ಚಿತ್ರ ಕೃಪೆ ಅಂತರ್ಜಾಲ. |
ಲೇ ಯಾರೋ ಅಲ್ಲಿ ಇನ್ನೆರಡು ತಿಂಗಳಿಗೆ ಸಂಕ್ರಾಂತಿ ಬರ್ತದೆ ಇನ್ನೂ ಏನೂ ಬಂದಿಲ್ಲವಲ್ಲೋ ... ಅಪ್ಪನ ಆರ್ಭಟ ಶುರು ಆಯಿತೆಂದರೆ ಸಂಕ್ರಾಂತಿ ಹಬ್ಬಕ್ಕೆ ಮುನ್ನುಡಿ ಬರೆಯುತ್ತಿತ್ತು ನಮ್ಮನೆಯಲ್ಲಿ. ಹೌದು ನಮ್ಮ ಮನೆಯ ಸಂಕ್ರಾಂತಿ ಹಬ್ಬದ ಸಡಗರ ಶುರು ಆಗುತ್ತಿದ್ದುದು ಹೀಗೆ. ಆಗ ಈಗಿನಂತೆ ಪಟ್ಟಣಗಳಲ್ಲಿ /ಹಳ್ಳಿಗಳಿಗೆ ಟಿ . ವಿ . ಇಲ್ಲದ ಕಾಲ. ದೊಡ್ಡ ದೊಡ್ಡ ರೇಡಿಯೋ ಗಳು ಟೇಬಲ್ ಅಲಂಕರಿಸಿದ್ದ ಕಾಲ. ಜನಗಳು ತಾವೇ ದೈಹಿಕವಾಗಿ ಶ್ರಮ ಪಟ್ಟು ಹಬ್ಬಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆಗಲೂ ಪಟ್ಟಣಗಳಲ್ಲಿ ಸಿದ್ದ ಪಡಿಸಿದ ಎಳ್ಳು ಬೆಲ್ಲ ಹಾಗೂ ಸಕ್ಕರೆ ಅಚ್ಚು ಅಂಗಡಿಗಳಲ್ಲಿ ಸಿಗುತ್ತಿದ್ದವಾದರೂ ಅದನ್ನು ಕೊಂಡು ತರಲು ಜನರಿಗೆ ಹಿಂಜರಿಕೆ ಇತ್ತು. ತಾವು ಮಾಡಿದ ಎಳ್ಳು ಬೆಲ್ಲ ಸಂಕ್ರಾಂತಿಗೆ ಇದ್ದರೆ ಚಂದಾ ಎನ್ನುವ ಭಾವನೆ ಹಾಗು ಹೆಮ್ಮೆ.
ಸಂಕ್ರಾಂತಿ ಸಿದ್ದತೆಯಲ್ಲಿ ಮೊದಲು ಮನೆಗೆ ಬರುತ್ತಿದ್ದುದು, ಕರಿ ಎಳ್ಳು , ಕಡಲೆ ಕಾಯಿ ಬೀಜ, ಹುರಿ ಕಡಲೆ , ಬೆಲ್ಲ,ಕೊಬ್ಬರಿ, ಇತ್ಯಾದಿ. ಇವುಗಳು ಮನೆಗೆ ಬಂದ ಮಾರನೆಯ ದಿನವೇ ಮನೆಯಲ್ಲಿ ನನ್ನ ಅಜ್ಜಿ [ ತಾಯಿಯ ತಾಯಿ] ಹಾಗು ನನ್ನ ಅಮ್ಮ ಇವರಿಬ್ಬರಿಗೆ ಕೆಲಸ ಶುರು.ಸುಮಾರು ಐದರಿಂದ ಆರು ಸೇರು ಕರಿ ಎಳ್ಳನ್ನು ತೊಳೆದು ಉಜ್ಜಿ ಅದರ ಸಿಪ್ಪೆ ತೆಗೆದು ಬೆಳ್ಳಗೆ ಮಾಡಿ ಅದನ್ನು ಒಣಗಿ ಹಾಕಲು ಒಂದೆರಡು ದಿನ ಆಗುತ್ತಿತ್ತು. ನಂತರ ಬೆಲ್ಲ ಕೊಬ್ಬರಿ ಹೆಚ್ಚಿ ತುಂಡು ಮಾಡುವ ಕೆಲಸ, ಕೊಬ್ಬರಿಯ ಮೇಲ್ಭಾಗ ತುರಿದು ಅದರ ಕಪ್ಪಿನ ಪದರವನ್ನು ತೆಗೆದು ಹಾಕಿ ಹೆಚ್ಚಲು ಬಹಳಷ್ಟು ಸಮಯ ತಗಲುತ್ತಿತ್ತು . ಇನ್ನು ಬೆಲ್ಲದ ಅಚ್ಚನ್ನು ಒಂದೇ ಆಕಾರದಲ್ಲಿ ಹೆಚ್ಚುವ [ತುಂಡು ಮಾಡುವ] ಕೆಲಸ ಸಹ ಒಂದೆರಡು ದಿನ ಸಾಗುತ್ತಿತ್ತು. ನಂತರ ಹುರಿ ಕಡಲೆ ಯನ್ನು ಆರಿಸಿ ಅದರಲ್ಲಿನ ಕಸ ತೆಗೆದು, ಮತ್ತೊಮ್ಮೆ ಹುರಿಯುತ್ತಿದ್ದರು, ನಂತರ ಒಣಗಿದ ಕಡಲೆ ಕಾಯಿಯನ್ನು ಬಿಡಿಸಿ ಅದರಲ್ಲಿನ ಕಾಳುಗಳನು ಶೇಖರಿಸಿ, ಅದರಲ್ಲಿನ ಪೇಚು ಕಾಳುಗಳನ್ನು ಹೆಕ್ಕಿ ತೆಗೆದು, ಉತ್ತಮ ಕದಲೆಕಾಯಿಯ ಕಾಳುಗಳನ್ನು ಸೌದೆ ಒಲೆಯ ಮೇಲೆ ದೊಡ್ಡ ಬಾಣಲೆಇಟ್ಟು ಹುರಿಯುತ್ತಿದ್ದರು. ಸೌದೆ ಒಲೆಯ ಉರಿಯಲ್ಲಿ ಚಿನ್ನದ ಬಣ್ಣದಂತೆ ಹೊಮ್ಮಿದ ಬೆಂಕಿಯ ಕೆನ್ನಾಲಿಗೆಯ ಬಿಸಿಯಲ್ಲಿ ಅಜ್ಜಿ ಹಾಗೂ ಅಮ್ಮಾ ಸ್ವಲ್ಪವೂ ಬೇಸರಿಸದೆ ನಗು ಮುಖದಿಂದ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಬಹಳ ಸಮಯದನಂತರ ಹುರಿಯುವ ಕಾರ್ಯ ಮುಗಿದು ಕಡಲೆ ಕಾಯಿಯನ್ನು ಒಣಗಲು ಹಾಕಿ ವಿಶ್ರಾಂತಿ ಪಡೆಯಲು ಕೂರುತ್ತಿದ್ದರು. ಮತ್ತೆ ಸ್ವಲ್ಪ ಸಮಯದ ನಂತರ ಕಡಲೆ ಕಾಯಿ ಬೀಜದ ಮೇಲಿನ ಸಿಪ್ಪೆ ತೆಗೆಯುವ ಕಾರ್ಯ ಶುರುವಾಗಿ, ಸಂಜೆಯೊಳಗೆ ಈ ಕಾರ್ಯಕ್ಕೆ ಮಂಗಳ ಹಾಡದೆ ಇಬ್ಬರೂ ವಿಶ್ರಮಿಸುತ್ತಿರಲಿಲ್ಲ . ಪ್ರತೀದಿನ ಅಂದು ಮಾಡಿದ ಕಾರ್ಯದ ವಿವರ, ನಾಳೆ ಮಾಡುವ ಕಾರ್ಯದ ವಿವರದ ರಿಪೋರ್ಟು ಅಪ್ಪನಿಗೆ ಸಲ್ಲಿಕೆ ಯಾಗುತ್ತಿತ್ತು. ಅಪ್ಪನೂ ಸಹ ಈ ಬಗ್ಗೆ ತನ್ನ ಸಲಹೆ ನೀಡುತ್ತಾ , ಗದ್ದೆ ಕುಯಿಲಿನ ಬಗ್ಗೆ , ರಾಸುಗಳ ತಯಾರಿ ಬಗ್ಗೆ , ಕಾರ್ಯಕ್ರಮ ರೂಪಿಸುತ್ತಿದ್ದರು.
ಇನ್ನೇನು ಬಾಕಿ ಎನ್ನುವಷ್ಟರಲ್ಲೇ ಅಜ್ಜಿ ಹಾಗು ಅಮ್ಮ ಮುಂದಿನ ತಯಾರಿಗೆ ರೆಡಿ ಆಗುತ್ತಿದ್ದರು. ಸಿದ್ದಪದಿಸಲಾಗಿದ್ದ ಸಾಮಗ್ರಿಗಳನ್ನು ಭದ್ರವಾಗಿ ಡಬ್ಬಿಗಳಲ್ಲಿ ತುಂಬಿ , ಮುಂದಿನ ಕಾರ್ಯ ಶುರು ಮಾಡುತ್ತಿದ್ದರು, ಮರದ ಸಕ್ಕರೆಅಚ್ಚು ಮಣೆಗಳನ್ನು ಅಟ್ಟದಿಂದ ಇಳಿಸಿ ಅದನ್ನು ತೊಳೆದು , ಅದನ್ನು ಬಿಸಿಲಿನಲ್ಲಿ ಒಣಗ ಹಾಕಿ ಅದರಲ್ಲಿನ ದೂಳು, ಕಸ ಎಲ್ಲವನ್ನೂ ತೆಗೆದು, ಸಕ್ಕರೆ ಅಚ್ಚು ತಯಾರಿಸಲು ಆರಂಭಿಸುತ್ತಿದ್ದರು. ಮೊದಲು ಸಕ್ಕರೆಯಲ್ಲಿನ ಕಸವನ್ನು ತೆಗೆದು ಸಕ್ಕರೆಯನ್ನು ಒಂದು ಕಡಾಯಿ ಯಲ್ಲಿ ಹಾಕಿ ನೀರು ಮಿಶ್ರಣ ಮಾಡಿ ಅದನ್ನು ಸೌದೆ ಒಲೆಯ ಮೇಲೆ ಮೇಲೆ ಇಡುತ್ತಿದ್ದರು, ಸಣ್ಣಗಿನ ಬೆಂಕಿಯ ಜ್ವಾಲೆಯಲ್ಲಿ ಹಿತವಾದ ಶಾಖದಲ್ಲಿ ಸಕ್ಕರೆ ಮಿಶ್ರಣದ ನೀರು ಕುದಿಯಲು ಶುರುವಾಗುತ್ತಿದ್ದಂತೆ ಅಮ್ಮ ಅಲ್ಲೇ ಸಿದ್ದ ಪಡಿಸಿಕೊಂಡಿದ್ದ ಹಸುವಿನ ಹಸಿ ಹಾಲನ್ನು ಬಾಣಲೆಗೆ ಹಾಕುತ್ತಿದ್ದಳು , ನೋಡ ನೋಡುತ್ತಿದಂತೆ ಕುದಿಯುತ್ತಿದ್ದ ಸಕ್ಕರೆ ಪಾಕದಲ್ಲಿ ಕಪ್ಪಗಿನ ಕಸವು ಮೇಲೆದ್ದು ಬಂದು ಅದನ್ನು ಜಾಲರಿಯಿಂದ ತೆಗೆಯುತ್ತಿದ್ದರು. ಅದನ್ನು ನೋಡಿದರೆ ಸಕ್ಕರೆಯಲ್ಲಿ ಇಷ್ಟೊಂದು ಕಸವಿದೆಯೇ ಅಂತಾ ಅಚ್ಚರಿ ಆಗುತ್ತಿತ್ತು. ಹೀಗೆ ಹಲವು ಭಾರಿ ಕಸ ತೆಗೆದು ಶುದ್ಧೀಕರಿಸಿದ ಪಾಕವನ್ನು ನೀರಿನಲ್ಲಿ ನೆನೆಹಾಕಿ ಒದ್ದೆಯಾಗಿ ಸಿದ್ದ ಪಡಿಸಿದ ಸಕ್ಕರ ಅಚ್ಚಿನ ಮಣೆಗಳ ಕಿಂಡಿಯೊಳಗೆ ಸಕ್ಕರೆ ಪಾಕವನ್ನು ಸುರಿಯುತ್ತಿದ್ದರು, ಕೆಲವೊಮ್ಮೆ ಬಣ್ಣ ನೀಡಲು ಅಡಿಗೆ ಕೇಸರಿಯನ್ನು ಅಗತ್ಯವಿದ್ದಷ್ಟು ಸೇರಿಸಿ ಪಾಕ ಮಾಡಿ ಅಚ್ಚಿನ ಮಣೆ ಗಳ ಕಿಂಡಿಗಳಿಗೆ ಸುರಿಯಲಾಗುತ್ತಿತ್ತು. ಅಚ್ಚಿನ ಒಳಗೆ ಇಳಿದ ಸಕ್ಕರೆ ಪಾಕ , ವಾತಾವರಣದ ಗಾಳಿಗೆ ತಂಪಾಗಿ ಘನವಾಗಿ ಅಚ್ಚಿನ ಆಕಾರದ ಮೂರ್ತಿಯಾಗಿ ಹೊರ ಹೊಮ್ಮುತ್ತಿತ್ತು , ಅಚ್ಚಿನಿಂದ ಹೊರಬಂದ ಸಕ್ಕರೆ ಅಚ್ಚು ಆನೆ, ಕುದುರೆ ಕಲಶ, ಹಸು, ಕಂಬ , ದೇವಾಲಯ, ಚಕ್ರ, ಬೆಲ್ಲದ ಅಚ್ಚಿನ ಮುಂತಾದ ಆಕಾರ ಪಡೆದು ನಮ್ಮ ನಾಲಿಗೆಯಲ್ಲಿ ನೀರು ಚಿಮ್ಮಿಸುತ್ತಿತ್ತು. ಎಳ್ಳು ಬೆಲ್ಲ ಸಿದ್ಧತೆ ಏನೋ ಆಯ್ತು ಇನ್ನು ಮಿಶ್ರಣ ಮಾಡುವ ಕೆಲಸ ಒಂದು ದಿನ ಹಿಡಿದು, ಎಲ್ಲವನ್ನೂ ಸಿದ್ಧಪಡಿಸಿ ದೊಡ್ಡ ದೊಡ್ಡ ಡಬ್ಬಗಳಲ್ಲಿ ತುಂಬಿ ತೆಗೆದಿಡುತ್ತಿದ್ದರು. ಇನ್ನು ಅವು ಆಚೆ ಬರುತ್ತಿದ್ದುದು ಹಬ್ಬದ ಹಿಂದಿನ ದಿನ ಅಷ್ಟೇ ಅಲ್ಲಿಯ ವರೆಗೂ ಅವುಗಳಿಗೆ ಬಹಳವಾದ ಟೈಟ್ ಸೆಕ್ಯೂರಿಟಿ, ಅಜ್ಜಿ ಹಾಗು ಅಮ್ಮನಿಂದ.
ಚಿತ್ರ ಕೃಪೆ ಸಹೋದರಿ ಸುಮನ ಹಾಗು ದೀಪಕ್ |
ಈ ಹಂತದಲ್ಲಿ ಮಕ್ಕಳಾಗಿದ್ದ ನಮ್ಮ ಕೆಲಸ ಶುರು, ನಾನೂ ನನ್ನ ಅಕ್ಕ ಈ ಟೈಟ್ ಸೆಕ್ಯೂರಿಟಿ ಭೇದಿಸಿ ಕೆಲವೊಮ್ಮೆ ಲಗ್ಗೆ ಹಾಕಿ ಮಾಲನ್ನು ದೂಚುತ್ತಿದ್ದು ಹೌದು , ಕೆಲವೊಮ್ಮೆ ಮಾಲು ಸಹಿತ ಸಿಕ್ಕಿ ಬಿದ್ದು ಕೆಲವೊಮ್ಮೆ ಏಟಿನ ಉಡುಗೊರೆ ದೊರೆಯುತ್ತಿತ್ತು. ನಮ್ಮಿಂದ ಪದಾರ್ಥಗಳನ್ನು ರಕ್ಷಿಸಲು ದೊಡ್ಡವರ ಹದ್ದಿನ ಕಣ್ಣಿಟ್ಟು ಇದ್ದೆ ಇರುತ್ತಿತ್ತು.
ಚಿತ್ರ ಕೃಪೆ ಸಹೋದರಿ ಸುಮನ ಹಾಗು ದೀಪಕ್ |
ಇದೆ ಸಮಯದಲ್ಲಿ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ಮನೆಗೆ ಬಂದು ಮನೆಯ ಹಿಂದಿನ ಕಣದಲ್ಲಿ ನೆಲಸುತ್ತಿತ್ತು, ಅದರ ಒಕ್ಕಣೆ ಕಾರ್ಯವೂ ಸಹ ಈ ಸಂಭ್ರಮದಲ್ಲೇ ನಡೆಯುತ್ತಿತ್ತು, ಭತ್ತದ ಹೊರೆಯನ್ನು ಬೀಸಿ ಬಡಿಯುವಾಗ ಕೆಲಸದವರು ಹೂಯ್ಲೋ ವಾಸುದೇವಾ ಅಂತಾ ಹೇಳುತ್ತಾ ಕೇಕೆ ಹಾಕುತ್ತಾ , ಬತ್ತ ಬಡಿಯುತ್ತಾ ಬಡಿದ ಭತ್ತದ ಬೀಜಗಳನ್ನು ತೋರುತ್ತಾ ಕೆಲಸ ಮಾಡುತ್ತಿದ್ದರು, ನಂತರ ಭತ್ತದ ರಾಶಿ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ ಮನೆಗೆ ತರಲಾಗುತ್ತಿತ್ತು, ಮನೆಯಲ್ಲಿ ನಿರ್ಮಿಸಲಾಗುತ್ತಿದ್ದ ಬಿದಿರಿನ ತೊಂಬೆ , ಹಗೆವಿನಲ್ಲಿ ಹೊಸ ಭತ್ತ ಬಂದು ಶೇಖರಣೆ ಆಗುತ್ತಿತ್ತು. ಸಂಕ್ರಾಂತಿಯ ಹುಗ್ಗಿಗೆ ಈ ಭತ್ತದ ಅಕ್ಕಿ ಬಳಕೆ ಯಾಗುತ್ತಿತ್ತು.
ಮುಂದಿನದು ರಾಸುಗಳನ್ನು ಸಿದ್ದ ಪಡಿಸುವ ಕಾರ್ಯ , ವರ್ಷ ಪೂರ್ತಿ ದುಡಿದ ರಾಸುಗಳನ್ನು ಸಂಕ್ರಾಂತಿಗೆ ಸಿದ್ದ ಪಡಿಸುವ ಕಾರ್ಯ ಸಹ ಸಂಕ್ರಾಂತಿಯ ಸಂಭ್ರಮವೇ ಆಗಿತ್ತು, ಮೊದಲು ರಾಸನ್ನು ಚೆನ್ನಾಗಿ ತೊಳೆದು, ಶುಚಿಮಾಡಿ, ಅದರ ಕೊಂಬನ್ನು ಕುಡುಗೋಲಿನಿಂದ ಒರೆದು ನುಣುಪು ಮಾಡಲಾಗುತ್ತಿತ್ತು, ಈ ಕೆಲಸ ಮಾಡಲು ಹಳ್ಳಿಯಲ್ಲಿ ಕೆಲವು ಜನರಿದ್ದರು, ಒಂದು ಎತ್ತಿನ ಎರಡು ಕೊಂಬನ್ನು ಒರೆಯಲು ಐವತ್ತು ಪೈಸೆ / ಎಂಟಾಣೆ ಚಾರ್ಜ್ ಮಾಡುತ್ತಿದ್ದರು, ಅವರಿಂದ ರಾಸುಗಳ ಕೊಂಬನ್ನು ಒರೆಸಿ ನುಣುಪು ಮಾಡಿಸಿ, ನಂತರ ಲಾಳ ಕಟ್ಟುವವರಿಂದ ಲಾಳ ಕಟ್ಟಿಸಿ ಕಾಲಿಗೆ ಪಾದರಕ್ಷೆ ಕೊಡಲಾಗುತ್ತಿತ್ತು. ಅದು ಹೇಗೋ . ಇಷ್ಟೆಲ್ಲಾ ಆಗುವ ವೇಳೆಗೆ ಸಂಕ್ರಾಂತಿ ಹಬ್ಬ ನಾಳೆ ಅಂತಾ ಅನ್ನಿಸಿ ಬಿಡುತ್ತಿತ್ತು. ಎಲ್ಲಾ ಆಯ್ತೆನ್ರೋ ನಾಳೆ ಹಬ್ಬ ಹೋಗಿ ರಾಸುಗಳನ್ನು ಅಲಂಕರಿಸಲು ಬಣ್ಣ , ಗುಲಾಮ್ ಪಟ್ಟೆ [ ಒಂದು ತರಹದ ಬಣ್ಣ ಬಣ್ಣದ ಟೀಪು] , ಕಾಗದದ ಹೂವಿನ ಸರ, ಗೆಜ್ಜೆ, ಗೊರಸು, ಕಪ್ಪನೆ ಹುರಿದಾರ , ತರೋಣ ಬನ್ನಿ ಅಂತಾ ಪೇಟೆಗೆ ಕರೆದುಕೊಂಡು ಹೋಗಿ ತೆಗೆದು ಕೊಡುತಿದ್ದರು. ಇಷ್ಟರಲ್ಲಿ ಮನೆಯವರಿಗೆಲ್ಲಾ ಹೊಸ ಬಟ್ಟೆ ಬಂದಿರುತ್ತಿತ್ತು.
ಚಿತ್ರ ಕೃಪೆ ಅಂತರ್ಜಾಲ |
ಇಷ್ಟೆಲ್ಲಾ ಸಂಭ್ರಮದ ನಡುವೆ ಮಾರನೆಯ ದಿನ ನಮ್ಮ ಮನೆಗೆ ಸಂಕ್ರಾಂತಿಯ ಆಗಮನ ಆಗುತ್ತಿತ್ತು, ಬೆಳಗಿನ ಪೂಜೆ ಮುಗಿಸಿ ಹೊಸ ಭತ್ತದಿಂದ ಬೇರ್ಪಪಟ್ಟ ಅಕ್ಕಿಯಿಂದ ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸಿ, ಎಳ್ಳು ಬೆಲ್ಲಾ, ಸಕ್ಕರೆ ಅಚ್ಚು, ಕಬ್ಬು ಬಾಳೆ ಹಣ್ಣು ಇವುಗಳನ್ನು ಹಲವು ಮನೆಯವರೊಂದಿಗೆ ವಿನಿಮಯ ಮಾಡಿ , ಶುಭ ಕೊರುತ್ತಿದ್ದೆವು.. ಹಬ್ಬದ ಊಟ ಮಾಡಿ ಮನೆಯಲ್ಲಿದ್ದ ಹಸು, ಎಮ್ಮೆ, ರಾಸುಗಳನ್ನು ಶೃಂಗಾರ ಮಾಡುವ ವೇಳೆಗೆ ಸೂರ್ಯದೇವ ಪಶ್ಚಿಮದ ಕಡೆ ಬರುತ್ತಿದ್ದ, ಊರಿನಲ್ಲಿದ್ದ ಎಲ್ಲರ ಮನೆಯ ರಾಸುಗಳು ಊರಿನ ಮುಖ್ಯ ರಸ್ತೆಗೆ ಬಂದು ಸಾಲಾಗಿ ನಿಲ್ಲು ತ್ತಿದ್ದವು ಊರಿನ ಪ್ರಮುಖರು ಆಗಮಿಸಿ ಎಲ್ಲರ ಮನೆಯಿಂದ ತರಲಾಗಿದ್ದ ಭತ್ತದ ಒಣ ಹುಲ್ಲನ್ನು ಬಹಳ ಎತ್ತರಕ್ಕೆ ರಸ್ತೆ ಅಡ್ಡಲಾಗಿ ಹಾಕಿ ರಾಶಿ ಮಾಡುತ್ತಿದ್ದರು, ಈ ಸಮಯದಲ್ಲಿ ಗ್ರಾಮದ ಕೆಲ ಯುವಕರು, ದೊಣ್ಣೆ ವರೆಸೆ , [ ಒಂದು ಕಾಲದ ಸಮರ ಕಲೆ ಇದು ] ಕೋಲಾಟ, ಮುಂತಾದ ಮನರಂಜನೆ ಕಾರ್ಯಕ್ರಮ ಕೊಡುತ್ತಿದ್ದರು, ಮುಸ್ಸಂಜೆ ಆಗುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಒಣ ಹುಲ್ಲಿಗೆ ದೇವರ ಹೆಸರಿನಲ್ಲಿ ಅಗ್ನಿ ಸ್ಪರ್ಶ ಮಾಡಲಾಗುತ್ತಿತ್ತು. ಇದಕ್ಕೆ ಕಾದು ನಿಂತ ರಾಸುಗಳನ್ನು ಹುರಿದುಂಬಿಸಿ ಕಿಚ್ಚನ್ನು ಹಾಯಿಸಲಾಗುತ್ತಿತ್ತು, ಮೊದಲು ಕಿಚ್ಚು ಹಾದವರಿಗೆ ಬಹುಮಾನ ಇರಲಿಲ್ಲ ವಾದರೂ ಯಾವುದೋ ಬಗೆಯ ಉತ್ಸಾಹ, ಸಂತೋಷ ಮನೆ ಮಾಡಿ ಇದೇ ಊರಿನ ಜನ ಪರಸ್ಪರ ಸಂಭ್ರಮಿಸಿ ಆಚರಣೆ ಮಾಡುತ್ತಿದ್ದರು
.
ಚಿತ್ರ ಕೃಪೆ ಸಹೋದರಿ ಸುಮನ ಹಾಗು ದೀಪಕ್ |
ಈ ಆಚರಣೆಯಲ್ಲಿ ಮತ್ಸರ ಇರಲಿಲ್ಲ, ಪರಸ್ಪರ ಗೌರವ ಎಲ್ಲರಲ್ಲೂ ಇತ್ತು. ,
ಆದರೆ ಇಂದು ?? ಎಲ್ಲವೂ ಕೃತಕ .... ಸಿದ್ದ ಪಡಿಸಿದ ಎಳ್ಳು ಬೆಲ್ಲ ಬೀರಿ, ಕೃತಕ ಬಣ್ಣದ ಸಕ್ಕರೆ ಅಚ್ಚು ತಿಂದು ಕೃತಕ ನಗೆ ಯೊಡನೆ, ಎಲ್ಲರೊಡನೆ ಬೆರೆತಂತೆ ನಟಿಸುತ್ತಾ , ಟಿ .ವಿ . ವಾಹಿನಿಗಳ ಮುಂದೆ ಕುಳಿತು, ಸಂಸ್ಕೃತಿಯ ಬಗ್ಗೆ ಮಾತಾಡುತ್ತಾ ಸಂಕ್ರಾಂತಿಯನ್ನು ಸಂ ಕ್ರಾಂತಿ ಎಂಬಂತೆ ಬೀಗುತ್ತಾ ಬ್ರಾಂತಿ ಯಿಂದ ಆಚರಣೆ ಮಾಡುತ್ತಿದ್ದೇವೆ .. ಯಾಕೋ ಈ ಸಂಕ್ರಾಂತಿಯಲ್ಲಿ ಇದೆಲ್ಲಾ ನೆನಪಿಗೆ ಬಂತೂ ಹಾಗೆ ಬರೆದು ಬಿಟ್ಟೆ. ನಿಮಗೆಲ್ಲಾ ಮಕರ ಸಂಕ್ರಾಂತಿಯ ಶುಭಾಶಯಗಳು ನಿಮ್ಮ ಕುಟುಂಬದವರಿಗೆಲ್ಲಾ ಮಕರ ಸಂಕ್ರಾಂತಿ ಶುಭ ತರಲಿ. ಎಂದು ಹೃದಯ ಪೂರ್ವಕವಾಗಿ ಹಾರೈಸುವೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ ಸಂಕ್ರಾಂತಿಯನ್ನು ಆಚರಿಸಿ .ಮತ್ತೆ ಸಿಗೋಣ ಮುಂದಿನ ಸಂಚಿಕೆಯಲ್ಲಿ.
10 comments:
nimagu saha makara sankranyhi habbada shubhashayagalu
nimagu saha sankranthi habbada shubhashayagalu
ಬಾಲು ಸರ್,
ಅಬ್ಬಾ ಈ ಥರಹದ ಆಚರಣೆ ಇದೆಯೆಂದೇ ಗೊತ್ತಿರಲಿಲ್ಲ ನನಗೆ...ಅದರಲ್ಲೂ ಎಳ್ಳು-ಬೆಲ್ಲದ ಹೆಸರು ಕೇಳಿದ್ದೆನೇ ಹೊರತು ಅದರ ಹಿಂದೆ ಇಷ್ಟೆಲ್ಲಾ ಶ್ರಮವಿದ್ದುದ್ದು ಗೊತ್ತಿರಲಿಲ್ಲ..ಧನ್ಯವಾದಗಲು ನಿಮಗೆ ಸಂಕ್ರಾಂತಿಯ ಆಚರಣೆಯ ಬಗೆಯನ್ನು ತಿಳಿಸಿದ್ದಕ್ಕೆ..
ಹಮ್..ನಾ ತಿಳಿದಂತೆ ನಮ್ಮ ಕಡೆ ಸಂಕ್ರಾಂತಿಗೆ ಅಂಥಹ ವಿಶೇಷವೇನಿಲ್ಲ..
ಹಾಂ ಕನ್ನಡ ಶಾಲೆಗೆ ಹೋಗುವಾಗ ಮಾತ್ರ ಅದೊಂದು ಭಾರೀ ಸಂಭ್ರಮ..ಹಿಂದಿನ ದಿನ ಅಮ್ಮನ ಹತ್ತಿರ ದುಡ್ಡು ಇಸಿದುಕೊಂಡು ರೇಶನ್ ಅಂಗಡಿಗೆ ಹೋಗಿ ಅಲ್ಲಿ ಗ್ರೀಟಿಂಗು ಹುಡುಕುವುದು..ಅದೂ ಕ್ರಿಕೆಟ್ ಆಟಗಾರರದ್ದೇ ಆಗಬೇಕು...ಜೊತೆಗೆ ನಮ್ಮ ಇಷ್ಟದ ಆಟಗಾರನೇ ಇರಬೇಕು..ಹೀಗೆ..೨ ರೂಪಾಯಿಗೆ ಸಿಗುತ್ತಿದ್ದ ಅದರ ಜೊತೆಗೆ ಒಂದೈದು-ಹತ್ತು ರೂಪಾಯಿಯ ಸಂಕ್ರಾಂತಿ ಕಾಳು..ಚಿಲ್ಲರೆ ಉಳಿದರೆ ಬಬ್ಬಲ್ ಗಮ್ಮು,ಅಡಿಕೆ ಪುಡಿ..ಮರುದಿನ ಅಮ್ಮ ಕೊಟ್ಟ ಪುಟ್ಟ ಕರಡಿಗೆಯಲ್ಲಿ ಅದನ್ನು ಹಾಕಿಕೊಂಡು ಹೋಗಿ ಅಕ್ಕೋರು-ಮಾಸ್ತರ ಮುಂದೆ ಅದನ್ನು ಕೊಡುವುದೇನು,ಅವರಿಗೆ ಮಸ್ಕಾ ಹೊಡೆಯುವುದೇನು.....
ಜೊತೆಗೆ ನಮ್ಮ ಅಚ್ಚುಮೆಚ್ಚಿನ ಗೆಳೆಯರಿಗೆ "ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು"-ನಿನ್ನ ಮೆಚ್ಚಿನ ಗೆಳೆಯ ಎಂದು ಹಿಂದುಗಡೆ ಬರೆದು ಕೊಡುವುದೇನು...ಸಂಜೆ ಬರುವಾಗ ಚಡ್ಡಿ ಕಿಸೆ,ಅಂಗಿ ಕಿಸೆಯಲ್ಲೆಲ್ಲಾ ಸಂಕ್ರಾಂತಿ ಕಾಳು ಹಾಕಿಕೊಂಡು ಬಂದು ಅಮ್ಮನೆ ಹತ್ತಿರ ಬೈಸಿಕೊಳ್ಳುವುದೇನು..ಆಹಾ...ಹಮ್..ಬರೆದರೆ ಲೇಖನವೇ ಆದೀತೇನೋ.....
ಚೆನಾಗಿತ್ತು ಸಾರ್..ಓದಿ ಒಂದು ಸಲ ಮನೆಗೆ ಹೋಗಿಬಂದೆ...
ಬರೆಯುತ್ತಿರಿ..
ನಿಮಗೂ ಸಂಕ್ರಾಂತಿಯ ಶುಭಾಷಯ...
ನಮಸ್ತೆ
ಅಬ್ಬಾ ಸಕ್ಕತ್ ವಿವರ, ನಮ್ಮ ಊರಲ್ಲೂ ಇದೇ ರೀತಿ ಆಚರಣೆ ನೆಡೆಯುತ್ತಲಿತ್ತು ದಿನಕ್ರಮೇಣ ನಾವುಗಳು ಬೆಂಗಳೂರು ಸೇರಿದ ಮೇಲೆ ಊರಿಗೆ ಹೋಗುವುದೇ ಬಿಟ್ಟೆವು. ನಿಮ್ಮ ಲೇಖನ ಓದಿ ಎಲ್ಲವೂ ನೆನಪಾಯಿತು.
ಸಂಕ್ರಾಂತಿ ಹಬ್ಬದ ಶುಭಾಶಯಗಳು
tumba channagide sir
ನಿಮಗೂ ನಿಮ್ಮ ಮನೆಯವರಿಗೂ ಸಂಕ್ರಾಂತಿಯ ಶುಭಾಶಯಗಳು!! ನನ್ನ ಬ್ಲಾಗಿನ ಚಿತ್ರಗಳು ನಿಮ್ಮ ಬ್ಲಾಗಿನಲ್ಲಿ ಪ್ರಕಟವಾಗಿರುವುದಕ್ಕೆ ನಾನು ಕೃತಾರ್ಥಳಾದೆ!! ಧನ್ಯವಾದಗಳು!!!
ನಗರೀಕರಣವಾಗಿ ಹಳ್ಳಿಗಳಲ್ಲಿಯೇ ಕಾರ್ಖಾನೆಗಳು ಕೂಗುತ್ತ ಅಲ್ಲಿಯ ರೈತಾಪಿ ಮಕ್ಕಳು ಸಕ್ಕರೆ ಅಚ್ಚು, ಎಳ್ಳು ಬೆಲ್ಲಕ್ಕೆ ಕಿರಾಣಿ ಅಂಗಡಿಯ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ..ಇಂತಹ ಹೊತ್ತಿನಲ್ಲಿ ಇಂತಹ ಸಂಭ್ರಾಮಾಚರಣೆಗಳು ಎಷ್ಟು ಮುದ ಕೊಡುತ್ತವೆ ಪ್ರತಿಯೊಂದನ್ನು ಪರಿ ಪರಿಯಾಗಿ ಬಿಡಿಸಿ ಕಾಳನ್ನು ಜೊಳ್ಳಿನಿಂದ ಬೇರೆ ಮಾಡಿದಂತೆ ಎಷ್ಟು ಹದ ಭರಿತ ನಿರೂಪಣೆ ಓದಿದ ಮೇಲೆ ನನ್ನ ಮನಸು ಮೂವತ್ತು ನಲವತ್ತು ವರುಷಗಳ ಹಿಂದೆ ಓಡಿತು. ಆ ಸಂಭ್ರಮದ ತುಸು ತುಣುಕುಗಳು ಈಗಲೂ ಹಳ್ಳಿಯಲ್ಲಿ ಇವೆ ಎನ್ನುವುದೇ ಮೆಚ್ಚುಗೆಯ ಅಂಶ...ಸುಂದರ ಲೇಖನ ಸರ್...ಮಕರ ಸಂಕ್ರಾಂತಿಯ ಶುಭಾಶಯಗಳು
ಬಾಲೂ ಸಾರ್ ಅಂತೂ ನನ್ನ ಬಾಲ್ಯದ ನೆನಪುಗಳನ್ನ ಕೆದಕಿ ಬಿಟ್ರಿ, .......... ಈ ಹಬ್ಬದಲ್ಲಿ ನಮಗೇನೋ ಸಂಬ್ರಮ , ನನ್ನಮ್ಮ ಮಾಡಿದ ಎಳ್ಳು ಬೆಲ್ಲವನ್ನು
ತಿಂಗಳು ಗಟ್ಟಲೆ ತಿಂದಿದ್ದು ಜ್ಞಾಪಕ ಇದೆ ....... ಅದಲ್ಲೂ ನನ್ನ ಹಿರಿಯಕ್ಕ ಕೊಟ್ಟ ಎಳ್ಳು ಬೆಲ್ಲವನ್ನ ... ಅವಳಿಗೆ ಮೀಸಲಾದ ಡಬ್ಬದಲ್ಲಿ ಬಚ್ಚಿಟ್ಟು ಕೊಂಡಿರೋಳು ....ನಾನು
ನನ್ನ ಅಣ್ಣ ಅದನ್ನ ದೋಚುತಿದ್ವಿ.... ಅವಳೋ ನಮ್ಮನ್ನ ಅಟ್ಟಿಸಿ ಕೊಂದು ಬಂದು ಹೊಡ್ಯೋಳು ಆದ್ರೆ ಹಬ್ಬಕ್ಕೆ ಮೊದ್ಲು ಎಳ್ಳು ಯಾವ ಡಬ್ಬದಲ್ಲಿ ಇದೆ ಅಂತ ಮಾತ್ರ
ಗೊತ್ತಾಗ್ತಿರ್ಲಿಲ್ಲ .... ನನ್ನಮ್ಮ ಅಷ್ಟೊಂದು ಜೋಪಾನ ಮಾಡಿರೋರು .... ಈವಾಗ ಎದುರಿಗೆ ಇದ್ರೂ ತಿನ್ನೋಕ್ಕೆ ಬೇಜಾರು ....
ತಮಗೂ ತಮ್ಮ ಮನೆ ಮಂದಿ ಎಲ್ಲರಿಗೂ ಸಂಕ್ರಾಂತಿ ಶುಭಾಷಯಗಳು.
ಸಕ್ಕರೆ ಅಚ್ಚನ್ನು ಮಾಡುವ ವಿಧಾನವನ್ನು ಉಲ್ಲೇಖಿಸಿ ನನ್ನನ್ನೂ ಬಾಲ್ಯಕ್ಕೆ ಎಳೆದೊಯ್ದಿರಿ ಸಾರ್.
ನಾನು ಓದಿದ ಶಾಲೆ ಸತ್ಯಸಾಯಿ - ಮುದ್ದೇನಹಳ್ಳಿಯಲ್ಲಿ ಒಂದು ಫಾರಂ ಇದೆ, ಸುಮಾರು 80 ಒಳ್ಳೆಯತಳಿಯ ಹಾಸುಗಳನ್ನು ಸಾಕಿದ್ದಾರೆ. ಸಂಕ್ರಾಂತಿಗೆ ಅವುಗಳನ್ನೆಲ್ಲ ಸಿಂಗರಿಸಿ ಮೈದಾನದಲ್ಲಿ ಕಿಚ್ಚು ಹಾರಿಸುತ್ತಾರೆ. ಅದನ್ನು ನೋಡಲು ಎರಡು ಕಣ್ಣು ಸಾಲದು.
ಇಂದಿನ ಕೃತಕ ಆಚರಣೆಯ ಬಗ್ಗೆ ಛಾಟಿ ಬೀಸಿದ ನಿಮ್ಮ ಬರವಣಿಗೆ ಮೆಚ್ಚುಗೆಯಾಯಿತು.
ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್. ನಾವು ಹಳ್ಳಿಯಲ್ಲಿರುವಾಗ ಇದೇ ರೀತಿ ಸಂಕ್ರಾಂತಿ ಆಚರಿಸುತ್ತಿದ್ದೆವು ಈಗ ಎಲ್ಲವೂ ನೆನಪು
Post a Comment