲ ನೀಡಿದ  ನಾನೂ ಸಹ  ಹರುಷಗೊಂಡಿದ್ದೆ, ಮಕ್ಕಳ ಭವಿಷ್ಯ ರೂಪಿಸಲು  ಕಷ್ಟ ಪಟ್ಟ ನನ್ನ  ಬಗ್ಗೆ ಪತಿರಾಯರೂ  ಸಹ  ಹೆಮ್ಮೆ ಪಟ್ಟಿದ್ದರು , ನನ್ನ ಕಿರುಕುಳವನ್ನು ಸಹಿಸಿಕೊಂಡು  ಕಷ್ಟಪಟ್ಟು  ಓದಿ, ಸಾಧನೆ ಮಾಡಿ   ಸಾಫ್ಟ್ ವೇರ್ ಇಂಜಿನಿಯರ್  ಗಳಾಗಿ   ತಮ್ಮ ಬುದ್ಧಿ ಶಕ್ತಿಯಿಂದ  ಸುಲಭವಾಗಿ  ಕೆಲಸ ಗಿಟ್ಟಿಸಿದರು .  ಅಂದು  ಅಯ್ಯೋ ಅವಳ ಹಳ್ಳಿ ಹುಡುಗಿ  , ಇನ್ನು ಅವಳ ಗಂಡ  ಅವನೋ ಅದೇ ಖಾಸಗಿ  ಕಂಪನಿಯಲ್ಲಿ  ಕೆಲಸ  , ಬೆಳಿಗ್ಗೆ ಹೋದರೆ ರಾತ್ರಿ ಬರ್ತಾನೆ, ಇವರಿಬ್ಬರು ಸಾಕುವ ಮಕ್ಕಳು  ...? ಅವೋ ಈಗಲೇ ಹಿಂಗಿವೆ, ಅವುಗಳು  ಓದುವ ಲಕ್ಷಣ ಅಂತೂ ಗೋಚರಿಸುತ್ತಿಲ್ಲಾ,  ಇನ್ನು ಇವರ ಬದುಕು  ದೇವರೇ ಗತಿ,  ಮಕ್ಕಳನ್ನು  ಮುಂದೇ  ತರೋದು ಅಷ್ಟು ಸುಲಭ ಅಲ್ಲಾ ....! ಮುಂದೆ ನೋಡ್ತಾ ಇರು  ಇವರ ಜೀವನ ಚಿತ್ರಾನ್ನ ಆಗೋದಂತೂ  ಗ್ಯಾರಂಟೀ ಎಂಬ  ಮಾತನಾಡಿದ್ದ ಅವರ ಮಾತನ್ನು  ಅವರ ಮಕ್ಕಳು  ನಿಜ ಮಾಡಿಬಿಟ್ಟರು,   ಅಂದು ಗೇಲಿ ಮಾಡಿದ್ದ  ಜನರು  ಬೇರೆಯವರ ಸಂಸಾರದ ಬಗ್ಗೆ ತಲೆ ಕೆಡಿಸಿಕೊಂಡು  ತಮ್ಮ ಸಂಸಾರದಲ್ಲಿ  ಎಡವಿದ್ದರು .


ಅದೊಂದು ದಿನ  ಮನೆಗೆ  ಬಂದ  ನನ್ನ ಪತಿಯ ಕೊನೆಯ ತಮ್ಮ  ,   ಅತ್ತಿಗೆ ನಮ್ಮನ್ನು ಕ್ಷಮಿಸಿ  , ನಿಮಗೆ ಗೊತ್ತಿಲ್ಲಾ   ನಾವೆಲ್ಲಾ  ಒಟ್ಟಿಗೆ ಇದ್ದಾಗ  ನಿಮ್ಮ ಸಂಸಾರ  ಇಷ್ಟು ಚೆನ್ನಾಗಿ   ಮುಂದೆ ಬರುತ್ತೆ ಎಂಬ ಕಲ್ಪನೆ ನನಗಿರಲಿಲ್ಲ, ನನಗೇನು ಯಾರಿಗೂ ಇರಲಿಲ್ಲ,  ಆದರೆ ನೀವು ಹಳ್ಳಿ ಹುಡುಗಿಯಾದರೂ   ನಿಮ್ಮ ಮಕ್ಕಳನ್ನು ಮುಂದೆ ತಂದ ರೀತಿ  ನಮ್ಮೆಲ್ಲರಿಗೂ  ಒಂದು ಪಾಠ  ಆಯಿತು,  ಮಕ್ಕಳ ಜೊತೆ  ಹತ್ತಾರು ವರ್ಷ ಹಗಲು ರಾತ್ರಿ ಎನ್ನದೆ  ಸಮವಾಗಿ ನಿಂತು, ಅವರ ಬೆನ್ನೆಲುಬಾಗಿ  ಮಾರ್ಗದರ್ಶನ ನೀಡಿ  ಅಂದಿನ ಅನ್ನದ ಮಕ್ಕಳನ್ನು  ಚಿನ್ನದ ಮಕ್ಕಳಾಗಿ  ಮಾಡಿ  ನಿಮ್ಮ ಗುರಿ ಸಾಧಿಸಿದಿರಿ  ಅದಕಾಗಿ ನಮ್ಮ ಮನೆಯಲ್ಲಿ  ನಿಮ್ಮನ್ನು ಸತ್ಕರಿಸುವ  ಆಸೆಯಿಂದ ಬಂದಿದ್ದೇನೆ ಅಣ್ಣನನ್ನೂ ಸಹ ಒಪ್ಪಿಸಿದ್ದೇನೆ ಖಂಡಿತಾ  ಮಕ್ಕಳೊಡನೆ ನಾವು ಬರಬೇಕು   ಎಂದು ಆಹ್ವಾನ ನೀಡಿದ , ಪತಿರಾಯರು  ಕೂಡ  ಒಪ್ಪಿ ಎಲ್ಲರೂ  ಆ ಕಾರ್ಯಕ್ರಮಕ್ಕೆ  ಹೊರಟೆವು .





ಸುಮಾರು ಇನ್ನೂರು ಜನರ ಒಂದು  ಕೂಟ  , ಅದರಲ್ಲಿ  ನಮ್ಮ ಆಗಮನಕ್ಕೆ ಕಾಯ್ದವರಂತೆ  ಎಲ್ಲರೂ  ಬಹಳ ಪ್ರೀತಿ  ತೋರಿ, ಆದರಿಸಿ  ಸತ್ಕಾರ ಮಾಡಿದರು, ಅಂದು ಅಪ್ಪನ ಸಾವಿನಿಂದ ಕಂಗೆಟ್ಟಿದ್ದ ಜೀವನ  ಹಲವು ಪರೀಕ್ಷೆಗೆ ಒಳಪಟ್ಟು , ಅದರಲ್ಲಿ  ತೇರ್ಗಡೆ ಯಾಗಿ  ಇಂದು ಈ ಹಂತಕ್ಕೆ  ತಂದು ನಿಲ್ಲಿಸಿತ್ತು.  ಸತ್ಕಾರ ಕೂಟದಲ್ಲಿ  ಹಳ್ಳಿ ಹುಡುಗಿಯಾಗಿ  ಬಂದ  ಸೊಸೆ ಮಾಡಿದ  ಮ್ಯಾಜಿಕ್  ಎಂಬಂತೆ ನನ್ನನ್ನು ಹೊಗಳುತ್ತಿದರು ,  ಪಕ್ಕದಲ್ಲಿದ್ದ ನನ್ನ ಮಕ್ಕಳು ಹರುಷದಿಂದ ಅಮ್ಮಾ  ಹೇಗಿದ್ದ ಜೀವನ  ಹೇಗಾಗೊಯ್ತು  ಆಲ್ವಾ .... ಅಂತಾ  ಕೆಣಕಿ  ಒಳ್ಳೆ ಹಳ್ಳಿ ಅಮ್ಮಾ ನೀನು ನಮಗೆ  ಅಂತಾ ತಬ್ಬಿಕೊಂಡರು .  ನನ್ನ ಕಣ್ಣಲ್ಲಿ  ಆನಂದದ ಅಮೃತ  ಚಿಮ್ಮಿತ್ತು.  ತಾಳ್ಮೆ ಇದ್ದಲ್ಲಿ ಏನನ್ನಾದರೂ  ಸಾಧಿಸ ಬಹುದು   ಎಂದು ಅಪ್ಪಾ ಹೇಳುತ್ತಿದ್ದ ಮಾತು ನಿಜವಾಗಿತ್ತು.



5 comments:

Srikanth Manjunath said...

ತಾಳ್ಮೆ ಇದ್ದರೇ ನೆಲವನ್ನು ಗುದ್ದಿ ನೀರು ತೆಗೆಯಬಹುದು.. ಇಲ್ಲದಿದ್ದರೆ ಕಡ್ಡಿಯೂ ಗುಡ್ದವಾಗುತ್ತದೆ.. ಕಷ್ಟ ಬಂದಾಗ ಅದು ದಾರದ ಉಂಡೆ ಗೋಜಲಾಗುವಂತೆ ಆಗುತ್ತದೆ.. ನಿಧಾನವಾಗಿ ಒಂದೊಂದೇ ಗಂಟನ್ನು ಬಿಡಿಸಲು ಆರಂಭಿಸಿದರೆ ಇಡಿ ದಾರ ನಮ್ಮ ಅಂಗೈಯಲ್ಲಿ.. ಅದನ್ನು ಹೊಲೆಯೋಕೆ ಉಪಯೋಗಿಸಿ ನಮ್ಮ ಹರಿದ ಜೀವನವನ್ನು ಸುಂದರವಾಗಿ ಸೇರಿಸಬಹುದು. ಕಥಾನಾಯಕಿಯ ತಾಳ್ಮೆ ಎಷ್ಟು ಹಿರಿಯದೋ ಹಾಗೆಯೇ ಪತಿರಾಯರ ಸಂಭಾಳಿಸುವ ಗುಣವು ಕೂಡ. ಕೋಪ ಸಿಟ್ಟು ಸೆಡವು ಎಲ್ಲ ನಮ್ಮನ್ನು ಕೈಲಾಗದವರು ಎಂದು ನಿರ್ಧರಿಸಿಬಿಡುತ್ತದೆ..

ನಗುವವರ ಮುಂದೆ ಎಡವಬಾರದು ಎನ್ನುವ ಸುಂದರ ತತ್ವನ್ನು ಸಾರುವ ಈ ಕಥಾಮಾಲಿಕೆ ಹಲವರ ಜೀವನದ ಪಾಠವೂ ಹೌದು.

ಉತ್ತಮ ಪದಗಳನ್ನು ಬರೆಸುವ ಸು"ಲೇಖನ" ಕಷ್ಟ ಬಂದಾಗ "ಕಾಶಿ"ಗೆ ಹೋಗದೆ ಸೇವಂತಿಗೆ ಎನ್ನುತ್ತಾ ಘಮಲನ್ನು ಹರಿಸುತ್ತಾ "ಶ್ರೀಗಂಧ"ದಂತೆ ಜೀವನನ್ನು ತೆಯ್ದರು ಪರಿಮಳ ಬೀರುತ್ತಾ ಪುರುಶೋತ್ತಮರಲ್ಲಿ ಜೀವನದ ಪುರುಷಾರ್ಥ ಕಂಡ ಕುಟುಂಬದ ಕಥೆಯ ಕತೃವಿಗೆ ಅಭಿನಂದನೆಗಳು.. ಸೂಪರ್ ಸರ್ಜಿ

Badarinath Palavalli said...

ಮನೆ ತುಂಬಿಕೊಂಡ ಕೂಡಲೇ ಮನೆ ಭಾಗಕ್ಕೆ ಹವಣಿಸುವ ಹಲವು ಹೆಣ್ಣುಮಕ್ಕಳನ್ನು ಕಣ್ಣಾರೆ ನೋಡಿದ್ದೇವೆ.

ಕಥಾನಾಯಕಿ ಸುಲೇಖ ಮೇಡಂನಹವರು ಅಪರೂಪ ಬಿಡಿ. ಒಟ್ಟು ಕುಟುಂಬದ ಉನ್ನತಿಗಾಗಿ ಗಾಣದೆತ್ತಿನಂತೆ ದುಡಿದ ಆಕೆ ಎಂದೆಂದೂ ಮಾನ್ಯರು.
ಕಥನ ಕಟ್ಟಿಕೊಟ್ಟ ಶೈಲಿಯಲ್ಲಿ ಮತ್ತು ಅದರ ಹಿಂದಿನ ಸಾಮಾಜಿಕ ಸುಧಾರಣೆಯ ಉದ್ದೇಶಕ್ಕಾಗಿಯೂ ತಾವು ಮತ್ತಷ್ಟು ಮೆಚ್ಚಗೆಯಾದಿರಿ.

ಸಂಧ್ಯಾ ಶ್ರೀಧರ್ ಭಟ್ said...

ಕಥಾ ನಾಯಕಿಯ ಆತ್ಮ ಸ್ಥೈರ್ಯ ತುಂಬಾ ದೊಡ್ಡದು ...

" ಒಟ್ಟು ಕುಟುಂಬದಲ್ಲಿ ಎಂಟು ಜನರ ಸಂಸಾರ ಬೇರೆ ಬೇರೆ ಯಾಗಿ ವಾಸ ಮಾಡುತ್ತಿದ್ದೆವು ." ಕಾಡುತ್ತವೆ ಶಬ್ದಗಳು ...

ಮೌನರಾಗ said...

ಚೆನ್ನಾಗಿದೆ..
ಕಥಾನಾಯಕಿಯ ಗೊಂದಲಗಳಿಗೆ, ಕಷ್ಟಗಳಿಗೆ ಕಾಲವೇ ಉತ್ತರ ನೀಡಿದ್ದು ಮೆಚ್ಚುವಂತದ್ದು...
ಇಷ್ಟ ಆಯಿತು ಬಾಲಣ್ಣ...

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

Nindakarirabeku... nindakirididdakke avaru Munde bandiddu... sir


nice story...